30 October 2012

ಸವಾಲು ಎಸೆದಿದ್ದೇನೆ, ಜವಾಬ್ ಕೊಡೀ!


ನಗ್ರಿಮೂಲೆಯ, ನೆಲ್ಯಾರುಸ್ಥಿತನಾದ ಗೋವಿಂದ ಸೈಕಲ್ಲೇರಿ ವಿಶ್ವಯಾನಿ ಎನ್ನಿಸಿಕೊಂಡದ್ದು ನಮ್ಮ ನಿಮ್ಮ ಮಾತಿನಲ್ಲಿ. ಅವನದು ವಿಶ್ವ ಪರಿಸರ ಗೀತೆ. ಪ್ರಾಕೃತಿಕ ಶಕ್ತಿಗಳು ಇದ್ದಂತೆ ನಮ್ಮನುಕೂಲಕ್ಕೆ ಪಳಗಿಸಿಕೊಳ್ಳುವ ಕಡೆಗೆ ಗಮನ ಹೆಚ್ಚು. ಒಂದಡಿಯಿಟ್ಟು ಭೂಮಿಯಳೆದವ ಎರಡನೆಯದನ್ನು ಆಕಾಶಕ್ಕಿಟ್ಟಂತೆ ಅವತಾರ ಪುರುಷನೂ ಮುಂದುವರಿದು ರೆಕ್ಕೆ ಕಟ್ಟಿಕೊಂಡ. ಬೀಸುಗಾಳಿಗೆ ಒಡ್ಡಿಕೊಳ್ಳುವ, ಪ್ರಾಥಮಿಕ ಹಂತದಲ್ಲಿ ಕ್ರೀಡೆ ಎಂದೇ ಹೇಳಬಹುದಾದ ನೇತು ತೇಲಾಟಕ್ಕಿಳಿದ. ಆಗ ಆದ ಅಪಘಾತ ಆತನ ದೇಹಕ್ಕೆ ಭಾರೀ ಕಟ್ಟುಪಾಡುಗಳನ್ನೇ ವಿಧಿಸಿತು. ಈಗ ಅವನ ವಿಶ್ವತೋಮುಖಕ್ಕೆ ಸಹಕಾರಿಯಾದದ್ದು ಗಣಕ ಮತ್ತು ಅಂತರ್ಜಾಲ. ಮೂಲಕ ಆತನ ಕೃಷಿಮೂಲ ಬದುಕಿಗೆ ಸಹಾಯಕ ಆಗಬಹುದಾದ ಸಕಲ ಸಂಚಾರಿ (All terrain vehicle) ವಾಹನ ಸಂಪಾದಿಸಿ ಕೆಲಕಾಲ ಪ್ರಯೋಗ ಮಾಡಿದ, ಉಪಯೋಗವನ್ನೂ ಪಡೆದ. ಆದರೆ ಆತನ ಮೂಲ ಆಶಯವಾದ ಕಡಿಮೆ ಇಂಧನ, ಕಡಿಮೆ ಮಾಲಿನ್ಯಕ್ಕಿದು ಒಗ್ಗಿ ಬರಲಿಲ್ಲ. ಮತ್ತೆ ಕಂಡದ್ದು ಮೂರು ಚಕ್ರದ ಸೈಕಲ್. ಇವನ ದುರ್ಬಲ ಶರೀರಕ್ಕೆ ಅದನ್ನು ಚಲಾಯಿಸುವಲ್ಲಿ ಪೂರಕ ಶಕ್ತಿ ಊಡಲು, ಅದರಲ್ಲೇ ಬ್ಯಾಟರಿ ಚಾಲಿತ ಸಣ್ಣ ಮೋಟಾರೂ ಇತ್ತು. ಇದನ್ನು ಹಂತಹಂತವಾಗಿ ಪುತ್ತೂರು, ಮಂಗಳೂರು ಎಂದು ಓಡಿಸಿದ್ದಲ್ಲದೆ, ಒಂದು ಹಂತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೂ ಒಂಟಿಯಾಗಿಯೇ ದಾರಿಗಿಳಿಸಿದ್ದ. ಯಾಂತ್ರಿಕ ತೊಂದರೆಗಳು ಇವನನ್ನು ನಿರುತ್ತೇಜನಗೊಳಿಸಿದ್ದಕ್ಕೆ ತಮಿಳ್ನಾಡು ಮತ್ತು ಕರ್ನಾಟಕ ಹಾಯ್ದು ಮಹಾರಾಷ್ಟ್ರದವರೆಗೂ ಹೋದವನು ಹಿಂಜರಿಯಬೇಕಾಯ್ತು. ಎಷ್ಟು ಕಿರಿದುಗೊಳಿಸಲು ಹೊರಟರೂ ಗೋವಿಂದ-ಪುರಾಣ ಹಿರಿದಾಗಿಯೇ ಕಾಡುತ್ತದೆ. ಹಾಗಾಗಿ ಇನ್ನು ಹೆಚ್ಚಿನ ತಿಳುವಳಿಕೆಗೆ ಅವನದೇ ಜಾಲತಾಣವನ್ನು (ಹಳ್ಳಿಯಿಂದ) ನೀವು ಅವಶ್ಯ ಜಾಲಾಡಬೇಕು.


ವಿಶ್ವಯಾನಿ ಗೋವಿಂದನ ವಿಶ್ವಪ್ರಜ್ಞೆಯ ಸಮೃದ್ಧ ಫಲಗಳು ಆತನ ಜಾಲಕ್ಕೆ ಮಾತ್ರ ಸೀಮಿತವಲ್ಲ. ಸದ್ಯ ನಾನು ಅದರದೇ ಒಂದು ಎಳೆಯನ್ನಷ್ಟೇ ಇಲ್ಲಿ ವಿಸ್ತರಿಸುತ್ತೇನೆ. ಈಚೆಗೆ ಗೋವಿಂದನ ಮಿಂಚಂಚೆ ಪತ್ರಗಳ ಕೊನೆಯಲ್ಲಿ ಹೀಗೊಂದು ಉದ್ಧರಣೆ ಕಾಣಿಸತೊಡಗಿತು.
Only after the last tree has been cut down,
Only after the last river has been poisoned,
Only after the last fish has been caught,
Only then will you find that money cannot be eaten?

ಆತ ಪ್ರಾಮಾಣಿಕವಾಗಿ ಇದು ನನ್ನದೇನಲ್ಲಾ ಎಂಬಂತೆ ಕೊನೆಯಲ್ಲಿ - Cree prophesy ಎಂದು ಕಾಣಿಸುತ್ತಲೂ ಇದ್ದ. ಇಷ್ಟು ಚಂದದ್ದು ನಿನಗೆಲ್ಲಿ ಸಿಕ್ಕಿತೋ ಎಂದಾಗ ಅಮೆರಿಕಾದ ಯಾವುದೋ ಆದಿವಾಸಿಗಳ ಜನಪದಕ್ಕೆ ಆರೋಪಿಸಿ ಸುಮ್ಮನಾಗಿದ್ದ

ಮುಂದೆಂದೋ ನಾನು ಕುಮಾರಪರ್ವತದ ಆಸುಪಾಸಿನ ಲೇಖನಮಾಲೆ ಕುಟ್ಟುತ್ತಿದ್ದಾಗ (ಈಗ ಬರೆಯುವ ಕ್ರಮ ಇಲ್ಲವಲ್ಲಾ! ಹೀಗೇ ಚರವಾಣಿಯಲ್ಲಿ ಮಾತು ಮುಗಿಸುವ ಎಷ್ಟೋ ಮಂದಿ ಇಡ್ತೇನೆ ಅಥವಾ ಬಿಡ್ತೇನೆ ಎನ್ನುವಾಗಲೂ ನನಗೆ ಎಲ್ಲಿ ಇಡ್ಲೇ ಇಲ್ಲ, ಹಿಡ್ಕೊಂಡೇ ಇದ್ದೀರಿ ಎಂದೋ ಅಯ್ಯೋ ಬಿಟ್ರೆ ಒಡೆದು ಹೋದೀತು, ಮಾತು ಮುಗಿಸಿ ಸಾಕು ಎಂದಿತ್ಯಾದಿ ತಮಾಷೆ ಮಾಡದಿದ್ದರೆ ತಿಂದನ್ನ ಮೈಗೆ ಹಿಡಿಸುವುದಿಲ್ಲ!!) ಬಿಸಿಲೆಯ ಅರಣ್ಯನಾಶ, ಜೀವವೈವಿಧ್ಯಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ, ಗುಂಡ್ಯ ಹೊಳೆಯ ಮೇಲಿನ ಅನಾಚಾರಗಳನ್ನು ಅಸಂಖ್ಯ ಶಬ್ದಗಳಲ್ಲಿ ಹಿಡಿಯುತ್ತಿದ್ದಾಗ ಕ್ರೀ ಜನಾಂಗದ ಭವಿಷ್ಯವಾಣಿ ಅದ್ಭುತ ಸೂತ್ರದಂತೇ ಕಾಣಿಸಿತು. ನನ್ನ ತಿಳುವಳಿಕೆ, ಭಾಷಾಜ್ಞಾನ ಬಳಸಿ ಏನೋ ಒಂದು ಅನುವಾದವೂ ಮಾಡಿ ಬಳಸಿಕೊಂಡದ್ದು ಹೀಗಿತ್ತು:

ಕಡೆಯ ಮರ ಬೀಳಿಸಿದ ಮೇಲೆ
ಕೊನೆಯ ನದಿ ವಿಷಮಾಡಿದ ಮೇಲೆ
ಉಳಿದೊಂದೇ ಮೀನು ಹಿಡಿದ ಮೇಲೆ
ಉದಿಸೀತು ಜ್ಞಾನ, ತಿನ್ನಲುಳಿದಿಲ್ಲ ಏನೂ ಹಣದಿಂದ ಮೇಲೆ

ಈಚೆಗೆ ಗೆಳೆಯ ಸುಂದರರಾಯರುಅವರಜಾಲತಾಣದಲ್ಲಿ ನದಿ ತಿರುಗಿಸುವವರ ಉತ್ಪಾತಗಳ ಹೊಸ ಒಂದು ಅಧ್ಯಾಯ ತಿರುಗಲಿದೆ ನೇತ್ರಾವತಿಯ ದಿಕ್ಕು ಲೇಖಿಸುವಾಗ, ಅವರಿಗೂ ಗೋವಿಂದನ ಇದೇ ಉದ್ಧರಣೆ ನೆನಪಾಯ್ತು. ರಾಯರು ವೃತ್ತಿ ದಿನಗಳಲ್ಲಿ ಮುದ್ರಕನಾಗಿದ್ದರೂ ಕನ್ನಡ ಸ್ನಾತಕೋತ್ತರ ಕಲಿಕೆಯನ್ನು ಇಂದಿಗೂ ಪ್ರೀತಿಯಿಂದ ಊರ್ಜಿತದಲ್ಲಿಟ್ಟುಕೊಂಡವರು. (ನನ್ನ ಇಂಗ್ಲಿಷ್ ಎಮ್ಮೆ ಗೊಡ್ಡಾದ್ದಕ್ಕೆ ರಾಯರ ಮೇಲೆ ನನಗೆ ಸದಾ ಒಂದು ಈರ್ಷ್ಯೆಯ ಕಣ್ಣಿತ್ತು!) ಸುಂದರರಾಯರ ಅನುವಾದ ಹೀಗಿದೆ:
ಕೊನೆಯ ಮರವನ್ನು ಕಡಿದುರುಳಿಸಿ ಆದ ಮೇಲೆಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆಆಗ, ಆಗ ನಿಮಗೆ ತಿಳಿಯುತ್ತದೆ: "ಹಣ ತಿನ್ನಲು ಬರುವುದಿಲ್ಲ"!
ನಮ್ಮೊಳಗಿನ ಪ್ರಿಯ ಕಲಹಕ್ಕನುಸಾರವಾಗಿ ನಾನು ಮೂಲದೊಡನೆ ಎರಡೂ ಅನುವಾದಗಳನ್ನು ಲಗತ್ತಿಸಿ ಗೋವಿಂದ, ಕೃಶಿ, ಪಂಡಿತಾರಾಧ್ಯ ಮತ್ತು ರಾಯರಿಗೂ ಪ್ರತಿ ಹಾಕಿ ಯಾವುದು ಉತ್ತಮ ಅನುವಾದ ಎಂದು ಸವಾಲು ಹಾಕಿದೆ.

೧೯೮೦ರ ದಶಕದಲ್ಲೆಲ್ಲೋ ನನ್ನಂಗಡಿಗೆ ಬರುತ್ತಿದ್ದ ಅಸಂಖ್ಯ ಗಿರಾಕಿಗಳಲ್ಲಿ ತುಸು ಹೆಚ್ಚೇ ಪುಸ್ತಕ ಗೀಳಿನ ಒಬ್ಬ ತರುಣನ ಮೇಲೆ ನನ್ನ ವಿಶೇಷ ಕಣ್ಣಿತ್ತು. ಆಗೀಗ ಆತ ಭುಜದ ಮೇಲೆ ಎಸೆದುಕೊಂಡಿರುತ್ತಿದ್ದ ಬಿಳಿ ಕೋಟಿನಿಂದ ವೈದ್ಯ ವಿದ್ಯಾರ್ಥಿ ಎಂದೂ ಕೆಲವ್ಮೊಮ್ಮೆ ಜೊತೆಗೆ ತರುತ್ತಿದ್ದ ಮಿತ್ರರ ಮುಖ ನೋಡಿ, ಸಂಭಾಷಿಸುತ್ತಿದ್ದ ಕ್ರಮದಲ್ಲಿ ಮಲೇಶಿಯನ್ನಿರಬೇಕೆಂದೂ ತರ್ಕಿಸಿದ್ದೆ. ಆದರೆ ಒಂದು ದಿನ ಆತ ಯಾವುದೋ ಕನ್ನಡ ಪುಸ್ತಕವನ್ನು ಸಹಜವಾಗಿ ಕೊಂಡಾಗ ನನ್ನ ಊಹಾಪೋಹಗಳು ಮಾತಿನ ಮಹಾಪೂರದಲ್ಲಿ ಕೊಚ್ಚಿಹೋಯ್ತು. ಮೂಡಬಿದ್ರೆಯ, ಅಪ್ಪಟ ಕನ್ನಡ ಮಾಧ್ಯಮದಲ್ಲೇ ಎಸ್ಸೆಲ್ಸಿಯವರೆಗೂ ಓದಿ ಬಂದ ಕೃಶಿ, ಉರುಫ್ ಡಾ| ಕೃಷ್ಣಮೋಹನ ಪ್ರಭುವಿನ ಪರಿಚಯವಾಯ್ತು, ಆಪ್ತತೆಯೂ ಪ್ರಾಪ್ತವಾಯ್ತು. ಕೃಶಿಯ ದೊಡ್ಡ ದೋಷ - ಎಲ್ಲಾ ಮುಖದಲ್ಲಿ ಜ್ಞಾನಸಂಗ್ರಹ, ಅದರ ನೆನಪು ಮತ್ತು ಅಗತ್ಯ ಬಂದಲ್ಲಿ ವಿಶ್ಲೇಷಣಾತ್ಮಕ ಅನ್ವಯ. ಅವರು ಕೊಂಡ, ಈಗಲೂ ಕೊಳ್ಳುವ ಪುಸ್ತಕಗಳು ಅಸಂಖ್ಯ ಎಂದರೆ ಅವರು ಓದಿದ ಪುಸ್ತಕಗಳು ನಿಸ್ಸಂಖ್ಯೆ ಎನ್ನಬೇಕಾದೀತು. ಗಣಕಲೋಕಕ್ಕೆ ಬಂದರೆ ಅವರನ್ನು ನಮ್ಮ ಮಿತ್ರಬಳಗವೆಲ್ಲಾ ಕಂಪ್ಯೂ-ಡಾಕ್(ಗಣಕವೈದ್ಯ) ಎಂದೇ ತಮಾಷೆ ಮಾಡುವುದು ಇದ್ದದ್ದೇ. ಗಣಕದ ಯಂತ್ರಾಂಶ, ತಂತ್ರಾಂಶಗಳಲ್ಲಿ ನಮಗೆ ಕಾಲಕಾಲಕ್ಕೆ ಬರುವ ಗ್ಲಾನಿ ಏನೇ ಇದ್ದರೂ ಕೃಷ್ಣ ಮೂರುತಿ ಅಲ್ಲಿ ಹಾಜರ್! ಸ್ವಂತ ಆಸ್ಪತ್ರೆಯಲ್ಲಿ ...ತುರಿಸಿಕೊಳ್ಳಲಾಗದಷ್ಟು ಕೆಲಸವಿದ್ದರೂ ಸಮಯ ಹೊಂದಿಸಿಕೊಂಡು ಉಚಿತಸೇವೆ! ಕಡೆಗೆ ನಾವೇ ದಾಕ್ಷಿಣ್ಯದಲ್ಲಿ ಗಣಕದ ವಿಚಾರ ಇವರಲ್ಲಿ ಪ್ರಸ್ತಾಪಿಸದೇ ಇರಬೇಕು, ಅಷ್ಟೆ. (ಇಲ್ಲಿ ಇವರ ಛಾಯಾಚಿತ್ರಗ್ರಹಣ, ವನ್ಯ ಪ್ರೀತಿಗಳ ಕಡತ ಬಿಚ್ಚಿದರೆ ನನ್ನ ಸದ್ಯದ ಲಕ್ಷ್ಯ ಭಂಗವಾಗುತ್ತದೆ. ಅವಶ್ಯ ನೀವೇ ಸಣ್ಣದಾಗಿ ಪರಿಚಯಿಸಿಕೊಳ್ಳಲು ಅವರ ಜಾಲತಾಣಕ್ಕೆ ನುಗ್ಗಿ ನೋಡಿwww.drkrishi.com)

ಕೃಶಿ ಮೊದಲು ಚೌಪದಿಯ ಮೂಲೋತ್ಪಾಟನೆಗಿಳಿದರು. ಅವರು ಅಂತರ್ಜಾಲ ಬಸಿದು ಕೊಟ್ಟ ಸುಮಾರು ನಾಲ್ಕು ಪುಟದುದ್ದದ ಸಾಹಿತ್ಯ ಮತ್ತು ಸೇತುಗಳ ಸಾರವಿಷ್ಟು: ಒಳ್ಳೆಯ ಉಲ್ಲೇಖವೇನೋ ಹೌದು, ಆದರೆ ಇದು ನಿಜವಾಗಿ ಕ್ರಿ ಇಂಡಿಯನ್ನೇ ಹೇಳಿದ್ದಾಗಬೇಕಿಲ್ಲ. ಸಾಮಾನ್ಯ ಮಾತಿಗೆ ತೂಕಬರಲು ನಮ್ಮಲ್ಲಿ ವೇದ ಪುರಾಣಗಳನ್ನು ಉದ್ಧರಿಸುವಂತೆ ಅಮೆರಿಕಾದಲ್ಲಿ (ರೆಡ್) ಇಂಡಿಯನ್ನರನ್ನು ಬಳಸುತ್ತಾರೆ. (ಇಲ್ಲಿ ರೆಡ್ ಇಂಡಿಯನ್ ನಾಯಕ ಅಮೆರಿಕಾದ ಅಧ್ಯಕ್ಷನಿಗೆ ಪರಿಸರದ ಬಗ್ಗೆ ಬರೆದನೆನ್ನಲಾದ ದೀರ್ಘ ಪತ್ರವನ್ನೂ ನೆನೆಸಿಕೊಳ್ಳಬಹುದು. ಅದರ ಮೂಲೋತ್ಪಾಟನೆ ಮಾಡಿದವರು, ಅಂತಿಮವಾಗಿ ಓರ್ವ ನವನಾಗರಿಕ, ವಕೀಲನನ್ನು ಪತ್ರದ ಲೇಖಕ ಎಂದು ಗುರುತಿಸಿದ್ದಾರೆ. ಹಾಗೇ ಚೌಪದಿಯ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎನ್ನುತ್ತಾನೆ ಗೋವಿಂದ) ೧೮೯೪ರಿಂದ ಇದನ್ನು ಹೇಳಿಕೆಯಂತೆ ಭಿನ್ನ ರೂಪಗಳಲ್ಲಿ ವಿಭಿನ್ನ ಪಂಗಡಗಳೊಡನೆ ಗುರುತಿಸಲು ಬರುತ್ತದೆ. ೧೯೭೨ರಲ್ಲಿ ಇದನ್ನು ಉತ್ತರ ಅಮೆರಿಕಾದ ಅಬೆನಾಕಿ ಎಂಬ ರೆಡ್ ಇಂಡಿಯನ್ ಬಳಗದೊಡನೆಯೂ ಸಾಕೋಕೇನಾನ್ಕ್ವಾಸ್ ಎಂಬ ಇನ್ನೊಂದೇ ಬಳಗದೊಡನೆಯೂ ನಿಖರವಾಗಿ ಗುರುತಿಸಿದ್ದಕ್ಕೆ ಮುದ್ರಿತ ದಾಖಲೆಗಳೇ ಇವೆ. ೧೯೮೩ರ ಒಂದು ಪುಸ್ತಕ ಇದನ್ನು ಒಸಾಗೆ ಎಂಬ ಜನಾಂಗದ ನಾಣ್ಣುಡಿ ಎಂದೇ ಹೇಳುತ್ತದೆ. ೧೯೮೦ರ ದಶಕದಲ್ಲಿ ಗ್ರೀನ್ ಪೀಸ್ (ಎಂಬ ಪರಿಸರ ಹೋರಾಟಗಾರರ ಬಳಗ) ಇದರ ಜನಪ್ರಿಯತೆಗೆ ಕಾರಣವಾಯ್ತು. ಎಲ್ಲ ವಾದಗಳಿಗೂ ಬಾಗಿಲು ತೆರೆದಿಟ್ಟು ೨೦೦೯ರ ಆಕ್ಸ್ಫರ್ಡ್ ಗಾದೆಗಳ ನಿಘಂಟು ಇದನ್ನು ಅಮೆರಿಕಾದ ಮೂಲವಾಸಿಯ ಹೇಳಿಕೆ ಎಂದಷ್ಟೇ ಉಲ್ಲೇಖಿಸಿ ತನ್ನೊಳಗಡಗಿಸಿಕೊಂಡಿತು.

ಮುಂದುವರಿದ ಕೃಶಿ ನಮ್ಮಿಬ್ಬರ ಅನುವಾದದ ಬಗ್ಗೆ ತೀರ್ಮಾನ ಕೊಡುವುದು ಬಿಟ್ಟು ಅವರದೇ ಅಂದರೆ ಮೂರನೇ ಅನುವಾದ ಹೀಗೆ ಕೊಟ್ಟಿದ್ದಾರೆ

ಕಡೆಯ ಮರ ಕತ್ತರಿಸಿ ಬಿದ್ದಾಗ
ಕೊನೆಯ ನೀರಿನ ಹನಿ ವಿಷವಾದಾಗ
ಕೊನೆಯ ಮೀನನ್ನು ಹಿಡಿದು ತಿಂದಾಗ
ಆವಾಗ ಮಾತ್ರ ತಿಳಿದೀತು, ಹಣವನ್ನು ತಿನ್ನಲಾಗದು ಎಂಬ ಜ್ಞಾನ.

ಬರಿಯ ಕನ್ನಡದ ಪಾಂಡಿತ್ಯವೇನು, ಹೆಸರಿನಲ್ಲೂ ಪಂಡಿತವನ್ನೇ ಇಟ್ಟುಕೊಂಡ ಗೆಳೆಯ ಪಂಡಿತಾರಾಧ್ಯರಾದರೂ ನ್ಯಾಯ ಕೊಟ್ಟಾರು ಎಂದು ಕಾದದ್ದೇ ಬಂತು. ಸುಂದರರಾಯರು ಅವರಿಗೆ ಮಂಗಳಗಂಗೋತ್ರಿಯಲ್ಲಿ ಮೊದಲು ಶಿಷ್ಯ, ಅನಂತರ ಗೆಳೆಯ. ತೂಕದಲ್ಲಿ ನನ್ನ ಗೆಳೆತನ ಹಳತು ಮತ್ತು ದೀರ್ಘಕಾಲೀನ ಎಂಬ ಧೈರ್ಯದಲ್ಲಿ ನ್ಯಾಯ ಕೊಳ್ಳುವ ವಿಶ್ವಾಸದಲ್ಲಿದ್ದೆ. ಅವರು ನನ್ನದೇ ತೂತು ಕಾಸನ್ನು ಮೊದಲು ಮರಳಿಸಿದರು: ಪ್ರೀಯರೇ, (ಬಹುತೇಕ ಬ್ಯಾನರ್ ಸಾಹಿತಿಗಳು ಪ್ರಿರಲ್ಲಿ ಪ್ರೀತಿಕಾಣುತ್ತಾರೆ!) ನಿಮ್ಮ ಅಣುವ್ಯಾಧ ಸರಿಯಾಗಿಯೇ ಇದೆ. ಅಂದರೆ ರಾಯರ ಅನುವಾದ ಸರಿಯಿಲ್ಲವೋ ಎಂದು ನಾನು ಯೋಚಿಸದಂತೆ ಮುಂದುವರಿದು ಹೀಗೆ ಬರೆದರು, ಅಮೆರಿಕದ ಮೂಲನಿವಾಸಿ ಇಂಡಿಯನ್ ಆಜ್ಜಿಯ ವಿವೇಕದ  ಮಾತು ಎಲ್ಲರಿಗೂ ಸಂಬಂಧಿಸಿದೆ. ಹೀಗೆ ಹೇಳುವಲ್ಲಿ ನನ್ನ ಕೊಕ್ಕೆಯನ್ನು (ನಾನೋ? ರಾಯರೋ?) ನಯವಾಗಿ ಜಾರಿಸಿ (ಪ್ರೊಫೆಸರರ ಮರೆವೇ ನಿವೃತ್ತಿಯ ಪ್ರಾಯದೋಷವೇ?) ತಮ್ಮದೇ ವ್ಯಾಖ್ಯಾನವೆನ್ನುವಂತೆ ತ್ರಿಪದಿಯೊಂದನ್ನು ಹೊಸದಾಗಿ ಹೊಸೆದಿದ್ದಾರೆ:
ಸಾವಯವ ಪ್ರಕೃತಿಯನ್ನು ತಿಂದು ತೇಗಿದ ಮೇಲೆಮುಕ್ಕಲು ಉಳಿದಿರುವುದು ಮಣ್ಣು ಮಾತ್ರ.
ಮನುಷ್ಯನ ಕೊನೆಯ ನೆಲೆಯೂ ಅದೇ ತಾನೆ!
ಸುಂದರರಾಯರು ಬಳಕೆದಾರ ಮತ್ತು ಮಾಹಿತಿ ಹಕ್ಕುಗಳಲ್ಲಿ ಬಹಳ ಕಾಲದಿಂದ ಗಟ್ಟಿ ಕೆಲಸ ಮಾಡಿದ ಅನುಭವಿ. ಸ್ವಯಂ ಸ್ಪಷ್ಟವಿರುವ ಪತ್ರ, ಸಾಕ್ಷಿಯಿಂದಾಚೆಗೆ ಮಾತಾಡುವುದು ಕಡಿಮೆ. ಅವರ ಲೇಖನ ನೋಡಿದ್ದೇ ನಾನು ಕೃತಿಚೌರ್ಯಾಂತ ಕೆಣಕಿದೆ. ಅಲ್ಲಾನ್ನಲಿಲ್ಲ, ವಿವರಣೆ ಕೊಡಲಿಲ್ಲ. ಗಡ್ಡದೊಳಗೇ ನಗಾಡಿಬಿಟ್ಟು ನೀವೂ ಮಾಡಿದ್ರಾ? ಇದು ನನ್ನ ಅನುವಾದಅಂತ ಮುಗಿಸಿಬಿಟ್ಟರು. ಯಾರ ಅಣುವ್ಯಾಧ ಪರಿಣಾಮಕಾರಿ ಎಂದು ತೌಲನಿಕ ಅಭಿಪ್ರಾಯ ಕೊಡೀ ಎಂದದ್ದಕ್ಕೆ ನಾನು ನಿರೀಕ್ಷಿಸಿದ ಹಾಗೆ ಮೌನವೇ ಅವರುತ್ತರ.

ನನ್ನೀ ಜಾಲತಾಣದ ಓದುಗ ಬಳಗದಲ್ಲಿ ನೀವು, ನೂರಾರು ಜನ ವಿದ್ವಾಂಸರಿದ್ದೀರಿ (ಅವಿಳಂಬ ಸರಸ್ವತಿ ಎಂದೇ ಬಿರುದಾಂಕಿತರಾದ ಶತಾವಧಾನಿ ರಾ. ಗಣೇಶರೂ ಇದ್ದಾರೆ), ಅಸಂಖ್ಯ ಪರಿಸರ ಹೋರಾಟಗಾರರಿದ್ದೀರಿ. ಬರಲಿ ನಿಮ್ಮ ಟೀಕೆ ಸಹಸ್ರ!

26 comments:

 1. ಮಾಸೋಮಿ,
  ನಾನು ಆನೌಪಚಾರಿಕವಾಗಿ ನೀಡಿದ ಉತ್ತರ ಹೀಗೆ ಸೇನಾ ನ್ಯಾಯಾಲಯವನ್ನು
  (ಕೋರ್ಟ್ ಮಾರ್ಷಲ್!) ಎದುರಿಸಬಹುದೆಂಬ ಕಲ್ಪನೆ ನನಗೆ ಇರಲಿಲ್ಲ.
  ನೀವು ಕಳುಹಿಸಿದ ಮೂಲ ಪದ್ಯದ ಆಕರವನ್ನು ಅಂತರಜಾಲದಲ್ಲಲಿ ಹುಡುಕಿ
  ಅದು ಅಮೆರಿಕದ ಇಂಡಿಯನ್ ಆಜ್ಜಿಯ ವಿವೇಕವೆಂದು ತಿಳಿದುಕೊಂಡೆ.

  ನಾನು ಅಣುವಾದ ಪಂಡಿತನಲ್ಲ. ನಾನು ಬರೆದಿರುವ ಮೂರು ಸಾಲು ತ್ರಿಪದಿಯೂ ಅಲ್ಲ.
  ನಮ್ಮ ಎಂಎ ವಿದ್ಯಾರ್ಥಿಗಳಿಗೆ ಭಾಷಾಂತರ ಐಚ್ಛಿಕ ವಿಷಯ. ಅವರಿಗೆ ಪ್ರಾಯೋಗಿಕ ಭಾಷಾಂತರ
  ಎಂಬ ಪತ್ರಿಕೆ ಇದೆ. ಅಲ್ಲಿ ಈ ವಿಷಯವನ್ನು ಚರ್ಚೆಗೆ ಕೊಟ್ಟರೆ ಅವರಿಗೆ ಸವಾಲು ಎದುರಿಸಲು
  ಒಳ್ಳೆಯ ವಿಷಯ ಸಿಕ್ಕಂತಾಗುಗುತ್ತದೆ ಎಂದರೆ ನೀವು ಹೋ! ಇವನು ಮತ್ತೆ ವಿಷಯ ಜಾರಿಸುತ್ತಿದ್ದಾನೆ ಎನ್ನಬೇಡಿ!

  ನಡೆಯಲಿ ಆತಿರಥ ಮಹಾರಥರಿಂದ ಪರಿಶೀಲನೆ!
  ನಾನೂ ನಿಂತಿರುವೆ ಆಪರಾಧಿಯಂತೆ!

  ಮಜರೂಹ್ ಲಿಖ್ ರಹೆ ಹೈ ವೋ ಆಹಲ್ಎವಫಾ ಕಾ ನಾಮ್
  ಹಂ ಭಿ ಖಡೇ ಹುವೆ ಹೈ ಗುನಹ್‍ಗಾರ್ ಕಿ ಥರಾ!

  ’ಹಮ್ ಹೈ ಮತಾ ವೊ ಕೂಚಾ ಬಾಝಾರ್ ಕಿ ಥರಾ’ಮಜರೂಹ್ ಸುಲ್ತಾನ್‍ಪುರಿ ಲತಾ ಮಂಗೇಶ್ಕ‍ರ್ ಹಾಡು ದಸ್ತಕ್(ರಾಜೇಂದಸಿಂಗ್ ಬೇಡಿ ಚಿತ್ರ - ೧೯೭೦)


  ಪಂಡಿತ(ಇದು ನಾನೇ ಇಟ್ಟುಕೊಂಡ ಹೆಸರಲ್ಲ!) ಎಂಬ ಪಾಮರ

  ReplyDelete
 2. ಉಳಿದೊಂದು ಹುಲ್ಲ ಚಿಗುರು,
  ಕೊನೆಗಿಳಿದ ನೀರ ಹನಿ,
  ಅಳಿದುಳಿದ ಜಲಚರದ ಜೊತೆ
  ಹಿಡಿದು ಮುಕ್ಕಿದಾಗಲಾದರೂ
  ಅರಿವಾದೀತೇ,
  ದುಡ್ಡೇ ದೊಡ್ಡಪ್ಪನಲ್ಲವೆಂದು...

  ReplyDelete
 3. ಕೋಳಿಜಗಳ ಬಿಡಿಸಹೊರಟವರು ಕೋಳಿಗಳ ಧಾಳಿಗೆ ತುತ್ತಾಗುವ ಅಪಾಯವಿರುವುದರಿಂದ ಕಣದ ಅಖಾಡದ ಅಂಚಿನಲ್ಲಿದ್ದುಕೊಂಡೇ ಜಗಳದ ರಸಾಸ್ವಾದನೆ ಮಾಡುವ ಇರಾದೆ ನನ್ನದು

  ReplyDelete
 4. ಮೂರ್ತಿ ದೇರಾಜೆ30 October, 2012 11:19

  ಓಯ್....ಈಗ ಕೋಳಿಜಗಳದ ರೆಫ್ರಿಗಳು ಎಚ್ಚತ್ತಿದ್ದಾರೆ...ಬುದ್ದಿವಂತರಾಗಿದ್ದಾರೆ....(....ನಮಗೇನು ಲಾಭ....?? ಅಂತ)

  ReplyDelete
 5. ವೀಣಾ ಸಾಲೆ30 October, 2012 11:22

  ಹಣದಿಂದ ಎಲ್ಲವನ್ನು ಪಡೆದುಕೊಳ್ಳಬಹುದೆಂಬ ಮನೋಭಾವವೇ ಎಲ್ಲ ವಿನಾಶಕ್ಕೆ ಮೂಲ ಕಾರಣ . ಬೆಂಗಳೂರು ಮಹಾನಗರಿಯವರಲ್ಲಿ ಈ ಮನೋಭಾವ ಕಂಡಿದ್ದೇನೆ. veena.

  ReplyDelete
 6. ಜಿ.ಎನ್. ನರಸಿಂಹ ಮೂರ್ತಿ30 October, 2012 11:27

  ಯಾವ ಸೋಮಾರಿಯೂ ನನ್ನೊಡನೆ ಅಂಕಕ್ಕೆ ಇಳಿಯಲಾರ. ಅಂಕಕ್ಕೆ ನೂಕಿ ಬಿಟ್ಟಿದ್ದಾರೆ.
  ಇದಿಗೋ ನನ್ನ ಬುಡಬುಡಿಕೆ ಇಲ್ಲಿದೆ :

  ಕೊನೆಯ ಮರವನ್ನು ಕಡಿದೆ.

  ನೀರಿಗೆ ವಿಷ ಉಣಿಸಿದೆ.

  ತಿಂದ ಮೀನೇ ಜಗತ್ತಿನ ಕಡೆಯ ಮೀನೆಂದು ಅರಿತೆ

  ಕಡೆಯದಾಗಿ ನನ್ನಲ್ಲಿ ಉಳಿದ ನೋಟಿನ ಕಂತೆ

  ನನ್ನನ್ನೇ ತಿನ್ನು ಎಂದು ನಕ್ಕಾಗ
  ತುಂಬ ತಡವಾಗಿತ್ತು

  ಕ್ಷೇಮವಾಗಿ ಈಚೆಗೆ ಬಂದರೆ ಸಾಕು ಅನ್ಸಿದೆ.

  ಎಲ್ರಿಗೂ ಬುದ್ದಿ ಬರಲಿ?

  ಜಿ ಎನ್ ನರಸಿಂಹಮೂತಿ೯

  ReplyDelete
 7. ಈ ಕೋಳಿ ಜಗಳದ ಮೂಲವಾದ ಆ kree prophesy ದ ಬಗ್ಗೆ ಸ್ವಲ್ಪ ಹೇಳಿ ಜಗಳ ಜಾಸ್ತಿ ಮಾಡಲೆಂದು ಇಲ್ಲೊಂದು ಒಗ್ಗರಣೆ. ಗ್ರೀನ್ ಪೀಸ್ ಸಂಸ್ಥೆ ತನ್ನ ಪರಿಸರವಾದಕ್ಕಾಗಿ ಹುಟ್ಟು ಹಾಕಿದ ಒಂದು ಘೋಷಣ ವಾಕ್ಯ ಅದು. ಯಾವುದೇ ಇಂಡಿಯನ್ ನ ಪ್ರೊಫೆಸಿ ಅಲ್ಲ. ನಾವು ಹೇಗೆ ವೇದ ಪುರಾಣಗಳನ್ನು quote ಮಾಡುವಂತೆ (ಉದಾಹರಣೆ vedic mathematics) ಅಮೆರಿಕನ್ನರು kree prophesy ನಿಜವಾಗಿಯೂ ಇಂಡಿಯನ್ ಹೇಳಿದ ಭವಿಷ್ಯವಾಣಿ ಎಂದು ನಂಬಿದ್ದಾರೆ. ಕಟುಸತ್ಯ ಹೇಳಲು ಸುಳ್ಳು ಉದಾಹರಣೆ ಉಪಯೋಗಿಸಿದ್ದು ತಪ್ಪೇನಲ್ಲ ಎಂದು ನನ್ನ ನಂಬಿಕೆ. ಹೆಚ್ಚಿನ ವಿವರಗಳಿಗೆ ಇಲ್ಲಿ ನೋಡಿ Kree Prophesy

  ReplyDelete

 8. KONEYA MARA KADIDU
  KONEYA NADI VISHAVAAGI
  KONEYA MEENUU THINDU MUGIDA MELE
  HANAVANENU TINUVE?
  AAGALASHTE ARIVE.

  ReplyDelete
 9. ವೈದೇಹಿ30 October, 2012 14:00

  ಕಟ್ಟ ಕಡೆಯ ಮೀನು ಎಂಬುದಕ್ಕಿಂತ, ಕಟ್ಟ ಕಡೆಯ ತುತ್ತು ಮುಗಿದ ಮೇಲೆ ಎಂದರೆ ಹೇಗೆ?
  ಪ್ರೀತಿ,
  ವೈದೇಹಿ

  ReplyDelete
  Replies
  1. ಸಾಯುವ ಮುನ್ನ ಮಾಳಶೆಟ್ಟಿ ತಿಂದಂತೆ ಎಲ್ಲರೂ ಮೀನು ತಿನ್ನುತ್ತಿದ್ದರೆ ನೀವು ಬಚಾವಾದಿರಿ!

   Delete
 10. ವೀಣಾ ಸಾಲೆ30 October, 2012 14:02

  ಹಣದಿಂದ ಎಲ್ಲವನ್ನು ಪಡೆದುಕೊಳ್ಳಬಹುದೆಂಬ ಮನೋಭಾವವೇ ಎಲ್ಲ ವಿನಾಶಕ್ಕೆ ಮೂಲ ಕಾರಣ . ಬೆಂಗಳೂರು ಮಹಾನಗರಿಯವರಲ್ಲಿ ಈ ಮನೋಭಾವ ಕಂಡಿದ್ದೇನೆ.
  ವೀಣಾ

  ReplyDelete
 11. ಇದ್ ಬದ್ ಮರಾನೆಲ್ಲ ಕೆಡವಿದ್ದಾಯ್ತು
  ಕಾವಲಿ ನೀರ್ಗೆ ಲ್ಲ ಯಿಸಾ ಆಕಿದ್ದಾಯ್ತು
  ಇನ್ ಹಗೇವ್ಗೆಲ್ಲ ಬೆಂಕಿ ಮಡಗಿ
  ದುಡ್ ತಗಂದು ಮುಕ್ಕೀಯೇ ನೆಕ್ಕೀಯೇ? ಏ ವೋಗಲೋ

  ReplyDelete
 12. ಮಾನ್ಯರೆ,
  ಅನುವಾದಗಳೆಲ್ಲ ಓಕೆ, ಅದಕ್ಕೆ ಜಗಳ ಯಾಕೆ?
  ಆದರೂ ಪದಶಃ ಅನುವಾದ ಮಾಡೂದಾದ್ರೆ ನಿಮ್ಮ ಇಂಗ್ಲಿಶ್ ಸಾಲುಗಳ ಕೊನೆಗೆ ಕೊಶ್ನೆ(ಪ್ರಶ್ನೆ) ಚಿನ್ಹೆ ಇರೂದ್ರಿಂದ ಸ್ವಲ್ಪ ಸಮಸ್ಯೆ. ಅಲ್ಲಿ ? ಬೇಡ ಅಂತ ನನ್ನ ಅನಿಸಿಕೆ. ಇಂಥಾ ಪ್ರೊಫೆಸಿಗಳನ್ನು ಮೂಲಕ್ಕೆ ನಿಷ್ಟವಾಗಿ ಅನುವಾದ ಮಾಡಬೇಕು ಅಂತ ಮಾಡುದಾದ್ರೆ ನನ್ನ ಓಟು ಸುಂದರರಾಯರಿಗೆ.(ನೆರೆಕರೆ ಬೇರೆ ,ಬಿಡುವ ಹಾಗಿಲ್ಲ !) ಅವರ ಅನುವಾದದಲ್ಲೂ ತಿಂದು ಮುಗಿಸಿದ ಅಂತ ಯಾಕೆ, ಮೀನು ಹಿಡಿದರೆ ಮುಗಿದ ಹಾಗೆಯೇ ಅಲ್ಲವೇ? ನಿಮ್ಮ ಕೊನೆಯ ಸಾಲು ನನಗೆ ಒಪ್ಪಿಗೆಯಿಲ್ಲ. ವಿ.ಕೆ.ಕೆ. , ಜಿ. ಎನ್. ಎನ್ ಕವನಗಳು ಚೆನ್ನಾಗಿವೆ. ಸುಮ್ಮನೆ ಇಗೋ ನನ್ನದೊಂದು ಅನುವಾದದ ವಾದ- ರಿವರ್ಸ್ ಡೈರೆಕ್ಷನ್ ನಲ್ಲಿ ಉಂಟು ಇದು-
  ಕೊನೆಯ ಮರವ ಕಡಿದುರುಳಿಸಿದ ಹೊರತು
  ಕೊನೆಯ ನದಿಯ ವಿಷಗೊಳಿಸಿದ ಹೊರತು
  ಕೊನೆಯ ಮೀನ ಹಿಡಿಯದ ಹೊರತು
  ನೀನರಿಯಲಾರೆ ಹಣವನುಣ್ಣಲಾರೆಯೆಂದು.

  ReplyDelete
 13. ಕ್ಷಮಿಸಿ , ಹೆಸರು ಹಾಕಲು ಮರೆತೆ, ಮೇಲಿನ ಅನಾಮಿಕ ನಾನು -ಅಜಕ್ಕಳ ಗಿರೀಶ

  ReplyDelete
 14. ಕುಮಾರನ್31 October, 2012 09:48

  ಅನುವಾದ ಏನಾದರೂ ಆಗಲಿ, ಮೂಲ ಯಾರೇ ಬರದಿರಲಿ ವಿಷ್ಯಾ ನಿಜ ತಾನೇ? ಹಾಗಾದರೆ ಸುಳ್ ಸುಳ್ಳೇ ಆದಿವಾಸಿಗಳ ಹೆಸರು ಹಾಕಿದ್ದು ಎಂಬ ವಾದವಿರುವ `ರೆಡ್ ಇಂಡಿಯನ್ ನಾಯಕ' ಅಮೆರಿಕಾದ ಅಧ್ಯಕ್ಷನಿಗೆ ಪರಿಸರದ ಬಗ್ಗೆ ಬರೆದದ್ದೆನ್ನಲಾದ ದೀರ್ಘ ಪತ್ರವೂ ಹೀಗೇನಾ? ಅದು ಕನ್ನಡದಲ್ಲಿದ್ಯಾ?
  ಕುಮಾರನ್

  ReplyDelete
 15. ಅಶೋಕವರ್ಧನ ಜಿ.ಎನ್31 October, 2012 12:44

  ಕುಮಾರನ್ ಮತ್ತು ಆಸಕ್ತರೆಲ್ಲರ ಅನುಕೂಲಕ್ಕಾಗಿ ನನ್ನ ತಂದೆ - ಜಿಟಿ ನಾರಾಯಣ ರಾವ್ ೧೯೯೩ರಷ್ಟು ಹಿಂದೆ ಬರೆದು, ಪ್ರಕಟಿಸಿದ್ದ ಪುಟ್ಟ ಪುಸ್ತಕ - ಭವಿಷ್ಯ ವಿಜ್ಞಾನದಲ್ಲಿನ ಒಂದು ಅಧ್ಯಾಯವನ್ನು ಈ ಅಂಕಣದ ಮಿತಿ ನೋಡಿ ಎರಡು ಕಂತಿನಲ್ಲಿ ಕೊಡುತ್ತಿದ್ದೇನೆ.
  ಬುವಿಯಿದು ಬರಿ ಮಣ್ಣಲ್ಲೋ!
  ಅಮೆರಿಕದ ಅಧ್ಯಕ್ಷ, ರೆಡ್ ಇಂಡಿಯನ್ ಬುಡಕಟ್ಟಿನ ನಾಯಕನಿಗೆ ರೆಡ್ ಇಂಡಿಯನ್ನರ ವಸತಿ ಪ್ರದೇಶವನ್ನು ಸರಕಾರಕ್ಕೆ ಮಾರಬೇಕೆಂದು ಕೇಳಿಕೊಂಡಿದ್ದ. ಆಗ ಮುಗ್ಧ, ಅನಾಗರಿಕ, ಅವಿದ್ಯಾವಂತ ಸಿಯಾತಲ್ ರಾಷ್ಟ್ರಾಧ್ಯಕ್ಷನಿಗೆ ಬರೆದ ಉತ್ತರದ (೧೮೫೫) ಕೆಲವು ಅಂಶಗಳು:
  "ವಾಷಿಂಗ್ಟನ್ನಿನಲ್ಲಿರುವ ಮಹಾಪ್ರಭು ನಮ್ಮ ನೆಲವನ್ನು ಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ. ಸ್ನೇಹ ಮತ್ತು ಸದ್ಭಾವನೆಯ ಮಾತುಗಳನ್ನು ಸಹ ಮಹಾಪ್ರಭುಗಳು ನಮಗೆ ಕಳಿಸಿರುವರು. ಇದು ಅವರ ದಯವಂತಿಕೆಯ ದ್ಯೋತಕ. ಏಕೆಂದರೆ ನಾವು ಮರುಸಲ್ಲಿಸಬಹುದಾದಂಥ ಸ್ನೇಹ ಅವರಿಗೆ ಅಗತ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ನಾವು ನಿಮ್ಮ ಬೇಡಿಕೆಯನ್ನು ಪರಿಶೀಲಿಸುತ್ತೇವೆ. ಹಾಗೆ ಮಾಡದಿದ್ದರೆ ಬಿಳಿ ಮನುಷ್ಯ ತುಪಾಕಿಗಳ ಸಮೇತ ಬಂದು ನಮ್ಮ ನೆಲವನ್ನು ನುಂಗಬಲ್ಲ ಎಂದು ನಮಗೆ ಗೊತ್ತುಂಟು. ಆದರೆ ನೀವು ಬಾನನ್ನು ಹೇಗೆ ತಾನೇ ಕೊಳ್ಳಬಲ್ಲಿರಿ ಅಥವಾ ಮಾರಬಲ್ಲಿರಿ? ನೆಲದ ಒಲವನ್ನು? ಈ ಭಾವನೆಯೇ ನಮಗೆ ವಿಚಿತ್ರವಾಗಿದೆ. ಭೂಮಂಡಲದ ಪ್ರತಿಯೊಂದು ಅಂಶವೂ ನನ್ನ ಮಂದಿಗೆ ಪವಿತ್ರವಾದದ್ದು. ಒಂದೊಂದು ಮರದ ಕೊಂಬೆರೆಂಬೆಗಳು ಕಡಲ ಕಿನಾರೆಯಲ್ಲಿಯ ಬಿಳಿಮರಳ ಹಾಸು, ದಟ್ಟ ಕಾಡುಗಳಲ್ಲಿಯ ಮಬ್ಬು ಇಬ್ಬನಿಯ ಮುಸುಕು, ಗುಂಯಿಗುಡುವ ಕೀಟದ ಸ್ವನ ಎಲ್ಲವೂ ನಮ್ಮ ಬಳಗದವರಿಗೆ ಆತ್ಮೀಯವಾದವು. ಬಿಳಿ ಮನುಷ್ಯನಿಗೆ ನಮ್ಮ ರೀತಿಗಳು ಅರ್ಥವಾಗುವುದಿಲ್ಲ ಎಂದು ನಮಗೆ ಗೊತ್ತಿದೆ. ನೆಲದ ಯಾವುದೇ ಭಾಗ ಅವನಿಗೆ ಇನ್ನೊಂದು ಭಾಗದಂತೆ ಒಂದೇ. ಏಕೆಂದರೆ ಅವನು ರಾತ್ರಿಂಚರನಾದ ಹೊಸಬ. ತನಗೆ ಬೇಕಾದದ್ದನ್ನೆಲ್ಲ ನೆಲದಿಂದ ಕತ್ತರಿಸುವುದೊಂದೇ ಅವನಿಗೆ ತಿಳಿದಿರುವ ಕಸಬು. ಭೂಮಿ ಅವನ ಭ್ರಾತೃ ಅಲ್ಲ, ಶತ್ರು. ಇದನ್ನು ಜಯಿಸಿದ ಬಳಿಕ ಅವನು ಮತ್ತೆ ಮುಂದೆ ಸಾಗುತ್ತಾನೆ. ಅವನ ಸುಡುವ ಹಸಿವು ಇಡೀ ಇಳೆಯನ್ನೇ ಕಬಳಿಸಿ ಬೆಂಗಾಡಾಗಿಸುತ್ತದೆ.
  "ನಿಮ್ಮ ನಗರಗಳ ದೃಶ್ಯ ಕೆಂಪು ಮನುಷ್ಯನ ಕಂಗಳಲ್ಲಿ ನೋವು ಉಂಟುಮಾಡುವುದು. ಪ್ರಾಯಶಃ ಕೆಂಪು ಮನುಷ್ಯ ಒಬ್ಬ ಮೃಗ. ನಿಮ್ಮ ಸೂಕ್ಷ್ಮ ಅವನಿಗೆ ಅರ್ಥವಾಗುವುದಿಲ್ಲ. ನೀವು ನೀಡಿರುವ ಕರೆಯನ್ನು ನಾವು ಮನ್ನಿಸುವುದು ಅನಿವಾರ್ಯವಾಗಿದೆ. ಆದರೆ ಒಂದು ಷರತ್ತನ್ನು ನಿಮ್ಮ ಮುಂದಿಡ ಬಯಸುವೆನು: ಈ ನೆಲದ ಜಂತುಗಳನ್ನು ಬಿಳಿ ಮನುಷ್ಯ ತನ್ನ ಸೋದರ ಪ್ರಾಣಿಗಳೆಂಬುದಾಗಿ ಪರಿಗಣಿಸಬೇಕು. ನಾವು ಕಂಡುಕೊಂಡಿರುವ ಸತ್ಯ ಒಂದುಂಟು. ಇದನ್ನು ಬಿಳಿ ಮನುಷ್ಯ ಕೂಡ ಒಂದಲ್ಲ ಒಂದು ದಿನ ತಿಳಿದೇ ತಿಳಿಯುತ್ತಾನೆ: ನಮ್ಮೆಲ್ಲರ ದೇವರೂ ಒಬ್ಬನೇ. ನಮ್ಮ ನೆಲವನ್ನು ಹೇಗೆ ನೀವು ಸ್ವಂತಕ್ಕೆ ಪಡೆಯಬೇಕೆಂದು ಹವಣಿಸಿದ್ದೀರೋ ಹಾಗೆ ಆತನನ್ನು ಕೂಡ ಕೇವಲ ನಿಮ್ಮ ಖಾಸಾ ಸೊತ್ತಾಗಿ ಬಾಚಿಕೊಳ್ಳಲು ಬಗೆದಿರಬಹುದು. ಆದರೆ ಇದು ನಡೆಯದು. ಅವನು ಜನರ ದೇವರು. ಅವನ ಕರುಣೆ ಕೆಂಪು ಮಂದಿಗೂ ಬಿಳಿ ಮಂದಿಗೂ ಸಮವಾಗಿಯೇ ಹಂಚಿಕೊಂಡಿದೆ. ಧರಣಿಮಂಡಲ ಅವನಿಗೆ ಅಮೂಲ್ಯವಾದದ್ದು. ಇದನ್ನು ಕುಲಗೆಡಿಸುವುದು ಎಂದರೆ ಸೃಷ್ಟೀಶನ ಮೇಲೆ ಅವಹೇಳನ ಹೇರಿದಂತೆ. ಬಿಳಿಯರು ಕೂಡ, ಪ್ರಾಯಶಃ ಇತರ ಬುಡಕಟ್ಟಿನವರಿಗಿಂತ ಬಲು ಬೇಗ ತೊಲಗಿ ಹೋಗುತ್ತಾರೆ. ನಿಮ್ಮ ಹಾಸಿಗೆಯನ್ನು ಹೊಲಸುಗೊಳಿಸುವುದನ್ನು ಹೀಗೆಯೇ ಮುಂದುವರಿಸುತ್ತಿರಿ - ಒಂದು ದಿನ ಆ ರೊಚ್ಚೆಯಲ್ಲಿ ನಿಮ್ಮ ಉಸಿರೇ ಕಟ್ಟಿಹೋಗುತ್ತದೆ. ಕಾಡೆಮ್ಮೆಗಳೆಲ್ಲವನ್ನೂ ಕಡಿದೊಗೆದ ಬಳಿಕ ಕಾಡುಕುದುರೆಗಳೆಲ್ಲವನ್ನೂ ಪಳಗಿಸಿ ಮುಗಿದ ತರುವಾಯ ವನಾಂತರಗಳ ಪ್ರಶಾಂತ ಏಕಾಂತಗಳೆಲ್ಲವೂ ನರಗಬ್ಬಿನಿಂದ ನಾರುತ್ತಿರುವಾಗ ಮತ್ತು ಫಲಸಮೃದ್ಧ ಗಿರಿ ದೃಶ್ಯಗಳು ಚಲ್ಲಗಾತಿಯರ ಬೋಳು ಹರಟೆಯಲ್ಲಿ ಮುಳುಗಿಹೋದಾಗ ಹೊದರೆಲ್ಲಿ ಉಳಿದಿರುವುದು? ಹದ್ದನ್ನು ಎಲ್ಲರಸಲಿ? ಈ ಸೂರೆಗೆ ಈ ಹನನಕ್ಕೆ ಅಂತ್ಯವೆಂದು? ಸಾವಿನ ಮೊನೆ ತಿವಿಯುವಂದೇ ಬದುಕಿನ ಕೊನೆ.
  (ಎರಡನೇ ಭಾಗದಲ್ಲಿ ಮುಂದುವರಿದಿದೆ)

  ReplyDelete
 16. ಅಶೋಕವರ್ಧನ ಜಿ.ಎನ್31 October, 2012 12:46

  (ಎರಡನೇ ಭಾಗ)
  "ಬಿಳಿ ಮನುಷ್ಯನ ಪಟ್ಟಣಗಳಲ್ಲಿ ಎಲ್ಲಿಯೂ ಶಾಂತ ಪ್ರದೇಶವೇ ಇಲ್ಲ. ವಸಂತ ಮಾರುತದಿಂದ ತೊನೆಯುವ ಎಲೆಗಳ ನಿನದ ಅಲ್ಲಿಲ್ಲ. ಜೀರುಂಡೆಗಳ ರೆಕ್ಕೆ ಅದಿರಿಕೆಯ ಸೊಲ್ಲು ಅಲ್ಲಿಲ್ಲ. ಆದರೆ ನಾನೊಬ್ಬ ಅನಾಗರಿಕ. ನನಗೆ ತಿಳಿಯಲಾರದೋ ಏನೋ ನಗರದ ಹರಟೆ ನನ್ನ ಕಿವಿಗಳನ್ನು ಕಿವಿಡಾಗಿಸುತ್ತದೆ. ಕೋಗಿಲೆಯ ಕುಹೂ ಕುಹೂರವವನ್ನಾಗಲೀ ರಾತ್ರಿ ವೇಳೆ ಕೊಳದ ಸುತ್ತ ನೆರೆದು ಅಖಂಡ ಸಂವಾದದಲ್ಲಿ ಲೀನವಗಿರುವ ಮಂಡೂಕಗಳ ಟ್ರೊಂಯ್ ಟ್ರೊಂಯ್ ನಾದವನ್ನಾಗಲೀ ಆಲಿಸಲಾಗದಿದ್ದರೆ ಬದುಕಿನಲ್ಲಿ ಉಳಿದುದೇನು? ನಡುಹಗಲ ಮಳೆಯಿಂದ ಕೊಳೆ ತೊಳೆದ ಇಲ್ಲವೇ ಸುರಹೊನ್ನೆಯ ಕಂಪನ್ನು ಧರಿಸಿದ ತಂಗಾಳಿಯ ಮೆಲು ಬೀಸು ಕೆಂಪು ಮನುಷ್ಯನಿಗೆ ಬಲು ಇಂಪು. ಈತನಿಗೆ ವಾಯು ಅತ್ಯಮೂಲ್ಯವಾದದ್ದು. ಏಕೆಂದರೆ ಇದೇ ಸರ್ವರಿಗೂ - ಪ್ರಾಣಿಗಳನ್ನೂ ಸಸ್ಯಗಳನ್ನೂ ಒಳಗೊಂಡಂತೆ - ಜೀವದಾಯಕ ಉಸಿರು. ತಾನು ಶ್ವಸನಿಸುವ ವಾಯುವನ್ನು ಬಿಳಿ ಮನುಷ್ಯ ಗಮನಿಸಿರುವಂತೆ ತೋರುವುದಿಲ್ಲ. ನವೆದು ನವೆದು ಸಾಯುತ್ತಿರುವ ರೋಗಿಯಂತೆ ಅವನು ಪರಿಮಳಕ್ಕೆ ಮರವಟ್ಟಿದ್ದಾನೆ. ಪ್ರಾಣಿಸಂಗವಿಲ್ಲದಂಥ ಮಾನವನ ಬದುಕು ಬದುಕೇ? ವನ್ಯಪ್ರಾಣಿಗಳೆಲ್ಲವೂ ನಿರ್ನಾಮವಾಗಿ ಹೋದುವೋ ಮಾನವ ಧೃತಿಗುಂದಿದವನಾಗಿ ಏಕಾಂಗಿಯಾಗಿ ಸತ್ತ್ವ ಕಳೆದುಕೊಂಡವನಾಗಿ ನಶಿಸಿಯೇ ಹೋಗುವುದು ನಿಚ್ಚಳ ಸತ್ಯ. ಏಕೆಂದರೆ ಪ್ರಾಣಿಗಳಿಗೆ ಇಂದು ಯಾವ ಗತಿ ಒದಗುವುದೋ ಅದು ಮಾನವನಿಗೆ ನಾಳೆ ಒದಗುವುದು ನಿಸರ್ಗ ನಿಯಮ.
  "ಬಿಳಿ ಮನುಷ್ಯನ ಕನಸುಗಳೇನು? ಚಳಿಗಾಲದ ಸುದೀರ್ಘ ರಾತ್ರಿಗಳಲ್ಲಿ ಅವನು ತನ್ನ ಎಳೆಯರ ಕಲ್ಪನೆಗಳಿಗೆ ಕಟ್ಟುವ ರೆಕ್ಕೆಗಳೇನು? ಅವರ ಮುಂದೆ ಇಡುವ ಘನಾದರ್ಶಗಳೇನು? ಅವರು ಲೋಕವನ್ನು ಯಾವ ತೆರನಾಗಿ ಸ್ವಾಗತಿಸಬೇಕು ಎಂದು ಅವನು ಬಯಸುತ್ತಾನೆ? ಇವು ಯಾವುವೂ ನಮಗೆ ತಿಳಿದಿಲ್ಲ. ನಾವು ದಸ್ಯುಗಳು. ಬಿಳಿ ಮನುಷ್ಯನ ಕನಸುಗಳಿಗೆ ಪ್ರವೇಶ ನಮಗಿಲ್ಲ. ಅವು ಹೇಗಿದ್ದಾವು ಎಂಬುದು ನಮಗೆ ಗೊತ್ತಿಲ್ಲದಿರುವುದರಿಂದ ನಮ್ಮ ಚಿಂತನೆಯ ಧಾಟಿಯಲ್ಲಿಯೇ ಮುಂದುವರಿಯುತ್ತೇವೆ. ನಮಗೆ ನೀವು ಮೀಸಲು ಪ್ರದೇಶವೊಂದನ್ನು ಒದಗಿಸುವ ಮಾತು ಕೊಟ್ಟಿದ್ದೀರಿ. ಆ ಭರವಸೆ ಮೇರೆಗೆ ನಾವು ನಿಮಗೆ ಈ ನೆಲೆಯನ್ನು ಮಾರುತ್ತೇವೆ. ಪ್ರಾಯಶಃ ಆ ಹೊಸ ತಾಣದಲ್ಲಿ ನಮ್ಮ ಇಚ್ಛಾನುಸಾರ ನಾವು ಉಳಿದ ಎಣಿಕೆಯ ದಿನಗಳನ್ನು ತಳ್ಳಿಯೇವು. ಕೊನೆಯ ಕೆಂಪು ಮನುಷ್ಯ ಈ ಸುಂದರ ವಸುಂಧರೆಯಿಂದ ಅಂತರ್ಧಾನನಾದ ಮೇಲೆಯೂ ಅಲ್ಲದೆ, ಆತನ ಸ್ಮೃತಿ ಪ್ರೇಯರಿಗಳ ಮೇಲೆ ಸರಿಯುವ ತೆಳು ಮೋಡದ ನೆರಳಾದ ಮೇಲೆಯೂ, ಈ ಕಿನಾರೆ ಮತ್ತು ಕಾಡುಗಳು ಆತನ ಸತ್ತ್ವ ತೇಜಸ್ಸುಗಳನ್ನು ಹಿಡಿದಿಟ್ಟಿರುತ್ತವೆ. ಏಕೆಂದರೆ ಕೆಂಪು ಜನ ಭೂಮಾತೆಯನ್ನು ನವಜಾತ ಶಿಶು ತನ್ನ ತಾಯಿಯ ಗುಂಡಿಗೆ ಮಿಡಿತವನ್ನು ಮುದ್ದಿಸಿ ಅಪ್ಪುವಂತೆ ಪ್ರೀತಿಸಿ ಆಲಿಂಗಿಸಿಕೊಂಡಿದ್ದಾರೆ. ನಮ್ಮ ಈ ವಲಯವನ್ನು ನಾವು ನಿಮಗೆ ಮಾರುತ್ತೇವೆ. ಆದರೆ ನಾವು ಇದನ್ನು ಪ್ರೀತಿಸಿದಂತೆ ನೀವೂ ಪ್ರೀತಿಸಬೇಕು, ಓಲೈಸಿದಂತೆ ನೀವೂ ಓಲೈಸಬೇಕು. ಆರಯ್ಯಿಸಿದಂತೆ ನೀವೂ ಆರಯ್ಯಿಸಬೇಕು. ಇದರ ಈಗಿನ ಚಿತ್ರವನ್ನು ನಿಮ್ಮ ಮನಃಪಟಲದ ಮೇಲೆ ಪಡಿಮೂಡಿಸಿ ಚೆನ್ನಾಗಿ ಕಾಪಾಡಿಕೊಳ್ಳಿ. ನಿಮ್ಮ ಸಮಸ್ತ ತ್ರಾಣ ಪ್ರಾಣಗಳಿಂದ ಹೃದಯಪೂರ್ವಕವಾಗಿ ಇದನ್ನು ನಿಮ್ಮ ಮಕ್ಕಳಿಗೋಸ್ಕರ ರಕ್ಷಿಸಿ. ಭಗವಂತ ಸಮಸ್ತರನ್ನೂ ಹೇಗೆ ಪ್ರೀತಿಯಿಂದ ಕಾಣುವನೋ ಹಾಗೆ ನೀವು ಇದನ್ನು ಪ್ರೀತಿಯಿಂದ ನೋಡಿಕೊಳ್ಳಿ. ಒಂದು ಸಂಗತಿ ನಮಗೆ ಚೆನ್ನಾಗಿ ಮನದಟ್ಟಾಗಿದೆ. ನಿಮ್ಮ ಮತ್ತು ನಮ್ಮ ದೇವರು ಒಬ್ಬನೇ. ಈ ನೆಲ ಆತನ ಕೃತಿ. ಇದು ಆತನಿಗೆ ಪ್ರಿಯವಾದದ್ದು, ಅಮೂಲ್ಯವಾದದ್ದು. ಮನುಕುಲದ ಸಾಮೂಹಿಕ ಅಭಿಯಾನದಲ್ಲಿ ಬಿಳಿ ಮನುಷ್ಯ ಕೂಡ ಅಪವಾದ ಆಗಲಾರ."

  ReplyDelete
 17. ಕೊಂಚ ತಡವಾಗಿದೆ. ಆದರೂ ಬೆಟರ್ ಲೇಟ್ ದೆನ್ ನೆವರ್!
  ಯಾರ ಅನುವಾದ ಉತ್ತಮ ಅಂತ ನನ್ನ ಮೇಲೆ ಹುರುಡು ಕಟ್ಟಿ ಅಶೋಕರು ಕೆಣಕಿದರು ನಿಜ. ಆದರೆ ಆಟಗಾರನೇ ತೀರ್ಪುಗಾರನಾಗುವುದು ಸಾಧ್ಯವೆ? ಹಾಗಾಗಿ ನಾನು ಸುಮ್ಮನಿದ್ದೆ. ಈಗ ಘಟಾನುಘಟಿಗಳೆಲ್ಲ ಚರ್ಚೆಗೆ ಕೈಹಾಕಿದ ಮೇಲೆ ಹೂವಿನ ಜೊತೆ ನಾರೂ ಇದ್ದುಬಿಡಲಿ.
  ತನ್ನ ಸಾರ್ವಕಾಲಿಕ ಶ್ರೇಷ್ಠ ಅನುವಾದಕ್ಕಾಗಿ ಒಂದು ನೋಬೆಲ್ ಸಿಕ್ಕರೂ ಸಿಗಬಹುದು ಎಂದು ಅಶೋಕರು ಆಸೆಯಲ್ಲಿದ್ದರು. ಅದೆಲ್ಲ ಸಿಗಲಿಕ್ಕಿಲ್ಲ, ಒಂದು ಪಿ.ಎಚ್ಡಿ. ಸಿಕ್ಕೀತು, ಪ್ರಯತ್ನಿಸಿ ನೋಡಿ ಅಂದೆ. ಅಷ್ಟಾಗುವಾಗ ಅಗೊಳ್ಳಿ ಬಂತೇ ಬಂತು ಪರಿಸರ ಪ್ರಶಸ್ತಿ! ಜೊತೆಗೇ ನಿರಾಕರಣ! ಇದ್ಯಾವ ನ್ಯಾಯ ಸ್ವಾಮಿ? ಹೇಗುಂಟು ನನ್ನ ಅನುವಾದ ಅಂತ ಕೇಳುವುದು, ತಗೊಳ್ಳಿ ಒಂದು ಪ್ರಶಸ್ತಿ ಅಂದರೆ ನನಗೆ ಬೇಡಪ್ಪ ಎನ್ನುವುದು?
  ಕೊಂಚ ತಡವಾಗಿದೆ. ಆದರೂ ಬೆಟರ್ ಲೇಟ್ ದೆನ್ ನೆವರ್!
  ಯಾರ ಅನುವಾದ ಉತ್ತಮ ಅಂತ ನನ್ನ ಮೇಲೆ ಹುರುಡು ಕಟ್ಟಿ ಅಶೋಕರು ಕೆಣಕಿದರು ನಿಜ. ಆದರೆ ಆಟಗಾರನೇ ತೀರ್ಪುಗಾರನಾಗುವುದು ಸಾಧ್ಯವೆ? ಹಾಗಾಗಿ ನಾನು ಸುಮ್ಮನಿದ್ದೆ. ಈಗ ಘಟಾನುಘಟಿಗಳೆಲ್ಲ ಚರ್ಚೆಗೆ ಕೈಹಾಕಿದ ಮೇಲೆ ಹೂವಿನ ಜೊತೆ ನಾರೂ ಇದ್ದುಬಿಡಲಿ.
  ತನ್ನ ಸಾರ್ವಕಾಲಿಕ ಶ್ರೇಷ್ಠ ಅನುವಾದಕ್ಕಾಗಿ ಒಂದು ನೋಬೆಲ್ ಸಿಕ್ಕರೂ ಸಿಗಬಹುದು ಎಂದು ಅಶೋಕರು ಆಸೆಯಲ್ಲಿದ್ದರು. ಅದೆಲ್ಲ ಸಿಗಲಿಕ್ಕಿಲ್ಲ, ಒಂದು ಪಿ.ಎಚ್ಡಿ. ಸಿಕ್ಕೀತು, ಪ್ರಯತ್ನಿಸಿ ನೋಡಿ ಅಂದೆ. ಅಷ್ಟಾಗುವಾಗ ಅಗೊಳ್ಳಿ ಬಂತೇ ಬಂತು ಪರಿಸರ ಪ್ರಶಸ್ತಿ! ಜೊತೆಗೇ ನಿರಾಕರಣ! ಇದ್ಯಾವ ನ್ಯಾಯ ಸ್ವಾಮಿ? ಹೇಗುಂಟು ನನ್ನ ಅನುವಾದ ಅಂತ ಕೇಳುವುದು, ತಗೊಳ್ಳಿ ಒಂದು ಪ್ರಶಸ್ತಿ ಅಂದರೆ ನನಗೆ ಬೇಡಪ್ಪ ಎನ್ನುವುದು?
  ಎಚ್. ಸುಂದರ ರಾವ್

  ReplyDelete
 18. ಇಲ್ಲಿರುವ ಅನುವಾದಗಳ ಬಗ್ಗೆ ತಕರಾರೇನೂ ಇಲ್ಲ. ಆದರೂ, ನನ್ನದೂ ಒಂದು ಪ್ರಯತ್ನ:

  ಕಟ್ಟಕಡೆಯ ಮರವನುರುಳಿಸಿ,
  ಕೊಟ್ಟಕೊನೆಯ ಹೊಳೆಹನಿಯ ಹಾಲಾಹಲವಾಗಿಸಿ,
  ಉಳಿದುದೊಂದೇ ಮೀನಮಜ್ಜೆಯ ನೊಣೆದು ನೆಕ್ಕಿ
  ನಿಂತಾಗ ಮಿಂಚು ಜ್ಞಾನೋದಯ
  ಹಣವ ತಿನ್ನಲಾಗದಯ್ಯಾ

  ReplyDelete
 19. ಪರಿಸರ ನಿಸ್ಸಹಾಯಕ ಎನ್ನಬೇಡಿ. ಪರಿಸರದಲ್ಲಿ ಮನುಷ್ಯನಿಗಾಗಿ ಮೀಸಲಾತಿ ಇಲ್ಲ. ಮನುಷ್ಯನ ವರ್ತನೆ ಅಸಹನೀಯವಾದಾಗ ಪರಿಸರವೇ ಅವನನ್ನು ಹೊಸಕಿ ಹಾಕುವುದು. ಪರಿಸರವನ್ನು ರಕ್ಷಿಸಬೇಡಿ. ಮನುಷ್ಯ ಉಳಿಯಬೇಕಾದರೆ ಪರಿಸರವನ್ನು ಮನುಷ್ಯಯೋಗ್ಯವಾಗಿ ಉಳಿಸಿಕೊಳ್ಳಬೇಕು. ಡೈನೋಸಾರ್ಗಳಂತೆ ಮನುಷ್ಯನೂ ಒಂದು ದಿನ ಭೂಮಿಯಲ್ಲಿ ಇರುವುದಿಲ್ಲ. ಅದು ಎಷ್ಟು ಬೇಗ ಎಂಬುದನ್ನು ನಾವೇ ನಿರ್ಧರಿಸೋಣ.

  ReplyDelete
 20. ಕಂಗ್ಲೀಶು ಶಾಲೆಯಲ್ಲಿ ಓದಿದ ನಾನು, ಹತ್ತರ ವರೆಗೆ ಕನ್ನಡ ಮಾದ್ಯಮದಲ್ಲಿ ಓದಿದವರ ಸಾಲಲ್ಲಿ ನಿಲ್ಲಲು, ಬಾಷಾಂತರ ವಿಮರ್ಶಿಸಲು ಖಂಡಿತಾ ಅಸಮರ್ಥ. ನಾನು ಈ ವಾಕ್ಯಗಳ ಹೆಕ್ಕಿದ್ದು ಕೆನಡಾ ದೇಶದ ’ ಟಾರ್ ಸಾಂಡ್ ಗನಿಗಾರಿಕೆ ’ ವಿರೋದಿಸುತ್ತಿರುವ ಒಂದು ಜಾಲತಾಣದಿಂದ ಅಂತ ನೆನಪು. ನೂರಾರು ಕನ್ನಡಿಗರು ಇದನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಂಡಿರುವುದೂ ಹಲವಾರು ಜನ ಕನ್ನಡ ಬಾಷಾಂತರ ಪ್ರಯತ್ನಿಸಿದ್ದು ನನಗೆ ತುಂಬಾ ಕುಶಿ ಕೊಟ್ಟಿದೆ. ಇದಕ್ಕೆ ಹೋಲುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಮಾತು ನೆನಪಾಗುತ್ತದೆ -
  ಆದರಿನ್ನು ತಿನ್ನುವುದೇನನ್ನ,
  ಅನ್ನವೆಲ್ಲವೂ ಆಯಿತು ಚಿನ್ನ

  ReplyDelete
 21. ಪೆಜತ್ತಾಯ ಕೇಳಿಸಿಕೊಂಡಂತೆ:
  ಪೆಟ್ರೋಲ್’ಡ್, ಬಂಗಾರ್’ಡ್ ಬಂಜಿ ಜಿಂಜೆರೆ ಸಾಧ್ಯ ಉಂಡಾ?
  ತಿನೆರೆ ನುಪ್ಪೇ ಬೋಡತ್ತ ಮಗಾ? ಒಂಜತ್ತ್’ಒಂಜಿ ದಿನೋ ನಮ್ಮ
  ಜೋಕುಲು ಕಂಡದ ಪುಣಿಕೇ ಬರೊಡು! - ಬೇಲೆದ ನಾಗಜ್ಜಿ ಉವಾಚ

  ReplyDelete
  Replies
  1. ಅಣುವ್ಯಾಧ01 November, 2012 20:39

   [ಪೆಜತ್ತಾಯರು ಕೇಳಿಸಿಕೊಂಡ ಕೆಲಸದ ನಾಗಜ್ಜಿಯ ತುಳು ಉದ್ಗಾರದ ಕನ್ನಡ ರೂಪ: ಪೆಟ್ರೊಲ್, ಬಂಗಾರದಿಂದ ಹೊಟ್ಟೆ ತುಂಬಲು ಸಾಧ್ಯವುಂಟಾ? ತಿನ್ಲಿಕ್ಕೆ ಅನ್ನವೇ ಬೇಕಲ್ಲ ಮಗಾ? ಒಂದಲ್ಲ ಒಂದಿನ ನಮ್ಮಕ್ಳು ನಮ್ಗದ್ದೆ ಅಂಚಿಗೇ ಬರ್ಬೇಕು]

   Delete
  2. This comment has been removed by a blog administrator.

   Delete
  3. This comment has been removed by a blog administrator.

   Delete