20 August 2013

ಬಂಡೆ ಜಿಗಿತ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಹದಿನೆಂಟು
ಅಧ್ಯಾಯ ಮೂವತ್ತೈದು

ಬಂಡೆಯ ಆಳ ಎಷ್ಟುಂಟೋ ಅದರ ಮೂರರಷ್ಟು ಉದ್ದದ ವಿಶಿಷ್ಟ ನೈಲಾನ್ ಹಗ್ಗವೂ (ರ‍್ಯಾಪ್ಲಿಂಗ್ ಹಗ್ಗ ಎಂದು ಇದರ ಹೆಸರು) ಸುಮಾರು ಒಂದೂವರೆಯಷ್ಟು ಉದ್ದದ ಇನ್ನೊಂದು ವಿಧದ ನೇಯ್ಗೆಯ ನೈಲಾನ್ ಹಗ್ಗವೂ (ಬಿಲೇ ಹಗ್ಗ) ಅತಿ ಮುಖ್ಯ ಆವಶ್ಯಕತೆಗಳು. ಉಳಿದವು ಲೋಹದ ಕೊಣಿಕೆಗಳು (ಕೆರಾಬಿನರ್ಸ್), ಹಗ್ಗದ ಕೊನೆಯಿಲ್ಲದ ಸಣ್ಣ ಸುರುಳಿಗಳು - ಸ್ಲಿಂಗ್ಸ್, ಕೈಗವಸುಗಳು, ಪಿಟನ್ಸ್ (ಒಂದು ಕೊನೆಯಲ್ಲಿ ಹಗ್ಗ ಸರಿಯಲು ತೂತಿರುವ ವಿವಿಧಾಕಾರದ ಲೋಹದ ಬಂಡೆಮೊಳೆಗಳು. ಇವನ್ನು ಬಂಡೆಯ ಬಿರುಕಿನೊಳಗೆ ಹೊಡೆದು ಭದ್ರವಾಗಿ ನೆಲೆಗೊಳಿಸಬಹುದು; ಹಲವಾರು ಪಿಟನ್ನುಗಳ ತೂತಗಳಿಗಾಗಿ ಹಾಯಿಸಿ ಕಟ್ಟಿದ ನೈಲಾನ್ ಹಗ್ಗ ಶಿಲಾರೋಹಿಯ ಯಾವುದೇ ಚಟುವಟಿಕೆಗೆ ಭದ್ರ ಆಧಾರವಾಗುವುದು) ಮತ್ತು ಸುತ್ತಿಗೆಗಳು. ನೈಲಾನ್ ಹಗ್ಗ ದೊರೆಯದಿದ್ದರೆ ಹತ್ತಿ ಹಗ್ಗವನ್ನು ಉಪಯೋಗಿಸಬಹುದು. ಆದರೆ ಇಲ್ಲಿ ಹಗ್ಗ ಕಡಿದುಹೋಗಿ ಜಿಗಿಯುವಾತ ಗಾಸಿಗೊಳ್ಳುವ ಅಪಾಯ ಬಲು ಹೆಚ್ಚು.  ರ‍್ಯಾಪ್ಲಿಂಗ್ ಹಗ್ಗದ ಎರಡು ಕೊನೆಗಳನ್ನೂ ಸೇರಿಸಿ ಹಿಡಿದು ಅದನ್ನು ಸಮಭಾಗ ಮಾಡಬೇಕು. ಎರಡು ಕೊನೆಗಳನ್ನು ಬಂಡೆಯ ಮೇಲಿನಿಂದ ಕೆಳಕ್ಕೆ  ಇಳಿಬಿಡಬೇಕು. ಹಗ್ಗದ U ಆಕಾರದ ಕೇಂದ್ರವನ್ನು ಬಂಡೆಯ ಅಂಚಿನಿಂದ ಮೇಲಕ್ಕಿರುವ ಭದ್ರ ಆಧಾರಕ್ಕೆ ಕಟ್ಟಬೇಕು. ಇದು ಅಲ್ಲಿರುವ ಭಾರೀ ತುಂಡು ಬಂಡೆಯೋ ಮರದ ಕಾಂಡವೋ ಪಿಟನ್ನುಗಳ ಸರಣಿಯೋ ಇರಬಹುದು, ಅಂತೂ ಮೇಲಿನ ಹಿಡಿತ ಅತಿ ಭದ್ರವಾಗಿರತಕ್ಕದ್ದು. ಕೆಳಕ್ಕೆ ಚಾಚಿದ ಖಾಲಿ ಕೊನೆಗಳು ಬಂಡೆಯ ಬುಡದಿಂದ ಹತ್ತಡಿಯಾದರೂ ಮುಂದೆ ಹೋಗುವಷ್ಟು ಉದ್ದವಿರಬೇಕು. ರ‍್ಯಾಪ್ಲಿಂಗ್ ಹಗ್ಗ ಗಟ್ಟಿಯಾಗಿ ಕಟ್ಟಲ್ಪಟ್ಟಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಅದರ ಒಂದೊಂದು ಕೊನೆಯನ್ನೂ ನಾಲ್ಕೈದು ಮಂದಿ ಗಟ್ಟಿಯಾಗಿ ಹಿಡಿದು ಒಟ್ಟಿಗೆ ಹಲವಾರು ಸಲ ಜಗ್ಗಬೇಕು. ಹಗ್ಗದ ಭದ್ರತೆಯೂ ಇದರಿಂದ ಪರೀಕ್ಷೆಗೊಳಪಡುವುದು. ಇಷ್ಟಾದ ಮೆಲೆ ರ‍್ಯಾಪಲ್ ಮಾಡುವಾತ (ಅಂದರೆ ಜಿಗಿವಾತ) ಬಂಡೆಯ ಮೇಲೆ ಮುಂದಿನ ಹೆಜ್ಜೆ ಇಡುತ್ತಾನೆ. ಅವನು ಷರಾಯಿ ಧರಿಸಿರುವುದು ಉತ್ತಮ. ಮೈಮೇಲೆ ಜೆರ್ಸಿ ಪುಲ್ಲೋವರ್ ಅಥವಾ ಪೂರ್ಣ ತೋಳಿನ ಷರಟನ್ನು ತೊಟ್ಟುಕೊಂಡಿರಬೇಕು. ಕೈಗಳಿಗೆ ಗವಸು, ಸ್ಲಿಂಗನ್ನು ಕಾಲುಗಳ ಹೊರಗಾಗಿ ಸರಿಸಿ ಸೊಂಟದೆಡೆಗೆ ತರುವನು, ಹಿಂದಿನ ಭಾಗವನ್ನು ಕೆಳಗಿನಿಂದ ಮುಂದಕ್ಕೆ ತಂದು, ಮುಂದಿನ ಭಾಗಕ್ಕೆ ಜೋಡಿಸಿ ಹಿಡಿದು ಕೆರಾಬಿನಾರಿನಿಂದ ಅವನ್ನು ಪೋಣಿಸುವನು. ರ‍್ಯಾಪ್ಲಿಂಗ್ ಹಗ್ಗವನ್ನೂ ಇದೇ ಕೆರಾಬಿನಾರಿಗೆ ಪೋಣಿಸಿ, ಇಳಿವಾತನ ಎಡಮಗ್ಗುಲಿಗಾಗಿ ಕೆಳಗೆ ಬಿಡಲಾಗುವುದು. ಅವನ ಸೊಂಟಕ್ಕೆ ಪ್ರತ್ಯೇಕ ಇನ್ನೊಂದು ಹಗ್ಗವನ್ನು (ಬಿಲೇ ಹಗ್ಗ) ಸುತ್ತಿ ಕಟ್ಟಿ ಅದನ್ನು ಬಂಡೆಯ ಮೇಲೆ ಭದ್ರವಾಗಿ ಕುಳಿತುಕೊಂಡ ‘ರಕ್ಷಕ (ಬಿಲೇ ಮ್ಯಾನ್) ಹಿಡಿದುಕೊಳ್ಳುತ್ತಾನೆ. ಇಳಿವಾತ ರ‍್ಯಾಪ್ಲಿಂಗ್ ಹಗ್ಗವನ್ನು ಕೆರಾಬಿನಾರಿನ ಮುಂದೆ ಬಲಗೈಯಲ್ಲೂ ಹಿಂದೆ ಎಡಗೈಯಲ್ಲೂ ಹಿಡಿದುಕೊಂಡು, ತನ್ನ ಕೊಳ್ಳ ಜಿಗಿತವನ್ನು ನಿಯಂತ್ರಿಸಿಕೊಳ್ಳುತ್ತಾನೆ. ಆತ ಇಳಿಯುತ್ತ ಹೋದಂತೆ ಬಿಲೇಕಾರನು ಆ ಹಗ್ಗವನ್ನು ಕ್ರಮೇಣ ಸಡಿಲವಾಗಿ ಬಿಡುತ್ತ ಹೋಗುತ್ತಾನೆ. ಇಳಿವಾತ ಹತೋಟಿ ತಪ್ಪಿ ಕಂಗಾಲಾದರೆ ಮಾತ್ರ ಬಿಲೇಕಾರ ಹಗ್ಗ ಬಿಗಿಹಿಡಿದು ಸಮತೋಲನ ಕಾಯ್ದಿಟ್ಟುಕೊಳ್ಳಲು ಸಹಾಯ ಮಾಡುತ್ತಾನೆ. ಇಳಿವಾತ ಗಾಬರಿಯಿಂದ ಏನೂ ಮಾಡಲಾರದವನಾಗಿ ಪ್ರಪಾತದ ಮಧ್ಯೆ ನೇಲುತ್ತಿದ್ದರೆ ಬಿಲೇಕಾರ ಹಗ್ಗವನ್ನು ಬಲು ಜಾಗರೂಕತೆಯಿಂದ ಸಡಿಲಗೊಳಿಸುತ್ತ ಗುಂಡುಕಲ್ಲನ್ನು ಬಾವಿಗಿಳಿಸಿದಂತೆ ಅವನನ್ನು ಬಂಡೆಯ ತಳಕ್ಕೆ ಇಳಿಸುತ್ತಾನೆ. ಜಿಗಿವಾತನ ಪ್ರಾಣ ರಕ್ಷಿಸಲು ಮತ್ತು ಅವನಿಗೆ ಧೈರ್ಯ ನೀಡಲು ಬಿಲೇ ಹಗ್ಗ ಅವಶ್ಯ. ಇದನ್ನು ನಿಯಂತ್ರಿಸುವವರ ಪಾತ್ರ ಬಲು ಮುಖ್ಯ. ಅವಗಣನೆಯಲ್ಲಿ, ಜಿಗಿವಾತ ಪ್ರಪಾತದ ತಳಕ್ಕೆ ಧೊಪ್ಪನೆ ಬಿದ್ದು ಪ್ರಾಣಾಪಾಯವೂ ಸಂಭವಿಸಬಹುದು. ಜೊತೆಯಲ್ಲಿಯೇ ಬಿಲೇಕಾರನನ್ನು ಹಗ್ಗ ಜಗ್ಗಿ ಬಂಡೆಯ ತಳಕ್ಕೆ ಕೆಡೆದೂ ಪ್ರಾಣಾಪಾಯ ಸಂಭವಿಸಬಹುದು.


ಹೀಗೆ ಸಕಲ ರಕ್ಷಣೆಗಳಿಂದ ಕೂಡಿ ಜಿಗಿವಾತ ಪ್ರಪಾತದ ಅಂಚಿಗೆ ಹಿಂದೆ ಹಿಂದೆ ನಡೆದು ಬರುವನು - ದುರ್ಯೋಧನ ವೈಶಂಪಾಯನ ಸರೋವರ ಹೊಕ್ಕಂತೆ, ಅಂದರೆ ಅವನ ಬೆನ್ನು ಪ್ರಪಾತದೆಡೆಗೆ ತಿರುಗಿರುವುದು. ಮೊದಲೇ ಹೇಳಿದಂತೆ ಹಗ್ಗ ಹಿಡಿದ  ಆತನ ಎಡಗೈ ಹಿಂದಕ್ಕೂ ಬಲಗೈ ಮುಂದಕ್ಕೂ ಚಾಚಿರುವುವು. ಆತ ಹಿಂದೆ ಹಿಂದೆ ನಡೆದಂತೆ ಹಗ್ಗ ಕೆರಾಬಿನರ್ ಒಳಗೂ ಎರಡು ಕೈಗವುಸುಗಳ ನಡುವೆ ನಿಯಂತ್ರಿತವಾಗಿ ಜಾರುತ್ತದೆ. ನೈಲಾನ್ ಹಗ್ಗ ಹಗುರ, ಬಲು ಗಟ್ಟಿ ಮತ್ತು ನುಣುಪಾಗಿ ಜಾರುವುದು. ಆದ್ದರಿಂದ ರ‍್ಯಾಪ್ಲಿಂಗಿಗೆ ಅದೇ ಸರ್ವಶ್ರೇಷ್ಠ. ಜಿಗಿವಾತ ಬಂಡೆಯ ಅಂಚಿಗೆ ಬಂದು ಹಿಂದೆ ಹಿಂದೆ ಬಗ್ಗುತ್ತಾನೆ. ಈಗ ಅವನ ದೇಹವಿಡೀ ನೆಟ್ಟಗಿದ್ದು, ಬಂಡೆಯ ಮೇಲ್ಭಾಗದಲ್ಲಿ ಕುಳಿತು ನೋಡುವವರಿಗೆ ಕೆಳಗಿನ ನೆಲಕ್ಕೆ ಸಮಾಂತರವಾಗಿರುವಂತೆ ಕಾಣುವುದು. ತನ್ನ ಭಾರದಿಂದ ಅವನು ಇನ್ನೂ ಮಾಲುವ ಮೊದಲೇ ಬಂಡೆಗೊಂದು ಬಲವಾದ ಒತ್ತವಿತ್ತು ದೂರಕ್ಕೆ ಚಿಮ್ಮುತ್ತಾನೆ. ಅಷ್ಟರಲ್ಲಿಯೇ ಹಗ್ಗವನ್ನು ತುಸು ಸಡಿಲಬಿಟ್ಟು ಎಂಟು ಹತ್ತಡಿ ಕೆಳಕ್ಕೆ ಸರ್ರನೆ ಜಾರಿರುತ್ತಾನೆ. ದೇಹ ಆಂದೋಲಿಸಿ ಕಾಲುಗಳು ಪುನಃ ಪ್ರಪಾತದ ಮೈಗೆ ಬಂದು ಬಡಿವಾಗ, ಹಗ್ಗ ತುಸು ಬಿಗಿಹಿಡಿದು ಇನ್ನೊಂದು ಒದೆತ. ಪುನಃ ಎಂಟು ಹತ್ತಡಿ ಜಾರಿಕೆ - ಈ ಕ್ರಮದಲ್ಲಿ ಅವನು ಎಷ್ಟು ಆಳವನ್ನು ಬೇಕಾದರೂ (ರ‍್ಯಾಪ್ಲಿಂಗ್ ಹಗ್ಗದ ಉದ್ದದ ಮಿತಿ ಅವಲಂಬಿಸಿ) ಜಿಗಿದಿಳಿಯಬಹುದು. ಎಡಗೈ ಹಿಡಿತ ಅವನಿಗೆ ಭದ್ರತೆಯ ಪ್ರಜ್ಞೆ  ನೀಡುವುದು. ಬಲಗೈ ಹಿಡಿತ ದಿಕ್ಕು ನಿರ್ದೇಶನ ಮಾಡುವುದು. ಅವನು ಹೀಗೆ ಮಿತಿಯಲ್ಲಿ ಜಿಗಿವಾಗ ಬಿಲೇಕಾರರು ಆ ಹಗ್ಗವನ್ನು ಸುಲಭವಾಗಿ ಜಾರಗೊಡುವರು. ಇಳಿವಾತನ ಹದ ತಪ್ಪಿದ ಅರಿವಾದರೆ ಮಾತ್ರ ಅದನ್ನು ಜಗ್ಗಿ ಹಿಡಿಯುತ್ತಾರೆ.

ಅದು ಒಂದು ನಮೂನೆ. ಇಳಿಯುವ ಕ್ರಮಗಳಲ್ಲಿ ಹಲವಾರು ವಿಧಗಳಿವೆ. ತತ್ತ್ವ ಒಂದೇ. Stomach rapelling  ಮತ್ತು ಗಾಯಗೊಂಡವನ ರಕ್ಷಣೆ ಇವುಗಳ ಪೈಕಿ ಅತಿಕಠಿಣ. ಹೊಟ್ಟೆ ರ‍್ಯಾಪ್ಲಿಂಗಿನಲ್ಲಿ ಇಳಿವಾತ (ಇದರಲ್ಲಿ ಜಿಗಿತವಿಲ್ಲ, ನಡಿಗೆ ಮಾತ್ರ) ಬಂಡೆಯ ನೆತ್ತಿಯಿಂದ ಪ್ರಪಾತದ ತಳದೆಡೆಗೆ ಮುಖ ಮಾಡಿ ನಡೆಯುತ್ತಾನೆ. ಮುಂದೆ ಅದರ ಅಂಚಿನಿಂದ ಕೆಳಗೆ ಸರಿಯುತ್ತಿದ್ದಂತೆ ದೇಹವನ್ನು ಬಂಡೆಗೆ ಲಂಬವಾಗಿಯೂ ನೆಲಕ್ಕೆ ಸಮಾಂತರವಾಗಿಯೂ ಇಟ್ಟುಕೊಳ್ಳುತ್ತಾನೆ. ಇಲ್ಲಿ ಇಳಿ ಹಗ್ಗದ ಎರಡೆಳೆಗಳನ್ನು ಪ್ರತ್ಯೇಕಿಸಿ ಇಳಿವಾತ ನಡುವೆ ಇರುತ್ತಾನೆ. ಹಗ್ಗಗಳನ್ನು  ತನ್ನ ಹೊಟ್ಟೆಯ ಮೇಲೆ ಎದುರುಬದಿರು ಹಾಯಿಸಿ, ಉಜ್ಜಿ ಸರಿಯುವಂತೆ ಮಾಡಿ, ಕೇವಲ ಹಸ್ತದಲ್ಲಿ ನಿಯಂತ್ರಿಸುತ್ತಾನೆ. ಈ ಕ್ರಮದಲ್ಲಿ ನೆಲದ ಪ್ರತಿಯೊಂದು ಪುಟ್ಟ ಕಲ್ಲೂ ಗಿಡವೂ ಭಯಂಕರವಾಗಿ ಆತನನ್ನು ತಿವಿಯಲು, ನುಂಗಲು ಬಂದಂತೆ ಭಾಸವಾಗುವುದು. ಗಾಯಗೊಂಡವನನ್ನು ಬೆನ್ನ ಮೇಲೆ ಉಪ್ಪು ಮೂಟೆಯಂತೆ ಹೊತ್ತು ಹೊಟ್ಟೆ ರ‍್ಯಾಪ್ಲಿಂಗ್ ಕ್ರಮದಿಂದ ಇಳಿಯುವುದು ಇನ್ನೂ ಕಠಿಣ ಸಾಹಸ.

ಹೀಗೆ ರ‍್ಯಾಪ್ಲಿಂಗ್ ಅತಿ ಅಪಾಯಕರವಾದ, ಆದ್ದರಿಂದ ಅಷ್ಟೇ ರೋಮಾಂಚಕವಾದ ಆಟ ಕೂಡ. ಇದರಲ್ಲಿ ಭಾಗವಹಿಸುವವರಿಗೆ ಭಾರೀ ದೇಹ ದಾರ್ಢ್ಯವೇನೂ ಬೇಕಾಗಿಲ್ಲ. ಹತ್ತು ಹದಿನೈದು ಅಡಿ ಆಳದ ಬಂಡೆಗಳಲ್ಲಿ ಜಿಗಿವ ಕ್ರಮಗಳನ್ನು ಅಭ್ಯಾಸ ಮಾಡಿ ಧೈರ್ಯ ಸಂಪಾದಿಸಿಕೊಂಡರೆ ಮುಂದೆ ಆಳ ಹೆಚ್ಚಿದಂತೆ ಅಧಿಕಾಧಿಕ ಉಲ್ಲಾಸ ಪಡೆಯಬಹುದು. ಧೈರ್ಯವಾಗಿ ದುಮುಕದವನಿಗೆ, ಸ್ವಲ್ಪವಾದರೂ ಬಂಡೆಯ ಪ್ರೇಮಮಯ ಮೃದು ಸ್ಪರ್ಶದ ಅನುಭವ ಪಡೆಯದವನಿಗೆ ಈ ವಿದ್ಯೆ ಕರಗತವಾಗದು. ಮೈ ನೆನೆಸಿಕೊಳ್ಳದೇ ಗುಟುಕು ನೀರು ಕುಡಿಯದೇ ಈಸು ಕಲಿಯುವುದು ಸಾಧ್ಯವೇ?

ಇಲ್ಲಿ ನಾವು ಕಲಿಯುವ ಪಾಠ ಎರಡು. ಬಂಡೆಯೊಡನೆ ಸೆಣಸಾಟ ಸಲ್ಲದು. ವಿನಯಶೀಲರಾಗಿ ಅದರ ಮೈಗನುಗುಣವಾಗಿ ವರ್ತಿಸಿದರೆ ಬಂಡೆ ನಮ್ಮನ್ನು ಅದರ ಮಂಡೆಯ ಮೇಲೆ ಹೊತ್ತು ಕುಣಿಯಬಿಡುವುದು. ಇನ್ನೊಂದು ಪಾಠ. ಬಂಡೆ ಜಿಗಿವಾಗ ಮನಃಸ್ಥೈರ್ಯವೇ ನಿಜವಾದ ಪ್ರೇರಕಶಕ್ತಿ. ಅಪಾಯಕ್ಕೂ ಸುರಕ್ಷಿತತೆಗೂ ನಡುವೆ ಪ್ರತಿಯೊಬ್ಬನ ಮನಸ್ಸು ಒಂದು ದುರ್ಗಮಾಭೇದ್ಯ ಕೋಟೆಯನ್ನು ಸೃಜಿಸಿರುವುದು. ಬಂಡೆಯ ಅಂಚನ್ನು ತಲಪುವಷ್ಟು ಹೊತ್ತು ನಮಗೆ ಈ ಕೋಟೆ ಎಷ್ಟು ದಪ್ಪವಾದದ್ದು, ಉಕ್ಕಿನಂತಹದು ಎಂಬುದರ ಅರಿವೇ ಇರುವುದಿಲ್ಲ. ಅಲ್ಲಿ ತಲಪುತ್ತಿದ್ದಂತೆಯೇ ಇದು ಸ್ಪಷ್ಟವಾಗಿ ಹೇಳುತದೆ, ನಾನಿಲ್ಲಿ ಅಡ್ಡ ನಿಂತಿದ್ದೇನೆ. ನಿನ್ನನ್ನು ಮುಂದೆ ಹೋಗಲು ಬಿಡುವುದಿಲ್ಲ. ಹೋಗಲೇ ಬೇಕಾದರೆ ನನ್ನನ್ನು ಭೇದಿಸಿ ಹೋಗು, ನೋಡೋಣ, ನಿನ್ನ ಸಾಮರ್ಥ್ಯ. ಲಂಕಾ ಪ್ರವೇಶಕ್ಕೆ ಮೊದಲು ವೀರ ಹನುಮಂತ ಸಿಂಹಿಕೆಯನ್ನು ಎದುರಿಸಿ ಸಂಹರಿಸಿ ಮುಂದುವರಿಯಬೇಕಾಯಿತಲ್ಲವೇ? ಬಹಳ ಮಂದಿ ಈ ಭಿತ್ತಿಯನ್ನು ಒಡೆಯಲಾಗದೇ ಹೆದರಿ, ಥರಥರನೆ ನಡುಗಿ ಕುಸಿದು, ಅಂಚಿನಿಂದ ಮೇಲಕ್ಕೆ ತೆವಳಿಯಾದರೂ ಬಂದುಬಿಡುತ್ತಾರೆ. ಅದನ್ನು ಒಡೆದವನಿಗೆ ಮಾತ್ರ ಮುಂದಿನ ಸಾಹಸದ ಸಂತೋಷಾನುಭವ. ಈ ನಡುಬಾನಿನಲ್ಲಿ ಸರ್ರನೆ ಜಾರಿ, ಕುಪ್ಪಳಿಸಿ, ಜಾರಿ ಇಳಿಯುವ ಅನುಭವಕ್ಕೆ ಸಮಾನವಾದದ್ದು, ನಾನು ಸ್ವಾನುಭವದಿಂದ ತಿಳಿದಂತೆ, ಕಾರ್ ಚಾಲನೆಯಲ್ಲಿದೆ. ಗಂಟೆಗೆ ಸುಮಾರು ೫೦ ಮೈಲಿನ ಮಿತಿವರೆಗೆ ಕಾರನ್ನು ನಾವೇ ಪ್ರಯತ್ನಪೂರ್ವಕವಾಗಿ ಚಾಲನೆ ಮಾಡುತ್ತಿದ್ದೇವೆ ಎಂಬ ಭಾವನೆ ಬರುವುದು. ಈ ಮಿತಿ ದಾಟಿದ ಮೇಲೆ ಬೇರೊಂದು ಅನುಭವವಾಗುವುದು: ನೆಲ, ಗಿಡ, ಮರ, ಆವರಣ, ದಾರಿ ಎಲ್ಲ ಅತಿ ವೇಗದಿಂದ ನಮ್ಮ ಸುತ್ತಲೂ ಹಿಂದಕ್ಕೆ ಜಾರುತ್ತಿವೆ. ನಾವು ಇವುಗಳ ಮಧ್ಯೆ ತೇಲುತ್ತ ಸ್ವಚ್ಛಂದವಾಗಿ ವಿಹರಿಸುತ್ತಿದ್ದೇವೆ. ಇದು ವಾಯುಲಘಿಮಾನುಭವ (levitation). ಇಂಥ ಅನುಭವ ಬಂಡೆ ಜಿಗಿವಾಗ ನಮಗಾಗುವುದು. ನಿಸರ್ಗವನ್ನು ಔನ್ನತ್ಯದಿಂದ ವೀಕ್ಷಿಸುವ ಕ್ರಮವಿದು. ಶ್ರೇಷ್ಠನಟ ಪಾತ್ರ ತಾದಾತ್ಮ್ಯಹೊಂದಿದಾಗ ಇಂಥದೇ ಭಾವದೀಪ್ತನಾಗಿರುವನೆಂದು ಕೇಳಿದ್ದೇನೆ.

ವಾರವಾರ ನಮ್ಮ ಹುಡುಗರು ಮೈಲುಗಟ್ಟಲೆ ನಡೆದು ಬಂಡೆ ಏರಿ ಜಿಗಿದು ಈ ಆಟಗಳಲ್ಲಿ ಬಲು ನಿಷ್ಣಾತರಾದರು. ಇಂಥ ಒಂದು ರವಿವಾರ ಅವರಿಂದಲೇ ಸೂಚನೆ ಬಂದಿತು, ನಾವಿಷ್ಟೆಲ್ಲ ಹಾರಾಡುತ್ತಿದ್ದೇವಲ್ಲ. ಈ ವರ್ಷ ಮುಗಿಯುವ ಮೊದಲು ಏನಾದರೊಂದು ಸಾಹಸ ಪ್ರದರ್ಶನ ನಡೆಸಬೇಕು.

ನಮ್ಮ ದೊರೆಗಳು (ಮೇಜರ್ ನಾರಾಯಣ ಸಿಂಗ್) ರಾಮನಗರ, ಸಾವನದುರ್ಗ, ಶಿವಗಂಗೆ, ನಂದಿಬೆಟ್ಟ ಎಲ್ಲಿಯಾದರೊಂದೆಡೆ ಒಂದೆರಡು ದಿವಸ ಶಿಬಿರ ನಡೆಸಿ ಕಲಿತ ವಿದ್ಯೆಯೆಲ್ಲವನ್ನೂ ಚೆನ್ನಾಗಿ ಅಭ್ಯಸಿಸಿ ಮರಳಬಹುದೆಂದು ಸಲಹೆಯಿತ್ತರು. ಆದರೆ ನನಗೆ ತಿಳಿದಿದ್ದಂತೆ ಕುದುರೆಮುಖವೇ ಗಂಡುಗಲಿಗಳಿಗೆ ಸರಿಯಾದ ಸ್ಥಳ. ಅಲ್ಲಿ ಸಾಹಸಪ್ರಿಯರಿಗೆ, ನಿಸರ್ಗ ಪ್ರೇಮಿಗಳಿಗೆ, ಇತಿಹಾಸ ಪ್ರಸಿದ್ಧ ಸ್ಥಳ ವೀಕ್ಷಕರಿಗೆ ರಸದೂಟವಿದೆ. ಹತ್ತು ವರ್ಷಗಳ ಹಿಂದೊಮ್ಮೆ ಅಲ್ಲಿ ನಾನು ಹತ್ತಿಪ್ಪತ್ತು ಹುಡುಗರನ್ನು ಕಟ್ಟಿಕೊಂಡು (ಆಗ ನಾನು ಮಡಿಕೇರಿಯಲ್ಲಿದ್ದೆ) ಅಲೆದಿದ್ದೆ. ಅಂದು ಇದ್ದದ್ದು ಉತ್ಸಾಹ ಒಂದೇ. ಅದರ ಜೊತೆಗೆ ಕ್ರಮಬದ್ಧ ಯೋಜನೆಯನ್ನು ಹೊಂದಿಸಿಕೊಂಡು ಹೆಚ್ಚಿನ ಆನಂದ, ಜ್ಞಾನ ಪಡೆಯಲು ತಿಳಿವಳಿಕೆ ಸಾಕಾಗಿರಲಿಲ್ಲ. ಹೀಗಾಗಿ ‘ಎಂಕು ಪಣಂಬೂರಿಗೆ ಹೋಗಿ ಬಂದಂತೆ ನಾವೂ ಕುದುರೆಮುಖಕ್ಕೆ ಹೋಗಿಬಂದಿದ್ದೆವು. ಆ ಶಿಖರ ನನ್ನ ಮನಸ್ಸಿನ ಮೇಲೆ ಎಂದೂ ಮಾಸದ ಮುದ್ರೆಯೊತ್ತಿತ್ತು. ಇನ್ನೊಮ್ಮೆ ಸರಿಯಾಗಿಯೇ ಬರುತ್ತೇನೆ ಎಂದುಕೊಂಡಿದ್ದೆ.

ಕುದುರೆಮುಖದ ಕರೆ
ಅಧ್ಯಾಯ ಮೂವತ್ತಾರು

ಈಗ ಕಾಲ ಸನ್ನಿಹಿತವಾಗಿತ್ತೋ ಏನೋ. ಕುದುರೆಮುಖ ಕೆನೆಯಿತು. ನಾನು ಹುಡುಗರಿಗೆ ಅದರ ಸಾಹಸವನ್ನು ವಿವರಿಸಿದೆ. ಅದು ಎಲ್ಲಿ ಉಂಟು, ಏನು ಎಂದು ಇವರು ಯಾರಿಗೂ ತಿಳಿಯದು. ಆದರೂ ಹುಡುಗಾಟಿಕೆಯ ಉತ್ಸಾಹದಿಂದ ಹಾರಾಡಿದರು. ಅಂದಿನಿಂದಲೇ ಕುದುರೆಮುಖದ ಕನಸನ್ನು ಕಾಣತೊಡಗಿದರು. ಇದು ಅಕ್ಟೋಬರ್ (೧೯೬೬) ಸುಮಾರಿಗೆ.

ದೊರೆಗಳು ಈ ಯೋಜನೆಯನ್ನು ಸ್ವಾಗತಿಸಿದರು. ಸುಮಾರು ೩೦ ಕ್ಯಾಡೆಟ್ಟುಗಳು, ೧೦ ದಿವಸಗಳ ಶಿಬಿರ. ವೆಚ್ಚವೆಷ್ಟಾದೀತೆಂದು ಅಂದಾಜು ಮಾಡಲು ನನಗೆ ಹೇಳಿದರು. ಅದೇ ವೇಳೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಟಿ. ಆರ್. ಜಯರಾಮನ್ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಭಾಷಣ ಮಾಡುತ್ತ ಹೀಗೆಂದರು: ವಿದ್ಯಾರ್ಥಿಗಳು ಇಂದು ಪೂರ್ಣ ವ್ಯಕ್ತಿತ್ವ ಪಡೆದು ವಿಕಸಿಸಬೇಕು. ಪಾಠ ಪ್ರವಚನದ ಜತೆಗೆ ಸಾಹಸಪ್ರಿಯತೆ, ಆಟ ಓಟಗಳು ಬೆಳೆಯಬೇಕು. ಅವರ ಯಾವುದೇ ವಿಧದ ರಚನಾತ್ಮಕ ಸಾಹಸಕ್ರಿಯೆಯನ್ನೂ ಬೆಂಗಳೂರು ವಿಶ್ವವಿದ್ಯಾಲಯ ಸಹಾನುಭೂತಿಯಿಂದ ಪರಿಶೀಲಿಸುವುದು.

ನಾನು ಈ ಒಂದು ಆಶ್ವಾಸನೆಯ ಎಳೆ ಹಿಡಿದು ಮೊದಲು ಒಬ್ಬನೇ ಹೋಗಿ ಅವರನ್ನು ಭೇಟಿ ಮಾಡಿದೆ. ನಮ್ಮ ಕುದುರೆಮುಖ ಯೋಜನೆಯ ರೂಪರೇಖೆಗಳನ್ನು ವಿವರಿಸಿದೆ. ನಮಗೆ ಯೂನಿವರ್ಸಿಟಿಯಿಂದ ಧನಸಹಾಯ ದೊರೆಯಬಹುದೇ ಹೇಗೆ ಎಂದು ಮನವಿ ಮಾಡಿದೆ. ಅದರ ಪೂರ್ಣ ಮಾಹಿತಿಯಿರುವ ಪತ್ರವನ್ನು ನಮಗೆ ಕೊಡಿ. ಸಹಾನುಭೂತಿಯಿಂದ ಪರಿಶೀಲಿಸುತ್ತೇವೆ ಎಂದರು.

ದೊರೆಗಳಿಗೆ ಈ ಸಂತೋಷದಾಯಕ ಸುದ್ದಿ ತಿಳಿಸಿದೆ ಮತ್ತು ಸುಮಾರು ಒಂದೂವರೆ ಸಾವಿರ ರೂಪಾಯಿಯ ಯೋಜನೆ ತಯಾರಿಸಿದೆ. ಅದನ್ನು ನೋಡಿದ ಅವರು ನಕ್ಕು, ಇಲ್ಲೇ ನೀನು ಅತಿ ಜಿಗುಟಾಗಿರುವುದು! ವ್ಯಕ್ತಿಗಳಿಗೆ ಸಾವಿರ, ಸಾವಿರದೈನೂರು ದೊಡ್ಡ ಹಣ. ಆದರೆ ಇಲ್ಲಿ ಕೊಡುತ್ತಿರುವುದು ಯೂನಿವರ್ಸಿಟಿ. ಹೋಗುತ್ತಿರುವವರು ೩೦-೪೦ ಮಂದಿ ಹುಡುಗರು.  ಅವರ ಆಹಾರದ ಖರ್ಚೇ ಸುಮಾರು ಸಾವಿರದೈನೂರು ಆಗದಿರದು. ವಾಹನ, ಇತರ ಖರ್ಚು ಒಟ್ಟು ರೂ ೩೦೦೦ದ ಅಂದಾಜು ನಾನು ಮಾಡುತ್ತೇನೆ. ಅಲ್ಲದೇ ಇಂಥ ಸಂದರ್ಭದಲ್ಲಿ ಸ್ವಲ್ಪ ಶಿಕ್ಷಣ ಸಾಮಗ್ರಿಗಳನ್ನು ಖರೀದಿಸುವ ಯೋಜನೆಯೂ ಸೇರಬೇಕು. ೨೦೦ ಅಡಿ ಉದ್ದದ ನೈಲಾನ್ ಹಗ್ಗ ಒಂದೊಂದಕ್ಕೂ ೧೬೫ರಿಂದ ೨೦೦ ರೂಪಾಯಿ ಬೆಲೆಯಿದೆ. ಆದ್ದರಿಂದ ಸಾಮಗ್ರಿಗಳ ಬೆಲೆ ೨೦೦೦ ರೂಪಾಯಿಯಾದರೂ ಇರತಕ್ಕದ್ದು. ಹೀಗೆ ೫೦೦೦ ರೂಪಾಯಿ ಮುಂಗಡವಾಗಿ ನಾವು ಯಾಚಿಸಬೇಕು. ಕೇಳುವಾಗ ಧಾರಾಳವಾಗಿರೋಣ, ಸರಿಯಾದ ಲೆಕ್ಕ ಕೊಟ್ಟರೆ ಆಯಿತು ಎಂದು ವಿವರಿಸಿದರು.

ಒರತೆ ತೊರೆಯಾದಾಗ
ಅಧ್ಯಾಯ ಮೂವತ್ತೇಳು

ಮುಂದಿನ ವಾರ ನಮ್ಮ ಯೋಜನೆಯ ಪತ್ರ ಸಮೇತ ನಾವು ಕುಲಪತಿಗಳನ್ನು ನೋಡಿದೆವು. ಅವರು ನಮಗೆ ಆಶ್ಚರ್ಯವಾಗುವಂತೆ, ನೀವು ಮುಂದುವರಿಸಿ, ಈ ಮೊಬಲಗು ನಿಮಗೆ ಸಿಕ್ಕುತ್ತದೆ ಎಂದುಬಿಟ್ಟರು! ಆ ಗಳಿಗೆಯಲ್ಲಿ ನಾವು ಮೂಕವಿಸ್ಮಿತರಾದೆವು. ಪಾರ್ಕಲಾಂ ಮಂತ್ರ ಪಠನದ ಈ ಕಾಲದಲ್ಲಿ, ನೂರಾರು ಸಲ ಕಂಬದಿಂದ ಮೇಜಕ್ಕೆ ಅಲೆಯದೇ ಯಾವ ಕೆಲಸವೂ ಆಗದ ಈ ದಿನಗಳಲ್ಲಿ, ಮೊದಲೇ ನಾವೇಕೆ ಈ ಯೋಜನೆಯನ್ನು ಮಂಡಿಸಲಿಲ್ಲ ಎನ್ನುವಂಥ ಸವಾಲು. ಬಲು ಸಂತೋಷದಿಂದ ಹಿಂತಿರುಗಿದೆವು.

ಇಂಗ್ಲಿಷಿನಲ್ಲಿ ಹೇಳುವಂತೆ ಚೆಂಡು ಈಗ ನಮ್ಮ ರಂಗದಲ್ಲಿದೆ. ನಮ್ಮ ಮೇಲೆ ವಿಶ್ವವಿದ್ಯಾಲಯ ವಹಿಸಿರುವ ವಿಶ್ವಾಸ ಗುರುತರವಾದದ್ದು. ಇದುವರೆಗೆ ನಾವು ಮಾಡಿದ್ದು ಚಂದ, ನವ ಸಂಪ್ರದಾಯದ ಲೇಪ ಅದಕ್ಕೆ. ಆದರೆ ಈಗ ವಿಶ್ವವಿದ್ಯಾಲಯದ ವಿಶ್ವಾಸ, ಕ್ಯಾಡೆಟ್ಟುಗಳ ಉತ್ಸಾಹ ಇವನ್ನು ವ್ಯವಸ್ಥಿತವಾಗಿ ಒಂದುಗೂಡಿಸಿ ಉತ್ತಮ ಫಲಿತಾಂಶ ತರುವುದು ನಮ್ಮ ಹೊಣೆಗಾರಿಕೆ, ಮುಂದಿರುವ ಹೆಜ್ಜೆಗಳು: ಶಿಬಿರದ ಸ್ಥಳ ಪರಿಶೀಲನೆ, ಹೊರಡುವ ದಿವಸ ನಿರ್ಣಯ, ಕ್ಯಾಡೆಟ್ಟುಗಳ ಆಯ್ಕೆ, ಶಿಕ್ಷಣ ಸಾಮಗ್ರಿ ಮತ್ತು ಇತರಾವಶ್ಯಕತೆಗಳ ಏರ್ಪಾಡು.

ಸ್ಥಳ ಪರಿಶೀಲನೆಗಾಗಿ ನಾನೂ ದೊರೆಗಳು ಎನ್ಸಿಸಿ ಕಾರಿನಲ್ಲಿ ಚಾರ್ಮಾಡಿ ಮಾರ್ಗವಾಗಿ ಧರ್ಮಸ್ಥಳ, ಬೆಳ್ತಂಗಡಿ ತಲಪಿದೆವು. ಸ್ಥಳ, ಜನ, ಸನ್ನಿವೇಶ ಇವುಗಳ ನಿಕಟ ಪರಿಚಯ ಬೆಳೆಸಿಕೊಂಡು ಜನವರಿ (೧೯೬೭) ಅಂತ್ಯದಲ್ಲಿ ಶಿಬಿರ ನಡೆಸುವುದು ಯೋಗ್ಯ ಎಂದು ನಿರ್ಣಯಿಸಿದೆವು. ಅದಕ್ಕಿಂತ ಮೊದಲು ಆಳೆರಡೆತ್ತರ ಬೆಳೆದಿರುವ ಹುಲ್ಲಿನ ಕಡಲಿನಲ್ಲಿ ಬೆಟ್ಟ ಹತ್ತುವುದು ಅಸಾಧ್ಯ. ಮಧ್ಯೆ ಎಲ್ಲಿಯಾದರೂ ಕಾಡಿಗೆ ಬೆಂಕಿ ಬಿದ್ದರೆ ಖಾಂಡವ ದಹನದ ಪುನರಾವರ್ತನೆಯೇ ಆಗಬಹುದು. ದಿವಸ ಮುಂದುವರಿಸಿದರೆ ಸೀನಿಯರ್ ವಿದ್ಯಾರ್ಥಿಗಳಿಗೆ ದೊಡ್ಡ ಪರೀಕ್ಷೆ ಹತ್ತಿರವಾಗುವುದು. ಆದ್ದರಿಂದ ತೊಂದರೆ. ಏಪ್ರಿಲ್, ಮೇ ಕುದುರೆಮುಖದ ಬುಡದಲ್ಲಿ ಕುದಿವ ಕುಲುಮೆಯಂಥ ಸೆಕೆ, ಮೇಲೆ ಮೋಡ, ಮಳೆ. ಜನವರಿ ೨೦ರಿಂದ ೨೯ರವರೆಗೆ ಹತ್ತು ದಿವಸ ಶಿಬಿರ ನಡೆಸುವುದು ಎಂದು ನಿಶ್ಚೈಸಿದೆವು.

ನಮಗೆ ಯೂನಿವರ್ಸಿಟಿ ಸಹಾಯ ದೊರೆತ ಶುಭ ಸಮಾಚಾರ ವಿದ್ಯಾರ್ಥಿಲೋಕದಲ್ಲಿ ವಿದ್ಯುದ್ವೇಗದಿಂದ ಪಸರಿಸಿತು. ಕನಸಿನ ಕುದುರೆಮುಖ ವಾಸ್ತವತೆಗೆ ಬರುವುದೆಂದು ಅವರಿಗೀಗ ಖಚಿತವಾಯಿತು. ನೂರಾರು ಹುಡುಗರು, ಬೇರೆ ಕಾಲೇಜಿನವರು ಸಹ, ದಿನ ದಿನ ಬಂದು ನನ್ನನ್ನು ಬೇಡತೊಡಗಿದರು, ತಾವೂ ಕುದುರೆಮುಖದ ತಂಡದವರನ್ನು ಸೇರುವುದಾಗಿ ಮತ್ತು ಹಣದ ಕೊರತೆಯನ್ನು ಪೂರೈಸುವುದಾಗಿ ಮಾತು ಕೊಟ್ಟರು. ನಮ್ಮ ತರುಣರ ಆಸೆ ಆಕಾಂಕ್ಷೆ ಸಹಜವಾದದ್ದು. ನಮಗೆ ಅಭಿಮಾನ ಉಂಟುಮಾಡುವಂಥಾದ್ದು. ಆದರೆ ನಮ್ಮ ಮುಂದಿದ್ದ ಗುರಿಸಾಧನೆಯಲ್ಲಿ ನಾವು ಕೆಲವು ಸ್ವಯಂ ನಿರ್ಮಿತ ನಿಯಮಾವಳಿಗಳಿಂದ ಬಂಧಿತರಾಗದೇ ಹೋದರೆ, ಒಂದು ಕ್ರಮ ಅನುಸರಿಸದೇ ಮುಂದುವರಿದರೆ, ಕುದುರೆಮುಖ ಸಾಹಸ, ಕುದುರೆ ಮುಖ ಜಾತ್ರೆಯಾದೀತು, ದುರಂತವೂ ಘಟಿಸೀತು. ಈ ದೃಷ್ಟಿಯಿಂದ ನಮ್ಮ ಕಾಲೇಜಿನ ಕ್ಯಾಡೆಟ್ಟುಗಳಿಗೆ ಮಾತ್ರ ಇದರಲ್ಲಿ ಪ್ರವೇಶವೆಂದು ವಿಧಿಸಿದೆವು. ಕೆಲವು ರಾಜಕಾರಣಿಗಳೊಡನೆ ಕಟುವಾಗಿ ವಾದಿಸಲೂಬೇಕಾಯಿತು, ಕುದುರೆಮುಖ ಅಲ್ಲಿದೆ, ಯೂನಿವರ್ಸಿಟಿ ಇಲ್ಲಿದೆ. ನೀವು ಪ್ರತ್ಯೇಕವಾಗಿ ನಮಗಿಂತಲೂ ಉತ್ತಮವಾದ ಸಾಹಸವನ್ನೇಕೆ ವ್ಯವಸ್ಥೆಗೊಳಿಸಬಾರದು?

ಸಾಮಾನ್ಯವಾಗಿ ಜನ, ತಿಳಿದೋ ತಿಳಿಯದೆಯೋ ಕೆಲಸಮಾಡದೆ ಅದರ ಫಲ ಸವಿಯಬೇಕೆಂಬ ಬುದ್ಧಿಯವರು. ಇನ್ನು ನಮ್ಮ ಹುಡುಗರೇ ಆದರೂ ಮೊದಲು ಕರೆದ ಮೀಟಿಂಗಿಗೆ ನಾಲ್ಕುನೂರರವರೆಗೆ ಬಂದರು. ಕಾಲೇಜಿನ ಸಭಾಂಗಣದಲ್ಲಿ, ಪಂಖಗಳ ಅಡಿಯ ತಂಪು ಹವೆಯಲ್ಲಿ ಸುಖಾಸೀನರಾದ ಅವರು ಕುದುರೆಮುಖದ ರಂಗು ರಂಗಾದ ವರ್ಣನೆಯನ್ನು ಏಕಾಗ್ರತೆಯಿಂದ ಆಲಿಸಿ ಕನಸು ಕಾಣತೊಡಗಿದರು.

ಕುದುರೆಮುಖ ಗಂಡು ಗಂಡುಗಳಿಗೆ ಮಾತ್ರ. ನಿಮ್ಮಲ್ಲಿ ಯಾರಿಗೆ ಏರಲು ಸಾಧ್ಯವಿಲ್ಲ, ಕೈ ಎತ್ತಿ ಎಂದು ಸಮಾರೋಪಿಸಿದೆ. ಬಂದವರು ನಾಲ್ಕುನೂರು, ಎಲ್ಲರೂ ಗಂಡು ಗಂಡುಗಳೇ; ಕೈ ಎತ್ತಿದವರು ಯಾರೂ ಇಲ್ಲ. ಬಹಳ ಸಂತೋಷ. ನನಗೆ ತುಂಬ ಹೆಮ್ಮೆ, ಇಂಥ ಕಠಿಣ ಶಿಬಿರಕ್ಕೆ ಬರಲು ನೀವು ಕೆಲವು ನಿಯಮಗಳನ್ನು ಪಾಲಿಸಲೇಬೇಕು: ಮುಂದಿನ ಆದಿತ್ಯವಾರ ೧೨ನೇ ಮೈಸೂರಿನ ೬.೪೫ ಗಂಟೆ ಬೆಳಗ್ಗೆ ಕಾಲೇಜು ಹಿಂದೆ ಸಮವಸ್ತ್ರಧಾರಿಗಳಾಗಿ ಸೇರತಕ್ಕದ್ದು; ೧೫ರಿಂದ ೨೦ ಮೈಲುಗಳವರೆಗಿನ ದೀರ್ಘ ನಡಿಗೆ. ಇದರಲ್ಲಿ ಜಯಪ್ರದರಾಗುವ ಮೊದಲಿನ ೬೦ ಅಥವಾ ೭೦ ಕ್ಯಾಡೆಟ್ಟುಗಳಿಗೆ ಮುಂದಿನ ಹೆಜ್ಜೆ ವಿವರಿಸಲಾಗುವುದು.

ಗಂಡುಗಳ ಆಯ್ಕೆ
ಅಧ್ಯಾಯ ಮೂವತ್ತೆಂಟು

ಆ ಆದಿತ್ಯವಾರ ಬಂದವರು ೧೧೦. ಎರಡು ಮಿನಿಟ್ ತಡವಾಗಿ ಬಂದವರಿಗೆ ಮುಂದಿನ ವರ್ಷದ (?) ಶಿಬಿರ! ಇನ್ನು, ೧೫ ಮೈಲು ನಡಿಗೆ ಊಹಿಸಿದಷ್ಟು ಸುಲಭವಲ್ಲ, ಸೈಕಲ್, ಆಟೋ, ಸಿಟಿ ಬಸ್ ಸಂಸರ್ಗಗಳಿಂದ ವಿಕಸಿಸುವ ಹುಡುಗರಿಗೆ ಇದೊಂದು ಭಯಂಕರಾನುಭವ! ಬಹಳಷ್ಟು ಮಂದಿ ನಡುದಾರಿಯಲ್ಲಿ ಮನೆಯೆಡೆಗೆ ಕವಲೊಡೆದು ಕಾಣದಾದರು. ಯಶಸ್ವಿಯಾಗಿ ನಡಿಗೆ ಪೂರೈಸಿದ ಮೊದಲಿನ ೬೦ ಮಂದಿಯನ್ನು ಆರಿಸಲಾಯಿತು. ಉಳಿದವರು ‘ದ್ರಾಕ್ಷಿ ಹುಳಿ ಎಂದು ಮುಖ ಸಿಂಡರಿಸಿದರು.

ಈ ೬೦ ಮಂದಿಗೆ ಎರಡನೆಯ ಹೆಜ್ಜೆ ಬಂಡೆ ಏರುವುದು, ಇಳಿಯುವುದರಲ್ಲಿ ಶಿಕ್ಷಣ ಮತ್ತು ಪರೀಕ್ಷೆ. ಬಂಡೆಯ ಅಂಚಿಗೆ ಬಂದ ಹಲವಾರು ಹುಡುಗರು ಹಿಂದೆ ಸರಿದರು. ಹೀಗೆ ಸಂಖ್ಯೆ ೪೦ಕ್ಕೆ ಇಳಿಯಿತು. ಇವರ ಪೈಕಿ ಮೂರು  ಹುಡುಗರು ವೈದ್ಯಕೀಯ ಪರೀಕ್ಷೆಯಲ್ಲಿ  ಉತ್ತೀರ್ಣರಾಗಲಿಲ್ಲ. ಈ ರೀತಿಯಲ್ಲಿ ನಮ್ಮ ಬೆಟ್ಟೆ ಚಿನ್ನವನ್ನು ಪುಟ ಹಾಕಿ ಶುದ್ಧ ಮಾಡಿದೆವು. ಇವರಲ್ಲಿ ಪ್ರತಿಯೊಬ್ಬನೂ ೧೦ ರೂಪಾಯಿ ಪ್ರವೇಶ ಧನವೀಯಬೇಕು ಮತ್ತು ಸ್ವಂತ ಖರ್ಚಿನಿಂದ ‘ಹಂಟರ್ ಬೂಟುಗಳನ್ನು ಕೊಂಡುಕೊಳ್ಳಬೇಕೆಂದೂ ವಿಧಿಸಿದ್ದೆವು. ತಂದೆ ತಾಯಿಯರಿಂದ ಬರಹದಲ್ಲಿ ಅಪಾಯದ ಸರ್ಟಿಫಿಕೇಟು ತರಿಸಿಕೊಂಡೆವು. ಇದರ ಪ್ರಕಾರ ಹುಡುಗ ಸ್ವಂತ ಇಚ್ಛೆಯಿಂದ ಮತ್ತು ತಂದೆತಾಯಿಯರ ಅನುಮತಿಯ ಮೇರೆಗೆ ಶಿಬಿರಕ್ಕೆ ಬರುವವನು; ಅಲ್ಲಿ ಯಾವ ಅಥವಾ ಹೇಗೆ, ಎಂಥ ಅಪಾಯ ಸಂಭವಿಸಿದರೂ ಹುಡುಗನಾಗಲೀ ಅವನ ತಂದೆತಾಯಿಯರಾಗಲೀ ಸರಕಾರವನ್ನು ಪರಿಹಾರಧನ ಯಾಚಿಸುವಂತಿಲ್ಲ. ಇದರರ್ಥ ವ್ಯವಸ್ಥೆಗೊಳಿಸುವ ನಾವು ಹಿರಿಯರು ಬೇಜವಾಬ್ದಾರಿಕೆಯಿಂದ ವರ್ತಿಸಬಹುದೆಂದಲ್ಲ. ಹುಡುಗರನ್ನು ಕಾಲೇಜಿಗೆ, ಶಿಬಿರಕ್ಕೆ ಕಳಿಸಿದರೆ ತಮ್ಮ ಹೊಣೆಗಾರಿಕೆ ಮುಗಿಯಿತೆಂದು ತಿಳಿಯುವ, ಪರಮೋಸದಿಂದ ಅಥವಾ ಎಷ್ಟೋ ಸಲ ಹುಡುಗನ ತಿಳಿಗೇಡಿತನದಿಂದ ಅವನಿಗೇನಾದರೂ ಅಪಾಯ ಸಂಭವಿಸಿದರೆ ಮೊದಲು ಸಂಸ್ಥೆಯಲ್ಲಿ ದೋಷ ಹುಡುಕುವ ಹಿರಿಯರಿಗೆ ಅವರ ಪಾತ್ರವನ್ನು ಸ್ಪಷ್ಟಪಡಿಸಲು ಇಂಥ ಸರ್ಟಿಫಿಕೇಟು ಅತ್ಯಗತ್ಯ. ಮನೆಯಲ್ಲಿ ಕಲಿಸದ ಶಿಸ್ತು, ಸದ್ವರ್ತನೆಗಳನ್ನು ಕಾಲೇಜು ಕ್ಲಾಸುಗಳಲ್ಲಿ, ಎನ್‌ಸಿಸಿ ಪೆರೇಡ್ ಗ್ರೌಂಡಿನಲ್ಲಿ ಕಲಿಸಲು ಸಾಧ್ಯವಿಲ್ಲ. ನೀತಿ: ನಿಮ್ಮ ಪುತ್ರರತ್ನ ಪುರುಷ ಸಿಂಹನಾಗಬೇಕೆಂಬುದು ನಿಮ್ಮ ಅಪೇಕ್ಷೆಯಾದರೆ ನೀವು ಕನಿಷ್ಠ ನರಶೃಗಾಲವಾದರೂ ಆಗಿರಬಾರದು!

ಸಾವನದುರ್ಗದ ಜಾರುಬಂಡೆಯ ಮೇಲೆ
ಅಧ್ಯಾಯ ಮೂವತ್ತೊಂಬತ್ತು

ಡಿಸೆಂಬರ್ ೨೫ರಿಂದ ಜನವರಿ ೩ರ ತನಕ ನಮ್ಮ ಬೆಟಾಲಿಯನ್ ವಾರ್ಷಿಕ ಶಿಕ್ಷಣ ಶಿಬಿರ ನಡೆಸಲು ಬೆಂಗಳೂರಿನ ಹೊರವಲಯಕ್ಕೆ ಸಾಗಿತು. ಅಲ್ಲಿಂದ ೨೪ ಮೈಲು ದೂರದಲ್ಲಿ ಸಾವನದುರ್ಗವಿದೆ. ಶಿಬಿರದ ಪ್ರಾರಂಭದಲ್ಲಿ ದೊರೆಗಳೆಂದರು, ನೀನು ಆರಿಸಿರುವ ಶಿಲಾರೋಹಿಗಳನ್ನು ಅಲ್ಲಿಗೆ ಲಾರಿಯಲ್ಲಿ ಕರೆದುಕೊಂಡು ಹೋಗಿ ಒಂದು ದಿನವಿಡೀ ಅಭ್ಯಾಸ ಮಾಡಿ ಬಾ. ನಾವಿಬ್ಬರೂ ಈ ಕ್ಯಾಂಪನ್ನು ಒಂದೇ ಸಲ ಬಿಟ್ಟು ಹೋಗುವುದು ಸರಿಯಲ್ಲವಾದ್ದರಿಂದ ನೀನೊಬ್ಬನೇ ಹೋಗು.

೨೪ ಹುಡುಗರ ತಂಡ. ಹೈಸ್ಕೂಲಿನಲ್ಲಿ ಓದುತ್ತಿದ್ದ ನನ್ನ ಹಿರಿಮಗ ಅಶೋಕನೂ ಸ್ವಯಂಪ್ರೇರಿತನಾಗಿ ಶಿಬಿರದ ಶಿಸ್ತಿಗೆ ಬದ್ಧವಾಗಿ ಇದರಲ್ಲಿದ್ದ. ಬುತ್ತಿ ಊಟ ಕಟ್ಟಿಕೊಂಡು ಬೆಳಗ್ಗಿನ ೬ ಗಂಟೆಗೆ ಕ್ಯಾಂಪಿನಿಂದ ಹೊರಟೆವು. ೮ ಗಂಟೆಗೆ ದುರ್ಗದ ಬುಡ ತಲಪಿದೆವು. ನೆಲದಿಂದ ನೇರವಾಗಿ ಆಗಸಕ್ಕೆ ಚಾಚಿರುವ ಆ ಭೀಮಾಕಾರದ ಕರಿಯ ಕಲ್ಲುಗುಡ್ಡೆಯ ಎತ್ತರ ೨೦೦೦ ಅಡಿಗಿಂತಲೂ ಹೆಚ್ಚು ಇರಬೇಕೆಂದು ಅಂದಾಜು. ಅದರ ಶಿಖರದಲ್ಲಿಯ ಬಸವನೆಡೆಗೆ ಏರಲು ನೆಲದಿಂದ ಬಳಸು ಕಾಲುದಾರಿಯಿದೆ. ಆದರೆ ನಾವು ಹೋದುದು ನೇರವಾಗಿ ಆ ಕಡಿದಾದ ಶಿಲಾರೋಹಣ ಮಾಡಲೆಂದು; ಹೇಗಾದರೂ ಕೊಡಿ ತಲಪುವುದಲ್ಲ. ಸಾಹಸ ಪ್ರಯೋಗದಿಂದ ಶಿಖರಾರೋಹಣ ನಮ್ಮ ಗುರಿ. ನಮ್ಮ ಬೆನ್ನ ಮೇಲೆ ಹ್ಯಾವರ್ ಸ್ಯಾಕಿನಲ್ಲಿ ಬುತ್ತಿ, ಮೂಸುಂಬಿ, ಸ್ವಲ್ಪ ಬಟ್ಟೆ. ಲಕ್ಷ್ಮಿ ಮೊದಲಾದ ವಿದ್ಯಾರ್ಥಿ ನಾಯಕರು ನೈಲಾನ್ ಹಗ್ಗಗಳ ಹೊರೆ ಹೊತ್ತಿದ್ದರು. ನಾವು ಕಾಲಿಗೆ ಬೂಟು ಧರಿಸಿದ್ದುದು ತಪ್ಪು, ಬಂಡೆ ಏರಲು ಇದು ದೊಡ್ಡ ಪ್ರತಿಬಂಧ. ಬೂಟಿನಡಿಯ ದೊರಗು ಮತ್ತು ಅಲ್ಲಿ ಹೊಡೆದಿರುವ ಆಣಿಗಳು ಬಂಡೆಯ ಮೇಲೆ ಜಾರಿ ನಮಗೆ ಎಲ್ಲಿಯೂ ದೃಢವಾಗಿ ನಿಲ್ಲುವುದು ಸಾಧ್ಯವಾಗಲಿಲ್ಲ. ಮೊದಲಿನ ೫೦ ಗಜ ನೇರವಾಗಿ ಏರುವಾಗ, ಏರಿಕೆ ಅಷ್ಟೇನೂ ತೀವ್ರವಾಗಿರದೆ ಬೂಟುಗಳಿಂದ ತೊಂದರೆಯಾಗಲಿಲ್ಲ. ಆದರೆ ಮುಂದೆ ಹತ್ತಬೇಕಾದರೆ ಬರೇ ಕಾಲಿನ ನಡಿಗೆಯೊಂದೇ ಗತಿ. ಬೂಟುಗಳನ್ನು ಕಳಚಿ ಒಂದರ ಲೇಸನ್ನು ಇನ್ನೊಂದಕ್ಕೆ ಕಟ್ಟಿ ಹೆಗಲ ಮೇಲೆ ಬೂಟುಮಾಲೆ ಧರಿಸಿದೆವು. ಮುಂದಕ್ಕೆ ಕೈಕಾಲುಗಳ ಸಹಾಯದಿಂದ ತೆವಳಿ ಹತ್ತಿದೆವು. ಬಿರುಕುಗಳಿಗೆಲ್ಲ ಕೈಕಾಲು ತುರುಕಿ ದೇಹವನ್ನು ಮೇಲೆ ಮೇಲೆ ಸಾಗಿಸಿದೆವು. ಒಂದು ಘಟ್ಟಕ್ಕೆ ಬರುವಾಗ ಮೇಲೆ ಹತ್ತುವುದು ಸಾಧ್ಯವೇ ಇಲ್ಲ ಎಂದಾಯಿತು. ಕಲ್ಲು ಸ್ವಲ್ಪ ಒಳಕ್ಕೆ ನುಗ್ಗಿ ಮತ್ತೆ ನಮ್ಮ ಮೇಲೆಯೇ ಉಬ್ಬಿ ಚಾಚಿತ್ತು. ಆದ್ದರಿಂದ ಬದಿಗೆ ಸರಿದು ಈ ಉಬ್ಬನ್ನು ಬಳಸಿ ಹತ್ತಬೇಕು. ಸ್ವಲ್ಪ ವಿಶ್ರಮಿಸೋಣ ಎಂದು ಬಂಡೆಯ ಮೇಲೆ ಕುಳಿತು ನೋಡುತ್ತೇವೆ - ನಾವು ಹತ್ತಿದ ಎತ್ತರ ಮತ್ತು ಏರಿಕೆಯ ತೀವ್ರತೆ ಭಯ ಹುಟ್ಟಿಸುವಂತಿದ್ದುವು. ನೆಲ ಅಷ್ಟು ದೂರ ಅಷ್ಟು ಕೆಳಗೆ ಇತ್ತು. ಅದನ್ನೇ ದಿಟ್ಟಿಸುತ್ತ ಕುಳಿತರೆ ನೆಲ ನಮ್ಮನ್ನು ನುಂಗಲು ಬರುವುದೋ ಎನ್ನುವ ದಿಗಿಲು ಹುಟ್ಟಿಸುತ್ತಿತ್ತು. ನೆಲ ನೋಡುತ್ತಿದ್ದಂತೆಯೇ ಮುಂದಿನ ಹಾದಿಯ ದುರ್ಗಮತೆಯ ಅರಿವೂ ಹೆಚ್ಚಾಯಿತು. ಮೇಲೆ ನೂರಾರು ಅಡಿ ಇನ್ನೂ ಕಡಿದಾಗಿ ಸಾಗಬೇಕು. ಈ ಮಧ್ಯೆ ಬಂಡೆ ಬಿಸಿಲಿನಿಂದ ಕಾದು ಅಲ್ಲಿ ಕುಳಿತಿರುವುದು ಅಸಾಧ್ಯವಾಯಿತು. ಬರಿಗಾಲು ಬರಿಗೈ ಸುಡತೊಡಗಿದುವು. ಹೀಗಾಗಿ ಚಲಿಸದೇ ಉಪಾಯವಿಲ್ಲ. ಲಕ್ಷ್ಮಿ, ಮೋಹನರು ಅಲ್ಲಿ ಅಡ್ಡ ಬಳಸು ದಾರಿಯಲ್ಲಿ ಮುಂದುವರಿದರು. ಮೂರು ಪತ್ಯೇಕ ನೈಲಾನ್ ಹಗ್ಗಗಳನ್ನು ತೆಗೆದುಕೊಂಡು ಆರೇಳು ಜನರ ಮೂರು ತಂಡಗಳಾಗಿ ನಮ್ಮನ್ನು ವಿಂಗಡಿಸಿ ಒಂದೊಂದು ತಂಡದವರನ್ನು ಒಂದೊಂದು ಹಗ್ಗದಿಂದ ಬಂಧಿಸಲಾಯ್ತು. ಮೊದಲಿನವನು ಸಾಹಸಿ, ಗಟ್ಟಿಮುಟ್ಟಾದವನಾಗಿರುವುದು ಅಗತ್ಯ. ಹಗ್ಗದ ಒಂದು ಕೊನೆಯನ್ನು ಅವನ ಸೊಂಟಕ್ಕೆ ಕಟ್ಟಲಾಗುವುದು. ಸುಮಾರು ಹತ್ತಡಿ ದೂರದಲ್ಲಿ ಇನ್ನೊಬ್ಬ. ಹೀಗೆ ಆರೇಳು ಜನರ ಒಂದು ಮಾನವ ಸರಪಳಿ ನಿರ್ಮಾಣವಾಗುವುದು. ಮೊದಲಿನವನು ತೆವಳಿ ಹರಿದು ಒಂದು ನೆಲೆಯಲ್ಲಿ ಸಾಕಷ್ಟು ಭದ್ರವಾಗಿ ನಿಲ್ಲುತ್ತಾನೆ. ಎರಡನೆಯವನಿಗಿಂತ ಹತ್ತು ಅಡಿ ಮುಂದೆ ಅವನು ಹೋಗುವಂತಿಲ್ಲವಷ್ಟೆ. ಹಾಗೆ ಸರಿಯುವಾಗ ಅವನನ್ನು ಹಿಂದಿನವನು ಹಗ್ಗದ ಹಿಡಿತದಿಂದ ಜಾರದಂತೆ ರಕ್ಷಣೆ ಕೊಡಲು (ಬಿಲೇ) ಸಾಧ್ಯವಾಗುತ್ತದೆ. ಮೊದಲನೆಯವನು ನಿಂತೊಡನೆ ಅವನು ಎರಡನೆಯವನನ್ನು ಬಿಲೇ ಮಾಡುತ್ತಾನೆ. ಇವನನ್ನು ಮೂರನೆಯವನು ಸಹ ಬಿಲೇ ಮಾಡುತ್ತಿರುತ್ತಾನೆ. ಮುಂದೆ ಮೂರನೆಯವನು ತೆವಳುತ್ತಾನೆ. ಈ ಮಧ್ಯೆ ಒಂದೇ ಕಡೆ ಮೂರು ಜನ ಸೇರುವುದು ಅಪಾಯಕರವಾದರೆ ಮೊದಲೆನಯವನು ಮುಂದೆ ಹೋಗಬಹುದು. ಮುಖ ತತ್ತ್ವವಿಷ್ಟು: ಒಂದು ಸಲಕ್ಕೆ ಒಬ್ಬ ಮಾತ್ರ ತೆವಳುತ್ತಿರಬೇಕು. ಉಳಿದವರು ಇರುವಲ್ಲಿಯೇ ಭದ್ರವಾಗಿ ಬಂಡೆಗೆ ಅಂಟಿಕೊಂಡಿರಬೇಕು. ಇದರಿಂದ ಸರಿಯುತ್ತಿರುವವನ ಕಾಲು ಜಾರಿ ಸಮತೋಲ ತಪ್ಪಿದ ಸಂದರ್ಭದಲ್ಲಿ ಉಳಿದವರು ಅವನನ್ನು ಹಿಡಿತದಲ್ಲಿಟ್ಟು ರಕ್ಷಿಸಲು ಸಾಧ್ಯವಾಗುವುದು.

ಇದೊಂದು ಬಗೆಯ ಟಪ್ಪೆ ಸರಿತ (relay movement), ಸಹಜೀವನ, ಸಹಕಾರ ಪದಗಳ ಸರಿಯಾದ ಅರ್ಥ ಅಪಾಯಕರ ಪ್ರಪಾತದೆದುರು ತಿಳಿಯುವಷ್ಟು ಚೆನ್ನಾಗಿ ಬೇರೆಲ್ಲಿಯೂ ಅರಿವಿಗೆ ಬರದು. ಮೇಲಿನ ಕ್ರಮದ ಚಲನೆಗೆ ಕಂಬಳೀಹುಳು ಸರಿತ ವಿಧಾನ ಎಂದು ಹೆಸರು. ದೊಡ್ಡ ಕಂಬಳೀಹುಳುವಿನ ವಿಧಾನದಲ್ಲಿ ಒಂದು ಗಂಟೆ ಸರಿದು ಬೆಟ್ಟದ ಎರಡು ಮೈಸೇರಿದ ನಿರಿಗೆ ಪ್ರದೇಶವನ್ನು ತಲಪಿದೆವು. ಇಂಥ ಒಂದು ಸರಪಳಿಯಲ್ಲಿ ಅಶೋಕ ಮತ್ತು ನಾನು ಕೂಡ ಇದ್ದೆವು. ಉರುಳಿದರೆ ಒಂದೇ ಬುಟ್ಟಿಯಲ್ಲಿ ಎಲ್ಲ ಮೊಟ್ಟೆಗಳನ್ನು ಇಡಬಾರದು ಎನ್ನುವ ಗಾದೆಗೆ ಇನ್ನೊಂದು ಪುರಾವೆ ಸಿಕ್ಕಿದಂತಾಗುತ್ತಿತ್ತು.

ನಿರಿಗೆಯಲ್ಲಿ ಸ್ವಲ್ಪ ನೆರಳಿತ್ತು. ೧೦೦೦ ಅಡಿ ಎತ್ತರದಲ್ಲಿದ್ದೇವೆ. ಎಡಗಡೆ ಬಲಗಡೆ ಬೆಟ್ಟದ ಉಬ್ಬು ಪ್ರದೇಶಗಳು. ಅಗ್ರಭಾಗ ಇನ್ನೊಂದು ಸಾವಿರ ಅಡಿ ಮೇಲೆ. ಒಂದೋ ಈ ನಿರಿಗೆಯಲ್ಲೇ ಮೇಲೆ ಹೋಗಬೇಕು, ಇಲ್ಲ  ಕೆಳಕ್ಕೆ ಇಳಿಯಬೇಕು. ಪುನಃ ಇನ್ನೊಂದು ಮೈಗೆ ಹೋಗುವುದು ಆ ಬಿಸಿಲಿನ ಝಳದಲ್ಲಿ ಸಾಧ್ಯವಿಲ್ಲ. ಮೇಲಿನ ಸಾವಿರ ಅಡಿ ಉಗ್ರವಾಗಿತ್ತು. ನೀರು ಹರಿದು ಹರಿದು ನಿರಿಗೆ ಬಲು ನುಣುಪಾಗಿತ್ತು.ನಮ್ಮ ಬಳಗದಲ್ಲಿ ಅಶೋಕನ ಸಮೇತ ಎಂಟು ಜನ ಮಾತ್ರ ಈ ಕೊನೆಯ ಸಾಹಸ ನಿರ್ವಹಿಸಲು ಶಕ್ತರು ಎಂದು ನನಗೆ ಇಷ್ಟರಲ್ಲಿ ಮನವರಿಕೆಯಾಗಿತ್ತು. ಅವರನ್ನು ಆರಿಸಿ ಲಕ್ಷ್ಮಿಯ ನೇತೃತ್ವದಲ್ಲಿ ಕಂಬಳೀಹುಳು ಕ್ರಮದಲ್ಲಿ ಮೇಲೆ ಹೋಗಲು ಕಳಿಸಿದೆ. ಉಳಿದವರಲ್ಲಿ ಹಲವರಿಗೆ ಮುಖ ಕಪ್ಪಿಟ್ಟಿತು. ಅವರೆಲ್ಲರೂ ಮೇಲೇರಲು ಅತ್ಯುತ್ಸುಕರಾಗಿದ್ದರು. ಪ್ರತಿಯೊಬ್ಬನೂ ಸಾಹಸ ಪ್ರದರ್ಶನ ಮಾಡಲು ಮುನ್ನುಗ್ಗುವುದು ಸಹಜವೇ. ಅಪಾಯ ಸನ್ನಿವೇಶದಲ್ಲಿ ಮುಂದಾಳುವಿನ ಎದುರು ಹೆಜ್ಜೆ ಹೆಜ್ಜೆಗೆ ಏಳುವ ಪ್ರಶ್ನೆ ಇದೇ: ವೈಯಕ್ತಿಕ ದಕ್ಷಿಣ್ಯಕ್ಕೆಡೆಗೊಡದೇ ನಿಷ್ಪಕ್ಷಪಾತವಾಗಿ ನಿರ್ಧರಿಸಬೇಕು. ಒಂದು ವಿಷಯ ಮುಂದಾಳು ಚೆನ್ನಾಗಿ ತಿಳಿದಿರತಕ್ಕದ್ದು: ಇಂಥ ‘ಸ್ವಯಂಕೃತಾಪರಾಧಗಳಲ್ಲಿ ಎಲ್ಲವೂ ಸುಗಮವಾಗಿ ಎಲ್ಲರೂ ಸುರಕ್ಷಿತವಾಗಿ ಮರಳಿದರೆ ಹೊಗಳುವವರು ಕೇವಲ ಕೆಲವರು. ಉಳಿದವರು ಒಂದೋ ತಾತ್ಸಾರ ಮನೋವೃತ್ತಿ ಪ್ರದರ್ಶಿಸುತ್ತಾರೆ, ಇಲ್ಲಾ ಮತ್ಸರಿಗಳಾಗುತ್ತಾರೆ. ಏನಾದರೂ ಅಲ್ಪಸ್ವಲ್ಪ ಪರಮೋಸದಿಂದಲೇ ಆದರೂ ಅಪಾಯ ಘಟಿಸಿದರೆ, ಸಹಾನುಭೂತಿ, ಸಹಾಯ ನೀಡುವವರು ಬೆರಳೆಣಿಕೆಯಲ್ಲಿ ಕೂಡ ಸಿಕ್ಕುವುದಿಲ್ಲ. ಆದರೆ ದೋಷಾರೋಪಣೆ ಮಾಡುವವರು, ಧರ್ಮಾರ್ಥ ಸಲಹೆ ಸೂಚನೆ ನೀಡುವವರು ವಿಪುಲವಾಗಿರುತ್ತಾರೆ. ನಾನು-ಮೊದಲೇ-ಹೇಳಲಿಲ್ಲವೇ-ಮನೋಧರ್ಮೀ ಸರ್ವಜ್ಞರಿವರು! ಇದೆಲ್ಲ ಗೊತ್ತಿದ್ದೂ ಮೆರವಣಿಗೆ ಸಾಗಿಯೇ ಇರುತ್ತದೆ ಅನ್ನಿ. ಇಂಥ ಅಪಾಯ ಎದುರಿಸಿ ಜಯ ಲಭಿಸುವಾಗ ನಮಗೊದಗುವ ಕೃತಾರ್ಥತೆ ಅದನ್ನು ಅನುಭವಿಸಿದವರಿಗೇ ಗೊತ್ತು. ಬಂಡೆ ಏರುವುದೇಕೆ? ಏರದಿದ್ದರೆ ಅಥವಾ ಬಳಸುದಾರಿಯಿಂದ ಏರಿದರೆ ಆಗದೇ? ಎಂದು ಏರದವನು ಏರಿದವನನ್ನು ಪ್ರಶ್ನಿಸಿದಾಗ, ಅದು ಇರುವುದರಿಂದ ಏರಿದೆ. ಏರಿ ಮೇಲೆ ಸೇರಿದ ಮೇಲೆ ಏಕೆ ಏರಿದೆ ಎಂಬುದರ ಅರಿವಾಯಿತು ಎಂದನಂತೆ. ಕೃತಾರ್ಥತೆಗಾಗಿ ಬಂಡೆ ಏರಬೇಕು.

ಇಳಿಯುವವರ ಜತೆಗೆ ನಾನೂ ಇದ್ದೆ. ಎಷ್ಟೋ ಸಲ ಕಡಿದಾದ ಬಂಡೆ ಇಳಿಯುವುದು ಏರುವುದಕ್ಕಿಂತಲೂ ಕಷ್ಟ. ನಮಗಿಲ್ಲಿ ಅಂಥ ಅನುಭವವಾಯಿತು. ಕಾಲು ಕೆಳಗೆ ಇಳಿಬಿಟ್ಟು ಕುಳಿತು ಕೈಕಾಲುಗಳ ಸಹಾಯದಿಂದ ಜಾರಿ ಇಳಿಯುವುದೊಂದೇ ದಾರಿ. ಒಂದೊಂದು ಸಲಕ್ಕೆ ೫ ಅಡಿ, ೬ ಅಡಿ ದೂರ ಜಾರುತ್ತ ಜಾರುತ್ತ ಆ ೧೦೦೦ ಅಡಿಯನ್ನು ಮುಗಿಸಿದೆವು. ಜಾರುವಿಕೆಯ ಅನುಭವ ಸೊಗಸಾಗಿತ್ತು. ಇಳಿದು ನಿಂತಾಗ ನಮಗೆ ಲಭಿಸಿದ ಬೆಟ್ಟದ ಪ್ರಸಾದ ಗೊತ್ತಾಯಿತು - ನಮ್ಮೆಲ್ಲರ ಖಾಕಿ ಪ್ಯಾಂಟಿನ ಪೃಷ್ಠಭಾಗ ಹರಿದು ಛಿದ್ರವಿಚ್ಛಿದ್ರವಾಗಿತ್ತು! ಸದ್ಯ ನಾವು ಪೇಟೆಯಲ್ಲಿಲ್ಲವಲ್ಲ. ಹಿಂತಿರುಗುವುದು ನಮ್ಮ ಲಾರಿಯಲ್ಲೇ ತಾನೆ ಎಂದು ಸಮಾಧಾನದ ನಿಟ್ಟುಸಿರುಬಿಟ್ಟೆವು. ಮುಂದೆ ಅರ್ಥ ತಾಸಿನಲ್ಲಿ ಬಳಸುದಾರಿಗಾಗಿ ಹತ್ತಿ ಶಿಖರದಲ್ಲಿ ಉಳಿದವರನ್ನು ಸಂಧಿಸಿದೆವು.

ಸಾವನದುರ್ಗದ ತಳದಲ್ಲಿ ನಿಂತು ನಾವು ತೆವಳಿ ಏರಿದ ದಾರಿ ನೋಡಿದಾಗ ಭಯವಾಯಿತು. ತೀರ ದುಡುಕಿದ್ದೆವು. ಹಗ್ಗ ಕಟ್ಟಿಕೊಳ್ಳುವ ಮೊದಲೇ ಯಾರಾದರೂ ಜಾರಿದ್ದರೆ ಮತ್ತೆ ಅವನ ಆಸೆ ಮುಗಿದಂತೆಯೇ. ಕೃತಾರ್ಥತೆಯ ಸಂತೋಷದೊಡನೆ ಈ ನೆನವರಿಕೆ ನನ್ನಲ್ಲಿ ಈಗಲೂ ಚಳಿ ಹುಟ್ಟಿಸುತ್ತದೆ.

ಯೂನಿವರ್ಸಿಟಿಯಿಂದ ಧನಸಹಾಯ ಮುಂಗಡವಾಗಿ ಲಭಿಸಿತು. ಸರಕಾರದಿಂದ ಎನ್‌ಸಿಸಿ ವಿಭಾಗದ ಮೂಲಕ ಒಂದು ಸಾವಿರ ರೂಪಾಯಿ ಶಿಕ್ಷಣ ಸಾಮಗ್ರಿ ಕೊಳ್ಳಲು ದೊರೆಯಿತು. ಡಾರ್ಜಿಲಿಂಗಿನ ಹಿಮಾಲಯ ಪರ್ವತಾರೋಹಣ ಸಂಸ್ಥೆಗೆ ಬರೆದು ನೈಲಾನ್ ಹಗ್ಗ, ಗವಸು ಮುಂತಾದವನ್ನು ತರಿಸಿಕೊಂಡೆವು. ಅಲ್ಲಿಂದ ಒಬ್ಬ ನುರಿತ ಶಿಕ್ಷಕನನ್ನು  ನಮ್ಮ ಕುದುರೆಮುಖ ಶಿಬಿರದಲ್ಲಿ ಸಹಾಯಕನಾಗಿ ಬರಲು ಪತ್ರ ಬರೆದೆವು. ಅವನು ಜನವರಿ ೧೫ರ ಸುಮಾರಿಗೆ ಬೆಂಗಳೂರಿಗೆ ಬಂದು ತಲಪಬೇಕಾಗಿತ್ತು. ಮೈಸೂರು ಸರಕಾರದ ವೈದ್ಯ, ಆಹಾರ, ಅರಣ್ಯ ಮುಂತಾದ ಇಲಾಖೆಗಳಿಗೆ ಕಾಗದ ಬರೆದು ಅವರ ಸಹಕಾರ, ಸಹಾಯ ಯಾಚಿಸಿದೆವು. ಎಲ್ಲ ಕಡೆಗಳಿಂದಲೂ ನಮಗೆ ಸಹಕಾರ, ಪ್ರೋತ್ಸಾಹ ಒದಗಿದುವು. ಜನವರಿ ೩ರಂದು ವಾರ್ಷಿಕ ಶಿಕ್ಷಣ ಶಿಬಿರ ಮುಗಿಸಿ ಮರಳುವಾಗ ಕುದುರೆಮುಖ ಕೈ ಅಳತೆ ದೂರದಲ್ಲಿರುವಂತೆ ಭಾಸವಾಯಿತು. 

(ಮುಂದುವರಿಯಲಿದೆ)

3 comments:

 1. ಪುಸ್ತಕದಲ್ಲಿ ಕಾಣ ಸಿಗದಂಥಹಾ ಅಪರೂಪದ ಭಾವ ಚಿತ್ರಗಳು! ಮೊದಲನೇ ಪಟದಲ್ಲಿ ಕಂಡು ಬರುವ ಒಬ್ಬ ಜೂನಿಯರ್ ಕೆಡೇಟ್ ಮತ್ತು ಸೀನಿಯರ್ ಅಂಡರ್ ಆಫೀಸರ್ ಯಾರು? ವಂದನೆಗಳು. - ಪೆಜತ್ತಾಯ ಎಸ್. ಎಮ್.

  ReplyDelete
  Replies
  1. ಅಶೋಕವರ್ಧನ ಜಿ.ಎನ್20 August, 2013 09:37

   :-)ಸೀ: ಅಶೋಕವರ್ಧನ, ಜೂ: ಆನಂದವರ್ಧನ

   Delete
 2. ಛೆ ಎ೦ಥ ಮಾರಾಯ ನಿನ್ನ ಹತ್ತಿರ ಎಲ್ಲಾ ಪಟ ಇದ್ದು, ನೆನೆಪಿನ ದೋಣಿಯಲಿ ಪಯಣಿಗ ನಾನಮ್ಮ ... ವಾವ್ ನೋಡಿ, ಓದಿ ಮೂಕ ವಿಸ್ಮಿತನಾಗಿದ್ದೇನೆ, ಹಾಕಿದಕ್ಕೆ ಭಯ೦ಕರ ಧನ್ಯೋಸ್ಮಿ

  ReplyDelete