08 January 2013

ನಿಸರ್ಗದ ಸಮತೋಲ - ಹತ್ತೊಂಬತ್ತು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ಐದನೇ ಕಂತು
ಮೊದಲನೆಯದಾಗಿ ಜನರ ವಸತಿ, ಸಂಚಾರ, ವಿಹಾರ ಮೊದಲಾದವುಗಳಿಗಾಗಿ ಹೆಚ್ಚು ಹೆಚ್ಚು ನೆಲವನ್ನು ಆಕ್ರಮಿಸಬೇಕಾಗುತ್ತದೆ. ಎರಡನೆಯದಾಗಿ ಆಹಾರೋತ್ಪಾದನೆಗಾಗಿ ಹೆಚ್ಚು ಹೆಚ್ಚು ನೆಲವನ್ನು ನಿರ್ದಿಷ್ಟ ಕೃಷಿಗಳಿಗಾಗಿ ಬಳಸಬೇಕಾಗುತ್ತದೆ. ಇವೆರಡೂ ಒಟ್ಟಾಗಿ ನೈಸರ್ಗಿಕ ಪರಿಸ್ಥಿತಿಗಳ ಮೇಲೆ - ಅರಣ್ಯ ಸಂಪತ್ತು, ಸಸ್ಯ ಪ್ರಾಣಿಗಳು, ಬೆಟ್ಟ, ಕಣಿವೆ, ಕೆರೆ, ತೊರೆ, ವಾಯುಮಂಡಲ, ಕಡಲು - ದುಷ್ಪರಿಣಾಮ ಬೀರುತ್ತವೆ. ಮಾನವನ ಉಳಿವಿಗೆ ಅವಶ್ಯವಾದ ಶುದ್ಧ ವಾಯು ಮತ್ತು ಶುದ್ಧ ಜಲ ಮಲಿನಗೊಂಡು ಬದುಕು ಅಸಹನೀಯವಾಗುತ್ತದೆ.

ನಿಸರ್ಗದ ಸಮತೋಲವೆಂಬುದು ಒಂದು ಗತ್ಯಾತ್ಮಕ ಸಾಮರಸ್ಯ. ಅಸಂಖ್ಯಾತ ಸಸ್ಯ ಪ್ರಾಣಿ ಬಗೆಗಳು ನೆಲ ಜಲ ವಾಯುವಿನ ವಿವಿಧ ಸಂಪನ್ಮೂಲಗಳ ಮೇಲೆ ಮಾತ್ರವಲ್ಲ ಪರಸ್ಪರವಾಗಿಯೂ ಅವಲಂಬನೆಗೊಂಡು ಸಮತೋಲ ಏರ್ಪಟ್ಟಿದೆ. ಯಾವುದೇ ಕಾಡನ್ನು ಸ್ಥೂಲವಾಗಿ ನೋಡಿದಾಗಲೂ ಸಂಗತಿ ವೇದ್ಯವಾಗುತ್ತದೆ. ಅಲ್ಲಿಯ ಸಸ್ಯ ಪ್ರಾಣಿ ವೈವಿಧ್ಯವೇ ಅದರ ತ್ರಾಣ, ವಿಶೇಷೀಕರಣ ಅಥವಾ ಏಕತಾನತೆ ಅಲ್ಲ. ಕೀಟಬಾಧೆಯಾಗಲಿ ಬೂಷ್ಟುರೋಗವಾಗಲಿ ಸಾಂಕ್ರಾಮಿಕ ಪಿಡುಗುಗಾಗಲಿ ಕಾಡಿಗೆ ಸಾಧಾರಣವಾಗಿ ತಾಗದು. ಒಂದು ಬಗೆಯ ಜೀವಿಗೆ ತಾಗಿದ ರೋಗ ಕೇವಲ ಅದನ್ನು ನಿರ್ನಾಮ ಮಾಡೀತೇ ವಿನಾ ಸಮಗ್ರ ಅರಣ್ಯವನ್ನಲ್ಲ. ಪ್ರತಿಯೊಂದು ಜೀವಿಗೂ ಸಾಧಾರಣವಾಗಿ ವೈರಿಜೀವಿಯೂ ಒಂದಿರುವುದು ವಾಡಿಕೆ. ಹೀಗಾಗಿ ಯಾವುದೇ ಜೀವಿ - ಸಸ್ಯವಾಗಲಿ, ಪ್ರಾಣಿಯಾಗಲಿ - ಕಾಡಿನ ಒಡೆಯ ಆಗಿ ಇತರ ಜೀವಿಗಳ ನಾಶಕ್ಕೆ ಕಾರಣವಾಗುವುದು ಅಸಾಧ್ಯ.

ನಾಗರಿಕತೆಯ ಪರಿಧಿಯನ್ನು ವಿಸ್ತರಿಸುವಾಗ ಇಲ್ಲವೇ ಬೇಸಾಯವನ್ನು ಸರ್ವವ್ಯಾಪಿಯಾಗಿಸುವಾಗ ಇಲ್ಲವೇ ಬೃಹಜ್ಜಲಾಶಯಗಳನ್ನು ನಿರ್ಮಿಸಿ ಹುಚ್ಚು ಹೊಳೆಗಳನ್ನು ಪಳಗಿಸುವಾಗ ಮಾನವ, ಸಹಜವಾಗಿ, ನಿಸರ್ಗದ ಸಮತೋಲವನ್ನು ಕೆಡಿಸಬೇಕಾಗುತ್ತದೆಮಲೇರಿಯವೋ ಸಿಡುಬೋ ಬೇರೆ ಯಾವುದೋ ಪಿಡುಗೋ ನಗರಗಳ ಮೇಲೆ ದಾಳಿ ಇಟ್ಟಾಗ ಮಾನವ ಸುಲಭವಾಗಿ ಅವುಗಳಿಗೆ ಬಲಿ ಆಗುವುದು ಇದರ ಒಂದು ಲಕ್ಷಣ. ಗಾವುದ ಗಾವುದ ಹಬ್ಬಿ ನಳನಳಿಸುತ್ತಿರುವ ಪೈರು ಬೈಗು ಬೆಳಗಾಗುವುದರೊಳಗೆ ಮಿಡತೆ ದಂಡುಗಳಿಗೆ ಬಲಿ ಆಗಿ ಬೋಳು ಬಯಲಾಗುವುದು ಇನ್ನೊಂದು ಲಕ್ಷಣ. ಹವಾವೈಪರೀತ್ಯಗಳು, ಅತಿ ವೃಷ್ಟಿ, ಅನಾವೃಷ್ಟಿ ಅನಾಹುತಗಳು, ಪ್ರವಾಹದಿಂದ ಆಗುವ ಸರ್ವನಾಶ ಒಂದೊಂದರ ಕಾರಣವನ್ನೂ ನಿಸರ್ಗದ ಪ್ರಕೋಪಕ್ಕೆ ಸಂಬಂಧಿಸಿ ತೋರಿಸುವುದು ಕಷ್ಟ ಸಾಹಸವೇನೂ ಅಲ್ಲ. ಹೀಗಾಗಿ ಜನಾರೋಗ್ಯ ಸಂವರ್ಧನೆ, ಪೈರು, ಫಸಲುಗಳ ಸಂರಕ್ಷಣೆ, ಪ್ರವಾಹ ನಿಯಂತ್ರಣ ಮುಂತಾದವು ಸರ್ಕಾರಗಳ ಕೇಂದ್ರೀಯ ಹೊಣೆಗಳಾಗುತ್ತವೆ. ಇವನ್ನು ಕ್ಷಿಪ್ರವಾಗಿಯೂ ಸಮರ್ಪಕವಾಗಿಯೂ ನಿರ್ವಹಿಸಲು ಒದಗುವ ಪರಮೋತ್ಕೃಷ್ಟ ಆಯುಧ ತಂತ್ರವಿದ್ಯೆ. ಎಂದೇ ಇಂದು ತಂತ್ರವಿದ್ಯೆ ಹಾಗೂ ಅದರ ಉಪೋತ್ಪನ್ನಗಳು ಇಷ್ಟೊಂದು ಪ್ರಪಂಚ ವ್ಯಾಪ್ತಿ ಗಳಿಸಿರುವುದಾಗಿದೆ. ಇವು ಮಾನವನಿಗೆ ಪರಿಸರದ ಒಡೆಯನೇ ತಾನು, ಪರಿಸರವನ್ನು (ನಿಸರ್ಗವನ್ನು) ತನ್ನ ಇಚ್ಛಾನುಸಾರ ವರ್ತಿಸಲು ವಿಧಿಸಬಲ್ಲ ನವಬ್ರಹ್ಮನೇ ತಾನು ಎಂಬ ಭ್ರಾಂತಿಜನ್ಯ ಭಾವನೆಯನ್ನು ಹುಟ್ಟಿಸಿರುವುದಾಗಿದೆ.

ಆಧುನಿಕ ತಂತ್ರವಿದ್ಯೆ - ಇಪ್ಪತ್ತು

ವಿಜ್ಞಾನ ಸಂಶೋಧಿಸಿ ಹೊರಗೆಡಹುವ ನಿಸರ್ಗ ನಿಯಮಗಳನ್ನೂ ಸೂತ್ರಗಳನ್ನೂ ಆಧರಿಸಿ ತಂತ್ರವಿದ್ಯೆ ವಿಕಸಿಸುತ್ತದೆ. ಆಧುನಿಕ ತಂತ್ರವಿದ್ಯೆ ಮುಖ್ಯವಾಗಿ ಪಾಶ್ಚಾತ್ಯ ನಾಗರಿಕತೆಯ ಕೊಡುಗೆ. ಅಲ್ಲಾದರೂ ಅಮೆರಿಕ ದೇಶ ತಂತ್ರವಿದ್ಯಾಭಿವರ್ಧನೆಯ ಮುಂಚೂಣಿಯಲ್ಲಿದೆ. ಅಮೆರಿಕಕ್ಕೆ ಧುರೀಣತ್ವ ಹೇಗೆ ಪ್ರಾಪ್ತವಾಯಿತು ಎಂಬುದನ್ನು ಐತಿಹಾಸಿಕವಾಗಿ ಪರಿಶೀಲಿಸಿದರೆ ಕೆಲವು ಮುಖ್ಯ ಸಂಗತಿಗಳು ವ್ಯಕ್ತವಾಗುತ್ತವೆ.

ವಿದ್ಯೆಯಲ್ಲಿ ನುರಿತ ಕಾರ್ಯಶೀಲರು ಗ್ರೇಟ್ ಬ್ರಿಟನ್ ಮತ್ತು ಯುರೋಪಿನಿಂದ ಅಮೆರಿಕದ ಹೊಸ ನೆಲಕ್ಕೆ ವಲಸೆ ಹೋಗಿ ತಳ ಊರಿದರು. ಕಡಿಮೆ ಜನ ಅಧಿಕ ವಿಸ್ತಾರದ ಕನ್ನೆನೆಲವನ್ನು ಕಬಳಿಸಿದರು. ಹೀಗೆ ಅಮೆರಿಕದ ವಿಶಾಲ ಫಲವತ್ಪ್ರದೇಶ ಆಧುನಿಕ ವಿಜ್ಞಾನ ಹಾಗೂ ತಂತ್ರ ವಿದ್ಯೆಯ ಪ್ರಯೋಗಗಳಿಗೂ ಅಭಿವರ್ಧನೆಗೂ ಸುಲಭವಾಗಿ ಲಭಿಸಿತು. ಜನಸಂಖ್ಯೆಯ ತಡೆಯಿರದ ಏರಿಕೆಯಿಂದ ಒದಗಬಹುದಾದ ಅನಾಹುತಗಳನ್ನು ಮಂದಿ ಅರಿತವರಾದ್ದರಿಂದ ತಮ್ಮ ರಾಷ್ಟ್ರದ ಜನಸಂಖ್ಯಾವೃದ್ಧಿಯನ್ನು ನಿಯಂತ್ರಿಸಲು ಉದ್ಯುಕ್ತರಾಗಿ ಸಫಲರಾದರು. ವಿಶ್ವಸಂಸ್ಥೆಯ ಮೂಲಗಳಿಂದ ಪಡೆಯಲಾದ ೧೯೭೩ರ ಪರಿಸ್ಥಿತಿಯನ್ನು ಮುಂದಿನ ಯಾದಿಯಲ್ಲಿ ಕಾಣಿಸಿದೆ.

ಪ್ರದೇಶ
ಜನಸಂಖ್ಯೆ
(ಕೋಟಿ)
ಸ್ಥೂಲ ವಾರ್ಷಿಕ ಜನನ ಸಂಖ್ಯೆ
(ಶೇಕಡ)
ಸ್ಥೂಲ ವಾರ್ಷಿಕ ಮರಣ ಸಂಖ್ಯೆ
(ಶೇಕಡ)
ವಾರ್ಷಿಕ ನಿವ್ವಳ ªÀÈ¢Þ
ಪ್ರಪಂಚ
೨೫೬
೩.೩
೧.೩
ಅಭಿವರ್ಧಿತ ರಾಷ್ಟ್ರಗಳು
೧೧೨
೧೧೨
.
.
ಆಫ್ರಿಕ
೩೫.
.
.
.
ಜಪಾನ್ ಹೊರತಾದ ಏಷ್ಯ
೨೧೦
.
.
.
ಲ್ಯಾಟಿನ್ ಅಮೆರಿಕ (ಉಷ್ಣವಲಯ)
೨೬.
.
.
ಅಮೆರಿಕ ಸಂಯುಕ್ತ ಸಂಸ್ಥಾನಗಳು
೨೧
.
.
.
ಜಪಾನ್
೧೦.
.
.
.
ಯುರೋಪ್
೪೭.
.
.
.
ಸೋವಿಯತ್ ಒಕ್ಕೂಟ (ಮಾಜಿ)
೨೫
.
.
ಇತರ ರಾಷ್ಟ್ರಗಳು (ಕೆನಡ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಲ್ಯಾಟಿನ್ ಅಮೆರಿಕ (ಸಮಶೀತೋಷ್ಣವಲಯ)
.
.
.


ಅಮೆರಿಕದ ಕುಶಲಿಗಳಿಗೆ ಒದಗಿಬಂದ ಸನ್ನಿವೇಶ ವಿಶೇಷ ತರಹದ್ದು: ತಂತ್ರವಿದ್ಯಾಪರಿಣತ ಅಲ್ಪ ಜನಸಂಖ್ಯೆ, ವಿಪುಳ ನೈಸರ್ಗಿಕ ಸಂಪನ್ಮೂಲಗಳು, ವಿಶಾಲ ಪ್ರದೇಶ, ವ್ಯವಸ್ಥಿತವಾಗಿ ಸಂಪನ್ಮೂಲಗಳನ್ನು ಅನ್ವೇಷಿಸಿ ಸ್ವಂತ ಸೌಕರ್ಯಕ್ಕಾಗಿ ಸಂಗ್ರಹಿಸಿ ಬಳಸುವುದು ಸಹಜವಾಗಿ ಅವರ ಉದ್ದೇಶವಾಯಿತು. ಸ್ವಯಂಚಲಿಗಳ ಅಭಿವರ್ಧನೆಯತ್ತ ಅವರ ಒತ್ತು ಬಿತ್ತು. ಹೀಗೆ ಬೆಳೆದ ಆಧುನಿಕ ಪಾಶ್ಚಾತ್ಯ ತಂತ್ರವಿದ್ಯೆ ಪ್ರಧಾನವಾಗಿ ನಾಲ್ಕು ಸೂತ್ರಗಳನ್ನು ಅವಲಂಬಿಸಿದೆ. ಆಧಿಕ ಬಂಡವಾಳ, ಕಡಿಮೆ ಕಾರ್ಮಿಕರು, ಫಾಸಿಲ್ ಇಂಧನ, ಸಾರಿಗೆ ಜಾಲ. ಇವುಗಳ ಅರ್ಥವಿಷ್ಟು:

ಅಧಿಕ ಬಂಡವಾಳ ಹೂಡಿ ಬೃಹದುದ್ಯಮಗಳನ್ನು ಸಂಸ್ಥಾಪಿಸಬೇಕಾಗುತ್ತದೆ. ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ಇದು ಸಾಧ್ಯವಾದೀತು.

ಜನಸಂಖ್ಯೆ ಮಿತವಾಗಿದ್ದುದರಿಂದಲೂ ಇತರೆಡೆಗಳಿಂದ ಜನ ವಲಸೆ ಬಂದುದಾದರೆ ಹೊಸ ಸಮಸ್ಯೆಗಳು ತಲೆದೋರಬಹುದಾದ್ದರಿಂದಲೂ ಯಂತ್ರೋದ್ಯಮಗಳಿಗೂ ಕೃಷಿ ಕೈಗಾರಿಕೆಗಳಿಗೂ ಒದಗುತ್ತಿದ್ದ ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿದ್ದರು. ಹೀಗಾಗಿ ಆದಷ್ಟು ಮಟ್ಟಿಗೆ ಸ್ವಯಂಚಲಿಗಳನ್ನು ಅವಲಂಬಿಸುವುದು ಅನಿವಾರ್ಯವಾಯಿತು.

ಫಾಸಿಲ್ ಇಂಧನ ಅಗ್ಗವಾಗಿಯೂ ವಿಪುಳವಾಗಿಯೂ ಲಭಿಸುತ್ತಿದ್ದುದರಿಂದ ಇಂಧನ ಒದಗಿಸುವ ಶಕ್ತಿಯನ್ನು ಆಧರಿಸಿ ತಂತ್ರವಿದ್ಯೆ ಬೆಳೆಯಿತು.

ಬೃಹದುದ್ಯಮಗಳು ಕೇಂದ್ರೀಯವಾಗಿ ಉತ್ಪಾದನೆ ಮಾಡುತ್ತವೆ. ಅವುಗಳ ಉತ್ಪನ್ನಗಳು ಸ್ವದೇಶಾದ್ಯಂತ ಹಾಗೂ ಪ್ರಪಂಚಾದ್ಯಂತ ಗ್ರಾಹಕರನ್ನು ತಲಪಬೇಕಾದರೆ ಸುಸಂಘಟಿತ ಸಾರಿಗೆ ಜಾಲ ಅತ್ಯಾವಶ್ಯಕ.

ಮೇಲಿನ ಸೂತ್ರಗಳನ್ನು ಆಧರಿಸಿರುವ ತಂತ್ರವಿದ್ಯೆ ತನ್ನ ಅಕ್ಟೋಪಸ್ ಬಹುಕರಗಳನ್ನು ಚಾಚಿ ನಿಸರ್ಗದಿಂದ ಸಂಪನ್ಮೂಲಗಳನ್ನು  ದೋಚಿ ಹಿಂಜೋಲಿನಲ್ಲಿ ಪರಿಸರಮಾಲಿನ್ಯವನ್ನು ಉರುಚಿ ವ್ಯಾಕೋಚಿಸದೆಯೇ ವಿನಾ ನಿಸರ್ಗದೊಡನೆ ಹೊಂದಿ ಅದಕ್ಕೆ ಅನುವರ್ತಿಯಾಗಿ ಬೆಳೆದು ಅಭಿವರ್ಧಿಸಿಲ್ಲ. ಇಂಥ ಬೆಳೆವಣಿಗೆ ವರ್ತಮಾನ ಯುಗದ ಅಸಂಖ್ಯಾತ ಮಾನವ ನಿರ್ಮಿತ ಸಮಸ್ಯೆಗಳಿಗೆ ಕಾರಣವಾಗಿದೆ.

ಮೊದಲನೆಯದಾಗಿ, ನಗರಗಳ ಅತಿಲಂಬನೆ. ಒಂದು ಕಾಲದಲ್ಲಿ ಜನಜೀವನಕ್ಕೆ ಅವಶ್ಯವಾದ ಸಮಸ್ತ ಸೌಲಭ್ಯಗಳೂ ಒಂದೆಡೆ ದೊರೆಯುವಂತಿದ್ದ ನಗರಗಳು ಈಗ ಅದೇ ಜನಜೀವನಕ್ಕೆ ಆರೋಗ್ಯ, ಆರ್ಥಿಕತೆ, ಬದುಕಿನ ಮಟ್ಟ, ಸೌಕರ್ಯಗಳು ಒಂದೊಂದರಲ್ಲೂ ಮಾರಕವಾಗುವಂತೆ ಬೆಳೆದು ಹೋಗಿವೆ, ಬೆಳೆಯುತ್ತಲೇ ಇವೆ. ಇಂಥ ಶಿರೋಭಾರವೃದ್ಧಿ ಯಾವ ರಾಷ್ಟ್ರಕ್ಕೂ ಆರೋಗ್ಯಕರವಲ್ಲ.

ಎರಡನೆಯದಾಗಿ, ತಂತ್ರವಿದ್ಯೆಯ ಫಲಗಳು ಕೃಶಿ ತೋಟಗಾರಿಕೆ ಕ್ಷೇತ್ರಗಳನ್ನು ಆಕ್ರಮಿಸಿ ಅಲ್ಲಿ ಹೊಸ ನಮೂನೆಯ ಪರಿಸರಮಾಲಿನ್ಯ ಸಮಸ್ಯೆಗಳಿಗೆ ಕಾರಣವಾಗಿವೆ. ಡಿಡಿಟಿ ಮೊದಲಾದ ಕೀಟನಾಶಕಗಳ ವ್ಯಾಪಕ ಬಳಕೆಯೇ ಆಗಲಿ, ಕೃತಕ ಗೊಬ್ಬರಗಳ ಉಪಯೋಗವೇ ಆಗಲಿ, ದಿಢೀರ್ ವೈದ್ಯಕೀಯ ಸೇವೆಗಳ ಸೌಲಭ್ಯವೇ ಆಗಲಿ, ಎಲ್ಲ ದೈಹಿಕ ಶ್ರಮಗಳನ್ನೂ ಯಂತ್ರ ಸಲಕರಣೆಗಳಿಂದ ಪ್ರತಿಸ್ಥಾಪಿಸುವ ಪ್ರಯತ್ನಗಳೇ ಆಗಲಿ ಜನಜೀವನದ ಗುಣಮಟ್ಟವನ್ನು ಎತ್ತರಿಸಿವೆ ಎಂದು ಹೇಳಲಾಗುವುದಿಲ್ಲಪರಿಣಾಮ ತದ್ವಿರುದ್ಧವೇ ಆಗಿರುವುದು ದೀರ್ಘಕಾಲೀನ ಪರಿಶೀಲನೆಗಳಿಂದ ಕಂಡುಬಂದಿದೆ.

ಮೂರನೆಯದಾಗಿ, ಆಧುನಿಕ ತಂತ್ರವಿದ್ಯೆ ಒದಗಿಸಿರುವ ವ್ಯಾಪಕ ಸೌಲಭ್ಯಗಳ ಉಪೋತ್ಪನ್ನವಾಗಿ ಪೋಲುಮಾಡುವಿಕೆ (ಅಪವ್ಯಯ) ಜನಜೀವನದ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಸಾವಿರ ಜನ ಮಾಡುವ ಕೆಲಸವನ್ನು ಒಂದು ಯಂತ್ರ ಕ್ಷಿಪ್ರವಾಗಿ ಮಾಡಿ ಮುಗಿಸಿ ಜನರ ಅಷ್ಟು ಶ್ರಮ, ಕಾಲ ಮುಂತಾದವನ್ನು ಉಳಿಸುತ್ತದೆ ನಿಜ. ಹೀಗೆ ಲಭಿಸುವ ವಿರಾಮ ಜನರಲ್ಲಿ ಸಮವಾಗಿ ಹಂಚಿಹೋಗಿ ಅವರ ಬದುಕು ಹಸನಾದರೆ ಯಂತ್ರದಿಂದ ಮಂದಿಗೆ ಉಪಕಾರವಾಯಿತೆನ್ನಬಹುದು. ಆದರೆ ವಾಸ್ತವ ಪರಿಸ್ಥಿತಿ ಹೀಗೆ ಕಾಣುತ್ತಿಲ್ಲ. ಇಂಥ ಲಾಭ ಏನಿದ್ದರೂ ಮಾಲಿಕರಿಗೆ ಒದಗುವುದೇ ವಿನಾ ಕಾರ್ಮಿಕರಿಗೆ ಅಲ್ಲ. ಪರಿಣಾಮವಾಗಿ ಎರಡು ವರ್ಗಗಳು ತಲೆದೋರಿ ಒಟ್ಟಾರೆ ಅಶಾಂತಿಯ ವಾತಾವರಣ ಮೂಡಿದೆ. ಇದರಿಂದ ಮಾಲಿಕರಿಗೂ ಸುಖವಿಲ್ಲ, ಕಾರ್ಮಿಕರಿಗೂ ಸಮಾಧಾನವಿಲ್ಲ. ಮಾನವರ ಮೇಲೆ ಯಂತ್ರಸವಾರಿ ಮಾಡುವ ತಿರುಗಾ ಮುರುಗಾ ಸನ್ನಿವೇಶ ಆಡಳಿತಗಾರರ, ಅಂತೆಯೇ ಜನರ ಕೂಡ, ತಲೆ ತಿನ್ನುತ್ತಿದೆ. ತಂತ್ರವಿದ್ಯೆಯ ನೇಪಥ್ಯ ನಿರ್ದೇಶನದ ಕಹಿಫಲವಿದು.

ನಾಲ್ಕನೆಯದಾಗಿ, ನೈಸರ್ಗಿಕ ಸಂಪನ್ಮೂಲಗಳ ಅವ್ಯಾಹತ ದರೋಡೆ ಮತ್ತು ಪರಿಸರಮಾಲಿನ್ಯದ ನಿರಂತರ ಏರಿಕೆ. ಯಂತ್ರದ ಹಸಿವೆ ನೀಗಲು ರಾಕ್ಷಸಗಾತ್ರದಲ್ಲಿ ಶಕ್ತಿಯೂ ಬೇಕು, ಕಚ್ಚಾಸಾಮಗ್ರಿಯೂ ಬೇಕು. ಇವುಗಳಿಗಾಗಿ ನಿಸರ್ಗವನ್ನು ನಿರ್ದಾಕ್ಷಿಣ್ಯವಾಗಿ ಹನನ (ಸೂರೆ) ಮಾಡಬೇಕು. ಒಟ್ಟಿನಲ್ಲಿ ನಿಸರ್ಗಕ್ಕೆ ಮೂರು ಬಗೆಯ ನಷ್ಟಗಳು (ಯಾವ ಲಾಭ ಅಥವಾ ಪ್ರತಿಫಲ ಇಲ್ಲದೇ) ಸಂಭವಿಸುತ್ತವೆ: ಸಂಪನ್ಮೂಲಗಳ ಸೋರಿಕೆ, ಸಿದ್ಧ ವಸ್ತುಗಳ ಪೇರಿಕೆ, ತ್ಯಾಜ್ಯ ವಸ್ತುಗಳ ಏರಿಕೆ.

ತಂತ್ರವಿದ್ಯೆಯ ಕಾರಣವಾಗಿ ಮಾನವನ ಬದುಕಿನಲ್ಲಿ ಪ್ರಗತಿ ಆಗಿದೆ ನಿಜ. ಅಂತಿಮ ವಿಶ್ಲೇಷಣೆಯಲ್ಲಿ ಶಕ್ತಿವಿನಿಯೋಗದ ಮೊತ್ತವೇ ಪ್ರಗತಿಯ ಮಾನಕ. ೧೯೪೦ರಲ್ಲಿ ಪ್ರತಿಯೊಬ್ಬ ಅಮೆರಿಕನ್ನನಿಗೂ ದಿನವಹಿ ೧೫೩ ಗುಲಾಮರು ಒದಗಿಸಬಹುದಾದ ಸ್ನಾಯು ಸೇವೆಗೆ ಸಮಾನವಾದ ಸೇವೆ ಬೇರೆ ಬೇರೆ ಹಂತಗಳಲ್ಲಿ ಶಕ್ತಿವಿನಿಯೋಗದಿಂದ ದೊರೆಯುತ್ತಿತ್ತೆಂದು ಅಂದಾಜು ಮಾಡಲಾಗಿದೆ. ೧೯೭೦ರ ವೇಳೆಗೆ ಸಂಖ್ಯೆ ೪೦೦ಕ್ಕೆ ನೆಗೆದಿತ್ತಂತೆ. ಪ್ರಪಂಚದ ಬಹುಸಂಖ್ಯಾತರು ಇಂಥ ಅದೃಷ್ಟವಂತರಲ್ಲ ನಿಜ. ಆದರೆ ಇವರ ಪೈಕಿ ಹೆಚ್ಚಿನವರ ಹಿರಿ ಆಸೆ ಇರುವುದು ತೆರನಾದ ಸುಖಗಿಟ್ಟಿಸುವುದರತ್ತ. ಮಾನವನ ಸುಪ್ತ ಹಾಗೂ ಅದಮ್ಯ ಪ್ರವೃತ್ತಿಯ ಪರಿಣಾಮವಾಗಿ ಪ್ರಪಂಚದಲ್ಲಿ ಶಕ್ತಿವಿನಿಯೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಬಂದಿದೆ.

ಶಕ್ತಿವಿನಿಯೋಗ - ಇಪ್ಪತ್ತೊಂದು

ನಿಸರ್ಗದಿಂದ ಕಚ್ಚಾ ಸಾಮಗ್ರಿ ಸಂಗ್ರಹಿಸಲು ಶಕ್ತಿ ಬೇಕು. ಇದನ್ನು ಕಾರ್ಖಾನೆಗೆ ಸಾಗಿಸಲು ಶಕ್ತಿ ಬೇಕು, ಕಾರ್ಖಾನೆ ಕಾರ್ಯೋದ್ಯುಕ್ತವಾಗಿ ಸಿದ್ಧ ವಸ್ತುಗಳನ್ನು ನಿರ್ಮಿಸಲು ಶಕ್ತಿ ಬೇಕು. ಜನರಾದರೂ ವಸ್ತುಗಳಿಂದ ಸೇವೆ ಅಥವಾ ಉಪಯೋಗ ಪಡೆಯಲು ಶಕ್ತಿ ಬೇಕು. ಕೊನೆಯದಾಗಿ ಉಪಯೋಗಾನಂತರ ಉಳಿಯುವ ಶೇಷವಸ್ತುವಿನ ವಿಲೆವಾರಿಗೆ ಕೂಡ ಶಕ್ತಿ ಬೇಕು. ಆದರೆ ವಾಸ್ತವವಾಗಿ  ತೆರನಾದ ನಿರಂತರ ಶಕ್ತಿ ವಿನಿಯೋಗ ವೈಜ್ಞಾನಿಕ, ರಾಜಕೀಯ ಮಾತ್ತು ಇತರ ಕಾರಣಗಳಿಂದಾಗಿ ಕೈಗೂಡದೆ ಇಂದು ಬಾಳ ಬಂಡಿ ಗಡಬಡಾಯಿಸುವಂಥ ಪರಿಸ್ಥಿತಿ ಸರ್ವವ್ಯಾಪಿ ಆಗುತ್ತಿದೆ.

ಕಲ್ಲಿದ್ದಲಿನ ದಹನದಿಂದ ಉತ್ಪಾದನೆ ಆಗುವ ಶಕ್ತಿಯನ್ನು ಶಕ್ತಿವಿನಿಯೋಗದ ಮಾನಕವಾಗಿ ಬಳಸುವುದು ವಾಡಿಕೆ. ಮುಂದಿನ ಯಾದಿ ೧೯೦೦ರಿಂದ ೧೯೭೦ರ ತನಕ ಜನಸಂಖ್ಯೆ ಮತ್ತು ಶಕ್ತಿ ವಿನಿಯೋಗ ಹೇಗೆ ಹೆಚ್ಚುತ್ತ ಬಂದಿದೆ ಎಂಬುದನ್ನೂ ೧೯೭೦ರಿಂದ ೨೦೦೦ದ ತನಕದ ಪ್ರವೃತ್ತಿ ಹೇಗಿರಬಹುದು ಎಂಬುದನ್ನೂ ಶ್ರುತಪಡಿಸುತ್ತದೆ.

ಇಸವಿ
ಜನ ಸಂಖ್ಯೆ
(ಕೋಟಿಗಳಲ್ಲಿ)
ಶಕ್ತಿವಿನಿಯೋಗ 
(ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲಿಗೆ ಸಮಾನ)
ತಲಾ ಶಕ್ತಿ ವಿನಿಯೋಗ (ಮೆಟ್ರಿಕ್ ಟನ್ ಕಲ್ಲಿದ್ದಲಿಗೆ ಸಮಾನ)
೧೯೦೦
೧೫೦
೬೨೫
.೩೬೭೬
೧೯೧೦
೧೭೫
೧೧೫೦
.೬೫೭೧
೧೯೨೦
೨೧೦
೧೨೫೦
.೫೯೫೨
೧೯೩೦
೨೨೦
೨೦೦೦
.೯೦೯೧
೧೯೪೦
೨೪೦
೨೨೫೦
.೯೩೭೫
೧೯೫೦
೨೫೦
೩೧೫೦
..೨೬
೧೯೬೦
೩೧೦
೪೩೫೦
.೪೫
೧೯೭೦
೩೭೫
೬೮೨೫
.೮೨
೧೯೮೦
೪೫೦
೧೦೦೦೦
.೨೨೨೨
೧೯೯೦
೫೬೦
೧೫೦೦೦
.೬೭೮೬
೨೦೦೦
೬೪೦
೨೨೫೦೦
.೧೫೬೩

ಮಾನವನ ಶಕ್ತಿದಾಹ ವರ್ಷದಿಂದ ವರ್ಷಕ್ಕೆ, ಅದೂ ಪ್ರಸಕ್ತ ಶತಮಾನದಲ್ಲಿ, ಹೇಗೆ ಉಲ್ಬಣ ಸ್ಥಿತಿಗೇರಿದೆ ಎಂಬುದನ್ನು ಮೇಲಿನ ಯಾದಿಯ ಕೊನೆಯ ನೀಟಸಾಲಿನ ಸಂಖ್ಯೆಗಳು ಸ್ಪಷ್ಟಪಡಿಸುತ್ತವೆ. ಇಷ್ಟೊಂದು ಅಗಾಧ ಶಕ್ತಿಯ ಗಮನಾರ್ಹ ಭಾಗ ಒದಗುವುದು ಮುಖ್ಯವಾಗಿ ಫಾಸಿಲ್ ಇಂಧನಗಳಿಂದ. ಇವುಗಳ ಜೊತೆಗೆ ಹೆಸರಿಸಬಹುದಾದವು ಸ್ನಾಯುಶಕ್ತಿ, ಜಲಶಕ್ತಿ ಮತ್ತು ಬೈಜಿಕ ಶಕ್ತಿ. ಮಾರುತಶಕ್ತಿ, ಭೂಶಾಖಶಕ್ತಿ ಅಥವಾ ಸೌರಶಕ್ತಿ ಗಣನೀಯ ಮೊತ್ತದಲ್ಲೇನೂ ಉತ್ಪಾದನೆ ಆಗುತ್ತಿಲ್ಲ. ಪ್ರಾಣಿಗಳಿಂದಲೂ ಮನುಷ್ಯರಿಂದಲೂ ಒದಗುವ ಸ್ನಾಯುಶಕ್ತಿ ಮತ್ತು ಜಲಶಕ್ತಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಿಲ್ಲ. ಆದರೆ ಇವುಗಳಿಂದ ಪ್ರಪಂಚದ ಬೃಹದ್ಯಂತ್ರ ಸ್ಥಾವರಗಳಾಗಲಿ ಸಂಚಾರ ಸಾಧನಗಳಾಗಲಿ ಚಾಲೂ ಆಗಲಾರವು. ಅವುಗಳಿಗೆ ಫಾಸಿಲ್ ಇಂಧನಶಕ್ತಿ ಬೇಕೇಬೇಕು. ಬೈಜಿಕ ಶಕ್ತಿ ಇನ್ನೂ ವ್ಯಾಪಕ ಉಪಯೋಗಕ್ಕೆ ಬಂದಿಲ್ಲ. ಅಲ್ಲಿ ಇಲ್ಲಿ ಬಂದಿದ್ದರೂ ಇದು ಸಾಕಷ್ಟು ಕಳಂಕಲೇಪಿತವಾಗಿದ್ದು ತೀವ್ರ ವಿರೋಧ ಎದುರಿಸಬೇಕಾಗಿದೆ. ದುರ್ದೈವವೆಂದರೆ ಇವೆಲ್ಲವೂ ಪರಿಸರಮಾಲಿನ್ಯಕ್ಕೆ ಕಾರಣವಾಗುತ್ತವೆ. ಅಲ್ಲದೇ ಇವನ್ನು ಒದಗಿಸುವ ಮೂಲಗಳು - ಕಲ್ಲಿದ್ದಲು ಹಾಗೂ ಎಣ್ಣೆ ಬಾವಿಗಳು ಮತ್ತು ವಿಕಿರಣಪಟುಧಾತುಗಳು - ಸಂತತವಾಗಿ ಲಭಿಸುವ ಭರವಸೆ ಏನೂ ಇಲ್ಲ. ಹೀಗಾಗಿ ಶಕ್ತಿ ವಿನಿಯೋಗ ಗಗನಕ್ಕೆ ಏರುತ್ತಿದ್ದಂತೆ ಮಾನವನ ಭವಿಷ್ಯದ ಬಗ್ಗೆ ಕಳವಳ ಉಂಟಾಗುತ್ತಿದೆ. ಒಂದಿಗೇ ಹೊಸ ಮತ್ತು ಮಾಲಿನ್ಯರಹಿತ ಮೂಲಗಳ ಶೋಧನೆ ಜರೂರಾಗಿ ಆಗಬೇಕು ಎಂಬ ಅಂಶವೂ ವೇದ್ಯವಾಗುತ್ತಿದೆ.

ನೇಸರಿಗೆ ಲಗ್ಗೆ ಹಾಕುವುದು - ಇಪ್ಪತ್ತೆರಡು

ಮಾನವನ ಆಸೆ ಆಕಾಂಕ್ಷೆಗಳೂ ಬದುಕಿನ ರೀತಿನೀತಿಗಳೂ ಈಗಿನ ಜಾಡಿನಲ್ಲಿಯೇ ದೌಡಾಯಿಸಿದರೆ ಅವನಿಗೆ ಆವಶ್ಯವಾಗುವ ಶಕ್ತಿ ಪೂರೈಕೆ ಮಾಡಲು ಸೌರ ಶಕ್ತಿಯನ್ನು ಸೆರೆಹಿಡಿದು ಒದಗಿಸಬೇಕಾದೀತು ಎಂಬುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ದಿಶೆಯಲ್ಲಿ ಅವರು ಪ್ರಯೋಗಗಳಲ್ಲಿ ಉದ್ಯುಕ್ತರಾಗಿಯೂ ಇದ್ದಾರೆ. ಸೂರ್ಯನಿಂದ ಶಕ್ತಿ ಪ್ರವಾಹ ಅಡೆತಡೆ ಇಲ್ಲದೆ ಭೂಮಿಗೆ ಹರಿಯುತ್ತಿದೆ. ವಾಸ್ತವವಾಗಿ ಸೌರಶಕ್ತಿಯ ಕಡಲಿನಲ್ಲಿ ಭೂಮಿ ಮುಳುಗಿದೆ ಎನ್ನಬಹುದು. ಇದರ ಪರಿಣಾಮವಾಗಿ ವಾಯುಮಂಡಲದಲ್ಲಿ ಮಾರುತಗಳು ಸಾಗರದಲ್ಲಿ ತರಂಗಗಳೂ ಉದ್ಭವಿಸುವುದಾಗಿದೆ. ಇವುಗಳಿಂದ ಉತ್ಪಾದನೆ ಆಗುವ ಚಲನಶಕ್ತಿ 1.2X1022  ಜೌಲುಗಳು. ಇಂದಿನ ಪ್ರಪಂಚದ ಶಕ್ತಿವಿನಿಯೋಗದ ಸುಮಾರು ೬೦ ಪಟ್ಟು ದೊಡ್ಡ ಮೊತ್ತವಿದು. ಎಂದ ಮೇಲೆ ನೇರ ಸೌರಶಕ್ತಿಯ ಅಗಾಧತೆ ಎಷ್ಟಿರಬೇಡ!

ಸೌರಶಕ್ತಿಯನ್ನು ಮಾನವನ ಉಪಯೋಗಕ್ಕೆ ಪಳಗಿಸುವುದು ಅಷ್ಟೇನೂ ಸುಲಭವಲ್ಲ. ವ್ಯಾಪಕವಾಗಿಯೂ ತೆಳುವಾಗಿಯೂ ಹರಡಿ ಹೋಗಿರುವ ಅಸಾಂದ್ರ ಶಕ್ತಿ ಇದು. ಇನ್ನೂ ಒಂದು ತೊಂದರೆ ಇದೆ. ಬಿಸಿಲು ನೇರವಾಗಿ ಬೀಳದ ಎಡೆಗಳಲ್ಲಿ ಸೌರಶಕ್ತಿಯ ಸಂಗ್ರಹಣೆ ಸಫಲವಾಗದು. ಬಿಸಿಲು ಸರಿಯಾಗಿ ಬಿದ್ದು ಸೌರಶಕ್ತಿಯ ಸಂಗ್ರಹಣೆ ಸಮರ್ಪಪವಾಗಿ ನಡೆದು ಅದು ಉಪಯೋಗಕ್ಕೆ ಲಭಿಸಿದ್ದಾದರೆ ಆಗ ಗೃಹೋಪಯೋಗಕ್ಕೂ ಸಾರ್ವಜನಿಕ ಕಟ್ಟಡಗಳಿಗೆ ವಾಯುಶಾಖ ಸಂಸ್ಕಾರ ಒದಗಿಸಲಿಕ್ಕೂ (ಸೌರತಾಪನ) ಈಗ ಪ್ರಪಂಚದಲ್ಲಿ ವೆಚ್ಚವಾಗುವ ಶಕ್ತಿಯ ಮೂರನೆಯ ಎರಡು ಅಂಶವನ್ನು ಸೌರಶಕ್ತಿ ಪೂರೈಸಬಹುದು.

ಮಹಾಗಾತ್ರದ ದರ್ಪಣಗಳನ್ನು ನಿಯೋಜಿಸಿ ಇಲ್ಲವೇ ಕೆಲವೊಂದು ರಾಸಾಯನಿಕ ಕ್ರಿಯೆಗಳನ್ನು ಸೌರಶಕ್ತಿಯಿಂದ ಪ್ರೇರಿಸಿ ಸೌರಶಕ್ತಿಯನ್ನು ಮಾನವೋಪಯೋಗಕ್ಕೆ ದೊರಕಿಸಬಹುದು. ಆದರೆ ಇವೆಲ್ಲ ಈಗ (೧೯೯೩) ಪ್ರಾಯೋಗಿಕ ಹಂತಗಳಲ್ಲಿವೆ. ವಾಣಿಜ್ಯ ಗಾತ್ರದಲ್ಲಿ ಯಶಸ್ವಿಯಾಗುವ ಹಂತ ಏರಿಲ್ಲ. ಉಷ್ಣವಲಯ ಪ್ರದೇಶಗಳಲ್ಲಿ ಸೌರತಾಪಕಗಳು (Solar heaters) ಬಳಕೆಗೆ ಬರುತ್ತಿವೆ.

ಇನ್ನೊಂದು ಯೋಜನೆ ತಾತ್ತ್ವಿಕ ಘಟ್ಟದಲ್ಲಿದೆ. ಗೊತ್ತಾದ ಎತ್ತರದಲ್ಲಿ ಭೂಮಿಯನ್ನು ಪರಿಭ್ರಮಿಸುವ ಕೃತಕ ಉಪಗ್ರಹ (ಅಥವಾ ಉಪಗ್ರಹಗಳ ಸರಣಿ), ವಾಯುಮಂಡಲದಿಂದ ಹೊರಗಿನ ಮತ್ತು ಹೆಚ್ಚು ಕಡಿಮೆ ಸದಾ ಹಗಲಾಗಿರುವ ವಲಯದಲ್ಲಿ, ಸೌರಶಕ್ತಿಯನ್ನು ಯಥೇಚ್ಛವಾಗಿ ಸಂಗ್ರಹಿಸಿ ಸೂಕ್ಷ್ಮತರಂಗಗಳ ಸಾಮರ್ಥ್ಯಯುತ ದೂಲವಾಗಿ ಭೂಮಿಯ ಮೇಲಿನ ನಿಯೋಜಿತ ಠಾಣೆಗಳಿಗೆ ಪ್ರೇಷಿಸಬೇಕು. ಠಾಣೆಗಳು ಸೂಕ್ಷ್ಮತರಂಗ ದೂಲಗಳನ್ನು ಸ್ವೀಕರಿಸಿ ಅವುಗಳಲ್ಲಿ ಅಡಕವಾಗಿರುವ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಮಾರ್ಪಡಿಸಿ ವಿತರಿಸಬೇಕು. ಪ್ರಪಂಚಾದ್ಯಂತ ಆಯಕಟ್ಟು ನೆಲೆಗಳಲ್ಲಿ ಇಂಥ ಠಾಣೆಗಳನ್ನು ಸ್ಥಾಪಿಸುವುದರ ಮೂಲಕ ಇಡೀ ಪ್ರಪಂಚಕ್ಕೆ ನಿರಂತರ, ಮಾಲಿನಶೂನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಶೋಷಿಸದ ಶಕ್ತಿಯನ್ನು ಪೂರೈಸಬಹುದೆಂದು ಯೋಜನೆ ನಂಬಿದೆ.

ನವತಂತ್ರವಿದ್ಯೆ? - ಇಪ್ಪತ್ಮೂರು

ಮಾಲಿನ್ಯಶೂನ್ಯ ಶಕ್ತಿಯನ್ನು ಮಿತವ್ಯಯದಲ್ಲಿ ಸಮೃದ್ಧವಾಗಿ ಉತ್ಪಾದಿಸುವ ದಿಶೆಯಲ್ಲಿ ಈಗ ವಿವಿಧ ಪ್ರಯೋಗಗಳು ನಡೆಯುತ್ತಿವೆ. ಹಲವು ಮಂದಿ ಸ್ವತಂತ್ರ ಚಿಂತನಶೀಲ ವಿಜ್ಞಾನಿಗಳು ತಂತ್ರವಿದ್ಯೆ ತನಕ ಅಭಿವರ್ಧಿಸಿ ಬಂದಿರುವ ಜಾಡೇ ದೋಷಪೂರಿತವಾದದ್ದು, ‘ನಿಸರ್ಗ ದೋಚಿ ತಂತ್ರವಿದ್ಯೆ ಬೆಳೆಸುಎಂಬ ಅನಾರೋಗ್ಯಕರ ತತ್ತ್ವಾಧಾರಿತವಾದದ್ದು, ತತ್ಪರಿಣಾಮವಾಗಿ ಮಾನವಕುಲ ಇಂದಿನ ತೊಂದರೆಗಳನ್ನು ಎದುರಿಸಿ ಬಾಳಬೇಕಾಗಿದೆ, ಪರಿಸ್ಥಿತಿ ಹೀಗೆಯೇ ಮುಂದುವರಿದದ್ದಾದರೆ ತಂತ್ರವಿದ್ಯೆ ಖುದ್ದು ಮಾನವನನ್ನೇ ದಹಿಸಿಬಿಡಬಲ್ಲ ಭಸ್ಮಾಸುರಕರವಾಗದಿರದು. ಆದ್ದರಿಂದ ಈಗಿಂದೀಗಲೇ ತಂತ್ರವಿದ್ಯೆಯ ಆಧಾರ ತತ್ತ್ವವನ್ನೇ ಪುನರ್ವ್ಯಾಖಿಸಿ ವ್ಯಾಖ್ಯಾನುಸಾರ ನವತಂತ್ರವಿದ್ಯೆಯನ್ನು ರೂಪಿಸಿ ಅಭಿವರ್ಧಿಸಬೇಕು. ಇದೊಂದೇ ಶಾಶ್ವತ ಮಾನವಕಲ್ಯಾಣವನ್ನು ಸಾಧಿಸಬಲ್ಲದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಿಸರ್ಗದಿಂದ ಬೇರ್ಪಟ್ಟ ಪ್ರಾಣಿ ಅಲ್ಲ ಮಾನವ. ನಿಸರ್ಗದ ಶಿಶು. ಆದ್ದರಿಂದ ಆತ ನಿಸರ್ಗವನ್ನು ಸೂರೆ ಮಾಡಿ ಅಥವಾ ಕಬಳಿಸಿ ಬದುಕಲಾರ. ಬದಲು ನಿಸರ್ಗದೊಡನೆ ಹೊಂದಿಕೊಂಡು ಬದುಕಲು ಕಲಿಯಬೇಕು. ಆಗ ಮಾತ್ರ ಆತನ ಬಾಳು ಹಸನಾದೀತು. ಸಾರ್ಥಕವಾದೀತು ಎಂಬುದಾಗಿ ಇವರು ಹೇಳುತ್ತಾರೆ. ಇಂಥ ರಚನಾತ್ಮಕ (ವಿನಾಶಾತ್ಮಕ ಅಲ್ಲ) ತಂತ್ರವಿದ್ಯೆಗೆ ಸದ್ಯದಲ್ಲಿ ಬೇರೆ ಬೇರೆ ಹೆಸರುಗಳುಂಟು: ಪರ್ಯಾಯ, ನಿಮ್ನವೆಚ್ಚ, ಮಧ್ಯವರ್ತಿ, ಸ್ವಸಹಾಯ, ಪ್ರಕೃತಿಪರ, ಸಮುಚಿತ, ಸಮರ್ಪಕ ಇತ್ಯಾದಿ.

ಭಾರತದಂಥ ಅಭಿವೃದ್ಧಿಶೀಲ (‘ಹಿಂದುಳಿದಎನ್ನುವ ಪದದ ಗೌರವ ರೂಪ!) ದೇಶಕ್ಕೆ ಪರ್ಯಾಯ ತಂತ್ರವಿದ್ಯೆಯೇ ಯೋಗ್ಯವಾದದ್ದು ಎಂಬ ವಾದ ಉಂಟು. ಪಾಶ್ಚಾತ್ಯ ತಂತ್ರವಿದ್ಯೆ ಅಧಿಕ ಬಂಡವಾಳ, ಮಿತ ಕಾರ್ಮಿಕರು, ಫಾಸಿಲ್ ಇಂಧನ ಮತ್ತು ವ್ಯಾಪಕ ಸಂಪರ್ಕಜಾಲ ಇವನ್ನು ಆಧರಿಸಿ ಅಭಿವರ್ಧಿಸುವುದಾಗಿದೆ ಎಂದು ಹಿಂದೆ ವಿವರಿಸಿರುವುದು ಸರಿಯಷ್ಟೆ. ಭಾರತ ಕುರಿತಂತೆ ನಾಲ್ಕು ಕೂಡ ಋಣಾತ್ಮಕ ಗುಣಗಳಾಗುತ್ತವೆ; ಇದು ಆರ್ಥಿಕವಾಗಿ ಬಡದೇಶ; ಅಮಿತ ಕಾರ್ಮಿಕರಿಗೆ ಯೋಗ್ಯ ಸೇವಾವಕಾಶ ಒದಗಿಸುವುದು ಇಲ್ಲಿಯ ಸಮಸ್ಯೆ; ಫಾಸಿಲ್ ಇಂಧನಕ್ಕಾಗಿ ಇದು ಅನ್ಯ ರಾಷ್ಟ್ರಗಳನ್ನು ಆಶ್ರಯಿಸಬೇಕಾಗಿದೆ; ಸಾರಿಗೆ ಸಂಪರ್ಕಜಾಲ ಇಲ್ಲಿ ವ್ಯಾಪಕವಾಗಿ ಹಬ್ಬಿಲ್ಲ. ಆದ್ದರಿಂದ ಸ್ನಾಯುಶಕ್ತಿಯ ಜೊತೆಗೆ ಜಲ, ಜೈವಿಕ, ಸೌರ, ಮಾರುತ ಮುಂತಾದ ಫಾಸಿಲ್ ಇಂಧನಾವಲಂಬಿ ಅಲ್ಲದ ಶಕ್ತಿ ಮೂಲಗಳನ್ನು ಆಧರಿಸಿದ ಚಿಕ್ಕ ಪುಟ್ಟ ಯಂತ್ರ ಸ್ಥಾವರಗಳನ್ನು ದೇಶಾದ್ಯಂತ ಸ್ಥಾಪಿಸುವುದರ ಮೂಲಕ ಭಾರತ ಹೊಸ ಜಾಡು ತುಳಿಯಬಹುದೆಂದು ಸೂಚಿಸಲಾಗಿದೆ.

[ಭವಿಷ್ಯವಿಜ್ಞಾನ ಪುಸ್ತಕದ ಮುಂದಿನ ಭಾಗಗಳನ್ನು ಹೀಗೇ ಅಧ್ಯಾಯಗಳ ಅಂತ್ಯದ ಅನುಕೂಲ ನೋಡಿಕೊಂಡು ಕಂತುಗಳಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ ಪ್ರಕಟವಾಗುವಂತೆ ವ್ಯವಸ್ಥೆ ಮಾಡುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆ, ಚರ್ಚೆಯ ನುಡಿಗಳಿಗೆ ಎಂದಿನಂತೇ ಸ್ವಾಗತವಿದೆ]

2 comments:

  1. prof. G T N ಅವರು ನಮ್ಮ ಮುಂದಿನ ಸಮಸ್ಯೆಗಳಿಗೆ ಅಂದೇ ವೈಜ್ಞಾನಿಕ ಪರಿಹಾರ ಸೂಚಿಸಿದ್ದಾರೆ. What a correct Prediction! - ಇದೊಬ್ಬ ಮಹಾನ್ ವಿದ್ವಾಂಸನ ಲಕ್ಷಣ.
    ಪ್ರೀತಿಯಿಂದ
    ಪೆಜತ್ತಾಯ ಎಸ್. ಎಮ್.

    ReplyDelete
  2. I am very fortunate to see this analysis..What a correct prediction!

    ReplyDelete