09 July 2013

ಸ.ಸಂಘಕ್ಕೆ ಹೊಸವರ್ಷದ ಮುಖಾಮುಖಿ


ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಹನ್ನೆರಡು
ಅಧ್ಯಾಯ ಇಪ್ಪತ್ತಾರರಲ್ಲಿ ಎರಡನೇ ಭಾಗ

ಸರ್ವಸಿದ್ಧರಾಗಿ ಸರ್ವಾಂಗಭೂಷಿತರಾಗಿ ನವ ಕಾಲೇಜ್‌ವರ್ಷ ಪ್ರಾರಂಭವನ್ನು ಸ್ವಾಗತಿಸಿದೆವು. ಕಾವೇರಿಯಲ್ಲಿ ಹೊನಲೇರಿತು. ಸಾಮೂಕಳದಲ್ಲಿ ಕಾವೇರಿತು. ಪೇಟೆ ವ್ಯಾಪಾರಿಗಳು ಹೊಸ ಪಟ್ಟು ಹೊಡೆದರು. ಇದರ ಕುಟ್ಟು ಪೆಟ್ಟು ನಮ್ಮ ಆಯಕಟ್ಟು ಪ್ರದೇಶಕ್ಕೆ ಬಿರುಸಾಗಿಯೇ ತಟ್ಟಿತು. ಕಾಲೇಜ್ ಹಾಗೂ ಉಪಪಠ್ಯ ಪುಸ್ತಕ ಎಲ್ಲವುಗಳ ಮುದ್ರಿತ ಬೆಲೆಗಳ ಮೇಲೆ ರೂಪಾಯಿಗೆ ಒಂದಾಣೆ ಸೋಡಿ ಬಿಡುವುದಾಗಿ ಅವರು ಘೋಷಿಸಿದರು. ನಾಲ್ಕು ರೂಪಾಯಿ ಬೆಲೆಯ ಪುಸ್ತಕವನ್ನು ನಾಲ್ಕೂವರೆಗೆ ಮಾರುತ್ತಿದ್ದವರು ಈಗ ಮೂರೂಮುಕ್ಕಾಲಕ್ಕೆ ಕೊಡಲು ಸಿದ್ಧರಾದದ್ದು ವಿದ್ಯಾರ್ಥಿಗಳ ವಿಚಾರದಲ್ಲಿ ಅವರಿಗೆ ಧಿಡೀರನೆ ಉಗಮಿಸಿದ ಮರುಕದ ದ್ಯೋತಕ ಖಂಡಿತ ಅಲ್ಲ ಎಂಬುದು ನಮಗೆ ನಿಚ್ಚಳವಾಗಿದ್ದರೂ ವಿದ್ಯಾರ್ಥಿಗಳಿಗೆ ಇದನ್ನು ಮನವರಿಕೆ ಮಾಡುವುದು ಹೇಗೆ? ನಗದು ವ್ಯಾಪಾರದ ನಿಷ್ಠುರ ವ್ಯವಹಾರ ಪ್ರಪಂಚದಲ್ಲಿ ನೈತಿಕ ಕೋಮಲತೆಗೆ ಎಡೆ ಎಲ್ಲಿದೆ? ಯಾವ ಕಾಲೇಜ್ ವಿದ್ಯಾರ್ಥಿಗಳ ಸಾರ್ವಕಾಲಿಕ ಹಿತವೊಂದನ್ನೇ ಲಕ್ಷ್ಯದಲ್ಲಿಟ್ಟುಕೊಂಡು ಈ  ವಿದ್ಯಾರ್ಥಿ ಸಂಘವನ್ನು ಆರಂಭಿಸಲಾಗಿತ್ತೋ ಸ್ವತಃ ಆ ವಿದ್ಯಾರ್ಥಿಗಳಿಗೇ ಪಠ್ಯ ಪುಸ್ತಕಗಳ ವಿಚಾರದಲ್ಲಿ ಮಾತ್ರ ಇದರ ಸೇವೆ ಬೇಕಾಗಿರಲಿಲ್ಲ ಎಂಬ ನಗ್ನ ಸತ್ಯ ನಮಗೆ ಪ್ರತ್ಯಕ್ಷವಾದಾಗ ಸಂತೋಷಿಸುವ ಸ್ಥಿತಿಯಲ್ಲಿ ನಾವಿರಲಿಲ್ಲ. ಪಠ್ಯಪುಸ್ತಕಗಳ ಮತ್ತು ಅವುಗಳೊಂದಿಗೆ ಇತರಾವಶ್ಯಕತೆಗಳ ವ್ಯಾಪಾರದ ಹೊನಲು ಪೇಟೆಗೆ ಹರಿಯಿತು. ನಾವೂ ಸೋಡಿ ಬಿಡಬಹುದಿತ್ತು. ಆದರೆ ನಮಗೆ ಇದೊಂದು ಗೌರವದ ಪ್ರಶ್ನೆ ಎನಿಸಿತು: ಪೇಟೆಯ ಅಸ್ತಿತ್ವವನ್ನು ನಾವು ಒಪ್ಪಬೇಕೇ? ಮೊದಲೇ ಮುದ್ರಿತ ಬೆಲೆ ತೆತ್ತವರಿಗೆ ನಮ್ಮ ನೈತಿಕ ಜವಾಬುದಾರಿಕೆ ಏನು? ಪೇಟೆಯೊಂದಿಗೆ ಪೈಪೋಟಿಗೆ ಇಳಿಯಬೇಕೇ? ಸಲ್ಲದು. ಮುದ್ರಿತ ಬೆಲೆಗಳಿಗೆ ಮಾತ್ರ ಪುಸ್ತಕಗಳನ್ನು ಮಾರುವೆವೆಂಬ ನಮ್ಮ ನಿಲವನ್ನು ನಾವು ತ್ಯಜಿಸಲು ಇಷ್ಟಪಡಲಿಲ್ಲ. ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾಯಿತು. ತರಗತಿಗಳಲ್ಲಿ ಅಧ್ಯಾಪಕರ ಮೂಲಕ ಬೋಧಿಸಿದ್ದಾಯಿತು. ಆದರೆ ಮೊತ್ತದಲ್ಲಿ ಫಲ ಮಾತ್ರ ಸಿದ್ಧಿಸಲಿಲ್ಲ. ಸಾವಿರಾರು ರೂಪಾಯಿ ಬೆಲೆಯ ಪುಸ್ತಕಗಳು ನಾವು ಗಳಿಸಿದ ಹೊಸ ಅನುಭವದ ವಿಫಲ ಪ್ರತೀಕಗಳಾಗಿ ಅಟ್ಟಳಿಗೆಗಳಿಂದ ನಮ್ಮನ್ನು ತಿವಿದು ದಿಟ್ಟಿಸುತ್ತಿದ್ದುವು.  ಮುಂದಿನ ವರ್ಷ ಅವುಗಳಿಗೆ ಬೇಡಿಕೆ ಒದಗುವುದು ತೀರ ಅಸಂಭಾವ್ಯ. ಬೇರೇನೂ ದಾರಿ ತೋರದೆ ನೇರ ಪ್ರಕಾಶಕರಿಗೆ ನಮ್ಮ ಪಾಡನ್ನು ತೋಡಿಕೊಳ್ಳುವ ಕಾಗದಗಳನ್ನು ಬರೆದೆವು. ಅವರಿಂದ ಬಂದ ಮಾರೋಲೆಗಳು ಸಂಜೀವಿನಿಗಳಾಗಿ ನಮಗೆ ಚೇತನ ನೀಡಿದುವು. ಮಾರಾಟವಾಗದ ಪುಸ್ತಕಗಳನ್ನು ನಮ್ಮ ಖರ್ಚಿನಲ್ಲಿ ಹಿಂತಿರುಗಿಸಲು ಅವರು ಸೂಚಿಸಿದ್ದರು.


ಮಳೆಗಾಲದ ಕಾವೇರಿಯ ಗರ್ಜನೆ ಕ್ರಮೇಣ ತಗ್ಗಿತು. ದಂಡೆ ಮೀರಿದ ಉತ್ಸಾಹದಿಂದ ಪ್ರವಹಿಸಿದ ಜೀವವಾಹಿನಿ ಈಗ ಪಾತಳಿಗೆ ಸೀಮಿತವಾಗಿ ಸಾಂಪ್ರದಾಯಿಕ ರೀತ್ಯ ಹರಿಯುತ್ತಿತ್ತು. ನಮ್ಮ ವ್ಯಾಪಾರವೂ ಹಾಗೆ. ಇಪ್ಪತ್ತೈದು ಸಾವಿರ ರೂಪಾಯಿಗಳ ವ್ಯಾಪಾರವನ್ನು ಆ ನಾಲ್ಕೈದು ತಿಂಗಳುಗಳಲ್ಲಿ ಸಾಧಿಸಿದ್ದು ನಾವು ನಂಬಲಾಗದ ದಿಟವಾಗಿತ್ತು. ವ್ಯಾಪಾರದ ಅಮಲು ಇಳಿಯುತ್ತಿದ್ದಂತೆ ನಮಗೊಂದು ಜಾಪಾಳ ಮಾತ್ರೆ ಸೇವನೆಯ ಅನುಭವ ನೀಡುವ ಪತ್ರ ಮದ್ರಾಸಿನಿಂದ ಬಂತು. ಶಾಯಿ ತಯಾರಕ ಸಂಸ್ಥೆಯೊಂದು ನೋಟೀಸ್ ಜಾರಿ ಮಾಡಿತ್ತು: ನೀವು ನಮ್ಮ ಪ್ರಪಂಚ ವಿಖ್ಯಾತ ಪೈಲಟ್ ಶಾಯಿಯನ್ನು ನಾವು ನಿಗದಿ ಮಾಡಿರುವ ಮಾರಾಟ ಬೆಲೆಗಿಂತ ಕಡಿಮೆ ಬೆಲೆಗೆ ಮಾರುತ್ತಿದ್ದೀರೆಂದು ತಿಳಿದಿದ್ದೇನೆ. ಇದು ತಪ್ಪು. ಇದರಿಂದ ನಮ್ಮ ಸಾರ್ವತ್ರಿಕ ಮಾರುಕಟ್ಟೆ ವ್ಯವಹಾರಕ್ಕೆ ಅಪಾರ ಹಾನಿ ಒದಗಿದೆ. ಒಡನೆ ನೀವು ಈ ಅವ್ಯವಹಾರವನ್ನು ನಿಲ್ಲಿಸಿ ಹಾಗೆಂದು ನಮಗೆ ಬರೆದು ದೃಢಪಡಿಸದಿದ್ದರೆ ನಿಮ್ಮ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾದೀತು ಇದಿಷ್ಟು ಆ ಕಾಗದದ ಸಾರಾಂಶ. 

ನಾವು ಎಸಗಿದ್ದ ಅಪರಾಧ ಏನು? ಶಾಯಿ ಕುಪ್ಪಿಗಳನ್ನು ನಮಗೆ ಶೇಕಡಾ ಆರೂಕಾಲು ಲಾಭ ಬರುವಂತೆ ಮಾರಿದ್ದು, ಈ ಮಾರಾಟ ಬೆಲೆ ಮುದ್ರಿತ ಬೆಲೆಗಿಂತ ನಾಲ್ಕಾಣೆ ಕಡಿಮೆ ಆದದ್ದು, ಅದರಿಂದ ಪೇಟೆಯ ಪರದರಿಗೆ ಪರದಾಟ ಒದಗಿದ್ದು. ವಾಣಿಜ್ಯ ಪ್ರಪಂಚದ ನೀತಿ ನಿಯತ್ತು ಕಾನೂನು ವಹಿವಾಟು ಏನೂ ತಿಳಿಯದಿದ್ದ ನಾನು ವ್ಯವಹಾರ ಪ್ರಜ್ಞೆ ವಿಧಿಸಿದ ಪ್ರಕಾರ ಒಡನೆ ಉತ್ತರ ಬರೆದೆ. ನಾವು ಅಂಗಡಿಯಲ್ಲಿ ಮಾಲುಗಳನ್ನು ಯಾವ ದರದಲ್ಲಿ ಮಾರಬೇಕು ಎನ್ನುವುದು ನಮ್ಮ ನಿರ್ಧಾರಕ್ಕೆ ಸೇರಿದ್ದು. ಇಲ್ಲಿ ನಿಮ್ಮ ಹಸ್ತಕ್ಷೇಪ ಅನಾವಶ್ಯಕ.

ಇದಕ್ಕೆ ಅವರಿಂದ ಬಂದ ಮಾರೋಲೆಯ ಶ್ರುತಿ ಸ್ವಲ್ಪ ತಗ್ಗಿತ್ತು. ನೀವಂದಿರುವುದು ನಿಜ, ಆದರೂ ಸ್ವಲ್ಪ ತಣ್ಣಗೆ ಯೋಚಿಸಿ ನೋಡಿ. ಆಗ ನಾವಂದಿರುವುದು ಸತ್ಯ ಎಂದು ನಿಮಗೆ ಅರಿವಾಗದಿರದು. ಅಲ್ಲದೇ ನಾವು ನಿಗದಿಸಿರುವ ಮಾರಾಟ ಬೆಲೆಯ ಪ್ರಕಾರ ಮಾರುವುದರಿಂದ ನಿಮಗೆ ದೊರೆವ ಲಾಭವೂ ಅಧಿಕವಾಗುವುದಷ್ಟೆ?

ಇದಕ್ಕೆ ನಾನು ಬರೆದ ಉತ್ತರ ಈ ಅವ್ಯವಹಾರಕ್ಕೆ ಪೂರ್ಣ ವಿರಾಮ ಹಾಕಿತು. ಮಡಿಕೇರಿಯ ಮಂಜು ಮುಸುಕಿರುವ ಬೆಟ್ಟದ ಕೊಡಿಯ ಮೇಲಿರುವ ನಾವಲ್ಲ ತಣ್ಣಗೆ ಯೋಚಿಸಬೇಕಾದವರು, ಬದಲು, ಮದ್ರಾಸಿನ ಕಲುಷಿತ ಕಾವು ಪರಿಸರದಲ್ಲಿರುವ ನೀವು. ಈ ವಿಚಾರದಲ್ಲಿ ಇನ್ನು ಪತ್ರವ್ಯವಹಾರ ಇಲ್ಲ.

ಮುಂದೆ ಕೆಲವು ತಿಂಗಳ ಬಳಿಕ ಅದೇ ಕಂಪೆನಿಯಿಂದ ನಮಗೊಂದು ಕಾಗದ ಬಂತು. ಸುಮಾರು ನಾಲ್ಕುನೂರು ರೂಪಾಯಿ ನಿವ್ವಳ ಮೌಲ್ಯದ ಶಾಯಿ ಕುಪ್ಪಿಗಳ ಭಾಂಗಿಯನ್ನು ಅವರು ಮಡಿಕೇರಿ ಪೇಟೆಯ ಅಂಗಡಿಯೊಂದಕ್ಕೆ ರವಾನಿಸಿದ್ದರಂತೆ. ಆದರೆ ಆ ಅಂಗಡಿಯವರು ಅದರ ದಾಖಲೆ ಪತ್ರಗಳನ್ನು ಬ್ಯಾಂಕಿಗೆ ಹಣ ನೀಡಿ ಪಡೆದುಕೊಳ್ಳದ್ದರಿಂದ ತಮಗೆ ತುಂಬ ತೊಂದರೆ ಆಗಿದೆ. ನಾವು ನೇರವಾಗಿ (ಅಂದರೆ ಹಣ ಪಾವತಿ ಮಾಡದೆ) ಈ ದಾಖಲೆಗಳನ್ನು ಬ್ಯಾಂಕಿನಿಂದ ತೆಗೆದುಕೊಂಡು ಭಾಂಗಿಯನ್ನು ಬಿಡಿಸಿ ಶಾಯಿಕುಪ್ಪಿಗಳು ಮಾರಾಟವಾದ ಬಳಿಕ ಮೊಬಲಗನ್ನು ತಮಗೆ ಪಾವತಿಸಿದರೆ ಮಹದುಪಕಾರವಾಗುತ್ತದೆ. ಈ ಸೌಕರ್ಯವನ್ನು ನಾವು ಅವರಿಗೆ ಒದಗಿಸಿಕೊಟ್ಟೆವು. ಹೀಗೆ ಜಗಳದಿಂದ ಆರಂಭವಾದ ನಮ್ಮ ಸಂಬಂಧ ಮುಂದೆ ಚಿರಕಾಲ ಸ್ನೇಹ ವಿಶ್ವಾಸದ ಬೆಸುಗೆಯಾಗಿ ಉಳಿಯಿತು. ನೀತಿಯ ನೆಲಗಟ್ಟಿನಲ್ಲಿ ಪ್ರೀತಿ ಸಂವರ್ಧಿಸಿತು.

ವ್ಯಾಪಾರದ ಬಿರುಸು ವೇಳಾಪಟ್ಟಿಗೆ ಹೊಂದಿ ಹೋದ ನಮಗೆ ದಸರಾನಂತರದ ದಿವಸಗಳು ಭಾರವಾಗತೊಡಗಿದ್ದುವು. ಈಗ ಗಿರಾಕಿಗಳಿಗೆ ಅನಾವಶ್ಯಕವಾದ ಸರಕುಗಳಿಂದ ಏನು ವಹಿವಾಟು ತಾನೇ ಕುದುರೀತು? ಮೇ ತನಕ ಮಂದ್ರ ಸ್ಥಾಯಿಯ ವಿಳಂಬ ಗತಿಯೇ ನಮ್ಮ ಪಾಡು ಎಂದೆನ್ನಿಸಿದಾಗ ಬಿಡಿಚಲು ಜಾಸ್ತಿ ಬಡಿಯಿತು. ಆದರೆ ವ್ಯಾಪಾರದಲ್ಲಿ ಮುಂದಿನ ತಿರುಗಾಸು ಅದೆಂಥ ವಿಸ್ಮಯವನ್ನೋ ಆಘಾತವನ್ನೋ ಕಾದಿರಿಸಿದೆ ಎಂಬುದು ಊಹಾತೀತ. ಅಕ್ಟೋಬರ್ ತಿಂಗಳ ತರುಣದಲ್ಲಿ ಕಾಲೇಜಿನ ಇಬ್ಬರು ಅಧ್ಯಾಪಿಕೆಯರು ನಮ್ಮ ಅಂಗಡಿಗೆ ಬಂದರು. ತಾವು ತಂದಿದ್ದ ಮಾದರಿ ತುಕ್ಕುರಹಿತ ಉಕ್ಕು (ಸ್ಟೇನ್‌ಲೆಸ್ ಸ್ಟೀಲ್) ಊಟದ ಗಂಗಳ ತೋರಿಸಿ ಅಂಥ ಎರಡು ಗಂಗಳಗಳನ್ನು ತರಿಸಿಕೊಡುವುದು ಸಾಧ್ಯವಾದೀತೇ ಎಂದು ಕೋರಿದರು. ನೇರವಾಗಿ ಯಾವ ಗಿರಾಕಿಗೂ ಇಲ್ಲ ಎನ್ನಬಾರದು. ಸಾಧ್ಯವಾಗುವಷ್ಟೂ ಸಹಕಾರ ನೀಡಬೇಕು ಎಂಬ ನಮ್ಮ ಎಂದಿನ ಧೋರಣೆಯ ಅನುಸಾರ ಈ ಹೊಸ ಸೇವೆಗೆ ಇಳಿದೆವು. ಮಂಗಳೂರಿನ ಪರಿಚಿತ ಸಗಟು ಅಂಗಡಿಯೊಂದರಿಂದ ಆರು ಗಂಗಳಗಳನ್ನು ತರಿಸಿ ಅಸಲಿನ ಮೇಲೆ ರೂಪಾಯಿಗೆ ಒಂದಾಣೆ ಲಾಭವಿರಿಸಿ ಆ ಅಧ್ಯಾಪಿಕೆಯರಿಗೆ ಎರಡನ್ನು ಮಾರಿದೆವು. ಇಷ್ಟು ಕಡಿಮೆ ಬೆಲೆ! ಇದು ಸಾಧ್ಯವೇ? ನೀವೇನೂ ನಷ್ಟ ಮಾಡಿಕೊಂಡಿಲ್ಲವಷ್ಟೆ ಎಂಬ ಪ್ರಾಮಾಣಿಕ ಸಂದೇಹವನ್ನು ಅವರು ಎತ್ತಿದರು. ಇನ್‌ವಾಯಿಸನ್ನೇ ಅವರಿಗೆ ಕೊಟ್ಟು ನೋಡ ಹೇಳಿದೆ. ಅವರು ಆ ಮೊದಲು ಮಡಿಕೇರಿಯಲ್ಲೇ ಕೊಂಡಿದ್ದ ಹದಿನೈದು ರೂಪಾಯಿ ಬೆಲೆಯ ತಟ್ಟೆಗೆ ನಾವು ವಿಧಿಸಿದ ಬೆಲೆ ಕೇವಲ ಐದು ರೂಪಾಯಿ! ಅಲ್ಲದೇ ನಮಗೆ ಲಾಭ ಕೂಡಾ ಉಂಟು! ಅಷ್ಟೂ ತಟ್ಟೆಗಳನ್ನು ಆಗಲೇ ಅವರು ಬಿಕರಿ ಮಾಡಿದರು. ಈ ಸುದ್ದಿ ಬೆಳಕಿನ ವೇಗಕ್ಕಿಂತಲೂ ರಭಸದಿಂದ ಊರಿನಲ್ಲಿ ಹಬ್ಬಿತು. ಮುಂದಿನ ದಿನಗಳಲ್ಲಿ ಸಹೋದ್ಯೋಗಿಗಳೂ ಸಾರ್ವಜನಿಕರೂ ಬಹುಸಂಖ್ಯೆಯಲ್ಲಿ ನಮ್ಮಲ್ಲಿಗೆ ಬಂದು ತುಕ್ಕುರಹಿತ ಉಕ್ಕು ಪಾತ್ರೆಗಳಿಗೆ ಬೇಡಿಕೆ ಸಲ್ಲಿಸಿದರು. ನನಗೆ stainless person ಬಿರುದನ್ನೂ ಪ್ರದಾನಿಸಿದರು! ಈ ಪ್ರಕಾರ ಆರಂಭವಾದ ನಮ್ಮ ಉಕ್ಕು ವಿಭಾಗ ಬಹು ವ್ಯಾಪಕವಾಗಿ ಬೆಳೆದು ನಮ್ಮನ್ನು ಹೊಸ ಲೋಕಕ್ಕೇ ಕೊಂಡೊಯ್ದಿತು. ಮುಂಬಯಿಯ ಪ್ರಮುಖ ತಯಾರಕ ಕಂಪೆನಿಯೊಂದರೊಡನೆ ನಾವು ತುಕ್ಕುರಹಿತ ಉಕ್ಕು ಪಾತ್ರೆಗಳ ಸಗಟು ವ್ಯಾಪಾರ ತೊಡಗಿದೆವು. ಆದರೆ ಈ ಕಂಪೆನಿಯ ವ್ಯವಹಾರ ದಗಲ್ಬಾಜಿಯದು: ತೂಕದಲ್ಲಿ ಕಡಿಮೆ, ಸಂಖ್ಯೆಯಲ್ಲಿ ಕೊರತೆ, ಕೊನೆಗೆ ತೂತಾದ ಅಥವಾ ನಗ್ಗಿಹೋದ ಪಾತ್ರೆಗಳ ಸರಬರಾಜು ಕೂಡ. ಇವನ್ನೆಲ್ಲ ಯಾದಿ ಮಾಡಿ ತಿಳಿಸಿದರೆ ಒಂದೋ ಉತ್ತರವೇ ಇಲ್ಲ. ಅಥವಾ ನಮ್ಮ ಗೋದಾಮು ಬಿಡುವ ತನಕ ಎಲ್ಲವೂ ಸರಿಯಾಗಿಯೇ ಇತ್ತು. ಆದ್ದರಿಂದ ಈ ವಿಚಾರದಲ್ಲಿ ನಮ್ಮ ಹೊಣೆಗಾರಿಕೆ ಏನೂ ಇಲ್ಲ ಎನ್ನುವ ವಿಶ್ವಾಮಿತ್ರ ವಿನ್ಯಾಸ. ಅನಿವಾರ್ಯವಾಗಿ ನಾವು ಒಂದು ತಪ್ಪು ಮಾಡಬೇಕಾಯಿತು. ಆ ಸಲ ಬಂದ ಅವರ ದಾಖಲೆ ಪತ್ರಗಳನ್ನು (ನಮ್ಮ ಆದೇಶ ಪ್ರಕಾರವೇ ಅವು ಬಂದಿದ್ದರೂ) ತಿರಸ್ಕರಿಸಿದೆವು. ಒಡನೆ ಅವರಿಂದ ನಮಗೆ ತುರ್ತು ಕರೆ ಬಂತು. ಬೆದರಿಕೆಯ ಕಾಗದ ತಲಪಿತು. ನೀತಿಬೋಧೆ ಸುರಿಯಿತು. ಎಲ್ಲವಕ್ಕೂ ನಮ್ಮದು ಒಂದೇ ಪಲ್ಲವಿ: ಹಿಂದಿನ ನಮ್ಮ ಪ್ರಾಮಾಣಿಕ ಕೊರತೆ ಪಟ್ಟಿಗಳನ್ನು ಅವರು ಮನ್ನಿಸಿ ನಷ್ಟವನ್ನು ಭರ್ತಿ ಮಾಡಿದ ವಿನಾ ಈ ಭಾಂಗಿಯನ್ನು ನಾವು ಸ್ವೀಕರಿಸುವವರಲ್ಲ. ಆಶ್ವಾಸನೆ ಬಂತು, ಆದರೆ ಈಡೇರಿಕೆ ಹೇಗೆ? ನಮ್ಮ ಮೆಲೆ ನಂಬಿಕೆ ಇಟ್ಟು ನೇರವಾಗಿ ಭಾಂಗಿಯನ್ನು ನಮಗೆ ಕೊಡಿ. ನಷ್ಟವನ್ನು ಹೊಂದಿಸಿ ಉಳಿದ ಮೊಬಲಗನ್ನು ನಿಮಗೆ ಒಡನೆ ಪಾವತಿಸುತ್ತೇವೆ ಎಂದು ಹಾದಿ ತೋರಿಸಿದೆವು. ಅವರಿಗೆ ಒಪ್ಪದೆ ವಿಧಿ ಇರಲಿಲ್ಲ. ಆ ಭಾಂಗಿಯಲ್ಲೂ ಕೊರತೆ, ಕಳಪೆ, ವಂಚನೆ! ಮರಣೋತ್ತರ ಪರೀಕ್ಷೆಯನ್ನು ವಿಧಿಬದ್ಧವಾಗಿ ಮಾಡಿ ತುಕ್ಕು ಹಿಡಿದ ಮತ್ತು ತೂತಾದ ಪಾತ್ರೆಗಳನ್ನು ಭಾಂಗಿ ಮಾಡಿ, ನಿವ್ವಳ ಮೊತ್ತದ ಬ್ಯಾಂಕ್ ಡ್ರಾಫ್ಟ್ ಸಮೇತ ಅವರಿಗೆ ವರದಿ ಒಪ್ಪಿಸಿ ಬದುಕಿದೆಯಾ ಬಡ ಜೀವವೇ ಎಂದು ಕೈತೊಳೆದುಕೊಂಡೆವು.

ಇಷ್ಟಾಗುವಾಗ ೧೯೫೫ರ ಬೇಸಗೆ ರಜೆ ಶುರುವಾಯಿತು. ಆ ವರ್ಷದ ಮೇ ತಿಂಗಳಿನಲ್ಲಿ ಅಖಿಳ ಮಲೆನಾಡಿಗೆ (ಮಳೆನಾಡಿಗೆ ಕೂಡ) ಸಂಬಂಧಿಸಿದ ಭಾರೀ ವಸ್ತು ಪ್ರದರ್ಶನವೊಂದು ಮಡಿಕೇರಿಯಲ್ಲಿ ಏರ್ಪಡುವುದರಲ್ಲಿತ್ತು. ಕೊಡಗಿನ ಮಟ್ಟಿಗೆ ಇಂಥ ಒಂದು ಚಟುವಟಿಕೆ ಅದೇ ಮೊದಲಿನದು. ಮಂತ್ರಿಗಳು ವಿಶೇಷ ಮುತುವರ್ಜಿ ವಹಿಸಿ ಇದರ ಸಂಘಟನೆಗೆ ಬೇಕಾದ ಸಮಸ್ತ ಸವಲತ್ತುಗಳನ್ನೂ ಒದಗಿಸಿದ್ದರು. ಮಲೆನಾಡಿಗರು ಅಲ್ಲೇ ಆ ಕಡೆ, ಚಡಾವಿನ ಕೊನೆಯ ಆ ಮಗ್ಗುಲಲ್ಲೆ, ಸ್ವರ್ಗ ಧರೆಗಿಳಿದಿರುವುದನ್ನು ಇನ್ನೇನು ಈ ಪ್ರದರ್ಶನ ತೊಡಗುವ ವೇಳೆಗೆ ಕಾಣುವುದು ಖರೆ ಎಂದು ವಂದಿಮಾಗಧರು ಸ್ತುತಿಗೈದರು. ನಮ್ಮ ಸಂಘ ಈ ಪ್ರದರ್ಶನದಲ್ಲಿ ಒಂದು ಮಳಿಗೆ ಇಡಬೇಕೆಂಬ ಕೋರಿಕೆಗೆ (ಅಲ್ಲ, ಹುಕುಂ) ಘನ ಸರ್ಕಾರದ ವತಿಯಿಂದ ಬಂದಿತ್ತು. ಇದೇನೋ ಸರಿ. ಆದರೆ ಮಳೆಗಾಲದ ಆರಂಭದ ದಿನಗಳಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡಿನ ಎತ್ತರದ ಬಯಲಿನಲ್ಲಿ ನಾವು ಪುಸ್ತಕಾಲಯವನ್ನು ತೆರೆದುದಾದರೆ ಕೊಡಗಿನ ತೀವ್ರ ನಿಸರ್ಗಪ್ರೇಮಿ ಮಹಾಜನತೆಯಿಂದ (ಪುಸ್ತಕವೆ? ಜಡ ಜಡ, ಹಸುರ ಹರವಿನಲಿ ತೊರೆಯ ಹರಿವಿನಲಿ ಕುಡುಮಲೆಗಳೋಟದಲಿ ಕಾಣು ನಿತ್ಯ ಸತ್ಯವನು, ಸುಡು ನಿನ್ನ ಪುಸ್ತಕವ ಎಂಬುವುದಿವರ ಬಾಳ ಹಾಡು) ನಮಗೆ ಯಾವ ಪ್ರೋತ್ಸಾಹವೂ ದೊರೆಯದು; ಅಷ್ಟೇ ಅಲ್ಲ, ಮಾಲೇ ಹಾಳಾಗಿ ಹೋಗಿ ಬಯಲು ಆಲಯವೆರಡೂ ನಿನ್ನೊಳಗೇ ದಿಟ ಎಂಬುದು ದೃಢವಾದೀತು, ಅಷ್ಟೆ. ನಮ್ಮ ಶ್ರಮ ಪೂರ್ತಿ ವ್ಯರ್ಥವಾದೀತು ಎಂಬುದಾಗಿ ನನ್ನ ಪ್ರಾಮಾಣಿಕ ಅನ್ನಿಸಿಕೆಯನ್ನು ಪ್ರಾಂಶುಪಾಲರಿಗೆ ಅರಿಕೆ ಮಾಡಿದೆ. ನಮ್ಮ ಅಂಗಡಿ ಇಡುವುದನ್ನಂತೂ ಒಪ್ಪಿ ಆಗಿದೆ. ಆದ್ದರಿಂದ ಈಗ ನೀವು ಮಾಡಬಹುದಾದ್ದು ಇಷ್ಟೇ - ಹಾಳಾಗದ ಮತ್ತು ಮಾರಾಟವಾಗಬಹುದಾದ ಸಾಮಗ್ರಿಗಳನ್ನು ಇಟ್ಟು ನೋಡಿ ಎಂದು ಸೂಚಿಸಿದರು.

ಸಹಜವಾಗಿ ನಮ್ಮ ಒಲವು ಉಕ್ಕುಪಾತ್ರೆಗಳತ್ತ ಮಾಲಿತು. ಮಂಗಳೂರಿನ ಸಗಟು ವ್ಯಾಪಾರಿಗಳ ಮೂಲಕ ಮುಂಬಯಿಯ ಸುಪ್ರಸಿದ್ಧ ಪ್ರಾಮಾಣಿಕ ತಯಾರಕರೊಂದಿಗೆ ವ್ಯವಹರಿಸಿ ಉಕ್ಕು ಪಾತ್ರೆಗಳ ಭಾಂಗಿಗಳನ್ನು ತರಿಸಿದೆವು. ಹತ್ತು ಸಾವಿರ ರೂಪಾಯಿಗಳನ್ನು ಈ ಹೊಸ ಸಾಹಸದ ಮೇಲೆ ಹೂಡಿದೆವು. ಬೆಳ್ಳಿಯ ಬಿಳಿ ಬಣ್ಣದಿಂದ ಥಳಥಳಿಸಿ ಮಿರುಗುವ ನಾನಾ ನಮೂನೆಯ ಅಕ್ಷಯ ಪಾತ್ರೆಗಳ ಆ ಸಮುದಾಯ ನಮ್ಮ ಮಳಿಗೆಗೆ ವಿಶೇಷ ಮೆರುಗನ್ನು ನೀಡಿತು. ಇಂಥ ಮಳಿಗೆ ಬೇರೊಂದು ಅಲ್ಲಿರಲಿಲ್ಲ. ನಿಜಕ್ಕೂ ಇದೊಂದು ಧರೆಗಿಳಿದ ಗಂಧರ್ವ ಲೋಕವೇ ಸೈ. ಆದರೆ ಮಳಿಗೆಯ ವ್ಯವಸ್ಥಾಪನೆಯಲ್ಲಿ ನಮ್ಮ ಸ್ವಯಂ ಸೇವಕರಿಗೂ ನನಗೂ ಭಾರಿ ತೊಂದರೆಗಳು ಎದುರಾದುವು.

ಒಂದನೆಯದಾಗಿ, ನಮ್ಮ ಮಳಿಗೆಗೆ ಕದಗಳೇ ಇರಲಿಲ್ಲ (ಕಾಲ ಅಶೋಕಚಕ್ರದ್ದು, ಅಶೋಕನದಲ್ಲ; ಹೀಗಾಗಿ ರಾತ್ರಿ ನಾವೇನು ಮಾಡುವುದು?). ಎರಡನೆಯದಾಗಿ, ಜಡಿ ಮಳೆಯ ನೀರು ಕೆಸರು ರಾಡಿ ಇವುಗಳಿಂದಾಗಿ ಜಿಗಣೆ, ಕಪ್ಪೆ, ಗಂಗೆಹುಳು, ಅಲ್ಲದೇ ಮಳೆ ನಿಂತಾಗ ಮಳೆಹಾತೆಗಳ ದಂಡು. ಇವುಗಳ ಅವ್ಯಾಹತ ಆಕ್ರಮಣದಿಂದ ಪಾತ್ರೆಗಳು ಪಾರಾದರೂ ಅವುಗಳ ರಕ್ಷಕರಾದ ನಾವು ಪಾರಾಗುವುದೆಂತು? ಮೂರನೆಯದಾಗಿ, ದಟ್ಟಯಿಸುತ್ತಿದ್ದ ಜನತಿಮುಕಿನಲ್ಲಿ ತೆರೆದ ಅಂಗಡಿಯ ಆಕರ್ಷಕ ವಸ್ತುಗಳು ಶುಲ್ಕರಹಿತವಾಗಿ ಮಂಗಮಾಯವಾಗುವುದನ್ನು ನಿವಾರಿಸುವುದು ಹೇಗೆ? ಆದರೆ ಆ ಎರಡು ವಾರಗಳು ಹದಿನಾಲ್ಕು ವರ್ಷಗಳೇ ಆದದ್ದು ಬೇರೆಯೇ ಒಂದು ಕಾರಣಕ್ಕಾಗಿ - ಅದು ನಮ್ಮ ಮಾನ್ಯ ಸಹಕಾರ ಸಚಿವರಿಗೆ (ವಿದ್ಯಾಸಚಿವರೂ ಅವರೇ ಆಗಿದ್ದರು) ಆ ಮಳಿಗೆಯ ಮೇಲೆ ಬಿದ್ದ ವಕ್ರ ದೃಷ್ಟಿಯ ಪರಿಣಾಮವಾಗಿ. ಮೊದಲ ದಿನವೇ ಅವರು ಖುದ್ದು ನನಗೇ ಗದರಿದ್ದರು, ಕಾಲೇಜಿನ ಸೊಸೈಟಿ ಉಕ್ಕು ವ್ಯಾಪಾರ ಮಾಡುವುದು ಸುತರಾಂ ಸಲ್ಲದು. ಅದೂ ನೀವು, ಅಧ್ಯಾಪಕರು, ಗೌರವಾನ್ವಿತರು, ಓರ್ವ ಹಲ್ಕಾ ವ್ಯಾಪಾರಿಯಂತೆ ಇಲ್ಲಿ ನಿಂತು ಹಲ್ಕಿರಿಯುವುದು ನನಗೇನೂ ಒಪ್ಪಿಗೆ ಇಲ್ಲ. ಅವರ ಮಾತಿನ ಸರಣಿ ನನಗೆ ಸರಿ ಎನ್ನಿಸಲಿಲ್ಲ. ಆದರೆ ದೊರೆಯೊಡನೆ ಸದರ ಸಂದೀತೇ? ಆಗ ನನಗಿದ್ದ ವ್ಯಾವಹಾರಿಕ ವಿಮೋಚನೆ ಒಂದೇ _ ಮಂತ್ರಿಗಳು ಆ ಕಡೆಗೆ ಪಾದಯಾತ್ರೆ ಬೆಳೆಸುತ್ತಿದ್ದ ಕ್ಲುಪ್ತ ವೇಳೆಗಳಲ್ಲಿ ಅತಿ ತುರ್ತು ಕಾರ್ಯನಿಮಿತ್ತ ಅಲ್ಲಿಂದ ದೂರ ತೆರಳಿ ಮರೆಯಾಗಿ ನಿಂತು ತಾಬೆದಾರಿಕೆಯ ಮಹಿಮೆಯನಿಂದು ಕಂಡೆ ಎಂಬುದಾಗಿ ತೋಡಿ ರಾಗದಲ್ಲಿ ಮನದುಮ್ಮಳವನ್ನು ಕೋಡಿ ಹರಿಸುತ್ತಿದ್ದೆ. ವ್ಯಾಪಾರವೇನೋ ಭರ್ಜರಿಯಾಗಿ ನಡೆದುಹೋಯ್ತು. ಆರ್ಥಿಕವಾಗಿ ನಮ್ಮ ಸಾಹಸ ಪೂರ್ಣ ಯಶಸ್ವಿಯಾಯಿತು. ಮಳಿಗೆ ಮುಚ್ಚಿ ಮನೆಗೆ (=ಕಾಲೇಜಿಗೆ) ಮರಳಿದ ಬಳಿಕ ಒಂದು ದಿನ ನಾನು ಮಂತ್ರಿ ಮಹಾಶಯರನ್ನು (ಕೆ. ಮಲ್ಲಪ್ಪ) ಕಾಣಲು ಹೋದೆ. ನನ್ನನ್ನು ಚಿಕ್ಕಂದಿನಿಂದಲೂ ಬಲ್ಲವರು ಅವರು; ನನ್ನ ವಿಚಾರ ಅಪಾರ ಅಭಿಮಾನವಿದ್ದುದರಿಂದಲೇ ಖುದ್ದು ಅವರೇ ನನ್ನನ್ನು ಮಡಿಕೇರಿ ಕಾಲೇಜಿಗೆ ಆಯ್ದಿದ್ದರು. ನಮ್ಮ ಸಂಘದ ವಿಷಯದಲ್ಲಿ ಅವರಿಗೆ ತುಂಬ ವಿಶ್ವಾಸವಿತ್ತು. ಆದ್ದರಿಂದ ಅವರ ಈ ಹೊಸ ನಿಲವಿನ ಅಂತರಾರ್ಥವನ್ನು ಅರಿಯಲೇಬೇಕು, ಅದಕ್ಕೆ ಪ್ರತ್ಯಕ್ಷ ಭೇಟಿ ಒಂದೇ ಸರಿಯಾದ ಕ್ರಮ ಎಂದು ಭಾವಿಸಿದೆ.

ಸಚಿವರು ನನ್ನನ್ನು, ನಾನು ನಿರೀಕ್ಷಿಸಿದಂತಲ್ಲದೇ, ತುಂಬ ಹಸನ್ಮುಖಿಗಳಾಗಿ ಎಂದಿನ ಆತ್ಮೀಯತೆಯಿಂದ ಬರಮಾಡಿಕೊಂಡು ತಾವಾಗಿಯೇ ಮಾತು ತೊಡಗಿದರು, ಬಿಟ್ಟಿ ಕೆಲಸ ಮಾಡಿಯೂ ಬೈಸಿಕೊಳ್ಳಬೇಕಾಯಿತಲ್ಲಾ ಎಂಬ ನಿನ್ನ ಬೇಗುದಿ ನನಗೆ ತಿಳಿಯದ್ದಲ್ಲ. ಆದರೆ ಕಾಲೇಜು ಮಂದಿಗೆ ಪುಸ್ತಕ ಒದಗಿಸಬೇಕಾದ ನಿನ್ನ ಸಂಘ ಈಗ ಪೇಟೆ ವರ್ತಕರಿಗೆ ಸಿಂಹಸ್ವಪ್ನವಾಗಿದೆ. ಅವರೆಲ್ಲರೂ ಒಟ್ಟಾಗಿ ನನ್ನಲ್ಲಿಗೆ ಬಂದು ಈ ವಿಚಾರ ಮನವಿ ಒಪ್ಪಿಸಿದ್ದಾರೆ. ನಿನ್ನ ಸೇವೆ, ಉತ್ಸಾಹ ಸರಿ. ಆದರೆ ಮಿತಿ ಮೀರಿ ನೆಗೆತ ಬೇಡ.
ಈಗ ನಾನೇನು ಮಾಡಬೇಕೆಂದು ತಮ್ಮ ಆಜ್ಞೆ?
ಪುಸ್ತಕದ ಅಂಗಡಿಯಾಗಿ ಯಾವ ಗಾತ್ರಕ್ಕೂ ಸಂಘವನ್ನು ಬೆಳೆಸು. ಜನರಿಗೆ ಗ್ರಂಥಭಂಡಾರಗಳಿಗೆ ಒಳ್ಳೆಯ ಓದಿಗೆ ಬೇಕಾಗುವ ಪುಸ್ತಕಗಳನ್ನು ಒದಗಿಸು. ನಮ್ಮ ಜನ ವಿದ್ಯಾವಂತರೂ ಸುಸಂಸ್ಕೃತರೂ ಆಗಲು ಆವಶ್ಯವಾಗುವ ಸತ್ಸಾಹಿತ್ಯವನ್ನು ಪ್ರಚಾರ ಮಾಡು. ಕಾಲೇಜ್ ಸಂಘ ಇದನ್ನು ಮಾಡದಿದ್ದರೆ ಬೇರೆ ಇನ್ಯಾರು ತಾನೇ ಮಾಡಬೇಕು?

ಅಲ್ಲಿಗೆ ನಮ್ಮ ಉಕ್ಕು ವಿಭಾಗ ಬರಖಾಸ್ತಾಯಿತು. ಓದಿಗೆ ಬೇಕಾಗುವ ಪುಸ್ತಕಗಳ ವಿಭಾಗವನ್ನು ತೆರೆವ ದಿಶೆಯಲ್ಲಿ ಕಾರ್ಯಮಗ್ನರಾದೆವು. ಇದನ್ನು ಮಳೆಗಾಲ ಕಳೆವ ತನಕ ಆರಂಭಿಸುವಂತಿರಲಿಲ್ಲ. ೧೯೫೫ರ ಮಹಾಪೂರ (ಮೇ-ಸೆಪ್ಟೆಂಬರ್ ಶ್ರಾಯ) ಮುಗಿದ ಬಳಿಕ ಗ್ರಂಥ ವಿಭಾಗವನ್ನು ಪರಿಮಿತ ಪ್ರಮಾಣದಲ್ಲಿ ತೆರೆದದ್ದಾಯಿತು. ಆದರೆ ಇತ್ತ ಕಡೆ ವಿದ್ಯಾರ್ಥಿಗಳಿಗಾಗಲೀ ಅಧ್ಯಾಪಕರಿಗಾಗಲೀ ಯಾವುದೇ ಕುತೂಹಲ ಮೊಳೆತದ್ದು ನನ್ನ ಅನುಭವಕ್ಕೆ ಬರಲಿಲ್ಲ. ಕಾಲೇಜಿನಲ್ಲಿ ಅತ್ಯುತ್ಕೃಷ್ಟ ಗ್ರಂಥಾಲಯವೂ ಗ್ರಂಥ ಸೇವೆಯೂ ಇದ್ದುವು. ಹೀಗಾಗಿ ಕಾಲೇಜಿಗರು ಯಾರೂ ಪುಸ್ತಕಗಳನ್ನು ಖರೀದಿಸಿ ಓದುವ ದುಸ್ಸಾಹಸಕ್ಕೆ (!) ಕೈ ಹಾಕುತ್ತಿರಲಿಲ್ಲ. ಇನ್ನು ಊರ ಜನ ಕೇವಲ ಪುಸ್ತಕಗಳಿಗಾಗಿ ಊರ ಹೊರಗಿನ ಈ ಅಂಗಡಿಗೆ ಬಂದಾರೇ? ಖಂಡಿತ ಇಲ್ಲ. ಹೀಗಾಗಿ ಕಾಲೇಜಿನ ಗ್ರಂಥಾಲಯಕ್ಕೂ ಕಾಲೇಜು ವಾರ್ಷಿಕೋತ್ಸವದ ಬಹುಮಾನ ಸಮಿತಿಗೂ ಪುಸ್ತಕಗಳನ್ನು ಒಟ್ಟಾಗಿ ಒದಗಿಸುವ ಸಗಟು ವ್ಯಾಪಾರವಾಗಿ ಮಾತ್ರ ನಮ್ಮ ಗ್ರಂಥ ಸೇವೆ ನಿಲ್ಲಬೇಕಾಯಿತು. ಪರಿಸರದ ವಿಧಿ ನಿಯಮಗಳಿಗೆ ಅನುವರ್ತಿ ಆಗದ ಪ್ರಯೋಗ ಹೇಗೆ ತಾನೇ ಯಶಸ್ವಿ ಆದೀತು? ಪರಿಸರವನ್ನೇ ಪರಿವರ್ತಿಸುವ ಆರ್ಥಿಕ ತ್ರಾಣವಾಗಲೀ ಸಂಘಟನಾ ಕೌಶಲವಾಗಲೀ ಒಂದೂವರೆ ವರ್ಷದ ನಮ್ಮ ಬಿಡುವೇಳೆಯ ಬಿಟ್ಟಿ ದುಡಿಮೆಗಾರರ ಈ ಮಿದುಳ ಕೂಸಿಗೆ ಇರಲಿಲ್ಲ. ಇದು ಹಾಗಿರಲಿ. ಈ ದಿಶೆಯಲ್ಲಿ ರೂಢ ಮೌಲ್ಯಗಳ ಬುಡ ಹಂದಾಡಿಸುವ ಕೆಲವು ಸಂಗತಿಗಳ ಆವಿಷ್ಕಾರವಾದದ್ದು ಮಾತ್ರ ನನಗೆ ಒದಗಿದ ಹೊಸ ಲಾಭ.

ಒಂದನೆಯದು, ಬಹುಮಾನ ಸಮಿತಿ ಸದಸ್ಯರೊಬ್ಬರ ಕುರೆ ಆಸೆ. ಸಹಕಾರ ಸಂಗದ ಗೌರವ ಕಾರ್ಯದರ್ಶಿ ಆಗಿದ್ದ ನಾನು ಪದನಿಮಿತ್ತ ಬಹುಮಾನ ಸಮಿತಿಯ ಕಾರ್ಯದರ್ಶಿಯೂ ಆಗಿದ್ದೆ. ಬುದ್ಧಂ ಶರಣಂ ಗಚ್ಛಾಮಿ ಎಂದು ಸದಾ ಜಪಿಸುತ್ತಿದ್ದ ಈ ಮಹಾಶಯರು ತಮ್ಮ ಮನೆಯಲ್ಲಿದ್ದ ಒಂದಷ್ಟು ಪುಸ್ತಕಗಳನ್ನು ನನಗೆ ತಂದುಕೊಟ್ಟು ಅವನ್ನು ಸಮಿತಿ ಖರೀದಿಸಿ ಬಹುಮಾನಗಳಿಗಾಗಿ ಬಟವಾಡೆ ಮಾಡಬೇಕೆಂದೂ ಆ ಮೊಬಲಗನ್ನು ತಮಗೆ ಪಾವತಿಸಬೇಕೆಂದೂ ಕೋರಿದರು. ಮೊದಲ ವರ್ಷ ಅನುಭವರಾಹಿತ್ಯದಿಂದಲೂ ದಾಕ್ಷಿಣ್ಯದಿಂದಲೂ ಈ ಸ್ಪಷ್ಟ ತಪ್ಪು ಹಾದಿಯಲ್ಲಿ ನಡೆದೆ; ಕ್ರಮವಾದ ಬಿಕರಿ ಚೀಟಿ ತಯಾರಿಸಿ ಅವರಿಂದ ರಶೀತಿ ಪಡೆದು ದುಡ್ದು ಪಾವತಿಸಿದೆ. ಮರುವರ್ಷವೂ ಇದೇ ಸನ್ನಿವೇಶ ಮರುಕೊಳಿಸಿದಾಗ ಎಚ್ಚತ್ತಿದ್ದೆ. ಅವರಿಗೆ ನೇರವಾಗಿ ಒಂದು ಮಾತು ಹೇಳಿದೆ, ಸಂಘದ ಮತ್ತು ನನ್ನ ದೃಷ್ಟಿಯಿಂದ ಕಾನೂನು ರೀತ್ಯಾ ಈ ವಹಿವಾಟಿನಲ್ಲಿ ಏನೂ ಅರೆಕೊರೆ ಇಲ್ಲ. ಏಕೆಂದರೆ ಸಂಘಕ್ಕೆ ದೊರೆಯಬೇಕಾದ ವಟ್ಟಾ ಬರುತ್ತದೆ. ರಶೀತಿ ಪ್ರಕಾರ ಹಣ ಸಂದಾಯವಾಗುತ್ತದೆ. ಮುಂದೆ ಮಾಲು ಬಿಕರಿ ಆಗುವುದು ಖಾತ್ರಿ. ಆದರೆ ನಿಮ್ಮ ದೃಷ್ಟಿಯಿಂದ ಇದು ಹಿತಕರ ಅಲ್ಲ. ಪುಸ್ತಕ ವ್ಯಾಪಾರಿಯಲ್ಲದ ನೀವು, ಖುದ್ದು ನೀವೇ ಪ್ರಕಟಿಸದಿದ್ದ ಇತರ ಪುಸ್ತಕಗಳನ್ನು, ಸಂಘಕ್ಕೆ ಮಾರಿರುವುದನ್ನು ಯಾರಾದರೂ ಲೆಕ್ಕತಪಾಸಣೆ ವೇಳೆ ಸೂಕ್ಷ್ಮವಾಗಿ ಗಮನಿಸಿದರೆ ಅದರಿಂದ ನಿಮಗೆ ಕಳಂಕ ತಟ್ಟದಿರದು. ಮಹಾಸಭೆಯಲ್ಲಿ ಈ ಪ್ರಶ್ನೆ ಬಂದುದಾದರೆ ಆಗ ನಾನು ಕೂಡ ನಿಮಗೆ ಶಾಮೀಲಾಗಿದ್ದೇನೆ ಎಂಬ ಅರ್ಥ ಧ್ವನಿಸೀತು. ಆದ್ದರಿಂದ ಈ ವ್ಯವಹಾರ ಬೇಡ, ಇಲ್ಲಿಗೇ ಕೈದು ಮಾಡೋಣ. ನನ್ನ ವಿವರಣೆಯನ್ನು ಅವರು ತುಂಬ ಚೆನ್ನಾಗಿ ಅರ್ಥಮಾಡಿಕೊಂಡು ಅದಕ್ಕಾಗಿ ನನ್ನನ್ನು ಶ್ಲಾಘಿಸಿದರು ಮತ್ತು ಆ ಪುಸ್ತಕಗಳನ್ನು ಧರ್ಮಾರ್ಥ ಸಮಿತಿಗೆ ಒಪ್ಪಿಸಿದರು.

ಎರಡನೆಯದು, ಪುಸ್ತಕ ವಿಕ್ರಯದಲ್ಲಿ ತಪ್ಪು ನಡತೆ. ಬಹುಮಾನವೀಯಲು ಮತ್ತು ಗ್ರಂಥಾಲಯಕ್ಕೆ ಸರಬರಾಜು ಮಾಡಲು ವಿವಿಧ ಪ್ರಕಾರಗಳಲ್ಲಿಯೂ ಭಾಷೆಗಳಲ್ಲಿಯೂ ಇರುವ ಪುಸ್ತಕಗಳನ್ನು ಭೂರಿ ಸಂಖ್ಯೆಯಲ್ಲಿ ಆಯ್ದು ರಖಂ ದರದಲ್ಲಿ ಖರೀದಿಸಿ ತರಲು ಖುದ್ದು ನಾನೇ ನೆರೆ ನಗರಗಳಾದ ಮಂಗಳೂರು, ಮೈಸೂರು, ಬೆಂಗಳೂರುಗಳಿಗೆ ಹೋಗುತ್ತಿದ್ದೆ. ಹೆಚ್ಚಿನ ಅಂಗಡಿಗಾರರು ನೇರ ನಡೆಯವರಾಗಿದ್ದುದರಿಂದ ವ್ಯವಹಾರ ಸಲೀಸಾಗುತ್ತಿತ್ತು. ಆದರೆ ಎರಡು ಬಲು ದೊಡ್ಡ ಅಂಗಡಿಗಳಲ್ಲಿ, ನನಗೆ ಆ ತನಕ ಬೇರೆಲ್ಲಿಯೂ ಅನುಭವಕ್ಕೆ ಬಂದಿರದಿದ್ದಂಥ, ಆಮಿಷವನ್ನು ಒಡ್ಡಿದರು. ನೀವು ಇಡೀ ವ್ಯಾಪಾರವನ್ನು ನಮ್ಮಲ್ಲಿಯೇ ಮಾಡಬೇಕಾಗಿ ವಿನಂತಿಸುತ್ತೇವೆ. ಇದರಿಂದ ನಿಮಗೆ ಸೌಕರ್ಯ ಉಂಟು. ಲಾಭವೂ ಉಂಟು. ಹೆಡ್ಡನಾದ ನಾನು ‘ನಿಮಗೆ ಪದವನ್ನು ‘ನಮ್ಮ ಸಂಘಕ್ಕೆ ಎಂದು ಅರ್ಥವಿಸಿ, ಖಂಡಿತ ಮಾಡೋಣ. ಆದರೆ ಆ ಲಾಭ ಏನೆಂದು ಸ್ಪಷ್ಟವಾಗಲಿ ಎಂದೆ. ದೇವಾಧಿದೇವರುಗಳ ಪಟಗಳ ಅಡಿಯಲ್ಲೇ ಕುಳಿತಿದ್ದ ಆ ಶುಭ್ರವಸನಧಾರಿ ಗಾಂಧಿ ಟೋಪಿ ಅಲಂಕೃತರು ವಿವರಿಸಿದರು, ಮುದ್ರಿತ ಬೆಲೆಗಳ ಮೊತ್ತದ ಮೇಲೆ ನಾವು ಶೇಕಡ ೨೦ ಸೋಡಿ ಬಿಡುತ್ತೇವೆ ಹಾಗೂ ಭಾಂಗಿಗಳನ್ನು ನಮ್ಮ ವೆಚ್ಚದಲ್ಲಿ ನಿಮ್ಮ ಅಂಗಡಿ ಬಾಗಿಲಿಗೆ, ಬೇಕಾದರೆ, ಒಂದೆರಡು ತಿಂಗಳುಗಳ ತನಕ ಕಡರೂಪದಲ್ಲಿ ತಲಪಿಸುತ್ತೇವೆ. ಅಲ್ಲಿಯೂ ಬೇಡವಾದವನ್ನು ನಮ್ಮ ವೆಚ್ಚದಲ್ಲಿ ಹಿಂದೆ ತರಿಸಿಕೊಂಡು ನಿಮ್ಮಿಂದ ಆ ಮೊಬಲಗನ್ನು ವಜಾಮಾಡುತ್ತೇವೆ. ಅಧಿಕೃತ ಇನ್ವಾಯ್ಸಿನ ಮೇಲೆ ಶೇಕಡಾ ೧೦ನ್ನು ಮಾತ್ರ ಕಾಣಿಸುತ್ತೇವೆ. ಉಳಿದ ಶೇಕಡಾ ೧೦ನ್ನು ನಿಮಗೆ ನಗದಾಗಿ ರಶೀತಿ ಯಾವುದನ್ನೂ ಕೇಳದೇ ಕೊಡುತ್ತೇವೆ. ವರ್ಷವೊಂದರ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆ ಇಲ್ಲದ ವ್ಯಾಪಾರ. ಕೇವಲ ಕೈಚಳಕದಿಂದ ಸಾವಿರ ರೂಪಾಯಿ (ಇದು ಆ ದಿನಗಳಲ್ಲಿ ಸಾಧಾರಣ ಮೊತ್ತವೇನೂ ಆಗಿರಲಿಲ್ಲ) ಬರುವುದಾದರೆ ಈ ಸುಲಭದ ಉಭಯ ಲಾಭಮಾರ್ಗ ಏಕಾಗಬಾರದು? ಹೊಣೆ ಹೊತ್ತವರಿಗೆಲ್ಲ ಇಂಥ ಚಂದ್ರನಖಿ ಆಮಿಷಗಳು ಎದುರಾಗಿ ಅವರನ್ನು ಆಕರ್ಷಿಸುವುದು ವಿರಳವೇನಲ್ಲ. ಚಂದ್ರನಖಿಯ ಹಿಂದೆ ಮರೆಯಾಗಿರುವ ಶೂರ್ಪನಖಿತ್ವವನ್ನು ಗುರುತಿಸಿ ಅದರಿಂದ ದೂರ ಇರುವ ರಾಮ ತತ್ತ್ವ ನಮ್ಮಲ್ಲಿರಲಿ ಎಂದು ಪ್ರಾರ್ಥಿಸುವುದೊಂದೇ ಆರ್ಜವದ ಮಾರ್ಗ. ನನಗೆ ಎದುರಾದ ಎರಡೂ ಸಂದರ್ಭಗಳಲ್ಲಿ ನಾನು ಅವರೊಡನೆ ವಾದಿಸದೆ ಮರುನುಡಿಯದೆ ಎದ್ದು ಹಿಂತಿರುಗಿದ್ದೆ.

ಮೂರನೆಯದು, ವಿದೇಶೀ ಪ್ರಕಟಣೆಗಳ ಕರ್ಣ ಛೇದನ. ಈ ಹಿಕ್ಮತ್ತು ನನಗೆ ತಿಳಿದದ್ದು ಆಕಸ್ಮಿಕವಾಗಿ. ಯಾವುದೋ ಗಡಿಬಿಡಿಯಲ್ಲಿ ಇಬ್ಬರು ಸಗಟು ಪುಸ್ತಕ ವ್ಯಾಪಾರಿಗಳಿಗೆ ಒಂದೇ ಆದೇಶ ನಮ್ಮಲ್ಲಿಂದ ಹೋಗಿತ್ತು. ಭಾಂಗಿಗಳು ಬಂದಾಗ ಇನ್ವಾಯಿಸುಗಳ ಮೊತ್ತದಲ್ಲಿ ತುಂಬ ವ್ಯತ್ಯಾಸ ಕಂಡುಬಂದದ್ದರಿಂದ ಬಿಡಿ ಪುಸ್ತಕಗಳ ಬೆಲೆ, ವ್ಯಾಪಾರಿ ವಟ್ಟಾ ಮುಂತಾದವೆಲ್ಲವನ್ನೂ ಕೂಲಂಕಶವಾಗಿ ತಪಾಸಣೆ ಮಾಡಿ ತಾಳೆ ನೋಡಿದೆವು. ಒಂದೇ ಪುಸ್ತಕ, ಒಂದೇ ವಟ್ಟಾ ಆದರೆ ನಮೂದಿಸಿದ ಬಿಡಿ ಬೆಲೆಗಳು ಬೇರೆ ಬೇರೆ. ಕಡಿಮೆ ಬೆಲೆಯ ಅಂಗಡಿಗಾರನಿಂದ ಬಂದ ಪುಸ್ತಕದ ಹೊದಿಕೆಯ ಅಂಚಿನಲ್ಲಿ ೨೦ ಶಿಲಿಂಗ್ ಎಂದು ಬೆಲೆ ಮುದ್ರಿತವಾಗಿತ್ತು. ಆತ ಅದಕ್ಕೆ ವಿನಿಮಯ ದರ ಹನ್ನೆರಡಾಣೆ ಪ್ರಕಾರ ೧೫ ರೂಪಾಯಿಯ ಬೆಲೆ ವಿಧಿಸಿದ್ದ. ಹೆಚ್ಚು ಬೆಲೆಯ ಅಂಗಡಿಗಾರನಿಂದ ಬಂದ ಪುಸ್ತಕದ ಹೊದಿಕೆಯ ಈ ಭಾಗ ಬಲು ನಯವಾಗಿ ಕತ್ತರಿಸಲ್ಪಟ್ಟು ಅಂತರ್ಧಾನವಾಗಿತ್ತು; ಬದಲು ಒಳಪುಟದಲ್ಲಿ ಪೆನ್ಸಿಲ್ಲಿನಿಂದ ೩೨ ಶಿಲಿಂಗ್ ಎಂದು ಬರೆಯಲ್ಪಟ್ಟಿತ್ತು. ಈ ಅಂಗಡಿಗಾರ ಆ ಪುಸ್ತಕಕ್ಕೆ ವಿನಿಮಯ ದರ ಹತ್ತಾಣೆ ಪ್ರಕಾರ ೨೦ ರೂಪಾಯಿ ವಿಧಿಸಿದ್ದ. ಕರ್ಣಛೇದಿತ ಗ್ರಂಥಗಳನ್ನು ತಿರಸ್ಕರಿಸಿ ವಾಪಾಸು ಮಾಡಿದೆವು.
 
ನಾಲ್ಕನೆಯದು, ತತ್ತ್ವಶಾಸ್ತ್ರದ ದಿಗ್ದಂತಿ ಕಲಿಸಿದ ಪಾಠ. ಈ ಮಹಾಶಯ ನಮ್ಮ ಕಾಲೇಜಿಗೆ ವರ್ಗವಾಗಿ ಬಂದಾಗ ಗಾಳಿಬೀಡಿನ ಪ್ರಶಾಂತ ಪರಿಸರದಲ್ಲಿ ಲಘು ಭೂಕಂಪನವೇ ಆಯಿತು. ತತ್ತ್ವಶಾಸ್ತ್ರದಲ್ಲಿ ಡಾಕ್ಟೊರೇಟ್ ಪಡೆದಿದ್ದ ಮತ್ತು ಐವತ್ತರ ಅಪರ ಮಗ್ಗುಲಲ್ಲಿದ್ದ ಈ ವಾಗ್ಮಿ, ಪಾಶ್ಚಾತ್ಯ ಹಾಗೂ ಪೌರಸ್ತ್ಯ ಸಮಸ್ತ ದರ್ಶನಗಳ ಸಾರದ ಮೂರ್ತ ರೂಪದಂತೆ ಅಲ್ಲಿ ವಿರಾಜಿಸಿದರು. ಅವರ ಪಾಠವೇ, ಪ್ರವಚನವೇ, ಸಾರ್ವಜನಿಕ ಭಾಷಣವೇ, ಖಾಸಗಿ ಸಂಭಾಷಣೆಯೇ ಒಂದೊಂದರಲ್ಲೂ ತಮ್ಮ ಪ್ರತಿಭೆಯಿಂದ ಮತ್ತು ವಿದ್ವತ್ತಿನಿಂದ ನಮ್ಮ ಮನಸ್ಸನ್ನು ಸೂರೆಗೊಂಡರು. ಪ್ರತಿದಿನವೂ ಅವರು ಕಾಲೇಜನ್ನು ಪ್ರವೇಶಿಸುವ ಮುನ್ನ ನಮ್ಮ ಅಂಗಡಿಗೆ ದರ್ಶನವಿತ್ತು ನನ್ನನ್ನು ಕರ್ಮಯೋಗಿ ಎಂದು ಮುಂತಾಗಿ ಹೊಗಳಿ ಹರಸಿ ತಮಗೆ ಬೇಕಾದ ವಸ್ತುಗಳನ್ನು ಕಡವಾಗಿ ತೆಗೆದುಕೊಂಡು ಹೋಗುತ್ತಿದ್ದುದು ವಾಡಿಕೆ. ಅದೇ ವೇಳೆ ಅವರ ಕೈಗಳು ತಂತಾವೇ ಗಾಜಿನ ಜಾಡಿಗಳ ಮುಚ್ಚಳಗಳ ಮೇಲೆ ಆಡುತ್ತ ಒಳಗಿನ ದ್ರಾಕ್ಶಿ ಗೋಡಂಬಿ ಪೆಪ್ಪರ್ ಮಿಂಟುಗಳನ್ನು ಪರಡುತ್ತಿದ್ದುವು. ಕೈಗೆ ಬಂದವು ಬಾಯಿಗೆ ಸಲ್ಲದಿದ್ದಾವೇ? ಅವೂ ಸ್ವೀಟುಗಳು! ನಮ್ಮ ಅಂಗಡಿಯಿಂದ ಯಾವ ಪದಾರ್ಥವೂ ಬಿಟ್ಟಿಯಾಗಿ ಯಾ ಸ್ಯಾಂಪಲ್ ಆಗಿ ಹೋಗತಕ್ಕದ್ದಲ್ಲ, ಮಾರಾಟವಾಗಿಯೇ ಹೋಗತಕ್ಕದ್ದು ಎಂಬುದು ನಾವು ಕಡ್ಡಾಯವಾಗಿ, ಖುದ್ದು ನಮ್ಮನ್ನು ಕುರಿತಂತೆ ಕೂಡ, ಪಾಲಿಸಿಕೊಂಡು ಬಂದಿದ್ದ ಶಿಸ್ತು. ಹೀಗಾಗಿ ಮೊದಲ ಕೆಲವು ದಿವಸ ಅವರ ಎದುರೇ ನಾನು ಬಿಲ್ ಹಾಕಿ ಅವರ ಮುಕ್ತಗ್ರಾಸದ ಮೌಲ್ಯವನ್ನು ತೆತ್ತಿದ್ದೆ. ಆದರೆ ಈ ದೈನಂದಿನ ಮಧುರ ಪ್ರೀತಿ ಉಲ್ಬಣಿಸಿದಂತೆ ಒಂದು ದಿನ ನೇರ ಅವರಿಗೆ ಬಿಲ್ ಒಪ್ಪಿಸಿ ಹಣ ಕೇಳಿದೆ.
ಏನಿದು? ಅವರ ಚಕಿತ ಪ್ರಶ್ನೆ.
ಇದೀಗ ತಾನೇ ತಾವು ಕೊಂಡ ಸ್ವೀಟುಗಳ ಬೆಲೆ.
ಸ್ಯಾಂಪಲ್ ಪ್ರಕರಣ ಪುನರಾವರ್ತಿಸಲಿಲ್ಲ. ಆದರೆ ಹೊಸ ಸಮಸ್ಯೆಯೊಂದು ಉದ್ಭವಿಸಿತು. ಸಾಕ್ಷಾತ್ ಅವರೇ ಒಂದು ದಿವಸ ಒಂದಷ್ಟು ಉದ್ಗ್ರಂಥಗಳ ಹೊರೆಯನ್ನು ಆಳಿನ ಹತ್ತಿರ ಹೊರಿಸಿಕೊಂಡು ಬಂದು ನನ್ನ ಎದುರು ಇರಿಸಿದರು, ಇವೆಲ್ಲ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಅಮೂಲ್ಯ ಗ್ರಂಥಗಳು. ಕಾಲೇಜಿನ ಪುಸ್ತಕ ಭಂಡಾರಕ್ಕೆ ಬೇಕೆಂದು ನಾನೇ ಖುದ್ದು ಮೈಸೂರಿನಲ್ಲಿ ಬೆಲೆ ತೆತ್ತು ಇವನ್ನು ತಂದಿದ್ದೇನೆ. ಹೇಗೂ ನೀವು ತಾನೇ ಗ್ರಂಥಾಲಯಕ್ಕೆ ಪುಸ್ತಕ ಸರಬರಾಜು ಮಾಡುವವರು. ಇವನ್ನು ಅಲ್ಲಿಗೆ ಮಾರಿ ಮೌಲ್ಯವನ್ನು ನನಗೆ ಪಾವತಿ ಮಾಡಿ.
ಸರಿ, ನೀವೇ ಶಿಫಾರಸು ಮಾಡಿದ ಮೇಲೆ ಹಾಗೆಯೇ ಆಗಲಿ, ಇವುಗಳ ಬೆಲೆ?
ನಾನು ನಗದು ಹಣ ಪಾವತಿ ಮಾಡಿ ಪುಸ್ತಕಗಳನ್ನು ತಂದಿದ್ದೇನೆ. ಇನ್ನೂರು ರೂಪಾಯಿಗಳಾಗಿವೆ. ಅಷ್ಟನ್ನು ನೀವು ನನಗೆ ಕೊಟ್ಟರೆ ಸಾಕು. ಇವುಗಳ ಮುಖ ಬೆಲೆ ಮುನ್ನೂರು ರೂಪಾಯಿಗಳಾಗುತ್ತವೆ, ನೋಡಿ.
ಸರಿ, ಹಣ ಪಾವತಿಮಾಡಲು ನಮಗೆ ಮೈಸೂರಿನ ಆ ಅಂಗಡಿಯ ಮೂಲ ಇನ್ವಾಯಿಸ್ ಮತ್ತು ರಶೀತಿ ಬೇಕಲ್ಲ?
ಅಯ್ಯೋ! ಅವೆಲ್ಲ ಕಳೆದುಹೋಗಿವೆ. ಪುಸ್ತಕಗಳು ಹೇಗೂ ಇಲ್ಲೇ ಇವೆಯಲ್ಲ?
ಅಡ್ಡಿ ಇಲ್ಲ, ನಾನು ಅವರಿಗೆ ಕಾಗದ ಬರೆದು ದ್ವಿಪತ್ರಿಗಳನ್ನು ತರಿಸಿಕೊಳ್ಳುವೆನು. ಅಂಗಡಿ ಹೆಸರು? ಎನ್ನುತ್ತ ಉದ್ಗ್ರಂಥಗಳನ್ನು ಒಂದೊಂದಾಗಿ ‘ಅನಾವರಣ ಮಾಡಿದಾಗ ಕಂಡದ್ದೇನು? ‘ದಿ ಹಿಂದೂ, ‘ಟೈಮ್ಸ್ ಆಫ್ ಇಂಡಿಯಾ’, ‘ತ್ರಿವೇಣಿಮುಂತಾದ ಪ್ರಸಿದ್ಧ ಪತ್ರಿಕೆಗಳಿಂದ ವಿಮರ್ಶೆಗಾಗಿ ಮತ್ತು ಹಲವಾರು ಹೆಸರಾಂತ ಪ್ರಕಾಶಕರಿಂದ ಮುಫತ್ತಾಗಿ ಬಂದಿದ್ದ ಪುಸ್ತಕಗಳವು. ಆ ಮೊಹರುಗಳು ನನ್ನನ್ನು ಏಡಿಸುತ್ತಿವೆ ಅನ್ನಿಸಿತು.

ಸ್ವಾಮೀ! ನಾನು ಶಂಕರ ಸಿದ್ಧಾಂತದಲ್ಲಿ ಮಿಂದವನಲ್ಲ, ಮಾಧ್ವದರ್ಶನದಲ್ಲಿ ಬೆಂದವನಲ್ಲ, ಗೀತೆಯ ತಿರುಳನ್ನು ತಿಂದವನೂ ಅಲ್ಲ. ಆದರೆ ಒಂದು ಅಂಶವಂತೂ ನನಗೆ ನಿಚ್ಚಳವಾಗಿ ತಿಳಿದಿದೆ: ನನ್ನ ಇಡೀ ಬದುಕು ಅಖಂಡವಾದ ಸ್ವಚ್ಛ ಗ್ರಂಥವಾಗಿರಬೇಕು. ನಿಮ್ಮ ಈ ದಗಲಬಾಜಿಯಲ್ಲಿ ನನ್ನ ಪಾಲು ಇಲ್ಲ. ಇಂಗು ತಿಂದ ಸಿಂಗಳೀಕದಂತೆ ಮುಸುಡು ಸೊಟ್ಟ ಮಾಡಿಕೊಂಡು ಅವರು ಅಲ್ಲಿಂದ ಕಂಬಿ ಕಿತ್ತರು, ಮುಂದೆ ಅಂಗಡಿಗೆ ಕಾಲಿಡಲಿಲ್ಲ.

ಐದನೆಯದು, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರ ನಿರ್ದೇಶನ. ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಈ ಮಹಾಶಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆ ವೇಳೆಗೆ ನಮ್ಮ ಅಂಗಡಿ ಗಡದ್ದಾಗಿ ಬೆಳೆದು ಸರ್ವವಸ್ತು ಭಂಡಾರದ (ಅಥವಾ ಇಂದಿನ ಜನತಾ ಬಝಾರಿನ) ವ್ಯಾಪ್ತಿ ಅಂತಸ್ತುಗಳನ್ನು ಪಡೆದಿತ್ತು. ನಮಗೆ ಪೂರ್ಣಾವಧಿಯ ಮ್ಯಾನೇಜರ್ ಮೊದಲಾದ ನೌಕರರು ಇದ್ದರು. ದೂರವಾಣಿ ಬಂದಿತ್ತು. ಮಡಿಕೇರಿಗೆ ಬಂದ ಸಂದರ್ಶಕರೆಲ್ಲರೂ ಕಾಲೇಜ್ ಸೂರಡಿಯ ಸಂಘಕ್ಕೆ ಬರುವುದು ಸಂಪ್ರದಾಯವಾಯಿತು. ಮಹಾಘನತೆವೆತ್ತ ನಿರ್ದೇಶಕರು ಸಪರಿವಾರ ನಮ್ಮ ಮಳಿಗೆಗೆ ದರ್ಶನವಿತ್ತರು. ನನ್ನೊಡನೆ ಚೆನ್ನಾಗಿ ಮಾತಾಡಿ, ಆತ್ಮೀಯ ಪ್ರಶ್ನೆಗಳಿಂದ ನನ್ನನ್ನು ಹುರಿದುಂಬಿಸಿ, ಮುಕ್ತವಾಗಿ ಈ ಸ್ವಯಂಸೇವೆಯನ್ನು ಪ್ರಶಂಸಿಸಿ ನಮ್ಮ ರಾಜ್ಯದ (ಮೈಸೂರು) ಬೇರೆ ಯಾವ ಕಾಲೇಜಿನಲ್ಲಿಯೂ ಈ ಮಾದರಿಯ ಸರ್ವಸೇವಾಸಂಘ ಇಲ್ಲವೆಂದು ಹೊಗಳಿ ತಾವೂ ಈ ಸರ್ವೋತ್ಕೃಷ್ಟ ಸಂಘದ ಒಬ್ಬ ಗ್ರಾಹಕನಾಗಿರಲು ತುಂಬ ಸಂತೋಷಪಡುವುದಾಗಿ ತಿಳಿಸಿದರು. ಸಾಕಷ್ಟು ವಸ್ತುಗಳನ್ನು ಅವರೇ ಖುದ್ದು ಆಯ್ದರು. ನನ್ನ ವಿವರಣೆಗಳಿಂದ ಉಲ್ಲಸಿತರಾದರು. ಅವರು ಆಯ್ದ ಸಾಮಾನುಗಳಿಗೆ ನಾನು ಎಂದಿನಂತೆ ಕ್ರಯಚೀಟಿ ಬರೆದು ಅವರ ಕೈಗಿತ್ತೆ. ನನ್ನನ್ನು ಹೊಗಳುವ ವೇಳೆ ಅವರಿಗಿದ್ದ ಉತ್ಸಾಹ ಮತ್ತು ಸಾಮಗ್ರಿಗಳನ್ನು ಆಯುವಾಗ ಇದ್ದ ಆಸಕ್ತಿ ಬಿಲ್ಲನ್ನು ಪಡೆಯುವಾಗ ಕಾಣಲಿಲ್ಲ. ತಾವು ಬೆಂಗಳೂರಿಗೆ ಮರಳಿದ ಬಳಿಕ ಮೊಬಲಗನ್ನು ಕಳಿಸುವುದಾಗಿ ಹೇಳಿ ಮಾಲು ಮತ್ತು ಬಿಲ್ ಸಮೇತ ನಿರ್ಗಮಿಸಿದರು. ಮುಂದೆ ತಿಂಗಳು ತಿಂಗಳು ಅವರು ನಿವೃತ್ತರಾಗುವ ತನಕವೂ ಅವರಿಗೆ ನಾವು ನೆನಪಿನೋಲೆಗಳನ್ನು ಕಳಿಸುತ್ತಲೇ ಇದ್ದೆವು. ಆದರೆ ನನ್ನ ಕಾರ್ಯದರ್ಶಿತ್ವದ ಅವಧಿಯಲ್ಲಿ ಆ ಹಣ ಬಂದಿರಲಿಲ್ಲ.

‘ದೊಡ್ಡವರ ಸಣ್ಣತನದ ಅನುಭವಗಳು ಕೆಲವೇ ಕೆಲವು ಮಾತ್ರ. ಆದರೆ ‘ಸಣ್ಣವರ ದೊಡ್ಡತನದ ಅನುಭವಗಳು ದಿನ ದಿನ ಎಂಬಂತೆ ನನಗೆ ಒದಗಿ ಕೆಲಸಕ್ಕೆ ಅರ್ಥ ಆಯಾಮಗಳನ್ನು ನೀಡುತ್ತಿದ್ದುವು. ಎರಡನೆಯದಕ್ಕೆ ಕೇವಲ ಮೂರು ಪ್ರಾತಿನಿಧಿಕ ನಿದರ್ಶನಗಳನ್ನು ನಿರೂಪಿಸುತ್ತೇನೆ.

ಕೊಡಗಿನ ಅಮ್ಮತ್ತಿಯ ಬಳಿ ಒಂದು ಕುಗ್ರಾಮ. ಅಲ್ಲಿಯ ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಬಡವ, ಬೇನೆ ಹಿಡಿದ, ಸಣಕಲ ಹುಡುಗ ರಾಮಕೃಷ್ಣ. ಜಡಿ ಮಳೆಗಾಲದ ಗಾಳಿ ಮಳೆಯಿಂದ ತೊಯ್ದು ತೊಪ್ಪೆಯಾಗಿ ನಮ್ಮ ಅಂಗಡಿಗೆ ಬಂದ. ತಾನು ಈ ತನಕ ಪ್ರತಿ ವರ್ಷ ಮಡಿಕೇರಿ ಪೇಟೆಯಿಂದ ನಗದು ಹಣ ನೀಡಿ ಸಗಟು ದರದಲ್ಲಿ ಒಂದಿಷ್ಟು ಲೇಖನ ಸಾಮಗ್ರಿಗಳನ್ನು ಕೊಂಡೊಯ್ದು ತನ್ನ ಹಳ್ಳಿಯಲ್ಲಿ ಮಾರಿ ನಾಲ್ಕು ಕಾಸು ಸಂಪಾದಿಸಿ ಓದುತ್ತಿದ್ದುದಾಗಿಯೂ ಆದರೆ ಈಚೆಗೆ ಖಾಯಿಲೆಯಿಂದಾಗಿ ಎಲ್ಲ ಬಂಡವಾಳವನ್ನೂ ಕಳೆದುಕೊಂಡು ನಿರ್ಗತಿಕನಾಗಿರುವುದಾಗಿಯೂ ನಿವೇದಿಸಿದ. ಸಾಲವಾಗಿ ಒಂದಿಷ್ಟು ಮಾಲನ್ನು ನಾವು ಅವನಿಗೆ ಒದಗಿಸಿದ್ದಾದರೆ ಮುಂದಿನ ವಾರ ಮರಳಿ ಬಂದು ಆ ಹಣವನ್ನು ಖಾತ್ರಿ ಪಾವತಿಸುವುದಾಗಿ ಭರವಸೆ ನೀಡಿದ. ಯಾವ ಪ್ರಶ್ನೆಯನ್ನೂ ಹಾಕದೆ ಅವನಿಗೆ ಬೇಕಾದ ಸಾಮಾನುಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಕೊಂಡೊಯ್ಯಲು ಅನುಮತಿ ಕೊಟ್ಟೆ. ಅವುಗಳ ಬೆಲೆ ಐವತ್ತು ರೂಪಾಯಿಗಳನ್ನು ದಾಟಲಿಲ್ಲ. ಮತ್ತೆ ಮರು ವಾರ ಅವನು ಅದೇ ಹೊತ್ತಿಗೆ ಹಾಜರ್. ಹೀಗೆ ಬೆಳೆದ ವ್ಯವಹಾರದ ಪರಿಣಾಮವಾಗಿ  ಅವನು ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿ ನಮ್ಮ ಕಾಲೇಜಿನಲ್ಲೇ ವ್ಯಾಸಂಗಕ್ಕೆ ಬಂದ. ಆ ವೇಳೆ ಅವನಿಗೆ ಭಾಗಾವಧಿಯ ಕೆಲಸವನ್ನು ನಮ್ಮ ಸಂಘದಲ್ಲೇ ಕೊಟ್ಟು ಸಂಬಳ ಪಾವತಿಸಿದೆವು. ಅವನ ನಿಷ್ಠೆ ಅವನನ್ನು ರಕ್ಷಿಸಿತು.

ನಾಪೋಕ್ಲು ಅಂದರೆ ಕೊಡಗಿನ ಅಂಡಮಾನ್. ಮಳೆಗಾಲದಲ್ಲಿ ಇದೊಂದು ಭಾರೀ ಪರ್ಯಾಯ ದ್ವೀಪ. ಮಡಿಕೇರಿಗೂ ನಾಪೋಕ್ಲಿಗೂ ನಡುವೆ ಕಾವೇರಿಯ ಮಹಾಪೂರ. ದೋಣಿ, ಜಂಗಲ್ಲುಗಳಲ್ಲಿ ಇದನ್ನು ದಾಟಿ ನಾಪೋಕ್ಲು ದಡ ಐದಬೇಕು, ಅಷ್ಟೆ. ಅಲ್ಲಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ರಾಮಚಂದ್ರಯ್ಯ (ಈ ವೃತ್ತಿನಾಮದ ಹಿಂದೆ ಬಡ ಎಂಬ ವಿಶೇಷಣ ಸದಾ ಅಧ್ಯಾಹಾರ), ವಯಸ್ಸಿನಲ್ಲಿ ನನಗಿಂತ ಎಷ್ಟೋ ಹಿರಿಯರು. ಪ್ರತಿ ಆದಿತ್ಯವಾರ ನಮ್ಮ ಅಂಗಡಿಗೆ ಬಂದು ತಮ್ಮ ಸರ್ವಋತು ಸದಾ ಸಿದ್ಧ ದ್ವಿಚಕ್ರರಥದಲ್ಲಿ (ಸೈಕಲ್) ಹೊರುವಷ್ಟು ಹೇರನ್ನು ನಮ್ಮಿಂದ ಕೊಂಡು, ಒಟ್ಟಿ ನಾಪೋಕ್ಲಿಗೆ ಒಯ್ದು ಅವರ ಶಾಲೆಯ ಸಹಕಾರ ಸಂಘದಿಂದ ಮಾರಿ ಅದನ್ನೊಂದು ಮಾದರಿ ಸಂಸ್ಥೆಯಾಗಿ ರೂಪಿಸಿದರು. ಅವರು ತಮ್ಮ ಸೇವೆಗೆ ಒಂದು ಪೈಯನ್ನೂ ತೆಗೆದುಕೊಳ್ಳಲಿಲ್ಲ. ಸ್ವತಃ ಸಂಸಾರ ತಾಪತ್ರಯದಿಂದಲೂ ಆರ್ಥಿಕ ಸಂಕಷ್ಟದಿಂದಲೂ ಬಂಧಿತರಾಗಿದ್ದ ಆ ಹಿರಿಯರು ಜನತೆಗೆ ಒಪ್ಪಿಸಿದ ಈ ಸೇವೆಯನ್ನು ಬಣ್ಣಿಸಲಾಗಲಿ ಅಳೆಯಲಾಗಲಿ ನನಗೆ ಯೋಗ್ಯತೆ ಸಾಲದು.

(ಮುಂದುವರಿಯಲಿದೆ)

3 comments:

 1. ಆತ್ಮೀಯ ಅಶೋಕರವರೆ,
  ಲೇಖನ ಸ್ವಾರಸ್ಯಕರವಾಗಿದೆ.

  ReplyDelete
 2. ಗುರುವರ್ಯರ ಆತ್ಮ ಕಥೆಯ ಪುಸ್ತಕವನ್ನು ಅದೆಷ್ಟು ಚೆನ್ನಾಗಿ ಓದಲು ಕೊಡುತ್ತಾ ಇದ್ದೀರಿ! ಧನ್ಯವಾದಗಳು.
  ಪ್ರೀತಿಯಿಂದ
  ಪೆಜತ್ತಾಯ ಎಸ್. ಎಮ್.

  ReplyDelete
 3. ಉತ್ತಮವಾದ ಬರಹ. ಧನ್ಯವಾದಗಳು.

  ReplyDelete