07 December 2011

ದಾಸಜನದ ನೆಪದಲ್ಲಿ ಮತ್ತಷ್ಟು ಜವಳಿ ನೆನಪುಗಳು

ದಾಸಜನ / ಚಿತ್ರ ಕೃಪೆ: ನರಸಿಂಹ ಮೂರ್ತಿ 
ದಾಸಜನ ಕೆನರಾ ಕಾಲೇಜಿನ ಸಹಯೋಗದಲ್ಲಿ ಮೊನ್ನೆ (೩-೧೨-೧೧) ಸಂಜೆ ಜವಳಿಯವರಿಗೆ ಶ್ರದ್ಧಾಂಜಲಿ ಸಭೆ ಮಾಡಿತ್ತು. ನಾನು ಜವಳಿಯವರ ಅಗಲಿಕೆಯ ಮೊದಲ ಆಘಾತಕ್ಕೆ ಹೊಳೆದ ನಾಲ್ಕು ವಿಚಾರಗಳನ್ನು ೨೭ರಂದೇ ಬ್ಲಾಗಿಗೇರಿಸಿ, ಅನಿವಾರ್ಯವಾದ್ದನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಲೇ ಇದ್ದೆ. ಆದರೆ ಪ್ರತಿ ಬೆಳಿಗ್ಗೆ ಯಾವುದೇ ಪತ್ರಿಕೆ ತೆರೆದಾಗ ಕಾಣುವ ಸುಡೊಕು ನನಗೆ ಜವಳಿಯವರನ್ನು ನೆನಪಿಸುತ್ತಿತ್ತು. (ನಾನೂ ಅದನ್ನು ಇಷ್ಟಪಟ್ಟು ಮಾಡುತ್ತಿರುತ್ತೇನೆ.) ಜವಳಿ ಪ್ರಾಂಶುಪಾಲರಾಗಿದ್ದ ಕಾಲದ ಸ್ವಲ್ಪ ಹಿಂದೆ ಮುಂದೆ ಎಲ್ಲಾ ಪತ್ರಿಕೆಗಳೂ ಸುಡೊಕು ಪ್ರಕಟಿಸಲು ತೊಡಗಿದವು. ತಲೆಚುರುಕು ಮಾಡಲು ಒಳ್ಳೇ ಆಟ ಎಂದು ಕಂಡುಕೊಂಡ ಜವಳಿ, ಅದರ ವೈವಿಧ್ಯಕ್ಕಾಗಿ ದಿನಾ ನಾಲ್ಕೈದು ಪತ್ರಿಕೆಗಳನ್ನು ಕೊಳ್ಳುತ್ತಿದ್ದರು. ನನ್ನಲ್ಲಿ ಬಂದಾಗ ಇಂಗ್ಲಿಷ್ ಸುಡೊಕು ಪುಸ್ತಕಗಳನ್ನೂ ಕೊಳ್ಳುತ್ತಿದ್ದರು. ಉಳಿದಂತೆ ಕಾಲೇಜು ವಾಚನಾಲಯಕ್ಕೆ ಬರುತ್ತಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಮಸ್ಯೆಗಳನ್ನು ನಕಲಿಸಿ ಇಟ್ಟುಕೊಳ್ಳುವುದಕ್ಕಾಗಿ ಹತ್ತೆಂಟು ಖಾಲೀ ನೋಟುಬುಕ್ಕುಗಳನ್ನೂ ಕೊಂಡು ತನ್ನ ಸಂಗ್ರಹವನ್ನು ಸಮೃಧಿಗೊಳಿಸುತ್ತಲೇ ಇದ್ದರು. ಇಲ್ಲಿ ಗಮನಿಸಬೇಕಾದ ಮೊದಲ ವಿಚಾರ, ತನ್ನ ಖಯಾಲಿಗಾಗಿ ಕಾಲೇಜಿನ ಅಂದರೆ ಸಾರ್ವಜನಿಕ ಹಣ (ಹೆಚ್ಚುವರಿ ಪತ್ರಿಕೆಗಳಿಗೋ ಪುಸ್ತಕಕ್ಕೋ) ದುರ್ವ್ಯಯವಾಗದ ಎಚ್ಚರ. ಮುಂದಿನದು, ಕಾಲೇಜಿಗೆ ಬರುತ್ತಿದ್ದ ಪತ್ರಿಕೆಗಳನ್ನೇ ತನ್ನ ಪ್ರಯೋಗಕ್ಕೊಳಪಡಿಸಿ, ಇತರರಿಗೆ ಪ್ರೇರಣೆ ಕೊಡುವುದನ್ನು ತಪ್ಪಿಸದಿದ್ದದ್ದು. ಒಂದು ಹೆಚ್ಚಿನ ಮಾತು ಹಾಕುತ್ತೇನೆ. ಜವಳಿ ಅಧ್ಯಾಪಕರಾಗಿದ್ದಾಗ ಸಹಜವಾಗಿ, ಪ್ರಾಂಶುಪಾಲರಾದ ಮೇಲೆ ಮತ್ತಷ್ಟು ಎಚ್ಚರದಿಂದ ವೈಯಕ್ತಿಕತೆಯನ್ನು ಅಧಿಕಾರದಿಂದ ಸ್ವಚ್ಚವಾಗಿ ಪ್ರತ್ಯೇಕಿಸಿ ನೋಡಿಕೊಂಡರು. ಅವರ ಸ್ವಂತ ಆಸಕ್ತಿಗಳಿಗೆ ಬೇಕಾದ ಪುಸ್ತಕಗಳನ್ನು ಎಂದೂ ಕಾಲೇಜಿನ ಗ್ರಂಥಾಲಯಕ್ಕೆ ತುಂಬಲಿಲ್ಲ. ಇನ್ನೂ ಮುಖ್ಯವಾಗಿ ಸ್ಮರಿಸಬೇಕಾದದ್ದು ಗ್ರಂಥಾಲಯಕ್ಕೆ  ಶಿಫಾರಸು ಮಾಡುವಲ್ಲಿ ಪ್ರಾಂಶುಪಾಲ ಪೀಠದ ಗೌರವವನ್ನು ಕಳೆಯಲಿಲ್ಲ. ಇಂದು ನಮ್ಮ ಅತ್ಯುನ್ನತ ಜನನಾಯಕರಲ್ಲೂ ಕಾಣಸಿಗದ ಇಂಥ ಮೌಲ್ಯಗಳಿಂದ ನನ್ನ ಲೆಕ್ಕಕ್ಕೆ ಜವಳಿ ಅಮರ.


ಈ ಸುಡೊಕಿನ ಕುರಿತು ಇನ್ನೊಂದೇ ವಿಚಾರ ವಿಸ್ತರಿಸಬೇಕು. ಸುಡೊಕನ್ನು ತನ್ನ ವಿದ್ಯಾರ್ಥಿಗಳಿಗೂ ಗೀಳಾಗಿಸಬೇಕೆಂದು ಜವಳಿ ಮನಸ್ಸು ಮಾಡಿದರು. ಇವರು ಕೆಲವು ಸುಡೊಕು ಸಮಸ್ಯೆಗಳ ನೆರಳಚ್ಚು ಪ್ರತಿ ಮಾಡಿಸಿಟ್ಟುಕೊಳ್ಳುತ್ತಿದ್ದರು. ಸಕಾರಣ ಬಿಡುವನುಭವಿಸುತ್ತಾ ಕಾರಿಡಾರಿನಲ್ಲಿ ಠಳಾಯಿಸುವ ಮಕ್ಕಳನ್ನು ಕರೆದು ಸುಡೊಕುಗಳ ಒಂದೊಂದು ಹಾಳೆ ಉಚಿತವಾಗಿ ಕೊಟ್ಟು, ಅದರ ಮೇಲೆ ಸಮಯದ ನಮೂದು ಮಾಡುತ್ತಿದ್ದರು. ವಿದ್ಯಾರ್ಥಿ ತನಗಿಷ್ಟ ಬಂದಲ್ಲಿ ಕುಳಿತು, ಅನ್ಯರ ಸಹಾಯ ಬೇಕಾದರೆ ಪಡೆದು, ಅದನ್ನು ಪರಿಹರಿಸಿ ಇವರಿಗೊಪ್ಪಿಸಿದರೆ ಸಾಕು. ಆವಳಿ ಕೂಡಲೇ ಆತ ಬಳಸಿದ ಸಮಯದ ಲೆಕ್ಕದೊಡನೆ ಮೌಲ್ಯಮಾಪನ ಮಾಡಿ, ಸ್ಥಳದಲ್ಲೇ ಸ್ವಂತ ಕಿಸೆಯಿಂದ ನಗದು ಬಹುಮಾನ ಕೊಡುತಿದ್ದರು. ನಿಗದಿತ ಪಾಠಪಟ್ಟಿಯಲ್ಲಷ್ಟೇ ಗಂಟೆ ಕಳೆಯುವ ಗುರುಬ್ರಹ್ಮರಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಶಿಕ್ಷಣಕ್ಕೆ ಹೆಣಗುತ್ತಿದ್ದ ಇವರು ಅಪವಾದ. ಸಾಮಾಜಿಕ ನಿಬಂಧನೆಗಳ ಅನುಸಾರ ನಿವೃತ್ತಿ ಬಂದರೂ ತೀರ್ಥಳ್ಳಿಯಲ್ಲಿ ನೆಲೆಸಿದ ಜವಳಿ, ತನ್ನ ಶಿಕ್ಷಕತನಕ್ಕೆ ಎಂದೂ ವಿದಾಯ ಹೇಳಿರಲಿಲ್ಲ. ಸ್ವಂತ ಖರ್ಚಿನಲ್ಲಿ ತನ್ನದೇ ಜಾಗದಲ್ಲಿ ಕೋಣೆಯೊಂದನ್ನು ಕಟ್ಟಿಸಿ, ಸಜ್ಜುಗೊಳಿಸಿ ಪುಸ್ತಕ, ಸೀಡಿಗಳನ್ನು ತುಂಬಿ, ಕಾಲಕಾಲಕ್ಕೆ ನವೀಕರಣಗೊಳಿಸುತ್ತಾ ತಾನು ಓದಿದ್ದರ ಕುರಿತು ಮಾತಿನಲ್ಲಿ, ಮಿತ್ರ ಬಳಗಕ್ಕೆ ಪತ್ರದಲ್ಲಿ, ಸ್ವಂತ ಬ್ಲಾಗಿನಲ್ಲಿ, ಪುಸ್ತಕ ಎರವಲು ಕೊಟ್ಟು, ದಾನವೂ ಮಾಡಿ ಅಸಂಖ್ಯರಿಗೆ ಪ್ರೇರಣೆ ಕೊಡುತ್ತಲೇ ಇದ್ದರು. ಸ್ಮರಣೆಯ ನುಡಿಗಳಲ್ಲಿ ಪ್ರಭಾಕರ ಜೋಶಿಯವರು ಅವರ ಅನುಭವಕ್ಕೆ ನಿಲುಕಿದಂತೆ, “ಜವಳಿ ತಮಗೆ ಕಂಡ ಯಾವುದೋ ಒಳ್ಳೆ ಪುಸ್ತಕವನ್ನು ನನಗೆ ಓದಲು ಕೊಟ್ಟಿದ್ದರು. ಇನ್ನೆಂದೋ ಸಿಕ್ಕಾಗ ಅವರಿಗೆ ಪುಸ್ತಕದ ನೆನಪಿಗಿಂತ ಮುಖ್ಯ ನಾನದನ್ನು ಓದುವುದಾಗಿತ್ತು! ನಾನು ಯಾವುದೋ ಕಾರಣಕ್ಕಿನ್ನೂ ಓದಿರಲಿಲ್ಲ ಎಂದು ತಿಳಿದಾಗ ಆಡಿದ ಮಾತು ``ವಾಜ್ರೇ ವಾಜಿ” (ಕೊಂಕಣಿಯಲ್ಲಿ ಓದ್ರೀ ಓದಿ) ಚೆನ್ನಾಗಿ ಹೇಳಿದರು.

ದಾಸಜನ / ಚಿತ್ರ ಕೃಪೆ: ನರಸಿಂಹ ಮೂರ್ತಿ 
ಜವಳಿಯವರ ವಿವಿಧ ಆಸಕ್ತಿಗಳ ಬಗ್ಗೆ ಜೋಶಿ ಸೂಚ್ಯವಾಗಿ ಹೇಳಿದ ಮಾತುಗಳನ್ನೇ ಇನ್ನು ಕೆಲವರು ವಿಸ್ತರಿಸಿಯೇ ಸ್ಮರಿಸಿಕೊಂಡರು. ರಾಜೇಶ್ ಕಾವ್ಯನಾಮದಲ್ಲಿ ಜವಳಿ ಮೊದಮೊದಲು ಕೆಲವು ಕವನಗಳನ್ನು ಬರೆದದ್ದೂ ಇತ್ತು, ಸುಧಾ ತರಂಗಗಳಂಥಲ್ಲಿ ಅವು ಬೆಳಕು ಕಂಡದ್ದೂ ಇತ್ತು. ಒಂದೆರಡು ವರ್ಷಗಳ ಹಿಂದೆ ತೀರಿಕೊಂಡ ತನ್ನಣ್ಣನ ಬಿಡಿಬರಹಗಳನ್ನು ಸಂಕಲಿಸಿ, ಪ್ರಕಟಿಸುವಲ್ಲಿ ಅಪಾರ ಮುತುವರ್ಜಿವಹಿಸಿದ ಇದೇ ನಾಗರಾಜ ತನ್ನದೇ ಬರಹಗಳ ಬಗ್ಗೆ ಪ್ರಕಟಣೆಯ ಯೋಚನೆ ಬಿಡಿ, ಸಾರ್ವಜನಿಕದಲ್ಲಿ ಉಲ್ಲೇಖಿಸಲೂ ಅವಕಾಶ ಕೊಡಲೇ ಇಲ್ಲ! ಹಾಗೇ ಜವಳಿ ಕಲಾಶಾಲೆ ಸೇರಿ, ತನ್ನಲ್ಲಿದ್ದ ಸಹಜ ಮತ್ತು ಒಳ್ಳೆಯ ಚಿತ್ರಕಾರನನ್ನು ಪೋಷಿಸಿಕೊಂಡದ್ದನ್ನು ಅನು ಪಾವಂಜೆ ಹೀಗೇ ನನ್ನಂಗಡಿಗೆ ಬಂದಾಗ ಮೊದಲೇ ಹೇಳಿದ್ದರು. ಅವುಗಳೂ ಏನಾದವೋ ತಿಳಿದವರಿಲ್ಲ. ಜವಳಿ ಕಾಲಾಂತರದಲ್ಲಿ ಕವಿತೆ, ಚಿತ್ರಗಾರಿಕೆಗಳಂಥ ಸ್ವಂತ ಭಾವಾಭಿವ್ಯಕ್ತಿಯನ್ನು ಯಾಕೋ ಅದುಮಿ, ಇತರರ ಕೃತಿಗಳಿಗೆ ತಾನೇ ಮೊದಲ ಸಹೃದಯಿಯಾಗಿ ಪ್ರೋತ್ಸಾಹಕನೂ ಆಗಿ, ಜೊತೆಗೆ ಸಾರ್ವಜನಿಕ ಸಾಕ್ಷರರನ್ನು ಇಂಥವಕ್ಕೆ ಪ್ರೇರೇಪಿಸುವುದರಲ್ಲೇ ಉಳಿದು ಬಿಟ್ಟರು! ಈ ನೆಲೆಯಲ್ಲಿ ಇವರು ‘ಕಾಗದದ ದೋಣಿ’ ಓದಿದ ಮೇಲೆ ಲೇಖಕ ಪೆಜತ್ತಾಯರಿಗೆ ಬರೆದ ಪತ್ರ ತುಂಬಾ ಮುಖ್ಯ. (‘ಪರವಶ’ ಬರಹದ ಪ್ರತಿಕ್ರಿಯೆ ಅಂಕಣದಲ್ಲಿ ನೋಡಬಹುದು) ಜವಳಿ ತಿಂಗಳ ಹಿಂದೆ ನನ್ನಲ್ಲಿಗೆ ಬಂದು ಕಪಾಟುಗಳನ್ನು ಶೋಧಿಸುತ್ತಿದ್ದಾಗ ಅವರಾಗಲೇ ಓದಿಯಾಗಿದ್ದ ಲಕ್ಷ್ಮಣ ಕೊಡಸೆಯವರ ‘ಅಪ್ಪನ ಪರ್ಪಂಚ’ ಕಂಡರು. ಕೂಡಲೇ ತಮ್ಮ ಎಂದಿನ ಆತ್ಮೀಯ ಶೈಲಿಯಲ್ಲಿ “ಅಶೋಕಾ ಇದು ಓದ್ರೀ ತುಂಬ ಆತ್ಮೀಯವಾಗಿದೆ” ಎಂದರು. ಅವರಿಗೆ ಗೊತ್ತಿತ್ತು, ಪುಸ್ತಕ ಪ್ರಪಂಚದಲ್ಲೇ ಕುಳಿತರೂ ನಾನು ತುಂಬಾ ಸೀಮಿತ ಓದುಗ!

ಜವಳಿಯವರ ಗ್ರಂಥಾಲಯ ಪ್ರಯೋಗ ಊರವರ ನಿರುತ್ಸಾಹದಿಂದ ಸೋತಿತ್ತು. ಆದರೆ ಅವರ ಆಶಾವಾದ ಪರ್ಯಾಯ ದಾರಿಗಳನ್ನು ಕಂಡುಕೊಳ್ಳುತ್ತಲೇ ಇತ್ತು. ನಾನು ‘ಪರವಶ’ದಲ್ಲಿ ಹೇಳಿದಂತಲ್ಲದೆ, ಆ ಆದಿತ್ಯವಾರ ಬೆಳಿಗ್ಗೆ ವಾಸ್ತವದಲ್ಲಿ ಇವರ ಬಾಗಿಲು ತಟ್ಟಿದ್ದೂ (ಮೊಮ್ಮಗು ಅಲ್ಲ) ಓರ್ವ ಪುಸ್ತಕ ಪ್ರೇಮಿಯೇ ಅಂತೆ. ಹಾಗೇ ಮೂರು ದಿನ ಹಿಂದೆ ನನ್ನಂಗಡಿಗೆ ಬಂದಿದ್ದ ಅರವಿಂದ ಕುಡ್ಲ, “ಜವಳಿ ಮಾಷ್ಟ್ರು ಕೊಟ್ಟ ‘ಯಂತ್ರಗಳನ್ನು ಕಳಚೋಣ’ ಓದ್ತಾ ಇದ್ದೇನೆ. ಮುಗಿಸಿ ಮುಂದಿನವಾರ ತೀರ್ಥಳ್ಳಿಗೆ ಹೋಗಿ ಬರಬೇಕು'', ಎಂದದ್ದೂ ಉಲ್ಲೇಖನಾರ್ಹ. ಜವಳಿಯವರ ಅದಮ್ಯ ಪುಸ್ತಕ ಹಸಿವು ಕುರಿತು ಶ್ರದ್ಧಾಂಜಲಿ ಸಭೆಯಲ್ಲಿ ಅನೇಕ ನಿದರ್ಶನಗಳು ಬಂದವು. ಸಭೆ ಮುಗಿಸಿ ಹಿಂದೆ ಬಂದಾಗ, ನನ್ನ ಸಹಾಯಕ ಶಾಂತಾರಾಮ ಇಪ್ಪತ್ತು ವರ್ಷದ ಹಿಂದಿನ ಅವನದೇ ಒಂದು ನೆನಪು ಉಜ್ವಲವಾಗಿಸಿದ. ಅಂದು ಮಂಗಳೂರು ಶ್ವಾನ ಸಂಘದವರು ಸರಕಾರೀ ಗೋ ಆಸ್ಪತ್ರೆಯಲ್ಲಿ ಸಣ್ಣದಾಗಿ ನಾಯಿಗಳ ಪ್ರದರ್ಶನ ವ್ಯವಸ್ಥೆ ಮಾಡಿದ್ದರು. ನಮಗವರು ಮುಂದಾಗಿಯೇ ಸೂಚಿಸಿದ್ದುದರಿಂದ, ಆ ವಿಷಯಕ್ಕೇ ಸಂಬಂಧಿಸಿದಂತೆ ಕೆಲವು ಪುಸ್ತಕಗಳನ್ನು ವಿಶೇಷವಾಗಿ ಸಂಗ್ರಹಿಸಿಕೊಂಡು ಅಲ್ಲಿ ಶಾಂತಾರಾಮ ‘ಪುಸ್ತಕ ಪ್ರದರ್ಶನ ಮಾರಾಟ’ಕ್ಕೆ ನಿಂತಿದ್ದ. ಜನ, ಜಾನುವಾರು ಓಡಾಟ ಸಾಕಷ್ಟಿದ್ದರೂ ಇವನನ್ನು ಕ್ಯಾರೇ ಎಂದವರಿರಲಿಲ್ಲ. ಆಗ ಒದಗಿದ ಏಕೈಕ ದೊಡ್ಡ ಗಿರಾಕಿ ‘ಉದ್ದಗೂದಲಿನ, ಒಣಕಲು ಶರೀರದ, ಅಂಗಡಿಯಲ್ಲೂ ನೋಡಿದ ನೆನಪಿನ ವ್ಯಕ್ತಿ’ - ನಾಗರಾಜರಾವ್ ಜವಳಿ. ಈಗ ಶಾಂತಾರಾಮ ಬಿಡಿ, ಈ ವಲಯದ ಯಾವುದೇ ಪುಸ್ತಕ ಮಳಿಗೆಯ ನೌಕರನಿಗೂ ಹೆಗಲ ಮೇಲೆ ಕೈಯಿಟ್ಟು, ಹೆಸರಿಡಿದು ಮಾತಾಡಿಸುವ ಆಪ್ತ ಗಿರಾಕಿ ಜವಳಿ ಇನ್ನು ನೆನಪಿನಲ್ಲಷ್ಟೇ ಖಾಯಂ!

ಆಗುಂಬೆ ಚೆಕ್ ಪೋಸ್ಟಿನ ಬಳಿಯ ಚರುಮುರಿ ಡಬ್ಬಿಯವನಲ್ಲಿ ‘ಭಾರೀ ಗಂಭೀರ ಓದುಗ’ನನ್ನು ಕಂಡವರು, ಬಾಳಿಗಾರು ಮಠದ ಸ್ವಾಮಿ ‘ಪುಸ್ತಕ, ಸಂಗೀತ ಮತ್ತು ಯಕ್ಷಗಾನಗಳ ಕಡುಮೋಹಿ’ ಎಂದೇ ನನ್ನನ್ನು ಅತ್ತ ನೂಕಿದವರು ಜವಳಿ. ಪುತ್ತೂರು ಮೂಲದ ತಿರುಗೂಳಿ ಪುಸ್ತಕ ವ್ಯಾಪಾರಿ ಕೊಡೆಂಕಿರಿ ಪ್ರಕಾಶ ತೀರ್ಥಳ್ಳಿಗೆ ಲಗ್ಗೆಯಿಟ್ಟರೆ ಕನಿಷ್ಠ ಪ್ರಯಾಣ ಭತ್ತೆಗೆ ಮೋಸವಿಲ್ಲದ ಕೊಳ್ಳೆ ಜವಳಿಯೇ. (ಪ್ರದರ್ಶನ ಮಾರಾಟಕ್ಕೆ ಜಾಗ ನಿಗದಿಸುವುದೋ ಸ್ಥಳೀಯನ ನೆಲೆಯಲ್ಲಿ ಯಾವುದೇ ಭದ್ರತೆ, ಯಾರದೇ ಪರಿಚಯಕ್ಕೆ ಕನಿಷ್ಠ ಸ್ವಂತ ಖರ್ಚೂ ವಿಧಿಸದೆ ನೆಚ್ಚಬಹುದಾಗಿದ್ದವರೂ ಇವರೇ) ನಾನಂತೂ ಯಾವುದೇ ಹೊಸ ಕನ್ನಡ ಪುಸ್ತಕಕ್ಕೆ ಬೇಡಿಕೆ ಮಂಡಿಸುವಾಗ, “ಇದು ಕನಿಷ್ಠ ಜವಳಿಯವರ ಕುತೂಹಲ ಕೆರಳಿಸೀತೇ” ಎಂದು ತೊಡಗುವಷ್ಟು ಓದಿನ ಹರಹು ಮತ್ತು ಕೊಂಡೇ ಓದುವ ಗಟ್ಟಿತನ ಇದ್ದವರು ಜವಳಿ. ಇವರು ಎಂದೂ ಸಾಲ ಬರೆಸಿದವರಲ್ಲ, ‘ದರ-ಕಡಿತ’ದ ಹಕ್ಕು ಮಂಡಿಸಿದವರಲ್ಲ. ಪುಸ್ತಕದ ಹೊರೆ ಎಷ್ಟು ದೊಡ್ಡದಿದ್ದರೂ ಸ್ವಂತ ಬೆನ್ನುಚೀಲವನ್ನೇ ನೆಚ್ಚುತ್ತಿದ್ದರು. (ಪ್ಲ್ಯಾಸ್ಟಿಕ್ ಚೀಲವೋ ಕಾಗದದಲ್ಲಿ ಕಟ್ಟುವುದೋ ಅವರಿಗೆ ಒಗ್ಗುತ್ತಲೇ ಇರಲಿಲ್ಲ) ತೀರ್ಥಳ್ಳಿಗೆ ಅಂಚೆಯಲ್ಲಿ ಪುಸ್ತಕ ತರಿಸುವುದಿದ್ದರೂ ಪುಸ್ತಕ ಮೌಲ್ಯಕ್ಕೆ ಸಾಗಣೆ ವೆಚ್ಚ ಸೇರಿಸಿದ ಮೊತ್ತವನ್ನು ನನ್ನ ಖಾತೆಗೆ ತುಂಬಿಯೇ ಕಳಿಸಲು ಅವಕಾಶ ಮಾಡುತ್ತಿದ್ದರು. ನಾವು ಪುಸ್ತಕ ಮಾರುವುದೇ ಅವರಿಗೆ ಸಮ್ಮಾನವಂತೆ! ಅವರಿಗೆ ಪುಸ್ತಕ ಕೊಳ್ಳಲು ಮತ್ತು ಓದಲು ಕಾರಣಗಳು ಬೇಕಿರಲಿಲ್ಲ. ಅನ್ಯ ಸವಲತ್ತುಗಳೋ ಉಚಿತ ಉಡುಗೊರೆಗಳೋ ಅವರ ಮಾತಿನಲ್ಲೇ ಹೇಳಬೇಕಾದರೆ “ಏ ಬಿಡಾ!”

ದಾಸಜನ / ಚಿತ್ರ ಕೃಪೆ: ನರಸಿಂಹ ಮೂರ್ತಿ 
ಪ್ರಸ್ತುತ ಕೆನರಾ ಕಾಲೇಜಿನ ಪ್ರಾಂಶುಪಾಲ ಜಿಎನ್ ಭಟ್, ಪ್ರಾಯದಲ್ಲೂ ಸೇವಾ ದಾಖಲೆಯಲ್ಲೂ ಜವಳಿಗಿಂತ ಕಿರಿಯರಾದರೂ ಇವರ ನಡುವೆ ಏಕವಚನದ ಮೈತ್ರಿ. ಜವಳಿಗೆ ಪ್ರಾಂಶುಪಾಲಗಿರಿ ಸಹಜವಾಗಿ ಒದಗುವ ಸೂಚನೆ ಬಂದ ಕಾಲಕ್ಕೆ, ಭಟ್ಟರನ್ನು ಜವಳಿ ಅನೌಪಚಾರಿಕ ಏಕಾಂತದಲ್ಲಿ ಭೇಟಿಯಾಗಿದ್ದರಂತೆ. ‘ಪೀಠಗ್ರಹಣ ನೀ ಮಾಡೋ. ಕೆಲಸದ ಹೊರೆಗೆ ನಾ ಪೂರ್ಣಪಾಲುದಾರ’ ಎಂಬರ್ಥದ ಮಾತುಗಳನ್ನು ಪ್ರಾಮಾಣಿಕವಾಗಿ ಆಡಿದ್ದರಂತೆ. ಆದರೆ ಆಡಳಿತ ಮಂಡಳಿ ಸರಿಯಾಗಿಯೇ ಜವಳಿಯವರನ್ನೇ ಏರಿಸಿತ್ತು. ಅದನ್ನವರು ಸರಳ ಸಮರ್ಥವಾಗಿ ನಿರ್ವಹಿಸಿದ್ದಕ್ಕೆ ಶ್ರದ್ಧಾಂಜಲಿ ಸಭೆ ಅನೇಕ ಮಾತುಗಳಲ್ಲಿ ಶ್ರುತಪಡಿಸಿತು. ಮಂಡಳಿಯ ಇಂದಿನ ಉಪಾಧ್ಯಕ್ಷ (ಎಸ್.ಎಸ್. ಕಾಮತ್, ಚಾರ್ಟರ್ಡ್ ಅಕೌಂಟೆಂಟ್) ಅದನ್ನು ತುಂಬ ಚೆನ್ನಾಗಿಯೇ ಹೇಳಿದರು. “ಯಾವುದೇ ಹೊತ್ತಿನಲ್ಲಿ ಅಧಿಕೃತ ಕೊಠಡಿಯೊಳಗೆ ಕೆಲಸವಿಲ್ಲದಿದ್ದರೆ ಈ ಪ್ರಾಂಶುಪಾಲ ಎಲ್ಲೋ ಕಾರಿಡಾರಿನಲ್ಲಿ ನಾಲ್ಕು ವಿದ್ಯಾರ್ಥಿಗಳ ನಡುವೆ ಪಟ್ಟಾಂಗದಲ್ಲಿ ಸಿಕ್ಕುತ್ತಿದ್ದರು. ಕಾಲೇಜಿನ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಅಲಂಕಾರಿಕ ಅಗತ್ಯಗಳಿಗೆ ಈ ಪ್ರಾಂಶುಪಾಲ ಸಿಕ್ಕುತ್ತಿದ್ದದ್ದು ಕಡಿಮೆ. ಇನ್ನು ಆಡಳಿತ ವಿಚಾರ ವಿನಿಮಯಕ್ಕೆ ಅವರೇ ನನ್ನ ಕಛೇರಿಗೆ ಬಂದಾಗ, ನಾನೇ ಅವಕಾಶ ಕಲ್ಪಿಸಿದರೂ ಜವಳಿ ಒಂದೇ ಒಂದು ಅನ್ಯ ಉಲ್ಲೇಖ (ಮಾನವೀಯ ಸಂಬಂಧಗಳು, ಹಾಸ್ಯ, ಸಾಹಿತ್ಯ ಇತ್ಯಾದಿ) ಬಾರದಂತೆ ನಡೆದುಕೊಂಡು, ಒಂದು ಥರಾ ನನ್ನಲ್ಲಿ ಗೌರವಾನ್ವಿತ ಹಿರಿಯನ ಸಂಬಂಧವನ್ನಷ್ಟೇ ಉಳಿಸಿಕೊಂಡರು” ಎಂದು ತುಸು ವಿಷಾದಿಸಿದರು.

ಜವಳಿಯಿಂದ ಕೆಲವೇ ಮಿನಿಟುಗಳ ಅಂತರದಲ್ಲಿ ಕೆನರಾ ಕಾಲೇಜು ಸೇವೆಗೆ ದಾಖಲಾಗಿದ್ದ ಶಿವಾನಂದ ಭಟ್ಟರಿಗಂತೂ ಜವಳಿಯ ಅಗಲಿಕೆ, ಸ್ವಂತ ಕುಟುಂಬದ ಸದಸ್ಯನೇ ಸಂದುಹೋದ ಕೊರಗು. ಜವಳಿ ಪಡೆಯುವವರಿಗೆ ಮಾನಸಿಕ ಹೊರೆಯಾಗದಂತೆ ಉಡುಗೊರೆಗಳನ್ನು ಹೇರುತ್ತಿದ್ದ ಜಾಣ್ಮೆಯನ್ನು ಭಟ್ಟರು ಸೋದಾಹರಣ ನೆನೆಸಿಕೊಂಡರು. ಹೀಗೇ ಸುಲೋಚನಾ ಭಟ್, ಗೆಳತಿ - ಶ್ರೀಮತಿ (ಪಾರ್ವತಿ) ಜವಳಿಯವರ ಮೂಲಕ ಗಳಿಸಿದ ನಾಗರಾಜ ಸ್ನೇಹ, ಹೇಗೆ ತಮಗೆ ಅವರ ತೀರ್ಥಳ್ಳಿ ಮನೆಯು ಕೇಂದ್ರವಾಗಿ ಹೊರನಾಡು, ಕುಪ್ಪಳ್ಳಿ ಮುಂತಾದ ರಮ್ಯ ಪ್ರವಾಸ ಕೊಟ್ಟಿತು ಎಂದೂ ಸ್ಮರಿಸಿಕೊಂಡರು. ಒಟ್ಟಾರೆ ರುಚಿ ಸಾಮ್ಯ ಕಂಡಲ್ಲಿ ಜವಳಿಯವರ ಸ್ನೇಹಕ್ಕೆ ಔಪಚಾರಿಕ ಕಟ್ಟುಪಾಡುಗಳು ಕಳಚಿಕೊಳ್ಳುತ್ತಿದ್ದವು. ಅವರು ತೀರ್ಥಳ್ಳಿಗೆ ವಾಸ್ತವ್ಯ ಬದಲಿಸುತ್ತಿದ್ದಂತೆ, ಹೊಸ ಮನೆಯ ಔಪಚಾರಿಕ ಪ್ರವೇಶಕ್ಕೆ ಕರೆಯುವುದಂತೂ ಧಾರಾಳವೇ ಮಾಡಿದ್ದರು. ಮುಂದುವರಿದು ಸಿಕ್ಕಾಗೆಲ್ಲಾ ಅಲ್ಲಿನ ಏನೇನೋ ಸಣ್ಣ ಸಂತೋಷಗಳನ್ನು ರಮ್ಯ ಮಾಡಿ, “ಬನ್ನಿ ಮಾರಾಯ್ರೇ. ತೀರ್ಥಳ್ಳಿಗೆ ಬಂದು ಒಂದು ಫೋನ್ ಹೊಡೀರಿ, ಸಾಕು” ಎಂದು ಒತ್ತಾಯಿಸುತ್ತಲೇ ಇದ್ದರು. (ಹೀಗೆ ಅವರಿಗೆ ಹೊರೆಯಾಗಬಾರದೆಂದೇ ಅಂದು ನಾನು ತೀರ್ಥಳ್ಳಿ ತಲಪಿ, ಹೋಟೆಲಿನಲ್ಲಿ ಊಟದ ಟಿಕೆಟ್ ಖರೀದಿಸಿದ ಮೇಲೇ ಕರೆ ಮಾಡಿದ್ದೆ - ನೋಡಿ: ಇಲ್ಲೇ ಹಿಂದಿನ ಲೇಖನ - ತೀರ್ಥಯಾತ್ರೆ) ಇದನ್ನೇ ನರಹರಿಯವರು ಸ್ಮರಣೆಯ ನಾಲ್ಕು ನುಡಿಗಳಲ್ಲಿ ಸಖೇದ ತೋಡಿಕೊಂಡರು. “ಶನಿವಾರ ಸಂಜೆ ಸಾಗರಕ್ಕೆ ಹೋಗುತ್ತಿದ್ದವ ಸುಮಾರು ಅರ್ಧ ಗಂಟೆ ತೀರ್ಥಳ್ಳಿಯಲ್ಲಿದ್ದೆ. ನನಗೆ ಜವಳಿಯವರ ಒತ್ತಾಯದ ನೆನಪೂ ಇತ್ತು. ಆದರೆ ನಾನು ದಾಕ್ಷಿಣ್ಯದಲ್ಲೇ ಸುಮ್ಮನಿದ್ದು ಅವರ ಜೀವಿತದ ಕೊನೆಯ ದಿನದ ದರ್ಶನ ಪಡೆಯುವಲ್ಲಿ ಸೋತೆ.” (ಆದಿತ್ಯವಾರ ಬೆಳಿಗ್ಗೆ ಅವರ ಮರಣವಾರ್ತೆ ಪ್ರಸರಿಸಿತು.)

ಕರಾವಳಿ ಲೇಖಕಿ ವಾಚಕಿಯರ ಸಂಘದ ಹಿಂದಿನ ಅಧ್ಯಕ್ಷೆ - ನನ್ನತ್ತೆ, ಎ.ಪಿ. ಮಾಲತಿ, ನನ್ನ ‘ಪರವಶ’ ಬರಹ ನೋಡಿದಂದು, ಮೈಸೂರಿನ ಮಗಳ ಮನೆಯಲ್ಲೇ ಚಡಪಡಿಸಿದರು. ತಮ್ಮ ತಂಡ ಕುಪ್ಪಳ್ಳಿ ಯಾತ್ರೆ ನಡೆಸಿದ್ದನ್ನು ಮತ್ತೊಮ್ಮೆ ನೆನೆಸಿಕೊಂಡರು. ಇವರು ಅಲ್ಲಿಗೆ ತಲಪಿದ ಮೇಲೆ ತಮ್ಮ ಇರವನ್ನು ಹಗುರವಾಗಿ ಜವಳಿಯವರಿಗೆ ಮುಟ್ಟಿಸಿದ್ದರು. ಜವಳಿ ಹದಿನೇಳು ಕಿಮೀ ದೂರದ ಕುಪ್ಪಳ್ಳಿಗೆ ಸ್ವಂತ ವ್ಯವಸ್ಥೆಯಲ್ಲೇ ಹೋಗಿ, ಸುಮಾರು ಎರಡು ಗಂಟೆಯ ಕಾಲ - ಅಂದರೆ ತಡ ರಾತ್ರಿಯವರೆಗೆ, ಇವರ ತಂಡ ಕೊಟ್ಟ ಸಾಂಸ್ಕೃತಿಕ ಕಲಾಪಗಳೆಲ್ಲವಕ್ಕೂ (ಹೆಚ್ಚು ಕಡಿಮೆ ಏಕೈಕ!) ಸಹೃದಯೀ ಪ್ರೇಕ್ಷಕನಾಗಿದ್ದರಂತೆ. ಕೊನೆಯಲ್ಲಿ ಪ್ರೋತ್ಸಾಹದ ಮಾತುಗಳನ್ನು ಹೇಳುವುದರೊಡನೆ “ಮುಂದಿನ ವರ್ಷ ಮುಂದಾಗಿ ತಿಳಿಸಿ ಬನ್ನಿ. ಪಾರ್ವತಿಯನ್ನೂ ಸಾಧ್ಯವಾದರೆ ಇನ್ನಷ್ಟು ಊರಿನ ರಸಿಕರನ್ನು ಕರೆದುಕೊಂಡೇ ಬರ್ತೇನೆ.” ಇನ್ನು ಬರಲುಂಟೇ ಈ ವಿಶ್ವ ಕುಟುಂಬಿ?

ದಾಸಜನದ ‘ಜ’ (ಜವಳಿ ನಾಗರಾಜರಾವ್) ಊರುಬಿಟ್ಟರೂ ಔಪಚಾರಿಕ ಹೆಸರು ಬದಲಾವಣೆಯ ನಿರೀಕ್ಷೆಯಿಲ್ಲದೆ ಮಿತ್ರ ಬಳಗ ಸಂಘಟನೆಯ ಆಶಯವನ್ನು ಮುಂದುವರಿಸಿದ್ದರು. ಶ್ರದ್ಧಾಂಜಲಿಯ ಮೊದಲ ಮಾತುಗಳನ್ನಾಡಿದ ‘ಸ’ (ಸತ್ಯನಾರಾಯಣ ಮಲ್ಲಿಪಟ್ನ) ತೀವ್ರ ವಿಷಾದದಲ್ಲಿ “ಇಲ್ಲ, ಇನ್ನು ದಾಸಜನ ಬರ್ಖಾಸ್ತು” ಎಂದೇ ಘೋಷಿಸಿದರು. ವಾರಕ್ಕೊಂದು ಬಾರಿಯಾದರೂ ‘ದಾ’ (ದಾಮೋದರ ಶೆಟ್ಟಿ ನಾ) ಮತ್ತು ‘ನ’ (ನರಸಿಂಹ ಮೂರ್ತಿ) ಸೇರಿದಂತೆ ನಾಲ್ಕೂ ಗೆಳೆಯರು ಕನಿಷ್ಠ ಒಂದು ಗಂಟೆ ಕಾಲ ಎಲ್ಲೋ ಒಟ್ಟಾಗಿ ಕಾಫಿ ಕುಡಿದು, ಲೋಕಾಭಿರಾಮವಾಗಿ ಹರಟೆ ಹೊಡೆಯುವಲ್ಲಿಂದ ತೊಡಗಿತ್ತಂತೆ ಈ ಅನೌಪಚಾರಿಕ ಕೂಟ. ಈಗ ದಾಸಜನ ನಡೆಸಿದ ಅಸಂಖ್ಯ ಸಾಹಿತ್ಯಕ, ಸಾಂಸ್ಕೃತಿಕ ಕಲಾಪಗಳಿಗೆ ಹೆಚ್ಚಾಗಿ ಕೇಂದ್ರವಾಗಿ ಒದಗಿದ ಕೆನರಾ ಕಾಲೇಜಿನಲ್ಲಿ, ಹೆಚ್ಚಾಗಿ ಕ್ರಿಯಾಸ್ಫೂರ್ತಿಯಾಗಿ ಒದಗುತ್ತಿದ್ದ ಜವಳಿ ಹೆಸರಿನಲ್ಲೇ ಪುದುವಟ್ಟು ಬಿಟ್ಟು ವಿಘಟನೆಗೊಂಡದ್ದು ಅರ್ಥಪೂರ್ಣವೂ ಹೃದಯಸ್ಪರ್ಷಿಯೂ ಆಗಿತ್ತು.

ವರ್ಷಂಪ್ರತಿ ಕೆನರಾ ಕಾಲೇಜಿನಲ್ಲಿ ಕನ್ನಡದಲ್ಲಿ ಉತ್ತಮಿಕೆ ತೋರುವ ಓರ್ವ ವಿದ್ಯಾರ್ಥಿಗೂ ಎರಡು ಮೂರು ದಶಕಕ್ಕೂ ಮಿಕ್ಕು ಒಂದಲ್ಲಾ ಒಂದು ನೆಪದಲ್ಲಿ ಸಹವರ್ತಿಗಳಾಗಿ ಬಂದ ನಮಗೂ ಇನ್ನು ಪ್ರೊ| ನಾಗರಾಜ ರಾವ್ ಜವಳಿಯವರ ಜೀವನೋತ್ಸಾಹದ ನೆನಪಷ್ಟೇ ಪ್ರೇರಕವಾಗುತ್ತದೆ.
[ಪ್ರತಿಕ್ರಿಯೆಯಲ್ಲಿ ದಯವಿಟ್ಟು ಜವಳಿ ಕುರಿತು ನಿಮ್ಮ ವೈಯಕ್ತಿಕ ಅನುಭವಗಳನ್ನು ಧಾರಾಳವಾಗಿ ತುಂಬಿ ಸಾರ್ಥಕರಾಗಿ. ಔಪಚಾರಿಕವಾಗಿ ಶಾಂತಿಕೋರುವ, ದೇವರಲ್ಲಿ ಪ್ರಾರ್ಥಿಸುವ, ಆ ಈ ಸಂಸ್ಥೆಗಳಿಗೆ ಪ್ರಾತಿನಿಧ್ಯ ಕೊಡುವ ಮಾತುಗಳನ್ನು ಹೊಸೆದು ವ್ಯರ್ಥರಾಗಬೇಡಿ]

8 comments:

 1. ಲೇಖನ ಚೆನ್ನಾಗಿದೆ ಎಂದಷ್ಟೇ ಹೇಳಬಲ್ಲೆ. ಶ್ರಿ ಜವಳಿಯವರು ನನಗೆ ಪರಿಚಿತರಲ್ಲವಾಧ್ದರಿಂದ.

  ReplyDelete
 2. ಸರ್, ನಾನೂ ಈ ಕಾರ್ಯಕ್ರಮಕ್ಕೆ ಬ೦ದಿದ್ದೆ. ಅರ್ಥಪೂರ್ಣ ಶ್ರದ್ಧಾ೦ಜಲಿಕಾರ್ಯಕ್ರಮವಾಗಿತ್ತದು. ’ದಾಸಜನ’ದವರು ಜವಳಿಯವರ ಮೇಲಿನ ಗೌರವದಿ೦ದ ಹ್ರದಯಪೂರ್ವಕ ಶ್ರದ್ಧಾ೦ಜಲಿ ಏರ್ಪಡಿಸಿದ್ದರು.
  ಅ೦ದು ಅಲ್ಲಿ ಅನಾವರಣಗೊ೦ಡ ಜವಳಿಯವರ ಆದರ್ಶಗಳನ್ನು ಕೇಳಿ, ಅವರ ಒಡನಾಟ ನಮಗಿಲ್ಲವಾದರೂ, ಅದರಿ೦ದ ನಾವು ವ೦ಚಿತರಾದ ಬಗ್ಗೆ ಹ್ರದಯ ಭಾರವಾಯಿತು.
  ಉತ್ತಮ ಲೇಖನ, ತಮ್ಮ ಬರಹದ ಮೂಲಕ ಇದು ನೈಜ ಶ್ರಧ್ದಾ೦ಜಲಿ.ಧನ್ಯವಾದಗಳು

  ReplyDelete
 3. ಅತ್ಯುತ್ತಮ ನಿರೂಪಣೆ. ಭಾವಪೂರ್ಣ ನಮನ. ಲೇಖನ ಉತ್ತಮವಾಗಿದೆ.

  ReplyDelete
 4. ಪ್ರಿಯ ಅಶೋಕವರ್ಧನ್,
  ನಮಸ್ಕಾರ.
  ಜವಳಿ ನೆನಪಿನ ಕಾರ್ಯಕ್ರಮದ ಸುದ್ದಿ ನಿಮ್ಮ ಬ್ಲಾಗಿನಿಂದಷ್ಟೇ ತಿಳಿಯಿತು. ನಾನು ಇಲ್ಲಿ ಓದುವ ವಿ-ಪತ್ರಿಕೆಗಳಲ್ಲಿ ಜವಳಿ ಕಾಣಲಿಲ್ಲ.
  ನಿಮ್ಮ ಬ್ಲಾಗ್ ಬರಹ ಒಂದು ವರದಿಯಾಗಿ ಇರಲಿಲ್ಲ.ಜವಳಿಯನ್ನು ಮಸುಕಾಗಿ ಮತ್ತೆ ಕಂಡ ಹಾಗಾಯಿತು.
  ನನ್ನ ಹಳೆಯ ಇಮೈಲ್ ರಾಶಿಯಲ್ಲಿ ಈವರ್ಷ ಜವಳಿ ಕಳುಹಿಸಿದ ಎರಡು ಪತ್ರ-ಪ್ರತಿಕ್ರಿಯೆ ಇದ್ದವು.ಅದನ್ನು ನಿಮಗೆ ದಾಟಿಸಿದ್ದೇನೆ.ನನ್ನ ಪುಸ್ತಕ ನಿಮ್ಮಲ್ಲಿ ಸಿಕ್ಕದ್ದಕ್ಕೆ ಪ್ರಕಾಶಕರು ನಿಮಗೆ ಕಳುಹಿಸಲು ತಡಮಾಡಿದ ವಿಷಯ ಬೈರೆ ಗೌದರಿಂದಲೇ ಮತ್ತೆ ಗೊತ್ತಾಯಿತು.ಆದರೆ ಮುಖ್ಯ ಆನಿಸುವುದು -ಜವಳಿ ಅವರ ಓದುವ ಹಸಿವು.
  ತರಗತಿಗೆ ಹೊರಡುವ ಅವಸರದಲ್ಲಿ ಎರಡು ಸಾಲು ಬರೆದೆ.ಜವಳಿ ಬಗ್ಗೆ ಹಳೆಯ ನೆನಪು ಏನಾದರೂ ಹೊರಕ್ಕೆ ಬಂದರೆ ನಿದಾನವಾಗಿ ಮತ್ತೆ ಬರೆಯುತ್ತೇನೆ.
  ವಿಶ್ವಾಸದಿಂದ
  ವಿವೇಕ ರೈ
  -------
  ಪತ್ರ ಒಂದು:
  (ಎಕ್ಕಸಕ್ಕ) -- ಇದೊಂದು ಅದ್ಭುತವಾದ ಪದ್ಯ್ಯ . ಇಂದಿಗೂ ತನ್ನ ಹಸಿರುತನವನ್ನು ಬಿಟ್ಟುಕೊಡದ ಪದ್ಯ. ಓದಿ ತುಂಬಾ ಖುಷಿಯಾಯಿತು. ನೀವು ಹೇಳಿದಂತೆ ಯೂಟೂಬ್‍ನಿಂದ ನಿಮ್ಮ ಪದ್ಯ ಮತ್ತು ಐಶ್ವರ್ಯ ರೈ ನೃತ್ಯವನ್ನು ನನ್ನ ಐಪಾಡ್‍ಗೆ ಇಳಿಸಿಕೊಂಡಿದ್ದೇನೆ. ಹಾಗಾಗಿ ಈ ಪದ್ಯ ಇನ್ನೂ ಇಂಪಾಗಿದೆ.

  ಪತ್ರ ಎರಡು:
  ಪ್ರೀತಿಯ ಸರ್,
  ನಮಸ್ತೆ.
  ನಿಮ್ಮ ಹೊಸ ಪುಸ್ತಕ ’ಬ್ಲಾಗಿಲನು ತೆರೆದು’ ಬಿಡುಗಡೆಯಾದ ದಿನದಿಂದ ಓದಲು ಕಾಯುತ್ತಿದ್ದೆ. ಅತ್ರಿಗೆ ಹೇಳಿದಾಗ ಮೂರು ದಿನದಲ್ಲಿ ಒದಗಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಕಾದದ್ದೇ ಬಂತು. ಮೊನ್ನೆ ೫ರಂದು ಮಂಗಳೂರಿಗೆ ಹೋಗಿದ್ದೆ. ಆವರೆಗೆ ನಿಮ್ಮ ಪುಸ್ತಕವಿನ್ನೂ ಅತ್ರಿಗೆ ಬಂದಿಲ್ಲ. ಕಳುಹಿಸುತ್ತೇನೆ ಎಂದು ಹೇಳುತ್ತಾರೆ . ಪುಸ್ತಕವಿನ್ನೂ ಬಂದಿಲ್ಲ ಎಂದು ಹೇಳಿದರು.ನವಕರ್ನಾಟಕದಲ್ಲೂ ಹುಡುಕಿದೆ. ಅಲ್ಲೂ ಇನ್ನೂ ಬಂದಿಲ್ಲವೆಂದರು. ಕೊನೆಗೆ ಗೆಳೆಯ ಮೂರ್ತಿ ತಮ್ಮ ಬಳಿ ಇದ್ದ ಪುಸ್ತಕವನ್ನು ಕೊಟ್ಟರು. ನಿಮ್ಮ ಬ್ಲಾಗನ್ನು ನಿಯಮಿತವಾಗಿ ಓದುತ್ತಿದ್ದರೂ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಸುಖವೇ ಬೇರೆ . ಹಾಗಾಗಿ ಪುಸ್ತಕಗಳಿಗಾಗಿ ಚಡಪಡಿಸುತ್ತಿರುತ್ತೇನೆ. ನನ್ನೂರಿನಲ್ಲಿ ಹೇಳಿಕೊಳ್ಳುವ ಪುಸ್ತಕಭಂಡಾರವಿಲ್ಲ. ಯಾವುದಕ್ಕೂ ನಾನು ಅತ್ರಿಯನ್ನು ಅವಲಂಬಿಸಬೇಕಾಗುತ್ತದೆ. ತಿಂಗಳಿಗೊಮ್ಮೆ ಪುಸ್ತಕಗಳನ್ನು ತರಿಸಿಕೊಳ್ಳುತ್ತಿರುತ್ತೇನೆ. ಉಳಿದೆಲ್ಲ ಹಸಿವುಗಳು ನಿಧಾನವಾಗಿ ಮರೆಯಾಗುತ್ತಿದ್ದರೂ ಓದಿನ ಹಸಿವು ಮಾತ್ರ ಇನ್ನೂ ಕಡಮೆಯಾಗಿಲ್ಲ. ಅವಧಿಯ ಮತ್ತು ಉಳಿದ ವೆಬ್‍ಸೈಟ್‍ಗಳ ಮುಖಾಂತರ ಪುಸ್ತಕಗಳ ಬಗ್ಗೆ ತಿಳಿದು ಬರೀ ಉಗುಳು ನುಂಗುತ್ತಿರುತ್ತೇನೆ. ಬೈರೇಗೌಡರು ಹೀಗೇಕೆ ಮಾಡಿದರು. ಅಲ್ಲಿ ಸುಳ್ಯದಲ್ಲಿರುವ ಅಥವಾ ಸುಬ್ರಹ್ಮಣ್ಯದಲ್ಲಿರುವ ನಿಮ್ಮ ಯಾರೋ ಒಬ್ಬ ವಿದ್ಯಾರ್ಥಿ/ಅಭಿಮಾನಿ ನನ್ನ ಹಾಗೆ ಕಾಯುತ್ತಿರಬಹುದು. ಪುಸ್ತಕಗಳನ್ನು ಓದುವರಿಲ್ಲವೆನ್ನುತ್ತಾರೆ. ಆದರೆ ಬಿಡುಗಡೆಯಾಗುವ ಪುಸ್ತಕಗಳನ್ನು ಸರಿಯಾಗಿ ವಿತರಣೆ ಮಾಡದೆ ಇದ್ದರೆ ಅವುಗಳು ನಮಗೆ ತಲುಪುವ ಬಗೆ ಹೇಗೆ. ಇದನ್ನು ನಿಮಗೆ ಹೇಳಬೇಕೆನಿಸಿತು. ಹಾಗಾಗಿ ತಿಳಿಸುತ್ತಿದ್ದೇನೆ.
  ಏಪ್ರಿಲ್ ೩೦ ಮತ್ತು ಮೇ ೧ರಂದು ಇಲ್ಲಿ ಕುಪ್ಪಳ್ಳಿಯಲ್ಲಿರಲು ಮಂಗಳೂರಿನಿಂದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸದಸ್ಯೆಯರು ಬಂದಿದ್ದರು. ರೋಹಿಣಕ್ಕ, ಸಾರಕ್ಕ, ಎ.ಪಿ.ಮಾಲತಕ್ಕ ಶ್ರೀಕಲಾ ಉಡುಪ ಮೊದಲಾದವರು ಬಂದಿದ್ದರು. ಸುಮಾರು ೨೧ ಜನರಿದ್ದರು.ತುಂಬಾ ಎಂಜಾಯ್ ಮಾಡಿದರು. ನಾನು ಇಲ್ಲಿಂದ ನಾಲ್ಕುಗಂಟೆಯ ಸುಮಾರಿಗೆ ಅಲ್ಲಿಗೆಹೋಗಿದ್ದೆ. ಅವರೊಡನೆ ಇದ್ದು ಅವರ ಭಾಷಣ ಮತ್ತು ನಾಟಕ ನೋಡಿ , ಊಟ ಮಾಡಿ ರಾತ್ರೆ ಹತ್ತರ ವೇಳೆಗೆ ಮರಳಿ ಬಂದೆ. ಪಂಪ ಹೇಳಿದನಲ್ಲ ’ ಆರ್ ಅಂಕುಶವನ್ನಿಟ್ಟೊಡಂ....’ ಇಂತಹ ವೇಳೆಯಲ್ಲಿ ನೆನಪಿಗೆ ಬರುತ್ತದೆ. ನಾನು ಮೇ ೪ರಂದು ಮಂಗಳೂರಿಗೆ ಹೋಗಿದ್ದೆ. ಅಲ್ಲಿ ಮೂರು ದಿನವಿದ್ದೆ. ನನ್ನ ತೆರಿಗೆಯ ಲೆಕ್ಕ ಸಲ್ಲಿಸಲು ಹೋಗಿದ್ದೆ. ಅಸಾಧ್ಯ ಬಿಸಿಲು. ಮನಸ್ಸನ್ನು ಮತ್ತು ದೇಹವನ್ನು ಬಳಲಿಸುವಂತಹ ಬಿಸಿಲು. ಯಾರನ್ನೂ ಮಾತನಾಡಿಸುವ ಉತ್ಸಾಹವಿರಲಿಲ್ಲ. ಅತ್ರಿಗೆ ಹೋಗಿದ್ದೆ, ನವಕರ್ನಾಟಕಕ್ಕೆ ಹೋಗಿದ್ದೆ. ಮೂರ್ತಿಯವರು ಸಿಕ್ಕಿದ್ದರು. ನನ್ನ ಹಳೆಯ ವಿದ್ಯಾರ್ಥಿಗಳ ಮದುವೆ ಇತ್ತು. ಅವುಗಳಿಗೂ ಹಾಜರಿ ಹಾಕಿ ಸಣ್ಣ ಸಂತೋಷವನ್ನು ಅವರಿಗೆ ಕೊಟ್ಟು ಮರಳಿ ಬಂದೆ. ಈಗ ಇಲ್ಲಿ ಅಂತಹ ಸೆಖೆ ಇಲ್ಲ. ಸಂಜೆಯ ವೇಳೆ ಒಳ್ಳೆಯ ಗಾಳಿ ಬೀಸುತ್ತಿರುತ್ತದೆ. ಪುಸ್ತಕಗಳ ಜತೆಯಲ್ಲಿ , ನೆನಪುಗಳೊಡನೆ ಕಾಲ ಕಳೆಯುತ್ತಿದ್ದೇನೆ.
  (- ನಾಗರಾಜರಾವ್ ಜವಳಿ)

  ReplyDelete
 5. ಅಶೋಕ ವರ್ಧನರಿಗೆ, ವಂದೇಮಾತರಮ್.
  ಜವಳಿಯವರ ಪರಿಚಯ ನನಗಿದೆ, ಅವರಿಗೆ ನನ್ನ ಪರಿಚಯ ಇರಲಿಕ್ಕೆ ಸಾಧ್ಯವೇ ಇಲ್ಲ.ಇದಕ್ಕೆ ನಾನು ಹೊಣೆಗಾರನಲ್ಲ,ಅಂತೆಯೆ ಇನ್ನು ಬಾರದಷ್ಟು ದೂರ ಪ್ರಯಾಣ ಮಾಡಿದ ಜವಳಿಯವರನ್ನು ತಪ್ಪಿತಸ್ತರನ್ನಾಗಿ ಮಾಡಿದಲ್ಲಿ ನಾನು ಕಡು ಅಪರಾಧಿ.
  ನಿಮ್ಮ ಈ ಲೇಖನದಲ್ಲಿ ಉಲ್ಲೇಖಿಸಿದ ಎರಡು ವ್ಯಕ್ತಿಗಳ ಪರಿಚಯ ಪರಸ್ಪರವಾಗಿ ಇದೆ: "ಆಗುಂಬೆ ಚೆಕ್ ಪೋಸ್ಟಿನ ಬಳಿಯ ಚರುಮುರಿ ಡಬ್ಬಿಯವನಲ್ಲಿ ‘ಭಾರೀ ಗಂಭೀರ ಓದುಗ’ನನ್ನು ಕಂಡವರು, ಬಾಳಿಗಾರು ಮಠದ ಸ್ವಾಮಿ ‘ಪುಸ್ತಕ, ಸಂಗೀತ ಮತ್ತು ಯಕ್ಷಗಾನಗಳ ಕಡುಮೋಹಿ’ ಎಂದೇ ನನ್ನನ್ನು ಅತ್ತ ನೂಕಿದವರು ಜವಳಿ". ನಮ್ಮೂರಿಗೆ ಹೊಗುತ್ತಾ ಬರುತ್ತಾ ನಾನು ದುಡ್ಡು ಕೊಟ್ಟು ಚಾ ಕುಡಿಯುವುದು ತಿಂಡಿ ತಿನ್ನುವುದು ಆಗುಂಬೆ ಚೆಕ್ ಪೊಸ್ಟ್ ನಲ್ಲಿ ಮಾತ್ರ. ಅವರ ಚೆಟ್ಟೊಂಬಡೆ ತುಂಬಾ ಚೆನ್ನಾಗಿರುತ್ತದೆ. ಇತ್ತೀಚೆಗೆ ಒಮ್ಮೆ ಚಾ ಆಗಿ ಹೊಗಿತ್ತು. ತಮ್ಮ ಮನೆ ಖರ್ಚಿಗೆಂದು ಇಟ್ಟುಕೊಂಡಿದ್ದ ಹಾಲು ಪೊಟ್ಣ ಒಡೆದು ನಮಗೆ ಚಾ ಮಾಡಿ ಕೊಟ್ಟರು. ಅವರು ಪುಸ್ತಕದ ಹುಳ ಎನ್ನುವ ವಿಚಾರ ಗೊತ್ತಿರಲಿಲ್ಲ.ಇನ್ನೊಮ್ಮೆ ಭೆಟಿಯಾದಾಗ ಪ್ರಸ್ತಾಪ ಮಾಡುತ್ತೇನೆ.
  ಬಾಳೆಗಾರು ಮಠದ ಸ್ವಾಮಿಗಳು ಒಳ್ಳೆ ಸಂಭಾಷಣಕಾರ. ಮಾತುಗಾರನಿಗೂ ಸಂಭಾಷಣೆಗಾರನಿಗೂ ಇರುವ ವ್ಯತ್ಯಾಸ ನಾನು ನಿಮಗೆ ಹೇಳ ಬೇಕಾಗಿಲ್ಲ.

  ಇಂದಿನಿಂದ ನನಗೆ ನನ್ನ ಹೆಂಡತಿಯ ಮೇಲೆ ಆದರ ಜಾಸ್ತಿ ಆಯಿತು. ನಾನಿಷ್ಟರ ತನಕ ಆಕೆ ಕೇವಲ ಒಳ್ಳೆ ಅಡಿಗೆ ಮಾಡುವವಳು ಎಂದುಕೊಂಡಿದ್ದೆ. ಫ್ರಭಾವತಿ ನಮ್ಮ ಮನೆಗೆ ಬರುವ ಮೂರು ದಿನ ಪತ್ರಿಕೆಗಳ ಸೊಡೊಕು ಬರೆಯುತ್ತಾಳೆ. ಪತ್ರಿಕೆ ತಡವಾಗಿ ಬಂದಾಗ, ದ. ಹೀಂದೂ ಜಾಡ್ಯದ ನನಗಿಂತಲೂ ಹಚ್ಚಾಗಿ ಪತ್ರಿಕೆಯ ಹುಡುಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.
  Jai Hind,
  K C Kalkura B.A, B.L

  ReplyDelete
 6. ಆತ್ಮ್ಮೀಯರಾದ ಶ್ರೀ ಅಶೋಕವರ್ಧನ ಅವರಿಗೆ.ನಮಸ್ಕಾರ
  ಯಾವ ಪತಿಕೆಯಲ್ಲೂ ಬರದ ಅಥವ ನಾನು ಗಮನಿಸದ ಶ್ರೀ ಜವಳಿ ಅವರ ನಿಧನದ ವಾರ್ತೆ ನನ್ನನ್ನು ಒಂದರೆ ಕ್ಷಣ ತಲ್ಲಣಕ್ಕೆ ಈಡುಮಾಡಿತು. ಕಳೆದ ತಿಂಗಳು ಪೂರಾ ಆತ್ಮೀಯರ ಅದರಲ್ಲಿಯೂ ಕೆ ಎಚ್ ರಂಗನಾಥ್, ಎಚ್ ಆರ್ ದಾಸೇಗೌಡ, ದೇಶಹಳ್ಳಿ ನಾರಾಯಣ ಎಂ ವೈ ಘೋರ್ಪಡೆ ಮುಂತಾದವರ ಅಗಲಿಕೆಗಳನ್ನು ಕೇಳಿ ಸುಧಾರಿಸಿಕೊಳ್ಳುವಷ್ಟರಲ್ಲಿಯೇ ಇದೆಂಥಾ ಬರಸಿಡಿಲು...
  ಜವಳಿ ಯವರು ನನಗೆ ಪರಿಚಯವಾದದ್ದು ಬಹುಶಃ ಜಿ. ಎನ್ ಮೋಹನ್ ಅವರ ಮೂಲಕ ಎಂದುಕೊಳ್ಳುತ್ತೇನೆ. ಮಂಗಳೂರು, ಉಡುಪಿಯ ಕೆಲ ಕಾರ್ಯಕ್ರಮಗಳಲ್ಲಿ ಅವರನ್ನು ಬೇಟಿಯಾಗಿದ್ದು ಮಾತ್ರ ನೆನಪಿದೆ.ಒಂದು ಭಾರಿ ಮಾತ್ರ ಅವರ ಅಣ್ಣನವರ ಬರವಣಿಗೆಯನ್ನು ಅಚ್ಚು ಮಾಡಬೇಕು ಬೆಂಗಳೂರಿಗೆ ಬರುತ್ತೇನೆ ಎಂದಿದ್ದರು. ಆದರೆ ಬರಲೇ ಇಲ್ಲ.
  ಸಿಕ್ಖಾಗ ಸಿಕ್ಕಷ್ಟು ಹೊತ್ತು ಅವರು ಪುಸ್ತಕಗಳ ಬಗೆಗೇ ಮಾತನಾಡುತ್ತಿದ್ದರು. ದೂರದಲ್ಲಿದ್ದರೂ ಮಂಗಳೂರಿನ ಎಲ್ಲ ಸಾಹಿತ್ಯ ಚಟುವಟಿಕೆಗಳ ಹಿಂದೆ ಜವಳಿ ಇದ್ದರೆಂಬುದು ನನಗೆ ಗೊತ್ತಿತ್ತು.ಆದರೂ ಅವರು ಯಾವಾಗಲೂ ಪತ್ರಿಕೆಗಳ ಮುಖಪುಟಗಳಲ್ಲಿ, ಪ್ರಶಸ್ತಿ ಪ್ರಚಾರಗಳ ಹಾಳೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
  ಈ ಹೊತ್ತಿಗೂ ಅವರ ನಗುವಿನ ಮುಖ ನನ್ನ ಕಣ್ಣ ಮುಂದೆ ನಿಲ್ಲುತ್ತದೆ.ಜವಳಿಯವರ ಬಗೆಗೆ ನನಗೆ ಗೊತಿಲ್ಲದ ಹಲವು ವಿವರಗಳನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
  ನ. ರವಿಕುಮಾರ

  ReplyDelete
 7. ಜವಳಿ ನೆನಪು....ಸಭೆ, ಸೇರಿದ್ದ ಎಲ್ಲರಿಗೆ ಮರೆಯಾದ ಜೀವ ಚೇತನ ದ ಹೊಸ ಮಜಲಿನ ಮತ್ತು ಜವಾಬ್ದಾರಿಯ ಕರೆ ನೀಡಿದ್ದು ಹೌದು!!
  ನಾನೂ ಒ೦ದಿಸ್ಟು ಸಮಯ ಕಳೆದದ್ದು ಸಾರ್ಥಕ ನಿಮಿಶಗಳು......
  ರಾಜ ಎನ್.ಟಿ

  ReplyDelete
 8. s we lost good sir, who was with us in all movemnet . . Raviprasanna Advocate

  ReplyDelete