11 January 2013

ಎದೆ ನಡುಗಿಸಿದ ಕೂಡ್ಲು ತೀರ್ಥ


ತಿಂಗಳೆ ಕಣಿವೆಯ ಜಲಪಾತಗಳು - ಭಾಗ ಎರಡು

[ತಿಂಗಳೆ ಕಣಿವೆಯ ಕೂಡ್ಲು ತೀರ್ಥದ ದರ್ಶನ ಮತ್ತು ಬರ್ಕಣ ಅಬ್ಬಿಯ ತಳಶೋಧದ ನೆಪದಲ್ಲಿ ನಮ್ಮ ಬಳಗ (ಆರೋಹಣ ಪರ್ವತಾರೋಹಿಗಳು ಸಾಹಸಿಗಳು) ಅಸಂಖ್ಯ ಚಾರಣಗಳನ್ನು ನಡೆಸಿತ್ತು. ಅವುಗಳಲ್ಲಿ ಸ್ವಾರಸ್ಯವಾದದ್ದನ್ನು ಮಾತ್ರ ಇಲ್ಲಿ ಹಿಡಿದಿಡುವ ಕಥನ ಮಾಲಿಕೆಗೆ ತಿಂಗಳ ಹಿಂದೆಯೇ ಕಳೆದ ಕಂತು - ಮಂಗಳೂರಿನ ಆದಿ ಉರಗೋದ್ಯಾನದಲ್ಲಿ ಪೀಠಿಕೆ ಬರೆದಿದ್ದೆ. ಕ್ಷಮಿಸಿ, ಆಗ ನಿಮ್ಮನ್ನು ಕಾರ್ಗಾಲದಬ್ಬರದ ಕೂಡ್ಲು ಹೊಳೆದಂಡೆಯ ಮೇಲೆ ಅನಾಥವಾಗಿ ಬಿಟ್ಟಿದ್ದೆ. ಕಗ್ಗಾಡ ಮೂಲೆಯ ತಿಂಗಳೆಗೆ ಸ್ವಂತ ವಾಹನಗಳಲ್ಲೇ ಬಂದಿದ್ದ ನಮಗೆ - ಅಪರಿಚಿತರಿಗೆ, ರವೀಂದ್ರ ಹೆಗ್ಡೆಯವರು ಔದಾರ್ಯದಲ್ಲೇ ಮಾರ್ಗದರ್ಶಿ ಕೊಟ್ಟು ಕಳಿಸಿದ್ದರು. ಆದರೆ ಇಂದು ಅಲ್ಲಿನ ಸಾಮಾಜಿಕ ಪರಿಸರ ಅಷ್ಟು ಸರಳವಿಲ್ಲ. ನಕ್ಸಲ್ ಬಳಗದ ಒಬ್ಬ ಸೇನಾನಿ ವಿಕ್ರಮ್ ಗೌಡ ಇದೇ ವಲಯದವನು]

ಆಳದ ಬೋಗುಣಿಯಂತೇ ಸುತ್ತುವರಿದ ಪರ್ವತಾವಳಿ, ಮೋಡದ ಮುಚ್ಚುಳಿಕ್ಕಿ ನಮ್ಮನ್ನು ಕುಟ್ಟುತ್ತಿದ್ದ ಬಿರುಮಳೆ, ಮಹಾ ಅಜಗರದಂತೆ ಸೊಕ್ಕಿದ ಹೊಳೆ, ನಿಗೂಢ ಕಾಡು ಇತ್ಯಾದಿ ವಿವರಗಳಲ್ಲಿ ನೋಡುತ್ತಿದ್ದಂತೆ ನಾವು ಒಮ್ಮೆ ಕಂಗಾಲಾದದ್ದು ನಿಜ. ಆದರೆ ರವೀಂದ್ರ ಹೆಗ್ಡೆಯವರು ಕೊಟ್ಟ ಮಾರ್ಗದರ್ಶಿ - ನಾರಾಯಣ ಶೆಟ್ಟರು, ಪ್ರಾಯ ಅರವತ್ತು ಮೀರಿದ್ದರೂ ಪರಿಸರದಲ್ಲಿ ದೃಢ ಜೀವಿ. ತೋಟದ ಪರಿಸರದಲ್ಲಿ ಅಷ್ಟಾಗಿ ಅಗತ್ಯ ಬರದಿದ್ದ ಅವರ ಜಿಗಣೆ ಮಂತ್ರ ದಂಡಕ್ಕೆ (ಪುಟ್ಟ ಬಟ್ಟೆಯ ಗಂಟಿನೊಳಗೆ ಸುಣ್ಣ ತುಂಬಿ, ಕಾಡುಕೋಲೊಂದರ ತುದಿಗೆ ಕಟ್ಟಿಕೊಂಡಿದ್ದರು. ಅದನ್ನು ಜಿಗಣೆಗೆ ಮುಟ್ಟಿಸಿದರೆ ಸಾಕು, ತಕ್ಷಣವೇ ಅದರ ಕಾರಕ್ಕೆ ಜಿಗಣೆ ಕಳಚಿಕೊಳ್ಳುತ್ತಿತ್ತು.) ಕಾಡಿನ ಪರಿಸರದಲ್ಲಿ ಬೇಡಿಕೆ ಜಾಸ್ತಿಯಾಗಿತ್ತು. ಅವರ ಬೀಸ ನಡಿಗೆಗೆ ಹೆಜ್ಜೆ ಸೇರಿಸಲು ಹಿಂದುಳಿಯುವವರೂ ಓಡೋಡಿ ದಂಡ ಸ್ಪರ್ಷ ಬಯಸುತ್ತಿದ್ದದ್ದು ಪರೋಕ್ಷವಾಗಿ ತಂಡದ ಪ್ರಗತಿಯನ್ನು ಚುರುಕಾಗಿರಿಸಿತ್ತು. ಹೊಳೆ ದಂಡೆಯಲ್ಲೆ ಪೊದರು ಮುಚ್ಚಿದ್ದ ಜಾಡನ್ನು ಕತ್ತಿಯಲ್ಲಿ ಸವರಿ ಬಿಡಿಸುತ್ತ ತುಸು ದೂರ ನಡೆಸಿ, ಅನಿವಾರ್ಯತೆಗೆ ಹಳ್ಳಿಗರೇ ಮಾಡಿಕೊಂಡ ಒಂದು ಮಹಾ ಕಾಡುಸೇತು ಸೇರಿಸಿದರು.


[ಶಿವರಾಮ ಕಾರಂತರು (೧೯೭೦ರ ದಶಕದಲ್ಲಿ) ವಿವಿನಿಲಯದ ಇಂಗ್ಲಿಷ್ ಕನ್ನಡ ನಿಘಂಟಿನ ಮಾಸಿಕ ಬೈಠಕ್ಕಿನಲ್ಲಿ bridge ಪದಕ್ಕೆ ಸೋದಾಹರಣವಾಗಿ ಸೂಚಿಸಿದ ಅರ್ಥ - (ಕಡಲ) ಈಚೆ ರಾಮು, ಆಚೆ (ಲಂಕೆಯಲ್ಲಿ) ಸೀತು, ಸೇರಿಸಿತ್ತು ಸೇತು (ಸಾಗರ ಸೇತುಬಂಧ). ನಮ್ಮ ಸ್ಥಿತಿ ಸ್ವಲ್ಪ ಭಿನ್ನ - ಎದುರಾಗಿದ್ದಳು ಸೀತು (ಸೀತಾನದಿ), ಪ್ರವಾಹದೆದುರು ಸೋತು, ಕಣ್ ಕಣ್ಬಿಟ್ಟಾಗ ಸಿಕ್ಕಿತ್ತು ಸೇತು!] ಎರಡೂ ದಂಡೆಗಳಲ್ಲಿ ಸಾಕಷ್ಟು ದೃಢವಾಗಿಯೂ ಗಟ್ಟಿಯಾಗಿಯೂ ಇದ್ದ ಮರಗಳ ಸುಮಾರು ಹತ್ತು ಹದಿನೈದಡಿ ಎತ್ತರಕ್ಕೆ ಹತ್ತಲು ಅಥವಾ ಇಳಿಯಲು ಒದಗುವಂತೆ ಬಳ್ಳಿಯಲ್ಲಿ ಬಿಗಿದ ಬಿದಿರಿನ ಸಾಕಷ್ಟು ಅಗಲದ ಸೋಪಾನಗಳು. ಆಧಾರದ ಮರದ ಗಟ್ಟಿ ಕೊಂಬೆಯನ್ನೇ ಅಡಿಪಾಯ ಮಾಡಿ ನಾಲ್ಕೈದು ಸಪುರದ ಕಾಡ ಕಂಬವನ್ನು ನದಿ ನಡುವಿಗೆ ಅಡ್ಡ ಚಾಚಿ ಕೊಟ್ಟಿದ್ದರು. ನದಿ ನಡುವಿನಲ್ಲಿ ತಳದಿಂದ ಪ್ರವಾಹ ಮೀರಿದ ಎತ್ತರಕ್ಕೆ, ಕಾಡಬಳ್ಳಿಯದ್ದೋ ಬೆತ್ತದ್ದೋ ಸುಮಾರು ಎಂಟು-ಹತ್ತಡಿ ವ್ಯಾಸದ ಸ್ತಂಭ ನೇಯ್ದಿದ್ದರು. ಅದರೊಳಗೆ ಬಿಗಿಯಾಗಿ ಕಾಡುಕಲ್ಲು ಜೋಡಿಸಿ, ಅವಶ್ಯವಿದ್ದಲ್ಲಿ ಕಂಬ, ದಪ್ಪದ ಹೊಳೆಜಲ್ಲಿ, ಮರಳು ತುಂಬಿ ದೃಢ ಗುರ್ಜಿ ನಿಲ್ಲಿಸಿದ್ದರು. ಎರಡೂ ದಂಡೆಯ ಅಡ್ಡ ಕಂಬಗಳಿಗೆ ಗುರ್ಜಿ ಮಧ್ಯಂತರ ನೆಲೆ. ಅಡ್ಡಗಳಿಗೆ ಅಲ್ಲಲ್ಲಿ ಒಟ್ಟು ಬಿಗಿ ಹಿಡಿಯುವಂತೆ ಬಳ್ಳಿ ಕಟ್ಟುಗಳೂ ಇದ್ದವು. ನಡೆಯುವವರ ಸಮತೋಲನ ಕಾಪಾಡಲು ಉದ್ದದ ಬೆತ್ತದ ಕೈತಾಂಗೂ ಕೊಟ್ಟಿತ್ತು. ಇಷ್ಟೆಲ್ಲಾ ಇದ್ದೂ ಜಾರುವ ಮರ, ನಡುಗುವ ಸಂಕ, ಅವನ್ನೇ ಬೆದರಿದ ಕಣ್ಣುಗಳಲ್ಲಿ ನೋಡುತ್ತ ಪಾದ ಬೆಳೆಸುವಾಗ ಬೇಡವೆಂದರೂ ದೃಷ್ಟಿ ಕೆಳಗೆ ಹರಿಯುತ್ತಿತ್ತು. ತುಸು ಕೆಳಗೆ ಭುಸುಗುಡುವ ಹೊಳೆಅದರಲ್ಲಿ ಆಗೀಗ ಮಗುಚುತ್ತಾ ಬರುವ ಭಾರೀ ಮರ ನೋಡುವಾಗ ನಾವೂ ಅದರ ಪಾಲಾದರೆ ಎಂದು ಎದೆಗುಂದಿಸುತ್ತಿತ್ತು. ನೀರ ಸೆಳೆತವನ್ನೋ ಕೊಚ್ಚಿಬರುವ ಮರಗಳ ಆಘಾತವನ್ನೋ ಗುರ್ಜಿ ತಡೆದೀತೇ ಎಂಬ ಆತಂಕ, ನಾವು ನಿಂತಲ್ಲಿಗೆ ಕಾಣದ ಆಚಿನ ಸಂಕಾರ್ಧ ಉಳಿದಿದೆಯೇ ಎಂಬ ಸಂದೇಹ, ಅವೆಲ್ಲ ಸರಿಯಾದರೂ  ವಾಪಾಸಾಗುವಾಗ ಇಷ್ಟೂ ಹೀಗೇ ಉಳಿದೀತೇ ಅಥವಾ ತೊಳೆದುಹೋದೀತೇ ಎಂಬ ಭಯ ಯಾರನ್ನೂ ಬಿಟ್ಟದ್ದಿಲ್ಲ. ಆದರೂ ಸರದಿಯಲ್ಲಿ ಗುರ್ಜಿಯವರೆಗೆ ಒಮ್ಮೆಗೆ ಒಬ್ಬರಂತೆ, ಹಾಗೇ ಆಚೆ ದಡಕ್ಕೆ ಎಲ್ಲರೂ ದಾಟಿದೆವು (ಕೆಲವರು ನಾಲ್ಗಾಲರಾದದ್ದೂ ಇತ್ತು!).

ಭಾರೀ ಮರಗಳ, ತೋರ ಬೀಳಲುಗಳ ಹೆಚ್ಚು ಕಡಿಮೆ ಸಮನೆಲದ, ಕಾಡಿನ ನಡಿಗೆ ಮುಂದಿನದು. ಮಳೆಯಬ್ಬರವೆಲ್ಲ ಇಲ್ಲಿ ಸದ್ದಿನಲ್ಲಿ ಮಾತ್ರ, ನಮಗೇನಿದ್ದರೂ ದಟ್ಟ ಹಸಿರ ಮುಚ್ಚಿಗೆ ಬಿಡುವ ತಟಕು, ಪಟಕು. ಪೊದರು, ಬೆತ್ತದ ಮುಳ್ಳ ಸರಿಗೆ, ಉದುರು ಸೌದೆ, ಕಲ್ಲು, ಕೆಸರು, ಸಣ್ಣಪುಟ್ಟ ತೊರೆ ಝರಿಗಳೆಲ್ಲ ನಾವು ಬಯಸಿಯೇ ಹೋದ ನಮ್ಮನ್ನು ವಿಶೇಷ ಕಾಡಲಿಲ್ಲ. ಜಿಗಣೆ ಸಂಭ್ರಮವನ್ನು ಆದಷ್ಟೂ ನಿರುತ್ತೇಜನಗೊಳಿಸುತ್ತ ಮೂರು ನಾಲ್ಕು ಕಿಮೀ ಅಂತರವನ್ನೇ ನಾವು ಕ್ರಮಿಸಿರಬೇಕು. ಒಮ್ಮೆಗೆ ಚದುರಿದಂತೆ ಕೆಲವು ಜೋಪಡಿಗಳು, ಜನ, ಗದ್ದೆ, ತೋಟ ಕಾಣಿಸಿದಾಗ ನಮಗೆ ತುಸು ನಾಚಿಕೆಯೇ ಆಗಿರಬೇಕು. ಎಲ್ಲರೊಳಗಿರುವ ಭರತ ಚಕ್ರವರ್ತಿ ಯಾರೂ ನುಗ್ಗಲು ಮನಮಾಡದ ಕಾಲದಲ್ಲಿ ನಾವು ಹೊಳೆ ದಾಟಿ, ದಟ್ಟಾರಣ್ಯ ಹೊಕ್ಕು. . .” ಎಂದುಕೊಳ್ಳುತ್ತಿರುವಾಗ ಅಲ್ಲೇ ಜೀವನ ಕಂಡುಕೊಂಡವರು ಸಿಗಬೇಕೇ!

ನಾಲ್ಕು ಜೋಪಡಿಗಳ ಪುಟ್ಟ ಕುಗ್ರಾಮ - ಕೂಡ್ಲು ತೋಟ. ನಾವು ಸ್ಪಷ್ಟ ಬೆಟ್ಟದ ಏರು ನೆಲದ ಬುಡವನ್ನೂ ಒಂದು ಕಿಬ್ಬಿಯ (ಲಂಬವಾಗಿ ಕಾಣುವ ಕಣಿವೆ ಎನ್ನಬಹುದು) ಬಾಯನ್ನೂ ಸೇರಿದ್ದೆವು. ಬೆಟ್ಟದ ಸಂದಿನಲ್ಲಿ ನಮಗಿನ್ನೂ ಅಗೋಚರವಾಗಿತ್ತು ನಮ್ಮ ಲಕ್ಷ್ಯ - ಕೂಡ್ಲು ತೀರ್ಥ. ಅಲ್ಲಿ ಬಿದ್ದ ನೀರೇ ಧುಮುಗುಡುತ್ತಾ ಘಟ್ಟದ ಏರಿನ ಕೆಳ ಅಂಚಿಗೇ ಗೀಟೆಳೆಯುತ್ತ ನಮ್ಮೆದುರು ತೊರೆಯಾಗಿ ಹರಿದಿತ್ತು. ಮುಂದುವರಿದು ಅಲ್ಲೇ ತೋಟಗಳ ಕೆಳ ಅಂಚಿನಲ್ಲೆಲ್ಲೋ ಇನ್ನೂ ಹೆಚ್ಚಿನ ತೊರೆಗಳ ಬಲ ಕೂಡಿಸಿಕೊಳ್ಳುತ್ತಿತ್ತು. ಅಬ್ಬಿಯ ವೈಶಿಷ್ಟ್ಯಕ್ಕೆ ಕಾರಣವಾದ ನೀರನ್ನು ಜನಪದ ವಿಶೇಷವಾಗಿ ಗೌರವಿಸಿ ತೀರ್ಥವೆಂದಿತು. ಅದು ಸಂಗಮಿಸುವಲ್ಲಿನ (ಕೂಡುವಲ್ಲಿನ) ತೋಟ ಕೂಡ್ಲು ತೋಟ. ಹೀಗೆ ಬಂದ ಕೂಡ್ಲು ತೀರ್ಥ (ಕೂಡ್ಲು ಅಬ್ಬಿ) ಕೇವಲ ಹತ್ತು ಹದಿನೈದು ವರ್ಷಗಳೀಚೆಗೆ ಜನಪ್ರಿಯ ಸಾಪ್ತಾಹಿಕ - ತರಂಗದ ಬೆರಕೆ ಕನ್ನಡ ಪ್ರೀತಿಯಲ್ಲಿ ಸೀತಾಫಾಲ್ಸ್ಎಂದೇ ಪ್ರಚಾರಕ್ಕೆ ಸಿಕ್ಕಿದ್ದು ಬೇಸರದ ಸಂಗತಿ. ನಾಳೆ ಇದಕ್ಕೆ  ಅಗಸರವನ ಹೇಳಿಕೆಯನ್ನು ಗಂಟುಹಾಕಿ ಸೀತೆಯ ಪಾತಿವ್ರತ್ಯದ ಅಧಃಪತನದ (ಸೀತಾಸ್ ಫಾಲ್) ಸ್ಥಳಪುರಾಣ ಹೊಸೆಯುವ ಇನ್ನಷ್ಟು ವಿಪರೀತ ಪಾಂಡಿತ್ಯ ಬಂದರೆ ಆಶ್ಚರ್ಯವಿಲ್ಲ!

ಕಂಬಳಿ ಮುಸುಕಿನಲ್ಲಿದ್ದ ಹಳ್ಳಿಗರ ಬಳಿ ನಾರಾಯಣ ಶೆಟ್ಟರು ನಾಲ್ಕು ಮಾತಾಡಿ, ರಸವೀಳ್ಯ ಕತ್ತರಿಸುತ್ತಿರಲಿ. ಕಥನವನ್ನು ತುಸು ಕಾಲಾತೀತವಾಗಿ ನೋಡಲು ಹಾಗೆ ಹೋಗಿ, ಹೀಗೆ ಬಂದು ಬಿಡುತ್ತೇನೆ, ನೀವೂ ಬನ್ನಿ. ಕೂಡ್ಲು ಅಬ್ಬಿಗೆ ಅನಂತರದ ವರ್ಷಗಳಲ್ಲಿ, ಮಳೆ ದೂರಾದ ದಿನಗಳಲ್ಲಿ ನಾನು ಹಲವು ಭೇಟಿ ಕೊಟ್ಟಿದ್ದೇನೆ. ವಾಸ್ತವದಲ್ಲಿ ಕೂಡ್ಲು ತೀರ್ಥಕ್ಕೆ ಹೋಗುವವರು ತಿಂಗಳೆಗೆ ಹೋಗಬೇಕಿಲ್ಲ. ಅದಕ್ಕೂ ಸುಮಾರು ಒಂದು ಕಿಮೀ ಮೊದಲು, ಅಂದರೆ ಕಾರ್ಕಳ - ಆಗುಂಬೆಯ ಮುಖ್ಯ ದಾರಿ ಬಿಟ್ಟಲ್ಲಿಂದ ಸುಮಾರು ಐದು ಕಿಮೀ ಅಂತರದಲ್ಲಿ ಸಿಕ್ಕುವ ಎರಡಂಗಡಿಗಳ ಪೇಟೆಯಲ್ಲಿ ಎಡ ಕವಲು ಹಿಡಿಯಬೇಕು. ಇದು ನನ್ನ ಹಲವು ಭೇಟಿಗಳಲ್ಲಿ ಅಭಿವೃದ್ಧಿಯ ಹಲವು ಮುಖ ಕಾಣಿಸಿದ್ದನ್ನು ವಿಸ್ತರಿಸುವುದಿಲ್ಲ. ಮೊದಲು ಅರ್ಧ ಕಿಮೀಯಲ್ಲಿ ಒಂದು ಸಾಮಾನ್ಯ ತೊರೆ ಅಡ್ಡ ಬರುತ್ತದೆ. ಮತ್ತೆ ಸುಮಾರು ಐದು ಕಿಮೀ ಅಂತರದಲ್ಲಿ ಇಲ್ಲೇ ಮೇಲೆ ವಿವರಿಸಿದ ಮಹಾ ಅಜಗರ, ಸಾಕ್ಷಾತ್ ಸೀತಾನದಿ. ಕುಗ್ರಾಮದ ವ್ಯವಸ್ಥೆಯಲ್ಲಿ ಎಲ್ಲೋ ವರ್ಷಕ್ಕೊಮ್ಮೆ ಕೃಷ್ಯುತ್ಪನ್ನವೋ ಮರವೋ ಖರೀದಿಸುವ ವ್ಯಾಪಾರಿಗಳ ಕೃಪೆಯಲ್ಲಿ, ಅವರ ಲಾರಿ ಓಡಿಸುವ ಅನುಕೂಲಕ್ಕೆ ಕಚ್ಚಾದಾರಿಯಾದರೇ ದೊಡ್ಡ ಕೃಪೆ. ತತ್ಕಾಲೀನತೆಯಲ್ಲಿ ಲಾರಿ, ಜೀಪುಗಳೇನೋ ಹೊಳೆ ಪಾತ್ರೆಗೇ ಇಳಿದು ಸುಧಾರಿಸಿಕೊಳ್ಳುತ್ತಿದ್ದವು. ಆದರೆ ನಮ್ಮ ಬೈಕ್ ಸವಾರಿಯ ಕಡತ ಬಿಚ್ಚಿದರೆ ಪ್ರತಿ ಬಾರಿಯೂ ಒಂದೊಂದು ಪುರಾಣ; ಇಲ್ಲ, ಇಲ್ಲಿ ವಿಸ್ತರಿಸುವುದಿಲ್ಲ. ಮುಂದುವರಿದ ದಿನಗಳಲ್ಲಿ ಸರಕಾರೀ ಯಂತ್ರ ಬಹಳ ನಿಧಾನವಾಗಿ ಎರಡಕ್ಕೂ ಸಪುರ ಕಾಲುಸೇತುವೆಯನ್ನಷ್ಟೇ ರಚಿಸಿದ್ದು ನಾವು ಕಂಡಿದ್ದೇವೆ. ಅವುಗಳ ಮೇಲೆ ನಾವು ಬೈಕ್ಗಳನ್ನು ನೂಕಿ ದಾಟಿಸಿದ್ದೂ ಇದೆ. ಅದು ಸರಕಾರೀ ರಚನೆಯಾದ್ದರಿಂದ ಈಗ ಊರ್ಜಿತದಲ್ಲಿದ್ದರೆ ಆಶ್ಚರ್ಯಪಡಬೇಕು!

ಸೀತಾನದಿ ದಾಟಿದ್ದೇ ಸಿಕ್ಕುವ ಮುಖ್ಯ ಎಡಗವಲಿನಲ್ಲಿ ಒಂದೂವರೆ ಕಿಮೀಗೆ ಮೇಗದ್ದೆ (ನಕ್ಸಲ್ ವಿಕ್ರಮ ಗೌಡನ ಮನೆಯಿರುವ ಕೊಂಪೆ). ಬಲಕ್ಕೆ ಮೂರು ಕಿಮೀಯಲ್ಲಿ ಕೂಡ್ಲುತೋಟ. ಮೊದಮೊದಲು ಇಲ್ಲಿಗೆ ಬರುತ್ತಿದ್ದ ಬಹುತೇಕ ಚಾರಣಿಗರು ಕನಿಷ್ಠ ತಿಂಗಳೆ ಕವಲಿನಿಂದಾದರೂ ಅಂದರೆ ಸುಮಾರು ಏಳು ಕಿಮೀಯಾದರೂ ನಡೆಯುವುದು ಅನಿವಾರ್ಯವಿತ್ತು. ಸ್ವಂತ ವಾಹನ ತಂದು ಮುಂದುವರಿದರೂ ಪಟ್ಟ ಪಾಡು ನೆನೆಸಿಕೊಂಡು, ಇನ್ನೊಮ್ಮೆ ಬರುವ ಅಥವಾ ಬೇರೆಯವರಿಗೆ ಸೂಚಿಸುವ ಧೈರ್ಯ ಮಾಡುತ್ತಿರಲಿಲ್ಲ. ಆದರೆ ಮೊದಲೇ ನಾನು ಹೇಳಿದ ಸಾಪ್ತಾಹಿಕದ ಆಕರ್ಷಣೆಯಲ್ಲಿ ಭೇಟಿಕೊಡುವವರ ಸಂಖ್ಯೆ ಗಣನೀಯವಾಗಿ ಏರಿದಾಗ ಅರಣ್ಯ ಇಲಾಖೆ ಜಾಗೃತವಾಯ್ತು. ಯೋಜನೆ ಮತ್ತು ನಿರ್ವಹಣೆಗಳಲ್ಲಿ ನಮ್ಮ ಸರಕಾರೀ ಇಲಾಖೆಗಳ ಧೋರಣೆ ಕುರಿತಂತೆ ನಾನು ಹೊಸದಾಗಿ ಹೇಳುವುದೇನೂ ಉಳಿದಿಲ್ಲ. ನಾಗರಿಕ ಕಸ ಬಾರದಂತೆ, ಜೀವ ಭದ್ರತೆ ಹೆಚ್ಚಿಸುವಂತೆ, ವನ್ಯ ಪರಿಸರ ಕದಡದಂತೆ ಇದ್ದ ಕಾನೂನಿನ ಆಶಯಗಳು ಕಡತಗಳಲ್ಲೇ ಉಳಿಯಿತು. ಬನಿಯನ್ನು, ಟೊಪ್ಪಿ, ಒಂದಷ್ಟು ದಿನ ವಾಹನ ಸೌಕರ್ಯ, ಭೂಮಿಯ ಮೇಲೆ ಒಂದಷ್ಟು (ಉಪದೇಶಪರ) ನಾಮಫಲಕಗಳು, ಕೊನೆಯ ಹಂತದಲ್ಲಿ ಕಾಲುದಾರಿ ಗುರುತಿಸುವ ಅರೆಬರೆ ಪ್ರಯತ್ನ ಮತ್ತು ಕೂಡ್ಲುತೋಟದಲ್ಲೇ ಯಾರಿಗೋ ಪ್ರವೇಶಧನ ಸಂಗ್ರಹಿಸುವ ವ್ಯವಸ್ಥೆ ಮಾತ್ರ ಮಾಡಿದ್ದು ಕಂಡಿದ್ದೆ. ದಿನಗಳಲ್ಲಿ ಪ್ರಶ್ನಾತೀತವಾದ ಅಭಿವೃದ್ಧಿಕಡತಗಳು (ಮಾಹಿತಿ ಹಕ್ಕಿರಲಿಲ್ಲ) ಇಲಾಖೆಗೆ ಸಲ್ಲದಷ್ಟು ಘನವಾದದ್ದಂತೂ ನಿಜ. ಪ್ರಾಕೃತಿಕ ವೈಶಿಷ್ಟ್ಯಗಳಿಗೆ ನಾಗರಿಕ ಸವಲತ್ತುಗಳನ್ನು ಒದಗಿಸದಿರುವುದೇ ಯಾರೂ ಮಾಡಬಹುದಾದ ಪ್ರಾಥಮಿಕ ಮತ್ತು ಬಲವತ್ತರವಾದ ರಕ್ಷಣೆ. ಕಾಡು, ಬೆಟ್ಟ ಮುಂತಾದ ಪ್ರಾಕೃತಿಕ ವೈಶಿಷ್ಟ್ಯವನ್ನು ಎಲ್ಲಾ ದೇಹ ಪ್ರಕೃತಿಯವರಿಗೆ, ಮನೋಸ್ಥಿತಿಯವರಿಗೆ ಹೊಂದಿಸಿ ಕೊಡುವಹುಚ್ಚನ್ನು ಮುಖ್ಯವಾಗಿ ಇಲಾಖೆಗಳು ನಿರಾಕರಿಸಬೇಕು. ಇಂದು ಮಳೆಗಾಲೇತರ ದಿನಗಳಲ್ಲಿ ಸೀತಾಫಾಲ್ಸ್ಬಳಿ ನಡೆಯುವ ವನಭೋಜನಗಳ ಉತ್ತರೋತ್ತರ ಕಸ, ಗದ್ದಲಕ್ಕೆ ನಿರಚನೆ, ಅನಭಿವೃದ್ಧಿ ಒಂದೇ ಮದ್ದು. (ಇದು ಅಲ್ಲಿನ ವಾಸಿಗಳಿಗೆ ಸಲ್ಲಬೇಕಾದ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ್ದಲ್ಲ, ನಾಗರಿಕ ಸವಲತ್ತುಗಳನ್ನು ಅನುಭವಿಸಿಕೊಂಡಿದ್ದು, ಕೆಲವು ಗಂಟೆಗಳ ಮೋಜಿಗಾಗಿ ಇಂಥಲ್ಲಿಗೆ ಮುಗಿಬೀಳುವವರನ್ನಷ್ಟೆ ಉದ್ದೇಶಿಸಿದ ಮಾತು.) 

ಮಳೆ ಅವಿರತ ಧಿಂಗಣದಲ್ಲಿದ್ದರೆ, ಮೇಘಗರ್ಜನೆ, ಗಾಳಿ ಸುಯ್ಯಲಿನ ಹಿಮ್ಮೇಳ ನಮ್ಮನ್ನು ನಖಶಿಖಾಂತ ತೊಯ್ಯಿಸಿದ್ದರೂ ನಿರುತ್ತೇಜನಗೊಳಿಸುವ ಬದಲು ಹೆಚ್ಚಿನ ಸಾಹಸಕ್ಕೆ ಹುರಿಗಟ್ಟಿಸಿತ್ತು! ತೊರೆ, ಗೊಸರು ಎಂದೆಲ್ಲಾ ತುಳಿದು ಶೂವಿನೊಳಗೆ ಸೇರಿಕೊಂಡ ನೀರು, ಮರಳು ಪಾದ ಉಜ್ಜುತ್ತಿತ್ತು. ಸಾಲದ್ದಕ್ಕೆ ನೆಲದ ಡೊಂಕು, ಕೊರಕಲು, ಕಲ್ಲೋ ಕೊದಂಟಿಯದೋ ಗುದ್ದು, ವಾತಾವರಣದ ಶೈತ್ಯ ಸೇರಿ ಎಲ್ಲರ ಜಿಗಣೆ ಎಚ್ಚರ ಆಯುಷ್ಯ ಕಳೆದುಕೊಂಡಿತ್ತು. ಮತ್ತೂ ಹೆಚ್ಚಿನದ್ದಕ್ಕೆ - ಸಾಕ್ಷಾತ್ ವಿಷದ ಹಾವುಗಳ ಬಗ್ಗೆ ಮಾರ್ಗದರ್ಶಿಯೇ ಎಚ್ಚರಿಸಿದ್ದರಿಂದ ಗಮನ ಗಹನವಾಗಿತ್ತು!

ಕೂಡ್ಲುತೋಟದಾಚಿನ ಗದ್ದೆಗೆ ಅಂಚುಗಟ್ಟಿದಂತೆ ಅಥವಾ ಮತ್ತೆ ನೇರ ಇಳಿದ ಬೆಟ್ಟ ಬಯಲಿಗೆ ಜಾರದ ಕಂದಕದಂತೆ, ಇನ್ನೂ ಸರಿಯಾಗಿ ಹೇಳುವುದಿದ್ದರೆ ತೋಟಕ್ಕೂ ಅಪ್ಪಟ ಕಾಡಿಗೂ ಗಡಿರೇಖೆ ಎಳೆದಂತೆ ಕೂಡ್ಲು ತೀರ್ಥ ಹರಿದಿತ್ತು. ಸೀತಾನದಿಗೆ ಹೋಲಿಸಿದರೆ ಇದರ ಹರಹು ಕಡಿಮೆ. ವಾಸ್ತವದಲ್ಲಿ ಮಳೆಗಾಲ ಬಿಟ್ಟ ಋತುಗಳಲ್ಲಿ ತುಂಬಾ ಜನ ತೊರೆಯ ಪಾತ್ರೆಯ ಗುಂಟವೇ ನಡೆದು ಅಬ್ಬಿಯನ್ನು ದರ್ಶಿಸುತ್ತಾರೆ. ಆದರೆ ಅಂದು ಕಾಲದ ಬಲದಲ್ಲಿ ಅಲ್ಪನಿಗೆ ಬಂದ ಸಿರಿಯಂತೆ ತೊರೆ ಮೇರೆ ಮೀರಿ ಅಬ್ಬರಿಸುತ್ತಿತ್ತು. ಹೊಳೆಪಾತ್ರೆಯಾದರೋ ಬೆಟ್ಟಗಳೆರಡರ ಸಂದಿನಿಂದ ಬಲಮುರಿದು ಬರುತ್ತಿದ್ದುದರಿಂದ ಎಡಮಗ್ಗುಲು ದುರ್ಗಮ ಗೋಡೆಯೇ ಆಗಿತ್ತು. ಹೀಗಾಗಿ ಕೂದ್ಲು ತೋಟಕ್ಕೆ ಅಗೋಚರವಾದ ಅಬ್ಬಿ ನೋಡಲು ನಾವು ಹೊಳೆಯ ಎದುರು ದಂಡೆ ಸೇರುವುದು ಅನಿವಾರ್ಯವಿತ್ತು. ಅದಕ್ಕನುಕೂಲವಾಗಿ ಅಲ್ಲೇ ಸ್ವಲ್ಪ ಕೆಳದಂಡೆಯಲ್ಲಿ ನಮಗಿನ್ನೊಂದೇ ಜನಪದ ತಂತ್ರಜ್ಞಾನ ಒದಗಿಬಂತು - ಅಟ್ಟೆಬೂರುವಿನ ಕಟ್ಟೆ. ಎಲ್ಲೋ ಸ್ಕೌಟ್ ಶಿಬಿರಗಳಲ್ಲಿ ಬಲವಾದ ಹಗ್ಗಗಳನ್ನು ಬಳಸಿ ಮಾಡಿಟ್ಟ ಹಗ್ಗದ ಸೇತುವೆಗಳನ್ನು ಕಂಡಿದ್ದೆ. ಅದೇ ಇಲ್ಲಿ ಪಕ್ಕಾ ವನ್ಯೋತ್ಪತ್ತಿ, ಅಟ್ಟೆ ಎಂಬ ಬಳ್ಳಿಯ (ಬೂರು) ಬಂಧನದಲ್ಲಿ ರೂಪು ತಳೆದಿತ್ತು. ಎರಡೂ ದಂಡೆಯ ಗಟ್ಟಿಯಾದ ಮರಗಳಿಗೆ ಸಾಕಷ್ಟು ಎತ್ತರದಲ್ಲಿ ಮೂರು ಬಳ್ಳಿಗಳನ್ನು ಇಂಗ್ಲಿಶಿನ V ಆಕಾರದ ಮೂರು ಕೋನಗಳಲ್ಲಿ ಕಾಣಿಸುವಂತೆ ಬಿಗಿಯಲಾಗಿತ್ತು. ಮತ್ತವುಗಳನ್ನು ಪರಸ್ಪರ ಸಪುರ ಬಳ್ಳಿಗಳಲ್ಲಿ ಹೆಣೆದು ತೂಗುಸೇತುವೆಯನ್ನು ಗಟ್ಟಿಯೂ ಅಪಾಯರಹಿತವೂ ಮಾಡಿದ್ದರು. ಆದರೂ ಅದರ ತೊನೆದಾಟವನ್ನು, ಎಡೆಗಳಿಂದ ಕಾಣುವ ಹುಚ್ಚುಹೊಳೆಯ ಉನ್ಮಾದ ನೋಡುತ್ತ ದಂಡೆ ದಂಡೆ ಮಾಡುವುದು ಎಲ್ಲರಿಗೆ ಸುಲಭದ ಸವಾಲಾಗಲಿಲ್ಲ.

ಬೆಟ್ಟದ ಓರೆಯಲ್ಲಿ, ಬಲವಾದ ಕಾಡಿನ ಮರೆಯಲ್ಲಿ, ತುಸುವೇ ಏರು ಜಾಡಿನಲ್ಲಿ ಸುಮಾರು ಹತ್ತು ಮಿನಿಟು ಏರಿದೆವು. ಬೆತ್ತದ ಮುಳ್ಳ ಸರಿಗೆಗಳನ್ನು ತಪ್ಪಿಸುತ್ತ, ಮರಗಳ ಬೇರಗಟ್ಟೆಯೆಡೆಗಳಲ್ಲಿ ಹಳ್ಳಿಯ ಜಾನುವಾರುಗಳು ರೂಪಿಸಿರಬಹುದಾದ ಸವಕಲು ಜಾಡುಗಳನ್ನು ಆಯ್ದು ಅನುಸರಿಸಿದ್ದೆವು. ದಪ್ಪ ತರಗೆಲೆ, ಉದುರು ಕಡ್ಡಿಗಳ ಹಾಸು ಮಳೆಯೊಡನೆ ಜಾರಿ ಮಾರ್ಗದರ್ಶಿಯ ಪಳಗಿದ ಕಣ್ಣೂ ಸ್ವಲ್ಪ ತಪ್ಪಿರಬೇಕು. ಆದರೆ ನಾವು ಹೆಚ್ಚೇನೂ ದೂರ ಮಾಡದ ತೊರೆಯ ಆರ್ಭಟೆಯಲ್ಲಿ ಮೂಡಿದ ವೈಶಿಷ್ಟ್ಯ ನಮ್ಮನ್ನು ದೂರ ಹೋಗಲು ಬಿಡಲಿಲ್ಲ. ಸ್ವಲ್ಪ ಹಿಂದೆ ಸರಿದು, ನೇರ ಕೊಳ್ಳಕ್ಕೆ ಜಾಡು ಬಿಡಿಸಿದೆವು. ನುಸುಲು ಮಣ್ಣು, ಉರುಳುವ ಕಲ್ಲು, ಬಿಗಿದು ಕೂತ ಬೆತ್ತದ ಪೊದರು ಬೇಧಿಸಿ, ಪ್ರತಿ ಹೆಜ್ಜೆ ಅಳತೆ ಮಾಡಿಟ್ಟಂತೆ ಇಳಿದೆವು. ಭಾರೀ ಹೊಂಡ, ಬಲಕ್ಕೆ ಸಮೀಪದಲ್ಲೇ ಅಷ್ಟೇ ಭಾರೀ ನೀರಮೊತ್ತ ಅಪ್ಪಳಿಸುವ ಸದ್ದು, ಎಲ್ಲ ಅಸ್ಪಷ್ಟ, ಮುಸುಕಿದಂತೆ ಬುಸುಬುಸನೆ ನೀರಹುಡಿ, ಗಾಳಿಯ ತಿರುಗಣಿ ಹಾಕಿ ಸುಳಿಯಾಗಿ ಆವರಿಸುವ ಪರಿಯಲ್ಲಿ ನಮಗೆ ಪ್ರತಿ ಹೆಜ್ಜೆಗೂ ಸಂದೇಹ. ಮೇಲೆಲ್ಲೋ ಕಟ್ಟೆಯೊಡೆದೋ ಬೆಟ್ಟ ಕಳಚಿಯೋ ಮಹಾಪ್ರವಾಹದಂಥ ಒಂದು ಅಸಾಧ್ಯ ಸನ್ನಿವೇಶವೇ ಆಗಿದ್ದರೆ - ಬಿಟ್ಟೋಡುವುದೇ? ಅಥವಾ ಪ್ರಕೃತಿ ತಾಂಡವದ ನಿರಂತರತೆಯಲ್ಲಿ ಒಮ್ಮೆಗೆ ಬೆಟ್ಟದ ಮರೆಯಿಂದ ನುಗ್ಗಿದ ನಮಗೆ ಆಕಸ್ಮಿಕವಾಗಿ ದಕ್ಕಿದ ಬೆರಗೇ - ಇಳಿದು ನೋಡಿಯೇ ಬಿಡುವುದೇ? ಪ್ರತಿ ಹೆಜ್ಜೆಯಲ್ಲಿ ಅನುಮಾನದ ತೂಕ ಇಳಿಸುತ್ತ ಆದರೂ ನೆಲದ ದುರ್ಗಮತೆಗೆ ತಡವರಿಸುತ್ತ ಇಳಿದೇಬಿಟ್ಟೆವು.

ಸುಮಾರು ನೂರಡಿ ವ್ಯಾಸದ ಕಮರಿ ನಮ್ಮ ಬಲಕ್ಕೆ ಅಸ್ಪಷ್ಟವಾಗಿ ತೆರೆದು ಬಿದ್ದಂತಿತ್ತು. ಆವರಣದ ರೇಖೆ ಕಳಚಿ ಲೋಕಪಾವನಿಯಾಗಲು ಹೊರಟ ಸೀತೆ ದಂಡೆಯಲ್ಲಿ ನಾವಿದ್ದೆವು. (ಲಕ್ಷ್ಮಣ ರೇಖೆಯನ್ನುತ್ತರಿಸುವಲ್ಲೇ ಸೀತೆ ವೈಯಕ್ತಿಕತೆ ಕಳೆದುಕೊಂಡು ಲೋಕಶುದ್ಧಿಗೆ ಕಾರಣಳಾಗುವುದು.) ಕಮರಿಯ ಬಲ ಎದುರಂಚಿನಲ್ಲಿ ಜಲಪಾತ ಮೊರೆಯುತ್ತಿತ್ತು. ಸುತ್ತುವರಿದ ದರೆಯ ಓರೆ, ಚಾಚಿಕೊಂಡ ಮರಗಿಡಬಳ್ಳಿ, ಎಲ್ಲಕ್ಕೂ ಮಿಗಿಲಾಗಿ ನೀರಿನದೇ ಕಲ್ಲೋಲದಲ್ಲಿ ನಮಗೆ ಸ್ಪಷ್ಟ ಚಿತ್ರ ದಕ್ಕುತ್ತಿರಲಿಲ್ಲ. ಆದರೆ ನಾವು ನಿಂತಲ್ಲಿ ಹಾದು ಕೂಡ್ಲುತೋಟದತ್ತ ಸಾಗುತ್ತಿದ್ದ ತೊರೆಯ ಸೊಕ್ಕು ಎಚ್ಚರಿಕೆಯನ್ನಂತೂ ಧಾರಾಳ ನೀಡುತ್ತಿತ್ತು. ಅಲ್ಲಿ ತೊರೆಯ ಪಾತ್ರೆ (ಕೂಡ್ಲು ತೋಟದಂತಲ್ಲದೆ) ಸಾಕಷ್ಟು ವಿಸ್ತಾರವೇ ಇತ್ತು. ಕೊರಕಲು, ಅಪಾಯಕಾರಿ ಇಳಿಜಾರೇನೂ ಇಲ್ಲದ ಪಾತ್ರೆಯಲ್ಲಿ ಒಂದಾಳು ಎರಡಾಳು ತಬ್ಬುಗೆಗೆ ಸಿಗುವ ಬಂಡೆಗುಂಡುಗಳೂ ಸಾಕಷ್ಟಿದ್ದವು. ಅವುಗಳನ್ನು ಎಚ್ಚರದಿಂದ ಬಳಸಿ ಎದುರು ದಂಡೆಗೆ ದಾಟಿದ್ದೇ ಆದರೆ ನೇರ ಜಲಪಾತದ ಬುಡಕ್ಕೆ ಜಾಡು ಸಿಕ್ಕೀತೆಂದು ಯೋಜಿಸಿದೆವು.

ಸೀತೆಯನ್ನುತ್ತರಿಸುವ ಹಂತದಲ್ಲಿ ಮಾರ್ಗದರ್ಶಿ ಹಿಂದೆ ಸರಿದು ನಮ್ಮಲ್ಲಿನ ಪರ್ವತಾರೋಹಿ ಜಾಗೃತನಾದ. ನಾವು ಪರ್ವತಾರೋಹಣದ ರಕ್ಷಣಾ ಹಗ್ಗವೊಂದನ್ನು ಒಯ್ದದ್ದು ಅನುಕೂಲಕ್ಕೊದಗಿತು. ಬಲವಾದ ಕಾಡು ದೊಣ್ಣೆಯೊಂದನ್ನು ಸಂಪಾದಿಸಿ, ಮುಂದಾಳು ಸೊಂಟಕ್ಕೆ ಹಗ್ಗದ ಒಂದು ತುದಿ ಕಟ್ಟಿಕೊಂಡು ನೀರಿಗಿಳಿದ. ಹಗ್ಗದ ಉಳಿದ ಉದ್ದವನ್ನು ಹಿಡಿದುಕೊಂಡು ಇನ್ನೊಬ್ಬ ಅನುಭವಿ ದಂಡೆಯ ಗಟ್ಟಿ ಆಧಾರದಲ್ಲಿ ನಿಯಂತ್ರಿಸಲು ಕುಳಿತ. ದೊಣ್ಣೆಯನ್ನು ನೀರಿನ ಮರೆಯಲ್ಲಿದ್ದ ನೆಲದ ಅಂದಾಜು ಮಾಡಿಕೊಳ್ಳಲೂ ಮೊಣಕಾಲಾಳದ ನೀರಿನ ಸೆಳೆತಕ್ಕೆ ದೇಹ ತೊನೆಯುವಾಗ ಊರೆಗೋಲಾಗಿಯೂ ಬಳಸುತ್ತ ಪುಟ್ಟ ಪುಟ್ಟ ಹೆಜ್ಜೆ ಬೆಳೆಸಿದ. ಪ್ರವಾಹದೆಡೆಗೆ ಮುಖಮಾಡಿ, ಅಡ್ಡಡ್ಡ ಹೆಜ್ಜೆಯಿಡುತ್ತ ಮುಂದುವರಿದ. ಅನಿವಾರ್ಯತೆಯಲ್ಲಿ ತೊಡೆಮಟ್ಟದ ಹೊಂಡ ಸಿಕ್ಕಿದ್ದು, ಮಟ್ಟಸ ಬಂಡೆಯ ಮೇಲೇ ಇಟ್ಟ ಹೆಜ್ಜೆ ಜಾರಿ ತಡವರಿಸಿದ್ದು, ಜಲಪಾತದ ಗದ್ದಲದ ಧ್ವನಿ ಮೀರುವಂತೆ ಬೊಬ್ಬೆ ಹೊಡೆಯುತ್ತಿದ್ದ ವೀಕ್ಷಕರ ಸಹಾನುಭೂತಿಯ ಸಲಹೆಗಳನ್ನೆಲ್ಲಾ ಆಯ್ದು ಬಳಸಿಕೊಳ್ಳುತ್ತ ಮೊದಲಾಳು ದಾಟಿಯೇ ಬಿಟ್ಟ. ಅನಂತರ ಎರಡು ದಂಡೆಯಿಂದಲೂ ಬಲಗೊಂಡ ಆಧಾರ ಮತ್ತು ಬಿಟ್ಟಿ ಸಲಹೆಗಳ ಪೂರದಲ್ಲಿ ಇನ್ನೂ ಕೆಲವು ಧೈರ್ಯಸ್ಥರೂ ಅನುಸರಿಸಿದ್ದು ಆಯ್ತು.

ನರಸಿಂಹ ಪರ್ವತದ (೩೭೮೪.ಮಟ್ಟದಿಂದ) ಶಿಖರ ಋಷ್ಯಶೃಂಗ ಮೆಟ್ಟಿದ ನೆಲ. ಸಹಜವಾಗಿ ಅಲ್ಲಿನೊಂದು ನೀರಿನ ಪುಟ್ಟ ಕುಂಡಿಗೆ ಪಂಚಮುಖದಲ್ಲಿ ನಿರಂತರ ಜಲಧಾರೆಯನ್ನು ಹರಿಸುತ್ತಲೇ ಇದೆ, ಎಂದು ಸ್ಥಳಪುರಾಣ ಹೇಳುತ್ತದೆ. ಅದರ ಒಂದು ಧಾರೆಯೇ ನಮ್ಮ ಕೂಡ್ಲು ತೀರ್ಥ ಅಥವಾ ಸಮುದಾಯನಾಮ ಎಂದೂ ಹೇಳಬಹುದಾದ ಸೀತಾನದಿ. ವಾಸ್ತವದಲ್ಲಿ ಭೂಪಟ ನೋಡಿದರೆ ವಾಲಿಕುಂಜ ಶಿಖರದಿಂದ ಪೂರ್ವಕ್ಕೆ ಹೊರಳಿಕೊಂಡ ಪಶ್ಚಿಮಘಟ್ಟದ ಮುಖ್ಯ ಶ್ರೇಣಿ ಮಾಣಿಕ್ಯ ಬೆಟ್ಟದಿಂದ (? ಭೂಪಟದ ನಮೂದು Manakkibelara - ಮಣಕ್ಕಿಬೆಳರ) ಅಪ್ಪಟ ಕಾಡಝರಿಯೊಂದು ಪಶ್ಚಿಮಮುಖಿಯಾಗಿ ಪ್ರಯಾಣಕ್ಕಿಳಿದದ್ದು ಕಾಣುತ್ತೇವೆ. ಹರಟೆಕಾನ ಎಂಬ ದುರ್ಗಮ ಕೊಳ್ಳದೊಳಗಂತೂ ಇದರದು ಸಹಸ್ರಪದಿಯದೇ ರೂಪ ಮತ್ತು ನಡೆ; ಉದ್ದಕ್ಕು ಹೀಗೂ ಹಾಗೂ ನುಲಿದಿದೆ, ಪ್ರತಿ ತಿರುವಿನಲ್ಲೂ ಕಿರುತೊರೆಯೊಂದನ್ನು (ಕನಿಷ್ಠ ಅರವತ್ತನ್ನು ನಕ್ಷೆಯೇ ದಾಖಲಿಸುತ್ತದೆ!) ಸೇರಿಸಿಕೊಳ್ಳುತ್ತಲೇ ನಡೆದಿದೆ. ಮೊತ್ತ ಕೂಡ್ಲುತೋಟದ ಬಳಿಯಲ್ಲಿ ಕೊನೆಯ ಬೀಳು ಎಂಬಂತೆ ಧುಮುಕುವ ಸುಮಾರು ೩೮೧ ಅಡಿ ಎತ್ತರವೇ ನಮ್ಮ ಲೆಕ್ಕಕ್ಕೆ ಕೂಡ್ಲು ಅಬ್ಬಿ. ನಮ್ಮ ಮಳೆಗಾಲದ ಪ್ರಥಮ ದರ್ಶನದಲ್ಲಿ ಪ್ರಳಯ ದರ್ಶನವೇ ಸರಿ. ಅಬ್ಬಿಯ ನೇರ ಬೀಳಿನ ಸ್ಪಷ್ಟ ಚಿತ್ರವಾಗಲೀ ಸಾಮೀಪ್ಯವಾಗಲೇ ಅಂದು ಯೋಚಿಸುವುದೂ ಸಾಧ್ಯವಿರಲಿಲ್ಲ. ಸೀರ್ಪನಿಗಳ ಅಲೆಯಲೆಯೋ ಮಳೆಯದೇ ಉತ್ಪಾತವೋ ಎಂದು ಗುರುತಿಸಲಾಗದ ಅವಸ್ಥೆಯಿದ್ದರೂ ಹರಿನೀರು ಮಾತ್ರ ಹಲವು ಮರಳ ದಿಬ್ಬಗಳ ಹಾಸಿನ ಕವಲುಗಳಲ್ಲಿ ಹಂಚಿ ನಿರಪಾಯವಾಗಿತ್ತು. ಸರಿಯಾಗಿ ಕಣ್ಣೂ ಅರಳಿಸಿ ನೋಡಲಾಗದ ಸ್ಥಿತಿಯಲ್ಲಿ ಕ್ಯಾಮರವೂ ಇಲ್ಲ, ಹೆಚ್ಚು ಹೊತ್ತು ಕಳೆಯುವುದರಲ್ಲೂ ಅರ್ಥ ಇಲ್ಲ ಎಂದು ಬೇಗನೆ ಮೊದಲ ದಂಡೆಗೇ ಮರಳಿದೆವು. ಇದ್ದುದರಲ್ಲಿ ಜಿಗಣೆ ಮುಕ್ತವಾದ ಬಂಡೆಗಳನ್ನು ಆಯ್ದು ಕುಳಿತು ಬುತ್ತಿಯೂಟ ಬಿಚ್ಚಿದೆವು. ನಮ್ಮ ನುಗ್ಗುನುರಿ ನಡಿಗೆ, ಚರ್ಮದಾಳಕ್ಕೂ ಇಳಿದ ಮಳೆಯ ಕೊಡುಗೆಯಲ್ಲಿ ಹೊಟೆಲ್ ಪ್ಯಾಕುಗಳು (ಗಮನಿಸಿ - ಪ್ಲ್ಯಾಸ್ಟಿಕ್ ಅಂದು ಧಾರಾಳವಾಗಿರಲಿಲ್ಲ. ಹೊಟೆಲಿನ ಬಡಪಾಯಿಗಳು ಬಾಳೆಯೆಲೆ, ಪತ್ರಿಕೆಗಳ ಹಾಳೆಗೆ ಬಳಸಿದ್ದರು) ಆವರಣದೊಡನೆ ಅವಿನಾಬೇಧ ಸ್ಥಾಪಿಸಿ ತಿಂದದ್ದು ದೋಸೆ ಚೂರೋ ಬಾಳೆಲೆ ತುಣುಕೋ ಚಪ್ಪರಿಸಿದ್ದು ಪಲ್ಯದ ನೀರುಳ್ಳಿ ಎಸಳೋ ಉದಯವಾಣಿಯ ಹೆಡ್ ಲೈನ್ಸೋ ಎಂದು ಯೋಚಿಸಲೇ ಇಲ್ಲ. ಒದ್ದೆ, ಚಳಿ, ಶ್ರಮವೆಲ್ಲ ಒತ್ತರಿಸಿ ಧುಮುಗುಡುತ್ತಿದ್ದ ಜಥರಾಗ್ನಿಗೆ ಅಂದು ಅಕಸ್ಮಾತ್ ಹೊಳೆಪಾತ್ರೆಯ ಒಂದೆರಡು ಕಲ್ಲ ಹರಳು ಸೇರಿದ್ದರೂ ನಾವು ಜಗಿದು ಜೀರ್ಣಿಸುತ್ತಿದ್ದೆವು ಖಂಡಿತ!

ಬುತ್ತಿ ಮುಗಿಸಿ ಕೈ ತೊಳೆಯುತ್ತಿದ್ದ ಪ್ರಕಾಶನಿಗೆ ಅಂದು ನೀರಿನಾಳದಲ್ಲಿ ಅಗಾಧ ಗಾತ್ರದ ಏಡಿ ಕಾಣಿಸಿತ್ತು. ಪುಣ್ಯಾತ್ಮ ಅದನ್ನಲ್ಲಿಗೆ ಬಿಡದೆ ಕಾಡುಕೋಲೊಂದರಲ್ಲಿ ಒತ್ತಿಟ್ಟು, ಅದರ ಕೊಂಬಿಗೆಟುಕದಂತೆ ಕೈ ಹಾಕಿ ನೀರಿನಿಂದ ಹೊರಗೆತ್ತಿ ಹಿಡಿದೂ ಪ್ರದರ್ಶಿಸಿದ್ದ. ಮುಂದುವರಿದು ಎಲ್ಲರ ಅರಿವಿಗೆ ಬರುವ ಮೊದಲು ಲೋಕಹಿತಾರ್ಥ’ (“ಇಲ್ದೇ ಹೋದ್ರೆ ಅದು ನಮ್ಕಾಲ್ ಬೆರಳೇನಾದ್ರೂ ಹಿಡಿದುಬುಡ್ತೂಂದ್ರೆ ಬೆರಳೇ ಕಟ್ ಮಾಡ್ಬೇಕೂ ಸಾರ್ಪ್ರಕಾಶನ ನ್ಯಾಯ) ಅದರ ಎರಡೂ ಕೊಂಬುಗಳನ್ನು ಮುರಿದು ಚೆಲ್ಲಿದ್ದು ನೆನೆಸಿದರೆ ಇಂದಿಗೂ ನನಗೆ ಮನಸ್ಸು ಭಾರವಾಗುತ್ತದೆ. [ಮೊನ್ನೆಯಷ್ಟೇ ಇಲ್ಲಿನ ವಿವಿನಿಲಯ ಕಾಲೇಜಿನಲ್ಲಿ ಎರಡು ದಿನಗಳ ಗೋಷ್ಠಿ - ಕಲೆ ಹಾಗೂ ಹಿಂಸೆ, ಇದರ ಆಶಯ ಭಾಷಣ ನಾನು ಕೇಳಿದ್ದೆ. ಯು.ಆರ್ ಅನಂತಮೂರ್ತಿ ಕಲೆ/ಸಾಹಿತ್ಯ ಹಿಂಸೆಯನ್ನು ಬರಿದೇ ವರದಿ ಮಾಡುವುದಲ್ಲ ಜೀರ್ಣಿಸಿಕೊಳ್ಳುತ್ತದೆ ಎಂದರು. ಬಡಪಾಯಿ ಏಡಿಯ ಮೇಲಾದ ದೌರ್ಜನ್ಯಕ್ಕೆ ಮಾತ್ರ ನನ್ನ ಸಾಹಿತ್ಯದಲ್ಲೂ ಸಮಾಧಾನ ಸಿಗದು ಎಂದೇ ನನ್ನೆಣಿಕೆ]

ಕೂಡ್ಲು ತೋಟಕ್ಕೆ ಇಳಿನಡಿಗೆಯಲ್ಲಿ ನಮಗೆ ಉರಗದರ್ಶನವಾಯ್ತು. ಅಧ್ಯಯನದ ಆವಶ್ಯಕತೆಗಾಗಿ ಕಂದೊಡಿಯ ಒಳ್ಳೇ ಮಾದರಿ ಅದು ಎಂದೇ ನಮ್ಮಲ್ಲಿದ್ದ ಉರಗತಜ್ಞ ಸೂರ್ಯ ಗುರುತಿಸಿದ. ಮತ್ತೆ ಬಿಡುವುದುಂಟೇಸಿಕ್ಕ ಕಾಡುಕೋಲಿನಲ್ಲೇ ಅದರ ತಲೆ ಅಮರಿಸಿ, ಹುಶಾರಿನಿಂದ ಕೈಗೆತ್ತಿಕೊಂಡು, ಖಾಲಿಯಾಗಿದ್ದ ತನ್ನ ಊಟದ ಪಾತ್ರೆಯೊಳ ಸೇರಿಸಿಬಿಟ್ಟ. ಇಂದಿನ ಬೆಳಕಿನಲ್ಲಿ ಅಂದಿನ ಕಲಾಪವೂ ಪೂರ್ತಿ ಸಮರ್ಥಿಸುವ ಹಾಗಿರಲಿಲ್ಲ. ಶೀತಲ ರಕ್ತ ಜೀವಿಯಾದ್ದಕ್ಕೆ ಮಳೆ, ಚಳಿಯಲ್ಲಿ ಹಾವು ತುಂಬಾ ಜಡವಿದ್ದುದರಿಂದ ಅಂದು ಸೂರ್ಯ ಬಚಾವಾದ ಎಂದೇ ಅನಿಸುತ್ತದೆ. ಅದನ್ನು ಕೈಯಲ್ಲಿ ಹಿಡಿದಾಗ, ಎರಡು ಸ್ವತಂತ್ರ ಚಪ್ಪಟೆ ಮುಚ್ಚಳಗಳಂತಿದ್ದ ಆತನ ಬುತ್ತಿಪಾತ್ರೆಗೆ ವರ್ಗಾಯಿಸಿದಾಗ, ಅವಸರದಲ್ಲಿ ಎರಡು ಪಾನೆಗಳನ್ನು ಮುಚ್ಚಿದ್ದರಿಂದ ಎಡೆಯಲ್ಲಿ ಹಾವು ಸಿಕ್ಕಿ ಗಾಯಾಳುವಾಯ್ತೇ ಎಂದು ತನಿಖೆ ಮಾಡಿದ ಕ್ರಮದಲ್ಲೆಲ್ಲೂ ಆತ ವಿಷ ದಂಷ್ಟ್ರನಕ್ಕೆ ಸಿಕ್ಕಬಹುದಿತ್ತು. ಹಾಗಾಗಿದ್ದರೆ ಜೊತೆಗೊಟ್ಟ ನಮ್ಮಲ್ಲಿ ಯಾವ ತುರ್ತು ಚಿಕಿತ್ಸೆಯಾಗಲೀ ಆತನನ್ನು ಸೂಕ್ತ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆಯಾಗಲೀ ಇರಲಿಲ್ಲ! ಹೌದು, ಅಂದು ಹೀಗೆಲ್ಲಾ ಯೋಚಿಸುವುದೇ ಇದ್ದಿದ್ದರೆ ಇಷ್ಟಾದರೂ ಸಾಹಸಸಾಧ್ಯವೇ ಆಗುತ್ತಿರಲಿಲ್ಲವೋ ಏನೋ! ಉಳಿದಂತೆ ನಾವು ಕಡಿಯದ ಮಳೆ ಹೊಡೆತದಲ್ಲಿ, ಇಳಿಯದ ಹೊಳೆಗಳಬ್ಬರದಲ್ಲೂ ಏನೂ ಹೊಸತಿಲ್ಲ ಎಂಬ ನಿರ್ಭಾವ ಹೇರಿಕೊಂಡು, (ಇಲ್ಲವಾದರೆ ಮಂದ ಬೆಳಕಿನ ಹಗಲಿಗೂ ನಾವು ಎರವಾಗಬೇಕಾಗುತ್ತಿತ್ತು) ಯಾಂತ್ರಿಕವಾಗಿ ತಿಂಗಳೆಗೂ ಮಂಗಳೂರಿಗೂ ಮರಳಿದೆವು.

ಅನಂತರ ಮಳೆ ಕಳೆದ ಹಲವು ಕಾಲಗಳಲ್ಲಿ ನಾನು ಹಲವು ತಂಡಗಳೊಡನೆ ಕೂಡ್ಲು ತೀರ್ಥಕ್ಕೆ ಭೇಟಿ ಕೊಟ್ಟದ್ದುಂಟು. ಆಗೆಲ್ಲಾ ಬೈಕ್, ಸ್ಕೂಟರ್ಗಳನ್ನು ಹೊಳೆ ದಾಟಿಸುವ ಪ್ರಯತ್ನಗಳಲ್ಲಿ ಸೋತು ನೀರು ಕುಡಿದವರ ಕತೆ, ಕಲ್ಲೆದ್ದ ದಾರಿಯಲ್ಲಿ ಜೋಡಿ ಸವಾರಿ ಕಳಚಿಯೂ ಜಾರಿ ಬಿದ್ದವರ ಕತೆ, ಕೂಡ್ಲು ತೋಟದಲ್ಲಿ ಹೆಲ್ಮೆಟ್, ಪೆಟ್ರೋಲ್ ಕಳೆದುಕೊಂಡವರ (ಹೌದು, ನಾಗರಿಕತೆ ಅಲ್ಲಿಗೂ ವ್ಯಾಪಿಸಿ ಕಳ್ಳತನವೇ ಆಗಿತ್ತು) ಕತೆ, ಚಕ್ರ ತೂತುಬಿದ್ದೋ ಯಂತ್ರ ಕೈಕೊಟ್ಟೋ ಹೆಬ್ರಿಯ ದೂರಕ್ಕೆ ಹೆಣಗಿದವರ ಕತೆ, ಮೊದಲೇ ಹೇಳಿದಂತೆ ಎರಡೂ ಮುಖ್ಯ ಹೊಳೆಗಳಿಗೆ  ಕಾಂಕ್ರೀಟ್ ಕಾಲು ಸೇತುವೆ ಬಂದ ಕತೆ, ಅರಣ್ಯ ಇಲಾಖೆ ಪ್ರವಾಸೋದ್ಯಮದ ಹುಚ್ಚು ಹಿಡಿಸಿಕೊಂಡ ಕತೆ ಇತ್ಯಾದಿ ವಿಸ್ತರಿಸ ಹೊರಟರೆ ನನ್ನ ಕಣಜ ಹಿಂಗದು, ಆದರೆ ನಿಮ್ಮ ತಾಳ್ಮೆ ತಪ್ಪುವುದು ಖಂಡಿತ ಎನ್ನುವುದಕ್ಕೆ ಇಂದು ಮಂಗಳ ಹಾಡುತ್ತೇನೆ.

7 comments:

 1. ಕೂಡ್ಲು ತೋಟದಲ್ಲಿ ಹೆಲ್ಮೆಟ್, ಪೆಟ್ರೋಲ್ ಕಳೆದುಕೊಂಡವರ (ಹೌದು, ನಾಗರಿಕತೆ ಅಲ್ಲಿಗೂ ವ್ಯಾಪಿಸಿ ಕಳ್ಳತನವೇ ಆಗಿತ್ತು)- ಈ ವಾಕ್ಯ ಓದಿ, ಶ್ರೀ ಕೃಷ್ಣನ ಕಾಲದಿಂದಲೂ
  ನಮ್ಮಲ್ಲಿ ಚೋರತನ ಇತ್ತೆಂದು ಸಂತೋಷ ಪಟ್ಟೆ. - ಪೆಜತ್ತಾಯ ಎಸ್. ಎಮ್.

  ReplyDelete
 2. Dear Ashokavardhan, Vandemataram.
  Your reference to the River Seetha. Soorgoli is a village near Belve in Kundapur Taluk on the right bank of Seetha. It as associated with Anthu, a notorious thief/robber. It is said that he used announce in advance his plunder. Once he warned a Goldsmith family that he would get away with the big raw Plantain bunch that was due to ripe in a few days and fixed the date and time. Time was wee hours of the morning. The family threw a challenge and arranged an YAKSHANGANA and established a connection through ropes with the bunch and the Bhagavatha, Mrudangist, Chandevadaka and a couple of more artists. There was a huge sound in the well at the appointed time. It was thought that some one had fallen into the well. None bothered about plantain bunch and were engaged in searching the well. Later it transpired that Anthu threw a big stone into the well and when none was in a mood to safeguard the plantain bunch, he got away with it. So many stories ad anecdotes were woven around him. Kukkehalli Koraji and Kuradi Kedi Subba were his contemporaries. All the three on the banks of the holy Seetha.
  Here are a couple of paras from my study of the Thungabhadramma.
  Each place has its own history and epic. Nadnini and Nalini, along with Sita rise at the Narasimha Parvatha. Jayachamaraja (IX) Wodeyar the Maharaja of Mysore (1868-1894) is said to have climbed the Narasimha Paravatha. As a mark of his visit to the place his second son was named Sri Kanthanarasimharaja. It was quite possible as the Maharaja inaugurated the bridge across the Tunga at Hariharapura near the Hills in 1891. I was born in Kurdai. You had seen it. It is on the bank on the right (Northern) Bank of the River Seethamma. I now live in Kurnool on the right bank (Southern) bank of the Thungabhadramma. So I have not given up my originality. As you know Netravathi rises in Gangamoola in the company of Tunga and Bhadra. Mangaloreans also have associations with the Thungabhadramma. Veerasaiva chant the names of the chappanna (56)deshas and Nadis in their Sankalpa at the time of the Marriage. Rivers Netravathi and Seetha are among them.
  We visitied Rhushyasrunga Temple at Kigga in July, 2007. It was raining cats and gods. Due to unfabourable weather conditions, we were advised against visiting the Panoramic Sirimane Falls, just eight k.m. away. It was a timely advice. It rained so much that we could not return in the straight route, flood water has blocked all the routes to Sringeri. It must have rained about 15" on that day. My record was drowned in the 2009 Tunghabhdara floods.

  ReplyDelete
 3. Want to know about that map ! who did it ?appears that british work.

  ReplyDelete
 4. ಜಿ.ಎನ್.ಅಶೋಕವರ್ಧನ11 January, 2013 16:14

  ಶ್ರೀಹರ್ಷರೇ ನನ್ನ ಹಿಂದಿನ ಕಥನದಲ್ಲಿ ಈ ನಕ್ಷೆಗಳನ್ನು ಸಂಪಾದಿಸಿದ ಕಥೆ ಹೇಳಿದ್ದೇನೆ ಗಮನಿಸಿ - http://www.athreebook.com/2010/12/blog-post_30.html#more ಸರ್ವೇಕ್ಷಣ ನದೆಸಿದವರು ನಿಸ್ಸಂದೇಹವಾಗಿ ಬ್ರಿಟಿಷರು, ಇಂದು ಉತ್ತರಾಧಿಕಾರಿಗಳು ಭಾರತೀಯ ಸರ್ವೇಕ್ಷಣ ಇಲಾಖೆ
  ಅಶೋಕವರ್ಧನ

  ReplyDelete
 5. I remember first time I had been to koodlu theertha with you around 20 years back. At that time the pollution done by human were in control. Last week i had to koodlu. The road is so widened, & onle is 2 kms treck is enough to reach. Now we can see pollution is a part of nature. we donot find any difference between nature and pollution.

  ReplyDelete
 6. ಮಾನ್ಯ ಕಲ್ಕೂರರು ತಿಳಿಸಿರುವ ಇತಿಹಾಸದ ಘಟನೆ, ಮೈಸೂರರಸ ನರಸಿ೦ಹ ಪರ್ವತ ಆರೋಹಣ ಮಾಡಿದ ವಿಷಯ ಎಲ್ಲೋ ಓದಿದ ನೆನಪಾಯಿತು, ಬಹುಶಃ, ಪೆಜತ್ತಾಯರ ಬರವಣಿಗೆಯಲ್ಲಿ ಆ ಆರೋಹಣ ಯಾತ್ರೆಗೆ ಅರಸರಿಗೆ ಸಹಕರಿಸಿದ ಹಳೆತಲೆಮಾರಿನ ಮಾನ್ಯ ಹೆಬ್ಬಾರರ ಕುರಿತ ವಿವರಣೆ ಬ೦ದಿತ್ತು, ಪೆಜತ್ತಾಯರು ಕೊ೦ಡಿ ಕಳಿಸುತ್ತೀರಾ ?

  ReplyDelete
 7. ಎಸ್.ಎಂ ಪೆಜತ್ತಾಯ18 January, 2013 20:27

  ನನ್ನ ಶ್ರೀರಂಗ ಹೆಬ್ಬಾರರ ಬಗೆಗಿನ ಲೇಖನದ ಕೊಂಡಿ ಇಲ್ಲಿದೆ.
  http://kendasampige.com/article.php?id=5124
  ನಾನು ಕೇಳಿದ ಕಥೆ ಸುಮಾರು ೧೯೧೦ನೇ ಇಸವಿಯಲ್ಲಿ ಹುಟ್ಟಿ ಬೆಳೆದ ನನ್ನ ಅತ್ತೆ ಶ್ರೀಮತಿ ನರಸಮ್ಮ ರಘುಪತಿ ಹೆಬ್ಬಾರ್ ಅವರ ಬಾಯಿಂದ ಕೇಳಿದ ಕಥೆ. ನಾನು ಬರೆದ ಲೇಖನ ಹಾಗೂ ಕಳಸದ ಊರ ಹಿರಿಯರಿಂದಕೇಳಿದ ಕಥೆಗಳು - ಇವಕ್ಕೆ ಎಲ್ಲಾ ಕಥೆಗಳಿಗೂ ಸಾಮ್ಯ ಇದ್ದುದರಿಂದ ರಾಜಾ ರಂಗ ಹೆಬ್ಬಾರರ ಬಗ್ಗೆ ಬರೆದೆ.
  ಇದಕ್ಕಿಂತ ಹೆಚ್ಚಿಗೆ ನಾನು ಅರಿಯೆ.

  ReplyDelete