13 September 2013

ಪಾತರಗಿತ್ತಿ ಪ್ರಿಯರ ಸಮ್ಮಿಲನ!

ಮುಖಪುಸ್ತಕವನ್ನು (ಫೇಸ್ ಬುಕ್) ನಾನು ಮುಖ್ಯವಾಗಿ ನನ್ನ ಜಾಲತಾಣದ ಬಗ್ಗೆ ಸಾರ್ವಜನಿಕ ಗಮನ ಸೆಳೆಯಲೆಂದೇ ಬಳಸುತ್ತೇನೆ. ಸಹಜವಾಗಿ ಪರಿಚಯ ಇರುವ ಯಾರು ಗೆಳೆತನ ಕೋರಿದರೂ ಅನುಮೋದನೆ ಕೊಡುತ್ತೇನೆ. ಸಾಲದೆಂಬಂತೆ, ಅಪರಿಚಿತರಿದ್ದರೂ ಸ್ಪಷ್ಟ ಪ್ರೌಢ ಚಿತ್ರ ಮತ್ತು ವೈಯಕ್ತಿಕ ಹೆಸರಿನೊಡನೆಸಹಭಾಗಿತ್ವ ಕೇಳಿದರೆ ಸಾಕು, ನಾನು ಅನುಮೋದನೆ ಕೊಡುತ್ತಲೇ ಇದ್ದೇನೆ. ಈ ಎರಡನೇ ಕ್ರಮದಲ್ಲಿ ಸುಮಾರು ಒಂದು ತಿಂಗಳ ಹಿಂದೆ ನನಗೆ ಬಂದಗೆಳೆತನ ಕೋರಿಕೆ ಒಂದರ ಹೆಸರುಸಮ್ಮಿಲನ ಶೆಟ್ಟಿ, ಯುವಕನ ಚಿತ್ರ. ಆದರೆಅದು ಹತ್ತರೊಡನೆ ಒಂದಾಗಿ, ನಾನು ಶೋಕವಾರ್ತೆ ಕೊಟ್ಟಾಗಲೂಲಾಯಕ್ಕಿದೆ ಕೀಲಿ ಒತ್ತುವ ಔಪಚಾರಿಕ ಮಿತಿಯದ್ದಲ್ಲ ಎಂದು ಮರುಕ್ಷಣವೇ ನನ್ನರಿವಿಗೆ ಬಂತು. ಚಟ್ಟೆಂದು ಸಮ್ಮಿಲನ ಶೆಟ್ಟಿ ಎಂಬಸಂವಾದ ಅಂಕಣ ಮೊಳೆತು ನಮಸ್ತೇ...ಎಂದಿತು! ಮೂಡಬಿದ್ರೆಯಾಚಿನ ಬೆಳ್ವಾಯಿಯ ಹಳ್ಳಿ ಮೂಲೆಯಲ್ಲಿನ ಕೃಷಿ ಕುಟುಂಬದ ಈ ತರುಣ, ತಮ್ಮ ಪಾರಂಪರಿಕ ಕೃಷಿಭೂಮಿಯನ್ನು ಜೀವ ವೈವಿಧ್ಯದ ಸಂರಕ್ಷಣೆಯ ಒಂದು ಸಂಕೇತಕ್ಕೆ ಮುಡುಪಾಗಿಟ್ಟ ಸಾಹಸವನ್ನು ತಿಳಿದೆ. ಆಗ, ಕೆಲವು ಸಮಯದ ಹಿಂದೆ ನನ್ನ ಬಂಧುಗಳೇ ಆದ ಮಾಯ್ಲಂಕೋಡಿ ಸದಾಶಿವ ರಾವ್, ನಳಿನಿ ದಂಪತಿ ಅನ್ಯ ಕಾರ್ಯಾರ್ಥ ಮೂಡಬಿದ್ರೆಯತ್ತ ಹೋಗಿದ್ದದ್ದು ನೆನಪಾಯಿತು. ಅಲ್ಲಿ ಪರಿಚಯದವರ ಮೂಲಕ, ಒಂದು ಖಾಸಗಿ ಚಿಟ್ಟೆವಠಾರದಲ್ಲಿ
ಸುತ್ತಿ ಬಂದದ್ದನ್ನು ಹೇಳಿದ್ದೂ ಮೈದಳೆದು ನಿಂತಂತೆ, ಇದೇ (ಆಗಸ್ಟ್ ೨೦೧೩) ಹದಿನೆಂಟಕ್ಕೆ ನನ್ನ ಚಿಟ್ಟೆ ಉದ್ಯಾನವನ ಉದ್ಘಾಟನೆ ಇದೆ. ಕರಾವಳಿಯ ಹಕ್ಕಿ ವೀಕ್ಷಕ ಮಿತ್ರರ ಬಳಗದೊಡನೆ ಹಲವು ವನ್ಯಾಸಕ್ತರು ಬರುತ್ತಿದ್ದಾರೆ. ನೀವೂ ಬರಬೇಕು... ಒತ್ತಾಯದ ಹೇಳಿಕೆ, ಹಿಂಬಾಲಿಸಿದಂತೆ ವಿ-ಆಮಂತ್ರಣ ಪತ್ರವನ್ನೂ ಸಮ್ಮಿಲನ ಶೆಟ್ಟಿ ಕೊಟ್ಟರು.

ಕೆಲವು ದಶಕಗಳ ಹಿಂದೆ, ನನ್ನೊಂದು ಚಾರಣ ತಂಡ ಕುಮಾರಧಾರಾ ಪಾತ್ರೆಯನ್ನು ಎದುರು ದಿಕ್ಕಿನಲ್ಲಿ ಅನುಸರಿಸುತ್ತಿದ್ದಾಗ ಮೊದಲ ಬಾರಿಗೆ ನಾವೊಂದು ಪ್ರಾಕೃತಿಕ ಚೋದ್ಯಕ್ಕೆ ಸಾಕ್ಷಿಗಳಾಗಿದ್ದೆವು. (ಆ ಡಿಸೆಂಬರ್ ಆಸುಪಾಸಿನ ವಿಚಿತ್ರವನ್ನು ಮತ್ತಿನ ವರ್ಷಗಳಲ್ಲು ಬೇರೆ ಕೆಲವೆಡೆಗಳಲ್ಲಿ ಕಂಡದ್ದೂ ಉಂಟು.) ನದಿಯ ಹರಿವಿನ ಗುಂಟ ಪುಟ್ಟ ಪುಟ್ಟ ಚಿಟ್ಟೆಗಳ (ಕುಮಾರಧಾರೆಯಲ್ಲಿ ಕಂಡದ್ದು ಹಳದಿ ವರ್ಣದವು) ಉದ್ದನ್ನ ಸಾಲೊಂದು ನೇರ ಹಾರುತ್ತ ಸಾಗಿತ್ತು. ಕೊಳ್ಳೆ ಸಾಗಣೆಯಲ್ಲಿ ತತ್ಪರವಾದ ಇರುವೆ ಸಾಲಿನದೇ ಶಿಸ್ತು, ನೆಲದಿಂದ ಸುಮಾರು ಎರಡು ಮೂರಡಿಯಷ್ಟೇ ಎತ್ತರದಲ್ಲಿ, ಬಲು ಚುರುಕಾಗಿ ಆದರೆ ಆದಿಯೂ ಇಲ್ಲ ಅಂತ್ಯವೂ ಇಲ್ಲ ಎನ್ನುವಷ್ಟು ಬಹುಸಂಖ್ಯೆಯಲ್ಲಿ ಏಕಮುಖವಾಗಿ ಹಾರಿ ಹೋಗುತ್ತಲೇ ಇದ್ದುವು. ಊರಿಂದೂರಿಗೆ, ಅಪ್ಪಟ ಮರುಭೂಮಿಯನ್ನೂ ಹೀಗೆ ಕೆಲವೊಂದು ಚಿಟ್ಟೆ ಸಾಲು ಹಾದು ಹೋಗುವ ಕತೆ ಕೇಳಿದ್ದೆ. ಹಕ್ಕಿಗಳ ವಲಸೆ ಸಂಚಾರಕ್ಕೇನೂ ಬಿಟ್ಟಿಲ್ಲದಂತೆ ಇವು ಹೋಗುತ್ತವಂತೆ. ಆದರೆ ಚಿಟ್ಟೆಗಳ ಒಟ್ಟಾರೆ ಆಯುರ್ದಾಯವೇ ಕಡಿಮೆ. ಅಂದರೆ, ಯೋಗ್ಯ ಋತುಮಾನಕ್ಕೆ ವಲಸೆ ಹೋಗಿ ಮರಳುವ ಹಕ್ಕಿಗಳಂತೆ ಚಿಟ್ಟೆಗಳು ಮರಳಿ ಬಾರವು. ಅಂದ ಮಾತ್ರಕ್ಕೆ ಈ ಚಿಟ್ಟೆ ಸಂತತಿ ನಿರ್ನಾಮವೇನೂ ಆಗುವುದಿಲ್ಲ. ಹಾದಿಯಲ್ಲೆಲ್ಲೋ ಯುಕ್ತ ಪರಿಸರ ಒದಗಿದಲ್ಲಿ ಸಂತಾನವೃದ್ಧಿ ನಡೆಸಿಯೇ ನಶಿಸುತ್ತವಂತೆ. ಜೀವಮಾನಗಳ ಮಜಲೋಟದಂತೆ (ರಿಲೇ ರೇಸ್) ಮುಂದಿನ ತಲೆಮಾರೂ ಹೀಗೇ ಸಾಲುಗಟ್ಟಿ ಯಾನ ಮುಂದುವರಿಸುತ್ತವಂತೆ.

ಭಾರತ ಪರ್ಯಾಯ ದ್ವೀಪದ ಚಿಟ್ಟೆಗಳ (Butterflies of Peninsular India) ಬಗ್ಗೆ ವೈಜ್ಞಾನಿಕ ಆಕರ ಗ್ರಂಥವನ್ನೇ ಕೊಟ್ಟ ಕೃಷ್ಣಮೇಘ ಕುಂಟೆಯವರು  ಹೇಳುವಂತೆ ಚಿಟ್ಟೆಗಳ ವಲಸೆಯ ಹಿಂದೆ ಬಲು ದೊಡ್ಡ ಪಾರಿಸರಿಕ ಸಮತೋಲನದ ಪಾಠ ಇದೆ. ಅದುಕಲಿಕೆಯಿಂದ ಬಂದಂತಿಲ್ಲ, ಅವುಗಳ ಜೀವತಂತುಗಳಲ್ಲೇ ಬೆಸೆದುಹೋಗಿದೆ! ವಾರ್ಷಿಕ ಹಕ್ಕಿ ವಲಸೆಗಿಂತ ತುಸು ಭಿನ್ನ ಈ ಕತೆ! ಚಿಟ್ಟೆಗಳ ಜೀವಮಾನದಲ್ಲಿ ಸ್ಪಷ್ಟ ಎರಡು ಅವಸ್ಥೆಗಳಿರುವುದು ಸಾಮಾನ್ಯ ವಿಜ್ಞಾನ ಓದಿದ ಎಲ್ಲರಿಗೂ ತಿಳಿದೇ ಇದೆ. ‘ಪೂರ್ವಾಶ್ರಮದಲ್ಲಿ ಮೊಟ್ಟೆ ಒಡೆದದ್ದೇ ಆಶ್ರಯವಿತ್ತ ಸಸ್ಯವನ್ನೇ ಬಕಾಸುರ ಹಸಿವಿನಲ್ಲಿ ಕಬಳಿಸುವ (ಕಂಬಳಿ) ಹುಳುಗಳು. ಆ ಹಂತದ ಚಲನೆ, ವರ್ಣವೈವಿಧ್ಯ, ಸ್ವರಕ್ಷಣಾಕ್ರಮಗಳ ವೈಖರಿಯೇ ಪ್ರತ್ಯೇಕ. ಮತ್ತೆ ಇವು ಹಸಿರು ಮೇಯುವಲ್ಲಿ ಸಂತೃಪ್ತಗೊಂಡು, ಕೋಶಾವಸ್ಥೆಗಿಳಿದು, ರೂಪಾಂತರಗೊಂಡು ಚಿಟ್ಟೆ (ಪತಂಗ) ಆಗುತ್ತಿದ್ದಂತೆ ತಳೆಯುವ ರೂಪ, ಆಹಾರಕ್ರಮ ಮತ್ತುಜೀವನದುದ್ದೇಶಕ್ಕೆ ಒದಗುವ ಬಣ್ಣ ಸಂಪೂರ್ಣ ಬೇರೆ. ಕೃಷ್ಣಮೇಘ ಕುಂಟೆಯವರು ಗುರುತಿಸುವಂತೆ, ವಲಸೆ ಚಿಟ್ಟೆಗಳಿಗೆ ಪಾರಿಸರಿಕ ಭಾವ ಈ ಹಂತದಲ್ಲಿ ಜಾಗೃತವಾಗುತ್ತದಂತೆ. ತಮ್ಮಪೂರ್ವಾಶ್ರಮದಲ್ಲಿ ಒದಗಿದ ಆಹಾರ ಸಂಪತ್ತು (ಸಸ್ಯಗಳು) ದುರ್ಬಲಗೊಳ್ಳುವುದನ್ನು ತಪ್ಪಿಸಲು, ಅಂದರೆ ಅವಕ್ಕೆ ಪುನರುಜ್ಜೀವನಗೊಳ್ಳಲು ಕಾಲಾವಕಾಶವನ್ನು ಕೊಡುವಂತೆ ಇವು ತಮ್ಮ ಸಂತತಿಗೆ ಹೊಸದೇ ಆಹಾರವಲಯವನ್ನು ಅರಸಿಕೊಂಡುಮೆರವಣಿಗೆಗಿಳಿಯುತ್ತವೆ. ಈ ಸಮೂಹಭಾವ ಹಾಗೂ ಕ್ರಿಯೆ ಇನ್ನೂ ವಿಜ್ಞಾನಿಗಳಿಗೆ ಪೂರ್ಣ ಅನಾವರಣಗೊಳ್ಳದ ಪ್ರಾಕೃತಿಕ ಚೋದ್ಯಗಳಲ್ಲಿ ಒಂದಾಗಿಯೇ ಉಳಿದಿದೆಯಂತೆ. (ಕಾಡಾನೆಗಳಸರ್ಕೀಟು, ಹುಲಿ ಗುರುತಿಸಿಕೊಳ್ಳುವಆಹಾರವಲಯಗಳೂ ಇಂಥವೇ ಕತೆ ಹೇಳುತ್ತವೆ. ಹೆಚ್ಚೇಕೆ ಆದಿಮ ಕೃಷಿಕ ಮಾನವನ ಕುಮರಿ ಬೆಳೆಯ ತತ್ತ್ವವೂ ಇದೇ ಆಗಿತ್ತಲ್ಲವೇ!)

ಈಗ ಅಂಥ ಚಿಟ್ಟೆ ಮೆರವಣಿಗೆಗಳ ಲಕ್ಷ್ಯ ಬೆಳ್ವಾಯಿಯೇ ಇರಬಹುದೇ ಎಂದು ಮನದಲ್ಲೇ ಮುದಗೊಳ್ಳುತ್ತ ಸಮ್ಮಿಲನರ ವಿವರಗಳತ್ತ ಗಮನಹರಿಸಿದೆ. ಕಾಂತಾವರ ಅರಣ್ಯದ ಮಡಿಲಲ್ಲಿನ ಏಳು ಚಿಲ್ರೆ ಎಕ್ರೆ ವಿಸ್ತೀರ್ಣದ ಅಪ್ಪಟ ಸಾಂಪ್ರದಾಯಿಕ ಕೃಷಿ ಕುಟುಂಬದಲ್ಲಿ ಹುಟ್ಟಿ, ಬೆಳೆದ ಬಾಲಕ - ಸಮ್ಮಿಲನನಿಗೆ (೧೯೮೫-) ತನ್ನ ಪರಿಸರದ ಆಗುಹೋಗುಗಳ ಬಗ್ಗೆ ಕಣ್ಣಿತ್ತು. ಕೆರೆ ತೋಡುಗಳ ಮೀನು, ಗಹನ ಗಗನಗಳ ಹಕ್ಕಿಗಳ ಬಗ್ಗೆ ಇನ್ನಿಲ್ಲದ ಕುತೂಹಲ. ಹಳ್ಳಿ ಪರಿಸರದ ಪ್ರಕೃತಿ ಪಾಠದೊಡನೆ ಆತ ಔಪಚಾರಿಕ ವಿದ್ಯಾಭ್ಯಾಸದಲ್ಲಿ ಪ್ರಾಥಮಿಕಕ್ಕೆ ಮೂಡಬಿದ್ರೆಗೂ ಪ್ರೌಢಶಾಲೆಗೆ ಕಾರ್ಕಳಕ್ಕೂ ಹೋಗಿಬಂದ. ಕಾಲೇಜಿಗಾಗುವಾಗ (ಬೀಎಸ್ಸಿ) ಮತ್ತೆ ಮೂಡಬಿದ್ರೆಗೆ (ಆಳ್ವಾಸ್) ಹೊರಳಿದ್ದು ಹೊಸ ದೃಷ್ಟಿಕೋನದ ಗೆಯ್ಮೆಯಾಯ್ತು, ಆಸಕ್ತಿ ಮತ್ತು ಕಲಿಕೆಗಳ ಸಮ್ಮಿಲನವೇ ಆಗಿತ್ತು.

ಪ್ರಾಣಿ ವಿಜ್ಞಾನ ಬೋಧಕರಾದ ಸಿ.ಎಚ್ ಅಶೋಕರು ಶಿಷ್ಯನ ಆಸಕ್ತಿಗೆ ವಿಷಯದ ಚೂಪು ಒದಗಿಸಿದರು. ಕ್ಷೇತ್ರಕಾರ್ಯಾಧಾರಿತವಾಗಿ ಚಿಟ್ಟೆಯನ್ನಷ್ಟೇ ಅಧ್ಯಯನ ಮಾಡುವ ಸವಾಲು ಕೊಟ್ಟರಂತೆ. ಸಮ್ಮಿಲನ ಶೆಟ್ಟಿಗೆ ಅದು ಪರೀಕ್ಷಾ ದೃಷ್ಟಿಯಲ್ಲಿ, ಬರಿಯ ಅಂಕಗಳಿಸುವ ಸಂಗತಿಯಾಗಿ ಉಳಿಯಲಿಲ್ಲ. ಹೋದಲ್ಲಿ ಬಂದಲ್ಲಿ, ಅದರಲ್ಲೂ ಮುಖ್ಯವಾಗಿ ಸ್ವಂತ ಹಳ್ಳಿಮನೆಯ ಪರಿಸರದಲ್ಲಿ ಇವರನ್ನು ಕಾಡಿದ್ದು ಚಿಟ್ಟೆಗಳು; ವರ್ಣಮಯ, ವೈವಿಧ್ಯಮಯ ಬಳುಕು ಬೀಸಣಿಗೆಗಳಂತೇ ಗಿಡದಿಂಗಿಡಕೆ ಹಾರುವ ಪಾತರಗಿತ್ತಿಗಳು. ವೃತ್ತಿ ಭವಿಷ್ಯದ ಅಗತ್ಯ ಸಮ್ಮಿಲನರನ್ನು ಔಪಚಾರಿಕ ಶಿಕ್ಷಣದಲ್ಲಿ ಮತ್ತೂ ಮುಂದುವರಿಯಲು ಪ್ರೇರಿಸಿದ್ದು ನಿಜ. ಇವರು ಮಂಗಳೂರಿನಲ್ಲಿ (ಮೋತಿಮಹಲ್) ಹೋಟೆಲ್ ನಿಭಾವಣಾ ಓದು ಮುಗಿಸಿ, ಅಲ್ಲೇ ಅಧ್ಯಾಪಕ ವೃತ್ತಿಯನ್ನೂ ಹಿಡಿದರು. ಆದರೆ ಆಂತರ್ಯದಲ್ಲುಳಿದ ಚಿಟ್ಟೆಯ ಒಲವು ಕೋಶ ಹರಿದು ರೆಕ್ಕೆ ಬಡಿಯಲು ತುಡಿಯುತ್ತಲೇ ಇತ್ತು.

ಸುಮಾರು ಮೂವತ್ತು ವರ್ಷಗಳ ಹಿಂದೆ ಉತ್ತರಕನ್ನಡದ ನೀರ್ನಳ್ಳಿಯಲ್ಲಿ ಪರಿಸರಾಸಕ್ತ ಲೇಖಕರ ಕಮ್ಮಟವೊಂದು ನಡೆದಿತ್ತು. ಶಿವಾನಂದ ಕಳವೆ ಹಾಗೂ ಪಾಂಡುರಂಗ ಹೆಗಡೆ ಸ್ವಂತ ವೆಚ್ಚದಲ್ಲಿ ಮತ್ತು ಊರವರ ಪೂರ್ಣ ಸಹಕಾರದಲ್ಲಿ ಎರಡೋ ಮೂರೋ ದಿನದ ಆ ಶಿಬಿರವನ್ನು ತುಂಬ ಸಮರ್ಥವಾಗಿಯೇ ನಡೆಸಿದ್ದರು. ಅದರ ಅಂಗವಾಗಿ ಶಿವಾನಂದ ಕಳವೆ ತಮ್ಮ ಮನೆಯ ಬಳಿಯಚಿಟ್ಟೆಸಂತೆಗೆ ಶಿಬಿರಾರ್ಥಿಗಳನ್ನು ಕರೆದೊಯ್ದಿದ್ದರು. ಅಂದಿನ ಅನುಭವ ನನ್ನ ಮನಸ್ಸಿನ ಅರೆಯಲ್ಲಿ ಮುದುರಿ ಕುಳಿತದ್ದು ಇಂದು ಬೆಳ್ವಾಯಿಯ ನೇಸರಕಾಂತಿಗೆ ಸಂಚಲನಕ್ಕೊಳಗಾಗಿ ರೆಕ್ಕೆ ಕಂಪಿಸುತ್ತಿದೆ. ಕಳವೆಹಳ್ಳಿಯಲ್ಲಿ ಮನುಷ್ಯ ಒಡನಾಟದ, ಆದರೆ ಸಹಜ ಕಾಡಿನ ಒಂದು ಸಾಮಾನ್ಯ ಮರ. ಸುಮಾರು ಒಂದಾಳು ತಬ್ಬಿನ ಕಾಂಡ, ಅಬ್ಬಾ ಎಂದರೆ ಮೂವತ್ತಡಿ ಎತ್ತರಕ್ಕೆ ಗುಡಾರ ಕಟ್ಟಿದಂತೆ ದಟ್ಟ ಪರ್ಣಯುಕ್ತ ಮರ. ನಾವದನ್ನು ಸಮೀಪಿಸಿದಂತೆ ಕಾಣಿಸಿದ ಒಂದೇ ವಿಚಿತ್ರ - ಎಲೆಗೊಂದರಂತೆ ಎನ್ನುವಷ್ಟು ಮರತುಂಬಿದ ಚಿಟ್ಟೆಗಳು! ಅಂದು ಈ ಚಿಟ್ಟೆಸಂತೆ ಶಿವಾನಂದರಿಗೆ (ಕೃಷಿಕ, ಹವ್ಯಾಸಿ ಪತ್ರಕರ್ತ, ಅಪಾರ ಪರಿಸರ ಕಾಳಜಿಯ ಕ್ರಿಯಾವಂತ) ಕಾಳಜಿಯಿದ್ದರೂ ಬೆಂಬತ್ತಿ ಅರ್ಥೈಸಲು ಪೂರೈಸದ ಪ್ರಾಕೃತಿಕ ಒಗಟು, ಊರವರಿಗೆ ಬರಿಯ ಚೋದ್ಯ. ಎರಡನ್ನೂ ಮೀರಿದಂತೆ ಅಧ್ಯಯನಕ್ಕೆ ಪ್ರಚೋದನೆಯಾಗಿ ಎತ್ತಿಕೊಂಡವರಿಲ್ಲ. ಆ ಬೆಳಕಿನಲ್ಲಿ ಇಂದು ಸಮ್ಮಿಲನ ಶೆಟ್ಟಿಯವರ ವೈಶಿಷ್ಟ್ಯ ವಿಶೇಷ ಹೊಳಪು ಪಡೆಯುತ್ತದೆ.

ಹೊಟೆಲ್ ನಿಭಾವಣೆಯ ತರಬೇತಿ ಹಾಗೂ ಅಧ್ಯಾಪಕ ವೃತ್ತಿ ಸಮ್ಮಿಲನ ಶೆಟ್ಟಿಯವರ ಸ್ವಂತದ ಹಳ್ಳಿ ಮನೆ ಹಾಗೂ ಅಲ್ಲಿನ ಅಡಿಕೆ ತೋಟದ ಪರಿಸರವನ್ನು ದೂರ ಮಾಡಿರಲಿಲ್ಲ. ತೋಟದಲ್ಲಿ ಅಡಿಕೆ ಹಣ್ಣಾಗಿ ಉದುರುವ ಕಾಲಕ್ಕೆ ಕಳೆಗಿಡಗಳನ್ನು ಸವರುವುದು ಸಾಂಪ್ರದಾಯಿಕ ಕ್ರಮ. ಹಾಗೆ ಅಲ್ಲೂ ಅನುಕೂಲ ನೋಡಿಕೊಂಡು ಕೂಲಿಯಾಳೋ ಯಾಂತ್ರಿಕ ಕಟಾವೋ ವಿಷ ಸಿಂಚನವೋ ನಡೆಯಬೇಕಿತ್ತು. ಆದರೆ ಸಮ್ಮಿಲನರ ಕಣ್ಣಿಗೆ ಆ ಕಳೆಗಿಡಗಳನ್ನು ತಟ್ಟುತ್ತ, ಮೂಸುತ್ತ ವಿಹರಿಸುವ ಅಸಂಖ್ಯ ಚಿಟ್ಟೆಗಳು ಕಾಣಿಸಿತು. ಕಳವೆಹಳ್ಳಿಗರಂತೆ ಹಾಂ, ಚಿಟ್ಟೆಗಳಿರುತ್ತವೆ ಎಂಬ ಲಘುತ್ವಕ್ಕೆ ಬೀಳದೆ, ಬೆಳ್ವಾಯಿಯ ಚಿಟ್ಟೆಗಳು ಸಮ್ಮಿಲನರ ಬಗೆಗಣ್ಣನ್ನೂ ತುಂಬಿಕೊಂಡವು. ವಾಣಿಜ್ಯಬೆಳೆ ಅಥವಾ ಏಕಬೆಳೆ ಅಡಕೆಯ ಹಿತದಲ್ಲಿ ಜೀವವೈವಿಧ್ಯಕ್ಕಾಗುವ ಚಡಪಡಿಕೆಯನ್ನು ಮನಗಂಡರು. ಚಿತ್ತದಲ್ಲಿ ಕಟ್ಟಿದ್ದ ಕೋಶ ಬಿರಿಯಿತು. ಸಮ್ಮಿಲನ ಶೆಟ್ಟಿ ಅಡಿಕೆ ತೋಟದ ಕಳೆ ಕಳೆಯುವ ಕೃಶಿಕನಾಗಲಿಲ್ಲ. ಇನ್ನೂ ಹೆಚ್ಚು ಹೇಳುವುದಾದರೆ, ತನ್ನ ಹೊಟೆಲ್ ನಿಭಾವಣೆಯ ಕಲಿಕೆಗೆ ನ್ಯಾಯ ಕೊಡುವಂತೆ ಒತ್ತಿನ ಕಾಂತಾವರ ಅರಣ್ಯ, ಪಶ್ಚಿಮ ಘಟ್ಟದ ಸೌಲಭ್ಯಗಳನ್ನು ನಗದೀಕರಿಸುವ ಮಾರ್ಗವಾಗಿ ಹೋಂ ಸ್ಟೇ ಅಥವಾ ರಿಸಾರ್ಟ್ ಕಟ್ಟುವ ಕನಸಿಗನೂ ಆಗಲಿಲ್ಲ. ಇದ್ದದ್ದು ಸಾಲದೆಂಬಂತೆ ಇನ್ನಷ್ಟುಕಳೆಗಿಡಗಳನ್ನು ಕೃಷಿ ಮಾಡಿ ಚಿಟ್ಟೆ ಉದ್ಯಾನವನಕ್ಕೇ ತನ್ನ ತೋಟ, ಸಮಯವನ್ನು ತೆತ್ತುಕೊಳ್ಳಲು ತೊಡಗಿದರು. ಈಗ ಬೆಳ್ವಾಯಿಯಲ್ಲಿ ಕಳವೆಹಳ್ಳಿಯಂತೆ ಒಂದೇಮಾಲಿನ ಸಂತೆಯಲ್ಲ; ‘ಬಹುಸರಕುಗಳಮಳಿಗೆಯೇ ವಿಕಸಿಸುತ್ತಲಿದೆ!

ಚಿಟ್ಟೆ ಉದ್ಯಾನವನವೆಂದರೆ ಒಂದಷ್ಟು ಜಾಗಕ್ಕೆ ಸಣ್ಣ ಕಣ್ಣಿನ ಬಲೆಯಾವರಣ ಮಾಡಿ, ಒಳಗೆ ಎಲ್ಲೆಲ್ಲಿಂದಲೋ ಹಿಡಿದು ತಂದ ಒಂದಷ್ಟು ಚಿಟ್ಟೆ ತುಂಬುವುದಿರಬೇಕು ಎಂದು ಕಲ್ಪಿಸುವುದು ತಪ್ಪಾಗುತ್ತದೆ. ಕನಿಷ್ಠ ಹತ್ತಿಪ್ಪತ್ತು ವರ್ಷಗಳ ಆಯುಷ್ಯಭಾಗ್ಯವನ್ನು ಹೊಂದಿದ ಪ್ರಾಣಿ ಪಕ್ಷಿ ಉರಗಾದಿಗಳ ಸಂಗ್ರಹಕ್ರಮ ಚಿಟ್ಟೆಗಳ ವಿಚಾರದಲ್ಲಿ ಅಪ್ರಾಯೋಗಿಕ. ಮೊದಲೇ ಹೇಳಿದಂತೆ ಚಿಟ್ಟೆಗಳ ಆಯುರ್ಮಾನ ಸಣ್ಣದು. ಇನ್ನೂ ಮುಖ್ಯವಾಗಿ ಸ್ಪಷ್ಟ ಇಬ್ಭಾಗಗೊಂಡ ಅವುಗಳ ಜೀವನಚಕ್ರದಿಂದಾಗಿಬಂಧೀಖಾನೆ ಯೋಜನೆ ಅಪ್ರಾಯೋಗಿಕ ಮತ್ತು ನಿರಂತರ ಚಿಟ್ಟೆಗಳನ್ನು ಹೊರಗಿನಿಂದ ಹಿಡಿದು ತುಂಬುವ ವೃಥಾ ಖರ್ಚಿನ ದಾರಿಯಷ್ಟೇ ಆದೀತು.

ಜೀವವಿಕಾಸ ಪಥದಲ್ಲಿ ಅತ್ಯಾಧುನಿಕರಾದ ಮನುಷ್ಯರ ಮೆದುಳು, ಅರಿವುಗಳ ಸ್ಥಿತಿಗೆ ಹೋಲಿಸಿದರೆ ಚಿಟ್ಟೆಗಳು ತುಂಬಾ ಕೆಳಗಿವೆ ನಿಜ. ಆದರೆ ಯುಗಾಂತರಗಳ ರೂಢಿಬಲದಲ್ಲಿ ತಾಯಿ ಚಿಟ್ಟೆಗಳು ತಮ್ಮ ವರ್ಗಕ್ಕೆರುಚಿಸುವ ಹಸಿರನ್ನು ಗುರುತಿಸಿಯೇ ಮೊಟ್ಟೆಗಳನ್ನು ಅಂಟಿಸುತ್ತವೆ. ಒಂದೊಂದು ಜಾತಿಯ ಚಿಟ್ಟೆಗೂಆಹಾರ ಸಸ್ಯ ಪ್ರತ್ಯೇಕ ಮತ್ತು ನಿರ್ದುಷ್ಟ. ಅಂಥ ಪರಿಸರ ದಕ್ಕದೆ ಹೋದರೆ, ಆ ಚಿಟ್ಟೆಗಳು ಆಯುಷ್ಯ ಮುಗಿದು, ಅಳಿದೇ ಹೋಗುತ್ತವೆ. ಚಿಟ್ಟೆಗಳ ಮೊದಲ ಅವಸ್ಥೆಯಲ್ಲಿ ಮೊಟ್ಟೆಯೊಡೆದು ಬರುವ ಹರಿದಾಡುವ (ಕಂಬಳೀ) ಹುಳುವಿಗೆ ದೂರಸಂಚಾರ ಅಸಾಧ್ಯ, ಗಗನ ಕನಸುಗಳೇ ಇಲ್ಲ. ಅದಕ್ಕೆ ಸರಿಯಾಗಿ ಅವು ನಿಂತನೆಲವೇ ಆಹಾರದ ನೆಲೆಯಾಗುವ ಹಂಚಿಕೆ ತಾಯಿ ಚಿಟ್ಟೆಗಳು ಒದಗಿಸಿರುತ್ತವೆ!ಅದೊಂದು ಕಡು ಬೇಸಗೆ. ನಮ್ಮೊಂದು ಪುಟ್ಟ ಚಾರಣ ತಂಡ ವಾಲಿಕುಂಜದ ಪಶ್ಚಿಮ ಮೈ ಏರುತ್ತಿತ್ತು. ಕಾಲು ದಾರಿ, ಮುಚ್ಚಿಹೋಗುತ್ತಿದ್ದ ಜೀಪು ದಾರಿಗಳ ಹಾಸು ಹೊಕ್ಕಿನಲ್ಲಿ ಒಂದೆಡೆ ಮಳೆಗಾಲದ ಝರಿ, ಜಲಪಾತವೇ ಆಗುತ್ತಿದ್ದ ಆದರೆ ಸದ್ಯ ಒಣಗಿದ್ದ ತೊರೆಪಾತ್ರೆಯೊಂದನ್ನು ದಾಟುವುದಿತ್ತು. ಹರಿನೀರು ಬತ್ತಿ, ದಾರಿಯಂಚಿನ ಸಣ್ಣ ಮಡುವಿನಲ್ಲೂ ಗೊಸರು ಒಣಗುವ ಹಂತದಲ್ಲಿತ್ತು. ಹುಲ್ಲು ಗಿಡ ಕೊಳೆತೋ ಪ್ರಾಣಿ ಉಚ್ಛಿಷ್ಟಗಳು ಬೆರೆತೋ ತೆಳು ನೀರು ಸಪ್ತವರ್ಣಗಳ ಛಾಯೆ ಮಿನುಗಿಸುತ್ತಿತ್ತು. ಇತ್ತ ಒಣ ಬಿರಿ ನೆಲ, ಅತ್ತ ಬಗ್ಗಡ ಮಡು ನಡುವಣ ನೆಲದಲ್ಲೇನೋ ಸಣ್ಣ ಸಣ್ಣ ತೆಳುವಾದ ತರಗೆಲೆಗಳ ಹರಹು ನಿಮಿರಿ ನಿಂತಂತಿತ್ತು! ಆಗೀಗ ಒಂದೆರಡು ಗಾಳಿಗೆ ಅವು ಕಂಪಿಸಿದಂತೂ ಕೆಲವು ಹೀಗೆ ತೇಲಿ ಹೋದಂತೆಯೂ ಕಂಡಾಗಲೇ ನಮ್ಮ ಅರಿವಿಗೆ ಬಂತು - ಚಿಟ್ಟೆಗಳ ಬಹುದೊಡ್ಡ ಪಾನಗೋಷ್ಠಿ ನಡೆದಿದೆ! ನಮ್ಮ ಬರವನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಅವುರಸಪಾನಮತ್ತಿನಲ್ಲಿ ಮೈಮರೆತಂತೆ ಇದ್ದದ್ದು ಬಲು ಆಶ್ಚರ್ಯವನ್ನೇ ಉಂಟುಮಾಡಿತು. ಮಧುಪ, ಬಂಡುಣಿ ಎಂದು ಬಗೆತರದಲ್ಲಿ ಶ್ರೇಷ್ಠವಾದ ಮಕರಂದವನ್ನಷ್ಟೇ ಕವಿಸಮಯದಲ್ಲಿ ಅರಸುವ ಈ ಜೀವಿಗಳಿಲ್ಲಿ ಕೊಳೆತ ನೀರಿನ ಸೇವನೆಯಲ್ಲಿದ್ದವು. ನಾವು ಕುತೂಹಲಕ್ಕೆ ಒಂದೆರಡು ಬಾರಿ ಗಾಳಿ ಹಾಯಿಸಿ ಅವನ್ನೆಬ್ಬಿಸಿಯೂ ನೋಡಿದೆವು. ಎಲ್ಲ ಕ್ಷಣಿಕ. ಕಲಕಿದ ಜೇನು ಹುಟ್ಟಿನ ಝೇಂಕಾರವಿಲ್ಲ, ಹಕ್ಕಿ ಸಂದೋಹದ ಕಚಿಪಿಚಿಯೂ ಇಲ್ಲ. ನಿಶ್ಚಿತ ಹಾರಿದ್ದಲ್ಲ ಎನ್ನುವಷ್ಟು ಹಗುರ, ನಿರ್ದಿಷ್ಟ ಗುರಿಯಿಲ್ಲ ಎನ್ನುವಷ್ಟು ಚಂಚಲವಾಗಿ ಹಾಗೆ ಸುತ್ತಿ, ಹೀಗೆ ಸುಳಿದು ಮತ್ತೆ ನಿರ್ಭಯವಾಗಿ ಆ ಮಣ್ಣಿನ ಮೋಹಕ್ಕೆ ಮರಳುತ್ತಿದ್ದುವು. ಇನ್ನೊಮ್ಮೆ ಬೇರೆ ಯಾವುದೋ ಜಾಗದಲ್ಲಿ, ಅಕ್ಷರಶಃ ಯಾವುದೋ ಸತ್ತ ಪ್ರಾಣಿಯ ಅವಶೇಷವನ್ನು, ಬೇರೊಂದೇ ಬಗೆ ಚಿಟ್ಟೆಗಳು ಆಸ್ವಾದಿಸುತ್ತಿದ್ದುದನ್ನೂ ನಾನು ಗಮನಿಸಿದ್ದೆ. ಬಿಸಿಲೆ ದಾರಿಯಲ್ಲೊಮ್ಮೆ ಒಂದೆರಡು ಕಿಮೀ ಅಂತರದಲ್ಲಿ, ಹಲವು ನೂರರ ಗುಂಪುಗಳಲ್ಲಿ, ಅಲ್ಲಲ್ಲಿ ಕಂದು ಬಣ್ಣದ ಚಿಟ್ಟೆಗಳ ಸಂತೆ ನಮ್ಮ ಬರಿಗಣ್ಣಿಗೆ ಕಾಣುವಂತೆ, ಬೋಳು ದಾರಿಯ ನಡುವಣ ಅರೆಬರೆ ಜಲ್ಲಿ ಡಾಮರಿನ ಅವಶೇಷದಲ್ಲೂಮೇಜುವಾನಿ ನಡೆಸಿದ್ದವು.ವಾಸ್ತವದಲ್ಲಿ ಎಲ್ಲ ಚಿಟ್ಟೆಗಳೂ ಮಕರಂದಪ್ರಿಯ ಎನ್ನುವ ಕಲ್ಪನೆಯೇ ತಪ್ಪು ಎನ್ನುತ್ತದೆ ವಿಜ್ಞಾನ. (ಮಧುಪಾನಿ ಚಿಟ್ಟೆಗಳಲ್ಲೂ ಶರ್ಕರದ ಭಿನ್ನತೆ, ಹೂವಿನ ರಚನೆ, ಪರಾಗದ್ದೇ ರುಚಿಮಟ್ಟದವರೆಗೂ ಆಯ್ಕೆಗಳೂ ಚಿಟ್ಟೆ ವೈವಿಧ್ಯವೂ ಅಸಂಖ್ಯ ಮತ್ತು ನಿರ್ದುಷ್ಟ. ಅಂದರೆ ಎಲ್ಲಾ ಹೂವಿನ ಜೇನೂ ಎಲ್ಲಾ ಚಿಟ್ಟೆಗಳಿಗೆ ಬೇಕೂ ಇಲ್ಲ, ದಕ್ಕುವುದೂ ಇಲ್ಲ!) ಕಂಬಳೀ ಹುಳುವಿನ ಹಂತದಲ್ಲಿ ಏಕರೂಪಿನ ಆಹಾರಸೇವನೆಯಿಂದ ಉಂಟಾದ ಇತರ ಜೀವಾತುಗಳ ಕೊರತೆಯನ್ನು ತುಂಬಿಕೊಳ್ಳಲು ಒಂದೊಂದೂ ಜಾತಿಗೆ ವಿಶಿಷ್ಟವಾದ ಆಹಾರ ಸ್ವಭಾವಗಳು ಇವೆ. ಅದಕ್ಕನುಗುಣವಾಗಿ ಮೇಲೆ ಹೇಳಿದ ಎಲ್ಲ ವಿಚಿತ್ರಗಳು ಆಹಾರ ಸೇವನೆಗಳೇ! (ನೆನಪಿರಲಿ, ಬರಿಯ ಹಿಪ್ಪುನೇರಳೆ ತಿನ್ನಿಸಿ (ರೇಶ್ಮೆ-) ಕೋಶ ಕಟ್ಟಿಸುವವರೆಗಷ್ಟೇ ಸಲಹುವುದು ಕೇವಲಜೀವ ಉದ್ದಿಮೆ. ಆ ಚಿಟ್ಟೆಯ ವಾಸ್ತವ ಜೀವನ ಚಕ್ರದಲ್ಲಿ ಅದು ಅರ್ಧಕ್ಕಿಂತ ಕಡಿಮೆ!) ಅರಳಿದ ಚಿಟ್ಟೆಗೂ ಯುಕ್ತ ಹೂವೋ ಇನ್ನೊಂದೋ ಒದಗಿಸುವಲ್ಲಿದೆ ಸಮ್ಮಿಲನ ಶೆಟ್ಟಿಯವರ ಹೆಚ್ಚುಗಾರಿಕೆ.

[ಪ್ರಾಣಿಸಂಗ್ರಹಾಲಯ, ಉರಗೋದ್ಯಾನ, ಮೀನ್ಮನೆ ಇತ್ಯಾದಿ ಪ್ರಯೋಗಾಲಯ ಅಲ್ಲವಾದರೆ, ಕೇವಲ ಪ್ರಾಣಿಪ್ರೀತಿಯ ಅಣಕಗಳು. ದೊಡ್ಡ ಪ್ರಾಣಿಯೇ ಆದ ವನ್ಯ ಹುಲಿಯ ಕುರಿತಾದರೂ ಉಲ್ಲಾಸ ಕಾರಂತರಂಥ ವಿಜ್ಞಾನಿಗಳು ಹೇಳುವುದು ಇದನ್ನೇ - ಪ್ರಾಥಮಿಕವಾಗಿ ಜೀವಪರಿಸರವನ್ನು ಪೋಷಿಸಿ, ರಕ್ಷಿಸಿ; ಹುಲಿ ಬದುಕಿಕೊಳ್ಳುತ್ತದೆ. ಬೇರೆ ಬೇರೆ ಜೀವವಿಜ್ಞಾನಿಗಳು ಅಧ್ಯಯನಕ್ಕೆ ತೊಡಗಿಕೊಂಡ ವಿಷಯಗಳಲ್ಲಿ ಹುಲಿ, ಆನೆ, ಹಾವು, ಹಕ್ಕಿ, ಕಪ್ಪೆ (ಸಸ್ಯಗಳೂ ಸೇರಿದಂತೆ) ಇತ್ಯಾದಿ ಭಿನ್ನತೆ ಇರಬಹುದು. ಆದರೆ ಅಂತಿಮ ಫಲ ನಿಸ್ಸಂದೇಹವಾಗಿ ಜೀವವೈವಿಧ್ಯವನ್ನು ಪೋಷಿಸುವ ಪರಿಸರವೇ ಆಗಿರುತ್ತದೆ. ಹೇಳಿಯೂ ಹೇಳದೆಯೂ ಹುಲಿ, ಆನೆ, ಹಕ್ಕಿ, ಹಾವು, ಕಪ್ಪೆ ಮುಂತಾದವು ಬರಿಯ ಸಂಕೇತಗಳು ಮಾತ್ರ. ಅಪಕ್ವರು ಅಪಪ್ರಚಾರ ನಡೆಸುವಂತೆ ಯಾವ ಜೀವವಿಜ್ಞಾನಿಯೂಹುಲ್ಲೆ ಹೊಡೆದು ಹುಲಿ ಸಾಕುವ ಪರ ಇಲ್ಲ. ಜನ ಅಥವಾ ಸಮಾಜ ವಿರೋಧಿ ಖಂಡಿತಾ ಅಲ್ಲ!]

ಮೂಡಬಿದ್ರೆ-ಕಾರ್ಕಳ ರಸ್ತೆಯಲ್ಲಿರುವುದಕ್ಕೆ ತುಸು ವೈಭವೀಕೃತ ಹಳ್ಳಿ - ಬೆಳ್ವಾಯಿ. ಅಲ್ಲಿ ಎಡಕ್ಕೆ (ಪಶ್ಚಿಮಕ್ಕೆ) ಮೊದಲು ಡಾಮರು ಸಪುರ ದಾರಿಯಾಗಿ ಮತ್ತೆ ಕಚ್ಚಾ ಮಣ್ಣುದಾರಿಯಾಗಿ ಒಟ್ಟಾರೆ ಸುಮಾರು ಮುಕ್ಕಾಲು ಕಿಮೀ ಅಂತರದಲ್ಲಿದೆ ಸಮ್ಮಿಲನ ಶೆಟ್ಟಿ ಚಿಟ್ಟೆ ಉದ್ಯಾನವನ. ಸಣ್ಣ ಒಂದೆರಡು ಕವಲುದಾರಿಗಳಿದ್ದರೂ ಮಾರ್ಗಸೂಚಕ ಚಿಹ್ನೆಗಳನ್ನು ಆ ದಿನದಂದು ಸ್ಪಷ್ಟವಾಗಿ ಹಾಕಿದ್ದರು. ಆದರೆ ಮಳೆರಾಯನ ಕೃಪೆ ತುಸು ಹೆಚ್ಚೇ ಇದ್ದುದರಿಂದ ದಾರಿಯ ಗೊಸರಿನಲ್ಲಿ ಸಿಕ್ಕಿಬೀಳುವ ಹೆದರಿಕೆಗೂ ಕೊನೆಯಲ್ಲಿ ತಂಗಲು ಅಂಗಳವಿರದೆಂಬ ತಿಳಿವಿನಲ್ಲೂ ಅಲ್ಲಲ್ಲಿದ್ದ ತೆರವಿನ ಜಾಗಗಳಲ್ಲಿ ಬರುತ್ತಿದ್ದವರ ವಾಹನಗಳು ತಂಗುತ್ತಿದ್ದುವು. ಸಾಂಪ್ರದಾಯಿಕ ಉರುಬಲು (ಉರುವೇಲು/ ತಡಮೆ) ದಾಟಿದ ಮೇಲೆ ಸಿಗುವ ಪುಟ್ಟ ಕರ್ಮರದ ತೋಪಿನ ನಡುವೆ ಸಂಕೋಚದಲ್ಲೇ ಬಳುಕಿ ಸಾಗುವ ದಾರಿ ಅಷ್ಟೇ ವಿನಯಿಯಾದ ಪುಟ್ಟ ಹಳ್ಳಿಮನೆಯನ್ನು ತೋರುತ್ತದೆ.

ಚಿಟ್ಟೆ ಎಂದೊಡನೇ ಭರ್ಜರಿ (ಅಲಂಕಾರಿಕ?) ಉದ್ಯಾನ ನಿರೀಕ್ಷಿಸಿದ್ದರೆ ಅದು ಪ್ರಾಕೃತಿಕ ಸತ್ಯಕ್ಕೆ ದೂರವೇ ಆಗುತ್ತಿತ್ತು! ಬದಲಿಗೆ ಅಲ್ಲಿ ಸಾಮಾನ್ಯವಾಗಿ ಕೃಷಿಭೂಮಿಯಲ್ಲಿ ಕಳೆಗಿಡಗಳೆಂದೇ ಗುರುತಿಸಲಾಗುವ ಅಮೃತಬಳ್ಳಿ, ಚಗತೆ, ತುಂಬೆ, ಲಂಟಾನ ಮುಂತಾದವೇ ಖಾಲಿ ಜಾಗಗಳನ್ನೆಲ್ಲ ಆವರಿಸಿದಂತಿತ್ತು. ಮಳೆಯ ವಾತಾವರಣ ಇನ್ನೂ ಬಿರಿಯದಿದ್ದುದಕ್ಕೆ ವಿರಳವಾದರೂ ಕೆಲವು ಚಿಟ್ಟೆಗಳು ಸಹಜ ವಿಹಾರದಲ್ಲಿದ್ದುವು. ಸ್ವಲ್ಪ ಆಚೆ ಒಂದು ಕೊಟ್ಟಿಗೆಯ ಹೊರಗೋಡೆಯಲ್ಲೊಂದು ಚೋದ್ಯ. ಅಲ್ಲಿ ಹಿಂದಿನ ರಾತ್ರಿಗಷ್ಟೇ ತತ್ಕಾಲೀನವಾಗಿ ಮೇಲೊಂದು ಪ್ರಖರ ದೀಪ ಜೋಡಿಸಿ, ಅದರ ಕೆಳಗೆ ಒಂದು ಶುಭ್ರ ಬಿಳೀಪಂಚೆಯನ್ನು ಬಿಡಿಸಿ ಕಟ್ಟಿದ್ದರು. ಆ ಬಟ್ಟೆಯ ಮೇಲೆ ಆಶ್ಚರ್ಯಕರವಾಗಿ ಹಲವು ನಮೂನೆಯ ಪತಂಗಗಳು, ಹಾತೆಗಳು (ಒಂದೇ ಶಬ್ದದಲ್ಲಿ ಹೇಳುವುದಾದರೆ ಪತಂಗಗಳು ಚಿಟ್ಟೆಗಳ ನಿಶಾಚರಿ-ದಾಯಾದಿಗಳು) ತಂಗಿದ್ದವು. ಅದೊಂದು ಸಣ್ಣ ಪ್ರಾತ್ಯಕ್ಷಿಕೆ ಮಾತ್ರ.

ಹೊತ್ತು ಬಂದಂತೆ ಅವು ಹಾರಿಹೋಗಲು ಸ್ವತಂತ್ರವಿದ್ದವು.

ಕಥಾನಾಯಕ ಸಮ್ಮಿಲನ ಶೆಟ್ಟಿಯವರೇ ಬಂದವರನ್ನು ಎದುರುಗೊಳ್ಳುತ್ತಿದ್ದರು. ಚಿಟ್ಟೆಗಳಿಗೆ ಒಗ್ಗುವ ಋತುಮಾನ ಮತ್ತು ತುಸು ಔಪಚಾರಿಕತೆಗೆ ಸೇರುವ ಜನರ ಅನುಕೂಲಕ್ಕಾಗಿ ಮನೆಗಿದ್ದ ಪುಟ್ಟ ಅಂಗಳಕ್ಕೇ ಭದ್ರ ತಗಡಿನ ಮಾಡು ಮಾಡಿ ಸರಳವಾಗಿ ಸಭಾ ಸಿದ್ಧತೆಗಳನ್ನು ನಡೆಸಿದ್ದರು. ಯೋಚನೆಗೆ ಅವಕಾಶವಿಲ್ಲದಂತೆ ಮುಂಬೈ ದಿಲ್ಲಿಯ ದೂರಗಳಿಂದಲೂ ಕರ್ನಾಟಕದ ವಿವಿಧ ಮೂಲೆಗಳಿಂದಲೂ ಪಕ್ಕಾ ಪಾತರಗಿತ್ತಿ ಮಿತ್ರರು ಬಂದು, ಅಂಗಳ ತುಂಬಿ ಗಿಜಿಗುಡುತ್ತಿದ್ದರು. ರುಚಿಯಾದ ಉಪಾಹಾರ, ಅಚ್ಚುಕಟ್ಟಾದ ಸಭಾಕಲಾಪಗಳು ಮನಸ್ಸನ್ನೂ ತುಂಬಿದವು. ಭಾರತದಲ್ಲಿ ಬಹುಮುಖೀ ವನ್ಯಕಲಾಪಗಳಿಗೆ ತೆತ್ತುಕೊಂಡ ಮಹಾನ್ ಸಂಸ್ಥೆ ಬಾಂಬೇ ನ್ಯಾಚುರಲ್ ಹಿಸ್ಟರಿ ಸೊಸಾಯಿಟಿಯ (ಬಿಯೆನ್ನೆಚ್ಚೆಸ್) ಚಿಟ್ಟೆ ಪರಿಣತ ಐಸಾಕ್ ಡೇವಿಡ್ ಕೇಹಿಮ್ಕರ್ ಮತ್ತು ಶುಭಲಕ್ಷ್ಮಿ ವೈಲೂರು ಇವರ ಶುಭಾಕಾಂಕ್ಷೆಗಳ ನುಡಿ ಹಿತವಾಗಿತ್ತು. ಪ್ರಾದೇಶಿಕವಾಗಿ (ಪೂರ್ಣಪ್ರಜ್ಞ ಕಾಲೇಜು, ಉಡುಪಿಯಿಂದ ನಿವೃತ್ತ) ಕಾಲೇಜು ಪಾಠಪಟ್ಟಿಯನ್ನು ಮೀರಿ ಯಾವುದೇ ಪ್ರಾಣಿತಜ್ಞತೆಗೆ ಸದಾ ಸರಳವಾಗಿ ನಿಖರವಾಗಿ ಸಾರ್ವಜನಿಕರಿಗೂ ಮಾಧ್ಯಮಗಳಿಗೂ ಒದಗುತ್ತಲೇ ಬಂದಿರುವ ಡಾ| ಎನ್.ಎ ಮಧ್ಯಸ್ಥರ ಉಪಸ್ಥಿತಿ ಹಾಗೂ ಶುಭಾಶಯ ತುಂಬ ಅರ್ಥಪೂರ್ಣ

ಇನ್ನೋರ್ವ ವನ್ಯಪ್ರಿಯ ಡಾ| ಅರುಣಾಚಲಂ ಕುಮಾರ್ ಕೂಡಾ ವೇದಿಕೆಯ ಮೇಲಿನ ಗಣ್ಯತೆಗೆ ಒಪ್ಪಕೊಟ್ಟರು. ಆದರೆ...

ಜೀವವೈವಿಧ್ಯದ ಮಹತ್ವವನ್ನು ಇಷ್ಟೊಂದು ಸೂಕ್ಷ್ಮದಲ್ಲಿ ನೋಡುವ ಸಭೆಗೆ ಬಂದಿದ್ದ ಏಕೈಕ ಜನಪ್ರತಿನಿಧಿ - ನಳಿನ್ ಕುಮಾರ್ ಕಟೀಲು, ಪಕ್ಷ-ರಾಜಕಾರಣವನ್ನು ಮೀರಿ ಮಾತಾಡಲು ಅಸಮರ್ಥರಾದದ್ದು ವಿಷಾದನೀಯ. ಗೋಮಾತೆಯ ರಕ್ಷಣೆಯ ಮಾತು ಇಲ್ಲಿ ತೀರಾ ಅಸ್ಥಾನಿಕ. ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರವನ್ನು ಪ್ರತಿ ಹೆಜ್ಜೆಯಲ್ಲೂ ಸಮರ್ಥಿಸಿಕೊಂಡು, ಆಗ ಮಾಡಿಸಿದ ಪಕ್ಷ, ಸದ್ಯೋಜಾತ ನಿಡ್ಡೋಡಿ ಸಮಸ್ಯೆಯನ್ನು ಪ್ರಸ್ತಾವಿಸಿದ್ದು ಹಾಸ್ಯಾಸ್ಪದ. (ನಿಡ್ಡೋಡಿ ಯೋಜನೆ ಖಂಡಿತವಾಗಿಯೂ ಸಮರ್ಥನೀಯವಲ್ಲ) ಹಾಗೇ ನೇತ್ರಾವತಿ ನದಿ ತಿರುಗಿಸುವ ಯೋಜನೆಯನ್ನು ಸಮರ್ಪಕವಾಗಿ ತೂಗಿ, ತಿರಸ್ಕರಿಸುವ ಅಧಿಕಾರವಿದ್ದಾಗಸಮಯ ಕಳೆದು, ಅಧಿಕಾರವಿಲ್ಲದ ಇಂದು, ನಿರ್ಣಾಯಕ ಕೂಟಗಳಿಂದ (ಸಂಸತ್ತು ಅಥವಾ ವಿಧಾಯನಸೌಧ) ಹೊರಗೆ ಹುಸಿ ಹೇಳಿಕೆಗಳನ್ನು (ನೇತ್ರಾವತಿಯಲ್ಲ - ಎತ್ತಿನಹೊಳೆ, ನೀರಾವರಿಗಲ್ಲ - ಕುಡಿಯಲು, ನದಿಗೇನೂ ಬಾಧಕವಲ್ಲ - ಪರಿಸರಸ್ನೇಹಿ ಇತ್ಯಾದಿ) ಕೊಟ್ಟದ್ದು ಚಿಟ್ಟೆ ಉದ್ಯಾನವನದ ಪರಿಸರಕ್ಕೆ ಹೊಂದಲೇ ಇಲ್ಲ. ಚಿಟ್ಟೇ ಉದ್ಯಾನವನ ಮತ್ತು ಸಮ್ಮಿಲನ ಶೆಟ್ಟಿಯವರ ದೂರಗಾಮೀ ಯೋಜನೆಗಳಿಗೆ ಸರಕಾರದ ಸಹಕಾರ ಅನಿವಾರ್ಯ ಎಂಬ ದಾಕ್ಷಿಣ್ಯಕ್ಕಷ್ಟೇ ವಿಚಾರವಂತ ಸಭೆ ಅವರ ಮಾತನ್ನು ಸಹಿಸಿಕೊಂಡಿರಬಹುದು.

ಸಭಾಕಲಾಪಗಳ ಮುಕ್ತಾಯದೊಡನೆ ಉದ್ಯಾನವನದ ಉದ್ದಕ್ಕೊಂದು ವೀಕ್ಷಣಾ ನಡಿಗೆಯನ್ನೇ ಸಂಘಟಕರು ಯೋಜಿಸಿದ್ದರು. ಆದರೆ ಮಳೆ ಅವಕಾಶವನ್ನೇ ಕೊಡದಿದ್ದುದು ನಮ್ಮ ದುರದೃಷ್ಟ. ಸಮ್ಮಿಲನ ಶೆಟ್ಟಿ ಇದುವರೆಗೆ ಚಿತ್ರಗ್ರಹಣದಲ್ಲಿ ದಾಖಲಿಸಿದ ಚಿಟ್ಟೆಗಳಷ್ಟೂ ಸುಂದರ ಚೌಕಟ್ಟುಗಳೊಡನೆ ಸಭಾ ಮಂದಿರದೊಳಗೇ ಪ್ರದರ್ಶನಕ್ಕಿತ್ತು. ಪ್ರದರ್ಶಿಕೆಗಳ ಇನ್ನಷ್ಟು ಪರಿಣಾಮಕಾರೀ ದರ್ಶನವನ್ನು ಸಭಾಕಲಾಪದ ಅಂಗವಾಗಿಯೇ ಸ್ಲೈಡ್ ಪ್ರದರ್ಶನದ ಮೂಲಕವೂ ಕೊಟ್ಟರು. ಅದರ ಉದ್ದಕ್ಕೂ ಸಮ್ಮಿಲನ ಶೆಟ್ಟಿ ಅನೌಪಚಾರಿಕವಾಗಿ, ಆದರೆ ನಿಖರವಾಗಿ ವೀಕ್ಷಕ ವಿವರಣೆ ಕೊಟ್ಟದ್ದಂತೂ ಅವರ ಸಾಧನೆಗೆ ಹಿಡಿದ ಕನ್ನಡಿಯಂತೇ ಶೋಭಿಸಿತು. ಸಭೆಗೆ ಬರಲಾಗದವರಿಗೆ, ಮುಂದೆಯೂ ಬೆಳ್ವಾಯಿಯಾತ್ರೆ ಮಾಡಲಾಗದವರಿಗೆ, ಉದ್ಯಾನವನದ ಬೆಳವಣಿಗೆ ಮತ್ತು ಮಾಹಿತಿ ಪ್ರಸಾರಕ್ಕೂ ಒದಗುವಂತೆ ಸಭೆಯಲ್ಲಿ ಔಪಚಾರಿಕವಾಗಿ ಲೋಕಾರ್ಪಣೆಗೊಂಡ ಜಾಲತಾಣವಂತೂ ಸಮೃದ್ಧವಾಗಿದೆ ಮತ್ತು ಸದಾ ಪ್ರೇರಕವಾಗಿಯೂ ಒದಗುವ ಎಲ್ಲ ಸಲ್ಲಕ್ಷಣಗಳನ್ನು ಕಾಣಿಸುತ್ತದೆ.
ಲೇಖನಕ್ಕಾಗಿ ಸಮ್ಮಿಲನರಲ್ಲಿರುವ ಸಸ್ಯ ವೈವಿಧ್ಯದ ಕೆಲವು ಹೆಸರು ಮತ್ತು ಅವುಗಳ ಪೋಷಣೆಯ ಬಗ್ಗೆ ಕೇಳಿದ್ದಕ್ಕೆ ಅವರ ಉತ್ತರ ತಡವಾಗಿ ಬಂತು: ತಾವು ಯಾವುದೇ ರಾಸಾಯನಿಕ ಕೀಟನಾಶಕವಾಗಲೀ ಗೊಬ್ಬರವಾಗಲೀ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೆ ಸಹಜವಾಗಿ ಬರುವ, ಹಾಗಾಗಿ ಉಳಿಸಿಕೊಂಡು ಚಿಟ್ಟೆಗಳಿಗೆ ಅನುಕೂಲಿಸುವ ಗಿಡಗಳ ಕುರಿತಂತೆ ಅವರು ಕೊಟ್ಟ ತುಳು ಹೆಸರ ಪಟ್ಟಿಯನ್ನು ನಾನು ಯಥಾನುಶಕ್ತಿ ಕನ್ನಡಿಸಿ ಕೆಳಗೆ ಕೊಟ್ಟಿದ್ದೇನೆ.  ಈಸ(ಶ್ವ?)ರ ಬೇರು, ಚಕ್ರಣಿಕೆ, ಆರತಿಕೈ, ಎಕ್ಕಮಾಲೆ, ಕರ್ಮರ, ಕೇಪುಳೆ, ಕಡೀರ್ದ, ಅರಿಶಿನ, ಶುಂಠಿ, ಸಂಪಿಗೆ, ಅಶೋಕ, ಐರೊಳೆ, ಮಾವು, ಬೇವು, ಇಜಿನು, ಲಿಂಬೆ, ಅರೆ ಮಾಫಲ, ಮಾಫಲ, ಕವುಂಟೆ, ಪೆತ್ತ ತೊಜಂಕ್, ದಾಸವಾಳ, ಭತ್ತ, ವಿವಿಧ ಹುಲ್ಲುಗಳು, ಬಿದಿರು, ಅಮೃತ ಬಳ್ಳಿ ಇತ್ಯಾದಿ.
ಸಮ್ಮಿಲನ ಶೆಟ್ಟರಿಗೆ ಹಾರ್ದಿಕ ಅಭಿನಂದನೆಗಳು, ಶುಭ ಹಾರೈಕೆಗಳು.

(ವಿ.ಸೂ: ಉದ್ಯಾನವನದ ಸಾರ್ವಜನಿಕ ಮುಕ್ತತೆ, ದಾರಿ ಇತ್ಯಾದಿ ವಿವರಗಳಿಗೆ ಅವಶ್ಯ ಅವರ ಜಾಲತಾಣ ನೋಡಿ)

9 comments:

 1. ಕನ್ನಡಿಗರಿಗೆ ಮತ್ತೊಬ್ಬ ಚಿಟ್ಟಾಣಿಯವರನ್ನು ಪರಿಚಯಿಸಿದ ನಿಮಗೆ ಹಾರ್ದಿಕ ಅಭಿನಂದನೆಗಳು!

  ReplyDelete
 2. The video gave the real feeling..

  ReplyDelete
 3. ಸಮ್ಮಿಲನ ಶೆಟ್ಟಿ ಮತ್ತವರ ಚಿಟ್ಟೆ ಉದ್ಯಾನವನದ ಉದ್ಘಾಟನೆಯ ಬಗ್ಗೆ ಬರೆದ ಈ ಲೇಖನ ಅವರ ಎಲ್ಲ ಸಾದನೆಗಳ ಚಿಕ್ಕ ಚೊಕ್ಕ ಪರಿಚಯ ಕೊಟ್ಟಿತು. ಅವರ ಜಾಲತಾಣ ಫೇಸ್ಬುಕ್ ಬಿಟ್ಟು ಇಲ್ಲೂ ಇದೆ - Sammilan Shetty's Butterfly Park

  ReplyDelete
 4. Sammilanara chittepreethi manakke mudaneedithu. Hridyavaada vivarane needida Ashoka vardhanarige vandan.
  e. Mumbaiya ee Ghatkopar poorva, pashchimadalli kalederadu vaaragalinda putta kambali hulagala [ ooralliruvanthadalla; thumba chikkavu ] datta aakramanada kaata. Municipality maddu spray maadi eega kadime aagide. Ellinda banduvo tiliyadu.
  Hindomme snails bandanthe.
  - Shyamala.

  ReplyDelete
 5. parisara sammilanakke abhinandanegalu :)

  ReplyDelete
 6. Hi Ashoka Vardhana sir, Paataragitti priyara Samilana Lekhanada anubhava tumba channagittu...

  ReplyDelete
 7. ತಿಳಿದು ತುಂಬಾ ಸಂತೋಷವಾಯಿತು . ಲೇಖನಕ್ಕೆ ಧನ್ಯವಾದಗಳು .. ಡಾ . ಪಿ.ಕೆ.ಪೈ

  ReplyDelete
 8. sir namasthe,
  baraha odide, namma urina chitte vishesha nenapige kratajnategalu

  -kalave

  ReplyDelete