24 September 2011

ರಾಮೂಗೆ ಮದ್ವೆಯಂತೆ - ದಿಬ್ಬಣದ ಮೊದಲ ಹೆಜ್ಜೆ

ಪ್ರಿಯ ನಾರಾಯಣ (-ರಾವ್, ನನ್ನ ಓರ್ವ ಚಿಕ್ಕಪ್ಪ)

`ರಾಮುಗೆ (ನಾರಾಯಣನ ಹಿರಿಯ ಮಗ - ರಾಮಚಂದ್ರ ರಾವ್ ದ ಸೆಕೆಂಡ್!) ಹುಡುಗಿ ನಿಶ್ಚಯವಾಯ್ತಂತೆ, ಸದ್ಯದಲ್ಲೇ ಬದ್ಧವಂತೆ, ಅಜ್ಜಿಯ ವರ್ಷಾಂತಿಕವಾಗದೇ ಮದುವೆ ಇಲ್ಲ್ವಂತೆ...’ ಹೀಗೇ ಯೋಚನೆಗಳು ರೂಪುಗೊಳ್ಳುವ ಹಂತದಲ್ಲೇ (ಸೂಕ್ಷ್ಮ ಸಂದೇಶ, ಚರವಾಣಿ, ಮುಖವಾಣಿಗಳ ಹಾವಳಿಯಲ್ಲಿ) ಟಾಂಟಾಂ ದಟ್ಟವಾಗಿರುವಾಗ ನಿನ್ನ ದೂರವಾಣಿ ಕರೆ ಬಂತು. ಅನಧಿಕೃತ ತಿಳಿಸುವವರ ಉತ್ಸಾಹದಷ್ಟೇ ಅವಸರದಲ್ಲಿ ನಾನೂ ನಿನ್ನ ಮಾತಿಗು ಮುನ್ನ “ಗೊತ್ತು ಗೊತ್ತು, ಶುಭವಾಗಲಿ” ಎಂದು ಹೇಳಿ ಉದ್ದೇಶಪಡದೇ ಸ್ಮಾರ್ಟ್ ಆದದ್ದೂ ಆಯ್ತು! ಮತ್ತೆ ನೀನೇ “ಔಪಚಾರಿಕವಾಗಿಯಾದರೂ ನಾನು ಹೇಳಲೇಬೇಕು” ಎಂದು ನಯವಾಗಿ ಎಚ್ಚರಿಸಿ ಹೇಳಿದ ಮೇಲೂ ನನ್ನಪ್ಪ ಹೇಳಿದ ಮಾತನ್ನು ಮತ್ತೆ ಅವಸರದಲ್ಲೇ ನಾನು ಅನುಸರಿಸಿದ್ದಿರಬೇಕು. “ಸೆಪ್ಟೆಂಬರ್ ಹನ್ನೆರಡು, ಸೋಮವಾರಾ! ನನಗೆ ಕೆಲಸದ ದಿನವಲ್ವಾ. ನನ್ನ ಶುಭಾಶಯಗಳು ನಿಮ್ಮೊಡನುಂಟು” ಎಂದೇ ಮುಗಿಸಿಬಿಟ್ಟೆ.


ತಲೆಯೊಳಗೆ ಯೋಚನಾ ವಲ್ಲರಿ ಹೊಸದಾಗಿ ದಾಂಗುಡಿಸಿತು. ಕೌಟುಂಬಿಕವಾಗಿ ನನ್ನ ತೀರಾ ಸಣ್ಣ ಆತ್ಮೀಯ ವಲಯದೊಳಗೆ ಬರುವವರಲ್ಲಿ ನಿಮ್ಮನೆಯ ಮಂದಿ ಬಿಟ್ಟಿಲ್ಲ. ನನಗೆ ಸಮಯಾನುಕೂಲ ಮಾಡಿಕೊಳ್ಳುವುದು ಸಾಧ್ಯವಾದರೆ, ಭಾಗಿಯಾಗುವುದು ಪ್ರೀತಿಯ ಕರ್ತವ್ಯ ಎಂದು ಕಾಣಿಸಿತು. ಸಾಲದ್ದಕ್ಕೆ ಪ್ರವಾಸ, ಹೊಸ ಸ್ಥಳ ನೋಡುವುದು ನನ್ನ ಪ್ರಿಯ ಹವ್ಯಾಸವೂ ಹೌದು. ಅಂಗಡಿ ವ್ಯವಸ್ಥೆಗೆ ದೇವಕಿಯನ್ನು ಸಜ್ಜುಗೊಳಿಸಿ, ನಿನ್ನನ್ನು ಮರುಸಂಪರ್ಕಿಸಿದೆ. ಮಂಗಳವಾರ ಬೆಳಗ್ಗಿನವರೆಗೆ ಅಂಗಡಿ ಬಂಧನದಿಂದ ಜಾಮೀನು ಸಿಕ್ಕ ಅಪರಾಧಿಯಂತೆ (ರೆಡ್ಡಿ ಯೆಡ್ದಿ ಕುಮ್ಮಿಯಂತೆ ನಾನು ಬರಿಯ ಆರೋಪಿಯಲ್ಲ, ಸ್ವಯಂ ಘೋಷಿತ ಅಪರಾಧಿಯಾಗಿ ಪುಸ್ತಕ ಮಳಿಗೆಯಲ್ಲಿ ಜೀವಾವಧಿ ಬಂಧಿ!), ಶನಿವಾರ ಇಳಿಸಂಜೆ, ಬೆನ್ನಿಗೆ ಚೀಲ ಏರಿಸಿ, ಪಿರಿಪಿರಿ ಮಳೆಗೆ ಕೊಡೆ ಅರಳಿಸಿ, ಮನೆಬಿಟ್ಟೆ. ‘ಮಳೆಗಾಲಕ್ಕೆ ಸಜ್ಜುಗೊಂಡ ಮಂಗಳೂರ’ ಚರಂಡಿ ಮತ್ತು ಮಾರ್ಗಗಳ ಬೇಧ ಅಳಿಸಿದ ಕೊಚ್ಚೆ ಹರಿವಿನ ಎಡೆಯ ದಿಬ್ಬದಿಂ ದಿಬ್ಬಕ್ಕೆ ಧೀಂಕಿಟ ಹಾಕುತ್ತಾ ಬಿಜಯಂಗೈದೆ. (ಕೆಸರಟ್ಟಿಸಿ ನಿಲ್ದಾಣವಿರುವುದು ಬಿಜೈಯಲ್ಲಿ.)

ಬಸ್ ನಿಲ್ದಾಣವನ್ನು ವಿನಾಯಕ ಲಾಟರಿ ಸಂಸ್ಥೆಗೆ ಒಳಗುತ್ತಿಗೆ ಕೊಟ್ಟಿದ್ದರು. ಮುಖ್ಯ ಮಂತ್ರಿಯ ಕುರ್ಚಿಯಿಂದ ಹಿಡಿದು ಚಪ್ರಾಸಿಯ ಕಸಬುಟ್ಟಿಯವರೆಗೆ ವೇದೋಕ್ತವಾದ ಪೂಜೆ ಸಲ್ಲುವ ಪುಣ್ಯಭೂಮಿ ನಮ್ಮದು. ಮಾಮೂಲೀ ದಿನಗಳಲ್ಲೇ ಸಾರ್ವಜನಿಕ ವಾಹನ ನಿಲುಗಡೆಗೆ ಜಾಗವಿಲ್ಲದ ಸ್ಥಿತಿಯಿದ್ದರೂ ಚೌತಿ ಬಂದಾಗ ಇಲ್ಲಿ ಚಪ್ಪರ ಬರುವುದು ಖಾತ್ರಿ. ಹೊರಗಿನ ಕಿಷ್ಕಿಂಧಾ ಮಾರ್ಗದಲ್ಲಿ ಗುಂಡ್ಯಾಡುತ್ತಾ ಕರ್ಣಕಠಾರಿಗಳನ್ನು ಮೊಳಗಿಸುತ್ತಾ ದೂಳುಧೂಮಗಳನ್ನೆಬ್ಬಿಸುತ್ತಾ ಸಾಗುವ ನಾಗರಿಕತೆಯನ್ನು ಮೀರುವಂತೆ ಇಲ್ಲಿ ಜನರೇಟರು, ಚಕುಪುಕು ದೀಪಮಾಲೆ, ಭಕ್ತಿ ಸಂಘಾತ ಕೊಟ್ಟು, ಭರ್ಜರಿ ವಿನಾಯಕನನ್ನು ಕೂರಿಸುವುದನ್ನು ನಾನು ನಿನಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಇಲ್ಲೂ ಅದೆಷ್ಟೋ ದಿನ ನಿಯಮಿತವಾಗಿ ಸಾಂಸ್ಕೃತಿಕ ಭಯೋತ್ಪಾದಕರನ್ನು ಕರೆಸಿ, ಕಲಗಚ್ಚು ಕರಡಿದ ಕೊನೆಯಲ್ಲಿ ಪ್ರಧಾನ ಸಾಕ್ಷಿಯನ್ನೇ (ವಿನಾಯಕ ಮೂರ್ತಿ) ಕೆರೆಗೋ ಬಾವಿಗೋ ತಳ್ಳಿ ಮುಗಿದಿತ್ತು. ತದಂಗವಾಗಿ ಸಮಿತಿ ಸೇವಾಕರ್ತರಿಗೆ ಕೊಟ್ಟ ನಗದು ರಸೀದಿಗಳ ಆಧಾರದ ಲಾಟರಿಯ ಡ್ರಾ ಅಂದು ನಡೆಯುತ್ತಿತ್ತು. ನನ್ನ ಕಿಸೆ ಖಾಲಿಯಾಗದ ಎಚ್ಚರವಹಿಸಿಕೊಂಡು ಜಂಗುಳಿಯನ್ನೀಸಿ ಬಸ್ಸು ಕಟ್ಟೆ ಸಾಕಷ್ಟು ಬೇಗನೇ ತಲಪಿದೆ.

ಮೂರಕ್ಕೆ ಹೊರಡುವ (ಮಡಿಕೇರಿ ಮಾರ್ಗವಾಗಿ) ಮೈಸೂರು ರಾಜಹಿಂಸೆ ಬಸ್ಸು (ರಾಜಹಂಸ) ನಿರಾಕರಿಸಿ ಕಾದೆ. ಮೂರೂವರೆಯ ಕೊಯಮತ್ತೂರು ವಾಲುವ ಬಸ್ಸನ್ನೇ (ಹೂಂ, ದಾರಿಯ ಅವ್ಯವಸ್ಥೆಯಲ್ಲಿ ಎಲ್ಲವೂ ವಾಲುವವೇ. ಆದರೆ ‘ಕುಶಾಲು ಪದಕೋಶ’ದಲ್ಲಿ ರಾಜಹಂಸ = ರಾಜಹಿಂಸೆ ಎಂದಂತೆ, ವೋಲ್ವೋ = ವಾಲುವ!) ಹಿಡಿದೆ. ಇದು ಸಮಯಕ್ಕೆ ಸರಿಯಾಗಿಯೇ ಹೊರಟರೂ ನಗರದ ಚಕ್ರವ್ಯೂಹದಿಂದ ಪಾರಾಗಬೇಕಾದರೆ ಮತ್ತೆ ಅರ್ಧ ಗಂಟೆಯೇ ಹಿಡಿದಿತ್ತು. ಆದರೂ ಜೋಡುಮಾರ್ಗದವರೆಗೆ ಒಂದೆರಡು ಎಡವಟ್ಟನ್ನುಳಿದು ಚತುಷ್ಪಥದ ಸಂಚಾರ ಪಥವಷ್ಟೂ ಚೊಕ್ಕವಾಗಿರುವುದರಿಂದ ನಾನು ಬಯಸಿದ ಭವ್ಯ ಸವಾರಿಯ ಕುಶಿ ಅನುಭವಿಸಿದೆ. ಮಾರ್ಗದ ಅಗಲೀಕರಣದಲ್ಲಿ ನೆಲದ ಹೊಸ ಕಡಿತ ಮತ್ತು ನಿಗಿತಗಳು ಕೆಲವೆಡೆ ಕುದುರದೆ ಉಂಟಾದ ಸಮಸ್ಯೆಗಳು ಅರ್ಥವಾಗುವಂತವು ಮತ್ತು ಪರಿಹಾರ್ಯವೂ ಹೌದು. ಆದರೆ...

ಬ್ರಹ್ಮರಕೂಟ್ಲು, ಜೋಡುಮಾರ್ಗಕ್ಕೂ (ಯಾನೆ ಬೀಸೀರೋಡ್) ಸ್ವಲ್ಪ ಮೊದಲು ಸಿಗುವ ಈ ಪುಟ್ಟ ದೈವಸ್ಥಾನ, ಯಾವುದೇ ಮಾರ್ಗ ಬದಿಯಲ್ಲಿ ಕಾಣ ಸಿಗುವಂಥದ್ದೇ. ಸುಮಾರು ಮೂವತ್ತು ವರ್ಷಗಳಿಗೂ ಮೊದಲು ಅಬ್ಬರದ ಮಳೆಗಾಲದಲ್ಲಿ ನೆರೆನೀರು ಮಂಗಳೂರ ಹೆದ್ದಾರಿಯನ್ನು ಮುಳುಗಿಸುತ್ತಿದ್ದ ಸ್ಥಳನಾಮವಾಗಿಯೇ ಹೆಚ್ಚು ಪ್ರಚಾರಕ್ಕೆ ಬರುತ್ತಿತ್ತು ಈ ಬ್ರಹ್ಮರಕೂಟ್ಲು. ಅಲ್ಲಿ ದಾರಿಯನ್ನು ಎತ್ತರಿಸುವುದರೊಡನೆ ಹೊಸದಾಗಿಯೇ ರೂಪಿಸುವ ಯೋಜನೆ ತೊಡಗಿದಾಗ ದೈವಸ್ಥಾನದ ಆಡಳಿತ ಮಂಡಳಿ ಸಂಕುಚಿತ ಮನೋಭಾವ ತೋರಿರಬೇಕು. ಹೊಸನೆಲೆಗೆ ಸ್ಥಳಾಂತರ ನಡೆಯಲಿಲ್ಲ. ದೈವಸ್ಥಾನದ ಎದುರಿಗಿದ್ದ ಹಳೆದಾರಿ, ಹಿತ್ತಲಿನಲ್ಲಿ ಆರಾಳೆತ್ತರದ ಕಾಂಕ್ರೀಟ್ ಗೋಡೆಯ ಮೇಲೆ ಸವಾರಿ ನಡೆಸಿತು. ಹಿನ್ನೆಲೆಗೆ ನೇತ್ರಾವತಿಯ ಹೊಳೆಪಾತ್ರೆಯೊಡನೆ ಮುಕ್ತ ಬನದಂತಿದ್ದ ವಠಾರ ಭವ್ಯತೆ ಕಳೆದುಕೊಂಡಿತು. ಈಗ ಚತುಷ್ಪಥದ ಕಾಮಗಾರಿ ಮತ್ತೆ ಈ ವಠಾರವನ್ನು ಕೇಳುತ್ತಿದೆ. ಲೋಕಹಿತಕಾರಿಯಾದ ಚತುಷ್ಪಥವನ್ನು ದೈವಸ್ಥಾನ ಧಿಕ್ಕರಿಸದೆಂಬ ವಿಶ್ವಾಸದಲ್ಲಿ ಮಾರ್ಗ ರಚನೆ ಪೂರ್ಣಗೊಂಡು ವಠಾರದ ಎರಡೂ ಪಕ್ಕದಲ್ಲಿ ಕುರುಡಾಗಿ ನಿಂತಿವೆ. ಆಡಳಿತ ಮಂಡಳಿ ಪಕ್ಷರಾಜಕೀಯದ ಬಲದಲ್ಲಿ ಹೆದ್ದಾರಿ ತಂತ್ರಜ್ಞರನ್ನು ದೇವ ತಂತ್ರಜ್ಞರ ‘ಪ್ರಶ್ನೆ’ಗೆ ಮಣಿಸಿ, ಭಾವುಕ ಒತ್ತೆಸೆರೆ ಹಿಡಿದಿದ್ದಾರೆ. ಬಹುಖ್ಯಾತಿಯ ತಿರುವನಂತಪುರದ ದೇವಪ್ರಶ್ನೆಯನ್ನು ಸ್ಪಷ್ಟ ಲೌಕಿಕ ನ್ಯಾಯದ ತಕ್ಕಡಿಯಲ್ಲಿ ತೂಗಿ ತಿರಸ್ಕರಿಸಿದ ದೇಶದ ಅತ್ಯುಚ್ಛನ್ಯಾಯಾಲಯದ ಧೀಮಂತ ನುಡಿಗಳು ಇಲ್ಲಿಗೂ ಅನ್ವಯವಾಗಲು ಇನ್ನೆಷ್ಟು ಕಾಲ ಬೇಕೋ ಏನೋ.

ಮಾಣಿ-ಪುತ್ತೂರು ಮತ್ತೆ ಪುತ್ತೂರು-ಕುಂಬ್ರದವರೆಗಿನ ದಾರಿಯ ಅಸಾಧ್ಯ ಅವ್ಯವಸ್ಥೆಗಳನ್ನು ಅನಿವಾರ್ಯ ಅಭಿವೃದ್ಧಿಯ ಸಂಕಟಗಳೆಂದು ಒಪ್ಪಿಕೊಳ್ಳಬಹುದು. ಆದರೆ ಹೊಸ ಯೋಜನೆ ತೊಡಗಲಿಲ್ಲ, ಮಾಮೂಲೀ ತೇಪೆಯೂ ನಡೆಯಲಿಲ್ಲ ಎಂದೇ ಉಳಿದಿರುವ ಕುಂಬ್ರ-ಕೊಯ್ನಾಡು ಅಂಶ ಅಕ್ಷಮ್ಯ. ಮಡಿಕೇರಿಯಿಂದ ಬೆಳಗಾವಿಗೆ ಹತ್ತಿರದ ದಾರಿಯೆಂದರೆ ಮಂಗಳೂರು ಮೂಲಕದ ಕರಾವಳಿ ಹೆದ್ದಾರಿ ಎಂದು ಭೂಪಟ ನೋಡಿದವರಿಗೆಲ್ಲಾ ತಿಳಿದೀತು. ಆದರೆ ಕುಂಬ್ರ ಕೊಯ್ನಾಡು ತುಣುಕನ್ನು (ಇದನ್ನೂ ನಾಚಿಸುವಂತಿರುವ ಉಡುಪಿ-ಕುಮಟಾದವರೆಗಿನ ಹೆದ್ದಾರಿಯನ್ನೂ ಅನುಭವಿಸಿದ ಬಲದಲ್ಲೇ) ನೀನು ಹುಣಸೂರತ್ತಣ ಹೊಸ ದಾರಿ ಹಿಡಿದದ್ದು ಎಂದು ತಿಳಿದುಕೊಂಡೆ. ಈ ಭಯಂಕರವನ್ನು ಹಗುರಗೊಳಿಸಿಕೊಳ್ಳಲೆಂದೇ ನಾನು ವಾಲ್ವೋ ಹಿಡಿದಿದ್ದೆ. ನಿರೀಕ್ಷೆಯಂತೆ ಬಸ್ಸು ತುಂಬಾ ಸಮರ್ಥವಾಗಿ ಅದನ್ನು ನಿರ್ವಹಿಸಿತು. ನಮಗೂ ಮುಕ್ಕಾಲು ಗಂಟೆ ಮೊದಲೇ ಹೊರಟಿದ್ದ ರಾಜಹಂಸವನ್ನು ಸುಳ್ಯದಲ್ಲೇ ಹಿಂದಿಕ್ಕಿದಾಗಂತೂ ನಾನು ಟಿಕೆಟ್ಟಿಗೆ ಕೊಟ್ಟ ಹೆಚ್ಚುವರಿ ಹಣ ವಾಪಾಸು ಬಂದಂತೇ ಆಯ್ತು!ಸುಳ್ಯ ಪೇಟೆ ಕೆಲವು ಕಾಲದಿಂದ ಅತ್ತ ಪುತ್ತೂರಿನಿಂದ, ಇತ್ತ ಮಡಿಕೇರಿಯಿಂದ ಬರುವ ಚತುಷ್ಪಥವನ್ನು ಸ್ವೀಕರಿಸಲು ಸಜ್ಜುಗೊಳ್ಳುತ್ತಲೇ ಇತ್ತು. ವಾರಗಳ ಹಿಂದೆ, ಹಿಂದೆ ಸಂಪಾಜೆ ಘಾಟಿಯನ್ನು ಮಾಡಿದಂತೇ ಕೆಲವು ತಿಂಗಳ ಕಾಲ ವಾಹನ ಸಂಚಾರ ಪೂರ್ಣ ಬಂದ್ ಮಾಡಿ ರಸ್ತೆ ಅಗಲ ಮತ್ತು ಉನ್ನತೀಕರಣದ ಕೆಲಸ ನಡೆಸುವ ಘೋಷಣೆಯೂ ಕೇಳಿತ್ತು. ಆದರೆ ನಮ್ಮಲ್ಲಿ ಯಾವುದೇ ಸಾರ್ವಜನಿಕ ಕಾಮಗಾರಿ (ಗುಣಮಟ್ಟ ಸಾಯಲಿ) ಕಾಲ ಬದ್ಧವಾಗಿ ಪೂರ್ಣಗೊಂಡು, ಬಳಕೆಗೆ ಮುಕ್ತವಾದ ದಾಖಲೆ ಇಲ್ಲ. ಸಹಜವಾಗಿ ಪ್ರತಿಭಟನೆಗಳು ನಡೆದು, ರಾಜಿಯಾದ್ದರಿಂದ ಒಂದು ಬದಿಯಲ್ಲಿ ಕೆಲಸವೂ ಇನ್ನೊಂದು ಬದಿಯಲ್ಲಿ ಸರದಿಯ ಮೇಲೆ ಎದುರುಬದುರು ವಾಹನ ಸಂಚಾರಕ್ಕೂ ವ್ಯವಸ್ಥೆಯಾಗಿತ್ತು. ಆದರೆ ಇಂಥಲ್ಲೆಲ್ಲಾ ಒಳದಾರಿ ಹುಡುಕುವ ಕೆಲವು ಬುದ್ಧಿಗಳು ಒಟ್ಟು ಪರಿಸ್ಥಿತಿಯನ್ನು ಹದಗೆಡಿಸುವುದು ನಾವೂ ಅನುಭವಿಸಿದೆವು. ನಮ್ಮಿಂದ ಹತ್ತಿಪ್ಪತ್ತೇ ಅಡಿ ಮುಂದೆ ಬಲಕ್ಕೆ ಶೌಚಕೂಪಕ್ಕಾಗಿ ಹೊಂಡ ತೋಡಿದ್ದರು. ನಮ್ಮ ಬಸ್ಸು ಪೊಲಿಸ್ ಸೂಚನೆ ಮೇರೆಗೆ ಮುಂದುವರಿಯುತ್ತಿದ್ದಂತೆ ಎದುರಿನ ಓರ್ವ ಸ್ಕೂಟರ್ ಸವಾರ ಮಿಂಚಿನಂತೆ ನುಗ್ಗಿದ. ನಮ್ಮ ಚಾಲಕ ಮತ್ತು ಬಸ್ಸಿನ ಅಸಾಧಾರಣ ತಾಕತ್ತಿನಿಂದ ಆತ ಬಸ್ಸಿನಡಿಗೂ ಬೀಳಲಿಲ್ಲ, ಹೊಂಡದಾಳವನ್ನೂ ಅಳೆಯಲಿಲ್ಲ!

ಬಸ್ಸು ಮಂಗಳೂರಿನಿಂದಲೇ ಕೆಳಧ್ವನಿಯಲ್ಲಿ ಯಾವುದೋ ಎಫ್‌ಎಂ ರೇಡಿಯೋ ಗುನುಗಿಕೊಂಡಿತ್ತು. ಸುಳ್ಯದಿಂದ ಮುಂದೆ ಯಾರೋ ಪರಿಚಿತರ ಒತ್ತಾಯದ ಮೇರೆಗೆ ‘ಕೋಟೆ’ ಎಂಬ ಭೀಕರ ಸಿನಿಮಾದ ವಿಡಿಯೋ ಪ್ರದರ್ಶನ ತೊಡಗಿತು. ಹೊರಗೆ ಮೋಡ ಆವರಿಸಿ, ಪಿರಿಪಿರಿ ಮಳೆ, ಕತ್ತಲೂ ಮುತ್ತಿ ನನಗೆ ಬೇಡವೆಂದರೂ ಸಿನಿಮಾದ ಪೆಟ್ಟು, ರಕ್ತಪಾತಗಳಿಗೆಲ್ಲಾ ಸಾಕ್ಷಿಯಾಗಲೇಬೇಕಾಯ್ತು. ಅದರ ಕಥೆ ಹೇಳುವ ಅಥವಾ ವಿಮರ್ಶೆ ಮಾಡುವ ಕ್ರೌರ್ಯ ದಯವಿಟ್ಟು ಇಲ್ಲಿ ನನ್ನಿಂದ ನಿರೀಕ್ಷಿಸಬೇಡ. ನಾನೇ ಆರಿಸಿಕೊಂಡು ನೋಡಿದ ಅಸಂಖ್ಯ ವೈವಿಧ್ಯಮಯ ಸಿನಿಮಾಗಳು ಮತ್ತಿತರ ಕಲಾಪ್ರಕಾರಗಳ ಪ್ರೀತಿಗೆ, ಅದಕ್ಕೂ ಮಿಗಿಲಾಗಿ ಈಗ ವೃತ್ತಿಪರ ಸಿನಿಮಾ ನಿರ್ದೇಶಕನ ಅಪ್ಪನೂ ಆಗಿ ನಾನು ಹೇಳಬಹುದಾದ ಪುಟಗಟ್ಟಳೆ ಮಾತುಗಳನ್ನು ಇನ್ಯಾವುದಾದರೂ ಔಚಿತ್ಯಪೂರ್ಣ ಸಂದರ್ಭಕ್ಕೆ ಕಾದಿರಿಸುತ್ತೇನೆ!

ಮಳೆ ಜೋರಾಗಿಯೇ ಕುಟ್ಟುತ್ತಿದ್ದಂತೆ ಜನರಲ್ ತಿಮ್ಮಯ್ಯನವರಿಗೆ ಸಲ್ಯೂಟ್ ಹಾಕಿ ಟೋಲ್ಗೇಟಿನಲ್ಲಿ ಇಳಿದೆ. ನಾನು ಇನ್ನೂ ಕೊಡೆ ಸರಿಯಾಗಿ ಬಿಡಿಸಿರಲಿಲ್ಲ, ನಾಲ್ಕು ಹೆಜ್ಜೆ ಇಟ್ಟಿರಲಿಲ್ಲ, ಅದೃಷ್ಟ ನನ್ನೆದುರು ಕಾರ್ ಸಮೇತ ರವಿ (-ಶಂಕರ್, ನನ್ನ ಇನ್ನೊಬ್ಬ ಚಿಕ್ಕಪ್ಪ - ರಾಘವೇಂದ್ರನ ಮಗ) ರೂಪದಲ್ಲಿ ಪ್ರತ್ಯಕ್ಷವಾಯ್ತು! ಆಸ್ಪತ್ರೆಯ ಸಂದಿನ ಮೆಟ್ಟಿಲದಾರಿ ಇಳಿಯಲೋ ಜ್ಯೋತಿ ಹೊಮಿಯೋ ಕ್ಲಿನಿಕ್ಕಿನೆದುರಿನ ನೆನಪಿನ ಓಣಿ ನಡೆಯಲೋ ಯೋಚಿಸಲು ಅವಕಾಶವೇ ಒದಗಲಿಲ್ಲ. ಮೊದಲು ಉಪಚಾರಕ್ಕೇನೂ ಕೊರತೆಯಾಗದಂತೆ ರವಿ ಅವನ ಮನೆಗೇ (ದ್ವಾರಕ) ನನ್ನನ್ನು ಕರೆದೊಯ್ಯಲು ಸಿದ್ಧನಾಗಿದ್ದ. ಆದರೆ ಪ್ರಸ್ತುತ ಸನ್ನಿವೇಶದ ಕೇಂದ್ರದಲ್ಲೇ ನಾನಿರಬೇಕೆಂದು ಬಯಸಿ ನಿಮ್ಮನೆಗೇ (ಜ್ಯೋತಿ) ಬಂದು ಸಂಭ್ರಮಿಸಿದೆ.

ದಾರಿ ಮತ್ತು ದೂರದ ಅಂದಾಜಿನಲ್ಲಿ, (ನಾನು ಹೆಚ್ಚಾಗಿ ಕೈಗೊಳ್ಳುವ ಸಾಹಸಯಾತ್ರೆಯೇನೂ ಇದಲ್ಲ) ಎಲ್ಲಾ ವಯೋಮಿತಿಯ ಆತ್ಮೀಯರನ್ನು ಆದಷ್ಟು ಕಡಿಮೆ ಶ್ರಮದಲ್ಲಿ ಬೆಳಗಾವಿ ಮುಟ್ಟಿಸಿ, ಮರಳಿಸುವ ವ್ಯವಸ್ಥೆಯಲ್ಲಿ ನಿಮ್ಮ (ಹೆಂಡತಿ - ಶ್ರೀದೇವಿ, ರಾಮು ಮತ್ತಾತನ ತಮ್ಮ - ಶ್ರೀಹರಿ) ಕಾಳಜಿ ಮತ್ತು ಶ್ರಮ ಪ್ರಶ್ನಾತೀತ. ಇಂಥ ಸಂದರ್ಭಗಳಲ್ಲಿ ಎಲ್ಲೋ ಸಮಯ ವ್ಯರ್ಥ ಕಳೆಯಿತೆಂದು ಯೋಚಿಸಬಾರದು, “ಇದು ಮುಗಿದೇ ಹೋಗುವ ಯಾವುದೇ ಸೇನಾ ಕಾರ್ಯಾಚರಣೆ ಅಲ್ಲ” ಅಂತ ನನ್ನ ಅಪ್ಪ ಹೇಳುತ್ತಿದ್ದದ್ದು ನೆನಪಿಗೆ ಬರುತ್ತದೆ. ಒಂದು ಅನುದ್ದಿಷ್ಟ ತಪ್ಪು ನಡೆಯಲ್ಲಿ ಮುಳುಗಿಯೇ ಹೋಗುವ ಆರ್ಥಿಕ ಕಲಾಪವೂ ಅಲ್ಲ. ಇದು ಅಪ್ಪಟ ಭಾವನಾತ್ಮಕ ಕೂಟ. ಸಹಜವಾಗಿ ಸುಮಾರು ಒಂದು ನೂರು ಕಿಮೀಯಷ್ಟು ಹೆಚ್ಚುವರಿ (ಬಳಸು) ದಾರಿಯನ್ನೂ ದಿನ ಮುಂಚಿತವಾಗಿಯೇ ತಲಪುವ ಸುಲಭ ಕಾಲಮಿತಿಯನ್ನೂ ಹಾಕಿಕೊಂಡಿದ್ದಿರಿ. ಹಾಗಾಗಿ ಒಟ್ಟು ಪಯಣ, ವಾಸ, ಬೆಳಗಾವಿಯ ಔಪಚಾರಿಕ ಕಲಾಪಗಳು, ಒಟ್ಟಾರೆ ಆತಿಥ್ಯಗಳು (ಕೇವಲ ಹಿತೈಷೀ ಮಧ್ಯಸ್ಥಿಕೆದಾರರಾಗಿ ಒದಗಿದ ಗಣೇಶ ಭಟ್ ಕುಟುಂಬವನ್ನು ವಿಶೇಷವಾಗಿ ಉಲ್ಲೇಖಿಸಬೇಕು) ಅಪ್ಯಾಯಮಾನವಾಗಿದ್ದವು. ಮೊತ್ತದಲ್ಲಿ ಮದುವೆ ಎನ್ನುವುದು ಕೇವಲ ವೈಭವೀಕೃತ ಸಾಮಾಜಿಕ ಒಪ್ಪಂದ ಎನ್ನುವುದಕ್ಕೆ ಸಮರ್ಥ ಮುನ್ನುಡಿಯನ್ನೇ ಬರೆಯಿತು. ಇವೆಲ್ಲವನ್ನೂ ನಾವೆಲ್ಲರು ಒಟ್ಟಿಗೇ ಅನುಭವಿಸಿದರೂ ಗ್ರಹಿಸಿ ಸಂತೋಷಿಸುವ ಸ್ತರಗಳು ವಿಭಿನ್ನ ಎನ್ನುವ ನೆಲೆಯಲ್ಲಿ, ನಿನ್ನ, ನಿನ್ನ ಮನೆಯವರ ಮತ್ತು ಹೆಚ್ಚಿನ ಎಲ್ಲ ಸಮಾನ ಮನಸ್ಕರೊಡನೆ ಹಂಚಿಕೊಳ್ಳುವ ಉತ್ಸಾಹದಲ್ಲಿ ಹೀಗೆ ಬ್ಲಾಗಿಸಿ, ದಾಖಲಿಸುತ್ತಿದ್ದೇನೆ.

ಕೊನಾರ್ಕ್ ಒದಿಶಾದ ಸುಪ್ರಸಿದ್ಧ ಸೂರ್ಯ ದೇವಾಲಯ ಸಂಕೀರ್ಣ. ಅದೇ ಹೆಸರು ಹೊತ್ತ ಮಿನಿ ಬಸ್ಸು (ಇಪ್ಪತ್ತು ಆಸನ ವ್ಯವಸ್ಥೆಯದ್ದು) ಸೂರ್ಯೋದಯದ ಹೊತ್ತಿಗೇ ಬಂತೆನ್ನಬಹುದು (ಆರು ಗಂಟೆ). ಅದು ರಾಮುವಿನ ದಾಂಪತ್ಯ ಜೀವನದ ಅರುಣೋದಯದ ಕಲಾಪಕ್ಕೆ ಸಾಕ್ಷಿಯಾಗಲು ಸಜ್ಜಾಗಿ ಬಂದದ್ದು ಅರ್ಥಪೂರ್ಣ ಆಕಸ್ಮಿಕ. ನಮ್ಮ ಹತ್ತೊಂಬತ್ತು ಮಂದಿಯ ತಂಡ - ದಿಬ್ಬಣ ಮತ್ತು ಅಗತ್ಯದ ಸರಕುಗಳೆಲ್ಲವನ್ನೂ ಕೊನಾರ್ಕ್ ಸಾಗಿಸಲು ಸಮರ್ಥವಾಗಿಯೇ ಇತ್ತು. ಆದರೆ ಐದುನೂರು ಕಿಮಿಗೂ ಮಿಕ್ಕ ಪ್ರಯಾಣದಲ್ಲಿ ವಿವಿಧ ದೇಹ ಪ್ರಕೃತಿಯವರನ್ನು ಗಿಡಿದು ತುಂಬಿಸಿದಂತಾದೀತೇ? ಕೊನೇ ಗಳಿಗೆಗೆ ಇಲ್ಲಿಂದಲೋ ಬೆಳಗಾವಿಯ ತುದಿಯಿಂದಲೋ ಸೇರಿಕೊಳ್ಳಬಯಸುವ ಮಂದಿಯಿದ್ದರೆ ಸ್ಥಳ ಸಂಕೋಚವಾದೀತೇ? ಎಲ್ಲಕ್ಕೂ ಮಿಗಿಲಾಗಿ ಆಕಸ್ಮಿಕಗಳಲ್ಲಿ ನಮ್ಮದೇ ಒಂದು ಹೊರ-ಸಹಾಯ ಇಟ್ಟುಕೊಳ್ಳಲು ಅನುಕೂಲವಿದ್ದೂ ನಿರಾಕರಿಸುವುದು ಸರಿಯಲ್ಲಾಂತ ಅಳೆದೂ ಸುರಿದೂ ರಾಮುವಿನ ಸಫಾರಿ ಕೂಡಾ ಹೊರಡಿಸಿದ್ದೂ ಆಯ್ತು. ಮತ್ತೆ ವಾಹನಗಳಿಗೆ ಸಾಮಾನು ತುಂಬುವಾಗ ನಿಮ್ಮ ನಿರ್ಧಾರ ಸಮರ್ಥನೀಯವಾಗಿಯೂ ಕಾಣಿಸಿತು.

ವಾರಾಂತ್ಯಗಳಲ್ಲಿ ನಾವು (ದೇವಕಿ, ಅಭಯ ಸೇರಿದಂತೆ) ಎಷ್ಟೋ ಸಾಹಸ ಯಾತ್ರೆ ನಡೆಸಿದವರೇ. ಮುಖಮಾರ್ಜನ, ಒಂದು ಖಾಲಿ ಕಾಫಿ ಮತ್ತೆ ಲಂಡನ್ ಯಾತ್ರೆಗಳಿಗೆ ಮುಕ್ಕಾಲು ಗಂಟೆ. ಬದಲಿ ಒಳಬಟ್ಟೆ, ಒಂದೋ ಎರಡೋ ಲೀಟರಿನ ನೀರಂಡೆ ತುರುಕಿದ ಚೀಲ ಬೆನ್ನಿಗೆಸೆದು ನಡೆದೇ ಬಿಡುವವರು. ಆದರೆ ಇಲ್ಲಿ ಅಷ್ಟೇ ಮಾಡುವುದು ಸಾಧ್ಯವಿಲ್ಲ. ಮೂರೋ ನಾಲ್ಕೋ ಗಂಟೆ ಬೆಳಿಗ್ಗೆಯೇ ಮನೆಯವರು ಜಾಗೃತರಾದರೂ ಜ್ಯೋತಿಯಲ್ಲುಳಿದ ಅಷ್ಟೂ ಮಂದಿಗೆ ಎಲ್ಲ ಮಾಮೂಲೀ ಉಪಚಾರಗಳು ನಡೆಸುವುದರೊಡನೆ, ಸ್ವಂತದ್ದೂ ಮುಗಿಸಿಕೊಂಡು, ಊರೊಳಗಿಂದಲೇ ಬರುವ ಇತರ ಆತ್ಮೀಯರನ್ನು ಒಗ್ಗೂಡಿಸಿಕೊಳ್ಳಬೇಕಿತ್ತು. ನಾವು ಅನುಸರಿಸುವ ದಾರಿಯಲ್ಲಿ ಹಸಿವು, ನೀರಡಿಕೆಗಳಿಗೆ ಬಂದೋಬಸ್ತಿನಿಂದ ತೊಡಗಿ, ಹೋದಲ್ಲಿ ಆತಿಥೇಯರಿಗೆ ಹೊರೆ ಕಡಿಮೆಯಾಗುವ ಮತ್ತು ಔಪಚಾರಿಕ ಸಮಾರಂಭದ ಅಗತ್ಯಗಳಿಗೆ ಒದಗುವ ಸಾಮಾನುಗಳೆಲ್ಲ ಸೇರಿ ಸೇರಿ ಕಾರಿನ ಬೂಟೇನು ಬಸ್ಸಿನ ಡಿಕ್ಕಿಯೂ ಭರ್ತಿಯಾಗಿತ್ತು! ಆರು ಗಂಟೆಗೆ ಊರು ಬಿಡಬೇಕೆಂದು ಹೇಳಿದರೂ ಮಡಿಕೇರಿ ಬಿಡುವಾಗ ಗಂಟೆ ಏಳು.

ದಾರಿಗಳ ಕುರಿತು ಇಂದು ಅಭಿವೃದ್ಧಿಯ ಮಹಾಪರ್ವವೇ ನಡೆಯುತ್ತಿದೆ. ಇವುಗಳ ಸುಳಿಯಲ್ಲಿ ಮೈಕೈ ಹುಡಿ ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಭೂಪಟದ ಮಡಿಕೇರಿ-ಬೆಳಗಾವಿಯ ನೇರ ದಾರಿಯ ಸಾಧ್ಯತೆಯನ್ನು ನೀವು ನಿರಾಕರಿಸಿದ್ದಿರಿ. ಹೀಗೆ ಪ್ರಥಮ ಪ್ರಾಶಸ್ತ್ಯದ ಮಂಗಳೂರು ಮತ್ತು ಕರಾವಳಿಯಗುಂಟದ ದಾರಿ ಅಲ್ಲ. ಮತ್ತೆ ಸೋಮವಾರಪೇಟೆ, ಅರಕಲಗೂಡು, ಹಾಸನಕ್ಕಾಗಿ ಮುಂದುವರಿಯುವುದನ್ನೂ ನೀವು ಒಪ್ಪಿಕೊಳ್ಳಲಿಲ್ಲ. ದೂರ ಮತ್ತು ಸಮಯವನ್ನು ಅವಗಣಿಸಿ ಮೊದಲು ಮೈಸೂರ ಹೆದ್ದಾರಿ. ಹುಣಸೂರು, ಬಿಳಿಕೆರೆ ಕಳೆದ ಮೇಲೆ ಎಡಕ್ಕೆ ಕವಲು. ಕೆ.ಆರ್ ಪೇಟೆ, ಹೊಳೆನರಸೀಪುರದನಂತರ ಹಾಸನ ದೂರಮಾಡಿ ಚನ್ನರಾಯಪಟ್ಟಣ, ಗಂಡಸಿ ಮೂಲಕ ಅರಸೀಕೆರೆಯಲ್ಲಿ ಬೆಂಗಳೂರು- ಶಿವಮೊಗ್ಗ ಹೆದ್ದಾರಿ. ಮುಂದೆ ಹೊನ್ನಾಳಿ ಮೂಲಕ ಹರಿಹರದಲ್ಲಿ ಬೆಂಗಳೂರು-ಹುಬ್ಬಳ್ಳಿ ಹೆದ್ದಾರಿ ಸಂಪರ್ಕ. ಮತ್ತೆ ವಿಚಾರಣೆಯ ಅಗತ್ಯವಿಲ್ಲದಂತೆ ಹಾವೇರಿ, ಹುಬ್ಬಳ್ಳಿ-ಧಾರವಾಡ ಕಳೆದು ಬೆಳಗಾವಿ. ನಮ್ಮ ಬಸ್ಸಿನ ಮೀಟರ್ ಓದಿನ ಪ್ರಕಾರ ಒಂದೇ ದಿಕ್ಕಿನಲ್ಲಿ ಆರ್ನೂರಾ ಐವತ್ತಮೂರು ಕಿಮೀ ಉದ್ದದ ಈ ಓಟದ ವೈಭವವನ್ನು ಸ್ವಲ್ಪವಾದರೂ ವಿವರಿಸದಿದ್ದರೆ ನನ್ನ ತಿರುಗೂಳಿ ಆತ್ಮಕ್ಕೆ ಶಾಂತಿ ಸಿಗದು!

ಹೃದಯವಂತರಾದ (ನೀವಿಬ್ಬರು ಈಚೆಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಎಂದಷ್ಟೇ ಅರ್ಥ. ಉಳಿದ ನಾವೆಲ್ಲಾ ಕಟುಕರೇನೂ ಅಲ್ಲ) ನೀನು ಮತ್ತು ರಾಘವೇಂದ್ರ, ನಿನ್ನ ಹಿರಿಯ ಭಾವನೊಡನೆ ಕಾರಿನಲ್ಲಿ. ಚಾಲನೆಯಲ್ಲಿ ರಾಮು, ಶ್ರೀಹರಿ ಆಗಿಂದಾಗ್ಗೆ ಕೈ ಬದಲಾಯಿಸಿಕೊಳ್ಳುತ್ತಾ ವಿರಾಮವನ್ನು ನಮ್ಮೊಡನೇ ಬಸ್ಸಿನಲ್ಲಿ ಕಳೆಯುತ್ತಿದ್ದರು. ಮೊದಲು ಎದುರು ಸೀಟಿನಲ್ಲಿ ನನ್ನೊತ್ತಿಗೆ ಕುಳಿತ ಸದಾಶಿವ (ನಾರಾಯಣನ ತಮ್ಮ, ನನಗಿಂತ ಆರು ತಿಂಗಳಿಗೆ ಸಣ್ಣವನಾದರೂ ಅಧಿಕಾರದಲ್ಲಿ ಚಿಕ್ಕಪ್ಪ!) ಬ್ರಾಹ್ಮಣರ ಬೀದಿಯ ಪ್ರತಿ ಮನೆ, ಓಣಿಯ ಕಥೆಗಳಿಂದ ನನ್ನ ‘ಜನರಲ್ ನಾಲೆಜ್ ಇಂಪ್ರೂ’ ಮಾಡುವ ಹಠತೊಟ್ಟಿದ್ದ. ಅವನ ರೋಟರಿ ಕಲಾಪಗಳ ಕುರಿತು ಕೊರೆಯತೊಡಗಿದ. ನನಗೆ ಇಲ್ಲಿನ ರೋಟರಿ (ಲಯನ್ನು, ಜೇಸಿ ಮುಂತಾದ ‘ಸಮಾಜಸೇವಕರ’) ಬಗ್ಗೆ ಹೆಚ್ಚು ಪ್ರೀತಿಯಿಲ್ಲ. ಅವರು ಸದಸ್ಯೇತರರನ್ನು ವಿದೇಶೀ ಸಮಾಜ ಅಧ್ಯಯನಕ್ಕೆ ಕಳಿಸುವ ತಂಡದಲ್ಲಿ ಈಚೆಗೆ ಅಭಯನನ್ನು ಆಯ್ದು ಕಳಿಸಿದ ಮೇಲಂತೂ ಹೋಲಿಕೆಗೆ ಅಮೆರಿಕಾದ ರೋಟರಿಯ ಒಳ್ಳೆಯ ಆದರ್ಶ ಕೇಳಿ ಇಲ್ಲಿನವರ ಬಗ್ಗೆ ತಿರಸ್ಕಾರವೇ ಹೆಚ್ಚಿದ್ದಕ್ಕೆ ವಿಷಯಾಂತರಕ್ಕೆ ಚಡಪಡಿಸಿದೆ. ದಾರಿಯ ಬಲಬದಿ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ‘ಕಪ್ಪ’ ಕೊಡಲು ನಿಂತ ನಿಮ್ಮ ಕಾರನ್ನು ಹಿಂದಿಕ್ಕಿದೆವು. ಭಾರೀ ಮರಗಳ ಕಾಡಿನಂತೇ ಇರುವ ಕಾಫಿತೋಟಗಳ ನಡುವೆ ಮಡಿಕೇರಿಗೆ ಸಾದಾ ಕಂಬ ಸಾಲಿನಲ್ಲಿ ಬರುತ್ತಿದ್ದ ಹೈ ಟೆನ್ಷನ್ ವಯರುಗಳು ಉದುರು ಕೊಂಬೆ ಕಡ್ಡಿಗಳಿಂದ ನಿರಂತರ ಕೈಕೊಡುತ್ತಿದ್ದ ಕಥೆ ಸದಾಶಿವ ಹೇಳಿದ. ಈಗ ಅದನ್ನು ಗೋಪುರ ಸಾಲಿನ ಸ್ತರಕ್ಕೆ ಎತ್ತರಿಸಿದ್ದು, ಆದರೂ ಕೆಲವೊಮ್ಮೆ ಚಾಚುವ ಮರಗೈಗಳನ್ನು (ಜೀರ್ಣಿಸಿಕೊಳ್ಳುವ ಪ್ರಾಕೃತಿಕ ಶಕ್ತಿ?) ಕಾಣುತ್ತಾ ಮುಂದುವರಿದೆವು.

ಮೋದೂರಿನಿಂದ (ನನ್ನಜ್ಜನ ಮನೆಯಿರುವ ಹಳ್ಳಿ) ಈ ಮೈಸೂರು ದಾರಿಗೆ ಬಂದು ಸೇರುವ ಒಳದಾರಿಯನ್ನು ಹಿಂದೊಮ್ಮೆ ದಿವಾಕರ ತೋರಿಸಿಕೊಟ್ಟಿದ್ದ. ಆದರೆ ಅದನ್ನು ಈ ಬಾರಿ ಗುರುತಿಸಲು ನಾನು ಸೋತೆ. ಶುಂಠಿಕೊಪ್ಪದ ಹೊರವಲಯದ ಜಾನುವಾರು ದೊಡ್ಡಿ ಮಾತ್ರ ನಾನು ಮರೆಯೆ. ನಿನಗೆ ನೆನಪಿರಲಾರದು, ೧೯೬೦-೭೦ರ ದಶಕದಲ್ಲೆಲ್ಲೋ ಒಂದು ರಜೆಯಲ್ಲಿ ನಾನು ಜ್ಯೋತಿಯಲ್ಲಿದ್ದೆ. ನಿಮ್ಮ ಅಪ್ಪುಕಳ ತೋಟಕ್ಕೆ (ಭಾಗಮಂಡಲ ದಾರಿಯಲ್ಲಿ ಸುಮಾರು ಹತ್ತು ಕಿಮೀ ದೂರದ ಹಳ್ಳಿ) ಬೇಲಿ ಹಾರಿ ಬಂದ ತೊಂಡು ದನವೊಂದನ್ನು ನಿನ್ನ ಸೂಚನೆಯ ಮೇರೆಗೆ ಕೆಲಸದಾಳು ಹಿಡಿದು, ಹಗ್ಗ ಕಟ್ಟಿ, ಸಂಜೆ ಜ್ಯೋತಿಗೆ ಹೊಡಕೊಂಡು ಬಂದಿದ್ದ. ಹತ್ತು ಸಲ ಎಚ್ಚರಿಕೆ ಕೊಟ್ಟರೂ ಕೇಳದ ನಿನ್ನ friendly neighbourಗೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನೀನಂದಾಜಿಸಿದ್ದೆ. ಮರುಬೆಳಿಗ್ಗೆ ನೀನು ಆ ದನವನ್ನು ನಡೆಸಿಕೊಂಡು ಹೋಗಿ ಇದೇ ಶುಂಠಿಕೊಪ್ಪದ ದೊಡ್ಡಿಗೆ ತುಂಬಿದ್ದೆ. ನಿನಗೆ ಜೊತೆಗೊಟ್ಟು ಅಷ್ಟುದ್ದಕ್ಕೆ ನಡೆದಿದ್ದ ನನಗಿದು ಮರೆಯಲಾಗದ ದೊಡ್ಡ ಸಾಹಸ!

ಶುಂಠಿಕೊಪ್ಪ ಪೇಟೆ ದಾಟುವಾಗ ಯಾವಾಗಲೂ ನನಗೆ ಕಾಲೇಜು ದಿನಗಳಲ್ಲಿ ಮೈಸೂರಿನಿಂದ ಮಿತ್ರ ಶಂಕರಲಿಂಗೇಗೌಡರ ಜೊತೆ ಸೈಕಲ್ಲೇರಿ ಕೊಡಗು ಯಾತ್ರೆಗೆ ಬಂದದ್ದೇ ನೆನಪು. ಕುಶಾಲನಗರದಲ್ಲಿ ಅಪ್ಪನ ಶಿಷ್ಯ - ಪಂಡಿತ ಶೇಷಾದ್ರಿಯವರಲ್ಲಿ ಉಳಿದಿದ್ದೆವು. ಬೆಳಿಗ್ಗೆ ಎದ್ದವರು ಅಲ್ಲೇ ಇದ್ದ, ಆ ಕಾಲದಲ್ಲಿ ಕೊಡಗಿಗೇ ಹೊಸದಾದ ಹಣ್ಣುಗಳನ್ನು ಹಲವು ಕಾಲ ಉಳಿಯುವಂತೆ ಡಬ್ಬಿಗೆ ಹಾಕುವ ಕಾರ್ಖಾನೆಗೆ ಹೋಗಿದ್ದೆವು. ಅನಂತರ ಇನ್ನೂ ನಿರ್ಮಾಣ ಹಂತದಲ್ಲಿದ್ದ ಹಾರಂಗಿ ಅಣೆಕಟ್ಟೆ. ಕೊನೆಯಲ್ಲಿ ಕೂಡಿಗೆ ಡೈರಿ ನೋಡಿ ಮಡಿಕೇರಿಯತ್ತ ಮುಂದುವರಿದವರಿಗೆ ಸಿಕ್ಕಿದ್ದು ಇಲ್ಲಿನ ಗುಂಡುಕುಟ್ಟಿ ಮಂಜುನಾಥಯ್ಯನವರ ಆತಿಥ್ಯ. (ಬಹುದೊಡ್ಡ ಸಾಹಿತ್ಯಪ್ರೇಮಿ ಜಮೀನುದಾರ, ಉದಾರಿ, ದೂರದ ಸಂಬಂಧಿ ಕೂಡಾ. ಇಂದಿಲ್ಲ.) (ಹೆಚ್ಚಿನ ವಿವರಗಳಿಗೆ ಇಲ್ಲೇ ೧೦-೧೨-೨೦೧೦ರ ‘ಏನ್ ಸೈಕಲ್ ಸಾ ಏನ್ ಸೈಕಲ್’ ನೋಡಿ)

ಘಟ್ಟ ಇಳಿದು ಮುಗಿಯುತ್ತಿದ್ದಂತೆ ಸಿಗುವ ಅರಣ್ಯ ಇಲಾಖೆ ಪ್ರಣೀತ ‘ಕಾವೇರಿ ನಿಸರ್ಗಧಾಮ’, ಅದರ ನೆರಳಿನಲ್ಲಿ ಆ ವಲಯದಲ್ಲಿ ತಲೆ ಎತ್ತಿದ ಅಸಂಖ್ಯ ಖಾಸಗಿ ವಸತಿ ಸೌಕರ್ಯಗಳು ಪ್ರವಾಸೋದ್-ಯಮನ ನಿಟ್ಟುಸಿರುಗಳೇ ಸರಿ. ‘ಹೋಂ ಎವೇ ಫ಼್ರಂ ಹೋಂ’ ಅಥವಾ ಬದಲಾವಣೆಗೆಂದೇ ನಿಸರ್ಗದ ಮಡಿಲಿಗೆ ಓಡುವವರಿಗೆ ಅಲ್ಲೂ ಮನೆಯ ಉತ್ಪ್ರೇಕ್ಷಿತ ಸೌಕರ್ಯಗಳನ್ನೇ ಬಯಸುವ ಮತ್ತು ಅವರ ಬಯಕೆಗೂ ಮಿಗಿಲಾಗಿ ಕೊಡುವವರ ಉತ್ಸಾಹ ನಿಸರ್ಗ ಕಂಟಕವೇ ಸರಿ. ವನ್ಯ ರಕ್ಷಣೆಯ ಮಹಾಹೊಣೆ ನಿರ್ವಹಿಸಬೇಕಾದ ಇಲಾಖೆ ಇಲ್ಲಿ ಹೊಟೆಲಿಗನ ಕೆಲಸ ಮಾಡಿಕೊಂಡಿದೆ. ಅದರಲ್ಲೂ ವೃತ್ತಿಪರತೆ ರೂಢಿಸಿಕೊಳ್ಳದೆ, ನಮ್ಮ ಬಹುತೇಕ ಇಲಾಖೆಗಳಂತೆ ವೆಚ್ಚಕ್ಕೆ ಅನುದಾನವನ್ನೂ ಆದಾಯದಲ್ಲಿ ಖೋತಾವನ್ನು ಸಾಧಿಸುತ್ತಲೇ ಇದೆ.ನಾ ಕಂಡ ಹಳಗಾಲದವರ ಮಾತಿನಲ್ಲಿ ತಪ್ಪಿ ಸುಳಿಯುತ್ತಿದ್ದ ಫ್ರೇಸರ್ ಪೇಟೆ ಅರ್ಥಾತ್ ಆಗಲೇ ಹೇಳಿದ ಕುಶಾಲನಗರ ದಾಟುವಾಗ ಇನ್ನೊಂದು ಸ್ಮರಣೆ - ‘ವೆಂಕಟಸುಬ್ಬಯ್ಯ ಚಿಕ್ಕಯ್ಯ.’ (ಸಂಬಂಧದಲ್ಲಿ ನನಗೆ ಚಿಕ್ಕಜ್ಜ, ಇವರೂ ಇಲ್ಲ.) ನನ್ನ ಮಟ್ಟಿಗೆ ಅವರ ನೆನಪಿನ ಕೊಂಡಿ ಉಳಿಸುವ ಹೆದ್ದಾರಿ ಬದಿಯ ಅವರ ಪುಟ್ಟ ಸುಂದರ ಮನೆ, ಇಂದು ಹಲವು ಕೈ ಬದಲಿದರೂ ವಾಸಯೋಗ್ಯತೆ ದಕ್ಕಿಸಿಕೊಳ್ಳದೇ ಹಾಳು ಸುರಿಯುವುದನ್ನು ಕಾಣುವಾಗ ಒಮ್ಮೆ ಮನಸ್ಸು ಕುಂದುತ್ತದೆ. ಅದೇ ನೀನು ಹಳೇ ಜ್ಯೋತಿಗೇ ಹೊಸಹೊಳಪು ಕೊಟ್ಟದ್ದು, ಅತ್ತ ಮರಿಕೆಯಲ್ಲಿ (ನನ್ನಮ್ಮನ ಕಡೆಯ ಅಜ್ಜನ ಮನೆ) ಅಣ್ಣ (ಸಂಬಂಧದಲ್ಲಿ ನನಗೆ ಸೋದರಮಾವ, ಹೆಸರು ತಿಮ್ಮಪ್ಪಯ್ಯ) ಹಳೇಮುಖಕ್ಕೆ ಹೊಸ ದೇಹ ಸೇರಿಸಿದ್ದೂ (ಈಗ ಇನ್ನಷ್ಟೂ ಪರಿಷ್ಕಾರವಾಗಿದೆ ಬಿಡು) ಕಪ್ಪು ಬಿಳುಪಿನ ಚಿತ್ರಕ್ಕೆ ಹೊಸ ಬಣ್ಣ ತುಂಬಿದಂತೆ ಕುಶಿಕೊಡುತ್ತದೆ. ರಾಘವೇಂದ್ರ (ನನ್ನ ಇನ್ನೊಬ್ಬ ಚಿಕ್ಕಪ್ಪ) ಕಷ್ಟವೋ ಸುಖವೋ ಹಳಗಾಲಕ್ಕೂ ಹೆಚ್ಚು ಎನ್ನುವಷ್ಟು ಹರಡಿಬಿದ್ದ ಅವನ ಮನೆ - ದ್ವಾರಕವನ್ನು ಹೊಸಕಾಲದಲ್ಲೂ (ಆತಂಕಕಾರಿ ಸಾಮಾಜಿಕ ಬದಲಾವಣೆಗಳನ್ನು ಯೋಚಿಸಿ ಹೇಳುವ ಮಾತು) ಮುಂದುವರಿಸಿಕೊಂಡು ಬಂದಿರುವುದು ಸಣ್ಣ ಮಾತಲ್ಲ. ಮಾತಿನ ಅಲಂಕಾರಕ್ಕೆ ದಿವಾಕರ (ನನ್ನ ಮತ್ತೊಬ್ಬ ಚಿಕ್ಕಪ್ಪ) ನನ್ನಜ್ಜ ಕೈಯಾರೆ ಕಟ್ಟಿದ ಮೋದೂರು ಮನೆಯನ್ನು (ಫ್ರೆಂಚ್ ಹೆಸರನ್ನು ಅಣಕಿಸುತ್ತಾ ಸುಖವಿಲ್ಲಾಂತ) ಏನೇ ಹೇಳಲಿ ಹಾಗ್‌ಹಾಗೇ ತಿದ್ದಿಕೊಂಡು ವಾಸಯೋಗ್ಯತೆಯನ್ನು ಉಳಿಸಿಕೊಂಡೇ ಬಂದದ್ದೆಲ್ಲ ಅವರಿಗೆ ಎಷ್ಟೇ ಅನುಕೂಲವೋ ಅನಾನುಕೂಲವೋ ಗೊತ್ತಿಲ್ಲ. ಆದರೆ ನಮಗೆ, ಅಂದರೆ ಒಂದು ಕ್ಷಣಕ್ಕೋ ಒಂದು ಕಲಾಪಕ್ಕೋ ನುಗ್ಗಿ ಹೋಗುವವರಿಗಂತೂ ತುಂಬಾ ಸಂತೋಷಕೊಡುವಂತದ್ದೇ ಎನ್ನುವ ಮುನ್ನೆಲೆಯಲ್ಲಿ ವೆಂಕಟಸುಬ್ಬಯ್ಯ ಚಿಕ್ಕಯ್ಯನ ಮನೆ ನನ್ನ ಮನಮುದುಡಿಸಿದ್ದೂ ಇರಬಹುದು. ನೀನು (ಒಟ್ಟಾರೆ ಓದುಗರನ್ನೂ ಕೇಳ್ತಾ ಇದ್ದೇನೆ) ಏನು ಹೇಳ್ತೀ?

[ಹೀಗೇ ನಂಟಿನ ಅಂಟನ್ನು ಕೊಡಗಿನೊಡನೆ ಕಳೆದು ನಮ್ಮ ಬೆಳಗಾವಿ ಯಾನದ ಮತ್ತು ದಾರಿಯ ಕುರಿತೇ ಹೆಚ್ಚಿನ ಕಥನಕ್ಕೆ ಮುಂದಿನ ಕಂತು ಉಳಿಸಿಕೊಳ್ತೇನೆ]

13 comments:

 1. nevu hogadha jagga yavadadaru idhe ya?

  ReplyDelete
 2. Shrihari Rao G.N.24 September, 2011 15:59

  (Baraha balasuvudakke baruvudillavaaddarinda aangla bhasheyalli bareyuttiddene)

  Ashokanna.......Neevu haagu ella bandhu mithraru nammondige Belagaavige bandadde namagellarigoo bahala santhoshavaagide...:)

  Ee mele prakatisida nimma anubhavavannu odide....punaha naavellaru belagaavige hoda anubhavaaayithu.....:)

  ReplyDelete
 3. ಅಶೋಕ ಬಾವ, ಓದುತ್ತ ಮುಗಿದದ್ದೇ ತಿಳಿಯಲಿಲ್ಲ. ನಾವೂ ನಿಮ್ಮೆಲ್ಲರ ಸಂತಸದಲ್ಲಿ ಭಾಗಿಯಾದಂತಾಯ್ತು. ಮುಂದಿನ ಕಂತಿಗೆ ಕಾಯುತ್ತಿದ್ದೇನೆ. ರಾಮುವಿಗೆ ನಮ್ಮೆಲ್ಲರ ಶುಭಾಶಯಗಳು.

  ReplyDelete
 4. Ramachandra Guddehithlu24 September, 2011 22:00

  DhanyavadagaLu Radhakrishna Bhava :)

  ReplyDelete
 5. Ramachandra Guddehithlu24 September, 2011 22:00

  Lekhana odi khushiyaaithu.Nimma preethi vishwasakke chira runi :)

  ReplyDelete
 6. ಜಯಲಕ್ಷ್ಮಿ25 September, 2011 07:58

  ಹಳೆಯ ನೆನಪುಗಳನ್ನು ಬೆಸೆದುಕೊಂಡು,ಸಂದ ಹಿರಿಯರನ್ನು ಅಲ್ಲಲ್ಲಿ ನೆನಪಿಸಿಕೊಂಡು ಬರೆದಿರುವ ಪ್ರವಾಸ ಕಥನ ಆಪ್ತವಾಗಿದೆ,ಮದಿಮ್ಮಾಯನ ಏಕಮಾತ್ರ ಅಕ್ಕ ಆಗಿಯೂ ಈ ಪ್ರವಾಸದಲ್ಲಿ ಪಾಲ್ಗೊಳ್ಳಲಾಗದಿದುದಕ್ಕೆ ಛೇ ಅನಿಸುತ್ತಿದೆ.

  ReplyDelete
 7. Majaa bantu marayre...

  ReplyDelete
 8. S Raghavendra Bhatta25 September, 2011 15:14

  What a strange coincidence -- While travelling from Mysore to Madikeri to participate in Sri GTN's memorial program Prof A V Govinda Rao had shown me this house Of Dr Venkatasubbaiah in detail.
  But, while contrasting your description with his remarks then, I find his stoic attitude and your emotional outburst are quite markedly different -- of course, being senior he has developed that spirit of detachment which is quite natural.
  Anyway, your pravaasa kathana has not become for me a prayaasa paThaNa !!
  Charaiveti, charaiveti -- Go Ahead , Go ahead !!
  S R Bhatta

  ReplyDelete
 9. ಆಕ್ರೋಶವರ್ಜನ25 September, 2011 17:19

  ಪ್ರಿಯ ಪ್ರೊ| ರಾಘವೇಂದ್ರ ಭಟ್ಟರೇ
  ಗೋವಿಂದರಾಯರದು ಮಗನ ದೃಷ್ಟಿ, ಭಾವನಾತ್ಮಕ ಏರುಪೇರುಗಳೇನಿದ್ದರೂ ಆ ಮನೆಯನ್ನು ಉಳಿಸಿಕೊಳ್ಳುವ ಅಥವಾ ಕಳಚಿಕೊಳ್ಳುವ ವ್ಯಾವಹಾರಿಕ ಸತ್ಯಗಳನ್ನು ಎದುರಿಸಿ, ತಲಪಿದ ಸ್ಥಿತಿ. ನನಗೋ ಎಲ್ಲೋ ಕ್ಷಣಿಕ ಭೇಟಿಗಷ್ಟೇ ಆಗಲೂ ಅಜ್ಜಜ್ಜಿಯರ ಪ್ರೀತಿಭಾವಕ್ಕಷ್ಟೇ ಪಾತ್ರವಾದ - ಅಶೋಕ ಭಾವ :-)
  ಅಶೋಕವರ್ಧನ

  ReplyDelete
 10. Krishnamohana Bhat25 September, 2011 18:33

  Naanu baralaagadiddaru nivu hogi banda kataanakavannu nivu bareda sundara nirupaneyondige odalu kulitavanige mundinaddannu mundina kantige yaakittarappa annisiddu sullalla.Nanna kanglishige kshame erali.

  ReplyDelete
 11. Vijayashankar S R26 September, 2011 10:42

  Hi Ashok.
  Your narration is always interesting be it be it a trcking story or marriage travel.
  It is interesting to know Ramu's function details.
  I hope to meet you in the madikeri function of his marriage (sattumudi in our language) as I too plan to attend the function.
  see you then and all the best to Ramu and some of his photos are very impressive to see.
  Regards
  S R Vijayashankar

  ReplyDelete
 12. ವಿಡಿಯೋ ನೋಡುವಾಗ ಅರಿವಾಗುತ್ತದೆ ರವಿಶಂಕರ ಗುಡ್ಡೆಹಿತ್ಲಿನವನು ಸಂಶಯವೇ ಬೇಡ! ಮೊದಲ ವಿಡಿಯೋ ಮಾತ್ರ ಇಲ್ಲಿ ಅವಶ್ಯವಿರದೆ ಆ ಸ್ಥಳದಲ್ಲಿ ಚಿತ್ರ ಹಾಕಬಹುದಿತ್ತು.

  ReplyDelete
 13. S. B. Karnik, Udupi.19 October, 2011 23:44

  Splitting up the words or altering them with a surprise addition or omission is your speciality. No doubt it gives a new dimension to our thought process But better if it is limited in your writings on family circles. I am eager to see how the Dibbana marches on.
  While reading your article I remembered my visit to Narayan Rao's house a few years back.

  ReplyDelete