01 January 2012

ಕುಮಾರವ್ಯಾಸ ನೃತ್ಯ ಭಾರತ

[ಕುಬ್ಜ ಚಿತ್ರಕ್ಕೆ ತೋರದ ಚೌಕಟ್ಟು]

ಅದೊ೦ದು ಮಧ್ಯಾಹ್ನ ಅ೦ಗಡಿ ಬಾಗಿಲಡಿಯಲ್ಲಿ ತೂರಿದ್ದ ಕರೆಯೋಲೆ ಸಿಕ್ಕಿತು - ವಿದುಷಿ ಭ್ರಮರಿ ಶಿವಪ್ರಕಾಶ್ ಪ್ರಸ್ತುತ ಪಡಿಸುವ ‘ಕುಮಾರವ್ಯಾಸ ನೃತ್ಯ ಭಾರತ. ಬೆ೦ಬತ್ತಿದ೦ತೆ ಭ್ರಮರಿಯವರ ದೂರವಾಣಿ ಕರೆಯೂ ಬ೦ತು. ಹೆಚ್ಚಿನ ಒತ್ತಡ ತರುವಂತೆ ಕಾರ್ಕಳದಿ೦ದ ಪ್ರೊ| ಎ೦. ರಾಮಚ೦ದ್ರರ ದೂರವಾಣಿ ಅ೦ದು ನಿಮ್ಮಲ್ಲಿ ಮರುದಿನ ನಮ್ಮಲ್ಲಿ. ಅವಶ್ಯ ನೋಡಿ ಕುಮಾರವ್ಯಾಸ ನೃತ್ಯ ಭಾರತ. ಅಧ್ಯಾಪಕ, ಕವಿ, ಕತೆಗಾರ, ನಾಟಕಕಾರ, ನಟ, ರಂಗನಿರ್ದೇಶಕ ಎಂಬಿತ್ಯಾದಿ ಬಹುಮುಖೀ ಆಸಕ್ತಿಗಳ ಮತ್ತು ಸದಾ ಕ್ರಿಯಾಶೀಲ ಪ್ರೊ| ಉದ್ಯಾವರ ಮಾಧವಾಚಾರ್ಯರ ಮಗಳು ಈ ಭ್ರಮರಿ ಎನ್ನುವುದು ನನಗೆ ತಿಳಿದೇ ಇತ್ತು. ಅವೆಲ್ಲದರ ಮೇಲೆ ನನ್ನ ನೆನಪಿನಾಳದ ನೂರೊಂದು ರಮ್ಯ ಪೌರಾಣಿಕ ರಂಗಪ್ರಸ್ತುತಿಗಳೂ ಮೇಲೆದ್ದು ಪ್ರಭಾವಿಸಿದವು ಎನ್ನುವುದನ್ನೂ ಇಲ್ಲೇ ಹೇಳಿಬಿಡಬೇಕು. ಸುಮಾರು ಎರಡು ದಶಕಗಳ ಹಿಂದೆ ಪದ್ಮಾಸುಬ್ರಹ್ಮಣ್ಯಂ ಕೊಟ್ಟ ರಾಮಾಯ ತುಭ್ಯಂ ನಮಃ ಮತ್ತು ಕೃಷ್ಣಾಯ ತುಭ್ಯಂ ನಮಃ ಉಂಟುಮಾಡಿದ ಧನ್ಯತೆ ಚಿರಂಜೀವಿ. ಮುಂದುವರಿದ ದಿನಗಳಲ್ಲಿ ನೀನಾಸಂ ಕೊಟ್ಟ ಕುಮಾರವ್ಯಾಸ ಭಾರತದ್ದೇ ರಂಗಪ್ರಸ್ತುತಿ - ಸೀಮಿತ ಅವಧಿಯಲ್ಲಿ, ಸಮಗ್ರ ಕಥಾನಿರೂಪಣೆಗೆ ಕೊರತೆ ಬಾರದಂತೆ ಆಯ್ದ ಕಾವ್ಯ ಭಾಗಗಳನ್ನು ಒಂದೂ ಪ್ರಕ್ಷಿಪ್ತ ತಾರದೆ ರಂಗಕ್ಕಳವಡಿಸಿದ್ದು, ನೆನೆಸಿದರೆ ಇಂದೂ ಮೈಮನ ನಲಿಯುವುದು! ‘ಇದು ರಂಗಪ್ರಯೋಗಕ್ಕಲ್ಲ ಎಂದು ಸ್ವತಃ ಲೇಖಕ ಕುವೆಂಪು ಘೋಷಿಸಿಯೇ ಪ್ರಕಟಿಸಿದ ಶೂದ್ರತಪಸ್ವಿ ನಾಟಕವನ್ನು ರಂಗಸೂಚನೆಗಳೂ ಸೇರಿದಂತೆ ಸಾರಾಸಗಟಾಗಿ ತೆಗೆದುಕೊಂಡು ರಂಗಾಯಣ ಕೊಟ್ಟ ಪ್ರದರ್ಶನ ಇನ್ನೊಂದೇ ಅದ್ಭುತ ಅನುಭವ. ಈಗಲೂ ನಡೆಯುತ್ತಲೇ ಇರುವ (ನನ್ನೆದುರು ಡೀವೀಡೀಯಲ್ಲಿಯೂ) ‘ಗಣೇಶ್-ಮಂಟಪ ಕಂಬೈನ್ಸ್ ಯಕ್ಷಗಾನ ಏಕವ್ಯಕ್ತಿ ಪ್ರಯೋಗಗಳೂ ವಿಚಾರಪರವಾಗಿ ನೋಡುವ ಯಾರೂ ಮೆಚ್ಚಿ ಅಹುದಹುದೆನ್ನಬೇಕು. ಇನ್ನೂ ಇಂತಹ ಅನೇಕರು ಅವರವರ ಸಿದ್ಧಿಗನುಗುಣವಾಗಿ ನಾಟ್ಯ, ನಾಟಕ, ಕಾವ್ಯ, ಜಾನಪದ, ಸಂಗೀತ, ಮಟ್ಟು ಮುಂತಾದವನ್ನು ಭಾವಸಂವಹನದ ಮಾಧ್ಯಮವಾಗಿ ಬಳಸಿ ಶಿಖರ ದರ್ಶನ ಮಾಡಿಸಿದ್ದಾರೆ. ಈ ಸರಕ್ಕೆ ಹೊಸತೊಂದು ಮುತ್ತು ಪೋಣಿಸುವ ಉತ್ಸಾಹದಲ್ಲಿ ನಾನು ಕೆನರಾ ಹೆಮ್ಮಕ್ಕಳ ಶಾಲೆಯ ಸಭಾಂಗಣಕ್ಕೆ ಅಂದು (೧೮-೧೨-೧೧) ಹೋಗಿದ್ದೆ.


ಭಾವಗಾಯಕ, ಗಮಕಿ ಚಂದ್ರಶೇಖರ ಕೆದ್ಲಾಯರು ಪ್ರದರ್ಶನದ ಪೀಠಿಕೆಯಿಂದ ಮಂಗಳದವರೆಗೆ ಸೂಕ್ತ ನಿರೂಪಣೆಯನ್ನು ಕೊಟ್ಟರು, ಎಂದರೆ ತೀರಾ ಗದ್ಯವಾಗುತ್ತದೆ. ಪ್ರತಿ ಸನ್ನಿವೇಶದ ಕಾವ್ಯ ಖಂಡವನ್ನು ಅರ್ಥ ಸ್ಫುಟವಾಗುವಂತೆ ಗಮಕದಲ್ಲಿ ಅರ್ಥ ಸ್ಫುಟತೆಯನ್ನೂ ರಾಗದಲ್ಲಿ ಭಾವ ಸ್ಫುಟತೆಯನ್ನೂ ತುಂಬಿದರು . ಇದು ಸಹಜವಾಗಿ ಕೇಳುಗರ ಮನೋಭೂಮಿಕೆಯನ್ನು ಮತ್ತೆ ಮತ್ತೆ ನಿರೀಕ್ಷೆಯ ಉತ್ತುಂಗಕ್ಕೊಯ್ಯುತ್ತಿತ್ತು. ನೃತ್ಯಗಾತಿಗೆ ಆವಶ್ಯಕವಾದ ಮಧ್ಯಂತರದ ವೇಳೆಯಲ್ಲಿ ಕೆದ್ಲಾಯರು ಕುವೆಂಪು ಕಂಡ ಕುಮಾರವ್ಯಾಸನಿಗೆ (ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ...) ಭಾವಗಾನದಲ್ಲಿ ಮರುಹುಟ್ಟು ಕೊಟ್ಟದ್ದಂತೂ ನಿಜಕ್ಕೂ ಸ್ಮರಣೀಯ. ಆದರೆ ಇವರೆಲ್ಲ ಕಲಾಪಗಳು ನೇರ ರಂಗಪ್ರಸ್ತುತಿಗೆ ಬಳಕೆಯಾಗದೇ ಉಳಿದದ್ದು ಸಂಯೋಜನೆಯ ಕೊರತೆಯಂತೇ ಅನಿಸಿತು. 


ಭ್ರಮರಿ, ಶಿವಪ್ರಕಾಶ್ (ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಪೂರ್ಣ ಮಗಳು, ಅಳಿಯರದೇ ಎಂದು ಸ್ವತಃ ಮಾಧವಾಚಾರ್ಯರು ಕೊನೆಯಲ್ಲಿ ಘೋಷಿಸಿದ್ದರು.) ಕುಮಾರವ್ಯಾಸ ಭಾರತದಿಂದ ಕಥಾಕ್ರಮದಲ್ಲೇ ಐದು ತುಣುಕುಗಳನ್ನು ಆಯ್ದುಕೊಂಡಿದ್ದರು; ಪೂರ್ವಾರ್ಧಕ್ಕೆ ಎರಡು, ಉತ್ತರಾರ್ಧದಲ್ಲಿ ಮೂರು. ಮೊದಲು ದಾಯಾದಿ ದ್ವೇಷದ ಮೊಳಕೆ ತೋರುವಂತೆ ಭೀಮ ದುರ್ಯೋದನರ ಬಾಲ ಜಗಳ ಮತ್ತು ಹಿಡಿಂಬೆಯ ಕಾಮುಕ ನೋಟ (ಸಂವಾದದ ಮಟ್ಟಕ್ಕೇರಲಿಲ್ಲ). ಮುಂದಿನ ಭಾಗದಲ್ಲಿ ಕೀಚಕನ ಪ್ರಣಯ ಭಿಕ್ಷೆ, ಕೃಷ್ಣ ಸಂಧಾನದ ವಿಶ್ವರೂಪ ಮತ್ತು ಯುದ್ಧಾನಂತರದ ಗಾಂಧಾರಿ ವಿಲಾಪ. ಇವುಗಳೆಷ್ಟು ಪ್ರಾತಿನಿಧಿಕ ಎನ್ನುವ ಪ್ರಶ್ನೆ ಹಾಗಿರಲಿ. ಅದಕ್ಕೂ ಮಿಗಿಲಾಗಿ ಆ ತುಣುಕುಗಳೂ ಸ್ವತಂತ್ರ ಸನ್ನಿವೇಶವೊಂದನ್ನು (ಯಕ್ಷ ಭಾಷೆಯಲ್ಲಿ ಹೇಳುವುದೇ ಆದರೆ ಪ್ರಸಂಗದ ವ್ಯಾಪ್ತಿ) ಕಟ್ಟಿಕೊಡುವುದರಲ್ಲಿ ಸೋತವು. ಬಾಲಜಗಳವನ್ನು ಕರ್ಣನ ಅಂಗರಾಜ್ಯಾಭಿಷೇಕದವರೆಗಾದರೂ ಒಯ್ದಿದ್ದರೆ ಒಂದು ತಾರ್ಕಿಕ ಕೊನೆ ಸಿಗುತ್ತಿತ್ತು. ಮತ್ತಿನದರ ಹಿನ್ನೆಲೆ (ಅರಗಿನ ಮನೆ) ಬಿಡಿ, ಕನಿಷ್ಠ ರಕ್ಕಸವಧೆ, ಹಿಡಿಂಬಾ ಕಲ್ಯಾಣಕ್ಕಾದರೂ ವಿಸ್ತರಿಸಿದ್ದರೆ ಪರ್ಯಾಪ್ತವಾಗುತ್ತಿತ್ತು. ಅದು ಕಲ್ಯಾಣವಿಲ್ಲದೆ ಸೋತಂತೆ, ಕೀಚಕನ ತುಣುಕು ವಧೆಯ ನಾಟಕೀಯತೆ ಮುಟ್ಟದೆ ರಸಹೀನ ಗದ್ಯದ ಮಟ್ಟದಲ್ಲುಳಿಯಿತು. ಭಾರತದಲ್ಲಿ ಕೃಷ್ಣ ತೋರುವ ವಿಶ್ವರೂಪದರ್ಶನಗಳಲ್ಲಿ ಗೀತೋಪದೇಶದ ಕೊನೆಯಲ್ಲಿ ಬರುವುದೇ ಹೆಚ್ಚಿನ ಮಹತ್ತ್ವದ್ದು. ಸಂಧಾನ ಕಾಲದ್ದು ಪ್ರಚೋದನೆಯ ಪರಾಕಾಷ್ಠೆಯಲ್ಲಿ ಬೆದರಿಕೆಯ ತಂತ್ರವಾಗಿ ಬರುತ್ತದೆ. ಕುಮಾರವ್ಯಾಸನೇ ಹೇಳಿಕೊಂಡ ಭಾರತ ಎಂದರೆ ಕೃಷ್ಣಕಥೆ ಎಂಬ ಸರ್ವ ವ್ಯಾಪೀ ಭಾವ ಇಲ್ಲಿ ಬರುವುದಿಲ್ಲ. ಗೆದ್ದವ ಸೋತ (ಸೋತವ ಸತ್ತ) ಎಂಬ ಭಾವ ಉದ್ದೀಪಿಸುವ ಗಾಂಧಾರಿ ವಿಲಾಪ ಕೊನೆಯ ತುಣುಕಾಗಿ ಕಾಣಿಸಿದ್ದು ಸರಿಯೇ. ಆದರೆ ಕಥೆಯೇ ನಡೆಯದೆ ಫಲಿತಾಂಶ ಕೇಳಿದ ಹಾಗಾಯ್ತು. 

ಕುಮಾರವ್ಯಾಸ ಕಾವ್ಯವನ್ನು ಶಾಸ್ತ್ರೀಯ ನೃತ್ಯಕ್ಕೆ ಹೊಂದಿಸಿದ್ದರಲ್ಲಿ (ರಾಗ ಸಂಯೋಜನೆ ಮತ್ತು ಗಾಯನ ವಿದ್ವಾನ್ ರಮೇಶ ಚಡಗ) ಕವಿಯ ಆಶಯ ಅಥವಾ ಕಾವ್ಯ ಬಂಧದ ಸೌಂದರ್ಯ ದಕ್ಕಲಿಲ್ಲ. ಜತಿಸ್ವರ, ಶಬ್ದಂ, ಪದವರ್ಣ, ಜಾವಳಿ, ತಿಲ್ಲಾನವೇ ಮೊದಲಾದ ನೃತ್ಯ ಪರಿಕರಗಳನ್ನು ಪರಿಣಾಮಕಾರಿಯಾಗಿಸುವಲ್ಲಿ ನಟ್ಟುವಾಂಗದಲ್ಲಿ ಪಾವನಾ ರಾಜೇಂದ್ರ, ಮೃದಂಗದಲ್ಲಿ ಮನೋಹರ ರಾವ್, ವಯೊಲಿನ್ನಿನಲ್ಲಿ ಶರ್ಮಿಳಾ ಕೆ. ರಾವ್ ಮತ್ತು ಕೊಳಲಿನಲ್ಲಿ ಬಾಲಕೃಷ್ಣರ ಸಹಕಾರ ಚೆನ್ನಾಗಿಯೇ ಇದ್ದಿರಬೇಕು. ಇವಕ್ಕೆ ಅಳತೆಗೋಲು ನನ್ನಲ್ಲಿಲ್ಲ, ಕ್ಷಮಿಸಿ. ಆದರೆ ಒಟ್ಟು ಪ್ರದರ್ಶನ ಕುಮಾರವ್ಯಾಸ ಭಾರತವನ್ನು ಮೆರೆಸಲಿಲ್ಲ, ಕನಿಷ್ಠ ಕಥಾಶ್ರವಣದ ಸುಖವನ್ನೂ ಕೊಡಲಿಲ್ಲ. ಕುಮಾರವ್ಯಾಸನ ದೊಡ್ಡ ಹೆಸರಿನ ಬಲದಲ್ಲಿ ಸಾಮಾನ್ಯ ನೃತ್ಯಪ್ರದರ್ಶನಕ್ಕೆ  ಅವಕಾಶ ಕಲ್ಪಿಸಿಕೊಂಡ ಹಾಗೇ ಅನ್ನಿಸಿತು. ದಪ್ಪ ಚೌಕಟ್ಟಿನೊಳಗೆ ಕುಬ್ಜ ಚಿತ್ರ ಕೂರಿಸಿದ ಹಾಗನ್ನಿಸಿ ತೀವ್ರ ನಿರಾಶೆಯುಂಟು ಮಾಡಿತು. ಭ್ರಮರಿ, ಶಿವಪ್ರಕಾಶರ ಉತ್ಸಾಹದ ಬುಗ್ಗೆ ಮಾಧವಾಚಾರ್ಯರ ಅಪರಿಮಿತ ಪ್ರಯೋಗಗಳ ಮುನ್ನೆಲೆಯಲ್ಲಿ ಖಂಡಿತವಾಗಿಯೂ ಇದಕ್ಕಿಂತಲೂ ಎತ್ತರದ ರಸಸ್ಥಾನಗಳಿಗೆ ಚಿಮ್ಮಬೇಕೆಂದು ಆಶಿಸುತ್ತೇನೆ.

6 comments:

 1. ಹಿತಮಿತವಾದ ವಿಮರ್ಶೆ. ನಾನು ಯಕ್ಷಗಾನದ 'ಅಭಿಮಾನಿ' ಅಲ್ಲವಾದ್ದರಿಂದ ಇದಕ್ಕಿಂತ ಹೆಚ್ಚು ಹೇಳಲಾರೆ

  ReplyDelete
 2. ಇಂದಿನ ಕಾಲದಲ್ಲಿ ಪೂರ್ವಾಗ್ರಹಗಳಿಲ್ಲದೆ ನೃತ್ಯ ವಿಮರ್ಶೆ ಮಾಡುವವರು ಇಲ್ಲವೇ ಇಲ್ಲವೆಂದರೆ ತಪ್ಪಲ್ಲ. ನೃತ್ಯಾದಿಯಾಗಿ ಕಲೆಗಳ ವಿಮರ್ಶೆ ಹೀಗೆ ಖಡಕ್ ಆಗಿದ್ದರೆನೆ ನಮ್ಮಲ್ಲಿ ಔಚಿತ್ಯಮಯ ಪ್ರಸಂಗ, ಕಲಾದಾರಿಗಳು ಬೆಳೆಯಲು ಸಾಧ್ಯ. ಹಾಗಾಗಿ ನಿಮಗೆ ವಿಶೇಷ ಅಭಿನಂದನೆಗಳು.ದಯಮಾಡಿ ಮುಂದುವರೆಸಿ.
  ಕರಾವಳಿ ಕರ್ನಾಟಕದಲ್ಲಂತೂ ಬರೆಯುವ ಒಬ್ಬರಿಬ್ಬರೂ ಇಂದಿನ ನೃತ್ಯದ ಉಪದ್ವ್ಯಾಪಗಳನ್ನು ಕಂಡು ಆಸಕ್ತಿ ಕಳೆದುಕೊಳ್ಳುತ್ತಲಿದ್ದಾರೆ. ಮತ್ತೂ ಕೆಲವರು ವಿಮರ್ಶೆ ಎನ್ನುತ್ತಾ ಬಾಯಿಗೆ ಬಂದಂತೆ ಹೊಗಳುವುದು, ಹರಟುವುದು, ತಮ್ಮ ಬೆನ್ನು ತಾವೇ ತಟ್ಟುವುದ್, ಲಾಬಿ ಮಾಡುವುದು ಮಾಡುತ್ತಲೇ ಇದ್ದಾರೆ. ಹಾಗಾಗಿ ವಿಮರ್ಶಾ ಕ್ಷೇತ್ರದ ಜವಾಬ್ದಾರಿ ಕುಸಿಯುತ್ತಲೇ ಸಾಗಿದೆ.
  ಮುಂದಿನ ದಿನಗಳಲ್ಲೂ ನಿಮ್ಮ ಈ ಬಗೆಯ ವಿಮರ್ಶಾ ಬರೆವಣಿಗೆಗಳನ್ನು ಓದಲು ಕಾತರಳಾಗಿದ್ದೇನೆ. ಅಂದಹಾಗೆ ’ನೂಪುರ’ದಲ್ಲಿ ಈ ವಿಮರ್ಶೆಯನ್ನು ಮುಂದಿನ ಸಂಚಿಕೆಗೆ ಬಳಸಬಹುದೇ?

  ReplyDelete
 3. Bhramari Shivaprakash14 January, 2012 07:15

  ಗೌರವಾನ್ವಿತ ಜಿ ಎನ್ ಅಶೋಕವರ್ಧನ ಅವರೆ,
  ಕುಮಾರವ್ಯಾಸ ನೃತ್ಯ ಭಾರತ ಕಾರ್ಯಕ್ರಮವನ್ನು ವೀಕ್ಷಿಸಿ, ಪೂರ್ವ ಸಿದ್ಧ, ಗ್ರಹಿಕೆಯ ನಿರ್ದಿಷ್ಟ ಭಾವ ಸ್ಫುರಣವನ್ನು ನಿರೀಕ್ಷಿಸಿ ಬಂದ ತಮಗಾದ ನಿರಾಸೆ ಸಹಜ. ನಿಮ್ಮ ಅಭಿಪ್ರಾಯಗಳನ್ನು ಸ್ವೀಕರಿಸುತ್ತೇನೆ. ನಿಮ್ಮ ದೃಷ್ಟಿಕೋನದಿಂದ ಯೋಚಿಸಿದರೆ ಅವೆಲ್ಲ ನಿಜವಿರಬಹುದು. "ಕುಮಾರವ್ಯಾಸ ನೃತ್ಯ ಭಾರತ" ಎಂದೊಡನೆ, ಒಂದೇ ದಾರದಲ್ಲಿ ಪೋಣಿಸಿದ ಮುತ್ತುಗಳ ಸಾಲಿನಂತೆ ಇಡೀ ಭಾರತ ಕಥೆಯ ಅಥವಾ ಒಂದು ಕಥಾ ಭಾಗದ ಒಟ್ಟಂದದ ಅನುಭವ ನೀಡುತ್ತದೆ ಎಂಬುದು ತಮ್ಮ ಗ್ರಹಿಕೆ ಇರಬಹುದು. ನಾಟಕ, ಯಕ್ಷಗಾನ, ನೃತ್ಯ ರೂಪಕ, ಏಕವ್ಯಕ್ತಿ ರೂಪಕಗಳ ಪ್ರಸ್ತುತಿಗಳು ಇಂತೆಯೇ ಇವೆ. ಒಂದು ಕಥಾನಕ, ಅದಕ್ಕೊಂದು ರಂಗ ಅಥವಾ ನೃತ್ಯ ಪ್ರಸ್ತುತಿ. ಹೀಗಾಗಿ ನನ್ನ ಕಾರ್ಯಕ್ರಮದ ಮೂಲಕ ನೀವು ನಿರೀಕ್ಷಿಸಿದ ಫಲಿತಾಂಶವೇ ಬೇರೆ ಇತ್ತು - ನನ್ನ ಉದ್ದೇಶವೇ ಬೇರೆ ಇತ್ತು ಎಂಬುದನ್ನು ನಾನು ಇಲ್ಲಿ ಸಮರ್ಥಿಸಿ ಸ್ಪಷ್ಟೀಕರಿಸ ಬಯಸುತ್ತೇನೆ.
  ಆಮಂತ್ರಣ ಪತ್ರಿಕೆಯೇ ತಿಳಿಸಿದಂತೆ ‘ಕುಮಾರವ್ಯಾಸ ನೃತ್ಯ ಭಾರತ’ - ಗದುಗಿನ ವೀರನಾರಣಪ್ಪ ವಿರಚಿತ ಕರ್ಣಾಟ ಭಾರತ ಕಥಾಮಂಜರಿಯಿಂದ ಆಯ್ದ ಸಾಲುಗಳನ್ನು ಭರತನಾಟ್ಯದ ಶಾಸ್ತ್ರೀಯ ನೃತ್ಯ ಮಾರ್ಗವಾಗಿ ಅಭಿವ್ಯಕ್ತಿಸುವ ಪ್ರಯತ್ನ. ಕುಮಾರವ್ಯಾಸನ ಸಾಲುಗಳನ್ನು ಭರತನಾಟ್ಯದ "ಮಾರ್ಗ" ಪದ್ಧತಿಯ ರೂಪು ರೇಷೆಗಳಲ್ಲಿ ನೋಡುವ ಪ್ರಯತ್ನ. ಏಕವ್ಯಕ್ತಿ ಪ್ರದರ್ಶನ/ರೂಪಕ ಎಂಬಿತ್ಯಾದಿಗಳ ಉಲ್ಲೇಖವಿಲ್ಲ. ಭರತನಾಟ್ಯದ ಸಿದ್ಧ ಶೈಲಿಯ ಮಾರ್ಗ ಪದ್ಧತಿಯ ಎಲ್ಲ ನೃತ್ಯ ಬಂಧಗಳು ಒಂದೇ ದಾರದಲ್ಲಿ ಪೋಣಿಸಿದ ಮುತ್ತುಗಳಾಗದೆ, ಬಿಡಿ ಬಿಡಿಯಾದ ಮುತ್ತುಗಳಾಗಿರುತ್ತವೆ. ಅಂದರೆ ಒಂದು ಪೂರ್ಣ ಕಥಾನಕದ ಅಭಿವ್ಯಕ್ತಿಯಾಗಿರದೆ, ಆರಿಸಿದ ವಸ್ತುಗಳು, ಕಥೆಗಳು, ಸಂದರ್ಭಗಳು ಬೇರೆ ಬೇರೆ ಇರುತ್ತವೆ. ಪೂರ್ಣ ಕಥಾನಕದ "ನಾಟಕೀಯ ಪರಿಣಾಮ" ಮಾರ್ಗದ ವ್ಯಾಪ್ತಿಯಲಿಲ್ಲ. ಸನ್ನಿವೇಶದ ಒಳಗಿನ ಕಥಾ ವಿಸ್ತರಣೆಗೋಸ್ಕರ(ಸಂಚಾರಿ ಭಾವ ಎಂದು ಕರೆಯಲ್ಪಡುವ) ಮಾತ್ರ ಅಲ್ಲಲ್ಲಿ ನಾಟಕೀಯ ಪರಿಣಾಮಗಳ ಬಳಕೆ ಇರುತ್ತದೆ. ಪ್ರತೀ ನೃತ್ಯ ಬಂಧಕ್ಕೆ ಆಯ್ದ ವಸ್ತುಗಳು ಒಂದು ಕಥೆಯನ್ನು ಪೂರ್ಣವಾಗಿ ಅಭಿವ್ಯಕ್ತಿಸಲೇಬೇಕೆಂದಿಲ್ಲ.

  ReplyDelete
 4. Bhramari Shivaprakash14 January, 2012 07:16

  ಈ ನೃತ್ಯ ಪ್ರಸ್ತುತಿಯ ಹಿನ್ನೆಲೆ ಹೀಗಿದೆ - ಮೈಸೂರಿನಲ್ಲಿ ಗುರುಗಳಿಂದ ತಮಿಳೋ, ತೆಲುಗೋ ಸಾಹಿತ್ಯಾಭಿನಯದ ಪಾಠ ಮಾಡಿಸಿಕೊಳ್ಳುವಾಗಲೆಲ್ಲ, ಅವುಗಳಿಂದ ಹೊರಹೊಮ್ಮುತ್ತಿದ್ದ ಭಾವ ಸೌಂದರ್ಯಕ್ಕೆ ಮಾರುಹೋಗುತ್ತಿದ್ದೆ. ಆದರೆ ಅಂಥ ಸಾಹಿತ್ಯದ ನೃತ್ಯ ಪ್ರದರ್ಶನಗಳಲ್ಲಿ ಆ ಎಲ್ಲ ಭಾವ ತೀವ್ರತೆಯ ನಿರೂಪಣೆಯಿದ್ದೂ ನೃತ್ಯ ಕಾರ್ಯಕ್ರಮಗಳಿಗೆ ಬರುವ ಸಾಮಾನ್ಯ ಸಹೃದಯರು ಅಂದರೆ ನೃತ್ಯ ಸಂಗೀತದ ಪೂರಕ ಹಿನ್ನೆಲೆಯಿಲ್ಲದಿರುವವರು - ಆ ದೇವರನಾಮ ಎಷ್ಟು ಚೆನ್ನಾಗಿ ನರ್ತಿಸಿದ್ದೀರಿ, ಆದರೆ ಆ ಪದವರ್ಣ ಅಂತ ಮಾಡಿದ್ರಿಯಲ್ಲ. . .ನರ್ತನ ಚೆನ್ನಾಗಿತ್ತು, ಆದರೆ ಅರ್ಥ ಆಗಲಿಲ್ಲ! ಎಂದು ತೋರಿಸುತ್ತಿದ್ದ ಅಸಮಧಾನ ನನ್ನನ್ನು ಚಿಂತನೆಗೊಳಪಡಿಸಿತು. ನರ್ತನ ಕಲೆ, ಸಾಹಿತ್ಯದ ಚೆಲುವನ್ನು ಸ್ಫುರಣಗೊಳಿಸುವ ಪ್ರಭಾವೀ ಮಾಧ್ಯಮ ಎಂಬುದನ್ನು ಮನಗಂಡೆ. ತನ್ಮೂಲಕ, ನಾನು ಖುಷಿಪಟ್ಟದ್ದನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಆಸೆ ನನ್ನದು. ಯಾವುದೇ ನೃತ್ಯ ಕಾರ್ಯಕ್ರಮದಲ್ಲಿ ಸುಮಾರು ಮೂರು ತರಹದ ಪ್ರೇಕ್ಷಕ ವರ್ಗವನ್ನು ನಾನು ಸಂಧಿಸಿದ್ದೇನೆ. 1) ನೃತ್ಯಕಲೆಯನ್ನೆ ಅಭ್ಯಸಿಸಿ ವೃತ್ತಿಯೋ ಪ್ರವೃತ್ತಿಯೋ ಆಗಿರಿಸಿಕೊಂಡವರು, ಪ್ರಸಕ್ತ ಅಭ್ಯಸಿಸುತ್ತಿರುವವರು, 2) ಎಲ್ಲ ಪ್ರದರ್ಶನ ಕಲೆಗಳ ತಕ್ಕ ಮಟ್ಟಿನ ಜ್ಞಾನವಿರುವ ಸಹೃದಯರು, 3) ಇವು ಯಾವುದರ ಹಿನ್ನೆಲೆಯೇ ಇಲ್ಲದ ಸಾಮಾನ್ಯರು/ಭಾವುಕರು. ಕನ್ನಡದ ಮಣ್ಣಿನಲ್ಲಿ ಇಂತಹ ವಿವಿಧ ನೆಲೆಯ ಸಭಿಕ ವರ್ಗದ ಮನಸ್ಸನ್ನು ಮುಟ್ಟುವ ತಟ್ಟುವ ಪ್ರಯತ್ನ ನನ್ನಿಂದ ನಡೆಯಬೇಕೆಂದು ಹಂಬಲಿಸಿದೆ. ತಂದೆಯವರ ಸಮೂಹ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅನುಭವ ಮತ್ತು ೨೦೦೬ ರಲ್ಲಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಕನ್ನಡ ಸಾಹಿತ್ಯ ಚರಿತ್ರೆ ಕುರಿತ ಉಪನ್ಯಾಸ ಗದುಗಿನ ಭಾರತವನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು. ಹೀಗೆ ಕನ್ನಡ ಕಾವ್ಯವೊಂದರ ಪಠಣ, ಅದರಲ್ಲಿರಬಹುದಾದ ನೃತ್ಯ ಸಾಧ್ಯತೆಗಳನ್ನು ಶೋಧಿಸುವ ಗುರಿಯನ್ನು ಹೊತ್ತೆ. ವೈವಿಧ್ಯಮಯ ಸಾಧ್ಯತೆಗಳು ತೋರಿದವು. ಅವುಗಳಲ್ಲಿ ಒಂದು - "ಶಾಸ್ತ್ರೀಯ ನೃತ್ಯ ಮಾರ್ಗ"ವಾಗಿ ಅರ್ಪಿಸುವುದು.
  ಇನ್ನು ಆಯ್ದುಕೊಂಡ ನೃತ್ಯ ಬಂಧಗಳು ಮತ್ತು ಅವುಗಳ ಲಕ್ಷಣಕ್ಕನುಸಾರವಾಗಿ ಅಳವಡಿಸಿದ ಸನ್ನಿವೇಶಗಳ ಬಗ್ಗೆ - ಇಡೀ ಕಾರ್ಯಕ್ರಮದ ಓಘಕ್ಕೆ ಅಡ್ಡಿಬರದಂತೆ ಕಥಾಕ್ರಮ ಹಿಂದು ಮುಂದಾಗದಿರಲೆಂದು ಎಚ್ಚರ ವಹಿಸಿದೆ. ಹೆಚ್ಚು ಚಾಲ್ತಿಯಲ್ಲಿಲ್ಲದ ಕಥಾ ಸಂದರ್ಭಗಳನ್ನು ಆಯ್ದು ಅದರ ಭಾವರಸವನ್ನು ನಾನುಂಡು ಸಹೃದಯರಿಗೆ ಉಣಬಡಿಸಬೇಕೆಂದು ಆಶಿಸಿದೆ. ಮೊದಲೇ ಹೇಳಿದಂತೆ "ಮಾರ್ಗ" ಪದ್ಧತಿಯ ನೃತ್ಯ ಬಂಧಗಳು ಒಂದು ಕಥಾನಕದ ಅಥವಾ ಸನ್ನಿವೇಶವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ಲೇಷಿಸಲೇಬೇಕೆಂದಿಲ್ಲ. "ಮಾರ್ಗ"ದ ಕಣ್ಣಿನ ಮೂಲಕ ಗದುಗಿನ ಭಾರತವನ್ನು ನೋಡಲು ಯತ್ನಿಸಿದೆ ಅಷ್ಟೆ. ಈ ನಿಟ್ಟಿನಲ್ಲಿ ಭೀಮ ದುರ್ಯೋಧನರ ಬಾಲ್ಯ, ಹಿಡಿಂಬಾ-ಭೀಮ ಸನ್ನಿವೇಶ, ಕೀಚಕ ದ್ರೌಪದಿಯ ಸಂವಾದ, ಕೌರವನ ದೂರ್ತ ಆದರೆ ಸುಪ್ತ ಭಕ್ತಿಯನ್ನು ಕೆರಳಿಸಲು ಕೃಷ್ಣ ತೋರದ ವಿಶ್ವರೂಪ, ತಮ್ಮಿಂದ ತಾವಳಿದ ಘಾತಕ ಪುತ್ರರ ನೆನಪಿನಲ್ಲೇ ಪಾಂಡುಪುತ್ರರನ್ನು ಹರಸುವ ಮತ್ತು ಗದುಗಿನ ವೀರನಾರಾಯಣನ ಮಾಯಾರಚನೆಯ ಸೂಕ್ಷ್ಮವನ್ನು ತಿಳಿಯುವ ಗಾಂಧಾರಿಯ ಸಂದಿಗ್ಧತೆ ಮುಂತಾದ ಸನ್ನಿವೇಶಗಳನ್ನು ಆಯ್ದುಕೊಂಡೆ. ಪ್ರತಿಯೊಂದು ನೃತ್ಯ ಬಂಧದ ವ್ಯಾಪ್ತಿಯ ಮಿತಿಯಲ್ಲೇ ಆರಿಸಿದ ಕಥಾನಕಗಳಿಗೆ ಸಂದರ್ಭೋಚಿತ ಕೊನೆ ಕಾಣಿಸಿದ್ದೇನೆ. ಇದು ನನ್ನ ಸಮರ್ಥನೆ.
  ಪ್ರಸ್ತುತ ಪಡಿಸಿದ ನೃತ್ಯ ಕಾರ್ಯಕ್ರಮದ ಹಿಂದಿನ ಆಶಯ, ಉದ್ದೇಶವನ್ನೇ ಪರಾಂಬರಿಸಿ ನೋಡದೆ ಏಕಮುಖಿಯಾಗಿ ಒಂದು ದೃಷ್ಟಿಕೋನದಲ್ಲಿ ಮಾತ್ರ ಅಭಿಪ್ರಾಯ ವ್ಯಕ್ತಪಡಿಸುವುದು ಪ್ರಶ್ನಾರ್ಹ. ಹೀಗಾಗಿ ಕುಮಾರವ್ಯಾಸನ ದೊಡ್ಡ ಹೆಸರಿನ ಬಲದಲ್ಲಿ ಸಾಮಾನ್ಯ ನೃತ್ಯ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಅಭಿವ್ಯಕ್ತಿಗಳಿಗೆ ಇರುವ ಅಪಾರ ಸಾಧ್ಯತೆಗಳಲ್ಲಿ ಇದೂ ಒಂದು ಸಾಧ್ಯತೆ ಎಂದು ವಿನಮ್ರವಾಗಿ ಅಷ್ಟೆ ಆತ್ಮ ವಿಶ್ವಾಸದಿಂದ ಅರಿಕೆ ಮಾಡಲಿಚ್ಛಿಸುತ್ತೇನೆ.

  ReplyDelete
 5. ಭರತನಾಟ್ಯದ ’ಮಾರ್ಗ’ ಪದ್ಧತಿಯನ್ನು ಲಕ್ಷಿಸಿ ಭ್ರಮರಿಯವರು ಪ್ರಯೋಗ ಮಾಡಿರುವ ಹಿನ್ನಲೆ ಉಚಿತವಾಗಿದೆಯೇನೋ ನಿಜ. ಆದರೆ ಯಾವುದೇ ಕಲೆಯ ಉದ್ದೇಶ ಚೌಕಟ್ಟನ್ನು ಒಳಗೊಂಡೂ ಅದನ್ನು ಮೀರಿ ರಸಪ್ರವಾಹದೊಳಗೆ ರಸಿಕನನ್ನು ಒಂದಾಗಿಸುವುದು. ಅದಿಲ್ಲವಾದರೆ ಯಾವುದೇ ಪ್ರಯೋಗಗಳ ಆಯುಷ್ಯ ಬಹಳ ಕಾಲ ಇರುವುದಿಲ್ಲ. ಅದರಲ್ಲೂ ಕುಮಾರವ್ಯಾಸನಂತಹ ಕವಿಯ ಆಶಯ, ಕಾವ್ಯದ ಮಹತ್ತು, ಒಳಸುಳಿಗಳನ್ನು, ಅಲಂಕಾರಗಳನ್ನು ಅರಿತು ಅದನ್ನು ಮತ್ತೊಂದು ಕಲಾಗುಣಕ್ಕೆ ಅಳವಡಿಸಿಕೊಳ್ಳುವ ಸುಲಭದ ಕೆಲಸವೇನೂ ಅಲ್ಲ. ಅಧ್ಯಯನ, ಅಂತಃಸತ್ತ್ವ, ಶಾಸ್ತ್ರ-ಪ್ರಯೋಗ ದೃಷ್ಟಿ, ಮಾಧ್ಯಮ ಸಮನ್ವಯತೆ ಎಲ್ಲವೂ ಬಹಳ ಮುಖ್ಯ.
  ಆದಾಗ್ಯೂ ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಸಂಯೋಜನೆಗಳನ್ನು ಗಮನಿಸಿ. ಅಲ್ಲಿ ಅವರು ದೇಶ- ಭಾಷೆ- ಕಾಲ ಎಲ್ಲದರೊಳಗಿದ್ದೂ ಎಲ್ಲವನ್ನೂ ಮೀರುತ್ತಾರೆ. ನಿಮ್ಮ ಭರತನಾಟ್ಯ ಕ್ಷೇತ್ರದ ವರ್ಣ ಬಂಧಕ್ಕಾಗಿ ಅವರು ಹಿಡಕೋ ಬಿಡಬ್ಯಾಡ ದೇವರನಾಮದ ಮೂಲಕ ಅವರು ಸಲ್ಲಿಸಿದ ಒಂದು ಉದಾಹರಣಾ ನ್ಯಾಯವನ್ನು ವಿಷದವಾಗಿ ನೋಡಿ.ಅವರದ್ದು ಮಾರ್ಗೀಯ ಚಿಂತನೆಗಳ ಸಾಕಾರಫಲ. (ಅದನ್ನು ಭರತನಾಟ್ಯವೇ ಅಲ್ಲ ಎನ್ನುವ ಮೂರ್ಖರು ಸಾಕಷ್ಟಿದ್ದಾರೆ. ಅದಿರಲಿ ಬಿಡಿ.)ಸ್ಥಾಯಿ ಭಾವವನ್ನು ಕಾಪಿಡಬೇಕಾದ್ದು ಯಾವುದೇ ನರ್ತನದ ಪ್ರಧಾನ ಉದ್ದೇಶ. ಇದಕ್ಕೆಲ್ಲಾ ಮುಖ್ಯವಾಗಿ ಮಾರ್ಗ, ದೇಸೀ ಪರಿಕಲ್ಪನೆಯ ವಿಸ್ತಾರವನ್ನು ಸೂಕ್ಷ್ಮವಾಗಿ ಗಮನಿಸಿದರೂ ಸಾಕು. ಮತ್ತಷ್ಟು ದೃಢವಾದ ಚಿಂತನೆ ಮತ್ತು ಪ್ರಯೋಗಗಳು ನರ್ತಕಸಮುದಾಯದಿಂದ ಹೊರಹೊಮ್ಮುತ್ತವೆ.

  ReplyDelete