01 April 2012

ಅತ್ರಿ ನಾಮಾಂತರ ಪ್ರಸಂಗ!


ಇಂದು, ಅಂದರೆ ೧-೪-೨೦೧೨ರಂದು ಬಲ್-ಮಠದ, ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸಾಯಿಟಿಯ ಸಹೋದಯ ಭವನದಲ್ಲಿ ಪ್ರೊ| ಬಿ.ಎ. ವಿವೇಕ ರೈಯವರ ಪೌರೋಹಿತ್ಯದಲ್ಲಿ ಅಲ್ಲೇ ಶರಾವತಿ ಕಟ್ಟಡದಲ್ಲಿ ಇದುವರೆಗೆ ‘ಅತ್ರಿಯೆಂದಿದ್ದ ಪುಸ್ತಕ ಮಳಿಗೆಯನ್ನು ‘ನವಕರ್ನಾಟಕವೆಂದು ನಾಮತಾಂತರಿಸುವುದೆಂದು ನಿಶ್ಚಯಿಸಿಯಾಗಿದೆ. ಆ ಸಂದರ್ಭದಲ್ಲಿ ನವ ಚೇತನಕ್ಕೆ ನಾನು ಪ್ರಸ್ತುತಪಡಿಸಿದ ಶುಭಾಶಂಸನೆಗಳು.***
ಅತ್ರಿಗೂ ಮೊದಲು ಮಂಗಳೂರಿನಲ್ಲಿ ನವಕರ್ನಾಟಕ ಪಬ್ಲಿಕೇಶನ್ಸ್ ಶಾಖೆ ಇತ್ತು. ಈಗ ಅದು ತನ್ನ ಶಾಖಾಬಲವನ್ನು ಎರಡಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಪುಸ್ತಕೋದ್ಯಮದ ಆರೋಗ್ಯಕ್ಕೆ ಸಂಬಂಧಿಸಿದಂತೆ, ಪ್ರಕಾಶನ ವಿತರಣೆಗಳಲ್ಲಿ, ಸಾರ್ವಜನಿಕ ಉಪಯುಕ್ತತೆಯ ಕುರಿತಾದ ಧೋರಣೆಗಳಲ್ಲಿ ಅತ್ರಿಗೂ ನವಕರ್ನಾಟಕಕ್ಕೂ ವಿಶೇಷ ಬೇಧವಿಲ್ಲ. ಸಹಜವಾಗಿ ನನ್ನ - ತಂದೆ ಜಿಟಿ ನಾರಾಯಣ ರಾಯರ ಕೆಲವು ವಿಜ್ಞಾನ ಕೃತಿಗಳಾದ - ಧೂಮಕೇತು, ಸೂಪರ್ನೋವಾಗಳನ್ನು ಮೊದಲು ಪ್ರಕಟಿಸಿದ್ದೇ ನವಕರ್ನಾಟಕ. ನಾನು ಪ್ರಕಾಶನರಂಗಕ್ಕೆ ಸ್ವಲ್ಪ ತಡವಾಗಿ ಇಳಿದೆ. ಅಲ್ಲಿ ನನ್ನ ಪ್ರಧಾನ ಲಕ್ಷ್ಯವಿದ್ದದ್ದೂ ತಂದೆಯ ಬರವಣಿಗೆಗಳ ಮೇಲೇ. ಹಾಗಾಗಿ ಅತ್ರಿ ಪ್ರಕಾಶನದಲ್ಲಿ ನಾನು ಸ್ವಲ್ಪ ಬಲ ಪಡೆದಾಗ ನವಕರ್ನಾಟಕದಲ್ಲಿದ್ದ ಪುಸ್ತಕಗಳನ್ನೂ ಕೇಳಿದೆ. ಅವರು ಅರೆಮನಸ್ಸಿನಲ್ಲೇ ತಂದೆಯ ‘ಸೂಪರ್ನೋವಾ ಪುಸ್ತಕವನ್ನು ಮಾತ್ರ ಬಿಟ್ಟುಕೊಟ್ಟರು. ಉಳಿದವನ್ನು ತಮ್ಮ ಪ್ರಕಟಣೆಗಳೆಂದು ಹೆಮ್ಮೆಯಲ್ಲಿ ಉಳಿಸಿಕೊಂಡದ್ದೆ ಅಲ್ಲದೇ ಇಂದಿಗೂ ಕಾಲಕಾಲಕ್ಕೆ ಮರುಮುದ್ರಣಗಳನ್ನು ತರುತ್ತಲೇ ಇದ್ದಾರೆ. ಮುಂದುವರಿದು ನನ್ನ ಪ್ರಕಟಣೆಗಳ ಬಲು ದೊಡ್ಡ ಖರೀದಿದಾರರೂ ತಾವಾಗಿ ನಮ್ಮೊಳಗಿನ ವಿಶ್ವಾಸಕ್ಕೆ ಹೆಚ್ಚಿನ ಅರ್ಥ ಕೊಡುತ್ತಲೇ ಬಂದಿದ್ದಾರೆ. ಇಲ್ಲೇ ಒಂದು ಮಾತು ಸೇರಿಸಿಬಿಡುತ್ತೇನೆ: ಇಂದು ನಾನು ಪ್ರಕಾಶನವನ್ನೂ ಮುಚ್ಚಿದ್ದೇನೆ ಮತ್ತು ಎಲ್ಲವನ್ನೂ ನೀವೇ ತೆಗೆದುಕೊಳ್ಳಿ ಎಂದು ಉಡುಪರನ್ನು ಕೇಳಿದ್ದೂ ಆಗಿದೆ!


ನನ್ನ ತಂದೆಯ ಇನ್ನೆರಡು ನವಕರ್ನಾಟಕದ ಪ್ರಕಟಣೆಗಳ ಕುರಿತು ವಿಶೇಷ ಉಲ್ಲೇಖ ಮಾಡಲೇಬೇಕು. ವಿಜ್ಞಾನವನ್ನು ಓದಿದವರೆಲ್ಲ ಅಥವಾ ವೃತ್ತಿಪರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ (ಸೈನ್ಸ್ ಆಂಡ್ ಟೆಕ್ನಾಲಜಿ ಎಂಬ ಅರ್ಥದಲ್ಲಿ) ತೊಡಗಿದವರೆಲ್ಲ ವಿಜ್ಞಾನಿಗಳು, ವಿಚಾರಪರರು ಎಂಬ ಮಹಾಭ್ರಮೆ ಪ್ರಚಲಿತದಲ್ಲಿದೆ. ಇಲ್ಲ, ಬಹುತೇಕರಿಗೆ ವಿಜ್ಞಾನ ಹೊಟ್ಟೆಪಾಡು ಮಾತ್ರ, ವೈಚಾರಿಕತೆ ಬರಿಯ ಬೂಟಾಟಿಕೆ. ಕಲಿಕೆ, ಪಾರಂಪರಿಕ ಸಂಸ್ಕಾರ ಏನೇ ಇರಲಿ, ಸಾಮಾಜಿಕ ಅಂತಸ್ತು ಯಾವುದೇ ಇರಲಿ, ತನ್ನ ನುಡಿ-ನಡೆಗೆ ಕಾರ್ಯ-ಕಾರಣವನ್ನು ಪ್ರಕೃತಿಯಲ್ಲಿ ಕಂಡುಕೊಂಡವರಷ್ಟೇ ವೈಜ್ಞಾನಿಕ ಮನೋಧರ್ಮದವರು. ಇದನ್ನು ನನ್ನ ತಂದೆ ತನ್ನ ಅಪಾರ ಓದು ಮತ್ತು ಜೀವನಾನುಷ್ಠಾನದಿಂದಲೇ ಕಂಡುಕೊಂಡಿದ್ದರು, ಬಿಡಿ ಲೇಖನಗಳನ್ನು ಬರೆದಿದ್ದರು ಮತ್ತು ಧಾರಾಳ ಪ್ರಚುರಿಸುತ್ತಿದ್ದರು. ಅದನ್ನೊಂದು ಪುಸ್ತಕದ ಬಂಧದಲ್ಲಿ ತರುವ ಅಗತ್ಯವನ್ನು ಕಂಡು, ನನ್ನ ತಂದೆಯನ್ನು ಪ್ರೇರಿಸಿ, ಬರೆಯಿಸಿ, ನಿಖರತೆಗೆ ವಸ್ತುನಿಷ್ಠವಾಗಿ ಚರ್ಚಿಸಿ, ಕೊನೆಗೆ ಪ್ರಕಟಣೆ ಮತ್ತು ವ್ಯಾಪಕ ಪ್ರಸಾರಕ್ಕೂ ಕಾರಣರಾದವರು ಬಿ.ವಿ ಕಕ್ಕಿಲ್ಲಾಯರು; ಭಾವನಾತ್ಮಕ ಭಾಷೆಯಲ್ಲಿ ಹೇಳುವುದಾದರೆ ನವಕರ್ನಾಟಕದ ಯಜಮಾನರು! ಆ ಪುಸ್ತಕ - ವೈಜ್ಞಾನಿಕ ಮನೋಧರ್ಮ. ಅದು ಮೂಢನಂಬಿಕೆಗಳ ಖಂಡನೆ, ಅವಿಚಾರದ ಎದುರಿನ ಆರ್ಭಟೆಯಾಗಿ ಬಂದಿಲ್ಲ. ಪ್ರಕೃತಿ ಮತ್ತು ಮಾನವಮತಿಯ ಸಹಯೋಗದ ಅಗತ್ಯವನ್ನು ಬಿಡಿಸಿಟ್ಟು ಮುಕ್ತಮನವುಳ್ಳ ಯಾರನ್ನೂ ಅನುನಯಿಸುತ್ತದೆ. ಒಳ್ಳೇ ಅರ್ಥದಲ್ಲಿ ಹೇಳುವುದಾದರೆ ಪಠ್ಯಪುಸ್ತಕದಂತೇ ಒದಗುತ್ತದೆ. ಪ್ರಕಾಶನವಾದರೋ ವೈಜ್ಞಾನಿಕ ಮನೋಧರ್ಮ ಪುಸ್ತಕವನ್ನು ಕಾಲಿಕ ಕಿರು ಪರಿಷ್ಕರಣೆಗಳೊಂದಿಗೆ ಇಂದಿಗೂ ಉಳಿಸಿಕೊಂಡು, ಸತತ ಎಂಟನೇ ಮುದ್ರಣದಲ್ಲಿ ಪ್ರಸರಿಸುತ್ತಲೇ ಇದೆ.  (ಮತ್ತು ಅದರ ಆಶಯವನ್ನು ತನ್ನ ಇತರ ಪ್ರಕಟಣೆಗಳಲ್ಲೂ ಪಾಲಿಸುತ್ತಲೇ ಇದೆ)

ಹೀಗೇ ನನ್ನ ತಂದೆಗೇ ಸಂಬಂಧಿಸಿದಂತೆ ನವಕರ್ನಾಟಕದ ಇನ್ನೊಂದು ದೊಡ್ಡ ಪ್ರಕಟಣೆ ಕನ್ನಡ ವಿಜ್ಞಾನ ಪದವಿವರಣ ಕೋಶ. ಮೂಲದಲ್ಲಿ ತಂದೆ ಇದನ್ನು ಏಕವ್ಯಕ್ತಿಯಾಗಿ ಬರವಣಿಗೆ/ಸಂಪಾದನೆಗಿಳಿದಾಗಲೂ ಅದು ಅಸಾಧ್ಯ ಅನ್ನಿಸಿ ಸಂಪಾದಕೀಯ ಬಳಗ ಬಯಸಿದಾಗಲೂ ನವಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕ ರಾಜಾರಾಮ್ ಅವರು ಇಟ್ಟ ನಂಬುಗೆ, ಕೊಟ್ಟ ಬೆಂಬಲ ಅಸಾಮಾನ್ಯ. ಕನ್ನಡ ಮಾರುಕಟ್ಟೆಯ ಮಿತಿಗಳನ್ನು ಅನುಲಕ್ಷಿಸಿ ಹೇಳುವುದಾದರೆ, ಇಂದು ಅದರ ಮೊದಲ ಮುದ್ರಣದ ಪ್ರತಿಗಳೆಲ್ಲ ಮಾರಿ ಮುಗಿದಿರುವುದೂ ಪರಿಷ್ಕೃತ ರೂಪದಲ್ಲಿ ಮರುಮುದ್ರಣ ಕಂಡು ಕನ್ನಡ ಮನಸ್ಸನ್ನು ಬೆಳಗುತ್ತಿರುವುದು ಒಂದು ಖಾಸಗಿ ಪ್ರಕಾಶನ ಸಂಸ್ಥೆಗೆ ಅದೂ ಯಾವುದೇ ಸರಕಾರೀ ಕೃಪಾಪೋಷಣೆಯನ್ನು ಪಡೆಯದೇ ನಡೆಸುತ್ತಿರುವುದು ಮಹಾ ಸಾಹಸವೇ ಸರಿ. ಈ ಪರಿಷ್ಕೃತ ಮುದ್ರಣ ಪ್ರಕಟಗೊಳ್ಳುವ ಕಾಲಕ್ಕೆ ನಮ್ಮೊಡನಿಲ್ಲವಾದ ತಂದೆಗೇ ಅದನ್ನು ನವಕರ್ನಾಟಕ ಅರ್ಪಣೆ ಮಾಡಿದೆ; ನವಕರ್ನಾಟಕ ಬರಿಯ ಹೆಸರಲ್ಲೋ ಅಣ್ಣಾ ಪ್ರೀತಿಯ ಒಸರು ಕಣೋ!

೧೯೬೦ರಲ್ಲೇ ಸ್ಥಾಪಿತವಾದ ಅಂದರೆ ಅತ್ರಿಗೂ ಹದಿನೈದು ವರ್ಷ ಹಿರಿಯ ಸಂಸ್ಥೆ ನವಕರ್ನಾಟಕ. ಇನ್ನು ಗಾತ್ರ ಚಟುವಟಿಕೆಗಳ ಲೆಕ್ಕ ಹಿಡಿದರೆ ಅತ್ರಿ ತೀರ್ಥ, ಅದು ಸಾಗರ. ಅತ್ರಿಯ ಆಯುಷ್ಯದ ಉದ್ದಕ್ಕೂ ನವಕರ್ನಾಟಕದ ಸಹಯೋಗ ಗಾಢವಿತ್ತು, ತೀರಾ ಆತ್ಮೀಯವೂ ಇತ್ತು. ಮಾರಾಟದಲ್ಲಿ ಅದಕ್ಕೂ ಮುಖ್ಯವಾಗಿ ಲೆಕ್ಕಾಚಾರದಲ್ಲಿ ನಾನು ತಪ್ಪಡಿಗಳನ್ನು ಇಡುತ್ತಿದ್ದ ಕಾಲದಿಂದ ಇಂದಿನವರೆಗೆ ಅವರೆಲ್ಲ ಪ್ರಕಟಣೆ ಮತ್ತು ವಿತರಣೆಯ ಪುಸ್ತಕಗಳನ್ನು ನಾನು ಬಯಸಿದಂತೆ ಕೊಟ್ಟಿದ್ದಾರೆ. ಕೃತಿಯಲ್ಲಿ ಮಾತ್ರವಲ್ಲ ಮಾತಿನಲ್ಲೂ ವ್ಯವಸ್ಥಾಪಕ ನಿರ್ದೇಶಕರಾದ ರಾಜಾರಾಮ್ ಅವರ ಪರವಾಗಿಯೇ ನನಗೆ ಸದಾ ಸಂಪರ್ಕಕಕ್ಕೆ ಒದಗುತ್ತ ಬಂದ ಎ.ಆರ್ ಉಡುಪರು - ಕಂಪೆನಿಯ ಭಾಷೆಯಲ್ಲಿ ಹೇಳಬೇಕಾದರೆ ಸೆಕೆಂಡ್ ಇನ್ ಕಮಾಂಡ್, ಒಂದೇ ಒಂದು ತಪ್ಪುನುಡಿ ಕೊಟ್ಟವರಲ್ಲ. ವ್ಯವಹಾರದಲ್ಲಿ ನನ್ನ ಸ್ವಾಯತ್ತೆಗೆ ಎಂದೂ ಕುಂದು ಮಾಡದೆ, ವಿಶ್ವಾಸದಲ್ಲಿ ತಮ್ಮದೇ ಅಂಗಸಂಸ್ಥೆಯೋ ಎಂಬ ಪ್ರೀತಿಯನ್ನೂ ಕೊಟ್ಟು ನಡೆಸಿಕೊಂಡಿದ್ದಾರೆ. ಇನ್ನು ಮಂಗಳೂರಿನ ಅವರ ಶಾಖಾ ಸಿಬ್ಬಂದಿಗಳೋ ಮೇಲಿನವರತ್ತ ನೋಡಿಕೊಂಡು ತುಳುವಿನಲ್ಲಿ ಹೇಳುವಂತೆ ‘ಪಂಡಿ ಬೇಲೆ ಎಂದು ಕುಳಿತವರಲ್ಲ. ಅವರು ಹೇಳಿದ್ದಕ್ಕೆ ವೈಯಕ್ತಿಕ ಆತ್ಮೀಯತೆಯ ಸಕ್ಕರೆ ಬೆರೆಸಿ ಸಂಬಂಧವನ್ನು ಸದಾ ಮಧುರವಾಗಿ ಉಳಿಸಿಕೊಟ್ಟವರಿವರು. ನನ್ನ ನೆನಪಿನ ಸಣ್ಣ ಮಿತಿಯಲ್ಲೂ ಹೆಸರಿಸುವುದೇ ಆದರೆ ಇಂದಿಲ್ಲವಾದ ಕೃಷ್ಣ ಮತ್ತು ರಾಘವನ್ ಅವರಿಂದ ತೊಡಗಿ ಈಚಿನ ಕಲ್ಲೂರು ನಾಗೇಶ್, ಜನಾರ್ದನ್, ಹರೀಶ್, ರಾಜೇಂದ್ರ, ವಿಶ್ವನಾಥ ಮುಂತಾದವರವರೆಲ್ಲರೂ ನನ್ನ ಬೇಡಿಕೆ, ಕೀಟಲೆಗಳನ್ನು ನಗುಮೊಗದಲ್ಲೇ ಸಮರ್ಪಕವಾಗಿ ನಡೆಸಿಕೊಟ್ಟದ್ದಕ್ಕೆ ಸಾರ್ವಜನಿಕದಲ್ಲೂ ನಾನು ದೊಡ್ಡ ನೆನಕೆ ಸಲ್ಲಿಸಲೇಬೇಕು.

ನನ್ನ ಮನಸ್ಸಿನಲ್ಲಿ ನಿವೃತ್ತಿ ಮತ್ತು ಅತ್ರಿಯ ಬರ್ಖಾಸ್ತು ಹುರಿಗಟ್ಟುತ್ತಿದ್ದಂತೆ ನಾನು ಇಲ್ಲಿವರೆಗೆ ಲಕ್ಷ್ಯವಾಗಿರಿಸಿಕೊಂಡ ಪುಸ್ತಕ ಸಂಸ್ಕೃತಿಯನ್ನು ಅನಾಥವಾಗಿಸಬಾರದೆಂಬ ಸಂಕಲ್ಪ ಮೂರನೆಯ ಎಳೆಯಾಗಿ ಸೇರಿಕೊಂಡಿತು. ಆಗ ಗಟ್ಟಿಯಾಗಿ ಕಾಣಿಸಿದ ಒಂದೇ ಹೆಸರು ನವಕರ್ನಾಟಕ. ನಾನು ಯಾವ ಪೂರ್ವ ಸೂಚನೆಯಿಲ್ಲದೆ ಉಡುಪರಿಗೆ ದೂರವಾಣಿಸಿದೆ. ಅವರ ಮೊದಲ ಮಾತು, ಅವರ ವ್ಯಕ್ತಿತ್ವಕ್ಕೆ ಸಹಜವಾಗಿಯೂ ಪ್ರಾಮಾಣಿಕವಾಗಿಯೂ ಇತ್ತು ಇಲ್ಲ, ಅತ್ರಿ ಬರ್ಖಾಸ್ತಾಗಕೂಡದು. ಆದರೆ ನನ್ನ ವ್ಯಕ್ತಿ ಸ್ವಾತಂತ್ರ್ಯವನ್ನು ಅಷ್ಟೇ ಗೌರವಿಸಿ ಎರಡನೇ ಮಾತು ಹೇಳಿದರು ಅಸ್ತು, ಒಪ್ಪಿದೆ, ಅಲ್ಲಿ ಅತ್ರಿಯ ಸಂಪ್ರದಾಯವನ್ನು ತುಂಬಾ ಸಂತೋಷದಿಂದ ನವಕರ್ನಾಟಕ ಮುಂದುವರಿಸುತ್ತದೆ. 

ಅತ್ರಿ ಬಲ್ಮಠದಲ್ಲಿ ಪ್ರಾರಂಭವಾದಾಗ ಹಂಪನಕಟ್ಟೆಯೇ ಮಂಗಳೂರಾಗಿತ್ತು. ಆದರಿಂದು ಮೂರೂ ದಿಕ್ಕುಗಳ ಸಂಚಾರ ಸಂಗಮ ಈ ಜ್ಯೋತಿ ವಠಾರ. ಮತ್ತೆ ಇಂದಿನ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟೀಕರಣದ ಹುಚ್ಚಿನಲ್ಲೂ ಮಂಗಳೂರಿನೊಳಗೆ ಪರಿಪೂರ್ಣವಾಗಿ ರೂಪುಗೊಂಡ ಏಕೈಕ ಸ್ಥಳ ಬಲ್ಮಠ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಇಲ್ಲಿ ಬರಿಯ ವಾಹನಸಂಚಾರದ ನೆಲವೊಂದೇ ಇರುವುದಲ್ಲ. ಬೀದಿದೀಪಗಳನ್ನು ಹೊತ್ತ ವಿಭಾಜಕದೊಡನೆ ದ್ವಿಮುಖ ವಾಹನ ಸಂಚಾರ ವ್ಯವಸ್ಥೆ, ಮಳೆನೀರ ಚರಂಡಿ, ಪುಟ್ಟಪಥ, ಹಸುರೀಕರಣ, ವಾಹನ ನಿಲುಗಡೆಯ ತಾಣ, ಬಸ್ ನಿಲ್ದಾಣಗಳೆಲ್ಲವೂ ಯೋಜನೆಗೆ ಕೊರತೆಯಿಲ್ಲದಂತೆ ಕೆಲಸ ಪೂರೈಸಿವೆ! ಇನ್ನು ನೇತ್ರಾವತಿಯಿಂದ ತೊಡಗಿ ಹೇಮಾವತಿ, ಕುಮುದಾವತಿ ಮತ್ತು ಶರಾವತಿವರೆಗಿನ ಏಕ ಸಂಸ್ಥೆಯ ಮಾಲಿಕತ್ವದ ಇಲ್ಲಿನ ಕಟ್ಟಡ ಸರಣಿಯ ವಿನ್ಯಾಸ ಆಧುನಿಕ ಸೌಕರ್ಯಗಳಿಗೆ ತೆರೆದುಕೊಳ್ಳುವ ಸಾಧ್ಯತೆಗಳು ಗಮನಾರ್ಹ. ಅವಕ್ಕೂ ಮುಖ್ಯವಾಗಿ ಇವುಗಳೆಲ್ಲದರ ಮಾಲಿಕ ಸಂಸ್ಥೆ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸಾಯಿಟಿ ತನ್ನ ಬಾಡಿಗೆದಾರರೊಡನೆ ಇಟ್ಟುಕೊಂಡ ಸಹೃದಯೀ ಮತ್ತು ಸಹಕಾರದ ಸಂಬಂಧ ಅನ್ಯತ್ರ ನಾನು ಕಂಡಿಲ್ಲ, ಕೇಳಿಲ್ಲ. ಇವೆಲ್ಲದರ ಮೊತ್ತವಾಗಿ ಇಲ್ಲಿ ಇಂದು ಪುಸ್ತಕ ಪ್ರೇಮಿಗಳಿಗೆ ಅತ್ರಿಯ ಕೊರತೆಯನ್ನು ಮೀರುವಂತೆ ನವಕರ್ನಾಟಕ ಪಬ್ಲಿಕೇಶನ್ಸ್ ನೆಲೆನಿಲ್ಲುತ್ತಿದೆ. ಅವರಿಗೆ ನನ್ನ ಕೃತಜ್ಞತೆಗಳು ಮತ್ತು ಹಾರ್ದಿಕ ಶುಭಾಶಯಗಳು.

16 comments:

 1. pujaneeya Ashok ravare,
  neevu aarohana yemba samsteyannu huttu haakiddiri yendu nanage tiludu bantu...aledaledu e lli varege hego bande,nimma charanada jot, naanu jote guudabahude,adara bagge maahiti yelli padeyali?
  dhanyavadagalondige...

  ReplyDelete
  Replies
  1. ಪ್ರೀತಿಯ ಅಶೋಕ ವರ್ಧನ
   ಭಾರತೀಯರ ಜೀವನ ಯಾತ್ರೆಯಲ್ಲೂ ರಿಟಾಯರ್ಮೆಂಟ್ ಪ್ಕಾನಿಂಗ್ ಒಂದು ಮುಖ್ಯ ಅಂಗ ಎಂದು ತಾವು ನಿರೂಪಿಸಿದ್ದೀರಿ.
   ಇಲ್ಲಿ ನೋಡಿ! ನಾನೊಬ್ಬ ಹಳೆಯ ಹಬೆ ಇಂಜಿನಿನ ರೈಲು ಬಂಡಿಯಂತೆ ಅರುವತ್ತಾರಾದರೂ ವೃತ್ತಿ ತೆರಿಗೆ ಕಟ್ಟುತ್ತಾ ಇದ್ದೇನೆ.
   ನೋಡುತ್ತಿದ್ದಂತೆಯೇ ಡೀಸೆಲ್ ರೈಲುಗಳು ಬಂದು ಅವೂ ಹಳತಾಗಿ ವಿದ್ಯುತ್ ಬಳಸುವ ಸೂಪರ್ ರೈಲುಗಳ ಕಾಲ ಬಂದಿದೆ. ನಾನು ಹಳೆಯ ರೈಲಿನಂತೆ ಸಿಳ್ಳೆ ಹಾಕುತ್ತಾ ಇದ್ದೇನೆ. ಇನ್ನೂ ಬದಲಾಗಿಲ್ಲ.

   ನನಗಿಂತ ಹತ್ತು ವರುಷ ಕಿರಿಯರಾದರೂ ತಾವು ನನಗಿಂದು ಮಾದರಿ.

   ತಮ್ಮ ಮತ್ತು ಸಂಸಾರದ ಜೀವನ ಸುಖಮಯವಾಗಿರಲಿ.
   ತಮ್ಮ ಮುಂದಿನ ಯೋಜನೆಗಳೆಲ್ಲಾ ಜಯಪ್ರದ ಆಗಿರಲಿ.

   ನಾನೆಂದೂ ವೈಯ್ಯಕ್ತಿಕ ಪ್ರಶ್ನೆಗಳನ್ನು ಕೇಳುವವನಲ್ಲ.
   ಹಾಗಿದ್ದರೂ,ತಮ್ಮ ಇಮೈಲುಗಳು ನಿಲ್ಲದೇ ಬರುತ್ತಾ ಇರಲಿ. ಅತ್ರಿ ಬಳಗದ ಎಲ್ಲರಿಗೂ ಶುಭ ಹಾರೈಕೆಗಳು.

   ಚಿ. ಅಭಯ ಹೊಸ ಹೊಸಾ ಶಿಕಾರಿಗಳತ್ತ ಲಕ್ಷ್ಯ ಇರಿಸಿ ನಾಡಿಗೆ ಮತ್ತು ನಮ್ಮ ದೇಶಕ್ಕೆ ಹೆಸರು ತರಲಿ!

   ಪ್ರೀತಿಯಿಂದ
   ಪೆಜತ್ತಾಯ

   Delete
  2. ಜೀವನ್... ನಿಮ್ಮ Email ವಿಳಾಸ ನನಗೆ ಗೊತ್ತಿಲ್ಲವಾದ್ದರಿಂದ ಇಲ್ಲೇ ಬರೆಯುತ್ತಿದ್ದೇನೆ... ದಯವಿಟ್ಟು ನಿಮ್ಮ ವಿಳಾಸದಿಂದ ನನಗೊಂದು ಕಾಗದ ಬರೆಯಿರಿ. athreebook@gmail.com ಮುಂದೆ ಮಾತನಾಡೋಣ.

   Delete
  3. dhanyavaadagalu....nimma akkareya pratikriye istu bega bandaddu nodi kushiyaayitu

   Delete
 2. ಕೊನೆಗೂ ನೀವು ಜೀವ ನೀಡಿದ ಅತ್ರಿ ಪುಸ್ತಕ ಅ೦ಗಡಿಯ ನಾಮಾ೦ತರವಾಯಿತು. ನಿಮ್ಮ ಮು೦ದಿನ ನಿವ್ರುತ್ತ ಜೀವನ ಸುಖಮಯವಾಗಲಿ ಮತ್ತು ನಿಮ್ಮ ಬರವಣಿಗೆಯು ಸುರುಳಿ ಸುರುಳಿಯಾಗಿ ನಿರ೦ತರವಾಗಿ ಬರುತ್ತಿರಲಿ ಎ೦ದು ಹಾರೈಸುವೆ.

  ReplyDelete
 3. ನಿಮ್ಮ ನಿವೃತ್ತ ಜೀವನ ಸುಖಮಯವಾಗಲಿ.

  ಇಂತಿ,
  ಸಂದೀಪ್

  ReplyDelete
 4. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳು ಆತ್ಮತೃಪ್ತಿ ನೀಡಲಿ ಎಂದು ಹಾರೈಸುತ್ತೇನೆ

  ReplyDelete
 5. ಸೋಮಿ,
  ಅತ್ರಿ ಮಗಳನ್ನು ಒಪ್ಪಿಸಿಕೊಟ್ಟು ಕೃತಾರ್ಥರಾದಿರಿ! ನಿಮಗೆ ಅಭಿನಂದನೆಗಳು.
  ಶುಕ್ರವಾರ ಮಂಗಳೂರಿನ ಜ್ಯೋತಿ ವೃತ್ತ ಎರಡು ಅಪರೂಪದ ಘಟನೆಗಳಿಗೆ ಸಾಕ್ಷಿಯಾಯಿತು.
  ವೃತ್ತದ ಒಂದು ಬದಿಯಲ್ಲಿ ಹಿರಿಯ ತಲೆಮಾರಿನವರು ಮಗಳನ್ನು ಒಪ್ಪಿಸಿಕೊಟ್ಟು ಕೃತಾರ್ಥರಾಗುತ್ತಿದ್ದರೆ
  ಇನ್ನೊಂದು ಬದಿಯಲ್ಲಿ ಜ್ಯೋತಿ ಚಿತ್ರಮಂದಿರ ತನ್ನ ಮುಂದೆ ಶಾಲೆಗೆಯೇ
  ಹೋಗುತ್ತಿದ್ದ ಹುಡುಗ ಬೆಳೆದು ಪ್ರಬುದ್ಧ ನಿರ್ದೇಶಕನಾಗಿ ರಾಷ್ಟ್ರಪತಿ ಚಿನ್ನದ ಪ್ರಶಸ್ತಿ ಪಡೆದುದು
  ಆಕಸ್ಮಿಕವಲ್ಲವೆಂಬುದಕ್ಕೆ ಸಾಕ್ಷಿಯಾದ ಚಿತ್ರವನ್ನು ಪ್ರದರ್ಶಿಸುತ್ತಿತ್ತು.
  ಉರ್ವ ಸ್ಟೋರ್ಸ್ ಬಳಿಯ ಆ ಹಿರಿಯರು ಅಂದು ಆಡಿರಬಹುದಾದ ಮಾತುಗಳೆಲ್ಲವನ್ನೂ
  ನಾನು ಕೇಳಿಸಿಕೊಂಡು ಆನಂದಿಸಿದೆ!
  ಅದೇ ಸಮಯದಲ್ಲಿ ನಾನೂ ಶಿಕಾರಿ ನೋಡಿ ಸಂತೋಷಪಡುತ್ತಿದ್ದೆ.
  ತಂದೆಯವರಿಂದ ನೀವು ಕೋಲನ್ನೇನೂ ಔಪಚಾರಿಕವಾಗಿ ಪಡೆದಿರದಿದ್ದರೂ
  ಅವರ ಪರಿಷ್ಕೃತ ಆವೃತ್ತಿಯ ಮಾದರಿಯನ್ನು ಕಿರಿಯ ತಲೆಮಾರಿಗೆ ದಾಟಿಸಿ
  ಒಂದು ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ನಿಮಗೆ, ದೇವಕಿಗೆ
  ಔಪಚಾರಿಕ ಅಭಿನಂದನೆಗಳನ್ನು ಮೀರಿದ ಸಂತೋಷವಾಗಿರುವುದು ಸಹಜ.
  ಹೊಸ ಪ್ರಸ್ಥಾನಕ್ಕೆ ಎಲ್ಲ ಒಳಿತನ್ನೂ ಹಾರೈಸುವೆ
  ಪಂಡಿತ

  ReplyDelete
 6. ಪ್ರೀತಿಯ ಅಶೋಕ ವರ್ಧನ,

  ಭಾರತೀಯರ ಜೀವನ ಯಾತ್ರೆಯಲ್ಲೂ ರಿಟಾಯರ್ಮೆಂಟ್ ಪ್ಕಾನಿಂಗ್ ಒಂದು ಮುಖ್ಯ ಅಂಗ ಎಂದು ತಾವು ನಿರೂಪಿಸಿದ್ದೀರಿ. ಇಲ್ಲಿ ನೋಡಿ! ನಾನೊಬ್ಬ ಹಳೆಯ ಹಬೆ ಇಂಜಿನಿನ ರೈಲು ಬಂಡಿಯಂತೆ ಅರುವತ್ತಾರಾದರೂ ವೃತ್ತಿ ತೆರಿಗೆ ಕಟ್ಟುತ್ತಾ ಇದ್ದೇನೆ.
  ನೋಡುತ್ತಿದ್ದಂತೆಯೇ ಡೀಸೆಲ್ ರೈಲುಗಳು ಬಂದು ಅವೂ ಹಳತಾಗಿ ವಿದ್ಯುತ್ ಬಳಸುವ ಸೂಪರ್ ರೈಲುಗಳ ಕಾಲ ಬಂದಿದೆ. ನಾನು ಹಳೆಯ ರೈಲಿನಂತೆ ಸಿಳ್ಳೆ ಹಾಕುತ್ತಾ ಇದ್ದೇನೆ. ಇನ್ನೂ ಬದಲಾಗಿಲ್ಲ. ನನಗಿಂತ ಹತ್ತು ವರುಷ ಕಿರಿಯರಾದರೂ ತಾವು ನನಗಿಂದು ಮಾದರಿ.

  ತಮ್ಮ ಮತ್ತು ಸಂಸಾರದ ಜೀವನ ಸುಖಮಯವಾಗಿರಲಿ. ತಮ್ಮ ಮುಂದಿನ ಯೋಜನೆಗಳೆಲ್ಲಾ ಜಯಪ್ರದ ಆಗಿರಲಿ.

  ನಾನೆಂದೂ ವೈಯ್ಯಕ್ತಿಕ ಪ್ರಶ್ನೆಗಳನ್ನು ಕೇಳುವವನಲ್ಲ. ಹಾಗಿದ್ದರೂ,ತಮ್ಮ ಇಮೈಲುಗಳು ನಿಲ್ಲದೇ ಬರುತ್ತಾ ಇರಲಿ. ಅತ್ರಿ ಬಳಗದ ಎಲ್ಲರಿಗೂ ಶುಭ ಹಾರೈಕೆಗಳು.

  ಪ್ರೀತಿಯಿಂದ
  ಪೆಜತ್ತಾಯ

  ReplyDelete
 7. ಪ್ರೀತಿಯ ಅಶೋಕ ವರ್ಧನ
  ಭಾರತೀಯರ ಜೀವನ ಯಾತ್ರೆಯಲ್ಲೂ ರಿಟಾಯರ್ಮೆಂಟ್ ಪ್ಕಾನಿಂಗ್ ಒಂದು ಮುಖ್ಯ ಅಂಗ ಎಂದು ತಾವು ನಿರೂಪಿಸಿದ್ದೀರಿ.
  ಇಲ್ಲಿ ನೋಡಿ! ನಾನೊಬ್ಬ ಹಳೆಯ ಹಬೆ ಇಂಜಿನಿನ ರೈಲು ಬಂಡಿಯಂತೆ ಅರುವತ್ತಾರಾದರೂ ವೃತ್ತಿ ತೆರಿಗೆ ಕಟ್ಟುತ್ತಾ ಇದ್ದೇನೆ.
  ನೋಡುತ್ತಿದ್ದಂತೆಯೇ ಡೀಸೆಲ್ ರೈಲುಗಳು ಬಂದು ಅವೂ ಹಳತಾಗಿ ವಿದ್ಯುತ್ ಬಳಸುವ ಸೂಪರ್ ರೈಲುಗಳ ಕಾಲ ಬಂದಿದೆ. ನಾನು ಹಳೆಯ ರೈಲಿನಂತೆ ಸಿಳ್ಳೆ ಹಾಕುತ್ತಾ ಇದ್ದೇನೆ. ಇನ್ನೂ ಬದಲಾಗಿಲ್ಲ.

  ನನಗಿಂತ ಹತ್ತು ವರುಷ ಕಿರಿಯರಾದರೂ ತಾವು ನನಗಿಂದು ಮಾದರಿ.

  ತಮ್ಮ ಮತ್ತು ಸಂಸಾರದ ಜೀವನ ಸುಖಮಯವಾಗಿರಲಿ.
  ತಮ್ಮ ಮುಂದಿನ ಯೋಜನೆಗಳೆಲ್ಲಾ ಜಯಪ್ರದ ಆಗಿರಲಿ.

  ನಾನೆಂದೂ ವೈಯ್ಯಕ್ತಿಕ ಪ್ರಶ್ನೆಗಳನ್ನು ಕೇಳುವವನಲ್ಲ.
  ಹಾಗಿದ್ದರೂ,ತಮ್ಮ ಇಮೈಲುಗಳು ನಿಲ್ಲದೇ ಬರುತ್ತಾ ಇರಲಿ. ಅತ್ರಿ ಬಳಗದ ಎಲ್ಲರಿಗೂ ಶುಭ ಹಾರೈಕೆಗಳು.

  ಚಿ. ಅಭಯ ಹೊಸ ಹೊಸಾ ಶಿಕಾರಿಗಳತ್ತ ಲಕ್ಷ್ಯ ಇರಿಸಿ ನಾಡಿಗೆ ಮತ್ತು ನಮ್ಮ ದೇಶಕ್ಕೆ ಹೆಸರು ತರಲಿ!

  ಪ್ರೀತಿಯಿಂದ
  ಪೆಜತ್ತಾಯ

  ReplyDelete
 8. akkareya sir,
  atri pustaka malige nanna ella pustakagaligooo aashraya kottittu.aakasmikavaagi sikka mangalooru kadeya jana, atri li nimma books tagondvi annuvaaga avara kannalli khushi iruttittu...innu munde atri emba hesaroo iralla...alli neevoo iralla...antha sandarbha nenapaadare saaku,manassige kasivisi aaguttade.
  nimage shubhavaagali...olitaagali sir..
  akkareyinda..
  Manikanth,bangalore

  ReplyDelete
 9. 'ಅತ್ರಿ ಪುಸ್ತಕ' ಮಳಿಗೆಗೆ ತನ್ನಧೇ ಆದ ವಿಶಿಷ್ಟತೆಯಿತ್ತು. ಅದಕ್ಕೆ ಕಾರಣ ಅಶೋಕವರ್ಧನ ಅವರೆ ನಿಮ್ಮ ವ್ಯಕ್ತಿತ್ವ. ಇದು ಮಳಿಗೆಗೆ ಭೇಟಿ ಕೊಟ್ಟ ಅನೇಕರು ಆತ್ಮೀಯತೆ ಬೆಳೆಸಿಕೊಳ್ಳಲು ಕಾರಣ. ಪುಸ್ತಕಾಸಕ್ತಿಯಿಂದ ಬಂದವರಿಗೆ 'ಯಾವ ಪುಸ್ತಕ ಬೇಕು, ಓ ಅದಾ...ಅಲ್ಲಿ ಇದೆ ನೋಡಿ ತೆಗೆದುಕೊಳ್ಳಿ' ಎಂದು ನಿಖರವಾಗಿ ಸೂಚಿಸುತ್ತಿದ್ದಿರಿ. ಬಂದವರು ಕೊಂಚವೂ ತಡಕದೇ ತಮಗೆ ಬೇಕಾದ ಪುಸ್ತಕ ಕೈಗೆತ್ತಿಕೊಳ್ಳಲು ಸಾಧ್ಯವಾಗಿತ್ತು. ಒಂದು ಸಮಯ ಬಂದವರು ಕೇಳಿದ ಪುಸ್ತಕ ಲಭ್ಯವಿಲ್ಲ ಎಂದಾದರೆ 'ನೋಡಿ ಇಂಥ ಕಡೆ ಅದು ದೊರೆಯಬಹುದು, ವಿಚಾರಿಸಿ' ಎಂದು ಹೇಳುವ ಅಪರೂಪದ ಗುಣ ನಿಮ್ಮದು.

  ಪ್ರಗತಿಪರ ಚಳವಳಿ-ಪರಿಸರಾಸಕ್ತಿ-ಚಾರಣ ಹವ್ಯಾಸಗಳು ಉಳ್ಳವರನ್ನು ಪರಸ್ಪರ ಸಂಪರ್ಕಕ್ಕೆ ತರುವ ಸೇತು ನೀವು. ಈ ಸಲುವಾಗಿ ನಿಮ್ಮನ್ನು ಮಾತಿನಾಡಿಸಲು ಬಂದಾಗ ಯಾವುದಾದರೊಂದು ಒಳ್ಳೆಯ ಪುಸ್ತಕವನ್ನೂ ಖರೀದಿಸಿ ಹೋಗುತ್ತಿದ್ದೆವು. ಪುಸ್ತಕ ಕೊಳ್ಳಲು ಬಂದಾಗ ನಿಮ್ಮ ಅಗತ್ಯ ಮಾರ್ಗದರ್ಶನವೂ ಲಭ್ಯವಿತ್ತು. ಇವೆರಡೂ ಏಕಕಾಲಕ್ಕೆ ದೊರೆಯುತ್ತದೆ ಎನ್ನುವ ಕಾರಣಕ್ಕೂ 'ಅತ್ರಿ'ಯೊಂದಿಗೆ ಆತ್ಮೀಯತೆ ಬೆಳೆದಿತ್ತು.

  ಇಷ್ಟೆಲ್ಲ ಕಾರಣಕ್ಕೆ ಅತ್ರಿ ಪುಸ್ತಕ ಮಳಿಗೆಯ ಸೊಗಡು ಇಲ್ಲದಿರುವುದು ಬೇಸರದ ಸಂಗತಿಯಾದರೂ ಆ ಸ್ಥಳದಲ್ಲಿ ನವ ಕರ್ನಾಟಕ ಬರುತ್ತಿರುವುದು ಸಮಾಧಾನದ ಸಂಗತಿ.

  ಆದೇನೆ ಆಗಲಿ ನೀವು ಸುದೀರ್ಘ ಕಾಲ ನಮ್ಮೆಲ್ಲರ ಸಂಪರ್ಕಕ್ಕೆ ದೊರೆಯುತ್ತಲೇ ಇರಬೇಕು. ಆ ಮೂಲಕ ನಿಮ್ಮ ಮಾರ್ಗದರ್ಶನ ಲಭ್ಯವಾಗಬೇಕು ಎಂಬುದು ಪ್ರೀತಿಯ ಒತ್ತಾಯ.

  ReplyDelete
 10. ೧೯೭೨ ರಲ್ಲಿ ಕಾಸೆಸ್ ಸಂಸ್ಥೆಯು ನೇತ್ರಾವತಿ ಕಟ್ಟಡವನ್ನು ನಿನಿರ್ಮಿಸಿದಾಗ ತಮ್ಮ ಅತ್ರಿ ಬುಕ್ ಸೆಂಟರನ್ನು ಸ್ಥಾಪಿಸಿ ಕಳೆದ ೪೦ ವರ್ಷಗಳಲ್ಲಿ ಬುಕ್ ಗೈಡ್ ಆಗಿ ತಾವು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಕನ್ನಡ, ತುಳು, ಮಲಯಾಳಂ, ಭಾಷೆಗೆ ಕೊಡುಗೆ ನೀಡಿದ ವಿದೇಶಿ ಮಿಶನರಿಗಳಾದ ಮ್ಯೋಗ್ಲಿಂಗ್, ಕಿಟೆಲ್, ಗುಂಡರ್ಟ್, ಮೆನ್ನರ್, ಬ್ರಿಗೆಲ್ ಓಡಾಡಿದ ಪರಿಸರದಲ್ಲಿ ತಾವು ಕಳೆದ ೪೦ ವರ್ಷಗಳಲ್ಲಿ ಪುಸ್ತಕ ಸೇವೆ ಮಾಡಿದ್ದು ಹೆಮ್ಮೆಯ ವಿಚಾರವೇ ಸರಿ. ತಾವು ಸ್ಥಾಪಿಸಿದ ಪುಸ್ತಕ ಸೇವೆ, ಬುಕ್ ಗೈಡ್ ಸೇವೆ ನವಕರ್ನಾಟಕ ಸಂಸ್ಥೆಯಿಂದ ಅಭಿವೃದ್ದಿ ಪಥದಲ್ಲಿ ಮುಂದುವರಿಯಲಿ.

  ಬೆನೆಟ್ ಜಿ. ಅಮ್ಮನ್ನ
  ಕೆ.ಟಿ.ಸಿ. ಪತ್ರಾಗಾರ

  ReplyDelete
 11. maanya g.n.a avare,
  athree muchalilla annuvudu samaadhaana. yaddyurappa bandre mundina dinagalalli retirement vayassannu 70 kke erisuva saadhyate iruvaaga mattu sarakaari noukararu adakkaagi baayibittu kUtiruvaaga nIve retire aadaddu , che entha helodu maaraayre?!!
  ajakkala girisha

  ReplyDelete
 12. ಸೋಮಿ,

  ಅತ್ರಿ ಮಗಳನ್ನು ಒಪ್ಪಿಸಿಕೊಟ್ಟು ಕೃತಾರ್ಥರಾದಿರಿ! ನಿಮಗೆ ಅಭಿನಂದನೆಗಳು. ಶುಕ್ರವಾರ ಮಂಗಳೂರಿನ ಜ್ಯೋತಿ ವೃತ್ತ ಎರಡು ಅಪರೂಪದ ಘಟನೆಗಳಿಗೆ ಸಾಕ್ಷಿಯಾಯಿತು. ವೃತ್ತದ ಒಂದು ಬದಿಯಲ್ಲಿ ಹಿರಿಯ ತಲೆಮಾರಿನವರು ಮಗಳನ್ನು ಒಪ್ಪಿಸಿಕೊಟ್ಟು ಕೃತಾರ್ಥರಾಗುತ್ತಿದ್ದರೆ ಇನ್ನೊಂದು ಬದಿಯಲ್ಲಿ ಜ್ಯೋತಿ ಚಿತ್ರಮಂದಿರ ತನ್ನ ಮುಂದೆಯೇ ಶಾಲೆಗೆ ಹೋಗುತ್ತಿದ್ದ ಹುಡುಗ ಬೆಳೆದು ಪ್ರಬುದ್ಧ ನಿರ್ದೇಶಕನಾಗಿ ರಾಷ್ಟ್ರಪತಿ ಚಿನ್ನದ ಪ್ರಶಸ್ತಿ ಪಡೆದುದು ಆಕಸ್ಮಿಕವಲ್ಲವೆಂಬುದಕ್ಕೆ ಸಾಕ್ಷಿಯಾದ ಚಿತ್ರವನ್ನು ಪ್ರದರ್ಶಿಸುತ್ತಿತ್ತು. ಉರ್ವ ಸ್ಟೋರ್ಸ್ ಬಳಿಯ ಆ ಹಿರಿಯರು ಅಂದು ಆಡಿರಬಹುದಾದ ಮಾತುಗಳೆಲ್ಲವನ್ನೂ ನಾನು ಕೇಳಿಸಿಕೊಂಡು ಆನಂದಿಸಿದೆ! ಅದೇ ಸಮಯದಲ್ಲಿ ನಾನೂ ಶಿಕಾರಿ ನೋಡಿ ಸಂತೋಷಪಡುತ್ತಿದ್ದೆ. ತಂದೆಯವರಿಂದ ನೀವು ಕೋಲನ್ನೇನೂ ಔಪಚಾರಿಕವಾಗಿ ಪಡೆದಿರದಿದ್ದರೂ ಅವರ ಪರಿಷ್ಕೃತ ಆವೃತ್ತಿಯ ಮಾದರಿಯನ್ನು ಕಿರಿಯ ತಲೆಮಾರಿಗೆ ದಾಟಿಸಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ನಿಮಗೆ, ದೇವಕಿಗೆ ಔಪಚಾರಿಕ ಅಭಿನಂದನೆಗಳನ್ನು ಮೀರಿದ ಸಂತೋಷವಾಗಿರುವುದು ಸಹಜ. ಹೊಸ ಪ್ರಸ್ಥಾನಕ್ಕೆ ಎಲ್ಲ ಒಳಿತನ್ನೂ ಹಾರೈಸುವೆ

  ಪಂಡಿತ

  ReplyDelete
 13. Nija.navakarnataka kelavondu acharasamhithe ittukondu kelasa maduva samsthe.--nimmanthe.
  Saiddhanthikathe matthu vyaapara kurithu avaru itthichege muktha dhoranege baniruvuduu sahajave.
  nimma malige iddallige navakarnataka bandaddu suyoga.
  M Prabhakara joshy.

  ReplyDelete