29 October 2013

ಸಮುದ್ರೋಲ್ಲಂಘನ!

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಇಪ್ಪತ್ತೆಂಟು
ಅಧ್ಯಾಯ ಅರವತ್ತ ಎರಡು [ಮೂಲದಲ್ಲಿ ೩೫]

ಆಶುತೋಷ ಬಾಬುಗಳ ಪ್ರೀತಿಯ ಒತ್ತಾಯ ಅನಿರಾಕರಣೀಯವಾಯಿತು. ಯೂರೋಪ್ ಪ್ರವಾಸವನ್ನು ರಾಮನ್ ಒಪ್ಪಿಕೊಂಡು ೧೯೧೨ರ ಬೇಸಗೆಯಲ್ಲಿ ಗ್ರೇಟ್ ಬ್ರಿಟನ್ನಿಗೆ ಹೋದರು. ಆಕ್ಸ್ಫರ್ಡಿನಲ್ಲಿ ನಡೆದ ಬ್ರಿಟಿಷ್ ಸಾಮ್ರಾಜ್ಯದ ವಿಶ್ವವಿದ್ಯಾಲಯಗಳ ಕಾಂಗ್ರೆಸಿನಲ್ಲಿ ಇವರೊಬ್ಬ ಪ್ರತಿನಿಧಿ. ಅಂದಿನ ಭೌತವಿಜ್ಞಾನ ಆಕಾಶದಲ್ಲಿ ಮಹಾ ನಕ್ಷತ್ರಗಳೆಂದು ಪ್ರಪಂಚ ವಿಖ್ಯಾತರಾಗಿದ್ದ ಸರ್ ಜೆ. ಜೆ ತಾಮ್ಸನ್ (೧೮೫೬-೧೯೪೦, ಭೌತವಿಜ್ಞಾನ ನೊಬೆಲ್ ಪ್ರಶಸ್ತಿ ಪುರಸ್ಕೃತ ೧೯೦೮) ಇವರ ಸ್ನೇಹಲಾಭ ರಾಮನ್ನರಿಗೆ ಒದಗಿದ್ದೊಂದು ಅಪೂರ್ವ ಅನುಭವ. ಲಂಡನ್ನಿಗೆ ಸಾಮಾನ್ಯವಾಗಿ ಮೊದಲ ಸಾರಿ ಹೋದವರು ಅಲ್ಲಿಯ ವಿವಿಧ ಇತಿಹಾಸ ಪ್ರಸಿದ್ಧ ಸ್ಮಾರಕಗಳನ್ನೂ ಸ್ಥಳಗಳನ್ನೂ ನೋಡುವುದರಲ್ಲಿ ಸಾಕಷ್ಟು ಕಾಲ ವಿನಿಯೋಗಿಸುವುದು ವಾಡಿಕೆ. ಆದರೆ ಇವಾವುವೂ ರಾಮನ್ನರಿಗೆ ಬೇಕಾಗಲಿಲ್ಲ. ಅವರ ಆಸಕ್ತಿಯನ್ನು ತೀವ್ರವಾಗಿ ಪ್ರೇರಿಸಿದ್ದು ಸೇಂಟ್ ಪಾಲ್ ಇಗರ್ಜಿ ಗೋಪುರದೊಳಗಿನ ಪಿಸುಗುಟ್ಟುವ ಗ್ಯಾಲರಿ ಪರಿಣಾಮ. ಧ್ವನಿ ವಿಜ್ಞಾನದ ಈ ಹೊಸ ಸವಾಲಿನ ಪರಿಹಾರದಲ್ಲಿಯೇ ಅವರು ವೇಳೆ ಸದ್ವಿನಿಯೋಗಿಸಿದರು.


ವಿದೇಶ ಪ್ರಯಾಣ ರಾಮನ್ನರ ಜೀವನದಲ್ಲಿ ಒಂದು ತಿರುಗುಬಿಂದು. ಸಾಗರಯಾನ ಕಾಲದಲ್ಲಿ ಪ್ರಶಾಂತ ಮೆಡಿಟರೇನಿಯನ್ ಸಮುದ್ರದ ನೀಲ ವಿಸ್ತಾರದ ಸೌಂದರ್ಯ ಅವರ ಲಕ್ಷ್ಯವನ್ನು ಸೆರೆಹಿಡಿಯಿತು. ಅದರ ವೈಜ್ಞಾನಿಕ ಕಾರಣದ ಶೋಧನೆ ಅವರ ಗೀಳಾಯಿತು. ವಿವಿಧ ದ್ರವ್ಯಮಾಧ್ಯಮಗಳಲ್ಲಿ ಬೆಳಕಿನ ಚದರಿಕೆ ಹೇಗಾಗುತ್ತದೆ ಎಂಬುದರ ಕ್ರಮಬದ್ಧ ಅನ್ವೇಷಣೆಯನ್ನು ಅಂದು ಪ್ರಾರಂಭಿಸಿದರು. ಅವರ ನೊಬೆಲ್ ಭಾಷಣದ (ಸ್ಟಾಕ್ಹೋಮ್, ೧೧ ಡಿಸೆಂಬರ್ ೧೯೩೦) ಪೀಠಿಕಾ ಪರಿಚ್ಛೇದದ ಒಂದೆರಡು ಮಾತುಗಳನ್ನು ಇಲ್ಲಿ ಉದ್ಧರಿಸಬಹುದು, ಯಾವುದೇ ಒಂದು ನೈಸರ್ಗಿಕ ವಿದ್ಯಮಾನದ ಅಧ್ಯಯನ ಜ್ಞಾನದ ಹೊಸತೊಂದು ಶಾಖೆಯ ಪರ್ವಬಿಂದು ಆಗುವುದನ್ನು ವಿಜ್ಞಾನದ ಚರಿತ್ರೆಯಲ್ಲಿ ಅನೇಕಬಾರಿ ನೋಡುತ್ತೇವೆ - ೧೯೨೧ರ ಬೇಸಗೆಯಲ್ಲಿ ನಾನುಯೂರೋಪಿಗೆ ಸಾಗರ ಯಾನ ಮಾಡುತ್ತಿದ್ದಾಗ ಮೆಡಿಟರೇನಿಯನ್ ಸಮುದ್ರದ ಅದ್ಭುತ ನೀಲವರ್ಣವೈವಿಧ್ಯವನ್ನು ವೀಕ್ಷಿಸುವ ಸುಯೋಗ ಲಭಿಸಿತು. ಸೂರ್ಯನ ಬೆಳಕನ್ನು ನೀರಿನ ಅಣುಗಳು ಚದರಿಸುವುದರಿಂದ ಇದು ತಲೆದೋರುವುದು ಅಸಂಭವನೀಯವಲ್ಲ ಎಂದು ನನಗೆ ಹೊಳೆಯಿತು. ಈ ವಿವರಣೆಯನ್ನು ಪರೀಕ್ಷಿಸಲು ದ್ರವಗಳಲ್ಲಿ ಬೆಳಕಿನ (ವಿಕಿರಣ) ವರ್ತನೆ ಕುರಿತ ನಿಯಮಗಳ ಅನ್ವೇಷಣೆ ಆವಶ್ಯವೆನ್ನಿಸಿತು. ಸೆಪ್ಟೆಂಬರ್ ೧೯೨೧ರಲ್ಲಿ ನಾನು ಕೊಲ್ಕಟಕ್ಕೆ ಮರಳಿದೊಡನೆಯೇ ಈ ಗುರಿಯನ್ನು ಲಕ್ಷದಲ್ಲಿಟ್ಟು ಪ್ರಯೋಗಗಳನ್ನು ಪ್ರಾರಂಭಿಸಿದೆವು.

ಪಲಿತ್ ಪ್ರಾಧ್ಯಾಪಕತ್ವ, ಇಂಡಿಯನ್ ಅಸೋಸಿಯೇಶನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸಿನ ಕಾರ್ಯದರ್ಶಿತ್ವ, ‘ಜ್ಞಾನದ ಹೊಸತೊಂದು ಶಾಖೆಯ ಪರ್ವಬಿಂದುವಿನಿಂದ ಮುನ್ನಡೆ - ಇವೆಲ್ಲವನ್ನೂ ಏಕಕಾಲದಲ್ಲಿ ಸಮರ್ಥವಾಗಿ ರಾಮನ್ ನಿರ್ವಹಿಸಿದರು. ಕೊಲ್ಕಟ ಆಶ್ರಮ ಎಂದರೆ ರಾಮನ್ ಆಶ್ರಮ, ಎಂದರೆ ಬೆಳಕನ್ನು ಕುರಿತು ಹೊಸ ಪ್ರಯೋಗ ಚಿಂತನೆ ನಡೆಸುತ್ತಿರುವ ವಿಶಿಷ್ಟ ಶಕ್ತಿಕೇಂದ್ರ ಎಂದು ಪಾಶ್ಚಾತ್ಯ ವಿದ್ವಾಂಸರು ಗೌರವದಿಂದ ನೋಡುತ್ತಿದ್ದರು. ಆರುನೂರಕ್ಕಿಂತ ಹೆಚ್ಚು ಸಂಶೋಧನ ಪತ್ರಗಳು ಈ ತನಕ ರಾಮನ್ ಆಶ್ರಮದಿಂದ ಪ್ರಕಟಗೊಂಡಿದ್ದುವು.

ಈ ಅಯಾಚಿತ ಪ್ರಸಿದ್ಧಿಯ ಫಲವಾಗಿ ರಾಮನ್ನರ ಅಂತಾರಾಷ್ಟ್ರೀಯ ವ್ಯವಹಾರಗಳು ಬಹುವಾಗಿ ಬೆಳೆದುವು. ಇಂಗ್ಲೆಂಡಿನ ಪ್ರಧಾನ ವಿಜ್ಞಾನ ಸಂಸ್ಥೆ ರಾಯಲ್ ಸೊಸೈಟಿ ೧೯೨೪ರಲ್ಲಿ ತನ್ನ ಫೆಲೋ (FRS) ಪದವಿ ನೀಡಿ ಇವರನ್ನು ಗೌರವಿಸಿತು. ಇದನ್ನು ಪಡೆದ ಭಾರತೀಯರಲ್ಲಿ ಇವರು ನಾಲ್ಕನೆಯವರು (ಉಳಿದ ಮೂವರು ಎ. ಕುರ್ಸೆಟ್ಜೀ ೧೮೪೧, ಶ್ರೀನಿವಾಸ ರಾಮಾನುಜನ್ ೧೯೧೮, ಜಗದೀಶಚಂದ್ರ ಬೋಸ್ ೧೯೨೦). ಅದೇ ವರ್ಷ ಬ್ರಿಟಿಷ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸಿನ ವತಿಯಿಂದ ಏರ್ಪಡಿಸಲಾದ ಕೆನಡಾ ಪರ್ಯಟನೆಯಲ್ಲಿ ಭಾಗವಹಿಸಲು ರಾಮನ್ನರಿಗೆ ಕರೆ ಬಂತು. ಟೊರೊಂಟೋದಲ್ಲಿ ಈ ಸಂಸ್ಥೆಯ ವಾರ್ಷಿಕಾಧಿವೇಶನ ನಡೆಯುವುದಿತ್ತು. ಇದರೊಡನೆ ಇಂಟರ್ನ್ಯಾಶನಲ್ ಕಾಂಗ್ರೆಸ್ ಆಫ್ ಮ್ಯಾಥ್ಮ್ಯಾಟಿಕ್ಸ್ ಸಹ ಸಮಾವೇಶಗೊಂಡಿತ್ತು. ಆ ಮಹಾಧಿವೇಶನದಲ್ಲಿ ರಾಮನ್ ಬೆಳಕಿನ ಚದರಿಕೆ ಕುರಿತು ಮೂಲಭೂತ ಸಮಸ್ಯೆಗಳನ್ನು ಎತ್ತಿ ಸಂಶೋಧನಾತ್ಮಕ ಚರ್ಚೆಯನ್ನು ಉದ್ಘಾಟಿಸಿದರು. ಪಶ್ಚಿಮ ಗೋಳಾರ್ಧದ ಈ ಸಭೆಗೆ ಆಗಮಿಸಿದ್ದ ಹಲವಾರು ಅಮೆರಿಕನ್ ಹಾಗೂ ಯೂರೋಪಿಯನ್ ವಿಜ್ಞಾನಿಗಳ ಸ್ನೇಹವನ್ನು ರಾಮನ್ ಇಲ್ಲಿ ಸಂಪಾದಿಸಿದರು.

ಟೊರೊಂಟೋದ ಅಧಿವೇಶನದ ಚರ್ಚೆ ಮುಗಿದು ನಿಯೋಗಿಗಳು ಹೊರಗೆ ಬರುತ್ತಿದ್ದಾಗ, ಪ್ರೊ ರಾಮನ್! ನಿಮ್ಮನ್ನು ಭೇಟಿ ಆಗಲು ಮತ್ತು ನಿಮ್ಮ ಪರಿಚಯ ಬೆಳೆಸಿಕೊಳ್ಳಲು ನನಗೆ ಅತಿ ಸಂತೋಷವಾಗುತ್ತಿದೆ ಎಂದು ಸ್ನೇಹ ಹಸ್ತ ಮುಂದೆ ಬಂದಿತು. ಸುಪ್ರಸಿದ್ಧ ಭೌತ ವಿಜ್ಞಾನಿ ಪ್ರೊ ಆರ್. ಎ ಮಿಲಿಕನ್ (ಅಮೆರಿಕ, ೧೮೬೮-೧೯೫೩. ನೊಬೆಲ್ ಪ್ರಶಸ್ತಿ ಪುರಸ್ಕೃತ ೧೯೨೩) ಈ ಸೌಹಾರ್ದಯುತ ಮಾತುಗಳಿಂದ ರಾಮನ್ನರನ್ನು ಸ್ವಾಗತಿಸಿದರುಪೌರಸ್ತ್ಯ ಮತ್ತು ಪಾಶ್ಚಾತ್ಯ ಮಹಾಮತಿಗಳ ಮಧುರ ಮಿಲನವದು. ಆಲ್ಬರ್ಟ್ ಐನ್ಸ್ಟೈನ್ (೧೮೭೯-೧೯೫೫, ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ಪುರಸ್ಕೃತ ೧೯೨೧) ಮತ್ತು ಎಚ್. ಎ ಲೊರೆಂಟ್ಸ್ (೧೮೫೩-೧೯೨೮, ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ಸಹಪುರಸ್ಕೃತ ೧೯೦೨) ಇವರಂಥ ಮಹಾವಿಜ್ಞಾನಿಗಳನ್ನು ಗೌರವ ಆಚಾರ್ಯರೆಂದು ಪರಿಗಣಿಸಿದ್ದ ಆ ಸಂಸ್ಥೆಯಲ್ಲಿ ರಾಮನ್ನರಿಗೂ ಅದೇ ಗೌರವ ಸ್ಥಾನವನ್ನು ನೀಡಲಾಯಿತು. ಏಷ್ಯದ ಈ ವಿಜ್ಞಾನಿಯನ್ನು ಸ್ವಾಗತಿಸಲು ತಮಗೆ ತುಂಬ ಸಂತೋಷವಾಗುವುದೆಂದು ಮಿಲಿಕನ್ ನುಡಿದರು.

ಕೆನಡಾ ದೇಶದಲ್ಲಿ ಮಾಡಿದ ದೀರ್ಘಯಾತ್ರೆ ರಾಮನ್ನರಿಗೆ ಬಹಳ ಪ್ರಯೋಜನಕಾರಿಯಾಯಿತು. ಹಿಮಪ್ರವಾಹದಿಂದ ಪ್ರತಿಫಲಿತವಾಗುತ್ತಿದ್ದ ಬೆಳಕಿನ ನಾನಾ ವರ್ಣವಿನ್ಯಾಸ ಅವರ ನಿಶಿತ ಮತಿಗೆ ಸವಾಲು ಒಡ್ಡಿತು. ಹಿಮಪ್ರವಾಹ ಹಸುರು-ನೀಲಿ ಬಣ್ಣ ಪಸರಿಸುತ್ತಿತ್ತು. ಆದರೆ ಹಿಮಗಡ್ಡೆಯನ್ನು ಹಿಡಿದು ನೋಡಿದಾಗ ಅದು ಸಂಪೂರ್ಣ ಪಾರಕವಾಗಿತ್ತು (transparent). ಪಾರಕವಸ್ತು ಒಟ್ಟಾಗಿ ಪ್ರವಹಿಸುವಾಗ ಹಸುರು-ನೀಲಿ ಬಣ್ಣವನ್ನೇಕೆ ಪಸರಿಸಬೇಕು? ರಾಮನ್ ಎದುರು ನಿಂತ ಪ್ರಶ್ನೆ ಇದು. ಇದರ ಸಮರ್ಥನೆಗಾಗಿ ಅವರೊಂದು ವಾದ ಮಂಡಿಸಿದರು. ಅದರ ಪ್ರಕಾರ ಸೂರ್ಯರಶ್ಮಿ ಹಿಮಗಡ್ಡೆಯನ್ನು ಅಡ್ಡ ಹಾಯುವಾಗ ರೋಹಿತದ (spectrum) ಸ್ವಲ್ಪ ಭಾಗ ಮಾತ್ರ ಹರಡಲ್ಪಡುವುದು, ಆದ್ದರಿಂದ ಹಿಮ ಪ್ರವಾಹಕ್ಕೆ ಆ ಬಣ್ಣ ಬರುವುದು ಎಂದಿತ್ತು.

ಮುಂದೆ ರಾಮನ್ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರವಾಸ ಕೈಗೊಂಡರು. ಫ್ರಾಂಕ್ಲಿನ್ ಇನ್ಸ್ಟಿಟ್ಯೂಟಿನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದರು (೧೯೨೪). ಅಮೆರಿಕದಿಂದ ಭಾರತಕ್ಕೆ ಮರಳುವ ಹಾದಿಯಲ್ಲಿ ಅವರು ಸಂದರ್ಶಿಸಿದ ಸ್ಥಳಗಳು ಇಂಗ್ಲೆಂಡ್, ನಾರ್ವೇ, ಡೆನ್ಮಾರ್ಕ್, ಜರ್ಮನಿ ಇತ್ಯಾದಿ. ಅಲ್ಲಿಯ ಪ್ರಯೋಗ ಮಂದಿರಗಳನ್ನೂ ಪ್ರಯೋಗಶೀಲ ವಿಜ್ಞಾನಿಗಳನ್ನೂ ಭೇಟಿ ಮಾಡಿದರು. ಪ್ರೊ ನೀಲ್ಸ್ ಬೋರ್ರನ್ನು (೧೮೮೫-೧೯೬೨, ಡೇನಿಷ್ ಭೌತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ೧೯೨೨) ಅವರ ಡೆನ್ಮಾರ್ಕಿನ ಪ್ರಯೋಗಶಾಲೆಯಲ್ಲಿ ಸಂದರ್ಶಿಸಿದರು.

ಅದೇ ಬೇಸಗೆಯಲ್ಲಿ (೧೯೨೫) ರಾಮನ್ ಪುನಃ ಯೂರೋಪ್ ಪ್ರವಾಸ ಕೈಗೊಂಡರು. ಈ ಸಲ ರಷ್ಯನ್ ಅಕಾಡೆಮಿ ಆಫ್ ಸೈನ್ಸಸಿನ ಇನ್ನೂರನೆಯ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿಗಳಾಗಲು ಆಹ್ವಾನ ಬಂದಿತ್ತು. ಈ ಪ್ರಯಾಣದಲ್ಲಿ ರಾಮನ್ ಲೆನಿನ್ಗ್ರಾಡ್, ಮಾಸ್ಕೊ ಮುಂತಾದ ನಗರಗಳಿಗೆ ಭೇಟಿ ನೀಡಿದರು. ಯಾವ ಸಭೆ ಇರಲಿ, ಯಾವ ವ್ಯಕ್ತಿ ಇರಲಿ ಅವರ ಮಾತಿನ ಪಲ್ಲವಿ ಅದೇ, ಬೆಳಕಿನ ಚದರಿಕೆ - ಅದರ ಹುಚ್ಚು, ಗುಂಗು ಅವರ ಸಮಸ್ತ ವ್ಯಕ್ತಿತ್ವವನ್ನೂ ಆವರಿಸಿಬಿಟ್ಟಿದ್ದುವು. ರಾಮನ್ನರ ಭಾಷಣಗಳನ್ನು ಕೇಳುವಾಗ ಒಂದಷ್ಟು ಹೊತ್ತು ಅವರ ಕೈಚಲನೆ ಮೇಲೆ ಲಕ್ಷ್ಯ ಕೇಂದ್ರೀಕರಿಸಿದರೆ ವಿನೋದಶೀಲ ಅನುಭವ ಆಗುತ್ತದೆ. ಆ ದಿವಸಗಳಲ್ಲಿ ಭಾಷಣ ಕೇಳಿದವರು, ಬೆಳಕಿನ ಚದರಿಕೆಯ ಪರಿಣಾಮ ನೋಡಿ ಎಂದು ರಾಮನ್ನರ ಕೈಕರಣಗಳನ್ನು ಅನುಕರಿಸುವುದಿತ್ತು.

ರಾಮನ್ ಆಶ್ರಮದ ಮುನ್ನಡೆ ಮಹತ್ಸಾಧನೆಯ ಎಡೆಗೆ ಸಾಗಿತ್ತು. ಅಪೂರ್ವ ಸಿದ್ಧಿಯೊಂದು ಕೈಗೂಡಲು ರಂಗಸ್ಥಳ ಸುಸಜ್ಜಿತವಾಗಿತ್ತು. ಅದನ್ನು ಹೇಳುವ ಮೊದಲು ಜಿ.ಎಸ್. ಪರಮಶಿವಯ್ಯನವರು ನಿರೂಪಿಸಿರುವ (‘ಕಸ್ತೂರಿ ಜನವರಿ ೧೯೭೧) ಒಂದು ಸುಂದರ ಸನ್ನಿವೇಶವನ್ನು ಇಲ್ಲಿ ಹೇಳಬೇಕು.

೧೯೨೮ರ ಪ್ರಥಮ ಪಾದ. ೧೯೨೭-೨೮ರ ಕಾಲೇಜು ವರ್ಷ ಮುಗಿಯುತ್ತ ಬರುತ್ತಿದ್ದಂತೆ ಎಲ್ಲ ಕಾಲೇಜುಗಳಲ್ಲಿಯೂ ವಿವಿಧ ಸಂಘಗಳ ಸಮಾರೋಪ ಸಮಾರಂಭಗಳ ಗಡಿಬಿಡಿಯ ಕಾವು ಏರುತ್ತಿತ್ತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಕೊನೆಯ ವರ್ಷದ ವಿದ್ಯಾರ್ಥಿ ಆಗಿದ್ದ ಪರಮಶಿವಯ್ಯ ಅಲ್ಲಿಯ ವಿಜ್ಞಾನಸಂಘದ ಕಾರ್ಯದರ್ಶಿಯೂ ಆಗಿದ್ದರು. ರಾಮನ್ನರನ್ನೇ ತಮ್ಮ ಸಂಘದ ಸಮಾರೋಪ ಭಾಷಣ ನೀಡಲು ಆಹ್ವಾನಿಸಬೇಕೆಂಬುದು ಇವರ ಆಸೆ. ಆ ಮೊದಲೇ ಇವರು ರಾಮನ್ನರ ಪರಿಚಯ ಹಾಗೂ ವಿಶ್ವಾಸ ಗಳಿಸಿಕೊಂಡಿದ್ದರು. ಈ ಧೈರ್ಯದಿಂದ ತಮ್ಮ ಇಚ್ಛೆಯನ್ನು ಕಾಲೇಜಿನ ಪ್ರಾಧ್ಯಾಪಕರ ಮುಂದೆ ವ್ಯಕ್ತಪಡಿಸಿದರು. ಪ್ರಾಧ್ಯಾಪಕರು ಇವರ ಹಂಬಲವನ್ನು over-ambitious (ಅತಿ ಆಶಾವಾದ) ಎಂದು ಪರಿಗಣಿಸಿದರೂ ಪರಮಶಿವಯ್ಯ ತಮ್ಮ ಪಟ್ಟು ಮಾತ್ರ ಸಡಿಲಿಸಲಿಲ್ಲ. ಮಾರ್ಚ್ ೧೫ನೆಯ ತಾರೀಕು ರಾಮನ್ ಬೆಂಗಳೂರಿಗೆ ಕೊಲ್ಕಟದಿಂದ ಯಾವುದೋ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಪರಮಶಿವಯ್ಯ ಹಳೆಯ ಪರಿಚಯದ ಸಲುಗೆಯಿಂದ ಅವರನ್ನು ಭೇಟಿಯಾಗಿ ತಮ್ಮ ಕೋರಿಕೆಯನ್ನು ಆಗ್ರಹಪೂರ್ವಕ ಬಿನ್ನವಿಸಿದರು. ರಾಮನ್ ಒಂದುಕ್ಷಣ ಯೋಚಿಸಿದರಂತೆ, ಮರುದಿವಸ ಹೇಗೂ ಸೌತ್ ಇಂಡಿಯನ್ ಸೈನ್ಸ್ ಅಸೋಸಿಯೇಶನ್ನಿನ ಆಶ್ರಯದಲ್ಲಿ ಭಾಷಣ ಮಾಡುವವನಿದ್ದೇನೆ. ಅದರೊಂದಿಗೆ ಪರಮಶಿವಯ್ಯನವರ ಕಾರ್ಯಕ್ರಮವನ್ನು ಲಗತ್ತಿಸಿ ಎರಡನ್ನೂ ಒಂದೇ ಸಲ ಮುಗಿಸಿಬಿಡಬಹುದು ಎಂದು ಸೂಚಿಸಿದರು. ಆ ಸಭೆಯಾದರೂ ನಡೆಯಲಿದ್ದುದು ಸೆಂಟ್ರಲ್ ಕಾಲೇಜಿನ ಆವರಣದಲ್ಲಿಯೇ.

ಮಾರ್ಚ್ ೧೬, ಶುಕ್ರವಾರ ಬೆಂಗಳೂರು ಸೆಂಟ್ರಲ್ ಕಾಲೇಜಿನ ಗಣಿತ ವಿಭಾಗದ ಪ್ರಾಂಗಣ. ರಾಮನ್ ಭಾಷಣದ ಶೀರ್ಷಿಕೆನೂತನ ವಿಕಿರಣ’ (A new Radiation) ಭಾಷಣ ಆರಂಭವಾಯಿತು. ಅಣುಗಳಿಂದಲೂ ಪರಮಾಣುಗಳಿಂದಲೂ ಆಗುತ್ತಿರುವ ಒಂದು ಹೊಸ ನಮೂನೆಯ ವಿಕಿರಣ ಅಥವಾ ಬೆಳಕಿನ ಉತ್ಸರ್ಜನೆ ಕುರಿತು ಈ ಸಂಜೆ ಮಾತಾಡಬೇಕೆಂದಿದ್ದೇನೆ. ಕೊಲ್ಕಟದಲ್ಲಿ ನಾವು ನಡೆಸಿದ ಪರಿಶೋಧನೆಗಳ ಪರಿಣಾಮವೇ ಈ ಆವಿಷ್ಕಾರ. ಆದ್ದರಿಂದ ಇದರ ಮಹತ್ವವೇನೆಂದು ಶ್ರುತಪಡಿಸಲು ಆ ಚರಿತ್ರೆಯನ್ನು ವಿಶದೀಕರಿಸುತ್ತೇನೆ. ಹೀಗೆ ಮುಂದುವರಿಸಿದ ಈ ಮಾಂತ್ರಿಕ, ‘ನೈಸರ್ಗಿಕ ವಿದ್ಯಮಾನದ ಅಧ್ಯಯನದಿಂದಜ್ಞಾನದ ಹೊಸ ಶಾಖೆಗೆ ಕೇಳುಗರನ್ನು ಕೊಂಡೊಯ್ದು ಅದನ್ನು ಹಂತಹಂತವಾಗಿ ವಿವರಿಸಿದರು. ಸಭೆಯ ಮುಂದೆ ಅವರು ತೆರೆದಿಟ್ಟದ್ದು ಪ್ರಾಯೋಗಿಕ ಭೌತವಿಜ್ಞಾನದಲ್ಲಿ ಆಗಿದ್ದ ಒಂದು ಮೂಲಭೂತ ಆವಿಷ್ಕಾರವನ್ನು - ಅದೇ ಜಗತ್ಪ್ರಸಿದ್ಧ ರಾಮನ್ ಪರಿಣಾಮ. ಅದರ ಸಾರಾಂಶವನ್ನು ಮಾತ್ರ ಇಲ್ಲಿ ಬರೆಯಬಹುದಷ್ಟೆ.

ನಮ್ಮ ಕಣ್ಣಿಗೆ ಒಂದೇ ಬಣ್ಣದ್ದರಂತೆ ಕಾಣುವ (ಕೆಂಪು, ನೀಲಿ, ಹಳದಿ ಇತ್ಯಾದಿ) ಬೆಳಕಿನ ಕಿರಣದಂಡವನ್ನು ಅಶ್ರಗದ (prism) ಮೂಲಕ ಹಾಯಿಸಿ ಬಿಳಿ ತೆರೆಯ ಮೇಲೆ ಬೀಳಿಸಿದರೆ ಅಲ್ಲಿ ಪ್ರಕಾಶಮಾನವಾದ ಕೆಲವು ಬಣ್ಣದ ಗೆರೆಗಳು ಕಾಣುವುವು. ಅವೆಲ್ಲವೂ ಮೂಲ ಬೆಳಕಿನಬಣ್ಣದವೇ ಎಂಬಂತೆ ಕಂಡರೂ ಬಣ್ಣದಛಾಯೆಗಳಲ್ಲಿ ಒಂದಕ್ಕೊಂದಕ್ಕೆ ಸ್ವಲ್ಪ ವ್ಯತ್ಯಾಸವಿರುತ್ತದೆ. ಇವುಗಳ ಒಟ್ಟು ಹೆಸರು ರೋಹಿತ, ಅಂದರೆ ಮೂಲಬೆಳಕು ಈ ವಿವಿಧ ಛಾಯೆಗಳ ಸಂಯುಕ್ತ. ಅಶ್ರಗ ಅದನ್ನು ವಿಭಜಿಸಿದೆ. ಆ ಒಂದೊಂದು ಘಟಕವೂ ಬೇರೆಬೇರೆ ಅಲೆಯುದ್ದ (wave length) ಉಳ್ಳದ್ದು. ಆದ್ದರಿಂದ ರೋಹಿತದಲ್ಲಿ ಬೇರೆಬೇರೆ ಸ್ಥಾನವನ್ನು ತಲಪಿವೆ.

ಈಗ ಅದೇ ಬೆಳಕನ್ನು ಅಶ್ರಗದ ಮೂಲಕ ಹಾಯಿಸುವ ಮೊದಲು ಪಾರಕ ಪದಾರ್ಥವೊಂದರ ಮೂಲಕ ಹರಿಸಿ, ಅನಂತರ ಅದರ ರೋಹಿತವನ್ನು ಪಡೆದರೆ, ಅದರಲ್ಲಿ ಮೊದಲಿದ್ದ ಗೆರೆಗಳ ಜೊತೆಗೆ ಕೆಲವು ಹೊಸಗೆರೆಗಳು ಕಂಡುಬರುತ್ತವೆ. ಅಂದರೆ ಮೂಲ ಬೆಳಕಿನಲ್ಲಿ ಯಾವ ಯಾವ ಅಲೆಯುದ್ದದ ಬೆಳಕಿನ ರಶ್ಮಿಗಳಿದ್ದುವೋ ಅವುಗಳಲ್ಲದೆ ಬೇರೆ ಅಲೆಯುದ್ದವಿರುವ ರಶ್ಮಿಗಳು ಸಹ ಉದ್ಭವಿಸಿವೆಇವು ಪಾರಕ ಪದಾರ್ಥದ ಕೊಡುಗೆಗಳೆಂಬುದು ಸ್ಪಷ್ಟ. ಇದೇ ರಾಮನ್ ಪರಿಣಾಮ.

ಪಾರಕ ಪದಾರ್ಥದಲ್ಲಿಯ ಅಣುಗಳು ಮೂಲ ಬೆಳಕಿನಿಂದ ಸ್ವಲ್ಪ ಶಕ್ತಿಯನ್ನು ಹೀರಿ ದೀರ್ಘ ಅಲೆಯುದ್ದವುಳ್ಳ ಬೆಳಕಿನ ರಶ್ಮಿಯನ್ನು ಉತ್ಪತ್ತಿಗೈಯ್ಯಬಹುದು; ಇಲ್ಲವೇ ಅದಕ್ಕೆ ಸ್ವಲ್ಪ ಶಕ್ತಿಯನ್ನು ಒದಗಿಸಿ ಹ್ರಸ್ವ ಅಲೆಯುದ್ದದ ಬೆಳಕಿನ ರಶ್ಮಿಗಳನ್ನು ಉಂಟುಮಾಡಬಹುದು. ಮೊದಲನೆಯದನ್ನು ಸ್ಟೋಕ್ಸ್ ಗೆರೆಗಳೆಂದೂ ಎರಡನೆಯವನ್ನು ಪ್ರತಿ ಸ್ಟೋಕ್ಸ್ ಗೆರೆಗಳೆಂದೂ (antistokes) ಎರಡನ್ನೂ ಒಟ್ಟಿಗೆ ರಾಮನ್ ಗೆರೆಗಳೆಂದೂ ಕರೆಯುತ್ತಾರೆ. ಬೆಳಕಿನ ಅಲೆಯುದ್ದದಲ್ಲಾಗುವ ಈ ವ್ಯತ್ಯಾಸಕ್ಕೂ ಪಾರಕ ಪದಾರ್ಥದ ಅಣುರಚನೆಗೂ ನಿಕಟ ಸಂಬಂಧವಿದೆ. ಆದ್ದರಿಂದ ರಾಮನ್ ಗೆರೆಗಳ ಪರೀಕ್ಷೆಯಿಂದ ಪದಾರ್ಥದ ಅಣುರಚನೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಲಭಿಸುತ್ತದೆ.

ಈ ಇತಿಹಾಸ ಪ್ರವರ್ತಕ ಭಾಷಣದ ಕೊನೆಯಲ್ಲಿ ರಾಮನ್ ತಮ್ಮ ನಿಕಟ ಸಹವರ್ತಿಗಳ ಸೇವೆಯನ್ನು ಹೆಚ್ಚುಹೆಚ್ಚಾಗಿ ಸ್ಮರಿಸುತ್ತ ಅವರಿಗೆ ಗೌರವವನ್ನು ಸಲ್ಲಿಸುತ್ತ, ನಾವೀಗ ಪ್ರಾಯೋಗಿಕ ಸಂಶೋಧನೆಯ ಅತ್ಯಂತ ವಿಸ್ಮಯಕರ ಪ್ರದೇಶದ ಅಂಚಿನಲ್ಲಷ್ಟೇ ನಿಂತಿದ್ದೇವೆ ಎಂಬುದು ಸ್ಪಷ್ಟ. ವಿಕಿರಣ ಹಾಗೂ ತರಂಗಸಿದ್ಧಾಂತ, ಎಕ್ಸ್ ಕಿರಣ ದೃಕ್ ವಿಜ್ಞಾನ, ಅಣು ಹಾಗೂ ಪರಮಾಣು ರೋಹಿತಗಳು, ಪ್ರತಿದೀಪ್ತಿ ಹಾಗೂ ಚದರಿಕೆ, ಉಷ್ಣಗತಿ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ಇವುಗಳಿಗೆ ಸಂಬಂಧಿಸಿದಂಥ ವಿವಿಧ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲುವ ನಿರೀಕ್ಷೆ ಉಂಟು. ಇದರ ಅನ್ವೇಷಣೆ ಇನ್ನು ಬಾಕಿ ಇದೆ ...ನೂತನ ವಿಕಿರಣದ ರೇಖಾರೋಹಿತವನ್ನು ಮೊದಲು ನೋಡಿದ್ದು ೧೯೨೮ ಫೆಬ್ರುವರಿ ೨೮ರಂದು... ಮರುದಿನ ಇದನ್ನು ಪ್ರಕಟಿಸಲಾಯಿತು ಎಂದು ಮುಕ್ತಾಯಗೊಳಿಸಿದರು. ರಾಮನ್ ಪರಿಣಾಮ ಆವಿಷ್ಕಾರವಾದದ್ದು ಕೊಲ್ಕಟದಲ್ಲಿ; ಆದರೆ ಲೋಕಕ್ಕೆ ಪ್ರಕಟವಾದದ್ದು ಬೆಂಗಳೂರಿನಲ್ಲಿ.

ವಿಜ್ಞಾನಲೋಕಕ್ಕೆ ಈ ಆವಿಷ್ಕಾರ ನಿರೀಕ್ಷಿತವಾಗಿಯೇ ಇತ್ತು. ಕಾರಣ, ತಮ್ಮ ಸಂಶೋಧನೆಗಳ ಪ್ರತಿಯೊಂದು ಹೊಸ ಸೋಪಾನವನ್ನೂ ರಾಮನ್ನೇಚರ್ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದರಿಂದ ಆಸಕ್ತ ವಿಜ್ಞಾನಿಗಳು ತಾವು ಪ್ರವೇಶಿಸಲಿರುವ ವಿಸ್ಮಯಲೋಕವನ್ನು ಕುತೂಹಲದಿಂದ ಎದುರುನೋಡುತ್ತಿದ್ದುದು ಸಹಜವೇ. ರಾಮನ್ ಪರಿಣಾಮದ ಪ್ರಕಟಣೆ ಅವರ ಮುಂದೆ ಆ ಲೋಕವನ್ನು ತೆರೆದಿಟ್ಟಿತು.

ದೃಗ್ವಿಜ್ಞಾನದಲ್ಲಿ ಪ್ರಸಿದ್ಧ ಪ್ರಾಯೋಗಿಕ ವಿಜ್ಞಾನಿಯಾಗಿದ್ದ ಆರ್. ಡಬ್ಲ್ಯು. ವುಡ್ ಎಂಬಾತ ರಾಮನ್ ಪರಿಣಾಮದ ಪ್ರಯೋಗಗಳನ್ನು ಪರಿಷ್ಕೃತ ಸಂಕೀರ್ಣ ಉಪಕರಣಗಳ ನೆರವಿನಿಂದ ತಪಾಸಿಸಿ ಆ ತೀರ್ಮಾನದ ಋಜುತ್ವವನ್ನೂ ನಿಖರತೆಯನ್ನೂ ಕಂಡುಕೊಂಡ. ಆತನೇಚರ್ ಪತ್ರಿಕೆಗೆ ಕಳಿಸಿದ ತಂತಿ ಹೀಗಿತ್ತು, ಅತಿ ತೀವ್ರ ಏಕವರ್ಣೀ (mono-chromatic) ಬೆಳಕಿನಿಂದ ಬೆಳಗಿಸಿದ ಪಾರಕ ವಸ್ತುಗಳು ಅಲೆಯುದ್ದವನ್ನು ಮಾರ್ಪಡಿಸಿ ಬೆಳಕನ್ನು ಚದರಿಸುತ್ತವೆ ಎಂಬ ಪ್ರೊ ರಾಮನ್ನರ ಉಜ್ವಲ ಹಾಗೂ ಆಶ್ಚರ್ಯಕರ ಆವಿಷ್ಕಾರವನ್ನು ತಾಳೆ ನೋಡಿದ್ದೇನೆ. ಅಲ್ಲದೆ ಪರಿಷ್ಕೃತ ಉಪಕರಣಗಳನ್ನು ಉಪಯೋಗಿಸಿಕೊಂಡು ಅವರ ಆವಿಷ್ಕಾರದ ಪ್ರತಿಯೊಂದು ವಿವರವನ್ನೂ ಪರಿಶೀಲಿಸಿದ್ದೇನೆ. ಬೆಳಕಿನ ಚದರಿಕೆಯನ್ನು ದೀರ್ಘಕಾಲ ತಾಳ್ಮೆಯಿಂದ ರಾಮನ್ ಪರಿಶೀಲಿಸಿದುದರ ಪರಿಣಾಮವಾಗಿ ಲಭಿಸಿದ ಈ ಬಲು ಸುಂದರ ಆವಿಷ್ಕಾರ ಬೆಳಕಿನ ಶಕಲ ಸಿದ್ಧಾಂತದ (quantum theory) ಬಗ್ಗೆ ಈ ತನಕ ದೊರೆತಿರುವ ಅತ್ಯಂತ ತೃಪ್ತಿಕರ ಪುರಾವೆಗಳಲ್ಲಿ ಒಂದೆಂದು ನನಗೆ ತೋರುತ್ತದೆ.

ರಾಮನ್ ಪರಿಣಾಮ ಭೌತ ವಿಜ್ಞಾನದಲ್ಲಿ ನೂತನ ಅಧ್ಯಾಯವನ್ನು ಪ್ರವರ್ತಿಸಿತು. ಆಕಾಶದ ಬಣ್ಣ, ಸೂರ್ಯ ಮತ್ತು ನಕ್ಷತ್ರಕಿರಣಗಳ ವಿಭಜನೆ ಈ ರಂಗದಲ್ಲಿ ಹೊಸ ದೃಷ್ಟಿ ನೀಡಿತು. ಬೆಳಕು ವಿದ್ಯುತ್ಕಾಂತ ತರಂಗಗಳ ಒಂದು ಬಗೆ. ಇತ್ತ ಪಾರಕ ವಸ್ತುಗಳಲ್ಲಿ ಬೆಳಕಿನ ಚದರಿಕೆ ಕೂಡ ವಿದ್ಯುತ್ಕಾಂತ ತರಂಗಗಳ ಒಂದು ವೈಶಿಷ್ಟ್ಯವೇ ಆಗಿರಬೇಕು ಎಂದು ಸಂಶೋಧನೆ ಮುಂದುವರಿಯಿತು. ರಾಮನ್ ಪರಿಣಾಮದ ಎಕ್ಸ್ ಕಿರಣವಲಯದ ರೂಪಾಂತರವೂ ಇದೆ. ಎಕ್ಸ್ ಕಿರಣಗಳನ್ನು ಅನಿಲದ ಮೂಲಕ ಹರಿಸಿದರೆ ಹೊಸತೊಂದು ವಿಕಿರಣ ದೊರೆಯುವುದು. ಇದು ಕಾಂಪ್ಟನ್ ಪರಿಣಾಮ (೧೯೨೩). ಕಾಂಪ್ಟನ್ ಪರಿಣಾಮದ ಶೋಧನೆ ಬಲು ಪ್ರಯಾಸಕರವಾದದ್ದು. ಕಾಣುವ ಬೆಳಕಿನಿಂದ ಲಭಿಸುವ ರಾಮನ್ ಪರಿಣಾಮ (೧೯೨೮) ಇದಕ್ಕಿಂತ ಸುಲಭ ಹತ್ಯಾರು. ಇದರ ಬಳಕೆ ಭೌತ ವಿಜ್ಞಾನದ ಪ್ರಗತಿಗೆ ಒಳ್ಳೆಯ ಸೌಕರ್ಯ ಒದಗಿಸಿತು.

೧೯೫೩ ಮಾರ್ಚ್ ೧೬ರಂದು ರಾಮನ್ ಪರಿಣಾಮ ಆವಿಷ್ಕಾರದ ಬೆಳ್ಳಿ ಹಬ್ಬವನ್ನು ಭಾರತದಲ್ಲಿ ಆಚರಿಸಲಾಯಿತು. ಆ ಸಮಯದಲ್ಲಿ ಐನ್ಸ್ಟೈನ್ರಿಂದ ಒಂದು ಹೇಳಿಕೆ ಪಡೆಯಲಾಗಿತ್ತು (‘ದಿ ಹಿಂಡೂ ೧೬--೧೯೫೩). ಅದರ ಸಾರ ಹೀಗಿತ್ತು, ಒಂದು ವಿಚಾರದಲ್ಲಿ, ಹೇಗಿದ್ದರೂ ಆಧುನಿಕ ಭೌತ ವಿಜ್ಞಾನ ಒಂದು ಮಾದರಿ ಆಗಿರಬಹುದು. ಅನುಭವಜನ್ಯ ಜ್ಞಾನ ಹಾಗೂ ದ್ರವ್ಯದ ರಚನೆ ಮತ್ತು ಸರಳ ಘಟನೆಗಳು - ಇವನ್ನು ಕುರಿತ ಮೂಲಭೂತ ಭಾವನೆಗಳ ಪ್ರಗತಿ ಎಲ್ಲ ರಾಷ್ಟ್ರಗಳೂ ಪಾಲ್ಗೊಳ್ಳುವ ಒಂದು ಅಂತಾರಾಷ್ಟ್ರೀಯ ಕ್ರಿಯೆ. ಈ ದಿಶೆಯಲ್ಲಿ ಸಿ.ವಿ ರಾಮನ್ ದ್ರವ್ಯದ ಒಳಗಡೆ ಒಂದು ಫೋಟಾನಿನ ಶಕ್ತಿ ಭಾಗಶಃ ಪರಿವರ್ತನೆ ಆಗುವ ಸಾಧ್ಯತೆ ಇದೆ ಎಂಬುದನ್ನು ಪ್ರಥಮವಾಗಿ ಕಂಡುಕೊಂಡರು ಮತ್ತು ಪ್ರಾಯೋಗಿಕವಾಗಿ ತೋರಿಸಿದರು. ಈ ಆವಿಷ್ಕಾರವಾದ ಸಮಯದಲ್ಲಿ ಬರ್ಲಿನ್ನಿನ ಫಿಸಿಕ್ಸ್ ಕಲೋಕ್ವಿಯಮ್ಮಿನಲ್ಲಿ ಸೇರಿದ್ದ ನಮ್ಮೆಲ್ಲರ ಮೇಲೆ ಮಾಡಿದ ಧನಾತ್ಮಕ ಪರಿಣಾಮವನ್ನು ಈಗಲೂ ನಾನು ಚೆನ್ನಾಗಿ ಸ್ಮರಿಸಿಕೊಳ್ಳಬಲ್ಲೆ. ಮುಂದುವರಿಯುತ್ತ ರಾಮನ್ನರ ಕೊಡುಗೆ ಅಮೂಲ್ಯವಾದದ್ದೆಂದು ಹೇಳಿದರು.

ರಾಮನ್ ಪರಿಣಾಮದ ಪ್ರಥಮ ದಶಕದಲ್ಲಿ (೧೯೨೮-೩೮) ಅದನ್ನು ಕುರಿತ ೧೭೦೦ ಸಂಶೋಧನ ಪತ್ರಗಳು ಪ್ರಕಟಗೊಂಡುವು. ಪ್ರಪಂಚದ ಪ್ರತಿಯೊಂದು ರಾಷ್ಟ್ರವೂ ಈ ಮೂಲಭೂತ ಆವಿಷ್ಕಾರವನ್ನು ಕುರಿತು ತೀವ್ರ ಆಸಕ್ತಿ ತಳೆದಿತ್ತು. ಇವುಗಳ ಪೈಕಿ ಜರ್ಮನಿ, ಅಮೆರಿಕ ಸಂಯುಕ್ತ ಸಂಥಾನಗಳು, ಫ್ರಾನ್ಸ್, ಇಟಲಿ, ಬೆಲ್ಜಿಯಮ್ ಮತ್ತು ಜಪಾನ್ ಅಗ್ರಗಣ್ಯ ರಾಷ್ಠ್ರಗಳು. ಬೆಳ್ಳಿ ಹಬ್ಬದ ವೇಳೆಗೆ ೩೦೦೦ ಸಂಶೋಧನ ಪತ್ರಗಳು ಪ್ರಕಟವಾಗಿದ್ದುವು. ಇವುಗಳಲ್ಲಿ ಭಾರತದ ಮತ್ತು ಅಮೆರಿಕ ಕೊಡುಗೆ ಸುಮಾರು ಅರ್ಧದಷ್ಟು, ಲಂಡನ್ನಿನ ರಾಯಲ್ ಸೊಸೈಟಿ ಆ ದಶಕದ (೧೯೨೧-೩೦) ಮೂರು ಅಥವಾ ನಾಲ್ಕು ಅತ್ಯುತ್ಕೃಷ್ಟ ಪ್ರಾಯೋಗಿಕ ಭೌತವಿಜ್ಞಾನ ಸಂಶೋಧನೆಗಳಲ್ಲಿ ರಾಮನ್ ಪರಿಣಾಮ ಒಂದು ಎಂದು ವರದಿ ಮಾಡಿತು. ಈ ಪ್ರಚಂಡ ವಿಜಯದಿಂದ ರಾಮನ್ನರ ಖ್ಯಾತಿ ಏರಿತು; ಜೊತೆಗೆ ಅವರಿಗೆ ದೊರೆತ ಬಹುಮಾನ ಗೌರವಗಳ ಸಂಖ್ಯೆಯೂ ಏರಿತು - ಬ್ರಿಟಿಷ್ ಸರ್ಕಾರದ ನೈಟ್ (Sir) ಪದವಿ (೧೯೨೯), ಅಣುರೋಹಿತಗಳನ್ನು ಕುರಿತು ಚರ್ಚೆಯನ್ನು ಉದ್ಘಾಟಿಸಲು ಫ್ಯಾರಡೇ ಸೊಸೈಟಿಯಿಂದ ಆಹ್ವಾನ, ರೋಮ್ನ ವಿಜ್ಞಾನ ಸಂಘದಿಂದ Matteucci ಪದಕ (೧೯೩೦), ಫ್ರೀ ಬರ್ಗ್ ವಿಶ್ವವಿದ್ಯಾಲಯದ ಗೌರವ ಡಾಕ್ಟೋರೇಟ್ ಪದವಿ (೧೯೩೦), ಗ್ಲಾಸ್ಗೊ ವಿಶ್ವವಿದ್ಯಾಲಯ (೧೯೩೨), ಕೊಲ್ಕಟ, ಮುಂಬಯಿ, ಮದರಾಸು, ಬನಾರಸ್, ಡಾಕ್ಕಾ, ಪಾಟ್ನಾ, ಮೈಸೂರು ಮೊದಲಾದ ವಿವಿಧ ಭಾರತೀಯ ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ ಪದವಿಗಳು, ಅಂತಾರಾಷ್ಟ್ರೀಯ ಲೆನಿನ್ ಬಹುಮಾನ (೧೯೫೭), ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ಸಿನ ವಿದೇಶೀ ಸದಸ್ಯತ್ವ (೧೯೪೯), ಸೋವಿಯತ್ ಅಕಾಡೆಮಿ ಆಫ್ ಸೈನ್ಸಸ್ಸಿನ ವಿದೇಶೀ ಸದಸ್ಯತ್ವ (೧೯೫೭), ಭಾರತ ಗಣರಾಜ್ಯದ ಪ್ರಥಮ ರಾಷ್ಟ್ರೀಯ ಪ್ರಾಧ್ಯಾಪಕತ್ವ (೧೯೪೯), ಭಾರತರತ್ನ ಪ್ರಶಸ್ತಿ (೧೯೫೪), ಇತ್ಯಾದಿ. ಗೌರವ ಪರಂಪರೆಯಲ್ಲಿ ಕಳಶಪ್ರಾಯವಾದದ್ದು ೧೯೩೦ರಲ್ಲಿ ದೊರೆತ ಭೌತವಿಜ್ಞಾನದ ನೊಬೆಲ್ ಪಾರಿತೋಷಿಕ.

೧೮೯೫ರಲ್ಲಿ ಆಲ್ಫ್ರೆಡ್ ನೊಬೆಲ್ ಮಹಾಶಯನ ಔದಾರ್ಯದಿಂದ ಈ ನಿಧಿ ಪ್ರಾರಂಭವಾಯಿತು. ಇದರ ವಿತರಣೆ ಕುರಿತು ಆತ ವಿಧಿಸಿರುವ ನಿಯಮದ ಪ್ರಕಾರ, ...ಮೂಲಧನದ ಮೇಲೆ ಬರುವ ಬಡ್ಡಿಯನ್ನು ಐದು ಸಮಭಾಗ ಮಾಡಿ ಒಂದು ಭಾಗವನ್ನು ಭೌತವಿಜ್ಞಾನದಲ್ಲಿ ಹಿಂದಿನ ವರ್ಷ ಮಹಾಸಂಶೋಧನೆ ಮಾಡಿದ... ವ್ಯಕ್ತಿಗೆ ಕೊಡಬೇಕು. ಹೀಗೆ ಪಾರಿತೋಷಿಕ ನೀಡುವಾಗ ವ್ಯಕ್ತಿಯ ಯೋಗ್ಯತೆಯೊಂದೇ ನಿರ್ಣಾಯಕವಾಗಿರಬೇಕೇ ವಿನಾ ಆತನ ರಾಷ್ಟ್ರ, ವರ್ಣ ಮುಂತಾದವಲ್ಲ.

ಸ್ವೀಡನ್ನಿನಲ್ಲಿ ನೊಬೆಲ್ ಪಾರಿತೋಷಿಕ ಪಡೆಯಲು ಹೋದಾಗ ರಾಮನ್ ತಮ್ಮ ಹೆಸರಿನ ಪರಿಣಾಮವನ್ನು ವಿಜ್ಞಾನಿಗಳ ಎದುರು ಪ್ರದರ್ಶಿಸಿದರು. ದ್ರವವಸ್ತುಗಳ ಮೂಲಕ ಬೆಳಕು ಹಾಯುವಾಗ ಅದರ ಚದರಿಕೆ ಕುರಿತ ಈ ಪ್ರಾಯೋಗಿಕ ವಿವರಣೆಗೆ ಅವರು ಅಂದು ಅಲ್ಕೊಹಾಲನ್ನು ಆಯ್ದುಕೊಂಡಿದ್ದರು. ಪ್ರಯೋಗ, ಭಾಷಣ ಎಲ್ಲ ಮುಗಿದುವು. ಎಲ್ಲರೂ ಸಾಮೂಹಿಕ ಭೋಜನಕ್ಕಾಗಿ ಕುಳಿತರು. ವಿದೇಶೀ ಸಂಪ್ರದಾಯದಂತೆ ಮದ್ಯಪಾನವೂ (ಆಲ್ಕೊಹಾಲ್) ಎಂದಿನಂತೆ ನಡೆದಿತ್ತು. ಅವರ ಒತ್ತಿಗೆ ಕುಳಿತಿದ್ದ ವಿಜ್ಞಾನಿಯೊಬ್ಬರು ರಾಮನ್ನರನ್ನು ಕೆಣಕಿದರು, ಸರಿ ಈ ತನಕ ನೀವು ತೋರಿಸಿದ್ದು ಅಲ್ಕೊಹಾಲಿನ ಮೇಲೆ ರಾಮನ್ ಪರಿಣಾಮವನ್ನು. ಈಗ ರಾಮನ್ ಮೇಲೆ ಅಲ್ಕೊಹಾಲ್ ಪರಿಣಾಮ ನೋಡಲು ನಮಗೆ ಅನುಮಾಡಿಕೊಡಿ! ನಗುವಿನ ಅಲೆ ಎದ್ದಿತು. ಆದರೆ ಸಂಪ್ರದಾಯನಿಷ್ಠ ರಾಮನ್ ಈ ಕೋರಿಕೆಯನ್ನು ಈಡೇರಿಸಲಿಲ್ಲ.

ಕೊಲ್ಕಟ ನಗರ ಅವರ ಸಂಶೋಧನ ಕ್ಷೇತ್ರವಾದರೂ ಬೆಂಗಳೂರು ಅವರ ಪ್ರೀತಿಯ ನಗರ. ೧೯೨೭ರಿಂದಲೂ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ವರಿಷ್ಠ ಆಡಳಿತ ಸಭೆಯ ಸದಸ್ಯರಾಗಿದ್ದರು. ಸಂಸ್ಥೆಯ ಪ್ರಗತಿ ಕುರಿತು ಅವರಿಗೆ ಅಪಾರ ಆಸಕ್ತಿ. ಅದೊಂದು ನಿಜಕ್ಕೂ ಅಖಿಲ ಭಾರತೀಯ ಸಂಸ್ಥೆಯಾಗಬೇಕು, ಅದರ ಎಲ್ಲ ಪ್ರಾಧ್ಯಾಪಕರೂ ಭಾರತೀಯರೇ ಆಗಬೇಕು, ಈ ವಿಧಾನವೊಂದರಿಂದಲೇ ಭಾರತೀಯರಿಗೆ ತಮ್ಮ ಬಾಂಧವರ ಶಕ್ತಿ ಸಾಮರ್ಥ್ಯ ಕುರಿತು ವಿಶ್ವಾಸ ಅಭಿಮಾನ ಮೂಡಲು ಸಾಧ್ಯ ಎಂದು ರಾಮನ್ ದೃಢವಾಗಿ ನಂಬಿದ್ದರು. ವಿದೇಶೀ ದೇವಾಲಯದ ಪ್ರದಕ್ಷಿಣೆಯ ವಿನಾ ಇಲ್ಲಿ ಮೂಲಭೂತ ಸಂಶೋಧನೆ ಸಾಧ್ಯವಿಲ್ಲ ಎನ್ನುವ ನಿರಭಿಮಾನಿಗಳಿಗೆ ಈ ಸಂಸ್ಥೆ ಯೋಗ್ಯ ಸವಾಲಾಗಬೇಕು ಎಂಬುದು ಅವರ ಆಸೆ.

ರಾಮನ್ನರ ಜೀವನದ ಚಿತ್ರಗಳಲ್ಲಿ ಲಿಖಿತವಾಗದ ಒಂದು ಅಂಶವೆಂದರೆ ಕೊಲ್ಕಟದಿಂದ ಅವರ ನಿರ್ಗಮನದ ಕಾರಣ. ಅವರ ಯಶಸ್ಸು ಅಂತಾರಾಷ್ಟ್ರೀಯ ಸ್ಥಾನಮಾನವನ್ನು ಭಾರತೀಯ ವಿಜ್ಞಾನರಂಗಕ್ಕೆ ತಂದುಕೊಟ್ಟಿದ್ದಾಗ, ಅವರೇ ಕಟ್ಟಿದ ಮಂದಿರವನ್ನು ತೊರೆದು ದೂರದ ಬೆಂಗಳೂರಿಗೆ ಹೋಗಿ ಹೊಸ ಮಂದಿರದಲ್ಲಿ ಹೊಸತಾಗಿ ಕೆಲಸ ಆರಂಭಿಸಬೇಕಾಯಿತು. ಅದು ಅವರಿಗೆ ಪ್ರಿಯವಾದ ಕಾರ್ಯವಾಗಿರಲಿಲ್ಲವಾದರೂ ಅನಿವಾರ್ಯವಾಯಿತು. ಆಶುತೋಷ ಮುಖರ್ಜಿಯವರ ನಿಧನದ (೨೫ ಮೇ ೧೯೨೪) ತರುವಾಯ ಕೊಲ್ಕಟದ ಹವೆ ಬದಲಾಯಿತು.

ಪ್ರಾಂತೀಯ ಸಂಕುಚಿತ ಮನೋಭಾವನೆಗಳಿಂದ ಅಲ್ಲಿಯ ವಾಸ್ತವ್ಯ ನನಗೆ ಅಸಹನೀಯವಾಯಿತು. ವಿಜ್ಞಾನಿಗೆ ಬೇಕಾದದ್ದೇನು? ವಿಶಾಲ ಮನೋಬುದ್ಧಿ ಇರುವ ನಿರ್ಮಲ ವಾತಾವರಣ. ಅವನ ಪ್ರತಿಭೆ ಆರ್ಥಿಕ ಬಂಧನಗಳಿಂದ ಮತ್ತು ಆಡಳಿತೆಯ ಆತಂಕಗಳಿಂದ ಕುಂಠಿತವಾಗುತ್ತದೆ. ಜೊತೆಗೆ ಇತರ ಅವೈಜ್ಞಾನಿಕ ಕ್ಷುದ್ರ ಕಾರಣಗಳೂ ಒಂದುಗೂಡಿದರೆ ವಿಜ್ಞಾನಿಯ ಸಮಾಧಿ ಆದಂತೆಯೇ. ರಾಮನ್ನರನ್ನು ಅಲ್ಲಿಂದ ಅವರು ಅಟ್ಟಿದಾಗ ಭಾರತೀಯ ವಿಜ್ಞಾನ ಆರು ಅಡಿ ಆಳದಲ್ಲಿ ಹುಗಿಯಲ್ಪಟ್ಟಿತು. ನೊಬೆಲ್ ಪಾರಿತೋಷಿಕ ನನಗೆ ಬಂದದ್ದು ಮುಖ್ಯವಲ್ಲ. ಇಷ್ಟು ದೊಡ್ಡ ದೇಶ, ಪುರಾತನ ಸಂಸ್ಕೃತಿಯ ತವರೂರು, ಇಲ್ಲಿಯ ಜನ ಬೇರೆ ಯಾರಿಗಿಂತಲೂ ಬುದ್ಧಿವಂತಿಕೆಯಲ್ಲಾಗಲೀ ಸಾಹಸಪ್ರಿಯತೆಯಲ್ಲಾಗಲೀ ಕಡಿಮೆಯವರಲ್ಲ. ಆದರೂ ೧೯೩೦ರಿಂದೀಚೆಗೆ ಪುನಃ ಇಂಥ ಪಾರಿತೋಷಿಕಗಳು ನಮ್ಮ ದೇಶಕ್ಕೆ ಬರಲಿಲ್ಲವಲ್ಲ ಎಂದು ನನಗೆ ವ್ಯಥೆ ಆಗುತ್ತಿದೆ ಎಂದು ಉದ್ವಿಗ್ನತೆಯಿಂದ ನನ್ನೊಡನೆ ಹೇಳಿದರು (೧೯೬೮).

೧೯೩೩ರಲ್ಲಿ ರಾಮನ್ ಕೊಲ್ಕಟದಿಂದ ಬೆಂಗಳೂರಿಗೆ ಬಂದರು. ಈಗ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ನಿರ್ದೇಶಕರು. ಅಂದರೆ ವರಿಷ್ಠ ಅಧಿಕಾರಿಗಳು. ಈ ಸ್ಥಾನವನ್ನು ಅಲಂಕರಿಸಿದ ಪ್ರಥಮ ಭಾರತೀಯರಿವರು. ಇದು ಆಡಳಿತೆಯ ಮತ್ತು ಸಂಶೋಧನೆಯ ಸಮಾನ ಹೊಣೆಗಾರಿಕೆ ಇದ್ದ ಹುದ್ದೆ. ಇಲ್ಲಿ ಭೌತವಿಜ್ಞಾನದ ಒಂದು ಹೊಸ ವಿಭಾಗವನ್ನೇ ಪ್ರಾರಂಭಿಸಿ ಅದರಲ್ಲಿ ಸಕಲ ಆಧುನಿಕ ಉಪಕರಣಗಳೂ ದೊರೆಯುವಂತೆ ಏರ್ಪಡಿಸಲಾಯಿತು. ಪ್ರಪಂಚದ ಅತ್ಯುತ್ಕೃಷ್ಟ ರೋಹಿತ ಪ್ರಯೋಗ ಮಂದಿರಗಳಲ್ಲಿ ಇದೂ ಒಂದು. ದೃಗ್ವಿಜ್ಞಾನ ವಿಶೇಷ ಕುತೂಹಲ ಕ್ಷೇತ್ರ. ತಮ್ಮ ಜನಪ್ರಿಯ ವಿಜ್ಞಾನ ಭಾಷಣಗಳಲ್ಲಿ ರಾಮನ್ನರುಸ್ಫಟಿಕಗಳ ರಾಜ ವಜ್ರ ಎಂದು ಪರಿಚಯಿಸುತ್ತಿದ್ದುದು ವಾಡಿಕೆ.

೧೯೩೪ರಲ್ಲಿ ರಾಮನ್ ನೇತೃತ್ವದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆ ಸ್ಥಾಪಿತವಾಯಿತು. ಇವರೇ ಅದರ ಉಸಿರು ಮತ್ತು ಒಡಲು. ಅದರ ಉದ್ದೇಶಗಳಿಷ್ಟು - ಪ್ರಥಮ ದರ್ಜೆಯ ಸಂಶೋಧನ ಪತ್ರಗಳ ಪ್ರಕಟಣೆ; ವಿಜ್ಞಾನಸಂಬಂಧ ಸಮಸ್ಯೆಗಳ ಚರ್ಚೆಗೆ ಹೊಸ ವೇದಿಕೆ ಒದಗಿಸುವುದು ಮತ್ತು ಭಾರತದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನೆಗಳ ಸಂಘಟನೆ. ಈ ಉದ್ದೇಶ ಸಿದ್ಧಿಸಲು ಸಂಶೋಧನ ಮಾಸಿಕವನ್ನೂ (ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ಅಕಾಡೆಮಿ) ಪ್ರಾರಂಭಿಸಲಾಯಿತು. ಇದೇ ವೇಳೆ (೧೯೩೫) ಅಂದಿನ ಮೈಸೂರು ಸರಕಾರ ವಿಜ್ಞಾನದ ಮುನ್ನಡೆಗೋಸ್ಕರ ಒಂದು ದಿಟ್ಟ ಮುನ್ನಡಿಯಿಟ್ಟಿತು: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗೆ ಬೆಂಗಳೂರು ನಗರದ ಹೊರವಲಯದಲ್ಲಿ ಮೊದಲು ೧೯, ತರುವಾಯ ೫, ಹೀಗೆ ಒಟ್ಟು ೨೪ ಎಕರೆ ವಿಸ್ತೀರ್ಣದ ಪ್ರಶಸ್ತ ಭೂಮಿಯನ್ನು ದಾನವಾಗಿ ಮಂಜೂರು ಮಾಡಿತು. ಕೆಲವು ವರ್ಷಾನಂತರ ಪಕ್ಕದ ೫ ಎಕರೆ ಸ್ಥಳವನ್ನು ರಾಮನ್ ತಮ್ಮ ಸಂಸ್ಥೆಗಾಗಿ ಖರೀದಿಸಿದರು. ಆ ತನಕ ಬೇರೆ ಪ್ರಯೋಗಮಂದಿರಗಳಲ್ಲಿ ತಮ್ಮ ಸಂಶೋಧನೆಯನ್ನು ನಡೆಸಿದ್ದ ಈ ಕನಸುಗಾರನಿಗೆ ಇನ್ನು ಸ್ವಂತ ಕಲ್ಪನಾನುಸಾರ ನಿರ್ಮಿಸಬಹುದಾದ ವಿಜ್ಞಾನಮಂದಿರದಲ್ಲಿ ಸಂಶೋಧನೆ ಮುಂದುವರಿಸಲು ಅವಕಾಶ ಕೂಡಿ ಬಂತು. ಅಕಾಡೆಮಿಯ ಆಡಳಿತ ವರ್ಗ ಹೊಸ ಸಂಶೋಧನ ಮಂದಿರ ಕಟ್ಟುವಲ್ಲಿ ರಾಮನ್ನರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿತು. ಇಂಡಿಯನ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿದ್ದಾಗಲೇ ಈ ಕೆಲಸವನ್ನು ಇವರು ವಹಿಸಿಕೊಂಡು ದಕ್ಷತೆಯಿಂದ ಹೊಣೆ ನಿರ್ವಹಿಸತೊಡಗಿದರು. ರಾಮನ್ ಮಂದಿರದ ಕಟ್ಟಡಗಳ ಕೆಲಸ ೧೯೪೩ರಲ್ಲಿ ಆರಂಭವಾಗಿ ೧೯೪೭ರಲ್ಲಿ ಮುಗಿಯಿತು. ಕಚೇರಿ ಕೆಲಸವಾಗಲಿ, ಹೊಸತೊಂದು ಪ್ರಯೋಗಕ್ಕೆ ಉಪಕರಣಗಳನ್ನೂ ವಿಧಾನವನ್ನೂ ಅಳವಡಿಸುವುದಾಗಲಿ, ಹೊಸ ಮಂದಿರದ ನಿರ್ಮಾಣವಾಗಲಿ - ಎಲ್ಲೆಲ್ಲಿಯೂ ರಾಮನ್ ಶಿಸ್ತುಗಾರ, ಸೌಂದರ್ಯಪ್ರಿಯ ಮತ್ತು ಕರ್ತೃತ್ವಶಾಲಿ. ಯಾವ ಒಂದು ಸೂಕ್ಷ್ಮ ವಿವರವನ್ನೂ ಅವರು ಸನ್ನಿವೇಶದ ಸೆಳೆತಕ್ಕೆ ಬಿಡರು; ಅಷ್ಟೇ ಅಲ್ಲ ಸಮಗ್ರತೆಯ ಪ್ರಜ್ಞೆಯನ್ನೂ ಕಳೆದುಕೊಳ್ಳರು.

೧೯೩೩ರಿಂದ ೧೯೩೯ರ ಕೊನೆಯತನಕ ರಾಮನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ನಿರ್ದೇಶಕರಾಗಿ ಕೆಲಸ ಮಾಡಿದರು. ಗವರ್ನಿಂಗ್ ಕೌನ್ಸಿಲ್ಲಿನೊಡನೆ ಮತಭೇದ ಉಂಟಾದುದರಿಂದ ನಿರ್ದೇಶಕತ್ವಕ್ಕೆ ರಾಜೀನಾಮೆಯಿತ್ತರು. ಆದರೂ ಮುಂದಿನ ಒಂಬತ್ತು ವರ್ಷ ಪರ್ಯಂತ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅಕಾಡೆಮಿಯೂ ಪರಿಪುಷ್ಟವಾಗಿ ಬೆಳೆಯಿತು. ಬಹುಶಃ ಏಕಕಾಲದಲ್ಲಿ ಎರಡು ಕೆಲಸಗಳ ಹೊಣೆ (ಹೊರೆ) ಈ ಚೇತನಕ್ಕೆ ಬೇಕೇಬೇಕಾಗಿತ್ತು ಎಂದು ತೋರುವುದು. ಇಂಡಿಯನ್ ಇನ್ಸ್ಟಿಟ್ಯೂಟಿನಿಂದ ನಿವೃತ್ತರಾದ ತರುವಾಯ, ೧೯೪೮, ಅಕಾಡೆಮಿಯ ಪ್ರಯೋಗಾಲಯಕ್ಕೆ ತಮ್ಮ ಕಾರ್ಯಕ್ಷೇತ್ರವನ್ನು ವರ್ಗಾಯಿಸಿದರು. ಅದರ ಆಡಳಿತವರ್ಗ ಸರ್ವಾನುಮತದಿಂದ ಈ ಮಂದಿರವನ್ನು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂದೇ ಹೆಸರಿಸಿತು.

ಇದರಲ್ಲಿ ರಾಮನು ಸ್ವಹಸ್ತದಲ್ಲಿ ಬರೆದು ರುಜು ಮಾಡಿ (ಇಂಗ್ಲಿಷ್) ಇಟ್ಟಿರುವ ಸಂದೇಶ ಹೀಗಿದೆ, ನಮ್ಮ ಪ್ರಾಚೀನ ರಾಷ್ಟ್ರಕ್ಕೆ ತಕ್ಕುದಾದಂಥ ವಿಜ್ಞಾನ ಸಂಶೋಧನ ಕೇಂದ್ರವನ್ನು ಅಸ್ತಿತ್ವಕ್ಕೆ ತರಬೇಕೆಂಬುದು ನನ್ನ ತೀವ್ರ ಅಭಿಲಾಷೆ. ಈ ಕೇಂದ್ರದಲ್ಲಿ ನಮ್ಮ ದೇಶದ ತೀಕ್ಷ್ಣಮತಿಗಳು ವಿಶ್ವರಹಸ್ಯಗಳನ್ನು ಶೋಧಿಸಬೇಕು; ಮತ್ತು ಹಾಗೆ ಮಾಡುವುದರ ಮೂಲಕ ವಿಶ್ವದ ಚಟುವಟಿಕೆಗಳನ್ನು ನಿಯಂತ್ರಿಸುವ ಅತೀತ ಶಕ್ತಿಯನ್ನು ಗ್ರಹಿಸಲು ನಮಗೆ ನೆರವಾಗಬೇಕು. ಆತನ ದಿವ್ಯ ಕೃಪೆಯಿಂದ ನಮ್ಮ ದೇಶಪ್ರೇಮಿಗಳೆಲ್ಲರೂ ಈ ಕಾರಣವನ್ನು ಪೋಷಿಸುವ ವಿಧಾನವನ್ನು ಕಂಡಾಗ ಮಾತ್ರ ಈ ಗುರಿ ಸಿದ್ಧಿಸೀತು.
ಇಸವಿ ೧೯೬೭ರಲ್ಲಿ ನಾನು ಕಂಡ ದೃಶ್ಯವನ್ನೂ ಪಡೆದ ಅನುಭವವನ್ನೂ ಮುಂದಿನ ಅಧ್ಯಾಯದಲ್ಲಿ ವಿವರಿಸುತ್ತೇನೆ.

(ಮುಂದುವರಿಯುತ್ತದೆ)

1 comment:

  1. ಲೇಖನಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದುದಕ್ಕಾಗಿ ಧನ್ಯವಾದಗಳು

    ReplyDelete