07 December 2012

ಶತಾವಧಾನ ನೂರ್ಮಡಿ ಬೆರಗು!


ಶತಾವಧಾನಿ ರಾ. ಗಣೇಶ ತುಂಬುಗನ್ನಡದ ಶತಾವಧಾನ ನಡೆಸುತ್ತಿದ್ದಾರೆ (ಬೆಂಗಳೂರು, ನವೆಂಬರ್ ೩೦ ಮತ್ತು ಡಿಸೆಂಬರ್ , , ೨೦೧೨) ಎಂಬ ಸುದ್ದಿ ಸಿಕ್ಕಿದ್ದೇ ನನ್ನ ನೆನಪುಗಳ ಕಡತ ಬಿಚ್ಚಿಕೊಂಡಿತು. ಬೆಂಗಳೂರಿನ ಸರಕಾರೀ ಕಾಲೇಜಿನಲ್ಲಿ ತಂದೆ (ಜಿಟಿನಾ) ಅಧ್ಯಾಪಕರಾಗಿದ್ದಾಗ (೧೯೬೭-೬೮ರ ಸುಮಾರಿಗೆ),  ಅಲ್ಲಿಗೆ ಯಾರೋ ತೆಲುಗರು ಬಂದು ಅಷ್ಟಾವಧಾನ ಎಂಬೊಂದು ಸಾಹಿತ್ಯಕ ಅದ್ಭುತ ನಡೆಸಿದ್ದರಂತೆ. ಅದರ ವಿವರಗಳನ್ನು ತಂದೆ ಹೇಳುವುದು ಕೇಳಿ ಕಟ್ಟಿಕೊಂಡ ಬೆರಗೇ ಮೊದಲ ನೆನಪು. (ನಾನು ಆಗ ಪ್ರೌಢಶಾಲಾ ವಿದ್ಯಾರ್ಥಿಯಿದ್ದಿರಬೇಕು.)

ಅವಿಭಕ್ತ ದಕ ಜಿಲ್ಲೆಯ ಸಾಂಸ್ಕೃತಿಕ ಅಧ್ವರ್ಯು ಎಂದೇ ನೆಗಳ್ತೆವೆತ್ತ ಕುಶಿ ಹರಿದಾಸ ಭಟ್ಟರು ದೂರದರ್ಶನದಲ್ಲಿ ಅದ್ಯಾರೋ ಗಣೇಶ ಎನ್ನುವ ಹುಡುಗ ನಡೆಸಿದ ಅಷ್ಟಾವಧಾನವನ್ನು ಆಕಸ್ಮಿಕವಾಗಿ ಕಂಡರಂತೆ. ಗುಣಪಕ್ಷಪಾತಿಯಾದ ಕುಶಿ ಸಹಜವಾಗಿ ಅದಕ್ಕೆ ಮಾರುಹೋಗಿ, ಯಾರುಯಾರನ್ನೆಲ್ಲಾ ಸಂಪರ್ಕಿಸಿ, ಇವರ ಕಾಲೇಜಿನಲ್ಲಿ ಒಂದು ಅಷ್ಟಾವಧಾನ ವ್ಯವಸ್ಥೆ ಮಾಡಿಸಿಯೇಬಿಟ್ಟರು (--೧೯೯೧). ಅದು ಮಳೆಗಾಲದ ದಿನ. ಕಲಾಪವೋ ಛಂದಸ್ಸು, ಕಾವ್ಯ, ಸಂಸ್ಕೃತ, ಹಳಗನ್ನಡ ಎಂದಿತ್ಯಾದಿ ಘನಘೋರ. ಜನ ಬಾರರು ಎಂಬ ಸಂಶಯದಲ್ಲೇ ಅವರು ದೊಡ್ಡ ರವೀಂದ್ರ ಮಂಟಪ ಬಿಟ್ಟು, ಹಿಂದಿನ ಸಣ್ಣ ಸಭಾಭವನದಲ್ಲಿ ಕುರ್ಚಿ ಜೋಡಿಸಿದ್ದರು. ಮತ್ತೆ ಮಾಮೂಲಿನಂತಲ್ಲದೆ ಸಿಕ್ಕವರಿಗೆ, ನೆನಪಾದವರಿಗೆಲ್ಲಾ ಹೇಳಿಕೆಗಳಾಗಿತ್ತು. ಆಗ ನಾನು ಮಂಗಳೂರಿನಲ್ಲಿ ನೆಲೆಸಿದ್ದೆ. ನನ್ನಪ್ಪನ ಪುಣ್ಯಕ್ಕೆ ಎನ್ನುವಂತೆ, ಕುಶಿಯವರಿಗೆ ನನ್ನ ನೆನಪಾಗಿ, ದೂರವಾಣಿಸಿ ಆಹ್ವಾನಿಸಿದರು. [ನಾನು ಯಾವ ಸೀಮೆ ಸರದಾರನೂ ಅಲ್ಲ. ಕುಶಿಯವರ ಕ್ರಮವೇ ಹಾಗೆ, ತನಗೆ ಒಳ್ಳೇದು ಎಂದು ಕಂಡದ್ದನ್ನೆಲ್ಲ ತನ್ನ ಸಮಾಜಕ್ಕೆ ಹಂಚಬೇಕು, ಕನಿಷ್ಠ ಹತ್ತು ಜನರಲ್ಲಾದರೂ ಹೇಳಬೇಕು ಎಂಬ ಅದಮ್ಯ ಉತ್ಸಾಹ. ಇದಕ್ಕೊಂದು ಸಣ್ಣ ಉದಾಹರಣೆ: ನನ್ನ ಪುಸ್ತಕ ಮಾರಾಟ ಹೋರಾಟ ಬಂದ ಹೊಸತರಲ್ಲೇ ಅವರು ಅದನ್ನು ಓದಲು ಕೈಗೆತ್ತಿಕೊಂಡಿದ್ದರು. ಅವರ ಓದು ಮುಂದುವರಿದಂತೆ ಎಂಟು ಹತ್ತು ಪುಟಕ್ಕೊಮ್ಮೆ ಎನ್ನುವಂತೆ ನನಗೆ ದೂರವಾಣಿಸುತ್ತಿದ್ದರು. ಪುಸ್ತಕದ ಯಾವ್ಯಾವುದೋ ಉಲ್ಲೇಖ ಹಿಡಿದು, ವ್ಯಾಖ್ಯಾನಿಸಿ ಸಂತೋಷ ಹಂಚಿಕೊಳ್ಳುತ್ತಿದ್ದರು. ಮತ್ತವರ ಮೊಮ್ಮಗಳ ಬಳಿ ನನ್ನ ಪುಸ್ತಕದ ಚಿತ್ರವೊಂದನ್ನು ಬರೆಸಿ ಸೇರಿಸಿ, ಸ್ವತಃ ತಮ್ಮ ಉದಯವಾಣಿಯ ಅಂಕಣ - ಲೋಕಾಭಿರಾಮದಲ್ಲಿ, ಬಹು ವಿವರಗಳಲ್ಲಿ ಹೊಗಳಿ ಹರಸಿದರು. ಕ್ರಮ ನಾನು ಇನ್ನೆಲ್ಲೂ ಕಂಡಿಲ್ಲ, ಕೇಳಿಲ್ಲ.]


ಅಂದು ಉಡುಪಿಯಲ್ಲಿ ನಾನು ಕಂಡದ್ದೇನು? ಸಾಹಿತ್ಯ ಸಂಗೀತಗಳ, ಕನ್ನಡ ಸಂಸ್ಕೃತಗಳ ಮೂರ್ತಿವೆತ್ತ ರೂಪಗಳೇ ಆದ (ಹಿರಿಯರೂ ಆದ) ರಾಜಗೋಪಾಲಾಚಾರ್ಯರು, ರಾಮದಾಸ್, ಎಚ್.ವಿ ನರಸಿಂಹಮೂರ್ತಿ, ನಿಟಿಲಾಪುರ ಕೃಷ್ಣ ಮೂರ್ತಿ, ಕಟ್ಟೆ ವಾದಿರಾಜಾಚಾರ್ಯ, ಎಚ್ ನಿರಂಜನರ ವಿದ್ವತ್ ವರ್ಗ ಆಯುಧ ಝಳಪಿಸಿದ್ದರು. ಹಿರಿಯ ಭಾಗವತ ನೀಲಾವರ ಲಕ್ಷ್ಮೀನಾರಾಯಣಯ್ಯ ಮತ್ತು ಖ್ಯಾತ ಹನಿ/ಹಾಸ್ಯ ಸಾಹಿತಿ ಡುಂಡಿರಾಜ್ ಇವರೂ ಎಂಟರ ಜಂಟಿಯಲ್ಲಿ ತಮ್ಮದೇ ವರಸೆಯಲ್ಲಿ ಅವಧಾನಿಯನ್ನು ಕಟ್ಟಿಹಾಕಲು ಸಿದ್ಧರಾಗಿ ಕುಳಿತಿದ್ದರು! ಇವರ ನಡುವೆ ಕನಿಷ್ಠ ತೋರಿಕೆಗಾದರೂ ಭರ್ಜರಿ ದೇಹ, ಗಂಭೀರ ಧ್ವನಿ, ಆಡಂಬರದ ವೇಷಭೂಷಣ ಏನೂ ಇಲ್ಲದ ಇಪ್ಪತ್ತೆಂತರ ತರುಣ - ಅವಧಾನಿ ರಾ. ಗಣೇಶ್, ಅಕ್ಷರಶಃ ಸಿಕ್ಕಿಬಿದ್ದಂತಿತ್ತು! ಕಲಾಪ ತೊಡಗಿದ ಮೊದಮೊದಲು (ನಮ್ಮೂರಿನ ವಾತಾವರಣದ ಮಹಿಮೆ, ಸಭಾಭವನದ ಮಿತಿ, ಮೈಕಿನ ಕೊರತೆಗಳಲ್ಲಿ) ಅವಧಾನಿ ಆಗಾಗ ಬೆವರೊರೆಸಿಕೊಳ್ಳುತ್ತಾ ನೀರು ಕುಡಿಯುತ್ತಾ ಕೆಲವೊಮ್ಮೆ ಸವಾಲುಗಳನ್ನು ಪುನರಪಿ ಕೇಳುತ್ತಿದ್ದಾಗ, ನನಗಂತೂ ಅನುಕಂಪ ಮಡುಗಟ್ಟಿತ್ತು. ಆದರೆ ಸುಮಾರು ಎರಡೂವರೆ ಗಂಟೆಗಳ ಕಾರ್ಯಕ್ರಮ ಮುಗಿದಾಗ ಪೃಚ್ಛಕರೆಂಟೇನು ಸಭೆಯ ನೂರೆಂಟನ್ನೂ ಎಳೆದು ಹಾಕಿಕೊಂಡು ಗಣೇಶರು ಲೀಲಾಜಾಲವಾಗಿ ಅವಧಾನ ಪೂರ್ಣಗೊಳಿಸಿದ್ದರು; ಕಾಡಕಪಿ ಹೋಗಿ, ಅಶೋಕವನದ ಆಂಜನೇಯ ನಿಂತಿದ್ದ! ಅನಂತರದ ದಿನಗಳಲ್ಲಿ ಗಣೇಶರು ಬಹುವಿಧದ ಅವಧಾನಗಳನ್ನು ಯಶಸ್ವಿಗೊಳಿಸಿದ್ದಲ್ಲದೆ, ಕೆಲವು ಶತಾವಧಾನಗಳನ್ನೂ ಚಂದಗಾಣಿಸಿದ್ದಾರೆ. ಅವರು ಇಂದು ಶತಾವಧಾನವೇನು ಸಹಸ್ರಾವಧಾನ ನಡೆಸುತ್ತೇನೆಂದರೂ ಯಾರೂ ಒಪ್ಪಲೇಬೇಕು. ಇಂದು ನಿಜವಾದ ಸಮಸ್ಯೆ ಅಷ್ಟು ಸವಾಲುಗಳನ್ನು ಅವರಿಗೆ ಒಡ್ಡುವವರು ಯಾರು? ಇನ್ನೂ ದೊಡ್ಡದು ರಸಿಕರದ್ದು; ಎಂಟನ್ನೇ ಪೂರ್ಣ ಗ್ರಹಿಸಲಾಗದ ಸಾಮಾನ್ಯಮತಿಗಳು ನೂರು ಸಾವಿರವನ್ನು ತುಂಬಿಕೊಳ್ಳುವುದೆಲ್ಲಿ?

ಉಡುಪಿಯ ನನ್ನ ಬೆರಗಿಗೆ ಮಿತಿಯಿರಲಿಲ್ಲ. ಬುದ್ಧಿ ಸಾಹಿತ್ಯಗಳ ಕಸರತ್ತು - ಅಷ್ಟಾವಧಾನ ಎಂದು ನನಗೆ ನಿಲುಕಿದ್ದನ್ನು ಅಂದೇ (೩೦--೧೯೯೧) ಮಂಗಳೂರು ಮಿತ್ರದಲ್ಲಿ ಲೇಖನವಾಗಿ ಬರೆದುಕೊಂಡೆ. ಸಾಲದ್ದಕ್ಕೆ (ಕುಶಿಯವರ ಸಹವಾಸ ದೋಷದಿಂದ) ಮಂಗಳೂರಲ್ಲೂ ಒಂದು ಅಷ್ಟಾವಧಾನ ನಡೆಸಲೇಬೇಕೆಂದು ತೀವ್ರವಾಗಿ ತೊಡಗಿಕೊಂಡೆ. ಕುಶಿ ಹರಿದಾಸ ಭಟ್ಟರು ಅವಧಾನಿ ಮತ್ತು ಅವಧಾನದ ಎಲ್ಲಕ್ಕೂ ನೆಚ್ಚಬಹುದಾದ ಏಕೈಕ ವ್ಯಕ್ತಿ ಎಂದೇ ಕೇವಲ ಹೆಸರು ಮತ್ತು ಬೆಂಗಳೂರಿನ ವಿಳಾಸದ ಮೂಲಕ ಪರಿಚಯಿಸಿದ್ದು - ಕೆ.ಪಿ. ರಾಯರನ್ನು. (ಕೆ.ಪಿ ರಾವ್ ಎಂಬ ಇನ್ನೊಂದೇ ಬೆರಗಿನ ಬಗ್ಗೆ ಇಲ್ಲೇ ನನ್ನ ಹಳೆಯ ಬರಹವನ್ನು ನೋಡಬಹುದು) ನನಗೆ ಉತ್ಸಾಹವೇನೋ ಧಾರಾಳವಿತ್ತು ಆದರೆ ಹಣಕಾಸಿನ ಬಗ್ಗೆ ಪೂರ್ಣವಹಿಸಿಕೊಂಡು ಧೈರ್ಯ ತುಂಬಿದವರು ಭಾರತೀಯ ವಿದ್ಯಾ ಭವನದ ಕಾರ್ಯದರ್ಶಿ ಜಯರಾಮ ಶೆಟ್ಟರು. ಔಪಚಾರಿಕ ಅಧ್ಯಕ್ಷತೆ ಡಾ| ಬಿ.ಎಂ ಹೆಗಡೆಯವರದಾದರೂ ಭವನದ ಸಹಯೋಗ ಪಡೆದುಕೊಂಡ ಯಾವುದೇ ಕಾರ್ಯಕರ್ತನಿಗೆ ಕಾರ್ಯರಂಗದಲ್ಲಿ ಜಯರಾಮ ಶೆಟ್ಟರೆಂದರೆ ನೂರಾನೆ ಬಲ. ಸಭಾಭವನ ಮತ್ತು ಮೈಕ್ ಭವನದ್ದೇ ಇತ್ತು.

ಉಳಿದಂತೆ ಮುದ್ರಣ, ಕಲಾಪದಲ್ಲಿ ತೊಡಗಿಕೊಳ್ಳುವ ಸಾಹಿತ್ಯ ದಿಗ್ಗಜರ ಆತಿಥ್ಯ, ಗೌರವಧನ ಎಲ್ಲಕ್ಕೂ ಜಯರಾಮ ಶೆಟ್ಟರು. ಶೆಟ್ಟರೇ ಮಾಡಿಕೊಟ್ಟ ಅನೌಪಚಾರಿಕ ಸಲಹಾ ಬಳಗದ ಪ್ರಭಾಕರ ಜೋಶಿ ಹಾಗೂ  ಯು. ನಾರಾಯಣ ಶರ್ಮರದೂ (ಇವರು ೨೬-೧೧-೨೦೧೨ರಂದು ನಮ್ಮನ್ನಗಲಿದ್ದಾರೆ) ನನ್ನ ಕುರಿತ ಪ್ರೀತಿ ವಿಶ್ವಾಸ ಎರಡಿಲ್ಲದ್ದು. ಹತ್ತೆಂಟು ಪತ್ರ ವ್ಯವಹಾರ, ನೂರಾರು ಆಮಂತ್ರಣ, ಸಕಾಲಿಕವಾಗಿ ಮತ್ತು ಸಮರ್ಪಕವಾಗಿ ಸಭೆ ನಿರ್ವಹಿಸಿದ ಮತ್ತದು ಅಪೂರ್ವ ಯಶಸ್ಸು ಕಂಡ ಸಂತೋಷ ಮಾತ್ರ ನನ್ನದು.

ಆಗೆಲ್ಲಾ ಮಂಗಳೂರು ಪೇಟೆ ಬಿಟ್ಟು ಬೇರೆಲ್ಲಿಗೇ ದೂರವಾಣಿ ಎಂದರೆ (ಚರೆಚರೆ ವಾಣಿ ಹಬ್ಬಿರಲಿಲ್ಲ) ಟ್ರಂಕ್ ಕಾಲ್. ಮತ್ತದೂ ನಮ್ಮಂಥವರಿಗೆ ಎಲ್ಲೋ ಮರಣಾಂತಿಕ ತುರ್ತುಗಳಿಗೆ ಮಾತ್ರ ಬಳಸುವಷ್ಟು ಖರ್ಚಿನ ಬಾಬು ಎಂದೇ ಗ್ರಹಿಕೆ! ಅವಧಾನಿಗೆ ಸವಲೊಡ್ಡುವವರಾಗಿ (ಪೃಚ್ಛಕರು) ನಾನು ಸಂಪರ್ಕಿಸಿದ ಪೆರ್ಲ ಕೃಷ್ಣ ಭಟ್ಟ ಮತ್ತು ಉಡುಪಿಯ ರಾಜಗೋಪಾಲಾಚಾರ್ಯರಂಥ (ಇವರೂ ಇಂದು ನಮ್ಮೊಡನಿಲ್ಲ) ಹೊರ ಊರಿನವರು ಅಂದು ಉತ್ತರಿಸಿದ ಪತ್ರಗಳಲ್ಲಿ ಒಸರಿದ ಪ್ರೀತಿ ವಿಶ್ವಾಸಗಳು ಇಂದಿಗೂ ನನ್ನ ದೂಳು ಹಿಡಿದ ಕಡತದೊಳಗೆ ಜೀವ ಮಿಡಿಯುತ್ತವೆ. ಮೇಲೆ ಹೇಳಿದ ಹಿರಿಯರಿಬ್ಬರಲ್ಲದೆ ಅಷ್ಟೇ ಪ್ರೀತಿ ವಿಶ್ವಾಸಗಳಿಂದ ಅಮೃತ ಸೋಮೇಶ್ವರ, ಪುರುಷೋತ್ತಮ ಬಿಳಿಮಲೆ, ಜಿ.ಎನ್. ಭಟ್ ಮತ್ತು ಸ್ವತಃ ಪ್ರಭಾಕರ ಜೋಶಿ ಹಾಗೂ ನಾರಾಯಣ ಶರ್ಮ (ಗಂಟಾವಾದನದಲ್ಲಿ ಕಿರಿಯ ಗೆಳೆಯ ಪ್ರಸನ್ನ ಕೂಡಾ ಇದ್ದ) ಕಲಾಪವನ್ನು ಅದ್ಭುತವಾಗಿ ಕಳೆಗಟ್ಟಿಸಿದರು. ಮಂಗಳೂರಿನ ಗಣೇಶರ ಪ್ರಥಮ ಅಷ್ಟಾವಧಾನ ಒಂದು ಅಪೂರ್ವ ದಾಖಲೆ.

ಕುಶಿ ಹರಿದಾಸ ಭಟ್ಟರ ಸಂಯೋಜನೆ ಪ್ರಥಮವೇ ಆದರೂ ಜಿಲ್ಲೆಯ ಅಥವಾ ವಲಯದ (ದಕ, ಉಕ, ಕೊಡಗು, ಹಾಸನ, ಚಿಕ್ಕಮಗಳೂರುಗಳಿಂದೆಲ್ಲಾ ಬಂದಿದ್ದು) ಗಮನವನ್ನು ಇನ್ನಿಲ್ಲದಂತೆ ಸೆಳೆದ ಖ್ಯಾತಿ ಮಂಗಳೂರು ಅವಧಾನಕ್ಕೆ ಸಲ್ಲುತ್ತದೆ (ಗಣೇಶರೇ ಕೆಲವು ಬಾರಿ ಹೇಳಿಕೊಂಡಿದ್ದಾರೆ). ಮುಂದೆ ಇದು ಒಂದೆರಡು ವರ್ಷಗಳಲ್ಲಿ ಜಿಲ್ಲೆಯ ಹಳ್ಳಿ ಹಳ್ಳಿಯಲ್ಲೆಂಬಂತೆ ನಡೆಯಿತು ಎಂದರೆ ಉತ್ಪ್ರೇಕ್ಷೆ ಅಲ್ಲ. ಗಣೇಶರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ನೂರಾರು ಜನರಿಗೆ ಅವಧಾನ ಕಲೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆ, ಮುಕ್ತ ಮಾರ್ಗದರ್ಶನ ನೀಡಿದರೆಂದರೆ ತುಂಬ ಸಣ್ಣ ಮಾತೇ ಆಗುತ್ತದೆ! ಇವರು ಸಾಂಪ್ರದಾಯಿಕ ಅವಧಾನ ಕಲೆಗೆ ಹೊಸ ಮತ್ತು ಕೆಲವು ಪ್ರಾದೇಶಿಕವೂ ಆದ ಯಕ್ಷ, ಚಿತ್ರ, ಕಾವ್ಯ, ಕುಂಚ, ನೃತ್ಯ ಎಂದಿತ್ಯಾದಿ ಸವಾಲುಗಳನ್ನು ಸೇರಿಸಿಕೊಂಡದ್ದೂ ಮತ್ತವುಗಳಲ್ಲಿ ಕೆಲವು ಸ್ವತಂತ್ರವಾಗಿ (ಉದಾಹರಣೆಗೆ ತುಳು, ಯಕ್ಷಗಾನ ಮತ್ತು ಕೊಂಕಣಿ ಅಷ್ಟಾವಧಾನ ನಡೆದದ್ದು ನಾನು ಕೇಳಿದ್ದೇನೆ) ವಿಕಸಿಸಿದ್ದೂ ನಾನು ಈಗ ಹೊಸದಾಗಿ ಹೇಳುವಂತದ್ದೇನೂ ಇಲ್ಲ. ಕಸಿಗಳ ಒಂದು ಹಂತದಲ್ಲಿ ಸ್ವತಂತ್ರವಾಗಿ ರೂಪುಗೊಂಡು, ಅತ್ಯಂತ ಉಜ್ವಲವಾಗಿ ವಿಕಸಿಸಿದ ಪ್ರಯೋಗವೆಂದರೆ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರ ಸಹಯೋಗದ ಭಾಮಿನಿ - ಯಕ್ಷಗಾನ ಏಕವ್ಯಕ್ತಿ ಪ್ರದರ್ಶನಗಳು. ನನಗೆ ದಕ್ಕಿದ ಗಣೇಶರ ಅನ್ಯ ಪ್ರಯೋಗಗಳನ್ನು ವಿಸ್ತರಿಸುವ ಮುನ್ನ ಅವಧಾನದ ಕುರಿತು ನನ್ನೆರಡು ಪತ್ರಿಕಾ ಬರಹಗಳ ಆಯ್ದ ಭಾಗಗಳನ್ನು ಇಲ್ಲಿ ಕೊಡುವುದು ಅವಶ್ಯ ಎಂದು ಭಾವಿಸುತ್ತೇನೆ. ಮೊದಲು ಮೇಲೆ ಹೇಳಿದ ಮಂಗಳೂರು ಮಿತ್ರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ:

ಬುದ್ಧಿ, ಸಾಹಿತ್ಯಗಳ ಕಸರತ್ತು ಅಷ್ಟಾವಧಾನ

ಉಡುಪಿಯ ಎಂಜಿಎಂ ಕಾಲೇಜಿನ ವೇದಿಕೆಯ ನಡುವೆ ಇಪ್ಪತ್ತೆಂಟರ ಹರಯದ ನಗುಮೊಗದ ಆರ್. ಗಣೇಶ್ ಕುಳಿತಿದ್ದರು (--೧೯೯೧). ಆತ ಅವಧಾನಿ - ಸವಾಲು ಸ್ವೀಕರಿಸಿ ಸಮಾಧಾನ ಕೊಡುವವ.   ಕನ್ನಡ ಸಂಸ್ಕೃತಗಳ ಭಾಷೆ ಸಾಹಿತ್ಯಗಳಲ್ಲಿ, ಲೋಕಾನುಭವದಲ್ಲಿ ಸರ್ವ ಮಾನ್ಯರಾದ ಮತ್ತು ಪ್ರಾಯದಲ್ಲಿ ಹಿರಿಯರಾದ  ಎಂಟು ವಿದ್ವಾಂಸರು ಅವಧಾನಿಯ ಎರಡೂ ಬದಿಗಳಲ್ಲಿ ಸಜ್ಜಾಗಿ ಕುಳಿತಿದ್ದರು. ಇವರು ಪೃಚ್ಛಕರು - ಸವಾಲೊಡ್ಡುವವರು. ಎಂಟು ಪ್ರಶ್ನ ಚಿಹ್ನೆಗಳೆದುರು ಒಂದು ದೊಡ್ಡ ಆಶ್ಚರ್ಯ ಚಿಹ್ನೆ. ಇದೇ ಅಷ್ಟಾವಧಾನ. ಅದರ ಕಲಾಪದ ಸೂಕ್ಷ್ಮ ನಾನು ಕಂಡಂತೆ.

ಮೊದಲ ಪೃಚ್ಛಕ ಉಡುಪಿ ಕೃಷ್ಣನ ಮೇಲೆ ಪದ್ಯ ಕೇಳಿದರು. ಜೊತೆಗೆ ಉಡುಪಿ ಕೃಷ್ಣ ಎಂಬ ಪದ ಪ್ರಯೋಗಕ್ಕೆ ನಿಷೇಧ ಹೇರಿ, ಛಂದಸ್ಸಿನ ನಿರ್ದೇಶನವನ್ನೂ ಕೊಟ್ಟರು. ಅಷ್ಟಕ್ಕೂ ಬಿಡದೆ ಅವಧಾನಿ ಉತ್ತರವನ್ನು ಉಚ್ಚರಿಸತೊಡಗಿದಂತೆ ಪ್ರತಿ ಅಕ್ಷರಕ್ಕೂ ಇವರ ತಗಾದೆ - ಅದಾಗದು, ಇದು ಸಲ್ಲ. ಅವನ್ನೆಲ್ಲ ಮನ್ನಿಸುತ್ತ, ಛಂದೋ ಲಕ್ಷಣ ತಪ್ಪದಂತೆ, ಅರ್ಥ ಕೆಡದಂತೆ, ಉದ್ದೇಶ ಮರೆಯದಂತೆ ಪದ್ಯದ ಮೊದಲ ಸಾಲು ಕೊಟ್ಟರೆ ಎಂಟರ ನಾಲ್ಕು ಆವರ್ತದಲ್ಲಿ ಒಂದನ್ನು ಮಾತ್ರ ಮುಗಿಸಿದ ಹಾಗಾಯ್ತು. ಪಟ್ಟದ ಹೆಸರೇ ನಿಷೇಧಾಕ್ಷರಿ. ಎರಡನೆಯಾತ ಕವಿ. ಮೊದಲೆಲ್ಲೂ ಪ್ರಕಟವಾಗದ ತನ್ನೊಂದು ಕವನದ ತುಣುಕನ್ನು ಪಠಿಸಿದರು. ಅದೇ ಸಾಲನ್ನು ಬಳಸಿಕೊಂಡು, ಅದರ ಲಯ ಮತ್ತು ಅರ್ಥಕ್ಕೆ ಭಂಗ ಬಾರದಂತೆ ಪದ್ಯ ರಚಿಸಿಕೊಂಡು ಸುತ್ತಿಗೊಂದು ಸಾಲಿನಂತೆ ಕೊಡುವುದು ಅಲ್ಲಿನ ಸವಾಲು. ಮೂರನೆಯ ಪೃಚ್ಛಕ ಅಸಂಗತವಾಗಿಯೂ ಕಾಣಬಹುದಾದ ನಾಲ್ಕು ಬಿಡಿ ಶಬ್ದಗಳನ್ನು ಕೊಟ್ಟು, ಮೇಲೊಂದು ಘನ ವಿಷಯವನ್ನಿಟ್ಟು ಕೇಳಿದ್ದು ಮತ್ತೆ ಪದ್ಯವೇ. ಪ್ರತಿ ಸುತ್ತಿನಲ್ಲಿ ಅವರಿಗೂ ಒಂದು ಸಾಲು ಮೀಸಲು. ನಾಲನೆಯವರದ್ದು ಸಂಸ್ಕೃತ ಸಮಸ್ಯೆ - ಸಮುದ್ರದಿಂದೆದ್ದ ನದಿ ಬೆಟ್ಟಕ್ಕೆ ಹರಿಯಿತು. ಸಮಸ್ಯೆಯ ಜಿಡುಕಿನ ಮೇಲೆ ಛಂದಸ್ಸಿನ ತೊಡಕೂ ಇತ್ತು. ಅವಧಾನಿ ನಗೆ ಮಾಸದೆ ಸಮಸ್ಯೆಯನ್ನು ಅನುಮೋದಿಸಿ, ಪೃಚ್ಛಕರಿತ್ತ ನಡೆಯಲ್ಲೇ ಪರಿಹಾರವನ್ನು ಮತ್ತೆ ಪದ್ಯ ರೂಪದಲ್ಲೂ ಕಂತುಗಳಲ್ಲೂ ಕೊಡುತ್ತಾ ಹೋದರು.

ವೇದಿಕೆಯ ಇನ್ನೊಂದು ಅಂಚುಕಟ್ಟಿದವರಲ್ಲೂ ಇಬ್ಬರು ಪದ್ಯಪ್ರಿಯರೇ. ಓರ್ವರು ಪ್ರತಿ ಸುತ್ತಿನಲ್ಲೂ ಹೊಸ ವಿಷಯ, ಹೊಸ ಬಂಧ ಸೂಚಿಸಿ ಇಡಿಯ ಪದ್ಯ ಕೇಳುತ್ತಾರೆ. ಇಲ್ಲಿ ಬಂದದ್ದಾದರೂ ಎಂತವು - ಮಳೆಗಾಲದ ಚಿತ್ರ, ಇನ್ನೊಮ್ಮೆ ಪುಡಾರಿ ದೇವಿಲಾಲನ ವ್ಯಕ್ತಿತ್ವ, ಸಿನಿತಾರೆ ಶ್ರೀದೇವಿಯಾಗಮನದಿಂದ ಉಂಟಾದ ಪುಳಕದ ವಿವರಣೆ ಇತ್ಯಾದಿ. ಒಂದು ಷಟ್ಪದಿ, ಇನ್ನೊಂದು ತ್ರಿಪದಿ ಮತ್ತೊಂದು ಶುದ್ಧ ರಗಳೆ. ಆದರೆ ಅವೆಲ್ಲವನ್ನು ನಿಭಾಯಿಸುವುದರೊಡನೆ ಅಯಾಚಿತ ಸಭಾಸದರಿಂದ ಬಂದ ಹೆಚ್ಚಿನದ್ದಕ್ಕೂ ಪೂರೈಸುವಷ್ಟು ಅವಧಾನಿಯ ಭಂಡಾರ ಅಕ್ಷಯ. ಆರನೆಯ ಪೃಚ್ಛಕ ಕಾವ್ಯ ವಾಚನದವರು. ಅವರಿಗೋ ಕನ್ನಡ ಕಾವ್ಯರಾಶಿಯಲ್ಲಿ ಎಲ್ಲಿಂದಲೋ ಹೆಕ್ಕಿದ ಒಂದು ಖಂಡವನ್ನು ಗುರುತು ಕೊಡದೇ ವಾಚಿಸಿ, ಪತ್ತೆ ಕೇಳುವ ಹುರುಪು. ಒಂದೂ ತಪ್ಪದಂತೆ ಕವಿ, ಕಾವ್ಯ ಮತ್ತು ಸಂದರ್ಭವನ್ನು ಅವಧಾನಿ ಕೊಟ್ಟು ವ್ಯಾಖ್ಯಾನಿಸುವುದರೊಡನೆ ತತ್ಸಮಾನ ಇತರ ಭಾಷಾ ಕಾವ್ಯಪ್ರಪಂಚದ ಪರಿಚಯವನ್ನೂ ಮಾಡಿಕೊಡುತ್ತ ಬಂದರು.

ಅವಧಾನಿ ಸೂರ್ಯನಾದರೆ, ಮೊದಲ ಆರು ಪೃಚ್ಛಕರು ನಿಯತ ಅಂತರದಲ್ಲಿ ಆವರ್ತಿಸುವ ಗ್ರಹರು. ಆದರೆ ಉಳಿದಿಬ್ಬರು ಗ್ರಹಗಳ ಕಕ್ಷಾಪಥ ಹರಿದು ನುಗ್ಗುವ ಧೂಮಕೇತುಗಳು. ಒಬ್ಬರು ಕಾರ್ಯಕ್ರಮದ ಮೊದಲಲ್ಲೇ ಅವಧಾನಿಗೆ ವಿಷಯ, ಛಂದಸ್ಸು ಕೊಟ್ಟು ಕಾವ್ಯ ರಚನೆಗೆ ಸೂಚಿಸುತ್ತಾರೆ. ಮರುಕ್ಷಣವೇ ಒಟ್ಟು ರಚನೆಯ ಅಕ್ಷರಗಳ ಮೊತ್ತವನ್ನು ಕೇಳಿ ಪಡೆದುಕೊಳ್ಳುತ್ತಾರೆ. ಮುಂದೆ ಪೃಚ್ಛಕ ಸ್ವಂತ ಇಚ್ಛೆಯ ಮೇರೆಗೆ, ಯಾವುದೇ ಕ್ರಮವಿಲ್ಲದೆ ಸಂಖ್ಯೆಗಳನ್ನು ಹೇಳಿ, ಅಕ್ಷರಗಳನ್ನು ಪಡೆಯುತ್ತಾ ಹೋಗುತ್ತಾರೆ. ನಿಷೇಧಾಕ್ಷರಿಯ ನಿರ್ವಹಣೆ ನಡುವೆ ಇವರು ೧೪ ಎನ್ನಬಹುದು, ಸಮಸ್ಯಾಪೂರಣದ ಸರದಿಯಲ್ಲಿ ೯ನೇದು ಕೇಳಬಹುದು, ಕೊನೆಯಲ್ಲಿ ಒಂದನೇದನ್ನು ಪಡೆದು ಕಾವ್ಯ ಪೂರ್ಣಗೊಂಡದ್ದನ್ನು ಕಾಣಬಹುದು! ಎಂಟನೆಯ ಪೃಚ್ಛಕ ಎಲ್ಲರನ್ನೂ ಮೀರಿದವನು. ಇವರು ಎಂದೂ ಕೇಳಬಹುದು, ಏನೂ ಕೇಳಬಹುದು. ಪೀಠದ ಹೆಸರು ಹೇಳುವಂತೆ - ಅಪ್ರಸ್ತುತಪ್ರಸಂಗಿ, ಅಷ್ಟಾವಧಾನದ ಪರಿಚಯವಿಲ್ಲದವರಿಗೆ ಅಧಿಕಪ್ರಸಂಗಿ, ನಕ್ಷತ್ರಿಕ ಅನ್ನಿಸಿದರೂ ಆಶ್ಚರ್ಯವಿಲ್ಲ! ಉದಾಹರಣೆಗೆ ಇಲ್ಲಿ ಬಂದ ಪ್ರಶ್ನೆಗಳದ್ದೇ ಕೆಲವು ಉದಾಹರಣೆಗಳು ನೋಡಿ - ಹರಿಭಕ್ತ ಅವಧಾನಿಗಳೇ ನಿಮ್ಮ ಹೆಸರೇಕೆ ಗಣೇಶ? ಅಷ್ಟಾವಧಾನಕ್ಕೂ ಅಷ್ಟಮಠಕ್ಕೂ ಸಂಬಂಧವೇನು? ನಿಮಗೆ ಮರೆವಿನ ಕ್ಷಮೆ ಕೇಳಲು ಅವಕಾಶ ಉಂಟೇ? ಇತ್ಯಾದಿ. ಇವಕ್ಕೆ ಉತ್ತರಿಸುವಲ್ಲಿ ಅವಧಾನಿ ನಿಧಾನಿಸುವಂತಿಲ್ಲ ಆದರೆ ಗಂಭೀರನಾಗಿರಬೇಕೆಂಬ ನಿರ್ಬಂಧವೂ ಇಲ್ಲ. ಹಾಗಾಗಿ ಪ್ರಶ್ನೋತ್ತರ ಸಭಾಮಂಡಲದಲ್ಲಿ ಉಲ್ಕೆಯಂತೆ ಬೆಳ್ಳಿಗೀರಾಗಬಹುದು, ಉರಿಉಂಡೆ ಆಗಬಹುದು, ಉರಿಬೇಸಗೆಯ ಮಧ್ಯಾಹ್ನ ಬೀಸಿದ ಭೋರ್ಗಾಳಿಯೂ ಆಗಬಹುದು. [ಮಂಗಳೂರಿನ ಅವಧಾನ ಕಾಲದಲ್ಲಿ ಖ್ಯಾತ ಅರ್ಥದಾರಿ ಪ್ರಭಾಕರ ಜೋಶಿಯವರು ಅಪ್ರಸ್ತುತ ವಿಭಾಗವನ್ನು ಹಿಡಿದಿದ್ದುದರಿಂದ ಪ್ರದರ್ಶನದ ಯಶಸ್ಸಿನ ಬಹುದೊಡ್ಡ ಪಾಲು ಅವರೀರ್ವರ ಪ್ರಿಯ ಕಲಹವೇ ಅಪಹರಿಸಿತು ಎಂದು ಎಂದರೆ ತಪ್ಪಲ್ಲ! ಮತ್ತೂ ದೊಡ್ಡ ಅಪಾಯವಾಗಿ, ಅನುಸರಿಸಿ ಬಂದ ಮತ್ತೆಷ್ಟೋ ಅವಧಾನಗಳಲ್ಲಿ ಜೋಶಿಯವರಿಗೆ ಅಪ್ರಸ್ತುತ ಪ್ರಸಂಗಿ ಪಟ್ಟ ಖಾಯಂ ಆಗಿಯೂ ಹೋಗಿತ್ತು!]

ಪೃಚ್ಛಕರು ಬಹುತೇಕ ಕಡತ ಕಂಠ ಹಿಡಿದು, ಪ್ರಶ್ನೆ ಓದಿ, ಪಡೆದ ಉತ್ತರ ಬರೆದುಕೊಂಡು ಅವಧಾನಿಯನ್ನು ಒರೆಗೆ ಹಚ್ಚುತ್ತಾರೆ. ಅವಧಾನಿಯಾದರೋ ಸವಾಲುಗಳನ್ನು ತನ್ನ ಜ್ಞಾಪಕದ ಕರಡಿಗೆಗಳಲ್ಲಿ ತುಂಬಿಕೊಳ್ಳುತ್ತ, ಸ್ವಂತ ಬುದ್ಧಿಕೋಠಿಯಿಂದ ಹದವರಿತು ಪರಿಕರಗಳನ್ನು ತೆಗೆದು ಸವಾಲುಗಳನ್ನು ಪರಿಹರಿಸಬೇಕು; ಪೆನ್ನು, ಹಾಳೆಗಳಿಲ್ಲ. ಸಾಲದ್ದಕ್ಕೆ ಕಾರ್ಯಕ್ರಮದ ಕೊನೆಯಲ್ಲಿ ನಿಯತಕಾಲಿಕಗಳಾದ, ಅಂದರೆ ಹೆಚ್ಚು ಕಡಿಮೆ ಆರು ಅಂಗಗಳ ಪರಿಹಾರಗಳನ್ನು ಪರಿಪೂರ್ಣವಾಗಿ ಒಪ್ಪಿಸಬೇಕು. ಸಾಹಿತ್ಯಾಸಕ್ತಿ, ಅಧ್ಯಯನಗಳನ್ನು ಅಲ್ಲಗಳೆಯದೇ ಗಣೇಶರೇ ಸೂತ್ರ ರೂಪದಲ್ಲಿ ಹೇಳುವಂತೆ ಅವಧಾನಿಗೆ ಮೂರು ಧಕಾರ (ತ್ರಿಧ) ಅತ್ಯವಶ್ಯವಂತೆ. ಧರಣ, ಅಂದರೆ ನೆನಪಿನ ಶಕ್ತಿ. ಧಾರಾ, ಅಂದರೆ ಓತಪ್ರೋತವಾಗಿ ಕಾವ್ಯ ಕಟ್ಟುವ ಚಾತುರ್ಯ. ಕೊನೆಯದಾಗಿ ಧೈರ್ಯ.

ಮೇಲಿನ ಲೇಖನ ಬರಲಿರುವ ಮಂಗಳೂರು ಅಷ್ಟಾವಧಾನದ ಮುನ್ನೋಟದೊಡನೆ ಮುಗಿದಿತ್ತು. ಮಂಗಳೂರು ಮತ್ತು ಸಮಯದಲ್ಲಿ ನಾನು ಸಾಕ್ಷಿ ಹಾಕಿದ ಉಳಿದೆಡೆಗಳ ಹಲವು ಅಷ್ಟಾವಧಾನಗಳಲ್ಲಿನ ಕಲಾಪ ವಿವರಗಳ ದಾಖಲೆ ನಾನಿಟ್ಟಿಲ್ಲ. ಹಾಗಾಗಿ ಮೇಲೆ ನಾನೇ ಹೇಳಿದ ಅಷ್ಟಾವಧಾನದ ವ್ಯಾಕರಣ ಪ್ರಯೋಗದಲ್ಲಿ ಹೇಗಿರುತ್ತದೆ ಎಂದು ತೋರಿಸಲು ನನ್ನದೇ ಇನ್ನೊಂದು ಪತ್ರಿಕಾ ಲೇಖನವನ್ನೂ  (ಉದಯವಾಣಿ: --೨೦೦೬) ಕೆಳಗೆ ಕೊಡುತ್ತಿದ್ದೇನೆ. ಕರಾವಳಿ ವಲಯದ ಮೇಲೆ ಗಣೇಶರ ಅಷ್ಟಾವಧಾನದ ಉಬ್ಬರದಲೆಗಳು ತಣಿದಿತ್ತು. ಅಂದರೆ ಸುಮಾರು ಒಂದೂವರೆ ದಶಕದನಂತರ, ಗಣೇಶರ ಆಶಯದ ದೀವಟಿಗೆಯನ್ನು ಹೊತ್ತ ಇನ್ನೊಬ್ಬ ತರುಣ ಅವಧಾನಿಯ ಒಂದು ಪ್ರದರ್ಶನಾನುಭವ ಕಥನ ಈಗ ಓದಿ ನೋಡಿ.

ಬಹುಸ್ಮರಣೆಗಳ ವಿದ್ವದ್ವಿನೋದ ಅಷ್ಟಾವಧಾನ

ಸರೀ ಹದಿನೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ವಲಯಕ್ಕೆ ಪ್ರಥಮವಾಗಿ ರಾ. ಗಣೇಶ ಅವರಿಂದ ಅಷ್ಟಾವಧಾನ ನಡೆದಿತ್ತು. ಶುದ್ಧ ಬೌದ್ಧಿಕ ಮತ್ತು ಸಾಹಿತ್ಯಕ ಕೂಟಕ್ಕೆ ಅಪೂರ್ವ ಜನ ಸೇರಿ ಸಭಾಂಗಣವೇನು ಆವರಣದ್ದೇ ಮೇರೆ ಮೀರಿತ್ತು. ಅಂದು ಗಣೇಶರು ಪ್ರಾಸಂಗಿಕವಾಗಿ ವಲಯದಿಂದಲೂ ಅವಧಾನಿಗಳು ಬೆಳೆದು ಬಂದರೆ ಸಂತೋಷಪಡುವವರಲ್ಲಿ ನಾನು ಮೊದಲಿಗ ಎಂದೇ ಹೇಳಿದ್ದರು. ಅವರ ಆಶಯವನ್ನು ನಿಜಮಾಡಿದವರ ಸರಣಿಗೆ ಈಚಿನ ಸೇರ್ಪಡೆ ಉಡುಪಿಯ ಗುಂಡಿಬೈಲು ಸುಬ್ರಹ್ಮಣ್ಯ ಭಟ್; ಷಣ್ಮುಖನಿಲ್ಲಿ ಅಷ್ಟಮುಖಿ! ಉಡುಪಿಯ ಸಂಸ್ಕೃತ ಪಾಠಶಾಲೆಯಿಂದ ಲೋಕಮುಖಕ್ಕೆ ಇಳಿಯುತ್ತಿರುವ ತರುಣ ಅವಧಾನಿಗಿದು ಅವಧಾನ ದಶಕ.

ಅಂದು ಗಣೇಶರ ಕಾರ್ಯಕ್ರಮದುದ್ದಕ್ಕೂ (ಕೂರಲು ಜಾಗ ಸಿಗದ ಹಲವರಂತೆ) ಒಗ್ಗಾಲಿನಲ್ಲಿ ನಿಂತು ಆಸ್ವಾದಿಸಿದ್ದವರಲ್ಲಿ ಪೆರಾರ ಅನಂತ ಆಚಾರ್ಯರ ಪತ್ನಿ ಶಾಂತಾ ಆಚಾರ್ಯ ಒಬ್ಬರು. ಕಾಲಗರ್ಭದಲ್ಲಿ ದಂಪತಿ ಸಂದುಹೋದರು. ಆದರೇನು, ಹಿರಿಯರ ಪ್ರೀತಿಗೆ ಅವಧಾನಿ ಸುಬ್ರಹ್ಮಣ್ಯ ಭಟ್ಟರನ್ನು ತಳುಕು ಹಾಕಿ ಸಾರ್ವಜನಿಕ ಸಾಹಿತ್ಯ ಸಂತರ್ಪಣೆ ನಡೆಸಿದ ಪುಣ್ಯಭಾಜನರು ಅವರ ಮಕ್ಕಳು - ಪ್ರಶಾಂತಾಚಾರ್ಯ ಮತ್ತು ಸಹೋದರರು. --೨೦೦೬ರಂದು ಮಂಗಳೂರಿನ ಶ್ರಿ ಕೃಷ್ಣ ಕಲ್ಯಾಣ ಮಂದಿರದಲ್ಲಿ ಸುಮಾರು ಮೂರೂ ಕಾಲು ಗಂಟೆಯುದ್ದಕ್ಕೆ ನಡೆದ ಅಷ್ಟಾವಧಾನದ ಸೂಕ್ಷ್ಮಗಳು ಹೀಗಿವೆ. [ಕಲಾಪಗಳ ಕುರಿತಂತೆ ನನ್ನಲ್ಲಿ ಇರುವ ದಾಖಲೆಗಳನ್ನು ಪೂರ್ಣ ಕೊಟ್ಟಿದ್ದೇನೆ. ತಪ್ಪಿದ್ದರೆ ನನ್ನದು. ಉಳಿದ ಸಭಾ ರಚನೆಗಳ ನನ್ನ ದಾಖಲೆ ಅಪೂರ್ಣ ಮತ್ತು ಶುದ್ಧವಿಲ್ಲದಿರುವುದರಿಂದ ಇಲ್ಲಿ ಕೊಟ್ಟಿಲ್ಲ]

ನಿರ್ದಿಷ್ಟ ಪ್ರಸಂಗದಲ್ಲಿ ಅವಧಾನಿಯೇ ಪ್ರಧಾನನಾದರೂ ಇದೊಂದು ಕೂಟಕಲೆ ಎಂಬುದನ್ನು ಶ್ರುತಪಡಿಸುವಂತಿತ್ತು ಪೃಚ್ಛಕ ಬಳಗ. ಹಿರಿಯ ವಿದ್ವಾಂಸರುಗಳಾದ ಕೊರ್ಗಿ ವೇಂಕಟೇಶ ಉಪಾಧ್ಯಾಯ ಹಾಗೂ ಆಜಾರು ನಾಗರಾಜರಾಯರು ಅವಧಾನ ಬರಿಯ ಹುಡುಗಾಟವಲ್ಲ ಎನ್ನುವುದಕ್ಕೆ ಬಳಗದಲ್ಲಿದ್ದ ಸಾಕ್ಷಿಗಳು. ಕೊರ್ಗಿಯವರು ಸ್ವರಚಿತ ಕಂದಪದ್ಯದಲ್ಲಿ ಕಿರಿಯ ಅವಧಾನಿಗೆ ಹಿರಿಯರ ಮತ್ತು ದೇವರ ಹರಕೆಗಳನ್ನು ಮೊದಲಲ್ಲಿ ಕೊಟ್ಟರು. ಅನಂತರ ಯಕ್ಷಗಾನೀಯವಾಗಿ (ರಾಗ ಸುರುಟಿ, ಏಕತಾಳ) ವನವಾಸಕ್ಕೆ ಹೊರಟ ಲಕ್ಷ್ಮಣನನ್ನು ಸುಮಿತ್ರೆ ಹರಸುವ ಸನ್ನಿವೇಶವನ್ನು ಅದೇ ರಾಗ ತಾಳದಲ್ಲಿ ಬಯಸಿದ ಪರಿ ನೋಡಿ:

ಕಂದಪದ್ಯ
ಗಂಡೆದೆ ಬೇಕವಧಾನಕೆ
ಗುಂಡಿಗೆಯಿರುವವರ ಬೈಲೊಳು ಜನಿಸಿರುವೆ ನೀಂ
ಪಂಡಿತ ಸುಬ್ರಹ್ಮಣ್ಯನೆ
ಚೆಂಡಾಟದತೆರವಧಾನ ನಿನಗೆ ಭವತು ಶಂ ||||

ಬುದ್ಧಿಯ ಗೆಯ್ಮೆಯ ನೆರೆದ
ಹೃದಯ ಸಮಾಜವು ಒಲವಿನೊಳಾಸ್ವಾದಿಪುದೈ
ಒದಗಲಿ ಶುಭಮೆಲ್ಲರ್ಗಂ
ಕದಲೀವನನಾಥ ಮಂಜುನಾಥನ ಕೃಪೆಯಿಂ ||||

ತೊಡಗಿದವಧಾನಕೆಡೆ ಎಡೆ
ತೊಡಕಂ ತಂದೀವ ಕಾಯಕವ ಕೊಟ್ಟಿಹರೈ
ಅಡವಿಗೆ ಲಕ್ಷ್ಮಣನಣ್ಣನ
ಬಿಡದೇ ಪೊರಟಿರೆ ಸುಮಿತ್ರೆ ಪರಸಿದಳೆಂತೈ ||||
ಸುರುಟಿ ಏಕ
ಅಡವಿಗೆ ಪೊರಟಿಹನು| ರಾಘವ | ನೊಡನಾಲಕ್ಷ್ಮಣನು|| ಮುಡಿಯಡಿಗಿಟ್ಟಿಹ ಮಗನಿಗೆ ಮಾತೆಯು| ನುಡಿಸಿಹ ಹರಕೆಯ ನುಡಿನೀ ಸುರುಟಿಯೊಳು||

ಈಗ ಅವಧಾನಿಯ ಸಭಾ ಪದ್ಯ, ಪೃಚ್ಛಕರೊಡ್ಡಿದ ನಿಷೇಧಾಕ್ಷರವನ್ನು ಕಂಸದೊಳಗೆ ಕಾಣಿಸಿದ್ದೇನೆ.
ಸುತ್ತು ಒಂದು: ()()()()ನೋ()()()ದೂ| ()ನಿ()()()ತಿ|
ಸುತ್ತು ಎರಡು: ()ವರ(ದಾ)ವಿ()ರು()ತಿ()ದೆ ()ನೋ()ಡೈ||
ಸುತ್ತು ಮೂರು: ()ಹಿರಿ()ದಾ() ()()()ಲಿ() ()()ದೊ()ಡೆ()
()ನನೀ|
ನಾಲ್ಕನೇ ಸುತ್ತು (ಮುಕ್ತ): ನರಸುತಪಿತನನು ತರಳನೆ ಕಾಣೈ||
ಅವಧಾನಿ ಎಲ್ಲಾ ನಿಷೇಧಗಳನ್ನು ಪಾಲಿಸುತ್ತಾ ನಾಲ್ಕು ಚರಣದ ರಚನೆಯಲ್ಲಿ ಅಣ್ಣನಲ್ಲಿ ತಂದೆಯನ್ನು ಕಾಣು ಎನ್ನುವ ಅರ್ಥ ಕೊಡುವ ಪದ್ಯ ರಚನೆ ಮಾಡುವಲ್ಲಿ ಯಶಸ್ವಿಯಾದರು.
ಕೊನೆಯಲ್ಲಿ ಬಂದ ಪೃಚ್ಛಕ ಕೊರ್ಗಿಯವರ ರಚನೆ:
ರಾಮನು ದಶರಥನು| ಅಬ್ಬೆಯು| ಭೂಮಿಜೆ ತಿಳಿ ನೀನು|| ಭೀಮಾರಣ್ಯವಯೋಧ್ಯಾನಗರವು | ಕ್ಷೇಮವಿರಲಿ ನಡೆ ನೇಮವನಿತ್ತಿಹೆ||
ನಾನು ಲೇಖನ ಬರೆಯುವ ಕಾಲಕ್ಕೆ ಕೊರ್ಗಿಯವರಲ್ಲಿ ಅವರ ರಚನೆಯನ್ನು ಕೇಳಿದ್ದೆ. ಅವರು ಪತ್ರದಲ್ಲಿ ಅಷ್ಟೇ ಅಲ್ಲದೆ ಮೂಲ ರಾಮಾಯಣದ ಪ್ರೇರಣಾ ಶ್ಲೋಕವನ್ನೂ ಪ್ರೀತಿಪೂರ್ವಕ ಬರೆದು ಕಳಿಸಿದ್ದರು. [ಕೊರ್ಗಿ ವೇಂಕಟೇಶ ಉಪಾಧ್ಯಾಯರು ಇಂದು ನಮ್ಮೊಡನಿಲ್ಲ]

ಆಜಾರು ನಾಗರಾಜರಾಯರು ಆಶುಕವಿತೆ ವಿಭಾಗದಲ್ಲಿ ಕ್ರಮವಾಗಿ ಕೃಷ್ಣ ಸ್ತುತಿ (ಕನ್ನಡ, ವಾರ್ಧಕ, ಸರ್ವಲಘು, ಪಾದಾಂತ್ಯದಲ್ಲಿ ದನ), ಮಹಿಷಮರ್ದಿನಿ ಸ್ತುತಿ (ಕಂದಪದ್ಯ), ಹಾಗೂ ಅಹಲ್ಯೋದ್ಧರಣದ (ಭಾಮಿನಿ) ಚಿತ್ರಣಗಳನ್ನು ಬಯಸಿದರೆ, ಕೊನೆಯಲ್ಲಿ ಸಂಸ್ಕೃತ ಸುಭಾಷಿತವೊಂದರ ಕನ್ನಡ ಕಾವ್ಯರೂಪವನ್ನು ಕೇಳಿದರು. ಪ್ರತಿ ಸುತ್ತಿನಲ್ಲೂ ಹೊಸತೇ ವಿಷಯ, ಬೇರೆಯೇ ಛಂದಬಂಧವಾದರೇನು ಎಲ್ಲವನ್ನೂ ಸಕಾಲದಲ್ಲಿ ಪಡೆದರು. [ ಎಲ್ಲ ರಚನೆಗಳ ಮತ್ತು ಪೃಚ್ಛಕರ ರಚನೆಯ ದಾಖಲೆಗಳೂ ನನ್ನಲ್ಲಿಲ್ಲ - ಕ್ಷಮಿಸಿ]

ಅಷ್ಟಾವಧಾನದ ಉಳಿದ  ಆರೂ ವಿಭಾಗಗಳನ್ನು ಅವಧಾನಿಯ ತುಸುವೇ ಹಿರಿಕಿರಿಯ ಸಹಪಾಠಿಗಳೇ ನಿರ್ವಹಿಸಿದ್ದರಿಂದ ಸಲುಗೆಯ ಉಲ್ಲಾಸ ಸಭಾಸದರನ್ನೂ ವ್ಯಾಪಿಸಿಕೊಂಡಿತು. ಆದರೆ ಪರೋಕ್ಷವಾಗಿ ಇಂಥಾ ಸನ್ನಿವೇಶಗಳನ್ನು ನಿರಾಕರಿಸುವುದು ಉಚಿತ. ಸವಾಲುಗಳಲ್ಲಿ ನಾವೀನ್ಯದ ಕೊರತೆಯೂ ಮಿಗಿಲಾಗಿ ಅವಧಾನಿಯನ್ನೇ ಅಪಕ್ವತೆಗೆ ಅನುಮಾನಿಸುವ ಅಪಾಯವಿದೆ (ಮ್ಯಾಚ್ ಫಿಕ್ಸಿಂಗ್ ಅಪವಾದ ಎಂದು ಗಣೇಶರೇ ಒಂದು ಕಡೆ ಹೇಳಿದ್ದುಂಟು).

ದತ್ತಪದಿಯ ಪೃಚ್ಛಕರಾದ ವೆಂಕಟರಮಣ ಭಟ್ ಹಾದಿ, ದಾರಿ, ರೋಡ್ ಮತ್ತು ರಸ್ತೆ ಎಂಬ ನಾಲ್ಕು ಪದಗಳನ್ನು ಕೊಟ್ಟು ಹಂಸ ನಳನ ಸಂದೇಶವನ್ನು ದಮಯಂತಿಗೆ ಹೇಳಿದಂತೆ (ಕನ್ನಡ, ಚಂಪಕಮಾಲಾವೃತ್ತ) ಕಾವ್ಯ ಬಯಸಿದರು.
ಚರಣ . ವನಿತೆಯೆ ಕೇಳು ನಿನ್ನೊಡನೆ ಪೇಳುವೆ ಧರ್ಮದಹಾದಿಯಲ್ಲೆ ತಾ
ಚರಣ . ನನುದಿನಗಾನಿ ಧೈರ್ಯಗುಣವಂತನುದಾರಿ ಘೋರಸಂಗರಾ
ಚರಣ . ದ್ಯನುಭವ ಉಳ್ಳವನ್ನಾವನ ಕಂಡೊಡೆ ಶಾತ್ರವರೋಡುತ್ತಿರ್ಪರೈ
ಚರಣ . ಜನಪನಿರಸ್ತೆಯಾಗದಿರು ಸಂವರಿಸೈ ನಳನನ್ ನೃಪಾಲನಂ
ನಳಸಂದೇಶ ಪೂರೈಸಿದಾಗ ಸಭೆಯೇ ದಮಯಂತಿಯಂತಾಗಿ ಅವಧಾನಿಗೆ ಒಲಿದಿತ್ತು!

ಮಹೇಶ್ ಭಟ್ ಸಮಸ್ಯಾಕಾರಕನಾಗಿ ಕಾಣಿಸಿಕೊಂಡು ಕುಸುಮಗಳ ಹೊಸಕಿದನು ವೇಗದಿಂ ಶ್ರೀರಾಮ ಎಂದು ಸವಾಲಿಟ್ಟರು. ರಾಕ್ಷಸಗಡಣವನ್ನು ಲೆಕ್ಕವಿಲ್ಲದಂತೆ ಹೊಸಕಿದ ವೀರಪುಂಗವನಿಗೆ ಸುಕೋಮಲ ಕುಸುಮಗಳ ಮೇಲೆಲ್ಲಿಯ ಮುನಿಸು? ಆದರೆ ಅವಧಾನಿ ಅದನ್ನು ಅಚಾತುರ್ಯವೆಂದು ಕಾಣದೆ ಸರಳ ವಾಕ್ಯವನ್ನಾಗಿಯೇ ಸ್ವೀಕರಿಸಿದರು.
ಹಸೆಮಣೆಯೊಳೆನ್ನೊಡನೆ ಕುಳಿತಿರ್ದವನಿತೆತಾಂ
ಬಿಸಜಗಂಧಿನಿ ಮನಕೆ ಸಂತಾಪಮಂ
ಎಸಗಿದಳೆ ಸೀತೆ ತಾನೆಂದು ಸುರಿಸಿ ಕಣ್ಣೀರನು
ಕುಸುಮಗಳ ಹೊಸಕಿದನು ವೇಗದಿಂ ಶ್ರೀರಾಮ
ಸೀತಾಪಹಾರದ ದುಃಖದ ಭರದಲ್ಲಿ ಅನುದ್ದಿಷ್ಟ ಪ್ರಕ್ರಿಯೆಯಾಗಿ ಶ್ರೀರಾಮ ಹೂವನ್ನೇ ಹೊಸಕಿದನು ಎಂದು ಮುಗಿಸಿದ ಕಾವ್ಯ ಕೊಟ್ಟರು.

ನಿಯತಕಾಲಿಕೆಗಳಲ್ಲಿ ಕೊನೆಯದು ಕಾವ್ಯವಾಚನ. ಇಲ್ಲಿ ಅದಕ್ಕೆ ಶ್ರುತಿ, ತಾಳ ಮದ್ದಳೆ ಸಹಿತ ಯಕ್ಷಕಾವ್ಯಗಾನವನ್ನೇ ಆಯೋಜಿಸಿದ್ದರು. ಹರಿಕೃಷ್ಣ ಪೆಜತ್ತಾಯರು ಸುಶ್ರಾವ್ಯವಾಗಿ ಕಾಲಕಾಲಕ್ಕೆ ಕೊಟ್ಟ ಮೊದಲ ಮೂರು ಸವಾಲುಗಳನ್ನು ಕ್ರಮವಾಗಿ ಅಂಗದ ಸಂಧಾನ, ಕರ್ಣಾರ್ಜುನ ಮತ್ತು ಅತಿಕಾಯ ಮೋಕ್ಷದ ಸನ್ನಿವೇಶಗಳೆಂದು ಅವಧಾನಿ ಗುರುತಿಸಿದರು. ಕೊನೆಯ ಸುತ್ತಿನಲ್ಲಿ ಭೀಷ್ಮಪರ್ವದ ಪದ್ಯ ಗುರುತಿಸುವಲ್ಲಿ ಮಾತ್ರ ತಡವರಿಸಿದರು. [ಇಲ್ಲಿ ಗಣೇಶರು ಪ್ರಸಿದ್ಧ ಕಾವ್ಯಗಳಿಂದ ಎಂದೇ ಒತ್ತು ಕೊಟ್ಟು ಹೇಳುವುದು ನೆನಪಿಗೆ ಬಂತು. ಯಕ್ಷಗಾನ ಕಾವ್ಯಗಳ ಪಠ್ಯ ಉಪಲಬ್ಧಿ ತೀರಾ ಕೆಟ್ಟ ಸ್ಥಿತಿಯಲ್ಲಿದೆ.] ವಿಭಾಗದ ಉತ್ತರವನ್ನು ಅವಧಾನಿ ಆಗಿಂದಾಗ್ಗೆ ಯಕ್ಷಗಾನದ ಧಾಟಿಗೆ ಹೊಂದಿಸಿಕೊಂಡು ಕೋಮಲ ಸ್ವರದಲ್ಲಿ ಹಾಡಿ ಒಪ್ಪಿಸುತ್ತಿದ್ದದ್ದು ಕಲಾಪಕ್ಕೆ ಮೆರುಗನ್ನು ಕೊಟ್ಟಿತು. ಯಕ್ಷಕಾವ್ಯಗಳು ರಂಗಕ್ರಿಯೆಗೆ ಪೂರಕವಾಗಿಯೇ ರಚಿತವಾಗುವುದರಿಂದ ಬಹುತೇಕ ಸನ್ನಿವೇಶ ಮತ್ತೆ ಪ್ರಸಂಗ ಗುರುತಿಸುವ ಕ್ರಿಯೆ (ಅಧ್ಯಯನ ಮಾಡಿದವರಿಗೆ) ಅಪ್ರಯತ್ನವಾಗಿಯೇ ದಕ್ಕಿಬಿಡುತ್ತದೆ. ಹಾಗಾಗಿ ಕವಿಯನ್ನಾದರೂ ಹೆಸರಿಸುವ ಸಾಹಸಕ್ಕೆ ಅವಧಾನಿ ಮನಸ್ಸು ಮಾಡಬಹುದಿತ್ತು. ಮುಂದುವರಿದು ಯಕ್ಷ-ಕಾವ್ಯಗಳಿಂದ ಶುದ್ಧ ಕಾವ್ಯಗಳತ್ತ ಅವಧಾನಿಯ ಬೆಳವಣಿಗೆಯನ್ನೂ ಕಾದಿದ್ದೇನೆ.

ಅನಿಯತಕಾಲಿಕಗಳಾದ ಉಳಿದ ಮೂರೂ ವಿಭಾಗಗಳು ಸ್ವತಂತ್ರ ಸವಾಲುಗಳೂ ಹೌದು, ಅವಧಾನಭಂಗದ ಪ್ರಯತ್ನಗಳೂಹೌದು. ಉದ್ದಿಷ್ಟಾಕ್ಷರೀ ಮತ್ತು ಸಂಖ್ಯಾ ಬಂಧಗಳಲ್ಲಿ ಮೂಲ ಸವಾಲಿಡುವುದು ಮೊದಲಿಗೇ ಮತ್ತು ಒಮ್ಮೆಗೇ. ಮತ್ತೆ ಪೃಚ್ಛಕರು ಖುಶಿ ಬಂದಂತೆಲ್ಲಾ ಅವಧಾನದ ನಡುವೆ ನುಗ್ಗಿ, ಉತ್ತರವನ್ನು ಕಂತುಗಳಲ್ಲಿ ಅಕ್ಷರ ಅಥವಾ ಸಂಖ್ಯೆಯ ಮೂಲಕ ಪಡೆಯುತ್ತಾ ಹೋಗುತ್ತಾರೆ. ರಾಘವೇಂದ್ರ ಪುರಾಣಿಕರು ಉದ್ದಿಷ್ಟಾಕ್ಷರಿಯಲ್ಲಿ ಗೆಳೆಯನೊಬ್ಬನಿಗೆ ವಿದಾಯಗೀತೆಯನ್ನು (ಸಂಸ್ಕೃತ, ಅನುಷ್ಟುಪ್ ಛಂದಸ್ಸು) ಬಯಸಿದರು. ಆದರವರು ಒಟ್ಟು ಅವಧಾನವಧಿಗೆ ವ್ಯಾಪಕವಾಗುವಂತೆ ತನ್ನ ಬಯಕೆಗಳನ್ನೊಡ್ಡುವಲ್ಲಿ ದಾಕ್ಷಿಣ್ಯ ಮಾಡಿದಂತಿತ್ತು. ಸಹಜವಾಗಿ ಅವಧಾನಿ ಕೊನೆಯಲ್ಲಿ ಉಳಿದಷ್ಟನ್ನು ಅಯಾಚಿತವಾಗಿ ಕೊಡುವಂತಾಯ್ತು. ಅಷ್ಟಲ್ಲದೆ ವಿಭಾಗ ಸಂಸ್ಕೃತದಲ್ಲಿದ್ದುದರಿಂದ ಸಾರ್ವಜನಿಕ ಮನ್ನಣೆ ಗಳಿಸುವಲ್ಲೂ ಹಿಂದುಳಿಯಿತು. ಕೊಸರು: ಇದುವರೆಗೆ ಸಹಪಾಠಿಯಾಗಿದ್ದು ಹೆಚ್ಚಿನ ಅಧ್ಯಯನಕ್ಕೆ ದೂರದೂರಿಗೆ ಹೊರಟ ಅವಧಾನಿಗೆ ಪೃಚ್ಛಕ ಆತನಿಂದಲೇ ವಿದಾಯಗೀತೆ ಒರೆಸಿದ ಗುಟ್ಟು ಕೊನೆಯಲ್ಲಿ ರಟ್ಟಾದಾಗ ಸಭಿಕರು ಸಂಭ್ರಮಿಸಿದರು.

ಸಂಖ್ಯಾಬಂಧದ ಷಣ್ಮುಖ ಹೆಬ್ಬಾರ್ ಐದು ಐದರ ಚೌಕುಳಿ ಹಾಸನ್ನು ಸಭಿಕರಿಗೆ ಮಾತ್ರ ಕಾಣುವಂತೆ ಬಿಡಿಸಿಟ್ಟು, ಅಡ್ಡ ನೀಟ ಹಾಗೂ ಕಂಸಗಳ ಮೊತ್ತದಲ್ಲಿ (ಯಾವ ಸಂಖ್ಯೆಯನ್ನೂ ಎರಡು ಬಾರಿ ಉಪಯೋಗಿಸುವಂತಿಲ್ಲ) ೯೯೯ ಸಾಧಿಸಲು ಅವಧಾನಿಗೆ ಸೂಚಿಸಿದ್ದರು. ಮುಂದೆ ಕಲಾಪದುದ್ದಕ್ಕೂ ಖುಶಿ ಬಂದಂತೆ, ಖುಶಿ ಬಂದ ಮನೆಯ ಸಂಖ್ಯೆಯನ್ನು ಅವಧಾನಿಯಿಂದ ಕೇಳಿ ಪಡೆಯುತ್ತ ಹೋದರು. ಇದನ್ನು ಸಾರ್ವಜನಿಕರು ಪ್ರದರ್ಶಿಸಿದ್ದ ಬೋರ್ಡಿನಿಂದ ಸುಲಭವಾಗಿ ಗ್ರಹಿಸುತ್ತಿದ್ದುದರಿಂದ (ಹಲವರು ಕಾಗದ, ಪೆನ್ನುಗಳಿಂದ ಸಜ್ಜಿತರಾಗಿ ಬರೆದೂ ಅನುಭವಿಸುತ್ತಿದ್ದುದರಿಂದ) ಹರ್ಷೋದ್ಗಾರಗಳೊಡನೇ ಆಸ್ವಾದಿಸಿದರು. ಜನನಿರೀಕ್ಷೆಯ ಚೌಕುಳಿಯಲ್ಲಿ ಅವಧಾನಿ ನೂರಕ್ಕೆ ನೂರು ಉತ್ತೀರ್ಣ.

ಕೊನೆಯದಾಗಿ, ಆದರೆ ಸರ್ವಜನಮಾನ್ಯತೆಯಲ್ಲಿ ಅಗ್ರಣಿಯಾಗಿ, ಹೆಸರೇ ಹೇಳುವಂತೆ ಕಟ್ಟುಕಟ್ಟಳೆಗಳ ಅಂಕುಶವಿಲ್ಲದೆ ಮೆರೆಯುವ ಅಂಗ ಅಪ್ರಸ್ತುತ ಪ್ರಸಂಗ. ಅಮೃತೇಶ ಡಿ.ಎಸ್ ನಿರ್ದಾಕ್ಷಿಣ್ಯದಿಂದ ಮತ್ತು ಧಾರಾಳವಾಗಿಯೇ ಅಪ್ರಸ್ತುತಪ್ರಸಂಗಿಯಾದರು; ಅವಧಾನ ಭಂಗ ಅವಶ್ಯ ಮಾಡುತ್ತಿದ್ದರು. ಆದರೆ ಕಲಾಪ ಜನರಂಜನೆಯಲ್ಲಿ ಸೋತದ್ದೇ ಹೆಚ್ಚು. ಸವಾಲುಗಳು ಚುಟುಕಾಗಿರುವುದು, ನಗೆಬುಗ್ಗೆಯ ಸ್ಫೋಟಕವಾಗಿರುವುದು ಅವಶ್ಯವಿತ್ತು. ಮರಿಪ್ರಶ್ನೆಗಳನ್ನು ಹೇರುವುದು, ಸಂವಾದಕ್ಕೆಳೆಸುವುದು ಗೆಳೆತನದ ಸಲುಗೆಯಲ್ಲಿ ಸಹಜವೇ ಇರಬಹುದಾದರೂ ಸಭಾರಂಜನೆಯಲ್ಲಿ ಸ್ವಾರಸ್ಯ ಉಳಿಸದಾಯ್ತು.

ಆಶುರಚನೆಗಳು (ಗಣೇಶರೇ ಹೇಳುವಂತೆ) ಸಭಾಕಾವ್ಯಗಳಾದ್ದರಿಂದ ತಮ್ಮಷ್ಟಕ್ಕೆ ಗಾಢ ಪರಿಣಾಮವನ್ನು ಮಾಡಬೇಕೆಂದಿಲ್ಲ. ಕೊರತೆ ತುಂಬುವಂತೆ ಅವಧಾನಿ ತನ್ನ ವಿದ್ವತ್ತಿನ ಹರಹಿನಿಂದ ತತ್ಸಮಾನ ಅನ್ಯ ಕವಿಗಳ ಒಳ್ಳೆಯ ರಚನೆಗಳನ್ನು ಸಮೀಕರಿಸಿ ವಿವರಿಸುವುದು ಹೆಚ್ಚು ಪರಿಣಾಮಕಾರಿ. ಧಾರಣ, ಅಂದರೆ ಕೊನೆಯಲ್ಲಿ (ಆಶು ಕಾವ್ಯವನ್ನುಳಿದು) ಎಲ್ಲ ರಚನೆಗಳನ್ನು ಇಡಿಯಾಗಿ ಸಭೆಗೆ ಒಪ್ಪಿಸುವ ಸಂದರ್ಭದಲ್ಲಾದರೂ ಇಂಥ ಸಮರ್ಥನೆಗೆ ಹೆಚ್ಚಿನ ಅವಕಾಶವಿತ್ತು. ಆದರೆ ಕಾಲಮಿತಿಯನ್ನು ಒಪ್ಪಿಕೊಂಡು, ಕೊನೆಯಲ್ಲಿ ಕೇವಲ ಪೃಚ್ಛಕರ ಸ್ವಂತ ರಚನೆಗೆ ಮಾತ್ರ ವಾಚನಾವಕಾಶ ಒದಗಿಸಲಾಯ್ತು. ಅವಧಾನಿಯ ಧಾರಣ ಪರೀಕ್ಷೆ ನಡೆಯಲೇ ಇಲ್ಲ. ಆದರೂ ಸುಬ್ರಹ್ಮಣ್ಯ ಭಟ್ಟರ ದಶಕದ ಜಯಭೇರಿ ಸಣ್ಣದಲ್ಲ. ಅದು ಶತಕೋತ್ತರಕ್ಕೂ ಬೆಳೆಯಲಿ, ಶತಾವಧಾನಕ್ಕೂ ವ್ಯಾಪಿಸಲಿ. (ಪತ್ರಿಕಾ ಲೇಖನ ಮುಗಿಯಿತು.)

ನನ್ನ ಮಟ್ಟಿಗೆ ಉಡುಪಿ ಪ್ರದರ್ಶನ ಅನಿರೀಕ್ಷಿತ ಬೆರಗಿನಲ್ಲೂ ಮಂಗಳೂರಿನದು ಸಂಘಟನೆಯ ಜವಾಬ್ದಾರಿಯಲ್ಲೂ ಕಳೆದುಹೋಯ್ತು. ಆದರೆ ಮುಂದೆ (ಇಂದು ನೆನಪಿಗೆ ಬರುವಂತೆ) ಸುರತ್ಕಲ್, ಪುತ್ತೂರು, ಮೂಡಬಿದ್ರೆ, ವಿಟ್ಲ, ಕಟೀಲು, ಬೆಳ್ವಾಯಿ, ಮಡಿಕೇರಿ, ಕಾರ್ಕಳ, ಮಣಿಪಾಲ, ಸುಳ್ಯ, ಬೆಳ್ಳಾರೆ, ಮಂಗಳೂರಿನ ಹಲವು ವೇದಿಕೆಗಳಲ್ಲೂ ನಾನು ಕಾಗದ ಪೆನ್ನಿಟ್ಟುಕೊಂಡು ಕುಳಿತು, ಟಿಪ್ಪಣಿ ಮಾಡಿಕೊಂಡು ಅವಧಾನಗಳನ್ನು ಅನುಭವಿಸಿದ್ದೇನೆ. ಅವುಗಳಲ್ಲಿ ಬಹುಸಂಖ್ಯೆಯವು ಗಣೇಶರವೇ. ಕಬ್ಬಿನಾಲೆ ವಸನ್ತ ಭಾರದ್ವಾಜ, ಅವರ ತಮ್ಮ ಬಾಲಕೃಷ್ಣ ಭಾರದ್ವಾಜ, ಉಮೇಶ್ ಗೌತಮ್, ಗುಂಡಿಬೈಲು ಸುಬ್ರಹ್ಮಣ್ಯ ಭಟ್, ತೆಲುಗಿನ ಜೆ. ಸದಾನಂದ ಶಾಸ್ತ್ರಿಗಳದ್ದೂ ಕೇಳಿದ್ದೇನೆ. ಇವುಗಳಿಂದ ನಾನು ಗಳಿಸಿದ್ದೇನೋ ಗೊತ್ತಿಲ್ಲ. ಆದರೆ ಪಟ್ಟ ಸಂತೋಷವಂತೂ ಅಮರ. ಅವೆಲ್ಲಕ್ಕೂ ಮಿಗಿಲಾಗಿ ವ್ಯಕ್ತಿಯಾಗಿ ಗಣೇಶರೊಡನೆ ಬೆಳೆದ ಆತ್ಮೀಯತೆ ಅಪಾರ. ಗಣೇಶರದು ಅವಧಾನವೆಂದಲ್ಲ, ಸಾರ್ವಜನಿಕವಾಗಿ ಏನು ಮಾಡಿದರೂ ನನ್ನ ಅನುಕೂಲಕ್ಕೆ ಒದಗಿದಲ್ಲೆಲ್ಲ ನಾನು ಕೇಳುಗನಾಗಿ ಹೋಗಿದ್ದೇನೆ. ಹಾಗೇ ನನಗಗತ್ಯ ಬಂದಲ್ಲೆಲ್ಲಾ ಅವರನ್ನು ನಿರ್ಲಜ್ಜವಾಗಿ ಬಳಸಿಕೊಂಡಿದ್ದೇನೆ. ಅದನ್ನು ಇಲ್ಲಿ ಸಣ್ಣದಾಗಿಯಾದರೂ ದಾಖಲಿಸಿ ಸ್ಮರಿಸದಿರಲಾರೆ. ನನ್ನ ಪಟ್ಟಿ ಅಪೂರ್ಣವಾಗಬಹುದು, ಆನೆಯನ್ನು ನೊಗಕ್ಕೆ ಕಟ್ಟಿದ್ದೆಂದು ಓದುಗರಿಗೆ ಮುಜುಗರವಾಗಲೂ ಬಹುದು. ಆದರೆ ನಿಮಗೆ ಗೊತ್ತು, ಕುಚೇಲ ಕೃಷ್ಣನಲ್ಲಿಗಲ್ಲದೆ ಹೋದಾನು ಎಲ್ಲಿಗೆ!

ಅಭಯಾರಣ್ಯದಲ್ಲಿ ರಾಘವ ನಂಬಿಯಾರರ ದೀವಟಿಗೆ ಆಟ ನಡೆಸಿದ್ದೆವಷ್ಟೆ. ಸಮಯಕ್ಕೆ ಗಣೇಶರಿಗೆ ನಾನು ಮೂರು ವಿಧದ ಹಿಂಸೆ ಕೊಟ್ಟಿದ್ದೇನೆ. . ಕಲಾಪದ ಆರಂಭದಲ್ಲಿ ರಾಗಬದ್ಧವಾಗಿ ಹಾಡಿಕೆಗೆ ಒದಗುವಂತೆ ವನ್ಯಸಂರಕ್ಷಣೆಯ ಆಶಯಗೀತೆಯ ರಚನೆ. . ಸಂಜೆ ನಾಲ್ಕಕ್ಕೆ ತೊಡಗುವ ಸಭಾ ಕಾರ್ಯಕ್ರಮದಲ್ಲಿ ನಾಗರಹೊಳೆಯ ಚಿಣ್ಣಪ್ಪ ಮತ್ತು ಪೂರ್ಣಚಂದ್ರ ತೇಜಸ್ವಿ ಮುಖ್ಯ ಭಾಷಣಕಾರರು. ಅನಂತರ ದೀವಟಿಗೆ ಆಟವಾರಂಭವಾಗುವವರೆಗೆ ಅಂದರೆ ಸರಿಯಾದ ಕತ್ತಲಾಗುವವರೆಗೆ ಕೇವಲ ಮಾತಿನಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಜವಾಬ್ದಾರಿ ಗಣೇಶರದು. ಅದೂ ಭಾರತೀಯ ಪುರಾಣಗಳಲ್ಲಿ ವನ್ಯಸಂರಕ್ಷಣೆಯ ಉಲ್ಲೇಖಗಳ ಕುರಿತೇ ವಿಸ್ತರಿಸಬೇಕು. . ಸಭೆಯಿಂದ ಬರಬಹುದಾದ ಸಂದೇಹಗಳಿಗೆ ಸಮಾಧಾನವೂ ಒದಗಿಸುವುದಲ್ಲದೆ, ಇಡಿಯ ಮಾತು ಚರ್ಚೆಯನ್ನು ವಿರಾಮದಲ್ಲಿ ಪುಸ್ತಕ ಪ್ರಕಟಣೆಗೊದಗುವಂತೆ ಬರೆದುಕೊಡಬೇಕು. ನನ್ನ ಎಲ್ಲ ಪ್ರಸ್ತಾವ ಹೋಗುವ ಕಾಲಕ್ಕೆ ಗಣೇಶರು ಕಡೇ ಗಳಿಗೆಯ ಒತ್ತಾಯಗಳಿಗೆ ಮಣಿದು ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೊರಟಿದ್ದರು. ಆದರೇನು ಆಶಯಗೀತೆಯನ್ನು ಅಮೆರಿಕಾದಿಂದ ಮಿಂಚಂಚೆ ಮತ್ತು ಗೆಳೆಯ ಸೂರ್ಯಪ್ರಕಾಶ ಪಂಡಿತರ ಮೂಲಕ ನನಗೆ ಸಕಾಲಕ್ಕೆ ಕಳಿಸಿಕೊಟ್ಟರು. ಅಮೆರಿಕಾದಿಂದ ವಾಪಾಸಾದ ದಿನವೇ ಜೆಟ್ ಲ್ಯಾಗ್ ಮತ್ತೊಂದು ಎಣಿಸದೇ ರಾತ್ರಿ ಬಸ್ಸು ಹಿಡಿದು ನನ್ನ ಸಭೆಯ ಅನುಕೂಲಕ್ಕೂ ಒದಗಿದರು. [ಅವರ ಆದ್ಯತೆಗಳ ಒತ್ತಡದಲ್ಲಿ ನನ್ನ ಪುಸ್ತಕ ರಚನೆಯ ಬೇಡಿಕೆಯನ್ನು ಹೇರುವುದು ನನಗೇ ಅಪರಾಧವಾಗಿ ಕಾಣಿಸಿದ್ದಕ್ಕೆ ಅದೊಂದು ಇಂದಿಗೂ ಬಾಕಿಯಾಗಿಯೇ ಉಳಿದಿದೆ!] ಇದರೆಲ್ಲವಿವರಗಳೂನನ್ನಹಿಂದಿನಬರಹಗಳಲ್ಲಿ ದೀವಟಿಗೆಯಲ್ಲಿ ಸಭಾ ಕ್ಲಾಸ್ ಲೇಖನ ನೋಡಿ] ಉಲ್ಲೇಖಿಸಿರುವುದರಿಂದ ಇಲ್ಲಿ ಮರುಜಪಿಸುವುದಿಲ್ಲ.

ಗಣೇಶ್ ಮತ್ತು ಮಂಟಪರ ಅಪೂರ್ವ ಪ್ರಯೋಗ ಭಾಮಿನಿ ಉಚ್ಛ್ರಾಯದಲ್ಲಿದ್ದಾಗ ಉದಯವಾಣಿ ವಲಯದಲ್ಲಿ ಒಂದು ಚರ್ಚೆಯೂ ಬಿಗಡಾಯಿಸಿಕೊಂಡಿತ್ತು. ನಾನು ಯಾವ ಪೂರ್ವಾಗ್ರಹ, ಸ್ನೇಹಾಚಾರಗಳ ಬಂಧನವೂ ಇಲ್ಲದೆ ಭಾಮಿನಿಯನ್ನು ನನ್ನ ಉದಯವಾಣಿ ಪತ್ರಿಕಾ ವಿಮರ್ಶೆಯಲ್ಲಿ ಕೊಂಡಾಡಿದ್ದೆ. ಗೆಳೆಯ ದೇವು ಹನೆಹಳ್ಳಿ ಪ್ರತಿಕ್ರಿಯೆಯಲ್ಲಿ ಸಾಕಷ್ಟು ದೀರ್ಘವಾಗಿಯೇ ಭಾಮಿನಿಯನ್ನು ಹೀಗಳೆದಿದ್ದರು. ಪ್ರಾಮಾಣಿಕವಾಗಿ ನಮ್ಮಿಬ್ಬರ ಆಶಯವೂ ಯಕ್ಷಗಾನದ ಆರೋಗ್ಯವೇ ಇತ್ತು. ಆದರೆ ಸಾರ್ವಜನಿಕ ಮಾಧ್ಯಮದಲ್ಲಿ ವಿವಾದ ಅನಪೇಕ್ಷಿತ ಪೂರ್ವ ಪಕ್ಷಗಳಿಗೂ ಅನ್ಯ ಲಾಭಗಳಿಗೂ ಕಿಡಿಗೇಡಿತನಕ್ಕೂ ನುಸುಳಲು ಅವಕಾಶ ಮಾಡಿಕೊಟ್ಟಹಾಗಾಯ್ತು. ಇದನ್ನು ತಪ್ಪಿಸಲು ನಾನು ಅನೌಪಚಾರಿಕವಾಗಿ ನನ್ನ ಮನೆಯಲ್ಲೇ ಒಂದು ಮುಖಾಮುಖಿ ವ್ಯವಸ್ಥೆ ಮಾಡಿದೆ. ಅಂದು ಗಣೇಶರು ಸೇರಿದಂತೆ ಭಾಮಿನಿ ತಂಡ ಮಂಗಳೂರಿನಲ್ಲೇ ಒಂದು ಪ್ರದರ್ಶನ ಕೊಟ್ಟು ಮುಗಿಸಿತ್ತು. ಗಣೇಶ್, ಮಂಟಪ, ಭಾಗವತ ಗಣಪತಿ ಭಟ್ಟ್, ಮದ್ಲೆಗಾರ್ ಪಾಠಕ್ ಭಾಗವಹಿಸಿದ ಭಾಮಿನಿಯ ಪ್ರತಿನಿಧಿಗಳು. ದೇವು ಹನೆಹಳ್ಳಿಯನ್ನು ಬಹಳ ಒತ್ತಾಯದಿಂದ ತರಿಸಿದ್ದೆ. ಉಳಿದಂತೆ ಮುಕ್ತ ಮನಸ್ಸಿನಿಂದ ಮಂಗಳೂರಿನವರೇ ಆದ ಪ್ರಭಾಕರ ಜೋಶಿ, ಕುಂಬಳೆ ಸುಂದರ ರಾಯರು, ಸಿ.ಎನ್. ರಾಮಚಂದ್ರನ್ ಅಲ್ಲದೇ ಇನ್ನೂ ಕೆಲವು ಮಿತ್ರರು ಸೇರಿದ್ದರು. ಇದಕ್ಕೆಂದೇ ಉಡುಪಿಯಿಂದ ಮುರಳೀ ಕಡೇಕಾರ್ ಕಾರು ಮಾಡಿ ರಾಘವ ನಂಬಿಯಾರ್, ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಮಾಧವಾಚಾರ್ಯರನ್ನೂ ಕರೆತಂದಿದ್ದರು. ರಾತ್ರಿ ಸುಮಾರು ಹತ್ತು ಗಂಟೆಯಿಂದ ಹನ್ನೆರಡೂವರೆಯವರೆಗೂ ವಿಚಾರಗಳು ವಿಸ್ತರಿಸಿದವು. ಗಣೇಶ್ ಬಳಗ ಸವಿನಯ ವಸ್ತುನಿಷ್ಠವಾಗಿತ್ತು ಮತ್ತು ಚರ್ಚೆಗೆ ಮುಕ್ತವಾಗಿತ್ತು. ಆದರೆ ದೇವು ವಿಚಾರ ಮಂಡಿಸಿದ್ದಕ್ಕಿಂತಲೂ ಗೊಣಗಿದ್ದೇ ಹೆಚ್ಚು, ಅವರ ಮೇಲಿನ ಯಾವ ಅನುಕಂಪವೂ (ವಾಸ್ತವದಲ್ಲಿ ನನಗೇ ಇದ್ದುದಕ್ಕೆ ಸಭೆ ಆಯೋಜಿಸಿದ್ದೆ) ಒಂದು ಪ್ರತಿವಾದವಾಗುವ ಬಲ ಪಡೆಯಲೇ ಇಲ್ಲ. [ಇನ್ನೂ ಬೇಸರದ ಸಂಗತಿ - ಮುಂದೆ ದೇವು ತನ್ನ ಬರಹಗಳ ಸಂಕಲನ್ನು ಪ್ರಕಟಿಸಿದರು. ಅದರಲ್ಲಿ ಚರ್ಚೆ, ಸಮಾಧಾನಗಳ ಉಲ್ಲೇಖವೇ ಇಲ್ಲ.] ಇಂದು ಏಕವ್ಯಕ್ತಿ ಪ್ರಯೋಗಗಳು ಸಾವಿರದ ಗಡಿ ದಾಟಿ ನಡೆದಿರುವುದು, ಹತ್ತಿಪ್ಪತ್ತು ಪ್ರಸಂಗಗಳ ವ್ಯಾಪ್ತಿ ಪಡೆದಿರುವುದು, ಮನೆಮನೆಯಲ್ಲಿ ಡೀವೀಡಿಗಳಲ್ಲಿ ಪ್ರಸರಿಸುತ್ತಲೇ ಇರುವುದು, ಗಣೇಶರವೂ ಸೇರಿದಂತೆ ನಾಲ್ಕೈದು ಪುಸ್ತಕಗಳು ಬಂದಿರುವುದನ್ನು ನಾನು ವಿವರಿಸುವ ಅಗತ್ಯವಿಲ್ಲ

ಅಭಯಸಿಂಹನಿಗೆ (ಮಗ) ಪುಣೆಯಲ್ಲಿದ್ದಾಗ ಸಿನಿಮಾ ಕಲಿಕೆಯ ಅಂಗವಾಗಿ ಹಾಡನ್ನು ಚಿತ್ರೀಕರಿಸುವ ಪ್ರಯೋಗ ನಡೆಸಬೇಕಿತ್ತು. ಲಭ್ಯ ಹಾಡು ಅಥವಾ ಸಾಹಿತ್ಯ ಮೀರಿದ ವಿಚಿತ್ರ ಬಯಕೆ ಅವನದು. ಒಂದು ಹಾಡಿನಲ್ಲಿ ಭಾರತದ ವಿವಿಧ ಭಾಷೆಗಳ ಅರ್ಥಾನುಸಂಧಾನ ಸಾಧ್ಯವಾಗಬೇಕು. ಅದು ರಾಗ, ತಾಳ ಸೂಚನೆಯೊಡನೆ ದೇಶಭಕ್ತಿಯನ್ನು ಪ್ರೇರಿಸುವಂತದ್ದಿರಬೇಕು. ಖಂಡಿತವಾಗಿಯೂ ಸಮಸ್ಯೆಗಳನ್ನವನು ಒಟ್ಟು ಮಾಡುವಾಗ ತಲೆಯಲ್ಲಿ ಗಣೇಶಮೂರ್ತಿ ಗಟ್ಟಿ ಇದ್ದಿರಲೇಬೇಕು. ಹಾಗೇ ಮಾಡಿದ. ಇಂದಿನ ಸಿನಿಮಾದ ವಾಣಿಜ್ಯ ಮಾನದಂಡದಲ್ಲಿ ಅಳೆಯುವುದಾದರೆ, ಉತ್ತಮ ಗೀತರಚನಕಾರನಿಗೆ ಒಂದು ಹಾಡಿಗೆ ಕನಿಷ್ಠ ಐದು ಸಂಖ್ಯೆಯ ಶುಲ್ಕ ಕೊಡಬೇಕು. ಆದರೆ ಅಭಯ (ಅಂದರೆ ನಾವು), ನಾಮಮಾತ್ರದ ಶುಲ್ಕವನ್ನೂ ಪಡೆದುಕೊಳ್ಳಲೂ ಒಪ್ಪದ ಗಣೇಶರಿಂದ ಒಂದು ಅನನ್ಯ ರಚನೆಯನ್ನೇ ಪಡೆದ!
ಅತ್ರಿ ಬುಕ್ ಸೆಂಟರ್ ಮುಚ್ಚುವುದನ್ನು ನಾನು ಘೋಷಿಸಿಯಾಗಿತ್ತು. ಆಗ ಬೆಂಗಳೂರಿನಿಂದ ಸುದ್ದಿ ಬಂತು -  ಗಣೇಶರ ಹೊಸ ಪ್ರಯೋಗ ಮಂದ್ರ ಸಂಗೀತ. ಭೈರಪ್ಪನವರ ಅದ್ವಿತೀಯ (ಇದು ನನ್ನ ಮಾತಲ್ಲ, ಗಣೇಶರದೇ) ಕಾದಂಬರಿ ಮಂದ್ರದ ಸಾರ್ಥಕ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಯತ್ನ. ಸುಮಾರು ಮೂರು ಗಂಟೆಯ ಉದ್ದಕ್ಕೆ ನಡೆಯುವ ಒಂದು ಸಂಗೀತ-ಸಾಹಿತ್ಯ ಕಲಾಪ. ಕಾದಂಬರಿಯ ಓದು, ನಾಟಕರೂಪದ ಪರಿವರ್ತನೆಯಾಗಿಯೋ ಅಥವಾ ಯಥಾವತ್ತು ರಂಗದ ಮೇಲೆ ತರುವುದೋ ಸಿನಿಮಾ ಮಾಡುವುದೋ ನಾವು ಅನುಭವಿಸಿದ್ದೇವೆ. ಆದರೆ ಹೊಸ ಪ್ರಯೋಗದಲ್ಲಿ, ಮಂದ್ರ ಎಂಬ ಪುಸ್ತಕ ಪಾತ್ರ, ಭಾಷೆ, ಭಾವಗಳ ಸಂಲಗ್ನದಲ್ಲಿ ಕೇವಲ ಕಾದಂಬರಿಯಾಗಿ ಉಳಿದಿಲ್ಲ ಎನ್ನುವುದನ್ನು ಗಣೇಶರು ವ್ಯಾಖ್ಯಾನದಲ್ಲೂ ಖ್ಯಾತ ಗಾಯಕ ಫಯಾಸ್ ಖಾನ್ ಹಾಡಿನಲ್ಲೂ (ಪಕ್ಕವಾದ್ಯಗಳಲ್ಲಿ ಹಾರ್ಮೋನಿಯಂ - ರವೀಂದ್ರ ಕಾಟೋಟಿ ಮತ್ತು ತಬ್ಲಾ - ಗುರುಮೂರ್ತಿ ವೈದ್ಯ) ಪ್ರಮಾಣಿಸುತ್ತಿದ್ದರು. ಬೆಂಗಳೂರಿನಲ್ಲಿ ಇದರ ಪ್ರಥಮ ಪ್ರಯೋಗದ ಹೊಳಹುಗಳನ್ನು ಕೇಳಿಯೇ ನಾನೂ ಗೆಳೆಯ ಮನೋಹರ ಉಪಾಧ್ಯರೂ ಕರುಬಿದೆವುನಮಗೆ ಹಿಂದೊಂದೆರಡು ಅಪೂರ್ವ ಕಲಾಪಗಳನ್ನು ನಮ್ಮ ಮಿತಿಯಲ್ಲಿ ಮಂಗಳೂರಿನಲ್ಲಿ ಸಾಧ್ಯ ಮಾಡಿದ ಅನುಭವವೇನೋ ಇತ್ತು. ಆದರೆ ಮಂದ್ರ ಸಂಗೀತದ ಆರ್ಥಿಕ ಆಯಾಮ ಅಂದಾಜಿಸಲಾಗದೆ ಕೈಬಿಡುವವರಿದ್ದೆವು. ಆಗ ಇನ್ನೋರ್ವ ಗೆಳೆಯ ಮಹಾಲಿಂಗ ಭಟ್ಟರ ಮೂಲಕ ವಿಭಿನ್ನ ಬಳಗವೇ ಇದರಲ್ಲಿ ತೊಡಗಿಕೊಂಡುದರಿಂದ ಮಂಗಳೂರಿನಲ್ಲೂ ಅದು ಅತ್ಯಪೂರ್ವವಾಗಿ ನಡೆಯಿತು. ಕುರಿತು ಈಗಾಗಲೇ ನಾನು ಹಿಂದೆ ಬರೆದುಕೊಂಡಿರುವುವರಿಂದ ಇನ್ನು ವಿಸ್ತರಿಸುವುದಿಲ್ಲ. ಮಂದ್ರ-ಕಾದಂ ಸಂಗೀತ ಗಣೇಶರ ವಿದ್ವತ್ತು, ವಿನಯ, ಔದಾರ್ಯಗಳಿಗೆ ಇನ್ನೊಂದೇ ದೊಡ್ಡ ಸಾಕ್ಷಿ ಹೇಳುತ್ತದೆ. (ಇದು ಯಾವುದೇ ಪೂರ್ವ ವ್ಯಾಜ್ಯಕ್ಕೆ ಸಾಕ್ಷಿಯಲ್ಲ, ನಮ್ಮ ಅಂತಃ ಸಾಕ್ಷಿಗೆ ಹಿಡಿದ ಕನ್ನಡಿ.)    

ಕನ್ನಡದಲ್ಲಿ ಅವಧಾನ ಕಲೆಯ ಬಗ್ಗೆ ಸ್ವತಃ ಗಣೇಶರೇ ಬರೆದ ಉದ್ಗ್ರಂಥದಿಂದ ತೊಡಗಿ ಕೆಲವು ಸಾಹಿತ್ಯ ಇಂದು ಲಭ್ಯವಿದೆ. ಗಣೇಶರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲೇ ನಡೆಯುತ್ತಿರುವ ಪದ್ಯಪಾನ ಎಂಬ ಜಾಲತಾಣವಂತೂ (www.padyapaana.com) ತುಂಬಾ ಚೆನ್ನಾಗಿದೆ. ಇದರಲ್ಲಿ ಗಣೇಶರನ್ನು ಉದಯ ಟೀವಿ ಸುದೀರ್ಘವಾಗಿ ಸಂದರ್ಶಿಸಿದ್ದು ಮತ್ತು ಗಣೇಶರೇ ಅವಧಾನದ ಕುರಿತು ಏಕಸ್ರೋತವಾಗಿ ವ್ಯಾಖ್ಯಾನಿಸಿದ್ದು ವಿಡಿಯೋಗಳ ರೂಪದಲ್ಲಿದ್ದು ಓದು ದೂರಾದ ಕಾಲಕ್ಕೆ ಹೊಂದುವಂತೇ ಇದೆ! ಒಟ್ಟಾರೆ ನನ್ನೀ ಬರಹ, ಬೆಂಗಳೂರಿನಲ್ಲಿ ಮೂರು ದಿನಗಳುದ್ದಕ್ಕೆ ಅಂದರೆ ಐದು ಖಂಡಗಳಲ್ಲಿ ನಡೆಯುವ ಶತಾವಧಾನದ ಆಯಾಮವನ್ನು ಊಹಿಸಿಕೊಳ್ಳುವುದಕ್ಕೆ ಕೆಲವರಿಗಾದರೂ ಸಾಧನವಾದರೆ ನಾನು ಧನ್ಯ.

[ಮೇಲ್ಕಾಣಿಸಿದ ಬರಹವನ್ನು ಶತಾವಧಾನದ ಮುನ್ನೋಟದಂತೆ ನನ್ನ ಜಾಲತಾಣಕ್ಕೇರಿಸಲು (೩೦-೧೧-೧೨ರಂದು ಪ್ರಕಟವಾಗುವಂತೆ) ಅಭಯನಿಗೆ ಬಿಟ್ಟು ನಾನು ಶತಾವಧಾನ ಅನುಭವಿಸಲು ಬೆಂಗಳೂರಿಸಿದೆ. ಆದರೆ ಅಭಯ ಸಕ್ಕರೆ ಚಿತ್ರೀಕರಣದಲ್ಲಿದ್ದುದರಿಂದ ಆಗ ಪ್ರಕಟವಾಗಲಿಲ್ಲ. ಹಾಗಾಗಿ ಈಗ ಶತಾವಧಾನದ ಕಿರು ಅನುಬಂಧ.]

ಗಣೇಶರ ಶಿಷ್ಯಬಳಗ - ಪದ್ಯಪಾನ, ಇವರ ಶತಾವಧಾನ ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ಮೂವತ್ತರ ಸಂಜೆ ನಿಗದಿತ ಸಮಯಕ್ಕೆ ತಪ್ಪದಂತೆ ಹತ್ತು ಮಿನಿಟು ಮೊದಲೇ ಸಮೀಪದ ಗಣೇಶ ಗುಡಿಯಲ್ಲೆಲ್ಲೋ ಪೂಜೆ ಸಲ್ಲಿಸಿ, ಪಲ್ಲಕಿಯಲ್ಲಿ ಪ್ರಾತಿನಿಧಿಕ ಗ್ರಂಥಗಳನ್ನಿಟ್ಟು ಉತ್ಸವ ಅಲಂಕಾರ ಮತ್ತು ವಾದ್ಯಗಳೊಡನೆ ಮೆರವಣಿಗೆ ಎನ್ನೆಮ್ಕೇಯಾರ್ವೀ ಕಾಲೇಜು ವಠಾರಕ್ಕೆ ಬಂತು. ಹಿಂಬಾಲಿಸಿದಂತೆ ಕಲಾಪಗಳೂ ವೇದಿಕೆಯೂ ಜ್ಯೋತಿ ಪ್ರಜ್ವಲನದೊಂದಿಗೆ ನೇರ ಶತಾವಧಾನಕ್ಕೇ ತೊಡಗಿತು. ಪ್ರಾಯೋಜಕತೆಯ ನೆಲೆಯಲ್ಲಿ (ಸಮಿತಿಯದೇ ಸವಿಸಂಚಿಕೆ ಹೇಳುವಂತೆ) ನಾಲ್ಕು ಮಹಾ ಸಂಸ್ಥೆಗಳೂ ಪದ್ಯಪಾನದ್ದೇ ಅಸಂಖ್ಯ ಗೆಳೆಯರಿದ್ದರೂ (ಯಾವುದೇ ವೇದಿಕೆಯನ್ನು ನಿರ್ಲಜ್ಜವಾಗಿ ಆಕ್ರಮಿಸಿ ಎಲ್ಲವನ್ನೂ ಕುಲಗೆಡಿಸುವ ರಾಜಕಾರಣಿಗಳನ್ನು ಇಲ್ಲಿ ಯೋಚಿಸುವುದೂ ಅಪರಾಧ) ಇನ್ಯಾವುದೇ ವ್ಯಕ್ತಿ ಅಥವಾ ಔಪಚಾರಿಕ ಭಾಷಣಗಳಿಲ್ಲದೆ ಕೆಲಸ ನಡೆಸಲು ಸಾಧ್ಯವಿದೆ ಎಂದು ಕಾಣಿಸಿದ್ದು ತುಂಬ ಒಳ್ಳೆಯ ಆದರ್ಶವೇ ಸರಿ. ಪೃಚ್ಛಕ ಬಳಗದಲ್ಲಿ - ಸೂರ್ಯ ಪ್ರಕಾಶ ಪಂಡಿತ, ಪಾದೆಕಲ್ಲು ವಿಷ್ಣು ಭಟ್, ತಾರಾನಾಥ ವರ್ಕಾಡಿ, ಡಿ.ಎಸ್. ಶ್ರೀಧರ್, ನಾರಾಯಣ ಭಟ್, ಎಂ. ಹೆಗಡೆ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸುಬ್ರಹ್ಮಣ್ಯ ಭಟ್, ಉಮೇಶ್ ಗೌತಮ್, ಬಿ.ಎನ್. ಮನೋರಮಾ, ಚಂದ್ರಶೇಖರ ಕೆದಿಲಾಯ, ಶಾಂತಾರಾಮ ಪ್ರಭುಗಳಾದಿ ಅನೇಕರು ವಿದ್ವಾಂಸರು ನನಗೆ ಪೂರ್ವ ಪರಿಚಿತರೇ ಇದ್ದರು. ಮೊದಲ ಅವಧಿ ರಾತ್ರಿ ಒಂಬತ್ತು ಗಂಟೆಯನ್ನೂ ಮಿಕ್ಕಂತೆ, ಅಂದರೆ ಸುಮಾರು ಐದು ಗಂಟೆ ಅವಿರತ ನಡೆಯಿತು. ವೇದಿಕೆಯ ಮೇಲೆ ಗಣೇಶರಲ್ಲದೆ ಸುಮಾರು ಐವತ್ತು ಮಂದಿ ಪೃಚ್ಛಕರು, ಸಭಾ ಭವನದಲ್ಲಿ ಕೆಳಗೂ ಮಹಡಿಯ ಮೇಲೂ ಕುರ್ಚಿ ಖಾಲಿಯಿಲ್ಲದಂತೆ ಜನ, ಹೊರಗೆ ಮೈದಾನದಲ್ಲಿ ಶಾಮಿಯಾನ ಹಾಕಿ, ಕುರ್ಚಿ ಹಾಕಿ ದೊಡ್ಡ ಪರದೆಯಿಟ್ಟು ಅಲ್ಲೂ ಭರ್ತಿ ಜನ ಸಾಲದೆಂಬಂತೆ ಅಂತರ್ಜಾಲದಲ್ಲಿ ಇದರ ನೇರ ಪ್ರಸಾರದ ವ್ಯವಸ್ಥೆಯೂ ಮಾಡಿ ಅಪೂರ್ವವಾದ್ದನ್ನೇ ಸಾಧಿಸಿದ ಸಂಘಟಕರನ್ನೂ ಎಷ್ಟು ಹೊಗಳಿದರೂ ಸಾಲದು. ಸಭಾ ಭವನದೊಳಗೂ ತರತಮ ಭಾವವಿಲ್ಲ, ಮೊದಲು ಬಂದವರು ಯಾರೂ ಯಾವುದೇ ಆಸನವನ್ನೂ ಸ್ವೀಕರಿಸಬಹುದಿತ್ತು. ಬಂದವರಾದರೂ ಎಂಥವರು - ತರುಣರಿಂದ ಮುದಿಯರವರೆಗೆ ಅಷ್ಟೂ ಮಂದಿ, ಎಲ್ಲಿ ಯಾವ ಅಮೃತಬಿಂದು ಸೋರಿಹೋಗುತ್ತದೋ ಎಂಬಂತೆ (ಕಾಫಿ, ತಿನಿಸು, ಚರವಾಣಿ, ಕಾಡುಹರಟೆಗಳನ್ನೆಲ್ಲ ಮೀರಿ, ಹಲವರು ಪುಸ್ತಕ ಲೇಖನಿ ಹಿಡಿದು ಟಿಪ್ಪಣಿ ಮಾಡಿಕೊಳ್ಳುವವರೆಗೂ) ತನ್ಮಯರು! ಅವರೂ ಸಂಘಟನೆಯ ಪ್ರತಿ ಹಂತವೂ ಗಣೇಶರ ನಿಗರ್ವ ಸರಳತೆಗೆ, ಅಪಾರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯೇ ಆಗಿತ್ತು ಎಂದು ಧಾರಾಳ ಸಂಕ್ಷೇಪಿಸಬಹುದು.

ನಿಶಾಚರಿ ಬಸ್ಸಿನಲ್ಲಿ ನಿದ್ದೆಗೇಡಿಯಾಗಿ ಹೋದ ನನಗೆ ಮೊದಲ ದಿನ ತಲೆ ನೋವು ಕಾಡಿದರೂ ಮುಕ್ತಾಯದವರೆಗೆ ಕಲಾಪ ಬಿಟ್ಟೇಳುವುದಾಗಲಿಲ್ಲ. ಮರುದಿನ ಅನ್ಯ ಕಾರ್ಯ ಒತ್ತಡಕ್ಕೆ ಮಣಿಯಲೇಬೇಕಾದ್ದರಿಂದ ಬೆಳಗ್ಗಿನ ಅವಧಿಯನ್ನು ಮಾತ್ರ ಅನುಭವಿಸಿದೆ. ಮತ್ತುಳಿದ ಎಲ್ಲವನ್ನೂ ತುಂಡು ತುಂಡಾಗಿ ಮನೆಯಲ್ಲಿ ಕುಳಿತು ಅಂತರ್ಜಾಲದಲ್ಲಿ ನೋಡುವುದಷ್ಟೇ ಸಾಧ್ಯವಾದ್ದಕ್ಕೆ ನನ್ನ ಬಗ್ಗೇ ಕೋಪವಿದೆ ಆದರೆ ಅಷ್ಟಾದರೂ ಆಗಮಾಡಿದ ಪದ್ಯಪಾನದ ವ್ಯವಸ್ಥೆ ಬಗ್ಗೆ ಇನ್ನಿಲ್ಲದ ಕೃತಜ್ಞತೆಯಿದೆ. ನಾನೂ ಪುಸ್ತಕ, ಪೆನ್ನು ಇಟ್ಟುಕೊಂಡೇ ಅನುಭವಿಸಲು ತೊಡಗಿದ್ದೆ. ಇದು ಜಲಪಾತದಡಿಗೆ ಚೊಂಬು ಹಿಡಿದು ಸ್ನಾನಕ್ಕಿಳಿದವನ ಪಾಡಾಗಿ ಕಾಣಿಸಿತು. ಈಗ ಸಚೇಲ ಸ್ನಾನದ ಸಂತೋಷ ಉಳಿದಿದೆ. ಪದ್ಯಪಾನದವರು ತಿಂಗಳೊಳಗಾಗಿ ಸಮರ್ಥ ದಾಖಲೀಕರಣವನ್ನು (ಡಿವಿಡಿ, ಪುಸ್ತಕಗಳ ಮೂಲಕ) ಸಾರ್ವಜನಿಕರಿಗೆ ಲಭ್ಯ ಮಾಡಲಿರುವುದರಿಂದ ಇದನ್ನೋದಿ ಭಾಗಿಯಾಗಲಾಗದವರೂ ಆಂಶಿಕ ಪುಣ್ಯಭಾಜನರಾಗುವ ಅವಕಾಶಕ್ಕೆ ಅವಶ್ಯ ಸಂಪರ್ಕಿಸಿ www.padyapaana.com

15 comments:

 1. ಅಷ್ಟಾವಧಾನದ ಲೇಖನ ಅಮೂಲ್ಯವಾದುದು. ನಾನು ದಿಗಿಲುಗೊಂಡ ಕೆಲವು ಘಟನೆಗಳಲ್ಲಿ ಅಷ್ತಾವಧಾನವು ಒಂದು. ತೆಲುಗಿನ ಎರಡು ಪ್ರಯೋಗಗಳನ್ನು ನಾನು ನೋಡಿದ್ದ. ಅವು ಬಹುಮಟ್ಟಿಗೆ ಬೌದ್ದಿಕ ಕಸರತ್ತುಗಳು ಆಗಿದ್ದುವು. ಆದ್ರೆ ಗಣೇಶ ಅವರು ಅವಧಾನವನ್ನು ಕಸರತ್ತುಗಳಿಂದ ಬಿಡಿಸಿ ರಸಯುಕ್ತವಾಗಿಸುತ್ತಾರೆ. ಮಂಗಳೂರಿನ ಪ್ರದರ್ಶನದಲ್ಲಿ ನಾನು ಅಶುಕವಿತೆಯ ಬಗ್ಗೆ ಕೇಳಬೇಕಾಗಿತ್ತು . ಅ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಾಗಿಸಲಾಗುತ್ತಿತ್ತು. ನಾನು ಇಟ್ಟಿಗೆ ರಾಮಾಯಣ ಕುರಿತು ಕವನ ರಚಿಸಿ ಎಂದು ಕೇಳಿದಾಗ ಅವರು ಒಳ್ಳೆಯ ಧ್ವನಿಯಿರುವ ನಾಲ್ಕು ಸಾಲಿನ ಕವಿತೆ ಹೇಳಿದ್ರು. ಬಿಕ್ಕಟ್ಟಿನ ಘಳಿಗೆಯಲ್ಲಿ ಎಚ್ಚರದಿಂದ ನಡೆದುಕೊಳ್ಳುವ ಶ್ರೀ ಗಣೇಶ್ ನಮ್ಮ ಕಾಲದ ಬಹುದೊಡ್ಡ ಪ್ರತಿಭೆ ನಿಮ್ಮ ಲೇಖನ ಆ ಪ್ರತಿಭೆಯನ್ನು ಸರಿಯಾಗಿ ಹಿಡಿದಿದೆ. ಕು ಶಿ ಅವರಿಲ್ಲದ ಕರಾವಳಿ ತಬ್ಬಲಿಯಾಗಿದೆ.

  ReplyDelete
 2. ಅಶೋಕಣ್ಣ,ಹಿಂದೆ ಮಂಗಳೂರಿನಲ್ಲಿ(ಭಾರತೀಯ ವಿದ್ಯಾಭವನದಲ್ಲಿ ಎಂದು ನೆನಪು)ಅಷ್ಟಾವಧಾನವನ್ನು ಗಣೇಶ್ ಅವರು ನಡೆಸಿಕೊಟ್ಟಾಗ ನೀನು ಹೇಳಿ ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ,ಆಗ ಹೆಚ್ಚೇನೂ ಅರ್ಥವಾಗದಿದ್ದರೂ ಜೋಶಿಯವರ ಅಪ್ರಸ್ತುತ ಪ್ರಸಂಗವನ್ನು ಮನಸಾರೆ ಅನುಭವಿಸಿದೆ,ಮತ್ತೆ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ಅಷ್ಟಾವಧಾನ ನಡೆದಾಗ ನೀನು ನಿನ್ನ ಬೈಕಿನಲ್ಲಿ ನನ್ನನ್ನು ಕರೆದುಕೊಂಡು ಹೋಗಿದ್ದೆ,ಆಗ ಅಷ್ಟಾವಧಾನದ ಸ್ವರೂಪದ ಬಗ್ಗೆ ಸ್ಥೂಲ ವಿವರಣೆ ಕೊಟ್ಟಿದ್ದೆ,ಹಾಗಾಗಿ ಪೆನ್ನು,ಕಾಗದ ಇಟ್ಟುಕೊಂಡು ಏನೋ ಸ್ವಲ್ಪ ಅರ್ಥೈಸಿಕೊಳ್ಳಲು ಸಹಾಯವಾಯಿತು,ಮೊನ್ನೆಯಂತೂ ಎರಡು ಬಾರಿ NMKRV ಕಾಲೇಜಿನ ಸಭಾಂಗಣದಲ್ಲಿ ಕುಳಿತು,ಉಳಿದಂತೆ ಮನೆಯಲ್ಲೇ ಕಂಪ್ಯೂಟರ್ ನ ಎದುರು ಕುಳಿತು ಅಂತರ್ಜಾಲಿಗ ಸ್ನೇಹಿತರೊಂದಿಗೆ ಪೂರ್ತಿಯಾಗಿ ಸವಿದಿದ್ದೇನೆ,ಇನ್ನೂ ಅಷ್ಟಾವಧಾನದ,ಅಷ್ಟಾವಧಾನಿಯ ಗುಂಗು ಬಿಟ್ಟಿಲ್ಲ,ಈ ಗುಂಗು ಬಿಡುವುದೂ ಬೇಡ,ಈಗ you tubeನ್ನು ಜಾಲಾಡಿ ಅಷ್ಟಾವಧಾನದ ವಿಡಿಯೋಗಳನ್ನು ಮತ್ತೆ ಮತ್ತೆ ನೋಡುವುದೇ ಆಗಿದೆ.

  ReplyDelete
 3. ಮೃದು ಮಾತಿನ ಈ ಕವಿಯಲ್ಲಿ ಇರುವ ಸಾಹಿತ್ಯದ ಅಘಾತೆಯನ್ನು ನೋಡಿ ಬೆರಗಾಗಿದ್ದೇನೆ. ಗಣೇಶರ ಶತಾವಧಾನವನ್ನು ನಿನ್ನೆ ರಾತ್ರಿ you tube ನಲ್ಲಿ ನೋಡಿಯೇ ಮಲಗಿದ್ದೆ. ಇಂದು ನಿಮ್ಮಿಂದ ಅವರ ಇದುವರೆಗಿನ ನಡೆಯ ಅವಲೋಕನನೋಡಿ ಮತ್ತೊಮ್ಮೆ ಖುಷಿಯಾಯಿತು. ಸಾಹಿತ್ಯಲೋಕ ಹೆಮ್ಮೆಪಡಬೇಕಾದ ಮಹನೀಯ ಅವರು. -ನಾರಾಯಣ ಯಾಜಿ

  ReplyDelete
 4. ಶತಾವಧಾನದ ಗುಂಗಿನಿಂದ ನಾನಿನ್ನೂ ಹೊರಬಂದಿಲ್ಲ.. ಕೆಲ ತಿಂಗಳೇ ಬೇಕು.. ನಾನು ನೋಡಿದ ಮೊದಲ ಶತಾವಧಾನವಿದು. ಅಷ್ಟಾವಧಾನ ಕೆಲ ಕಡೆ ಹಠಕ್ಕೆ ಬಿದ್ದು ಹೋಗಿ ನೋಡಿದ್ದಿದೆ. ಗಣೇಶರ ವಿದ್ವತ್ತಿಗೆ ನಮೋ ನಮಃ
  ಈಶ್ವರಚಂದ್ರ
  ಬೆಂಗಳೂರು

  ReplyDelete
 5. ಅದ್ಭುತ ಸಾಮರ್ಥ್ಯ. ಇದು ಕೇವಲ ಕಲಿಕೆಯಿಂದಲೇ ಬರುವಂಥದ್ದಲ್ಲ

  ReplyDelete
 6. ನಾನು ಶ್ರೀ ಗಣೇಶ್ ಅವರ ಶತಾವಧಾನ, ಶತಾವಧಾನ ಪ್ರಯೋಗಗಳನ್ನು ಮೈಸೂರು, ಇಂಗ್ಲೆಂಡ್, ಅಮೆರಿಕಗಳಲ್ಲಿ(2000) ನೋಡಿ ತುಂಬ ಸಂತೋಷಪಟ್ಟಿದ್ದೇನೆ. ಆಗ ಅವರ ಬಗ್ಗೆ ಮೆಚ್ಚುಗೆಯ ಜೊತೆಗೆ ಮೂಡುತ್ತಿದ್ದ ಭಾವವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವೆ: ಅಷ್ಟಾವಧಾನ ಅಪೂರ್ವ ಸಾಮರ್ಥ್ಯದ ಕಲೆ. ಇದನ್ನು ಕಲೆಯ ಒಂದು ನಿರ್ದಿಷ್ಟ ಪ್ರಕಾರವಾಗಿ ಪೋಷಿಸಿ ಉಳಿಸಿಕೊಂಡು ಬರಲಾಗುತ್ತಿದೆ. ಅವಧಾನ ಸಾಮರ್ಥ್ಯವನ್ನು ಶಿಕ್ಷಣ ಪ್ರಮದಲ್ಲಿ ಅಳವಡಿಸಿ ಪೋಷಿಸಿದರೆ ಸಂಗೀತ, ಸಾಹಿತ್ಯಗಳಂಥ ಕಲೆಗಳಲ್ಲದೆ ಲೌಕಿಕ ವಿದ್ಯೆಯ ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಅವಕಾಶವಿದೆ. ಸ್ವತಃ ಅಧ್ಯಾಪಕರಾದ ಶ್ರೀ ಗಣೇಶರು ಜ್ಞಾನಾರ್ಜನೆಯಲ್ಲಿ ತೊಳಲುತ್ತಿರುವ ಅವಧಾನದ ಕೊರತೆಯಿಂದ ಹಿಂದುಳಿಯುವ ವಿದ್ಯಾರ್ಥಿಗಳಿಗೆ ಅವಧಾನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ವಿಧಾನ, ಕೌಶಲಗಳನ್ನು ಕಲಿಸುವುದಾದರೆ ಅವಧಾನ ಕಲೆ ಪಾರಮಾರ್ಥಿಕ, ಕಲಾತ್ಮಕ ಮಾತ್ರವಲ್ಲದೆ ಲೌಕಿಕ ಜ್ಞಾನಾತ್ಜನೆಗೂ ಕೊಡುಗೆ ನೀಡಿದಂತಾಗುತ್ತದೆ. ಇದು ಪ್ರೀತಿಯ ವಿಜ್ಞಾಪನೆ. ಕೋರಿಕೆ.

  ReplyDelete
 7. ರಾ.ಗಣೇಶ07 December, 2012 16:32

  ಪ್ರಿಯ ಅಶೋಕವರ್ಧನರಿಗೆ ನಮಸ್ಕಾರ,

  ಪನಿಗಣ್ಣಾದೆನಮೇಯಮಪ್ಪ ಮಧುರೋದಾರಪ್ರಿಯಂಭಾವುಕ-
  ಧ್ವನಿಯಿಂ ನೀಮೊರೆದಿರ್ಪ ಮದ್ವಿಷಯಕಸ್ನೇಹಾರ್ದ್ರವಾಕ್ಯಂಗಳಂ|
  ಮನನಂಗೆಯ್ಯುತೆ, ಮುನ್ನಿನೆಲ್ಲ ಕತೆಗಳ್ ಕಣ್ಮುಂದೆ ತಳ್ಕೈಸುತುಂ
  ಕನಸೇ ವಾಸ್ತವಮಾದವೊಲ್ ನಡೆದುವಯ್ ಮೇಣ್ ದಿಬ್ಬಣಕ್ಕೊಲ್ದವೊಲ್||

  ಮೊನ್ನೆ ನಿಮ್ಮನ್ನು ವೇದಿಕೆಯಿಂದ ಕಂಡಾಗಲೇ ಆನಂದವಾಯಿತು:

  ಅವಧಾನಯಶಸ್ವಿತೆಗಂ
  ನವಲಾಮಲಪಶ್ಚಿಮಾಬ್ಧಿಯಯ್ತಂದವೊಲೇ|
  ಛವಿಮನ್ನೇತ್ರದ ನಿಮ್ಮು-
  ತ್ಸವಕರಮಂದಸ್ಮಿತಾಸ್ಯಮೆನಗಾದುದಲಾ!!

  ಮರುದಿನವೂ ನೋಡಿದೆ. ಆ ಬಳಿಕ ನಿಮ್ಮ ಬರೆಹಗಳು ನನ್ನ ಕೈಸೇರಿದಾಗ ನೀವು ನನ್ನನ್ನು
  (ನಾನೇ ಕೋರಿದಂತೆ) ಮಾತನಾಡಿಸದೆ ಕಾರ್ಯಭಾರನಿಮಿತ್ತ ಊರಿಗೆ ತೆರಳಿರಬೇಕೆಂದು
  ಭಾವಿಸಿದ್ದೆ. ಆ ಬರೆಹಗಳಲ್ಲಿ ನೀವು ನನ್ನ ಹಾಗೂ ಶ್ರೀ ಸುಬ್ರಹ್ಮಣ್ಯಭಟ್ಟರ ಅವಧಾನಗಳ
  ಬಗೆಗೆ ಬರೆದದ್ದು ನನ್ನ ಪತ್ರಿಕಾಲೇಖನಸಂಗ್ರಹದಲ್ಲಿ ಇನ್ನೂ ಉಂಟು. ಆದರೆ ಇದೀಗ
  ಇಲ್ಲಿ ಆ ಕಾಲದ ಆಹ್ವಾನಪತ್ರಿಕೆಗಳ ಸಮೇತ ನೀವು ಬರೆದದ್ದನ್ನು ಕಂಡಾಗ ಮಾತೇ
  ಹೊರಡಲಿಲ್ಲ. ಮೊನ್ನೆ ರಾತ್ರಿ ಕೂಡ ಕೆಲವು ಗೆಳೆಯರಿಗೆ ನೀವು ಹಿಂದೆ ಆಯೋಜಿಸಿದ
  ವಾರಗಟ್ಟಲೆ ನಿರ್ವಿರಾಮ ಅವಧಾನಮಾಲಿಕೆಯ ಯಾತ್ರೆಗಳ ಬಗೆಗೆ ಹೇಳುತ್ತಿದ್ದೆ. ಆ ಎಲ್ಲ
  ಸವಿನೆನಪಿಗೆ ಕಾರಣರಾದ ನಿಮಗೆ ಹೇಗೆ ಧನ್ಯವಾದ ಹೇಳಲಿ? ಮಾತು ತೀರ ಕೃತಕವಾದೀತು.
  ಸುಮಾರು ಇಪ್ಪತ್ತೊಂದು ವರ್ಷಗಳಿಂದಲೂ ಹಸುರಾಗಿರುವ ಸ್ನೇಹಕ್ಕೆ ನಮಸ್ಕಾರ. ಇದು ನಿಮ್ಮ
  ಮುಂದಿನ ತಲೆಮಾರಿಗೂ ಹರಿದಿದೆ:-).

  ಮುಖ್ಯವಾಗಿ ಮೊನ್ನೆಯ ಆ ಶತಾವಧಾನದ ಎಲ್ಲ ಯಶಸ್ಸಿಗೆ ನಮ್ಮ ಪದ್ಯಪಾನಿಗಳೇ ಕಾರಣ. ಅವರ
  ಶ್ರದ್ಧೆ-ನಿಸ್ಸ್ಪೃಹತೆ-ಸಮರ್ಪಣೆಗಳೇ ಇದಕ್ಕೆ ಆದ್ಯಂತಶಕ್ತಿ. ನಾನು ಇಲ್ಲಿ
  ನಗಣ್ಯವಷ್ಟೇ ಅಲ್ಲ ಅಪ್ರಸ್ತುತವೂ ಹೌದೆಂಬಷ್ಟರ ಮಟ್ಟಿಗೆ ಅವರ ಪಾತ್ರ ಹಿರಿದು.
  ರಾಜಕಾರಣ/ಕಾರಣಿ/ಅಧಿಕಾರಶಾಹಿ/ಸರ್ಕಾರ/ಭೀಷಣಭಾಷಣ ಹೊಗಳಿಕೆ-ಹಾರ-ತುರಾಯಿಗಳ ಹಿಂಡು
  ಇತ್ಯಾದಿಗಳಾವುವೂ ಇಲ್ಲದಂತೆ, ಕೇವಲ ಕಲೆ ಮತ್ತು ಪ್ರಾಮಾಣಿಕವಿದ್ವತ್ತೆ-ದುಡಿತಗಳಷ್ಟೇ
  ಇರುವಂತೆ ಆಯೋಜಿಸಬೇಕೆಂಬ ನನ್ನ ಹಠಕ್ಕೆ ಇನಿಸೂ ಮುಕ್ಕಾಗದಂತೆ ಮಾಡಿದ್ದಾರೆ.
  ಇನ್ನಾವುದೇ ಅನರ್ಥಗಳಿಗೆ ನನ್ನ ಅನವಧಾನ-ಅವಿವೇಕ-ಅಶಕ್ತಿಗಳೇ ಕಾರಣ.ಮತ್ತೊಮ್ಮೆ
  ನಮನಗಳು.

  ಇತಿ ಭವದೀಯ

  ರಾಗ

  ReplyDelete
 8. Namasthe. Thank you for the dtailed report and also for rfring to my name in conxion with BVB avadhana which was unique in many ways
  Also an occassion to remember PROFS. KUSHI , RAJAGOPALACHARYA , SHARMA .
  mpjoshy.

  ReplyDelete
 9. ಅವು ಅದ್ಭುತ ಮೂರು ದಿನಗಳಾಗಿದ್ದವು.ಗಣಕದಲ್ಲಿ ಅದನ್ನು ನೋಡುತ್ತಾ ಇದ್ದಾಗ ನಿತ್ಯದ ಕಾಯಕಗಳಿಗೆ ಆಚಿಇಚೆ ಸರಿಯಲೂ ಮನಸ್ಸಾಗದೆ , ಯಾವುದೋ ಕೆಲಸಕ್ಕೆ ಅಂತ ಎದ್ದು ಹೊರಟು ಮತ್ತೆ ನಿಂತೇ ಮತ್ತರ್ಧ ಗಂಟೆ ಕಳೇದದ್ದೂ ಉಂಟು. ಮತ್ತೂ ಎರಡು ಮೂರು ದಿನಗಳೂ ನಿದ್ದೆಯಲ್ಲೂ ಅದೇ ಅವಧಾನದ ಕ್ಷಣಗಳು ಮನಸ್ಸಿನಲ್ಲಿ, ಕಣ್ಣ ಮುಂದೆ ಹಾಯುತ್ತಿದ್ದವು. ಲೈವ್ ಬಗ್ಗೆ ಮೊದಲೇ ಸಾಕಷ್ಟು ಪ್ರಚಾರ ಇರಲಿಲ್ಲ ಅನಿಸುತ್ತೆ. ಅಥವಾ ನನಗೆ ಗೊತ್ತಿರಲಿಲ್ಲ. ನವಂಬರ್ ೩೦ಕ್ಕೆ ಲೈವ್ ಇರಬಹುದೇನೋ ಅಂತ ಕಂಪ್ಯೂಟರ್ ಹಾಕಿ ನೋಡಿದಾಗ ಅದೃಷ್ಟವಶಾತ್ ಇತ್ತು. ನಮ್ಮ ಮಂಗಳೂರಿನಲ್ಲಿ ವಿ4, ನಮ್ಮ ಟಿವೀ ಯಂಥ ವಾಹಿನಿಗಳು(ಶುಲ್ಕ ಪಡೆದು) ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುತ್ತವೆಯಲ್ಲ, ಹಾಗೆ ಈ ಉತ್ಕೃಷ್ಟ ಕಾರ್ಯಕ್ರಮವನ್ನು ಬೆಂಗಳೂರಿನ ಸ್ಥಳೀಯ ವಾಹಿನಿಗಳು ಯವುವಾದರೂ ಪ್ರಸಾರ ಮಾಡಿದವೇ? ಮಾಡಿದ್ದರೆ ಒಳ್ಳೆದಿತ್ತು. ನಾನಂತೂ ಈ ಕಾಲದಲ್ಲಿ ಬದುಕಿದ್ದಕ್ಕೆ ಸಂತೋಷಪಡುವ ಕಾರಣಗಳಲ್ಲಿ ನನ್ನ ಕಾಲದಲ್ಲಿ ಶತಾವಧಾನದ ಇರುವಿಕೆಯೂ ಒಂದು. ಪೃಚ್ಚಕರ ಪದ್ಯಗಳನ್ನು ಕೇಳಲು ನನಗೆ ಆಸೆಯಿತ್ತು. ಆದರೆ ದೂರದೂರುಗಳಿಗೆ ಹೋಗಲು , ಕನಸಿನಲೋಕದಿಂದ ತಮ್ಮ ಅನಿವಾರ್ಯ ದೈನಂದಿಮ್ನ ಜ್ಂಜಾಟಕ್ಕೆ ಹಿಂದಿರುಗಲು ಪೃಚ್ಚಕರಿಗೂ ಅವಸರವಿದ್ದಿರಲೂ ಬಹುದು. ಸಿ.ಡಿ.ಗಾಗಿ ಕಾಯೋಣ. ಅಜಕ್ಕಳ ಗಿರೀಶ

  ReplyDelete
 10. ಶತಾವಧಾನ ಎಂದರೆ ಏನೆಂದು ತಿಳಿದುಕೊಳ್ಳಲು ನಾನು ಮೊದಲನೆಯ ದಿನವೇ ಹೋಗಿದ್ದೆ. ಕಾವ್ಯ, ಛಂದಸ್ಸು ಇದೆಲ್ಲ ನನಗೆ ಗೊತ್ತಿಲ್ಲ. ಆದರು ಬೋರ್ ಆಗಲೇ ಇಲ್ಲ. ಸಾಕು ಇನ್ನು ಇಲ್ಲಿಂದ ಹೋಗುವ ಅಂತ ಅನಿಸಲೇ ಇಲ್ಲ. ಕೊನೆ ದಿನ ಇಡೀ ಕಾರ್ಯಕ್ರಮ ನೋಡಿ ಕೇಳಿ ಆನಂದಿಸಿದೆನು. ಇಷ್ಟು ಜ್ಞಾನ, ವಿದ್ವತ್, ಅಪಾರ ಸ್ನೇಹಿತರು ,ಅಭಿಮಾನಿಗಳ ಬಳಗ ಎಲ್ಲವೂ ಇದ್ದರೂ ಹಣ ಮಾಡುವ ದುರಾಸೆ ಇಲ್ಲ ,ಮನ್ನಣೆಯ ದಾಹ ಇಲ್ಲ, ಅಹಂಕಾರವೆಂಬುದು ಗುಂಡು ಸೂಜಿಯ ಮೊನೆಯಷ್ಟು ಇಲ್ಲ . ಮನುಷ್ಯ ಅಂದರೆ ಹೀಗೂ ಇರಬಹುದು ಇದು ಭ್ರಮೆಯಲ್ಲ ವಾಸ್ತವ ಎಂದು ಗಣೇಶ್ ಅವರನ್ನು ನೋಡಿತಿಳಿಯಿತು. ಶತಾವಧನವನ್ನು ಆಯೋಜಿಸಿದವರಿಗೆ ಅನಂತ ವಂದನೆಗಳು. ಈ ಕಾರ್ಯಕ್ರಮ ನೋಡಿದ ನಂತರ ನನಗನಿಸಿದ್ದು - ಜ್ಞಾನದ ಸ್ಕೇಲ್ ನಲ್ಲಿ ನಾನು ಶೂನ್ಯಕ್ಕಿಂತ ಕೆಳಗಿದ್ದೇನೆ ಅಂತ. ಶತಾವಧಾನ ಮತ್ತು ಅವಧಾನಿಗಳ ಬಗ್ಗೆ ಬರೆಯಲು ನನಗೆ ಅರ್ಹತೆ ಇಲ್ಲ. ಆದರೆ ಸಂಘಟಕರ ಬಗ್ಗೆ,ಅಲ್ಲಿದ್ದ ನಿಸ್ವಾರ್ಥಿ, ಸಮರ್ಥ ಸ್ವಯಂ ಸೇವಕರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಲೇ ಬೇಕು. ಅಲ್ಲಿ ದುಡಿದ ಎಲ್ಲ ಸಹೃದಯರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು. ಅಚ್ಚುಕಟ್ಟಾದ ವ್ಯವಸ್ಥೆ , ಅಲ್ಲಿಗೆ ಬಂದವರ ಜೊತೆ ಅವರೆಲ್ಲ ವಿನಯವಾಗಿ ನಡೆದುಕೊಳ್ಳುತ್ತಿದ್ದ ರೀತಿ ಎಲ್ಲವು ಪ್ರಶಂಸನಾರ್ಹ .ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಯುವ ಜನತೆಯನ್ನು ನೋಡಿದರೆ- ಕಾಲ ಕೆಟ್ಟಿದೆ, ಜನರು ಕೆಟ್ಟು ಹೋಗಿದ್ದಾರೆಂದು ಕೊರಗುವ ಹಿರಿಯರು ತಮ್ಮ ಅಭಿಪ್ರಾಯ ತಿದ್ದಿಕೊಂಡಾರು! ಮತ್ತೊಮ್ಮೆ ಧನ್ಯವಾದಗಳು.

  - ಎಸ್.ವೀಣಾ

  ReplyDelete
 11. ನಾನೂ ಸಹ ಬೆಂಗಳೂರಿನ ಶತಾವಧಾನದ ಮೇಲೆ ಬರೆದಿದ್ದೇನೆ. ದಯಮಾಡಿ ಓದಿ ಸಲಹೆ ಕೊಡಿ ಎನಗೆ ಎಂದು ಅರಿಕೆ . ಇಲ್ಲಿದೆ ಲಿಂಕ್ :
  www.hariharbhat.blogspot.in

  ReplyDelete
 12. ಶತಾವಧಾನಿ Dr. Ganesh ಏಕೆ ನಮಗೆ ಅಸ್ಟು ಆಪ್ತವಾಗುತ್ತಾರೆ ?

  ಶತಾವಧಾನಿ Dr. Ganesh ಏಕೆ ನಮಗೆ ಅಸ್ಟು ಆಪ್ತವಾಗುತ್ತಾರೆ ? ಅವರ ಅವಧಾನಗಳಿಗೇಕೆ ಅಸ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ ? ಕಂಡು ಕೇಳರಿಯದ , ಸತತ ಮೂರೂ ದಿನಗಳಲ್ಲಿ ಅವ್ಯಾಹತವಾಗಿ ಇಪ್ಪತ್ತು ಘಂಟೆಗಳ ಕಾಲ ನಡೆದ ಶತಾವಧಾನಕ್ಕೆeಕೆ ದಿನದಿಂದ ದಿನಕ್ಕೆ ಆಗಮಿಸುವವರ ಸಂಖ್ಯೆ ಜಾಸ್ತಿಯಾಗಿತ್ತು ? ಪ್ರೆಕ್ಷಕರೆeಕೆ ಆ ಪರಿ ಚಪ್ಪಾಳೆ ತಟ್ಟಿ , ತಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು ? ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಎಲ್ಲರು ಎದ್ದು ನಿಂತು ( standing ovation ) ಏಕೆ ಗೌರವ ಸೂಚಿಸುತ್ತಿದ್ದರು ? ಈ ಎಲ್ಲ ವಿಚಾರವಾಗಿ ಘಂಬಿeರವಾಗಿ ಚಿಂತಿಸುವ ಅವಶ್ಯಕತೆ ಇದೆ.

  ಗಣೇಶ್ ರವರು ಬಹು ಭಾಷಾ ಪಂಡಿತರು. ನಿರರ್ಗಳವಾಗಿ ಇಂಗ್ಲಿಶ್ , ಸಂಸ್ಕ್ರತ , ಕನ್ನಡ , ತೆಲಗು , ತಮಿಳು , ಉರ್ದು ಭಾಷೆಗಳಲ್ಲಿ ಮಾತನಾಡಬಲ್ಲರು. ಸಲಿಲತವಾಗಿ ಓದಿ ಈ ಭಾಷೆಗಳಲ್ಲಿರುವ ತತ್ವ , ಸತ್ವಗಳನ್ನು ಅರಗಿಸಕೊಳ್ಳಬಲ್ಲವರು. ಹಿಂದೂ , ಕ್ರಿಸ್ತ , ಮುಸಲ್ಮಾನ ಧರ್ಮ ಗ್ರಂಥಗಳಲ್ಲಿ ಅಡಕವಾಗಿರುವ ಸತ್ಯಗಳನ್ನೆಲ್ಲ ಮಥಿಸಿ , ಶ್ರೇಷ್ಟ ಜ್ಞಾನವನ್ನು ತಮ್ಮದಾಗಿಸಿಕೊಂಡವರು. ವಿಚಾರದಂತೆ ಆಚಾರವುಳ್ಳವರು. ಆಚಾರದಿಂದಲೂ , ವಿಚಾರದಿಂದಲೂ ಈ ಭುವಿಯ ಸಕಲರನ್ನು ಏಕೋ ಭಾವದಿಂದ ಕಾಣುವವರು. ವಿಚಾರದಿಂದಲೂ , ಆಚಾರದಿಂದಲೂ ದೈವ ಮೆಚ್ಚುವ ಬ್ರಹ್ಮಚಾರೀ ಜೀವನ ಸಾಗಿಸುತ್ತಿರುವವರೆಂದು ಅವರ ನಡೆ , ನುಡಿ , ಮುಖ ಕಮಲದಲ್ಲಿ ಮಿನುಗುವ ಕಾಂತಿ ಸ್ಪಸ್ಟಪಡಿಸುತ್ತದೆ .

  ಹಾಗಾದರೆ , ಗಣೇಶರವರಂತಹ ಮೇಧಾವಿ , ಚುರುಕುತನದ ವ್ಯಕ್ತಿಗಳು ಅಲ್ಲಲ್ಲಿ ನಮ್ಮ ಕಣ್ಣಿಗೆ ಕಾಣ ಸಿಗುತ್ತಾರೆ . ಆದರೆ ಜನರೇಕೆ ಆ ಮಹಾನೀಯರುಗಳನ್ನು ಮನ್ಹಪುರ್ವಕವಾಗಿ ಒಪ್ಪಿಕೊಳ್ಳುವದಿಲ್ಲ, ಆರಾಧಿಸಬೇಕಾದಂತಹ ವಿದ್ಯಾಸಂಪನ್ನರಾದರೂ ಜನರೇಕೆ ಬಹುಸಂಕ್ಯೆಯಲ್ಲಿ ಆ ರೀತಿಯ ಮಹನೀಯರುಗಳನ್ನು ಒಪ್ಪಿಕೊಳ್ಳುವದಿಲ್ಲ ?ಆರಾಧಿಸುವದಿಲ್ಲ ? ಏಕೆ ? ಯೋಚಿಸಬೇಕಾದ ವಿಷಯ.

  ನಿಗರ್ವಿಯಾದ ಗಣೇಶರವರು ಎಲ್ಲಿಯೂ ಒಮ್ಮೆಯೂ ಇದು ಮಡಿ ಇದು ಮೈಲಿಗೆ , ಸ್ವೀಕಾರಾರ್ಹವಲ್ಲ ಎಂಬ ಭಾವನೆಯನ್ನೇ ವ್ಯಕ್ತಪಡಿಸುವದಿಲ್ಲ. " ಏನೋ ಶಿಷ್ಯಾ , ಸೊಂಟದ ವಿಷ್ಯಾ" ಎಂಬ ಚಿತ್ರಗೀತೆಯ ಪ್ರಸ್ತಾಪಿಸುತ್ತ , ಪಂಡಿತರಿಗೂ ಇನ್ನೂ ಪೂರ್ಣಪ್ರಮಾಣದಲ್ಲಿ ನಿಲುಕಿರದ ವೇದ , ವೇದಾಂತ , ಉಪನಿಷತ್ , ಭಗವದ್ಗೀತೆ ಗಳತ್ತ ಜನರನ್ನು ಕೊಂಡೊಯ್ಯುತ್ತಾರೆ. ಎಂ . ಜಿ . ರೋಡ , ಬ್ರಿಗೆಡ್ ರೋಡ ಸುದ್ದಿ ಹೇಳುತ್ತಾ ಪ್ರೇಕ್ಷಕರ ಆಸಕ್ತಿ ಕೆರಳಿಸಿ , ವೈದಿಕ ಕಾಲಕ್ಕೆ ಹಾಗೂ ಸಂಸ್ಕ್ರತ ವಾನ್ಗ್ಮಯತೆ , ಹಳಗನ್ನಡದ ಛಂದಸ್ಸು , ಅಲಂಕಾರ ಗಳತ್ತ ಪ್ರೇಕ್ಷಕ ವ್ರನ್ದವನ್ನು ಕರೆದೊಯ್ಯುತ್ತಾರೆ. ಪ್ರಚ್ಚಕರು , ಇಂದಿನ ದಿನಗಳ ಯುವ ಜನಾಂಗ , ಯೌವನ ದಾಟಿಯೂ ಯೋನಿ ಸುಖದ ಸಖ್ಯದಿಂದ ಹೊರಬರಲಾರದವರ ಆಸಕ್ತಿ ಕೆರಳಿಸುವಂತಹ -

  " ಕೈಯೋಳ್ ಪಿಡಿದು ಸ್ತನಗಳೆರಡರ , ಕಚ್ಚಿದನು ಸೊಂಟಕ್ಕೆ ತಾನಾಗ "

  ಎಂಬಂತಹ ಸಮಸ್ಯಾ ಪೂರ್ತಿ ಪ್ರಶ್ನೆಯನ್ನು ಶಾಂತ ಭಾವದಿಂದ ಈ ಬ್ರಹ್ಮಚಾರಿ ಸ್ವೀಕರಿಸಿ , ಸಮಸ್ಯಾ ಪರಿಹಾರ ನೀಡುವಾಗ ವಿದ್ವನ್ನಮಣಿಗಳೆಲ್ಲಾ ತಲೆದೂಗಿ, ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುವ ಪರಿಯನ್ನು ನೋಡಿಯೇ ಆನಂದಿಸಬೇಕು. ಈ ರೀತಿ ಪ್ರಚ್ಚಕರ ( ಪ್ರಶ್ನೆ ಕೇಳುವವರು ) ಪ್ರಶ್ನೆಗಳು ಮನದಾಲ್ಹಾಹಕೆ ದಾರಿಯಾದರೆ , ಅವಧಾನಿಗಳ ಪದ್ಯ ರಚನೆಗಳು ಬೌದ್ಹಿಕ ಕಸರತ್ತಿಗೆ ಸಾಕ್ಷಿಯಾಗುತ್ತಿದ್ದವು.

  .... continue reading ..... click link
  http://www.facebook.com/hariharsatyanarayan.bhat


  ಹರಿಹರ ಭಟ್ , ಬೆಂಗಳೂರು.
  ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ .
  ಡಿಸೆಂಬರ್ ೧೦ , ೨೦೧೨.

  ReplyDelete
  Replies
  1. ಗಣೇಶ್ says:
   December 12, 2012 at 12:05 pm
   ಪ್ರಿಯ ಹರಿಹರಭಟ್ಟರೇ,
   ತಮ್ಮ ಅಭಿಮಾನ-ವಿಶ್ವಾಸಗಳ ಮಹಾಪೂರದಲ್ಲಿ ನಾನು ಕೊಚ್ಚಿಹೋಗಿದ್ದೇನೆ. ದಯಮಾಡಿ ನನ್ನನ್ನು ಇಷ್ಟೊಂದು ಹೊಗಳಿಕೆಯ ಹೊನ್ನಶೂಲಕ್ಕೇರಿಸಬೇಡಿರಿ. ನಿಮ್ಮ ಮಾತುಗಳೆಷ್ಟಕ್ಕೋ ನಾನಿನ್ನೂ ಪಾತ್ರನಲ್ಲ.(ಉದಾ: ನನಗೆ ಉರ್ದೂಭಾಷೆಯು ಹಿಂದಿಯ ಜೊತೆ ಕಲೆತಿರುವ ಮಟ್ಟಿಗಲ್ಲದೆ ಮಿಗಿಲಾಗಿ ಮತ್ತೇನೂ ಬಾರದು,; ನಾನೇನೂ ದೊಡ್ಡ ಆಚಾರ-ಸಂಪ್ರದಾಯಗಳ ಆಗರವಲ್ಲ. ನನ್ನ ದೋಷ-ದೌರ್ಬಲ್ಯಗಳು ಹತ್ತಾರು. ನನ್ನಲ್ಲಿ ಯಾವ ದಿವ್ಯತೇಜಸ್ಸೂ ಇಲ್ಲ; ಐವತ್ತರ ಹರೆಯದ ಸಾಮಾನ್ಯದಕ್ಷಿಣಭಾರತೀಯನ ಮುಖವೆಷ್ಟು ಮಾತ್ರ ಬೆಳಗಬದುದೋ ಅಷ್ಟೇ ನನ್ನ ಕಾಂತಿ) ದಯಮಾಡಿ ಸಾಮಾನ್ಯನಾದ ನನ್ನನ್ನು ಹಾಗೆಯೇ ಕಾಣಿರಿ, ಇನ್ನುಳಿದವರಿಗೂ ಹಾಗೆಯೇ ಕಾಣಿಸುವಂತಿರಲಿ. ನನಗಿರುವ ಅಲ್ಪಸ್ವಲ್ಪ ಪ್ರತಿಭೆ-ವ್ಯಾಸಂಗಗಳನ್ನು ನಾನು ಯಾವ ಸೋಗಿನ ವಿನಯವೂ ಇಲ್ಲದೆ ಒಪ್ಪಿ ಹೇಳಿಕೊಳ್ಳಬಲ್ಲೆ. ಆದರೆ ದಯಮಾಡಿ ನನ್ನನ್ನು ನಾನಲ್ಲದ ಮತ್ತೊಬ್ಬ ಮಹನೀಯನನ್ನಾಗಿ ಚಿತ್ರಿಸಬೇಡಿರಿ.ನಾನು ನನ್ನ ಮಿತಿಗಳಲ್ಲಿ ಇರಲು ಅನುವು ಮಾಡಿಕೊಡಿರಿ:-). ಜೊತೆಗೆ ಪದ್ಯಪಾನದಲ್ಲಿ ಯಾವುದೇ ವ್ಯಕ್ತಿಪೂಜೆ ಬೇಡ.

   Reply

   Harihar Bhat , Bangalore says:
   December 12, 2012 at 12:36 pm
   ಗೌರವಾನ್ವಿತ ಶತಾವಧಾನಿ ರಾ. ಗಣೇಶ ರವರೆ ,

   ವಂದನೆಗಳು.

   ನನ್ನ ದೇಹಕ್ಕೆ ಐವತ್ತಾರು. ಐವತ್ತರ ದೇಹದಲ್ಲಿರುವ ಜ್ಞಾನ – ಸುಜ್ಞಾನವನ್ನು ಆರಾಧಿಸಿದ್ದೇನೆ. ಶ್ರೀರಾಮ , ಶ್ರೀಕೃಷ್ಣ , ಯೇಸು, ಪೈಗಂಬರ್ , ಜಿನ, ಬುದ್ಧ , ಮಹರ್ಷಿ ಅರವಿಂದ , ನಾರಾಯಣ ಗುರು ಯಾರೊಬ್ಬರೂ ಆರಾಧನೆಯನ್ನು ಅಪೇಕ್ಷಿಸಿಲ್ಲ. ಇಷ್ಟಪಟ್ಟವರ ಹಕ್ಕು ಆರಾಧಿಸುವದು. ನಿಮ್ಮಲ್ಲಿ ಕಂಡ ಆ ಸರಸ್ವತಿ ನೆಲೆ – ಸೆಲೆ , ಸೌಜನ್ಯ , ಸರಳತೆ , ಮುಗ್ದತೆ ಅರಿತು ಆರಾಧಿಸುತ್ತಿದ್ದೇನೆ , ನನ್ನ ಹಕ್ಕನ್ನು ಚಲಾಯಿಸುತ್ತಿದ್ದೇನೆ. ಎಲ್ಲರು ಮಾಡಿರುವದು ಇದೆe . ನಾನು ವ್ಯಕ್ತಪಡಿಸಿದ್ದೇನೆ ಅಸ್ಟೇ !

   ಪದ್ಯಪಾನ ಬಳಗದಲ್ಲಿರುವ ಎಲ್ಲರ ಬಗೆಗೆ ಅತೀವ ಅಭಿಮಾನವಿದೆ.

   ಹರಿಹರ ಭಟ್ , ಬೆಂಗಳೂರು.
   ಡಿಸೆಂಬರ್ ೧೨ , ೨೦೧೨.

   Delete
 13. S.M.Shivaprakash12 December, 2012 14:24

  Thanks for the mail. I have also witnessed the feat twice!!, (once ashtaavadhaana and another time Shathaavadhana) Dr.R.Ganesh ji is a great scholar , a humble poet, with an extraordinary memory power and what not?? I am too small a person to say anything about him.

  ReplyDelete
 14. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವದು
  ಶತಾವಧಾನಿ ಗಣೇಶ ಬಂದರೆ ಎದೆಯಲಿ ಪುಳಕವು ಚಿಮ್ಮುವದು /
  ಸರಸತಿ ತಾಯಿಯು ನಲಿಯಲು ತೊಡಗಿರೆ , ಪಾಮರ ಕಿವಿಯು ನಿಮಿರುವದು
  ಗಣೇಶ ನುಡಿಯೆ, ಅಮುರತ ರಸದಿe ಪಂಡಿತರಾದಿs ಮುಳುಗೆeಳುವರು //

  ......... ಹರಿಹರ ಭಟ್, ಬೆಂಗಳೂರು.

  ReplyDelete