22 February 2013

ಇಂದಿನ ಕಣ್ಣು ಅಂದಿನ ಮಣ್ಣು


ಜಿಟಿನಾರಾಯಣ ರಾಯರಮುಗಿಯದ ಪಯಣ 
ವಿ-ಧಾರಾವಾಹಿಯ ಕಂತು - ಎರಡು
ಅಧ್ಯಾಯ ಒಂದು
ಎಂಬತ್ತರ ಹಿರಿ ಎತ್ತರದಿಂದ ನಡೆದು ಬಂದ ಹಾದಿಯತ್ತ ವಿಹಂಗಮ ಮತ್ತು ಚಿಕಿತ್ಸಕ ದೃಷ್ಟಿ ಹಾಯಿಸಿದಾಗ ಎದ್ದು ಕಾಣುವ ಸಂಗತಿಗಳು ಮೂರು: . ಹುಟ್ಟು - ತಂದೆ - ತಾಯಿ - ಪರಿಸರ ಎಲ್ಲ ಆಕಸ್ಮಿಕಗಳು, ವ್ಯಕ್ತಿಯ ಇಚ್ಛಾತೀತವಾದವು; . ವರ್ತಮಾನ ವಾಸ್ತವತೆಗೆ ಶರಣಾಗಿ ಪೂರ್ಣ ತನ್ಮಯತೆಯಿಂದ ಬಾಳುವ ಸಾಮರ್ಥ್ಯ ಆತನಲ್ಲಿ ನಿಹಿತವಾಗಿರುವುದು, ಇದರ ಪೂರ್ಣ ಉಪಯೋಗವನ್ನು ಆತ ಪಡೆದುಕೊಳ್ಳುವುದು ಕರ್ತವ್ಯ; . ಈ ಮುಂದಿನ ಕಗ್ಗ ಅದನ್ನು ಸೂಚಿಸುತ್ತದೆ (ಮಂಕು ತಿಮ್ಮನ ಕ್ಷಮೆ ಕೋರಿ):

ಏರಿರದ ಬಂಡೆಗಳು ಸೃಷ್ಟಿಯಲಿ ನೂರಾರು
ಏರಲಾಗದ ಬಂಡೆ ಮೇದಿನಿಯೊಳಗಿಲ್ಲವೋ!
ಹೋರಾಡುತಿರು ಸದಾ ಸಂಕಲ್ಪ ದೃಢನಾಗಿ
ಧೀರ ಜೀವನಮೌಲ್ಯ ಸಾಧಿಸೆಲೊ ಅತ್ರಿಸೂನು


ಮಡಿಕೇರಿಯ ಗುಡ್ಡೆ ಹಿತ್ಲು ತಿಮ್ಮಪ್ಪಯ್ಯ-ವೆಂಕಟಲಕ್ಷ್ಮಿ ದಂಪತಿಗಳ ಮೊದಲ ಮಗನಾಗಿ ತಾಯಿಯ ತವರ್ಮನೆ ಮರಿಕೆಯಲ್ಲಿ (ಇದು ಪುತ್ತೂರು ಸಮೀಪದ ಒಂದು ಕಿರು ಹಳ್ಳಿ) ಹುಟ್ಟಿದೆ (೩೦--೧೯೨೬). ಮರಿಕೆಯ ಪ್ರಶಾಂತ ಪರಿಸರ, ಮಡಿಕೇರಿ ಬ್ರಾಹ್ಮಣ ಕೇರಿಯಲ್ಲಿಯ ಅಶ್ವತ್ಥಕಟ್ಟೆ, ಓಂಕಾರೇಶ್ವರ ದೇವಾಲಯ, ಆಂಜನೇಯನ ಗುಡಿ, ಮನೆ ಮುಂದಿನ ಕಿರುತೊರೆ ಮತ್ತು ಮನೆ ಹಿಂದಿನ ಗುಡ್ಡಕಾಡು ಎಲ್ಲವೂ ಬಾಲ್ಯದಲ್ಲಿ ನನ್ನನ್ನು ಗಾಢವಾಗಿ ಪ್ರಭಾವಿಸಿದ ಪ್ರಾಕೃತಿಕ ವಿಸ್ಮಯಗಳು. ಇವು ಅಚ್ಚೊತ್ತಿದ ಚಿರಂತನ ಮೌಲ್ಯಗಳು ಅನುಕ್ರಮವಾಗಿ ಜೀವನಪ್ರೇಮ, ಸ್ಥಿತಪ್ರಜ್ಞೆ, ಆಸ್ತಿಕತೆ, ಸಂಗೀತ-ಸಾಹಿತ್ಯಾಸಕ್ತಿ, ಬದುಕಿನ ನಿರಂತರತೆ ಮತ್ತು ಸವಾಲನ್ನು ಎದುರಿಸುವ ಛಲ.

ವಯಸ್ಸು ಎಪ್ಪತ್ತು ದಾಟಿದಾಗ ನನ್ನ ಬದುಕನ್ನು ರೂಪಿಸಿದ ಮುಖ್ಯ ಅಂಶಗಳೇನೆಂದು ಪ್ರಶ್ನಿಸಿಕೊಂಡಾಗ ದೊರೆತ ಉತ್ತರ, ಸೂತ್ರರೂಪದಲ್ಲಿ, ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ, ಅಧ್ಯಾತ್ಮದೆಡೆಗೆ ಗಮನ. ಆ ಎಳವೆಯಲ್ಲೇ ಈ ಸೂತ್ರ ಹೇಗೆ ನನ್ನ ಭವಿಷ್ಯವನ್ನು ಟಂಕಿಸಿತೆಂಬುದನ್ನು ಇಂದು ವಿಶ್ಲೇಷಿಸುವಾಗ ಮೊದಲು ಮೂಡುವುದು ಆಶ್ಚರ್ಯ, ಸಮಾಜದ ಬಗ್ಗೆ ಗೌರವ ಮತ್ತು ಕೃತಜ್ಞತೆ, ಕೊನೆಗೆ ಆತ್ಮ ವಿಶ್ಲೇಷಣೆ. ಈ ಮೂರನೆಯದನ್ನು ಸಾಧ್ಯವಾಗುವಷ್ಟೂ ನಿರಪೇಕ್ಷವಾಗಿ ಮುಂದಿನ ಪುಟಗಳಲ್ಲಿ ನಿರೂಪಿಸಲು ಪ್ರಯತ್ನಿಸುತ್ತೇನೆ:

ಎದೆ ತುಂಬಿ ಬರೆದಿಹೆನು ಈ ಕೃತಿಯ ನಾನು
ಮನವಿಟ್ಟು ವಾಚಿಸಿರಿ ಇದನಿಂದು ನೀವು
ಎಲ್ಲರೋದಲೆ ಎಂದು ನಾನು ಬರೆದಿಹುದಲ್ಲ:
ಬರೆಯುವುದು ಅನಿವಾರ್ಯ ಕರ್ಮವೆನಗೆ
ಜಿ.ಎಸ್.ಎಸ್ ಕ್ಷಮೆಕೋರಿ.
ಅಂದು (೧೯೨೧-೩೦ರ ದಶಕ) ಮಡಿಕೇರಿಯಲ್ಲಿಯ ಅವಿಭಕ್ತ ಕುಟುಂಬವೊಂದರ ಕಿರಿ ಕುಡಿ ನಾನು. ಮನೆಯಲ್ಲಿ ಪ್ರಾಯ ೮೦ ದಾಟಿದ್ದ ಮುತ್ತಜ್ಜ ಅಡಮನೆ () ಪಳ್ಳತಡ್ಕ (ಪಿ) ಸುಬ್ಬಯ್ಯ, ಇವರ ನಾಲ್ವರು ಹೆಣ್ಣು ಮಕ್ಕಳು ಹೊನ್ನಮ್ಮ, ಸಾವಿತ್ರಿ, ಗೌರಮ್ಮ ಮತ್ತು ದೇವಮ್ಮ. ಇವರೆಲ್ಲರೂ ಎಳೆ ಹರೆಯದಲ್ಲೇ ವಿಧವೆಯರಾದರು. ಹೊನ್ನಮ್ಮನ ಹೊರತು ಉಳಿದ ಮೂವರು ಹಡೆದ ಮಕ್ಕಳು ಯಾರೂ ಉಳಿಯಲಿಲ್ಲ. ಹೀಗೆ ಈ ವಿಧವೆಯರು ತಾಯಿಯಿಲ್ಲದ ತವರ್ಮನೆಗೆ ಮರಳಿದರು, ತಂದೆಗೆ ಊರುಗೋಲಾದರು, ತಂದೆ ಇವರಿಗೆ ರಕ್ಷಕರಾದರು. ಒಬ್ಬೊಬ್ಬರದು ಒಂದೊಂದು ದುರಂತ ಕತೆ.

ಹಿರಿ ಮಗಳು ಹೊನ್ನಮ್ಮ ಹಡೆದ, ಪ್ರಾಯಶಃ ಹದಿನಾಲ್ಕು ಮಕ್ಕಳ ಪೈಕಿ ಉಳಿದವರು ಇಬ್ಬರೇ: ಗುಡ್ಡೆಹಿತ್ಲು (ಜಿ) ನಾರಾಯಣ (ಎನ್) ತಿಮ್ಮಪ್ಪಯ್ಯ - ಇವರೇ ನನ್ನಪ್ಪ, ಮತ್ತು ಇವರ ತಮ್ಮ ರಾಮಚಂದ್ರ. ಈ ಸೋದರರ ನಡುವಿನ ವಯೋವ್ಯತ್ಯಾಸ ಸುಮಾರು ಹದಿನಾಲ್ಕು ವರ್ಷಗಳು. ತಿಮ್ಮಪ್ಪಯ್ಯನವರಿಗೆ ತಮ್ಮ ತಾಯಿಯ ಅಣ್ಣನ ಮಗಳು ವೆಂಕಟಲಕ್ಷ್ಮಿ ಜೊತೆ ವಿವಾಹವಾಗಿತ್ತು, ತಮ್ಮನಿಗೆ ಇನ್ನೂ ಮದುವೆ ಆಗಿರಲಿಲ್ಲ.

ಕೊಡಗು ರಾಜರ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ನಗರ ಸೀಮೆಯಿಂದ ಕೊಡಗಿಗೆ ಹೊಸ ಉಸಿರು ಮತ್ತು ಹಚ್ಚ ಹಸುರು ಅರಸಿ ಬಂದ ಹಲವಾರು ಕುಟುಂಬಗಳ ಪೈಕಿ ಗುಡ್ಡೆಹಿತ್ಲು ಮತ್ತು ಅಡಮನೆಯವರೂ ಸೇರಿದ್ದರು. ಉಭಯರೂ ಕೃಷಿಕರು, ಶಾಸ್ತ್ರ ಸಂಪನ್ನರು ಮತ್ತು ಸಾಹಸಪ್ರಿಯರು. ಗುಡ್ಡೆ ಹಿತ್ಲಿನ ಹಿರಿಯರು ರಾಜಕುಟುಂಬಕ್ಕೆ ಪುರೋಹಿತರಾಗಿಯೂ ಅಡಮನೆಯವರು ಕರಣಿಕರಾಗಿಯೂ ನೇಮನಗೊಂಡರುಈ ಕಾರಣವಾಗಿ ಮೊದಲಿನವರು ಪೌರೋಹಿತ್ಯ ಕಲಿತರು, ಎರಡನೆಯವರು ಲೆಕ್ಕಶಾಸ್ತ್ರ ಪರಿಣತರಾದರು.

ಅಂದಿನ (೧೮-೧೯ನೆಯ ಶತಮಾನಗಳು) ಸಂಪ್ರದಾಯದಂತೆ ರಾಜ ಇವರಿಗೆ ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಉಂಬಳಿ ಜಹಗೀರುಗಳನ್ನು ದಾನವಿತ್ತಿದ್ದ. ಅಂದ ಹಾಗೆ ಅಂದು ಕೊಡಗಿನ ವ್ಯಾಪ್ತಿ ನೆರೆಯ ದಕ್ಷಿಣ ಕನ್ನಡದ ಸುಳ್ಯ, ಪಳ್ಳತಡ್ಕ, ಪುತ್ತೂರು ಸೀಮೆಗಳವರೆಗೂ ಹಬ್ಬಿತ್ತು; ಕಾವೇರಿಯಿಂದಮಾ ನೇತ್ರಾವತಿವರಮಿರ್ದ ನಾಡದಾ ಕ್ರೋಢದೇಶಂ! ಅಡಮನೆಯವರಿಗೆ ಪಳ್ಳತಡ್ಕ ಮತ್ತು ಪುತ್ತೂರು ಸೀಮೆಯ ಆರ್ಯಾಪು ಗ್ರಾಮಗಳಲ್ಲಿ ಜಹಗೀರು ಪ್ರಧಾನವಾಗಿತ್ತು. ಗುಡ್ಡೆಹಿತ್ಲಿನವರವು ಕೊಡಗು ಜಿಲ್ಲೆಗೇ ಸೀಮಿತವಾಗಿದ್ದುವು. ನನ್ನ ಜನ್ಮ ಸ್ಥಳ ಪುತ್ತೂರು ವಿಭಾಗದ ಆರ್ಯಾಪು ಗ್ರಾಮದಲ್ಲಿಯ ಮರಿಕೆ ಎಂಬ ಹಳ್ಳಿಯಲ್ಲಿದೆ.

ಹಿರಿಯ ಸುಬ್ಬಯ್ಯನವರಿಗೆ ಇಬ್ಬರು ಪುತ್ರರೂ ಇದ್ದರು: ತಿಮ್ಮಪ್ಪಯ್ಯ (ನನ್ನ ಅಪ್ಪ ಅಲ್ಲ) ಮತ್ತು ಪರಮೇಶ್ವರ. ಇಬ್ಬರಿಗೂ ಮದುವೆ ಮಾಡಿದ್ದರು. ಆದರೆ ಈ ಗಂಡು ಮಕ್ಕಳೂ ಅಲ್ಪಾಯುಷಿಗಳಾಗಿಯೇ ಮರಣಿಸಿದರು. ಹಿರಿ ಮಗನ ಹೆಂಡತಿ ಲಕ್ಷ್ಮಿ (ಮಕ್ಕಳಿಗೆ ಪ್ರೀತಿಯ ಅಮ್ಮಯ್ಯ). ಈ ದಂಪತಿಗಳ ಮಕ್ಕಳು ಕಿರಿಯ ಸುಬ್ಬಯ್ಯ ಮತ್ತು ವೆಂಕಟಲಕ್ಷ್ಮಿ (ನನ್ನ ತಾಯಿ). ತಿಮ್ಮಪ್ಪಯ್ಯ-ವೆಂಕಟಲಕ್ಷ್ಮಿ ದಂಪತಿಗಳ ಮೊದಲ ಮಗನಾಗಿ ನಾನು ಮರಿಕೆಯಲ್ಲಿ ಹುಟ್ಟಿದಾಗ ಉಭಯ ದುಃಖಿತ ಮತ್ತು ನಿರಾಶಾಮಯ ಕುಟುಂಬಗಳಿಗೆ ಹೊಸ ಭರವಸೆ ಮತ್ತು ಚೇತನ ಬಂದಂತಾಯಿತೆಂದು ಮುಂದೊಮ್ಮೆ ತಾಯಿ ಹೇಳಿದ್ದುಂಟು. ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ ಬತ್ತಿದ ಸರೋವರಕೆ ನವಜಲಮೊದವಿದಂತೆ ಬಿತ್ತರದ ಕಾವ್ಯ ರಚನೆಗೆ ದೇವತಾಸ್ತುತಿ ನೆಗಳ್ದಂತೆ ನನ್ನ ಅವತಾರವಾಯಿತೆಂದು ಅಜ್ಜಿ ಲಕ್ಷ್ಮೀಶನ ಚಂದ್ರಹಾಸೋಪಾಖ್ಯಾನದ ಪದ್ಯ ಹಾಡಿ ನನ್ನ ಗುಣಗಾನ ಮಾಡಿದಾಗ ಪ್ರಾಯಶಃ ನಾಲ್ಕರ ಹುಡುಗ ಹಿಗ್ಗಿ ಹದಿನಾರಾಗಿ ದರೆ ಹಾರಿ ಕಾಲು ಉಳುಕಿಸಿಕೊಂಡದ್ದು ಈಗಲೂ ನೆನಪಿನಲ್ಲಿದೆ. ಸಾಂಪ್ರದಾಯಿಕವಾಗಿ ನನಗೆ ಪಿತಾಮಹನ (ಮಾತಾಮಹನ ಅಲ್ಲ!) ಹೆಸರಿಟ್ಟರು: ಗುಡ್ಡೆಹಿತ್ಲು (ಜಿ) ತಿಮ್ಮಪ್ಪಯ್ಯ (ಟಿ) ನಾರಾಯಣ, ಕಾಲೇಜು ಸೇರುವಾಗ ರಾವ್ ಎಂಬ ಉಪನಾಮವೂ ಜೊತೆಗೂಡಿತು.

ಕಿರಿಯ ಸುಬ್ಬಯ್ಯ (ನನ್ನ ತಾಯಿಯ ಅಣ್ಣ) ಮತ್ತು ನನ್ನಪ್ಪ ಮಡಿಕೇರಿಯಲ್ಲಿ ಓದಿ, ಹಾಡಿ, ಹಾಕಿಯಾಟವಾಡಿ ಮತ್ತು ನಾಟಕಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಎಸ್ಸೆಸ್ಸಲ್ಸಿಯಾದ ಬಳಿಕ ಮಂಗಳೂರಿಗೆ ಹೋಗಿ ಅಲ್ಲಿಯ ಸರ್ಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ತರಗತಿಗೆ ದಾಖಲಾಗಿದ್ದರು. ಅಲ್ಲಿ ಇವರ ಸಹಪಾಠಿಯಾಗಿ ಕೋಟ ಶಿವರಾಮ ಕಾರಂತ ಎಂಬ ಅಪ್ಪಟ ಖಾದೀಧಾರಿ ದೇಶಭಕ್ತ ಪಾದರಸ ಸದೃಶ ವ್ಯಕ್ತಿತ್ವದ ವಿಚಾರವಂತರಿದ್ದರೆಂದು ಹೇಳುತ್ತಿದ್ದರು. ತರುವಾಯದ ದಿನಗಳಲ್ಲಿ ಇವರು ಆಧುನಿಕ ಕನ್ನಡ ವಾಙ್ಮಯ ಬ್ರಹ್ಮರಾಗಿ ಅರಳಿ ಬೆಳಗಿದುದು ಈಗ ಇತಿಹಾಸ. ಕಾರಂತರು ಶಿಕ್ಷಣ ರಂಗದ ಎದುರು ಮಾತ್ರವಲ್ಲ ಒಟ್ಟು ವ್ಯವಸ್ಥೆಯ ವಿರುದ್ಧವೂ ಸಿಡಿದೆದ್ದು ಕಾಲೇಜನ್ನು ಬಹಿಷ್ಕರಿಸಿ ಸ್ವತಂತ್ರ ಮಾರ್ಗಾವಲಂಬಿಯಾದರು. ‘ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಆತ್ಮಚರಿತ್ರೆಯಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿದರು.

ಇತ್ತ ತಿಮ್ಮಪ್ಪಯ್ಯ-ಸುಬ್ಬಯ್ಯದ್ವಯರ ಕಾಲೇಜ್ ಶಿಕ್ಷಣವಾದರೂ ಮುಂದುವರಿಯಲಿಲ್ಲ. ಇಬ್ಬರೂ ಸಾಂಸಾರಿಕ ಕಾರಣಗಳಿಗಾಗಿ ಓದನ್ನು ಕೈದುಮಾಡಿ ಮನೆಗೆ ಮರಳುವುದು ಅನಿವಾರ್ಯವಾಯಿತು. ತಿಮ್ಮಪ್ಪಯ್ಯ ಮಡಿಕೇರಿಯಲ್ಲಿ ಕೊಡಗು ಸರ್ಕಾರೀ ನೌಕರರಾದರು. ಸುಬ್ಬಯ್ಯ ತಮ್ಮ ತಾಯಿ ಮತ್ತು ತಂಗಿ ವೆಂಕಟಲಕ್ಷ್ಮಿ ಜೊತೆ ಮರಿಕೆ ಆಸ್ತಿಯಲ್ಲಿ ಕೃಷಿಕರಾಗಿ ನೆಲಸಿದರು. ಮುಂದೆ ಯಥಾ ಕಾಲದಲ್ಲಿ ಹಿರಿಯರೆಲ್ಲ ಸೇರಿ ತಿಮ್ಮಪ್ಪಯ್ಯನವರಿಗೆ ಸೋದರತ್ತಿಗೆ ವೆಂಕಟಲಕ್ಷ್ಮಿ ಜೊತೆ ಮದುವೆ ಮಾಡಿದರು. ಇತ್ತ ಸುಬ್ಬಯ್ಯನವರ ಭಾರ್ಯೆಯಾಗಿ ಪಂಜಿಗುಡ್ಡೆ ಮನೆಯ (ದಕ್ಷಿಣ ಕನ್ನಡ) ಪಾರ್ವತಿ ಮರಿಕೆಮನೆ ತುಂಬಿದರು.

ಸಂಗೀತವೆನ್ನುಸಿರು
ಅಧ್ಯಾಯ ಎರಡು

ಹಿರಿಯ ಸುಬ್ಬಯ್ಯನವರ ವೃದ್ಧಾಪ್ಯವೇನೂ ಸುಖ ಶಾಂತಿಮಯವಾಗಿರಲಿಲ್ಲ; ಗಂಡು ಮಕ್ಕಳಿಗೆ ತಮ್ಮ ಸಮೃದ್ಧ ಆಸ್ತಿ ಮನೆಗಳನ್ನು ಪಾಲು ಮಾಡಿ ತಾವು ವಿಧವೆ ಹೆಣ್ಣು ಮಕ್ಕಳ ಜೊತೆ ಮಡಿಕೇರಿ ಗೃಹವಾಸಿಗಳಾದರು. ಕೊಡಗು ಸರ್ಕಾರೀ ಸೇವೆಯಲ್ಲಿ ಇವರು ಕರಣಿಕರಾಗಿದ್ದುದರಿಂದ ನಿವೃತ್ತಿ ವೇತನ ಬರುತ್ತಿತ್ತು. ಅವರ ನಡುವೆ ಇವರು ಕರಣಿಕರೆಂದೂ ಶ್ರೀ ರಾಮಚಂದ್ರಾಪುರ ಮಠದ ಕೊಡಗು-ಪುತ್ತೂರು ಜಿಲ್ಲಾ ಧರ್ಮಾಧಿಕಾರಿಗಳೆಂದೂ ಗೌರವ ಭಾಜನರಾಗಿದ್ದರು. ಆಸ್ತಿಪಾಸ್ತಿಗಳು ಸಾಕಷ್ಟು ಇದ್ದುವು. ಇವರ ಹೆಂಡತಿ ಎಂದೋ ಗತಿಸಿದ್ದರು. ವಿಧವೆ ಹೆಣ್ಣು ಮಕ್ಕಳೇ ಈ ವೃದ್ಧರ ಯೋಗಕ್ಷೇಮಪಾಲಕರಾದರು. ಹೆಣ್ಣು ಮಕ್ಕಳಿಗೆ ಅವರವರ ಮೃತ ಪತಿಯರ ಸ್ಥಿರಚರ ಸೊತ್ತುಗಳನ್ನು ಕಾನೂನು ಪ್ರಕಾರ ದೊರಕಿಸಲು ಸುಬ್ಬಯ್ಯನವರು ನ್ಯಾಯಾಲಯ ಕಟ್ಟೆ ಹತ್ತಿ ಜಯಶೀಲರಾಗಿದ್ದರು.

ಕೊನೆ ಮಗಳು ದೇವಮ್ಮನವರದು (ಅಮ್ಮಣ್ಣಿ) ಜನ್ಮದತ್ತ ಮಧುರಕಂಠ, ಅಪಾರ ಸಾಹಿತ್ಯಾಸಕ್ತಿ ಕೂಡ. ಹೀಗಾಗಿ ತಂದೆ ತಮ್ಮ ಮನೆಯಲ್ಲೊಂದು ಗ್ರಂಥ ಭಂಡಾರ ಆರಂಭಿಸಿ ರಾಮಾಯಣ, ಮಹಾಭಾರತ, ಪುರಾಣ, ಧರ್ಮಶಾಸ್ತ್ರ ಮುಂತಾದ ಪ್ರಾಚೀನ ಕೃತಿಗಳನ್ನೂ ವೆಂಕಟಾಚಾರ್ಯ, ಗಳಗನಾಥ, ಪಂಜೆ ಮೊದಲಾದ ಆಧುನಿಕ ಲೇಖಕರ ಪುಸ್ತಕಗಳನ್ನೂ ಅದರಲ್ಲಿ ಜಮಾಯಿಸಿದ್ದರು. ಪಾಲ್ಘಾಟಿನಿಂದ ಈಶ್ವರ ಭಾಗವತರೆಂಬ ಕರ್ಣಾಟಕ ಸಂಗೀತ ಶಾಸ್ತ್ರಜ್ಞರನ್ನು ಮನೆಗೆ ಕರೆಸಿ ಅಮ್ಮಣ್ಣಿಗೆ ಗುರುಕುಲಕ್ರಮದಲ್ಲಿ ಸಂಗೀತ ಕಲಿಸುವ ಏರ್ಪಾಡನ್ನೂ ಮಾಡಿದರು. ಗುಡ್ಡ ಕಾಡು, ಪ್ರತಿಕೂಲ ಹವಾ ಏರಿಳಿತಗಳು, ಸಂಚಾರ ಸೌಲಭ್ಯ ಬಹುತೇಕ ಶೂನ್ಯ ಮತ್ತು ಮನೆಮಠಗಳು ತೀರ ಬೆಳವಣಿಗೆಯಲ್ಲಿದ್ದ ಅಂದಿನ (೧೯-೨೦ನೆಯ ಶತಮಾನಗಳ ಸಂಧಿಕಾಲ) ಮಡಿಕೇರಿಯಲ್ಲಿ ಕರ್ನಾಟಕ ಸಂಗೀತದ ಮೊದಲ ರಾಗ ಮಿಡಿದದ್ದು ಸುಬ್ಬಯ್ಯನವರ ಮನೆಯಲ್ಲಿ, ಅಮ್ಮಣ್ಣಿಯವರ ಸಿರಿಕಂಠದಲ್ಲಿ ಎಂದರೆ ಇಂದಿನವರಿಗೆ ಆಶ್ಚರ್ಯವಾದೀತು.

ಅಮ್ಮಣ್ಣಿ ಹಾಡುಗಾರಿಕೆಯ ಜೊತೆಗೆ ಪಿಟೀಲುವಾದನವನ್ನೂ ಗುರುಮುಖೇನ ನಿಷ್ಠೆಯಿಂದ ಅಭ್ಯಸಿಸಿದರು. ಹೀಗೆ ಇವರಲ್ಲಿ ಯುವವಯಸ್ಸು, ಸಂಗೀತ, ಸಾಹಿತ್ಯ, ಸಂಸ್ಕಾರ, ಶ್ರದ್ಧೆ ಎಲ್ಲವೂ ಹದವಾಗಿ ಬೆರೆತು ಕ್ರಮೇಣ ಇವರೊಬ್ಬ ಹಿರಿಯ ಗಾಯಿಕೆ-ಗುರುವಾಗಿ ಇತರರಿಗೆ ಮಾರ್ಗದರ್ಶಕಿಯೂ ಆದರು. ನನ್ನ ತಾಯಿ ಈ ಸೋದರತ್ತೆಯಿಂದ ಸಂಗೀತ ಮತ್ತು ಪಿಟೀಲು ಕಲಿತರು, ಸಾಹಿತ್ಯಾಸಕ್ತಿ ತಾಯಿಗೆ ಹುಟ್ಟಿನಿಂದಲೇ ಬಂದಿದ್ದ ಬಳುವಳಿ. ತಂದೆ ಮತ್ತು ಚಿಕ್ಕಪ್ಪ ಮನೆಯಲ್ಲಿಯ ನಿರಂತರ ಸಂಗೀತ ದಾಸೋಹದಿಂದ ಪ್ರಭಾವಿತರಾಗಿ ತಮ್ಮಷ್ಟಕ್ಕೆ ಹಾಡು, ನಾಟಕಮಟ್ಟು, ಶ್ಲೋಕ ಮುಂತಾದವನ್ನು ಗುನುಗಲು ತೊಡಗಿದರು. ತಂದೆ ಹಾರ್ಮೋನಿಯಂ ಕೊಂಡರು, ಕೊಳಲು ತಯಾರಿಸಿದರು ಮತ್ತು ಎರಡೂ ವಾದ್ಯಗಳ ಮೇಲೆ ಸ್ವಯಂಶಿಕ್ಷಿತರಾಗಿ ಹಿಡಿತ ಗಳಿಸಿದರು. ಚಿಕ್ಕಪ್ಪ ತುಂಬು ಕಂಠದಿಂದ ಹಾಡುತ್ತಿದ್ದರು.

ಆ ದಿನಗಳಲ್ಲಿ (೨೦ನೇ ಶತಮಾನದ ಮೊದಲ ಪಾದ) ಉತ್ತರ ಕರ್ನಾಟದಿಂದ ಮಡಿಕೇರಿಗೆ ಬರುತ್ತಿದ್ದ ಸಂಚಾರಿ ನಾಟಕ ಮಂಡಳಿಗಳು ನನ್ನ ಪೂರ್ವಜರ ಮೇಲೆ ಬೀರಿದ ಪ್ರಭಾವ ಅಪಾರ; ಸಂಪೂರ್ಣ ರಾಮಾಯಣ, ಕುರುಕ್ಷೇತ್ರ, ಸದಾರಮೆ, ಸಂಸಾರ ನೌಕೆ, ಭಕ್ತಿ ಭಂಡಾರಿ ಬಸವಣ್ಣ, ಸಂತ ಪುರಂದರ, ಭಕ್ತ ಕನಕದಾಸ ಇತ್ಯಾದಿ. ಇದೆಲ್ಲವೂ ಸಂಗೀತ ನಾಟಕಗಳು. ಇವನ್ನು ಅನುಕರಿಸಿ ಹುಡುಗರೇ ವೇಷಕಟ್ಟಿ ನಾಟಕವಾಡಿದರು. ಬಾಲಸಮಾಜವೆಂಬ ನಾಟಕ-ಸಾಹಿತ್ಯ-ಕ್ರೀಡಾ ಸಂಕೀರ್ಣವನ್ನು ಬ್ರಾಹ್ಮಣಕೇರಿಯಲ್ಲಿ  ಸ್ಥಾಪಿಸಿ ತಮ್ಮ ಸುಪ್ತ ಕಲಾಸಕ್ತಿಗಳಿಗೆ ಅಭಿವ್ಯಕ್ತಿರಂಗ ಕಂಡುಕೊಂಡರು.

ಸ್ವತಃ ಸಾಮುಮಾಡಿ ಪೈಲ್ವಾನ್ ಎನಿಸಿಕೊಂಡಿದ್ದ ನನ್ನ ತಂದೆಗೆ ದೃಢ ಬಲಿಷ್ಠ ದೇಹವಿತ್ತು. ತುಂಬ ಚೂಟಿ ಹಾಗೂ ಬಲು ಮುಂಗೋಪಿ, ಆದರೆ ಶೀಘ್ರ ಸಮಾಧಾನಿ ಕೂಡಾ! ಉತ್ಸಾಹ, ಸಂತೋಷ ಮತ್ತು ಸ್ಫೂರ್ತಿ ಇವರ ನಿತ್ಯ ಸಂಗಾತಿಗಳು. ಸರೀಕರ ಪ್ರಕಾರ ಇವರು ತುಸು ಬೋಳೆ ಸ್ವಭಾವದವರು - ವ್ಯವಹಾರಕುಶಲರಲ್ಲವೆಂಬುದು ಇಂಗಿತ. ಹಾಕಿ ಆಟದಲ್ಲಿ ಗಟ್ಟಿ ಕುಳ, ಅಲ್ಲಿಯೂ dashing centre forward. ಇನ್ನು ನಾಟಕ? ಇವರೊಮ್ಮೆ ನರಸಿಂಹನ ಪಾತ್ರ ಮಾಡಿದ್ದರಂತೆ. ಆಗ ಇವರ ವೇಷಭೂಷಣ, ಉಗ್ರತೆ, ಆರ್ಭಟೆ, ಹಾರಾಟ, ಕುಣಿತ ಮುಂತಾದವನ್ನು ಕಂಡವರು ಇನ್ನೇನು ಈ ಉಗ್ರನರಸಿಂಹ ರಂಗದ ಮೇಲೆಯೇ ವಾಸ್ತವವಾಗಿ ಹಿರಣ್ಯ ಕಶಿಪುವನ್ನು ಸಂಹರಿಸಿಯೇ ಬಿಡುತ್ತಾನೆಂದು ಹೆದರಿದ್ದರಂತೆ!

ಇಂಥ ಸಂಗೀತ-ಸಾಹಿತ್ಯ-ನಾಟಕ ಪರಿಸರದ ಶಿಶು ನಾನುಜೊತೆಗೆ ನಿಸರ್ಗದ ಸಮೃದ್ಧಿ ಸೂರೆಹೋಗುವಂತಿತ್ತು. ನಮ್ಮ ಚಿಕ್ಕಜ್ಜಿ ಅಮ್ಮಣ್ಣಿ (ನಾವಿವರನ್ನು ಅತ್ತೆಮ್ಮ ಎಂದು ಕರೆಯುತ್ತಿದ್ದೆವು) ಹಾಡಿದರು, ತಾಯಿ ಯೆಂಕ (ವೆಂಕಟಲಕ್ಷ್ಮಿಯ ಹ್ರಸ್ವ ರೂಪ, ಮಕ್ಕಳ ಬಾಯಿಯಲ್ಲಿ ಅಕ್ಕ) ದನಿಗೂಡಿಸಿದರು, ಇಬ್ಬರೂ ಪಿಟೀಲು ಕೂಡಾ ನುಡಿಸಿದರು, ತಂದೆ ಕೊಳಲೂದಿದರು, ಚಿಕ್ಕಪ್ಪ ತಾಮ್ರದ ಕೊಡಪಾನವನ್ನು ಬೋರಲು ಹಾಕಿ ಘಟ ಬಾರಿಸಿದರು! ಅದೊಂದು ಅದ್ಭುತ ಸಂಗೀತ ರಸಮೇಳ, ನಾದಸುಧಾ ರಸಪಾನ, ಸ್ವರ್ಗಾನಂದಾನುಭವ.

ಇನ್ನು ಮನೆಯೊಂದು ಸದಾ ಚಟುವಟಿಕೆಯ ಜೇನುಗೂಡು. ಮುತ್ತಜ್ಜನಿಂದ ವೇದಮಂತ್ರ ಸಹಿತ ನಿತ್ಯ ಪೂಜೆ. ಅನ್ನದಾನ, ಅತಿಥಿ ಅಭ್ಯಾಗತರು, ನೆಂಟರಿಷ್ಟರು, ವಾರಾನ್ನ ವಿದ್ಯಾರ್ಥಿಗಳೆಲ್ಲರೂ ಭಾಗಿಗಳು. ಈ ಭೂರಿಯಲ್ಲಿ ತೀರಾ ಕಿರಿಯನಾಗಿ, ಎಲ್ಲರ ಕಣ್ಮಣಿಯಾಗಿ ಮತ್ತು ಮಗುಗಳ ಮಾಣಿಕ್ಯನಾಗಿ ನಾನು ನನ್ನ ಛಾಪು ಒತ್ತುತ್ತಿದ್ದೆ. ಮುತ್ತಜ್ಜನ ಜೊತೆ ಸಂಸ್ಕೃತ ಮಂತ್ರಗಳನ್ನು (ಅರ್ಥ ತಿಳಿಯದಿದ್ದರೂ) ಗಟ್ಟಿಯಾಗಿ ಉಚ್ಚರಿಸುತ್ತ ಅವುಗಳ ನಾದ ಮತ್ತು ಲಯಮಾಧುರ್ಯಕ್ಕೆ ಮರುಳಾದೆ. ಕ್ರಮೇಣ ನನಗೆ ಅವೆಲ್ಲವೂ ಕಂಠಗತವಾದುವು. ಫಲಿತಾಂಶ? ಹಿರಿಯರೆಲ್ಲರಿಂದಲೂ ನನಗೆ ಬೇಗ ಉಪನಯನ ಮಾಡಬೇಕೆಂಬ ಒತ್ತಾಯ.

ಅತ್ತೆಮ್ಮನ ಹಾಡುಗಾರಿಕೆಗೆ ದನಿಗೂಡಿಸಿದೆ. ಕೀರ್ತನೆಗಳಿಗೆ ತಬಲ (ಹಾರ್ಮೋನಿಯಂ ಪೆಟ್ಟಿಗೆ ಅಥವಾ ಕೊಡಪಾನ) ಕುಟ್ಟಿದೆ, ಹಾಡುಕಟ್ಟಿ ರಾಗ ಸಂಯೋಜಿಸುವ ಹುಚ್ಚು ಸಾಹಸ ಕೂಡ ಮಾಡಿದೆ! ಆದರೆ ಶಾಸ್ತ್ರೋಕ್ತವಾಗಿ ಸಂಗೀತ ಕಲಿಯಲೇ ಇಲ್ಲ. ಏಕೆ? ಆರಂಭದಿಂದಲೇ ನನಗೆ ನನ್ನ ಶಾರೀರದ ಬಗ್ಗೆ ತುಂಬ ಅಳುಕು - ಮನದ ಸಂಗೀತ ತುಡಿತಗಳಿಗೆ ಅಭಿವ್ಯಕ್ತಿ ಕೊಡುವಲ್ಲಿ ಅದು ಖುದ್ದು ನನಗೇ ಅಸಹ್ಯವಾಗುವಂತೆ ತೋರುತ್ತಿತ್ತು:
ಕತ್ತೆ ಕಿರುಚಿದೊಡಲ್ಲಿ ತೊತ್ತು ಹಾಡಿದೊಡಲ್ಲಿ

ಮತ್ತೆ ಕುಲರಸಿಕನಿರುವಲ್ಲಿ ನಗೆಯ

ಹುತ್ತ ಕಾಣೆಂದ ಸರ್ವಜ್ಞ
ಎಂಬ ಪದ್ಯ ಉದಾಹರಿಸುತ್ತ ನನ್ನ ದೌರ್ಬಲ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದೆ! ಇದು ಹೇಗೂ ಇರಲಿ: ಹುಟ್ಟಿನಿಂದಲೇ ಸಂಗೀತಾಸಕ್ತಿ ನನ್ನಲ್ಲಿ ಮೊಳಕೆಯೊಡೆದಿತ್ತು.

ಮರಿಕೆ-ಮಡಿಕೇರಿ ಜೋಕಾಲಿಯಾಟ
ಅಧ್ಯಾಯ ಮೂರು

ನನ್ನ ಬೆನ್ನಿಗೆ ನಾಲ್ಕೈದು ಮಕ್ಕಳು ಹುಟ್ಟಿದರೂ ಯಾವ ಮಗುವೂ ಉಳಿಯಲಿಲ್ಲ. ಪ್ರತಿಸಲವೂ ಬಾಣಂತಿತನ ಮರಿಕೆಯಲ್ಲಿ ನಡೆಯಿತು. ಹೀಗಾಗಿ ನಾನು ಚಿಕ್ಕಂದಿನಿಂದಲೇ ಮರಿಕೆ-ಮಡಿಕೇರಿ ನಡುವೆ ಓಲಾಡುವುದು ಮಾಮೂಲಾಯಿತು. ಎಂದೇ ಮರಿಕೆಯಲ್ಲಿ ನನ್ನ ಸೋದರಮಾವ ಕಿರಿಯ ಸುಬ್ಬಯ್ಯನವರ ಮಕ್ಕಳೇ ನನ್ನ ಸಹಪಾಠಿಗಳು: ನನಗಿಂತ ಎರಡು ವರ್ಷ ಕಿರಿಯನಾದ ತಿಮ್ಮಪ್ಪಯ್ಯ (ಹಿರಿಯರ ಬಾಯಿಯಲ್ಲಿ ಪೈ), ಇವನ ತಂಗಿ ಲಕ್ಷ್ಮಿ (ತಂಗಿ), ತಮ್ಮ ಗೋವಿಂದ ಮೊದಲಾದವರು. ಮಡಿಕೇರಿಯಲ್ಲಾಗಲೀ ಮರಿಕೆಯಲ್ಲಾಗಲೀ ಕುಟುಂಬ ಯೋಜನೆ ಎಂಬ ಕಲ್ಪನೆ ಅಂದು ಚಾಲ್ತಿಯಲ್ಲಿರಲಿಲ್ಲ. ಹೆಂಡತಿ ಸಂತತಿ ಸಾಸಿರವಾಗಲಿ ಎಂಬ ಆಶಯ ಅಕ್ಷರಶಃ ಮೈದಳೆಯುತ್ತಿದ್ದ ದಿನಗಳವು!

ಪೈ ಮತ್ತು ನಾನು ಅವಳಿ ಮಕ್ಕಳಂತೆ ಆಡಿ, ಓಡಿ, ಗುಡ್ಡೆ ಹತ್ತಿ ಇಳಿದು, ಕಣಿವೆ ಹಾರಿ, ಕೆರೆಯಲ್ಲಿ ಈಸಿ, ಕಾಡಿನಲ್ಲಿ ಅಡ್ಡಾಡಿ ನಿಸರ್ಗದ ಸ್ವತಂತ್ರ ಶಿಶುಗಳಾಗಿ ಬೆಳೆಯುತ್ತಿದ್ದೆವು. ಹೆಣ್ಣಿನ ಬಗ್ಗೆ ಸಾಮೂಹಿಕ ತಾತ್ಸಾರ ಅಂದಿನ ಹವೆ. ಇನ್ನು ಚಿಕ್ಕಂದಿನಲ್ಲೇ ಹಿರಿಯರು ತಂಗಿ-ನಾರಾಯಣ ಜೋಡಿ ಎಂದು, ಲಘುವಾಗಿಯೇ ಆದರೂ ಹೇಳುತ್ತಿದ್ದುದರಿಂದ ನನ್ನ ಎಳೆ ಮನಸ್ಸು ಈ ಹುಡುಗಿಯಿಂದ ಪೂರ್ತಿ ದೂರವಾಗಿರಲು ತವಕಿಸುತ್ತಿತ್ತು. ಇತ್ತ ಗೋವಿಂದ ಮತ್ತು ಇವನ ಮುಂದಿನವರು ತೀರ ಚಿಕ್ಕವರು. ಇವೆಲ್ಲ ಅಂಶಗಳೂ ಅಪ್ರಯತ್ನಿತವಾಗಿ ಸೇರಿ ಪೈ ಮತ್ತು ನನ್ನ ನಡುವಿನ ಬಾಂಧವ್ಯವನ್ನು ಇನ್ನಷ್ಟು ದೃಢಗೊಳಿಸಿದುವು.

ಮಡಿಕೇರಿ ಮನೆಯ ಪರಿಸರಕ್ಕಿಂತ ಮರಿಕೆಯಲ್ಲಿಯದೇ ನನಗೆ ಹೆಚ್ಚು ಪ್ರಿಯವಾಗುತ್ತಿತ್ತು. ಅದೊಂದು ಸಂತೆ, ಕಿರಿಯ ಸಂಗಾತಿಗಳಿಲ್ಲದ ಒಂಟಿ ಬಾಳು. ಮರಿಕೆಯಾದರೋ ಒಲುಮೆಯ ಪುಟ್ಟ ಗೂಡು. ಸೋದರಮಾವ ಸುಬ್ಬಯ್ಯ, ಅಜ್ಜಿ ಅಮ್ಮಯ್ಯ ಮತ್ತು ಅತ್ತೆ ಪಾರ್ವತಿ ನನ್ನನ್ನು ಎತ್ತಿ ಪ್ರೀತಿಸಿ ತಮ್ಮ ಸರೀಕನೆಂದು ಮುದ್ದು ಮಾಡುತ್ತಿದ್ದುದನ್ನೆಂದೂ ಮರೆಯಲಾರೆ. ಮಾವ ಕತೆ ಹೇಳಿದರು, ನಾಟಕದ ಮಟ್ಟು ಹಾಡಿದರು, ಪೈಯನ್ನೂ ನನ್ನನ್ನೂ ಎತ್ತಿಕೊಂಡು ಗದ್ದೆ ತೋಟವಿಡೀ ಅಡ್ಡಾಡಿದರು, ಜೊತೆಗೆ ಜೀವನ ಮೌಲ್ಯಗಳನ್ನು ಪ್ರತ್ಯಕ್ಷ ಆಚರಣೆಯಿಂದ ಬಿಂಬಿಸಿದರು.

ಉದಾಹರಣೆಗೆ ಅಂದಿನ ಸಂಪ್ರದಾಯದಂತೆ ತೋಟದ ಕೂಲಿಗಳು ಸಾಧಾರಣವಾಗಿ ಎಲ್ಲರೂ ಅಸ್ಪೃಶ್ಯವರ್ಗದವರು. ಮನೆಮುಂದಿನ ವಿಶಾಲ ಅಂಗಳದಲ್ಲಿ ತುಸು ದೂರದಲ್ಲಿ ಸಾಲಾಗಿ ನಡೆಯುತ್ತ ಕೆಲಸಕ್ಕೆ ಹೋಗುತ್ತಿದ್ದರು, ಮತ್ತು ಸಂಜೆ ಅದೇ ಶಿಸ್ತಿನಿಂದ ಮರಳಿ ತಮ್ಮ ತಮ್ಮ ಪಡಿಗಳನ್ನು ಪಡೆಯಲು ಅಲ್ಲೇ ನಿಲ್ಲುತ್ತಿದ್ದರು. ಪಡಿಯಲ್ಲಿ ಸೇರಿದ್ದ ಪದಾರ್ಥಗಳು ಮುಖ್ಯವಾಗಿ ಅಕ್ಕಿ, ಉಪ್ಪು, ಮೆಣಸು ಮತ್ತು ಹೊಗೆಸೊಪ್ಪು. ಅಡಿಕೆಮರದ ಹಾಳೆಗಳಲ್ಲಿ ಇವನ್ನು ಜೋಡಿಸಿಡುತ್ತಿದ್ದುದು ವಾಡಿಕೆ. ಆಳುಗಳು ಹಾಜರಾಗುವ ಮೊದಲೇ ಈ ಕೆಲಸವನ್ನು ವ್ಯವಸ್ಥಿತವಾಗಿ ಮಾವ (ನಮ್ಮಿಬ್ಬರು ಹುಡುಗರ ನೆರವಿನಿಂದ) ಮಾಡಿಸಿ ಮುಗಿಸಿಡುತ್ತಿದ್ದರು. ಅವರು ಹಿಂತಿರುಗುವಾಗ ಅಂಗಳದಲ್ಲಿ ಸಾಲಾಗಿಟ್ಟಿದ್ದ ತಮ್ಮ ತಮ್ಮ ಹಸುಗೆಗಳನ್ನು ಯಾಂತ್ರಿಕವಾಗಿ ಎತ್ತಿ ಒಯ್ಯುತ್ತಿದ್ದರು - ಮಾತಿಲ್ಲ, ಭಾವವಿಲ್ಲ, ಮೌನ ಮೌನ!

ಮಾವ ಈ ಯಾಂತ್ರಿಕ ವಿಧಿಗೆ ಒಲುಮೆಯ ಹೃದಯ ಬೆಸೆದ ಮೊದಲಿಗರೆಂದು ಇವರ ಓರಗೆಯವರು ಹೇಳುತ್ತಿದ್ದುದನ್ನು ಕೇಳಿದ್ದೇನೆ. ಗಾಂಧೀ ಭಕ್ತರಾಗಿದ್ದ ಇವರು ಅಸ್ಪೃಶ್ಯತಾನಿವಾರಣೆಗೆ ಕೈಗೊಂಡ ಮೊದಲ ಕೆಲವು ಸುಧಾರಣೆಗಳಲ್ಲಿ ಇದೊಂದು: ಹಸುಗೆಯನ್ನು ಸ್ವತಃ ಕೈಯಾರೆ ಎತ್ತಿ ಕೊಟ್ಟು ತುಳುವಿನಲ್ಲಿ ಯೋಗಕ್ಷೇಮ ಕುರಿತು ಒಂದೆರಡು ಮಾತಾಡಿ ಕಳಿಸುತ್ತಿದ್ದರು. ಅವರೆಲ್ಲರೂ ನಮ್ಮವರೇ ಎಂಬ ಭಾವ ಅಲ್ಲಿ ಲಕಲಕಿಸುತ್ತಿತ್ತು. ದಿನಕ್ಕೊಮ್ಮೆಯಾದರೂ ಅವರ ದಟ್ಟಿಗೆಗಳಿಗೆ (ಗುಡಿಸಲುಗಳ ಹೆಸರು) ಭೇಟಿಯಿತ್ತು ಸಾಮೂಹಿಕ ಶುಚಿತ್ವ, ಮಕ್ಕಳ ಲಾಲನೆ, ಶಿಕ್ಷಣ ಮುಂತಾದವುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಹೀಗೆ ಮಾವ ಸುಬ್ಬಯ್ಯ ನನ್ನ ಒಬ್ಬ ಆರಾಧ್ಯವ್ಯಕ್ತಿಯಾದರು.

ಇತ್ತ ಮಡಿಕೇರಿ ಮನೆಯಲ್ಲಿ ನನ್ನ ಮೇಲೆ ಗಾಢ ಪ್ರಭಾವ ಅಚ್ಚೊತ್ತಿದವರು ಚಿಕ್ಕಪ್ಪ ರಾಮಚಂದ್ರ. ನಮ್ಮ ಹಿರಿಕುಟುಂಬದಲ್ಲಿ ಇವರೊಬ್ಬ ಒಂಟಿ ಸಲಗ: ಇಂಥವರಿಗೆ ಇಂಗ್ಲಿಷಿನಲ್ಲಿ maverick ಎನ್ನುವುದುಂಟು. ತಾಯಿಯ ಕೊನೆ ಮಗನಾಗಿ, ಅಣ್ಣನ ಕಿರಿ ತಮ್ಮನಾಗಿ ಮತ್ತು ದೊಡ್ಡಮನೆಯ ಪುಟ್ಟ ಕೂಸಾಗಿ ಇವರು ನಿರಂಕುಶರಾಗಿ ಸರ್ವತಂತ್ರ ಸ್ವತಂತ್ರರಾಗಿ ಬೆಳೆದರು. ತಮಗಿಂತ ಸುಮಾರು ಹದಿನಾಲ್ಕು ವರ್ಷ ಕಿರಿಯನಾದ ನನ್ನಲ್ಲಿ ತಮ್ಮ ಆಶೋತ್ತರಗಳ ಹೊಸ ಹರವನ್ನು ಗುರುತಿಸಿದರು. ನಾವಿಬ್ಬರೂ ಅಣ್ಣ ತಮ್ಮಂದಿರಂತೆ ಬೆಳೆದೆವು.

ಸಾಂಪ್ರದಾಯಿಕ ಶಿಕ್ಷಣದಲ್ಲಿ ಅವರು ಎಸ್ಎಸ್ಎಲ್ಸಿಗಿಂತ ಮುಂದಿನ ಮಜಲೇರುವ ಆಸಕ್ತಿ ತೋರ್ಪಡಿಸಲಿಲ್ಲ. ಬದಲು, ‘ಸ್ವದೇಶೀ ಸ್ಟೋರ್ಸ್ಹೆಸರಿನ ಬಟ್ಟೆ ಅಂಗಡಿಯನ್ನು ಮಡಿಕೇರಿ ಪೇಟೆಯಲ್ಲಿ ತೆರೆದರು. ಖಾದಿ ಬಟ್ಟೆ, ಇವರೇ ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ಸಾಬೂನುಗಳು, ಆಯುರ್ವೇದಾರಿಷ್ಟಗಳು, ಲೇಹ್ಯಗಳು, ಚೂರ್ಣಗಳು ಮುಂತಾದವನ್ನು ಮಾರಾಟಕ್ಕೆ ಇಟ್ಟರು. ಅದೊಂದು ಏಕವ್ಯಕ್ತಿ-ಬಹು ಆಸಕ್ತಿ ಪ್ರದರ್ಶನ. ಆದರೆ ಇವರ ಪ್ರಾಮಾಣಿಕತೆ, ಮಾಲುಗಳ ಸಾಚಾತನ, ಗ್ರಾಹಕರಿಗೆ ಇವುಗಳ ಆವಶ್ಯಕತೆ ಮತ್ತು ಸ್ವದೇಶೀ ವಸ್ತುಗಳ ಬಗ್ಗೆ ದೇಶಾದ್ಯಂತ ಪಸರಿಸಿದ್ದ ಅಭಿಮಾನ ಯಾವುದೂ ವಾಸ್ತವ ವ್ಯವಹಾರದಲ್ಲಿ ಚಿಕ್ಕಪ್ಪನವರನ್ನು ಕಾಪಾಡಲಿಲ್ಲ. ಬೋಳೆಸ್ವಭಾವದ ಈ ಮಹಾಶಯ ಎಲ್ಲರನ್ನೂ ನಂಬಿದರು, “ತನ್ನಂತೆ ಪರರ ಬಗೆದೊಡೆ ಸ್ವರ್ಗ ಬಿನ್ನಾಣಮಕ್ಕು ಸರ್ವಜ್ಞಎಂಬ ಋಷಿವಾಕ್ಯವನ್ನು ಅಕ್ಷರಶಃ ಪಾಲಿಸಿದರು, ಮೂಲ ಕಳೆದುಕೊಂಡು, ಸಾಲ ಹೊತ್ತು, ಮುಂಗಾಣದೆ ಮನೆ ಸೇರಿದರು, ಸರ್ಕಾರೀ ನೌಕರಿ ಹಿಡಿದ ಈ ನಿರಂಕುಶ ವ್ಯಕ್ತಿ ಅಂಕುಶವಿಧೇಯರಾಗುವುದು ಅನಿವಾರ್ಯವಾಯಿತು.

ಈಗ ಅವರು ತಮ್ಮ ಅಣ್ಣನಂತೆ (ನನ್ನ ತಂದೆ) ಸಹಕಾರ ಇಲಾಖೆಯಲ್ಲಿ ಒಬ್ಬ ನೌಕರ. ಮದುವೆ ಮಾಡಿದರೆ ಈ ಮಾಣಿ ಸರಿದಾರಿಗೆ ಬಂದಾನೆಂದು ಹಿರಿಯರು (ಮುತ್ತಜ್ಜ, ಇವರ ನಾಲ್ವರು ಪುತ್ರಿಯರು, ಅಪ್ಪ ಮತ್ತು ಅಮ್ಮ) ತೀರ್ಮಾನಿಸಿದರು. ಇಸವಿ ೧೯೩೩ರ ಭೋರ್ಗರೆವ ಮಳೆಗಾಲದ ಆರಂಭ, “ತೆಂಕಣ ಗಾಳಿಯು ಕೊಂಕಣ ಸೀಮೆಗೆಸಾಕಷ್ಟು ಆರ್ಭಟೆ ಮತ್ತು ಹಾವಳಿ ಸಹಿತ ಪ್ರವೇಶಿಸಿ ಅಷ್ಟೇ ಭರದಿಂದ ಕೊಡಗನ್ನು ಹೊಕ್ಕ -- ಮೇ-ಜೂನ್ ಸಂಧಿ ಕಾಲ. ಕಾರ್ಗಾಲದ ಮಳೆರಾಯ ಬ್ರಹ್ಮಗಿರಿ ಉತ್ತರಿಸಿ ತಪ್ಪಲಿನ ಭಾಗಮಂಡಲದಲ್ಲಿ  ತಾಂಡವವಾಡುತ್ತಿದ್ದಾಗ ಅಲ್ಲೇ ನನ್ನ ಚಿಕ್ಕಪ್ಪನ ಮದುವೆ ವಿರಿಜಾಭವಾನಿಯೆಂಬ ಹದಿಹರೆಯದ ಕನ್ಯೆಯೊಡನೆ ಜರಗಲಿತ್ತು.

ಭಾಗಮಂಡಲದಲ್ಲಿ ಕನ್ನಿಕೆ ಮತ್ತು ಕಾವೇರಿ ನದಿಗಳು ಸಂಗಮಿಸುತ್ತವೆ. ಪಶ್ಚಿಮ ಘಟ್ಟಗಳ ಈ ಶಿಶುಗಳು ದಂಡೆಮೀರಿ ಹರಿಯುತ್ತ ಸಂಗಮಸ್ಥಳದಲ್ಲಿಯ ಸೇತುವೆಯನ್ನೇ ಕಬಳಿಸಿದ್ದುವು! ಹೀಗಾಗಿ ಮಡಿಕೇರಿಯಿಂದ ನಮ್ಮ ದಿಬ್ಬಣವನ್ನು ಒಯ್ದ ಬಸ್ಸು ಅಲ್ಲೇ ಕುಕ್ಕರಬಡಿಯಬೇಕಾಯಿತು. ಪ್ರವಹಿಸುತ್ತಿದ್ದ ನೀರಿನಲ್ಲಿ ದೊಡ್ಡವರು ಏನೇನೋ ಸರ್ಕಸ್ ಮಾಡಿ ನಡೆದು ಅಥವಾ ಜಿಗಿದು ಎದುರು ದಂಡೆ ಸೇರಿದರು. ನನ್ನಂಥ ಚಿಳ್ಳೆ ಪಿಳ್ಳೆಗಳನ್ನು (ನನಗಾಗ ಏಳು ವರ್ಷ) ಧಡಿಯರು ಎತ್ತಿ ದಾಟಿಸಿದರು. ಅಂತೂ ಐದಾರು ದಿನಗಳ ಆ ವಿವಾಹ, ಭೋಜನ, ಹಸೆ, ಆರತಿ, ಅಕ್ಷತೆ, ಉರುಟಣೆ, ಉಡುಗೊರೆ, ಆಶೀರ್ವಾದ ಎಲ್ಲವೂ ಮಳೆಯ ನಿರಂತರ ಮುಸಲಧಾರೆಯ ಆಧಾರಶ್ರುತಿಯೊಂದಿಗೆ ಸಮಗತಿಯಲ್ಲಿ ನೆರವೇರಿದುವು. ನಾನು ಚಿಕ್ಕಪ್ಪನವರ ಪಕ್ಕದಲ್ಲೇ ಹಸೆಮಣೆಯಲ್ಲಿ ಕುಳಿತು ಆ ಸೊಬಗನ್ನು ಸವಿದುದು ಮತ್ತು ಉಪಚಾರ ಪಡೆದುದು ಈಗಲೂ ನೆನಪಿನಲ್ಲಿದೆ. ಆಗ ಈ ಹೊಸ ಚಿಕ್ಕಮ್ಮ ನನ್ನಲ್ಲೊಬ್ಬ ಕಿರಿತಮ್ಮನನ್ನು ಕಂಡಿರಬೇಕು.

ಚಿಕ್ಕಮ್ಮ ತಂದೆಯನ್ನು ಕಳೆದುಕೊಂಡಿದ್ದ ದುರ್ದೈವಿ. ಎಳೆ ಹರೆಯದ ತಾಯಿ, ಪೌರೋಹಿತ್ಯ ಕಲಿಯುತ್ತಿದ್ದ ಅಣ್ಣ, ಶಾಲೆಯಲ್ಲಿ ಓದುತ್ತಿದ್ದ ತಮ್ಮ ಇವರ ಬಳಗ. ಚಿಕ್ಕಪ್ಪನವರ ಸಂಸಾರದ ಜೊತೆ ವಾಸ. ಕ್ಷೇತ್ರಪುರೋಹಿತರಾಗಿ ಅಲ್ಪ ವರಮಾನವಿತ್ತು. ಈ ಚಿಕ್ಕಪ್ಪ ಬಲು ಚಾಣಾಕ್ಷ, ಆದರೆ ಧಾರಾಳಿ ಅಲ್ಲ. ಹೀಗಾಗಿ ನನ್ನ ಚಿಕ್ಕಮ್ಮನಿಗೆ ತವರುಮನೆಯೇನೂ ಗಟ್ಟಿಯಾಗಿರಲಿಲ್ಲವೆಂದು ಮುಂದೆ ನನ್ನ ಅರಿವಿಗೆ ಬಂತು.

ಇದು ಹೇಗೂ ಇರಲಿ. ನನ್ನ ತಾಯಿಗೆ ಇವರೊಬ್ಬ ಸಭ್ಯ ಸುಸಂಸ್ಕೃತ ಸಂಗಾತಿಯಾಗಿ ನಮ್ಮ ಮಡಿಕೇರಿ ಮನೆ ಸೇರಿದರು. ಗಂಡ, ದೊಡ್ಡ ಭಾವ (ನನ್ನ ತಂದೆ), ನಾಲ್ವರು ಅತ್ತೆಯಂದಿರು, ಹಿರಿಯಜ್ಜ ಎಲ್ಲರ ಮನಗಳನ್ನೂ ತಮ್ಮ ಪ್ರೀತಿಪೂರ್ವಕ ಸೇವೆಯಿಂದ ಗೆದ್ದ ಈ ಮಹಿಳೆ ನನ್ನ ಮಟ್ಟಿಗೊಬ್ಬ ಹಿರಿಯಕ್ಕ ಮತ್ತು ನನ್ನ ಅಸಂಖ್ಯ ಪ್ರಯೋಗಗಳಿಗೊಬ್ಬ ವಿಮರ್ಶಕಿಯಾಗಿ ದೊರೆತದ್ದು ನನ್ನ ಭಾಗ್ಯ.

ತಂದೆಯಿಂದ ಶಿಸ್ತು ಕಲಿತೆ, ತಾಯಿಯಿಂದ ಸಾಹಿತ್ಯಪ್ರೀತಿ ಗಳಿಸಿದೆ, ಚಿಕ್ಕಪ್ಪನವರಿಂದ ಸಾಹಸಮಯ ಜೀವನದ ರುಚಿ ಸವಿದೆ, ಚಿಕ್ಕಮ್ಮನಿಂದ ಸಹನೆಯ ಬೆಲೆಯರಿತೆ, ಅಜ್ಜಿಯಂದಿರಿಂದ ಸಂಗೀತಾಸಕ್ತಿ ಕುದುರಿಸಿಕೊಂಡೆ ಮತ್ತು ಮುತ್ತಜ್ಜನಿಂದ ಮಂತ್ರ, ತಂತ್ರ, ಪೂಜಾವಿಧಾನಗಳಲ್ಲಿ ಪ್ರಾವೀಣ್ಯ ಸಂಪಾದಿಸಿದೆ. ಇನ್ನು ಮರಿಕೆ ಮಾವನ ಸಾನ್ನಿಧ್ಯದಲ್ಲಿ ಜೀವನಧರ್ಮವನ್ನೇ ಯಥೇಚ್ಛ ಪಾನಮಾಡಿದೆ. ನಿಜಕ್ಕೂ ಪ್ರತಿಯೊಬ್ಬನ ಬದುಕೂ, ಸೋಮನಾಥಕವಿ ಹೇಳಿರುವಂತೆ, “ಪಲವುಂ ಪಳ್ಳ ಸಮುದ್ರವೈಅಲ್ಲವೇ? ತಾಯಿ ಎಳೆ ಎಳೆಯಾಗಿ ಲಲಿತ ಕನ್ನಡದಲ್ಲಿಅಳಿದ ಉಷ್ಣದ ಹಾಲಿನಂದದಿನೀತಿ ಕಥೆಗಳನ್ನು ರಸವತ್ತಾಗಿ ತಿಳಿಯಹೇಳುತ್ತಿದ್ದರು. ಅಜ್ಜಿ ಕುಮಾರವ್ಯಾಸ ಮತ್ತು ಲಕ್ಷ್ಮೀಶರ ಕಾವ್ಯಗಳನ್ನು ರಾಗಾರ್ಥಭಾವಸಹಿತ ಹೃನ್ಮನಗಳಿಗೆ ಆಪ್ಯಾಯಮಾನವಾಗುವಂತೆ ಹಾಡುತ್ತಿದ್ದರು. ಇವೆಲ್ಲ ಪ್ರಭಾವಗಳು ನನ್ನಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿದುವು. ವಿರಾಜಪೇಟೆಯಲೋಕರಹಸ್ಯಮತ್ತು ಬೆಂಗಳೂರಿನಸುಬೋಧಮಾಸಿಕಗಳು, ಹುಬ್ಬಳ್ಳಿಯಕರ್ಮವೀರಮತ್ತು ಮಡಿಕೇರಿಯಕೊಡಗುಸಾಪ್ತಾಹಿಕಗಳು ತಾಯಿಯವರ, ಆದ್ದರಿಂದ ನನ್ನ ಕೂಡ, ನಿತ್ಯ ಸಂಗಾತಿಗಳು. ಬಿ.ಪಿ.ಕಾಳೆಯವರ ಪತ್ತೇದಾರಿ ಪುಸ್ತಕಗಳು, ಗಳಗನಾಥ, ಬಿ.ವೆಂಕಟಾಚಾರ್ಯ ಮೊದಲಾದವರ ಐತಿಹಾಸಿಕ ಕಾದಂಬರಿಗಳು ನನ್ನಲ್ಲಿ ಸುಪ್ತವಾಗಿದ್ದಿರಬಹುದಾದ ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದುವು.

ಕನ್ನಡದ ಡಿಂಗರಿಗ ಮತ್ತು ಜಂಗಮ ಪುಸ್ತಕಭಂಡಾರ ಎಂದೇ ಖ್ಯಾತರಾಗಿದ್ದ ದ.ಬಾ.ಕುಲಕರ್ಣಿಯವರು ಆಗ ಧಾರವಾಡದ ಮನೋಹರ ಗ್ರಂಥಮಾಲೆಯ ಪ್ರತಿನಿಧಿಯಾಗಿ ಮಡಿಕೇರಿಗೆ ಬರುತ್ತಿದ್ದರು. ಓಂಕಾರೇಶ್ವರ ದೇವಾಲಯದ ವಿಶಾಲ ಚಾವಡಿಯಲ್ಲಿ ಮೊಕ್ಕಾಂ -- “ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು, ತೃಷೆಯಾದರೆ ಕೆರೆ-ಬಾವಿ-ಹಳ್ಳಂಗಳುಂಟು, ಶಯನಕ್ಕೆ ಹಾಳು ದೇಗುಲವುಂಟು, ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟುಈ ಗೋತ್ರಕ್ಕೆ ಸೇರಿದವರು ದಬಾಕು. ಕೊಡಗಿನ ಗೌರಮ್ಮನವರನ್ನು ಕನ್ನಡನಾಡಿಗೆ ಪರಿಚಯಿಸಿದ (ಓದಿ ದಬಾಕು ಲೇಖನನಾ ಕಂಡ ಗೌರಮ್ಮ’) ಮಹಾನುಭಾವರಿವರು. ಇವರ ಸತ್ಸಂಗದಲ್ಲಿ ನಾನು ಅನೇಕ ಪುಸ್ತಕಗಳನ್ನು ಪುಕ್ಕಟೆ ಓದಿದೆ! ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಕುವೆಂಪು ಮತ್ತು ಡಿವಿಜಿಯವರ ವ್ಯಾಪಕ ವಾಙ್ಮಯಗಳಿಂದ ವಿಶೇಷ ಪ್ರಭಾವಿತನಾದೆ. ಈ ಮಹಾಚಿಂತಕರು ಮತ್ತು ಪ್ರಕೃತಿಪ್ರೇಮಿಗಳು ನನ್ನ ಮೇಲೆ ಬೀರಿರುವ ಪ್ರಭಾವ ಅಪಾರ. ‘ಶ್ರೀರಾಮಾಯಣ ದರ್ಶನಂಮಹಾಕಾವ್ಯವನ್ನೂಮಂಕುತಿಮ್ಮನ ಕಗ್ಗಅನುಭಾವಕಾವ್ಯವನ್ನೂ ಅವು ಪ್ರಕಟವಾಗುತ್ತಿದ್ದಂತೆಯೇ ಖರೀದಿಸಿ ಓದಿ ಮನನ ಮಾಡಿದೆ. (೨೦೦೪ರಲ್ಲಿ ಪ್ರಕಟವಾದಕುವೆಂಪು ದರ್ಶನ ಸಂದರ್ಶನಪುಸ್ತಕದಲ್ಲಿ ಇವುಗಳಲ್ಲಿ ಅಂತರ್ಗತವಾಗಿರುವ ವೈಜ್ಞಾನಿಕ ಪ್ರತಿಮೆಗಳನ್ನು ವಿಶ್ಲೇಷಿಸಿದ್ದೇನೆ.)

ಮುಗಿಯದ ಪಯಣದ ಅರ್ಪಣೆ

ಕನ್ನಡದ ಕ್ರತುಶಕ್ತಿ, ಶ್ರೀ ರಕ್ಷೆ, ಕುವೆಂಪುಶಿಷ್ಯ, ವಿದ್ವಾಂಸ, ಸಂಘಟಕ, ಕನ್ನದ ವಿಶ್ವಕೋಶ ಯೋಜನೆಯ ಕನಸು ಕಂದು ಅದನ್ನು ನನಸು ಮಾಡಿದ ಮಹಾಪುರುಷ ಮತ್ತು ನನ್ನ ಜೀವನದ ಒಂದು ಪರ್ವ ಕಾಲದಲ್ಲಿ (೧೯೬೮-೬೯) ಅನಿರೀಕ್ಷಿತವಾಗಿ ರಂಗಪ್ರವೇಶಿಸಿ ನನಗೆ ನೂತನ ಮತ್ತು ಅನನ್ವೇಷಿತ ರಂಗಗಳಲ್ಲಿ ಮುಕ್ತವಾಗಿ ವ್ಯವಹರಿಸಲು ಅನಂತ ಅವಕಾಶಗಳನ್ನು ಪ್ರೀತಿಯಿಂದ ಒದಗಿಸಿದ ಪೂಜ್ಯ ದೇ. ಜವರೇ ಗೌಡರಿಗೆ ಭಕ್ತಿ ಪೂರ್ವಕ.
ಕುವೆಂಪು ಉದ್ಗರಿಸಿದಂತೆ

ರಸಜೀವನಕೆ ಮಿಗಿಲ್ ತಪಮಿಹುದೆ?

ರಸಸಿದ್ಧಿಗಿಂ ಮಿಗಿಲೆ ಸಿದ್ಧಿ? ಪೊಣ್ಮಿದೆ ಸೃಷ್ಟಿ

ರಸದಿಂದೆ; ಬಾಳುತಿದೆ ರಸದಲ್ಲಿ; ರಸದೆಡೆಗೆ ತಾಂ

ಪರಿಯುತಿದೆ; ಪೊಂದುವುದು ರಸದೊಳೈಕ್ಯತೆವೆತ್ತು
ತುದಿಗೆ, ರಸಸಾಧನಂಗೈಯ್ಯದಿರುವುದೆ ಮೃತ್ಯು.
ಆನಂದರೂಪಮಮೃತಂ ರಸಂ!

-ಜಿ.ಟಿ ನಾರಾಯಣ ರಾವ್

(ಮುಂದುವರಿಯಲಿದೆ)

2 comments:

 1. ನೇರ ಸರಳ ಬರವಣಿಗೆ, ಕಣ್ಣಿಗೆ ಕಟ್ಟಿದ ಹಾಗೆ.
  ತಲುಪಿಸಿದ ನಿಮಗೆ ಧನ್ಯವಾದಗಳು

  ReplyDelete
 2. ಎದೆ ತುಂಬಿ ಬರೆದಿಹೆನು ಈ ಕೃತಿಯ ನಾನು
  ಮನವಿಟ್ಟು ವಾಚಿಸಿರಿ ಇದನಿಂದು ನೀವು
  ಎಲ್ಲರೋದಲೆ ಎಂದು ನಾನು ಬರೆದಿಹುದಲ್ಲ:
  ಬರೆಯುವುದು ಅನಿವಾರ್ಯ ಕರ್ಮವೆನಗೆ
  ಜಿ.ಎಸ್.ಎಸ್ ಕ್ಷಮೆಕೋರಿ.

  Oduva Bhagyavenage..!!!

  It shows his down to earth attitude even after achieving many mile stones..!! The time he went through, the lessons he learnt on the journey of the successful life and when he looked back at them at his evenings and the way the experiences looked at him is definitely a wonderful lessons to people like me. He achieved and dared to look at the past.

  The time has exponentially changed.. Now a days a parents dos not have time for their child. Forget about grand parents and grand grand parents. How can the child know the meaning of patience...??!!

  A hearty thanks to you for the wonderful effort.. for the cause.

  Eagerly waiting for next episode..:)

  ReplyDelete