24 May 2013

ನಮೋ ವೇಂಕಟೇಶಾ ನಮೋ ತಿರುಮಲೇಶಾ!


(ಕ್ಷೇತ್ರ ದರ್ಶನದಲ್ಲೊಂದು ಸುತ್ತು ಭಾಗ ಮೂರು)

ಯಾರೋ ಐಎಎಸ್ ಅಧಿಕಾರಿಯಂತೆ, ತಿರುಪತಿ ವಲಯದಲ್ಲಿ ಅಧಿಕೃತ ಕೆಲಸವನ್ನೇ ಮಾಡಿದವರಂತೆ, ಅಪಾರ ಶ್ರೀನಿವಾಸ ದೈವಲೀಲೆಗಳನ್ನು ಅನುಭವಿಸಿ ಕಥಿಸಿದ್ದು ಈಚೆಗೆ ನನ್ನಮ್ಮನಿಗೆ ಭಾರೀ ಹಿಡಿಸಿಬಿಟ್ಟಿತು. ನಾನದನ್ನು ಕೇವಲ ಅಮ್ಮನ ನಂಬಿಕೆಯೆಂದೇ ಲೆಕ್ಕಕ್ಕಿಟ್ಟರೂ ಅಧಿಕಾರಿ ಅಲ್ಲಿ ದಕ್ಷವಾಗಿ ರೂಢಿಸಿದ್ದೆಂದು ಪ್ರಚಾರದಲ್ಲಿರುವ ಜನಪರ ಕೆಲಸಗಳನ್ನಷ್ಟು ನೋಡಲೇಬೇಕೆಂಬ ಕುತೂಹಲ ಉಳಿಸಿಕೊಂಡೇ ಇದ್ದೆ. ಅದಕ್ಕೆ ಇನ್ನಷ್ಟು ಒತ್ತಾಸೆಗಳನ್ನು ಸೇರಿಸಿದವರು ತಮ್ಮ ಅನಂತ ಮತ್ತು ಗೆಳೆಯ ಕೆ.ಎಲ್ ರೆಡ್ಡಿ. ನಮ್ಮಿಬ್ಬರ ತಿರುಗುವ, ಅಳವಿಯೊಳಗೆ ನಿಲುಕಿದರೆ ಯಾವುದನ್ನೂ ನನಗೆ ನೋಡಬಾರದೆಂದಿಲ್ಲ. ಹಾಗೇ ದಿಢೀರ್ ಎಂದು ಬೆಂಗಳೂರಿನಿಂದ ಬೈಕೇರಿ ತಿರುಪತಿಗೆ ಹೊರಟ ಸಾಹಸ ನೀವೀಗಾಗಲೇ ಓದಿದ್ದೀರಿ. ನನ್ನ ಬೋರೇಗೌಡತನದಲ್ಲಿ ವೇಂಕಟೇಶ ನಾಮಜಪ ಮಾಡುತ್ತಾ ಬೆಂಗಳೂರಿಗೆ ಸುಮಾರು ಎಪ್ಪತ್ನಾಲ್ಕು ಕಿಮೀ ಪ್ರದಕ್ಷಿಣೆ ಹಾಕಿದ್ದು ಹುರಿಗಟ್ಟಿದ ಮೀಸೆ ಜೋತುಬಿದ್ದ ಅನುಭವ! ವಧು ದಕ್ಷಿಣೆಯೆನ್ನಿ, ವಿವಾಹವೆಚ್ಚವೆನ್ನಿ ಒಟ್ಟಾರೆ ಮಹಾಸಾಲಗಾರ ವೇಂಕಟೇಶ್ವರನನ್ನು ಬಾರಿಯಾದರೂ ಆತನ ಊರು, ಬಿಡಾರದಲ್ಲಿ ನೋಡಿಯೇ ಬಿಡಬೇಕೆಂದು ನಾನು, ದೇವಕಿ ಚನ್ನೈಯಿಂದ ಬಸ್ಸು ಹಿಡಿದೆವು. ದೈವಭೀರುಗಳು ತಿಮ್ಮಪ್ಪನೇ ಕರೆಸಿಕೊಂಡಎಂದುಕೊಂಡರೆ ಅಡ್ಡಿಯಿಲ್ಲ. ಆದರೆ ನನ್ನ ಲೆಕ್ಕಕ್ಕೆ ಇದು (ತಮಾಷೆಗೆ ಸವಾಲಿಗುತ್ತರ ಎಂದರೂ) ಭಕ್ತಿ ಉದ್ದಿಮೆಯನ್ನು ಶೋಧಿಸುವ ಯಾತ್ರೆ.

ಹೊರಟದ್ದು ಸರ್ವಂ ತಮಿಳುಮಯಂ ಆದ ಚೆನ್ನೈಯಿಂದಲೇ ಆದರೂ ಬಸ್ಸು ಆಂಧ್ರಪ್ರದೇಶದ್ದು - ಭಾಷಾ ಔದಾರ್ಯ ಬೋರಡು, ಟಿಕೆಟ್ಗಳಲ್ಲಿ ಕಾಣುತ್ತಿತ್ತು! ಲೆಕ್ಕಕ್ಕೆ ಬಸ್ ತಿರುಪತಿಗೆ ತಡೆರಹಿತ. ಆದರೆ ಕೆಲವು ಸೀಟುಗಳು ಖಾಲಿಯೇ ಉಳಿದವನ್ನು ದಾರಿ ಬದಿಯೂರಿನ ಹಳ್ಳಿಗರನ್ನು ಬಳಸಿಕೊಂಡು ಚಾಲಕ ಸಂಚಾಲಕ ಬಳಗ ಸದುಪಯೋಗಪಡಿಸಿಕೊಂಡಿತು. ಚೆನ್ನೈ ಪೇಟೆಯ ಗೊಂದಲ ದೂರಾದರೂ ನಗರದ ಔದ್ಯಮಿಕ ಪ್ರಭಾವ ತುಂಬಾ ದೂರದವರೆಗೂ ನಾವು ಕಾಣುತ್ತಲೇ ಇದ್ದೆವು. ಯಾವ್ಯಾವುದೋ ಸಣ್ಣ ದೊಡ್ಡ ಉದ್ದಿಮೆಗಳು, ರೈಲು, ರಸ್ತೆಜಾಲಗಳು ಚದುರಿದಂತೆ ಸಿಗುತ್ತಲೇ ಇದ್ದವು, ಅನಿವಾರ್ಯವಿರಬಹುದು. ಆದರೆ ಎಡೆಯಲ್ಲಿ ಬಲು ವಿಸ್ತಾರವಾದ ಭೂಮಿ ಕೃಷಿ ಹಡಿಲುಬಿಟ್ಟು ಯೋಗ್ಯ ದರಕಾಯುವಂತಿದ್ದುದು ನಿಜಕ್ಕು ಬೇಸರದ ಸಂಗತಿ. ಮುಂದುವರಿದಂತೆ ಯಾವುದೋ ನೀರಾವರಿ ಅನುಕೂಲವಿದ್ದಂತೆ ಭತ್ತ, ಹೂ, ತರಕಾರಿಯೇ ಮೊದಲಾದ ಜನೋಪಯೋಗೀ (ಆಹಾರವೇ ಪ್ರಧಾನವಾಗಿ) ಬೆಳೆಗಳು ಸಾಕಷ್ಟು ಕಾಣಿಸಿತು. ಆಗ ಜೊತೆಗೆ ಇವರಿಗೆ (ನಮ್ಮೂರಿನ ಸಾಮಾನ್ಯರಂತೆ) ವಾಣಿಜ್ಯ ಬೆಳೆಗಳ ಮೋಹ ಬಂದರೇನು ಗತಿ ಎಂಬ ಅಳುಕೂ ಬಾರದಿರಲಿಲ್ಲ.

ಪುತ್ತೂರುಎಂದಾಕ್ಷಣ ನಂಗೊತ್ತುಎನ್ನುವುದಕ್ಕೆ ಕಡಿಮೆ ಜ್ಞಾನ ಇದ್ದಷ್ಟೂ ಒಳ್ಳೆಯದು. ಹೆಸರನ್ನು ಗಟ್ಟಿಸಿ ಕೇಳಿದರೆ ಅತ್ತ ಕಾಸರಗೋಡಿನಿಂದಲೂ ಇತ್ತ ಉಡುಪಿಯಿಂದಲೂ ಹಾಂಗೊಡುವವರು ಇಲ್ಲವೇ? ಹಾಗೇ ತಿರುಪತಿಗಿನ್ನು ಮೂವತ್ತೈದು ಕಿಮೀ ದೂರ ಇರುವಂತೆಯೇ (ಆಂಧ್ರಪ್ರದೇಶ) ಅಲ್ಲೊಂದು ಪುತ್ತೂರು - ಸಾಕಷ್ಟು ದೊಡ್ಡೂರು ಸಿಕ್ಕಿತು. ಅದುವರೆಗೆ, ಅಂದರೆ ಸುಮಾರು ಒಂದು ನೂರು ಕಿಮೀ, ಎತ್ತ ತಿರುಗಿದರೂ ಮಟ್ಟಸ ಬಯಲಲ್ಲೇ ಭರದಿಂದ ಸಾಗಿಬಂದ ನಮಗೆ ದಿಗಂತದಲ್ಲಿ ಪರ್ವತ ಮೊಳಕೆಗಳು ಕಾಣತೊಡಗಿದವು. ಬೆಂಗಳೂರಿನಂಚಿನಲ್ಲಿ ನಂದಿಬೆಟ್ಟ ಕಾಣಿಸಿದಂತೇ ಒಣ ಕಲ್ಲು ಕಂದುಬಣ್ಣ, ಕುರುಚಲು ಕಾಡಿನದ್ದಷ್ಟೇ ಲಕ್ಷಣಭಾರತದಲ್ಲಿ ಪಶ್ಚಿಮ ಘಟ್ಟ ಎನ್ನುವುದು ಒಂದು ವಸ್ತು ಸ್ಥಿತಿ. ತದ್ವಿರುದ್ಧವಾಗಿ ಮಾತಿನ ಉಪಚಾರಕ್ಕೆ ಪೂರ್ವಘಟ್ಟ ಎನ್ನುವ ಶ್ರೇಣಿಯೇನೋ ಇದೆ. ಅತ್ತ ಪಶ್ಚಿಮ ಬಂಗಾಳದಿಂದ ಇತ್ತ ತಮಿಳುನಾಡಿನವರೆಗೂ ದೊಡ್ಡ ಹರಹಿನ ಪ್ರಸ್ಥಭೂಮಿಗಳ ನಡುವೆ ತುಂಡು ತುಂಡು ಸಾಮಾನ್ಯ ಬೆಟ್ಟಗಳ ಸಾಲು. ಅಂಥಾ ಒಂದು ಶ್ರೇಣಿಯ ಕೇವಲ ದಕ್ಷಿಣ ತುದಿ ಏಳು ಮಲೆಗಳೊಡೆಯನ ಆವಾಸ - ತಿರುಮಲ. ಅದರ ನೇರ ತಪ್ಪಲ ಪೇಟೆ ತಿರುಪತಿ.


ಭಾರತ ಪರ್ಯಾಯ ದ್ವೀಪದ ಹೊರ ರೇಖೆಯನ್ನೇ ಒಮ್ಮೆ ಕಲ್ಪಿಸಿಕೊಳ್ಳಿ. ಮತ್ತದನ್ನೇ ಕಿರಿದುಗೊಳಿಸಿ ಪರ್ವತಶ್ರೇಣಿಗೆ ಅನ್ವಯಿಸಿ. ಆಗ ವೇಂಕಟೇಶ ದರ್ಶನಾಕಾಂಕ್ಷಿಗಳೆಲ್ಲ ಏರಿ ತಲಪುವ ತಿರುಮಲ (ಸಮುದ್ರ ಮಟ್ಟದಿಂದ ಸುಮಾರು ೩೨೦೦ ಅಡಿ ಅಥವಾ ೯೮೦ ಮೀ) ಬರಿಯ ಕನ್ಯಾಕುಮಾರಿ. ತಿರುಮಲದ ವ್ಯಾಪ್ತಿ ೨೬. ಚದರ ಕಿಮೀಯಾದರೆ ಉಳಿದ ಶ್ರೇಣಿಯ ವ್ಯಾಪ್ತಿ ೩೫೩ ಚದರ ಕಿಮೀ.  ಕಾಲ್ಪನಿಕ ಪರ್ಯಾಯದ್ವೀಪದಲ್ಲೂ ಇಕ್ಕೆಲಗಳಲ್ಲಿ ಬೆಟ್ಟಸಾಲುಗಳೂ ಕಾಡೂ ಇವೆ. ನಡುವಣ ಪ್ರಸ್ಥಭೂಮಿಯಲ್ಲಿ ಊರು, ಜನವಸತಿಯಿದೆ. ಬೆಟ್ಟ, ಕಾಡಿನ ಪ್ರಾಕೃತಿಕ ಸ್ಥಿತಿಗೆ ಒಂದು ರೀತಿಯ ಮನ್ನಣೆ ಮತ್ತೆ ರಕ್ಷಣೆ ತೀರಾ ಈಚೆಗೆ (೨೦೧೦) ಶ್ರೀ ವೇಂಕಟೇಶ್ವರ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಒದಗಿದೆ. ಇದಕ್ಕೆ ಭಕ್ತ್ಯುದ್ದಿಮೆ ಕೊಟ್ಟ ಪ್ರಾಶಸ್ತ್ರ್ಯ ಬೀರಿದ ಪ್ರಭಾವವನ್ನು ಕಂಡು ಅನುಭವಿಸಬೇಕು ಎನ್ನುವುದೂ ನನ್ನ ಲಕ್ಷದಲ್ಲಿತ್ತು. ಹಾಗಾಗಿ ಮೊದಲ ಪ್ರಯತ್ನದಲ್ಲಿ, ಓಡಾಟದ ಸ್ವಾತಂತ್ರ್ಯಕ್ಕಾಗಿಯೇ ಬೈಕ್ ಹೊರಡಿಸಿದ್ದೆ; ವಿಫಲನಾದೆ. ಆದರೇನು ಸಲ ಆದಷ್ಟು ನಡೆದಾದರೂ ನೋಡಬೇಕೆಂದು ಕನಿಷ್ಠ ಎರಡು ದಿನಗಳ ಬಿಡುವು ಇಟ್ಟುಕೊಂಡೇ ಬಂದಿದ್ದೆವು.

ತಿರುಪತಿ ತಿರುಮಲೆಗಳ ನಡುವೆ ವಾಹನಗಳಿಗೆ ಏಕಮುಖ ಸಂಚಾರವನ್ನೇ ಹೇರಿ, ಮುಖ್ಯವಾಗಿ ಎರಡು ಸುವ್ಯವಸ್ಥಿತ ದಾರಿಗಳನ್ನು ಕಲ್ಪಿಸಿದ್ದಾರೆ. ಸಾಮಾನ್ಯ ವಾಹನಚಾಲನೆಯ ನಿಯಮದ ಮೇರೆಗೆ ಇವು ಯಾವುದೇ ವಾಹನಗಳ ಓಡಾಟಕ್ಕೂ ಮುಕ್ತವಾಗಿವೆ. ಸ್ಥಳದ ಜನಪ್ರಿಯತೆ ಪರಿಗಣಿಸಿ ಆಂಧ್ರಪ್ರದೇಶ ಸರಕಾರ ಬಸ್ ವ್ಯವಸ್ಥೆಯನ್ನೂ ಧಾರಾಳ ಮಾಡಿದ್ದಾರೆ (ಉಷಃಕಾಲ ಮೂರು ಗಂಟೆಯಿಂದ ತೊಡಗಿ ನಡುರಾತ್ರಿ ಹನ್ನೆರಡರವರೆಗೂ ಪ್ರತಿ ಎರಡು ಮಿನಿಟಿಗೊಂದು ಬಸ್ಸಿದೆ. ಅದೂ ಮಹೋತ್ಸವಗಳಂದು ದಿನದ ಇಪ್ಪತ್ನಾಲ್ಕು ಗಂಟೆಯೂ ಮಿನಿಟಿಗೊಂದರಂತೆ ಓಡುತ್ತವಂತೆ. ಅಲ್ಲದೆ ನಲವತ್ತೈದರ ಗುಂಪಿನಲ್ಲಿ ಸಂಪರ್ಕಿಸಿದರೆ ಮುಂದಾಗಿಯೂ ಯಾವುದೇ ಕ್ಷಣದಲ್ಲೂ ವಿಶೇಷ ಬಸ್ ಕೂಡಾ ಸಾಮಾನ್ಯ ದರದಲ್ಲೇ ಲಭ್ಯ ಎನ್ನುತ್ತದೆ ಜಾಲಮಾಹಿತಿ!). ಇನ್ನು ಹರಕೆ, ಅಧಿಕ ಭಕ್ತಿಭಾವ, ಏನಲ್ಲದಿದ್ದರೂ ಬೆಟ್ಟವನ್ನು ನಡೆದು ಹತ್ತಿಯೇ ಸಂತೋಷಿಸಬೇಕೆಂಬವರಿಗೆ ಸ್ವಸ್ಥ ಮೆಟ್ಟಿಲ ಸಾಲುಗಳನ್ನು ಎರಡು ದಿಕ್ಕಿನಲ್ಲಿ ವ್ಯವಸ್ಥೆ ಮಾಡಿದ್ದಾರೆ. ಅವನ್ನೂ ನಿರಾಕರಿಸಿ ಚಾರಣ ಜಾಡುಗಳೂ ಶೋಧನಾ ಅಲೆದಾಟಗಳೂ ಧಾರಾಳ ನಡೆದಿರಬಹುದು. ಇದಕ್ಕೆ ಇಂದು ವನ್ಯ ಇಲಾಖೆಯ ಔಪಚಾರಿಕತೆಗಳೂ ನಕ್ಷೆಯಿಂದ ಹಿಡಿದು ಅನೇಕಾನೇಕ ಪೂರ್ವ ಸಿದ್ಧತೆಗಳೂ ಅವಶ್ಯ. ನಮ್ಮದು ಪ್ರಥಮ ಸಂದರ್ಶನ ಮತ್ತು ಜನಪ್ರಿಯವಾದ್ದನ್ನೇ ತಿಳಿದುಕೊಳ್ಳುವ ಪ್ರಯತ್ನವಾದ್ದರಿಂದ ಮೆಟ್ಟಿಲ ಸಾಲನ್ನಷ್ಟೇ ಆಯ್ದುಕೊಂಡಿದ್ದೆವು.

ಅಪರಾಹ್ನ ಒಂದು ಗಂಟೆಗೆ ತಿರುಪತಿ ಬಸ್ ನಿಲ್ದಾಣದಲ್ಲೇ ನಾವು ಇಳಿದೆವು. ಜಲ್ಲಿ ಕಿತ್ತ ನೆಲ, ಹರಕು ಕಟ್ಟಡಗಳು, ಕಸ ಕೊಳಕು ನೋಡಿ ವಿಷಾದವಾಯಿತು. ವೇಳೆಗಳೆಯದೆ ಮೊದಲು ಮಾಡಿದ ನಿಲ್ದಾಣದ ಹೊರಗೇ ಇದ್ದ ಸಾಮಾನ್ಯ ಹೋಟೆಲಿನಲ್ಲಿ ಒಳ್ಳೇ ಊಠ! (ಭರ್ಜರಿ ಊಟಕ್ಕೆ ಪಂಡಿತಾರಾಧ್ಯ ಪ್ರಯೋಗ) ಮತ್ತೆ ತಿರುಮಲ ಬಸ್ಸುಗಳಿಗಾಗಿಯೇ ಇದ್ದ ವಿಶೇಷ ಟಿಕೆಟ್ ಕೇಂದ್ರದಲ್ಲಿ (ಮೈಸೂರು - ಬೆಂಗಳೂರು ನಡುವಣ ತಡೆರಹಿತ ಬಸ್ಸುಗಳಿಗಿದ್ದಂತೆ) ಜನಪ್ರಿಯ ಮೆಟ್ಟಿಲುದಾರಿ ತೊಡಗುವ ಸ್ಥಳ - ಅಲಿಪ್ಪಿರಿಗೆ, ಟಿಕೆಟ್ ಕೊಂಡೆವು. ಬಸ್ಸಿತ್ತು, ಖಾಲಿ ಸೀಟುಗಳೂ ಇತ್ತು. ಆದರೆ ನಿರ್ವಾಹಕಿ ಜಾಣೆ, ನಮ್ಮನ್ನು ಬಾಗಿಲಲ್ಲೇ ತಡೆದಳು. ಹೊರಡುವ ಗಳಿಗೆಯವರೆಗೂ ಸೀಟು ತುಂಬಲು ನೇರ ಗಿರಾಕಿಗಳನ್ನು ಕಾದು ಮತ್ತೆ ಏರಿಸಿಕೊಂಡಳು

ಬೆಟ್ಟದ ನೇರ ತಪ್ಪಲು, ಅಂದರೆ ಸುಮಾರು ಮೂರು ಕಿಮೀ ಅಂತರದ ಅಲಿಪ್ಪಿರಿ ತಲಪುತ್ತಿದ್ದಂತೆ ಒಮ್ಮೆಗೆ ನಮಗೆ ನಗರದ ಕೊಳಕು ಕಳಚಿ ತಿರುಪತಿ-ತಿರುಮಲ ದೇವಸ್ಥಾನಗಳು’ (ಸಂಕೇತಾಕ್ಷರಗಳಲ್ಲಿ ಹೇಳುವುದಾದರೆ, ಟಿಟಿಡಿ) ಆಡಳಿತದ ತೆಕ್ಕೆಗೆ ಬಿದ್ದುದರ ಹಿತಾನುಭವವಾಯಿತು. ಮೂರೋ ನಾಲ್ಕೋ ದಾರಿಗಳು ಸೇರುವ ವಿಶಾಲ ವೃತ್ತದಲ್ಲಿ ಹೂದೋಟದ ನಡುವೆ ಸಾಕ್ಷಾತ್ ಗರುಡನೇ ನಿಂತು ಅತ್ತ ವಾಹನಗಳ ಮಹಾದ್ವಾರಕ್ಕೂ ಇತ್ತ ಪಾದಚಾರಿಗಳ ಮೆಟ್ಟಿಲಸಾಲಿಗೂ ಸ್ವಾಗತಿಸುತ್ತಿದ್ದ. (ಜಯವಿಜಯರು ರಜೆಯ ಮೇಲೆ ಹೋಗಿದ್ದರೋ ಅಥವಾ ಹೊಸಾ ಪಾಪಕರ್ಮಂಗಳನ್ನೇನಾದರೂ ಎಸಗಿ, ವೈಕುಂಠಪತಿಯ ಏಕಾದಶಾವತಾರಕ್ಕೆ ಅವಕಾಶ ಕಲ್ಪಿಸುವುದರಲ್ಲಿದ್ದರೋ ಗೊತ್ತಿಲ್ಲ!) ರಚನೆ, ಬಣ್ಣ, ಅಲಂಕಾರಿಕ ಉದ್ಯಾನಗಳಿಂದ ಹಿಡಿದು ರಸ್ತೆ, ಪುಟ್ಟಪಥ ಎಲ್ಲವೂ ಚಂದ, ಚೊಕ್ಕ. ಗಾಳಿಯಲ್ಲಿ ಹಸಿರಿನ ತಣ್ಪಿತ್ತು, ಸುಮ ಗಂಧಗಳ ಪರಿಮಳವಿತ್ತು. ಎರಡೂವರೆ ಗಂಟೆಯ ಅಪರಾಹ್ನದ ವೇಳೆ ಮರೆಸಿ ಯಾರಿಗೂ ನಡೆಯುವ ಪ್ರೀತಿ ಹುಟ್ಟಿಸುವಂತಿತ್ತು.

ಬಸ್ಸಿಳಿದು ದಾರಿಯಾಚಿನ ಮೆಟ್ಟಿಲ ಓಣಿಯ ದ್ವಾರಕ್ಕೆ ಹೋದೆವು. ಅಲ್ಲಿ ನಾವು ಮೊದಲೇ ಕೇಳಿ ತಿಳಿದಂತೆ ಉಚಿತ ಸರಕು ಸಾಗಣೆ ಕೇಂದ್ರದ ದೊಡ್ಡ ಕಟ್ಟಡ ಮತ್ತು ಬೋರ್ಡೂ ಗಮನಸೆಳೆದುವು. ಬೆಟ್ಟ ಏರುವ ಯಾರೂ ತಮ್ಮ ಯಾವುದೇ ಗಂಟು ಮೂಟೆಯನ್ನು ಅಲ್ಲಿ ಒಪ್ಪಿಸಿ ರಸೀದಿ ಹಾಕಿಸಿದರೆ ಸಾಕು. ಮತ್ತೆ ಒಂದೆರಡೇ ಗಂಟೆ ಅಂತರದಲ್ಲಿ ಅವನ್ನು ಮೇಲೆ ತಿರುಮಲದಲ್ಲಿ ಭದ್ರವಾಗಿ ಹಾಗೂ ಉಚಿತವಾಗಿ ತಲಪಿಸುವ ಜವಾಬ್ದಾರಿ ಟಿಟಿಡಿ ಹೊರುತ್ತದೆ. ಇದಕ್ಕೊಂದು ಸಣ್ಣ ಕಡ್ಡಾಯ ಕರ್ಮಬಂಧವಿದೆ - ನೀವೊಪ್ಪಿಸುವ ಗಂಟಿಗೆ ಬೀಗ ಹಾಕಿರಬೇಕು. ನಾವು ಅದಕ್ಕೂ ಸಜ್ಜಾಗಿದ್ದೆವು. (ಇಲ್ಲದವರಿಗೂ ಹೆಚ್ಚೇನೂ ಕಷ್ಟವಾಗದು, ಅಲ್ಲಿನ ಪುಟ್ಟಪಥ ವ್ಯಾಪಾರಿಗಳ ಮುಖ್ಯ ಸರಕೇ ಪುಟ್ಟ ಬೀಗಗಳು!) ಕೇಂದ್ರದೊಳಗೆ ನಮ್ಮ ಏಕೈಕ ಚೀಲವನ್ನು ಕ್ರಮದಂತೆ ಅಪಾಯಕಾರೀ ವಸ್ತು ತನಿಖೆಗಾಗಿ ಅತಿನೇರಿಳೆ ಯಂತ್ರದ ಮೂಲಕ ಹಾಯಿಸಿ, ಪಟ್ಟಿ ಹಾಕುವ ಯಂತ್ರದಲ್ಲೊಂದು (ಸ್ಟ್ರಾಪ್ಲರ್) ಸುತ್ತು ಕಟ್ಟು ಹಾಕಿ, ರಸೀದಿ ಕೊಟ್ಟು ಕೆಲವೇ ಮಿನಿಟುಗಳಲ್ಲಿ ನಮ್ಮನ್ನು ಬಿಡು ಹಸ್ತರನ್ನಾಗಿಸಿದರು. ಸೇವೆ ಕೆಳಗಿಳಿಯುವವರಿಗೂ ಲಭ್ಯವಿರುವುದರಿಂದ ಒಳಗಿನ ಕೊಠಡಿ, ಗಂಟುಗಳನ್ನು ಕ್ರಮವಾಗಿ ಜೋಡಿಸಲು ಹಲಗೆಗಳು, ಸಿಬ್ಬಂದಿ ಎಲ್ಲವೂ ಧಾರಾಳವಿತ್ತು. ಹೊರೆಗಳ ಒತ್ತಡ ನೋಡಿಕೊಂಡು ಎರಡು ಗಂಟೆಗಳೊಳಗೆ ಒಮ್ಮೆ ಲಾರಿಯಲ್ಲಿ ಅವನ್ನು ಮೇಲೆ ಕಳಿಸಿ, ಮೇಲಿನವನ್ನು ಕೆಳಕ್ಕೆ ತರಿಸಿ ವಿತರಣೆಗೆ ಸಜ್ಜುಗೊಳಿಸಿಡುವ ಕ್ರಮ ತುಂಬ ಚೆನ್ನಾಗಿದೆ.

ಟಿಟಿಡಿ ಕ್ಷೇತ್ರದ ಪಾವಿತ್ರ್ಯವನ್ನು ಭೌತಿಕವಾಗಿ ಕಾಪಾಡಲು ಬಹಳ ಬಿಗುವಾದ ಕ್ರಮವನ್ನೇ ಕೈಗೊಂಡಿದೆ. ಮೆಟ್ಟಿಲ ದ್ವಾರದಿಂದ ತೊಡಗಿದಂತೆ ಪೂರ್ಣ ತಿರುಮಲ ಕ್ಷೇತ್ರದಲ್ಲಿ ಧೂಮ, ವೀಳ್ಯ, (ಬಹುಮುಖ್ಯವಾಗಿ) ಗುಟ್ಖಾ, ಮದ್ಯವೇ ಮೊದಲಾದ ಚಟಕಾರಕಗಳು ಮಾತ್ರವಲ್ಲ ಎಲ್ಲ ರೀತಿಯ ಮಾಂಸಾಹಾರಕ್ಕೂ ನಿಷೇಧವನ್ನು ಕೇವಲ ಶಾಸನಾತ್ಮಕ ಅಲ್ಲ, ಆಚರಣೆಯಲ್ಲೇ ತಂದಿತ್ತು. ಸಹಜವಾಗಿ ಮೆಟ್ಟಿಲ ದ್ವಾರದಲ್ಲಿ ಇದ್ದ ಕೆಲವೇ ಕಿರು ವ್ಯಾಪಾರಿಗಳಲ್ಲೂ ಮೊದಲೇ ಹೇಳಿದಂತೆ ಪುಟ್ಟ ಬೀಗಗಳಲ್ಲದೇ ನಡೆದು ಹೋಗುವಲ್ಲಿ ಬಳಸಬಹುದಾದ ಆರಾಧನಾ ಸಾಮಗ್ರಿಗಳು (ಹಣ್ಣುಕಾಯಿ, ಅರಸಿನ ಕುಂಕುಮ ಇತ್ಯಾದಿ) ಮಾತ್ರ ಲಭ್ಯವಿತ್ತು. ಗುಟ್ಖಾ ಚೀಟಿಗಳ ಮಾಲೆಯ ಅಲಂಕಾರ ಮುಂದಿನೆರಡು ದಿನ ನಾವು ಯಾವುದೇ ಮಳಿಗೆಯಲ್ಲಿ ಕಾಣಲಿಲ್ಲ. ಎಲ್ಲಂದರಲ್ಲಿ ಗಳಿಗೆಗೊಮ್ಮೆ ಚಿಮ್ಮುವ ಮುಖಕಾರಂಜಿ’, ದೀಪ ಧೂಪಗಳ ಆರಾಧನಾ ಕಿಚ್ಚು ಧೂಮಗಳನ್ನು ಬಿಟ್ಟು ಇನ್ನೊಂದನ್ನು ಅನುಭವಿಸುವ ಸಂಕಟಕ್ಕೊಳಗಾಗಲಿಲ್ಲ.

ಆಯ್ಕೆ ಏನೂ ಮಾಡದೆ ನಾವು ಅಲ್ಲಿದ್ದದ್ದು ಮಂಗಳವಾರ. ಹಬ್ಬ, ಉತ್ಸವಗಳನ್ನುಳಿದ ವಾರದ ದಿನಗಳಲ್ಲಿ ಮಂಗಳ ಮತ್ತು ಬುಧವಾರ ತಿರುಮಲ ಸ್ವಲ್ಪ ಬಿಡುವಾಗಿರುವ ದಿನಗಳೆಂದು ನಮಗೆ ತಡವಾಗಿ ತಿಳಿಯಿತು ಮತ್ತು ಪರೋಕ್ಷವಾಗಿ ಅನುಕೂಲವೇ ಆಯಿತು. ಸಾಗಣಾ ಕೇಂದ್ರದ ಗೇಟಿನಾಚೆಗೇ ಹೆದ್ದಾರಿಯ ಕೆಳತೂರುವ ಸೇತುವೆಯಲ್ಲೇ ಮೆಟ್ಟಿಲ ಸಾಲು ತೊಡಗುತ್ತದೆವಾಹನ ಸಂಚಾರದ ಗದ್ದಲ ದೂರವಾದಲ್ಲಿ ಭರ್ಜರಿ ವಿರಾಮಗಟ್ಟೆ, ಎಂಟು ಹತ್ತು ಅಂತಸ್ತಿನ ಗೋಪುರ ಯುಕ್ತವಾದ ಸ್ವಾಗತ ತೋರಣ, ಏನೋ ಗುಡಿ, ವಿವಿಧ ವ್ರತಸ್ಥರುಗಳ ಶಾಸ್ತ್ರೋಕ್ತಸೇವಾರಂಭಕ್ಕೆ ಅವಕಾಶ ತೆರೆದುಕೊಳ್ಳುತ್ತದೆ. (ಸ್ವಯಂ ಈಡುಗಾಯಿ ಮಾಡಲು ಪ್ರತ್ಯೇಕ ಕಲ್ಲು, ಹಣತೆ/ ದೀಪಾದಿಗಳ ಸೇವೆಗೆ ಹಲಿಗೆ ಎಲ್ಲಾ ಕೊಟ್ಟಿದ್ದಾರೆ. ಅಂತದ್ದರಲ್ಲಿ ಅವನ್ನು ಮೀರಿ ಭಕ್ತಿ ತೋರಿದವರಕುರುಹುಗಳೂ ಸಾಕಷ್ಟಿವೆ! ಇವಕ್ಕೆ ಟಿಟಿಡಿಯ ಸ್ಪಷ್ಟ ನಿರ್ದೇಶನಗಳೇನೂ ಇದ್ದಂತಿಲ್ಲ. ಆದರೆ ಅವರು ನಿಷೇಧ ಹೇರದೇ ಅವಕಾಶ ಕಲ್ಪಿಸಿದ್ದು, ಸಹಜವಾಗಿ ಅದರ ಉತ್ತರೋತ್ತರ ಗಲೀಜುಗಳನ್ನು ನಿವಾರಿಸಲು ಜನ ನಿಯುಕ್ತಿಗೊಳಿಸಿದ್ದು ನಿಜಕ್ಕೂ ಮೆಚ್ಚಬೇಕು.)

ಸ್ವಾಗತ ಕಟ್ಟೆಯ ಮಂದಿರದ ಹೊರಗೇ ಬಿಸಿಲ ಮರೆ ಕಟ್ಟಿಕೊಂಡು ಹಾದುಹೋಗುವ ಎಲ್ಲರಿಗೂ ದೊನ್ನೆ ಕೊಟ್ಟು, ಭರ್ತಿ ಪುಳಿಯೊಗರೆ ಪ್ರಸಾದ ಕೊಡುತ್ತಿದ್ದರು. ಟಿಟಿಡಿಯದ್ದೇ ವ್ಯವಸ್ಥೆ ಎನ್ನುವುದಕ್ಕೆ ಸಾಕ್ಷಿಯಾಗಿ ಎಲ್ಲವೂ ಚೊಕ್ಕ, ಧಾರಾಳ. ಇನ್ನು ಪಾಕ ವೈವಿಧ್ಯವೂ ಹೊತ್ತಿಗನುಗುಣವಾಗಿ ಬದಲುತ್ತಿರುತ್ತದೇ ಎಂದು ತಿಳಿದೆವು. ನಮ್ಮ ಊಠವಿನ್ನೂ ಗಟ್ಟಿಯಾಗಿಯೇ ಇದ್ದುದರಿಂದ ರುಚಿಗಷ್ಟೇ ಪಡೆದುಕೊಂಡೆವು. ಇಷ್ಟಲ್ಲದೆ ಏರುದಾರಿಗೆ ತೊಂದರೆಯಾಗದಂತೆ ಅಲ್ಲಲ್ಲಿ ಖಾಸಗಿಯವರಿಗೆ ಸೌಮ್ಯ ಪಾನೀಯಗಳೂ ಲಘು ತಿನಿಸುಗಳನ್ನೂ ಮಾರಲು ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಮೆಟ್ಟಿಲ ಸಾಲುದ್ದಕ್ಕೂ ಅಂಚುಗಟ್ಟೆಗಳಲ್ಲಿ ನಿಯತ ಅಂತರಗಳಲ್ಲಿ ಚೊಕ್ಕ ಕಸದ ತೊಟ್ಟಿಗಳನ್ನು ಇಟ್ಟಿದ್ದಾರೆ. ವಿವಿಧ ಭಾಷೆಗಳಲ್ಲಿ ಮನವಿಗಳನ್ನೂ ಹಾಕಿದ್ದಾರೆ. ಅಂತದ್ದರಲ್ಲೂ ಅಮೂಲ್ಯ ಆಹಾರವನ್ನು ಮೆಟ್ಟಿಲುದ್ದಕ್ಕೆ ಚೆಲ್ಲುವ, ಖಾಲಿ ದೊನ್ನೆಯೋ ಇನ್ನೊಂದೇ ಕಸವನ್ನೋ ನಿರ್ಲಕ್ಷ್ಯದಿಂದ ಕಾಡುಪಾಲುಮಾಡುವ ಬುದ್ಧುವಂತರು ಧಾರಾಳ ಇದ್ದಾರೆ. ಆದರೆ ಅಂಥ ಕಸವನ್ನೆಲ್ಲ ಮೌನವಾಗಿ ತೊಟ್ಟಿ ಸೇರಿಸುತ್ತಾ ತೊಟ್ಟಿಗಳು (ನಮ್ಮ ಕಾರ್ಪೊರೇಷನ್ ಲಾರಿಗಳಂತೆ) ತುಳುಕಿ ನಾರದಂತೆಯೂ ಕಾಲಕಾಲಕ್ಕೆ ನೋಡಿಕೊಳ್ಳುವ ನೌಕರ ಸೇನೆಯನ್ನು ಕಂಡು ನಾವು ಬೆರಗಾಗಿಹೋದೆವು. (ಒಂದು ಕಡೆ ಚರುಮುರಿ ಕೊಂಡು ತಿಂದವನೊಬ್ಬ ಖಾಲೀ ಪೊಟ್ಟಣವನ್ನು ಅಂಚುಗಟ್ಟೆಯಾಚೆ ಬಿಸಾಕಿದ್ದು ನೋಡಿ ದೇವಕಿಗೆ ರೇಗಿ ಹೋಯ್ತು. ಅಲ್ಲೇ ದೊಡ್ಡದಾಗಿ, ಖಾಲಿಯಾಗೂ ಕುಳಿತ, ಮೂರು ಭಾಷೆಗಳಲ್ಲಿ ಕಸ ನನ್ನೊಳಗೆ ಹಾಕಿಎನ್ನುವ ಬುಟ್ಟಿಗೆ ಹಾಕಬಹುದಿತ್ತುತುಸು ಜೋರಾಗಿಯೇ ಹೇಳಿದಳು. ಮುಟ್ಟಾಳ ಮಂಗನ ಮುಸುಡು ಮಾಡಿ, ಹೆಕ್ಕಿ ಹಾಕುವ ಗೋಜಿಗೆ ಹೋಗದೇ ಈಗ ಬಿಸಾಡಿದ್ದಾಯ್ತಲ್ಲಾಭಾವ ಪ್ರಕಟಿಸಿದ. ಇವಳ ಕೋಪ ತಣಿಯಲಿಲ್ಲ. ಪಕ್ಕದಲ್ಲೇ ಬುಟ್ಟಿಯಿಟ್ಟುಕೊಂಡು ಚರಮುರಿ ಮಾರುವವನಿಗೆ ಬಿಸಿ ತಾಕಿಸಿದಳು, ‘ಗಿರಾಕಿಗಳಿಗೆ ನೀವಾದರೂ ಹೇಳಬಹುದಲ್ಲಾ.’ ಅವನದೋ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞಭಾವ!)

ಅಂಚಿನಲ್ಲಿ ನಿಯತ ಅಂತರಗಳಲ್ಲಿ ಕುಡಿನೀರ ನಲ್ಲಿಗಟ್ಟೆಗಳುಮೂತ್ರದೊಡ್ಡಿಗಳು ಶುಚಿಯಾಗಿಯೇ ಕಾರ್ಯಾಚರಣೆಯಲ್ಲಿದ್ದುವು. ಇಲ್ಲ, ನಿಮ್ಮ ಕಿಸೆ ತಡಕಿಕೊಳ್ಳಬೇಡಿ. ಮೂತ್ರ, ಶೌಚಗಳಿಗಿಲ್ಲಿ ಇಲ್ಲಿ ಸುಂಕ ಇಲ್ಲ. ಇವೆಲ್ಲವನ್ನು ವರ್ಷದ ಯಾವುದೇ ದಿನದಲ್ಲಿ ಕನಿಷ್ಠ ಕೆಲವು ಸಾವಿರಗಳಲ್ಲಿ ಹಾದು ಹೋಗುವ (ಒಂದು ಲೆಕ್ಕದಂತೆ ತಿರುಮಲದ ಸರಾಸರಿ ವಾರ್ಷಿಕ ಭಕ್ತ ಭೇಟಿ ಎರಡೂವರೆ ಕೋಟಿ. ಅಂದರೆ ದೈನಿಕ ಸರಾಸರಿಯಲ್ಲಿ ಸುಮಾರು ಎಪ್ಪತ್ತು ಸಾವಿರ ಮಂದಿ!!), ಅಪ್ಪಟ ಭಾರತೀಯ ಸಾರ್ವಜನಿಕರ ಬಳಕೆಯನಂತರವೂ ದಕ್ಷವಾಗಿ ಉಳಿಸಿಕೊಂಡಿರುವುದು ನಿಜಕ್ಕೂ ದೊಡ್ಡ ಸಾಧನೆ.

ಮೆಟ್ಟಿಲ ಸಾಲುದ್ದಕ್ಕೂ ಅಲ್ಲಲ್ಲಿ ತೆರೆದ ಶಿಲಾಮಂಟಪದಲ್ಲಿ ಸಂದ ಮಹಾತ್ಮರ ಪುತ್ಥಳಿಗಳನ್ನು ನಿಲ್ಲಿಸಿದ್ದಾರೆ. (ದಶಾವತಾರ ಮೂರ್ತಿಗಳು, ಆಳ್ವಾರುಗಳ ಬಿಂಬಗಳೊಡನೆ ನಮ್ಮ ಪುರಂದಾರಾದಿ ಕೆಲವು ದಾಸರುಗಳೂ ಇಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ.) ಹಾಗೇ ಜನಪದವಾಗಿ ಆರಾಧನೆಗೊಳಪಟ್ಟಿರಬಹುದಾದ ಕಲ್ಲುರೂಕ್ಷ ಮೂರ್ತಿಗಳಿಗೂ ವ್ಯವಸ್ಥಿತ ಆಯ, ಬಂಧ ಕೊಟ್ಟು ಮೆರೆಸಿದ್ದಾರೆ. ಮುಂದೆ ಮೇಲಿನ ವಲಯಕ್ಕೆ ಹೋದ ಮೇಲಂತೂ ಮೆಟ್ಟಿಲ ಸಾಲಿನ ಒತ್ತಿನ ಗೋಡೆಯುದ್ದಕ್ಕೆ ದಾನ ಕೊಟ್ಟ ಸೇವಾರ್ಥಿಗಳ ಖ್ಯಾತಿಕೊಂಡಾಡುವ ಶಿಲಾಫಲಕಗಳನ್ನೂ ಪ್ರದರ್ಶಿಸಿದ್ದಾರೆ. ಅಲಿಪಿರಿ ಮೆಟ್ಟಿಲಸಾಲಿನಲ್ಲಿ ಘನವಾದ ಏರಿಕೆಯ ಕೊನೆಗಾಣುವುದು ಗಾಳಿಗೋಪುರ ಎಂಬ ತಾಣದಲ್ಲಿ. ಅಲ್ಲಿ ಮೆಟ್ಟಿಲ ಸಾಲು ವಾಹನಗಳ ಇಳಿದಾರಿಯನ್ನು ಸಂಧಿಸುತ್ತದೆ. ಸಹಜವಾಗಿ ಅಲ್ಲಿ ಆಂಬುಲೆನ್ಸ್ ಸಹಿತ ವೈದ್ಯಕೀಯ ಸವಲತ್ತುಗಲೂ ಲಭ್ಯ. ಮತ್ತಿದನ್ನು ಮೆಟ್ಟಿಲ ಸಾಲಿನಲ್ಲಿ ಅಲ್ಲಲ್ಲಿ ಜಾಹೀರುಪಡಿಸಿ, ದುರ್ಬಲ ಹೃದಯಿಗಳಿಗೆ ಧೈರ್ಯವನ್ನೂ ತುಂಬಿದ್ದಾರೆ.


ಅಲಿಪಿರಿ ಜಾಡಿನ ಹನ್ನೊಂದು ಕಿಮೀ ಅಂತರದಲ್ಲಿ ಲೆಕ್ಕಕ್ಕೆ ೩೬೫೦ ಮೆಟ್ಟಿಲೇನೋ ಇದೆಯಂತೆ. ಆದರೆ ಎಲ್ಲ ಏರುಮುಖಿಯೇ ಅಲ್ಲ ಮತ್ತು ಕಡಿದಾಗಿಯೂ ಇಲ್ಲ. ಸ್ಥಳಪುರಾಣ ಕಥಿಸುವಂತೆ ವೇಂಕಟರಮಣ ಸಪ್ತಗಿರಿಯೊಡೆಯ. ವಿವರಗಳಲ್ಲಿ ತೊಡಗಿಕೊಂಡರೆ ಜಾಡಿನುದ್ದಕ್ಕೆ ಶೇಷಾದ್ರಿ, ವೇದಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಎಂದು ಗುರುತಿಸುತ್ತ ಕೊನೆಯಲ್ಲಿ ಒಡೆಯನ ವಾಸಸ್ಥಾನವನ್ನು ವೇಂಕಟಾದ್ರಿಗೆ ಮೀಸಲಿಡುತ್ತಾರೆ. ವಾಸ್ತವದಲ್ಲಿ ಗಾಳಿಗೋಪುರದ ಹಂತಕ್ಕೆ ಅಂದರೆ ಶೇಷಾದ್ರಿ ಮತ್ತು ಗರುಡಾದ್ರಿ ನೆತ್ತಿಗೆ (ಸುಮಾರು ೧೮೫೦ನೇ ಮೆಟ್ಟಿಲ ಬಳಿ) ಶಿಖರವಲಯ ತಲಪುತ್ತೇವೆ. ತಿರುಮಲ ಶ್ರೇಣಿ ಅತ್ಯುನ್ನತಿಯಲ್ಲಿ ಸಮುದ್ರ ಮಟ್ಟದಿಂದ ೩೨೦೦ ಅಡಿ (೯೮೦ ಮೀ) ಇದೆ. ಗಾಳಿಗೋಪುರದಿಂದ ಮುಂದೆ ಜಾಡು ಶ್ರೇಣಿಯಗುಂಟ ಸಾಗುತ್ತದೆ. ಇಲ್ಲಿ ನಾವು ಯಾವೆಲ್ಲ (ಏಳರಲ್ಲಿ ನಾಲ್ಕು) ಗಿರಿಗಳನ್ನು ಹಾದುಹೋಗುತ್ತೇವೆ ಎಂಬ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಇಲ್ಲಿ ಇಳಿಜಾಡು, ಸುಮಾರು ಎರಡು ಕಿಮೀ ವಾಹನ ಮಾರ್ಗ (ತಿರುಮಲ ಬಿಟ್ಟಿಳಿಯುವ ವಾಹನ ಮಾರ್ಗದ ಪುಟ್ಟ ಪಥ),  ಮತ್ತೆ ಕಡಿದಾದ ಕೆಲವು ಮೆಟ್ಟಿಲ ಸಾಲೂ ಇದ್ದು, ಕೊನೆಯಲ್ಲಿ ವಿಹಾರ ಪಥದಷ್ಟೇ (ಜಾಡಿಗೆ ತುಸುವೇ ಏರುಕೋನ ಕೊಟ್ಟರೆ ಸಾಕೆನ್ನುವಲ್ಲಿ ಮಾಡಿದ ಎಷ್ಟೋ ಮೆಟ್ಟಿಲುಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ!) ಸುಲಭವಾಗಿ ತಿರುಮಲವನ್ನು ಸೇರುತ್ತೇವೆ. ಕೊನೆಯಲ್ಲಿ ವೇಂಕಟಾದ್ರಿ - ಏಳರಲ್ಲಿ ಅತ್ಯಂತ ತಗ್ಗಿನ ಶಿಖರ, ತಿರುಮಲಾಧೀಶನ ಬೀಡು.

ಮೆಟ್ಟಿಲ ಕಲ್ಲ ಚಪ್ಪಡಿಗಳು ನಡೆ ಎಡವದಂತೆ ಸಪಾಟಾಗಿಯೂ ಜಾರದಂತೆ ಒರಟಾಗಿಯೂ ಇವೆ. ಕನಿಷ್ಠ ೧೦-೧೫ ಅಡಿ ಅಗಲಕ್ಕೆ ಸಂದು, ಬಿರುಕಿಲ್ಲದಂತೆ ಕಟ್ಟಿದ್ದಾರೆ. ಬೆಟ್ಟದ ಏರನ್ನು ಒಪ್ಪಿಕೊಂಡೇ ಮೆಟ್ಟಿಲುಗಳು ಹಬ್ಬಿದ್ದರೂ ಬಹುತೇಕ ವಿಸ್ತಾರ ಹೆಜ್ಜೆ-ನೆಲವನ್ನೂ ಪುಟ್ಟ ಏರನ್ನೂ ಕಲ್ಪಿಸಿದ್ದಾರೆ. ಅನಿವಾರ್ಯವಾಗಿ ಕಡಿದಾದಲ್ಲಿ ಕೈಯ್ಯ ಆಧಾರಕ್ಕೂ ಏರಿಳಿಯುವವರ ನಡುವೆ ಗೊಂದಲವಾಗದಂತೆಯೂ ನಡುವೆ ಗಟ್ಟಿ ಕೊಳವೆ ಬೇಲಿಯನ್ನೂ ಕೊಟ್ಟಿದ್ದಾರೆ. ಎರಡು ಅಂಚುಗಳಲ್ಲಿ ಮೋಟುಗೋಡೆ ಕಟ್ಟಿ (ಮಳೆಗಾಲದಲ್ಲಿ ಜಾಡು ತಪ್ಪುವ ಕಾಡ ತೊರೆಗೂ ಹಾವು ಮೊದಲಾದ ಹರಿವ ಜಂತುಗಳ ನಿವಾರಣೆಗೂ ಒದಗುವಂತೆ), ನಡಿಗೆ ಮೇರೆಮೀರದಂತೆ ಭದ್ರತೆಯನ್ನೂ ಬಳಲಿದವರಿಗೆ ಅಮಿತ ಕೂರುಗಟ್ಟೆಗಳನ್ನೂ ಒದಗಿಸಿದ್ದಾರೆ. ಅಂಚುಗಟ್ಟೆಯುದ್ದಕ್ಕು ನಿಯತ ಅಂತರಗಳಲ್ಲಿ ಕುಂದ ನಿಲ್ಲಿಸಿ, ಮಳೆಬಿಸಿಲುಗಳ ಬಾಧೆ ತಟ್ಟದಂತೆ ಮಾಡೂ ಕೊಟ್ಟಿದ್ದಾರೆ. ಕತ್ತಲ ಹೊತ್ತುಗಳಲ್ಲಿ ತೊಂದರೆಯಾಗದಂತೆ ದೀಪ, ತಿರುಮಲದ ಮುಖ್ಯ ದೇವಳದ ಸಂಪರ್ಕ ಕಛೇರಿಯಿಂದಲೇ ಸಮರ್ಪಕ ಧ್ವನಿ ವ್ಯವಸ್ಥೆಯೂ ಇದೆ. ಅಲಿಪಿರಿಯಲ್ಲಿ ಮೆಟ್ಟಿಲ ಸಾಲು ತೊಡಗಿದಲ್ಲಿಂದ ತಿರುಮಲದ ಯಾವ ಮೂಲೆಗೆ ಹೋದರೂ ಮೈಕ್ ಸರಣಿ ನಿರಂತರ ಭಕ್ತಿಗಾಯನವನ್ನೂ ಸಾರ್ವಜನಿಕ ಪ್ರಕಟಣೆಗಳನ್ನೂ ಮೆಲುಧ್ವನಿಯಲ್ಲಿ ಆದರೆ ಸ್ಪಷ್ಟವಾಗಿ ಕೊಡುತ್ತಿರುತ್ತದೆ. ಭೀಮಸೇನೀ ಸಂತವಾಣಿಯ ನಡುವೆ, ಯಾವುದೋ ಧ್ವನಿ ತೊದಲುಗನ್ನಡದಲ್ಲಿ ಎರಡೆರಡು ಬಾರಿ ಮಂಡ್ಯದ ಈರೇಗೌಡ್ರೂ ಎಲ್ಲಿದ್ರೂ ದೇವಳದ ಸಂಪರ್ಕ ಕಛೇರಿಗೆ ಬರಬೇಕು. ಮನೆಯವರಾದ ಯಂಕ, ಅನುಮ ಕಾಯ್ತಿದ್ದಾರೆ ಕೇಳಿದಾಗ ಒಮ್ಮೆಲೆ ನಾನಂತೂ ಬಾಲ್ಯದ ಫ್ಯಾಂಟಮ್ ಓದಿನ ಸುಷುಪ್ತಿಗೆ ಜಾರಿಹೋದೆ.ಡೀಪ್ ವುಡ್ಸ್ ಆಫ್ ಡೆಂಕಲಿಯೊಳಗೆ ಮಾತಾಡುವ ನಗಾರಿಗಳು ಸಂದೇಶ ಕಳಿಸಿದಂತೇ ತಿರುಮಲದ ಕಣಿವೆಗಳು ಅನುರಣಿಸಿದುವು! ದೇವಸಾನ್ನಿಧ್ಯಕ್ಕೆ ಇನ್ನೂ ಸಾವಿರ ಮೆಟ್ಟಿಲು ಕೆಳಗೆ, ಎಂಟ್ಹತ್ತು ಕಿಮೀ ಅಂತರದಲ್ಲೆಲ್ಲೋ ಕವುಚಿ ಬೀಳುವಂತಿರುವ ಬೆಟ್ಟ, ಕವಿದು ನುಂಗುವಂತಿರುವ ಕಾಡಿನ ನಡುವೆ ಉಸಿರು ಸಿಕ್ಕಿ, ದುರ್ಬಲ ಧ್ವನಿಯಲ್ಲಿ ಗೋವಿಂದಾಹಾಕುವ ಭಕ್ತನನ್ನು ನೆನೆಸಿಕೊಳ್ಳಿ. ಆತನಿಗೆ ಒಮ್ಮೆಲೆ ಮೈಕಿನಲ್ಲಿ ನಮೋ ವೇಂಕಟೇಶಾಕೇಳಿದರೆ ಮಹಾನಂದವಾಯ್ತೂ ಮಹಾದೇವದೇವಎಂದು ಧ್ವನಿ ಸೇರಿಸಿ ಅಪರಿಮಿತ ಪ್ರೇರಣೆ ಪಡೆಯುವುದರಲ್ಲಿ ಸಂಶಯವಿಲ್ಲ.


(ಮುಂದುವರಿಯಲಿದೆ)

11 comments:

 1. ಭಕ್ತಿ ಉದ್ದಿಮೆಯನ್ನು ಶೋಧಿಸುವ ಯಾತ್ರೆಯ ಈ ಕಥನ - ಅಹಾ ಅದೆಂಥ ಸೊಬಗು. ತಿಮ್ಮಪ್ಪ ನಿನ್ನ ಬರವಣಿಗೆಯ ಸೊಗಸಿಗೆ ಖಾತ್ರಿ ಒಲಿಯುತ್ತಾನೆ. ಈ ಕಥನವನ್ನು ನೀವು ಓದಿ - ಇನ್ನೂ ಕನಿಷ್ಠ ಇಪ್ಪತ್ತೈದು ಮಂದಿ ಓದುವಂತೆ ಮಾಡಿದರೆ ನಿಮಗೆ ಉತ್ತರೋತ್ತರ ಸೌಭಾಗ್ಯ ಲಭ್ಯವಾಗುತ್ತದೆಂದು ಕಾರ್ಡ್ - ಅಲ್ಲಲ್ಲ ಮಿಂಚಂಚೆ ಕಳುಹಿಸಿದರೆ ಹೇಗೆ? ಮನೆಯಲ್ಲಿ ತಿರುಪತಿಗೆ ಹೋಗಬೇಕೆನ್ನುವ ಮನೆ ಮಂದಿಯ ಬಲು ಹಿಂದಿನ ಒತ್ತಾಯಕ್ಕೆ ಈ ಬರಹ ಇನ್ನಷ್ಟು ಪುಷ್ಟಿ ಕೊಡುವಂತಿದೆ. ಭಕ್ತಿ ಉದ್ದಿಮೆ ಕೂಡ ತುಂಬ ಪ್ರೊಫೆಶನಲ್ ಆಗುತ್ತಿದೆ - ಅನ್ನುವುದಕ್ಕೆ ಪುತ್ತೂರು, ವಿಟ್ಲ ದೇಗುಲಗಳ ಬ್ರಹ್ಮಕಲಶ ಸಮಾರಂಭಗಳು ಸಾಕ್ಷಿ. ಮುಂದಿನ ಕಂತು ಬೇಗ ಬರಲಿ - ಕಾತರದಿಂದ ಕಾಯುತ್ತಿದ್ದೇನೆ.

  ReplyDelete
 2. Namma Thrupathi yatre endiddare olleyaditthu.neevu bhaktaro dharmika yatrigalo alla emudakke mahatwa bekilla . Thirupathige hodudakke guilt yake?

  ReplyDelete
 3. ನಾನು ಒಂದೇ ದಿನ ಹತ್ತಿ ಇಳಿದದ್ದೂ ಉಂಟು. ಬೆಟ್ಟದ ಮೇಲೆ ಇತರ ವೀಕ್ಷಣಯೋಗ್ಯ ಸ್ಥಳಗಳೂ ಇವೆ. ಬೇಸಿಗೆಯಲ್ಲೂ ಬೆಟ್ಟದ ಮೇಲೆ ತಂಪಾಗಿರುವುದರಿಂದ ಕುಟೀರದಲ್ಲಿ ತಂಗುವುದೂ ಒಂದು ಅನುಭವ. ನಾನು 3-4 ಸಲ ಹೋಗಿದ್ದೇನೆ. (ದೇವಾಲಯದೊಳಕ್ಕೆ 2 ಸಲ, ವಿದ್ಯಾರ್ಥಿಗಳೊಡನೆ ಒಂದು ಸಲ, ಅಲ್ಲಿನ ವಿಶ್ವವಿದ್ಯಾನಿಲಯದ ವಿಶೇಷ ಅತಿಥಿಯಾಗಿ ಒಂದು ಸಲ) ದೇವಾಲಯದಲ್ಲಿ ಖುಷಿಯಾದದ್ದು ಲಾಡು.
  ಪಾಪಿ ಪ್ರಜ್ಞೆ ಕಾಡುವುದು ಹೆಚ್ಚಾದಂತೆಲ್ಲ ದೇವರಿಗೆ ಲಂಚ ಕೊಡುವ ಪ್ರವೃತ್ತಿಯೂ ಹೆಚ್ಚಾಗಲೇ ಬೇಕಲ್ಲವೇ?

  ReplyDelete
 4. ರಾ. ಗಣೇಶ24 May, 2013 11:18

  ತುಂಬ ಸೊಗಸಾದ ಬರೆಹ. ಮುಂದಿನ ಕಂತುಗಳಿಗೆ ತುದಿಗಾಲಿನಲ್ಲಿ ನಿಂತಿದ್ದೇನೆ. ನಿನ್ನೆಯಿಂದ ನಿಮ್ಮ ತಾಯಿಯವರು ಹೇಳಿದ ಶ್ರೀ ಪಿ ವಿ ರ್ ಕೆ ಪ್ರಸಾದ್ ಅವರ "ಶ್ರೀನಿವಾಸ ದೈವಲೀಲೆ" ಎಂಬ ಪುಸ್ತಕವನ್ನು ಓದತೊಡಗಿದ್ದೇನೆ. ಅಲ್ಲಿ ಅವರು ತಿರುಮಲೆ-ತಿರುಪತಿಗಳ ಒಪ್ಪಕ್ಕಾಗಿ ರೂಪಿಸಿದ್ದ ಮಾಷ್ಟರ್ ಪ್ಲಾನ್ ಎಂಬ ಅಧ್ಯಾಯವನ್ನು ಓದುತ್ತಿದ್ದಾಗಲೇ ನಿಮ್ಮ ಈ ಬರೆಹನ್ನೂ ಗಮನಿಸಿ ಓದಿದೆ. ಇದೂ ಒಂದು ಪವಾಡವೆಂದು ದಯಯಾಡಿ ಪ್ರಚುರಿಸಿರಿ:-) ನಾನು ತಿರುಮಲೆಗೆ ಯಾತ್ರೆಮಾಡಿ ಹದಿನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲವಾಯಿತು. ನಿಮ್ಮ ಈ ಬರೆಹದಿಂದ ಮತ್ತೆ ಯಾತ್ರೆಗೆ ತೆರಳುವ ಉತ್ಸಾಹ ಮೂಡಿದೆ.
  ಧನ್ಯವಾದಗಳು.

  ReplyDelete
 5. ನಿಮ್ಮ ಲೇಖನ ಓದಿದಾಗ ನಿಮ್ಮೊಡನೆ ತಿರುಪತಿ ದರ್ಶನಕ್ಕೆ ಹೋದ ಅನುಭವವಾಯಿತು. ವಿವರಣೆ ಮತ್ತು ನಿಮ್ಮ ಅನುಭವ ಚೆನ್ನಾಗಿ ನೀಡಿದ್ದೀರಿ. ಧನ್ಯವಾದಗಳು.

  ReplyDelete
 6. ಅಶೋಕ ವರ್ಧನರೂ ....ತಿರುಪತಿಯೂ ..ನನಗ೦ತೋ ಆಶ್ಚರ್ಯ ..! ನಿಮ್ಮ ವಿವರಣೆ, ಬರವಣಿಗೆಗೆ ಸೋತೆ. ತಿಮ್ಮಪ್ಪನೇನು , ಅವರಪ್ಪನೂ ನಿಮಗೆ ಒಲಿಯುವುದರಲ್ಲಿ ನನಗೆ ಅನುಮಾನವಿಲ್ಲ ..!ಓದಿ ಸಂತೋಷ ಪಟ್ಟೆ .ಮುಂದಿನ ಕ೦ತಿಗಾಗಿ ಕಾಯುತ್ತಿದ್ದೇನೆ... ಪಿ ಕೆ ಪೈ

  ReplyDelete
 7. 'ಬೈಕಿನಲ್ಲಿ ಹೊರಟಿದ್ದವರನ್ನು ತಿಮ್ಮಪ್ಪ ದಿಕ್ಕಿತಪ್ಪುವಂತೆ ಮಾಡಿ ಸುರಕ್ಷಿತವಾಗಿ ಬಸ್ಸಿನಲ್ಲಿ ಕರೆಸಿಕೊಂಡಿದ್ದಾನೆ'. ಪ್ರಾಕೃತಿಕ ಸೊಬಗನ್ನು ದೇವರ ನೆಪದಲ್ಲಾದರೂ ಬಂದು ನೋಡಲೆಂದು ಆಶಿಸಿದವರು ದಿಕ್ಕೆಡುವಂತೆ ಭಕ್ತಿ ಉದ್ಯಮವಾಗಿ ಪ್ರಾಕೃತಿಕ ಸೌಂದರ್ಯ, ಪ್ರಶಾಂತತೆಗಳು ಮರೀಚಿಕೆಯಾಗಿವೆ. ನಿಮ್ಮ ಲೇಖನವನ್ನೂ ತಿಮ್ಮಪ್ಪನ ಲೀಲೆ ಎಂದು ಭಕ್ತಿ ಉದ್ಯಮ ಪ್ರಚಾರಪಡಿಸಿದರೆ ಆಶ್ಚರ್ಯವಿಲ್ಲ.

  ReplyDelete
 8. Antu nanna kayuvike saphalavayitu.Nimma Tirumala yatreya katanavannu nirikshisuttidde. Mundina kantugaligaagi kayuttiddene.

  ReplyDelete
 9. ninna lekana odi abipraya bareya horate. taleharate nuurentu tapatraya. ella tappitu. idu talupidare nanna punya

  ReplyDelete
 10. Bahala uttamavaagide. Thirupathige hogi bandaddu bhaktiyiMdalo, kutoohaladindalo adu mukhya alla.hogidaaga neevu ellavannoo gamanisiddu mukhya.

  ReplyDelete