19 April 2013

ಜಂಟಿ ಸೈಕಲ್ ಬೆನ್ನೇರಿ


(ಕಳೆದ ವಾರದನಡೆದು ನೋಡು ಮಂಗಳೂರು ನರಕದ ಜಾಡಿನಲ್ಲಿ ಎರಡನೇ ಭಾಗ)

ಮಂಗಳೂರ ದಾರಿಗಳ ನವೀಕರಣದಲ್ಲಿ ಸುಖಕರ ಸವಾರಿಗೆ ನುಣುಪಿನ ಮೇಲ್ಮೈ ಧಾರಾಳ ಬರುತ್ತಿದೆ. ಇದು ಗುಡ್ಡೆ ಕಣಿವೆಗಳ ಊರಾದರೂ ಹೊಸ ಪ್ರಕ್ರಿಯೆಯಲ್ಲಿ ಏರಿಳಿತಗಳೂ ಸೌಮ್ಯಗೊಳ್ಳುತ್ತಿವೆ. ಇಲ್ಲಿ ವಾಹನ ಸಂಮರ್ದ ಕಡಿಮೆ ಇಲ್ಲ ಮತ್ತು ಚಾಲನಾಶಿಸ್ತು ಹೆಚ್ಚು ಇಲ್ಲ! ಆದರೂ ದಾರಿಗಳ ಅಗಲೀಕರಣ ಹಾಗೂ ಸ್ಪಷ್ಟ ಇಬ್ಭಾಗೀಕರಣದಿಂದ ಸೈಕಲ್ ಸವಾರಿಗೆ ಅನುಕೂಲ ದಿನೇ ದಿನೇ ಹೆಚ್ಚುವುದನ್ನು ಗಮನಿಸಿದೆ. ಜ್ಯೋತಿ ಸೈಕಲ್ ಕಂಪೆನಿಯವರು ನನಗೆ ಮೊದಲಿನಿಂದಲೂ ಪರಿಚಿತರು. ಅಲ್ಲಿ ಹೋದರೆ ನಾಲ್ಕೈದು ಸಾವಿರದಿಂದ ಲಕ್ಷ ಮೀರುವ ಹತ್ತೆಂಟು ಗುಣಮಟ್ಟದ (ದೇಶೀ, ವಿದೇಶೀ) ಸೈಕಲ್ ಕೂಡಲೇ ಕೊಡಬಲ್ಲರೆಂದೂ ನನಗೆ ಗೊತ್ತಿತ್ತು. ಹಾಗಾಗಿ ಈಗ, ಅಂದರೆ ಕಳೆದ ವಾರ ಹೇಳಿದಂತೆ, ಸಂಜೆಯ ನಡಿಗೆ ಸೋತಲ್ಲಿ, ಸೈಕಲ್ಲಿಗೆ ಮರಳುವ ಯೋಚನೆಯನ್ನು ನಮ್ಮಲ್ಲಿ ಗಟ್ಟಿ ಮಾಡಿಕೊಂಡೆವು.


ಎರಡು ಸ್ವತಂತ್ರ ಸೈಕಲ್ ಖರೀದಿಸಬಹುದಿತ್ತು. ತೆಗೆದ ಮಾತಿಗೆ ದೇವಕಿಗೆ ಸೈಕಲ್ ಸವಾರಿ ಗೊತ್ತಿಲ್ಲವೆಂದು ಕಂಡರೂ ಕಲಿಯುವುದು ದೊಡ್ಡ ಮಾತಲ್ಲ. ಅಭಯ ಸಣ್ಣವನಿದ್ದಾಗ ನಾವು ಕೊಂಡಿದ್ದ ಸಣ್ಣ ಸೈಕಲ್ಲಿನಲ್ಲಿ ಇವಳು ಸಾಕಷ್ಟು ಪಳಗಿದ್ದಳೂ ಸಹ. ಸದ್ಯ ಆ ಕಲಿಕೆಯ ನವೀಕರಣಕ್ಕೆ ಗೆಳೆಯ ರೋಹಿತ್ನ ಹಳೆಯ ಸೈಕಲ್ಲನ್ನು ಎರವಲು ತಂದದ್ದೂ ಆಯ್ತು. ನಮ್ಮಂಗಳದ ಅಸಮ ನೆಲದಲ್ಲಿ (ಆಚೀಚಿನ ಮನೆಯವರು ನೋಡಿ, ಆಡಿಕೊಂಡರೆ ಎಂಬ ಸಂಕೋಚಕ್ಕೆ) ರಾತ್ರಿಯ ವೇಳೆ ಏಕಾಂಗಿಯಾಗಿ ದೇವಕಿ ಸಾಕಷ್ಟು ಸರ್ಕಸ್ಸೂ ಮಾಡಿದಳು. ಆದರೆ ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ವಾಹನ ಚಾಲನೆಗೆ ಬೇಕಾದ ದಿಟ್ಟತನ (ಹಿಂದೆ ಕಾರು ಚಾಲನೆಗೆ ನಾನು ಮತ್ತು ಅಭಯ ಒತ್ತಾಯಿಸಿದಾಗ ತಿಳಿದಿತ್ತು.), ಮಿಗಿಲಾಗಿ ರಸ್ತೆ-ಪ್ರಜ್ಞೆ ರೂಢಿಸಿಕೊಳ್ಳುವಲ್ಲಿ ಹಿಂಜರಿಕೆ ಆಕೆಯ ಸ್ವತಂತ್ರ ಸವಾರಿಯ ಮಾತನ್ನು ತಳ್ಳಿಹಾಕಿತು. ಹಾಗಾಗಿ ನಾನು ಎಂದೋ ಭಾರತೀಯ ರಸ್ತೆಗಳಲ್ಲಿ ವಿದೇಶಿಯರು ಬಳಸುತ್ತಿದ್ದ ಜಂಟಿ ಸೈಕಲ್ನ್ನು ನೋಡಿದ್ದು ನೆನಪಿಸಿಕೊಂಡು, ಅಂತರ್ಜಾಲದಲ್ಲೂ ಜಾಲಾಡಿ, ಒಂದು ಖರೀದಿಸಲು ಮನಸ್ಸು ಮಾಡಿದೆ.

ಅಂತರ್ಜಾಲದಲ್ಲಿ ಅಸಂಖ್ಯ ತಯಾರಕರೂ ಮಾದರಿಗಳೂ ಕಾಣಸಿಕ್ಕವು. ಆದರೆ ಶೇಕಡಾ ತೊಂಬತ್ತೊಂಬತ್ತು ವಿದೇಶೀ ಮಾಲುಗಳು ಎಂದಾಗ ಮನಸ್ಸು ಭಾರವಾಯ್ತು. ಭಾರತದ ಏಕೈಕ ಜಂಟಿ ಸೈಕಲ್ ತಯಾರಕರು ಚೆನ್ನೈಯಲ್ಲಿರುವ ಬಿ.ಎಸ್.ಎ ಕಂಪೆನಿ. ಮತ್ತಿವರಲ್ಲಿರುವುದು ಒಂದೇ ಸರಳ ಮಾದರಿ ಮಾತ್ರ. ಒಂದೇ ಹ್ಯಾಂಡಲಿನ ಎರಡೇ ಚಕ್ರಗಳ ಸೈಕಲ್ಲಿಗೆ ಕುಳಿತು ಸ್ವತಂತ್ರವಾಗಿ ಶಕ್ತಿಯೂಡುವ (ಪೆಡಲ್ ಮಾಡುವ) ವ್ಯವಸ್ಥೆ ಮಾತ್ರ ಇಬ್ಬರಿಗೆ; ಇದೇ ಟ್ಯಾಂಡಮ್ ಅಥವಾ ಜಂಟಿ ಸೈಕಲ್ಸಂಪರ್ಕಿಸಿದೆ, ತಮ್ಮ ರಚನೆಯಲ್ಲಿ ವೈವಿಧ್ಯ ಅಳವಡಿಸುವಲ್ಲಿ ಇವರಿಗೆ ಆಸಕ್ತಿಯಿರಲಿಲ್ಲ. ಉದಾಹರಣೆಗೆ ನಾನು ಆರಡಿ ಸಮೀಪದವ, ದೇವಕಿ ಐದಡಿ ತುಸುವೇ ಮೀರಿದವಳು; ಸಹಜವಾಗಿ ಸೀಟಿನ ನಿಲುಕು ಬೇರೆಬೇರೆ. ಚಕ್ರ ಸಣ್ಣದಾಯ್ತು, ಸಣ್ಣ ದಿಬ್ಬಕ್ಕೂ ಪೆಡಲ್ ಉಜ್ಜೀತು. ಇಬ್ಬರ ಭಾರಕ್ಕೆ ಇಲ್ಲಿನ ತೀವ್ರ ಇಳುಕಲುಗಳಲ್ಲಿ ಕೇಬಲ್ ಬ್ರೇಕ್ ವಿಶ್ವಾಸ ಬರುವುದಿಲ್ಲ. ವಿದೇಶೀ ಮಾಲುಗಳಲ್ಲಿ ಶಕ್ತಿವರ್ಧನೆಗೆ ವಿವಿಧ ಗಿಯರುಗಳ ವ್ಯವಸ್ಥೆ ಕೊಡುತ್ತಾರೆ. ಆಮದಿತ ಗಿಯರಾದರೂ ಅಳವಡಿಸಬಹುದೇ? ಕಂಪೆನಿಯದ್ದು ಒಂದೇ ಮಂತ್ರ -  ‘ಸೈಕಲ್ಲಿನ ಚೌಕಟ್ಟು, ಬಿಡಿಭಾಗಗಳು ಸ್ಟ್ಯಾಂಡರ್ಡು. ವೈವಿಧ್ಯಕ್ಕೆ ಅವಕಾಶವಿಲ್ಲ!’ (ಬೇಕಾದರೆ ಇಟ್ಕೊಳ್ಳಿ, ಇಲ್ಲಾ ಗುಜರಿಗೆ ಹಾಕಿ ಧೋರಣೆ!!) ಮೊದಲೇ ನೋಡಿ, ಅನುಭವಿಸಿ ಖರೀದಿಸೋಣವೆಂದರೆ ಕಂಪೆನಿ ಯಾವುದೇ ವ್ಯವಸ್ಥೆ ಮಾಡುವ ಉತ್ಸಾಹ ತೋರಲಿಲ್ಲ. ‘ಪೂರ್ಣ ಹಣ ಮುಂಗಡ ಕಳಿಸಿ. ಸೈಕಲ್ ಕಳಿಸುತ್ತೇವೆ.’ ಸ್ಥಳೀಯ ವ್ಯಾಪಾರಿ ಮೂಲಕ ತರಿಸಿದರಾಯ್ತೆಂದು ಜ್ಯೋತಿ ಸೈಕಲಿನ ಮಿತ್ರರನ್ನು ಮುಂದು ಮಾಡಿದೆ. ಕಂಪೆನಿವ್ಯಾಪಾರಿಗಳು ಒಮ್ಮೆಗೆ ಎರಡು ಖರೀದಿಸಬೇಕುಎಂದು ಕರಾರು ಮುಂದೊಡ್ಡಿದರು. ಅದೃಷ್ಟವಶಾತ್ ಜ್ಯೋತಿಯವರು ತ-ಕರಾರು ಮಾಡದೆ, ನನ್ನಿಂದೇನೂ ಮುಂಗಡ ಅಥವಾ ಲಿಖಿತ ಒಪ್ಪಂದ ಮಾಡಿಸಿಕೊಳ್ಳದೆ ಎರಡನ್ನು ತರಿಸಿ, ಕಂಪೆನಿ ನನಗೆ ಹೇಳಿದ್ದಕ್ಕಿಂತಲೂ ಕಡಿಮೆ ಬೆಲೆಗೇ ಒಂದನ್ನು ನನಗೆ ಕೊಟ್ಟರು (ರೂ. ೭೨೦೦/- ಅವು ಬಂದು ತಿಂಗಳು ಎಂಟಾದರೂ ಇನ್ನೊಂದು ಇಂದೂ ಜ್ಯೋತಿಯವರಲ್ಲೇ ಉಳಿದಿದೆ, ಪಾಪ), ಇಂದಿಗೂ ನಾನು ಹೋದರೆ ಸೈಕಲ್ಲಿಗೆ ಉಚಿತ ಆರೈಕೆಯನ್ನೂ ಮಾಡುತ್ತಿದ್ದಾರೆ.

ಗೋವಿಂದನ ತ್ರಿಚಕ್ರ ಸೈಕಲ್, ಸಾಲಿಗ್ರಾಮದ ಗೆಳೆಯ ವೆಂಕಟ್ರಮಣ ಉಪಾಧ್ಯರ ಮಡಚೋ ಸೈಕಲ್ (ಅಮೆರಿಕಾದ್ದು, ಬೆಲೆ ಸುಮಾರು ಮೂವತ್ತು ಸಾವಿರ ರೂಪಾಯಿ. ಆದರೆ ಸದ್ಯ ಮೈಸೂರಿನ ಗೆಳೆಯ ಪಂಡಿತಾರಾಧ್ಯರಲ್ಲಿರುವುದು ಮತ್ತೀಗ ಜ್ಯೋತಿ ಸೈಕಲ್ ಮಾರ್ಟಿಗೂ ಬಂದಿರುವ ಮಡಚೋ ಮಾದರಿ ಚೈನಾದ್ದು ಬೆಲೆ ಕೇವಲ ಹದಿನಾಲ್ಕೇ ಸಾವಿರ ರೂಪಾಯಿ!) ಎಲ್ಲಾ ವಿದೇಶೀ ಮಾಲುಗಳು. ಹೀಗೇ ಗೋವಿಂದ ಜಾಲಾಡಿ ಕೊಟ್ಟ ಅಸಂಖ್ಯ ವಿದೇಶೀ ತಯಾರಕರಲ್ಲಿ ಜಂಟಿ ಸೈಕಲ್ಲುಗಳೂ ಹಲವು ಮಾದರಿಗಳಲ್ಲಿ ಲಭ್ಯ. ಎರಡೇನು ಮೂರು ಪೆಡಲ್ ಸರಣಿಯವು, ದೀರ್ಘ ಓಟಗಳಲ್ಲಿ ಸವಾರರ ಗಂಟು ಗದಡಿ ಹೇರಿಕೊಳ್ಳಲು (ಜೀಪು, ಟ್ರ್ಯಾಕ್ಟರ್ಗಳಿಗೆ ಬರುವಂತೆ) ಒಂದು ಚಕ್ರದ ಟ್ರೈಲರ್, ಹಿಂದಿನ ಚಕ್ರಕ್ಕಷ್ಟೇ ಸಾಲದು ಎಂದರೆ ಮುಂದಿನದಕ್ಕೂ ಗೇರು ಸೌಲಭ್ಯ ಕೊಡುವ ಮಾದರಿಗಳು, ಕೊನೆಗೆನೀವು ಕೇಳಿ, ನಾವು ಕೊಡ್ತೇವೆಎನ್ನುವವರೆಗೂ ತಯಾರಕರೇನೋ ಸಿಗುತ್ತಾರೆ. ಎಲ್ಲಾ ದೃಢ, ವಿಶ್ವಸನೀಯ ಸರಿ. ಆದರೆ ದೊಡ್ಡ ಕೊರತೆ ಬೆಲೆ; ದುಬಾರಿ.

ಮೊನ್ನೆ ಹೀಗೇ ನಡೆದು ಹೋಗುತ್ತಿರಬೇಕಾದರೆ ಅಕಸ್ಮಾತ್ತಾಗಿ ಈಚೆಗೆ ದುಬೈಯಿಂದ ಬಂದೊಬ್ಬ ಗೆಳೆಯನ ಭೇಟಿಯಾಯ್ತು. ಜಂಟಿ ಸೈಕಲ್ ಕುರಿತಂತೆ ಅವನಲ್ಲಿ ಬೇರೊಂದು ಯೋಜನೆ ಇತ್ತು. “ದುಬೈಯಲ್ಲಿ ಯು ನೋ, ಖಾಯಂ ಊರು ಬಿಡುವ ಜನಗಳು ಇರ್ತಾರೆ. ಅವರು ಅರ್ಜೆನ್ಸೀಗೇ ಟೀವಿ, ಕಾರೂ, ಫ್ರಿಜ್ಜುಗಳಂತೇ ವೈವಿಧ್ಯಮಯ ಸೈಕಲ್ಲುಗಳನ್ನೂ ಜಸ್ಟ್ ತ್ರೋ ಅವೇ ಬೆಲೆಗೆ ಮಾರ್ಕೊಂತಾರೆ. ಅಂಥಲ್ಲಿ ನನ್ನ ಫ್ರೆಂಡಿಗೆ ಹೇಳ್ತೇನೆ. ಒಂದು ಬೆಸ್ಟ್ ಮಾಡೆಲ್ ಟ್ಯಾಂಡಮ್ ಸೈಕಲನ್ನು ಕೊಳ್ತಾನೆ. ಇಂಡಿಯನ್ ರುಪೀಸ್ಗೆ ಕನ್ವರ್ಟ್ ಮಾಡ್ದ್ರೆ ಅಬ್ಬಬ್ಬಾಂದ್ರೆ ಏಳೆಂಟು ಸಾವಿರ ಅಷ್ಟೇ. ಮತ್ತೆ ನನ್ನ ಇನ್ನೊಬ್ಬ ಮಿತ್ರಂದು ಕಂಟೇನರ್ ಸರ್ವಿಸ್ ಟು ಇಂಡಿಯಾ ರೆಗ್ಯುಲರ್ ಇರುತ್ತೆ. ಅದಕ್ಕೆ ಯೂ ನೋ ಇಂಡಿವಿಜುವಲ್ ಟ್ಯಾಕ್ಸ್ ಬೀಳಲ್ಲಾ. ಯೂ ವಿಲ್ ಹ್ಯಾವ್ ಯುವರ್ ಡ್ರೀಮ್ ಸೈಕಲ್ ಡೆಡ್ ಚೀಪ್ ಮ್ಯಾನ್.” ನನಗದರ ನೈತಿಕತೆಯೇ ಒಪ್ಪಿಗೆಯಾಗಲಿಲ್ಲ. ಆದರೂ ಆ ಚರ್ಚೆ ಬದಿಗೊತ್ತಿ ಹೀಗೆ ಬಂದ ಸೈಕಲ್ ರಿಪೇರಿಗೀಡಾದರೆ ಏನು ಗತಿ ಎಂದಷ್ಟೇ ಅವನ ಬಳಿ ಚರ್ಚಿಸಿದೆ. ಎರಡು ತಿಂಗಳ ಹಿಂದೆ ಉಪಾಧ್ಯರ ಸೈಕಲ್ಲಿನ ಹಿಂದಿನ ಚಕ್ರದ ಗುಂಭ ಸವಕಳಿಯಲ್ಲಿ ಬಿಗಿದುಕೊಂಡಿತು. ಸ್ವತಃ ಹಲವು ಯಂತ್ರ ಪರಿಣತಿ ಗಳಿಸಿದ ಉಪಾಧ್ಯರ ಯಾವ ಹಿಕ್ಮತ್ತಿಗೂ ಅದು ಜಗ್ಗಲಿಲ್ಲ. ಉಡುಪಿ ಮಂಗಳೂರು ಬಿಡಿ, ತರಿಸಿಕೊಟ್ಟ ಬೆಂಗಳೂರಿನ ಬಲು ದೊಡ್ಡ ಸೈಕಲ್ ವಿತರಕನಲ್ಲೂ ಪರಿಹಾರ ಸಿಗಲಿಲ್ಲ! ಮತ್ತಾ ಚಕ್ರ ಸಂಯೋಜನೆ ತಿಂಗಳೆರಡರ ಕಾಲ ತೆಗೆದುಕೊಂಡು, ಮೂಲ ತಯಾರಕರಲ್ಲಿಗೇ ಹೋಗಿ ಸರಿಯಾಗೇನೋ ಬಂತು. ಆದರೆ ಇಲ್ಲಿನ ಸಾಗಣೆ ವೆಚ್ಚ ಮತ್ತೆ ಬಿಡಿಭಾಗ ಹಾಗೂ ಮಜೂರಿ ಎಲ್ಲಾ ವಿದೇಶೀ ಸ್ತರದಲ್ಲಿ ನಡೆಯಬೇಕು ಎನ್ನುವಾಗ ಇಲ್ಲೇ ಎರಡು ಜಂಟಿ ಸೈಕಲ್ ಕೊಳ್ಳಬಹುದು, ಎಂಬಲ್ಲಿಗೆ ವಾದ ಮುಗಿಸಿದೆ.   

ಹೀಗೆ ಅನಿವಾರ್ಯತೆಯಲ್ಲೇ ನಮಗೊದಗಿದ ಭಾರತೀಯ ಜಂಟಿ ಸೈಕಲ್ಲಿನ ಕೊರತೆಗಳೇನಿದ್ದರೂ ಸಂದ ಈ ಆರೆಂಟು ತಿಂಗಳಲ್ಲಿ  ಅದು ನಮಗೆ ಕೊಟ್ಟ ಅನುಭವ ಅಪಾರ ಮತ್ತು ಚೇತೋಹಾರಿಯೇ ಸರಿಮೊದಲು ಅದನ್ನು ಅಂಗಡಿಯಿಂದ ಕೊಂಡು ತರಲು ನಾನು ಒಬ್ಬನೇ ನೆಹರೂ ಮೈದಾನದ ಆ ತಲೆಗೆ  ನಡೆದೇ  ಹೋಗಿದ್ದೆ. ಜ್ಯೋತಿಯವರು ಮೊದಲೂ ಇಂಥವನ್ನು ಮಾರಿದ ಅನುಭವದಲ್ಲೇ ಕೇಳಿದರು ಹೇಗೆ ಟೆಂಪೋದಲ್ಲಿ ಒಯ್ತೀರಾ?” ನಾನು ಒಬ್ಬನೇ ಸವಾರಿ ಹೊರಟಾಗ ಬಹಳ ಎಚ್ಚರಿಕೆಯನ್ನೇ ಹೇಳಿದರು. ಅನಂತರವೂ ಸಿಕ್ಕ ಬಹುಮಂದಿ ಕೇಳುವುದು ಒಂದೇ ಅಯ್ಯೋ ಇಷ್ಟುದ್ದ! ಹೆದ್ದಾರಿಗಳಲ್ಲಷ್ಟೇ ನೀವು ಓಡಿಸಬಹುದಲ್ವಾ? ಇಬ್ಬರಿಲ್ಲದೆ ಓಡಿಸೊಕ್ಕಾಗುತ್ತಾ?” ವಾಸ್ತವವಾಗಿ ವಾಹನ ಸಮ್ಮರ್ದದಲ್ಲಿ ಇತರ ವಾಹನ ಚಾಲನೆಯ ಅನುಭವವಿದ್ದವರಿಗೆ (ಸೈಕಲ್ ಗೊತ್ತಿರಬೇಕು) ಜಂಟಿ ಸೈಕಲ್ ಯಾವುದೇ ಸಮಸ್ಯೆಯನ್ನು ಒಡ್ಡುವುದಿಲ್ಲ. ತುಸು ಉದ್ದ ಹೆಚ್ಚಿದೆ ಎಂಬ ಎಚ್ಚರದಲ್ಲಿ ಮಾಮೂಲೀ ಸೈಕಲ್ಲಿನ ಬಾಗುಬಳಕನ್ನು ನಿವಾರಿಸಿದರೆ ಎಲ್ಲೂ ಓಡಿಸಬಹುದು. ನಾವು ವಾರದ ದಿನದ ಸಂಜೆಯ ಹಂಪನಕಟ್ಟೆಯ ವಾಹನ-ಪೂರದಲ್ಲೂ ನಮ್ಮ ಕಿರುದೋಣಿಯನ್ನು ನಿರಾತಂಕವಾಗಿ ಪಾರುಗಾಣಿಸಿದ್ದೇವೆ. ಬಂದರ್, ರಥಬೀದಿಯ ಗಲ್ಲಿಗಳಲ್ಲೂ ನಡೆದಷ್ಟೆ ಸಹಜವಾಗಿ ಹೊಕ್ಕು ಹೊರಟಿದ್ದೇವೆ. ನಿಜಾ ಹೇಳಬೇಕೆಂದರೆ ನಾವು ಹೆದರಿದ್ದೇ ಹೆದ್ದಾರಿಗಳನ್ನು, ದಿಟ್ಟಿ ದಿಗಂತಕ್ಕಟ್ಟಿದರೂ ಕೊನೆ ಮುಟ್ಟದ ನೇರ ಕಾಂಕ್ರೀಟ್ ನುಣುಪನ್ನು! ಅಲ್ಲಿನ ವಾಹನಗಳ ವೇಗ ಮತ್ತು ಗೊಂದಲದಲ್ಲಿ ನಾವು ತುರ್ತು ರಕ್ಷಣೆ ಬಯಸಿ ಮಾರ್ಗ ಬಿಟ್ಟದ್ದೇ ಆದರೆಪರಿಮಳದಲ್ಲಷ್ಟೇ ಇರವನ್ನು ಸಾರುತ್ತಿರುವ ಮೋರಿಯಾಳಕ್ಕೋ ಎಲ್ಲಾ ತೆರನ ತ್ಯಾಜ್ಯಗಳ ಪರ್ವತಕ್ಕೋ ಸಂಪರ್ಕ ಸಾಧಿಸಿ ಇನ್ನಿಲ್ಲದ ಅಪಾಯ ತಂದುಕೊಳ್ಳುವುದು ಖಾತ್ರಿ. ಸೈಕಲ್ಲಿನ ಪುಟ್ಟ ಚಕ್ರಗಳು ದೂಳರಾಶಿಯಲ್ಲಿ ಹೂತು ಹೋಗುವ, ತೆಳು ಮರಳ ಲೇಪ ಹೊತ್ತ ನುಣ್ಣನೆ ಇಂಟರ್ಲಾಕ್ ಹಾಸಿನಲ್ಲಿ ಜಾರುವ, ಅಂಚಿನ ಚಡಿಯನ್ನು ಉತ್ತರಿಸಲಾಗದೆ ಮಗುಚಿಯೇ ಬೀಳುವ ಸಾಧ್ಯತೆಗಳನ್ನು ನೆನೆಸಿದರೆ ಭಯವಾಗುತ್ತದೆ.

ಭಾರತದ ಜಂಟಿ ಸೈಕಲ್ ತಯಾರಿ ಕಂಪೆನಿ ಇರುವ ಚೆನ್ನೈಯಲ್ಲಿನ ದಾರಿಗಳಿಗೆ ತೀವ್ರ ಪ್ರತಿಸ್ಪರ್ಧೆ ಕೊಡುತ್ತವೆ ನಮ್ಮ ಊರಿನ (ಮಂಗಳೂರು) ದಾರಿಗಳು. ನಾವು ಮನೆಯಿಂದ ಹೊರಟರೆ ಅತ್ತ ಕದ್ರಿ ಕಂಬಳದ ಏರು, ಇತ್ತ ನಂತೂರು ಗುಡ್ಡೆ, ಇನ್ನೊಂದು ಬದಿಗೆ ಜ್ಯೋತಿಗೇರುವ ಉಡ್ ಲ್ಯಾಂಡ್ಸ್ ಚಡಾವು. ಬಾವುಟಗುಡ್ಡೆಯ ಕುತ್ತೇರು ತುಳಿಯುವುದು ಬಿಡಿ, ಸೈಕಲ್ಲನ್ನು ನೂಕಿ ಸಾಗಿಸುವುದೂ ಸಮಸ್ಯೆಯೇ ಆದದ್ದುಂಟು. ಇನ್ನವನ್ನು ಇಳಿಯಬೇಕಾದರೋ ಎಷ್ಟೋ ಬಾರಿ (ಅಂತಿಮವಾಗಿ ಹ್ಯಾಂಡ್ ಬ್ರೇಕ್ ಬಳಸುವ ಮೋಟಾರ್ ವಾಹನಗಳಿಗೆ ತದ್ವಿರುದ್ಧವಾಗಿ) ಸೀಟಿನಿಂದ ನಾನು ಧುಮುಕಿಲೆಗ್ ಬ್ರೇಕ್ಹಾಕಿದ್ದೂ ಇದೆ. ಇಲ್ಲವಾದರೆ ಭೂಕಕ್ಷೆ ಕಳಚಿ ಚಂದ್ರ ಮಂಡಲ ಸೇರುವ ಆತುರದಲ್ಲಿವಿಮೋಚನಾ ವೇಗವನ್ನು ಮೀರಿದ ಆಕಾಶ ನೌಕೆಯಂತೆ ಅನಂತ ವಿಶ್ವದಲ್ಲಿ ನಾವಿಬ್ಬರೂ ಲೀನವಾಗುವುದು ನಿಶ್ಚಯ!

ಜಂಟಿ ಸೈಕಲ್ಲಿಗೆ ಮೊದಲೇ ಹೇಳಿದಂತೆ ಸಾಲಿನಲ್ಲಿ ಎರಡು ಪೆಡಲ್ಲುಗಳು. ಆದರೆ ಇವುಗಳನ್ನು ತುಳಿಯುವವರ ವೈಯಕ್ತಿಕತೆಯನ್ನು ಕಾಯ್ದುಕೊಡುವಂತೆ ಹಿಂದಿನ ಚಕ್ರದ ಎರಡೂ ಬದಿಗೆ ಫ್ರೀ ವೀಲುಗಳಿರುತ್ತವೆ. ಎದುರಿನ ಪೆಡಲಿನ ಚೈನ್ ಬಲ ಬದಿಯಿಂದ ಹಾಯ್ದರೆ, ಎರಡನೆಯದು ಎಡಬದಿ. ಅವುಗಳನ್ನು ಹೊದಿಕೆಯಿಲ್ಲದೇ ಮುಕ್ತವಾಗಿರಿಸಿದ್ದಾರೆ. ಸಹಜವಾಗಿ ಎರಡು ಸವಾರರು ಮೊಣಕಾಲ ಕೆಳಗೆ ಯಾವುದೇ ಸಡಿಲ ಬಟ್ಟೆ ಧರಿಸಿದರೆ ಕ್ರ್ಯಾಂಕ್ ವೀಲ್ ಮತ್ತು ಚೈನಿನ ನಡುವೆ ಅವುಗಳ ಅಂಚು ಸಿಕ್ಕಿ ಅಪಘಾತವೇ ಆದೀತು. ಅಲ್ಲದಿದ್ದರೂ ಚೈನಿನ ಮಸಿ ಮೆತ್ತುವುದಂತೂ ಇದ್ದದ್ದೇ. ನಾನು ಇರುವ ಪ್ಯಾಂಟುಗಳ ಕಾಲನ್ನೇ ಕೆಸರುಗದ್ದೆಗಿಳಿಯುವವನಂತೆ ಮೇಲಕ್ಕೆ ನಾಲ್ಕು ಮಡಿಚಿಬಿಡುತ್ತೇನೆ. ದೇವಕಿ ಸಾಕಷ್ಟು ಬಿಗಿಯಾದ ಸಲ್ವಾರ್ ಪ್ಯಾಂಟನ್ನೇ ಹಾಕುತ್ತಿದ್ದರೂ ಇದರ ಮಸಿಗಾಗಿ ಎರಡು ಪ್ಯಾಂಟನ್ನೇ ಮೀಸಲಿಟ್ಟಿದ್ದಾಳೆ. ಖಂಡವಿದೆಕೋ ಮಾಂಸವಿದೆಕೋ ಎನ್ನುವಂಥಾ ಬಿಗಿಬಟ್ಟೆ, ಉಪಯೋಗಕ್ಕಿಲ್ಲದ ಇಪ್ಪತ್ತೆರಡು ಕಿಸೆಗಳ ಮುಕ್ಕಾಲು ಪ್ಯಾಂಟು, ಗ್ರೀಕ್ ಯೋಧನಂತೆ ಮೊಣಕಾಲುಕೈಗಳಿಗೆ ರಕ್ಷಾಚಿಪ್ಪುಗಳು, ತಲೆಗೆ ನವರಾತ್ರಿ ವೇಷದವನು ಧರಿಸುವ ಮುಟ್ಟಾಳೆಯಂಥಾ ಶಿರಸ್ತ್ರಾಣ, ಮಣಿಗಂಟಿಗೆ ಬ್ಯಾಂಡ್, ಕೈಗವುಸು, ಗಟ್ಟಿ ಚರ್ಮದ ಪಾದರಕ್ಷೆಯೇ ಮೊದಲಾದಸರ್ಕಸ್ ಸಾಮಗ್ರಿಸಂಗ್ರಹ ನಡೆಸದೇ ನಾವುನಾವೇ ಎಂಬಂತೆಹಾಯಾಗಿ ಸಂಜೆ ಐದರ ಸುಮಾರಿಗೆ ಸವಾರಿ ಹೊರಟರೆ ಒಂದೂವರೆ ಗಂಟೆ ಸುತ್ತಿ ಬರುತ್ತೇವೆ.

ಎಲ್ಲರಿಗು ತಿಳಿದಂತೆ ಮಂಗಳೂರು ಗುಡ್ಡ ಕಣಿವೆಗಳ, ಅಂಕುಡೊಂಕಿನ ಗಲ್ಲಿಗಳ ಸಾಂಪ್ರದಾಯಿಕ ನಗರ. ಬೆಂಗಳೂರು, ಮೈಸೂರಿನ ಹಾಗೆ ಮೊದಲು ಮಟ್ಟಗೋಲೆಳೆದು, ಅನಂತರ ಅಡಿಕೋಲಿಟ್ಟು ನಿಯತ ಅಳತೆಗೆ ದಪ್ಪಕ್ಕೆಳೆದ ಅಡ್ಡನೀಟ ಗೀಟುಗಳಲ್ಲ ಇಲ್ಲಿನ ದಾರಿ. ಗಟ್ಟಿ ಸೀಟಿನ ಮೇಲೆ ಕುಳಿತು ಗಡಗುಟ್ಟುವ ಸವಾರಿ ಮೊದಲ ದಿನವೇ ದೇವಕಿಗೆ ಅಸಾಧ್ಯವೆನಿಸಿತುಕುಶನ್ ವರ್ಕರ್ ಪುಟಗೋಸಿ ಸೈಕಲ್ ಸೀಟ್ನ್ನು ಕಡೆಗಣ್ಣಲ್ಲಿ ನೋಡಿ ನೋಡುವಾ ಬಿಟ್ಟು ಹೋಗಿಎಂದಾಗ ಕನಲಿದ ದಾಕ್ಷಾಯಿಣಿಯಂತೆ (ಇಲ್ಲ, ನಾಲ್ಕು ಧಿಂಗಣ ಹಾಕಲಿಲ್ಲ) ಮನೆಯಲ್ಲಿನ ಪುಟ್ಟ ದಿಂಬನ್ನೇ ಕೆಲವು ದಿನಗಳಿಗೆ ಸೀಟಿನ ಮೇಲೆ ಹೊಂದಿಸಿ ಕಟ್ಟಿಕೊಂಡಳು. ಹ್ಯಾಂಡಲ್ ಹಿಡಿಯುವ ನಾನೂ ನುಣ್ಣನೆಯ ಕಾಂಕ್ರೀಟ್ ರಸ್ತೆ ಬಿಡದ ಎಚ್ಚರ ವಹಿಸುತ್ತಿದ್ದೆ. ಅನಿವಾರ್ಯತೆಯ ಹೊಂಡ ಒರಟು ಸವಾರಿಗಳು ಬಂದಲ್ಲಿ ಆಘಾತವಾಗದಂತೆ ನಿಭಾಯಿಸುತ್ತಿದ್ದೆ, ನಿಧಾನಿಸುತ್ತಿದ್ದೆ. ಇನ್ನು ವೇಗನಿರೋಧಕ ದಿಬ್ಬಗಳು ಬಂದಲ್ಲೆಲ್ಲಾದಾರಿಕಾಣದಸಹವಾರಿಗೆ ಬಾಯ್ದೆರೆ ಎಚ್ಚರಿಕೆಯನ್ನೂ ಹೇಳುತ್ತೇನೆ. ಆದರೆ ದಿನಗಳೆದಂತೆ ದೇವಕಿಯೂ ಪಳಗಿದ್ದಾಳೆ. ಇಲ್ಲಿ ಬೈಕ್ ಕಾರುಗಳಂತೆ ಜಡ ಕೂರುವಿಕೆ ಇಲ್ಲ. ಪೆಡಲ್ ತುಳಿಯುವ ಬಲಕ್ಕೆ ಗಟ್ಟಿ ಸೀಟೇ ಸರಿ ಎನ್ನುವುದನ್ನು ಅನುಭವದಲ್ಲಿ ಕಂಡುಕೊಂಡಿದ್ದಾಳೆ. ದೇವಕಿಗೇ ಮೂಡಿದ ಮೇಲೆ ನಾವಿಬ್ಬರೂ ಸೈಕಲ್ಲಿನ ಮಿತಿಗಳನ್ನು ಮೀರಿ ಸವಾರಿಯ ಆನಂದವನ್ನು ಕಾಣುವುದು ಸುಲಭವಾಯಿತು.

ಸವಾರನ ಎತ್ತರದ ನಿಲುವಿನಲ್ಲಿ ಮರೆಯಾಗುವಜಂಟಿ ಸವಾರಹೆಚ್ಚಿನ ದಾರಿಹೋಕರಿಗೆ ಕಡೇ ಗಳಿಗೆಯ ಅಚ್ಚರಿ. “ಏ ಇದು ನೋಡಾಆಆಆಎನ್ನುವಲ್ಲಿಂದ ಎಷ್ಟೂ ಉದ್ಗಾರಗಳನ್ನು ನಾವು ಇಂದೂ ಕೇಳುತ್ತೇವೆ. ಹಾದು ಹೋಗುವ ಜನ ಬಿಡಿ, ಬಹುತೇಕ ಎಲ್ಲಾ ವಾಹನ ಸವಾರರಿಂದಲೂ ನಮಗೆ ಪ್ರಶಂಸೆಯ ಬಹು ಸನ್ನೆಗಳು - ಚಿಮ್ಮುವ ಹೆಬ್ಬೆರಳು, Vಜಯೀಭವ ಅಂಗುಲಿ ವಿನ್ಯಾಸ, ಕಿರುನಗೆ, ಹಾರ್ಮುತ್ತು ಬರುತ್ತಲೇ ಇರುತ್ತವೆ. (Vಜಯೀಭವ  ಕುರಿತಂತೆ ಪಂಡಿತಾರಾಧ್ಯರಿಗೊಂದು ನಿರೀಕ್ಷಣಾ ಸ್ಥಗಿತಾದೇಶ: ಕಲಮು ೧. ಕನ್ನಡದ ವಿ ತೋರಿಸಲು ಅಂಗುಲಿವಿನ್ಯಾಸ ಇಲ್ಲ. ಕಲಮು ೨. ಚಾಲ್ತಿಯಲ್ಲಿರುವ ಅಂಗುಲಿವಿನ್ಯಾಸದ ಇಂಗ್ಲಿಶ್ ಅರ್ಥಸ್ಫುರಣೆಯನ್ನು ಕನ್ನಡಕ್ಕೆ ಒಗ್ಗಿಸಿ ಶ್ರೀಮಂತಗೊಳಿಸಲಾಗಿದೆ. ಇದನ್ನೇ ಮುಂದುವರಿಸಿಮುಖಪುಸ್ತಕLikeಗಳನ್ನು ಕನ್ನಡದ ಲಾಯಕ್, Commentsನ್ನು ಕಾಮಂತ್ರ, Share (/)ಮಪಾಲು ಎಂದಿತ್ಯಾದಿ ಅರ್ಥವಿಸುವ ಪ್ರಕ್ರಿಯೆಯನ್ನು ಕಗಪ (ಕನ್ನಡ ಗಣಕ ಪರಿಷತ್ತು) ಗಮನಿಸಬಹುದು. ಕಲಮು ೩. ಮತಾಚಾರದಲ್ಲೂ ತುರ್ತು ಪರಿಸ್ಥಿತಿಯಲ್ಲೂ ಈ ಅಂಗುಲೀ ವಿನ್ಯಾಸ ಅರ್ಥ ವ್ಯಾಪಿಸಿಕೊಳ್ಳುವುದು ಎಲ್ಲರಿಗೂ ತಿಳಿದದ್ದೇ ಇದೆ. ಸಾಮಾನ್ಯ ದೇಗುಲ, ಇಗರ್ಜಿಗಳೆದುರು ಭಕ್ತಾದಿಗಳು ಮಾಡುವ ಅಂಗವಿನ್ಯಾಸಕ್ಕೆ ಸಂವಾದಿಯಾಗಿ ನೆಲ್ಲಿಕಾಯ್ ರಾಘವೇಂದ್ರ ಮಠದ ಎದುರು ಯಾರಾದರೂ ಮಧ್ವಾಚಾರ್ಯರನ್ನು ಕಂಡು ನಮ್ಮ ಧರ್ಮ ನಿರಪೇಕ್ಷಕ್ಕೆ ಭಂಗಬರಬಾರದು. ಮತ್ತೆ ನಾವು ಕೆಲವೆಡೆಗಳಲ್ಲಿ ದಮ್ಮು ಕಟ್ಟಿ ಸೈಕಲ್ ತುಳಿಯುವ ಸಂಕಟದ ನಡುವೆ ಅಂಗುಲಿವಿನ್ಯಾಸವನ್ನು ಅಣಕಾಸ್ತ್ರವಾಗಿಸಬಾರದೆಂಬ ಎಚ್ಚರದಲ್ಲೂ ಇಲ್ಲಿ ಅರ್ಥವಿಸ್ತರಣೆ ಕೊಡುವುದಾಗಿದೆ).

ಭರದಿಂದ ಹಾದು ಹೋದ ವಾಹನ ತಡವರಿಸಿ ನಿಂತೋ ತಿರುಗಿ ಬಂದೋ ನಮ್ಮನ್ನು ಪೂರ್ಣ ಕಣ್ಣುತುಂಬಿಕೊಂಡು, ಕೆಲವೊಮ್ಮೆ ಕದ್ದುಮುಚ್ಚಿ ಚರವಾಣಿಯ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದುಕೊಂಡು ಹೋಗುವುದು ನಮಗೆ ರೂಢಿಸಿದೆ. ಕೆಲವು ಧೈರ್ಯಸ್ಥರು ನಮ್ಮ ಅನುಮತಿ ಕೋರಿ ಹಾಗೇ, ತಾವು ಜೊತೆಗೊಟ್ಟೂ (ಒಂದಿಬ್ಬರು ದೇವಕಿ ಇಳಿದು ಏನೋ ಖರೀದಿಗೆ ಹೋದ ಕಾಲದಲ್ಲಿ ತಾವೇ ಆ ಸೀಟಿನಲ್ಲಿ ಕೂತು ಪೋಸ್ ಕೊಟ್ಟೂ) ಚಿತ್ರ ತೆಗೆದುಕೊಂಡದ್ದಿದೆ. ಪಡೀಲಿನಿಂದ ಮರೋಳಿ ಚಡಾವ್ ಏರುವಾಗಲೊಮ್ಮೆ, ಬಿಜೈ ಚರ್ಚಿನೆದುರು ಒಮ್ಮೆ ಕೆಲವು ಮಾಧ್ಯಮದ ಚಿತ್ರಗ್ರಾಹಿಗಳುಸುದ್ದಿ ಮಾಡುವಉತ್ಸಾಹದಲ್ಲಿ ನಮ್ಮನ್ನು ಅತ್ತಿಂದಿತ್ತ ಓಡಿಸ್ಯಾಡಿಸಿ ಚಿತ್ರ-ಸಮಯ (ಫೋಟೋ ಸೆಶನ್) ಮಾಡಿದ್ದೂ ಇದೆ. ಮುಂದುವರಿದು ಇನ್ಯಾರೋ ನಮ್ಮನೆಗೇ ಬೆನ್ನು ಹಿಡಿದು ಬಂದು, ಸಂದರ್ಶನದ ಔಪಚಾರಿಕತೆಗಳನ್ನೂ ನಡೆಸಿಬಿಟ್ಟರು. ಪ್ರಚಾರದಲ್ಲಿ ನಮಗಿಬ್ಬರಿಗೂ ಆಸಕ್ತಿ ಇಲ್ಲದ್ದಕ್ಕೋ ಸಂದರ್ಶನಕ್ಕೆ ತೂಕ ಕೊಡುವ ಸೂತ್ರ, ಘೋಷಣೆ, ಸಂದೇಶಗಳೇನೂ ನಮ್ಮ ಮಾತುಗಳಲ್ಲಿ ಬಾರದ್ದಕ್ಕೋ ಎಲ್ಲೂ ಏನೂ ಪ್ರಕಟವಾದಂತಿಲ್ಲ. ಆದರೆ ಪರಿಚಿತ ಮತ್ತು ಮಿತ್ರವರ್ಗದಲ್ಲಿ ಮಾತ್ರ ಇದಕ್ಕೆ ಒಳ್ಳೆಯ ಸ್ಪಂದನವೇ ಕಾಣಿಸಿದೆ.

ನಿರೇನ್, ಪ್ರಸನ್ನ, ರೋಹಿತ್, ಜಿಂಕೆಸುಬ್ಬ, ಅಸಂಖ್ಯ ಮಕ್ಕಳು, ಸ್ವತಃ ನನ್ನ ಚಿಕ್ಕಮ್ಮ ಸೀತೆ ಜಂಟಿಸೈಕಲ್ ತುಳಿಯುವ ಅನುಭವವನ್ನು ಚೂರುಪಾರು ಪಡೆದುಕೊಂಡರು. ಸೈಕಲ್ ತಂದ ಎರಡನೇ ಅಥವಾ ಮೂರನೇ ದಿನ ಏನೋ ಗೃಹಕೃತ್ಯದ ಕಾರಣ ದೇವಕಿ ಜೊತೆಗೊಡಲು ಅಲಭ್ಯವೆಂದಳು. ನನಗೆ ಬಹುಕಾಲಾನಂತರ ಸೈಕಲ್ ತುಳಿಯುವ ಅವಕಾಶ ಬಂದಿರುವಾಗ ಸಾತತ್ಯ ತಪ್ಪಿಸುವುದಕ್ಕೆ ಮನಸ್ಸು ಬರಲಿಲ್ಲ. ಮೂರು ಗಂಟೆಯ ಮಟಮಟ-ಅಪರಾಹ್ನ ಒಬ್ಬನೇ ಬಂಟ್ವಾಳದತ್ತ ಸವಾರಿ ಹೊರಟೆಹಿಂದೆ ಬರುವಲ್ಲಿ ಜೋಡುಮಾರ್ಗದಿಂದ ಕಿರಿಯ ಮಿತ್ರ ಅನಿಲ್ ಗಟ್ಟಿ ಶ್ರಮ ಹಂಚಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೆ. ಫರಂಗಿಪೇಟೆ ದಾಟಿ ಪೊಳಲಿಗೇಟು ತಲಪುವಷ್ಟರಲ್ಲಿ ನನ್ನೊಳಗಿನ ಗಾಳಿ ಕಡಿಮೆಯಾಗಿತ್ತು. ಮತ್ತೆ ನಾನು ಅಲ್ಲೇ ನಿಂತು ಜೋಡುಮಾರ್ಗದಿಂದ ಅನಿಲನನ್ನು ಕರೆಸಿಕೊಂಡು ಆರಾಮವಾಗಿ ಮಂಗಳೂರು ಸೇರಿದೆ.

ಇನ್ಫೋಸಿಸ್ಸಿನ ಸಂದೀಪ - ಬಹುಮುಖೀ ಆಸಕ್ತಿಯ ನನ್ನ ಇನ್ನೊಬ್ಬ ಕಿರಿ ಗೆಳೆಯ. ಬಯಲು ಸೀಮೆಯ ಈತನಿಗೆ ಬಾಲ್ಯದ ಸೈಕಲ್ ಹವ್ಯಾಸ ಈ ಕರಾವಳಿಯಲ್ಲಿ ಮುಂದುವರಿಸಲು ಸಾಮಾನ್ಯ ಸೈಕಲ್ ಸಾಕಾಗದು ಎಂಬ ಹೆದರಿಕೆ ಒಂದು ಕಡೆ. ಸೈಕಲ್ ಅಂಗಡಿಗಳಿಗೆ ಹೋಗಿ ವಿಶಿಷ್ಟ ಸೈಕಲ್ಗಳ ದರಪಟ್ಟಿ ನೋಡಿದರೆ ಆರ್ಥಿಕವಾಗಿ ಸಾಮಾನ್ಯ ಹಿನ್ನೆಲೆಯವರಿಗಿದು ಹೆಚ್ಚು ಎಂಬ ಭಯವೂ ಮೂಡಿತ್ತು. ಅದೃಷ್ಟವಶಾತ್ ಇವರ ಇನ್ನೊಬ್ಬ ಅನುಕೂಲಸ್ಥ ಗೆಳೆಯನಿಗೆಆರೋಗ್ಯ ಹುಚ್ಚು.’ ಆತ ಸಹಜವಾಗಿ ಭಾರೀ ಬೆಲೆ ಕೊಟ್ಟು ಸಂದೀಪ ಬಯಸಿದ್ದ ಸೈಕಲ್ಲನ್ನೇ ಮೊದಲೆಂದೋ ಖರೀದಿಸಿದ್ದ. ಆದರೆ ಆದರ್ಶ ಮತ್ತು ಆಚರಣೆಗಳ ನಡುವಣ ಆತನ ಕಂದರ ತುಂಬದಾದಾಗ ಹೆಚ್ಚು ಕಡಿಮೆ ಹೊಸಾ ಸೈಕಲನ್ನೇ ಸಂದೀಪನಿಗೆ ಹೊರೆಯಾಗದ ಬೆಲೆಗೆ ಕೊಟ್ಟುಬಿಟ್ಟ. ನಮ್ಮ ಜಂಟಿ ಸೈಕಲ್ ಸವಾರಿ ತಿಳಿದದ್ದೇ ಸಂದೀಪ ರಣವೀಳ್ಯ ಕಳಿಸಿದ ಎಲ್ಲಾರೂ ಹೋಗೋಣ್ವಾ ಸಾರ್.” ಒಂದು ಶನಿವಾರ ಬೆಳಿಗ್ಗೆ ತಣ್ಣೀರು ಬಾವಿ ಕಡಲಕಿನಾರೆಯವರೆಗೆ ಹೋಗಿ ಬಂದೆವು. ಇನ್ನೊಮ್ಮೆ, ಮತ್ತೆ ಬಂಟ್ವಾಳ ದಾರಿ. ಇಲ್ಲೆಲ್ಲ ಸಂದೀಪ್ ಸ್ವತಂತ್ರ ಸೈಕಲ್ ಮೇಲೇ ಇದ್ದುದರಿಂದ ಅದರ (ಗೇರ್) ಸೌಕರ್ಯ ಹಾಗೂ ತಾರುಣ್ಯದ ಬಲ ಆತನನ್ನು ತುಂಬಾ ಮುಂದಕ್ಕೆಳೆಯುತ್ತಿತ್ತು. ನಾವು ಲೆಕ್ಕಕ್ಕೆ ಇಮ್ಮಡಿ ತುಳಿತದ ಬಲವಿದ್ದವರಾದರೂಗವರ್ನರ್ಹಾಕಿದಕೆಸರಟ್ಟಿಸಿ’ (KSRTC) ಬಸ್ಸಿನಂತೆ ಹಿಂದೆ ಬೀಳುತ್ತಿದ್ದೆವು. ಜೊತೆಗಾರರಿಲ್ಲದ ಬೇಸರಕ್ಕೆ ನಮ್ಮನ್ನು ಕೇಳಿದ್ದ ಸಂದೀಪ ಈಚೆಗೆ ಹೋಗೋಣ್ವಾಎಂಬ ತಪ್ಪು ಮಾಡುತ್ತಲೇ ಇಲ್ಲ!

ಶಾಲಾ ಮಕ್ಕಳಿಗಾಗಿ ಸೈಕಲ್ಎಂಬ ಸರಕಾರೀ ಯೋಜನೆಯನ್ನಿಲ್ಲಿ ಚುಟುಕಾಗಿ, ಆಡುನುಡಿಯ ಮಾತಿನಲ್ಲಿ ಹೇಳುವುದೇ ಆದರೆಭೀಕರ ಕರ್ಮಕಾಂಡ.’ ಅದನ್ನು ವಿಸ್ತರಿಸುವುದೇ ಆದರೆ ಸರಕಾರೀ ಪುಸ್ತಕೋದ್ಯಮ, ಬಿಸಿಯೂಟಗಳೇ ಮೊದಲಾದ ಅಸಂಖ್ಯವೇನು ಬಹುತೇಕ ಸರಕಾರೀಜನಪ್ರಿಯಯೋಜನೆಗಳೆಲ್ಲಾ ನಾ ಮುಂದು ತಾ ಮುಂದು ಎಂದು ನನ್ನ ಮನೋರಂಗದಲ್ಲಿ ರಿಂಗಣಿಸಿ ದೊಂಬಿ ಮಾಡುತ್ತವೆ, ಈಗ ಬೇಡ. ‘ಪರಿಸರಕ್ಕಾಗಿ ಸೈಕಲ್ ಬಳಸಿಎಂದು ಆಗೀಗ ಮಾಧ್ಯಮಗಳ ಪ್ರಖರ ಬೆಳಕಿನಲ್ಲಿ ಜನನಾಯಕರು ಪೋಸ್ ಹೊಡೆಯುವುದು ನೋಡಿದ್ದೇವೆ. ಮೈಸೂರಿನ ಜಿಲ್ಲಾಧಿಕಾರಿ ಜಂಟಿ ಸೈಕಲ್ಲಿನಲ್ಲೇ ಕಾವಲುಭಟನ ಸಹವಾರನಾಗಿ ಕಾಣಿಸಿಕೊಂಡದ್ದೂ ಆಯ್ತು. ಹಾಗೇ ಅಲ್ಲಿನ ಮುಖ್ಯ ಬೀದಿಗಳಲ್ಲಿ ಸೈಕಲ್ಲುಗಳಿಗಾಗಿಮೀಸಲಾತಿಜಾಡೂ ಘೋಷಿಸಿದ್ದು ಕೇಳಿಬಂತು. ಪತ್ರಕರ್ತ ಮಿತ್ರರೊಬ್ಬರು ನಿಮಗೆ ಭಾರೀ ಕುಶಿಯಾಗಿರ್ಬೇಕಲ್ಲಾಂತ ನನ್ನನ್ನು ಕೆಣಕಿದರು. ಘೋಷಣೆಗಳಿಗೆಲ್ಲಾ ರೋಮಾಂಚನಗೊಳ್ಳುವ ಕಾಲ ಇದಲ್ಲ ಎಂದು ತಣ್ಣೀರೆರಚಿದೆ. ಆದರೆ ಬೆಂಗಳೂರಿನ ಗುಬ್ಬಿಲ್ಯಾಬ್ಸಿನಸುಧೀರ್ ಮತ್ತು ಗೆಳೆಯರು ಅಲ್ಲಿನ ಕೆಲವು ಬಡಾವಣೆಗಳಲ್ಲಿ (ಜಯನಗರ, ಬನಶಂಕರಿ) ಜಾಡು ಮೀಸಲಾತಿಯನ್ನು ಸಾಧಿಸಿದ್ದಾರೆ ಎಂದು ಕೇಳಿದಾಗ ಸ್ವಲ್ಪ ಹಾಯೆನಿಸಿತು. ಅಲ್ಲಿನ ಐಐಟಿ ಹಾಗೇ ಇನ್ನು ಕೆಲವು ರಕ್ಷಿತ ವಿಸ್ತಾರ ಆವರಣಗಳೊಳಗೂ ಓಡಾಡುವವರ ಸೌಕರ್ಯಕ್ಕಾಗಿ ಆಡಳಿತಗಳೇ ಉಚಿತ ಸೈಕಲ್ಲುಗಳನ್ನು ಬಿಟ್ಟಿವೆ ಎನ್ನುವ ಸುದ್ದಿ ಚೇತೋಹಾರಿಯೇ ಸರಿ. ಅವೆಲ್ಲ ಏನಿದ್ದರೂ ಸಮಶೀತೋಷ್ಣದ ಬಯಲುಸೀಮೆಗಷ್ಟೇ ಸರಿ ಎಂದು ಕೊಳ್ಳುತ್ತಿರುವಂತೆ ಮಂಗಳೂರಿನಲ್ಲೂ ಪತ್ರಿಕಾ ವರದಿ ನೋಡಿದೆ

ಒಂದು ಕಾಲದಲ್ಲಿ ಉರಗೋದ್ಯಾನ ಹೊಂದಿದ್ದ ಕದ್ರಿ ಉದ್ಯಾನದ ಎದುರಿನ ತುಣುಕಿಗೆಸೈಕಲ್ ಟ್ರ್ಯಾಕ್ ಬರಲಿದೆ. ಅಲ್ಲೇ ಸ್ವಲ್ಪ ಆಚೆಗೆ ರೋಲರ್ ಸ್ಕೇಟಿಂಗ್ ಮಾಡುವವರಿಗೆ ಸ್ಥಳೀಯ ಆಡಳಿತ ರಿಂಕ್ ಮಾಡಿಕೊಟ್ಟಿದೆ. ಮಂಗಳಾ ಕ್ರೀಡಾಂಗಣದೊಳಗೆ ಗಜಗರ್ಭವೇ ಆದರೂ ಓಡುವವರಿಗೆ ಸಿಂಡರ್ ಟ್ರ್ಯಾಕ್ ಇನ್ನೇನು ಅರಳಿ ಮುಗಿಯಲಿದೆ. ಹಾಗೇ ಕದ್ರಿ ಪದವಿನಲ್ಲಿ ಸೈಕಲ್ ಟ್ರ್ಯಾಕ್ ಆಗಿಗೀಗೀ ಹೋದರೆ ವೇಗದ ಸ್ಪರ್ಧಾಳುಗಳಿಗೆ ವೆಲೋಡ್ರಂ ತರುತ್ತದೋ ಫ್ಲ್ಯಾಟುಗಳ ಪಾರ್ಕಿಂಗ್ ಲಾಟಿನಲ್ಲಿ ಗಿರಕಿ ಹೊಡೆಯುವ ಪುಟಾಣಿಗಳಿಗೆ ತುಸು ವಿಸ್ತರಿಸಿಕೊಳ್ಳಲು ಅವಕಾಶ ಒದಗಿಸುತ್ತದೋ ಕಾಲವೇ ಹೇಳಬೇಕು.

ಸದ್ಯಕ್ಕಂತೂ ಮಂಗಳಾಪುರದ ಮಾರ್ಗಗಳಿಗೆ ಜಂಟಿ ಸೈಕಲ್ ಸವಾರರು ಯಾರೆಂದು ಕೇಳಿದ್ದೀರಿಎಂದು ಮೆರೆಯುವ ಭಾಗ್ಯ ನಮ್ಮದು. (ಅಳಿದೂರಿಗೆ ಉಳಿದವನೇ ಗೌಡ!) ಆದರೆ ವಿಶ್ವಯಾನಿ ಗೋವಿಂದನಷ್ಟಲ್ಲದಿದ್ದರೂ ಕನಿಷ್ಠ ಪುತ್ತೂರು ಉಡುಪಿಗಳ ದೂರಕ್ಕಾದರೂ ವಿಶೇಷ ಶ್ರಮವಿಲ್ಲದೆ ಓಡಾಡುವ ನಮ್ಮ ಯೋಜನೆ ಮಾತ್ರ ಪೂರೈಸದ ಕೊರಗು ಕಟ್ಟಿಕೊಂಡೇ ಸೈಕಲ್ ತುಳಿದಿದ್ದೇವೆ. ಯಾವ್ಯಾವುದೋ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಲ್ಲೆಲ್ಲಾ ನಮ್ಮ ಬೆನ್ನುಬಿದ್ದು ಹೊಗಳುವವರ ದಂಡು ಬೆಳೆದಿದೆ. ಪಾಲಿಟೆಕ್ನಿಕ್ ಎದುರು ನಾವು ಸಾಗಿದ್ದಾಗ ಪರಿಚಿತ ಅಧ್ಯಾಪಕಿಯೊಬ್ಬರು ಕಾರಿನಲ್ಲಿ ಬಂದು ಅಡ್ಡಗಟ್ಟಿ, ಅವರ ಸೊಂಟದ ಸುತ್ತಿನ ಟಯರ್ ಕರಗಿಸುವ ಹೊಳಹು ಹಾಕಿ ಹೋಗಿದ್ದಾರೆ. ಎಲ್ಲೋ ಕೂಳೂರು ಬಳಿ ನಾವು ನಿಶ್ಶಬ್ದವಾಗಿಯೇ ಸವಾರಿ ಹೋದರೂಹರಿಣಿ’ ‘ಮುಖಪುಸ್ತಕದಲ್ಲಿಭಲೇ ಮೀಸಿಮಾಮಾಂತ ಗುಲ್ಲೆಬ್ಬಿಸಿದರು. ಅದಕ್ಕೆ ಕದ್ರಿಗುಡ್ಡೆಯ ಚಡಾವ್ ಏರಿಸುವುದು ನಾನೂ ಕಂಡಿದ್ದೇನೆಎಂದು ಅರೆಹೊಳೆಯವರುಲಾಯಕ್’ (like) ಹಾಕಿದ್ದೂ ಆಯ್ತು. ಮಗಳೊಡನೆ ಕಾರಿನಲ್ಲಿ ಅರಿವಿಲ್ಲದೇ ಹಾದು ಹೋದ ನರಸಿಂಹಮೂರ್ತಿಯವರು ಅಪರಾಧ ಕ್ಷಮಾಪಣೆಗೆ ಮುಂದೆ ಅವರ ಮನೆಯೆದುರು ನಮ್ಮನ್ನು ದಿಗ್ಬಂಧನಕ್ಕೊಳಪಡಿಸಿಷೋಡಷೋಪಚಾರಸಲ್ಲಿಸಿದ್ದನ್ನು ಸಂಕೋಚದಲ್ಲೇ ಇಲ್ಲಿ ದಾಖಲಿಸಬೇಕಾಗಿದೆ. (ದಯವಿಟ್ಟು ಇನ್ಯಾರೂ ಇದನ್ನು ಅನುಸರಿಸಬಾರದಾಗಿ ಇಲ್ಲಿಯೇ ಮನವಿ ಮಾಡಿಕೊಳ್ಳುತ್ತೇವೆ!) ಆ ಪಾಲಿಟೆಕ್ನಿಕ್ ಅಧ್ಯಾಪಿಕೆ ಸೇರಿದಂತೆ ತಮಗೂ ಇಂಥದ್ದೊಂದು ಬೇಕೆಂದು ಹಳಹಳಿಸಿಕೊಂಡು ಬಂದು ಲಭ್ಯತೆ, ಬೆಲೆ ಕೇಳಿದವರಷ್ಟೂ ಮಂದಿಗಳಲ್ಲಿ ಕೆಲವರಾದರೂ ತಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತಂದದ್ದೇ ಆದರೆ ನಮಗೆ ಧನ್ಯತೆ ಬರುವುದು ಖಂಡಿತ.


ಅನುಬಂಧ
ಎಲ್ಲರಂಥದ್ದಲ್ಲ ಈ ಕಥನ

ಹಿಂದೂ ಪತ್ರಿಕೆಯ ಚಿತ್ರಗ್ರಾಹಿ ಮಂಜುನಾಥ್ ಉತ್ಸಾಹದಿಂದ, ರವಿಪ್ರಸಾದ್ ಕಮಿಲರ ಆಸಕ್ತಿಯಿಂದ ಎರಡು ವಾರದ ಹಿಂದೆ ಅಯಾಚಿತವಾಗಿ ಹಿಂದೂ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖಪುಟದಲ್ಲಿ ನಾವು ‘ಹೀರೋ’ಗಳಾಗಿದ್ದೆವು. (The Hindu ಪತ್ರಿಕೆಯಲ್ಲಿನ ಲೇಖನವನ್ನು ಓದಲ್ಲು ಇಲ್ಲಿ ಚಿಟಿಕೆ ಹೊಡೆಯಿರಿ.) ಎಲ್ಲೆಲ್ಲಿನ ಮಿತ್ರರು, ಪರಿಚಿತರು ಮುಖತಃ, ಚರವಾಣಿಸಿ ಅಭಿನಂದಿಸುವ ಉಅಪಚಾರ ನಡೆದಿತ್ತು. ಆದರೆ ಬೆಳ್ತಂಗಡಿ ತಾಲೂಕಿನ  ನಿವ್ರುತ್ತ ಪೊಲಿಸ್ ಇಲಾಖಾ ನೌಕರ, ಸದ್ಯ ೬೩ರ ಹರಯದ ಉತ್ಸಾಹೀ ಕೃಷಿಕ ಅಣ್ಣೀಗೌಡರ ಕಥನ ಎಲ್ಲರಂಥದ್ದಲ್ಲ.

ಅತ್ರಿ ಬುಕ್ ಸೆಂಟರಿನ ಗಿರಾಕಿಯಾಗಿ ಮಾತ್ರ ನನಗೆ ಪರಿಚಯಕ್ಕೆ ಬಂದವರು ಅಣ್ಣೀ ಗೌಡರು. ಆದರೆ ಅವರ ಬಹುಮುಖೀ ಆಸಕ್ತಿಗಳಲ್ಲಿ ಯಾಕೋ ನನ್ನನ್ನು ಬಹಳವಾಗಿ ಹಚ್ಚಿಕೊಂಡವರು. ಹನ್ನೊಂದು ಗಂಟೆಯ ಸುಮಾರಿಗೆ ನಾನು ಬಲ್ಮಠದಲ್ಲಿ ಓಡಾಟದಲ್ಲಿದ್ದಾಗ ಅವರ ಕರೆ ಬಂತು. ಹಿಂದೂ ಪತ್ರಿಕೆಯಲ್ಲಿ ನಮ್ಮ ಜಂಟಿ ಸೈಕಲ್ ವರದಿ ನೋಡಿದ ಕುಶಿಯಲ್ಲಿದ್ದರು. ನನ್ನ ಬಿಡುವು ಕೇಳಿಕೊಂಡು ಸಂಜೆ ಮನೆಗೆ ಮತ್ತೆ ದೂರವಾಣಿಸಿದರು. “ಸ್ವಾಮೀ ನಾನು ಉಪ್ಪಿನಂಗಡಿ ಪೇಟೆಗೆ ಹತ್ತಿರದ ಹಳ್ಳಿಗ. ಚಿಕನ್ ಗುನ್ಯಾದ ಹಳೇ ನೆಂಟ, ಗಂಟು ಗಂಟು ಬಿಗಿತ, ಸೆಳೆತ. ಸ್ಥಳೀಯ ಮಾತ್ರೆ, ಜನಪದ ಪಥ್ಯ ಸಾಕಾಗಲಿಲ್ಲ. ಪುತ್ತೂರಿನಲ್ಲಿ ಮೂಳೆ ವೈದ್ಯರನ್ನು ನೋಡಿದೆ. ‘ಪ್ರಾಯದ ಅನಿವಾರ್ಯತೆ ಗೌಡ್ರೆ. ನಿಮಗೆ ಶಸ್ತ್ರಚಿಕಿತ್ಸೆ ಮಾತ್ರ ನೋವು ಮುಕ್ತಿ ಕೊಟ್ಟೀತು.’ ಪ್ರಯಾಣ, ಊಟ, ವಾಸ, ಚಿಕಿತ್ಸೆ, ಮದ್ದು ಲೆಕ್ಕ ಹಾಕಿದರೆ ಸುಮಾರು ಒಂದೂ ಕಾಲು ಲಕ್ಷ ವಿನಿಯೋಗದ ಯೋಜನೆ ಕೈಬಿಟ್ಟೆ. ಇನ್ಯಾರೋ ಆಯುರ್ವೇದ ತೈಲ ಉಜ್ಜಿಸಿಕೊಂಡು ಸುಧಾರಿಸಿಕೊಂಡಿದ್ದೆ. ಆದರೆ ತೋಟ, ಆಳುಕಾಳು, ಹೈನುಗಾರಿಕೆ ಎಂದ ಮೇಲೆ ಮನೆ ಪೇಟೆ ಓಡಾಟ ನಿರಂತರ. ನಿತ್ಯ ಸುಮಾರು ಮೂವತ್ತು ಲೀಟರ್ ಹಾಲು ಪೇಟೆಗೆ ಕೊಡಲೇಬೇಕು. ಮತ್ತೆ ಬೆಳೆ ಮಾರುಕಟ್ಟೆಗೆ ಮುಟ್ಟಿಸುವುದು, ದೈನಂದಿನ ಜಿನಸು, ಹಿಂಡಿ ಇತ್ಯಾದಿ ತರುವುದಕ್ಕೆಲ್ಲಾ ಬಾಡಿಗೆ ವಾಹನ ನೆಚ್ಚಿ ಮುಗಿಯುವುದುಂಟಾ...

“ಎಳವೆಯಲ್ಲಿ ಚೂರುಪಾರು ಸೈಕಲ್ ಬಿಟ್ಟವನೇ ನಾನು. ವೃತ್ತಿಯ ಕೊನೆಯ ದಿನಗಳಲ್ಲಿ ಹಾಗೇ ಬೈಕ್ ಸ್ಕೂಟರ್ ನೋಡಿದವ. ಅವೆಲ್ಲ ಸಾಲದೆಂಬ ಅನಿವಾರ್ಯತೆ ಹಿರಿಪ್ರಾಯದ ನನ್ನನ್ನು ಡ್ರೈವಿಂಗ್ ಸ್ಕೂಲ್ ಸೇರಿಸಿತು. ಕಲಿತೆ, ಹಳೇ ಕಾರು ಕೊಂಡು ಧಾರಾಳ ಬಳಸಿಕೊಂಡಿದ್ದೇನೆ. ಆದರೆ ಸ್ವಾಮೀ ಈಚಿನ ಒಂದು ಘಟನೆ ನಿಮಗೆ ಸ್ವಲ್ಪ ವಿವರದಲ್ಲೇ ಹೇಳಬೇಕು. ಅಂದು ನನ್ನ ಹೆಂಡತಿ ಮನೆಯಲ್ಲಿರಲಿಲ್ಲ. ಕೆಲಸದವರಿಗೆ ಇನ್ನೇನು ಚಾಯ ಕೊಡುವ ಸಮಯ. ಒಲೆಯೊಂದರಿಂದ ಅನ್ನ ಇಳಿಸುವ ಗಡಿಬಿಡಿಯಲ್ಲಿ ಅತ್ತ ಕಾಯಿಸಲು ಇಟ್ಟ ಹಾಲಿನ ಪಾತ್ರೆ ಮಗುಚಿಬಿಟ್ಟೆ. ಮನೆಯ ಹೆಚ್ಚುವರಿ ಹಾಲೆಲ್ಲಾ ಬೆಳಿಗ್ಗೆಯೇ ಪೇಟೆಗೆ ಕೊಟ್ಟು ಬಂದಾಗಿತ್ತು. ಅವಸರಕ್ಕೆ ಪೇಟೆಗೇ ದೂರವಾಣಿಸಿ, ನಂದಿನಿ ತೊಟ್ಟೆ ತರುವುದೆಂದು ಸಜ್ಜಾದೆ. ಗ್ರಹಚಾರಕ್ಕೆ ಎಂತದ್ದೋ ಕೇಬಲ್ ಎಳೆಯುವುದೋ ಅಗಲೀಕರಣವೋ ನಮ್ಮ ಮಣ್ಣುದಾರಿಯನ್ನು ಮುಖ್ಯದಾರಿಯಿಂದ ಕಡಿದು ಹಾಕಿದ್ದು ತಿಳಿಯಿತು. ನಮ್ಮಲ್ಲೇ ಕೆಲಸದವರ ಬಳಕೆಗಾಗಿಟ್ಟಿದ್ದ ಒಂದು ಸೈಕಲ್ಲನ್ನೇ ತೆಗೆದೆ. ನನ್ನ ದೇಹದ ಸಂದುಗಳು ಕುಯ್ಯೋ ಮುರ್ರೋ ಹೇಳುತ್ತಿದ್ದರೂ ಅನಿವಾರ್ಯತೆಯಲ್ಲಿ ಪೇಟೆಗೆ ಸವಾರಿ ಹೋಗಿ ಬಂದೆ. ಮುಂದಿನ ಒಂದೆರಡು ದಿನವೂ ದಾರಿ ತೆರೆಯದ ಸಂಕಟಕ್ಕೆ ಹಳೆ ಸೈಕಲ್ಲೇ ತುಳಿದೆ. ನಂಬಿದರೆ ನಂಬಿ ಸ್ವಾಮೀ ನನ್ನ ಮೊಣಕಾಲು ನೋವು ಕಡಿಮೆಯಾಗಿತ್ತು! ಈಗ ಉತ್ಸಾಹ ಹೆಚ್ಚಿ ಹೊಸಾ ಹರ್ಕ್ಯುಲಿಸ್ ಸೈಕಲ್ ಕೊಂಡು ಭಾರೀ ಹೊರೆಯಿಲ್ಲದ ಎಲ್ಲ ನಿತ್ಯ ಓಡಾಟಗಳಿಗೆ ಬಳಸುತ್ತಿದ್ದೇನೆ. ಒಂದೂ ಕಾಲು ಲಕ್ಷದ ಶಸ್ತ್ರಚಿಕಿತ್ಸೆ ಬಿಡಿ, ವಿಶೇಶ ಮದ್ದು ತೈಲಗಳ ಚಿಂತೆಯೂ ಕಳಚಿಕೊಂಡಿದ್ದೇನೆ. ಬಹುಶಃ ನನ್ನಷ್ಟು ನಿಮ್ಮ ಸೈಕಲ್ ಪ್ರೀತಿ ಮೆಚ್ಚಿಕೊಳ್ಳುವವರು ಇರಲಾರರು ಅಲ್ಲವೇ?”

15 comments:

 1. ಸೈಕಲ್ ಮಕ್ಕಳಿಗೆ ಸಿಗುವ ಮೊದಲ ವಾಹನ. ಅವರಿಗಿರುವ ಅದರ ಅಕರ್ಷಣೆಯ ಅನುಭವ ವಿಶೇಷವಾದುದು. ನನ್ನ ಸೈಕಲ್ಲಿನ ಸೀಟಿನ ಎತ್ತರ ನಮ್ಮ ಅಗತ್ಯಕ್ಕೆ ಅಳವಡುವಂತದು. ಮಕ್ಕಳಿಗೆ ಇದು ಮುಖ್ಯ ಆಕರ್ಷಣೆ. ಆದರೆ ಅದನ್ನು ಎಲ್ಲಿಯೂ ನಿಲ್ಲಿಸಿ ಹೋಗಿಬರುವುದು ಸಾಧ್ಯವಾಗುತ್ತಿಲ್ಲ. ನಿವೃತ್ತನಾಗುವವರೆಗೆ ಸಂಸ್ಥೆಯ ನನ್ನ ಕೋಣೆಯಲ್ಲಿರಿಸುತ್ತಿದ್ದೆ. ಈಗ ಸಮಸ್ಯೆಯಾಗಿದೆ. ಬೀಗಹಾಕಿ ಭದ್ರಪಡಿಸಿದರೂ ಕುತೂಹಲಿಗಳ ಕೈಚಳಕದಿಂದ ಬಿಡಿಭಾಗಗಳನ್ನು ಬದಲಾಯಿಸುವುದು ಅನಿವಾರ್ಯವಾಗಿದೆ. ಶ್ರೀ ಅಣ್ಣಿ/ಅಣ್ಣೇಗೌಡರ ಅನುಭವ ನಮ್ಮ ಕಣ್ಣು ತೆರೆಸುವಂಥದು. ಸೈಕಲ್ಲಿನ ಮೇಲೆ ಹೆಲ್ಮೆಟ್ ಹಾಕಿಕೊಂಡು ಜೀವಭಯದಿಂದ ಹೇಡಿಯಾಗಿ ಸಂಚರಿಸುವಾಗ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಹೆಲ್ಮೆಟ್ ತಲೆಗೆ ಹಾಕಿಕೊಳ್ಳದೆ ರುಂಡಮಾಲಿ
  ಯಾಗಿ ಸಂಚರಿಸುವ ಬೈಕು. ಸ್ಕೂಟರ್ ಸವಾರರ ಪಾಲಿಗೆ ಅವರ ಅನೈತಿಕ ಧೈರ್ಯಕ್ಕೆ ಪೋಷಣೆ ಒದಗುತ್ತಿರುವುದೂ ಸುಳ್ಳಲ್ಲ.

  ReplyDelete
 2. ಒಂದೇ ಪೆಟ್ಟಿಗೆ ಸೈಕಲ್ ಯಾನದ ಖುಷಿಯ ಅನುಭವವನ್ನು ಓದಿ ಸ್ಖಂತಸ ಪಟ್ಟೆ. ಓದಿಯೇ ಸವಿಯಬೇಕು. ಫಿಲೊಮಿನಾ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ.ಪದ್ಮನಾಭ ಮಲ್ಯ ಮತ್ತು ಪ್ರಾಧ್ಯಾಪಕರಾಗಿದ್ದ ಪ್ರೊ.ಸುರೇಶ್ ರಾವ್ ಪ್ರತಿ ದಿನ ಜತೆಯಾಗಿ ಸೈಕಲ್ಲಿನಲ್ಲಿ ಬರುತ್ತಿದ್ದುದು ನೆನಪಾಗುತ್ತಿದೆ. ಆರನೇ ತರಗತಿಯಿಂದ ಅಂತಿಮ ಬಿಎಸ್ಸಿ ತನಕ ಮನೆಯಿಂದ ಪುತ್ತೂರಿಗೆ - ಕಲ್ಲರ್ಪೆ ಚಡಾವು ಏರಿ ಶಾಲೆ - ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದ ದಿನಗಳು ಲೇಖನ ಓದುತ್ತಿದ್ದಂತೆ ನೆನಪಾದುವು. ಸುಮಾರು ಮೂವತ್ತು ವರ್ಷಗಳ ಕಾಲ ಮನೆಯ ಹಾಲು ಪುತ್ತೂರು ಪೇಟೆಗೆ ಹೋಗುತ್ತಿದ್ದುದು ಸೈಕಲ್ಲಿನಲ್ಲಿ. ಈಗ ಅವೆಲ್ಲ ನೆನಪು ಮಾತ್ರ. ಕಾಲೇಜಿನಲ್ಲಿ ಸೈಕಲ್ಲುಗಳಿಲ್ಲ. ಹೈಸ್ಕೂಲಿನಲ್ಲಿದೆ ಬೆರಳೆಣಿಕೆಗೆ. ಬದಲಾವಣೆಯ ಹವಾದಲ್ಲಿ ಸೈಕಲ್ ನಿಜಕ್ಕೂ ಮರೆಗೆ ಸಂದಿದೆ.
  ಪ್ರಾಯ ಕಾಲದಲ್ಲಿ ಬೈಕು ಮತ್ತೆ ಕಾರುಗಳಲ್ಲೇ ಸುತ್ತಾಡುತ್ತ ಕೈಕಾಲು ಸಂದಿ ಗೊಂದಿಗಳಲ್ಲೆಲ್ಲ ನೋವು ಬಳಲಿಕೆ ಹೆಚ್ಚಿಸಿಕೊಳ್ಳುತ್ತ ಹೋಗುವ ನಮಗೆ ಅಣ್ಣಿ ಗೌಡರ ಅನುಭವ ಕಣ್ಣು ತೆರೆಸುವಂತಿದೆ. ಹಾಗಾಗಿ ಅವರಿಗೆ ಕೊರಗು ಬೇಡ - ನಾವೆಲ್ಲ ಅವರ ಸೈಕಲ್ ಪ್ರೀತಿ ಮೆಚ್ಚಿದ್ದೇವೆ.
  ಶಾಲಾ ಮಕ್ಕಳಿಗೆ ಸೈಕಲ್ ಮತ್ತು ಬಿಸಿಯೂಟದ ಯೋಜನೆಯಲ್ಲಿ ಹಲವು ಹುಳುಕುಗಳಿದ್ದರೂ ಮಕ್ಕಳು ಹಳ್ಳಿಯ ಹಸಿರು ಹಾದಿಯಲ್ಲಿ ಆ ಹಸುರು ಸೈಕಲ್ ತುಳಿಯುತ್ತ ಸಂತಸದಲ್ಲಿ ಸಾಗುವುದನ್ನು, ಮಧ್ಯಾಹ್ನ ಓಟ್ಟಾಗಿ ಬಿಸಿಯಾದ ಊಟ ಮಾಡುವ ಖುಷಿಯನ್ನು ಕಂಡಾಗ ಸರಕಾರದ ಈ ಯೋಜನೆ " ಅರೇ ಪರಾವಾಗಿಲ್ಲ" ಅಂತ ಅನ್ನಿಸಿದ್ದಿದೆ.

  ReplyDelete
 3. Odide, Naanu prati vaara cycle hodyak aagtha illa.... alli illi suthodralle kaala kaledhogtha ide... :) 'Hogonva' anno tappu ati shigradalle mathe maadthini :)

  ReplyDelete
 4. ನಾಗರಾಜ ವಸ್ತಾರೆ19 April, 2013 08:52

  ನಮಸ್ಕಾರ. ವಾರಕ್ಕೊಮ್ಮೆ `ಇಲ್ಲಿ ಚಿಟಿಕೆ ಹೊಡೆಯಿರಿ' ಅಂತನ್ನುವ ನಿಮ್ಮಂಚೆ ಬರುತ್ತದಾದರೂ ಕೆಲಸದ ಒತ್ತಡದ ನಡುವೆ ಓದಲು ಬಿಡುವಾಗಿರಲಿಲ್ಲ. ಸೈಕಲುರೈಡಿನ ಈ ಕಂತನ್ನು ಓದಿ ಖುಷಿಪಟ್ಟಿರುವೆ. ವಿಲ್ ಫಾಲೋ ಯು ಹೆನ್ಸ್‍ಫೋರ್ತ್.
  ನಮಸ್ತೆ.

  ReplyDelete
  Replies
  1. ಕನ್ನಡದಲ್ಲಿ ಮಾತನಾಡಲೂ ಪುರುಸೊತ್ತಿಲ್ಲದಷ್ಟು ನೀವು ಕಾಯಕಜೀವಿಯೇ?
   ನನಗೆ ನಾಚಿಕೆಯಾಯಿತು!

   Delete
 5. innomme mangalorige bandaaga nimmallige bandu cycle odisale beku anniside. Tumba channagide lekhana.

  ReplyDelete
 6. Harisha Pejavar19 April, 2013 11:11

  Oye annere ereg mini ajeerna aad gas pudathnda erena bodedi rattud povu marayre.......magalooru nagarada rastheyalli rocket savaari !!!

  ReplyDelete
 7. Vha ! Bale sogasu, ee savaara jodi. [Koneya chithra. Baalyadalli Besant compoundnalli anna Mohana haagu geleya Raghu jothe cycle kaliyalu hogi biddaaga Raghu nakkiddakke naachi, sittaagi cycle bittavalu mathendu yathnisalilla. Eega nimma rasachakravaahana aase huttisuthide.- Shyamala.

  ReplyDelete
 8. thumba chennagide sir ......naanu kooda same cycle khareedhisiddhene ......namma "coorg shell " guestgaligaagi .....

  ninne dina kodagige banda " election officers " nalku dinakke eravalu thegedukondu Sudharshan guest house ge thegedukondu hogidhhare ....

  ReplyDelete
 9. ನಿಮ್ಮಿಬ್ಬರ ಸೈಕಲ್ ಸವಾರಿ ಅನುಭವಗಳನ್ನು ಓದಿ ಖುಷಿಯೆನ್ನಿಸಿತು. ಮಂಗಳೂರಿನ ರಸ್ತೆಗಳಲ್ಲಿ ಒಂಟಿ ಸೈಕಲ್ ತುಳಿಯುವುದೆ ಕಷ್ಟ. ಹೀಗಿರುವಾಗ ಜಂಟಿ ಸವಾರಿ ಸಾಹಸವೇ ಸರಿ. ಇದಕ್ಕಾಗಿ ಅಮ್ಮ ಮತ್ತು ನಿಮಗೆ ಅಭಿನಂದನೆ. ನಿಮ್ಮ ಈ ಕಾರ್ಯ ಓದುಗರನ್ನು(ನನಗಂತೂ ಆಸಕ್ತಿ ಮೂಡಿದೆ) ಸೈಕಲ್ ತುಳಿಯಲು ಪ್ರೇರೇಪಿಸಿದೆ.

  ReplyDelete
 10. ಅಶೋಕ ಭಾವಾ!
  ಇಲ್ಲಿ ನಮ್ಮೂರಲ್ಲಿ ಒಂದು ಗಾಬು ಇತ್ತಲ್ಲ ಮಾರ್ರೆ!
  ನಿಮ್ಮ ಜಂಟಿ ಬೈಕು ದಣೀ ಲಾಯ್ಕಿತ್ತು!
  ಮುಂದೆ ಕುಳಿತ ಮೀಸ ಮಾಮ ಬರೇ ಹ್ಯಾಂಡಲ್ ಬಾರ್ ಹಿಡೀತ್ರು ಮತ್ತು ಸಿಗನಲ್ಲ್ ತೋರಿಸ್ತ್ರು.
  ಸಂಸಾರ ಸಾರಥಿ ಯಾದ ದೇವಕಿ ಅಕ್ಕ ಹಿಂದ್ಗಡೆ ಶೀಟಾಗೆ ಕುಂತಿದ್ರೂ ಪೆಡಲಿನ ಭಾರ ಅವರೇ ವಹಿಸ್ಕೊಂಡಿದ್ರ್ ಕಾಣಿ ! ........ - ಇದು ನನ್ನ ಉರುಟಣೆ ಮಾತಲ್ಲ ಸತ್ಯಕ್ಕೂ! ನಾ ಕೇಂಡ ಸಂಗ್ತಿ ಇಲ್ಲಿ ಸ್ವಲ್ಪ ಜಾಗೆ ಸಿಕ್ಕಿದ್ದಕ್ಕೆ ಬರ್ದಿದ್ದೆ ಕಾಣಿ! ಅಷ್ಟೇಯ! ಈ ಸಲ್ಲದ್ ಮಾತ್ನೆಲ್ಲಾ ನಮ್ಮ ಪಡ್ಡೆ ಹೈಕ್ಳು ಮಾತಾಡಿಕೊಂತ್ರ್. ಇದು ನಂಬುಕೆ ಎಡಿಯುವ ಸಂಗತಿಯಾ ಭಾವಾ? ಹೋಯ್ಲಿ ಬಿಡಿನಿ.
  ಅದ್ರಾಗೂ, ದಣೀ ಚೆನ್ನಾಗೇ ಪಾಲು ಮಾಡ್ಕೊಂಡಿರಿ ನಿಮ್ಮ ಡ್ಯೂಟೀನ.
  ಒಬ್ಬರು ಚುಕ್ಕಾಣಿ ಹಿಡಿದ್ರೆ ಇನ್ನೊಬ್ರು ಎಂಜಿನ್.
  ಜಂಟಿ ಸೈಕಲಿನ ದೋಣಿ ಸಾಗಲಿ ಮುಂದೆ ಹೋಗಲಿ.
  ಸಕಲ ಚಿಳ್ಳೆ ಪಿಳ್ಳೆಗ್ಳು ಜೈಕಾರ ಹಾಕಲಿ.
  ನಾ ಹಿಂಗೆಲ್ಲಾ ಹೇಳ್ದೆ ಅಂತ ನೀವಿಬ್ರೂ ಬೇಜಾರ್ ಮಾಡುಕೆ ಎಡಿಯ.
  ಇನ್ನು ನಾಳೆ ಸಂಗತೆ ನಾಳೆ ಕಾಂಬ.
  ಈಗ್ಳಿಗೆ ಹೋಯ್ ಬತ್ತೆ ಭಾವಾ!

  ReplyDelete
 11. ನೀವು ದಂಪತಿ ಜಂಟಿಯಾಗಿ ಪೆಡಲ್ ತುಳಿದ ಕತೆಯನ್ನು ನಾವು ದಂಪತಿ ಜಂಟಿಯಾಗಿಯೇ ಓದಿ ಖುಷಿಪಟ್ಟೆವು. ನಾನೂ ಬೆಂಗಳೂರಿಗೆ 1980ರಲ್ಲಿ ಹೊಸದಾಗಿ ವರದಿಗಾರನಾಗಿ ಕೆಲಸಕ್ಕೆ ಸೇರಿ ಮೊದಲ ನಾಲ್ಕು ವಷ೯ ಸೈಕಲ್ ತುಳಿದೇ ತುಳಿದೆ. ಸತೀಶ್ ಧವನ್ ಇನ್ಸ್ಯಾಟ್ ಹಾರಿಸುವ ಸಂದಭ೯ದಲ್ಲಿ ಕರೆದ ಪತ್ರಿಕಾಗೋಷ್ಠಿಗೆ ಪೆಡಲ್‍ ತುಳಿಯುತ್ತಲೇ ಪೆಡಲ್ ತುಳಿಯುತ್ತ ತುಸು ತಡವಾಗಿ ತಲುಪಿದಾಗ ('ಪ್ರಜಾವಾಣಿ'ಯ ವರದಿಗಾರ ಬರುವವರೆಗೂ ಕಾಯುವ ಸಂಪ್ರದಾಯ ಆಗಿನ ಕಾಲದಲ್ಲಿ ಇತ್ತು) 'ನೀವು ಯಾವಾಗ ರಾಕೆಟ್‍ ಯುಗಕ್ಕೆ ಬರೋದು?' ಅಂತ ಅವರು ಕೇಳಿದ್ದರು. ಆ ನಾಲ್ಕು ವಷ೯ಗಳಲ್ಲಿ ಮೂರು ಬಾರಿ ಸೈಕಲ್ ಕಳೆದುಕೊಂಡಿದ್ದೆ. ಒಮ್ಮೆಯಂತೂ ಆಕಾಶವಾಣಿಯಲ್ಲಿ ಸೈಕಲ್ ಸವಾರಿಯ ಸ್ವಾರಸ್ಯಗಳ ಬಗ್ಗೆ ರೆಕಾಡಿ೯ಂಗ್ ಮುಗಿಸಿ ಹೊರಕ್ಕೆ ಬಂದಾಗಲೇ ಸೈಕಲ್ ಕಾಣೆಯಾಗಿತ್ತು. ಈಗ ನಮ್ಮ ತೋಟದ ಮನೆಯ ಸುತ್ತ ಓಡಾಟಕ್ಕೆಂದು ಎರಡು ಸೈಕಲ್ ಕೊಳ್ಳೋಣವೆಂದು ಕಳೆದ ನಾಲ್ಕು ವಷ೯ಗಳಿಂದ ಯೋಜನೆ ಹಾಕುತ್ತಲೇ ಇದ್ದೆವು. ನಿಮ್ಮ ಲೇಖನ ಓದಿದ ಮೇಲೆ ಮತ್ತೆ ಉಮೇದು ಬಂದಿದೆ. ಆದರೆ ಜಂಟಿ ಮೇಲೊ ಒಂಟಿ-ಒಂಟಿ ಮೇಲೊ ಎಂಬ ಚಚೆ೯ ಜಾರಿಯಲ್ಲಿದೆ.

  ReplyDelete
 12. Ashoka
  'you might have had a great time with it...I had a chance to see YouTube video of the same ....preetham

  ReplyDelete
 13. ನಿಮ್ಮ ಜಂಟಿ ಸೈಕಲ್ ಯಾನದ ಅನುಭವ ಓದಿ ಖುಷಿ ಆಯಿತು. ಸೈಕಲ್ ಪಯಣದ ಆನಂದ ಅನುಭವಿಸಿದವರಿಗೆ ಗೊತ್ತು. ನಿಮ್ಮನ್ನು ನೋಡಿ ಇನ್ನೂ ಹಲವರು ಸೈಕಲ್ ತುಳಿಯಲು ಮುಂದಾಗಲಿ ಎಂದು ಹಾರೈಸುವೆ.

  ನನ್ನ ಸಿಂಥಿಯಾ ಸುಮಾರು ೮೦೦೦ ಕಿ.ಮಿ. ನನ್ನೊಡನೆ ಪಯಣಿಸಿ ಈಗ ಮಂಗಳೂರು ಮಣ್ಣಗುಡ್ಡ ಮನೆ ಸೇರಿದ್ದಾಳೆ. ಮಂಗಳೂರಿಗೆ ನಾನು ಬಂದಾಗಲೆಲ್ಲಾ ನನ್ನ ಪಯಣವು ಸಿಂಥಿಯ ಜೊತೆಯೆ ಆಗುವುದು. ನನ್ನ ಪತ್ನಿಗೆ ಈಗಲೂ ಸಿಂಥಿಯಾ ಕಂಡರೆ ಈರ್ಷ್ಯೆ.

  ನಿಮ್ಮ ಮತ್ತು ನಿಮ್ಮ ಧರ್ಮಪತ್ನಿ ಇವರ ಜಂಟಿ ಸೈಕಲ್ ಪಯಣ ಸದಾ ಕಾಲ ಸುರಕ್ಷಿತ, ಆನಂದಮಯವಾಗಿ ಇರಲಿ ಎಂದು ಹಾರೈಸುವೆ.

  ReplyDelete
 14. ನಾನೂ ಒಂದು ಒಂಟಿ ಸೈಕಲ್ ಕೊಂಡುಕೊಳ್ಳಬೇಕು, ಅಂಗಡಿಗೆ ಸಾಮಾನು ತರಲು ಹೋಗುವಾಗ, ಬೆಳಗ್ಗೆ ಒಂದು ರೌಂಡ್ ವ್ಯಾಯಾಮಕ್ಕೆ ಬಳಸಬಹುದು.

  ReplyDelete