ಮೂರು ದಿನಗಳಲ್ಲಿ ಕಾಡ್ಮನೆಯ ಒಳಗೇ ನಡೆದ ಕಲಾಪಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಮೊದಲಿಗೆ ಕೆಲವು ಸಾಮಾನ್ಯೀಕರಣಗಳು. ನಾವು ಉದ್ದೇಶಿಸಿದ ಇಪ್ಪತ್ನಾಲ್ಕು ವಿದ್ಯಾರ್ಥಿಗಳಲ್ಲದೆ ಶಿಬಿರಾವಧಿಯ ಮೂರೂ ದಿನ ಹಿಂದು ಮುಂದಿನ ಕಲಾಪ ನಡೆಸುವ ಸಂಪನ್ಮೂಲ ವ್ಯಕ್ತಿಗಳು, ಕೆಲವು ಪೋಷಕರು, ಮಿತ್ರರು ಅನೌಪಚಾರಿಕವಾಗಿ ಕಲಾಪಗಳಲ್ಲಿ, ಚರ್ಚೆಗಳಲ್ಲಿ ಸೇರಿಕೊಳ್ಳುವುದು ನಡೆದೇ ಇತ್ತು. ಬಂದ ಸಂಪನ್ಮೂಲ ವ್ಯಕ್ತಿ ಮತ್ತು ಕಲಾಪ ಏನಿದ್ದರೂ ಮೊದಲಲ್ಲಿ ನಾನು ಒಂದು ಎಂದರೆ ಒಂದೇ ವಾಕ್ಯದಲ್ಲಿ ಅತಿಥಿಯ ಹೆಸರು ಮತ್ತು ಅವರು ಪರಿಚಯಿಸಲಿರುವ ವಿಷಯವನ್ನಷ್ಟೇ ಉಲ್ಲೇಖಿಸಿಬಿಡುತ್ತಿದ್ದೆ. ಮತ್ತವರು ಸ್ವಪರಿಚಯದಿಂದ ತೊಡಗಿ, ಹೆಚ್ಚುಕಡಿಮೆ ಸರಸ ಸಂವಾದದಲ್ಲೇ ತಮ್ಮ ಪರಿಣತಿಯನ್ನು ಸಭಿಕರೊಡನೆ ಹಂಚಿಕೊಳ್ಳುತ್ತಿದ್ದರು. (ನಿರ್ವಾಹಕತನವೆಂಬ ಅಧಿಕಪ್ರಸಂಘವನ್ನು ನಾನು ಯಾವುದೇ ಸಭೆಯಲ್ಲಿ ಮೆಚ್ಚಿಕೊಂಡದ್ದಿಲ್ಲ ಹಾಗಾಗಿ ನನ್ನ ಸಭೆಗಳಲ್ಲಿ ನೆಚ್ಚಿಕೊಂಡದ್ದೂ ಇಲ್ಲ!) ಅವರು ಕೋಣೆಯ ಒಂದು ಭಾಗದಲ್ಲಿ ನಿಂತೋ (ಕಾಡ್ಮನೆಯಲ್ಲಿ ಕುರ್ಚಿ ಮೇಜುಗಳಿಲ್ಲ!) ನೆಲದಲ್ಲೇ ಕುಳಿತೋ ಕಲಾಪ ನಡೆಸುತ್ತಿದ್ದರೆ ಇತರರು ಹೆಚ್ಚಿನವರು ಕೋಣೆಯೊಳಗೇ ಹರಡಿಕೊಂಡು ಕುಳಿತು ಅನುಭವಿಸುತ್ತಿದ್ದರು. ಮುಂಚೂಣಿಯಲ್ಲಿ (ಗೋಡೆಯಾಧಾರವೂ ಇಲ್ಲದೆ ನೆಟ್ಟಗೆ) ಕುಳಿತು ಎಲ್ಲ ತಿಳಿಯುವ ಮತ್ತು ಅಗತ್ಯ ಬಿದ್ದರೆ ಮಾತ್ರ ಸಮನ್ವಯಿಸುವ ಕೆಲಸವನ್ನು ಜಿಟಿನಾ ತುಂಬು ಉತ್ಸಾಹದಿಂದ ನಡೆಸುತ್ತಿದ್ದರು. ಅಡಿಗೆ ಮನೆಯಲ್ಲಿ ಕೆಲಸಗಳನ್ನು ನಡೆಸುತ್ತಿದ್ದೂ ಆಗೀಗ ಒಳಹೊರಗೆ ಹೋಗುವ ಅನಿವಾರ್ಯತೆಯಲ್ಲಿ ಕಲಾಪಗಳಿಗೆ ಕಣ್ಣು ಕಿವಿಯಾಗಿದ್ದರು ನನ್ನಮ್ಮ, ಮಡದಿ ಮತ್ತು ಅಡುಗೆಯವ. ಮತ್ತೂ ಹೆಚ್ಚಾದ ಕುತೂಹಲಿಗಳು ವಿಸ್ತಾರ ಕಿಟಕಿಗಳ ಹೊರಗೆ ನಿಂತು ಪಾಲುಗೊಳ್ಳುತ್ತಿದ್ದದ್ದು ತುಂಬಾ ಅಪ್ಯಾಯಮಾನವಾಗಿರುತ್ತಿತ್ತು. ಮಳೆಯ ನಿರಂತರ ಚಡಪಡಿಕೆ ಮತ್ತು ಕಲಾಪದ ವಠಾರ ತುಂಬಾ ಅಳ್ಳಕವಾದ್ದರಿಂದ (ಬಹುತೇಕ ಔಪಚಾರಿಕ ಕಮ್ಮಟ, ಗೋಷ್ಠಿಗಳ ಭವನಗಳ ಆಚೆ ನಡೆಯುವಂತೆ) ಇವುಗಳಿಗೆ ನಾವು ಅತೀತರು ಎನ್ನುವ ಮೆರೆತದ ಮಂದಿ, ಸೋಮಾರಿ ಕಟ್ಟೆಯ ಮಾತುಗಳು ನಡೆಯಲೇ ಇಲ್ಲ! ನಿಗದಿತ ಸ್ಪಷ್ಟ ಊಟ ತಿಂಡಿಯ ಅವಧಿ ಕಾಯದೇ ಅಯಾಚಿತವಾಗಿ ಬಂದ ಕೆಲವು ಎಡೆ ತಿನಿಸು, ಪಾನಕಗಳೂ ಹರಿದಾಡುತ್ತಲೇ ಇದ್ದುದರಿಂದ ಯಾರಲ್ಲೂ ಔಪಚಾರಿಕ ಬಿಗಿತವಾಗಲೀ ಏಕತಾನತೆಯ ಹಿಂಸೆಯಾಗಲೀ ಪಡಿಮೂಡಲಿಲ್ಲ. ಸಂಘಟಕರಾಗಿ ನಮಗೆ career building ಚಪಲಗಳೇನೂ ಇಲ್ಲದ್ದರಿಂದ ಅಧಿಕೃತವಾಗಿ ಕಲಾಪಗಳ ಟಿಪ್ಪಣಿಯನ್ನಾಗಲೀ ಪ್ರತ್ಯೇಕ ದಾಖಲೀಕರಣದ ವ್ಯವಸ್ಥೆಯನ್ನಾಗಲೀ ಮಾಡಲೇ ಇಲ್ಲ (ಒಂದೇ ಒಂದು ಫೊಟೋವೂ ಇಲ್ಲ!). ಹಾಗಾಗಿ ಮುಂದಿನ ವಿವರಣೆಗಳಲ್ಲಿ ತಪ್ಪುಗಳು, ಕೊರತೆಗಳು ಕಾಣಿಸಿದರೆ ನನ್ನನ್ನು ಪೂರ್ಣ ಜವಾಬ್ದಾರನನ್ನಾಗಿಸಿ, ಸರಿಯನ್ನು ಪೂರಕವಾದ್ದನ್ನು ನೀವು ತುಂಬಿಕೊಡಬೇಕಾಗಿ ಮನವಿಯನ್ನೂ ಇಲ್ಲೇ ಮಾಡಿಬಿಡುತ್ತೇನೆ.

ಊಟದ ಬಿಡುವು ಲೆಕ್ಕಕ್ಕೆ ಒಂದರಿಂದ ಎರಡೂವರೆ ಗಂಟೆಯವರೆಗೆ ಎಂದು ನಾವು ಅಂದಾಜಿಸಿದ್ದರೂ ನಮ್ಮೆಲ್ಲ ಕಲಾಪಗಳು ಊಟ, ತಿಂಡಿಗಳೊಡನೆಯೂ ಮುಂದುವರಿಯುತ್ತಿದ್ದದ್ದು ಅರ್ಥಪೂರ್ಣವಾಗಿತ್ತು. ಹಾಗೇ ಅಂದು ಅಪರಾಹ್ನದ ಕಲಾಪಕರ್ತರಾದ ಎನ್.ಟಿ. ಭಟ್ ಮತ್ತು ಎ.ಪಿ. ಗೌರೀಶಂಕರ್ ನನ್ನ ಬೇಡಿಕೆ ಮನ್ನಿಸಿ ನಮ್ಮೊಡನೆ ಊಟಕ್ಕೇ ಸೇರಿಕೊಂಡದ್ದರಿಂದ ಮುಂದಿನ ‘ಅಧ್ಯಾಯಕ್ಕೆ’ ಮನೋಭೂಮಿಕೆ ಸಜ್ಜುಗೊಳಿಸುವ ಅವಶ್ಯಕತೆಯೂ ಬರಲಿಲ್ಲ.
ಕಾನೂನು ಹೇಳುತ್ತದೆ - ನಿಯಮಗಳ ಅಜ್ಞಾನಕ್ಕೆ ಕ್ಷಮೆಯಿಲ್ಲ. ಎ.ಪಿ. ಗೌರೀಶಂಕರ್ ಮಂಗಳೂರಿನಲ್ಲೇ ವೃತ್ತಿನಿರತರಾದ ಹಿರಿಯ ವಕೀಲ, ನನಗೆ ಸಂಬಂಧದಲ್ಲಿ (ಮೂರನೇ) ಸೋದರ ಮಾವ ಮತ್ತು ಮಂಗಳೂರಿನ ನೆರೆಮನೆಯ ನೆಂಟ. ಇವರ ಸಾಹಿತ್ಯ ಮತ್ತು ಸಾಮಾಜಿಕ ಕಾಳಜಿಯ ವಿಸ್ತೃತ ಓದು ಹಾಗೂ ಚಿಂತನೆ ಇವರನ್ನು ಕಕ್ಷಿದಾರ ಮತ್ತು ನ್ಯಾಯಾಲಯ ಕಕ್ಷೆಯಿಂದ ಹೊರಗೂ (ಆರ್ಥಿಕ ಲಾಭವಿಲ್ಲದ) ಹಲವು ಚಟುವಟಿಕೆಗಳಲ್ಲಿ ತೊಡಗಿಸುತ್ತವೆ. (ಭರ್ಜರಿ ರುಸುಮಿನ ಖಟ್ಲೆಯಾಗಬಹುದಾದ ಎಷ್ಟೋ ವ್ಯಾಜ್ಯಗಳನ್ನು ರಾಜೀ ಮಾಡಿ ಇವರು ಖಾಲೀ ಕಿಸೆಯಲ್ಲಿ ಉಳಿದದ್ದು ನಮಗೆಷ್ಟೋ ಸಲ ಪರೋಕ್ಷಮಾರ್ಗಗಳಲ್ಲಿ ತಿಳಿಯುತ್ತಿತ್ತು! ದೊಡ್ಡ ನೋಟು ಕಿತ್ತುಕೊಂಡು ಒಣಡಂಭದಲ್ಲಿ ದಿನನೂಕುವ ಮಂದೆಯಲ್ಲಿ, ಶ್ರದ್ಧೆಯಿಂದ ಕೆಲಸ ಮಾಡಿಯೂ ಕೆಲವೊಮ್ಮೆ ಬಡ ಕಕ್ಷಿದಾರ ಮನೆಯಿಂದ ಹೊತ್ತು ತಂದು ಭಕ್ತಿಯಿಂದ ಕೊಟ್ಟ ತರಕಾರಿಯನ್ನಷ್ಟೇ ಒಪ್ಪಿಸಿಕೊಂಡು ತೃಪ್ತರಾಗುಳಿದದ್ದಿದೆ ಈ ವಕೀಲರು!) ಇವರ ಅಸಂಖ್ಯ ಪತ್ರಿಕಾ ಲೇಖನಗಳು (ಈಚೆಗೆ ಮೂಲಗೇಣಿ ರದ್ಧತಿ ಬಗ್ಗೆ ಎಲ್ಲಂದರಲ್ಲಿ - ಬೆಂಗಳೂರಿನಿಂದ ದಿಲ್ಲಿವರೆಗೆ, ಓಡಾಡಿ ನಡೆಸಿಕೊಡುತ್ತಿರುವ ಭೈಠಕ್ಕುಗಳೂ) ನಿಸ್ವಾರ್ಥ ಸೇವೆಯ ಸಣ್ಣ ಮುಖಗಳು. ಸಾಮಾಜಿಕ ಚಟುವಟಿಕೆಗಳಲ್ಲಿ ನಾವು ತಿಳಿದುಕೊಳ್ಳಲೇ ಬೇಕಾದ ಹಲವು ಕಾನೂನಿನ ಅಂಶಗಳ ಮೇಲೆ ಇವರು ನಮ್ಮ ಶಿಬಿರದಲ್ಲಿ ಚೆಲ್ಲಿದ ಬೆಳಕು ಕೇವಲ ಪ್ರಾಮಾಣಿಕ ಭಾವಾವೇಶದಿಂದ ನುಗ್ಗುವ ಮನಸ್ಸುಗಳಿಗೆ (ಹುಡುಗ ಪ್ರಾಯ ಅಂತದ್ದಲ್ಲವೇ!) ಒಳ್ಳೆಯ ಕಡಿವಾಣ ತೊಡಿಸಿತೆಂದೇ ಹೇಳಬೇಕು.
ಚಾ ವಿರಾಮದ ಬೆನ್ನಿಗೆ ನಮ್ಮೊಡನೆ ಪಟ್ಟಾಂಗಕ್ಕೆ ಕುಳಿತವರು ಮಣಿಪಾಲದಿಂದ ಬಂದ ಔಷಧ ಶಾಸ್ತ್ರದ ಪ್ರೊಫೆಸರ್. ಆದರೆ ಇವರು ಶಿಬಿರಾರ್ಥಿಗಳಿಗೆ ಕೊಟ್ಟ ಜೀವಪುಷ್ಠಿ ರಸಾಯನದಲ್ಲಿ ಜಾಗೃತ ನಾಗರಿಕನ ಹಕ್ಕು ಬಾಧ್ಯತೆಗಳ ಪೂರ್ಣ ಎಚ್ಚರ ಮೂಲಧಾತು. ಜೊತೆಗೆ ಪ್ರತಿಕ್ಷಣವೂ ರುಚಿ ಹೆಚ್ಚಿಸುವ ಪ್ರತ್ಯಕ್ಷ ಸ್ವಂತ ಹೋರಾಟದ ನೂರಾರು ಆಖ್ಯಾಯಿಕೆಗಳು. ಪ್ರಜಾಸತ್ತೆಯಲ್ಲಿ ಪ್ರತಿನಿಧಿಗಳು ಮತ್ತು ನೌಕರಶಾಹೀ ‘ಒಡೆಯರಲ್ಲ, ಸೇವಕರು’ ಎನ್ನುವುದನ್ನು ಅಸಂಖ್ಯ ಪತ್ರಿಕಾ ಬರಹಗಳಲ್ಲಿ (ಈಗ ಕೆಲವು ಪುಸ್ತಕಗಳ ರೂಪದಲ್ಲೂ ಲಭ್ಯ) ಸಾರ್ವಜನಿಕರರಿವಿಗೆ ಮತ್ತೆ ನೌಕರಶಾಹಿಯ ಕಾರ್ಯಶೈಲಿಗೆ ರೂಢಿಸಿದವರು ಇವರು. ಯಾವುದೇ ಧರಣಿ, ಘೆರಾವೋ, ದೊಂಬಿಗಳ ಆರ್ಭಟವಿಲ್ಲದೆ ತಣ್ಣಗೆ ಪತ್ರಗಳನ್ನಷ್ಟೇ ಬರೆದು ಸಾರ್ವಜನಿಕ ಸಮಸ್ಯೆಗಳನ್ನು ಇನ್ನಿಲ್ಲದ ಲೆಕ್ಕದಲ್ಲಿ ಪರಿಹರಿಸಿದ ಆ ವ್ಯಕ್ತಿ ರವೀಂದ್ರನಾಥ ಶ್ಯಾನುಭಾಗ. ನಿರ್ಮಲ, ನಿರರ್ಗಳ ಮಾತುಗಾರಿಕೆಯೂ ಸಿದ್ಧಿಸಿರುವ ಶ್ಯಾನುಭಾಗರ ಒಂದೊಂದು ಆಖ್ಯಾಯಿಕೆಯೂ ರೋಮಾಂಚಕ ಪತ್ತೇದಾರಿ ಕಥನಗಳಂತೆಯೇ ರಂಜಿಸಿದವು. ಇವರ ಕಲಾಪ ನಿಗದಿತ ಅವಧಿಯ ಕಟ್ಟು ಹರಿದುಕೊಂಡು ನಮ್ಮ ರಾತ್ರಿಯ ಊಟದವರೆಗೂ ವಿಸ್ತರಿಸಿದ್ದು ಆಶ್ಚರ್ಯವಲ್ಲ. ಮತ್ತೂ ಯಾಕೆ ಮುಂದುವರಿಯಬಾರದು ಎನ್ನುವುದೇ ಎಲ್ಲರ ಆಶಯವಾಗಿಬಿಟ್ಟಿತ್ತು! (ಬಳಕೆದಾರ ಜಾಗೃತಿಯನ್ನು ಈ ವಲಯದಲ್ಲಿ ಅಸಾಮಾನ್ಯ ಎತ್ತರಕ್ಕೆ ಮುಟ್ಟಿಸಿ, ಪರೋಕ್ಷ ನಿವೃತ್ತಿಯ ನೆಪದಲ್ಲಿ ಶ್ಯಾನುಭಾಗ್ ಮಣಿಪಾಲ ಬಿಟ್ಟು ನೇಪಾಳದ ದೂರಕ್ಕೆ ಹೋಗಿದ್ದರು. ಆದರೆ ಒಳಗಿನ ತುಡಿತಕ್ಕೆ ಸ್ಪಂದಿಸಿ ಈಗ ಊರಿಗೆ ಮರಳಿ, ಎಂಡೋಸಲ್ಫಾನ್ ವಿರುದ್ಧದ ಹೋರಾಟದಲ್ಲಿ ಪೂರ್ಣ ಮಗ್ನರಾಗಿದ್ದಾರೆ ಈ ಔಷಧ ಶಾಸ್ತ್ರಿ. ಹೆಚ್ಚಿನ ವಿವರಗಳಿಗೆ ಇಲ್ಲೇ ಪಕ್ಕಕ್ಕೆ ಕೊಟ್ಟಿರುವ ‘Sundara ವಸುಂಧರ’ ಬ್ಲಾಗ್ ಸೇತು ಬಳಸಿ)
ದಿನದ ಉದ್ದಕ್ಕೂ ಅತಿಥಿಗಳೆಲ್ಲಾ ಬಂದಷ್ಟೇ ಸಹಜವಾಗಿ, ಸರಳವಾಗಿ ಆದರೆ ನಮ್ಮ ಅಕ್ಷಯ ಸಂತೋಷದಲ್ಲಿ ಒಂದಷ್ಟನ್ನು ಮೊಗೆದುಕೊಂಡೇ ಮರಳಿದರು. ತೆರೆ, ಅಂಕಗಳ ಪ್ರತ್ಯೇಕತೆಯನ್ನು ನಿರಾಕರಿಸುವ, ಬೆಳಕಿನ ಏರುಪೇರುಗಳಲ್ಲಷ್ಟೇ ಮುಂದುವರಿಯುವ ಆಧುನಿಕ ರಂಗಪ್ರಯೋಗಗಳಂತೆ ಲಾಂದ್ರದ ತಂಪು ಬೆಳಕಿನಲ್ಲಿ ಕಾಡ್ಮನೆಯ ಎದುರಿನ ಕೋಣೆ ಹತ್ತೂವರೆ ಗಂಟೆಯ ಸುಮಾರಿಗೆ ಕೊನೆಯ ದೀರ್ಘ ದೆಖಾವೆಗೆ ಸಜ್ಜಾಯಿತು; ಶಯನೋತ್ಸವ. ಶಿಬಿರದ ಪಾಲ್ಗಾರಿಕೆಯನ್ನು ಹಗಲೆಲ್ಲಾ ಪಡೆದ ಮಳೆರಾಯರೂ ಅದೇ ಉತ್ಸಾಹದಲ್ಲಿ ನಮ್ಮೊಡನೆ ರಾತ್ರಿಯೂ ಮುಂದುವರಿದರು!
ಇಷ್ಟಾದರೂ ಚಾಲನ ಚಾ (ಹಾಸಿಗೆ ಚಾ ಅಲ್ಲ) ಸಮಯಕ್ಕೆ ಸರಿಯಾಗಿ ದೂರದ ಮೂಡಬಿದ್ರೆಯಿಂದ ಗೆಳೆಯ, ವೈದ್ಯ (ಎಲ್ಲೆಲ್ಲೂ ನೀರೇ ಇದ್ದಾಗ ಒಂದಾಲದ ಎಲೆಯ ಮೇಲೊಂದು ಶಿಶು ತೇಲಿಬಂದಂತೆ) ಕೃಷ್ಣಮೋಹನ್ (ನಮ್ಮ ಪ್ರಿಯ ಭಾಷೆಯಲ್ಲಿ ‘ಕೃಶಿ’) ಮುಂದಿನ ತನ್ನ ಕಾರ್ಯಕ್ಕೆ ಸಜ್ಜಾಗಿ ಹಾಜರಾಗಿದ್ದರು. ಶಸ್ತ್ರ ವೈದ್ಯ, ವೈದ್ಯಪತ್ನಿ ಸಹಿತ ಸ್ವಂತ ಆಸ್ಪತ್ರೆ ನಿರ್ವಾಹಕ ಎನ್ನುವುದು ಇವರ ವೃತ್ತಿಮುಖ. ಹವ್ಯಾಸಿ ಮುಖದಲ್ಲಿ, ನಾನು ವಾರ ಕಾಲ ನಾಗರಹೊಳೆಯಲ್ಲಿ ‘ಹುಲಿ ಗಣತಿ’ಯಲ್ಲಿ ಭಾಗಿಯಾಗಿ ಪ್ರಥಮ ಬಾರಿಗೆ ವನ್ಯ ಚಟುವಟಿಕೆಗೆ ಅಧಿಕೃತ ಪ್ರವೇಶಪಡೆದಾಗ, ಅಂತಾರಾಷ್ಟ್ರೀಯ ಹುಲಿ ಬಿಕ್ಕಟ್ಟಿನ ವೇಳೆ ನಮ್ಮ ಜಿಲ್ಲೆಯ ನಾಗರಿಕ ವಲಯಗಳಲ್ಲಿ ಪ್ರಚಾರಸತ್ರ ನಡೆಸಿದಾಗ, ಕೊನೆಗೆ ಬಿಸಿಲೆ ಘಾಟಿಯಲ್ಲಿ ಸಂರಕ್ಷಣೆಗಾಗಿ ವನ ಖರೀದಿಸಿದಾಗ ನನಗೆ ಸಿಕ್ಕ ಏಕೈಕ ಪಾಲುದಾರ ಇದೇ ಕೃಶಿ. ಇವರ ಬಹುಮುಖೀ ಆಸಕ್ತಿಗಳ ಬಗ್ಗೆ ನಾನು ಹೀಗೇ ವಾಕ್ಯ ಹೊಸೆಯುವುದಕ್ಕಿಂತ ನೀವೇ ಅನುಭವಿಸಿ www.drkrishi.com
ಶಿಬಿರದ ಎರಡನೇ ದಿನದ ಮೊದಲ ಕಲಾಪ ಕೃಶಿ ನೇತೃತ್ವದಲ್ಲಿ ಪಕ್ಷಿವೀಕ್ಷಣೆ. ನಿಮಗೆಲ್ಲ ತಿಳಿದಿರುವಂತೆ ಎಡೆಂಬಳೆ ಕೃಷಿಕ್ಷೇತ್ರದ ಸುಮಾರು ಐವತ್ತು ಎಕ್ರೆ ಹರಹಿನ ಒಂದು ಮೂಲೆಯ ಕೇವಲ ಒಂದು ಎಕ್ರೆ ಮಾತ್ರ ಅಭಯಾರಣ್ಯ. ಆದರೆ ನಮ್ಮೆಲ್ಲಾ ಕಲಾಪಗಳಿಗೆ ಯಾವತ್ತೂ ಮುಕ್ತವಾಗಿ ಎಡೆಂಬಳೆಯೂ ಒದಗುತ್ತಿತ್ತು. ಅಲ್ಲಿ ತೋಟ ಸಣ್ಣದು. ಗುಡ್ಡೆ, ರಬ್ಬರ್ ತೋಟ, ಬಿದಿರ ಬನ, ಗೇರುತೋಟ ಮತ್ತು ಕುರುಚಲು ಕಾಡು ಮುಖ್ಯವಾದದ್ದು. ಕೃಶಿ ಮೊದಲಲ್ಲಿ ಎಲ್ಲರನ್ನೂ ಕಾಡ್ಮನೆಯ ಅಂಗಳದಲ್ಲೇ ನಿಲ್ಲಿಸಿ, ಸಣ್ಣದಾಗಿ ‘ಮಾಡು, ಮಾಡದಿರು’ ಪಾಠ ಮಾಡಿದರು. ಅನಂತರ ಒಂದೂವರೆ ಗಂಟೆ ಎಡೆಂಬಳೆಯ ತೋಟ, ಗುಡ್ಡೆ ಸುತ್ತಿಸಿ ಕೆಲವು ಪಕ್ಷಿಗಳನ್ನು ತೋರಿಸಿ, (ಮೋಡ ಮತ್ತು ಮಳೆಯ ವಾತಾವರಣವಿದ್ದುದರಿಂದ) ಕೆಲವನ್ನೇ ಕೇಳಿಸಿ, ಹಲವನ್ನು ಮಾತಿನಲ್ಲೇ ಪರಿಚಯಿಸಿ, ಕೊನೆಯದಾಗಿ ಕೊನೆಯಿಲ್ಲದ ಸಂಶಯಗಳಿಗೆ ಸಮರ್ಪಕ ಉತ್ತರಗಳನ್ನು ಕೊಟ್ಟರು.

ಸಾಹಿತ್ಯದ ರಾಗಾಭಿವ್ಯಕ್ತಿ - ಸಂಗೀತವನ್ನು ಪರಿಚಯಿಸಿ ಕೊಟ್ಟವರು ನಿತ್ಯಾನಂದರಾವ್. ವೃತ್ತಿ ಜೀವನ ನಿರ್ವಹಣೆಗೆ, ಪ್ರವೃತ್ತಿ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ನುವ ಮಾತಿಗೆ ಈ ತೂತು ಬಾವಿ ಅರ್ಥಾತ್ ಬೋರ್ವೆಲ್ ಕಂತ್ರಾಟುದಾರ ನಿತ್ಯಾನಂದ ರಾವ್ ತುಂಬಾ ಒಳ್ಳೆಯ ಉದಾಹರಣೆ. ಮಂಗಳೂರಿನಲ್ಲಿ ಕರ್ಣಾಟಕ ಸಂಗೀತಕ್ಕಾಗಿಯೇ ಇವರು ಕಟ್ಟಿ ಬೆಳೆಸಿದ ಸಂಗೀತ ಪರಿಷತ್ (ಮುಂದುವರಿದ ದಿನಗಳಲ್ಲಿ ‘ಮಣಿಕೃಷ್ಣ ಅಕಾಡೆಮಿ’) ಮತ್ತದರ ಕಾರ್ಯಕ್ರಮ ವೈವಿಧ್ಯದ ರುಚಿ ಮತ್ತು ಶುಚಿ ನಾನಿವರನ್ನು ಶಿಬಿರಕ್ಕೂ ಬಯಸುವಂತೆ ಮಾಡಿತ್ತು (ಸ್ವತಃ ಇವರು ಸಂಗೀತಗಾರರಲ್ಲ). ಆಗಿನ್ನೂ ಸಂಗೀತ ಕಲಿಕೆಯ ಮೊದಲ ಹಂತಗಳಲ್ಲಷ್ಟೇ ಇದ್ದ ಅವರ ಮಗಳಂದಿರಿಬ್ಬರ (ದೊಡ್ಡವಳು - ಪ್ರಾರ್ಥನ, ಇಂದು ದೊಡ್ಡ ಕಲಾವಿದೆ, ವಿದ್ವಾಂಸೆ. ಮತ್ತಿನವಳು ಕೀರ್ತನ ಪ್ರಾಯದಲ್ಲಷ್ಟೇ ಕಿರಿಯಳು, ಹಾಡಿಕೆಯಲ್ಲಲ್ಲ) ಹಾಡಿಕೆಯ ಪ್ರಾತ್ಯಕ್ಷಿಕೆಯ ಬಲದಲ್ಲಿ ಕರ್ನಾಟಕ ಸಂಗೀತ ಪರಿಚಯದ ಒಂದು ಅವಧಿಯನ್ನು ರಸಮಯಗೊಳಿಸಿದರು.
ಮಳೆ ಪೂರ್ತಿ ಬಿಟ್ಟಿತ್ತು. ಇಳೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನು ಮತ್ತೆ ಹೊರಾಂಗಣಕ್ಕೆ ಇಳಿಸಿದವರು ಪಾಣಾಜೆಯ ಪಂಡಿತ ವೆಂಕಟ್ರಾಮ್ ದೈತೋಟ. ಶೈಕ್ಷಣಿಕ ಅಧ್ಯಯನ ನೋಡಿದರೆ ಇಂಜಿನಿಯರ್, ವೃತ್ತಿ ನೋಡಿದರೆ ಕೃಷಿಕ, ಪ್ರವೃತ್ತಿಯಲ್ಲಿ ವಂಶಪಾರಂಪರ್ಯದಲ್ಲಿ ಸ್ವಲ್ಪ ಬಂದ ಆಯುರ್ವೇದವನ್ನು ಬಗಲಲ್ಲಿಟ್ಟುಕೊಂಡು ಸ್ವಂತ ಆಸಕ್ತಿ, ಅಧ್ಯಯನ ಮತ್ತು ಅಸಾಧಾರಣ ಕ್ಷೇತ್ರಪರ್ಯಟ ಮುಪ್ಪುರಿಗೊಳಿಸುತ್ತ ಸಸ್ಯ ಜಗತ್ತಿನ ಆದ್ಯಂತ ಅಳೆಯುವ ಸಾಹಸಿ. ಇವರ ಕೃಷಿ, ಬರವಣಿಗೆಗಳ ಬಿಡುವನ್ನು ಪೂರ್ಣ ಆಪೋಷನ ತೆಗೆಯುವ ಇವರ ಬಲು ಜನಪ್ರಿಯ ಮತ್ತು ಪರಿಣಾಮಕಾರೀ ಆಯುರ್ವೇದೀಯ ಚಿಕಿತ್ಸಾ ಸೇವೆ ಇಂದಿಗೂ ಪೂರ್ಣ ಉಚಿತ! ವೆಂಕಟ್ರಾಮರ ಪ್ರಾತ್ಯಕ್ಷಿಕೆಗೆ ಪೂರ್ಣ ಎಡೆಂಬಳೆಯ ಗುಡ್ಡೆ ತೋಟಗಳ ವ್ಯಾಪ್ತಿ ತೆರೆದಿತ್ತು. ಮತ್ತಾ ಕಲಾಪಕ್ಕೆ ನಿಗದಿತ ಅವಧಿಯ ಮೇಲೆ ಮತ್ತಷ್ಟೇ ಸಮಯ ವಿಸ್ತರಿದ್ದೂ ಆಯ್ತು. ಆದರೇನು ಮಾಡೋಣ - ವೆಂಕಟ್ರಾಮರು ಮುಟ್ಟಿದ್ದೆಲ್ಲಾ ಮೂಲಿಕೆಗಳೇ! ನಮ್ಮ ಓಡಾಟ ನೂರಿನ್ನೂರು ಅಡಿ ಮೀರಲಾಗದಷ್ಟು ಸಸ್ಯ ವೈವಿಧ್ಯ ಅದನ್ನೂ ಮೀರಿದ ವಿಷಯ ಸಮೃದ್ಧಿ ವೆಂಕಟ್ರಾಮರಲ್ಲಿತ್ತು. ಶಿಬಿರಾರ್ಥಿಗಳ ಉತ್ಸಾಹಕ್ಕೆ ಕಟ್ಟೆ ಕಟ್ಟಲು ಊಟದ ನೆಪ ಒಡ್ಡಬೇಕಾಯ್ತು.
ಕಣ್ಣಿನ ಮಿಟುಕಿನಲ್ಲೇ ಹೃದಯಗೆಲ್ಲುವ, ಎಂದೂ ವಿಸ್ತರಿಸದ ಆದರೆ ಮಾಸದ ಮುಗುಳು ನಗೆಯ, ಸೌಮ್ಯ ವ್ಯಕ್ತಿ ಪ್ರೊ| ಪಿ.ಎಸ್. ರೈ. ಕೃಷಿ ವಿವಿನಿಲಯದ ಕೀಟ ಶಾಸ್ತ್ರಜ್ಞನಾಗಿ ನಿವೃತ್ತರಾದರೂ ಉದ್ದಕ್ಕೂ ಇವರ ಬರವಣಿಗೆ, ಮಾತುಗಳಲ್ಲಿ ಮುಖ್ಯವಾಗಿ ವಿಜ್ಞಾನವನ್ನು ಕನ್ನಡಿಗರಿಗೆ ಕೊಡಬೇಕು ಎನ್ನುವ ಪ್ರೀತಿ ಮತ್ತೆ (ಕಥೆಗಳು, ವ್ಯಕ್ತಿ ಚಿತ್ರಗಳು) ತನ್ನನುಭವ ಇತರರಿಗೆ ಪ್ರೇರಕವಾಗುವುದಿದ್ದರೆ ಯಾಕೆ ಬೇಡವೆನ್ನುವ ಕಾಳಜಿ ಮೂಲವಾಗಿಯೇ ಒಸರುತ್ತಿತ್ತು. ಅದರ ವಿಸ್ತರಣೆಯಾಗಿಯೇ ಆ ಮಳೆಯ ದಿನದಲ್ಲೂ ಆ ಹಿರಿಯ ಜೀವ ಯಾವುದೋ ಬಸ್ಸು ಹಿಡಿದು ನಮ್ಮ ಶಿಬಿರಕ್ಕೆ ಬಂದಿದ್ದರು. ಅವರು ಕೊಟ್ಟ ಅಸಂಖ್ಯ ಕೀಟ ಪರಿಚಯ ಇನ್ನೂ ನಾವು ಪೂರ್ಣ ತಿಳಿಯದೇ (ಕೀಟಗಳು ಕಳೆದೊಗೆಯಬೇಕಾದ ಉಪದ್ರಗಳು ಎಂಬ ಕಲ್ಪನೆಯೇ ತಪ್ಪು) ಹಾಗಾಗಿ ಗೌರವಿಸದೇ ಮಾಡುತ್ತಿದ್ದ ಪರಿಸರ ಅವಹೇಳನ. ಜೀವವೈವಿಧ್ಯದ ಎತ್ತರದ ಸ್ತರಗಳಲ್ಲಿ ಎದ್ದು ಕಾಣುವ ಕೆಲವೇ ಹುಲಿ, ಆನೆ, ಚಿರತೆ, ಕಾಟಿ, ಕಡವೆಗಳಿಗಿಂತ ಸಾವಿರಾರು ಪಾಲು ವೈವಿಧ್ಯದಲ್ಲೂ ಸಂಕೀರ್ಣತೆಯಲ್ಲೂ ವಿಪುಲವಾಗಿರುವ ಕೀಟಪ್ರಪಂಚವನ್ನು ತಿಳಿದು ನಡೆಯುವುದು ನಿಜ ಪರಿಸರ ಪ್ರೀತಿ ಎನ್ನುವ ಅರಿವನ್ನು ರೈಗಳು ಉಂಟು ಮಾಡಿದರು. ಇಂದು ನಮ್ಮದಲ್ಲದ ಗೇರುಬೀಜಕ್ಕಾಗಿ (ಅದಕ್ಕೂ ಮೀರಿದ ಅಜ್ಞಾನದಲ್ಲಿ ಅಸಂಖ್ಯ ತರಕಾರಿಗಳಿಗೂ) ನಾವು ಸುರಿದ ಎಂಡೋಸಲ್ಫಾನ್ ಮುಂತಾದ ವಿಷರಸಾಯನಗಳ ಪರಿಣಾಮದಲ್ಲಿ ನೇರ ಮನುಷ್ಯ ದುರಂತಗಳು ಬಿಡಿ, ಬಹುತೇಕ ಅಳಿಸಿಯೇ ಹೋದ ಜೇನು ನೊಣವೂ ಸೇರಿದಂತೆ ನೂರೆಂಟು ಮಿತ್ರ ಕೀಟಗಳ ಲೆಕ್ಕ ಹಿಡಿದವರೇ ಇಲ್ಲ. ಹಿಡಿಯಬಹುದಾಗಿದ್ದ ಪಿಎಸ್ ರೈಗಳೂ ಇಂದು ನಮ್ಮೊಡನಿಲ್ಲ.
(ಮುಂದುವರಿಯಲಿದೆ)
[ಅಧಿಕಾರದ ಗದ್ದುಗೆಗಾಗಿ ಜನರನ್ನು ಒಲಿಸಿಕೊಳ್ಳುವ ಏಕ ಉದ್ದೇಶದಿಂದ ಇನ್ನಿಲ್ಲದ ಕೆಲಸ, ವೆಚ್ಚ (ಮತ್ತು ವಂಚನೆಯನ್ನೂ) ಮಾಡಿ ಬರುವವರು, ಅನಂತರದ ದಿನಗಳಲ್ಲಿ ಪೂರ್ಣ ನಿಷ್ಠೆಯನ್ನು ಅಕಾರಣವಾದ ದೇವ, ದೇವಮಾನವರತ್ತ ತೋರುವುದು, ಕ್ರಿಯೆಗಳಲ್ಲಿ ಎಲ್ಲಾ ಸಾಮಾಜಿಕ ಮೌಲ್ಯ ಮತ್ತು ಜವಾಬ್ದಾರಿಗಳನ್ನು ಸ್ವಾರ್ಥಕ್ಕೇ ದುಡಿಸಿಕೊಳ್ಳುವುದು ಕಾಣುತ್ತಿದ್ದೇವೆ. ನಮ್ಮ ಶಿಬಿರದ ಕಲಾಪಗಳು ಇಂಥವಕ್ಕೇನಾದರೂ ಸಣ್ಣ ನಿರೋಧಶಕ್ತಿಯನ್ನು, ಹೋರಾಟದ ಛಲವನ್ನು ಯುವ ಮನಸ್ಸುಗಳಿಗೆ ಕೊಟ್ಟಿರಬಹುದೇ? ನಿಮ್ಮ ಸಂದೇಹ ಅಥವಾ ಸಮಾಧಾನದ ನಿರೀಕ್ಷೆಯಲ್ಲಿ ವಾರ ಕಳೆದು ಮುಂದಿನ ಕಂತಿನ ಕಥನಕ್ಕೆ ಬಲಗೊಳ್ಳುತ್ತೇನೆ]
ಅಶೋಕ ವರ್ಧನರೇ!
ReplyDeleteನನಗೆ ನಿಮ್ಮ ಶಿಬಿರದ ವಿಚಾರ ಮೊದಲೇ ಗೊತ್ತಾಗಿದ್ದರೆ, ನಾನೂ ಉಂಡಾಡಿ ಗುಂಡ ಅಭ್ಯರ್ಥಿ ಪಟ್ಟ ಕ್ಕೆ ಮೊದಲನೆಯವನಾಗಿ ಬರುತ್ತಾಇದ್ದೆ.
ತಾವು ಸಂಪನ್ಮೂಲ ವ್ಯಕ್ತಿಗಳನ್ನು ಯಾವಸಂಪತ್ತನ್ನೂ ನೀಡದೇ ಕರೆಸಿದರೂ, ಶಿಬಿರಾರ್ಥಿಗಳಿಗೆ ಎಲ್ಲವೂ ಧರ್ಮಾರ್ಥವಾಗಿ ಅದು ಹೇಗೆ ನಿಭಾಯಿಸಿದಿರಿ? .
ತಮ್ಮ ಲೇಖನ ಓದುತ್ತಾ ನಾನು ಅಭಯಾರಣ್ಯದ ನೀರು ತುಂಬಿದ ಕಲ್ಪಣೆ ಮತ್ತು ಭಾವಿಗಳಬದಿಗೇ ಹೋಗಿಬಿಟ್ಟೆ.
ತುಂಬಿದ ಕಲ್ಪಣೆಯಲ್ಲಿ ಈಜುವುದು ನನ್ನ ಹವ್ಯಾಸ! ಕಲ್ಪಣೆಗಳು ಮಳೆಗಾಲದಲ್ಲಿ ಗುಡ್ಡದ ಮೇಲಿನ ಸ್ವಿಮ್ಮಿಂಗ್ ಪೂಲ್ಗಳು!
ತಾವು ಯಾವಾಗಲೂ ಉತ್ತಮ ಲೇಖನಬರೆದು ಗತಕಾಲಕ್ಕೆ ಸೇತುವೆ ಹಾಕುತ್ತಿದ್ದೀರಿ.
ಮುಂದಿನ ಶಿಬಿರ ಯಾವಾಗ ಅಂತ ಬೇಗ ಹೇಳಿ!
ವಾರ್ನಿಂಗ್:
ನಾನು ಊಟದ ಮಟ್ಟಿಗೆ ಸ್ವಲ್ಪ ಧಾರಾಳ .... . ನೆನಪಿರಲಿ!
ಪ್ರೀತಿಯಿಂದ
ಪೆಜತ್ತಾಯ ಎಸ್. ಎಮ್.
Wow!! ನನ್ನೇ ನಾ ನೋಡ್ಕೊಂಡೆ..
ReplyDeleteಒಳ್ಳೆಯದಾಗಿದೆ.
ReplyDeleteನಿಮ್ಮ ಬ್ಲಾಗ್ ಹೊಸ ಹಾದಿ ಹಿಡಿದು ಮುನ್ನುಗ್ಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ,
ReplyDeleteಅಶೋಕ
ReplyDelete೨ ಕಂತುಗಳನ್ನು ಓದಿದೆ. ಓದಿದಾಗ ಆ ದಿನಗಳು ಕಣ್ಣಮುಂದೆ ಬಂತು. ಬಹಳ ಖುಷಿ ಆಯಿತು. ಮುಂದೆ ಶಿಬಿರ ಮಾಡುವುದಾದರೆ ನಾನು ಬರಲು ಈಗಲೂ ತಯಾರಿದ್ದೇನೆ. ಅಷ್ಟೇ ಉತ್ಸಾಹ ಉಂಟು.
ಅಮ್ಮ
nanna program bagge barediddakkagi tumba kritajnathegalu.
ReplyDeleteಬಹಳ ಆಪ್ತವಾಗಿದೆ......
ReplyDelete