30 October 2011

ಹಾರೋಣ ಬಾಆಆಆಆಆಆ


(ಕರಾವಳಿಗೆ ಹೊಸ ಸಾಹಸ ಕ್ರೀಡೆ - ಭಾಗ ಒಂದು)

೧೯೮೦ರ ದಶಕದ ಮೊದಲ ಭಾಗದಲ್ಲಿ ಸ್ಕೈ ರೈಡರ್ಸ್ ಎಂಬ ಇಂಗ್ಲಿಷ್ ಸಿನಿಮಾ ನೋಡಿದಾಗ ಒಮ್ಮೆಲೇ ನನಗೆ ಬಗಲಲ್ಲಿ ರೆಕ್ಕೆ ಮೊಳೆಯುವ ನೋವು ಶುರುವಾಗಿತ್ತು. ಗಡಿಬಿಡಿಯಾಗಬೇಡಿ, ಅದು ಹ್ಯಾಂಗ್ ಗ್ಲೈಡಿಂಗ್ ಅಥವಾ ನೇತು ತೇಲಾಟದ ಹುಚ್ಚು. ಯಾವುದೇ ಕೋಡುಗಲ್ಲ ನೆತ್ತಿ, ಶಿಖರಾಗ್ರಕ್ಕೆ ಹೋದರೆ “ಹೂಪ್” ಎಂದು ಉದ್ಗರಿಸಿ, ಬಾನಾಡಿಗಳೊಡನೆ ರೆಕ್ಕೆ ಜೋಡಿಸುವ ತುಡಿತಕ್ಕೆ ಇಲ್ಲಿತ್ತು ಸುಲಭ ದಾರಿ. ಕಡಲತಡಿಯ ಗಾಳಿಯ ಹೆಗಲೇರಿ ಸುಂದರ ದೃಶ್ಯ ಹೊಸೆಯುವ ಕಡಲಕ್ಕಿಗಳ ಗೆಣೆಕಾರರಾಗುವ ಅವಕಾಶ ನೇತು ತೇಲಾಟದಲ್ಲಿತ್ತು. ಸೂರ್ಯನತ್ತ ಹಾರಿದ ಮರಿ ವೈನತೇಯ ಇನ್ನು ಪುರಾಣ ಕಲ್ಪನೆಯಲ್ಲ. ಫ್ಯಾಂಟಮ್ ಸಾಹಸಗಳ ಚಿತ್ರಕಥೆಯಲ್ಲಿ ಬಂದ ಗರುಡನ ಬಳಗದ ಠಕ್ಕು, ಇಲ್ಲಿ ವಾಸ್ತವ. ಎಲ್ಲಕ್ಕೂ ಮಿಗಿಲಾಗಿ ರೈಟ್ ಸೋದರರ ಮೂಲ ಆಶಯ - ಸಾಮಾನ್ಯನಿಗೆ ಹಾರಾಟ, ನೇತು ತೇಲಾಟದಲ್ಲಿ ನಮಗೂ ದಕ್ಕುವಂತಿತ್ತು; ಕಾರ್ಯರೂಪಕ್ಕೆ ಇಳಿಸುವುದಷ್ಟೇ ಬಾಕಿ!

ಸುದ್ದಿಯ ಎಳೆ ಹಿಡಿದು ಅಮೆರಿಕಾದಿಂದ ತಮ್ಮ ಆನಂದನ ಮೂಲಕ ಪುಸ್ತಕವೊಂದನ್ನು ತರಿಸಿಕೊಂಡ ಮೇಲಂತೂ ನನಗೆ ಭೂಮಿ ವ್ಯಾಪಿಸಿದ ತ್ರಿವಿಕ್ರಮ ಪಾದ ಆಕಾಶಕ್ಕೆ ತಿರುಗಿದ್ದೇ ಕನಸು. ಅದೇನೋ ಡೆಕ್ರಾನ್ ಬಟ್ಟೆಯಂತೆ - ಚಳಿಗೆ ಕುಗ್ಗುವುದಿಲ್ಲ, ಬಿಸಿಲಿಗೆ ಹಿಗ್ಗುವುದಿಲ್ಲ, ನೀರಿಗೆ ನೆನೆಯುವುದಿಲ್ಲ, ಗಾಳಿ ಇದರಲ್ಲಿ ತೂರುವುದಿಲ್ಲ, ಎಂಥ ಒತ್ತಡಕ್ಕು ಇದು ಜಗ್ಗುವುದೂ ಇಲ್ಲ! (ನೈನಂ ಛಿಂದತಿ ಶಸ್ತ್ರಾಣಿ ನೈನಂ ದಹತಿ ಪಾವಕ ಎನ್ನುವ ಪರಾತ್ಪರ ವಸ್ತುವೇ?) ವಿಮಾನಗಳಲ್ಲಿ ಬಳಕೆಯಿರುವ ಮಟ್ಟದ ಅಲ್ಯೂಮಿನಿಯಮ್ ಕೊಳವೆಗಳಂತೆ - ತುಕ್ಕು ಕಿಲುಬಿನ ಯೋಚನೆ ಬಿಡಿ, ಸಾಮಾನ್ಯ ಒತ್ತಡಗಳಿಗೆ ಬಾಗುವುದೂ ಇಲ್ಲ, ಮುರಿಯುವುದೂ ಇಲ್ಲವಂತೆ. ಹುರಿಮಾಡಿದ ಉಕ್ಕಿನ ಮಿಣಿಗಳು, ವಿಶೇಷ ನಟ್ಟುಬೋಲ್ಟು - ಪಟ್ಟಿ ಇಷ್ಟೇ ಮತ್ತು ಸಣ್ಣದೇ ಆದರೂ ಸ್ವಲ್ಪ ವಿಶೇಷದ್ದೇ. ಸಲಕರಣೆ ಸಂಗ್ರಹದ ಪ್ರಯತ್ನಗಳು ಒಂದೆಡೆ ಮುಂದುವರಿದಿತ್ತು. ಉಳಿದಂತೆ ಬಿಡು ವೇಳೆಯಲ್ಲಿ ಸಿಕ್ಕ ಕಾಗದ ಹರಕುಗಳ ಮೇಲೆ ನಮ್ಮ ಹಾರು-ರೆಕ್ಕೆಯ ಆಯ ಅಳತೆಗಳ ಚಿತ್ರಗಳು ಮೂಡುತ್ತಿದ್ದವು! ಆದರೆ ಯಾವುದಕ್ಕೂ ತಾರ್ಕಿಕ ಕೊನೆ ಸಿಗಲೇ ಇಲ್ಲ.

ರೆಕ್ಸಿನ್ ತರದ ಹಾಳೆಗಳನ್ನು ಮಾರುವ ಎಲ್ಲಾ ಮಳಿಗೆಗಳನ್ನು ಎಡತಾಕಿದರೂ ಡೆಕ್ರಾನ್ ಇಲ್ಲ ಅಥವಾ ಗೊತ್ತಿಲ್ಲ. ಬೆನ್ನುಚೀಲಕ್ಕೆ ಗೋಣಿ, ಗುಡಾರಕ್ಕೆ ಕೋರಾ ಬಟ್ಟೆ, ಮಲಗುಚೀಲಕ್ಕೆ ರಜಾಯಿ ಹೊಂದಿಸಿದ ಹಾಗೆ ಡೆಕ್ರಾನ್‌ಗೆ ಬದಲಿ ಹುಡುಕುವುದು ಕಷ್ಟ ಅನಿಸಿತು. ಇನ್ನು ವಿಶೇಷ ಗುಣಮಟ್ಟದ ಅಲ್ಯೂಮಿನಿಯಮ್ ಕೊಳವೆಗಳು, ಮಂಗಳೂರಿನಲ್ಲಿ ತರಿಸಿಟ್ಟವರಿರಲಿಲ್ಲ. ಒಂದೋ “ಅದು ಡಿಫೆನ್ಸ್ ಸಪ್ಲೈ ಸಾರ್” ಎನ್ನುವ ಜಾರುಪ್ರವೀಣರು ಅಥವಾ “ಒಂದೆರಡು ಲೆಂತ್ ತರಿಸಲ್ಲ, ಲೋಡ್ ಬೇಕಾದರೆ ಅಡ್ವಾನ್ಸ್ ಇಟ್ಟು ಮಾತಾಡಿ” ಎನ್ನುವ ಭಯೋತ್ಪಾದಕರೂ ಇದ್ದರು. ‘ಪುಸ್ತಕ ಮತ್ತು ಕೊಳವೆ ವ್ಯಾಪಾರಿ’ ಎಂದು ಬೋರ್ಡು ಬದಲಾಯಿಸುವ ಕೆಲಸಕ್ಕೆ ನಾನು ಇಳಿಯಲಿಲ್ಲ. ಪುಣೆಯಲ್ಲಿ ಯಾರೋ ಭಾರತೀಯ ಸೈನ್ಯದ ಮೇಜರ್ ವಿವೇಕ್ ಮುಂಡ್ಕೂರ್ ಎನ್ನುವವರು ನೇತು ತೇಲಾಟ ಸ್ವತಂತ್ರವಾಗಿ ನಡೆಸಿದ ಕಥೆ ಫ್ರಂಟ್ ಲೈನ್ ನಿಯತಕಾಲಿಕದಲ್ಲಿ ಕಂಡಾಗ ಮತ್ತೆ ನಾನು ರೆಕ್ಕೆಜಿಡ್ಡು ಬಿಡಿಸಿಕೊಂಡೆ. ಆದರೆ ಅವರ ವಿಳಾಸ ಪತ್ತೆ ಮಾಡಿ, ಪತ್ರ ಸಂಪರ್ಕ ಬೆಳೆಸಿಯಾಗುವಾಗ (ಪುಣೆಯ) ದೂರ, (ನಮ್ಮಲ್ಲಿದ್ದ ಕಡ್ಲೆ ಖರ್ಚಿನ) ಹಣ ಮತ್ತು (ನಮ್ಮ ಉದರಂಭರಣ ವೃತ್ತಿಗಳು ಕೇಳುವ) ಸಮಯದ ಮಿತಿಗಳನ್ನು ಮೀರುವುದಕ್ಕೆ ಆಗುವುದಿಲ್ಲ ಎಂದು ಕೈಚೆಲ್ಲಿದೆವು. ಹೀಗಿದ್ದಾಗ (೧೯೮೩ರ ಸೆಪ್ಟೆಂಬರ್ ಅಕ್ಟೋಬರ್ ಸುಮಾರಿಗೆ) ನಮ್ಮ ಹಪಹಪಿಯೇ ಮೂರ್ತಿವೆತ್ತಂತೆ, ಹತಾಶೆಗಳಿಗೆ ಕೊನೆ ಹಾಡುವಂತೆ ಅದೊಂದು ದಿನ ನನ್ನಂಗಡಿಯಲ್ಲಿ ಪ್ರತ್ಯಕ್ಷರಾದರು ಕರ್ನಲ್ ಸೈರಸ್ ದಲಾಲ್!

ಕ| ದಲಾಲ್, ಸೈನ್ಯದಲ್ಲಿದ್ದುಕೊಂಡು (ಅವರ ಪೂರ್ಣ ಹಾರು-ಚರಿತೆ ನನಗಿಂದು ನೆನಪಾಗುತ್ತಿಲ್ಲ) ನೇತು ತೇಲಾಟದಲ್ಲಿ ಹವ್ಯಾಸೀ ಪರಿಣತಿ ಗಳಿಸಿದ್ದ ಸಾಹಸಿ. ಹಲವು ಸೈನಿಕ ಕಾರ್ಯಾಚರಣೆಗಳಲ್ಲಿ ಹಣ್ಣಾಗಿ, ಪ್ರಾಯ ಐವತ್ತನ್ನು ಮೀರಿದರೂ ಹುರಿಗಟ್ಟಿದ ಮನಸ್ಸಿನೊಡನೆ ಯುವಜನಕ್ಕೆ ಪ್ರೇರಣೆ ಕೊಡುವಲ್ಲಿ ಅಪ್ರತಿಮನೆಂದೇ ಗಣಿಸಿ ಮಂಗಳೂರು ವಲಯದ ಎನ್.ಸಿ.ಸಿ ಮುಖ್ಯಸ್ಥನಾಗಿ (ಗ್ರೂಪ್ ಕಮಾಂಡರ್) ನೇಮನಗೊಂಡು ಬಂದಿದ್ದರು. ನನ್ನ ತಂದೆ ‘ಎನ್.ಸಿ.ಸಿ ದಿನಗಳು’ ಪುಸ್ತಕದ (ಅವರ ಹದಿನೇಳು ವರ್ಷಗಳ ಸಾರವತ್ತಾದ ಅನುಭವ ಕಥನ. ನಾನೂರೈವತ್ತು ಪುಟದ ಪುಸ್ತಕದ ಬೆಲೆ ಕೇವಲ ರೂ ಐವತ್ತೈದು) ಕೊನೆಯಲ್ಲಿ ಸೂತ್ರ ರೂಪವಾಗಿ ಹೇಳುವಾಗ ‘ಇಂದಿನ ಎನ್.ಸಿ.ಸಿ ನಿವೃತ್ತ ಅಧಿಕಾರಿಗಳ ವಿಶ್ರಾಂತಿಧಾಮವಾಗುತ್ತಿದೆ’ ಎಂದು ವಿಷಾದಿಸಿದ್ದಕ್ಕೆ ಅಪವಾದವಾಗಿದ್ದರು ದಲಾಲ್. ಎನ್.ಸಿ.ಸಿ ವ್ಯವಸ್ಥೆಯ ಮೆಟ್ಟಿಲ ಲೆಕ್ಕ ತೆಗೆದರೆ, ಇವರ ಕೆಳಗೆ ನಾಲ್ಕೆಂಟು ಬಟಾಲಿಯನ್ ಕಮಾಂಡರುಗಳು, ಅವರ ಕೆಳಗೆ ಹತ್ತಿಪ್ಪತ್ತು ಶಾಲೆ ಕಾಲೇಜುಗಳ ಅಧ್ಯಾಪಕ-ಅಧಿಕಾರಿಗಳು, ಕೊನೆಯಲ್ಲಿ ಶಿಕ್ಷಣ ಸಂಸ್ಥೆಯ ಅತ್ಯುತ್ತಮವೇನೂ ಆಗಬೇಕಿಲ್ಲದ (ಉನ್ನತ ವೃತ್ತಿಪರ ಶಿಕ್ಷಣ ಹಾಗೂ ಉತ್ತರೋತ್ತರವಾಗಿ ಉದ್ಯೋಗ ಬೇಟೆಗಳಲ್ಲಿ ಎನ್.ಸಿ.ಸಿ ತರಬೇತಾದವರಿಗೆ ಕಾಯ್ದಿರಿಸಿದ ಅವಕಾಶಗಳಿವೆ! ಅಂಥ) ಒಂದಷ್ಟು ವಿದ್ಯಾರ್ಥಿಗಳು ಸಿಕ್ಕುತ್ತಾರೆ. ಸಾಮಾನ್ಯ ನಿಯಮಗಳಲ್ಲಿ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಒಂದೋ ಎರಡೋ ಬಾರಿ, ಅದೂ ವಿಶೇಷ ಗೌರವಾನ್ವಿತನಾಗಷ್ಟೇ ಕಾಣಿಸಿಕೊಂಡರೆ ಸಾಕಾಗುವ ವಲಯ ವರಿಷ್ಠನ ಗದ್ದುಗೆ ಇಳಿದು ದಲಾಲ್ ನೇತು ತೇಲಾಟದ ಮತ-ಪ್ರಚಾರ ನಡೆಸಿದರು. ವಿದ್ಯಾರ್ಥಿ ವಲಯದಲ್ಲಿ ಯುವ ಉತ್ಸಾಹಿಗಳ ಕೊರತೆ ಕಂಡಾಗ, ಯಾರೋ ನನ್ನ ಬಳಗ - ಆರೋಹಣದ ಉಲ್ಲೇಖ ಮಾಡಿದರಂತೆ. ಔಪಚಾರಿಕತೆಯ ಬಿಗುಮಾನವಿಲ್ಲದೆ, ಅಧಿಕಾರದ ಹಮ್ಮು, ಔಪಚಾರಿಕತೆಯ ಬಿಮ್ಮು ಕಳಚಿ ದಲಾಲ್ ಆ ದಿನ “ಅತ್ರಿ ಚಲೋ” ಅಂದಿರಬೇಕು. ದೃಢ ಮೈಕಟ್ಟಿನ, ಬಿಳಿ-ಕೆಂಚು ಮೈಬಣ್ಣದ (ಪಾರ್ಸಿ ಜನಾಂಗದವರು), ಹುರಿ ಮಾಡಿದ ಹುಲಿಮೀಸೆಯ (ಅವರೆದುರು ನನ್ನದು ಏನೂ ಅಲ್ಲ, ಗೆಳೆಯ ಹರೀಶಾಚಾರ್ ಹೇಳುವಂತೆ, ‘ತುಟಿಮೇಲಿನ ಕೂದಲು.’), ವ್ಯತಿರಿಕ್ತವಾಗಿ ಪೂರ್ಣ ಹಸನ್ಮುಖದ ಮಿಲಿಟರಿ ಅಧಿಕಾರಿ ನನ್ನಂಗಡಿಗೆ ನುಗ್ಗಿ, ಒಮ್ಮೆಗೆ “ಮಿಸ್ಟರ್ ಅಶೋಕ್ (?)” ಎಂದು ತೆರೆದ ಹಸ್ತ ಚಾಚಿದಾಗ ನಾನು ಕೇವಲ ಶೇಕ್ ಹ್ಯಾಂಡ್ ಮಾಡಲಿಲ್ಲ, ಹಾರುವ ಹುಚ್ಚಿಗೇ ಕೈ ಬೆಸೆದಂತಾಗಿತ್ತು!

ಕುಂದಾಪುರ ಮೂಲದ ಬೆಂಗಳೂರು ವಾಸಿ ಮಧು ರಾಯ್ಕರ್, ಹುಡುಗು ಬುದ್ಧಿಯವರ ಮೋಟಾರ್ ಸೈಕಲ್ ಮೊದಲಾಗಿ ದ್ವಿಚಕ್ರಗಳ ವಿಶೇಷ ವಿನ್ಯಾಸಕ್ಕೆ ಆ ಕಾಲದಲ್ಲಿ ಒದಗುತ್ತಿದ್ದ ಕುಶಲಕರ್ಮಿ. ನನ್ನ ನೆನಪು ಸರಿಯಿದ್ದರೆ, ಜೊತೆಗೆ ಆತ ವಿದ್ಯಾರ್ಥಿ ದೆಸೆಯಲ್ಲಿ ಏರೋ ಮಾಡೆಲರ್ ಕೂಡಾ ಆಗಿದ್ದಿರಬೇಕು. ದಲಾಲ್ ಈತನಲ್ಲಿ ತನ್ನ ಹಾರುವ ಹುಚ್ಚಿಗೆ ಸೂಕ್ತ ಕಮ್ಮಟಿಗನನ್ನು ಕಂಡಿದ್ದರು. ದಲಾಲ್ ಶಿಫಾರಸಿನ ಮೇರೆಗೆ, ಅರುಣ್ ನಾಯಕ್, ಶರತ್, ಶಿವರಾಂ ಮತ್ತು ನಾನು ತಲಾ ಒಂದೂವರೆ ಸಾವಿರ ರೂಪಾಯಿ ಹಾಕಿ, ಒಂದು (ನೇತು ತೇಲಾಟದ) ರೆಕ್ಕೆಯ ಪೂರ್ಣ ಮೊತ್ತವನ್ನು ಮುಂಗಡವಾಗಿ ಮಧುವಿಗೆ ಕೊಟ್ಟದ್ದಾಯ್ತು. ಆತನ ಒಂದೆರಡು ವಾರದ ಆಶ್ವಾಸನೆ ಕಾಯುತ್ತಿದ್ದಂತೆ, ನಮ್ಮಲ್ಲಿನ ಚಿಗುರು ಬಾಡದಂತೆ, ದಲಾಲ್ ಅವರದೇ ರೆಕ್ಕೆ ಬೆಂಗಳೂರಿನಿಂದ ತರಿಸಿದರು. ಮೊದಲು ಈ ವಲಯದಲ್ಲಿ ‘ಹಾರೋಣ ಬಾಆಆ’ ಕರೆಯು ಸಾರ್ವಜನಿಕಕ್ಕೆ ಆಕರ್ಷಕವಾಗಿ ಮುಟ್ಟುವಂತೆ ಒಂದು ಪ್ರದರ್ಶನದ ಹೊಳಹನ್ನೇ ದಲಾಲ್ ಹಾಕಿದರು. ಅದಕ್ಕೆ ಸೂಕ್ತ ಜಾಗ ಸೂಚಿಸುವ ಜವಾಬ್ದಾರಿಯನ್ನು ಸ್ಥಳೀಯರಾದ ನಮಗೇ ಒಪ್ಪಿಸಿದರೂ ಆಯ್ದುಕೊಳ್ಳುವ ತೀರ್ಮಾನಕ್ಕಾಗಿ ದಲಾಲ್ ನಮ್ಮೊಡನೆ ಸುತ್ತಿದ್ದೂ ಸ್ಮರಣೀಯವೇ.

ಭುವನೇಂದ್ರದ ಆರೋಹಿಗಳ ವಾರ್ಷಿಕ ಶಿಬಿರದ ಅಂಗವಾಗಿ ನಮ್ಮ ಬಳಗ (ಆರೋಹಣ) ನಕ್ರೆ ಕಲ್ಲಿನಲ್ಲಿ ಶಿಲಾರೋಹಣದ ಪ್ರದರ್ಶನ ಮತ್ತು ಶಿಕ್ಷಣ ವ್ಯವಸ್ಥೆ ಮಾಡಿತ್ತು. ದಲಾಲ್ ಅಲ್ಲಿಗೆ ಬಂದು, ನಮ್ಮ ಚಟುವಟಿಕೆಯನ್ನು ಮೆಚ್ಚಿಕೊಂಡರು. ಮುಖ್ಯ ಚಟುವಟಿಕೆಗಳು ಮುಗಿದು ಸಾರ್ವಜನಿಕ ಅಭ್ಯಾಸದ ಹಂತದಲ್ಲಿ ಅರುಣ್ ನಾಯಕ್ ಮತ್ತು ನನ್ನನ್ನು ಅವರ ಜೀಪಿನಲ್ಲಿ ಕೂರಿಸಿಕೊಂಡು ವಾಲಿಕುಂಜದ ಸ್ಥಳ ವೀಕ್ಷಣೆಗೆ ಕರೆದೊಯ್ದರು. ಕಾರ್ಕಳದಿಂದ ದಾರಿಯಲ್ಲಿ ಹೆಬ್ರಿಯತ್ತ ಸಾಗುವವರು ಅನಿವಾರ್ಯವಾಗಿ ಬೆರಗುವಟ್ಟು ಕಣ್ಣುತುಂಬಿಕೊಳ್ಳುವ ಶಿಖರ ವಾಲಿಕುಂಜ ಅಥವಾ ಅಜಿಕುಂಜ (೩೪೦೮ ಅಡಿ ಸ.ಮ). ಆ ಕಾಲದಲ್ಲಿ ಇಲ್ಲಿ ಯುರೇನಿಯಮ್ಮಿನ ನಿಕ್ಷೇಪ ಅಂದಾಜಿಸಿ, ಭೂ ವಿಜ್ಞಾನಿಗಳು ವಿವಿಧ ಹಂತದ ಭೂ ಪರೀಕ್ಷೆ ನಡೆಸಿದ್ದರು. ಮುಖ್ಯ ದಾರಿಯಲ್ಲಿ ಅಜೆಕಾರಿನಿಂದ ಬಲಕ್ಕೆ (ಪೂರ್ವಕ್ಕೆ) ಕವಲಾಗಿ ಒಂದು ದಾರಿ ಬಜಗೋಳಿಯತ್ತ ಸಾಗುತ್ತದೆ. ಆ ದಾರಿಯಲ್ಲಿ ಸುಮಾರು ನಾಲ್ಕು ಕಿಮೀ ಅಂತರದಲ್ಲಿ ಸಿಗುವ ಶಿರ್ಲಾಲ್ ಎಂಬ ಹಳ್ಳಿ ವಾಲಿಕುಂಜದ ನೇರ ತಪ್ಪಲು. ಅಲ್ಲಿಂದ ಸುಮಾರು ಒಂಬತ್ತು ಕಿಮೀ ಉದ್ದಕ್ಕೆ ಹಳೆಯ ಕೂಪು ದಾರಿಯನ್ನು ಭೂ ಇಲಾಖೆ ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ವಶಪಡಿಸಿಕೊಂಡು, ಜೀರ್ಣೋದ್ಧಾರ ಮಾಡಿಕೊಂಡಿತ್ತು. ಇಲಾಖೆಯ ಪರೀಕ್ಷೆ ಏನಿದ್ದರೂ ಶ್ರೇಣಿಯ ದಕ್ಷಿಣ ಹೆಗಲಿನಲ್ಲಿ ಮತ್ತು ಕಾಡಿನ ಮರೆಯಲ್ಲಿತ್ತು. ನಮ್ಮ ಲಕ್ಷ್ಯವಾದರೋ ಉತ್ತರ ಮಗ್ಗುಲಿನ ಬೋಳು ಶಿಖರ. ಇಲಾಖೆಯ ಗಾರ್ಡ್ ಒಟ್ಟಾರೆ ಅಪರಿಚಿತರು ಮತ್ತು ಅನಧಿಕೃತರೆಂದು ಗೇಟಿಕ್ಕಿ, ಪ್ರವೇಶ ನಿರಾಕರಿಸಿದ. ಆಗ ನೋಡಬೇಕಿತ್ತು ದಲಾಲರ ಮಿಲಿಟರಿ ಗತ್ತು! ಭಾರತೀಯ ಸೈನ್ಯ ಎಲ್ಲಾ ಭದ್ರತಾ ನಿಯಮಗಳಿಗೂ ಅತೀತ ಎಂದು ಉಚ್ಚ ಕಂಠದಲ್ಲಿ ಸಾರಿದರು. ಕೂಡಲೇ ಇಲಾಖೆಯ ವರಿಷ್ಠನನ್ನು ಸ್ಥಳಕ್ಕೆ ಕರೆಸು ಇಲ್ಲವೇ ದೂರವಾಣಿ ಸಂಪರ್ಕ ಕೊಡಿಸು ಎಂದು ಜಬರ್ದಸ್ತಿದ್ದರಲ್ಲಿ ಅಕ್ಷರಶಃ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದ ಪರಿಣಾಮ ಕಾಣಿಸಿತು. ನಾವು ನಿರ್ವಿಘ್ನವಾಗಿ ಬೇಕಾದಷ್ಟು ಮೇಲೆ ಹೋಗಿ, ಸುತ್ತಾಡಿದೆವು. “ಎತ್ತರವೇನೋ ಸರಿ. ಆದರೆ ಸುತ್ತುವರಿದ ದಟ್ಟ ಕಾಡು, ಪ್ರಾಥಮಿಕ ಹಂತದ ನೇತು ತೇಲಾಟಕ್ಕೆ ಅಗತ್ಯವಾಗಬಹುದಾದ ತುರ್ತು ಇಳಿತಕ್ಕೆ ಅಪಾಯಕಾರಿ” ಎಂದು ದಲಾಲ್ ತಿರಸ್ಕರಿಸಿದರು.

ದಲಾಲ್ ಮತ್ತು ನಮಗೆ ಹೊಂದಾಣಿಕೆ ಆದ ಮತ್ತೆ ಹಲವು ಆದಿತ್ಯವಾರಗಳಲ್ಲಿ ಹೀಗೇ ಸುತ್ತಾಡಿದ್ದುಂಟು. ಒಮ್ಮೆ ಶರತ್ ಆತನ ಗೆಳೆಯ ಸುರೇಶನ ಸ್ಕೂಟರ್ ಕಡ ತಂದಿದ್ದ. ಬರಿಯ ಪೇಟೆಯೊಳಗಿನ ಓಡಾಟಕ್ಕೆ ಸೀಮಿತವಾಗಿದ್ದ ಅದರ ಎರಡೂ ಚಕ್ರ ಸವೆದು ನುಣ್ಣಗಾಗಿತ್ತು. ಅಂಥದ್ದರಲ್ಲಿ ನಿರ್ಯೋಚನೆಯಿಂದ ಅವನ ಬೆನ್ನೇರಿದ ದಲಾಲ್ ಅರ್ಕುಳದ ಪದವು ಪರಿಶೀಲಿಸಲು ಬಂದದ್ದು ಅಂದು ನನಗೆ ಎಂಟನೇ ಅದ್ಭುತವಾಗಿತ್ತು. (ಅದು ಜಗತ್ತಿನಲ್ಲಿ ಏಳೇ ಅದ್ಭುತಗಳಿದ್ದ ಕಾಲ!) ಮತ್ತೆ ಶರತ್, ಆ ಕಾಲದ ಹರಕು ಡಾಮರು ದಾರಿಯಲ್ಲಿ ಸ್ಕೂಟರನ್ನು ಎಂಬತ್ತು ಕಿಮೀ ವೇಗದಲ್ಲಿ ಚಲಾಯಿಸಿದ ಬೇಜವಾಬ್ದಾರೀ ನೆನೆಸಿಕೊಂಡರೆ ನನಗೆ ಇವತ್ತೂ ಕೈಗೆ ಸಿಕ್ಕಿದ್ದರಲ್ಲಿ ಬಡಿಯಬೇಕು ಎನ್ನುವಷ್ಟು ಕೋಪ ಬರುತ್ತದೆ. (ಹೌದು, ಈತನೇ ಅಂದು ನುಣ್ಣನೆ ಟಯರು ಮತ್ತು ಇಲ್ಲದ ಫೋರ್ತ್ ಗೇರಿನ ಜೀಪು ಹಿಡಿದುಕೊಂಡು ಬಿಸಿಲೆ ದಾರಿಯಲ್ಲಿ ನಮ್ಮನ್ನು ಮಂಗಮಾಡಿದವ!) ಪದವಿನಲ್ಲಿ ತೆರವು ಚೆನ್ನಾಗಿತ್ತು ಮತ್ತು ಗಾಳಿಯೂ ಪರಿಣಾಮಕಾರಿಯಾಗಿಯೇ ಇತ್ತು. ಆದರೆ ನಮಗೆ ಒದಗಬಹುದಾಗಿದ್ದ ಇಳಿಜಾರಿನಲ್ಲಿ ಟೆಲಿಫೋನ್ ತಂತಿಗಳ ಜಾಲ ವಿಪರೀತವಿದ್ದುದರಿಂದ ದಲಾಲ್ ಒಪ್ಪಲಿಲ್ಲ. ಕಡಲ ಕಿನಾರೆಗಳಲ್ಲಿ ಸಸಿಹಿತ್ಲು ಅವರ ಅನುಮೋದನೆ ಪಡೆದರೂ ಪ್ರದರ್ಶನಕ್ಕೆ ಮತ್ತು ಪ್ರಾಥಮಿಕ ಹಂತದ ತರಬೇತಿಗೆ ಅದು ಕೂಡಿ ಬರಲಿಲ್ಲ. ಬಂಟ್ವಾಳ ಸಮೀಪದ ಕಾರಿಂಜದ ಬಂಡೆ ತಪ್ಪಲಿನ ಕೆರೆ ಮತ್ತು ಮರಗಳಿಂದಾಗಿ ತಿರಸ್ಕೃತವಾಯ್ತು. ಅಂತಿಮವಾಗಿ ಶಿಕ್ಷಣಕ್ಕೆ ಮಂಗಳೂರು ಪೊಳಲಿಯ ಮಾರ್ಗದಲ್ಲಿ ಸಿಗುವ ಬೆಂಜನಪದವು, ಪ್ರದರ್ಶನಕ್ಕೆ ಜಮಾಲಾಬಾದ್ ಆಯ್ಕೆಯಾದವು.

ಆದಿತ್ಯವಾರದಿಂದ ಆದಿತ್ಯವಾರಕ್ಕೆ ಕಾದು ಕೂರುವುದು ದಲಾಲರ ಜಾಯಮಾನಕ್ಕೆ ಹೊಂದಲಿಲ್ಲ. ಕೆಲಸದ ದಿನದಂದೇ ಒಂದಷ್ಟು ಕಿರಿಯ ಎನ್.ಸಿ.ಸಿ ಸಿಬ್ಬಂದಿ, ಹುಡುಗರು ಮತ್ತು ರೆಕ್ಕೆಯನ್ನು ಹೇರಿಕೊಂಡು ಎನ್.ಸಿ.ಸಿ ಲಾರಿಯನ್ನು ಜಮಾಲಾಬಾದಿನ ಬುಡಕ್ಕೇ ಓಡಿಸಿದರು. ಕೊಳವೆಗಳ ಜೋಡಣೆಯನ್ನು ಕಳಚಿ, ಅದರದೆ ಬಟ್ಟೆಯಲ್ಲಿ ಸುತ್ತಿದ ರೆಕ್ಕೆ ಸುಮಾರು ಇಪ್ಪತ್ತಡಿ ಉದ್ದದ ಹಗುರ ಹೊರೆ. ಅದನ್ನು ಒಮ್ಮೆಗೆ ಇಬ್ಬರಂತೆ, ಸರದಿಯಲ್ಲಿ ಎಲ್ಲರೂ ಭುಜ ಬದಲಾಯಿಸುತ್ತಾ ಮೇಲಕ್ಕೆ ಸಾಗಿಸಿದರು. ಯೋಜನೆಯಂತೆ ದಲಾಲ್ ಶಿಖರದ ಪೂರ್ವ ಅಂಚನ್ನು ಉಡ್ಡಯನ ತಾಣವಾಗಿಸಿದರು. ಅಂದರೆ ಕರಾವಳಿಗೆ ಸಹಜವೆಂದು ನಾವು ನಂಬಿದ್ದ ಪೂರ್ವ-ಪಶ್ಚಿಮ ಗಾಳಿಯ ಎದುರು ಕೊಳ್ಳ ಹಾರಿ, ರೆಕ್ಕೆಯುಬ್ಬಿಸಿ, ತಪ್ಪಲಿನ ಯಾವುದಾದರು (ಕಟಾವು ಮುಗಿದಿತ್ತು) ಒಣ ಗದ್ದೆಯಲ್ಲಿ ಅವರು ಇಳಿಯಬೇಕಿತ್ತು. ಆದರೆ ಅಂದು ಇವರು ಮೇಲೇರುತ್ತಿದ್ದಂತೆ ಅಕಾಲಿಕ ಮೋಡ ದಟ್ಟೈಸಿತು. ಗಾಳಿಯ ದಿಕ್ಕು ಮತ್ತು ವೇಗ ಇವರ ನಿರೀಕ್ಷೆಯನ್ನೂ ಸೋಲಿಸಿತು. ಎಲ್ಲಾ ಸಂಭ್ರಮವನ್ನು ಹತ್ತಿಕ್ಕಿ, ಹೋದ ದಾರಿಯಲ್ಲೇ ಇಳಿದು ಬಂದರು. ಬಂಡೆಯ ಬುಡ ತಲಪುತ್ತಿದ್ದಂತೆ ಇವರ ಉತ್ಸಾಹಕ್ಕೆ ಅಕ್ಷರಶಃ ನೀರೆರಚಿದಂತೆ ಭೋರೆಂದು ಮಳೆಯೂ ಬಂತಂತೆ. (ನನ್ನನ್ನು ತಪ್ಪಿಸಿಹೋದದ್ದಕ್ಕೆ ಅದು ನನ್ನ ಶಾಪ ಎಂದು ಗೇಲಿ ಮಾಡಿದ್ದೂ ಆಯ್ತು!)

೧೮-೩-೧೯೮೪, ಆದಿತ್ಯವಾರ, ಕನ್ನಡದ ಕರಾವಳಿ ವಲಯಕ್ಕೆ ಪ್ರಥಮ ನೇತು ತೇಲಾಟದ ದಾಖಲೆ ಬರೆದಿಟ್ಟ ದಿನ. ಈ ಬಾರಿ ನಮ್ಮ ಪೂರ್ವ ಸಿದ್ಧತೆಯೂ ಹೆಚ್ಚು ವ್ಯಾಪಕವಾಗಿತ್ತು. ದ ಹಿಂದೂ ಪತ್ರಿಕೆಯ ದೈನಂದಿನ ಹವಾಮಾನ ನಕ್ಷೆಗಳನ್ನು ಹಲವು ದಿನ ನೋಡಿ ಗಾಳಿಯ ರೇಖೆಗಳೊಡನೆ ನಮ್ಮ ಹಾರಾಟದ ಮೇಳಾಮೇಳಿ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಒಂದೂವರೆ ಇಂಚಿನ ಭಾರತದ ಮೇಲಿನ ನಾಲ್ಕು ಓರೆಕೋರೆ ರೇಖೆಗಳ ಮಿಲಿಮೀಟರಿನ ಸಾವಿರನೇ ಒಂದಂಶವೂ ಅಲ್ಲದ ಜಮಾಲಾಬಾದಿನ ಕೊಡಿಯಲ್ಲಿ ಗಾಳಿ ಹೇಗೆಂದು ಹೇಳಲಿಲ್ಲ. ಪಣಂಬೂರಿನಲ್ಲಿದ್ದ ಹವಾಮಾನ ವೀಕ್ಷಣಾಲಯಕ್ಕೆ ಲಗ್ಗೆಯಿಟ್ಟು (ಕೆಲವು ಮಲಯಾಳೀ ಮಿತ್ರರನ್ನು ಗಳಿಸಿ) ಗಾಳಿಯ ತೀವ್ರತೆ ಮತ್ತು ದಿಕ್ಕುಗಳ ಅಂದಾಜು ಕಲೆಹಾಕಿದ್ದೆವು. ದಿನ ಮುಂಚಿತವಾಗಿ ಸ್ವತಃ ದಲಾಲರೇ ಒಬ್ಬ ಸಹಾಯಕನನ್ನು ಕೂಡಿಕೊಂಡು ಬೈಕೇರಿ ಜಮಾಲಾಬಾದ್ ತಪ್ಪಲೆಲ್ಲಾ ಸುತ್ತಾಡಿ ಬಂದರು. ಈ ಬಾರಿ ಪಶ್ಚಿಮ ಮೈಯನ್ನೇ ನಿಷ್ಕರ್ಷಿಸಿದರು. ದೃಷ್ಟಿಯಳವಿಗೇ ದಕ್ಕುವ ತಪ್ಪಲಿನ ಒಂದು ಗದ್ದೆ ಮಾಲಿಕ - ಸಿಕ್ವೇರಾರಿಗೆ ಆದಿತ್ಯವಾರಕ್ಕೆ ಸಹಕರಿಸಲು ಒಪ್ಪಿಸಿಯೂ ಬಂದಿದ್ದರು. ಜಮಾಲಾಬಾದಿಗಂದು ಆರೋಹಣದ ಹಲವು ಮಿತ್ರರು, ಕೆ.ಆರ್.ಇ.ಸಿಯ ಎನ್.ಸಿ.ಸಿ ಪಡೆ, ಶಿಕ್ಷಕ ಸೈನಿಕ ಬಳಗ ಮತ್ತು ಊರ ಹತ್ತು ಹಲವು ಕುತೂಹಲಿಗಳು ಸೇರಿ ಜನಪ್ರವಾಹವೇ ಹರಿದಿತ್ತು.

ಹತ್ತು ಗಂಟೆಯ ಸುಮಾರಿಗೆ ಅಮರನಾಥದ ವಾರ್ಷಿಕ ಯಾತ್ರೆಯ ಮುಂಚೂಣಿಯಲ್ಲಿ ಮೆರೆಯುವ ಛಡೀಮುಬಾರಕ್‌ನಂತೆ ನಮ್ಮ ಏಕೈಕ ರೆಕ್ಕೆ ಭಾರೀ ಗೌರವದಿಂದ ಹೊರಟಿತು. ಒಮ್ಮೆಗೆ ಇಬ್ಬರು ಸಾಲಿನಲ್ಲಿ ಭುಜಕೊಟ್ಟು ರೆಕ್ಕೆ ಹೊರುವುದಾಗಿತ್ತು. ಬದಲಿ ಭುಜ ಕೊಡಲು, ಬರಿದೆ ಅದನ್ನು ಮುಟ್ಟಲೂ ಅದೆಷ್ಟು ಮಂದಿ! ಮೊದಮೊದಲ ಹೊರುವ ಗೌರವವನ್ನು ಆರೋಹಣದ ಗೆಳೆಯರು ಬಿಟ್ಟುಕೊಡಲಿಲ್ಲ. ಆದರೆ ಕಟ್ಟೇರು, ಉರಿಬಿಸಿಲು ‘ಹಗುರದ ರೆಕ್ಕೆ’ಯನ್ನು ಹೆಣಭಾರವಾಗಿಸುತ್ತಿದ್ದಂತೆ ತಂತಾನೇ ಬದಲಿ ಭುಜಗಳೂ ಬಳಕೆಗೆ ಬಂದವು. ದಲಾಲ್ ಹಿಮಲಿಂಗದ ಆರಾಧನೆಗೆ ಹೊರಟ ‘ಪ್ರಧಾನ ಪಂಡಿತ’ನ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಾ ಹಿಂಬಾಲಿಸಿದರು. ಹನ್ನೆರಡು ಗಂಟೆಗೆ ಶಿಖರ ಸೇರಿದ್ದೇ ದಲಾಲರ ವಿವರಣೆ ಮತ್ತು ಸೂಚನೆಯ ಮೇರೆಗೆ ರೆಕ್ಕೆಯನ್ನು ಬಿಡಿಸಿದ್ದಾಯ್ತು. ಅನಂತರ ಖುದ್ದು ಅವರೇ ಅದರ ಅಂಗಾಂಗಗಳನ್ನೂ ಜೋಡಣೆಗಳನ್ನೂ ತಪಾಸಣೆ ನಡೆಸಿದರು. ಬೀಸುಗಾಳಿ ಇನ್ನೂ ಹಗುರವಾಗಿಯೇ ಇತ್ತು. ಆದರೂ ಅದು ರೆಕ್ಕೆಯ ಪಕ್ಕಗಳನ್ನು ಪ್ರಚೋದಿಸದಂತೆ, ರೆಕ್ಕೆಯ ‘ಮೂಗನ್ನು’ ನೆಲಕ್ಕೆ ಒತ್ತಿಟ್ಟು ಅದರ ನೆರಳಿನಲ್ಲೇ ಎಲ್ಲರೂ ಅವಸರದ ಬುತ್ತಿಯೂಟ ಮುಗಿಸಿಕೊಂಡೆವು. ನಿಗದಿತ ಮುಹೂರ್ತ ಸಮನಿಸುತ್ತಿದ್ದಂತೆ ಎಲ್ಲ, ಮುಖ್ಯವಾಗಿ ದಲಾಲ್ ಸಜ್ಜಾದರು.

ಬೆಂಗಳೂರಿನ ನಂದಿಬೆಟ್ಟದ ತಲೆಯಿಂದ ಕೆಲವು ಹಾರಾಟ ನಡೆಸಿದ್ದ ನೆನಪಿನಲ್ಲಿ ಈ ವಲಯದಲ್ಲಿ ಪ್ರದರ್ಶನಕ್ಕೆ ಆರಿಸಿಕೊಂಡ ಕೋಡುಗಲ್ಲು - ಜಮಾಲಾಬಾದ್ ಎತ್ತರ ೧೭೭೮ ಅಡಿ ಸ.ಮ. ಎರಡಕ್ಕೂ ಐತಿಹಾಸಿಕವಾಗಿ ಟಿಪ್ಪು ಸುಲ್ತಾನನ ಸಂಬಂಧವಿರುವುದು ಆಕಸ್ಮಿಕ!). ಅಲ್ಲಿನ ಗನ್ ಹೌಸಿನ ಪಕ್ಕಕ್ಕಿದ್ದ ಮಟ್ಟಸ ನೆಲದಲ್ಲಿ ಪ್ರಾಥಮಿಕ ತಯಾರಿಗಳೆಲ್ಲಾ ನಡೆದ ಮೇಲೆ ಕಂಬಳದ ಕೋಣವನ್ನು ಕಳಕ್ಕಿಳಿಸುವ ಗಾಂಭೀರ್ಯದಲ್ಲಿ ಅರಳಿದ ರೆಕ್ಕೆಯನ್ನು ಅರೆ ಪರಿಣತರಾದ ನನ್ನ ಮಿತ್ರ ಬಳಗ ಪಶ್ಚಿಮ ಅಂಚಿಗೆ ಒಯ್ದೆವು. ಅಲ್ಲಿನ ಹಳೆಯ ಮೋಟು ಪೌಳಿ ಇಂದು ಚದುರಿದಂತೆ ಒಂಡೆರಡು ಭಾರೀ ಕಲ್ಲ ತುಣುಕುಗಳನ್ನಷ್ಟೇ ಉಳಿಸಿದೆ. ಅಂಥ ಎರಡು ಕಲ್ಲುಗಳ ನಡುವಣ ಸುಮಾರು ಮೂರು-ನಾಲ್ಕಡಿ ಸಂದಿನಲ್ಲಿ ಕೊಳ್ಳಕ್ಕೆ ಧಾವಿಸುವುದು ದಲಾಲರ ಲಕ್ಷ್ಯ. ರೆಕ್ಕೆಯ ಕೇಂದ್ರದ ತೂಗು ಪಟ್ಟಿಗೆ ತನ್ನನ್ನು ಕ್ರಮದಂತೆ ಬಂಧಿಸಿಕೊಂಡ ದಲಾಲ್ ಸಹಾಯಕರಿಗೆ ಮುಹೂರ್ತ ಗಣನೆಯನ್ನು ಕ್ರಮವತ್ತಾಗಿಸಲು ಆದೇಶ ಕೊಟ್ಟರು. ತ್ರಿಕೋನಾಕೃತಿಯ ರೆಕ್ಕೆಯ ಮೂಗನ್ನು ಪ್ರಮೋದ್, ಅಕ್ಕಪಕ್ಕದ ಕೊನೆಗಳನ್ನು ಅರುಣ್ ಮತ್ತು ನಾನು ಹಿಡಿದಿದ್ದೆವು. ನನ್ನಿಂದಾಚೆ ತುಸು ದೂರದಲ್ಲಿ ಕುಳಿತ ಶರತ್ ಗಾಳಿಯ ವೇಗವನ್ನಳೆಯುವ ಸಾಧನ ಹಿಡಿದು ಮಂತ್ರೋಚ್ಚಾರದ ಗಾಂಭೀರ್ಯದಲ್ಲಿ “ಹತ್ತು, ಹದಿನೈದು, ಹನ್ನೆರಡು, ಹದಿನೇಳು, ಹದಿನೈದು, ಹತ್ತು...” ಎಂದು ನಿರಂತರ ಪಠನೆ ಸುರುಹಚ್ಚಿದ್ದ. ಬೀಸುಗಾಳಿಯ ದಿಕ್ಕು ಸೂಚಿಸಲು ತೆಳು ದಾರವೊಂದನ್ನು ರೆಕ್ಕೆಯ ಮೂಗಿಗೇ ಕಟ್ಟಿತ್ತು. ದಲಾಲ್ ಅದರ ಮೇಲೆ ದೃಷ್ಟಿ ಕೀಲಿಸಿ, ಗಾಳಿವೇಗದ ಸರಾಸರಿ ಹದಿನೈದು ಇದ್ದಂತೆ ಹಗುರಕ್ಕೆ “ಸೈಡ್ಸ್ ಲೆಟ್ ಗೋ” ಹೇಳಿದರು. ಕ್ಷಣಾರ್ಧದಲ್ಲಿ ಕರ್ನಲ್ಲರ ಹೆಚ್ಚು ಖಡಕ್ ಆದೇಶ “ನೋಸ್ ಲೆಟ್ ಗೋ.” ಮತ್ತೆರಡು ಸೆಕೆಂಡಿನಲ್ಲಿ ಭಾರೀ ರೆಕ್ಕೆ ಹೊತ್ತ ದಲಾಲ್ ನಾಲ್ಕೇ ದಾಪು ಹೆಜ್ಜೆಯೊಡನೆ ಕೊಳ್ಳ ಹಾರಿದರು.

“ಅಯ್ಯೋ” ಬೊಬ್ಬೆಯೊಡನೆ ಅತ್ತಣಿಂದ ಅರುಣ್, ಇತ್ತ ನಾನು ದೂರ ಸರಿದಷ್ಟೇ ವೇಗವಾಗಿ ಮರಳಿ ಧಾವಿಸಿದೆವು. ದಲಾಲ್ ಹಾರೋಟದ ಕೊನೆಯ ಹೆಜ್ಜೆಗಳನ್ನಿಡುತ್ತಿದ್ದಂತೆ ಗಾಳಿ ಪಕ್ಷಾಂತರ ಮಾಡಿತ್ತು. ಬಲ ತುದಿ ಬಂಡೆ ಒರಸಿ, ಎಡ ತುದಿಯನ್ನು ಕಲ್ಲಿನಲ್ಲಿ ಸಿಲುಕಿಸಿಯೇ ಬಿಟ್ಟಿತು. ಕೇಂದ್ರಕ್ಕೆ ಬಂಧಿಯಾದ ದಲಾಲ್ ಗೋಡೆಯಾಚೆ ಬರಿದೇ ನೇತುಬಿದ್ದಿದ್ದರು. ಎಲ್ಲ ಕೈ ಜೋಡಿಸಿ ದಲಾಲ್ ಮತ್ತು ರೆಕ್ಕೆಯನ್ನು ಯಾವುದೇ ಗಾಯ, ಜಖಂಗಳಿಲ್ಲದಂತೆ ಮೇಲೆ ತಂದೆವು. ತೀರಾ ಗಾಬರಿಗೆಡುವಂತದ್ದೇನೂ ಆಗಿರಲಿಲ್ಲ. ಪೌಳಿಯಾಚೆ ನಾಲ್ಕೇ ಅಡಿ ಆಳದಲ್ಲಿ ನೈಜ ಬಂಡೆ ಹಾಸು ಇತ್ತು. ಅದರ ತೀವ್ರ ಇಳಿಜಾರು ಸ್ವಲ್ಪೇ ಅಂತರದಲ್ಲಿ ನೇರ ಕೊಳ್ಳಕ್ಕೆ ತೆರೆದುಕೊಳ್ಳುತ್ತಿತ್ತು. ಅಲ್ಲಿಂದ ಹಾರಿದ್ದೇ ಆದರೆ ‘ಪ್ರದರ್ಶನ’ ಅವಕಾಶ ಕಡಿಮೆಯೆಂದು ದಲಾಲ್ ಮೊದಲೇ ಕಂಡುಕೊಂಡು ತಿರಸ್ಕರಿಸಿದ್ದರು. ಈಗ ಮೊದಲ ಹೆಜ್ಜೆಗಳನ್ನು ತೋರಿಸಿದ್ದೂ ಆಯ್ತು, ಅನುದ್ದಿಷ್ಟವಾಗಿ ಆಕಸ್ಮಿಕದ ಪರಿಚಯ ಮಾಡಿದ್ದೂ ಆಗಿಹೋಯ್ತು! ಇನ್ನು ತೇಲಿ ಸಾಗುವುದೊಂದೇ ಬಾಕಿ. ತುಸು ವಿಶ್ರಾಂತಿ ತೆಗೆದುಕೊಂಡು, ದಲಾಲ್ ಆಯ್ದ ಮೂರು ನಾಲ್ಕೇ ಮಂದಿ ಮತ್ತು ರೆಕ್ಕೆಯೊಡನೆ ಗೋಡೆ ಇಳಿದು, ಬಂಡೆಯ ಇಳಿಜಾರಿನ ಮೈಯಲ್ಲಿ ಹೊಸ ಯತ್ನಕ್ಕೆ ಸಜ್ಜಾದರು.

ಕೊಳ್ಳದ ಬಯಲಿನಲ್ಲಿ ಗದ್ದೆಗಳು ಕಟಾವಾಗಿ ವಿವಿಧ ವರ್ಣಗಳ ಚೊಕ್ಕ ಅಂಕಣಗಳಂತೆ ಶೋಭಿಸುತ್ತಿದ್ದವು. ಅಲ್ಲೆಲ್ಲೋ ಗದ್ದೆಯಂಚಿನಲ್ಲಿ ಸಿಕ್ವೇರಾ ಗಾಳಿಯ ದಿಕ್ಕು ಸೂಚಿಸುವಂತೆ ಹಾರಿಸಿದ್ದ ನಿಶಾನಿ ಹುಡುಕುನೋಟಕ್ಕಷ್ಟೇ ಕಾಣುವಷ್ಟು ಸಣ್ಣದಾಗಿದ್ದರೂ ಕೈ ಬೀಸಿ ಕರೆಯುತ್ತಿತ್ತು. ನಿರಾತಂಕ ಸಾಹಸವನ್ನಷ್ಟೇ ಕಲ್ಪಿಸಿ ಬಂದಿದ್ದ ಬಹುತೇಕ ವೀಕ್ಷಕರು, ದಲಾಲರ ಮೊದಲ ಪ್ರಯತ್ನದ ತಡವರಿಕೆ ಮತ್ತು ಈಗಿನ ಕೊಳ್ಳದ ನೇರ ದರ್ಶನದಿಂದ ಅಧೀರರಾಗಿದ್ದರು. ದಲಾಲರ ಅಧಿಕಾರ, ಮೀಸೆ, ದಿರುಸು, ನಡೆ, ನುಡಿ ಎಲ್ಲವನ್ನು ಮೀರಿ ಬಹುತೇಕ ಮಂದಿ ಹಿಂದೆ ಬಿಟ್ಟು, ‘ಈ ಅಜ್ಜರಿಗೆ ಇದು ಹೆಚ್ಚಾಯ್ತು’ ಎನ್ನುವ ಮಾತನ್ನು ಆಡಿಕೊಳ್ಳುತ್ತಿದ್ದರು. ಸಾಲದ್ದಕ್ಕೆ, ಮೊದಲ ಪ್ರಯತ್ನದಲ್ಲಿ ರೆಕ್ಕೆ ಹಿಡಿಯುವ ಸಹಾಯಕರು ಮಟ್ಟಸ ನೆಲದಲ್ಲಿ ಒದಗಿದ್ದೆವು. ಹೋದರೂ ಒಂದು ಜೀವ - ಹಾರುವವನದ್ದು! ಈಗಲಾದರೋ ಬಂಡೆಯ ಇಳಿಜಾರು ಮತ್ತು ಸ್ಥಳ ಸಂಕೋಚದಲ್ಲಿ ರೆಕ್ಕೆಯ ಮೂರು ಮೂಲೆಗಳನ್ನು ಹಿಡಿದವರು ಆದೇಶ ಸಿಕ್ಕ ಕ್ಷಣಾರ್ಧದಲ್ಲಿ ಒಮ್ಮೆಗೇ ಜಾಗ ಖಾಲಿ ಮಾಡಲು ಧಾವಿಸಲು ಅವಕಾಶ ಇರಲಿಲ್ಲ. ರೆಕ್ಕೆಯ ಮೂಗು ಹಿಡಿಯುವ ಜವಾಬ್ದಾರಿ ವಹಿಸಿಕೊಂಡ ನಾನಂತೂ ಪಕ್ಕದ ಇಬ್ಬರಿಗಿಂತಲೂ ಎರಡಡಿ ತಗ್ಗಿನಲ್ಲಿ ಕೊಳ್ಳದತ್ತಲೇ ಇದ್ದೆ. ಬಂಡೆಯ ಮೇಲೆ ಗಟ್ಟಿ ಹೆಜ್ಜೆ ಇಡಬಲ್ಲ ಧೈರ್ಯ ಒಂದೇ ನನ್ನ ಬಂಡವಾಳ. ನಮಗೆಲ್ಲರಿಗೂ ಅಂದಿನ ಹಾರಾಟಗಾರನಿಗೆ ಅಡ್ಡಿಯಾಗದಂತೆ ಮರೆಯಾಗಲಿದ್ದ ಒಂದೇ ಅವಕಾಶ ಇದ್ದಲ್ಲೇ ನೆಲದಲ್ಲಿ ಕವುಚಿ ಬಿದ್ದುಕೊಳ್ಳುವುದು. [ಅನಂತರ ಕೇಳಿ ಬಂದಂತೆ, ನಮ್ಮ ಸಾಹಸವನ್ನು ನೋಡಿ ರೋಮಾಂಚಿತರಾಗಲು ಪಣಂಬೂರಿನಿಂದ ಬಂದಿದ್ದ ಹವಾವೀಕ್ಷಣಾಲಯದ ಮಲಯಾಳಿ ಮಿತ್ರ ಮತ್ತು ಹಲವರು ತಣ್ಣಗೆ ಹಿಂದೆ ಸರಿದು, ಅಧೀರ ಹೃದಯಬಡಿತವನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದರಂತೆ! ಒಮ್ಮೆಗೇ ಗಾಳಿ ಅಡ್ಡ ಬಾರಿಸಿ, ಮೊದಲ ಪ್ರಯತ್ನದಲ್ಲಿ ತೊನೆದಾಡಿಸಿದಂತೇ ಇನ್ನೊಮ್ಮೆ ಆದರೆ? ದಲಾಲ್ ಏನೋ ರೆಕ್ಕೆಗೆ ಭದ್ರವಾಗಿ ಬಂಧಿತರಾಗಿದ್ದರು. ಸಾವಿರದ ಇನ್ನೂರಡಿ ಆಳಕ್ಕೆ ಕುಸಿಯುವಾಗ ಯಾವ ಕ್ಷಣದಲ್ಲೂ ರೆಕ್ಕೆಗೆ ಗಾಳಿ ತುಂಬಿ, ತೇಲಿ ಬಚಾವಾಗಬಹುದಿತ್ತು. ಏನಲ್ಲದಿದ್ದರೂ ಪ್ಯಾರಾಚೂಟಿನ ಪರಿಣಾಮದಲ್ಲಿ ಅವರಿಗೆ ಜೀವಾಪಾಯ ಕಡಿಮೆ ಇತ್ತು. ಆದರೆ ಶಿಲಾರೋಹಣದ ಕನಿಷ್ಠ ಅವಶ್ಯಕತೆಯಾದ ಬಿಲೇ ಹಗ್ಗವೂ ಇಲ್ಲದೇ ಪ್ರಪಾತದಂಚಿನಲ್ಲಿ ನಿಂತ ನಮ್ಮೂವರಲ್ಲಿ ಯಾರಾದರೂ ಗಡಿಬಿಡಿಯಲ್ಲಿ ಕಾಲು ತೊಡರಿದರೆ, ಅವರ ಬೀಳಿಗೆ ಸಿಕ್ಕಿಕೊಂಡರೆ ಉಳಿಗಾಲ ಖಂಡಿತಾ ಇರಲಿಲ್ಲ. [ಇನ್ನು ನನ್ನಮ್ಮ ಅಲ್ಲೇನಾದರೂ ಇದ್ದಿದ್ದರೆ, ನಗರದೊಳಗಿನ ಸಾಮಾನ್ಯ ದಾರಿ ಹೊಂಡವನ್ನು ನಮ್ಮ ಕಾರೋ ಬೈಕೋ ಹಾರುವಾಗಲೇ ‘ಮೃತ್ಯುಂಜಯ ಜಪ’ ಶುರುಹಚ್ಚುವಾಕೆಯ ಸ್ಥಿತಿಯನ್ನು ಕಲ್ಪಿಸಲೂ ಆಗದು!!]ವಾಯುಸ್ತುತಿ, ಅಲ್ಲಲ್ಲ, ಗಾಳಿವೇಗದ ಮೀಟರ್ ಪಠಣ ಮತ್ತೆ ಶುರುವಾಯ್ತು. ಕೊಳ್ಳದಿಂದ ಶಿಖರದತ್ತ ಬೀಸುವ ಗಾಳಿ ಸ್ಥಿರ ದಿಕ್ಕು, ವೇಗ ಸಮನ್ವಯಗೊಂಡ ಒಂದು ಅಮೃತಕ್ಷಣದಲ್ಲಿ, ಸೆಕೆಂಡುಗಳ ಅಂತರದಲ್ಲಿ, ದಲಾಲ್ ಎರಡು ಚುಟುಕು, ಆದರೆ ಸ್ಪಷ್ಟ ಆಜ್ಞೆ ಕೊಟ್ಟರು, “ಪಕ್ಕದವರು ಬಿಡಿ... ಮೂಗು ಬಿಡಿ.” ರೆಕ್ಕೆಯನ್ನು ಬಿಟ್ಟು, ದೊಪ್ಪ ಕವುಚಿಬಿದ್ದ ನನಗೆ, ವೀಕ್ಷಕರ ಹರ್ಷೋದ್ಗಾರ ಕೇಳಿದ ಮೇಲಷ್ಟೇ ತಲೆ ಎತ್ತಲು ಧೈರ್ಯ ಬಂತು. ದಲಾಲ್ ತೆಗೆದ ಎರಡನೇ ಹೆಜ್ಜೆಗೆ ಗಾಳಿಗೇರಿದ್ದರು. ಕಾಲಿನ ಬಲದಲ್ಲಿದ್ದವರು ರೆಕ್ಕೆಯ ನಡುವಣ ತೂಗುಪಟ್ಟಿಯಲ್ಲಿ ಜೋಕಾಲಿಯಾಡುತ್ತಾ ಬಂಡೆಯಿಂದ ದೂರ ಸಾರಿದ್ದರು. ನಿಯಂತ್ರಕ ತ್ರಿಕೋಣ ದಂಡದ ಕೆಳಕೋಲನ್ನು ಹಗುರವಾಗಿ ಹಿಡಿದು ತಮ್ಮ ದೇಹದ ತೂಕವನ್ನೇ ಹಿಂದೆ ಮುಂದಕ್ಕೆ ನೂಕುವುದರಿಂದ ಚಲನೆಯನ್ನೂ ಎಡಬಲಕ್ಕೆ ನೂಕುವುದರಿಂದ ಉದ್ದೇಶಿತ ದಿಕ್ಕಿಗೆ ತಿರುವನ್ನೂ ಸಾಧಿಸುತ್ತ ನಿರಾಳವಾಗಿ ತೇಲಿದ್ದರು. (ದೀರ್ಘ ಕಾಲೀನ ತೇಲುವವರು, ಕಾಲುಗಳನ್ನು ಹಿಂದಕ್ಕೆ ಚಾಚಿ, ಅಲ್ಲೊಂದು ತೂಗುಪಟ್ಟಿಯಲ್ಲಿ ತೊಡರಿಸಿಕೊಳ್ಳುತ್ತಾರೆ. ಮುಖಾಡೆ ಮಲಗಿ ಅಧೋ ಜಗತ್ತನ್ನು ಸಾಕ್ಷಾತ್ ಗರುಡನಂತೆ ವೀಕ್ಷಿಸುತ್ತಾ ಸಾಗುತ್ತಾರೆ) ದಲಾಲರ ಇಳಿದಾಣ ಸಾಕಷ್ಟು ದೂರದಲ್ಲೂ ಬಲು ಆಳದಲ್ಲೂ ಇದ್ದುದರಿಂದ ಒಂದೆರಡು ದೀರ್ಘ ವೃತ್ತಗಳನ್ನು ಹಾಕುತ್ತಾ ಮುಂದುವರಿದರು. ಬಂಡೆ ದೂರವಾದ ಮೇಲೆ ಸ್ಪಷ್ಟ ಬೀಸುಗಾಳಿ ಸಿಕ್ಕಿರಬೇಕು. ತಪ್ಪಲಿನ ಕಾಡು ಕಳೆದುಳಿದ ಬೋಳು ಬಯಲಿನ ಮೇಲೆ ಹಾಯುವಾಗ ಕಾದ ನೆಲದಿಂದೆದ್ದ ಬಿಸಿಗಾಳಿಯ ಸೌಕರ್ಯವೂ ಒದಗಿದ್ದಿರಬೇಕು. ಅವನ್ನು ಅನುಭವಿಸುತ್ತ ಇನ್ನೂ ಎತ್ತರಕ್ಕೇರಬಹುದಿತ್ತು, ಹೆಚ್ಚು ವಿಹರಿಸಬಹುದಿತ್ತು. ಆದರೆ ದಲಾಲ್ ಆ ವಲಯದ ಮೊದಲ ಪ್ರಯತ್ನವನ್ನು ಚಂದಕ್ಕೆ ಮುಗಿಸುವುದರತ್ತ ಮನಸ್ಸಿಟ್ಟವರಂತೆ ಕ್ರಮವಾಗಿ ಸಿಕ್ವೇರಾ ಗದ್ದೆಯತ್ತಲೇ ಸಾಗಿದ್ದರು. ಆರಂಭಿಕ ಭಯ, ಬೆರಗು ಕಳೆದು ನೋಡುತ್ತಿದ್ದ ನಮಗೀಗ ಅವರು ಅಖಂಡ ನೀಲಿಮೆಗೆ ಅಂಟಿದ ಪತಂಗ. ಅವರು ಇಳಿಯಿಳಿಯುತ್ತಿದ್ದಂತೆ ದೂರದಿಂದ ನೋಡುವ ನಮಗೆ ಗದ್ದೆಯಂಚಿನ ತೆಂಗು, ತಾಳೆಗಳು ಪತಂಗ ಬಡಿಯ ಹೊರಟ ತುಂಟಕೋಲುಗಳಂತೆಯೇ ಕಂಡದ್ದಿತ್ತು. ಆದರೆ ವಾಸ್ತವದಲ್ಲಿ ದಲಾಲ್ ಅವುಗಳಿಂದ ಬಲು ಎತ್ತರ ಮತ್ತು ಅಂತರದಲ್ಲೂ ಗದ್ದೆಗೊಂದು ಸುತ್ತು ಹಾಕಿ, ನೆಲ ನಿಶಾನಿಯಲ್ಲಿ ಗಾಳಿಯ ದಿಕ್ಕನ್ನು ಸರಿಯಾಗಿ ನೋಡಿಕೊಂಡಿದ್ದರು. ಗಗನದಲ್ಲಿ ಮನಸೋಯಿಚ್ಛೆ ಆಡಿ ಬಂದ ಹಕ್ಕಿರಾಜನಂತೆ ಎದುರು ಗಾಳಿಗೆ ಸರಿಯಾಗಿ ಒಡ್ಡಿಕೊಂಡು, ರೆಕ್ಕೆಯ ಮೂಗೇರಿಸಿ ಮತ್ತೆರಡೇ ಹೆಜ್ಜೆ ಓಡಿ ಪೂರ್ಣಗೊಳಿಸಿದರು. ಸಾವಿರದಿನ್ನೂರಡಿಯ ಔನ್ನತ್ಯ, ಒಂದೆರಡು ಮೈಲುಗಳ ಅಂತರದಲ್ಲಿ, ಮೂರು ಮಿನಿಟು ಇಪ್ಪತ್ತು ಸೆಕೆಂಡುಗಳಲ್ಲೇ (ಗಾಳಿ ವೇಗದ ಲೆಕ್ಕಿಗ ಮತ್ತೆ ಹಾರು ಸಮಯದ ಲೆಕ್ಕ ಇಟ್ಟಿದ್ದ) ಚಂದಕ್ಕೆ ತೇಲಿ ಮುಗಿದಿತ್ತು. ಕನ್ನಡ ಕರಾವಳಿಯಲ್ಲಿ ಹೊಸ ಸಾಹಸ ಕ್ರೀಡೆಗೆ ನಾಂದಿ ಹಾಡಿತ್ತು.******

[ಇದರ ಸಂಕ್ಷಿಪ್ತ ರೂಪವನ್ನು ‘ಹಾರುವವರು ಬರುತ್ತಿದ್ದಾರೆ’ ಎಂದು ಅಂದೇ ನಾನು ಅತ್ಯುತ್ಸಾಹದಿಂದ ೧೦-೬-೧೯೮೪ರ ತರಂಗಕ್ಕೆ ಲೇಖನ ಮಾಡಿದ್ದೆ. ಹಾರುವಯ್ಯನ ನುಡಿ, ನಡೆಯಲ್ಲೇನಾಯ್ತು? ಅಂದರೆ, ಇಮ್ಮಡಿಸಿದ  ಉತ್ಸಾಹದಲ್ಲಿ ನಾವು ಗರಿ ಕಟ್ಟಿಕೊಂಡ ಪರಿಯ ನಿವೇದನೆಯೇ ಮುಂದಿನ ಕಂತು. ಅದಕ್ಕೂ ಮುನ್ನ ಈ ಸರಣಿಗೆ ನಿಮ್ಮ ಉತ್ಸಾಹವನ್ನು ತಿಳಿಯಲು ಬಯಸಿ ಪ್ರತಿಕ್ರಿಯಾ ಅಂಕಣವನ್ನು ತೆರೆದಿಟ್ಟಿದ್ದೇನೆ]

6 comments:

 1. ಚೆನ್ನಾಗಿದೆ. ಮುಂದಿನ ಕಂತು ಬೇಗನೆ ಬರಲಿ. ಇದನ್ನು ಜಾಲಕ್ಕೆ ಏರಿಸುವಾತನಿಗೆ ಲೇಖಕ ಕೊಟ್ಟ ಸೂಚನೆಯೊಂದು ಹಾಗೆಯೇ ಉಳಿದುಕೊಂಡಿದೆ:- ಅಂಥ ಎರಡು ಕಲ್ಲುಗಳ ನಡುವಣ ಸುಮಾರು ಮೂರು-ನಾಲ್ಕಡಿ ಸಂದಿನಲ್ಲಿ ಕೊಳ್ಳಕ್ಕೆ ಧಾವಿಸುವುದು ದಲಾಲರ ಲಕ್ಷ್ಯ. (ಸ್ಕ್ಯಾನ್ ಮಾಡಿದ ಚಿತ್ರದಲ್ಲಿ ಜಮಾಲಾಬಾದ್ ಅಂಚಿನಲ್ಲಿ ರೆಕ್ಕೆ ಸಹಿತ ಸಾರ್ವಜನಿಕರು ನಿಂತಿರುವ ಚಿತ್ರ ಇಲ್ಲಿ ಹಾಕು)

  ReplyDelete
 2. ನಿಮ್ಮೊಂದಿಗೆ ನಿಮ್ಮ ಅಂದಿನ ಹಾರಾಟ ಅನುಭವಿಸಿದೆ. ಈಗಿನ ಯುವಜನ ಈ ರೆಕ್ಕೆ ಹಾರಾಟವನ್ನು ಮುಂದುವರೆಸಿರುವರೇ? - ಎಂಬ ಕುತೂಹಲ ಕಾಡುತ್ತಾ ಇದೆ. - ಪೆಜತ್ತಾಯ ಎಸ್. ಎಮ್.

  ReplyDelete
 3. Nimagu badalavaneya Gaali beeside - wordpress ninda blogspot ge!

  Nice article

  regards,
  technophilo
  www.technophilo.blogspot.com

  ReplyDelete
 4. ಮಾನ್ಯರೆ,
  ಹೊಸ ತಾಣದ ವಿನ್ಯಾಸ ಚೆನ್ನಾಗಿದೆ. ತಾಣದ ಹೆಸರು ಇತರ ಕೊಂಡಿಗಳ ವಿವರಗಳು (ರೀಡ್ ಮೋರ್ ಇತ್ಯಾದಿ)ಕನ್ನಡದಲ್ಲಿರಬಹುದು.
  ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  ReplyDelete
 5. ಬಾಳ ಖುಷಿ ಆತು. ಮುಂದಿನ ಕಂತು ದಯವಿಟ್ಟು ಬರೆಯಿರಿ. ನಿಮ್ಮ ಈ ಸಾಹಸಗಳನ್ನು ತಿಳಿಯುತ್ತಾ, ನಾವೂ ಏನಾದರೂ ಮಾಡಲು ಸಾದ್ಯವಾದರೆ ಮಾಡುತ್ತೇವೆ. ಧನ್ಯವಾದಗಳು

  ReplyDelete
 6. ನಮ್ಸ್ಕಾರ ಸ್ವಾಮಿ
  ಹಾರಾಟ; ದಲಾಲ್; ಮಧು ಎಲ್ಲ ಓದಿದೆ.ಒಮ್ಮೆ ಜಮಲಾಬಾದಿಗೆ ಹತ್ತಿದಹಾಗೆ ಅಯಿತು.
  ಶರತ್

  ReplyDelete