05 April 2013

‘ಬೋರೇಗೌಡ’ನ ಇನ್ನಷ್ಟು ನೆನಪುಗಳು!


(ನಂದಿ ಹೋಗಲಿರುವ ನಂದಿಯ ಮೂರನೇ ಮತ್ತು ಅಂತಿಮ ಭಾಗ)
ಗಾಳಿಪಟ, ಬುಗುರಿ ಮತ್ತು ರೌಡಿ ರುದ್ರ!

ಬಾಲ್ಯದಲ್ಲಿ ನಾನು ಭಾರೀ ಕಾರುಭಾರಿಯೇನೂ ಅಲ್ಲ. (ಈಗ ಹೌದೆಂದೂ ಅಲ್ಲ! ಈ ಜಾಲತಾಣದ ದೆಸೆಯಲ್ಲಿ ಅನಿವಾರ್ಯವಾಗಿ ನನಗೆ ಬಂದನಾಯಕತ್ವಕ್ಕೆ ಇಷ್ಟು ಹೇಳಬೇಕಾಗಿದೆ) ಆದರೂ ಮಡಿಕೇರಿ ಮತ್ತು ಬಳ್ಳಾರಿಯಲ್ಲಿ ವಿಸ್ತಾರದಲ್ಲೇ ಬೆಳೆದ ನಮಗೆ (ಅತ್ರಿ - ಅಶೋಕ, ಆನಂದ, ಅನಂತ) ಹನುಮಂತನಗರ ಕಿಷ್ಕಿಂಧೆಯ ನೆನಪನ್ನೇ ಕೊಟ್ಟಿತು! ಅಲ್ಲಿನ ಸಂಜೆಗಳು ನನಗೆ ಆಸುಪಾಸಿನ ಮನೆಯ ಹುಡುಗರೊಡನೆ ದಾರಿಬದಿಯಲ್ಲೋ ಇನ್ನೂ ನಿವೇಶನಗಳಾಗಿ ಸ್ಪಷ್ಟ ಅಭಿವೃದ್ಧಿಗೊಳ್ಳದ ಹದಿನೈದನೇ ಅಡ್ಡ ರಸ್ತೆಯಿಂದಾಚಿನ ಮೈದಾನದಲ್ಲೋ ಕಬಡ್ಡಿ, ಕ್ರಿಕೆಟ್, ಗಾಳಿಪಟ, ಬುಗುರಿಯಾಟಗಳಲ್ಲಿ ಮುಗಿಯುತ್ತಿತ್ತು.

ಆಗ ಇಂದಿನಂತೆ ಸಿದ್ಧ ಗಾಳಿಪಟಗಳು ಮಾರಾಟಕ್ಕೆ ಸಿಗುತ್ತಿದ್ದದ್ದು ನನಗೆ ತಿಳಿದಿರಲಿಲ್ಲ. ಯಾರೋ ಸಹಪಾಠಿಯಿಂದ ಕಲಿತು, ಹಳೇ ಪತ್ರಿಕೆಯ ಪುಟಗಳಿಗೆ ಮನೆಯ ಹಿಡಿಸೂಡಿ ಕಡ್ಡಿ ಹೊಸೆದು, ಅನ್ನದ ಅಂಟು ಹಚ್ಚಿ ತೇಲಿಬಿಡುವ ನನ್ನ ಹುಚ್ಚಿಗೆ ಅಮ್ಮನ ಎಂಬ್ರಾಯಿಡರಿ ನೂಲೆಲ್ಲಾ ಖಾಲಿಯಾಗಿತ್ತು. ಪಟ್ವೇನೋ ಮಾಡ್ಬೌದೂ. ಸೂಸ್ತ್ರ ಕಟ್ಟೋದೇ ಇರೋದು ಎನ್ನುವ ಕೋಣಗಳ ನಡುವೆ ನಾನು ಅದೃಷ್ಟದಲ್ಲೆ ಜಾಣ ಅನ್ನಿಸಿಕೊಂಡಿದ್ದೆ! ಒಂದಕ್ಕೊಂದು ಜಂಟಿ ಹಾಕಿ ಐದು ಪಟದವರೆಗೂ ನಾನು ಗಾಳಿಗೇರಿಸಿದ್ದಿತ್ತು. ನಮ್ಮ ಮನೆಯ ಬೋಳು ತಾರಸಿಗೇರಿ (ಎರಡನೇ ಮಾಳಿಗೆ) ಪಟ ಏರಿಸಿದರೆ, ಅದು ಸಾಮಾನ್ಯವಾಗಿ ಯಾವುದೇ ಲೈಟ್ ಕಂಬ, ತಂತಿಗೆ ಸಿಗದಂತೆ ಮೇಲೇರಿ ಹಾರುತ್ತಿತ್ತು. ಇನ್ನೂ ದೊಡ್ಡ ಲಾಭವೆಂದರೆ ಕೊಳೆಗೇರಿಗಳೇ ಆಗಿದ್ದ ಅತ್ತಿತ್ತಣ ಹಳ್ಳಿಯ ಪೋಲಿ ಪಟಾಲಮ್ಮು ಎಟುಕಿಗೆ ನನ್ನ ಪಟ ನಿಲುಕದ ಎತ್ತರವನ್ನೂ ಸಾಧಿಸುತ್ತಿತ್ತು.


ಒಮ್ಮೆ ನನ್ನ ಐದು ತಲೆಯ ಪಟ ಏರೇರಿ ಹೋಗಿದೆ, ದಾರದುಂಡೆ ಕೊನೆಯಲ್ಲಿದ್ದೆ. ಆ ಎತ್ತರದಲ್ಲೆಲ್ಲೋ ಗಾಳಿ ಸಂಚಾರ ತಗ್ಗುತ್ತ ಬಂದು ದಾರ ಎಳೆದಷ್ಟೂ ಹೊಟ್ಟೆ ಬರತೊಡಗಿತು (ಜಗ್ಗಿ ಜೋತು ಬೀಳುವುದು). ಇದು ಗುತ್ತೇಹಳ್ಳಿ ಪೋಕರಿಗಳ್ಯಾರದೋ ಕಣ್ಣಿಗೆ ಬಿದ್ದುಆಪರೇಶನ್ ಹಿಜಾಕ್ಸುರು ಮಾಡಿದರು. ಒಂದು ಮಾರುದ್ದದ ಸ್ವಲ್ಪ ದಪ್ಪ ಹಗ್ಗದ ಎರಡೂ ಕೊನೆಗೆ ಸಮತೂಕದ ಎರಡು ಪುಟ್ಟ ಕಲ್ಲು ಕಟ್ಟಿ (ಲಂಗರು ಎನ್ನಿ. ಅಂದಿನ ಜನಪದ ಹೆಸರು ನನ್ನ ನೆನಪಿನಲ್ಲಿಲ್ಲ) ಮೇಲಕ್ಕೆ ಬೀಸಿ ಒಗೆಯುತ್ತಾರೆ. ಅದು ನಮ್ಮ ಪಟದ ದಾರಕ್ಕೆ ತೊಡರಿಕೊಂಡರೆ ಸಾಕು, ಮೊದಲೇ ಹೊಟ್ಟೆ ಬಂದ ದಾರ ಭಾರಕ್ಕೆ ಅಲ್ಲೇ ನೆಲಕ್ಕಿಳಿದು ಬಿಡುತ್ತದೆ. ನಾನುತುರ್ತು ಪರಿಸ್ಥಿತಿಘೋಷಿಸಿದ್ದೇ ನನ್ನ ಬಳಗ ತಾರಸಿಯ ಉದ್ದಗಲಕ್ಕೆ ದಾರ ಎಳೆದೆಳೆದು ಹಾಕತೊಡಗಿತು. ತ್ವರಿತ ತುಯ್ತದಲ್ಲಿ ಪಟ ತುಸು ಚೇತರಿಸಿಕೊಂಡು ಗುತ್ತೇಹಳ್ಳಿ ಲಂಗರು ತಪ್ಪಿಸಿಕೊಂಡರೂ ಇಲ್ಲೇ ಎರಡು ಗಲ್ಲಿಗಳಾಚೆ ನೆಲ ಮುಟ್ಟುವ ಅಂದಾಜು ಕಾಣಿಸಿತು. ಉಳಿದವರಿಗೆ ದಾರ ಎಳೆಯುವ ಕೆಲಸ ಬಿಟ್ಟು ನಾವಿಬ್ಬರು ದಡಬಡನೆ ತಾರಸಿ ಬಿಟ್ಟಿಳಿದು ಅತ್ತ ಓಡಿದ್ದೆವು. ಆದರೆ ಅಲ್ಲಿ, ಇನ್ನೇನು ವಿಜಯಲಕ್ಷ್ಮಿ ತನ್ನ ವರಣಮಾಲೆ ಹಿಡಿದು ಕಾದಿದ್ದಾಳೆ ಎನ್ನುವಾಗ ಹಾಜರಿದ್ದು ಐದೂ ಪಟ, ದಾರ ದಕ್ಕಿಸಿಕೊಂಡವ ರೌಡಿ ರುದ್ರ! ಯಾರೀ ರಕ್ಕಸ? ಅದಕ್ಕುತ್ತರ ಕಂಡುಕೊಳ್ಳುವ ಮೊದಲು ಅಣಿಗೊಳ್ಳಬೇಕಾದ ಇನ್ನೊಂದು ಪೂರ್ವರಂಗ - ನಮ್ಮ ಬಳಗದ ಇನ್ನೊಂದೇ ಆಟ, ಬುಗುರಿ.

ಆಚೀಚೆ ಮನೆಯ ಮೂರ್ನಾಲ್ಕು ಹುಡುಗರು ರಸ್ತೆ ಕರೆಯಲ್ಲೋ ಹಿತ್ತಿಲಿನ ದೂರದಲ್ಲಿ ಇನ್ನೂ ಮನೆಗಳು ಬಾರದ ಖಾಲಿ ನಿವೇಶನಗಳಲ್ಲೋ ಬುಗುರಿಯಾಟ ಆಡುವುದಿತ್ತು. ವಿವಿಧ ರೂಪಗಳ ಬುಗುರಿ ಮತ್ತು ಹಗ್ಗ (ಚಾಟಿ) ಅಂಗಡಿಯಿಂದ ಕೊಂಡು, ಅವಕ್ಕೆ ನಾವೇ ಆಣಿ (ಮೊಳೆ) ಹೊಡೆದುಕೊಳ್ಳಬೇಕಿತ್ತು. (ಅಂಗಡಿಯಿಂದ ಪ್ರತ್ಯೇಕ ಕೊಂಡ ಎರಡೋ ಮೂರೋ ಇಂಚಿನ ಆಣಿಯ ತಲೆ ತೆಗೆಯಬೇಕು, ಕೇವಲ ಬುಗುರಿ ತಿರುಗಿಸುವ ಚಂದಕ್ಕಾದರೆ ಮೊಂಡುಮೊನೆ ಸಾಕು. ಆದರೆ ಸ್ಪರ್ಧಾತ್ಮಕ ಆಟಗಳಿಗೆಮಹಾಯುದ್ಧಸಿದ್ಧತೆಯೇ ಆಗುತ್ತಿತ್ತು ಬಾಲಸೈನ್ಯದಲ್ಲಿ! ಎದುರಾಳಿಯ ಬುಗುರಿಗೆ ಗುನ್ನ, ಗಾಯ ಮಾಡಲು ಚೂಪಿನ ವೈವಿಧ್ಯ, ಒಡೆದು ಹೋಳೇ ಮಾಡಿಬಿಡಲು ಬಾಚಿಮೊನೆಯನ್ನು ರೂಪಿಸುವುದೂ ಇರುತ್ತಿತ್ತು. ಪುಟ್ಟಪಥದ ಕಲ್ಲಿನಂಚಿಗೆ ಆಣಿ ಇಟ್ಟು ಒದಗಿಬಂದರೆ ಸುತ್ತಿಗೆ ಇಲ್ಲವಾದರೆ ಯಾವುದೋ ಕಲ್ಲಿನಲ್ಲಿ ಜಜ್ಜಬೇಕು, ಅಡಿ ಒತ್ತು ಸರಿಯಿಲ್ಲದೆ ಹಿಡಿದ ಬೆರಳಿಗೆ ಬರುವ ಆಘಾತ, ಗುರಿ ತಪ್ಪಿದರಂತೂ ಉಂಟೇ ಉಂಟು ಬೆರಳೇ ಜಜ್ಜಿಕೊಳ್ಳುವ ಕಷ್ಟ. ಮತ್ತೆ ಬುಗುರಿಗೇರಿಸುವಾಗ ವಾರೆಯಾಗಬಾರದು. ಹಾಗೂ ವಾರೆಯಾದರೆ ಅದನ್ನು ಕೀಳಲು ಅಮ್ಮನಿಗೆ ಗೊತ್ತಾಗದಂತೆ ಮನೆ ಬಾಗಿಲಿನ ಸಂದಿನಲ್ಲಿ ಇರುಕಿಸಿ ಎಳೆದು ತೆಗೆದು, ಹಳೇ ತೂತಕ್ಕೆ ಬೆಂಕಿಕಡ್ಡಿ ತುಂಡು ಜಡಿದು, ವೀರ ಫಲುಗುಣನಂತೆ ಒಕ್ಕಣ್ಣು ಮುಚ್ಚಿ, ಹೊಸದಾಗಿ ಗುರಿ ಹಿಡಿದು ಆಣಿ ಕುಟ್ಟಬೇಕು. ಮತ್ತೆ ಅದನ್ನು ಕಲ್ಲಿಗೆ ಉಜ್ಜುಜ್ಜಿ ಹದಬರಿಸಿ, ಬೆರಳಲ್ಲಿ ಮುಟ್ಟಿ ಆನಂದಿಸಿ, ಚಾಟಿ ಸುತ್ತಿ ಒಂದೆರಡು ಬಾರಿ ಆಡಿಸಿದಾಗಲೇ ಧೈರ್ಯ. [ಆರು ತಿಂಗಳ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಹುಡುಗರು ಬುಗುರಿಯಾಟದಲ್ಲಿ ತಲ್ಲೀನರಾಗಿದ್ದುದು ಕಂಡು ಭಾರೀ ಕುಶಿಯಾಯ್ತು. ಅವರಲ್ಲೊಬ್ಬ ನಮ್ಮ ಮೇಲೆ ಕೃಪೆಯಿಟ್ಟು ತಿರುಗುವ ಬುಗುರಿಯನ್ನು ತಮ್ಮನ ಹೆಂಡತಿ ಜಯಶ್ರೀ ಕೈಗೆ ಕೊಟ್ಟಿದ್ದ!]

ಆಟ ತೀರಾ ಸರಳ. ಮೊದಲು ಇದ್ದಷ್ಟು ಮಂದಿ ಅವರವರ ಬುಗುರಿಗಳಿಗೆ ಚಾಟಿ ಸುತ್ತಿ ವೃತ್ತಾಕಾರದಲ್ಲಿ ನಿಲ್ಲುತ್ತಿದ್ದೆವು. “ಒಂದೆರ್ಡ್ಮೂರ್ಹೇಳಿ ಒಮ್ಮೆಲೆ ಎಲ್ಲ ಮಧ್ಯೆ ಬುಗುರಿಗಳನ್ನು ಮುಟ್ಟಿಸಿ (ಕುಡುಕರು ಚೀರ್ಸ್ ಹೇಳಿದಂತೆ) ಹೊರಕ್ಕೆ ತೆರೆದುಕೊಂಡು ಬುಗುರಿಯಾಡಿಸಬೇಕು. ಮತ್ತದನ್ನು ಹಗ್ಗದಲ್ಲಿ ಮೇಲೆ ಚಿಮ್ಮಿಸಿ (ಮಡಿಕೇರಿಯಲ್ಲಿ ಇದನ್ನು ಅಪೀಟ್ (= up it?) ಎನ್ನುತ್ತಿದ್ದೆವು. ಬೆಂಗಳೂರು ಜನಪದ ಮರೆತುಹೋಗಿದೆ) ಕೈಯಲ್ಲಿ ಹಿಡಿಯಬೇಕಿತ್ತು. ಇದರಲ್ಲಿ ಕೊನೆಯವನು ಸೋತವ. ಮುಂದಿನ ಹಂತದಲ್ಲಿ ನೆಲದಲ್ಲಿ ಸುಮಾರು ಎರಡಡಿ ವ್ಯಾಸದ ಸಣ್ಣ ವೃತ್ತ ಬರೆಯುತ್ತಿದ್ದೆವು. ಸೋತವನ ಬುಗುರಿಯನ್ನು ಅದರ ನಡುವಿನಲ್ಲಿಡುತ್ತಿದ್ದೆವು. ಅನಂತರ ಸರದಿಯ ಮೇಲೆ ಒಬ್ಬೊಬ್ಬರೆ ತಮ್ಮ ಬುಗುರಿಯಾಡಿಸುವುದರೊಡನೆ ವೃತ್ತದೊಳಗಿನ ಬುಗುರಿಯ ಮೇಲೆ ದಾಳಿ ಮಾಡುತ್ತಿದ್ದೆವು. ಮೊದಲೂ ಆಮೇಲೂ ಯಾವುದೇ ಕಾರಣಕ್ಕೆ ಬುಗುರಿ ತಿರುಗದೇ ಹೋದರೆ - ‘ಕೊಟ್ಟ’ (ಕೈ ಕೊಟ್ಟ? ಖೋಟಾ/ತಾ?) ಎನ್ನುತ್ತಿದ್ದೆವು. ಮತ್ತದೂ ಸೋತವನ ಜತೆಗೆ ವೃತ್ತದ ನಡುವಿಗೆ ಬರುತ್ತಿತ್ತು. ದಾಳಿಯ ಬುಗುರಿ ವೃತ್ತ ಬಡಿದರೂ ಅಲ್ಲೇ ಆಡುವಂತಿರಲಿಲ್ಲ. ಹೊಡೆಯುವಾಗಷ್ಟೇ ತಿರುಗಿದರೂ ಮತ್ತೆ ತಾನೇ ಹೊರಬಂದು ಖಾಲಿ ಬಿದ್ದರೂ ತೊಂದರೆಯಿಲ್ಲ. ಆದರೆ ಒಳಗೇ ತಿರುಗುತ್ತಿದ್ದು, ಸೋತವ/ರು ಅದನ್ನು ಕೈಯಾರೆ ಒತ್ತಿಬಿಟ್ಟರೆ ಅದಕ್ಕೂ ವೃತ್ತದೊಳಗೆ ಮಲಗಿ ಪೆಟ್ಟು ತಿನ್ನುವ ಯೋಗ. ದಾಳಿಯಲ್ಲಿ ಒಳಗಿನ ಬುಗುರಿ ವೃತ್ತದಿಂದ ಹೊರ ಸಿಡಿದರೆ ಎಲ್ಲ ಕೂಡಲೇ ಒಂದು ಅಪೀಟ್ ತೆಗೆಯಬೇಕು. ಮೊದಲು ಸೋತವ - ದಾಳಿಕೋರರ ಬುಗುರಿ ಒತ್ತಲೋ ಸಿಡಿದ ತನ್ನ ಬುಗುರಿಯನ್ನು ತುರ್ತಾಗಿ ಸಂಗ್ರಹಿಸಿ, ಆಡಿಸಿ, ಅಪೀಟ್ ತೆಗೆಯಲು ಹೊಂಚುತ್ತಲೇ ಇರುತ್ತಾನೆ. ಮತ್ತೆ ಸೋತವನ ಬುಗುರಿ ವೃತ್ತದೊಳಗೆ ಮಲಗುತ್ತದೆ, ಆಟಕ್ಕೆ ಮುಕ್ತಾಯ ಇಲ್ಲ.

ಬುಗುರಿ ದಾಳಿಯಲ್ಲಿ ಹಲವು ವಿಧಗಳಿವೆ. ಮಿತ್ರರು, ಸೌಮ್ಯರು ತಮ್ಮ ಬುಗುರಿಯ ದೇಹವನ್ನಷ್ಟೇ ಸೋತ ಬುಗುರಿಗೆ ತಾಗಿಸಿ ಅದು ಹೊರ ರಟ್ಟುವಂತೆ ನೋಡಿಕೊಳ್ಳುವುದಿದೆ. ಆದರೆ ಹೆಚ್ಚಿನವರು ತಮ್ಮ ಬುಗುರಿಯ ಆಣಿಯೇ ಇನ್ನೊಂದು ಬುಗುರಿಯ ದೇಹಕ್ಕೆ ಅಪ್ಪಳಿಸಿ ಗಾಯ (‘ಗುನ್ನಎಂದೇ ಕೇಳಿದ ನೆನಪು) ಮಾಡಬೇಕು, ಕೆತ್ತೆ ಎಬ್ಬಿಸಬೇಕು, ಎರಡು ಹೋಳೇ ರಟ್ಟಿಸಬೇಕು ಎಂದೇ ಪ್ರಯತ್ನಿಸುತ್ತಿದ್ದರು. ಅದಕ್ಕೆ ಸರಿಯಾಗಿ ಮೊಳೆಗಳ ಚೂಪೂ ಆಡಿಸುವ ಶೈಲಿಯನ್ನೂ ರೂಢಿಸಿಕೊಂಡಿರುತ್ತಾರೆ. ಭರ್ಚಿ ಎಸೆಯುವವನಂತೆ (ಜ್ಯಾವೆಲಿನ್ ತ್ರೋ) ವೃತ್ತದ ಹೊರ ಅಂಚಿಗೆ ಒಂದು ಕಾಲು ಬಡಿದು ಚಾಟಿ ಬೀಸುವ ಭಂಗಿ ಸಾಮಾನ್ಯವಲ್ಲ. ಅಂಥವರ ತೂಕದ ಬುಗುರಿಗಳೂ ಹಾಗೇಗಕ್ಎಂದು ಸೋತ ಬುಗುರಿಗೋ (ಗುರಿ ತಪ್ಪಿದರೆ) ನೆಲಕ್ಕೋ ಅಪ್ಪಳಿಸಿ, ಮಣ್ಣು ಚಿಮ್ಮಿ, ‘ಘೂಂಎಂದು ವೃತ್ತದಿಂದ ಹೊರಕ್ಕೆ ಪುಟಿಯುತ್ತಿದ್ದವು. ಅಂಥವರ ಚಾಟಿಯ ನೇಯ್ಗೆ, ತೋರ, ಉದ್ದ, ಸುತ್ತುವ ಕ್ರಮ, ಬುಗುರಿಯನ್ನು (ಅನಿಲ್ ಕುಂಬ್ಳೆ ಪ್ರತಿ ಎಸೆತಕ್ಕೂ ಬೆರಳುಗಳಿಂದ ಚೆಂಡನ್ನು ಆವರಿಸುವ ಶೈಲಿಯಂತೇ) ಹಿಡಿಯುವ ಪರಿ, ಆಣಿಯ ಮೊನೆಯನ್ನು ನಾಲಿಗೆಗೆ ಮುಟ್ಟಿಸಿ ಗುರಿ ಕಾಯಿಸಿ ಬಿಡುವ ಶೈಲಿ, ಪ್ರತಿ ಹೆಜ್ಜೆಯಲ್ಲೂ ಅಮಿತ ಪರಿಣತಿ ಇರುತ್ತದೆ. ಸವಕಳಿಯಲ್ಲಿ ಸುಂಗೆದ್ದ ಚಾಟಿಗೇ ಕೆಲವೊಮ್ಮೆ ಬುಗುರಿ ತೊಡರಿ, ‘ಸರ್ಕೆಂದು ಬರುವ ಮರುಹೊಡೆತ (ಬೂಮ್ ರ್ಯಾಂಗಿನ ಹಾಗೇ) ಬಲು ಅಪಾಯಕಾರಿ. (ಇದರಲ್ಲಿ ಕಣ್ಣೋ ಹಲ್ಲೋ ಜಖಂಗೊಂಡವರ ಕತೆಗಳನ್ನೂ ಕೇಳಿದ್ದೇನೆ! ಶಾಲೆಯಲ್ಲಿ ಕೆಲವೊಮ್ಮೆ ಮಾಷ್ಟ್ರುಗಳು ಹುಡುಗರ ಕಿಸೆ, ಚೀಲ ತನಿಖೆ ಮಾಡಿ, ನಿಷೇಧಿತ ಬಾಂಬಿನಂತೆ ಬುಗುರಿ ವಶಪಡಿಸಿಕೊಳ್ಳುತ್ತಿದ್ದುದೂ ಉಂಟು!). ಇನ್ನು ಸುತ್ತಿದ ಚಾಟಿ ಸಡಿಲಾಗಿಯೋ ಬುಗುರಿಯ ಮೈ ನುಣುಪಾಗಿಯೋ ಬೀಸಿನ ವರಿಸೆ ತಪ್ಪಿಯೋ (ನೋ ಬಾಲ್?) ತಿರುಗದ ಬುಗುರಿ ಎಸೆದು ಹೋಗುವುದೂ ಇತ್ತು.

ಬುಗುರಿಯಾಟಕ್ಕೆ ಮಣ್ಣಿನ ಅಂಕಣ ಯಾವತ್ತೂ ಸಿಗುತ್ತಿರಲಿಲ್ಲ. ಆಗಂತೂ ನಡುನಡುವೆ ಆಡುವವರ ದಾಳಿಯ ಶೈಲಿಯನುಸರಿಸಿ ಮೊಳೆ ಒಳಗೆ ಸೇರಿ ಗಿಡ್ಡವಾಗುತ್ತ ಬರುವುದಿತ್ತು. ಅಂಥವರುಟೈಂಪೀಸ್’ (= time please?) ಕೇಳಿಕೊಂಡು, ಅಲ್ಲಲ್ಲೇ ಅವಸರವಸರವಾಗಿ ಪುಟ್ಟಪಥದ ಕಲ್ಲಿನ ಇರುಕಿಗೆ ಆಣಿ ಸಿಲುಕಿಸಿ ತೆಗೆದು, ತೂತಕ್ಕೆ ಹೊಸದಾಗಿ ಬೆಂಕಿಕಡ್ಡಿ ಮೋಟು ತುರುಕಿ ಮತ್ತೆ ಮೊಳೆ ಜಡಿದು, ಮೊನೆ ಸರಿ ಮಾಡಿ ದಾಳಿಗಿಳಿಯುವ ಪರಿ ನೆನೆಸಿಕೊಳ್ಳುವಾಗ, “ಮುರಿಯಲಾಗದು ಶಸ್ತ್ರಧಾರಾ ಪರಮತೀರ್ಥಸ್ನಾನಎಂದ ಕೇವಲ ಚಂಡಿಯುಟ್ಟು ಬರೆದ ಕುಮಾರವ್ಯಾಸನೂ ಬಾಲ್ಯದಲ್ಲಿ ಬುಗುರಿಯಾಡಿದವನೇ ಇರಬೇಕು ಅನಿಸುತ್ತದೆ!

ಆಟದ ಬಿರುಸಿನಲ್ಲಿ ಎಷ್ಟೋ ಬಾರಿ ನಮ್ಮ ಬುಗುರಿಗಳು ಮಳೆನೀರ ಗಂಡಿಗಳ ಮೂಲಕ ಮೋರಿಗಳ ಕತ್ತಲಕೂಪಕ್ಕೆ ಸಂದು ಹೋಗುತ್ತಿತ್ತು. ಈ ಗಂಡಿಬಾಯಿಗಳಾದರೋ ಪರೋಕ್ಷ ಕಸತೊಟ್ಟಿಯೇ ಆಗಿರುತ್ತಿದ್ದುವು. ಆಸುಪಾಸಿನ ಮನೆಗಳು ಉಳದದ್ದು ಕೊಳತದ್ದು ಬರುತ್ತಿದ್ದದ್ದು ಈ ಗಂಡಿಬಾಯಿಗೇ. ಸೋರುಮೂಗಿನವರು ಇಲ್ಲೇ ಒಮ್ಮೆಗೆ ಒಣ ಉಸಿರು ತೆಗೆದಿರಬೇಕು ಎನ್ನುವುದಕ್ಕೆ ಒತ್ತಿನ ಲೈಟ್ ಕಂಬವೂ ಸಾಕ್ಷಿ ಹೇಳುತ್ತಿತ್ತು. ಪ್ರಜ್ಞಾವಂತ ಉಗುಳುಪ್ರಿಯರು ನಾಭೀಮೂಲದಿಂದ ಹೂಂಕರಿಸಿ ವರ್ಣಮಯ ಶ್ಲೇಷ್ಮ ಚೆಲ್ಲುವುದೂ ಅಲ್ಲೇ. ಅಂಥಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಕೋಲೋ ಕೊಡೆಯೋ ಹಿಡಿದು ಕಣ್ಣು ಚೂಪು ಮಾಡಿ ಬುಗುರಿ ಎಳೆಯುವ ಪ್ರಯತ್ನ ನಾವು ಮಾಡಹೊರಟರೆ ನಮ್ಮ ಹಿಂದಿನ ಮೂರು ತಲೆಮಾರೆಲ್ಲಾ ನರಕಕ್ಕೆ ಬಿದ್ದುಹೋದೀತು. ಆಗ ನಮಗೆ ನೆನಪಾಗುತ್ತಿದ್ದವನೂ ರೌಡಿರುದ್ರನೇ.

ಹನುಮಂತನಗರದ ವಲಯದಲ್ಲಿ ನಮ್ಮ ದಿಗಂತಕ್ಕೆ (ಬಹಳ ದೊಡ್ಡದೇನಲ್ಲ) ಸಿಗುತ್ತಿದ್ದ ಮೂರು ಎತ್ತರದ ಸ್ಥಳಗಳು - ಬಸವನಗುಡಿ ಅಥವಾ ಬ್ಯೂಗಲ್ ರಾಕ್, ನರಹರಿಬೆಟ್ಟ ಮತ್ತು ಹನುಮಂತನ ಗುಡ್ಡ. ಬಸವನ ಗುಡಿ ಅಥವಾ ಅದಕ್ಕೆ ಸಂಬಂಧಪಟ್ಟ ಕಳ್ಳೇಕಾಯಿ ಪರಿಸೆ (ವರ್ಷಾವಧಿ ಜಾತ್ರೆ ಅನ್ನಿ) ನನಗೇನೂ ಆಕರ್ಷಣೆ ಮೂಡಿಸಿರಲಿಲ್ಲ. ಉಳಿದ ಕಾಲಗಳಲ್ಲಿ ಅಲ್ಲಿನ ಪುಡಿ ಬಂಡೆಗಳು ಮತ್ತು ಹನುಮಂತನ ಗುಡ್ಡೆಯ ಬಂಡೆಗಳ ಮೇಲೇರಿ ಓಡಾಡುವುದು, ನನ್ನೊಳಗಿನ ಟಾರ್ಜಾನ್, ಫ್ಯಾಂಟಮ್ಗಳಿಗೆ ತುಂಬಾ ತೃಪ್ತಿ ತರುತ್ತಿತ್ತು. ಆದರೆ, ಅಲ್ಲೂ ನನ್ನನ್ನು ಆಂತರ್ಯದಲ್ಲಿ ಕಾಡುತ್ತಿದ್ದ ಭಯ ರೌಡಿರುದ್ರನದ್ದೇ! ವಾಸ್ತವದಲ್ಲವನು ಹೆಚ್ಚು ಕಡಿಮೆ ನನ್ನ ಸಮಪ್ರಾಯದ, ಆದರೆ ದೇಹಗಾತ್ರದಲ್ಲಿ ನನ್ನ ಭುಜಕ್ಕೂ ಬಾರದ ಒಣಕಲ ಪೋರ (ಬೆಳೆದವರ ಭಾಷೆಯಲ್ಲಿ ಮಾತ್ರ ರೌಡಿ). ಹನುಮಂತನಗರದ ಒತ್ತಿನ ಸುಂಕೇನಹಳ್ಳಿಯ ಚಿಲ್ರೆ ಸೌದೆ ಡಿಪೋ-ಮನೆಯ ಸದಸ್ಯ ಈ ರುದ್ರ; ದಾರಿದ್ರ್ಯ, ಅವಿದ್ಯಾವಂತಿಕೆ, ಸರಿಯಾಗಿ ಹೇಳಿಕೇಳುವವರಿಲ್ಲದ ಅವ್ಯವಸ್ಥೆಗಳ ಮೂರ್ತರೂಪ. ಎಣ್ಣೆ ಕತ್ತರಿ ಮತ್ತು ಬಾಚಣಿಗೆ ಕಾಣದ ಕೂದಲು, ನೀರು ಸೋಪೂ ಮುಟ್ಟದ ಮೈ, ‘ಮರ್ಯಾದಸ್ತರ ಲೆಕ್ಕದಲ್ಲಿ ಬಟ್ಟೆಯೇ ಅಲ್ಲದ/ ಇಲ್ಲದ ಉಡುಪು. ಆದರೂ ಬಾಲ ಬಯಕೆಯಲ್ಲಿಬದುಕುವ ಛಲದಲ್ಲಿ ಅವನಿಗೆ ಭಂಡತನವೇ ಬಂಡವಾಳ. (ಸರಿ ತಿಂದು ತಿದ್ದಿ ಬೆಳೆದ, ಆಡುಮಾತಿನಲ್ಲಿ ಹೇಳುವುದಾದರೆ ಅವನ ಎರಡರಷ್ಟಿದ್ದ ನನ್ನಂತವರಿಗೆ ಪುಕ್ಕುತನವೇ ಕಡಿವಾಣ!) ನಾವು ಐದು ಪೈಸೆ ತೋರಿದರೆ ಆತ ನಿರ್ಯೋಚನೆಯಿಂದ ಮಳೆನೀರ ಗಂಡಿಯೊಳಗೆ ದೇಹ ತೂರಿಸಿ ಬುಗುರಿ ಎತ್ತಿ ಕೊಡುತ್ತಿದ್ದ. ಆದರೆ ಅಕಸ್ಮಾತ್ ಅದು, ಅಥವಾ ಇನ್ನೆಂದಾದರೂ ನಮ್ಮ ಇನ್ಯಾವುದೇ ಚಿಲ್ಲರೆ ಆಟದ ಸಾಮಾನುಗಳು ಅವನಿಗೇ ಬೇಕನ್ನಿಸಿಬಿಟ್ಟರೆ ಮಾತ್ರ ನಾವು ಉದಾರಿಗಳಾಗುವುದು ಕಡ್ಡಾಯವಾಗುತ್ತಿತ್ತು! ಸೂತ್ರಹರಿದು ಪಟ ಗೋತಾ ಹೊಡೆದಂತೆ, ಹಿಂಪೆಟ್ಟಿಗೆ ನಮ್ಮ ಬುಗುರಿಯೇ ಹೋಳಾಗಿಬಿದ್ದಂತೆ, ಬೌಂಡ್ರಿ ನಿರೀಕ್ಷೆಯ ಟೆನಿಸ್ ಚೆಂಡು ಸಿಟಿಬಸ್ಸಿನ ಟೈರಡಿಗೆ ಸಿಕ್ಕಂತೆ ಎಲ್ಲ ರುದ್ರಂ ಸಮರ್ಪಯಾಮೀ!!

ಶ್ರೀ ರಾಮಕೃಷ್ಣ ಆಶ್ರಮ

ಶ್ರೀರಾಮಕೃಷ್ಣಾಶ್ರಮ ತನ್ನ ಶಾಖೆ ಹೊಂದಿದ ಊರೂರುಗಳಲ್ಲಿ ಸಾರ್ವಜನಿಕದಲ್ಲಿ ಅಧ್ಯಾತ್ಮಿಕ ಜಾಗೃತಿಯೊಡನೆ ವಿಭಿನ್ನ ಸಾಮಾಜಿಕ ಹೊಣೆಗಾರಿಕೆಗಳನ್ನೂ ನಿಭಾಯಿಸುತ್ತದೆ ಎನ್ನುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಹಾಗೆ ಬೆಂಗಳೂರಿನ ಶಾಖೆ ಬೇರೆ ಬೇರೆ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ತನ್ನದೇ ಶಿಸ್ತಿನಲ್ಲಿ ಊಟವಸತಿಯ (ಉಚಿತವಲ್ಲ, ನ್ಯಾಯಯುತವಾದ ಶುಲ್ಕದಲ್ಲೇ) ವ್ಯವಸ್ಥೆಯನ್ನು ಆದ್ಯತೆಯಲ್ಲೇ ನಿರ್ವಹಿಸುತ್ತದೆ. ಆದರೆ ನಗರದ ಗಾತ್ರಾನುಗುಣವಾಗಿಯೋ ಏನೋ ಮಠ ಕೇಂದ್ರವಾದ ಆಧ್ಯಾತ್ಮಿಕ ಜಾಗೃತಿಯನ್ನು ಸ್ವಲ್ಪ ದೊಡ್ಡದೇ ಮಟ್ಟದಲ್ಲಿ ನಿರ್ವಹಿಸುತ್ತದೆ. ಸಾರ್ವಜನಿಕ ನೆಲೆಯಲ್ಲಿ ಧ್ಯಾನ, ಭಜನೆ, ಸರ್ವಧರ್ಮ ಸಮಭಾವದ ಹಬ್ಬಗಳಾಚರಣೆ, ಪ್ರವಚನಗಳು, ಪುಸ್ತಕ ಮಾರಾಟ ಮುಂತಾದವುಗಳನ್ನು ತನ್ನದೇ ಶಿಸ್ತಿನಲ್ಲಿ ನಡೆಸುತ್ತದೆ. ಅದಕ್ಕೆ ಪೂರಕವಾಗಿ (ಮುಖ್ಯವಾಗಿ) ಪ್ರೌಢಶಾಲಾ ಮಟ್ಟದ ಬಾಲಕರನ್ನೂ ಒಳಗೊಳ್ಳುವಂತೆ ಎರಡು ವಿಧದ ವಿವೇಕಾನಂದ ಬಾಲಕ ಸಂಘವನ್ನು ನಡೆಸುತ್ತಿತ್ತು. ಒಂದು ದೈನಂದಿನ ಸಂಜೆ ಕೂಟದ್ದಾದರೆ ಇನ್ನೊಂದು ವಾರಾಂತ್ಯಗಳಲ್ಲಿ ಪೂರ್ವಾಹ್ನದ ಕೂಟವಾಗಿತ್ತು. ನಾನು ಅದರ ವಾರಾಂತ್ಯದ ಕೂಟದ ಸದಸ್ಯನಾಗಿದ್ದೆ. (ನನಗಿಂತ ಎರಡೋ ಮೂರೋ ವರ್ಷ ಹಿರಿಯ ಮತ್ತು ದೈನಂದಿನ ಸಂಘದ ಸದಸ್ಯರಾಗಿ ಬೆಳೆದು ಬಂದವರು ಇಂದಿನ ಬಿಳಿಗಿರಿ ರಂಗನ ಬೆಟ್ಟದ ಖ್ಯಾತಿಯ ಮ್ಯಾಗ್ಸೇಸೇ ಪುರಸ್ಕೃತ ಡಾ| ಸುದರ್ಶನ್.)

ಆದಿತ್ಯವಾರದ ಬಳಗದಲ್ಲಿದ್ದ ಐವತ್ತರವತ್ತು ಮಂದಿಯಲ್ಲಿ ನಾಲ್ಕೈದು ತುಕಡಿಗಳನ್ನು ಮಾಡಿ ವ್ಯಾಯಾಮ, ಸೇವೆ, ಆಟ, ಭಜನೆ, ಅಧ್ಯಾತ್ಮಿಕ ವಿಚಾರ ಮುಂತಾದವುಗಳನ್ನು ಪ್ರಾಥಮಿಕ ಮಟ್ಟದಲ್ಲಿ ಪ್ರೀತಿಯಿಂದ ಪ್ರಸರಿಸುತ್ತಿದ್ದರು. ಇಲ್ಲಿ ನಾನು ವಾಲಿಬಾಲ್, ಬಾಸ್ಕೆಟ್ ಬಾಲ್, ಕಬಡ್ಡಿ, ಕೊಕ್ಕೋಗಳನ್ನು ಕಲಿತು ಮನದಣಿಯೆ ಆಡಿದ್ದೇನೆ. ನಾನು ಎಂದೂ ಹಾಡುಗಾರನಲ್ಲ. ಆದರೆ ಇಂದೂ ನಾನು ಖಾಸಾ ಲಹರಿಯಲ್ಲಿ ಸಾಕಷ್ಟು ಗಟ್ಟಿಯಾಗಿಯೇ ಗುನುಗಿಕೊಳ್ಳುವ ಬಹುತೇಕ ದಾಸರ ಪದಗಳು ಮತ್ತು ಇತರ ಭಾರತೀಯ ಸಂತರುಗಳ ಮನದುಂಬುವ ಭಕ್ತಿ ಸಂಗೀತದ ಅಡಿಪಾಯ ಆಶ್ರಮದ್ದೇ. ನನಗೆ ವೇದೋಪನಿಷತ್ತಾದಿ ಭಾರತೀಯ ಧರ್ಮಶಾಸ್ತ್ರಗಳ ಪ್ರಾಥಮಿಕ ಪರಿಚಯ (ಇಂದು ನನಗೆ ಬರುವ ಎಷ್ಟೋ ಶಾಂತಿಮಂತ್ರಗಳನ್ನು ಸ್ವರ ಮತ್ತು ಅರ್ಥ ಸಹಿತ ರೂಢಿಸಿದ್ದೇ ರಾಮಕೃಷ್ಣಾಶ್ರಮ) ನೀಡಿದ್ದೇ ವಿವೇಕಾನಂದ ಬಾಲಕ ಸಂಘ. ಆಶ್ರಮದ ಒಳಗಿನ ದಾರಿ, ಸಾರ್ವಜನಿಕರ ಓಡಾಟದ ವಠಾರಗಳ ಕಸಗುಡಿಸುವುದು, ಪ್ರಾರ್ಥನ ಮತ್ತು ಪ್ರವಚನ ಮಂದಿರಗಳದ್ದು ನೆಲ ಬಳಿಯುವುದೂ ನಮಗಲ್ಲಿ ಗೌರವದ ಕಾಯಕವಾಗಿ ರೂಢಿಸಿತು. ಇನ್ನು ವಿಶೇಷ ದಿನಗಳಲ್ಲಿ ನಮ್ಮ ಸಮಯಾನುಕೂಲ ನೋಡಿಕೊಂಡು ಹೆಚ್ಚುವರಿ ಸ್ವಯಂಸೇವಕರಾಗಿ ಎಲ್ಲಾ ಬಗೆಯ ನಿಜ ಕೆಲಸಗಳನ್ನು ಮಾಡುವಲ್ಲಿ ಆಶ್ರಮ ನಮಗೆ ಮುಕ್ತವಾಗಿ ಮತ್ತು ಪ್ರೀತಿಯಿಂದ ಅವಕಾಶ ಕೊಡುತ್ತಲೇ ಇತ್ತು. (ಎರಡು ವಿಸ್ತರಣೆ: ಈಚಿನ ದಿನಗಳಲ್ಲಿ ಬಹುತೇಕ ಸ್ವಯಂಸೇವೆ ನಡೆಯುವುದೇ ಸ್ವ-ಪ್ರದರ್ಶನಕ್ಕಾಗಿ ಎಂಬಂತಾಗಿದೆ. ಹಾಗಾಗಿ ನಾನು ನಿಜ ಕೆಲಸಗಳನ್ನು ಎಂದು ಒತ್ತಿ ಹೇಳಿದ್ದೇನೆ. ಇನ್ನೊಂದು ಮುಖ್ಯ ವಿಚಾರ, ಬಾಲಕ ಸಂಘದ ಸೇವೆಗಳು ಎಂದೂ ಆಶ್ರಮದಹಣ ಉಳಿತಾಯದಯೋಜನೆಗಳಾಗಿ ನಮಗೆ ಕಾಣಿಸಿದ್ದೇ ಇಲ್ಲ. ನಮ್ಮ ಕಾಯಕದ ಕೊರತೆಯಿಂದ ಅಲ್ಲಿನ ಯಾವುದೇ ಕೆಲಸಗಳು ವಿಳಂಬಿಸಿದ್ದಾಗಲೀ ನಿಂತದ್ದಾಗಲೀ ನನಗೆ ತಿಳಿದಿಲ್ಲ.) ಈ ಹೆಚ್ಚುವರಿ ಕಾಯಕದಲ್ಲಿ ನಾನು ಆಶ್ರಮದ ಪುಸ್ತಕ ಮಳಿಗೆಯೊಡನೆ ಬೆಳೆಸಿಕೊಂಡ ಸಂಬಂಧ ಮುಂದೆ ಮೂವತ್ತಾರು ವರ್ಷಗಳುದ್ದಕ್ಕೆ, ನಾನು ವೃತ್ತಿ ಪುಸ್ತಕ ವ್ಯಾಪಾರಿಯಾಗಿ ನಿಂತಾಗ ಮತ್ತೆ ಮತ್ತೆ ಮಧುರ ನೆನಪಾಗಿ ಉಲ್ಲೇಖಕ್ಕೊದಗುತ್ತಿತ್ತು. ಇಂದು ನಾನು ದೇವಶ್ರದ್ಧೆ, ತತ್ವಶಾಸ್ತ್ರಗಳ ಆಳ, ಸಮಾಜ ಸೇವೆಯ ವಿಸ್ತಾರ ಮೊದಲಾದವುಗಳಲ್ಲಿ ಖಂಡಿತಾ ಇಲ್ಲ. ಆದರೆ ನನ್ನೆಲ್ಲ ಕೆಲಸಗಳಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ವಿವೇಕಾನಂದ ಬಾಲಕ ಸಂಘದ ಸತ್ಪ್ರಭಾವ ನಿಸ್ಸಂದೇಹವಾಗಿದೆ.

ಹನುಮಂತನ ಗುಡ್ಡದಿಂದ ಹೊರಟ ನಾವಿಬ್ಬರು ದಾರಿಯಲ್ಲೇ ಸಿಗುವ ಶ್ರೀರಾಮಕೃಷ್ಣಾಶ್ರದ ವಠಾರವನ್ನು ಸುಮಾರು ಅರ್ಧ ಮುಕ್ಕಾಲು ಗಂಟೆ ಬಲು ಪ್ರೀತಿಯಿಂದ ಸುತ್ತು ಹಾಕಿ ಮನೆ ಸೇರಿದೆವು.

ಭೂಮಿಯಷ್ಟೇ ಅಲ್ಲ, ಬೆಂಗಳೂರೂ ಉರುಟಾಗಿದೆ!

ಬೆಂಗಳೂರು ಭೇಟಿಯ ಕೊನೆಯಲ್ಲಿ ನಾವು ಹಾಗೇ ಬೈಕೇರಿ ನಾಲ್ಕೈದು ದಿನಗಳ ಮಟ್ಟಿಗೆ ಸ್ವಲ್ಪ ಹೊರರಾಜ್ಯಗಳಲ್ಲಿ ಸುತ್ತಬೇಕೆಂದೂ ಯೋಚಿಸಿದ್ದೆವು. ಅದಕ್ಕೆ ನನಗೆ ಬಲವತ್ತರವಾಗಿ ಆಕರ್ಷಿಸಿದ ಸ್ಥಳ - ಆಶ್ಚರ್ಯಪಡಬೇಡಿ, ತಿರುಪತಿ! ೧೯೬೨-೬೫ರ ದಿನಗಳಲ್ಲಿ (ನಾನು ಐದಾರನೇ ತರಗತಿಯಲ್ಲಿದ್ದಿರಬೇಕು) ನಮ್ಮ ಕುಟುಂಬ ಬಳ್ಳಾರಿಯಲ್ಲಿತ್ತು. ನನ್ನ ತಂದೆ ವೃತ್ತಿ ನಿಮಿತ್ತ ಅನಿವಾರ್ಯತೆಯಲ್ಲಿ ಸ್ವಲ್ಪ ಊರು ಸುತ್ತಿದ್ದಿದೆ. ಆದರೆ ಬಯಸಿ, ಪ್ರವಾಸ ಅಥವಾ ಕುಟುಂಬದೊಡನೆ ಸುತ್ತಾಟ ಎನ್ನುವುದನ್ನು ಎಂದೂ ಇಷ್ಟಪಟ್ಟವರೇ ಅಲ್ಲ. ಅದೂ ತೀರ್ಥಯಾತ್ರೆ, ಅವರ ಪಟ್ಟಿಯಲ್ಲಿ ಇರುವುದು ಸಾಧ್ಯವೇ ಇರಲಿಲ್ಲ. ಆದರೂ ಏನು ಪ್ರೇರಣೆಯೋ ಏನು ಒತ್ತಾಯವೋ ತಿಳಿದಿಲ್ಲ. ಬಳ್ಳಾರಿಯಿಂದ ನಮ್ಮನ್ನೆಲ್ಲ ಕೂಡಿಕೊಂಡು ತಿರುಪತಿ ಪ್ರವಾಸ ನಡೆಸಿದ್ದರು. ಅಲ್ಲಿದ್ದ ಒಂದೆರಡು ದಿನಕ್ಕೆ ಪೂರ್ವ ನಿಗದಿಯಾಗಿದ್ದ ಸಣ್ಣ ಮನೆ (ಡಾರ್ಮಿಟರಿ), ಬಿಸಿನೀರ ವ್ಯವಸ್ಥೆ ಸಿಗದೆ ಅಲ್ಲಿ ತಣ್ಣೀರು ಮಿಂದು ಮರಗಟ್ಟಿದಂತಾದದ್ದು, ಲಡ್ಡುಪ್ರಸಾದಕ್ಕೆ ಪಡೆಯುವಲ್ಲಿ ನೂಕುನುಗ್ಗಲಾದದ್ದು, ದೇವಳದ ಕೆರೆ ಕೊಚ್ಚೆ ಗುಂಡಿಯಂತೆ ಇದ್ದದ್ದು, ಪಾಪನಾಶಿನಿ ಜಲಪಾತದ ಬಳಿ ಹೋದದ್ದು ಹೀಗೆ ಅಸಂಬದ್ಧ ನೆನಪಿನ ತುಣುಕುಗಳಷ್ಟೇ ನನ್ನಲ್ಲಿತ್ತು.

ತಿರುಗಾಟ ನನಗಂತೂ ಪ್ರಿಯ ಹವ್ಯಾಸ. ಹಾಗೇ ನನ್ನ ವೃತ್ತಿ-ಹವ್ಯಾಸಗಳ ದಿನಗಳಲ್ಲಿ ಎಷ್ಟೂ ತಿರುಪತಿ ಯಾತ್ರಾ ವಿವರಗಳನ್ನು ಕೇಳುತ್ತಿದ್ದೆ. ನಾವು ಯೋಚಿಸಿಯೇ ಎರಡು ಬಾರಿ ಭಾರತವನ್ನು ಬೈಕಿನಲ್ಲಿ ಸುತ್ತಿಯೂ ಬಂದೆವು. ಆದರೆ ಎಂದೂ ಮನಸ್ಸಿನಲ್ಲಿ ತೀರಾ ಮಸುಕಾಗಿದ್ದ ತಿರುಪತಿ ಚಿತ್ರವನ್ನು ಶುದ್ಧಗೊಳಿಸಬೇಕು ಎಂದು ಅನಿಸಿದ್ದೇ ಇಲ್ಲ. ಆದರೆ ಈಚೆಗೆ ಮೊದಲು ಗೆಳೆಯ ಕೆ. ಎಲ್ ರೆಡ್ಡಿ, ಮೊನ್ನೆ ಮೊನ್ನೆ ತಮ್ಮ ಅನಂತನೂ ಕುಟುಂಬ ಸಮೇತರಾಗಿ ತಿರುಪತಿಗೆ ಹೋಗಿ ಬಂದು ಕಥಿಸುವಾಗ (ರುಕ್ಮಿಣಿಯ ಪ್ರವಾಸಕಥನಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿಯಾಕೋ ಅಲ್ಲಿ ನಾನೂ ನೋಡುವಂತದ್ದಿದೆ ಎಂದನ್ನಿಸಿತು. ನಮ್ಮದೇ ಊರಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿಯ ಕೃಷ್ಣ ಮಂದಿರ, ಕಟೀಲೇ ಮೊದಲಾದ ಕ್ಷೇತ್ರಗಳನ್ನು ನೋಡಿದ ಅನುಭವದಲ್ಲಿ ತಿರುಪತಿಯ ಪ್ರಾಕೃತಿಕ ಸ್ಥಿತಿ ಮತ್ತು ಅಭಿವೃದ್ಧಿಯ ಗತಿ ನೋಡಲೇಬೇಕೆಂಬ ಕುತೂಹಲ ಬೆಳೆಯಿತು. ನಾವು ಬೆಂಗಳೂರಿನಲ್ಲಿದ್ದ ಮೂರನೇ ದಿನ ನಾವು ಅಭಯ ರಶ್ಮಿಯರಿಗೆ ಕನಿಷ್ಠ ನಾಲ್ಕು ದಿನಕ್ಕೆ ವಿದಾಯ ಹೇಳಿ, “ದಾರಿಯಾವುದಯ್ಯಾ ವೈಕುಂಠಕೇಎಂದು ರಾಗ ತೆಗೆಯುತ್ತ ತಿಮ್ಮಪ್ಪನೂರಿಗೆ ಬೈಕು ಹೊರಡಿಸಿದೆವು.

ಹೀರೋಹೊಂಡಾ ಸ್ಪ್ಲೆಂಡರ್ ಗಾಡಿಯೇನೋ ಸ್ಪ್ಲೆಂಡಿಡ್ಡೇ. ಆದರೆ ಅಭಯ ಅದಕ್ಕೆ ವ್ಯಕ್ತಿಸವಾರಿಯನ್ನು ಮೀರಿದ ಯಾವ ಸೌಲಭ್ಯಗಳನ್ನು ಅಳವಡಿಸಿರಲಿಲ್ಲ. ಅದೇ ನನ್ನ ಭಾರತ ಓಟದಂದು ಇದೇ ಜಾತಿಯ ಸಿಡಿ ೧೦೦ ಗಾಡಿಗೆ ಎಷ್ಟೆಲ್ಲ ಹೊಂದಿಸಿದ್ದೆ ನೋಡಿ. ಟ್ಯಾಂಕಿನ ಇಕ್ಕೆಲಗಳಲ್ಲಿ ಸ್ಯಾಡಲ್ ಬ್ಯಾಗ್ ಮತ್ತು ಮೇಲೆ ತುರ್ತು ಕಾಗದ ಪತ್ರಗಳನ್ನಷ್ಟೇ ಇಡುವ ಸಂಚಿ. ಹಿಂದಿನ ಚಕ್ರದ ಎರಡೂ ಬದಿಗೆ ದೊಡ್ಡ ಬಲವಾದ ಡಬ್ಬಿಗಳು. ಕೊನೆಯಲ್ಲಿ ಬೈಕಿನಲ್ಲೇ ಸೇರಿ ಬಂದ ಹಿಡಿಕೆ ಹಾಗೂ ಏಳೆಂಟಿಂಚು ಅಳತೆಯ ಕ್ಯಾರಿಯರ್ ಮೇಲೂ ಅಪರಿಮಿತ ಹೊರೆಯಿಟ್ಟು ಕಟ್ಟುವ ವ್ಯವಸ್ಥೆ. ನಮ್ಮ ತಿರುಪತಿ ಯಾತ್ರೆ ನಾಲ್ಕು ದಿನಗಳ ಅಂದಾಜಿನದ್ದಾದ್ದರಿಂದ ಇಬ್ಬರ ಆವಶ್ಯಕತೆಗಳು ಎಷ್ಟು ಕಡಿಮೆಯೆಂದರೂ ದೊಡ್ಡ ಬೆನ್ನುಚೀಲ ಒಂದರಲ್ಲಿ ತುಂಬಿತ್ತು. ಅದನ್ನು ಹಿಂದೆ ಕಟ್ಟಲು ಕ್ಯಾರಿಯರಿಲ್ಲ, ಮುಂದೆ ನನ್ನ ಭುಜದಾಸರೆಯೊಡನೆ ಟ್ಯಾಂಕಿನ ಮೇಲೆ ಹೇರಲು ಗಾತ್ರ ದೊಡ್ಡದು ಎಂಬ ಅನಾನುಕೂಲ. ಅದರ ಗಾತ್ರ ಇಬ್ಬರ ನಡುವೆ ಮಕ್ಕಳನ್ನು ಇರುಕಿಸಿದಂತೆ ಹೊಂದಿಸಲೂ ಒಡ್ಡಿಕೊಳ್ಳಲಿಲ್ಲ. ಅನಿವಾರ್ಯವಾಗಿ ಸಹವಾರಿ - ದೇವಕಿ ಭುಜಕ್ಕೇನೋ ಹಾಕಿಕೊಂಡಳು. ಆದರೆ ಗಮನಿಸಿ ಬೈಕಿನ ಹಿಂದಿನ ಹಿಡಿಕೆಯ ಸಣ್ಣ ಆಧಾರ ಬಿಟ್ಟರೆ ದೇವಕಿಗಿದು ಪ್ರಯಾಣದುದ್ದಕ್ಕೂ ಕನಿಷ್ಠ ಅರೆವಾಸಿಯಾದರೂ ಹೊತ್ತೇ ಕುಳಿತ ಅನುಭವ. ಮತ್ತು ಅದು ಬೈಕಿಗೆ ನೇರ ಬಿಗಿಯದ ಹೊರೆಯಾದ್ದರಿಂದ ಸವಾರಿಯ ಓಲಾಟಗಳಲ್ಲಿ ಪ್ರತ್ಯೇಕ ಅಸ್ತಿತ್ವವನ್ನು ಸಾರಿ ಎಚ್ಚರಿಸುತ್ತಿತ್ತು. ವೇಗತಡೆಯ ಭಾರೀ ದಿಬ್ಬವನ್ನು ತುಸು ವೇಗದಲ್ಲಿ ಏರಿಸಿದರೂ ಎದುರು ಚಕ್ರ ನೆಲ ಬಿಟ್ಟೇಳುವ (ವ್ಹೀಲೀ) ಮತ್ತು ಸಂದುಗೊಂದುಗಳಲ್ಲಿ ಚುರುಕಿನ ತಿರುವುಗಳನ್ನು ತೆಗೆದದ್ದೇ ಆದರೆ ಸವಾರನಿಗೆ ಅನಿಯಂತ್ರಿತ ಓಲಾಟ (ವೋಬ್ಲಿಂಗ್) ಕೊಡುವ ಅಪಾಯ ಇದ್ದೇ ಇತ್ತು.

ಹೊಸಕೋಟೆ - ಚಿತ್ತೂರು - ತಿರುಪತಿ ಮುಖ್ಯವಾಗಿ ಕಾಣಿಸುವ ಗೂಗಲ್ ನಕ್ಷೆ ನಮ್ಮ ಬಳಿ ಇತ್ತು. ಅಭಯ ಮುಂದುವರಿದು ಆರೇಳು ಪುಟಗಳ ಮಾರ್ಗಸೂಚಕ ಟಿಪ್ಪಣಿಗಳನ್ನೂ ಮುದ್ರಿಸಿ ಕೊಟ್ಟಿದ್ದ. ಎಲ್ಲಕ್ಕೂ ಮುಖ್ಯವಾಗಿ ಮೂಲದಲ್ಲಿ ನಾವು  ಉತ್ತರಳ್ಳಿ, ಬನಶಂಕರಿಯೆಡೆಗಿನ ಮುಖ್ಯ ದಾರಿಗಳಲ್ಲಿ ಹಾಯ್ದು ಔಟರ್ ರಿಂಗ್ ರೋಡ್ ಸೇರಿದರೆ ಸುಲೂಭಎಂದು ಬಾಯ್ದೆರೆ ಸೂಚನೆಯನ್ನೂ ಕೊಟ್ಟುಬಿಟ್ಟ. ಈ ಬಾರಿಯ ನಮ್ಮ ಓಡಾಟದ ಒಟ್ಟಾರೆ ಧೋರಣೆಗನುಗುಣವಾಗಿ ಬೆಳಿಗ್ಗೆ ಆರಾಮವಾಗಿಯೇ  ಎಂಟೂವರೆಗೆ ಮನೆ ಬಿಟ್ಟೆವು. ಆದರೆ ಇಲ್ಲೇ ನಾವು ತಪ್ಪಿದ್ದೆವು. ಬೆಂಗಳೂರಿನಲ್ಲಿ ಹತ್ತೂವರೆ ಹನ್ನೊಂದು ಗಂಟೆಗೆ ಶಾಲೆ, ಕಛೇರಿ ತೆರೆಯುವುದಿರಬಹುದು. ಆದರೆ ಬಹುತೇಕ ಮಂದಿಅಭಿವೃದ್ಧಿಯ ಸಂಕಟಗಳೊಡನೆ ಏಗಿಕೊಂಡು ಹತ್ತಿಪ್ಪತ್ತು ಕಿಮೀ ಪಯಣಿಸುವ ಸಂಕಟಕ್ಕೆ ಸಾಕಷ್ಟು ಮುಂಚೆಯೇ ದಾರಿ ತುಂಬಿಬಿಟ್ಟಿದ್ದರು. ನಾವು ಮೊದಲ ಹತ್ತು ಕಿಮೀ ಪಯಣಿಸಲು ಒಂದು ಗಂಟೆ ವ್ಯಯಿಸಿದ್ದೆವು. ಮುಂದುವರಿದಂತೆ ಭಾರೀ ಹೆದ್ದಾರಿಯೇನೋ ಸಿಕ್ಕಿತು. ಆದರೆ ವೈವಿಧ್ಯಮಯ ನೇಲು ಸೇತುವೆ, ಕೆಳಜಾಡು, ಮೇಲು ಸೇತುವೆಗಳ ಓಟದಲ್ಲಿ ವಾಹನಗಳದ್ದೇ ಸಾಮ್ರಾಜ್ಯ. ಸಾಂಪ್ರದಾಯಿಕ ದಾರಿ ಬದಿಯ ಜನ, ಅಂಗಡಿ, ಸಣ್ಣ ಪುಟ್ಟ ಬೋರ್ಡು, ಸೂಚನೆ ಇರಲೇ ಇಲ್ಲ. ಆಗೀಗ ಸಿಗುವ ಸಿಗ್ನಲ್ ಅಥವಾ ಕವಲು ದಾರಿ ಸಮೀಪಿಸುವಲ್ಲಿ ದಾರಿಗೆ ಭಾರೀ ಉಕ್ಕಿನ ತೋರಣ ಕಟ್ಟಿ ಸುಂದರ ಬೋರ್ಡುಗಳನ್ನೇನೋ ಕೊಟ್ಟಿದ್ದರು. ಆದರೆ ಅವೆಲ್ಲ ದೂರದ ಆಶಯಗಳನ್ನಷ್ಟೇ ಹೇಳುತ್ತಿದ್ದವು. ಉದಾಹರಣೆಗೆ, ಎಲ್ಲಿಂದೆಲ್ಲಿಗೂ ಒಂದು ಎಡ ಬಾಣದ ಗುರುತುಬೆಂಗಳೂರು ಸಿಟಿಎನ್ನುತ್ತಿತ್ತು. “ಹೌದು, ಇದು ರಿಂಗ್ ರೋಡ್. ಅಂದರೆ ಅಪ್ರದಕ್ಷಿಣಾ ಕ್ರಮದಲ್ಲಿ ಅನುಸರಿಸುವ ಎಲ್ಲರಿಗೂ ಎಲ್ಲ ಜಾಗಗಳಲ್ಲೂ ಬೆಂಗಳೂರು ಸಿಟಿಯನ್ನು ಕಾಣಿಸುವುದು ನ್ಯಾಯವೇಎನ್ನಬೇಡಿ. ಬದಲು ನಗರದ ಯಾವ ಭಾಗ ಎಂದಿದ್ದರೆ ಹೆಚ್ಚಿನ ಉಪಯೋಗವಾಗುತ್ತಿರಲಿಲ್ಲವೇ ಎನ್ನುವುದು ನನ್ನ ಕೊರಗು. ಇನ್ನು ನೇರ ಸೂಚನೆಗಳದು ಇನ್ನೊಂದೇ ಅಧ್ವಾನ. ಅವುಗಳಲ್ಲಿ ಯಾವುದೋ ಹಂತದಲ್ಲಿ ನಾನೂರೈನೂರು ಕಿಮೀ ಆಚಿನಹೈದರಾಬಾದ್ಕಾಣಿಸತೊಡಗಿತು. ನನ್ನ ಪ್ರಜ್ಞೆ ಅಂದರೆ ಉತ್ತರಕ್ಕೆ ಹೋಗ್ತಿದ್ದೀ. ನೀನು ಪೂರ್ವಕ್ಕೆ ಹೋಗಬೇಡವೇಕೆಣಕಿತು. ಆದರೆ all roads lead to Rome ಎನ್ನುವ ಉಕ್ತಿ ನೆನಪಾಗಿ ಎಲ್ಲೋ ಪೂರ್ವಕ್ಕೆ ಹೊರಳುವ ಅವಕಾಶ ಬರುತ್ತದೆ ಎಂಬ ಸಮಾಧಾನ. ಶುದ್ಧ ಕಾಡಿನಲ್ಲಾದರೋ ಬರಿಯ ದಿಕ್ಕು ಹಿಡಿದು ನುಗ್ಗಬಹುದು, ಇಲ್ಲಿ ದಾರಿ ಮತ್ತು ವ್ಯವಸ್ಥೆಯ ಶಿಸ್ತು ಅವಕಾಶ ಕೊಡಬೇಕಲ್ಲಾಂತ ಕಾಯುತ್ತಲೇ ಓಡುತ್ತಲೇ ಇದ್ದೆವು.

ಬೆಂಗಳೂರಿನಿಂದ ಚೆನ್ನೈವರೆಗಿನ ನಕ್ಷೆ ಒಂದು ಹಾಳೆಯಲ್ಲಷ್ಟೇ ಸುಧಾರಿಸಿದ್ದರಿಂದ ಮಹಾನಗರ ಬಿಡುವ ಸಣ್ಣ ದಾರಿಗಳ ಜಾಲ ಕಾಣಿಸಿರಲಿಲ್ಲ, ಸ್ಥಳಗಳ ಹೆಸರೂ ಇರಲಿಲ್ಲ. ಆರೆಂಟು ಪುಟದ ಟಿಪ್ಪಣಿಗಳೂ೧೩.೪ ಕಿಮೀಯಲ್ಲಿ ಬಲ, ೧೪.೩ ಕಿಮೀಯಲ್ಲಿ ಎಡ ಇತ್ಯಾದಿನಿರ್ಜೀವ ಲೆಕ್ಕಾಚಾರವನ್ನು ಹೇಳುತ್ತಿತ್ತೇ ವಿನಾಚಿಂತಾಮಣಿ’, ‘ಕೋಲಾರಮುಂತಾದ ಊರುಗಳ ಹೆಸರು ಅಥವಾ ದೊಡ್ಡ ಅಂಗಡಿ, ಕಟ್ಟಡಗಳ ಹೆಸರು ಇತ್ಯಾದಿ ಜೀವಂತ ಲೋಕಾಚಾರವನ್ನು ಬಿಟ್ಟಿತ್ತು. ಬಹಳ ಕಷ್ಟದಲ್ಲಿ ಅವರಿವರನ್ನು ಕೇಳಿದೆವು - ಹೆದ್ದಾರಿಯ ಜನಪದವೇ ವಿಚಿತ್ರ. ಏನು ಅರ್ಥಮಾಡಿಕೊಳ್ಳುತ್ತಿದ್ದರೋ ತರಹೇವಾರಿ ಸೂಚನೆಗಳಂತು ಸಿಗುತ್ತಲೇ ಇದ್ದುವು. ಒಬ್ಬರು ಖಡಕ್ಕಾಗಿ ಹೊಸಕೋಟೆ ಇನ್ನೂ ನೀವು ೧೫ ಕಿಮೀ ಹೋಗಬೇಕುಎಂದರೆ ಇನ್ನೊಬ್ಬರು ಅಷ್ಟೇ ಸ್ಪಷ್ಟವಾಗಿ ಇಲ್ಲ, ನೀವು ತಪ್ಪು ದಾರಿಯಲ್ಲಿ ತುಂಬಾ ದೂರ ಬಂದಿದ್ದೀರಿ, ಹಿಂದೆ ಹೋಗಿ ಎಡಕ್ಕೆ ತಿರುಗಿಎನ್ನುತ್ತಿದ್ದರು. ಮರುವಿಚಾರಣೆಯಲ್ಲಿ ಮಗುದೊಬ್ಬರು ಹಾಂ, ಬಂದದ್ದು ಸರೀ ಇದೆ. ಇನ್ನು ೧೫ ಅಲ್ಲ ಸ್ವಲ್ಪ ಹೆಚ್ಚೇ ಹೋಗಬೇಕುಧೈರ್ಯ ಕೊಡುತ್ತಿದ್ದರು, ನಾವು ಮುಂದುವರಿದೆವು.

ಹನ್ನೊಂದೂವರೆಯ ಸುಮಾರಿಗೆ, ಅಂದರೆ ಹೊರಟು ಮೂರು ಗಂಟೆಯ ಮೇಲೆ ಹೆಸರಿಲ್ಲದ ಒಂದು ಪೇಟೆಯಲ್ಲಿ (ಕೇಳಿ ತಿಳಿದರೂ ನಕ್ಷೆಯಲ್ಲಿ ನಮ್ಮ ಸ್ಥಾನ ಗುರುತಿಸಲಾಗದ ಸ್ಥಿತಿ ನಮ್ಮದು) ‘ಉಡುಪಿಹೊಟೆಲ್ ಒಂದರಲ್ಲಿ ಕಾಫಿಗೆ ನಿಂತೆವು. ಆಗ ಯಜಮಾನನ್ನು ವಿವರವಾಗಿ ಕೇಳಿದೆವು. ನಾವು ಬಂದ ದಾರಿ ಸರಿ, ಹೀಗೇ ಇನ್ನೂ ಸುಮಾರು ಮೂವತ್ತು ಕಿಮೀ ಹೋದರೆ ಹೊಸಕೋಟೆ ಗಟ್ಟಿ ಎಂದು ಸಮರ್ಥಿಸಿದರು. ಬಂದ ದೂರ ಕರಕಷ್ಟದ ೫೪ ಕಿಮೀ. ಇನ್ನು ಸುಖಮುಖದ ಮೂವತ್ತೇ ಅಲ್ಲವೇ, ಊಟಕ್ಕೆ ಹೊಸಕೋಟೆ ಸೇರಿಯೇ ಸಿದ್ಧ ಎಂದು ನಿಸ್ಸಂದೇಹವಾಗಿ ಧಾವಿಸಿದೆವು. ದಾರಿಯೇನೋ ಬೆಳಗ್ಗಿನಿಂದಲೇ ಕಂಡಂತೆ ಚತುಷ್ಪಥದ ಹೆದ್ದಾರಿಯದೇ ರೂಪ. ಆದರೂ ಆರೆಂಟು ಕಿಮೀ ಕಳೆಯುವಷ್ಟರಲ್ಲಿ, ಆಗ ಕಂಡಂತೆ ನಮ್ಮ ಗ್ರಹಚಾರಕ್ಕೆ, ಈಗ ನೋಡಿದರೆ ನಮ್ಮ ಅದೃಷ್ಟಕ್ಕೆ, ಅಲ್ಲೊಂದು ರೈಲ್ವೇ ಲೆವೆಲ್ ಕ್ರಾಸಿಂಗ್ ಬಂತು. ಯಾವುದೋ ರೈಲಿನ ನಿರೀಕ್ಷೆಯಲ್ಲಿ ಗೇಟು ಹಾಕಿದ್ದರು. ಐದು ಮಿನಿಟಿನಲ್ಲೇ ರೈಲೇನೋ ಬಂತು. ಆದರೆ ನಮ್ಮ ನಿರಾಶೆಯ ಪರಾಕಾಷ್ಠೆಗೆ ಅದು ಮೈಸೂರು ಬೆಂಗಳೂರು ರೈಲು!

ಬೆಳಿಗ್ಗೆ ಮೈಸೂರು ರಸ್ತೆ ಬಿಟ್ಟು ಹೊರಟ ನಾವು ಇಷ್ಟುದ್ದಕ್ಕೂ ಓಡಿದ್ದೆಲ್ಲಾ ಬೆಂಗಳೂರ ಸುತ್ತ?! ಮನಸ್ಸು ತಡೆಯಲಿಲ್ಲ, ಅಲ್ಲಿದ್ದ ಒಬ್ಬ ಪೊಲಿಸ್ ವಿಚಾರಿಸಿದೆವು, ನಾವು ತಪ್ಪು ದಾರಿ ಹಿಡಿದದ್ದನ್ನು ಶ್ರುತಪಡಿಸಿದರು. ಒಂದೆರಡು ಕಿಮೀ ಹಿಂದಕ್ಕೇನೋ ಹೋದೆವು. ತಿರುಪತಿ ತಿಮ್ಮಪ್ಪನ ಹೆಸರಿನದೇ (ಸಪ್ತಗಿರಿ...) ಯಾವುದೋ ಅಂಗಡಿ ಕಾಣಿಸಿದಲ್ಲಿ ಮತ್ತೆ ವಿಚಾರಿಸಿದೆವು. ಆತನಂತೂ ಸ್ಪಷ್ಟ ಇಪ್ಪತ್ತಕ್ಕೂ ಕಿಮೀ ಹಿಂದಕ್ಕೆ ಹೋಗಿ ದಾರಿ ಬದಲಾಯಿಸುವುದು ಅನಿವಾರ್ಯ ಎಂದೇ ಹೇಳಿದ ಮೇಲೆ ನಾವು ಪರಿಸ್ಥಿತಿಯನ್ನು ಮತ್ತೊಮ್ಮೆ ವಿಶ್ಲೇಷಣೆ ಮಾಡಿದೆವು. ಅಷ್ಟರಲ್ಲಾಗಲೇ ೬೦ಕ್ಕೂ ಹೆಚ್ಚು ಕಿಮೀ ಉರಿಬಿಸಿಲಿನಲ್ಲಿ ಬಂದದ್ದು ವ್ಯರ್ಥ. ಹೊಸದೇ ಸರಿದಾರಿ ಹಿಡಿದು ಮುಂದುವರಿದರೂ ಈಗಾಗಲೇ ದೇವಕಿಯ ಭುಜ ಜಗ್ಗಿದ ಚೀಲ ಇನ್ನೂ ಕನಿಷ್ಠ ನಾನೂರಕ್ಕೂ ಮಿಕ್ಕ ಕಿಮೀ ಮತ್ತು ನಾಲ್ಕು ದಿನ ಹಿಂಸೆ ಕೊಡುವುದೂ ಖಾತ್ರಿ. ದಾರಿ, ವ್ಯವಸ್ಥೆ ಅಳೆದೂ ಸುರಿದೂ ತಿರುಪತಿ ಯಾತ್ರೆಯನ್ನು ಅಂದಿಗೆ ರದ್ದುಪಡಿಸಿದೆವು. ಹೆಚ್ಚು ಕಡಿಮೆ ನಗರದ ಒಂದು ಅಪ್ರದಕ್ಷಿಣೆಯನ್ನು ಪೂರೈಸಿದ್ದ ನಾವು ಈಗ ಸಮೀಪಿಸಿದ್ದ ಮೈಸೂರು ದಾರಿ ಸೇರಿ ಅಭಯನ ಮನೆಗೇ ಮರಳಿದೆವು. ಅಭಯ ಸಕ್ಕರೆಯ ಡಬ್ಬಿಂಗ್ ಕೆಲಸದಲ್ಲಿ ಯಾವುದೋ ಸ್ಟುಡಿಯೋದಲ್ಲಿದ್ದ. ರಶ್ಮಿ ಇನ್ನೆಲ್ಲೋಪಲ್ಲವಿ ಅನುಪಲ್ಲವಿಯ ಚಿತ್ರೀಕರಣದಲ್ಲಿ ಮುಳುಗಿದ್ದಳು. ೭೯ ಕಿಮೀ ದಾರಿ, ಸುಮಾರು ಐದು ಗಂಟೆಯ ಸವಾರಿ, ತಪ್ಪು ಒಪ್ಪುಗಳ ಸೂಚನೆಗಳನ್ನು ಕೊಟ್ಟ ಅಷ್ಟೂ ಜನರನ್ನು ಮರೆತು, ನಮ್ಮ ತನುವನ್ನು ನಾವೇ ಸಂತಯಿಸಿಕೊಳ್ಳುತ್ತಾ ಬೋರೇ ಗೌಡ ಬೆಂಗಳೂರಿಗ್ಬಂದಾಎಂದು ಹಾಡುತ್ತ, ನಮ್ಮ ಸೋಲನ್ನು ಯಾರಿಗೂ ಹೇಳಬಾರದು ಎಂದುಕೊಳ್ಳುತ್ತಾ ಸಂಜೆ ಬಸ್ಸು ಹಿಡಿದು ಮಂಗಳೂರ ದಾರಿ ನೋಡಿದೆವು. ದಯವಿಟ್ಟು ನೀವು ಯಾರಿಗೂ ಹೇಳಬೇಡಿ!

(ಮುಗಿದುದು)

12 comments:

 1. ಪ್ರಭಾಕರ ಜೋಶಿ ಎಂ05 April, 2013 12:13

  ನಿಮ್ಮ ಬರಹಗಳಲ್ಲಿ ಮಾಹಿತಿ, ನೆನಪು, ವಿಶ್ಲೇಷಣೆಗಳೆಲ್ಲ ಇವೆ. ಆದರೇ...
  ಬರಹಗಳನ್ನು ಇಂಟರೆಸ್ಟಿಂಗ್ ಮಾಡುವ ಭರದಲ್ಲಿ ಅನವಶ್ಯ ಪ್ರಯೋಗ ಮತ್ತು ವಕ್ರೋಕ್ತಿ ಬರುತ್ತಿರುತ್ತದೆ,.
  ಉದಾ: ಬೋರೇಗೌಡ ಎಂದು ನಿಮ್ಮನ್ನು ಹೇಳಿಕೊಳ್ಳಬೇಕಿಲ್ಲ. ಹಾಗೇ ಬುಗರಿ ಆಟದಲ್ಲಿ ಬುಗರಿ ಮುಟ್ಟಿಸುವಾಗ ಚೀರ್ಸ್ ಉದಾಹರಣೆ ಅಗತ್ಯವೇ?
  ಇಂಥ ಕೆಲವು ಉದಾ. ನಿಮ್ಮ ಎಲ್ಲ ಬರಹಗಳಲ್ಲು ಇವೆ. ರೋಚಕತೆಯನ್ನೆ ಮುಖ್ಯವಾಗಿಸುವ ಇಂದಿನ ಪತ್ರಿಕಾ ಬರವಣಿಗೆಗಳಿಗಿಂಥ ಭಿನ್ನವಾಗಲು ನಾವೆಲ್ಲ ಯತ್ನಿಸಬೇಕು.

  ReplyDelete
 2. ನಾವು ಚಿಕ್ಕವರಾಗಿದ್ದಾಗ ಆನಂದ ಬಾವ ಮರಿಕೆ ಮನೆಯಲ್ಲಿ ಬುಗರಿಯ ಬಗೆ ಬಗೆಯ ಕಸರತ್ತು ಮಾಡಿ ನಮ್ಮನ್ನೆಲ್ಲ ದಂಗಾಗಿಸಿದ ನೆನಪುಗಳೆಲ್ಲ ನಿನ್ನ ಬುಗರಿಯಾಟದ ಅನನ್ಯ ವಿವರಣೆ ಮತ್ತೆ ನೆನಪಿಗೆ ತಂದಿತು. ಬುಗರಿಯ ಭ್ರಮಣೆಗೆ ಫಿಜಿಕ್ಸಲ್ಲೂ ಭಾರೀ ಮಹತ್ವ ಉಂಟು! ದೇಶ - ಅಂಡಾಮಾನ್ ಸುತ್ತಿದ ಧೀರನನ್ನೂ ಬೆಂಗಳೂರಿನ ದಟ್ಟಣೆಯ ಗೊಂದಲ ಬುಗರಿಯಂತೆ ಆಡಿಸಿತಲ್ಲ. ಆಡಿಸಿ ನೋಡು .. ಬೀಳಿಸಿ ನೋಡು .. ತಿಮ್ಮಪ್ಪನ ದರ್ಶನ ಸುಲಭವಲ್ಲ. ಆದರೆ ಛಲ ಬಿಡದೇ ತಿಮ್ಮಪ್ಪನಲ್ಲಿಗೆ ಹೋದ ವಿವರ ಇಲ್ಲಿ ಓದಲು ಕಾಯುತ್ತಿದ್ದೇನೆ.

  ReplyDelete
 3. ಸಿ.ಎನ್ ರಾಮಚಂದ್ರನ್05 April, 2013 19:41

  ಪ್ರಿಯ ಅಶೋಕವರ್ಧನ ಅವರಿಗೆ:
  ನಮಸ್ಕಾರ. ನೀವು ಕಳುಹಿಸುತ್ತಿರುವ ಅಂತರ್ಜಾಲ ಲೇಖನಗಳನ್ನು ಓದುತ್ತಿದ್ದೆನಾದರೂ ಉತ್ತರಿಸಲಾಗುತ್ತಿರಲಿಲ್ಲ; ಆದರೆ,’ಬೋರೇಗೌಡನ’ ಕೊನೆಯ ಭಾಗವನ್ನು ಕುರಿತು ಬರೆಯಲೇ ಬೇಕೆನ್ನಿಸಿತು. ಕಾರಣ: ಹೇಗೆ ಕರ್ನಾಟಕದುದ್ದಕ್ಕೂ ಕೆಲವು ಆಟಗಳು ಮತ್ತು ಅವುಗಳಲ್ಲಿ ಉಪಯೋಗಿಸುವ ’ಪಾರಿಭಾಷಿಕ ಪದಗಳು’ ಸಮಾನವಾಗಿವೆ ಎಂಬ ಅಂಶ ನಿಮ್ಮ ಲೇಖನವನ್ನು ಓದಿದ ಮೇಲೆ ಹೊಳೆದು, ಆಶ್ಚರ್ಯವಾಯಿತು. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರವಿಲ್ಲ.
  ಗಾಳಿಪಟ ಹಾರಿಸುವುದು ಭಾರತದುದ್ದಕ್ಕೂ ಹರಡಿರುವುದು ಗೊತ್ತಿತ್ತು; ಆದರೆ ಬುಗುರಿ ಆಟ? ಅದರಲ್ಲಿ ಉಪಯೋಗಿಸುವ ’ಗುನ್ನ’ (ಇನ್ನೊಂದು ಬುಗುರಿಯ ಮೇಲೆ ವಿಜಯದ ಚಿಹ್ನೆಯಾಗಿ ನಮ್ಮ ಬುಗುರಿಯಿಂದ ಕೆತ್ತುವುದು); ’ಅಪಿಟ್’ (ನೆಲದ ಮೇಲೆ ಆಡುವ ಬುಗುರಿಯನ್ನು ದಾರದ ಮೂಲಕ ಕೈಗೆತ್ತಿಕೊಳ್ಳುವುದು), ಮುಂತಾದ ಪದಗಳು ಅದು ಹೇಗೆ, ಎಲ್ಲಿಂದ ಎಲ್ಲಾ ಕಡೆ ಹರಡಿವೆ? ನೀವು ಊಹಿಸಿರುವಂತೆ ’ಅಪಿಟ್’ ಇಂಗ್ಲೀಷ್ ಪದವೇ ಇರಬೇಕು. ಹಾಗೆ ನೋಡಿದರೆ, ಹಳ್ಳಿಯ ಕಡೆಯಲ್ಲಿ ಒಂದು ಕಾಲದಲ್ಲಿದ್ದ ’ಕುಂಟೆಬಿಲ್ಲೆ’ ಆಟದಲ್ಲಿ ಉಪಯೋಗಿಸುವ ’ಅಮರೇಟ್’ ಪದವೂ ’Am I right?' ಇರಬೇಕು. ಅಲ್ಲದೆ, ’ಕವಡೆ’ ಆಟದಲ್ಲಿ ಉಪಯೋಗಿಸುತ್ತಿದ್ದ ಸಂಖ್ಯಾಪದಗಳು ಉರ್ದು ಮೂಲದವು. ಮಕ್ಕಳ ಆಟದಲ್ಲಿ ಈ ಬಗೆಯ ಇಂಗ್ಲೀಷ್-ಉರ್ದು ಪದಗಳು ಹೇಗೆ ಸೇರಿದುವು? ಈ ಅಂಶದ ಬಗ್ಗೆ ನಿಮಗೇನಾದರೂ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ. ಈ ಭಾಷೆಗಳ ಪರ್ಯಟಣೆ ತುಂಬಾ ಕುತೂಹಲಕರವಾಗಿದೆ.

  ReplyDelete
 4. ಚೆನ್ನಾಗಿದೆ,ಬರಹ.ನಿಮ್ಮ ಪತ್ನಿ, ನಿಮ್ಮ ಜತೆ ಬೈಕ್ ನಲ್ಲಿ ತಿರುಪತಿವರೆಗೂ ಹೋಗಿಬರುವ ಧೈರ್ಯ ಮೆಚ್ಚಬೇಕು,. ಎಲ್ಲಾದರೂ ಹೊರಡುವ ಮೊದಲು ಮ್ಯಾಪ್ ನಲ್ಲಿ ದಾರಿಯ ದೂರವನ್ನು ನೋಡುವ ಹುಚ್ಚು ನನಗೆ. ರಸ್ತೆಯ ಸ್ಥಿತಿಯ ಕುರಿತು ಅವರಿವರ ಮಾತನ್ನು ಕೇಳಿ ಹಲವು ಸಲ ಮೋಸ ಹೋಗಿದ್ದೇವೆ. ಬಾಬಾ ಬುಡನ್ ಗಿರಿಯಿಂದ ಕೆಮ್ಮಣ್ಣು ಗುಂಡಿಗೆ ಗಿರಿನೆತ್ತಿಯಲ್ಲೇ ೨೫ ಕಿಮೀ ಕ್ರಮಿಸಿದ ಅನುಭವ ಎಂದಿಗೂ ಮರೆಯದು .ಯಾಕೆಂದರೆ ಅಲ್ಲಿ ರಸ್ತೆಯೇ ಇಲ್ಲ ಅಷ್ಟೊಂದು ಹೊಂಡ ಗುಂಡಿಗಳು.ಇನ್ನೊಮ್ಮೆ ಮೈಸೂರು,ಹೆಗ್ಗಡದೇವನಕೋಟೆ ,ಮಾನಂದವಾಡಿ ರಸ್ತೆಯಲ್ಲಿ ವೈನಾಡಿಗೆ ಹೋಗಿದ್ದು.ರಾಜೀವ್ ಗಾಂಧಿ ಅಭಯಾರಣ್ಯದ ಒಳಗೆ ಕೇರಳದ ಗಡಿವರೆಗೆ ರಸ್ತೆ ಇಲ್ಲವೇಇಲ್ಲ ಎಂಬ ಸ್ಥಿತಿಯಲ್ಲಿದೆ.

  ReplyDelete
 5. ಸುಮಾರು ಮೂವತ್ತೈದು ವರ್ಷಗಳ ಕೆಳಗೆ ಟೆಲೆಫೋನ್ ಇಲ್ಲದ ಮನೆಯೊಂದರ ಕರೆಕ್ಟ್ ಎಡ್ರಸ್ ಇದ್ದರೂ ಹುಡುಕಲಾರದೆ ನಾನು ಸಂಸಾರ ಸಮೇತ ಕಾರನ್ನು ಒಡಿಸುತ್ತಾ ಆರು ಗಂಟೆಗಳನ್ನು ಕಳೆದೆ. ಎಲ್ಲಾ ಕ್ರಾಸ್ ಮೈನ್ ಬೋರ್ಡುಗಳಿಗೆ ಇಲೆಕ್ಷನ್ ಪೋಸ್ಟರ್ ಹಚ್ಚಿದ್ದರು. ಕೆಲವರು "ಆ ಥಿಯೇಟರ್ ಇಲ್ವಾ ... ಅದರ ಬಲಕ್ಕೆ ಹೋಗಿ!" ಅಂದರು. ದಾರಿ ಕೇಳಿದಾಗ "ಅಲ್ಲಿಂದ ಮೇಲೆ ಹೋಗಿ! ಡೆಡ್ ಎಂಡಿನಿಂದ ಕೆಳಗೆ ಹೋಗಿ!" ಅಂದರು. ನನಗೆ "ಮೇಲೆ - ಕೆಳಗೆ" ಗೊತ್ತಾಗಲಿಲ್ಲ. ಒಬ್ಬ ಪೋಲೀಸಪ್ಪನನ್ನು ಕೇಳಿದೆ. ಪೋಲೀಸಪ್ಪ "ನಮ್ಮ ಟೇಸನ್ ಗೊತ್ತಿಲ್ವಾ ಅದಕ್ಕೆ ಇಂದುಗಡೆ ಆ ಮನೆ ಇದೆ!" ಅಂದ.
  ಟೇಸನ್ ಎಲ್ಲಿ? ಅಂದರೆ ಮುಂದೆ ಹೋಗಿ ಯಾರನ್ನಾದು ಕೇಳಿ ...ಏಳ್ತಾರೆ!" ಅಂದ.
  ಅಂದಿನ ರಾಜಾಜಿ ನಗರ ತುಂಬಾ ಕಾರು ಓಡಿಸಿ ಓಡಿಸಿ ಕೊನೆಗೂ ಸೋಲೊಪ್ಪಿ ನಮ್ಮ ವಾಸ್ತವ್ಯದ ಹೋಟೆಲಿಗೆ ವಾಪಸಾದೆ.
  "ಬೆಂಗಳೂರಿನಲ್ಲಿ ಅವರವರ ಮನೆ ಅವರವರಿಗೆ ಗೊತ್ತು!" ಎಂಬ ವಾಖ್ಯೆಯನ್ನು ಗಟ್ಟಿ ಮಾಡಿಕೊಂಡೆ.

  ಮೊನ್ನೆ ಒಬ್ಬರು ಮಿತ್ರರು ಹೇಳಿದರು ಹಲವರಿಗೆ ಸಾಯಂಕಾಲ ಏಳರ ನಂತರ ಅವರವರ ಸ್ವಂತೆ ಮನೆ ಎಲ್ಲಿದೆ? - ಅಂತಲೂ ಗೊತ್ತಾಗೋಲ್ವಂತೆ!
  ಈಗ ನಾನು ಯಾರ ಮನೆಯನ್ನೂ ಹುಡುಕಿ ಹೋಗುವ ಉಸಾಬರಿ ಬಿಟ್ಟು ಬಿಟ್ಟಿದ್ದೇನೆ.

  ತಾವು ಮತ್ತು ದೇವಕಿ ಅಕ್ಕ ಬರೇ ೭೯ ಕಿ.ಮೀ. ಪ್ರದಕ್ಷಿಣೆ ಹಾಕಿದ್ದು ಕ್ಷಮಾರ್ಹ.

  ಅಶೋಕ ಭಾವಾ Cher up!

  - ಕೇಸರಿ ಪೆಜತ್ತಾಯ

  ReplyDelete
 6. ರಾ. ಗಣೇಶ06 April, 2013 06:10

  ಪ್ರಿಯರೇ,
  ನಿಮ್ಮ ಈ ಬಾರಿಯ ಬರೆಹದಲ್ಲಿ ಬುಗರಿಯ ಬಗೆಗೆ ಬಂದ ವಿವರಗಳನ್ನು ಕಂಡಾಗ ನನ್ನ ಬಾಲ್ಯದ ಅದೆಷ್ಟೋ ಮಧುರಸ್ಮೃತಿಗಳು ಮೇಲೆದ್ದುವು. ನಾನೆಂದೂ ಬುಗರಿ-ಗೋಲಿ-ಕ್ರಿಕೆಟ್-ಇತ್ಯಾದಿ "ಹುಡುಗರ" ಆಟಗಳನ್ನು ಆಡಿದವನಲ್ಲ. ಆದರೆ ಇವೆಲ್ಲವನ್ನೂ ಕಾಣುತ್ತಲೇ ಬೆಳೆದವನು. ನಿಮ್ಮ ಬರೆಹದ ವಿವರಗಳ ಒಪ್ಪ ಮತ್ತು ಅನುಭವವನ್ನು ಆರ್ದ್ರವಾಗಿ ರೂಪಿಸುವಲ್ಲಿ ತರುವ ಚಿತ್ರಕಕೌಶಲಗಳು ಸಲೆ ಸೊಗಸು. ಧನ್ಯವಾದ.

  ರಾಗ

  ReplyDelete
 7. ಅಂದ ಹಾಗೆ ಬೋರೇ ಗೌಡ್ರ ಮೊಬೈಲಿನಲ್ಲಿ ಜಿಪಿಎಸ್ ಇತ್ತಲ್ಲ. ಅದರನ್ನು ಗಮನಿಸುತ್ತಿದ್ದಲ್ಲಿ ಬೆಂಗಳೂರಿಗೆ ಪ್ರದಕ್ಷಿಣೆ ಬರೋದು ಗೊತ್ತಾಗುತಿತ್ತು. ವರ್ಶಗಳ ಹಿಂದೆ ನಾನು ಜಾಲಹಳ್ಳಿಯಿಂದ ಹೊರಟು ಯಾರನ್ನೂ ಕೇಳದೆ ಕೂಕ್ಸ್ ಟೌನ್ ವರೆಗೆ ನೇರವಾಗಿ ಹೋಗಲು ಸಹಾಯ ಮಾಡಿದ್ದೇ ಜಿಪಿಎಸ್. ನನ್ನ ಲಡ್ಕಾಸ್ [ ಲಾಸ್ಟ್ ಕ್ಲಾಸ್ ] ಜಿಪಿಎಸ್ ಒಂದು ಗೆರೆ ಮಾತ್ರ ತೋರಿಸುವುದು. ನಾನು ಅಂದಿನ ಸವಾರಿ ಮನೆಯಿಂದ ಹೊರಡುವ ಮೊದಲೇ ಲೋಡ್ ಮಾಡಿದ್ದೆ. ಈಗದ ಜಿಪಿಎಸ್ಗಳಲ್ಲಿ ಸರಿಯಾದ ನಕ್ಷೆಗಳೇ ಗೋಚರಿಸುತ್ತವೆ.

  ನನ್ನದೊಂದು ಅನುಬವ. Romans have their own way of interpreting the roads. ಅಂದು ನಾನು ರೋಮಿನಲ್ಲಿ ವಿಮಾನದಿಂದಿಳಿದು ಸೈಕಲು ಏರಿ ಯುವ ಹಾಸ್ಟೇಲು ಸೇರುವ ಮೊದಲು ಸಾಕಷ್ಟು ಅಲೆದಾಡಿದ್ದೆ. ದಿಕ್ಕು ತಪ್ಪದಿದ್ದರೂ ಸಾಕಷ್ಟು ಅಡ್ಡಾದಿಡ್ಡಿ ಅಲೆದಾಟ. ನನಗೆ ದಾರಿ ತೋರಿದ ಪ್ರತಿಯೊಬ್ಬರಿಗೂ ಅವರವರದೇ ದಾರಿ ಅಂತ ನನಗೆ ಅಂದು ಅನಿಸಿತ್ತು.

  ReplyDelete
 8. ಬೋರೇಗೌಡ06 April, 2013 22:01

  ಲಭ್ಯ ತಂತ್ರಾಂಶಗಳೆಲ್ಲವನ್ನೂ ಬಳಸಲು ಗೊತ್ತಿದ್ದರೆ ಬೋರೇಗೌಡತ್ವಕ್ಕೆ ಅರ್ಥ ಎಲ್ಲುಳಿಯುತ್ತೆ?

  ReplyDelete
 9. ಅಹಾ! ತಿರುಪತಿ ಯಾತ್ರೆ ಎನ್ನುವುದಕ್ಕೆ ಹೊಸ ಅರ್ಥ ಸೇರುವಂತಾಯಿತು.
  ಜಿಪಿಅರ್‍ಎಸ್ ಬಳಸುವಾಗ ನೀವು ಹೊರಟ ಸ್ಥಳ ಸೇರಬೇಕಾದ ಜಾಗ
  ತಲುಪುವ ಮಾರ್ಗವನ್ನೂ ಸೂಚಿಸುತ್ತಿರುತ್ತದೆಯಲ್ಲ!
  ದೇವಕಿ ಆಷ್ಟು ದೂರ ಹೊರೆ ಹೊತ್ತ ಮಹಿಳೆಯಾಗಿದ್ದುದು ಪಾಪ ಎನಿಸಿತು.
  ಪಟ ಏನಾಯಿತು?

  ReplyDelete
 10. ಪ್ರೀತಿಯ ಅಶೋಕವರ್ಧನರೆ, ನಿಮ್ಮ ಎಲ್ಲ ಲೇಖನಗಳ ಖಾಯಂ ಓದುಗ. ಬರಹ ದ ಕುರಿತು ನನ್ನ ಮಾತೇ ನಿಲ್ಲ.ಒಂದು ಮನವಿ: ಸ್ವಲ್ಪ ಯಕ್ಷಗಾನ ದ ಕುರಿತು ಬರೀರಿ. ಸದ್ಯ ಯಾವುದೋ ನೋಡಿಲ್ವಾ? ಹಾಗೆ ಒಂದು ವಿಮರ್ಶೆ.ಕೆಲ ತಿಂಗಳುಗಳ ಹಿಂದೆ ಸಂಪಾಜೆ ಯಕ್ಷೋತ್ಸವ ದಲ್ಲಿ ನೀವು ಚಂದ್ರಹಾಸ-ದುಷ್ಟಬುದ್ಧಿ ಪ್ರಸಂಗ ಮುಗಿಸಿ ಹೊರಟಾಗ ತಿಳಿದಿದ್ದೆ ಈ ಮನುಷ್ಯ ಇನ್ನು ಒಂದು ವಾರದಲ್ಲಿ ನಾನು ನೋಡಿದ ಯಕ್ಷಗಾನ ದ ವಿಮರ್ಶೆ ಬರೀತಾರೆ ಅಂತ. ಬರ್ದೇ ಇಲ್ಲ. ನಿರಾಶೆ ಮಾಡಿದಿರಿ.

  ಹೇಗೂ ಮಂಗಳೂರಲ್ಲಿ ಆಟಕ್ಕೆ ಹೋಗ್ತಾ ಇರ್ತೀರಿ, ಒಂದು ಹಾಗೆ ನಮಗೂ ಬರಹ ದಲ್ಲಿ ಆಟದ ಪ್ರದರ್ಶನ ಏರ್ಪಡಿಸಿ. ಪ್ಲೀಸ್

  ಇಂತು,

  ವಿಟ್ಲ ನಾರಾಯಣ ಭಟ್ಟ

  ReplyDelete
 11. ಅಶೋಕವರ್ಧನ08 April, 2013 19:14

  ಪ್ರಿಯ ನಾರಾಯಣ ಭಟ್ಟರೇ
  ನಾನು ಅನುಭವಿಸಿದ ತೀವ್ರ ಭಾವಗಳನ್ನಷ್ಟೇ ಬರಹಕ್ಕಿಳಿಸುತ್ತೇನೆ. ಯಾವುದೇ ಪ್ರದರ್ಶನವನ್ನು ನಾನು ಸ್ವಾಂತ ಸುಖಾಯ ಮತ್ತು ಸಮಯಾನುಕೂಲ ನೋಡಿಕೊಂಡೇ ನೋಡಲು ಹೋಗುತ್ತೇನೆ. ಏನಾದರೂ ಬರೆಯಲೇ ಬೇಕೆಂಬ (ಪತ್ರಕರ್ತರಂತೆ ಅಥವಾ ಘೋಷಿತ ವಿಮರ್ಶಕರಂತೆ) ನಿರ್ಧಾರದೊಡನೆ `ಮಾಹಿತಿ' ಹೆಕ್ಕಲು ಹೊರಟರೆ, `ಭಾವ' ಕಳೆದುಹೋಗುವ ಹೆದರಿಕೆ ಇದೆ. ಇದ್ದ ಬದ್ದ ಯಕ್ಷ-ಪ್ರದರ್ಶನಗಳಿಗೆ ಹೋದರೆ ನನ್ನ ಅಸಹನೆಯ ನುಡಿಗಳು ಬಹುತೇಕ ಕಲಾವಿದರಿಗೆ ಬಯ್ಗುಳದಂತೆ ಕೇಳಿ, ವೈರಿ ಸಂಖ್ಯೆಯಷ್ಟೇ ಏರೀತು, ಪ್ರದರ್ಶನ ಉತ್ತಮವಾದೀತು ಎಂಬ ವಿಶ್ವಾಸ ನನಗಿಲ್ಲ :-(

  ReplyDelete
 12. ಮಂಜುನಾಥ ಭಟ್ಟ.ಹೆಚ್.13 April, 2013 19:16

  ಪ್ರಿಯ ಅಶೋಕವರ್ಧನರೇ,
  ನೀವು 1969ರಲ್ಲಿ ಬೆಂಗಳೂರು ಬಿಟ್ಟರೆ , ನಾನು 1974ರಲ್ಲಿ ಬೆಂಗಳುರಿಗೆ ಬಂದು ಸುಮಾರು ಏರಡೂವರೆ ವರ್ಷ ಇಲ್ಲಿದ್ದೆ. ಆಗ ನಾನು ಚಾಮರಾಜಪೇಟೆಯ ಉಮಾ ಟಾಕೀಸು ಸಮೀಪದ ಅಪ್ಪೂರಾವ್ ರಸ್ತೆಯ ನಿವಾಸಿ. ಚಾಮರಾಜಪೇಟೆ ಆಗ ಬಹುತೇಕ ಖಾಲಿಖಾಲಿಯಾಗಿಯೇ ಇತ್ತು. ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ನೀವು ಕಂಡತೆ ಚಾಮರಾಜಪೇಟೆಯ ರಸ್ತೆಗಳ ಬದಿಯಲ್ಲೂ ದನ-ಮನುಷ್ಯರೆಂಬ ಬೇಧವಿಲ್ಲದೆ ಎಲ್ಲ ವಿಸರ್ಜನೆಗಳೂ ಇರುತ್ತಿದ್ದವು. ಆಗ ಇಲ್ಲಿದ್ದ ಅವಧಿಯಲ್ಲಿ ನಾನು ನಗರದಲ್ಲಿನ ಸಂಚಾರಕ್ಕೆ ಬಸ್ಸುಗಳನ್ನು ಬಳಸುತ್ತಿದ್ದುದೇ ಇಲ್ಲ. ಎಂ.ಜಿ. ರೋಡಿಗೆ ಕೂಡಾ ಆರಾಮವಾಗಿ ನಡೆದು ಹೋಗಿ ಬರಬಹುದಿತ್ತು. ಮೆಜೆಸ್ಟಿಕ್ ಪ್ರದೇಶದ ಥಿಯೇಟರುಗಳಲ್ಲಿ ಶ್ರೇಷ್ಠ ಚಿತ್ರಗಳ ಬೆಳಗಿನ ದೇಖಾವೆಗೆ ಸಲೀಸಾಗಿ ಹೋಗಿಬರುತ್ತಿದ್ದೆ. ನನ್ನ ದಿನದ ಸಮಯದ ಹೆಚ್ಚಿನ ಅವಧಿ ಗ್ರಂಥಾಲಯಗಳಲ್ಲಿ ಕಳೆಯುತ್ತಿತ್ತು. ಸುಮಾರು ಮೂರೂವರೆ ದಶಕದ ಬಳಿಕ ಮತ್ತೆ ಬೆಂಗಳೂರಿಗೆ ನೆಲೆಸಲು ಬಂದು ನೋಡುವಾಗ ಈ ಚಹರೆಗಳು ಪೂರ್ತಿ ಬದಲಾಗಿವೆ. ಈಗ ನಡೆದಾಡುವುದಕ್ಕಿಂತ ವಾಹನದಲ್ಲಿ ಹೋಗುವುದೇ ಸುರಕ್ಷಿತ ಎಂಬಂತಿದೆ. ಮೊದಲು ಬೊಂಗಳೂರು ದುಬಾರಿಯಾಗಿರಲಿಲ್ಲ. ಈಗ ಎಲ್ಲಕ್ಕೂ ಐಟಿಯವರೇ ಮಾನದಂಡ. ನಿಜವಾದ ಬೊಂಗಳೂರಿಗ ನಾಪತ್ತೆಯಾಗುತ್ತಿದ್ದಾನೆ. 90ರ ದಶಕದ ಆರಂಭದಿಂದ ಈ ನಾಗಾಲೋಟ ಶುರುವಾಯಿತು ಎನ್ನುತ್ತಾರೆ.
  ನನ್ನ ಹಳೆಯ ನೆನಪುಗಳನ್ನು ಕೆದಕಲು ಅನುಕೂಲಮಾಡಿಕೊಟ್ಟದ್ದಕ್ಕೆ ಕೃತಜ್ಞತೆಗಳು. ಹನುಮಂತ ನಗರದ ಮನೆಯ ಮೇಲಿನಿಂದ ನೀವು ಗಾಳಿಪಟ ಹಾರಿಸಿದ್ದು ಅದರ ಘಟನಾವಳಿಗಳು ಇಷ್ಟವಾದವು (ರೌಡಿರುದ್ರ ಸಹಿತ). ಇನ್ನು ನಂದಿಬೆಟ್ಟದಲ್ಲಿನ ನಿಮ್ಮ ಆತಂಕಗಳೊಂದಿಗೆ (ಮುಖ್ಯವಾಗಿ ಕುಡಿಯುವ ನೀರಿನ ಭವಿಷ್ಯ) ನನ್ನ ಸ್ಪಂದನವೂ ಇದೆ. ಇನ್ನು ಪ್ರಭಾಕರ ಜೋಶಿಯವರ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳುವುದಾದರೆ ನಿಮ್ಮ ಅಬ್ಸರ್ವೇಷನ್ ಭಾಷೆಯಲ್ಲಿ ಅದರ ಅಭಿವ್ಯಕ್ತಿ ಎಲ್ಲವೂ ನಿಮ್ಮ ವ್ಯಕ್ತಿತ್ವದ ಸಹಜ ಮತ್ತು ಅವಿಬಾಜ್ಯ ಅಂಗಗಳು. ಆದ್ದರಿಂದ ನಾನು ನಿಮ್ಮನ್ನು ಮೆಚ್ಚುವ ಹಾಗೆಯೇ ನಿಮ್ಮ ಬರವಣಿಗೆಯನ್ನು ಕೂಡಾ ಮೆಚುತ್ತೇನೆ.
  ಮಂಜುನಾಥ ಭಟ್ಟ

  ReplyDelete