27 November 2011

ಜವಳಿ ಪರವಶ!

[ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು]

“ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) ಶಿಷ್ಯತ್ವದೊಡನೆ ಅವರ ಆಶಯದ ‘ದಂಡಧಾರಿ’ (ಕ್ವೀನ್ಸ್ ಬೇಟನ್ ಹಾಗೆ) ಅಂದರೆ ಅಕ್ಷರಶಃ ಸಾಹಿತ್ಯ ಕಲೆಗಳ ಕಿಂಕರ ಈ ನಾಗರಾಜರಾವ್ ಜವಳಿ. ಮಂಗಳೂರಿನ ಕೆನರಾ ಕಾಲೇಜಿನ ಖಾಲೀ ಕನ್ನಡ (ಇಲ್ಲಿ ಪಾಠಪಟ್ಟಿಯಲ್ಲಿ ಐಚ್ಛಿಕ ಕನ್ನಡ ಇಲ್ಲ) ಮೇಷ್ಟ್ರಾದರೂ ಇವರ ಆಸಕ್ತಿಗಳ ಹರಹು ಅಪಾರ. ಕನಿಷ್ಠ ವಾರಕ್ಕೊಮ್ಮೆಯಾದರೂ ನನ್ನ ಅಂಗಡಿ ಬಿಡಿ, ಊರಿನ ಎಲ್ಲಾ ಪುಸ್ತಕ ಮಳಿಗೆ ಶೋಧಿಸಿ ಪುಸ್ತಕ ಸಂಗ್ರಹ ನಡೆಸುತ್ತಿದ್ದರು. ಸಾಲದು ಎಂಬಂತೆ ಸ್ಟ್ಯಾಂಡರ್ಡ್ ಸರ್ಕ್ಯುಲೇಟಿಂಗ್ ಲೈಬ್ರೆರಿಯ ಖಾಯಂ ಸದಸ್ಯತ್ವ. ಇದ್ದ ಬದ್ದ ಆಡಿಯೋ ವೀಡಿಯೋ ಕೇಬಲ್ಲು, ವಿಡಿಯೋ ಲೈಬ್ರೆರಿಗಳು ಕೊಡುವ ಒಳ್ಳೇದೆಲ್ಲಾ ಇವರಿಗೆ ಅನುಭವಿಸಲು ಬೇಕೇಬೇಕು.

ಯಾವುದೇ ವ್ಯಂಗ್ಯಾರ್ಥವಿಲ್ಲದೇ ಹೇಳ್ತೇನೆ - ನಾದಾ (ಪ್ರೊ| ನಾ ದಾಮೋದರ ಶೆಟ್ಟಿ), ವಿದ್ವದ್ಗಾಂಭೀರ್ಯದ ಸತ್ಯ (ಪ್ರೊ| ಸತ್ಯನಾರಾಯಣ ಮಲ್ಲಿಪಟ್ನ), ಸರಸಿ ನರಸಿಂಹಮೂರ್ತಿಯರ ಗೆಳೆತನದ ಬಂಧದ ‘ದಾಸಜನ’ದಲ್ಲಿ ಜವಳಿ ಸ್ವಲ್ಪ ಸಾರ್ವಜನಿಕಕ್ಕೆ ತೆರೆದುಕೊಂಡರು. ಬಯಸದೇ ಬಂದ ಪ್ರಾಂಶುಪಾಲತ್ವವನ್ನು ಹೊಣೆಯಲ್ಲಿ ಗಟ್ಟಿಯಾಗಿಯೂ ಸಾರ್ವಜನಿಕದಲ್ಲಿ ತೀರಾ ಹಗುರಾಗಿಯೂ (ಇವರು ಕೋಟು, ಕಂಠಕೌಪೀನ ಕಟ್ಟಿದ್ದು ನಾ ನೋಡಿಲ್ಲ!) ನಿರ್ವಹಿಸಿದರು. ಎಸ್‌ವೀಪೀ ಅಥವಾ ಎಮ್ಮಾರ್ (ಎಂ ರಾಮಚಂದ್ರ) ಬಗೆಗಿನ ಅಖಂಡ ಅನುರಕ್ತಿಯಲ್ಲಿ ‘ಸಮ್ಮಾನ’ ನಡೆಸಿದರು. ಇಂದೂ ಹಳೇ ಪ್ರೀತಿಗಳು ಅವರನ್ನು ಮಂಗಳೂರಿಗೆ ಎಳೆದರೆ ಬೆನ್ನುಚೀಲ, ಹೆಲ್ಮೆಟ್ ಏರಿಸಿ, ಕಿವಿಗೆ ಮ್ಯೂಸಿಕ್ ಖಾರ್ಡ್ ತಗುಲಿಸಿ ವಿರಾಮದಲ್ಲಿ ಬೈಕರೂಢರಾಗುವುದೇ ಹೆಚ್ಚು! ಕುರಿತು ನೋಡದಿದ್ದರೆ ಜವಳಿ ಸಿಗರೇಟಿನ ಒಂದು ಕಿಡಿ, ಚಿಟಿಕೆ ಬೂದಿ. “ಅಶೋಕಾ ರಿಟೈರ್ ಆದ ಮೇಲೆ ಊರಿನಲ್ಲಿ ಮನೆ ಕಟ್ಟಿಸಿ ಆರಾಮಾಗಿ ಕೂತು ಬಿಡ್ತೇನೆ. ಇರೋ ಅಷ್ಟೂ ಪುಸ್ತಕ, ಸಂಗೀತವನ್ನು ‘ಬನ್ರಯ್ಯಾ ಅನುಭವಿಸಿ’ ಎಂದು ಸಾರ್ವಜನಿಕರಿಗೆ ತೆರೆದಿಟ್ಟು, ನನ್ನ ಪಾಡಿಗೆ ಸಂಗೀತ ಹಾಕಿ, ಪುಸ್ತಕ ಹಿಡಿದು, ಆಗೀಗ ಚಾ ಕುಡಿಯುತ್ತಾ ದಂ ಎಳೆಯುತ್ತಾ ಮಝವಾಗಿರ್ತೇನೆ’ ಎಂದದ್ದನ್ನು ತೀರ್ಥಳ್ಳಿಯಲ್ಲಿ ಅಕ್ಷರಶಃ ನಡೆಸುತ್ತಿದ್ದಾರೆ.”

ಇದಿಷ್ಟೂ ನಾನು ‘ತೀರ್ಥಯಾತ್ರೆ’ (ಇಲ್ಲೇ ಹಳೇ ಕಡತದಲ್ಲಿರುವ ಪ್ರವಾಸ ಕಥನ) ಬರೆಯುತ್ತಿದ್ದಾಗ ಸಹಜವಾಗಿ ದಾಖಲಿಸಿದ್ದೆ. ಈಗಷ್ಟೇ ಅಭಯ ಬೆಂಗಳೂರಿನಿಂದ ದೂರವಾಣಿಸಿ ತಿಳಿಸಿದ ಮೇಲೆ ತೀವ್ರ ವಿಷಾದಗಳೊಡನೆ ತಿದ್ದುಪಡಿ ಹಾಕಬೇಕಾಗಿದೆ - ನಡೆಸುತ್ತಿದ್ದರು; ಜವಳಿ ಇನ್ನಿಲ್ಲ.ಜವಳಿಯವರ ಸಹೋದ್ಯೋಗಿ, ಏಕವಚನದ ಮಿತ್ರ - ಪಾವಲಕೋಡಿ ನಾರಾಯಣ ಭಟ್ಟರ  ಮಗನ ಮದುವೆಗೆ ಬಂದವರು ನನ್ನಂಗಡಿಗೆ ಬಂದದ್ದು ಕೊನೆ. ಅವರು ಮಂಗಳೂರಿಗೆ ಕೆಲಸದ ಮೇಲೆ ಬರುವುದಿದ್ದಾಗೆಲ್ಲಾ ಹಳೆಯ ಶಿಷ್ಯ - ಜಗದೀಶ, ಜವಳಿಯವರ ಮಾತಿನಲ್ಲೇ ಹೇಳುವುದಾದರೆ ‘ಜಗ್ಗನಿಗೆ’ ಮೊದಲೇ ಸುದ್ದಿ ಹೋಗುತ್ತಿತ್ತು. ಕೋಟೆಕಾರಿನಲ್ಲಿದ್ದ ಈ ಜಗ್ಗ ಈಚೆಗೆ ಅನಿವಾರ್ಯವಾಗಿ ಗುಜರಾಥಿಗೆ ಹೋಗಿ ನೆಲೆಸಿದ್ದಾರೆ. ನಾನು ತಮಾಷೆಗೆ “ನಿಮ್ಮ ಪ್ರಿಯ ಸಾರಥಿ ಜಗ್ಗ ಇಲ್ಲವಲ್ಲಾ ಸ್ವಾಮೀ” ಅಂತ ಹೇಳಿದಾಗ ಅವರು ನಗಲಿಲ್ಲ. ಹಿಂದೆ ಒಂದೆರಡು ಬಾರಿ ನಾನು ದೂರವಾಣಿಸಿದಾಗ, ಅಂತರ್ಜಾಲದಲ್ಲಿ ಸಿಕ್ಕು ವಿಸ್ತಾರ ಚಾಟಿಗೆ ಎಳೆದಾಗಲೂ ಹೀಗೇ ಮುದುರಿಕೊಂಡಿದ್ದರು. ಹಾಗೇ ನನ್ನ ಲೇಖನಗಳಿಗೆ ಪ್ರತಿಕ್ರಿಯೆ ಕೇಳಿದಾಗಲೂ ಮಾತಿನಲ್ಲೇ “ಏ ಅಶೋಕಾ, ಕುಶ್ಶೀಲಿ ಒಂದನ್ನೂ ಬಿಡದೆ ಓದ್ತೀನಿ. ಪ್ರತಿಕ್ರಿಯೆ ನಮ್ದೆಲ್ಲಾ ಎಂಥ ಮಾರಾಯಾ” ಅಂತ ಜಾರಿಸಿ ಬಿಡುತ್ತಿದ್ದರು. ಎಷ್ಟೋ ಸಮಯದ ಮೇಲೆ ಅವರೂ ಒಂದು ಬ್ಲಾಗ್ ಬರೆಯುತ್ತಿದ್ದಾರೆಂದು (http://tungatheera.blogspot.com) ಯಾರದ್ದೋ ಮೂಲಕ ತಿಳಿದು ಬಂದಾಗ “ನೇರ ನೀವೇ ಯಾಕೆ ತಿಳಿಸಲಿಲ್ಲ” ಅಂತ ಮುನಿಸಿದೆ. ಕಿರು ನಗೆ ಮಾತ್ರ ಸೂಸಿದರು. ಮತ್ತೆ ಬ್ಲಾಗ್ ನೋಡಿದೆ. ಯಾರೂ ಅವರನ್ನು ದೊಡ್ಡದಾಗಿ ಕಂಡಾಗ ಅವರ ಪ್ರತಿಕ್ರಿಯೆಗಳಲ್ಲಿರುತ್ತಿದ್ದ ಯಾವುದೋ ತೀವ್ರ ವಿಷಾದದ ಸುಳುಹು ಬ್ಲಾಗಿನಲ್ಲೂ ಕಾಣಿಸಿತು. ‘ಅಯ್ಯೋ ಎಲ್ಲರೂ ಬಿಜಿ ಇರ್ತಾರೆ ಮಾರಾಯ. ನಂದ್ಯಾಕೆ.’ ಎಲ್ಲರಿಗೂ ಬೇಕಾಗಿಯೂ ಏಕಾಂತದಲ್ಲೇ ಕಳೆದುಹೋಗುತ್ತಿದ್ದ ಜವಳಿ, ಕಾಲದ ಫಿತೂರಿಯಲ್ಲಿ ಮನೆಯಲ್ಲಿ ಒಬ್ಬರೇ ಇದ್ದಾಗ ಏನೂ ಬಿಚ್ಚಿಕೊಳ್ಳದೇ ಸಂದುಹೋದರು! (ಅವರ ಹೆಂಡತಿ ಬೆಂಗಳೂರಿನಲ್ಲಿದ್ದರಂತೆ. ಏಕೈಕ ಮಗ ವೃತ್ತಿ ನಿಮಿತ್ತ ಇನ್ನೆಲ್ಲೋ ಇದ್ದ. ಪಕ್ಕದ ಮನೆಯಲ್ಲೇ ಇದ್ದ ಇವರಣ್ಣನ ಮೊಮ್ಮಗ, ಪುಟಾಣಿ ಎಂದಿನಂತೆ ಅಜ್ಜನೊಡನೆ ಬೆಳಗ್ಗಿನ ಹರಟೆ ಹೊಡೆಯಲು ಬಂದಾಗ ಬಾಗಿಲು ತೆರೆಯಲಿಲ್ಲವಂತೆ. ದೊಡ್ಡವರು ಬಂದು ಕದಮುರಿದು ನೋಡಿದಾಗ (ಅನಂತರ ತಿಳಿದಂತೆ ಹೃದಯಾಘಾತವಾಗಿ) ಕುಳಿತಲ್ಲೇ ಪೂರ್ಣ ಪರವಶರಾಗಿದ್ದರು. ಅಧ್ಯಾಪನ, ಪ್ರಾಂಶುಪಾಲತ್ವದ ಅಧಿಕಾರದಲ್ಲಿದ್ದಾಗಲೂ ಗುರುಹಿರಿಯರ, ವಿದ್ಯಾರ್ಥಿಗಳ, ಮಿತ್ರರ, ಅಜ್ಞಾತರೇ ಇರಲಿ ಒಳ್ಳೆಯ ಸಾಹಿತಿ ಕಲಾಕಾರರ ಗುಣಗಳಿಗೆ ವೇದಿಕೆ ಕಲ್ಪಿಸುವಲ್ಲೂ ತನ್ನನ್ನು ಮುಂದುಮಾಡಿಕೊಳ್ಳದ ಸ್ವಭಾವಕ್ಕನುಗುಣವಾಗಿ ಮರಣಾಂತಿಕ ನೋವಿನಲ್ಲೂ ಮೌನವಾಗುಳಿದದ್ದು ಮತ್ತೆ ನೆನಪಿಗೆ ತರುತ್ತದೆ ‘ಮಹಾತ್ಮರನ್ನು ಮರಣದಲ್ಲಿ ನೋಡು.’

24 comments:

 1. Priya Ashokavardhan, tumbaa aatmiiya sahaja baraha -namma Javali bagge.Avarobba Saahitya avadhuuta.IIgataane Javali ila emba suddi keli aaghaatagonda manassige nimma baraha odi saantvana sikkitu.
  Viveka Rai

  ReplyDelete
 2. ಅಶೋಕ ಬಾವ, ಜವಳಿಯವರು ಅಗಲಿದ ವಿಷಯ ತಿಳಿದು ಬೇಸರವಾಯಿತು. ಅವರನ್ನು ನಾನು ನೋಡಿದ್ದೆ, ಅವರ ಬಗ್ಗೆ ತಿಳಿದುಕೊಂಡಿದ್ದೆ - ಮುಖತ: ಭೇಟಿಯಾದದ್ದಿಲ್ಲ. ನೀನು ಪ್ರಸ್ತಾವಿಸಿದ ಪಾವಲಕೋಡಿಯವರ ಮಗನ ಮದುವೆಗೆ ನಾನು ಮತ್ತು ಅಮ್ಮ ಹೋಗಿದ್ದೆವು - ಹುಡುಗಿ ಬಾಲುವಿನ (ಬಾಲಚಂದ್ರ ಭಟ್, ಅಮ್ಮನ ಸೋದರಮಾವನ ಮಗ)ತಂಗಿ. ಅಲ್ಲಿ ಜವಳಿಯವರನ್ನು ಕಂಡೆ. ಜವಳಿಯವರನ್ನು ಭೇಟಿಯಾಗಿ ಅಮ್ಮ ಮಾತನಾಡಿದ್ದಾಳೆ. ಅಮ್ಮ ನೆನಪಿಸಿಕೊಳ್ಳುವುದುಂಟು - ಕರಾವಳಿ ಲೇಖಕಿಯರ ಸಂಘದವರು, ನಿನಗೆ ಗೊತ್ತಿರುವಂತೆ, ಇತ್ತೀಚೆಗೆ ಕುಪ್ಪಳ್ಳಿಗೆ ಹೋದ ಸಂದರ್ಭ. ಅವರಿಗೆ ಜವಳಿಯವರ ಆತಿಥ್ಯ ಮತ್ತು ಮಾರ್ಗದರ್ಶನ. ಅಮ್ಮ ನಾಸಿಕಕ್ಕೆ ಹೋಗಿದ್ದಾಳೆ ತನ್ನ ಅಣ್ಣನನ್ನು ನೋಡಿ ಬರಲು. ಜವಳಿ ಇನ್ನಿಲ್ಲವೆಂದರೆ ತುಂಬ ನೋವಾಗಬಹುದು ಅವಳಿಗೆ. ನೀನು ಕೊಟ್ಟ ಲಿಂಕ್ ಮೂಲಕ ಜವಳಿಯವರ ಬ್ಲಾಗಿನಲ್ಲಿ ಇಣುಕಿದೆ. ಬೆರಗಾದದ್ದು - ಪ್ರತಿ ಬರಹದ ಕೊನೆಗೆ ಈ ವಾರದ ಅವರ ಓದಿನ ಪಟ್ಟಿ. ಕಳೆದು ಹೋದ ವರುಷ ಎನ್ನುವ ಬರಹದಲ್ಲಿ ದೀರ್ಘ ಪಟ್ಟಿ ಕೊಟ್ಟಿದ್ದಾರೆ- ಆ ಪಟ್ಟಿ ನ್ಯೋಡಿದರೆ ಸಾಕು ಅರ್ಥ ಆಗುತ್ತದೆ - ಎಲ್ಲರಂಥವನಲ್ಲ ಈ ಮನುಷ್ಯ !
  ಅಯ್ಯೋ, ನಮ್ಮ ಹೆಚ್ಚಿನವರದ್ದು ವಾರದ ಪಟ್ಟಿ ಬಿಡು, ವರ್ಷಕ್ಕೊಂದು ಇದ್ದರೆ ಅದುವೇ ಅದ್ಭುತವೇನೋ. ಕುತೂಹಲಕ್ಕೆ ಇಷ್ಟೆಲ್ಲ ಓದಿಕೊಂಡ ಅವರ ಬರಹದ ಹರವು ಎಷ್ಟು? ಬ್ಲಾಗಿನ ಬರಹಗಳು ಸರಳ, ಸುಂದರ. ಇವರು ಲೆಕ್ಕಕ್ಕೆ ಮೇಷ್ಟ್ರಲ್ಲ. ಕನ್ನಡಕ್ಕೆ ಮೇಷ್ಟ್ರು ತಾನೇ.
  ಇಷ್ಟೆಲ್ಲ ಓದಿಕೊಂಡ ಅವರ ಹತ್ತಿರ ಮಾತನಾಡಿದರೆ ಎಷ್ಟು ಸಮೃದ್ಧ ವಿಚಾರಗಳು ಸಿಗುತ್ತಿರಬಹುದು! ಛೇ, ಒಮ್ಮೆಯಾದರೂ ಮಾತನಾಡಬೇಕಿತ್ತು ಇವರೊಡನೆ. ನಾವೆಲ್ಲ ಹರಟೆಯಲ್ಲಿಯೇ ಕಾಲ ಕೊಲ್ಲುತ್ತಿರುವಾಗ ಜವಳಿಯವರು ಓದಿನಲ್ಲಿ ಅರ್ಥ ಹುಡುಕುತ್ತಿದ್ದರು. ಇವರ ಓದಿನ ಆಸಕ್ತಿ ಆಧ್ಯಾಪಕರಾದ ನಮಗೆಲ್ಲರಿಗೂ ಅನುಸರಣೆಗೆ ಯೋಗ್ಯ ಎನ್ನುವುದಕ್ಕಿಂತ ಅನುಸರಿಸತಕ್ಕದ್ದು ಅಂದರೆ ಹೆಚ್ಚು ಸರಿ. ಅದ್ಯಾಪಕ ಓದಿಕೊಳ್ಳದೇ ಹೋದರೆ ಅಧ್ವಾನವನ್ನೇ ಮಾಡುತ್ತಾನೆಂದು ಓದಿದ ನೆನಪು.

  ReplyDelete
 3. ಮೋಟರ್ ಸೈಕಲ್ ಸರದಾರ ಜವಳಿಯವರನ್ನು ಮೊಕ್ತಾ ಕಾಣುವ ಅವಕಾಶ ತಪ್ಪಿಹೋಯಿತು. ಹುಟ್ಟು ಸಾವು ನಮ್ಮಕೈಯ್ಯಲ್ಲಿ ಇಲ್ಲ. - ಪೆಜತ್ತಾಯ

  ReplyDelete
 4. ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು.
  ನಾನು ಈಗ ತಾನೆ ಬೆಂಗಳೂರಿನಿಂದ ಬಂದೆ. ಅಂಚೆ ತೆರೆದಾಗ ಆಘಾತವಾಯಿತು. ನಮ್ಮೆಲ್ಲರ ಪ್ರೀತಿಯ ನಾಗರಾಜರಾವ್ ಜವಳಿಯವರು ಇನ್ನಿಲ್ಲವೆಂಬ ಸುದ್ದಿಯನ್ನು ನಂಬುವುದಕ್ಕೆ ಕಷ್ಟವಾಯಿತು.
  ಅವರ ಕಳೆದ ಸಲದ ಹುಟ್ಟುಹಬ್ಬಕ್ಕೆ ಹಾರೈಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದೇ ನನಗೆ ಅವರ ಕೊನೆಯ ಸಂಪರ್ಕ. ನನಗೆ ಅವರು ತೀರ್ಥಹಳ್ಳಿಯಷ್ಟೇ ಕನ್ನಡ ಜಿಲ್ಲೆಯಲ್ಲಿಯೂ ಇದ್ದ ಆತ್ಮೀಯ ಸಂಬಂಧವಾಗಿದ್ದರು.
  ಪಂಡಿತಾರಾಧ್ಯ

  ReplyDelete
 5. ಸಜ್ಜನ ಜವಳಿಯವರ ಒಡನಾಟ ಖುಷಿ ಕೊಡುತ್ತಿತ್ತು. ಅವರಿನ್ನು ಇಲ್ಲವೇ?

  ReplyDelete
 6. ಎಸ್.ಎಂ ಪೆಜತ್ತಾಯರಿಗೆ ಜವಳಿಯವರು ಬರೆದಿದ್ದ ಪತ್ರ:

  ಹಿರಿಯರಾದ ಶ್ರೀ ಪೆಜತ್ತಾಯರಿಗೆ,

  ಆದರಪೂರ್ವಕ ನಮಸ್ಕಾರಗಳು. ನನ್ನ ಪರಿಚಯ ನಿಮಗಿಲ್ಲ. ಆದರೆ ನಿಮ್ಮ ಪರಿಚಯ ನಿಮ್ಮ ಕೃತಿ-ಕಾಗದದ ದೋಣಿಯ-ಮೂಲಕ ನನಗೆ ಆಯಿತು. ಹಾಗಾಗಿ ಈ ಪತ್ರ. ನನ್ನ ಆತ್ಮೀಯರೂ ಮತ್ತು ಸಹಪಾಠಿಗಳೂ ಆದ ಶ್ರೀ ಶರತ್ ಕಲ್ಕೋಡ್‌ರು ನಿಮ್ಮ ಪುಸ್ತಕವನ್ನು ಬಹಳ ಆಸಕ್ತಿಯಿಂದ ನನಗೆ ಕಳುಹಿಸಿಕೊಟ್ಟು ಒಮ್ಮೆ ಓದಿನೋಡಿ ಎಂದು ಹೇಳಿದರು. ೧೯೭೨ ರಿಂದ ೨೦೦೭ರವರೆಗೆ ಕಾಲೇಜಿನಲ್ಲಿ ಕನ್ನಡ ಕಲಿಸುವ, ಕೊನೆಯ ಐದು ವರ್ಷ ಪ್ರಾಚಾರ್ಯನಾಗಿ ದುಡಿದ ನನಗೆ ಓದುವದೇ ಹವ್ಯಾಸ ಮತ್ತು ಪುಸ್ತಕದ್ದೇ ಹಸಿವು. ನನ್ನ ಅಭಿರುಚಿ ಶ್ರೀ ಶರತ್‌ಗೆ ತಿಳಿದಿದ್ದರಿಂದ ನಿಮ್ಮ ಪುಸ್ತಕ ಓದುವ ಅವಕಾಶ ಸಿಕ್ಕಿತು. ನಾನೀಗ ನಿವೃತ್ತನಾಗಿ ನನ್ನೂರಾದ ತೀರ್ಥಹಳ್ಳಿಯಲ್ಲಿ ಮನೆಯನ್ನು ಕಟ್ಟಿಕೊಂಡು ಪೂರ್ಣಕಾಲಿಕ ಓದುಗನಾಗಿದ್ದೇನೆ. ಒಂದು ಸಮಸ್ಯೆಯೆಂದರೆ ಇಲ್ಲಿ ಹೊಸ ಪುಸ್ತಕಗಳು ಸಿಗುವುದಿಲ್ಲ. ನಿಮ್ಮ ಪುಸ್ತಕ ನನಗೆ ಬಹಳ ಸಂತೋಷವನ್ನು ತಂದುಕೊಟ್ಟಿತು. ಅದರಲ್ಲೂ ನಿಮ್ಮ ಬಾಲ್ಯದ ಜೀವನದ ಭಾಗ ಬಹಳ ಖುಷಿಯನ್ನು ತಂದುಕೊಟ್ಟಿತು. ನಿಮ್ಮ ಬಾಲ್ಯ ಸ್ನೇಹಿತರು, ಅಂದಿನ ಕಾಲದಲ್ಲಿ ಹಳ್ಳಿಯಲ್ಲಿ ಬಹಳ ನಿಷ್ಠೆಯಿಂದ ಮುಗ್ಧ ಪ್ರೀತಿಯನ್ನು ತೋರಿಸುತ್ತಿದ್ದ ಜನರು, ಆ ಲೋಕದ ಪರಿಚಯವನ್ನು ನೀವು ಚೆನ್ನಾಗಿ ಮಾಡಿಕೊಟ್ಟಿದ್ದೀರಿ. ನಿಮ್ಮ ಸಾಹಸದ ವರ್ಣನೆ-ಎನ್.ಸಿ.ಸಿ ದಿನಗಳು , ಸರೋಜಮ್ಮನವರ ೪೨ನೇ ಹುಟ್ಟುಹಬ್ಬ- ಈ ಘಟನೆಗಳು ಮೈನವಿರೇಳಿಸುವಂತಹವುಗಳು. ನೀವು ಚಿತ್ರಿಸಿದ ವ್ಯಕ್ತಿಪರಿಚಯಗಳೂ ಕೂಡ ಚೆನ್ನಾಗಿ ಬಂದಿವೆ. ನಿಮ್ಮ ಪುಸ್ತಕ ಓದುತ್ತಿದ್ದಂತೆ ಕಾಲಚಕ್ರ ಹಿಂದೆ ಹೋದಂತಾಯಿತು. ಈಗೆಲ್ಲಿ ಸಿಗುತ್ತಾರೆ ಇಂತಹ ವ್ಯಕ್ತಿಗಳು? ಮತ್ತೆಲ್ಲಿ ಪಡೆಯಬಹುದು ಇಂತಹ ಅನುಭವಗಳನ್ನು? ಎಲ್ಲಿ ಹೋದವೋ ಆ ಕಾಲ?. ಬದಲಾದ ಈ ಕಾಲದಲ್ಲಿ ನಾವು ಅಮೂಲ್ಯವಾದುದನ್ನೇ ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ. ನಿಮಗೆ ನಿಮ್ಮ ಮಕ್ಕಳಿಗೆ, ಮನೆಯವರಿಗೆ ಎಲ್ಲರಿಗೂ ನಮಸ್ಕಾರ ತಿಳಿಸಿ. ಮತ್ತು ನಿಮ್ಮ ಪುಸ್ತಕಕ್ಕಾಗಿ ತುಂಬು ಅಭಿನಂದನೆಯನ್ನು ಸ್ವೀಕರಿಸಿ.

  ನಿಮ್ಮ
  ನಾಗರಾಜ ರಾವ್ ಜವಳಿ

  ReplyDelete
 7. ಪ್ರಿಯ ಅಶೋಕರೆ ,

  ಜವಳಿಯವರ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ಸಾವೆಂಬುದು ಮಾನವನ ಬದುಕಿನಲ್ಲಿ ಒಂದು ವಿಚಿತ್ರವಾದ ಮತ್ತು ಅಸ್ಪಷ್ಟವಾದ ಅವಸ್ಥೆ . ಅದು ತನಗೆ ತಾನೇ ಸಂವಹನ ವಿರೋಧಿ ಎಂಬ ಅಭಿಪ್ರಾಯದ ಬಗ್ಗೆ ಯೋಚಿಸುತಿದ್ದೆ. ನನ್ನ ಸಂಪಾದಕತ್ವದ ಕೂಟವಾಣಿ ಎಂಬ ಮಾಸಿಕಕ್ಕೆ "ಸಾವು ಎಂಬ ಸಿದ್ಧರೂಪಕ" ಎಂಬ ಲೇಖನ ಬರೆಯುತ್ತಿರುವಾಗಲೇ ನನಗೆ ಸ್ವಲ್ಪ ಮಟ್ಟಿಗೆ ಗೊತ್ತಿರುವ ಇನ್ನು ಪೂರ್ತಿ ಅರ್ಥವಾಗದಿರುವ ಜವಳಿಯವರ ಸಾವಿನ ವಾರ್ತೆ ಹೆದ್ದೆರೆಯೆಂತೆ ಅಪ್ಪಳಿಸಿದೆ. ನಾನು ಜವಳಿಗಾಗಿಯೇ ಅದೆಷ್ಟೋ ಬಾರಿ ಕೆನರಾ ಕಾಲೇಜಿಗೆ ಭೇಟಿ ನೀಡಿದ್ದೆ. ಮೊನ್ನೆ ಪಾವಲಕೋಡಿ ನಾರಾಯಣ ಭಟ್ಟರ ಮಗನ ಮದುವೆಯಲಿ ಕಾರಿನ ಹತ್ತಿರ ಸುಮಾರು ೧೦ ನಿಮಿಷ ಮಾತುಕಥೆ ನಡೆಸಿದರು. ಕೆನರಾ ಕಾಲೇಜಿನ ಮಾಧವಾಚಾರ್ಯರ ಸೊಸೆ ನಿಮ್ಮ ಸಂಬಂಧವಲ್ಲವೇ ಎಂದು ಕೇಳಿದರು. ಆಗ ಹೌದು ಅವರು ನನ್ನ ಸೋದರ ಮಾವನ ಮಗಳು, ನಿಮ್ಮ ಊರಿನ "ಎಮ್ಮೆ" ಮಂಜರ ಮೊಮ್ಮಗಳು ಎಂದೆ ಅದಕ್ಕೆ ಅವರು ಅಭಿಮಾನದಿಂದ ಎಮ್ಮೆ ಮಂಜರ ಸಾರಿನ ರುಚಿ ಇವತ್ತಿಗು ನೆನಪಿದೆ ಎಂದರು. ಜವಳಿಯವರ ಅಗಲಿಕೆಯ ನೋವು ನಮ್ಮೆಲರನ್ನು ಕಾಡಿದೆ.

  - ಡಾ ಪಾ ನ ಮಯ್ಯ ಮತ್ತು ಪಿ. ತಾರ ಮಯ್ಯ

  ReplyDelete
 8. Olleya Jana bega Kalanige Priyavagibidthare. Devaru avarantha innashtu janarnnu belakige tharali. Avara Aadarsha, havyasa itararige madariyagali.

  ReplyDelete
 9. ಶ್ರೀಯುತರ ಪರಿಚಯ ನನಗಿಲ್ಲವಾದರೂ ಅವರ ಕುರಿತು ಇತರರು ಹೇಳುವುದನ್ನು ಕೇಳಿದ್ದೆ. ಲೇಖನ ಅವರ ಕುರಿತು ಇನ್ನಷ್ಟು ಮಾಹಿತಿ ಒದಗಿಸಿತು.

  ReplyDelete
 10. sir,
  javaliyavara swaradalle ondu bageya sangeetha mattu maadhurya ittu. Computer andre kannadada adhyapakaru hinjariyuttidda kaladalli avaru adannu leelaajaalavagi balasi nammannnella kudrisi heluttiddudu eega kivi-kanna mundide.
  Tumba Dhukkavaytu.

  Nithyananda B Shetty

  ReplyDelete
 11. He will be in our memory all the time

  ReplyDelete
 12. ಜವಳಿಯವರು ಇನ್ನಿಲ್ಲ. ದಾಸಜನದ ಮೂಲಕ ಮಂಗಳೂರಿನಲ್ಲಿ ಸಾ೦ಸ್ಕ್ರತಿಕ ರಾಯ ಭಾರಿಯಾಗಿದ್ದವರು. ಬಹಳ ದು:ಖವಾಯಿತು ಅವರ ನಿಧನದ ಸುದ್ದಿ ಕೇಳಿ

  ಅರೆಹೊಳೆ ಸದಾಶಿವ ರಾವ್

  ReplyDelete
 13. priya ashok,
  javali nirgamisida suddi bandaaga naanu bangalurinallidde. anthima darshanakkendu thirthahallige hodaaga avaru malagiddaru. nannannu kandu eddu baruvarendu bhaavisi thumba hottu kaade avaru elale illa. sittige kaaranavilla. ekendre avaru sittu maadikolluvude illa. hotturaatriyayitendu, avaru elale illavendu besaradinda marali bangalurige bande. naanu banda mele eddirabahude?.....naada

  ReplyDelete
 14. Javaliyavara athmeeyathe, preethige samaanavagi mathondilla. Ninne idee avaradde gunginallidde. Avara gauravapoorvaka vidaya namanagalu.

  varadaraja chandragiri, puttur

  ReplyDelete
 15. Sooktha baraha. Javali orva appata sajjana mitrashreshta , samartpitha naaija sahityapremi , vidyaapremi . anireekshitha nidhasna bahu khedakara.

  mprabhakara joshy

  ReplyDelete
 16. ಪ್ರಿಯ ಅಶೋಕ ವರ್ಧನ್ ಅವರಿಗೆ:

  ನಮಸ್ಕಾರ. ಅಪರೂಪಕ್ಕೆ, ಈ ಸಲ ಬಂದ ನಿಮ್ಮ ಪತ್ರ/ಲೇಖನ ಸಂತೋಷವನ್ನು ಕೊಡಲಿಲ್ಲ. ಇಷ್ಟು ಅಕಾಲಿಕವಾಗಿ ಪ್ರೊ. ಜವಳಿ ಅವರು ನಮ್ಮನ್ನು ಬಿಟ್ಟುಹೋದುದು ತುಂಬಾ ದುಃಖದ ಸಂಗತಿ. ಇದರೊಡನೆ, ನೀವು ಅವರಿಬ್ಬರ ಫೋಟೋ ಕೂಡಾ ಹಾಕಿದ್ದೀರಿ; ಖಿನ್ನತೆ ಹೆಚ್ಚಾಯಿತು.
  ನೀವು ನಿಮ್ಮ ’ಅಶ್ರು ತರ್ಪಣ’ದಲ್ಲಿ ದಾಖಲಿಸಿದಂತೆ, ಪ್ರೊ. ಜವಳಿ ಒಳ್ಳೆಯ ಸ್ನೇಹಿತರು, ಇತರರನ್ನು ಬೆಳಕಿಗೆ ಬಿಟ್ಟು ತಾವು ಹಿಂದೆ ಇದ್ದು, ಎಲ್ಲಾ ಕಾರ್ಯಗಳನ್ನೂ ಸಮರ್ಥವಾಗಿ ನಡೆಸುತ್ತಿದ್ದರು. ಮಂಗಳೂರಿನಲ್ಲಿ ಅವರು ’ಮುಕ್ತ’ವಾಗಿ ತಮ್ಮ (ಕೆನರಾ ಕಾಲೇಜಿನ) ಸಭಾಂಗಣವನ್ನು ಸಾಹಿತ್ಯಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದುದು ಮತ್ತು ಕೆಲ ಸಂದರ್ಭಗಳಲ್ಲಿ ತಾವೇ ಮೊದಲು ಬಂದು ಆ ಸಭಾಂಗಣವನ್ನು ಸಜ್ಜುಮಾಡುತ್ತಿದ್ದುದು ಇನ್ನೂ ನೆನಪಿನಲ್ಲಿ ಹಸಿರಾಗಿದೆ. ತೀರ್ಥಹಳ್ಳಿಗೆ ಹಿಂತಿರುಗಿದ ಮೇಲೆ, ಸ್ವಲ್ಪ ಮಂಕಾದಂತೆ ಕಾಣುತ್ತಿದ್ದರು; ಈಗ ಮಂಕಾಗುವ ಸಮಯ ನಮ್ಮದು.

  ಅವರ ಆತ್ಮಕ್ಕೆ ಶಾಂತಿ ಕೊರುವ,
  ರಾಮಚಂದ್ರನ್.

  ReplyDelete
 17. ಅವಧಿಯಿಂದ:
  ಹತ್ತು ವರ್ಷಗಳ ಹಿಂದೆ ನನ್ನ ಒಂದು ಯೋಜನೆಗೆ ಮಾರ್ಗದರ್ಶಕರಾಗುವಂತೆ ಕೇಳಿದಾಗ
  ತಕ್ಷಣ ಒಪ್ಪಿಕೊಂಡದ್ದು ಮಾತ್ರವಲ್ಲ ಮನೆಗೆ ಕರೆದು ಊಟ ಹಾಕಿ, ತಮ್ಮಲ್ಲಿದ್ದ ಅಮೂಲ್ಯ
  ಪುಸ್ತಕಗಳನ್ನು ನೀಡಿ ತಂಗಿಯೆಂದು ಕರೆದು ಉಪಚರಿಸಿದ ಈ ಅಪರೂಪದ ವ್ಯಕ್ತಿ ಇವತ್ತು
  ಇಲ್ಲವೆಂದರೆ ನಂಬುವುದು ಸಾಧ್ಯವಾಗುತ್ತಿಲ್ಲ. ಬದುಕಿನಲ್ಲಿ ಭರವಸೆಯನ್ನು ಇಟ್ಟುಕೊಳ್ಳಲು
  ಇವರಂತಹವರೇ ನಮಗೆ ಬೇಕಾಗಿರುವುದು.

  ಗೀತಾ ಶೆಣೈ, ಬೆಂಗಳೂರು

  ReplyDelete
 18. by Richard Lasrado

  Mangalore: The city-based 'Dasajana' quartet comprising four intellectuals has been known for having organized tasteful literary and cultural programmes here during the past decades.

  The curious acronym 'Dasajana' - representing the first syllables of their names, Dr Na Da Shetty, ProfSatyanarayana Mallipatna, Nagaraja Rao Javali and Sarasi Narasimhamurthy - made a formidable combination of intellect, scholarship, selfless dedication, innovation and a burning desire to provide the public with something new, something different.

  Sadly, one of the pillars of Dasajana, has collapsed on Sunday, November 27. Nagaraja Rao Javali (63) died of cardiac arrest at home in Tirthahalli in Shimoga district in the morning. His wife was away in Bangalore and his only son too was out of station on work.

  Javali is said to have been alone at home and had retired for the day on Saturday. A relative from the neighbourhood came to meet him on Sunday morning, only to find him having passed away peacefully in sleep.

  Javali had great mentors in Prof M Ramachandra of Karkala and Prof S V Parameshwara Bhat ('SVP'). He spent almost his entire working career as a Kannada teacher at Canara College here. He was an avid collector of books, music and anything of good taste, recalls Ashokavardhana of Athree Book Centre, adding that at least three times a week he used to spend some time in the evenings at his outlet during his stay in the city.

  His death is a great loss to the intellectual and cultural world, said his former associates here. Ashokavardhana sounded to be in too much of grief to say much.

  Others who knew him from close quarters, like Prof B A Viveka Rai, Dr P N Maiya and Dr Purushottam Bilimale, have expressed shock over his sudden demise. Prof Rai referred to him as 'sahitya avadhoota' (a literary sage).

  Javali has left behind a void, much difficult to fill. Nevertheless, the Dasajana quartet should continue its mission, all the more to commemorate his contribution as well as memory.

  ReplyDelete
 19. javali avra bagge nange gotilla adre avra contributions bagge tilisidakke thanks.its really a great loss to everyone.

  ReplyDelete
 20. ಪ್ರೊ| ನಾಗರಾಜ ರಾವ್ ಜವಳಿಯವರ ಪರಿಚಯವನ್ನು ನೀಡಿದ್ದಕ್ಕೆ ಧನ್ಯವಾದಗಳು. ಅವರ ನಿಧನದ ವಾರ್ತೆ ಓದಿ ವಿಷಾದವಾಯಿತು. ಅವರ ಆತ್ಮಕ್ಕೆ ಚಿರ ಶಾ೦ತಿ ಸಿಗಲಿ ಹಾಗೂ ಅವರ ಕುಟು೦ಬದ ಸದಸ್ಯರಿಗೆ ಅವರನ್ನು ಅಗಲಿದ ನೋವನ್ನು ತಡೆಯುವ ಶಕ್ತಿ ನೀಡಲಿ ಎ೦ದು ಭಗವ೦ತನಲ್ಲಿ ಪ್ರಾರ್ಥನೆ.

  ReplyDelete
 21. I felt sad when I read the news in the news paper.I have enjoyed the simplicity, intimacy and informality of his friendship.He is a memorable friend to be cherished always in the mind.

  ReplyDelete
 22. ಪ್ರೊ.ಜವಳಿಯವರು ಎಲ್ಲರಿಗು ಬೇಕಾದವರಾಗಿದ್ದರು. ಹೃದ್ಯವಾಗಿ ಅವರ ಬಗ್ಗೆ ಬರೆದಿದ್ದೀರಿ.
  ಅಜಕ್ಕಳ ಗಿರೀಶ

  ReplyDelete
 23. Preethiya AshokaVardhanare,
  Javaliyavara bagge tumba hridaya muttuva haage baredidderi.Innondu sala avara vyaktitva kaNnige katti mana tumbi bantu.
  T. Indira

  ReplyDelete