14 May 2013

ಮೂರು ತಿಂಗಳು ಬಾಳುವ ಹೂವಿನ ಗುಡ್ಡ - ಡಾ| ಕೆ. ಮಹಾಲಿಂಗ ಭಟ್


[ಡಾ| ಕೇಜಿ ಭಟ್ಟರನ್ನು ನಾನು ಮೊದಲು ಪುಸ್ತಕ ವ್ಯಾಪಾರಿಯಾಗಿ ಸಂಪರ್ಕಿಸಿದ್ದೆ. ಮುಂದುವರಿದು ನನ್ನದೇ ಹುಚ್ಚಿನ ಬಿಸಿಲೆ ವಲಯಕ್ಕೆ ಚಾರಣಕ್ಕೆ ಕರೆದಾಗ ಹಿರಿತನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಸರರ ಹಮ್ಮುಗಳೊಂದೂ ಇಲ್ಲದೆ ವಿಜ್ಞಾನಿಯ ಕುತೂಹಲ, ತನಗೆ ತಿಳಿದದ್ದನ್ನು ಇತರರಲ್ಲಿ ಯಾವುದೇ ಕೃಪಣತೆಯಿಲ್ಲದೇ ಹಂಚಿಕೊಳ್ಳುವ ಪ್ರೀತಿ, ಇನ್ನೂ ಮುಖ್ಯವಾಗಿ ತಾನು ಇತರರಿಗೆ ಹೊರೆಯಾಗಬಾರದೆಂಬ ವಿನಯ ಇಟ್ಟುಕೊಂಡು ಬಂದರು. ಆ ಎಲ್ಲದರ ಮತ್ತೂ ಹೆಚ್ಚಿನದರ ಪರಿಚಯಕ್ಕೆ ನನ್ನೊಂದು ಮುಖ್ಯ ಜಾಲಬರಹವನ್ನು ಇಲ್ಲಿ ಚಿಟಿಕೆ ಹೊಡೆದು  ಓದಬಹುದು. ಅಂಥಾ ಕಾಕುಂಜೆ ಗೋಪಾಲಕೃಷ್ಣ ಭಟ್ಟರ ಒಂದು ವೈಶಿಷ್ಟ್ಯವನ್ನು ಮಾತ್ರ ಎತ್ತಿಕೊಂಡು, ಗೆಳೆಯ ಡಾ| ಮಹಾಲಿಂಗ ಭಟ್ಟರು ತಮ್ಮ ವಿಜಯವಾಣಿಯ ಅಂಕಣದಲ್ಲಿ ಬರೆದುಕೊಂಡರು. ಅದರ ಹೆಚ್ಚಿನ ಪ್ರಸರಣಕ್ಕಾಗಿ ಈಗ ನನ್ನ ಜಾಲತಾಣಕ್ಕೂ ಅವಕಾಶಮಾಡಿಕೊಟ್ಟರು. - ಅಶೋಕವರ್ಧನ]

ಮೂರು ತಿಂಗಳು ಬಾಳುವ ಹೂವಿನ ಗುಡ್ಡ
-ಡಾ| ಕೆ. ಮಹಾಲಿಂಗ ಭಟ್

ಕರ್ನಾಟಕದ ಸಸ್ಯತಜ್ಞರಿಗೆ ಉಡುಪಿಯ ಕೆ.ಜಿ.ಭಟ್ ಎಂದರೆ ಗೌರವ, ಅಚ್ಚರಿ ಎಲ್ಲವೂ. ಅಂಥದ್ದೇನು ಅವರ ಮಹತ್ವ? ಎಷ್ಟೋ ಜನ ದಿನನಿತ್ಯ ಕಾಲುದಾರಿಯ ತುಳಿದು ನಡೆಯುತ್ತಾರೆ, ಅಲ್ಲಿರುವ ಚಿಕಿಣಿ ಹುಲ್ಲುಗಳು ಪಾದದ ಭಾರಕ್ಕೆ ಪೂರ್ತಿ ಮುದುಡುತ್ತವೆ. ಹಾಗಿದ್ದರೂ ಬಿಸಿಲು ತಿನ್ನುವುದಕ್ಕೆ, ಗಾಳಿ ಕುಡಿಯುವುದಕ್ಕೆ, ಬದುಕನ್ನು ಪಡೆಯುವುದಕ್ಕೆ ಅವು ಮತ್ತೆ ಸೆಡೆದು ನಿಲ್ಲುತ್ತವೆ. ಕೆ.ಜಿ.ಭಟ್ಟರೂ ಎಲ್ಲರಂತೆ ಈ ಹುಲ್ಲದಾರಿಗಳಲ್ಲಿ ನಡೆದವರೇ, ಆದರೆ ಉಳಿದವರು ಮೆಟ್ಟಿ ಮುಂದೆಸಾಗಿದ ಕಾಲಡಿಯ ಸಸಿಗಳಲ್ಲಿ ಇದುವರೆಗೆ ವಿಜ್ಞಾನ ಜಗತ್ತು ಗುರುತಿಸದ ಸಸ್ಯಗಳು ಅವರಿಗೆ ಹಲವು ಸಲ ಸಿಕ್ಕಿವೆ. ವಾಸ್ತವದಲ್ಲಿ ಅವರು ಪದವಿಕಾಲೇಜಿನ ಮೇಷ್ಟ್ರು, ಸುತ್ತಲಿನ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು ಮಾತ್ರ “ಕೆ.ಜಿ. ಸರ್ ಒಂದು ಸಸ್ಯವನ್ನು ವಿವರಿಸಿದರೆ ಅದಕ್ಕೆ ಬೇರೆ ಅಫೀಲು ಇಲ್ಲ” ಎಂದು ಕೃತಜ್ಞತೆಯಲ್ಲಿ ನೆನೆಯುತ್ತಾರೆ. ‘ಟೇಕ್ಸೋನಮಿ’ ಎನ್ನುವುದು ಬೋಟನಿಯಲ್ಲಿ ಸಸ್ಯಗಳ ವರ್ಗೀಕರಣಶಾಸ್ತ್ರ. ಇದು ಜಗತ್ತಿನ ಎಲ್ಲ ಸಸ್ಯಗಳನ್ನು ಗುರುತಿಸಿ ಹೆಸರಿಸಿ ಅವನ್ನು ಹಲವು ಗುಂಪುಗಳಲ್ಲಿ ಬೇರ್ಪಡಿಸುವ ಸಸ್ಯವಿಜ್ಞಾನದ ಕ್ರಮ. ಕೆ.ಜಿ.ಭಟ್ಟರಿಗೆ ಯಾವುದೇ ಹಸಿರು ಕಣ್ಣಿಗೆ ಕಂಡೊಡನೆ ಆ ಮೂಕ, ನಿಶ್ಚಲ ಜೀವದ ದೇಹರಚನೆಯ ಬಗ್ಗೆ ಚಿಂತನೆ ಸುರಾಗುತ್ತದೆ, ವಿಜ್ಞಾನದ ವಿಭಾಗಕ್ರಮದಲ್ಲಿ ಈ ಹಸಿರುವ್ಯಕ್ತಿತ್ವವು ಎಲ್ಲಿ ಕೂತಿದೆ ಇಲ್ಲಾ ಅದಕ್ಕೆ ಎಲ್ಲಿ ಹೊಸಜಾಗ ನೀಡಬೇಕಾಗಿದೆ? ಎಂಬುದು ಅವರಿಗೆ ಜ್ಞಾನಧ್ಯಾನವಾಗುತ್ತದೆ.


ಮಂಗಳೂರು ವಿಶ್ವವಿದ್ಯಾಲಯದ ಸಸ್ಯತಜ್ಞರೊಬ್ಬರಿಗೆ ರಶ್ಮಿ ಎಂಬ ವಿದ್ಯಾರ್ಥಿನಿ ಕಾಸರಗೋಡು ಕಡೆಯ ತನ್ನೂರಿಂದ ಸಸ್ಯವೊಂದನ್ನು ಎರಡು ಬೆರಳುಗಳಲ್ಲಿ ಮೆತ್ತಗೆ ಹಿಡಿದು ತಂದುಕೊಟ್ಟಳು. ಹತ್ತು ಸೆಂಟಿಮೀಟರು ಎತ್ತರಕ್ಕೂ ಬೆಳೆಯಲಾಗದೆ ಹೆಣಗುತ್ತಿರುವ ಈ ಹಸಿರನ್ನು ಒಂದು ಪುಟ್ಟಹುಲ್ಲೆಂದು ಯಾರಾದರೂ ತಕ್ಷಣಕ್ಕೆ ಕರೆದಾರು. ಹುಲ್ಲುಗಳಲ್ಲಿ ತರತರವಿರುವುದು ನಮಗೆ ಗೊತ್ತು, ಅವುಗಳಿಗೆ ಪ್ರತಿಯೊಂದಕ್ಕೂ ಬೇರೆಬೇರೆ ಹೆಸರಿಡಲು ಅವೇನು ಅಂಥಾ ದೊಡ್ಡ ಮರಗಳೇ? ಎಲ್ಲೋ ಹುಟ್ಟಿ ಅಲ್ಪದರಲ್ಲಿ ಸಾಯುವ ಅವನ್ನೆಲ್ಲ ಒಟ್ಟಾಗಿಸಿ ಮುಷ್ಟಿಯಲ್ಲಿ ಹಿಡಿದು ಕತ್ತಿಯಲ್ಲಿ ತರಿದು ದನದ ಬಾಯಿಗೆ ನಾವು ಆಗಾಗ ಕೊಡುವುದಿದೆ! ಆದರೆ ಒಬ್ಬ ಸಸ್ಯಶೋಧಕನ ಹೃದಯಕ್ಕೆ ಬೇರೊಂದು ಸತ್ಯ ಗೊತ್ತಿರುತ್ತದೆ - ಪ್ರತಿಯೊಂದು ಹುಲ್ಲರಾಶಿಯೂ ಒಂದು ಹಸಿರುಸಮುದ್ರ. ಅಲ್ಲಿ ಹೂವು ಬಿಡುವವು, ಬೀಜವಿಲ್ಲದವು, ಜೋಡುಬೀಜದವು ಹಾಗೆಯೇ ಏಕದಳದವು, ಹಸಿರು ಇಲ್ಲದ್ದರಿಂದ ಸ್ವಂತಕ್ಕೆ ಆಹಾರ ಮಾಡಲಾಗದವು, ಚೂಪೆಲೆಯವು, ದುಂಡೆಲೆಯವು ಹೀಗೆಲ್ಲ ಹಲವು ಥರಥರ. ಎತ್ತರದಲ್ಲಿ ಅರಳಿದ ಮಹಾಮರದ ಹೂವಿನೊಳಗೆ ಪೂರ್ತಿನುಗ್ಗಿ ಜೇನುಕುಡಿಯುವ ದೊಡ್ಡಹಕ್ಕಿಗೆ ಇರುವಂತೆಯೇ ಮಣ್ಣಿಗೆ ಅಂಟಿದ ಸೂಕ್ಷ್ಮಹುಲ್ಲಿನ ಹೂವಿಗೆ ಆಗಮಿಸುವ ಕಿರುಕೀಟಕ್ಕೂ ಈ ಪ್ರಪಂಚದಲ್ಲಿ ಬದುಕುವ ಛಲ, ಕ್ರಿಯಾಶೀಲತೆಗೆ ಬೇಕಾದ ಅವಕಾಶಗಳು ದಟ್ಟವಾಗಿವೆ.

ಈ ಭೂಮಿಯ ಸಹಸ್ರಗಟ್ಟಲೆ ಸಸ್ಯರಾಶಿಗಳಲ್ಲಿ ‘ಇರಿಯೊಕೊಲೇಸಿ’ ಎಂಬುದು ಒಂದು ಬಗೆಯ ಸಸ್ಯಗುಂಪಿಗೆ ವಿಜ್ಞಾನಿಗಳು ಕೊಟ್ಟ ಹೆಸರು. ಹೀಗೆ ಹೆಸರಿಡುವ ಕೆಲಸವನ್ನು ವಿಜ್ಞಾನವು ಮಾಡತೊಡಗಿ ಒಂದೆರಡು ನೂರು ವರುಷಗಳಷ್ಟೇ ಆಗಿದೆ, ಸಸ್ಯಗಳು ಮಾತ್ರ ಯಾವುದೇ ಹೆಸರಿಲ್ಲದೆಯೂ ಮನುಷ್ಯನಿಗಿಂತ ಮೊದಲೇ ಈ ಭೂಮಿಯಲ್ಲಿ ಸಾವಿರಗಟ್ಟಲೆ ವರುಷಗಳಿಂದ ಬದುಕುತ್ತಬಂದಿವೆ. ಈ ‘ಇರಿಯೊಕೊಲೇಸಿ’ಗಳ ಕುಟುಂಬ ಇದೆಯಲ್ಲಾ, ಇವು ವಿಜ್ಞಾನಿಯ ಶೋಧಕ್ಕೆ ತೀವ್ರಸವಾಲು ಒಡ್ಡುವ ಅತಿಪುಟಾಣಿ ಹೂಗಿಡಗಳು. ಈ ಹೂವನ್ನು ನೆಟ್ಟು ಬೆಳೆಸುವವರಿಲ್ಲ. ಅವು ಕೆಲವೇ ತಿಂಗಳಲ್ಲಿ ಬದುಕು ಮುಗಿಸುವಂಥವು. ಸಸಿಯ ತಲೆಯೋ ಎಂಬಂತೆ ಭಾಸಹುಟ್ಟಿಸುತ್ತಾ ಒಂದು ಉದ್ದದ ಹಸಿರುಕಡ್ಡಿಯ ತುದಿಯಲ್ಲಿ ಕೂತಿದೆ ಇದರ ಉರುಟುಹೂವು- ಸೂಜಿಯ ಗುಂಡಿನಂತೆ, ಬೆಂಕಿಕಡ್ಡಿಯ ಮದ್ದಿನಂತೆ! ತಮಾಷೆಯೆಂದರೆ ಇದು ಕೇವಲ ಒಂದು ಹೂವಲ್ಲ, ಅಪಾರ ಹೂಗಳ ಗೊಂಚಲು. ಇವುಗಳೊಳಗೆ ಮತ್ತೆ ಗಂಡುಹೂ ಹೆಣ್ಣುಹೂಗಳೆಂದು ಎರಡು ತರ. ಹೆಣ್ಣುಹೂವು ಬೀಜವಾದಾಗ ನೋಡಬೇಕಿದ್ದರೆ ಅದನ್ನು ಸೂಜಿಯ ತುದಿಯಲ್ಲಿ ಪ್ರತ್ಯೇಕಿಸಬೇಕು. ಅಂದರೆ ಕಿರುಬೆರಳಿನಲ್ಲಿ ಹಿಡಿಯುವುದೂ ಸಾಧ್ಯವಾಗದಷ್ಟು ಈ ಬೀಜ ಸಣ್ಣದು. ವಿಶೇಷವೆಂದರೆ ಇರಿಯೊಕೊಲೇಸಿ ಗುಂಪಿನ ಒಂದೊಂದು ಸಸ್ಯಜಾತಿಯ ಬೀಜಕ್ಕೂ ಒಂದೊಂದು ಹೊರಮೈ ಡಿಸೈನ್. ಮಿಲಿಮೀಟರನ್ನು ಇನ್ನಷ್ಟು ತುಂಡರಿಸಿ ಸಣ್ಣಮಾಡಿರುವ ಅಳತೆಗಳ ಸ್ಕೇಲು ನಮಗಿಲ್ಲಿ ಅಳೆಯಲು ಬೇಕು, ನೋಡಲು ಮೈಕ್ರೋಸ್ಕೋಪು ಬೇಕು. ಪ್ರಕೃತಿಯು ಎಷ್ಟೇ ಸಣ್ಣದನ್ನು ಸೃಷ್ಟಿಸಲಿ, ಸೂಕ್ಷ್ಮತೆ ಸಂಕೀರ್ಣತೆಗಳನ್ನು ಮಾತ್ರ ಅದು ಮರೆಯುವುದಿಲ್ಲ! ಈ ಗುಂಪಿನ ಸಸ್ಯವೈವಿಧ್ಯವನ್ನು ಒಂದರಿಂದ ಒಂದು ಪ್ರತ್ಯೇಕಿಸಲು ಅವುಗಳ ಬೀಜ ಮತ್ತು ಹೂಗಳ ವಿನ್ಯಾಸವೇ ಗಟ್ಟಿ ಆಧಾರ. ಇಲ್ಲದಿದ್ದರೆ ಇವೆಲ್ಲ ಎಲೆಕಾಂಡಗಳಲ್ಲಿ ಸರಿಸುಮಾರು ಒಂದೇ ಬಗೆಯಾಗಿ ಕಂಡುಬಿಟ್ಟು ಬುದ್ಧಿಯನ್ನು ಬೆಪ್ಪುಮಾಡಿಯಾವು. ಚಿತ್ರದಲ್ಲಿರುವ ಪುಟಾಣಿ ಹೂಗೊಂಚಲುಗಳು ಹಲವು ಬಗೆಯ ಇರಿಯೊಕೊಲೇಸಿಗಳು.

‘ತಗ್ಗು ಕರಾವಳಿಯ ಹುಲ್ಲುಗಾವಲು’ ಇದು ರಶ್ಮಿಯ ಅಧ್ಯಯನದ ವಿಷಯ. ಪ್ರತಿಗಿಡಕ್ಕೂ ಬದುಕಲು ಅದರದ್ದೇ ಒಂದು ಪರಿಸರ ಬೇಕು, ಇನ್ನೊಂದು ಮಣ್ಣು ಬೆಳಕು ನೀರಲ್ಲಿ ಅದು ಬಾಳಲಾರದು. ರಶ್ಮಿ ತಂದ ಪುಟಾಣಿಸಸಿಯು ಜೀವಿಸುವುದು ಲ್ಯಾಟರೈಟ್‌ಕಲ್ಲು ಹಬ್ಬಿರುವ ಕರಾವಳಿಯ ದಿಬ್ಬಗಳಲ್ಲಿ. ಮರಗಿಡಗಳಿಲ್ಲದ ಈ ಎತ್ತರದ ಹರಹುಗಳಿಗೆ ಅಲ್ಲಿಯ ಜನ ‘ಪದವು’ ಅನ್ನುತ್ತಾರೆ. ಮನೆಗೋಡೆಗಳ ಕಟ್ಟಲು ಬಳಸುವ, ತನ್ನ ಲೆಕ್ಕವಿಲ್ಲದಷ್ಟು ತೂತುಗಳ ಮೂಲಕ ಉಸಿರಾಡುವಂತಿರುವ ‘ಲ್ಯಾಟರೈಟ್’ ಕೆಂಪುಗಲ್ಲು ಈ ಪದವುಗಳಲ್ಲಿ ತುಂಬ ತುಂಬ ಮಲಗಿರುತ್ತದೆ. ಕರಾವಳಿಯ ಹಳ್ಳಿಗಳೆಲ್ಲ ನೀರಾಸರೆಯ ತಗ್ಗುಕಣಿವೆಗಳಲ್ಲಿ ಆಗಿರುತ್ತಾ ಅಲ್ಲಿರುವ ಜನರೆಲ್ಲ ತಮ್ಮ ದನಗಳನ್ನು ಪದವು ಎಂಬ ಈ ಎತ್ತರದ ಬೋಳುಗುಡ್ಡಗಳಿಗೆ ಮೇಯಲು ಬಿಡುತ್ತಿದ್ದ ಪುರಾತನ ದಿನಗಳಿದ್ದುವು. ಮಳೆಗಾಲದಲ್ಲಿ ಈ ಪದವುಗಳು ಹಸಿರುಹೊದ್ದಂತೆ ಹುಲ್ಲುಸಸಿ ಹೊಂದುತ್ತಿದ್ದುವು. ಇಂತಹ ಸಸಿಗಳಲ್ಲಿ ಒಂದಾಗಿತ್ತು ರಶ್ಮಿ ತಂದ ಚಿಕಿಣಿ. ಆಕೆಯ ಪ್ರೊಫೆಸರ್ ವಿದ್ಯಾರ್ಥಿಗಳ ಜೊತೆ ಸಸಿಯು ಮನೆಮಾಡಿದ ಪದವಿಗೆ ಮಳೆಗಾಲದ ಕೊನೆಯ ದಿನಗಳಲ್ಲಿ ಹೋದರು. ಅಲ್ಲಿ ವಿಶಾಲಬಯಲಲ್ಲಿ ಪಕ್ವವಾದ ಹಸುರು. ರಶ್ಮಿಯ ಸಸಿಗಳು ಅಲ್ಲಲ್ಲಿ ರಾಶಿರಾಶಿಯಾಗಿ ಬೆಳೆದು ಅವುಗಳಲ್ಲೆಲ್ಲ ಲಕ್ಷಾಂತರ ಮೈಕ್ರೋಹೂಗಳು ಅರಳಿ ಪಚ್ಚೆಯ ನಡುವೆ ಚಂದಚಂದಕ್ಕೆ ಚೆಲ್ಲಿದ ಬಿಳಿ ಪ್ಯಾಚ್‌ಗಳು-ನೆಲದ ಮೇಲೆ ಅಲ್ಲಲ್ಲಿ ಬಿದ್ದ ತೆಳುಹಿಮದಂತೆ! ಪ್ರೊಫೆಸರ್ ಹೇಳಿದರು- “ಹೂಗಳನ್ನು ಹುಡುಕುತ್ತಾ ದೂರದ ಬೆಟ್ಟಕಣಿವೆಗಳಿಗೆ ಏಕೆ ಹೋಗಬೇಕು? ನಮ್ಮೂರ ಪದವುಗಳಲ್ಲೂ ಈ ಪುಟ್ಟಹೂಗಳು ಮಳೆ ಸುರಿದೊಡನೆ ಯಾರನ್ನೂ ಕಾಯದೆ ಬಾಳಲು ಸುರುಹಚ್ಚುತ್ತವೆ, ಮಳೆಗಾಲ ಮುಗಿಯುವಾಗ ತಮ್ಮಷ್ಟಕ್ಕೇ ಅವು ಬದುಕು ಮುಗಿಸುತ್ತವೆ. ಹಾಗಾಗಿ ಮೂರು ತಿಂಗಳು ಆಯುಸ್ಸು ಪಡೆದರೂ ಇದೂ ಒಂದು ಹೂಬೆಟ್ಟವೇ!”

ಪ್ರೊಫೆಸರ್‌ಗೆ ಆ ಸಸಿಯನ್ನು ಕಂಡಾಗಲೇ ಅನುಮಾನ ಬಂದಿತ್ತು. ಅವರು ತಿಳುವಳಿಕೆಯ ಆಳಕ್ಕಿಳಿದರು. ಸಸಿಯ ಮಾದರಿಯನ್ನು ದೇಶ ವಿದೇಶದ ಸಸ್ಯಸಂಗ್ರಹಾಗಾರಗಳ ಗಮನಕ್ಕೆ ತಂದರು. ಹೌದು, ಹೆಣ್ಣುಮಗಳು ಹೊತ್ತುತಂದ ಅತಿಸಣ್ಣ ಹೂಸಸಿಯು ‘ಇರಿಯೋಕೊಲೇಸಿ’ ಗುಂಪಿನಲ್ಲಿ ಇದುವರೆಗೆ ವಿಜ್ಞಾನಪ್ರಪಂಚವು ಗುರುತಿಸದ ಸಸ್ಯವಾಗಿತ್ತು. ಈಗ ಈ ಶೋಧಕ್ಕೆ ಹೊಸಹೆಸರಿಟ್ಟು ಕರೆಯಬೇಕು. ಯಾವ ಹೆಸರಾದೀತು? ಹುಡುಕಾಟಕ್ಕಿಳಿದವರಿಗೆ ನೆನಪಾದ ಸಂಕೇತ ಕೆ. ಗೋಪಾಲಕೃಷ್ಣ ಭಟ್ ಉರುಫ಼್ ಕೆ.ಜಿ.ಭಟ್. ಹೀಗೆ ಹೊಸಹುಲ್ಲು “ಇರಿಯೊಕೊಲಾನ್ ಗೋಪಾಲಕೃಷ್ಣಿಯಾನಂ” ಎಂದಾಯಿತು, ಕರಾವಳಿಯ ಸಸ್ಯಗಳನ್ನು ತುಂಬ ಪ್ರೀತಿಸಿದ ಒಬ್ಬ ಸರಳಜೀವಿಯ ಹೆಸರನ್ನು ಹೊಂದಿತು. ನೀವು ಕಂಡುಹಿಡಿದ ಸಸ್ಯಕ್ಕೆ ಏನು ಬೇಕಾದರೂ ಹೆಸರು ಕೊಡಿ, ಆದರೆ ಅದಕ್ಕೆ ಒಂದು ಲ್ಯಾಟಿನ್ ಭಾಷೆಯ ನೆರಳುಬರುವಂತೆ ಮಾಡಿಬಿಡಿ-ಇದು ವಿಜ್ಞಾನಲೋಕದ ಸಂಪ್ರದಾಯ. ಹಾಗೆ ಮೂಡಿಬಂದದ್ದು ಈ ‘ಗೋಪಾಲಕೃಷ್ಣಿಯಾನಂ’ ಎಂಬ ಲ್ಯಾಟಿನೈಸ್‌ಡ್ ಶಬ್ದ.

[ಕೃತಜ್ಞತೆ: ಡಾ. ಕೃಷ್ಣಕುಮಾರ್.ಜಿ]

7 comments:

 1. ನಿಸರ್ಗ ವೈವಿಧ್ಯ ವೈಭವವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿರುವವರು ಇನ್ನೂ ಎಷ್ಟು ಮಂದಿ ಇದ್ದಾರೋ ಗೊತ್ತಿಲ್ಲ. ನಾನಂತೂ ಆಪ್ರಯತ್ನಕ್ಕೆ ಕೈ ಹಾಕದೆಯೇ ನಿಸರ್ಗವನ್ನು ಅದು ಇರುವಂತೆಯೇ ಬೆರಗುಗಣ್ಣಿನಿಂದ ನೋಡಿ ಖುಷಿ ಪಡುವ ವರ್ಗಕ್ಕೆ ಸೇರಿದವನು.

  ReplyDelete
 2. ಹುಲ್ಲಿನ ಕುಟುಂಬಗಳ ವಣ೯ನೆ ಸೊಗಸಾಗಿದೆ.ಸರಳವಾಗಿದೆ. ಅಂದಹಾಗೆ, ಈ ಲೇಖನದಲ್ಲಿ ಅಶೋಕವಧ೯ನರ ಶೈಲಿಯ ಘಮಲೇ ಇಲ್ಲವಲ್ಲ!

  ReplyDelete
 3. Informative article by mahaling bhat sir about Eriocaulaceae

  ReplyDelete
 4. ‘ಇರಿಯೊಕೊಲೇಸಿ’ ಅತಿಪುಟಾಣಿ ಹೂಗಿಡಗಳ ಲೇಖನ ಉತ್ತಮವಾಗಿದೆ. ಪ್ರೊಫೆಸರ್‌ ಕೆ. ಗೋಪಾಲಕೃಷ್ಣ ಭಟ್ ಉರುಫ಼್ ಕೆ.ಜಿ.ಭಟ್ ಇವರ “ಇರಿಯೊಕೊಲಾನ್ ಗೋಪಾಲಕೃಷ್ಣಿಯಾನಂ” ಎಂಬ ನಾಮವು ಸೂಕ್ತವಾಗಿದೆ. ಈ ಲೇಖನದಿಂದ ನಿಮ್ಮ ಬ್ಲೊಗ್ ಇನ್ನೂ ಶ್ರೀಮಂತವಾಯಿತು. ಅತಿಪುಟಾಣಿ ಹೂಗಿಡಗಳ ಲೇಖನವನ್ನು ಓದುಗರ ಮುಂದೆ ಇಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 5. ಇದನ್ನು ನಮ್ಮ ತೀರ್ಥಹಳ್ಳಿ ಕಡೆ' ಹಿಟ್ಟುಂದೆ ಹೂ 'ಅಂತ ಕರೀತೀವಿ.ಹೂವಿನ ದಂಟನ್ನು ಒಣಗಿಸಿ ಅದರಿಂದ ಬುತ್ತಿ, ಹರಿವಾಣ ,ಹ್ಯಾಟ್ ಇತ್ಯಾದಿಗಳನ್ನು ನನ್ನ ಅಮ್ಮ ಹೆಣೆಯು ತ್ತಿದ್ದರು. ಈ ಕುರಿತು ನಾನು ಸುಧಾ ವಾರ ಪತ್ರಿಕೆಗೆ ಸಚಿತ್ರ ಲೇಖನವೊಂದನ್ನು ಬಹಳ ಹಿಂದೆ ಬರೆದಿದ್ದೆ. ನಿಮ್ಮ ಬರಹ ಚೆನ್ನಾಗಿದೆ. ಎರಿಯೋಕಾಲೆಸಿ [Eriocaulaceae] ಸಸ್ಯ ದ ೪೩ ಪ್ರಭೇದಗಳು ಕರ್ನಾಟಕದಲ್ಲಿವೆಯಂತೆ. ಸುಮಿತ್ರಾ

  ReplyDelete
 6. ತುಂಬೆ ಗಿಡ ಇರುವಲ್ಲಿ ಕ್ಷಾರವಲ್ಲದ ಶ್ರೀಮಂತ ಮಣ್ಣು ಹಾಗು ಹಿಟುಂಬೆ ಗಿಡ ಇರುವ ಜಮೀನು ಕ್ಷಾರಯೌಕ್ತ ಮಣ್ಣು ಎಂದು ಪ್ರತೀತಿ .ಈ ಗಿಡ ಇರುವಲ್ಲಿ ಹುಳಿ ಅಥವಾ ಅಸಿಡಿಟಿ ಹೆಚ್ಹು .ಸುಣ್ಣದ ಆವಶ್ಯಕತೆ ಇರುವುದು.


  ReplyDelete
 7. ಗೋಪಾಲಕೃಷ್ಣ ಭಟ್ಟರ ಒಂದು ಹುಲ್ಲಿನ ಹಿಂದೆ ನಡೆದ ಕ್ರಾಂತಿ ಯೂ ಅಷ್ಟೇ ರೋಚಕವಾಗಿತ್ತು.ನಾನೂ ಕೂಡಾ ಅತ್ತೆ ಮನೆ ಕಡೆ ಹೋದಾಗಲೇ ಈ ಪಾದೆ ಹುಲ್ಲು ಎನ್ನುವ ವೈವಿಧ್ಯ ನೋಡಿದ್ದು.ದೀಪಾವಳಿ ಸಮಯದಲ್ಲಿ ಆ ಕಡೆ ಅದನ್ನು ಪೂಜೆಗೆ ತರುತ್ತಾರೆ.ಆ ನಂತರದ ದಿನಗಳಲ್ಲಿ ಗಮನಿಸಿದ್ದು: ಮೈಸೂರು ಕಡೆ ಬಲೀಂದ್ರನ ಪೂಜೆಗೆ ಸೆಗಣಿ ಯನ್ನು ಮಾಡಿ ಅದಕ್ಕೆ ಗರಿಕೆಯನ್ನು ಸಿಕ್ಕಿಸಿ ಹೊಸ್ತಿಲ ಬಳಿ ಇಡುವ ಸಂಪ್ರದಾಯವಿದೆ.ಇಲ್ಲಿ ದುರ್ಗದ ಕಡೆ ದೀಪಾವಳಿಯ ಅಮಾವಾಸ್ಯೆ ಜೋರು.ಆಗ ಆಳೆತ್ತರ ಬೆಳೆಯುವ ಒಂದು ರೀತಿಯ ಹುಲ್ಲನ್ನು ತಂದಿಟ್ಟು ಲಕ್ಷ್ಮೀ ಯೊಂದಿಗೆ ಪೂಜಿಸುತ್ತಾರೆ.ಆ ಹುಲ್ಲು ಹಬ್ಬದ ಸಮಯದಲ್ಲಿ ಮಾರಾಟಕ್ಕೂ ಬರುತ್ತದೆ.ನಮ್ಮ ಹಬ್ಬ ಹರಿದಿನಗಳಲ್ಲಿ ಕೆಲವು ಆಚರಣೆಗಳು ಪ್ರಾದೇಶಿಕವಾಗಿ ಹೇಗೆ ಒಂದೇ ರೀತಿ ಇರುತ್ತದಲ್ಲಾ ಎಂದು ಅಚ್ಚರಿಯಾಗುವುದಿದೆ.ಆ ನಂತರದ ದಿನಗಳಲ್ಲಿ ನಾನು ಹುಲ್ಲಿನಲ್ಲಿರುವ ವಿವಿಧ ನಮೂನೆಗಳನ್ನು ಗುರ್ತಿಸಲು ಶುರು ಮಾಡಿದ್ದು.ಆದರೆ ಅವುಗಳ ಹೆಸರು ಕೇಳಿದರೆ ಮಾತ್ರ ನನ್ನ ಜ್ಞಾನ ಶೂನ್ಯ ��

  ReplyDelete