25 October 2013

ಮಂತ್ರಸ್ನಾನ? ವನವಾಸ!

(ಕೊಡಚಾದ್ರಿಯ ಸುತ್ತ ಮುತ್ತ ನಾಲ್ಕನೆಯ ತುಣುಕು)
(ಚಕ್ರವರ್ತಿಗಳು ಸುತ್ತು ಹದಿಮೂರು)
[೧೯೯೦ರಲ್ಲಿ ಪುಸ್ತಕ ರೂಪದಲ್ಲಿಪ್ರಕಟವಾಗಿದ್ದ ನನ್ನ ಪುಸ್ತಕ - ಚಕ್ರವರ್ತಿಗಳನ್ನು ವಿಸ್ತರಿಸಿ ಪರಿಷ್ಕರಿಸುತ್ತ ೩೧-೮-೨೦೧೨ರಿಂದ ಈ ಜಾಲತಾಣದಲ್ಲಿ ಧಾರಾವಾಹಿಯಾಗಿಸುತ್ತಿರುವುದು ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ. ಈಗಲೂ ಸರಣಿಯಲ್ಲೇ ಓದುವಾಸಕ್ತರು ಇಲ್ಲೇ ಎಡ ಮಗ್ಗುಲಲ್ಲಿರುವ ಚಕ್ರವರ್ತಿಗಳು’ ವಿಭಾಗವನ್ನು ಆಯ್ದುಕೊಂಡು ಕ್ರಮವಾಗಿ ಹನ್ನೆರಡೂ ಸುತ್ತುಗಳನ್ನು ಮುಗಿಸಿ ಇಲ್ಲಿಗೆ ಬರಲೂಬಹುದು.]

ಅಂಗಳದಾಚೆ ಹಸುರು ಗದ್ದೆ, ಗದ್ದೆಗೆ ಅಂಚುಕಟ್ಟಿದಂತೆ ಪಶ್ಚಿಮ ಘಟ್ಟ ಮಾಲೆಯ ನೇರ ಮೈ; ಬಿಳಿ+ಕಲ್ಲ+ಬರೆ> ಬೆಳ್ಕಲ್ಬರೆ. ಅಲ್ಲೆಲ್ಲೋ ಹುದುಗಿದೆ ಜಲಪಾತ - ಬೆಳ್ಕಲ್ ತೀರ್ಥ, ನಮ್ಮ ಗುರಿ. ಗದ್ದೆಯ ಏರಿಯಲ್ಲಿ ಅಲ್ಲಲ್ಲಿ ಲಾವಂಚದ ಬೇರಿನಿಂದ ಎಣ್ಣೆ ತೆಗೆಯುವ ಭಟ್ಟಿಗಳು ಸುವಾಸನೆ ಬೀರುತ್ತಿದ್ದುವು. ಅರ್ಥಮಾಡಿಕೊಳ್ಳಬಲ್ಲವರಿಗೆ, ಎಲ್ಲೆಲ್ಲಿನದೋ ಶೋಕಿಗೆ ಇಲ್ಲಿ ಪ್ರಕೃತಿ ತೆರುವ ದಂಡದ ಬಗ್ಗೆದುರ್ನಾತ ಸಾರುತ್ತಲೂ ಇದ್ದುವು. ಸಣ್ಣ ಒಂದೆರಡು ತೊರೆದಾಟಿ ಕುರುಚಲು ಪೊದರುಗಳ ನಡುವೆ ತುಸು ಏರಿದೆವು. ಜಾಡು ಬೇರುಕಾಲುಗಳನ್ನು  ಕಿಸಿದು ನಿಂತ ಕಿರು ಮರಗಳ ನಡುವೆ ಹಾಯ್ದು, ಝರಿ - ಬೆಳ್ಕಲ್ ತೀರ್ಥದ ಪಾತ್ರೆ ಸೇರಿಸಿತು. ಮತ್ತೆ ನಾಲ್ಕೇ ಹೆಜ್ಜೆಯಲ್ಲಿ ಬೆಳ್ಕಲ್ ತೀರ್ಥದ ಅಬ್ಬಿಮುಖ - ಸುಮಾರು ಇಪ್ಪತ್ತೆರಡು ಮೀಟರ್ (ಅರವತ್ತೆಪ್ಪತ್ತು ಅಡಿ) ಎತ್ತರದ ಬಂಡೆಗೋಡೆ, ಬೆಟ್ಟದ ತೆರೆದೆದೆಗೇ ಮುಗಿಸಿತು.


ಬಂಡೆಮುಖದ ಪೂರ್ಣ ಅಗಲಕ್ಕೆ ಹರಡಿ ಒಸರುತ್ತಿದ್ದ , ಹನಿಕುತ್ತಿದ್ದ, ಎಲ್ಲೋ ಕಷ್ಟದಲ್ಲಿ ತೆಳುವಾಗಿ ಧಾರೆ Pಡಿಯದೇ ಸುರಿಯುತ್ತಲೂ ಇದ್ದ ನೀರೇ ಜಲಪಾತ! ಇದ್ದ ತೆಳು ನೀರಬೀಳೂ ಕರಾವಳಿಯ ಗಾಳಿಯ ಕರಾಮತ್ತಿನಲ್ಲಿ ಸ್ಥಿರವಾಗಿ ಒಂದೆಡೆ ಸುರಿಯಲರಿಯದೆ ಅಲ್ಲಿ ಇಲ್ಲೆಂದು ಒಲೆದಾಡುತ್ತಿತ್ತು. ನಾವು ಸಾಮಾನ್ಯವಾಗಿ ಕಾಣುವ ಜಲಪಾತಗಳೆಲ್ಲ ಕಣಿವೆಗಳ ಆಳದಲ್ಲಿ, ಕಾಡು ಆವರಿಸಿದ ಮೂಲೆಗಳಲ್ಲಿ ಬೀಳುವಂಥವೇ ಆದ್ದರಿಂದ ಮರೆಗಳಲ್ಲೆಲ್ಲ ದಟ್ಟ ಪಾಚಿ, ಅಂಚಿನಲ್ಲೆಲ್ಲ ವರ್ಣಮಯ ಹೂ ಸಮೇತ ವೈವಿಧ್ಯಮಯ ಹುಲ್ಲು, ಪೊದರು ಬಂಡೆಯ ಕಾಠಿಣ್ಯವನ್ನು ಮರೆಸಿಬಿಡುತ್ತವೆ. ಬಹುಶಃ ಆ ಮುಸುಕಿಲ್ಲದ್ದಕ್ಕೇ ಇಲ್ಲಿ ಬಂಡೆ, ಅದರಲ್ಲೂ ಪ್ರಧಾನವಾಗಿ ಬೆಣಚುಕಲ್ಲಿನ ಅಂಶವನ್ನೇ ಸಾರಿ ಹೇಳುವ ಅನ್ವರ್ಥ ನಾಮ ತುಂಬ ಅರ್ಥಪೂರ್ಣವಾಗಿದೆ. [ಆದರೆ ಜನಪದ ಸಾರುವ ನೆಲದ ಸತ್ಯವನ್ನು ತೀರಾ ಈಚೆಗೆ ಬಂದ ಇಸ್ಕಾನ್ ಇಲ್ಲಿ ತಿದ್ದುತ್ತಿರುವುದು ವಿಷಾದಕರ. ಇಸ್ಕಾನ್ ಕೊಡಚಾದ್ರಿಯ ತುಸು ಆಚಿನ ತಪ್ಪಲಿನ ವಳೂರು ಹಳ್ಳಿಯನ್ನು ಒಳಮಾರ್ಗಗಳಿಂದ ಒಳಹಾಕಿಕೊಂಡು ವನ್ಯವಿರೋಧೀ ಚಟುವಟಿಕೆಗಳಿಗೆ ನೆಲೆಯಾದ ‘ಬೃಂದಾವನ’ವನ್ನೇ ರೂಪಿಸುತ್ತಿದೆ. ಅದಕ್ಕೆ ಪೂರಕವಾಗಿ ಎಲ್ಲ ಸ್ಥಳೀಯ ಚಿಹ್ನೆಗಳನ್ನೂ ತನ್ನ ವ್ಯಾಪಕ ಸಂವಹನ ಸಾಧ್ಯತೆಗಳಿಂದ ‘ಸಂಸ್ಕರಿಸುತ್ತಿದೆ; ಅವರ ಲೆಕ್ಕದಲ್ಲಿ ಬೆಳ್ಕಲ್ ತೀರ್ಥ = ‘ಗೋವಿಂದ (/ಗೋಬಿಂದ) ತೀರ್ಥ’!]

ದೂಳು ದಾರಿಯ ಸವಾರಿ, ಉರಿಬಿಸಿಲು, ಏರು ನಡೆಗಳಿಂದ ಬೆವರ ಧಾರೆ ಕಲಂಕಿತರಾದ ನಮಗೆ ನೀರಾಸೆ ನಿರಾಶೆ ತಂದಿತ್ತು. ಬಂಡೆಗುಂಡುಗಳ ಅಸಡ್ಡಾಳ ಒಟ್ಟಣೆಯೇ ಜಲಪಾತದ ಪಾತ್ರೆ. ಪಾಚಿಗಟ್ಟಿ ಭಯಂಕರ ಜಾರುತ್ತಿದ್ದ ಬಂಡೆಗಳೆಡೆಯಲ್ಲಿ ಕಾಲೇನು, ಇಡೀ ನಾವೇ ಮರೆಯಾಗುವ ಸಂದುಗಳು. ಆದರೂ ಕನಿಷ್ಠ ವಸ್ತ್ರಾಲಂಕೃತರಾಗಿ ಬಂಡೆ ತಬ್ಬಿ, ಹರಿದಾಡಿ “ಹಾ ನೀರು” ಎಂದು ತಲೆ ಕೊಟ್ಟರೆ, ಜಲಧಾರೆ ಆರು ಮೀಟರ್ ಆಚೆ ‘ಪಕ ಪಕ’ ನಗುತ್ತಿತ್ತು. ಮತ್ತೆ ಚತುಷ್ಪಾದಿಗಳಾಗಿ ಅಲ್ಲಿ ತಲೆ ಒಡ್ಡುವಾಗ ಇನ್ನೆಲ್ಲೋ ಗಹಗಹಿಸುತ್ತಿತ್ತು. ಬಸವಳಿದು ಏನೂ ಬೇಡವೆಂದಾಗ ಫಕ್ಕನೆ ರಪರಪನೆ ರಾಚುತ್ತಿತ್ತು. ಬೆರಗು ಕಳೆದು ಸಂತಸದಿಂದ ಮೈದೆರೆದು ನಿಲ್ಲುವುದರೊಳಗೆ ಮತ್ತೆ ಸಿಂಪರಣೆ ಮಾತ್ರ; ಅರ್ಧ ಗಂಟೆ ಪರದಾಡಿ ಅರೆಬರೆ ಚಂಡಿಯಾದ್ದಷ್ಟೇ ಸ್ನಾನ! “ಸರಿಯಾಗಿ ನೀರು ಬೀಳದಿರುವುದು ನಮ್ಮ ತಪ್ಪಲ್ಲ. ನಮ್ಮ ಪ್ರಯತ್ನ ಮತ್ತು ಸಂಕಲ್ಪ ಶುದ್ಧವಾಗಿರುವುದರಿಂದ, (ನನ್ನ ಜೋಲುಬಿದ್ದ ಮೀಸೆಯನ್ನು ಸಾವರಿಸಿಕೊಂಡು) ‘ಮಂತ್ರ ಸ್ನಾನವಾಯ್ತು’” ಎಂದೇ ನಾನು ಘೋಷಿಸಿದೆ! ಮತ್ತೆ  ಜಾರುವ ಬಂಡೆಯ ಮೇಲಿನ ಸೋರು ನೀರಿನ ಸ್ನಾನದ ಯೋಚನೆ ಬಿಟ್ಟು ಜಾರುವ ಸಮಯವನ್ನಾದರೂ ಕಟ್ಟಿ ಹಿಡಿಯುವಂತೆ, ಕುಳಿತು ಬುತ್ತಿ ಗಂಟನ್ನು ಬಿಚ್ಚಿದೆವು - ತಡ ಊಟಕ್ಕೆ.

ಅರವಿಂದ, ಶರತ್ ದೊಡ್ಡ ಬಂಡೆಯೊಂದರ ಮರೆಯಲ್ಲಿ ಮೂರು ಕಲ್ಲು ಜೋಡಿಸಿ ಚಾ ಕಾಯಿಸಲು ಸಜ್ಜಾದರು. ಯಾರೋ ವಿಕ್ಷಿಪ್ತ ಜಲಧಾರೆಯೊಡನೆ ತಾಕಿಟ ತರಿಕಿಟ ನಲಿದು ಪಾತ್ರೆಯಲ್ಲಿ ಶುದ್ಧ ನೀರು ಹಿಡಿದು ತಂದರು. ಒಣಗಿದ ಪುರುಳೆ, ಕಡ್ಡಿ, ಕೋಲುಗಳನ್ನು ಸೇರಿಸಿದರು. ಭಾಗಿಗಳಲ್ಲಿ ಶಿಬಿರ ಸಾಮಗ್ರಿಗಳನ್ನು ಸಮತೂಕವಾಗುವಂತೆ ಹಂಚಿದ ಪರಿಣಾಮ ಅವರಿವರ ಚೀಲ ಜಪ್ತಿ ಮಾಡಿ ಚಾಪುಡಿ, ಹಾಲಿನುಡಿ, ಸಕ್ಕರೆ ಡಬ್ಬಿಗಳನ್ನು ಹಾಜರು ಪಡಿಸಿದ್ದೂ ಆಯಿತು. ಬುತ್ತಿ ಬಿಚ್ಚಿದಾಗಲೇ ಲೋಟ ಹೊರಗಿಟ್ಟವರು “ಚಾ ಬೇಕ ಆವೋಡೂ ಇಡ್ಲಿ ಜಪ್ಪುಜ್ಜೀ” ಬೊಬ್ಬೆ ಹೊಡೆದದ್ದೂ ಆಯಿತು. (ಹದಿಮೂರು ಜನಕ್ಕೆ) ನೀರೆಷ್ಟು, ಪುಡಿಯೆಷ್ಟು, ಚಪ್ಪೆಯೆಷ್ಟು, ಸಕ್ಕರೆಯೆಷ್ಟು ಲೆಕ್ಕಾಚಾರ ಒಂದೆಡೆ. ಹಾಲಿನ ಹುಡಿಯನ್ನು ತಣ್ಣೀರಲ್ಲಿ ಕಲಸುವುದೇ ಬಿಸಿನೀರಲ್ಲೇ ಎಂಬ ಜಿಜ್ಞಾಸೆ ಇನ್ನೊಂದೆಡೆ. “ಚಾ ಸೋಸಲು ಚಿಬ್ಬಲು ಎಲ್ಲಿ” ತುಂಬ ನಾಗರಿಕ ಪ್ರಶ್ನೆ. “ಚರಟು ವೇಷ್ಟ್ ಮಾಡಬಾರದು, ಕರಡಿಕೊಂಡು ಕುಡಿದರಾಯ್ತು” ಕಿರುಕುಳದ ಸಮಾಧಾನ. “ಅಶೋಕರ ಹಾಗೆ ನಮಗೆ ಮೀಸೆಯಾದರೂ ಇದ್ದಿದ್ದರೇ” ಮಹಾಕಿಲಾಡಿಯ ಮುಕ್ತಾಯ. ಇಷ್ಟಾದರೂ ಕಿಚನ್ ಕಾರ್ನರ್ನಿಂದ ಕಿಚ್ಚಿನ ಲಕ್ಷಣ ಕಾಣಿಸಲೇ ಇಲ್ಲ. ಎಲ್ಲರ ಚೀಲ ಅಡಿಮೇಲೆ ಮಾಡಿದರೂ ಬೆಂಕಿಪೊಟ್ಟಣ ಸಿಕ್ಕಿರಲಿಲ್ಲ! ಹೆಡ್ ಕುಕ್ ಅರವಿಂದ ತನ್ನ ತಲೆ ಕುಕ್ಕಿದರೆ ಎಂಬ ಹೆದರಿಕೆಗೆ ಬಾಲ ಪಿಸುನುಡಿದ “ನಿನ್ನೆ ಕೊಳ್ಳಲು ಮರೆತಿದ್ದೇವೆನಾ, ಈಗ ಹುಡುಕಿದರೆ ಸಿಕ್ಕುದೆಲ್ಲಿಂದ!” “ಗುರುಗಳ ಮಂಡೆಬೆಚ್ಚಕ್ಕೆ ಪಾತ್ರೆ ಇಟ್ಟು ಚಾ ಕಾಸಿದರಾಯ್ತು” ಶರತ್ ಸಲಹೆ ಕೊಟ್ಟು ಅಜ್ಞಾತವಾಸಕ್ಕೋಡಿದ. (ಅರವಿಂದ ಮಂವಿವಿನಿಲಯದ ಸ್ನಾತಕೋತ್ತರ ತರಗತಿಗಳಿಗೆ ಅಲ್ಪಕಾಲೀನ ಅಧ್ಯಾಪಕನಾಗಿಯೂ ದುಡಿದಿದ್ದರು, ಆಗ ಶರತ್ ಅಲ್ಲೇ ವಿದ್ಯಾರ್ಥಿಯಾಗಿದ್ದ.) ನಸುಕೋಪ, ನಗೆ ಬೆರೆಸಿ “ಮೂಜಿ ಕಾಸ್ದಾಯೇಗ್ ದಾನೆ ಬೊಕ್ಕಾ. . .” ಎಂದರೂ ಅರವಿಂದರ ಪ್ರಯೋಗ ಪರಿಣತಮತಿ ಪರ್ಯಾಯ ಚಿಂತನೆ ನಡೆಸಿಯೇ ಇತ್ತು. ಬೆಣಚುಕಲ್ಲುಗಳನ್ನು ಕುಟ್ಟಿ, ಒಣಕೊರಡುಗಳನ್ನು ಉಜ್ಜಿ, ಕನ್ನಡಕದ ಮಸೂರದಲ್ಲಿ ಸೂರ್ಯರಶ್ಮಿಯನ್ನೇ ಕೇಂದ್ರೀಕರಿಸಿ ಕಿಚ್ಚೆಬ್ಬಿಸುವ ಸಲಹೆಗಳೇನೋ ಹಲವರಲ್ಲಿ ಇತ್ತು, ಕಾರ್ಯರೂಪಕ್ಕಿಳಿಸುವ ಸಿದ್ಧಿ ಯಾರಲ್ಲೂ ಇರಲಿಲ್ಲ. ಅಂತಿಮವಾಗಿ ನಮಗೊದಗಿದ್ದು ಪರಿಸರ ಮಾಲಿನ್ಯ ಎನ್ನುವುದು ವಿಚಿತ್ರವಾದರೂ ಸತ್ಯ! ಹಿಂದೆ ಬಂದ ಯಾರೋ ಎಸೆದ ಕಸಕುಪ್ಪೆಯಲ್ಲಿ ನಾಲ್ಕೆಂಟು ‘ಜೀವಂತ ಕಡ್ಡಿ’ಗಳು ಇದ್ದ ಬೆಂಕಿಪೊಟ್ಟಣವೇ ಸಿಕ್ಕಿ ನಮ್ಮ ಚಾ ಪರಿಣಯ ಸುಖಾಂತವಾಯಿತು.

ಬೆಳ್ಕಲ್ ತೀರ್ಥದಿಂದ ಬೈಕಿಗೆ ಮರಳುವಾಗ ಸಂಜೆ ನಾಲ್ಕೂವರೆಯಾಗಿತ್ತು. ಮತ್ತೆ ತಾಳ್ಮೆಗೆಡದೆ ಬಂದಷ್ಟು ದಾರಿಯನ್ನು ಹಾಗೇ ಉತ್ತರಿಸಿ ಜಡ್ಕಲ್ಲಿನಿಂದ ಕೊಲ್ಲೂರಿನತ್ತ ಹೊರಳುವಾಗ ಕಾಡಗತ್ತಲೆ ದಟ್ಟವಾಗುತ್ತಿತ್ತು. ನಮ್ಮ ಯೋಜನೆಯಂತೆ ನಾವು ಅಂದು ಕೊಡಚಾದ್ರಿ ಶಿಖರ ಸೇರಿ, ಸೂರ್ಯಾಸ್ತ ನೋಡಿ, ರಾತ್ರಿಗೆ ಅಲ್ಲೇ ವಿಶ್ರಮಿಸಬೇಕಿತ್ತು. ಆದರೀಗ ಪೂರ್ವಪರಿಚಯವೇನೂ ಇಲ್ಲದ, ತೀರಾ ಕಡಿದಾದ ಮಣ್ಣುದಾರಿಯನ್ನು ಕತ್ತಲಲ್ಲಿ ಏರುವ ಸನ್ನಿವೇಶ ನಮಗೆದುರಾಗಿತ್ತು. ಸಾಹಸಾನುಭವ ಬರಿಯ ಶಿಕ್ಷೆಯಾಗುವ ಅಪಾಯವೂ ಇತ್ತು. ಅದಕ್ಕೂ ಮಿಗಿಲಾಗಿ ನಾವು ಹಾಗೆ ಏರುವುದಾಗಿದ್ದರೆ ಮಾರ್ಗಕ್ರಮಣದೊಡನೆ ಸಿಗುವ ದೃಶ್ಯ ವೀಕ್ಷಣಾ ಅವಕಾಶವೂ ತಪ್ಪುತ್ತಿತ್ತು. ಹಾಗಾಗಿ ಆ ದಿನವಿಡೀ ಪೇರಿದ ಅನಿವಾರ್ಯ ವಿಳಂಬಗಳನ್ನು ಮನ್ನಿಸಿ, ಅಂದೇ ಏರುದಾರಿ ತುಡುಕುವುದನ್ನು ಕೈಬಿಟ್ಟೆವು. ಆದರೆ ನಮ್ಮ ಮನೋಸ್ಥಿತಿಗೆ ತೀರ್ಥಕ್ಷೇತ್ರ ಕೊಲ್ಲೂರ ಪೇಟೆ - ಅಂದರೆ ಯಾವುದೋ ಛತ್ರವೋ ಹೋಟೆಲ್ಲೋ ಹೊಂದುವಂತಿರಲಿಲ್ಲ. ಶರತ್ ಈ ಹಿಂದೆ ತನ್ನ ಕಾಳಿಂಗಸರ್ಪದ ಅಧ್ಯಯನಾಸಕ್ತಿಯಲ್ಲಿ ಈ ವಲಯಗಳಲ್ಲಿ ಅರಣ್ಯ ಇಲಾಖೆಯೊಡನೆ ಸಂಬಂಧ ಬೆಳೆಸಿ ತುಸು ಓಡಾಡಿದ್ದು ಅನುಕೂಲಕ್ಕೆ ಬಂತು. ಕೊಲ್ಲೂರು ಕಳೆದ ಮೇಲೆ (ನಾಗೋಡಿ) ಘಾಟಿಯಲ್ಲೇ ಮೂರು ಕಿಮೀ ಅಂತರದಲ್ಲೊಂದು ಸ್ಥಳ ನೆನಪಿಸಿಕೊಂಡ.

ಅರಣ್ಯ ಇಲಾಖೆ ಮೂಕಾಂಬಿಕಾ ರಕ್ಷಿತಾರಣ್ಯದ ಒಳಗೇ ತನ್ನ ‘ಅಭಿವೃದ್ಧಿ’ ಯೋಜನೆಯಲ್ಲೊಂದು ಸಣ್ಣ ‘ಪಿಕ್ನಿಕ್ ಪಾಯಿಂಟ್’ ಮಾಡಿತ್ತು. ಘಾಟಿ ದಾರಿಯ ಬಲ ಮಗ್ಗುಲ ಕಿರು ಕಣಿವೆಗಿಳಿಯಲು ಸುಮಾರು ನಲ್ವತ್ತೈವತ್ತಡಿ ಉದ್ದದ ಕಚ್ಚಾದಾರಿ. ಸುಮಾರು ಇನ್ನೂರು-ಮುನ್ನೂರಡಿ ಉದ್ದಗಲಕ್ಕೆ ನೆಲ ಮಟ್ಟ ಮಾಡಿ, ನೆರಳಿಗೆ ಅಗತ್ಯವಾದ ದೊಡ್ಡ ಮರಗಳನ್ನಷ್ಟೇ ಉಳಿಸಿ, ಪೊದರುಗಳನ್ನೆಲ್ಲ ಸವರಿದ್ದರು. ಅಲ್ಲಿ ವಿರಳವಾಗಿ ವೃತ್ತಾಕಾರದಲ್ಲಿ ಐದಾರು ಸಿಮೆಂಟ್ ಬೆಂಚು. ಆ ಅಂಗಳದ ಒಂದು ಅಂಚಿನಲ್ಲಿ ಮಳೆಗಾಲದ ನೀರಷ್ಟೇ ಹರಿಯುವ ತೊರೆಪಾತ್ರೆ ಪಟ್ಟಪಸೆಯಿಲ್ಲದಂತೆ ಒಣಗಿತ್ತು. ಆದರೂ ಇಲಾಖೆಯ ವನ್ಯಜೀವಿ ಕಾಳಜಿ ಸಾರುವಂತೆ ಅದಕ್ಕೊಂದು ಹರಕು ಕಲ್ಲು ಕಟ್ಟೆಯ ವ್ಯವಸ್ಥೆಯಾದದ್ದೂ ‘ಶೋಭಿಸು’ತ್ತಿತ್ತು.

ಬೈಕುಗಳನ್ನು ಕಚ್ಚಾ ದಾರಿಯಲ್ಲಿಳಿಸಿ ಅವಸರವಸರವಾಗಿಯೇ ಕತ್ತಲಿನ ಸ್ವಾಗತಕ್ಕೆ ಸಜ್ಜಾದೆವು. ಕಲ್ಲು ಕಸ ಒತ್ತರೆ ಮಾಡಿ, ಸಹಜವಾಗಿ ಬಿದ್ದ ಒಣ ಕಡ್ಡಿಕಸವನ್ನೇ ಸೌದೆಯಾಗಿ ಒಟ್ಟು ಮಾಡಿಕೊಂಡೆವು. ರಾತ್ರಿಯ ಊಟ ಮತ್ತು ಕನಿಷ್ಠ ಕುಡಿಯುವ ನೀರಿಗೂ ನಾವು ಕೊಲ್ಲೂರಿಗೆ ಶರಣಾಗುವುದು ಅನಿವಾರ್ಯವಿತ್ತು. ಹಾಗೇ ಯುಕ್ತ ಕಾಲದಲ್ಲಿ ನಾವು ಒಮ್ಮೆಗೆ ಎರಡೋ ಮೂರೋ ಬೈಕುಗಳ ಸರದಿಯಲ್ಲಿ ಪೇಟೆಗೆ ಹೋಗಿ ಬಂದೆವು. ಬರುವಾಗ ಅಂಗಡಿಯೊಂದರ ಕೃಪೆಯಲ್ಲಿ ಎರಡು ಮೂರು ಪ್ಲ್ಯಾಸ್ಟಿಕ್ ಕ್ಯಾನ್ ಕಡ ಪಡೆದು, ಭರ್ತಿ ನೀರೂ ತುಂಬಿಕೊಂಡೇ ಬಂದಿದ್ದೆವು. ಬೆಂಚುಗಳ ಕೇಂದ್ರದಲ್ಲಿ ಶಿಬಿರಾಗ್ನಿ ಎಬ್ಬಿಸಿ, ಬೀಸುಗಾಳಿಯ ದಿಕ್ಕಂದಾಜಿಸಿ ನಮ್ಮ ಮಲಗುವ ಜಾಗಗಳನ್ನು ಹೆಚ್ಚು ಸಜ್ಜುಗೊಳಿಸಿಕೊಂಡೆವು.

ಮಲಗುವ ಮುನ್ನ ದಿನದ ಸೋಲುಗಳನ್ನು ಹಗುರ ಮಾಡುವ, ಅನುಭವಿಸಿದ ಅಲ್ಪವನ್ನು ಮಹತ್ತಾಗಿಸುವ ಠಾನಿಕ್ (ತಪ್ಪು ತಿಳೀಬೇಡಿ, ಯಾವುದೇ ಅಮಲು ಪದಾರ್ಥಕ್ಕೆ ನಮ್ಮ ಯಾವುದೇ ಕೂಟಗಳಲ್ಲಿ ಪ್ರವೇಶವಿಲ್ಲ!), ಅಂದರೆ ಹಾಡು, ಹರಟೆ, ಹಾಸ್ಯಗಳನ್ನು ಮೂಗಿನವರೆಗೂ ಸೇವಿಸಿದೆವು. ಶರತ್ ವಿದೂಷಕತ್ವಕ್ಕೆ ಸೂರ್ಯನ ಮಾತಿನ ಒಗ್ಗರಣೆ. ಅಭಯನ ಬಾಲಸಹಜ ಮಂಗಾಟಕ್ಕಂತು ಎಲ್ಲರದೂ ಸೈ, ಜೈ. ಶೆಣೈ ಎಂದಿದ್ದರೂ ಮೌನಿ. ಆದರೆ ‘ತುಂಬ ಹೇಳಲು’ ಇದ್ದರೂ ಬಾಲನಿಗೆ ಬಿಚ್ಚಿಕೊಳ್ಳಲು ನಾಚಿಕೆ. ನವದಂಪತಿ - ಚಾರ್ಲ್ಸ್ ಬ್ಯೂಲಾ, ಗುಂಪಿನ ತೆಕ್ಕೆಯಲ್ಲೇ ಇದ್ದರೂ ಏಕಾಂತದ ಹಾರೈಕೆಯಲ್ಲಿದ್ದರು. ಶಾಂತಾ ದೇವಕಿಯರು ಶಿಸ್ತಿನ ಲಗಾಮು ಎಳೆಯುತ್ತ, ಯಾರೂ ಅನುಸರಿಸದ ಬಿಟ್ಟಿ ಸಲಹೆ ಕೊಡುತ್ತ ಮತ್ತೂ ಸಮಯ ಉಳಿದರೆ ಜೀವನದ ದಿವ್ಯ ಸತ್ಯಗಳ ಕಿರು ಉದಾಹರಣೆಗಳನ್ನು ತಮ್ಮಲ್ಲೇ ವಿನಿಮಯಿಸಿಕೊಳ್ಳುತ್ತಿದ್ದರು. ನಮ್ಮ ತಂಡಕ್ಕೆ ಕೇವಲ ಅರವಿಂದ ಶೆಣೈ ಗೆಳೆತನದಲ್ಲಿ ಅದೇ ಮೊದಲು ಸೇರಿದ್ದ ಗಣೇಶ್ ಬರಿಯ ವೀಕ್ಷಕ. ವೃತ್ತಿನಿರತ ಪತ್ರಕರ್ತ (ಆಗ ಮಂಗಳೂರಿನಲ್ಲಿ ಪ್ರಜಾವಾಣಿಗೆ ಯಾರೂಂತ ಕೇಳಿದ್ದೀರಿ ಎಂದು ಮೆರೆದಿದ್ದರು!), ಕವಿ, ಕತೆಗಾರ ಇತ್ಯಾದಿ ಬಿರುದಾಂಕಿತ ಬಸವರಾಜು ಈ ಕಲಾಪ ವೈವಿಧ್ಯವನ್ನು ಪ್ರಜಾವಾಣಿಗೆ ವರದಿಸಲೇ ಮಯೂರಕ್ಕೆ ಕಥಿಸಲೇ ಸುಧಾಕ್ಕೆ ಕವನಿಸಲೇ ಎಂದು ಒಟ್ಟಾರೆ ಗೊಂದಲಿಸಿಕೊಂಡಿದ್ದರು. ನನ್ನ ಯಕ್ಷಗಾನ ಅಪಲಾಪಕ್ಕೆ ಅರವಿಂದರ ಪುಂಡುವೇಷ ಪ್ರವೇಶ. ಭಾಗವತಿಕೆಯೇನೋ ಗಂಭೀರವಾಗಿ “ಗಜಮುಖದವಗೆ. . .” ಎಂದೇ ತೊಡಗಿದರೂ ರಾಗ ಲಯವಾಗಿ, ಸಾಹಿತ್ಯ ಕೊರೆಯಾಗಿ ಪ್ರೇಕ್ಷಕರೇ ಮಂಗಳಾರತಿ ಎತ್ತಲು ಸಜ್ಜಾಗತೊಡಗಿದರು. ಕೊಳಕಟೆ ಮುಂಡನ್ನೇ ಮುಂಡಾಸೆಂದು ಕಟ್ಟಿ, ಶ್ರೀಧರ ಭಂಡಾರಿ ಬೀಸಿನಲ್ಲೇ ರಂಗ ಪುಡಿ ಮಾಡಬೇಕೆಂದಿದ್ದ ಪುಂಡು ವೇಷಕ್ಕೆ ಸರಿಯಾಗಿ (ಚಂಡೆ) ಪೆಟ್ಟು ಕೊಡುವವರಿಲ್ಲದೆ ರಸಾಭಾಸವಾಯಿತು. ಶರತ್ ಕೈಯಾರೆ (ವೇಷಗಾರನಿಗೆ) ಪೆಟ್ಟು ಹಾಕಿದ. ವೇಷದ ಗಿರ್ಕಿ (=ಯಕ್ಷಗಾನದಲ್ಲಿ ತಾಳಬದ್ಧವಾಗಿ ಹಾರಿ ತಿರುಗುವ ನಡೆ) ತಪ್ಪಿ ಪಿರ್ಕಿ (=ಹುಸಿಕೋಪ ಎನ್ನಿ) ಮೆರೆಯಿತು. ಮಾತಿನ ಪಟಾಕಿ ಸೂರ್ಯ ಯಾರಿಗೆ ಪೆಟ್ಟುಕಮ್ಮಿ (= ಸುತ್ತು ಕಡಿಮೆ ಎನ್ನುವರ್ಥದ ನುಡಿಗಟ್ಟು) ಎಂದು ಅಳತೆಗಿಳಿಯುತ್ತಿದ್ದಂತೆ ಪ್ರಸಂಗ ಹಳಸಿತು. ಅಭಯ ಮಗ್ಗುಲು ಬದಲಿಸಿ ಗೊರೆಯುತ್ತಿದ್ದ. ಅಳಿದುಳಿದ ಪ್ರೇಕ್ಷಕರೂ ಜಮಖಾನಗಳ ಮೇಲೆ ಮೈಚಾಚಿದರು.

ಸರದಿ ಪಹರೆಯ ವ್ಯವಸ್ಥೆಯ ಮೇಲೆ ತಂಡ ಮಲಗಿತು. ರಾತ್ರಿ ತೀರ ನೀರವ. ಪಟ್ಟಣದಲ್ಲೂ ಕಪ್ಪೆಯ ವಟರು, ಊರಂಚಿನ ನರಿಯ ಊಳೂ ಕೇಳಿದ್ದುಂಟು. ಆದರೆ ಕಾಡಿನ ನಡುವೆ ಆ ರಾತ್ರಿ ಜೀರುಂಡೆಯ ಮರ್ಮರವೂ ಇಲ್ಲದ್ದು ಆಶ್ಚರ್ಯವೇ ಸರಿ. ಬೆಳಕಿದ್ದಾಗ ಕಂಡ ಶಿಬಿರವಲಯದಾಚಿನ ಕಗ್ಗಾಡು ಮತ್ತು ಕವಿದ ಗಾಢಾಂಧಕಾರಗಳ ಭಿತ್ತಿಯಲ್ಲಿ ಬಿತ್ತಿದ ವಿರಳ ಸಣ್ಣ ಪುಟ್ಟ ಸದ್ದುಗಳು - ಶಿಬಿರಾಗ್ನಿಯ ಚಡಪಡಿಕೆ, ಪಹರಿಗಳ ಪಿಸುನುಡಿ, ಅಪೂರ್ವಕ್ಕೆ ದೂರದಲ್ಲೆಲ್ಲೋ ಅನುರಣಿಸುವ ಘೂಕ್, ಮುಸುಗೆಳೆದು ನಿದ್ರೆ ಒಲಿಸುವಲ್ಲಿ ಹೆಣಗುತ್ತಿದ್ದವರಿಗೆ ಅನೂಹ್ಯ ಸಾಕ್ಷಾತ್ಕಾರಗಳನ್ನು ಒದಗಿಸುತ್ತಿತ್ತು. ರಾತ್ರಿ ಸರಿಯುತ್ತಿದ್ದಂತೆ ಕೇಂದ್ರದಿಂದ ದೂರ ಮಲಗಿದವರಿಗೆ ನಡುಕ ಹುಟ್ಟಿಸುವ ಚಳಿ, ಬೆಂಕಿಗೆ ಸಮೀಪ ಇದ್ದವರಿಗೋ ಚುರುಗುಟ್ಟಿಸುವ ಝಳ. ನಿದ್ರಿಸಿದರೋ ಬಿಟ್ಟರೋ ಕೇಳದೆ ಕಾಲಾನುಸಾರಿ ಅರುಣರಾಗ ಹರಡಿತು, ಬೆಳ್ಳನೆ ಬೆಳಗಾಯಿತು.

ಶಿಬಿರಾಗ್ನಿಯಂಚಿನಲ್ಲಿ ನಾವೇ ಟೀ ಕಾಯಿಸಿಕೊಂಡೆವು. ಪ್ರಾತರ್ವಿಧಿಗಳನ್ನು ಮುಗಿಸಿ, ಶಿಬಿರಸ್ಥಾನದ ನಾಗರಿಕ ಕಸವನ್ನೆಲ್ಲ ಸುಟ್ಟು, ಕೊನೆಯಲ್ಲಿ ಕೊಳ್ಳಿಗಳನ್ನೆಲ್ಲ ಕೆಡಿಸಿ, ಬೂದಿ ಒಟ್ಟು ಮಾಡಿ, ಕಾಡು ಕಲ್ಲು ಮುಚ್ಚಿ ವನ್ಯದ ಪೂರ್ವಸ್ಥಿತಿಗೆ ಹತ್ತಿರಗೊಳಿಸಿದೆವು. [ಪ್ಲ್ಯಾಸ್ಟಿಕ್‌ನಂಥವನ್ನೂ ಸುಟ್ಟು ಚೊಕ್ಕ ಮಾಡುವುದು ಅಂದು ನಮ್ಮ ಶಿಸ್ತಿನಲ್ಲಿತ್ತು. ಮುಂದುವರಿದ ದಿನಗಳಲ್ಲಿ ಅವನ್ನು ಎಚ್ಚರದಿಂದ ತಂದು ನಗರದ ಕಸ ತೊಟ್ಟಿ ಸೇರಿಸುತ್ತಿದ್ದೆವು. ಮತ್ತೂ ಮುಂದುವರಿದ ದಿನಗಳಲ್ಲಿ ನಗರದ ಕಸ ವಿಲೇವಾರಿ ವೈಖರಿಗೆ ಹೆದರಿ, ವನ್ಯದ ನಗಣ್ಯ ಮೂಲೆಯಲ್ಲಿ ನಾಗರಿಕತೆ ಬೇಜವಾಬ್ದಾರಿಯಿಂದ ಪೇರಿಸುತ್ತಿರುವ ಅಂಥದ್ದೇ ಕಸ-ಕುಪ್ಪೆಗೆ ಸೋತು (ಆದಷ್ಟು ಅವನ್ನು ನಮ್ಮದರೊಡನೆ ಸೇರಿಸಿ, ಅಲ್ಲಲ್ಲೇ ಸುಟ್ಟು) ಕನಿಷ್ಠ ಬೂದಿಯ ಮಟ್ಟಕ್ಕಿಳಿಸುವುದನ್ನು ಪುನರಾರಂಭಿಸಿದ್ದೇವೆ.]

ಸಾಮಾನು ಸರಂಜಾಮುಗಳನ್ನು ಬೈಕಿಗೇರಿಸಿ, ಉಪಾಹಾರಕ್ಕಾಗಿ ಮತ್ತೊಮ್ಮೆ ಕೊಲ್ಲೂರಿಸಿ ಬಂದು ನಾಗೋಡಿ ದಾರಿಯಲ್ಲೇ ಮುಂದುವರಿದೆವು. ಊರು, ಜನ ಸಿಕ್ಕಲ್ಲೆ ವಿಚಾರಿಸುತ್ತ ನಾಗೋಡಿಯ ಅರಣ್ಯ ತಪಾಸಣೆ ಠಾಣೆ ಮತ್ತು ನಿಟ್ಟೂರು ಕಳೆದಲ್ಲಿಗೆ ಸಿಕ್ಕುವ ಸಣ್ಣ ಪೇಟೆ ಸಂಪೆಕಟ್ಟೆ ಮುರ್ಕಾಯಿ [ಮೂರು ಕೈ ಅರ್ಥಾತ್ ನಗರ - ಕೊಲ್ಲೂರು ಎಂಬೆರಡು ಕೈಗಳಿಂದ ಭಿನ್ನವಾದ ಅಂದರೆ ಸಂಪೆಕಟ್ಟೆ ಎಂಬಲ್ಲಿಗೆ ಮೂರನೇ ಕೈ ತೋರುವ ತಾಣ/ ದಕ ಶೈಲಿಯಲ್ಲಿ ಕೈಕಂಬ/ ಚಿಕ್ಕಮಗಳೂರು ಶೈಲಿಯಲ್ಲಿ ಹ್ಯಾಂಡ್ ಪೋಸ್ಟ್/ ಒಟ್ಟಾರೆ ಒಂದು ಕವಲೂರು!] ಇಲ್ಲಿ ನಾವು ಬಲದ ಕವಲು ಹಿಡಿದು, ಮೂರು ಕಿಮೀ ದೂರದ ಸಂಪೆಕಟ್ಟೆ ಹಳ್ಳಿ ಸಮೀಪಿಸಿದೆವು. ಇಲ್ಲಿ ಶರಾವತಿಗೊಡ್ಡಿದ ಲಿಂಗನಮಕ್ಕಿ ಅಣೆಕಟ್ಟೆ ಹಿಡಿದಿಟ್ಟ ಹಿನ್ನೀರಿಗೆ ಪೂರಕ ಬಲ ಕೊಡಲು ಚಕ್ರ ನದಿಯನ್ನು ‘ತಿರುಗಿಸಿದ’ ಆಳದ ನಾಲೆ ಇದೆ. [ಇದರ ಅಸ್ತಿತ್ವವೇ ನಮಗೆ ತಿಳಿದಿರಲಿಲ್ಲ. ಅದರ ಪಾರಿಸರಿಕ ಪರಿಣಾಮಗಳ ಬಗ್ಗೆಯೂ ಅಂದು ನಮಗೆ ಯೋಚಿಸಬಹುದೆಂದೂ ನಮಗೆ ಹೊಳೆಯಲಿಲ್ಲ]

ಸಂಪೆಕಟ್ಟೆಗೆ ದಾರಿಯ ಡಾಮರು ಸೌಖ್ಯ ಮುಗಿದು ಸ್ಪಷ್ಟ ಲಕ್ಷ್ಯ ಕಾಡು, ಬೆಟ್ಟ ಎನ್ನುವ ರೂಪ ಒದಗಿತ್ತು. ಕಿಲೋಕಲ್ಲು ಹೇಳುವಂತೆ ಎಂಟೇ ಕಿಮೀ ಅಂತರದಲ್ಲಿ ಕೊಡಚಾದ್ರಿ ಶಿಖರ. ಮಣ್ಣು ದಾರಿಯಲ್ಲಿ ಹಿಂಬಾಲಿಸುತ್ತ ‘ಮಣ್ಣು ತಿನ್ನುವ’ ಕಾಟ ತಪ್ಪಿಸಲು ಶರತ್ ವೇಗವಾಗಿಯೇ ಮುಂದೋಡಿದ. ಏರು ದಾರಿಯ ಮೊದಲಲ್ಲೊಂದು ಸೇತುವೆಯಿಲ್ಲದ ತೊರೆಯಂಚಿನಲ್ಲಿ ತಂಡದ ಪುನಃಸಂಯೋಜನೆಗೆ ಕಾದ. ಒಂದೊಂದೇ ಬೈಕ್ ಸೇರುತ್ತಿದ್ದಂತೆ ಶರತ್ ಕುಶಾಲು-ತೋಪು (ಹಾಸ್ಯರಸಾಯನ) ಉಡಾಯಿಸುತ್ತ ಸಮಯ ಕಳೆಯದಂತೆ ನಾನು ಅವಸರಿಸಿದೆ. ಆತ ಹುಸಿ ಭಯ ನಟಿಸುತ್ತ ಬೈಕ್ ತೊರೆಗಿಳಿಸಿದ. ಪಾತ್ರೆಯ ಕಲ್ಲುಗುಂಡುಗಳ ನಡುವೆ ಗಡಬಡಿಸಿದರೂ ಕಾಲಿಗೆ ನೀರು ಮುಟ್ಟದ ಆತನ ಸರ್ಕಸ್ ಯಾಕೋ ನಡುಪಾತ್ರೆಯಲ್ಲಿ ಸೋತಿತು. ಇಚಿಜಿನ್ ಬಂದ್ ಬಿದ್ದು ಉಳಿದವರು ನೂಕಿದರೂ ಇಲ್ಲ, ಎಳೆದರೂ ಇಲ್ಲ. ದಂಡೆಗೆ ಹೊತ್ತು ತಂದಾಗ ಮತ್ತೆ ಗಣೇಶರ ರ‍್ಯಾಲೀ ಅನುಭವ ಮತ್ತು ಸಿದ್ಧತೆ ಅನುಕೂಲಕ್ಕೆ ಬಂತು. ಅವರು ಕಡಿದು ಹೋದ ಸರಪಳಿಗೆ ತಮ್ಮಲ್ಲಿದ್ದ ಬಿಡಿ ಗೊಣಸನ್ನು ಹಾಕಿದ ಮೇಲೆ ಓಟ ನಿರಾತಂಕ. ಅದೇ ತುಸು ಮೊದಲು ಶರತ್ ಎಲ್ಲರಿಗಿಂತಲೂ ಮುಂದಿರುವ ಧಾವಂತದಲ್ಲಿದ್ದಾಗ ಈ ಆಕಸ್ಮಿಕ ಸಂಭವಿಸಿದ್ದರೆ ಸವಾರರಿಗೂ ಅಪಘಾತ ದೊಡ್ಡ ಮಟ್ಟದಲ್ಲೇ ಆಗುವ ಸಂಭವವಿತ್ತು!

ತೊರೆ ತೊಳೆದ ದಾರಿ ಹುಮ್ಮಸ್ಸು ಹೆಚ್ಚಿದವರಂತೆ ಬೆಟ್ಟವನ್ನು ನೇರ ಏರತೊಡಗಿತು. ಅದು ಸಾಕಷ್ಟು ಅಗಲವಾಗಿ, ನೆಲ ಬಿಗಿಯಾಗಿ ಇದ್ದರೂ ಮುಂಜಾವಿನ ಇಬ್ಬನಿಯಲ್ಲಿ ತೊಯ್ದು ಜಾರುಗುಪ್ಪೆಯಂತೆ ಕಾಣುತ್ತಿತ್ತು. ಮತ್ತೊಂದು ತೋರಿಕೆಯ ಸಮಸ್ಯೆ - ದೃಶ್ಯದ್ದೇ. ವಿರಾಮದಲ್ಲಿ ನಾವು ಯಾವುದನ್ನು ಕಾಣಲು ಬಯಸಿಯೇ ಬೆಟ್ಟಕ್ಕೆ ಹೋಗುತ್ತೇವೋ ಅದೇ ಬೆಟ್ಟದ ಉನ್ನತ ನಿಲುವು, ಕಣಿವೆಯ ಅಗಾಧ ಆಳ ಉತ್ತರಿಸಹೊರಟಾಗ ನಮ್ಮನ್ನೇ ನುಂಗುವ ಭೀತಿ ಕಾಡುವುದು ವಿಚಿತ್ರ ಆದರೂ ನಿಜ. ಯಾವುದೇ ಬೆಟ್ಟದಾರಿ ಎಷ್ಟೇ ಕಠಿಣವಾಗಿರಲಿ ಅಂಕುಡೊಂಕಿನ ಸುಳಿತ ಅಂಚುಗಟ್ಟಿದ ಪೊದರು ಮರಗಳ ಮರೆಯಿದ್ದರೆ ಪರಿಣಾಮದಲ್ಲಿ ತುಸು ಹಗುರವಾಗಿರುತ್ತದೆ. ಪರ್ವತದ ದಾರಿ ಸಾಗುವ ಮಗ್ಗುಲಿನಲ್ಲಿ ಕಾಡು ವಿರಳ. ಮಾರ್ಗ ಬೈಕೋಟಕ್ಕೆ ಧಾರಾಳವೇ ಇದ್ದರೂ ಕಣ್ಣೆಟಕುವ ಬಹುದೂರದವರೆಗೆ ಚಾಚಿಕೊಂಡ ಏರಿನಲ್ಲಿ ನಮ್ಮನ್ನು ಧಿಕ್ಕರಿಸಿ, ಅಂಚಿನಿಂದಾಚಿನ ಭಾರೀ ಕೊಳ್ಳದಲ್ಲಿ ನಮ್ಮನ್ನು ನುಂಗಲು ಹೊಂಚುವಂತೇ ಭಾಸವಾಗುತ್ತಿತ್ತು. ಚಕ್ರ ಜಾರಿದರೆ, ಅರ್ಧದಲ್ಲಿ ಇಂಜಿನ್ ಸೋತು ಗಾಡಿ ಅಡ್ಡಬಿದ್ದರೆ, ಎದುರು ಚಕ್ರವೇ ಎತ್ತಿಹೋದರೆ, ಹಿಂದಕ್ಕೆ ಜಾರಿ ಮಗುಚಿದರೆ, ಅಂಚಿನಿಂದಾಚೆಗೇ ಕೆಡೆದುಹೋದರೆ. . . ಹೀಗೆ ಅನುಭವ ಕಡಿಮೆಯವರಿಗೆ ಮಾನಸಿಕ ಹಿಂಜರಿಕೆಗಳು ಎಷ್ಟೂ ಕಾಟ ಕೊಡುತ್ತಲೇ ಇದ್ದುವು. ಹಳೆಯ ಆಕಸ್ಮಿಕಗಳ ಅನುಭವವೂ ನಮ್ಮಲ್ಲಿ ಸಾಕಷ್ಟು ಇದ್ದುದರಿಂದ ಯಾರೂ ಇನ್ನೊಬ್ಬರನ್ನು ನಿಕಟವಾಗಿ ಅನುಸರಿಸುತ್ತಿರಲಿಲ್ಲ. ಕಾಠಿಣ್ಯ ಹೆಚ್ಚಿದಲ್ಲಂತೂ ಒಮ್ಮೆಗೆ ಒಂದರಂತೆ ಬೈಕ್ ಸಾಗುತ್ತ, ಉಳಿದವರು ಅಗತ್ಯ ಬಿದ್ದರೆ ಸಹಾಯಕ್ಕೊದಗುವಂತೆ ಕಣ್ಗಾವಲು ಕೊಡುತ್ತಿದ್ದೆವು. ಅಸಂಖ್ಯ ಹಿಮ್ಮುರಿ ತಿರುವುಗಳನ್ನೂ ಏರುಹಂತಗಳನ್ನೂ ಮುಗಿಸಿ ಒಂದೆಡೆ ಬೈಕುಗಳನ್ನು ತಣಿಸುವಂತೆ, ಸೆಟೆದ ನರಗಳನ್ನು ಸಡಿಲಿಸುವಂತೆ ತುಸು ವಿರಮಿಸಿದೆವು.

ಮುಂದಿದ್ದ ಏರಿನ ಕೊನೆ ಕಣ್ಣಿಗೆಟಕುತ್ತಿರಲಿಲ್ಲ. ಕಳೆದ ಮಳೆಗಾಲದಲ್ಲಿ ಆ ಕೊನೆಯಲ್ಲೆಲ್ಲೋ ಬಲದ ದರೆ ತುಸು ಕುಸಿದಿತ್ತು. ಸಹಜವಾಗಿ ಬುಡದ ಚರಂಡಿ ನಿಗಿದುಹೋಗಿ ಪ್ರವಾಹ ಉದ್ದಕ್ಕೆ ಅಡ್ಡಾದಿಡ್ಡಿ ಹರಿದಾಡಿ ಕೊರಕಲು, ಸಡಿಲ ಕಲ್ಲು, ಅಸ್ಥಿರ ಮಣ್ಣಿನ ದಿಬ್ಬಗಳು ಹರಡಿ ಕೆಂಪು ಮಿದು ಕಲ್ಲಿನಲ್ಲೇ ಕಡಿದು ಮಾಡಿದ್ದ ದಾರಿಯ ಮೂಲರೂಪವನ್ನೇ ಮರೆಸಿತ್ತು. ಇದ್ದುದರಲ್ಲಿ ಎಡ ಅಂಚಿನ ನೆಲ ತುಸು ದೃಢವಾಗಿ ಕಾಣಿಸಿದರೂ ತೆರೆದು ಕಾಣುವ ಕೊಳ್ಳದ ನೋಟ ಅಳ್ಳೆದೆಯಲ್ಲಿ ಮಿದಿತ ಹೆಚ್ಚಿಸುವಂತಿತ್ತು. ರ‍್ಯಾಲೀಪಟು ಗಣೇಶ ಮಾತ್ರ ಅರವಿಂದ ಶೆಣೈಯನ್ನು ಬಿಡದೆ ಕೂರಿಸಿಕೊಂಡು ಯಶಸ್ವೀ ಮುಂದಾಳಾದ. ಶೆಣೈ ಉಳಿದವರ ಸಾಹಸದ ದಾಖಲೀಕರಣಕ್ಕೆಂದೇ ಕ್ಯಾಮರ ಬೇರೆ ಸಜ್ಜುಗೊಳಿಸಿದರೂ ಹಿಂಬಾಲಕರಿಗೆ ಸೋಲಿನ ಶಾಶ್ವತೀಕರಣದ ಹುನ್ನಾರದಂತೇ ಕಾಣಿಸಿದ್ದರೆ ಆಶ್ಚರ್ಯವಿಲ್ಲ. ನಾಲ್ಕು ಮಹಾರಥಿಗಳು ಇನ್ನೂ ಉದ್ಯೋಗಪರ್ವದಲ್ಲಿದ್ದಂತೆಯೇ ಬಸವರಾಜು ದಂಪತಿ ನೇರ ಯುದ್ಧಪರ್ವಕ್ಕೇ ಧುಮುಕಿದರು.

ಅಧೀರರಲ್ಲಿ ಬಸವರಾಜು ಒಂದು ವಿರಳ ಮಾದರಿ. ಕಷ್ಟ ಎದುರಿಟ್ಟುಕೊಂಡು, ಇತರರ ಏಳುಬೀಳುಗಳನ್ನು ನೋಡಿ ಲಾಭ ಗಳಿಸುವ ಅಥವಾ ಸ್ವಂತ ನಿರ್ಧಾರಗಳನ್ನು ವಿಮರ್ಶಿಸಿಕೊಳ್ಳುವ ತಾಳ್ಮೆ ಇದ್ದಂತಿರಲಿಲ್ಲ. ಕಾರ್ಕೋಟಕವನ್ನು ಮೊಗೆದು ತನ್ನ ಗಂಟಲಿಗೇ ಸುರಿದುಕೊಳ್ಳುವ ಹರ ಸಾಹಸ ಇವರದು. ಶಾಂತಾ ಬೆನ್ನಿಗಂಟಿದಂತೆಯೇ ರಾಜದೂತವನ್ನು ಎಬ್ಬಿಸಿದರು. ಆರಂಭದಲ್ಲಿ ಸ್ಥಿರವಾಗಿಯೇ ಇದ್ದ ಬಲ ಮಗ್ಗುಲನ್ನೇ (ದರೆ ಬದಿಗೆ) ನೆಚ್ಚಿದರು. ಬೈಕನ್ನು ಫಸ್ಟ್ ಗಿಯರಿನಲ್ಲಿಟ್ಟು ತಾಕತ್ತಿನ ತುರೀಯಾವಸ್ಥೆಯವರೆಗೂ ಹಿಂಡಿದರು. ಉತ್ಸವ ಪಾತ್ರಿ ರಥದೆದುರು ಅತ್ತಿತ್ತ ಸುಳಿದು ಸುತ್ತಿ, ಚಂಡೆ ಡೋಲು ವಾಲಗ ಕೊಂಬು ತಾರದಲ್ಲುರವಣಿಸುತ್ತಿರಲು, ಜಾತ್ರೆಯ ಗದ್ದಲವಡಗಿ ಭಕ್ತಾದಿಗಳ ತಲ್ಲಣ ನೂರ್ಮಡಿಸಿರಲು, ಮಣಭಾರದ ಉತ್ಸವಮೂರ್ತಿಯೊಡನೆ ಕೊನೆಗೊಮ್ಮೆ ನೇರ ದಿಟ್ಟ ಧಾವಂತದಲ್ಲಿ ರಥದ ಮೆಟ್ಟಿಲನ್ನು ಮೆಟ್ಟುವವರೆಗೆ ಬರುವಂತೆಯೇ ಇತ್ತು. ಆದರೆ ಏಣಿ ಏರಲು ಸಂಚಿತ ವೇಗದಷ್ಟೇ ಅಡಿ ದೃಢವಿರಬೇಕಾದಲ್ಲಿ ವಿಸ್ಮೃತಿ ಕಾಡಿದಂತೆ ಬಸವರಾಜು ಎರಡನೇ ಗಿಯರಿಗಿಳಿಸಿದರು. ಸಡಿಲ ಕಲ್ಲುಗಳ ಒಟ್ಟಣೆ ಕೆದರಿ, ಕೊರಕಲುಗಳಲ್ಲಿ ಓಲಾಡಿ, ತುಸು ದೊಡ್ಡ ಕಲ್ಲಿಗೆ ಹೆಟ್ಟಿ ಸಂಭಾಳಿಸಲಾಗದೇ ಗಾಡಿ ದಾರಿಯ ಎಡಮಗ್ಗುಲಿಗೆ ತೂರಿಹೋಯಿತು. ಕೊಳ್ಳ  ಬಾಯ್ಕಳೆದಂತೆ ಕಂಡು ಬಸವರಾಜು ಗಾಬರಿಗೆಟ್ಟರು. ಮತ್ತೆ ಫಸ್ಟ್ ಗಿಯರಿಸಲು ಹೋಗಿ ಕ್ಲಚ್ ಒತ್ತಿದ್ದಕ್ಕೆ ಇದ್ದ ತುಸು ಮುಂಚಲನೆಯೂ ತಪ್ಪಿ ಬೈಕ್ ಹಿಂದೆ ಜಾರತೊಡಗಿತು. ಕಾಲೆರಡು ನೆಲ ತುಳಿಯುವ ಅನಿವಾರ್ಯತೆಯಲ್ಲಿ  ಮುಂಬಿರಿಯನ್ನಷ್ಟೇ (ಫ್ರಂಟ್ ಬ್ರೇಕ್) ಒತ್ತಿದ್ದಕ್ಕೆ ಚಕ್ರ ಅಡ್ಡಡ್ಡವಾಗಿ ಹಿಂಜಾರತೊಡಗಿತು. ಯಾಕ್ಸಿಲೇಟರ್ ಅನಾವಶ್ಯಕ ಹಿಂಡಿ ಹೋಗಿ ಇಂಜಿನ್ ಬೊಬ್ಬಿರಿಯಿತು. ಶಾಂತಾ ಎರಡೂ ಕಡೆ ಕಾಲು ಹಾಕಿಯೇ ಕುಳಿತಿದ್ದರೂ ಅವನ್ನು ಇಳಿಬಿಟ್ಟು ಹೆಚ್ಚಿನ ಆಧಾರ ಕಲ್ಪಿಸುವಷ್ಟು ಉದ್ದ ಆಳಲ್ಲ. ಬಸವರಾಜರ ಶಕ್ತಿ ಮೀರಿ ಎದುರು ಚಕ್ರ ಎಡಕ್ಕೊಮ್ಮೆ ಬಲಕ್ಕೊಮ್ಮೆ ಬಡಿದು ಸೀಟಿನಲ್ಲೂ ಇಬ್ಬರೂ ಹಿಂಜಾರಿದರು. ಸಹಜವಾಗಿ ಹಿಂಜಾರುತ್ತಿದ್ದ ಎದುರು ಚಕ್ರಕ್ಕೆ ಮತ್ತೊಂದು ಕಲ್ಲು ಸಿಕ್ಕಿದ್ದೇ ಮೇಲೆದ್ದು ಸವಾರರಿಬ್ಬರನ್ನು ಬಲಕ್ಕೆ ಉದುರಿಸಿ ತಾನು ಎಡಕ್ಕೆ, ಅದೃಷ್ಟಕ್ಕೆ ಪ್ರಪಾತದಂಚಿನಲ್ಲೇ ಬಿದ್ದುಕೊಂಡಿತು. ಒಟ್ಟು ಬೈಕ್ ಸುಮಾರು ಆರೇಳು ಮೀಟರಿನಷ್ಟು ಹಿಂದೆ ಜಾರಿದ್ದರೆ, ಶಾಂತಾ ಎರಡು ಹಿಂಪಲ್ಟಿಯನ್ನೇ ಹೊಡೆದಿದ್ದರು. ಆದರೆ ಅದೃಷ್ಟವಶಾತ್ ಬೈಕ್ ಸೇರಿದಂತೆ ಎಲ್ಲರೂ ಸಾಕಷ್ಟು ಮಣ್ಣು ಮೆತ್ತಿಕೊಂಡು, ತರಚಲು ಗಾಯಗಳನ್ನು ಪಡೆದರೂ ಮುಂದಿನ ಸವಾರಿಗಾಗಲೀ ಮನಃಸ್ವಾಸ್ಥ್ಯಕ್ಕಾಗಲೀ ಏನೂ ತೊಂದರೆಯಿಲ್ಲದೆ ಪಾರಾಗಿದ್ದರು! ಶಾಂತಾ ಗಾಯ ದೂಳು ಒರೆಸಿಕೊಳ್ಳುತ್ತ “ಹ್ಯಾಗ್ ಬಂತು ನಮ್ಮ್ ಸ್ಟಂಟೂ”ಂತ ವಿಡಿಯೋ ಶೆಣೈಯನ್ನು ಕೇಳಿದಾಗಂತೂ ಎಲ್ಲರೂ ನಿರಾಳರಾದೆವು.

ಮುಂದಿನ ಹಲವು ಹಂತಗಳು ಸುಲಭವಾಗೇನೂ ಇರಲಿಲ್ಲ. ಆದರೆ ಅವನ್ನು ಉತ್ತರಿಸುವಲ್ಲಿ ನಾವು ಹೆಚ್ಚು ಅನುಭವಿಗಳಾಗಿದ್ದೆವು. ತುಸು ಅಪಾಯಕಾರಿ ಎಂದು ಕಂಡಾಗಲೇ ಸಹವಾರರು ಇಳಿದು, ಆವಶ್ಯಕತೆ ನೋಡಿಕೊಂಡು ಹೆಚ್ಚಿನ ನೂಕುಬಲ ಕೊಟ್ಟು ಸುಮಾರು ಹನ್ನೊಂದು ಗಂಟೆಯ ಸುಮಾರಿಗೆ ಶಿಖರವಲಯದ ಭಟ್ಟರ ಮನೆ ಸೇರಿದೆವು. [ಹೆಚ್ಚಿನ ಮಾರ್ಗಕ್ರಮಣದ ವಿವರಗಳನ್ನು ದ್ವಿರುಕ್ತಿ ನಿವಾರಣಕ್ಕಾಗಿಯೂ ಹೆಚ್ಚಿನ ಅರ್ಥಸಂಪತ್ತಿಗಾಗಿಯೂ ಮುಂದೊಂದು ಕಂತಿನಲ್ಲಿ ಕೊಡುತ್ತೇನೆ]. ಬೈಕುಗಳನ್ನು ಅಲ್ಲೇ ಬಿಟ್ಟು, ಭಟ್ಟರಿಗೆ ಊಟದ ಆದೇಶವನ್ನು ಕೊಟ್ಟು ನಿಜ ಶಿಖರಕ್ಕೆ ನಡೆದೆವು.

ಭಕ್ತರ ಓಡಾಟ, ಕಟ್ಟೆಪೂಜೆಯ ಕಳ್ಳಸನ್ಯಾಸಿಗಳ ಕಾಟ, ಸೂರ್ಯನ ಕ್ರೂರ ನೋಟ, ಇವೆಲ್ಲವನ್ನೂ ಮೀರಿದ ನಂನಮ್ಮ ಹೊಟ್ಟೆಯೊಳಗಿನ ಗುಡುಗಾಟ ಬಲು ಬೇಗನೇ ನಮ್ಮನ್ನು ಶಿಖರದಿಂದ ಮತ್ತೆ ಭಟ್ಟರ ಮನೆಗೆ ಓಡಿಸಿತು. ಆದರೆ ಅಲ್ಲಿ ಗುಡಿಯ ಪೂಜೆ, ನೈವೇದ್ಯ ಮುಗಿಯದೇ ಊಟ ಕೊಡದ ವಿಚಿತ್ರ ಸ್ಥಿತಿ ಅಣಕಿಸಿತು. (ಪ್ರವಾಸೀ ಜನರಿಗೆ ಸೌಕರ್ಯ ಒದಗಿಸುವುದನ್ನೇ ವೃತ್ತಿಯಾಗಿ ನೆಚ್ಚಿದವರು ಆರಾಧನೆಯನ್ನು ಹೇರಬಾರದು. ಅನಿವಾರ್ಯತೆ ಕ್ಷೇತ್ರದ ಈ ಏಕಸ್ವಾಮ್ಯವನ್ನು ಮುರಿದಿರುವುದನ್ನು ಈಗ ಕಾಣುತ್ತೇವೆ. ಸ್ಪರ್ಧಾತ್ಮಕವಾಗಿ ತುಸು ಕೆಳ ಹಂತದಲ್ಲಿರುವ ‘ಜೋಗಿ ಮನೆ’ ಹಾಗೂ ಸರಕಾರೀ ವಿರಾಮಮನೆಯೂ ಇಂದು ಬೆಳೆದಿವೆ!) ಹೆಚ್ಚಿನವರು ಸೋಮಾರಿ ಕಟ್ಟೆ ಸದಸ್ಯರಾದೆವು. ಗಣೇಶ, ಅರವಿಂದ ಶೆಣೈ ಭಟ್ಟರ ಮನೆಯೆದುರಿನ ತೀರಾ ಚಿಕ್ಕ ಕೊಳದಲ್ಲಿ ಮೀನುಗಳಿಗೆ ಸಾಂಗತ್ಯ ಕೊಡಲು ಹೊರಟು ಕೆಸರು ಕಲಕಿದರು. ಅಭಯ ಅದರಲ್ಲೇ ಅವಲಕ್ಕಿ ತೂರಿ ಮೀನು ಎಣಿಕೆಗೂ ದೇವಕಿ ಅಭಯನ ರಕ್ಷಣೆಯಲ್ಲೂ ನಿರತರಾಗಿದ್ದರು. ಊಟದ ಶಾಸ್ತ್ರ ಮುಗಿಸಿ ಬೈಕೇರುವಾಗ ಅಪರಾಹ್ನ ಮೂರೂವರೆ!

ಹತ್ತುವಲ್ಲಿ ಶ್ರಮ ಹೆಚ್ಚು, ಇಳಿಯುವಲ್ಲಿ ಭಯ ಹೆಚ್ಚು. ವಾಹನಗಳ ಶಿಸ್ತು ಸಂಹಿತೆ ಘಟ್ಟ ದಾರಿಯ ಕುರಿತು “ಹತ್ತಿದ ಗಿಯರಿನಲ್ಲೇ ಇಳಿಸು” ಎನ್ನುತ್ತದೆ. ಆದರೆ ಅನುಕ್ತ ಶಾಸನ “ಬಹುತೇಕ ಕಾನೂನು ಭಂಗದಲ್ಲೇ ಸಾರ್ಥಕ್ಯ ಕಾಣು”ವುದು ಇಲ್ಲೂ ಒಂದು ಮಟ್ಟಿಗೆ ನಿಜವಾಯಿತು. ನಾವು ತಂಡವಾಗಿ ಪರಸ್ಪರ ಎಷ್ಟು ಎಚ್ಚರಿಸಿಕೊಂಡರೂ ಬಸವರಾಜರು ಭಯದ ಉನ್ನತಿಯಲ್ಲಿ ಇನ್ನಷ್ಟು ದೊಡ್ಡ ತಪ್ಪನ್ನೇ ಅನುಸರಿಸುತ್ತಿದ್ದರು. ಇಂಜಿನ್ ಆರಿಸಿ, ಕೇವಲ ಎರಡು ಬ್ರೇಕುಗಳ ಬಲದಲ್ಲೇ ಅವರ ಸವಾರಿ ಸಾಗಿತ್ತು. ಇಲ್ಲಿ ತೀವ್ರ ಗುರುತ್ವಾಕರ್ಷಣೆ ಮತ್ತು ಅಸಮ ಮಣ್ಣಿನ ದಾರಿ ಈ ಪ್ರಯತ್ನವನ್ನು ದುರಂತ ಕಾಣಿಸುವುದು ಸ್ಪಷ್ಟವಿತ್ತು. (ದಾರಿಯಲ್ಲಿದ್ದ ಒಂದು ಸಡಿಲ ಕಲ್ಲೋ ಕೊರಕಲೋ ಸವಾರನ ಸಮತೋಲನ ತಪ್ಪಿಸಿದರೆ ಸಹಜವಾಗಿ ಕಾಲಿನಲ್ಲೊತ್ತಿದ್ದ ಹಿಂದಿನ ಚಕ್ರದ ಬ್ರೇಕು ಬಿಟ್ಟು ನೆಲಕ್ಕೆ ಕಾಲು ಕೊಡುವುದು ಅನಿವಾರ್ಯವಾಗುತ್ತದೆ. ಹಾಗೆ ಕೊಟ್ಟದ್ದೇ ಆದಲ್ಲಿ ಇಳಿಜಾರಿನ ತುಯ್ತ ತೀವ್ರವಾಗಿ ಜಾರಿ ಅಡ್ಡ ಬೀಳುವುದು ನಿಶ್ಚಿತ) ಅದೃಷ್ಟವಶಾತ್ ಗಣೇಶ್ ಬಸವರಾಜು ಸಾಹಸವನ್ನು ಸಕಾಲದಲ್ಲಿ ಕಂಡುಕೊಂಡರು ಮತ್ತು ಕೂಡಲೇ ಅವರ ‘ಸರ್ಕಸ್ ಕಂಪೆನಿ’ಯನ್ನು ಬರ್ಖಾಸ್ತುಗೊಳಿಸಿದರು!

ಮುಂದಿನ ಅಪಾಯಕಾರಿ ಇಳಿಜಾರುಗಳಲ್ಲೆಲ್ಲ ಗಣೇಶ್ ಒಮ್ಮೆ ಹಿಂದಕ್ಕೆ ನಡೆದು ಬರುವಂತಾದರೂ ಎರಡು ಬೈಕ್ ಇಳಿಸುವುದು ಕಡ್ಡಾಯವಾಯ್ತು! ಪರೋಕ್ಷವಾಗಿ ಬಸವರಾಜು ದಂಪತಿಗೆ ಸವಾರಿಸುಖ ಕಡಿಮೆಯಾದರೂ ಅಯಾಚಿತವಾಗಿ ಚಾರಣಾನುಭವ ಹೆಚ್ಚಿತು. ಸಹಜವಾಗಿ ನಮ್ಮ ಪ್ರಗತಿ ನಿಧಾನವಾದರೂ ನಿರಪಾಯಕಾರಿಯಾಗಿ ಕೊಲ್ಲೂರು ಸೇರುವಾಗ ಕತ್ತಲಾಗಿತ್ತು. ಅಲ್ಲಿನ ಹೋಟೆಲಿನಲ್ಲಿ ಕಾಫಿಯ ಉಪಚಾರಕ್ಕಷ್ಟೇ ನಿಂತು ಮುಂದುವರಿದೆವು.

ಕೋಟ ದಾಟುವಾಗ ಉರಾಳರ ಮಾತಿಗೆ ಕಟ್ಟುಬಿದ್ದು ನಾವು ಕೇವಲ ದಿಗ್ವಿಜಯದ ಯಶಸ್ಸಿನ ಸುದ್ದಿಯಷ್ಟೇ ಮುಟ್ಟಿಸಲು ಅವರ ಮನೆಗೆ ನುಗ್ಗಿದರೂ ಊಟ ಕೊಟ್ಟು ನಮ್ಮ ಹೊಟ್ಟೆ ಗಟ್ಟಿ ಮಾಡಿದ ಅವರ ಔದಾರ್ಯಕ್ಕೆ ನಿತ್ಯ ಬಳಕೆಯ ‘ಸ್ನೇಹ’ ಯಾಕೋ ತುಂಬ ದುರ್ಬಲ ಶಬ್ದವಾಗಿಯೇ ಕೇಳುತ್ತದೆ. ಮತ್ತೆಲ್ಲೂ ನಿಲ್ಲದೆ ಅಥವಾ ನಿಲ್ಲುವ ಆವಶ್ಯಕತೆಯೂ ಬಾರದೆ ನಾವು ಮಂಗಳೂರು ಸೇರುವಾಗ ಗಂಟೆ ಹನ್ನೊಂದು. ಕೊಡಚಾದ್ರಿಯನ್ನೇರುವ ಘಾಟಿದಾರಿ ಅತಿ ಸಣ್ಣ ಅಂತರದಲ್ಲಿ ನಲ್ವತ್ತಕ್ಕೂ ಮಿಕ್ಕು ಹಿಮ್ಮುರಿ ತಿರುವುಗಳೊಡನೆ ನಮಗೆ ಅಸಂಖ್ಯ ಏರು-ದಾರಿಯನ್ನೇ ಪೇರಿಸಿಟ್ಟಿತ್ತು. ಹಾಗೇ ನಲ್ವತ್ತೆಂಟೇ ಗಂಟೆಗಳ ಅಲ್ಪ ಕಾಲಾವಕಾಶದ ಆ ಯಾನ ನಮ್ಮ ಮನೋಭಿತ್ತಿಯಲ್ಲಿ ಒತ್ತೊತ್ತಾಗಿ ಪದರಗಟ್ಟಿಸಿದ ಅನುಭವ ವಿವರಗಳು (ಸುಮಾರು ಮೂರು ದಶಕ ಕಳೆದು) ಇಂದಿಗೂ ಕಳಚಿಕೊಳ್ಳಲಾಗದ ಸವಿನೆನಪು.

(ಮುಂದುವರಿಯಲಿದೆ)

No comments:

Post a Comment