29 January 2012

ಪದ್ಮಶ್ರೀ ಉಲ್ಲಾಸ ಕಾರಂತ


“ಅಂವ ಶಾಲೆಗೇ ಹೋಗಲಿಲ್ಲ! ಆದರೂ ಎಸ್ಸೆಲ್ಸಿ ಪಾಸು ಮಾಡಿ, ಎಂಜಿನಿಯರೂ ಆದ. ಮತ್ತೆ ಒಳ್ಳೇ ಕಾರ್ಖಾನೆ ಕೆಲಸ ಇದ್ದರೂ ಚಿಟ್ಟೆ ಹಕ್ಕೀಂತ ಬಿಟ್ಟು ಹಳ್ಳಿ ಸೇರಿದ. ಅಲ್ಲಿ ಒಳ್ಳೇ ಧಾರಣೆ ಇದ್ದ ವಾಣಿಜ್ಯ ಬೆಳೆಯನ್ನೇ ರೂಢಿಸಿದರೂ ಮನ್ಶಾ ಸ್ಥಿರವಿಲ್ಲ. ಮತ್ತೆ ಸಿಂಗಳೀಕ, ಹುಲೀಂತ ಭ್ರಮೆ ಹಿಡ್ಕೊಂಡು ಕಾಡುಸೇರಿದ.” ಪುತ್ತೂರಿನ ಆಸುಪಾಸಿನ ಸಾಮಾನ್ಯರ ವಲಯದಲ್ಲಿ ಇಂದೂ ಹರಿದಾಡುವ ಇಂಥ (ನಂಜಿಲ್ಲದ) ಬೆರಗು ಮಿಶ್ರಿತ ಅನುಕಂಪದ ಮಾತುಗಳಿಗೆ ಈಗ ಹೊಸ ಬಾಲ ಸೇರಿಸಬಹುದು “...ರಾಷ್ಠ್ರ ಪ್ರಶಸ್ತಿಯೂ ಪಡೆದ.” ಡಾ| ಕೆ. ಉಲ್ಲಾಸ ಕಾರಂತ ಇಂದು ‘ಪದ್ಮಶ್ರೀ’. ನನ್ನಜ್ಜ, ಅಪ್ಪರ ಪರಿಚಯಗಳಲ್ಲಿ ಇವರದು ನಮಗೆ ಕುಟುಂಬ ಸ್ನೇಹವೇ ಇದ್ದರೂ ವಾಸ್ತವದಲ್ಲಿ ಸುಮಾರು ಮೂರೂವರೆ ದಶಕದ ಹಿಂದೆ, ಅದೇ ಮೊದಲು ಉಲ್ಲಾಸ್ ನನ್ನಂಗಡಿಗೆ ಬಂದಿದ್ದರು. ನಾನಾಗ ಪುಸ್ತಕ ವೃತ್ತಿಯಲ್ಲಿ ನೆಲೆಸುತ್ತಿದ್ದರೂ ರಜಾದಿನಗಳಲ್ಲಿ ದೊಡ್ಡ ಬಾಯಿಯೊಡನೆ ಶಿಖರದ ಮೇಲೆ ಶಿಖರಕ್ಕೇರಿ ಕೀರ್ತಿಪತಾಕೆ ಏರಿಸುತ್ತಿದ್ದೆ. ‘ಪರಮ ಸಾ-ಹಸಿ’ಯಾದ ನನ್ನಲ್ಲಿ ಉಲ್ಲಾಸ್ ಕೇಳಿದ್ದಾದರೂ ಏನು “ಸಿಂಗಳೀಕ ಕಂಡಿದ್ದೀರಾ?” ಬಲು ನಾಚು ಸ್ವಭಾವದ ಸಿಂಗಳೀಕ ಬಿಟ್ಟು ಶತಮಾನದ ಕಾಲ ಭಾರೀ ಬೇರು ಊರಿ ನಿಂತ ಮರಗಳೂ ಕಿತ್ತೋಡುವಂತೆ ಚಾರಣಗೈಯುತ್ತಿದ್ದ ನಾನೇನೋ ದೊಡ್ಡ “ಇಲ್ಲ” ಹೇಳಿರಬೇಕು. ಆದರೆ ಛಲಬಿಡದ ಆ ತರುಣ (ನನಗೆ ಮೂರುವರ್ಷದ ಹಿರಿಯ), ಈ ವಲಯದಲ್ಲಿ ನಶಿಸಿಹೋಗಿದೆ ಎಂದು ಖ್ಯಾತ ವಿಜ್ಞಾನಿಗಳು ಘೋಷಿಸಿದ್ದ ಸಿಂಗಳೀಕವನ್ನು ವೈಜ್ಞಾನಿಕವಾಗಿ ಮರುಸ್ಥಾಪಿಸಿದರು. ಮುಂದುವರಿದು ಕುದುರೆಮುಖ ಶಿಖರವನ್ನು ಕೇಂದ್ರವಾಗಿಟ್ಟುಕೊಂಡ ಪಶ್ಚಿಮಘಟ್ಟದ ಈ ವಲಯದ ಕಾಡನ್ನು ಪೂರ್ಣ ಸಂರಕ್ಷಿಸಿಕೊಳ್ಳಬೇಕಾದ ಆವಶ್ಯಕತೆಯನ್ನೂ ಸಾರಿದರು. ಹಾಗೆ ಉಲ್ಲಾಸರಿಂದ ಬೀಜಾರೋಪಗೊಂಡ ಕನಸು ಇಂದು ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ’ವಾಗಿ ವಿಕಸಿಸಿರುವುದನ್ನು ಕಾಣುತ್ತೇವೆ. ಅತ್ತ ಉಲ್ಲಾಸರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯ ವರದಿಗಳು ಬರುತ್ತಿದ್ದಂತೆ ಇತ್ತ ಈ ಅರಣ್ಯದಲ್ಲಿ ಬಹುಕಾಲಾನಂತರ ಎರಡು ಮರಿಗಳನ್ನೂ ಕೂಡಿಕೊಂಡ ಹುಲಿಜೋಡಿಯನ್ನು (ಒಟ್ಟಾರೆ ನಾಲ್ಕು) ಇಲಾಖೆಯ ರಕ್ಷಕರು ಕಂಡಿರುವ ವರದಿಯೂ ಬಂದಿದೆ. ಇಲ್ಲೇ ಒಂದು ಲೇಖನದ ಆಚೆ ನಾನು ಬರೆದಿರುವ ಪಾಂಡರಮಕ್ಕಿಯ ವಲಯದ ಒಂದು ಜಲಮೂಲದ ಬಳಿ ಈ ಹುಲಿ ಸಂಸಾರ ಸಹಜ ವಿಹಾರದಲ್ಲಿತ್ತಂತೆ. “ಶುದ್ಧ ಮಾಂಸಾಹಾರಿಯಾದ (ಹಾಗಾಗಿ ಮಹಾದುಷ್ಟ ಪ್ರಾಣಿಯೆಂದೇ ಭಾವಿಸಲಾದ) ಹುಲಿಗೆ ರಕ್ಷಣೆ ಯಾಕೆ” ಎಂದವರಿಗೆಲ್ಲಾ ಉಲ್ಲಾಸ್ ಉತ್ತರಿಸುತ್ತಾ ಪ್ರಾಕೃತಿಕ ಪರಿಸರ-ಬಂಧ ವಿವರಿಸುವಾಗ ಪಿರಮಿಡ್ಡಿನ ಚಿತ್ರ ಕೊಡುತ್ತಿದ್ದರು. ಪಿರಮಿಡ್ಡಿನ ಕೆಳಸ್ತರದ ನೆಲನೀರು ಮುಕ್ತಗೊಂಡದ್ದು, ಮತ್ತೆ ಮೇಲಿನ ಗಾಳಿ ಹಸಿರು ಪ್ರಾಕೃತಿಕವಾಗುತ್ತ ನಡೆದದ್ದು, ಮುಂದುವರಿದು ಕಡವೆ ಕಾಟಿಗಳವರೆಗೂ ಸಸ್ಯಾಹಾರಿಗಳು ವಿಕಸಿಸಿದ್ದಕ್ಕೆಲ್ಲ ನಾವು ಸಾಕ್ಷಿ ಹಾಕುತ್ತಲೇ ಬಂದಿದ್ದೇವೆ. ಈಗ ಸ್ಪಷ್ಟ ಶಿಖರ ಮೂಡಿದಂತೆ ಕಾಣಿಸಿದ ಹುಲಿ ಸಂಸಾರ ಉಲ್ಲಾಸರಿಗೆ ನಿಜ ಸಮ್ಮಾನ; ಅದೆಷ್ಟು ಕಾಕತಾಳೀಯವಾದರೂ ವನವೇ ಸಂಭ್ರಮಿಸಿದ ಭಾವ.

ಆಡಳಿತಾತ್ಮಕ ವಿಭಾಗಗಳಾದ ರಾಜ್ಯ, ಜಿಲ್ಲೆ ಮುಂತಾದವುಗಳಿಂದ ಪೂರ್ತಿ ಬೇರೆಯಾದವು - ಪ್ರಾಕೃತಿಕ ವಿಭಾಗಗಳು. ಬಂಡೀಪುರದಲ್ಲಿ ಇಂದು ಕಾಣಿಸಿದ ಆನೆ ನಾಳೆ ಮುದುಮಲೈಯಲ್ಲಿದ್ದರೆ ತಮಿಳರ ಅಂಕೆಯಲ್ಲಿದ್ದಂತಲ್ಲ, ಎರುವಿಕುಲಮ್ಮಿನ ಕಾಟಿ ನಾಗರಹೊಳೆಯಲ್ಲಿ ಈಂದರೆ ಕನ್ನಡದ ಸ್ವತ್ತಾಗಬೇಕಿಲ್ಲ. ಜೀವಜಾಲದ ಅತ್ಯುಜ್ವಲ ತಾಣ ಎಂದೇ ವಿಶ್ವಖ್ಯಾತಿ ಗಳಿಸಿದ ಪಶ್ಚಿಮಘಟ್ಟ ನಮ್ಮ ಅವಿಭಜಿತ ದಕ ಜಿಲ್ಲೆಯುದ್ದಕ್ಕೂ ಹಾದುಹೋಗಿದೆ. ಅದರಲ್ಲಿ ಆಡಳಿತಾತ್ಮಕವಾದ ಹಲವು ಒತ್ತಡಗಳ ನಡುವೆ ಪ್ರಾಕೃತಿಕವಾಗಿ ಉಳಿದ ಒಂದು ತುಣುಕು (ಹೆಸರಿನ ಚಂದಕ್ಕೆ) ಕುದುರೆಮುಖ ರಾಷ್ಟ್ರೀಯ ಉದ್ಯಾನವನ. ಹೀಗೇ ಉಳಿದ ಇನ್ನಷ್ಟು ತುಣುಕುಗಳನ್ನು ಉತ್ತರದಲ್ಲಿ ಮೂಕಾಂಬಿಕಾ ಮತ್ತು ಸೋಮೇಶ್ವರ ಅಭಯಾರಣ್ಯಗಳ ಹೆಸರಿನಲ್ಲೂ ದಕ್ಷಿಣದಲ್ಲಿ ಪುಷ್ಪಗಿರಿ ಹೆಸರಿನಲ್ಲೂ ಸಂಘಟಿಸುತ್ತಿದ್ದಾರೆ. ಈ ಪುಷ್ಪಗಿರಿ ಮತ್ತು ಕುದುರೆಮುಖಗಳ ನಡುವಣ ಅಸ್ಪಷ್ಟ ವನ-ಕೊಂಡಿಯಲ್ಲೇ ಕ್ರಮವಾಗಿ ಬಿಸಿಲೆ, ಶಿರಾಡಿ, ಮತ್ತು ಚಾರ್ಮಾಡಿ ಘಾಟಿದಾರಿಗಳೂ ಮಂಗಳೂರು ಹಾಸನ ರೈಲುದಾರಿಯೂ ಮುಖ್ಯವಾಗಿ ಚಾಚಿಕೊಂಡಿವೆ. ಈ ಉದ್ದಕ್ಕೂ ಏಕವಾಗಿದ್ದ ಹಸುರುವಲಯ ಮತ್ತು ತಮ್ಮ ರೂಢಿಗತ ಅಖಂಡ ಜಾಡುಗಳನ್ನೇ ಮುಗ್ಧವಾಗಿ ನೆಚ್ಚಿ ಅನುಸರಿಸಲೆಳೆಸುವ ಜೀವಿಗಳೇ (ತಮ್ಮ ಗಾತ್ರದಿಂದ ಮುಖ್ಯವಾಗಿ ಕಾಣುವುದು ಆನೆಗಳು) ಇಂದು ‘ದಾಂಧಲೆ ನಡೆಸುವ ದುಷ್ಟಮೃಗಗಳು’. ಇವುಗಳ ನೋವು, ಇಷ್ಟೂ ಕಾಣಿಸಿಕೊಳ್ಳದೆ ಇದ್ದಲ್ಲೇ ನಶಿಸಿ ಹೋದ ಅಸಂಖ್ಯ ಜೀವವೈವಿಧ್ಯದ ಪರಿಪೂರ್ಣ ಅಧ್ಯಯನಗಳಿರಲಿ, ಕನಿಷ್ಠ ವ್ಯಾಪಕ ದಾಖಲಾತಿಯೂ ಇಲ್ಲವೆಂದರೆ ಅತಿಶಯೋಕ್ತಿಯಾಗದು. ಈ ಎಚ್ಚರವನ್ನಿಟ್ಟುಕೊಂಡು ಈ ವಲಯದಲ್ಲಿ ಬರಿಯ ಚಾರಣ ಮಾಡಿದರೂ (ವಾಹನದಲ್ಲಿ ಮಾರ್ಗಕ್ರಮಣ ಮಾಡಿದರೂ) ‘ದಿವ್ಯ ಜ್ಞಾನ’ ಒದಗುವುದರಲ್ಲಿ ಸಂಶಯವಿಲ್ಲ. ಈವರೆಗೆ ನಾವು ಕೈಗೊಂಡ ಕೆಲವು ಚಾರಣ ಕಥನವನ್ನು ಗಂಗಡಿಕಲ್ಲು, ಕರಡಿಬೆಟ್ಟ, ಪಾಂಡರಮಕ್ಕಿ ಮುಂತಾದವಕ್ಕೆ ಸ್ವತಂತ್ರವಾಗಿ ಅನ್ವಯಿಸಿ ವಿವರಿಸಿದ್ದರೆ ಈ ಬಾರಿ ಕೇವಲ ಬಿಸಿಲೆ ದಾರಿಯ ಆಸುಪಾಸಿನ ಹಲವು ಚಾರಣಗಳ ಅನುಭವ ಮೊತ್ತವನ್ನು ಬಿಡಿ ಚಿತ್ರಗಳಲ್ಲಿ ಹಿಡಿದಿಡಲು ಪ್ರಯತ್ನಿಸುತ್ತೇನೆ. ಕೆಲವು ಹರಿವುಗಳ ಅಡ್ಡ ಹಾಯುವ ಇದಕ್ಕೂ ಅನ್ವಯಿಸುವಂತೆ ಮೊದಲ ಕಥನ...
   
ಅಡ್ಡಹೊಳೆ ಸಂಕದಿಂದಾಚೆ

ಬ್ರಿಟಿಷರ ಕಾಲದಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ಬಿಸಿಲೆ ಕುಗ್ರಾಮದ ಮೂಲಕ ಘಟ್ಟ ಏರಿ ಸಕಲೇಶಪುರ, ಹಾಸನದತ್ತ ನಡೆದೋ ಎತ್ತಿನ ಗಾಡಿ ಕಟ್ಟಿಯೋ ಪ್ರಯಾಣಿಸುವವರಿಗೆ ಮೊದಲ ಪಾದದಲ್ಲೇ (ಅಥವಾ ಇಳಿದು ಬರುವವರಿಗೆ ಕೊನೆಯ ಪಾದದಲ್ಲಿ) ಕುಮಾರಧಾರಾ ಹೊಳೆ ಒಂದು ಕಠಿಣ ಸವಾಲು. ನೇರ ಕುಮಾರಪರ್ವತದ ಬುಡ ಸುತ್ತುವರಿದು ಬರುವ ಈ ನೀರಮೊತ್ತ, ಸೆಳೆತ, ಎಲ್ಲಕ್ಕೂ ಮಿಗಿಲಾಗಿ ಭಾರೀ ಬಂಡೆಗುಂಡುಗಳು ಗಿಡಿದ ಪಾತ್ರೆಯನ್ನು ಎಲ್ಲೆಂದರಲ್ಲಿ ದಾಟುವುದಾಗಲೀ ಅನುಸರಿಸಿ ನಡೆಯುವುದಾಗಲೀ ಕಷ್ಟದ ಮಾತಾಗಿತ್ತು. ಸಹಜವಾಗಿ ಆರೇಳು ಮೈಲು ದೂರದ, ಅಂದರೆ ಇಲ್ಲಿ ಹೇಳ ಹೊರಟಿರುವ, ‘ಅಡ್ಡಹೊಳೆ’ ಸಂಗಮದ ಬಳಿ, ಹೊಳೆಪಾತ್ರೆ ಹೆಚ್ಚು ವಿಸ್ತಾರವಾಗಿರುವುದನ್ನು ಗುರುತಿಸಿಕೊಂಡಿದ್ದರು. (ಆಗ ಇಂದಿನ ‘ಮಹಾಮಹಿಮ ಬೂದಿಚೌಡಿ’ ಕಲ್ಲನ್ನು ಈ ಸಂಗಮಕ್ಕೆ ಸಾಕ್ಷಿ ಕಲ್ಲಾಗಿ ಊರಿದ್ದಿರಬೇಕು.) ಇಂದಿಗೂ ಮಳೆ ದೂರವಾದ ನಾಲ್ಕೈದು ತಿಂಗಳಲ್ಲಷ್ಟೇ ಇಲ್ಲಿ ಹೊಳೆಯನ್ನು ಕಷ್ಟದಲ್ಲಿ (ದೋಣಿ, ಸೇತುವೆ ಇಲ್ಲದೇ) ನಡೆದು ದಾಟಬಹುದು. ಮತ್ತೂ ಈ ಜಾಡು ಬಹಳ ದೂರದವರೆಗೆ ಎಡ ಮಗ್ಗುಲಲ್ಲಿ ಈ ಅಡ್ಡಹೊಳೆಯ ಸಾಂಗತ್ಯ ಉಳಿಸಿಕೊಳ್ಳುವುದನ್ನೂ ಕಾಣಬಹುದು. ಆ ಜಾಡೂ ಒಂದು ಕುತೂಹಲಕಾರಿ ಚಾರಣಾವಕಾಶವನ್ನು ತೆರೆದಿಟ್ಟಿದೆ, ಇನ್ನೆಂದಾದರೂ ವಿಸ್ತರಿಸುತ್ತೇನೆ. ಇಂದು ಬಿಸಿಲೆಯ ವಾಹನಮಾರ್ಗದಲ್ಲಿ ಏರು ದಾರಿ ಹಿಡಿದವರಿಗೆ ಈ ಅಡ್ಡಹೊಳೆ ಬೂದಿಚೌಡಿಯಿಂದಲೂ ಸುಮಾರು ಏಳು ಕಿಮೀ ಮೇಲಷ್ಟೇ ದರ್ಶನ ಕೊಡುತ್ತದೆ. (ಸಾಕ್ಷಿಕಲ್ಲು ಭೌತಿಕವಾಗಿ ಹಿಂದುಳಿದರೂ ಅಧಿಭೌತಿಕ ನೆಲೆಯಲ್ಲಿ ಸ್ಥಾನಗಿಟ್ಟಿಸಿರುವುದು ವರ್ತಮಾನ ಕಾಲದಲ್ಲಿ ಮೌಲ್ಯಗಳಿಗೆ ಹಿಡಿದ ಕಿಲುಬಿಗೆ ಸಾಕ್ಷಿ ಎನ್ನುವುದರಲ್ಲಿ ಎರಡು ಮಾತಿಲ್ಲ!)

ಕುಮಾರಧಾರೆಯ ದೊಡ್ಡ ಪಾತ್ರೆಗೆ ಸೇರಿಹೋಗುವ ಅಸಂಖ್ಯ ಹರಿವುಗಳಲ್ಲಿ ‘ಅಡ್ಡಹೊಳೆ’ ಒಂದು. ಇದೊಂದು ಹೆಸರಲ್ಲದ ಹೆಸರು; ಮುಖ್ಯ ಹರಿವಿಗೆ (ಅದು ಇನ್ನೊಂದೇ ಹೊಳೆಯಿರಬಹುದು, ದಾರಿಗೂ ಆಗಬಹುದು) ಅಡ್ಡಾಗುವ ನೀರೆಲ್ಲಾ ಇದೇ ಅಲ್ಲವೇ. ನನಗೇ ತಿಳಿದಂತೆ ಶಿರಾಡಿ ಘಾಟಿಯಲ್ಲೂ ಇನ್ನೊಂದು ಅಡ್ಡಹೊಳೆ ಇದೆ, ಬಿಡಿ. ಬಿಸಿಲೆದಾರಿಗೆ ಅಡ್ಡ ಸಿಗುವ ಏಕೈಕ ಘನಹೊಳೆ - ಅಡ್ಡಹೊಳೆ; ಸ್ಪಷ್ಟ ಅನ್ವರ್ಥನಾಮ. ನನ್ನ ಮೊದಲ ಭೇಟಿ ಕಾಲದಲ್ಲಿ, ದಾರಿ ಅಲ್ಲಲ್ಲಿ ಸಿಗುವ ತೊರೆ ಝರಿಗಳ ಪಾತ್ರೆಗೆ ಇಳಿದು ದಾಟಿದರೂ (ಈಗ ಹೆಚ್ಚಿನವೆಲ್ಲ ಕಿರು ಸೇತುವೆಗಳಾಗಿವೆ) ಅಡ್ಡಹೊಳೆಯನ್ನು ಮಾತ್ರ ಭರ್ಜರಿ ಕಬ್ಬಿಣ ಹಂದರದ ಸೇತುವೆಯ ಮೇಲೇ ದಾಟಿತ್ತು. ಘಟ್ಟದ ಮೇಲಿನ ಯಾರೋ ಹಿಂದು ಅರಸನ (ಮಂಜರಾಬಾದ್ ಕೋಟೆ ವಲಯದವನಿರಬೇಕು) ಕುಕ್ಕೆ ಕ್ಷೇತ್ರ ದರ್ಶನಕ್ಕೆ ಅನುಕೂಲವಾಗುವಂತೆ ಬ್ರಿಟಿಷರು ರೂಪಿಸಿದ ದಾರಿಯ ಭಾಗವಾಗಿಯೇ ಬಂದದ್ದು ಇನ್ನೂ ಉಳಿದಿತ್ತು. ಘಟ್ಟದ ಮೇಲ್ಕೊನೆಯಲ್ಲಿ ಈ ದಾರಿ ಶಿರಾಡಿಯ ಹೆದ್ದಾರಿಯನ್ನೇ ಸೇರುತ್ತದೆ. ಮತ್ತಿದು ಒಂದು ಶ್ರೇಣಿಯೀಚೆ, ಅದಕ್ಕೆ ಹೆಚ್ಚುಕಡಿಮೆ ಸಮಾನಾಂತದರದಲ್ಲೇ ಘಟ್ಟವನ್ನೂ ಇಳಿಯುತ್ತದೆ. ಇದರಲ್ಲಿ ವಿಪರೀತ ಸುತ್ತುಬಳಸುಗಳಿಲ್ಲ, ಗೋಡೆ ಪ್ರಪಾತಗಳೂ ಇಲ್ಲ. ಆದರೂ ಲಕ್ಷ್ಯ ಸಾಧನೆಯಲ್ಲಿ ಈ ದಾರಿ ಕೊನೆಗೆ ಮಂಗಳೂರಿನಂತ ವಾಣಿಜ್ಯ ಕೇಂದ್ರವಿಲ್ಲದುದರಿಂದ ಇದರ ಸ್ಥಾನಮಾನ ಸಣ್ಣದಾಗಿಯೇ ಉಳಿದು, ಉಪಯುಕ್ತತೆ ಕಡಿಮೆಯಾಗಿ, ಆರೈಕೆ ಇಲ್ಲದಾಗಿ, ಋತುಮಾನಗಳ ಸವಕಳಿ ನಿರ್ದಯಿಯಾಗಿ ಹೆಚ್ಚುಕಡಿಮೆ ಮರವೆಗೇ ಸಂದು ಹೋಗಿತ್ತು. 

ವರ್ತಮಾನದ ಅಭಿವೃದ್ಧಿಯ ಪ್ರಚ್ಛನ್ನ ವ್ಯಕ್ತಿ ಸ್ವಾರ್ಥಗಳು (ಆರ್ಥಿಕ ಹಾಗೂ ರಾಜಕೀಯ) ಬಿಸಿಲೆ ದಾರಿಯನ್ನೂ ಕಂಡುಕೊಂಡಮೇಲೆ ಜೀರ್ಣೋದ್ಧಾರದ ಅಲೆಗಳು, ಸುದ್ದಿಪುಟದ ವಿಶಿಷ್ಟ ಅಂಕಗಳು ಒಂದರಿಂದೊಂದು ಘನವಾಗಿ ಸರಿಯುತ್ತಲೇ ಇವೆ. ಹೀಗೆ ದಾರಿ ಸಣ್ಣಪುಟ್ಟದಾಗಿ ತೆರೆದುಕೊಂಡಾಗೆಲ್ಲಾ ಸುಬ್ರಹ್ಮಣ್ಯನ ಭಕ್ತಾದಿಗಳು, ಪ್ರಕೃತಿ-ಸಾಹಸ ಪ್ರಿಯರು, ಹೆದ್ದಾರಿಯಲ್ಲಿನ ‘ಸುಂಕದ ಕಟ್ಟೆ’ಗೆ ಮಂಕಾಡಿಸುವವರು, ಕಳ್ಳಬೇಟೆಯವರೇ ಮುಂತಾದವರು ಧಾರಾಳ ಬಳಸುತ್ತಲೇ ಬಂದರು. ಆಗೆಲ್ಲೋ ನುಗ್ಗಿದ ಲಾರಿ ಗುದ್ದಿಯೋ ಇಲ್ಲಾ ಹೊಳೆ ನೀರ ಅಬ್ಬರಕ್ಕೋ ಸಿಕ್ಕೋ ಅಡ್ಡಹೊಳೆಯ ಬಿಂಕ ಮುರಿದ ಬ್ರಿಟಿಷರ ಸಂಕ ಕುಸಿದಿತ್ತು. ನನ್ನ ಮೊದಲ ಬಿಸಿಲೆ ಭೇಟಿಯ ಕಾಲಕ್ಕೆ ನಾನು ನಾಗರಿಕರನ್ನು ಕಾಡುಬೆಟ್ಟಕ್ಕೆ ಚಾರಣಕ್ಕೆ ಹೋಗಲು ದೊಡ್ಡ ಬಾಯಿಯ ಪ್ರಚಾರಕನಾಗಿದ್ದೆ. “ಸಂದ ತಪ್ಪುಗಳ ಇಂದಿನ ಕೂಸು ನಾವು. ಗತ ಮೌಲ್ಯಗಳನ್ನು ಉಪೇಕ್ಷಿಸುವ ಅತಿರೇಕಕ್ಕಿಂತ ವರ್ತಮಾನದ ವಿವೇಚನೆಗೊಳಪಡಿಸಿ, ಬಿಸಿಲೇ ಘಾಟಿದಾರಿ ಉಳಿಸಿಕೊಳ್ಳಬೇಕು” ಎಂದು ಶಿಫಾರಸು ಕೂಡಾ ಕೊಟ್ಟಿದ್ದೆ. ಆದರೆ ಸೇತುವೆ ಜಖಂಗೊಂಡ ಕಾಲಕ್ಕಾಗುವಾಗ ಅಶಿಕ್ಷಿತ ನಾಗರಿಕರಿಂದ ಪ್ರಾಕೃತಿಕ ಸ್ಥಿತಿಗಾಗುವ ಹಾನಿಯ ಕುರಿತು ಜಾಗೃತನಾಗಿ ‘ಪರಿಸರ ಪಾಠಕನೇ’ ಆಗಿದ್ದೆ! “ಗ್ರೀನ್ ಪೀಸ್ (ವಿಶ್ವಖ್ಯಾತ ಪರಿಸರ ಹೋರಾಟಗಾರರ ಬಳಗ. ಇವರು ಒಳ್ಳೆಯ ಪರಿಸರಕ್ಕಾಗಿ ಭಯೋತ್ಪಾದನೆಯನ್ನೂ ನಿರಾಕರಿಸಿದವರಲ್ಲ!) ಕ್ರಾಂತಿಯಂತೆ ಅಡ್ಡಹೊಳೆ ಸಂಕವನ್ನು ಯಾರಾದರೂ ಉಡಾಯಿಸಬಾರದೇ” ಎಂದು ಹಲುಬಿದ್ದು ಆಯ್ತು. ಸದ್ಯ ಕಣ್ಗಾಪು ಕಟ್ಟಿದ ಅಭಿವೃದ್ದಿ ಇಲ್ಲಿಗೆ ತಂದ ವೃಣ-ಮುಖಗಳ ಪಟ್ಟಿ ಬಿಡಿಸದೆ, ಗುಣ-ಮುಖದಲ್ಲಿ ಅಡ್ಡಹೊಳೆಯ ಆಸುಪಾಸಿನ ನಮ್ಮ ಕೆಲವು ಈಚಿನ ಚಾರಣದೊಡನೆ ಸಿಕ್ಕ ಅದ್ಭುತಗಳನ್ನು ಹಂಚಿಕೊಳ್ಳಬಯಸುತ್ತೇನೆ.

ಅಡ್ಡಹೊಳೆಗೆ ಹೊಸ ಸಂಕ ರಚನೆಯಾಗುವ ಕಾಲಕ್ಕೆ ಒಂದು ಮೂಲೆಯಲ್ಲಿ ಹೊಳೆಯ ಪಾತ್ರೆಗೆ ಇಳಿಯಲು ಸ್ಪಷ್ಟ ಜಾಡು ಮಾಡಿದ್ದಾರೆ. ಅದರಲ್ಲಿಳಿದು ಹರಿವಿನ ಎದುರು ದಿಕ್ಕಿಗೆ ಭಾರೀ ಒಣ ಬಂಡೆಗಳ ಸರಣಿ ಹುಡುಕುತ್ತಾ ಸಾಗುವುದು ನಿಜಕ್ಕೂ ರೋಮಾಂಚಕಾರಿ ಅನುಭವ. ಆದರೆ ನಾವು ಪ್ರತಿ ಬಾರಿಯೂ ಅನ್ಯ ಓಡಾಟಗಳ ಕೊನೆಯಲ್ಲಿ, ಕೇವಲ ಹೊಳೆ ಸ್ನಾನಕ್ಕಷ್ಟೇ ಇಲ್ಲಿ ಸಮಯ ಉಳಿಸಿಕೊಳ್ಳುತ್ತಿದ್ದುದರಿಂದ ನೂರಿನ್ನೂರು ಮೀಟರ್ ಆಚೆಗೆ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ. ಆ ಅವಕಾಶಗಳಲ್ಲೂ ಪ್ರಧಾನಧಾರೆಗೆ ಇಳಿಯದೆ, ಆಚೀಚಿನ ಕೆಲವು ವಿಸ್ತಾರ ಮಡುಗಳಲ್ಲಿ ‘ಜಲಕೇಳಿ’ಯಾಡಿ, ಬಲದಂಡೆಯ ಕಲ್ಲ ಕೊರಕಲುಗಳಲ್ಲಿದ್ದ ಗುಹೆಗಳ ಬಗ್ಗೆ ಕುತೂಹಲದ ದೃಷ್ಟಿ ಹಾಕುವುದಷ್ಟೇ ಸಾಧ್ಯವಾಗಿತ್ತು. ಇನ್ನೂ ಮೇಲಿನ ಪಾತ್ರೆಯಲ್ಲಿರಬಹುದಾದ ಜಲಪಾತ ವೈವಿಧ್ಯ, ಕಣಿವೆಯ ಒಟ್ಟಾರೆ ಪ್ರಾಕೃತಿಕ ವೈವಿಧ್ಯಗಳ ಬಗ್ಗೆ (ಅಪೂರ್ವಕ್ಕೆ ಸಿಕ್ಕ ಸ್ಥಳಿಯರಿಂದ) ಕೆಲವು ಕಥೆಗಳನ್ನೇನೋ ಸಂಗ್ರಹಿಸಿದ್ದೆವು. ಆ ವಲಯದಲ್ಲಿ ವರ್ಷಪೂರ್ತಿ ಬಲು ವರ್ಣಗಳನ್ನು ಮುಡಿಯುತ್ತ, ಮುದುಡುತ್ತ, ಕಲಕಲಿಸುವ ಚಿರಂತನ ಕಿರುತೊರೆಗಳ ನೆನಪು, ಒತ್ತಿನಿಂತ ಹೆಮ್ಮರದಿಂದ ತೊಡಗಿ ಕೇವಲ ಕಂಪಿನಲ್ಲೇ ಇರವನ್ನು ಸಾರುವ ಸೀತಾಳೆಗಳವರೆಗಿನ ಹಸುರಿನ ಮೋಹ, ಆಕಸ್ಮಿಕವಾಗಿಯೇ ಆದರೂ ಕಾಣಸಿಕ್ಕ ಮರನಾಯಿಯಿಂದ ಹಿಡಿದು ಚಿಟ್ಟೆ ಹಕ್ಕಿ ಹಾವು ಮಂಗ ಕೆಂಜಳಿಲು ಕರಡಿ ಆನೆಗಳೇ ಮೊದಲಾದ ದರ್ಶನಗಳು ಸಾಧ್ಯವಾದಂತೆ ಇದ್ದರೂ ಇಲ್ಲದಂತಿರುವ ಚಿರತೆ ಹುಲಿಯೇ ಮುಂತಾದ ಜೀವವೈವಿಧ್ಯಗಳ ಖಜಾನೆಯರಸುವ ಆಸೆ, ಯಾವ ಸ್ಪಷ್ಟ ಶಿಖರ ಅಥವಾ ಪಥಗಳ ಗೋಜಿಲ್ಲದೆ ಕಾಡಿನಲ್ಲಿ ‘ಕಳೆದುಹೋಗುವ’ ಪ್ರಯತ್ನಗಳ ಕೆಲವು ಬಿಡಿಚಿತ್ರಗಳನ್ನು ಮುಂದಿನ ಕಂತಿನಲ್ಲಿ ಸಂಕಲಿಸುತ್ತೇನೆ.

(ಎರಡನೇ ಕಂತಿಗೆ ಮುಂದುವರಿಯಲಿದೆ)

9 comments:

 1. Dear Sir,
  I never knew that Karanth was an engineer. But his interest in wild life has won him laurels. We feel proud to know that he is instrumental in forming Kuduremukha Abhayaranya.
  Your trekking experiences are inspire us to trek the path.
  Bedre Manjunath

  ReplyDelete
 2. Priya Ashokre,
  namma Gattada mElina Butagalu ilidu banda bisile, Sankaracaryara kAladallU upoyogisuttidda bisle yannu hIgalevrE? rao

  ReplyDelete
  Replies
  1. ಪ್ರಿಯ rao ಅವರೇ
   ನೀವು ನಮ್ಮ ಕೆ.ಪಿ. ರಾಯರೆಂದೇ ಭಾವಿಸುತ್ತೇನೆ.
   ಸ್ವಾಮೀ ನಿಮ್ಮ ಒಂದೇ ವಾಕ್ಯದ ಪ್ರತಿಕ್ರಿಯೆ ಏನೋ ಹಾಸ್ಯದ ಮಾತಾಗಿ ಸಾಮಾನ್ಯರಲ್ಲಿ ಕಳೆದುಹೋಗುವ ಸಾಧ್ಯತೆಯಿದೆ. ಆದರೆ ನಿಮ್ಮ ಓದು (ಅಧ್ಯಯನ), ಓಡಾಟಗಳ (ಲೋಕಾನುಭವ) ಅಲ್ಪ ಸ್ವಲ್ಪ ಪರಿಚಯವಿರುವ ನಾನು ಲಘುವಾಗಿ ಗಣಿಸಲಾರೆ.ದಯವಿಟ್ಟು ’ಗಣಕ-ಕನ್ನಡ’ದ ಮೂಲಪುರುಷರಾದ ನೀವು ಕನ್ನಡದಲ್ಲೇ ನಿಮ್ಮ ಸೂಚನೆಗಳನ್ನು ಅವಶ್ಯ ವಿಸ್ತರಿಸಿ, ಈ ಜಾಲತಾಣದ ತೂಕ ಹೆಚ್ಚಿಸಬೇಕಾಗಿ ಕೇಳಿಕೊಳ್ಳುತ್ತೇನೆ.
   ಅಶೋಕವರ್ಧನ

   Delete
 3. ೨೦೦೦ರಲ್ಲಿ ನ್ಯೂಯಾರ್ಕ್ ನಗರದ ಜಲವಿಹಾರಕ್ಕೆ(ಆಕ್ವೇರಿಯಂ) ಹೋಗಿದ್ದಾಗ ಅಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ವನ್ಯ ಪ್ರಾಣಿ ಸಂರಕ್ಷಣೆಯ ತಾಣಗಳ ನಕ್ಷೆಯನ್ನು ಪ್ರದರ್ಶಿಸಿರುವುದನ್ನು ನೋಡಿದ್ದೆ.ಅದರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಉಲ್ಲಾಸ ಕಾರಂತರು ನಡೆಸುತ್ತಿರುವ ಹುಲಿ ಸಂರಕ್ಷಣೆಯ ಯೋಜನೆಯ ವಿವರವಿದ್ದುದನ್ನು ನೋಡಿ ತುಂಬ ಸಂತೋಪಟ್ಟಿದ್ದೆ. ಇಂದು ಉಲ್ಲಾಸ ಕಾರಂತರ ಪ್ರಯತ್ನಕ್ಕೆ ಪದ್ಮಶ್ರೀ ಗೌರವ ಸಂದಿರುವುದು ಅಭಿಮಾನದ ಸಂಗತಿ. ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಸ್ಥಳಿಯ ಪತ್ರಿಕೆಯೊಂದರ ಅಪಸ್ವರ ಇನ್ನಾದರೂ ನಿಂತೀತು. ಪಂಡಿತಾರಾಧ್ಯ ಮೈಸೂರು

  ReplyDelete
 4. Dear sir,

  Ullas Karanth sir deserved this recognigtion..I hope he receives many more in days to come...

  ReplyDelete
 5. ಇಂದು ಉಲ್ಲಾಸ ಕಾರಂತ ಅಂದ್ರೆ - ನಮ್ಮ ನಮ್ಮ ದೇಶಕ್ಕೇ ಅವರೊಬ್ಬ "ಹುಲಿ ಕಾರಂತರು". ಇಂದು ಅವರಿಗೆ ಸಿಕ್ಕ ಪ್ರಶಸ್ತಿ ನಮಗೆಲ್ಲಾ ಹೆಮ್ಮೆ ತಂದಿದೆ. ಈ ಪ್ರಶಸ್ತಿ ಅವರಿಗೆ ಬಹಳ ಹಿಂದೆಯೇ ಸಲ್ಲಬೇಕಿತ್ತು. ಇಂದಾದರೂ ಸಂದಿದೆಯಲ್ಲಾ! - ಎಂದು ಸಂತೋಷ ಪಡುತ್ತಾ ಇದ್ದೇವೆ. Tiger is a very shy animal; so is our Ullas Karanth. ಹುಲಿರಾಯನ ಹೆಜ್ಜೆಗೆ ಮತ್ತು ಅವನ ಉಳಿವಿಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕಾರಂತರಿಗೆ ಇಂದು ಸಲ್ಲುತ್ತಿರುವ ಪದ್ಮ ಶ್ರೀ ಪ್ರಶಸ್ತಿಯನ್ನು "ಇಂದು ಬದುಕಿ ಉಸಿರೆಳೆಯುತ್ತಾ ಇರುವ ಹುಲಿಗಳು" ಈಗಾಗಲೇ ನೀಡಿವೆ. ಅವರ ಬೆನ್ನ ಹಿಂದೆ ನಿಂತ ಕಟ್ಟಾಳು ಚಿಣ್ಣಪ್ಪ, ನಿಜ ಪರಿಸರ ಪ್ರೇಮಿ ನಿರೇನ್ ಜೈನ್ ಹಾಗೂ ಹುಲಿಗಳ ಸಂಖ್ಯೆಯ ವರ್ಧನೆಗೆ ಅವರೊಂದಿಗೆ ಕೈಜೋಡಿಸಿದ 'ಪುಸ್ತಕ ಪರ್ವತ ವರ್ಧನ' ಮುಂತಾದ ಹಲವು ಜನರು ಈ ಪ್ರಶಸ್ತಿಯ ಸಂತೋಷದಲ್ಲಿ ಭಾಗಿಗಳಾಗಿದ್ದಾರೆ. ತಮ್ಮೆಲ್ಲರ ಸಂತೋಷದಲ್ಲಿ ನಾನೂ ಭಾಗಿ. ವಂದನೆಗಳು.

  ReplyDelete
 6. ನಮ್ಮ ಪದ್ಮನಾಭಣ್ಣ (ಕೆ. ಪಿ. ರಾವ್) ಒಂದು ರಾತ್ರೆ ನಮಗೆ ಘಟ್ಟದಿಂದ ಬಿಸಿಲೆ ಇಳಿದುಬಂದ ಭೂತಗಳ ಕಥೆ ಹೇಳಿದ್ದ.
  ಶಂಕರ ಭಗವತ್ಪಾದರೂ ಬಿಸಿಲೆ ಇಳಿದುಬಂದ ಕಥೆ ಹೇಳಿದ್ದ.
  ಬಹಳಷ್ಟು ಇಂಥಹಾ ಹಿತವಾದ ಕಥೆಗಳನ್ನು ಪುನಃ ಕೇಳುವ ಆಸೆ ಆಗಿದೆ.
  ಕಾಳಿಂಗ ಹಾವಿನ "ತರಗೆಲೆ ಗೂಡಿನ ಕಥೆ" ಇನ್ನೂ ರೋಚಕ! ಮಳೆ ಬಿದ್ದು ಕೊಳೆಯುವ ದರಗು ಎಲೆಗಳ ಬಿಸಿಗೇ ಕಾಳಿಂಗ ಹಾವಿನ ಮೊಟ್ಟೆಗಳು ಮರಿಗಳಾಗುತ್ತ್ತ್ತವಂತೆ.
  ಈ ಸಂಗತಿಗಳನ್ನೆಲ್ಲಾ ಕೇಳಿದ ಮೇಲೆ ನನ್ನ ಪತ್ನಿ ಬಿಸಿಲೆ ಘಾಟಿಯ ಸಮೀಪ ಹೋಗಲು ಕೂಡಾ ಒಪ್ಪಿಗೆ ಇತ್ತಿಲ್ಲ.
  ಅಲ್ಲಿ ಭೂತ, ಕಾಳಿಂಗ ಇದ್ದಾವೆ! ಭಗವತ್ಪಾದರೇ ಕಾಪಾಡಬೇಕು! - ಅನ್ನುತ್ತಾ ದೂರದಿಂದ ಕೈ ಮುಗಿಯುತ್ತಿದ್ದಾಳೆ.

  ಅಶೋಕ ವರ್ಧನರೇ! ಪದ್ಮನಾಭಣ್ಣನ ಹಸ್ತ ಒಂದು ಪುಸ್ಯಕ ಬರೆಸಿ.
  ಅವನು ಕೂಡಾ ಒಂದು SHY ವಿದ್ವಾಂಸ.

  ಪ್ರೀತಿಯಿಂದ

  ಪೆಜತ್ತಾಯ ಎಸ್. ಎಮ್.

  ReplyDelete
  Replies
  1. elladakkU kAla barabEkU - rao

   Delete
 7. ಉಲ್ಲಾಸರಿಗೆ ಪದ್ಮಶ್ರೀ ಸಿಕ್ಕಿದ್ದು ತುಂಬಾ ಸಂತೋಷ ಅಯಿತು. ನನ್ನ ಅನಿಸಿಕೆಯಲ್ಲಿ ಉಲ್ಲಾಸ್ ಆ ಪ್ರಷಸ್ತಿಯನ್ನು ಮಿರಿದವರು! ಜಾರ್ಜ ಶಲರ್ ಅಂತವರು ಉಲ್ಲಸರನ್ನು ಶ್ಲಾಘನೆ ಮಾಡಿದ ಮಾತಿಗಿರುವ ಬೆಲೆಯ ಮುಂದೆ ಇದು ಹೆಚ್ಚಿನದೆಂದು ಕಾಣುವುದೇ ಇಲ್ಲ. ನಿಜದಲ್ಲಿ ಉಲ್ಲಾಸ್ ಮಾಡಿದ ಶಿಫಾರಸುಗಳನ್ನು ಸರಕಾರ ಸ್ವೀಕರಿಸಿ, ಕ್ರಿಯಾತ್ಮಕವಾದರೆ ಪ್ರಶಸ್ತಿಗಿಂತ ದೊಡ್ಡ ಭೂಷಣವಾಗುತ್ತಿತ್ತು.
  ಬಿ.ಕೆ ಶರತ್

  ReplyDelete