09 April 2012

ಲಕ್ಯಾದಲ್ಲಿ ಮೃಗಜಲ!ಮಂಗಳೂರ ನೀರಿನ ಕಟ್ಟೆ (ಚಿತ್ರಕೃಪೆ ಡೈಜಿ ವರ್ಲ್ಡ್)
ಮಂಗಳೂರಿನ ಹಿಂಗದ ದಾಹಕ್ಕೆ ಈಚಿನ ವರ್ಷಗಳಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ಪರಿಹಾರ ಲಕ್ಯಾ ಅಣೆಕಟ್ಟು. ಇದು ಪಶ್ಚಿಮ ಘಟ್ಟದ ಪೂರ್ವ ಮಗ್ಗುಲಿನ ದಟ್ಟ ಕಾಡಿನ ನಡುವಣ ವಿಸ್ತಾರ ಬೋಗುಣಿಯಂಥಾ ಜಾಗದಲ್ಲಿದ್ದ ಕುದುರೆಮುಖ ಗಣಿಯ ಒಂದು ಅಂಗ. ಹಾಗೇ ಇನ್ನೊಂದು ಅಂಗವಾಗಿ ಅಲ್ಲಿನ ಕಚ್ಚಾ ಅದಿರನ್ನು ತಪ್ಪಲಿನ ಮಂಗಳೂರಿಗೆ ಕಳಿಸಲು ಜೋಡಿಸಿದ, ಸುಮಾರು ಒಂದು ನೂರು ಕಿಮೀ ದೀರ್ಘವಾದ ಭಾರೀ ಕೊಳವೆಸಾಲೂ ಇದೆ. ಅಣೆಕಟ್ಟು, ಕೊಳವೆಸಾಲನ್ನು ಬೆಸೆಯುವ ಬೀಸು ಹೇಳಿಕೆಗೆ ವಿಶ್ವಾಸದ ಕವಚ ತೊಡಿಸುವಂತೆ ಆ ವಲಯ ಭಾರೀ ಮಳೆಬರುವ ಮತ್ತು ಸಹಜವಾಗಿ ಹಲವು ನದಿಗಳ ಉಗಮಸ್ಥಾನವೂ ಹೌದು!

ಮಂಗಳೂರ ನಗರಾಡಳಿತವಾದರೋ ಇದರ ಪ್ರಾಯೋಗಿಕತೆಯನ್ನು ಒರೆಗೆ ಹಚ್ಚಬೇಕಿತ್ತು. ಅದು ಬಿಟ್ಟು, ಸ್ಥಳೀಯ ಜಲಸಂಪತ್ತನ್ನು ರೂಢಿಸುವಲ್ಲಿನ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಇದನ್ನು ಮುಕ್ತ ಕಂಠದಿಂದ ಸ್ವಾಗತಿಸಿ, ಪ್ರಚುರಿಸುತ್ತಿರುವುದು ನಾಚಿಗೆಗೇಡು. ಸರಕಾರ, ವಿವೇಚನಾಪರ ಜನಪ್ರತಿನಿಧಿಗಳು ಮತ್ತು ವಿಚಾರಪರ ಸಾರ್ವಜನಿಕರು ಇದರ ಹುಸಿಯನ್ನು ತಿಳಿದವರೇ ಇದ್ದಾರೆ. ಎಂಥದ್ದೇ ಅಣೆಕಟ್ಟೆ ಯಾವುದೇ ಕೊಳವೆ ಸಾಲು ನೀರಸಂಗ್ರಹಕ್ಕೂ ಸಾಗಣೆಗೂ ಬಂದೀತು ಎನ್ನುವುದು ತಪ್ಪು. ಅದನ್ನು ಸ್ಪಷ್ಟಪಡಿಸುವಂತೆ ಪ್ರಸ್ತುತ ಲಕ್ಯಾ ಅಣೆಕಟ್ಟು ಮತ್ತು ಕೊಳವೆಸಾಲಿನ ಕಥೆ ನನಗೆ ತಿಳಿದಷ್ಟು, ಸೂಕ್ಷ್ಮದಲ್ಲಿ  ಹೇಳುತ್ತೇನೆ.


ಕುದುರೆಮುಖ ಗಣಿಗಾರಿಕೆಯಲ್ಲಿ ತೆಗೆದ ಕಲ್ಲುಮಣ್ಣನ್ನು ತೊಳೆದಾಗ ಬಂದ ಕೆಸರನ್ನು ನೇರಾನೇರ ನದಿಗೆ (ಭದ್ರಾ) ಬಿಡಬಾರದೆಂಬ ಒಂದೇ ಕಾರಣಕ್ಕಾಗಿ ರೂಪುಗೊಂಡದ್ದು ಲಕ್ಯಾ ಅಣೆಕಟ್ಟು. ಅದು ಆ ವಲಯದ ಅತ್ಯಂತ ಸಣ್ಣ ಜಲಾನಯನ ಪ್ರದೇಶ. ಸಹಜವಾಗಿ ಕಡಿಮೆ ನೀರ ಹರಿವಿನ ತೊರೆ ಸೇರಿದ ಕಣಿವೆಗೆ ಅಡ್ಡಲಾಗಿ ರಚಿಸಿದ್ದಾರೆ. ಈ ಕಟ್ಟೆಗೆ ಶುದ್ಧಾಂಗ ಜಲಾಗರದಂತೆ ನಿರಂತರ ಒತ್ತಡ ಇರುವುದಿಲ್ಲ ಎಂದೇ ರಚನೆ ಬರಿಯ ಮಣ್ಣಿನಿಂದಲೇ ಆಗಿದೆ. ಪೂರಕವಾಗಿ ಒತ್ತಿನ ಪ್ರಾಕೃತಿಕ ಸ್ಥಿತಿಯನ್ನು ನೀರಕಟ್ಟೆಗಳಿಗೆ ಆವಶ್ಯಕವಾದ ಮಟ್ಟದಲ್ಲಿ ಭದ್ರಗೊಳಿಸಿಯೂ ಇಲ್ಲ. ಯೋಜನೆಯಂತೆ ಇಲ್ಲಿ ಕೆಸರು ಹಣಿಯಾಗುತ್ತಿದ್ದಂತೆ ತಳದಿಂದ ಮಣ್ಣು ತುಂಬುತ್ತ, ಗಟ್ಟಿಯಾಗುತ್ತದೆ. ಇಲ್ಲಿ ಸಂಗ್ರಹವಾದ ತಿಳಿ ನೀರನ್ನು ಮರಳಿ ಅದಿರುಪಾಕಶಾಲೆಗೋ ಅಲ್ಲೇ ಉದ್ದಿಮೆ ನಗರದ ತೋಟ ಶೃಂಗಾರಕ್ಕೋ ಬಳಸಿದ್ದುಂಟು. ಆದರೆ ಪೂರ್ಣ ಬಳಕೆಗೆ ತಂದದ್ದೂ ಇಲ್ಲ, ಕನಿಷ್ಠ ಅವರ ಗೃಹಬಳಕೆಗೆ ಇದನ್ನು ನಂಬಿ ಕುಳಿತದ್ದೂ ಇಲ್ಲ.

ದೂರದಲ್ಲಿ ಕಾಣುವ ನೀರು ಮತ್ತೆ ಲಕ್ಯಾ ತುಂಬಿದ ಮಣ್ಣು!
ಗಣಿ ಕಾರ್ಯಾಗಾರದಲ್ಲಿ ಮಣ್ಣು ಕಳೆದುಳಿದ ಕಲ್ಲನ್ನು ನೀರಿನೊಡನೆ ಅರೆದು ಮಾಡಿದ ಪಾಕವನ್ನು (ಮಂದವಾದ ಕಪ್ಪು ಕೆಸರು), ಅರ್ಥಾತ್ ಕಚ್ಚಾ ಅದಿರನ್ನು ಮಂಗಳೂರಿಗೆ ಕೇವಲ ಗುರುತ್ವಾಕರ್ಷಣ ಬಲದಲ್ಲಿ ರವಾನಿಸಲು ಕಂಡುಕೊಂಡ ಸುಲಭ ದಾರಿ (ಸುಮಾರು ೧೦೦ ಕಿಮೀ ಉದ್ದದ) ಕೊಳವೆ ಸಾಲು. ದಟ್ಟ ಕಾಡಿನ ನಡುವೆ, ಘಟ್ಟದ ನೇರ ಇಳಿಕೆ. ಆದರೆ ಕೊಳವೆಸಾಲಿನೊಳಗಿನ ಒತ್ತಡ ತೀವ್ರವಾಗದ ಎಚ್ಚರಕ್ಕಾಗಿ ಕೊಳವೆಸಾಲಿಗೆ ಸುತ್ತುಬಳಸಿನ ಜಾಡು ಕೊಟ್ಟಿದ್ದಾರೆ. (ಇಲ್ಲವಾದರೆ ಜಲವಿದ್ಯುತ್ ಸ್ಥಾವರಗಳಲ್ಲಿನ ಕೊಳವೆಗಳಲ್ಲಿ ಹಾಯ್ದು ಬೀಳುವ ನೀರಿನಂತೆ ಕೆಳಸರಿಯುತ್ತಾ ಗಳಿಸುವ ಪ್ರಚಂಡ ಒತ್ತಡಕ್ಕೆ ಕೊಳವೆ ಸಾಲು ಸ್ಫೋಟಿಸಿಬಿಡಬಹುದು) ಮೊದಲಿಗೆ ಒಳನಾಡಿನಿಂದ ಶೃಂಗಶ್ರೇಣಿ ದಾಟಿ ಕರಾವಳಿಯತ್ತ ಹೊರಡುವಲ್ಲಿ ದೀರ್ಘ ಸುರಂಗಮಾರ್ಗ. ಮುಂದುವರಿದಂತೆ ಕೆಲವೆಡೆ ಆಳ ನೆಲದಲ್ಲಿ ಹೂತುಸಾಗಿದರೆ, ಕೆಲವೆಡೆ ಎತ್ತರದ ಸೇತುವೆಗೇ ಏರಿಸಿ ಬಿಟ್ಟಿದ್ದಾರೆ. ತಿರುವುಗಳಲ್ಲಿ ಘರ್ಷಣೆಯ ಪರಿಣಾಮ ಕನಿಷ್ಠವಾಗುವ ಎಚ್ಚರವಹಿಸಿದ್ದಾರೆ. ಕೊಳವೆ ಅಳವಡಿಸುವ ಕೆಲಸಕ್ಕೂ ಮುಂದೆ ಅದರ ಉಸ್ತುವಾರಿಯ ಓಡಾಟಕ್ಕೂ ಒದಗುವಂತೆ ಸುಮಾರು ಐವತ್ತು ಮೀಟರ್ ಅಗಲದಲ್ಲಿ ಉದ್ದಕ್ಕೂ ಕಾಡುಬೋಳಿಸಿ, ನೆಲ ಹದಗೊಳಿಸಿದ್ದು ಇಂದಿಗೂ (ಸಣ್ಣ ಜೀರ್ಣೋದ್ಧಾರದಲ್ಲಿ) ಬಳಕೆ ಯೋಗ್ಯವಾಗಿಯೇ ಉಳಿದಿದೆ.

ಎಲ್ಲರಿಗೂ ತಿಳಿದಂತೆ ೧೯೭೯ರಲ್ಲಿ ಲೋಕಾರ್ಪಣೆಯಾದ ಲಕ್ಯಾಅಣೆಕಟ್ಟೆ ೧೯೯೯ರಲ್ಲಿ ಎರಡನೇ ಹಂತಕ್ಕೇರುವಷ್ಟು ತುಂಬಿಹೋಗಿತ್ತು. ಅಂದರೆ ಸಹಜವಾಗಿ ಮೂಲ ಲಕ್ಯಾದ ಎತ್ತರ ಬಿತ್ತರಗಳು ಇಪ್ಪತ್ತು ವರ್ಷಗಳಲ್ಲಿ ಮಣ್ಣಿನಿಂದ ತುಂಬಿ ಗಟ್ಟಿಯಾದದ್ದು ಸ್ಪಷ್ಟವಿದೆ. ವನ್ಯಕ್ಕೆ ಹತ್ತಿದ ಕ್ಯಾನ್ಸರಿನಂತೆ ಗಣಿಗಾರಿಕೆ ಅವಧಿ ಮೀರಿ ಮುಂದುವರಿಯ ತೊಡಗಿದಾಗ ಅಣೆಕಟ್ಟು ತಾಳಿಕೆ ಮೀರಿ ‘ಆಳಿಕೆ’ ನಡೆಸುವುದು ಅನಿವಾರ್ಯವಾಯ್ತು. ತನ್ನ ‘ಜೀವಿತ’ದ ಕೊನೆಕೊನೆಯಲ್ಲಿ ಲಕ್ಯಾ ಅಣೆಕಟ್ಟು ಮಳೆಗಾಲಗಳ ಬರಿಯ ಮೇಲ್ಮೈ ಪ್ರವಾಹದಲ್ಲೇ ಸಾಕಷ್ಟು ಭೀತಿ ಹುಟ್ಟಿಸಿದ್ದು, ಅನಾಹುತ ಮಾಡಿದ್ದು ಮರೆಯುವಂತಿಲ್ಲ. ಒಮ್ಮೆ ಅದರ ಕೋಡಿಕಾಲುವೆಯಲ್ಲಿ ದಂಡೆ ಕುಸಿತವಾದಾಗಲಂತೂ ಮಿಂಚಿನ ಪ್ರವಾಹಭೀತಿಯಲ್ಲಿ ಕುದುರೆಮುಖದ ನಾಗರಿಕ ವಸತಿಗಳನ್ನು ರಾತೋರಾತ್ರಿ ಖಾಲಿಮಾಡಿಸಿದ್ದರು! ಇನ್ನೊಮ್ಮೆ ಕಟ್ಟೆಮೀರಿದ ಪ್ರವಾಹದಲ್ಲಿ ಕೆಳಗಿನ ಮುಖ್ಯ ದಾರಿಯೂ ಸೇರಿದಂತೆ ನೂರಾರು ಮೀಟರ್ ಅಗಲಕ್ಕೆ ನೆಲವೆಲ್ಲಾ ಕೊಚ್ಚಿ ಕೊರಕಲಾಗಿತ್ತು! ಗಣಿಗಾರಿಕಾ ಸಂಸ್ಥೆ ಒಂದು ಸಾರ್ವಜನಿಕ ಉದ್ದಿಮೆ. ಆದರೂ ಈ ಒತ್ತಡಗಳನ್ನು ಕಳೆಯಲು ಅದು ಇನ್ನೊಂದೇ ಸಾರ್ವಜನಿಕ ವ್ಯವಸ್ಥೆಯಾದ ರಾಷ್ಟ್ರೀಯ ಉದ್ಯಾನವನದ ನೆಲವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿತು. ಇದು ಪತ್ತೆಯಾದಮೇಲೆ ದಂಡ ಕಟ್ಟುವಂತಾದದ್ದೂ ಇಲ್ಲಿ ನೆನಪಿಸಿಕೊಳ್ಳಲೇಬೇಕು.

ಬಲವತ್ತರವಾದ ಕಾನೂನುಕ್ರಮದಿಂದ ಕುದುರೆಮುಖ ವಲಯದಲ್ಲಿ ಗಣಿಗಾರಿಕೆ ಉಚ್ಚಾಟನೆಯಾಯ್ತು. ಕಂಪೆನಿ ಅನಿವಾರ್ಯವಾಗಿ ಬಹುತೇಕ ನೌಕರರನ್ನು ಕಳಚಿಕೊಂಡಿತು. ಹಿಂಬಾಲಿಸಿದಂತೆ ಉದ್ದಿಮೆ ನಗರದ ವಸತಿ ಮತ್ತು ಸಾರ್ವಜನಿಕ ಸವಲತ್ತುಗಳು ತೀವ್ರ ಕಡಿತಗೊಳಿಸುತ್ತಲೇ ಬಂತು. ಇಲ್ಲಿನ ಎಲ್ಲಾ ಔದ್ಯಮಿಕ ವ್ಯವಸ್ಥೆಗಳು - ಮಾರಿಹಲಿಗೆಗಳು, ರಕ್ಕಸ ಲಾರಿಗಳು, ಸಾಗಣೆ ಸರಪಣಿಗಳು, ಅರೆಕಲ್ಲು, ಪಂಪು ತುಕ್ಕು ಸೇರುತ್ತ ಹೋದಂತೆ, ಲಕ್ಯಾ ಅಣೆಕಟ್ಟೂ ಹಡಿಲು ಬಿದ್ದಿದೆ. ಮಳೆಗಾಲದಲ್ಲಷ್ಟೇ ಇಲ್ಲಿ ಮೇಲ್ಮೈಯಲ್ಲಿ ತೆಳು ನೀರು ನಿಂತು, ನೀಲಿ ಪ್ರತಿಫಲಿಸಿ, ಪ್ರತಿಸಾಗರದ ಭ್ರಮೆ ಉಂಟುಮಾಡುತ್ತದೆ. ಆದರೆ ಮಳೆನಿಂತ ವಾರದಲ್ಲೇ ನೀರಿಂಗಿ, ಕಟ್ಟೆ ಎತ್ತರದಲ್ಲೇ ಮಾಸಲು ಕಂದು ಬಣ್ಣದ ಮಣ್ಣು ತುಂಬಿರುವುದು ಕಾಣುತ್ತದೆ. ಅಲ್ಲಿ ಗಾಳಿ ಬಂದಾಗೆಲ್ಲಾ ದೂಳಿನಲೆಯೆದ್ದು ಮರುಭೂಮಿಯನ್ನೇ ನಾಚಿಸುತ್ತಿದೆ.

ಹಸುರೀಕರಣದ ಒಂದು ಸಾಕ್ಷಿ!
ಆದರೂ ‘ಗಣಿ ಕಂಪನಿ’ ಎಂಬ ಪ್ರಪಾತಕ್ಕೆ ಬಿದ್ದ ಆರೋಹಿ ಕೈ ಸೋತಂತಿಲ್ಲ. ಮರಳಿ ಶಿಖರ ಸಾಧಿಸುವ ಹುಚ್ಚಿನಲ್ಲಿ ಬೃಹತ್ ಪ್ರಚಾರ ಫಲಕಗಳನ್ನು (ಹೋರ್ಡಿಂಗ್) ನಿಲ್ಲಿಸುವುದು ಬಿಟ್ಟಿಲ್ಲ. ತನ್ನ ಆಧಾರರಹಿತ ಕಲ್ಪನೆಗಳನ್ನೆಲ್ಲ ದೃಢ ಸಾಧ್ಯತೆಗಳೆಂಬಂತೆ ಮಾಧ್ಯಮಗಳಲ್ಲಿ ಬಿಂಬಿಸುತ್ತಲೇ ಬರುತ್ತಿದೆ. ಇವರ ವರ್ಣಮಯ ಬಲೂನುಗಳಲ್ಲಿ ‘ಮತ್ತೆ ಗಣಿಗಾರಿಕೆ’ ಗಜ ಗಾತ್ರದ್ದೇ ಆಗಿದೆ! ಯಂತ್ರ, ಸ್ಥಾವರಗಳ ಮೇಲಿನ ಭಾರೀ ಸಾರ್ವಜನಿಕರಂಗದ ಮೂಲ ಹೂಡಿಕೆ ವ್ಯರ್ಥವಾಗುವುದು ಇವರ ಶೋಕಗಾನದ ಪಲ್ಲವಿ. ದೇಶಕ್ಕೆ ಅಮೂಲ್ಯ ವಿದೇಶೀ ವಿನಿಮಯ ಗಳಿಸಿದ್ದು ಇವರ ಭಜನೆಯಲ್ಲಿ ಅನುಪಲ್ಲವಿ! ಆಸುಪಾಸಿನ ಹುಲ್ಲ ಬೆಟ್ಟಗಳ ಮೇಲೆಲ್ಲಾ ದಾರಿ ಕಡಿದು, (ವಾಸ್ತವದಲ್ಲಿ ಗಣಿ ವಿಸ್ತರಣೆಗೆ ಅನುಮತಿ ಸಿಕ್ಕಿಯೇ ಸಿಕ್ಕುತ್ತದೆ ಎಂಬ ವಿಶ್ವಾಸದಲ್ಲಿ ನಡೆಸಿದ ಅದಿರಿನ ಮಾದರಿ ಸಂಗ್ರಹ) ಹೊಂಡ ಸಾಲಿಟ್ಟು ಸಸಿ ನೆಟ್ಟ ಶಾಸ್ತ್ರಕ್ಕೆ ಇಂದು ಕಷ್ಟದಲ್ಲಿ ನಾಲ್ಕೆಂಟು ನೀಲಗಿರಿ ಮರಗಳು ಬದುಕುಳಿದಿವೆ. ಆದರೆ ಕಂಪೆನಿಯ ವಕ್ತಾರರು ಅವಕಾಶ ಸಿಕ್ಕಲ್ಲೆಲ್ಲಾ ಫಲಿತಾಂಶವನ್ನು ಮುಚ್ಚಿಟ್ಟು, ಪ್ರಯತ್ನವನ್ನು ಮಾತ್ರ ತಮ್ಮ ಪರಿಸರ ಪ್ರೇಮದ ರಮ್ಯ ಕಥಾನಕವಾಗಿ ಹೇಳುವುದನ್ನು ಮರೆಯುವುದಿಲ್ಲ. ಇವನ್ನು ಹಾಡುತ್ತಾ ನಲಿಯುವಲ್ಲಿ ಬಾಡಿಗೆ ಭಜಕರು, ಹಂಪನಕಟ್ಟೆಯ ಸಂಜೆ ವಾಹನಸಮ್ಮರ್ದದ ನಡುವೆ “ಹಾರಿ ಕಿಸ್ಣಾಆಆ ಕಿಸ್ಣ ಕಿಸ್ಣಾಆಆಆ” ಎಂದೊರಲುತ್ತ ಕುಣಿಕುಣಿದು ಮೆರವಣಿಗೆ ಹೊರಡುವ ಕೆಂಪುಮೂತಿಗಳಿಗೆ ಬಿಟ್ಟಿಲ್ಲ. ನೆನಪಿರಲಿ, ‘ಭಕ್ತಿ’ ಇಂದು ಮಾರುಕಟ್ಟೆಯಲ್ಲಿ ಧಾರಾಳ ಸಿಗುವ ಮಾಲು. ಇವನ್ನೆಲ್ಲ ಕಂಪೆನಿ ಒಂದು ಪಕ್ಷವಾಗಿ ಮತ್ತು ಅದರದೇ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಟ್ಟಿ ಅಂಗವಾಗಿ ನಡೆಸುತ್ತಿದೆ. 

ಗಣಿಗಾರಿಕೆಯನ್ನು ವಿರೋಧಿಸಬೇಕಾದ ಏಕೈಕ ಪಕ್ಷ - ಪ್ರಕೃತಿಗೆ ಇಲ್ಲಿ ಧ್ವನಿಯೇ ಇರಲಿಲ್ಲ. ಬಹು ಅಲ್ಪಸಂಖ್ಯಾತ ವನ್ಯಪ್ರೇಮಿಗಳು ಸರಕಾರಗಳ ಅಸಹನೆಯ ಜೊತೆಗೇ ಗಣಿಗಾರಿಕೆಯ ದೀರ್ಘ ಕಾಲೀನ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದರು. ಇಲ್ಲಿ ನಾಶವಾದ ಕಾಡು, ಅಳಿದುಹೋದ ಜೀವವೈವಿಧ್ಯ, ಹೂಳು ಸೇರಿದ ಜಲಮೂಲಗಳು, ಕೊಳ್ಳೆಹೋದ ಖನಿಜ ಸಂಪತ್ತುಗಳ ಮೌಲ್ಯಮಾಪನ ನಡೆಸಿದರು. (ಪ್ರಾಕೃತಿಕ ಸ್ಥಿತಿಯನ್ನೆಲ್ಲಾ ನಿರರ್ಥಕಗೊಳಿಸಿ ಸಿಗುವ ಖನಿಜದಲ್ಲೂ ನೂರಕ್ಕೆ ಮೂವತ್ತು ಮಾತ್ರ ಕಬ್ಬಿಣವಂತೆ. ಇದಕ್ಕೆ ಮಾತ್ರ ಬೆಲೆಕಟ್ಟಿ, ಅದರಲ್ಲೂ ರೂಪಾಯಿಗೆ ಸುಮಾರು ನಾಲ್ಕು ಪೈಸೆ ಮಾತ್ರ ರಾಜ್ಯ ಖಜಾನೆಗೆ ರಾಯಧನ ಕೊಟ್ಟ ಕಂಪನಿ ಯಶಸ್ವೀ ಆಗದಿರಲು ಸಾಧ್ಯವುಂಟೇ?!) ಹಂತಹಂತವಾಗಿ ಕಾನೂನು ಹೋರಾಟ ನಡೆಸಿದರು. ದೇಶದ ಅತ್ಯುಚ್ಛ ನ್ಯಾಯಾಲದಿಂದ ಗಣಿಗಾರಿಕೆಗಿಲ್ಲಿ ನಿಶ್ಶರ್ತ ಉಚ್ಛಾಟನೆಯ ಆದೇಶವಾಯ್ತು. ಆದರೆ ದುರಂತವೆಂದರೆ ಮುಂದುವರಿದ ಈ ದಿನಗಳಲ್ಲೂ ಕಂಪೆನಿ ‘ಕಳಚಿಕೊಳ್ಳುವ ಸಮಯ’ದ ಮರೆಯಲ್ಲಿ, ಜನಪರವೆಂದುಕೊಳ್ಳುವ ಸರಕಾರಗಳು ಅನ್ಯ ಆದಾಯಗಳ ಆಸಕ್ತಿಯಲ್ಲಿ ಮತ್ತೆಮತ್ತೆ ಗಣಿಗಾರಿಕೆಯನ್ನು ತರುವ ಮಾತಾಡುತ್ತಾರೆ. ಆಗೆಲ್ಲಾ ವನ್ಯಪ್ರೇಮಿಗಳು ಈ ನ್ಯಾಯಾದೇಶವನ್ನು ನೆನಪಿಸುತ್ತಲೇ ಇರಬೇಕಾಗಿದೆ.

ಕುದುರೆ ಮುಖದ ಸುತ್ತಲಿನ ವನ್ಯ ಸಮೃದ್ಧಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಆವೃತವಾದ ಈ ಉದ್ದಿಮೆ ನಗರದ ನೆಲಬಿಡದ ಛಲದಲ್ಲಿ ಗಣಿ ಕಂಪನಿ ‘ಸಮಯಕೊಳ್ಳಲು’ ಮತ್ತು ಅನುಕಂಪ ಗಳಿಸಲು ಇನ್ನಷ್ಟು ಗಾಳಿಗುಳ್ಳೆಗಳನ್ನು ಬಿಡುತ್ತಲೇ ಇದೆ. ಕಂಪೆನಿಯ ನೌಕರರ  ಮಿತಕುಟುಂಬಗಳಿಗಾಗಿಯೇ ನಿರ್ಮಿತಿಗೊಂಡ (ಇಂದು ಹಾಳುಬಿದ್ದಿರುವ) ವಸತಿಪ್ರದೇಶವನ್ನು ಆರೋಗ್ಯಕೇಂದ್ರವನ್ನಾಗಿಸುವುದು ಮತ್ತು ಗಿರಿಧಾಮವೆಂದು ಪ್ರವಾಸೋದ್ಯಮಕ್ಕೆ ತೆರೆಯುವ ಯೋಜನೆಗೆ ಮುಗ್ದ ಜನರಲ್ಲಿ ಅನುಕಂಪ ಮೂಡಿಸಿತ್ತು. ಪೊಲಿಸ್ ಅಕಾಡೆಮಿಯೂ ರಮ್ಯ ಪ್ರಚಾರ ಗಳಿಸಿದ್ದುಂಟು. ಲಕ್ಯಾದಲ್ಲಿ ಎದ್ದ ದೂಳಿನ ಅಲೆ ಅರಣ್ಯ ಆವರಿಸುವಾಗ ಕಂಪೆನಿಯೇ ತುಂಬಿದ ಕಟ್ಟೆಯ ಘನ ಲೆಕ್ಕಗಳನ್ನು ಹೇಳಿ, ಇಟ್ಟಿಗೆ ಭಟ್ಟಿ ಸರಣಿಯನ್ನೇ ಎಬ್ಬಿಸುವ ಮಾತಾಡಿತ್ತು! ಮಂಗಳೂರಿಗೆ ಬಾಯಾರಿಕೆ ಎಂದಾಗ ಅದೇ ಮಾಯಾಸರಸಿಯಲ್ಲಿ ಉದ್ದಗಲ ಆಳಕ್ಕೂ ನೀರಿನ ಲೆಕ್ಕ ಹೇಳುತ್ತಿದೆ.

ಸಂಪರ್ಕಕ್ಕೆ ಕೊಳವೆ ಸಾಲಿರುವುದೇನೋ ನಿಜ. ಆದರದು ರೂಪಿತವಾದದ್ದು ಅದಿರುಪಾಕ - ಮಂದದ್ರವಕ್ಕೆ. ಈಗ ಖಾಯಂ ನೀರಿಗೆ - ಹೆಚ್ಚು ಚಲನಶೀಲ ದ್ರವಕ್ಕೆ ಬಳಸುವುದಾದರೆ ಪರಿಷ್ಕರಣೆ ಬೇಡವೇ? ಅದಿರುಪಾಕ ಸಾಗಿಸುವಲ್ಲೂ (ಕೊನೆಗಾಲದಲ್ಲಿ ಪ್ರಾಯದೋಷದಿಂದ ಹೆಚ್ಚೆಚ್ಚು) ಸೋರಿಹೋಗುತ್ತಿದ್ದ, ಒಡೆದೂ ಹೋಗುತ್ತಿದ್ದ ಕೊಳವೆಸಾಲುಗಳು ಈಗ ನಿರಂತರ ನೀರಹರಿವನ್ನು ತಡೆದುಕೊಳ್ಳಬಲ್ಲುದೇ? ಹಿಂದೆ ಒಂದೆರಡು ಸೋರಿಕೆಯನ್ನು ಅದೂ ಪರಿಸರಕ್ಕೆ ಭಿನ್ನ ದ್ರವವಾಗಿಯೂ (ದ್ರೋಹಿಯೂ ಹೌದು) ಪತ್ತೆ ಮಾಡಿ, ಸರಿಪಡಿಸಲು ವಾರಗಟ್ಟಳೆ ಸಮಯ ಬಳಕೆಯಾದದ್ದಿತ್ತು. ನೀರ ಸೋರಿಕೆಗೇನು ಗತಿ? ಲಕ್ಯಾದಲ್ಲಿ ಹಿಡಿದಿಟ್ಟ ನೀರಿಲ್ಲವೆಂದರೂ ಕಾಡತೊರೆ ಇದೆಯಲ್ಲಾ ಎಂದು ಸಮಾಧಾನಿಸಿಕೊಳ್ಳುವಂತೆಯೂ ಇಲ್ಲ. ತನ್ನ ಸಹಜ ಪಾತ್ರೆಯನ್ನು ಎಂದೋ ಕಳೆದುಕೊಂಡ ಬಡಕಲು ತೊರೆ, ಅದೂ ಬೇಸಗೆಯಲ್ಲಿ ಭೀಮಗಾತ್ರದ ಕೊಳವೆಸಾಲಿಗೆ ಒಡ್ಡಿದರೆ ಕೆಳತುದಿಯ ಕಂಗಾಲಾದ ನಗರಿಗೆ ‘ಕಾಶೀತೀರ್ಥ’ ಬಿಟ್ಟಂತಾದೀತು! ಏನೇ ಇರಲಿ, ಒಮ್ಮೆ ಒಪ್ಪಿಗೆ ದೊರಕಿದ್ದೇ ಆದರೆ ಕಂಪೆನಿಗೆ ಕಬ್ಬಿಣಕ್ಕೆ ಹೋದ ಮಾನವನ್ನು ಗಳಿಸುವ ಜೊತೆಗೆ, ‘ಒಳ್ಳೇಸಮಯ, ಒಳ್ಳೇಸಮಯ’ ಎಂದು ಹಾಡಿಕೊಂಡರೆ ಆಶ್ಚರ್ಯವಿಲ್ಲ. ರಾಷ್ಟ್ರೀಯ ಉದ್ಯಾನವನದ ಮಾನಭಂಗದ ಈ ಸನ್ನಿವೇಶದಲ್ಲಿ ಯಾರೂ ಭೀಷ್ಮ ದ್ರೋಣರಾಗಬಾರದು, ಭೀಮ ಕೃಷ್ಣರಾಗಬೇಕು. ಗಣಿಗಾರಿಕೆಯ ವ್ರಣಮುಖ ಊರ್ಜಿತವಾಗದಂತೆ ನೋಡಿಕೊಳ್ಳಬೇಕು.

ಹಸಿರ ಒಡಲಲಿ ಕೆಸರ ಮೆರವಣಿಗೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ‘ಸುಲಭ ಲಭ್ಯ’ ಹೆಸರಿನಲ್ಲಿ ಈ ನೀರಾವರಿ ಯೋಜನೆ ಕಾನೂನಿನ ಅಸ್ತಿತ್ತ್ವವನ್ನು ಒಮ್ಮೆ ಗಳಿಸಿಬಿಟ್ಟರೆ ಹಿಂಬಾಲಿಸುವ ಅನಾಹುತ ಸರಣಿಯನ್ನು ಸಣ್ಣದಾಗಿ ಹೀಗೆ ಪಟ್ಟಿ ಮಾಡಬಹುದು. ೧. ಗಣಿಗಾರಿಕಾ ನಗರ ಬಿಟ್ಟ ಕೊಳವೆಸಾಲು ಘಟ್ಟ ಸಾಲಿನ ತಪ್ಪಲಿನವರೆಗೂ ಹಾಯ್ದುಹೋಗುವುದು ರಾಷ್ಟ್ರೀಯ ಉದ್ಯಾನವನದೊಳಗೇ. ಹಿಂದೆ ಅಪೂರ್ವಕ್ಕೆ ಘಟಿಸುವ ಕೊಳವೆ ಸೋರಿಕೆಗಾಗುವಾಗ ಅನುಮತಿ ಪತ್ರಪಡೆದು ಸ್ಥಳ ಪತ್ತೆ ಮಾಡುವುದು, ತುರ್ತು ತತ್ಕಾಲೀನ ಮಾರ್ಗ ನಿರ್ಮಾಣ ಮಾಡುವುದೆಲ್ಲಾ ನಡೆಯುವುದಿತ್ತು. ಆದರಿದು ಕುಡಿಯುವ ನೀರು - ನಾಗರಿಕ ಆವಶ್ಯಕತೆಯ ಅನಿವಾರ್ಯ ಅಂಗ, ಎನ್ನುವಾಗ ಕೊಳವೆ ಸಾಲಿನುದ್ದಕ್ಕೆ ‘ಸರ್ವಿಸ್ ರೋಡ್’ ಎಂಬ ನೆಪದಲ್ಲಿ ಹೊಸದೇ ಮತ್ತು ಖಾಯಂ ಸಾರಿಗೆ ವ್ಯವಸ್ಥೆಯಾಗುತ್ತದೆ. ಮತ್ತು ಇದು ತರುವ ಅನಿಷ್ಠಗಳೆಲ್ಲವನ್ನೂ ವನ್ಯ ಭರಿಸಬೇಕಾಗುತ್ತದೆ. ೨. ಲಕ್ಯಾ ಮತ್ತು ಕೊಳವೆ ಸಾಲಿನುದ್ದಕ್ಕೂ ಅಸಂಖ್ಯ  ಕಾರ್ಯಾಗಾರ, ಕಛೇರಿ, ಅತಿಥಿಗೃಹಗಳು, ವಸತಿ ಸರಣಿಗಳು ಮತ್ತೆ ಅಸಂಖ್ಯ ನಾಗರಿಕ ಸೌಕರ್ಯಗಳು ತಲೆ ಎತ್ತುವುದು ಅನಿವಾರ್ಯವಾಗುತ್ತದೆ. ೩. ಕಟ್ಟದೇ ಇದ್ದ ಜಲಾಗರ ಮತ್ತು ಆಯುಷ್ಯ ಮುಗಿದ ಕೊಳವೆಸಾಲನ್ನು ನೆಚ್ಚಿದ ‘ಲಕ್ಯಾ ತಿರುವು ಯೋಜನೆ’ ತಳ ಕುಂಬಾದ ದೋಣಿಯಲ್ಲಿ ಸಾಗರಕ್ಕಿಳಿದವರ ಕತೆಯಾಗುತ್ತದೆ. ರಿಪೇರಿ, ನವೀಕರಣ, ವಿಸ್ತರಣಗಳ ಹೆಸರಿನಲ್ಲಿ ಸಾರ್ವಜನಿಕ ಹಣಕ್ಕೆ ಇನ್ನೊಂದು ಜಿಗಣೆಯಾಗಿ, ರಾಷ್ಟ್ರೀಯ ಉದ್ಯಾನವನಕ್ಕೆ ಹೆಚ್ಚು ಅಪಾಯಕಾರಿಯಾದ ವೈರಿಯಾಗಿ ವ್ಯಾಪಿಸುವುದರಲ್ಲಿ ಸಂದೇಹವಿಲ್ಲ. ಕೊನೆಯದಾಗಿ ೪. ಈ ರಿಪೇರಿ ಸರಣಿ ಸಾರ್ವಜನಿಕ ತಾಳ್ಮೆಯ ಮಿತಿಯನ್ನು ಹಾಳುಮಾಡಿದ ದಿನ ಹೊಸತೇ ಅಥವಾ ವಿಸ್ತೃತ (ವೋ ವಿಕೃತವೋ) ನಿರಾವರಿಯೋಜನೆ ರೂಪಿಸಲು ಇನ್ಯಾವ ಬೃಹಸ್ಪತಿ ಅವತರಿಸುವನೋ ಪರಶಿವನೇ ಬಲ್ಲ! ನೇತ್ರಾವತಿ ತಿರುವು, ಎತ್ತಿನಹಳ್ಳದ ಎತ್ತಂಗಡಿ ಪಟ್ಟಿಗಳಿಗೆ ಮೂರನೆಯದಾಗಿ ಲಕ್ಯಾ ಅಣೆಕಟ್ಟು ಸೇರಿ ಚಾಲ್ತಿಯಲ್ಲಿರುವ ಗಣಿ-ಗೋಠಾಳೆಯನ್ನು ಮೀರಿ ಬೆಳೆಯುವುದರಲ್ಲಿ ಯಾವ ಸಂದೇಹವೂ ಇಲ್ಲ. 

10 comments:

 1. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಿಂದ ಎಂಬಂತೆ ಹೂಳು/ಕೆಸರು ತುಂಬಿದ ಲಕ್ಯಾ ಅಣೆಕಟ್ಟಿನಿಂದ ಒಂದೆರಡು ತೊಟ್ಟು ನೀರನ್ನು ಮಂಗಳೂರಿಗೆ ತಲುಪಿಸವ ಈ ಯೋಜನೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಮತ್ತೆ ಲಗ್ಗೆ ಹಾಕುವ ಹುನ್ನಾರ ಅಷ್ಟೇ.

  ReplyDelete
 2. ಇಂಥ ಯೋಜನೆಗಳನ್ನು ರೂಪಿಸದಿದ್ದರೆ ಹಣ ನುಂಗುವುದು ಹೇಗೆ?

  ReplyDelete
 3. ಎಚ್. ಸುಂದರ ರಾವ್09 April, 2012 20:54

  ಇಲ್ಲಿಯವರೆಗೆ ನೀರು ಮಂಗಳೂರಿಗರಿಗೆ ಒಂದು ತಾತ್ಕಾಲಿಕ ಸಮಸ್ಯೆ. ಮಳೆ ಬರುತ್ತದೆ, ನೇತ್ರಾವತಿ ಎಂದಿನಂತೆ ತುಂಬಿಕೊಳ್ಳುತ್ತಾಳೆ, ಮಂಗಳೂರಿನವರು, ಬಂಟ್ವಾಳದವರು ಎಂದಿನಂತೆ ಸಮಸ್ಯೆಯನ್ನು ಮರೆತು ಸುಮ್ಮನಾಗುತ್ತಾರೆ. ಹೀಗೇ ನಡೆದು ಬಂದಿದೆ.
  ಆದರೆ ಕಾಲಬುಡದ ನೆಲ ಗೊತ್ತೇ ಆಗದ ಹಾಗೆ ಕುಸಿಯುತ್ತಿರುವ ವಾಸ್ತವವನ್ನು ಮನಗಾಣದಿದ್ದರೆ ಹಿಂದಿನ ಹಾಗೆ ಇನ್ನು ಮುಂದಿನ ಕಾಲ ಖಂಡಿತ ಇರುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಗಳು ಲಕ್ಯಾದಿಂದ ನೀರು ತರುವ ಮಾತನ್ನು ಸುಮ್ಮನೆ ಆಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ನೇತ್ರಾವತಿಯ ನೀರೆಂಬ ದ್ರೌಪದಿಯನ್ನು ಎಂ ಎಸ್ ಇ ಜಡ್ ಕಂಪೆನಿ ಎಂಬ ದುಶ್ಶಾಸನ ಜುಟ್ಟು ಹಿಡಿದು ಎಳೆದೊಯ್ಯುತ್ತಿರುವುದನ್ನು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಬಂಟ್ವಾಳ ಪುರಸಭೆ ಈ ಎಲ್ಲವೂ ಶಿಖಂಡಿಗಳಂತೆ ನೋಡುತ್ತ ನಿಂತಿವೆ. ಎಂ ಎಸ್ ಇ ಜಡ್ ಕಂಪೆನಿಯ ವಿರುದ್ಧ ಜೀವ ಹೋದರೂ ತುಟಿ ಪಿಟಕ್ಕೆನ್ನಲು ತಯಾರಿರದ ಈ ಜನಹಿತ ಕಾಯಬೇಕಾದ ಸಂಸ್ಥೆಗಳು ಮಂಗಳೂರು, ಬಂಟ್ವಾಳಗಳ ಜನರಿಗೆ ಮಾಡುತ್ತಿರುವ ಘೋರದ್ರೋಹವು, ಅವುಗಳ ಇತಿಹಾಸದಲ್ಲಿ, ಜನರ ಹಿತಕಾಯಲೆಂದೇ ಇರುವ ಸಂಸ್ಥೆಗಳು ಜನರ ಬೆನ್ನಿಗೆ ಹೇಗೆ ಚೂರಿ ಹಾಕಬಹುದೆಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಲಿದೆ. ಬಂಟ್ವಾಳದಲ್ಲಿಯಂತೂ, ಕೌನ್ಸಿಲರುಗಳೇ ನೇತ್ರಾವತಿಯನ್ನು ಎಂ ಎಸ್ ಇ ಜಡ್ ಗೆ ಒಪ್ಪಿಸುವ ಜನದ್ರೋಹಿ ಕಾರ್ಯದಲ್ಲಿ ನೇರವಾಗಿ ಭಾಗೀದಾರರಾದಂತಿದೆ.
  ಎಂ ಎಸ್ ಇ ಜಡ್ ಕಾರ್ಯಾರಂಭ ಮಾಡಿದ ಮೇಲೆ, ಬಂಟ್ವಾಳಕ್ಕಾಗಲೀ, ಮಂಗಳೂರಿಗಾಗಲೀ ಬೇಸಿಗೆಯಲ್ಲಿ ನೇತ್ರಾವತಿಯ ನೀರು ಲಭ್ಯವಾಗುವುದು ಸಾಧ್ಯವೇ ಇಲ್ಲ ಎನ್ನುವಂತೆ ಈಗಿನ ಬೆಳವಣಿಗೆಗಳು ನಡೆಯುತ್ತಿವೆ. ವಾಸ್ತವವಾಗಿ ಸರಕಾರ ೧೫ ಎಂಜಿಡಿ ನೀರನ್ನು ಮಾತ್ರ ಎತ್ತಲು ಕಂಪೆನಿಗೆ ಅನುಮತಿ ನೀಡಿದ್ದರೂ, ಅದು ೩೦ ಎಂಜಿಡಿ ನೀರೆತ್ತಲು ಬೇಕಾದ ಪೈಪ್ ಲೈನನ್ನು ಅಳವಡಿಸುತ್ತಿದೆ. ಈ ವಿದ್ಯಮಾನವು ತಮಗೆ ಗೊತ್ತೇ ಇಲ್ಲವೆಂಬಂತೆ ಜಿಲ್ಲಾಡಳಿತ, ಮಹಾನಗರಪಾಲಿಕೆಗಳು ವರ್ತಿಸುತ್ತಿವೆ. "ಅಭಿವೃದ್ಧಿ"ಯ ಹರಿಕಾರರೆಂದರೆ ತಾವೇ ಎಂದು ಬೀಗುತ್ತಿರುವ ಯೋಗೀಶ ಭಟ್ಟರಂಥ ರಾಜಕಾರಣಿಗಳು, ತಮ್ಮ ಈ ಅಭಿವೃದ್ಧಿ ಕಾರ್ಯಕ್ಕಾಗಿ ಮಂಗಳೂರಿನ ಜನತೆ ಕುಡಿಯುವ ನೀರನ್ನೇ ತ್ಯಾಗ ಮಾಡಬೇಕಾಗಿದೆ ಎಂಬ ವಾಸ್ತವವನ್ನು ಕಣ್ಣೆತ್ತಿಯೂ ನೋಡಲು ಸಿದ್ಧರಿಲ್ಲದಿರುವುದು ಮಂಗಳೂರು ಜನತೆಯ ಪಾಲಿಗೆ ಬಹು ದೊಡ್ಡ ದುರಂತವಾಗಲಿದೆ.
  ಇತ್ತ ನೇತ್ರಾವತಿಯ ಜಲಾನಯನ ಪ್ರದೇಶ ಬಗೆಬಗೆಯ ಕಾರಣಗಳಿಗಾಗಿ ಬರಡಾಗುತ್ತಿದೆ. ಹೀಗೆ ಬರಡು ಮಾಡುವ ಪಾಪ ಕಾರ್ಯಕ್ಕೆ ಇತ್ತೀಚಿನ ಸೇರ್ಪಡೆ ಎಂದರೆ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರಗಳಿಗೆ ನೀರು ಸಾಗಿಸುವ ಯೋಜನೆ. ಇವೊತ್ತು ಅಂದರೆ ಎಪ್ರಿಲ್ ೦೯ರಂದು ಸಂಜೆ, ಚಿಕ್ಕ ಬಳ್ಳಾಪುರದಿಂದ ವರದಿ ಮಾಡುತ್ತಿದ್ದ ವರದಿಗಾರರೊಬ್ಬರು, ಈ ಯೋಜನೆಯನ್ನು ಈ ವರ್ಷದ ಜೂನ್ ತಿಂಗಳಿನಿಂದಲೇ ಪ್ರಾರಂಭಿಸುವ ಉದ್ದೇಶವಿದೆ ಎಂದು ಸದಾನಂದ ಗೌಡರು ಹೇಳಿದರು ಎಂದು ಟಿವಿಯಲ್ಲಿ ಹೇಳುತ್ತಿದ್ದುದನ್ನು ಕೇಳಿದೆ.
  ನೇತ್ರಾವತಿಯ ನೀರನ್ನು ನಮ್ಮ ಹಿಂದಿನವರು ಕುಡಿಯುತ್ತಿದ್ದಂತೆ ನಾವೂ ಕುಡಿಯಬೇಕು, ನಮ್ಮ ಮುಂದಿನ ಮಕ್ಕಳು, ಮೊಮ್ಮಕ್ಕಳೂ ಕುಡಿಯಬೇಕು ಎಂಬ ಕಳಕಳಿ ಕೊಂಚವಾದರೂ ಮಂಗಳೂರಿನ, ಬಂಟ್ವಾಳದ ಜನರಿಗಿದ್ದರೆ ಅವರು ಈಗ ಎಚ್ಚೆತ್ತುಕೊಳ್ಳಬೇಕು; ತಡ ಮಾಡಿದರೆ, ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ನೇತ್ರಾವತಿಯ ನೀರು ಖಂಡಿತ ಸಿಗಲಾರದು. ಅದನ್ನು ಮಿನರಲ್ ವಾಟರ್ ಹೆಸರಿನಲ್ಲಿ ಪ್ಲಾಸ್ಟಿಕ್ ಬಾಟಲುಗಳಲ್ಲಿ ತುಂಬಿ ವಿದೇಶಗಳಲ್ಲಿ ಮಾರಿ ಹಣ ಮಾಡುವ ಕನಸನ್ನು ಉದ್ಯಮಗಳನ್ನು ಸ್ಥಾಪಿಸಿ ದೇಶವನ್ನು "ಅಭಿವೃದ್ಧಿ"ಗೊಳಿಸುವ ಹಲವರು ಈಗಾಗಲೇ ಕಾಣುತ್ತಿರುವ ಸಾಧ್ಯತೆ ಇದೆ.
  ನೇತ್ರಾವತಿ ನದಿ ಎಂಬ ನೀರಿನ ಅತ್ಯುತ್ತಮ ಮೂಲವನ್ನು ಮುಕ್ಕಾಲುಭಾಗ ಪರಭಾರೆ ಮಾಡಿ ಆಗಿರುವುದರಿಂದ ಅನಿವಾರ್ಯವಾಗಿ "ಲಕ್ಯಾದಿಂದ ನೀರು ತರುತ್ತೇವೆ", "ಎಲ್ಲ ಪಶ್ಚಿಮವಾಹಿನಿ ನದಿಗಳನ್ನು ಜೋಡಿಸುತ್ತೇವೆ" ಎಂದು ಈ ಸಂಸ್ಥೆಗಳು, ಸರಕಾರ ಬೊಂಬಡ ಹೊಡೆಯುತ್ತಿವೆ. ಸದ್ಯದಲ್ಲಿಯೇ, "ಪಕ್ಕದಲ್ಲಿಯೇ ಸಮುದ್ರ ಇರುವುದರಿಂದ ದ.ಕ.ದ ಜನರು ಕುಡಿಯುವ ನೀರಿಗಾಗಿ ಚಿಂತಿಸುವ ಅಗತ್ಯವೇ ಇಲ್ಲ" ಎಂಬ ಹೇಳಿಕೆಗಳು ಈ ಸಂಸ್ಥೆಗಳಿಂದ, ರಾಜಕಾರಣಿಗಳಿಂದ ಬಂದರೂ ಆಶ್ಚರ್ಯವಿಲ್ಲ!

  ReplyDelete
 4. ಯೋಗೀಶ ಭಟ್ಟರು, ಸದಾನಂದ ಗೌಡರು, ವೀರಪ್ಪ ಮೊಯಿಲಿಯವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ಹಾಗಾಗಿ ನಮಗೆ ಆಯ್ಕೆಯ ಸ್ವಾತಂತ್ರ್ಯ ಕೊಟ್ಟಿದ್ದಾರೆ
  ಆಯ್ಕೆ-1 ನೇತ್ರಾವತಿಯನ್ನು ಘಟ್ಟ ದಾಟಿಸಿ ಕಳುಹಿಸುವುದು
  ಆಯ್ಕೆ-೨ ನೇತ್ರಾವತಿಯನ್ನು ಎಂ ಎಸ್ ಇ ಜೆಡ್ ಮತ್ತು ಇತರ ಉದ್ಯಮಗಳ ಹೊಟ್ಟೆಗೆ ಸುರಿಯುವುದು.
  ನಿಮ್ಮ ಹಾಗೂ ಸುಂದರ ರಾಯರಂತವರ ಮಾತು ಕೇಳಿ ಜನರ ಮಂಡೆ ತಿರುಗುವುದು ಬೇಡಾ ಎಂದು 'ಲಕ್ಯಾ' ಭಜನೆಯ ಕಾರ್ಯಕ್ರಮ ವರ್ಷ ಪೂರ್ತಿ ಹಾಕಲಾಗಿದೆಯಂತೆ!
  ನಟೇಶ್

  ReplyDelete
 5. ಅಶೋಕ ವರ್ಧನಾರಿಗೆ, ವಂದೇಮಾತರಮ್.
  ಶಾಶ್ವತವಾದ ಸಮಸ್ಯೆಗಳಿಗೆ ತಾತ್ಕಾಲಿಕ ಉಪಶಮನ ಸಹಜ. ಆದರೆ ಸರ್ವಕಾಲೀನ ಪರಿಹಾರ ಇರಬೇಕು. ಇಂತಹ ಸಂದರ್ಭಗಳಲ್ಲಿ ಕೈಕೊಳ್ಳುವ ಯಾವುದೇ ಯೊಜನೆಗಳಿರಲಿ ಕನಿಷ್ಟ ಪಕ್ಷ ಮುಂದಿನ ಇಪ್ಪತ್ತೈದು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕು. ಇಷ್ಟು ಕೂಡಾ ದೂರಾಲೋಚನೆ ಇಲ್ಲದ ಯೊಜನೆಗಳು ಏನಾಗಬಹುದು? ಗೋಡೆಯ ಮೇಲಿನ ಬರಹ. ನಾನು ಒಂದೆರಡು ಸಾರಿ ಲಖ್ಯಾ ಅಣೆಕಟ್ಟಿನ ಹತ್ತಿರ ಹೋಗಿದ್ದೆ. ಅದನ್ನು ಉದ್ಘಾಟನೆ ಮಾಡಿದ್ದು ಬೀಜು ಪಟ್ಣಾಯಕ್. ವಿಸ್ತರಣೆ ಉದ್ಘಾಟನೆ ಮಾಡಿದ್ದು ಅವರ ಮಗ ನವೀನ ಪಟ್ನಾಯಕ್. ಇಬ್ಬರೂ ಕೇಂದ್ರ ಗಣಿಗಾರಿಕೆಯ ಮಂತ್ರಿಗಳಾಗಿದ್ದರು.

  ReplyDelete
 6. priya ashoka vardhana ravare...nimage tilidirabahudeno yendu kelu ttiddene..mangaluru-kasargod margadalli siguva neetravati nadiyalli adyavudo bruhadaakarada pipe gallannu haakiddare adenadau?adyaro pratibhatane maadidarendu udayavaniya muleyalli prakatavagittu aste...?adenu prakrutige marakavo?yenu khate...kaanunu baahiravaagi maadidarendu patrike prakatisittu..

  dhanyavaadagalondige

  jivan

  ReplyDelete
  Replies
  1. ಇಲ್ಲ, ನನಗ್ಗೊತ್ತಿಲ್ಲ. ತಿಳಿದುಕೊಳ್ಳುವ ಕುತೂಹಲ ಉಂಟು, ಕಾದಿದ್ದೇನೆ
   ಅಶೋಕವರ್ಧನ

   Delete
 7. Good article. I have seen Lakya dam, even a layman can understand the situation. The reservoir is almost filled with slurry and can not be used with out a major reconstruction. Then where do you move that mud, filled in more than 3 decades??!!

  If we don't wakeup and start thinking about saving our groundwater, yes, we will see the effects within next 10 years. Government provides free current for vote. But do they care about how much water these areca nut growers suck from the bore wells? And how many of these people know about ground water plans?

  ReplyDelete
 8. Nice article Sir.....

  ReplyDelete
 9. Are you really going to close down Athree Book Centre? I'm a North Indian who has lived in Mangalore as a college student for a year in 1999 and I used to love visiting your centre every month or so. I esp. liked the whole peaceful 'aura' about the place. Two of the books I remember buying from there are David Copperfield by Charles Dickens and a Music year book (which I think was imported) worth 400 rs., I think. Fond memories.

  ReplyDelete