28 May 2013

ಮಲೆಗಳಲ್ಲಿ ಮದುಮಗಳು - ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ


ಮಲೆಗಳಲ್ಲಿ ಮದುಮಗಳು - ನಾಟಕರೂಪ, ಸುಮಾರು ಎರಡು ವರ್ಷಗಳ ಹಿಂದೆ ಮೈಸೂರು ಪ್ರದರ್ಶನವಾಗುತ್ತಿದ್ದಾಗಲೇ ನೋಡಬೇಕೆಂದು ಕನಸು ಕಂಡಿದ್ದೆ. ಆದರೆ ಬಿಡುವಾಗಲೇ ಇಲ್ಲ. ಅನಂತರ ಆ ತಂಡ ತಿರುಗಾಟ ಹೊರಡುತ್ತದೆಂದೂ ಮಂಡ್ಯ, ಬೆಂಗಳೂರು, ಧಾರವಾಡ-ಹುಬ್ಬಳ್ಳಿ ಪಟ್ಟಿಯಲ್ಲಿ ಮಂಗಳೂರೂ ಇದೆಯೆಂದು ಗಾಳಿಸೊಲ್ಲು ಕೇಳಿತು. ಆದರೆ ಹಣ್ಣು ಉದುರಲಿಲ್ಲ, ಮರವೇ ಬಿದ್ದುಹೋಯ್ತು! ಈ ಬಾರಿ ಅದೇ ನಿರ್ದೇಶನದಲ್ಲಿ (ಸಿ ಬಸವಲಿಂಗಯ್ಯ) ಬೆಂಗಳೂರಿನಲ್ಲಿ ಹೊಸತೇ ತಯಾರಿ ಮತ್ತು ಪ್ರದರ್ಶನ ಸುರುವಾದಾಗ ನನಗೆ ಅಳಿದ ಮರದ ಬೇರಿನಲ್ಲಿ ಚಿಗುರು ಬಂದಂತಾಯ್ತು. ಪ್ರಚಾರಗಳಲ್ಲಿ ಮೇ ತಿಂಗಳ ಕೊನೆಯವರೆಗೆ ಪ್ರತಿ ಮಂಗಳ, ಗುರು, ಶನಿ ಮತ್ತು ಆದಿತ್ಯವಾರಗಳಂದು ಪ್ರದರ್ಶನ ಎಂದೇ ಇತ್ತು. ಆ ಲೆಕ್ಕದಲ್ಲಿ ೧೪ರ ಮಂಗಳವಾರ ರಾತ್ರಿಯ ಪ್ರದರ್ಶನಕ್ಕೆ ಸಮಯ ಹೊಂದಿಸಿಕೊಂಡಿದ್ದೆ. ಅಂತರ್ಜಾಲದಲ್ಲಿ ಟಿಕೆಟ್ ಕಾದಿರಿಸುವಾಗಲೇ ತಿಳಿದದ್ದು - ಯಾಕೋ ಮಂಗಳವಾರ ರದ್ದುಪಡಿಸಿ, ಬುಧವಾರಕ್ಕಿಟ್ಟುಕೊಂಡಿದ್ದರು!) ಲೆಕ್ಕಾಚಾರ ಹಾಕಿ ಬೆಂಗಳೂರಿಸಿದ್ದರೂ ಹೆಚ್ಚಿನ ದಿನ ಹೊಂದಿಸಿಕೊಂಡು ಇಂದು (ಮೇ ೧೫, ೨೦೧೩ರ ರಾತ್ರಿ) ನೋಡಿ ಬಂದೆ.


ಕುವೆಂಪು ಅವರ ಮಹಾಕಾದಂಬರಿ ತೆರೆದಿಡುವ ಮಲೆನಾಡಿನ ಹಳ್ಳಿಮೂಲೆಯನ್ನು ಸಣ್ಣದಾಗಿಯಾದರೂ ದೃಶ್ಯದ ಭಾಗವಾಗಿಸುವಂತೆ ಕಲಾಗ್ರಾಮದ ವಠಾರದೊಳಗೆ ಬಂದಿರುವ ಪುನಾರಚನೆಗಳು ನಿತ್ಯ ನಾಟಕಗಳಲ್ಲಿ ಖಂಡಿತಕ್ಕೂ ಅಲಭ್ಯ. ಅವನ್ನು ಪ್ರದರ್ಶನದಲ್ಲಿ ಸಾರ್ಥಕಗೊಳಿಸುವಂತೆ ಸಜ್ಜುಗೊಂಡ ದೀಪ, ಧ್ವನಿವರ್ಧಕ, ಹಿಮ್ಮೇಳ, ಹರಿದು ಬಂದ ನಟಸಮೂಹ (ಎಲ್ಲಕ್ಕೂ ಮಿಗಿಲಾಗಿ ವಿವಿಧ ಮಾಧ್ಯಮಗಳಲ್ಲಿನ ಪ್ರಚಾರ) ನನ್ನ ನೀರೀಕ್ಷೆಯನ್ನು ತುಂಬ ಎತ್ತರದಲ್ಲೇ ಇಟ್ಟಿತ್ತು. ಆದರೆ ನಾಲ್ಕು ರಂಗ (ಕೆರೆಯಂಗಳ, ಬಯಲುರಂಗ, ಬಿದಿರುಮೆಳೆ ರಂಗ, ಹೊಂಗೆರಂಗ) ಸುತ್ತಿ, ಒಂಬತ್ತು ಗಂಟೆಗಳನ್ನೇ ಕಳೆದ ಮೇಲೆ ಪ್ರದರ್ಶನ ಮಹಾನ್ ಕೃತಿಯ ಪೇಲವ ಅನುಕರಣದ ಮಟ್ಟದಲ್ಲೇ ಉಳಿಯಿತು ಎನ್ನಲು ನಿಜಕ್ಕೂ ವಿಷಾದವಾಗುತ್ತದೆ. ಕಾದಂಬರಿಯ ವಿಸ್ತಾರವನ್ನು ದುಡಿಸಿಕೊಳ್ಳುವಲ್ಲಿ ಪ್ರದರ್ಶನ ತುಂಬಿ ಬರಲೇ ಇಲ್ಲ. ಸಂಭಾಷಣೆಗಳು, ಕಲಾಪಗಳು ಕಥಾ ಮುಂದುವರಿಕೆಯ ಅಗತ್ಯಕ್ಕಷ್ಟೇ ಪ್ರಸ್ತುತಿಗೊಳ್ಳುತ್ತಿತ್ತು, ಪ್ರೇಕ್ಷಕರನ್ನು ನಂಬಿಸಬೇಕಾದ ಒಟ್ಟು ಪರಿಸರದ ಅಭಿವ್ಯಕ್ತಿಯಾಗಿ ಮೂಡಲಿಲ್ಲ.  ಕೆರೆ, ಕೆರೆಯೇರಿ, ಬಿದಿರ ಸೇತುವೆ, ಅಟ್ಟಳಿಗೆ, ಜೋಪಡಿಗಳು, ಮನೆಗಳು, ತೋಟ, ಕಾಡು, ವಿವಿಧ ಸ್ತರಗಳ ನೆಲಗಳೆಲ್ಲ ನಾಟಕದ ಕಲ್ಪಕತೆಯನ್ನು ದುರ್ಬಲಗೊಳಿಸಿತು, ವಾಸ್ತವದ ಅನುಭವಕ್ಕೆ ದಕ್ಕದಾಯಿತು; ಪ್ರದರ್ಶನ ಅವನ್ನು ಜೀರ್ಣಿಸಿಕೊಳ್ಳಲೇ ಇಲ್ಲ. (ಯಕ್ಷಗಾನರಂಗದಲ್ಲಿ ಹಂದಿಮರಿ ತಂದದ್ದನ್ನು ಆಕ್ಷೇಪಿಸಿ ನಿಜದ ಆನೆ ತಂದು ಸಮರ್ಥಿಸಿಕೊಂಡ ಹಾಗಾಯ್ತು.) ಇಂಥವ್ಯಾವವೂ ಇಲ್ಲದ ಇತರ ಪ್ರಯೋಗಶೀಲ ನಾಟಕಗಳನ್ನು ಮೀರಿದ ಅನುಭವವನ್ನು ಮಮಮಗಳು ನಾಟಕ ಕಟ್ಟಿ ಕೊಡಲಿಲ್ಲ.

ಹಿಮ್ಮೇಳದ ಧ್ವನಿಗಳಲ್ಲಿ ಬಹುತೇಕ ಸ್ಪಷ್ಟ ಗಾಯನಗಳೆಲ್ಲ ಮಧುರವಾಗೇನೋ ಇತ್ತು. ಆದರೆ ಅವು ಧ್ವನಿಮುದ್ರಿತವೂ ಸಿನಿಮೀಯವೂ ಆಗಿ ಪ್ರದರ್ಶನದ ಸ್ತರಕ್ಕೆ ಹೊಂದಲಿಲ್ಲ. ಮರ, ಕೆರೆ, ತಗ್ಗು, ದಿಣ್ಣೆ ಮತ್ತು ವೇಷಭೂಷಣ, ಸಂಭಾಷಣೆಗಳನ್ನೆಲ್ಲ ಮೂಲಕ್ಕೆ ನಿಷ್ಠವಾಗಿ (ವಾಸ್ತವಿಕವಾಗುವಂತೆ) ಮಾಡಲು ಯತ್ನಿಸಿದವರು ಶಬ್ದ-ವಾತಾವರಣವನ್ನು ಕಟ್ಟುವಲ್ಲಿ ಖಚಿತವಿಲ್ಲದ್ದು ಆಶ್ಚರ್ಯವಾಯ್ತು. ಇದಕ್ಕೆ ಸಜೀವ ಹಿಮ್ಮೇಳವನ್ನು ಮರೆಸಿ ಮೆರೆದ ಈ ಹಾಡುಗಳು ದೊಡ್ಡ ಸಾಕ್ಷಿ. ಸಜೀವ ಹಿಮ್ಮೇಳವೂ ದೃಶ್ಯ ಬದಲಾವಣೆಯನ್ನು ಸಾರಿದಷ್ಟು ಶಕ್ತವಾಗಿ, ನಾಟಕದ ನಡೆಗೆ ಬಲ ಕೊಡಲಿಲ್ಲ. ಆಗೊಮ್ಮೆ ಈಗೊಮ್ಮೆ ಜೀರುಂಡೆ, ನೀರಹರಿವಿನ ಸದ್ದು, ಹಕ್ಕಿಗಳುಲಿ, ನಾಯಿಯ ಬೊಗಳು (ಎಲ್ಲ ಧ್ವನಿಮುದ್ರಿಕೆಗಳೇ) ಸರಿಯಾಗಿಯೇ ಕೇಳಿಸಿದರೂ ಪರಿಣಾಮ ಗಾಢವಾಗುವಷ್ಟು ಪ್ರಕಟವಾಗಲಿಲ್ಲ. ಮೂಲ ಕೃತಿ ಹಾಗೂ ಪಾತ್ರಗಳ ಮಾತಿನಲ್ಲಿ ಅಷ್ಟೆಲ್ಲಾ ಉಲ್ಲೇಖಗಳಿರುವ ಮಲೆನಾಡಿನ ಗಾಳಿ ಮಳೆಯ ಪರಿಣಾಮವನ್ನು ಕನಿಷ್ಠ ಸದ್ದಿನಲ್ಲಾದರೂ ಕಟ್ಟಿಕೊಡಲಾಗದಿದ್ದುದಂತೂ ಎದ್ದು ಕಾಣುವ ಕೊರತೆ. ಹೊರಾಂಗಣ ಮತ್ತು ರಂಗಸಜ್ಜಿಕೆಗಳ ಸಾಕಷ್ಟು ಮರೆಮುಸುಕಿನ ಅನುಕೂಲವಿದ್ದಾಗ ಕೃತಕ ಮಳೆಗಾಳಿಯನ್ನು ತರುವುದು ಕಷ್ಟವಾಗಬಾರದಿತ್ತು. ಪ್ರದರ್ಶನಾವಧಿಯ ಉದ್ದ ಮತ್ತು ನಟನೆಯ ಸೌಲಭ್ಯಕ್ಕೆಂದು ನಿಜ ನೀರು ಬಳಕೆಗೆ ರಿಯಾಯಿತಿ ಇರಲಿ. ಆದರೆ ಧ್ವನಿ ಪರಿಣಾಮದಲ್ಲಾದರೂ ಅದನ್ನು ಬಿಂಬಿಸಬೇಕಿತ್ತು. ಇಲ್ಲಿ ಸದಾನಂದ ಸುವರ್ಣರ ನಿರ್ದೇಶನದ ‘ಮಳೆನಿಲ್ಲುವವರೆಗೆ’ ನಾಟಕದ ಹೋಲಿಕೆ ಕೊಡದಿರಲಾರೆ. ಆ ನಾಟಕ ಮುಗಿಯುವಾಗ ಕೇವಲ ಹಿನ್ನೆಲೆಯ ಧ್ವನಿ - ಭೋರ್ಗರೆವ ಗಾಳಿ ಮತ್ತು ಅಲೆಯಲೆಯಾಗಿ ಅಪ್ಪಳಿಸುವ ಮಳೆಯ ಸದ್ದು, ಪರಿಣಾಮದಲ್ಲಿ ಪ್ರೇಕ್ಷಕರಿಗೆ ಮಂಗಳೂರಿನ ನೈಜ ಸೆಕೆಯಲ್ಲೂ ಚಳಿ ಹಿಡಿಸಿಬಿಟ್ಟಿತ್ತು!

ಕಥಾನಕಕ್ಕೆ ಪರೋಕ್ಷ ಪರಿಣಾಮಗಳನ್ನು ದಟ್ಟವಾಗಿ ಕಟ್ಟಿಕೊಡುವ ಹಲವು ಸೌಕರ್ಯಗಳನ್ನು ಪ್ರಯೋಗ ದುರ್ಬಲವಾಗಿಯೇ ಬಳಸಿಕೊಂಡಿತು. ಸಾಮಾನ್ಯವಾಗಿ ರಂಗದ ಗಾತ್ರದಲ್ಲಿ ಪ್ರೇಕ್ಷಕನಿಗೆ ಅಗೋಚರವಾಗಿಯೇ ಉಳಿಯುವ ಜಿಗಣೆಯ ಬಗ್ಗೆ ನಾಯಿ - ಹುಲಿಯ, ಮತ್ತು ಗುತ್ತಿಯ ನಟನೆ ಕಟ್ಟಿಕೊಟ್ಟ ಪರಿಣಾಮವನ್ನು ಗೂಳಿ ಗಾತ್ರದ ಜಿಗಣೆಯ ಪ್ರತಿರೂಪ ಹೊಡೆದು ಹಾಕಿತು. ನಿಜ ಜಿಗಣೆ ಕಂಡವರಿಗೆ ಈ ಕೆಂಪು ಬಣ್ಣದ, ಬಲು ವಿಸ್ತೃತರೂಪ ನಗೆಯ ವಸ್ತುವಾದರೆ, ಉಳಿದವರಿಗೆ ಭಾವಸ್ಫುರಿಸದ ನಿಗೂಢ ಸಂಕೇತ! ಸೆಗಣಿ ಹುಳುಗಳೂ ಇನ್ನೊಂದು ವ್ಯರ್ಥ ಕಸರತ್ತು. ನಾಯಿ ಪಾತ್ರ ಇದ್ದುದರಲ್ಲಿ ಸಮರ್ಥವಾಗಿ ದುಡಿಯಿತು. ಹಂದಿ, ಹುಲಿ ಅಡ್ಡಿಯಿಲ್ಲ. ಸಾಬ್ರಕುದುರೆ ತೀರಾ ಕಳಪೆ. ಬಂಗಾಳದ ಛಾವ್ ನೃತ್ಯನಾಟಕದ ಪ್ರಭಾವದಲ್ಲಿ ಕೇವಲ ವಿದ್ಯಾಸಂಸ್ಥೆಗಳ ನಾಟಕ ಸಂಘಗಳೂ ಇಂದು ಸಿಂಹ, ಕರಡಿಗಳ ಅದ್ಭುತ ಪ್ರತಿರೂಪ, ನೃತ್ಯಾಭಿನಯಗಳನ್ನು ರಂಗದ ಮೇಲೆ ತರುತ್ತಿರುವಾಗ ಇಲ್ಲಿನ ಸಾಬ್ರಕುದುರೆ ನೋಟದಲ್ಲೂ ಕ್ರಿಯೆಯಲ್ಲೂ ಸೋತಿತು. ಉಕ್ಕುಸೊಕ್ಕಿನ ತುಂಗೆಯನ್ನು ದೋಣಿ ಹಾಯುವಲ್ಲಿ ಹುಲಿಯ ಕೊಚ್ಚಿ ಹೋಗುವ ಸನ್ನಿವೇಶ ಕೇವಲ ಗುತ್ತಿಯ ಅಪಲಾಪದಲ್ಲಿ ಸಂದುಹೋದದ್ದು ಇನ್ನೊಂದು ದೊಡ್ಡ ಸೋಲು. ಇಲ್ಲಿ, ಜೀವನ್ರಾಂ ಸುಳ್ಯರ ನಿರ್ದೇಶನದ ‘ಧಾಂಧೂಂ ಸುಂಟರಗಾಳಿ’ ಯಾರನ್ನೂ ಕಾಡದಿರದು. ಅವರು ಮಂಗಳೂರ ಡಾನ್‌ಬಾಸ್ಕೋ ಹಾಲಿನ ಕಿಷ್ಕಿಂಧೆಯಲ್ಲೂ ಒಂದು ಹಡಗೇ ಪ್ರಕ್ಷುಬ್ದ ಸಾಗರದಲ್ಲಿ ಮೆರೆಯುವ, ನರಳುವ, ಒಡೆದು ಮುಳುಗುವ ಪರಮಾದ್ಭುತ ದೃಶ್ಯ ಕಟ್ಟಿಕೊಟ್ಟಿದ್ದರು.

ಮೊನ್ನೆಯಷ್ಟೆ ‘ಡಾಗ್‌ವಿಲ್ಲೆ’ ಎಂಬೊಂದು ಸಿನಿಮಾ ನೋಡಿದೆ. ಅದು ಕೇವಲ ಗೀಟು ಹಾಕಿ ಗೋಡೆಗಳನ್ನು ಸೂಚಿಸುವ ಪಕ್ಕಾ ನಾಟಕರಂಗದ ಮಿತಿಯನ್ನು ಉದ್ದೇಶಪೂರ್ವಕವಾಗಿ ಹೇರಿಕೊಂಡ ಒಂದು ಕಥಾಚಿತ್ರ. ಡಾಗ್‌ವಿಲ್ಲೆ ಎಂಬ ಬಡ ಹಳ್ಳಿಮೂಲೆಯ ಏಳೆಂಟು ವಠಾರ, ಕುಟುಂಬಗಳು, ಜೀವನಾಸಕ್ತಿಗಳು, ಚಟುವಟಿಕೆಗಳೆಲ್ಲ ಸದಾ ಪ್ರೇಕ್ಷಕನ ಒಂದೇ ನೋಟಕ್ಕೆ ದಕ್ಕುವಂತೆಯೇ ನಡೆಯುತ್ತದೆ. ಸಿನಿಮಾಶಕ್ತಿ ಬಿಟ್ಟು ನಾಟಕರಂಗದ ಸಾಧ್ಯತೆಗಳನ್ನೂ ಈ ಚಿತ್ರ ಪೂರ್ಣ ಪ್ರಮಾಣದಲ್ಲಿ  ಬಳಸಿಕೊಳ್ಳುವುದಿಲ್ಲ. ಪೀಠಿಕೆ ಮತ್ತು ಒಂಬತ್ತು ಅಧ್ಯಾಯಗಳು ಎಂದೇ ಸರಳವಾಗಿ ವಿಂಗಡಿಸಿಕೊಂಡು, ಅಷ್ಟೇ ಸರಳ ನಿರೂಪಣೆಯೊಡನೆ ಸಿನಿಮಾ ನಡೆಯುತ್ತದೆ. ನಾವು ಗಮನಿಸಬೇಕಾದ ಚಟುವಟಿಕಾ ಕೇಂದ್ರಗಳಲ್ಲಿ ಬೆಳಕು ಉಜ್ವಲಗೊಳ್ಳುತ್ತಾ ಉಳಿದಂತೆ ಮಂಕಾಗುತ್ತ ಇಡಿಯ ಸಿನಿಮಾ ಬಿತ್ತರಗೊಳ್ಳುತ್ತದೆ. ಓರ್ವ ಮಾಫಿಯಾ ದೊರೆ ಮತ್ತು ಆತನ ಮಗಳ ನಡುವೆ ಬರುವ ಬಹಳ ಸೂಕ್ಷ್ಮ ಮನುಷ್ಯ ಭಾವವೊಂದನ್ನು ಶೋಧಿಸುವಲ್ಲಿ ಈ ಹಳ್ಳಿ ಆಕಸ್ಮಿಕವಾಗಿ ತೊಡಗಿಕೊಳ್ಳುತ್ತದೆ. ಸತ್ಯದ ಅರಿವಿನೊಡನೆ ಹಳ್ಳಿ ಒಂದು ಯಃಕಶ್ಚಿತ್ ಉದಾಹರಣೆಯಂತೆ ಅಳಿಸಿಯೂ ಹೋಗುತ್ತದೆ. ಹೀಗೆ ಸರ್ವಶಕ್ತ ಮಾಧ್ಯಮವಾದ ಸಿನಿಮಾ ವಾಸ್ತವದ ಸೌಕರ್ಯಗಳನ್ನು ನಿರಾಕರಿಸಿ ಯಶಸ್ವೀ ಅಭಿವ್ಯಕ್ತಿ ಕೊಡುವುದು ಸಾಧ್ಯವಾದಾಗ, ನಾಟಕದ ಮಿತಿಗೆ ಹೆಚ್ಚೇ ಎನ್ನುವ ವಾಸ್ತವದ ಸೌಕರ್ಯಗಳನ್ನು ಕಲ್ಪಿಸಿಕೊಂಡೂ ಮಮಮಗಳು ನಾಟಕರೂಪ ಸೋತದ್ದು ತೀರಾ ವಿಷಾದನೀಯ.

ಬೆಳಕು, ಧ್ವನಿಗಳ (ಲೈಟ್ ಆಂಡ್ ಸೌಂಡ್) ಮೇಳನವಾಗಿ ಒಂದೇ ವಠಾರದ ವಿವಿಧ ಕೇಂದ್ರಗಳನ್ನು ಬಳಸಿಕೊಂಡು ನಡೆಯುವ ರಂಗ ಕಲಾಪಗಳನ್ನು ನಾವೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಕಂಡವರೇ ಇದ್ದೇವೆ. (ಕರ್ನಾಟಕ ವೈಭವ, ವಿಜಯನಗರ ವೈಭವ, ಮೈಸೂರು ವೈಭವ ಇತ್ಯಾದಿ.) ಎಷ್ಟೋ ಬಾರಿ ಒಂದೇ ರಂಗಮಂಚದ ಮೇಲೂ ವಿವಿಧ ಬೆಳಕಿನ ವಲಯಗಳನ್ನು ಮಾಡಿಕೊಂಡು ಪ್ರದರ್ಶನ ಕೊಡುವ ಆಧುನಿಕ ನಾಟಕಗಳೂ ಕನಿಷ್ಠ ರಂಗಪರಿಕರಗಳನ್ನು ಬಳಸಿಕೊಂಡು ಅದೇ ತತ್ತ್ವವನ್ನು ಶಕ್ತವಾಗಿ ದುಡಿಸಿಕೊಳ್ಳುತ್ತವೆ. ಮಮಮಗಳು ಒಂದು ಹೆಜ್ಜೆ ಮುಂದೆ ಹೋಗಿ, ಒಂದೇ ಪ್ರದರ್ಶನದಲ್ಲಿ ಪ್ರೇಕ್ಷಕರನ್ನೇ ನಾಲ್ಕು ರಂಗಗಳ ಎದುರಿಗೆ ನಡೆಸುತ್ತದೆ. ಅಷ್ಟಾಗಿಯೂ ಬರಿಯ ಕಾಣಿಸುವುದು, ಕೇಳಿಸುವುದರಿಂದ ನಾಟಕ ಮೇಲೇಳುವುದಿಲ್ಲ. ಕಾದಂಬರಿ ಕೇವಲ ಮುದ್ರಿತ ಅಕ್ಷರಗಳಲ್ಲಿ ಕಟ್ಟಿಕೊಡುವ ಅದ್ಭುತ ಸನ್ನಿವೇಶಗಳು, ಚಿಂತನೆಗೆ ಹಚ್ಚುವ ಹಲವು ವೈಚಾರಿಕ ಮಜಲುಗಳು ಇಲ್ಲಿ ವಿಸ್ತೃತ ಆಯಾಮ ಪಡೆಯುವುದು ಬಿಟ್ಟು ಅಣಕ, ತೀರಾ ವಾಚ್ಯ ಮಟ್ಟದಲ್ಲೇ ಉಳಿದು ಬಿಡುತ್ತವೆ. ಕಾದಂಬರಿಗೆ ನಾಟಕಕಾರರು ಎಷ್ಟು ಋಣಿಯಾದರೂ ತಪ್ಪಿಲ್ಲ. ಆದರೆ ಅದನ್ನು ಜೋಗಿಗಳ ಜೋಳಿಗೆಯಲ್ಲಿ ಆರಾಧನೀಯ ವಸ್ತುವನ್ನಾಗಿ ಮೆರೆಸಿದ್ದು ರುಚಿಸಲಿಲ್ಲ.

ನಾಟಕದ ಕೊನೆಯಲ್ಲಿ ಸ್ವತಃ ನಿರ್ದೇಶಕ ಬಸವಲಿಂಗಯ್ಯನವರೇ ಅನೌಪಚಾರಿಕವಾಗಿ ಮಾತಾಡುತ್ತ, ಯಾರೋ ಒಟ್ಟು ವ್ಯವಸ್ಥೆ ಬಗ್ಗೆ (ಮುಖ್ಯವಾಗಿ ಹಣಹೂಡಿಕೆಯ ಕುರಿತಂತೆ) ಅಪಸ್ವರ ತೆಗೆದುದನ್ನು ಅಯಾಚಿತವಾಗಿ ಆದರೆ ವಿಷಾದಪೂರ್ವಕವಾಗಿ ಪ್ರಸ್ತಾವಿಸಿದರು. ಆದರೆ ಪ್ರದರ್ಶನದ ಕೊನೆಯಲ್ಲಿ ನಾನೂ ಅಷ್ಟೇ ವಿಷಾದಪೂರ್ವಕವಾಗಿ ಆ ಅಪಸ್ವರಕ್ಕೇ ಧ್ವನಿಗೂಡಿಸಬೇಕಾಗಿ ಬಂದಿದೆ. ಸುಲಭದಲ್ಲಿ ವರ್ಗಾಯಿಸುವ ರಂಗಪರಿಕರಗಳನ್ನು ನಿರಾಕರಿಸಿ, ನೆಲವನ್ನೇ ಒಲಿಸುವ ಈ ಕ್ರಮ ಸಾಧಿಸಿದ್ದೇನು? ನಿರ್ದಿಷ್ಟ ಕಥಾನಕದ ಹೊರಗಿನ ಪ್ರಯೋಗಕ್ಕೆ ಒಡ್ಡಿಕೊಳ್ಳದ ಕಲಾಗ್ರಾಮದೊಳಗಿನ ಕಾಮಗಾರಿ, ಅಂದರೆ ಸಾರ್ವಜನಿಕ ಹಣದ ಹೂಡಿಕೆಯನ್ನು ಮಮಮಗಳು ನಾಟಕ ಪ್ರದರ್ಶನ ಏನೇನೂ ಸಮರ್ಥಿಸುವುದಿಲ್ಲ. ನಾಟಕರಂಗಕ್ಕೆ ಕೊಡುಗೆಯಾಗುವ, ಕನಿಷ್ಠ ಕಾದಂಬರಿಯ ಮಹತ್ತಿಗೆ, ಹೆಚ್ಚಿನ ಓದಿಗೆ ಕೈಕಂಬವಾಗಬಹುದಾಗಿದ್ದ ಅವಕಾಶಗಳನ್ನೂ ಈ ಪ್ರಯೋಗ ವ್ಯರ್ಥಗೊಳಿಸಿದೆ.

17 comments:

 1. Naanu naataka nodilla. Aadare adara thunukannu(trailer?)nodiddene.Bahusha adannu naataka emba parikalpaneyalli nodade ondu hosa anubhava endu pariganisi noduva prayatna maadidare niraase kadimeyaadeetu? Ee pradarshanakke naataka emba hesaridade(stock-concept) bere hesarittare hege?M.L.S

  ReplyDelete
 2. ನಾನು ಮಲೆಗಳಲ್ಲಿಮದುಮಗಳು - ನಾಟಕ ನೋಡಿಲ್ಲ - ಸುಧಾದಲ್ಲಿ ಬಂದ ವಿಮರ್ಶೆ ಈ ಹಿಂದೆ ಓದಿದ್ದೆ. ನಿನ್ನ ವಿಮರ್ಶೆಗೆ ದನಿ ಕೂಡಿಸುವುದಾದರೆ, ಈ ಹಿಂದೆ ನೀನಾಸಂ ತಂಡ ಆಡಿದ ಪೂರ್ಣಚಂದ್ರ ತೇಜಸ್ವಿಯವರ ಚಿದಂಬರರಹಸ್ಯವನ್ನು ಇಲ್ಲಿ ಪ್ರಸ್ತಾವಿಸಬಹುದು. ಸುಮಾರು ಇಪ್ಹತ್ತು ವರ್ಷಗಳ ಹಿಂದೆ. ಪುತ್ತೂರಿನ ಫಿಲೋಮಿನಾ ಶಾಲೆಯ ಸಾಮಾನ್ಯ ಅಳತೆಯ ವೇದಿಕೆ ಮೇಲೆ ಬಿದಿರಮಳೆಯ ಕಾಡು ಹೊತ್ತಿ ಉರಿಯುವ ಅಂತಿಮ ದೃಶ್ಯವನ್ನು ಬೆಳಕು ನೆರಳಿನಾಟದಲ್ಲಿ ನಟರೆಲ್ಲ ಅತ್ತಿತ್ತ ಓಡುತ್ತ ಅದ್ಭುತವಾಗಿ ಅವರು ಕಟ್ಟಿ ಕೊಟ್ಟದ್ದು ಇಂದಿಗೂ ಕಾಡಿಗೆ ಕಾಡೇ ಒತ್ತಿ ಉರಿಯುತ್ತಿರುವ ಹಾಗೆ ನೆನಪಿಗೆ ಬರುತ್ತದೆ. ನಿನಾಸಂ ಈ ಬಾರಿ ಆಡಿದ ವಿಗಡವಿಕ್ರಮರಾಯ ಕೂಡ ಹಳೆಯ ಮೈಸೂರು ಸಂಸ್ಥಾನವನ್ನು "ಕಾಡಿನ" ಪುಟ್ಟ ವೇದಿಕೆಯ ಮೇಲೆ ಕೆಲವೇ ಕೆಲವು ಪರಿಕರಗಳಲ್ಲಿ ಅದ್ಬುತವಾಗಿ ನಿರ್ಮಿಸಿತು. ಹಳ್ಳಿ, ಕಾಡು ಎಂದಾಗ - ಅಡಿಕೆ, ತೆಂಗು, ತಾಳೆ ಗಿಡ ಮರಗಳನ್ನೆಲ್ಲ ನೆಟ್ಟು ಆನೆ, ಕುದುರೆ, ನರಿಗಳನ್ನೆಲ್ಲ ವೇದಿಕೆಗೆ ತಂದು ಸನ್ನಿವೇಶ ನಿರ್ಮಿಸುವ ಬದಲಿಗೆ ಆ ದೃಶ್ಯವನ್ನು ನೆರಳು - ಬೆಳಕಿನಾಟದಲ್ಲಿ ನಟರೇ ತುಂಬಿಕೊಡುವುದು ನಾಟಕದ ಅದ್ಭುತ ಶಕ್ತಿ - ಯಕ್ಷಗಾನದಲ್ಲಿ ಒಂದೆರಡು ಸುತ್ತಿನಲ್ಲಿ ಸ್ವರ್ಗ, ಪಾತಾಳ ಮತ್ತು ರಣಾಂಗಣಗಳನ್ನೆಲ್ಲ ರೂಪಿಸುವ ಹಾಗೆ.ಬ್ರೆಖ್ಟ ಹೇಳಿದ್ದಾನಲ್ಲ - ಪ್ರೇಕ್ಷಕನಿಗೆ ತಾನು ನಾಟಕ ನೋಡುತ್ತಿದ್ದೇನೆಂಬ ಪ್ರಜ್ಞೆ ಸದಾ ಜಾಗೃತವಾಗಿರಬೇಕು! ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನಕ್ಕೆ ಬೇಕಾದ ಸನ್ನಿವೇಶ ನಿರ್ಮಾಣಕ್ಕೆ (ಇಲ್ಲಿರುವ ಚಿತ್ರಗಳನ್ನು ನೋಡಿದರೆ ಕಾನಿಸುವಂತೆ) ಆಗಿರುವ ವೆಚ್ಚದ (ಅದೆಷ್ಟು?) ಬದಲಿಗೆ - ಅದೇ ವೆಚ್ಚದಲ್ಲಿ ಇದೇ ರಂಗಾಯಣತಂಡ ಪುತ್ತೂರು, ಸುಳ್ಯ, ವಿಟ್ಲದಂಥ ಚಿಕ್ಕ ಪುಟ್ಟ ಊರುಗಳಲ್ಲಿ ನಾಟಕ ಆಡಿದ್ದರೆ ಕನ್ನಡ ರಂಗಲೋಕ ಇನ್ನಷ್ಟು ಶ್ರೀಮಂತವಾಗುತ್ತಿತ್ತು - ಉತ್ತಮ ನಾಟಕಗಳಿಗೆ ಪ್ರೇಕ್ಷಕರು ನಿಜಕ್ಕೂ ಕಾತರಿಸುತ್ತಿದ್ದಾರೆ.
  ವಿಮರ್ಶೆಯನ್ನು ಒಪ್ಪುವ ಸಹೃದಯತೆ ಇರಬಹುದೆಂದು ಭಾವಿಸಲೇ?

  ReplyDelete
 3. ಡಾ| ಎಂ ಪ್ರಭಾಕರ ಜೋಶಿ28 May, 2013 07:37

  ೧೯೭೦ರಲ್ಲಿ ಒದಗಿದ ರಂಗ ನಾವೀನ್ಯ, ಸಾಹಿತ್ಯನಾವೀನ್ಯ ಚಳವಳಿಗಳು ಕೆಲವು ಅಸಾಧಾರಣ ಸಾಧನೆ ಮಾಡುವುದರ ಜತೆಗೆ ಸಿದ್ಧಾಂತ ಮೌಒಲ್ಯಗಳನ್ನು ಸೃಷ್ಟಿಸಿದವು.ಆದರ ಫಲ ಈಗ ಕಾಣುತ್ತಿದೆ. ನವ್ಯದಿಂದಾರಂಭವಾದ ಈ ಬಗೆಯ ಭಾಷೆಗಳೂ ವಿಶಾಲ ಅರ್ಥದಲ್ಲಿ) ಈಗ ಹಳತಾಗಿದ್ದು ಸರ್ಕಸ್ ಮಟ್ಟಕ್ಕೆ ಬಂದಿರುವುದು ಅನಿವಾರ್ಯ ಐತಿಹಾಸಿಕ ಸ್ಥಿತಿ ಗತಿ.

  ReplyDelete
 4. ಕೆ.ಪಿ. ರಾವ್28 May, 2013 07:39

  ಸತ್ಯ ಹೇಳುವ ಧೈರ್ಯ ಮಾಡಿದುದಕ್ಕೆ ಧನ್ಯವಾದಗಳು, ಅವರಿಗೆ ಬೇಕಾದುದನ್ನೇ ನಾವು ಹೇಳಬೇಕಾದ ಕಾಲಬಂದಿದೆ.

  ReplyDelete
 5. nanage ellakintha bejaaraddu, kuvempu ra ukthi neerellavoo theertha embudannu ivaru thirthavellavoo neere antha sankuchithavaagittaru....adu bedavittu

  ReplyDelete
  Replies
  1. Haudu. Nanagu kooda theera asambaddavagi kelisittu :(

   Delete
 6. ಅಶೋಕವರ್ಧನ ಜಿ.ಎನ್28 May, 2013 09:31

  ಲೇಖನದಲ್ಲಿ ಉಲ್ಲೇಖಿಸಿದ ಜೀವನ್ರಾಂ ಸುಳ್ಯರ ಪ್ರದರ್ಶನದ ಒಂದು ತುಣುಕು:
  http://www.youtube.com/watch?feature=player_detailpage&v=HoU6ihFZ-Nc

  ReplyDelete
 7. ಮಮಮ ನಾಟಕದ ಕುರಿತು ನಿಮ್ಮ ವಿಮರ್ಶೆ ಸೂಕ್ತವಾಗಿದೆ. ಕುವೆಂಪು ಆಶಯವನ್ನ ಮಮಮ ನಾಟಕ ಬಿಂಬಿಸಿಲ್ಲ. ಭಾಷೆ, ಧ್ವನಿ, ಬೆಳಕು, ಸಂಭಾಷಣೆ ಒಪ್ಪಿಸುವಿಕೆ ಪರಿಣಾಮಕಾರಿಯಾಗಿಲ್ಲ. ಮಲೆನಾಡಿನ ಮಳೆ ಪರಿಣಾಮವನ್ನ ಧ್ವನಿಯಲ್ಲಿ ಕಟ್ಟಿಕೊಡಬಹುದು... ಅದನ್ನು ಇಲ್ಲಿ ಮಾಡಿಲ್ಲ. ನೀವು ಹೇಳಿದಂತೆ ಸುಲಭವಾಗಿ ವರ್ಗಾಯಿಸುವ ಪರಿಕರ ಬಳಸಿಕೊಂಡು ನಾಟಕವನ್ನು ಅದ್ಬುತವಾಗಿ ಕಟ್ಟಿಕೊಡಬಹುದಾಗಿತ್ತು.
  ನಾಟಕದ ರಂಗವಿನ್ಯಾಸಕ್ಕೆ 70 ಲಕ್ಷ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಖಂಡಿತ ಇದು ದುಂದುಗಾರಿಕೆ. ಕಡಿಮೆ ಖರ್ಚಿನಲ್ಲಿ, ಕಡಿಮೆ ವೆಚ್ಚದ ರಂಗಪರಿಕರ ಬಳಸಿ, ಅವಧಿ ಕಡಿತಗೊಳಿಸಿ, ಇನ್ನಷ್ಟು ಪರಿಶ್ರಮ ಪಟ್ಟಿದ್ದರೆ (ರಂಗರೂಪ ಅರ್ಪಣೆಗೆ) ರಾಜ್ಯದ ಇತರೆಡೆಗಳಲ್ಲಿಯೂ ಕೂಡ ನಾಟಕ ಪ್ರದರ್ಶನ ಮಾಡಬಹುದಾಗಿತ್ತು.
  'ನಾಟಕದ ಕೊನೆಯಲ್ಲಿ ಸ್ವತಃ ನಿರ್ದೇಶಕ ಬಸವಲಿಂಗಯ್ಯನವರೇ ಅನೌಪಚಾರಿಕವಾಗಿ ಮಾತಾಡುತ್ತ, ಯಾರೋ ಒಟ್ಟು ವ್ಯವಸ್ಥೆ ಬಗ್ಗೆ (ಮುಖ್ಯವಾಗಿ ಹಣಹೂಡಿಕೆಯ ಕುರಿತಂತೆ) ಅಪಸ್ವರ ತೆಗೆದುದನ್ನು ಅಯಾಚಿತವಾಗಿ ಆದರೆ ವಿಷಾದಪೂರ್ವಕವಾಗಿ ಪ್ರಸ್ತಾವಿಸಿದರು. ಆದರೆ ಪ್ರದರ್ಶನದ ಕೊನೆಯಲ್ಲಿ ನಾನೂ ಅಷ್ಟೇ ವಿಷಾದಪೂರ್ವಕವಾಗಿ ಆ ಅಪಸ್ವರಕ್ಕೇ ಧ್ವನಿಗೂಡಿಸಬೇಕಾಗಿ ಬಂದಿದೆ ಎಂದು ಹೇಳಿದ್ದಿರಿ. ಈ 'ಅಪಸ್ವರ'ಕ್ಕೆ ನನ್ನ ದನಿಯನ್ನೂ ಸೇರಿಸುತ್ತೇನೆ.

  ReplyDelete
 8. ಅತ್ಯಂತ ಸೂಕ್ತವಾದ ಹಾಗೂ ಸಮಯೋಚಿತವಾದ ವಿಮರ್ಶೆ. ಅಭಿನಂದನೆಗಳು ಸರ್.
  ಮಹಾಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಬಯಸುವವರು, ಮುಂದಿನ ಸ್ಥಳಗಳಲ್ಲಿ ಪ್ರದರ್ಶನ ನಡೆಸಬಯಸಿದರೆ ಈ ನಿಟ್ಟಿನಲ್ಲೂ ಯೋಚಿಸುವ ಅವಶ್ಯಕತೆಯಿದೆ.
  ಶೂದ್ರತಪಸ್ವಿ ನಾಟಕದ ಮುನ್ನುಡಿಯಲ್ಲಿ ಸ್ವತಃ ಕುವೆಂಪು ಅವರು ತಮ್ಮ ನಾಟಕದ ಕುರಿತೇ ಹೀಗೆ ಹೇಳಿದ್ದಾರೆ: ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ ಮಹತ್ತನ್ನೂ ಹೊರಗಡೆಯ ಅಲ್ಪವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋರಂಗಭೂಮಿಯಲ್ಲಿಯೆ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು.
  ಈ ಮಾತು ಮಲೆಗಳಲ್ಲಿ ಮದುಮಗಳು ಕಾದಂಬರಿಗೂ ಅನ್ವಯಿಸುತ್ತದೆ ಅಲ್ಲವೆ. (ಕಾದಂಬರಿ - ಕರತಲ ರಂಗಭುಮಿ)
  ಕಾದಂಬರಿಯನ್ನು ಒಮ್ಮೆಯೂ ಓದದವರಿಗೆ ಅದರ ರಂಗರೂಪ ಖುಷಿ ಕೊಡಬಹುದೇನೊ?

  ReplyDelete
 9. ಮೊನ್ನೆ ಕೆಂಡಸಂಪಿಗೆಯಲ್ಲಿ ಪ್ರಕಟವಾದ ಮಲೆಗಳಲ್ಲಿ ಮದುಮಗಳು ನಾಟಕದ ಕುರಿತ ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಳು. ಈಗಷ್ಟೇ ನಿಮ್ಮ ‘ಮಲೆಗಳಲ್ಲಿ ಮದುಮಗಳು - ಭ್ರಮ ನಿರಸನ; ಪರಿಕರಗಳು ಹೆಚ್ಚಾಗಿ, ಸಾಮಾನ್ಯ ಅಡುಗೆ ’ ಓದಿದೆ. ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ತಾಂತ್ರಿಕ ದೃಷ್ಟಿಯಿಂದಲೂ ಭಾವನಾತ್ಮಕ ದೃಷ್ಟಿಯಿಂದಲೂ ಈ ನಾಟಕ ಒಂದು ಮಟ್ಟದಲ್ಲಿ ಸೋತಿದೆ. ನನಗೆ ಕಾದಂಬರಿಯ ಮೇಲಿರುವ ತೀವ್ರ ಪ್ರೀತಿಯ ಕಾರಣ ನಾಟಕದ ಸೋಲನ್ನು ನಾನು ಅಷ್ಟೇ ಪ್ರೀತಿಯಿಂದ ಹೇಳಿದ್ದೆ. ಕಾದಂಬರಿ ಕಟ್ಟಿಕೊಡುವ ಅಗಾಧ ಬದುಕು, ಒಂದು ನಿಟ್ಟುಸಿರು, ಒಳಗಿನ ಮಿಡಿತ ಯಾವುದನ್ನೂ ನಾಟಕದ ಪಾತ್ರಧಾರಿಗಳು ನಿರ್ವಹಿಸಲು ಸೋತಿದ್ದಾರೆ. ಅದಕ್ಕೆ ನಾನು ಹೇಳಿರುವುದು, "ನನ್ನ ಗುತ್ತಿ ಮೊದಲಿನಂತೆಯೇ ಇರುವನು". ನಾಟಕ ನೋಡಿ ಅದು ನನಗೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ.
  ಒಳ್ಳೆಯ ಬರವಣಿಗೆಗೆ ಧನ್ಯವಾದಗಳು

  ReplyDelete
 10. Naataka nodadavarigu pradarshana hege sarthakavagabahudittu embudannu tilisi kotta uthama vimarshege dhanyavaada . Inthaha mahan krithigalu pradarshanadalli sarthakavagadiddare, adu mulakrithige apachara.
  Ee vimarshe nirdeshakara mundina prayogagalige daarideepavadeethendu haareisona.
  ---- Shyamala.

  ReplyDelete
 11. ದಿನೇಶ್ ಕುಕ್ಕುಜಡ್ಕ28 May, 2013 12:18

  ಮೂಲ ಕಾದಂಬರಿ ಓದಿರುವ ಪ್ರೇಕ್ಷಕನಿಗೆ ರಂಗಪ್ರಯೋಗಗಳು ನಿರಾಶೆ ಮೂಡಿಸುವುದು ಬಹುತೇಕ ಕಡೆಗಳಲ್ಲಿ ಸಾಮಾನ್ಯವೇ ಆಗಿದ್ದರೂ ರಂಗಾಯಣದ ಈ ಪ್ರೊಡಕ್ಷನ್ ಬಗ್ಗೆ ತುಂಬಾ ನಿರೀಕ್ಷೆಗಳಿದ್ದವು. ನನ್ನ ಮಟ್ಟಿಗೆ ಈ ಪ್ರಯೋಗದ ಬಹು ದೊಡ್ಡ ವೈಫಲ್ಯವೇ ಭಾಷೆ.ಇಡೀ ಕಾದಂಬರಿ ಕಟ್ಟಿಕೊಡುವ ಮಲೆನಾಡ ಆ ಸ್ವಾದಿಷ್ಟ ನುಡಿಗಟ್ಟುಗಳು ತನ್ನ ಮೂಲ ರೂಪ ಕಳೆದುಕೊಂಡು ಪಾತ್ರಧಾರಿಗಳು ತಾವೇ ಇಷ್ಟಪಟ್ಟ ಕನ್ನಡದ ಹಲವು ರಂಗಿನ ಭಾಷೆಗಳಾಗಿ ರಂಗದಲ್ಲಿ ಕಲಸುಮೇಲೋಗರೆಯಾಗಿರುವುದು ಈ ಕಥಾನಕಕ್ಕೆ ಹೊಂದಿಕೆಯಾಗದೇ ಹೋಯಿತು. ಆರ್ಥಿಕ ಆಡಂಬರಗಳ ಸೋಂಕಿಲ್ಲದ ಕಾರಣಕ್ಕಾಗಿಯೇ ಯಾವ ಜನಜೀವನ ತನ್ನ ಸಹಜ ಸೊಬಗಿನಿಂದ ಜೀವಂತವಾಗಿರುತ್ತದೋ, ರಂಗದ ಮೇಲೆ ಅದರ ಪ್ರತಿರೂಪಿನ ಪ್ರದರ್ಶನಕ್ಕಾಗಿ ಲಕ್ಷ-ಲಕ್ಷ-ಲಕ್ಷ!!! ಗಮನಿಸಬೇಕಾದ ಅಂಶವೆಂದರೆ, ದುಡ್ಡಿನಿಂದಷ್ಟೇ ಅದನ್ನೆಲ್ಲಾ ಕಾಣಿಸಹೊರಟರೆ, ಕಾಣುವುದು ದುಡ್ಡು ಮಾತ್ರ! ಅಬ್ಬರದ ಮುಂದೆ- ಕಾದಂಬರಿಯುದ್ದಕ್ಕೂ ಮಾತನಾಡುವ ಮೌನ ಕಳೆದುಹೋದುದೆಲ್ಲಿ? ಕಾದಂಬರಿಯ ನಾಡಿ, ಅದರ ಧ್ವನಿಯಲ್ಲಿ, ಅದರ ಮೌನದಲ್ಲಿ, ಹಲವೆಡೆ ಮಲೆನಾಡ ಮೂಕ ಮರ್ಮರದಲ್ಲಿ....ಮರಮರಗಳ ಸಂದಿಗೊಂದಿಗಳಲ್ಲಿ ಮೂರತವಾಗಿಯೋ-ಅಮೂರ್ತವಾಗಿಯೋ, ವಿವಿಧ ಸ್ಥರಗಳಲ್ಲಿರುವುದನ್ನೆಲ್ಲಾ ಹಿಡಿದಿಡುವುದು ಸುಲಭದ ಮಾತಂತೂ ಆಗಲಾರದು. ದುಡ್ಡಿಗೆಲ್ಲಾ ಬಗ್ಗಿ ಬರದ ಒಂದು ಧ್ಯಾನಸ್ಥ ಸ್ಥಿತಿಯ ನೋಟ.....ಇಂಥ ಕಡೆಗಳಲ್ಲಿ ಅದರ ಇರುವಿಕೆಯನ್ನು ಪರಿಚಯಿಸಿಕೊಳ್ಳಲೇಬೇಕಿದೆ.

  ReplyDelete
  Replies
  1. ಅಶೋಕವರ್ಧನ ಜಿ.ಎನ್28 May, 2013 16:31

   ದಿನೇಶರೇ ನಿಮ್ಮ ಅಭಿಪ್ರಾಯ ಸಾಧುವಾದ್ದೇ. ಸಣ್ಣ ತಪ್ಪುಗ್ರಹಿಕೆ ಮಾತ್ರ ಬದಲಿಸಿಕೊಳ್ಳಿ - ಮೈಸೂರಿನದು ರಂಗಾಯಣ ನಿರ್ಮಾಣ. ಬೆಂಗಳೂರಿನದ್ದರಲ್ಲಿ ರಂಗಾಯಣವಿಲ್ಲ, ಕನ್ನಡ ಸಂಸ್ಕೃತಿ ಇಲಾಖೆಯ ಪ್ರಸ್ತುತಿ.

   Delete
 12. "ಅತ್ಯಂತ ಸೂಕ್ತವಾದ ಹಾಗೂ ಸಮಯೋಚಿತವಾದ ವಿಮರ್ಶೆ". ಕಾದಂಬರಿ ಓದುವುದಕ್ಕೂ ಮೊದಲೇ ಹೋಗಿ ನಾಟಕ ನೋಡಿಬಂದೆ. ಆದರೂ ಸಹಾ ನನಗೇನೂ ಇದು ಅಂಥ ದೊಡ್ದ ಕಾಡುವ ಪ್ರಯೋಗವೇನೂ ಆಗಿ ಕಂಡುಬರಲಿಲ್ಲ.

  ReplyDelete
 13. SADANAND SUVARNA29 May, 2013 22:43

  Nimma vimarshe odi khushi aithu. Kuvempu avara mahan krithiyannu odidavarige ee pradarshana kandu nimmantheye thumba besaravagirabeku. Nanu nodillavadaru nimma kannininda nodidanthayithu.

  Dhanyavadagalu.

  ReplyDelete
 14. ನಾಟಕವನ್ನು ನಾನು ನೋಡಿದೆ, ಈ ರೀತಿಯ ನಾಟಕ ಪ್ರಯೋಗ ತುಂಬ ಇಷ್ಟವಾಯಿತು. ಭಾಷೆ ಬಗ್ಗೆ ಹೇಳುವುದಾದರೆ ಅನೇಕ ಕಡೆ ಮಿಶ್ರವಾಗಿ ಕಂಡಿತು. ಮಲೆನಾಡಿನ ಮಳೆ ಪರಿಣಾಮವನ್ನ ಧ್ವನಿಯಲ್ಲಿ ಕಟ್ಟಿಕೊಡಬಹುದು... ಅದನ್ನು ಇಲ್ಲಿ ಮಾಡಿಲ್ಲ. ಅಂತ ಹೇಳಿದ್ದಿರ, ನಾವು ನಾಟಕಕ್ಕೆ ಹೋಗಿದ್ದಗ ಮಲೆನಾಡಿನ ಮಳೆ ಪರಿಣಾಮವನ್ನ ನಿಜವಾಗಿ ಜೊರು ಮಳೆ ಬಂದಿದ್ದರಿಂದ ಮತ್ತು ಆ ಕೆರೆಯಲ್ಲಿ ನಿಜವಾದ ಕಪ್ಪೆಗಳ ಸದ್ದು ತುಂಬ ಚನ್ನಗಿತ್ತು ಹಾಗ ಮಲೆನಾಡಿನ ಮಳೆ ಪರಿಣಾಮವನ್ನ ಧ್ವನಿಯಲ್ಲಿ ಮತ್ತು ನಿಜವಾಗಿಯೂ ಕಟ್ಟಿಕೊಟ್ಟಿತ್ತು. ನಿಮ್ಮ ಈ ವಿಮರ್ಶೆ ಸೂಕ್ತವಾದದ್ದು . ಅಭಿನಂದನೆಗಳು.

  ReplyDelete
 15. ಮಾನ್ಯರೆ
  ನಿಜ, ನಾನು ನಾಟಕವನ್ನು ಬೆಂಗಳೂರಿನ ಕಲಾಗ್ರಾಮದಲ್ಲೂ ನೋಡಿದೆ. ಮಮಮ ರಂಗರೂಪದ ಸಂದರ್ಭದಲ್ಲಿ ಸುಮಾರು 18 ದಿನಗಳ ಕಾಲ ಮೈಸೂರಿನ ರಂಗಾಯಣದ ಸೊಳ್ಳೆ ಕಡಿತದ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡು ಹಗಲು-ರಾತ್ರಿ ಕಾದಂಬರಿಯೊಳಗಿನ ಸಂಭಾಷಣೆಯ ಭಾಗವನ್ನು ಹೆಕ್ಕಿ ಕೊಟ್ಟು ನಮ್ಮದೇ ಲ್ಯಾಪ್ ಟಾಪ್ ನಲ್ಲಿ ಕೀಲಿಸಿ, ಹಲವಾರು ಬಗೆಯ ಚರ್ಚೆಗಳಲ್ಲಿ ಪಾಲ್ಗೊಂಡು, ಯಾವುದೇ ಕಾರಣಕ್ಕೂ ಕುವೆಂಪು ಅವರ ಮಾತುಗಳನ್ನು ಬದಲಾಯಿಸಕೂಡದೆಂಬ ಶರತ್ತನ್ನು ಹಾಕಿಕೊಂಡು ರಂಗರೂಪಕ್ಕೆ ತಂದೆವು. ಮೈಸೂರಿನಲ್ಲಿ ಕಂಡ ಆ ಭಾಷೆಯ ಅಚ್ಚುಕಟ್ಟುತನ, ಬೆಂಗಳೂರಿನ ಕಲಾಗ್ರಾಮದ ಪ್ರದರ್ಶನದಲ್ಲಿ ಕಾಣುತ್ತಿಲ್ಲ. ಅನಗತ್ಯ ಅಶ್ಲೀಲ ಶಬ್ದಗಳ ಬಳಕೆಯನ್ನು ನಿರ್ದೇಶಕರು ತಡೆಯಬಹುದಿತ್ತು. ದೃಶ್ಯ ಕಟ್ಟುವಾಗ ಮತ್ತಷ್ಟು ಕಾಳಜಿ ವಹಿಸಬೇಕಿತ್ತು. ಬೆಳಕಿನ ವ್ಯವಸ್ಥೆಯನ್ನು ಸಾಕಷ್ಟು ಪರಿಣಾಮಕಾರಿಯಾಗಿ ಬಳಸಬಹುದಿದ್ದ ಎಲ್ಲ ಸಾಧ್ಯತೆಗಳನ್ನೂ ತಳ್ಳಿಹಾಕಿದ್ದಾರೆ. ಒಟ್ಟಾರೆ ಅಶೋಕವರ್ಧನರು ತಮ್ಮ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮೂಲಕ ಇಂತಹ ನಾಟಕದ ನಡೆಗಳು ಹೇಗಿರಬೇಕೆಂದು ತಿಳಿಸಿಕೊಟ್ಟಿದ್ದಾರೆ. ಅನೇಕ ಒಳ್ಳೆಯ ಅಂಶಗಳು ಈ ಪ್ರಯತ್ನದಲ್ಲಿವೆ. ನಿಜಕ್ಕೂ ಇಂಥದೊಂದು ಪ್ರದರ್ಶನ ಸಾಧ್ಯವಾಗಿರುವುದು ಅಭಿನಂದನೀಯ. ಆದರೆ ಅಷ್ಟೇ ಪ್ರಮಾಣದ ಬದ್ಧತೆಯಿರಬೇಕಿತ್ತು. ಖಂಡಿತವಾಗಿಯೂ ಮೈಸೂರಿನ ರಂಗಾಯಣದಲ್ಲಿ ಕಂಡ ಪ್ರದರ್ಶನವೇ ಇದು! ಎನ್ನುವಷ್ಟರ ಮಟ್ಟಿಗೆ ಬದಲಾಗಿದೆ. ಗೊತ್ತಿಲ್ಲ ಕಾಲಕ್ಕೆ ತಕ್ಕಹಾಗೆ ಬದಲಾಗಿರುವರೋ ಅಥವಾ ಕಲಾವಿದರ ತಾಕತ್ತೇ ಅಷ್ಟಿದೆಯೋ....?

  ReplyDelete