12 February 2011

೧೨೭ ಗಂಟೆಗಳು!

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ, ಹೆಚ್ಚು ಕಡಿಮೆ ಐದೂಕಾಲು ದಿನ ಅಥವಾ ೧೨೭ ಗಂಟೆಗಳ ಕಾಲ ಈತ ಏಕಾಂಗಿಯಾಗಿಯೇ ನಡೆಸಿದ ಅಸಾಧಾರಣ ದೇಹ-ಮನಸ್ಸುಗಳ ಸಾಹಸದ ಫಲವಾಗಿ ಬದುಕಿ ಬರುತ್ತಾನೆ. ಇದು ಒಂದು ಸತ್ಯ ಘಟನೆ. ಇಂದೂ ತನ್ನ ಮೊಂಡುಗೈಯೊಡನೆ ಈ ಅಮೆರಿಕನ್ ಪ್ರಜೆ ಸಾಹಸಾನ್ವೇಷಣೆಯನ್ನು ಮುಂದುವರಿಸಿದ್ದಾನೆ! ಅದರ ಕಥಾ ಸಿನಿಮಾ ರೂಪವೇ ‘127 Hours’.


ಅಭಯ ಹತ್ತಿಪ್ಪತ್ತು ದಿನಗಳ ಹಿಂದೆಯೇ ಈ ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿದ ಮೇಲೆ ಹೇಳಿದ್ದ. ಗೆಳೆಯ ನಿರೇನ್ ಎಂದೂ ಕರೆಯದವರು “ಸಂಜೆ ಏಳೂಮುಕ್ಕಾಲರ ಶೋಗೆ ನಮ್ಮೊಡನೆ ಬನ್ನಿಯಪ್ಪಾ” ಎಂದು ಒತ್ತಾಯಿಸಿದರು. ಅಂಗಡಿಯನ್ನು ದಿಢೀರ್ ಬಿಡಲಾಗದ ಕಷ್ಟಕ್ಕೆ ನಾನು ಹೋಗಲಿಲ್ಲ. ಅಡ್ಲ್ಯಾಬ್ಸಿನ ಬಿಗ್ ಸಿನಿಮಾದಲ್ಲಿ (ಮಲ್ಟಿಪ್ಲೆಕ್ಸ್) ಮೊನ್ನೆಯವರೆಗೆ ಅದು ದಿನಕ್ಕೆ ಮೂರು ಪ್ರದರ್ಶನ ಕಾಣುತ್ತಿದ್ದದ್ದು ಇಂದು ಒಂದೇ ಎಂದು ಕಂಡಾಗ ನಾನು ಯೋಚನೆಗೆ ಬಿದ್ದೆ. ಮೂಡಬಿದ್ರೆಯಿಂದ ಇನ್ನೋರ್ವ ಗೆಳೆಯ ಕೃಶಿ ದೂರವಾಣಿಸಿ ಒತ್ತಾಯಿಸಿದಾಗ ಸೋತೆ. ದೇವಕಿಯನ್ನು ಅಂಗಡಿಗೆ ಮಾಡಿ ಮಧ್ಯಾಹ್ನ ಒಂದೂವರೆಯ ಪ್ರದರ್ಶನಕ್ಕೆ ಹಾಜರಾದೆ.ಪ್ರದರ್ಶನ ಪೂರ್ವ ಬರುವ ‘ಇದು ಸತ್ಯ ಕಥೆ’ ಎನ್ನುವ ಶೀರ್ಷಿಕೆ, ಚಿತ್ರದ ಕೊನೆಯಲ್ಲಿ ಕಥಾನಾಯಕ ತನ್ನ ಮೊಂಡುಗೈ ಹೊಡೆತದಲ್ಲಿ ಈಜಿಕೊಂಡು ಬರುವುದು, ಮತ್ತದೇ ಕೈಗೆ ಶಿಲಾರೋಹಣದ ಸಲಕರಣೆ ಬಿಗಿದುಕೊಂಡು ಹಿಮನಾಡಿನಲ್ಲಿ ಸಾಹಸಾನ್ವೇಷಣೆಗೆಳಸುವುದು ಕಾಣುವಾಗ ಯಾರ ಭಾವಕೋಶವಾದರೂ ಉಕ್ಕಿ ಕಣ್ಣು ತುಂಬಿಸುತ್ತದೆ. ಆದರೆ ಒಟ್ಟಾರೆ ಸಿನಿಮಾ ಗ್ರಹಿಸುವಾಗ ಒಳ್ಳೆಯ ವಸ್ತುವೊಂದನ್ನು ಕೆಟ್ಟದ್ದಾಗಿ ನಿರ್ವಹಿಸಿದ್ದಾರೆಂದೇ ಹೇಳಬೇಕು. ನಗರದ ಗೌಜು ಗದ್ದಲದಿಂದ ಬಲುದೂರ (‘ಮುಂದಿನ ಸವಲತ್ತುಗಳು ಒಂದು ನೂರು ಮೈಲಿಯಾಚೆ’ ಎಂಬ ರಸ್ತೆ ಬದಿಯ ಬೋರ್ಡೂ ಕಾಣಿಸುತ್ತಾರೆ) ಹೊರಟ ಕಥಾನಾಯಕ ಮೊದಲು ಕಾರಿನಲ್ಲಿ ಹೆದ್ದಾರಿ ಜ಼ೂಮಿಸಿ, ಡಿಕ್ಕಿಯಿಂದ ತೆಗೆದ ಮೌಂಟೇನ್ ಬೈಕ್ ಏರಿ ಮತ್ತೆಷ್ಟೋ ಹಳ್ಳ ದಿಣ್ಣೆ ಕಚ್ಚಾದಾರಿ ಹಾರಿಸಿ, ಕೊನೆಯಲ್ಲಿ ನಡೆದೂ ಸಾಗುತ್ತಾನೆ. ಅಲ್ಲಿ ಆಕಸ್ಮಿಕವಾಗಿ ಸಿಕ್ಕುವ ಎರಡು ಅನನುಭವೀ ಚಾರಣಿಗರಿಗೆ ಈತ ಸಹಾಯಕ್ಕೊದಗುವುದು, ಅವರಿಗೂ ಸಣ್ಣದಾಗಿ ಸಾಹಸ ಕಲಾಪಗಳ ರುಚಿ ಹತ್ತಿಸುವುದೆಲ್ಲ ಪ್ರೇಕ್ಷಕರಲ್ಲಿ ಸಾಮಾನ್ಯ ಪೂರ್ವರಂಗವನ್ನು ಚೆನ್ನಾಗಿಯೇ ಸೃಷ್ಟಿಸುತ್ತದೆ. ಮುಂದುವರಿದಾಗ ನಿಜ ಕಥಾಕೇಂದ್ರದ ದುರ್ಘಟನೆ ಸಂಭವಿಸುತ್ತದೆ. ಮತ್ತೆ ಒಂಟಿಯಾಗಿ, ಪುಟಿಪುಟಿದು ಕೊರಕಲೊಂದಕ್ಕೆ ಇಳಿಯಲು ತೊಡಗಿದವನು ಕ್ಷಣ ಮಾತ್ರದಲ್ಲಿ ಆಳಕ್ಕುರುಳುತ್ತಾನೆ. ಉರುಳಿದ ಆಘಾತ ದೊಡ್ಡದಾಗುವುದಿಲ್ಲ. ಆದರೆ ಜೊತೆಗೆ ಕಳಚಿ ಕೆಳಬಿದ್ದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ತೀವ್ರವಾಗಿ ಜಜ್ಜಿಹಿಡಿದುಕೊಂಡು ಕೊರಕಲಿನ ಒಂದು ಎತ್ತರದಲ್ಲಿ ಕೀಲುಗಲ್ಲಾಗಿಯೇ ನಿಲ್ಲುತ್ತದೆ. ಈ ಆಕಸ್ಮಿಕವನ್ನು ವಿಷದಪಡಿಸುವಲ್ಲಿ ಮತ್ತು ಸಾಹಸಿಯ ಪೂರ್ಣ ಅನಿಶ್ಚಿತ ಭವಿಷ್ಯವನ್ನು ನಮಗೆ ಒಪ್ಪಿಸುವಲ್ಲಿ ಸಿನಿಮಾ ಸೋಲುತ್ತದೆ.

ಶಿಲಾರೋಹಣಕ್ಕೆ ಸಹಜವಾಗಿ ಒಯ್ದ ಸಣ್ಣಪುಟ್ಟ ಸಲಕರಣೆಗಳ ಸಹಾಯದಲ್ಲಿ ಕೈ ಪಾರುಗಾಣಿಸಲು ಆತ ಮಾಡುವ ಪ್ರಯತ್ನಗಳನ್ನು ಮೊದಲು ತೀರಾ ಅವಸರದಲ್ಲಿ ಕಾಣಿಸಿದ್ದಾರೆ. ಆದರೆ ಆ ಪ್ರಯತ್ನಗಳು, ಹಸಿವು ನೀರಡಿಕೆ ಮತ್ತು ವಿಶ್ರಾಂತಿಯಂಥ ಅನಿವಾರ್ಯತೆಗಳು ಐದು ದಿನಕ್ಕೂ ಮಿಕ್ಕು ಲಂಬಿಸಿದ್ದನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ನಿರ್ದೇಶಕ ಏನೇನೂ ಸರಕಿಲ್ಲದೆ ಸೋಲುತ್ತಾನೆ. (ಕಥಾನಾಯಕನೇ ಸ್ವಗತದಲ್ಲಿ ಹೇಳಿಕೊಂಡಂತೆ) ಕನಿಷ್ಠ ಎಂಟು ಜನ ದಾಂಡಿಗರಲ್ಲದೆ ಮಿಸುಕಲರಿಯದ ಕೀಲುಗಲ್ಲು, ಬಿಡಿಸಿಕೊಳ್ಳಲಾಗದ ಕೈ, ದಿನಗಟ್ಟಳೆ ಬೊಬ್ಬೆ ಹೊಡೆದರೂ ಕೇಳುಗರಿಲ್ಲದ ಬಂಡೆಗಾಡು, ಯಾವುದಕ್ಕೂ ಪರ್ಯಾಪ್ತವಾಗಲಾರದ ಸಲಕರಣೆಗಳು ನಿಧಾನ ಸಾವನ್ನಷ್ಟೇ ಮುನ್ನುಡಿಯುವುದರ ಪೂರ್ಣ ಅರಿವು ಕಥಾನಾಯಕನಿಗಿದೆ. ಜಜ್ಜಿಯೇ ಹೋದ ಮುಂಗೈ ಭಾಗ ಕೊಳೆಯುವ ಪ್ರಕ್ರಿಯೆ ದೇಹದ ಮೇಲುಂಟು ಮಾಡಬಹುದಾದ ಪರಿಣಾಮಗಳ ಮತ್ತು ಒಟ್ಟಿನಲ್ಲಿ ಮನಸ್ಸಿನಿಂದೇಳುವ ಭ್ರಮೆಗಳ ಕುರಿತೂ ಆತ ತಿಳಿಯದವನೇನಲ್ಲ. ಅವನ್ನೆಲ್ಲ ನಿಭಾಯಿಸಿದ ಕಥನವನ್ನು ಚಿತ್ರ ತೇಲಿಸಿದೆ. ಬದಲು ವಿಡಿಯೋ ಕ್ಯಾಮರಾದೆದುರು ಕೇವಲ ಕೌಟುಂಬಿಕ ನೆನಕೆಗಳನ್ನು ದಾಖಲಿಸುವುದು ಪ್ರಮುಖವಾಗಿ ಕಾಣಿಸುತ್ತದೆ. ಭ್ರಮೆಗಳಲ್ಲಿ ಭಾರೀ ಮಳೆ ಸುರಿದು ಎಲ್ಲ ಮುಳುಗಿಸುವುದು, ಈತನ ಆರ್ತಧ್ವನಿ ನಿರ್ಜನ ಕಲ್ಲ ಕೊರಕಲುಗಳ ವಿಸ್ತಾರದಲ್ಲಿ ಕಳೆದು ಹೋಗುವುದು, ಬಾಲ್ಯದ, ಪ್ರೇಮದ, ಮತ್ತು ವೃತ್ತಿಯ ಸಂಬಂಧಗಳು ಕಾಡುವುದೇ ಮೊದಲಾದ ಕಲ್ಪನೆಗಳು ಸುಂದರವಾಗಿಯೇ ಮೂಡಿವೆ. ಪುಟ್ಟ ಚೂರಿ ಹಿಡಿದು ಎಡಗೈಯಲ್ಲಿ ಬಂಡೆ ಒಡೆಯುವ ಪ್ರಯತ್ನದಲ್ಲಿ ನಮ್ಮ ಕಥಾನಾಯಕ ಸೋತಾಗ, ಚೂರಿಯ ಅಸಾಮರ್ಥ್ಯವನ್ನು ಅದರ ತಯಾರಕ ದೇಶ - ಚೀನಾ ಟೀಕೆಗೆ ಬಳಸಿದ್ದು ನಿರ್ದೇಶಕನ ಕೆಟ್ಟ ಅಭಿರುಚಿಯನ್ನು ತೋರಿಸುತ್ತದೆ. ಅವನ್ನೆಲ್ಲ ಮೀರುವಂತೆ ಒಂದೆರಡು ಹಗ್ಗ ಮತ್ತು ಪುಟ್ಟ ಚೂರಿಯೊಡನೆ ಸ್ವಂತ ಕೈಯನ್ನೇ ತುಂಡರಿಸಿ, ಸುದೀರ್ಘ ಬಳಲಿಕೆಯನ್ನು ಮೀರಿ ನಾಗರಿಕ ತೆಕ್ಕೆಗೆ ಸ್ವಂತ ಕಾಲಿನ ಮೇಲೇ ಮರಳಿದ ಸಾಹಸ ಕೇವಲ ಪವಾಡದಂತೆ ನಿರೂಪಣೆಗೊಂಡದ್ದು ನನಗಂತೂ ದೊಡ್ಡ ನಿರಾಶೆಯನ್ನೇ ಉಂಟುಮಾಡಿತು.

ಸದ್ಯ ಇಲ್ಲೇ ಬ್ಲಾಗಿನಲ್ಲಿ ಕೊಡಂಜೆಕಲ್ಲಿನ ಶಿಲಾರೋಹಣದ ಲೇಖನ ಸರಣಿಯಲ್ಲಿ ನಾನು ತೊಡಗಿಕೊಂಡಿರುವುದು ನೀವು ಓದಿಯೇ ಇದ್ದೀರಿ. ಅದರಲ್ಲೂ ಈಗ ಬರಹಕ್ಕಿಳಿಯುತ್ತಿರುವ ಕೊಡಂಜೆ ಅನುಭವವೊಂದು ‘೧೨೭ ಗಂಟೆಗಳು’ ಅನುಭವಕ್ಕೆ ಭಾರೀ ದೂರದ್ದೇನೂ ಅಲ್ಲ ಎಂದು ನನ್ನ ಭಾವನೆ. ನನ್ನ-ದುಃಖದ ಮೋಹ ಸಿನಿಮಾ ಮೆಚ್ಚಿಕೊಳ್ಳಲು ಅಡ್ಡಿಯಾಗಿರಬಹುದೇ? ಸುಮಾರು ಹತ್ತು ದಿನಗಳನಂತರ ಬರಲಿರುವ ನನ್ನ ಲೇಖನ ಓದಿ ನಿರುಮ್ಮಳವಾಗಿ ನಿರ್ಧರಿಸಲು, ಏನಲ್ಲದಿದ್ದರೂ ಅಸಾಧಾರಣ ಸಾಹಸ ಒಂದನ್ನು ಥಿಯೇಟರಿನ ಭದ್ರ ನೆಲೆ ಹಾಗೂ ತಂಪು ವಾತಾವರಣದಲ್ಲಿ ಮೆತ್ತನೆ ಖುರ್ಚಿಯಲ್ಲಿ ಕುಳಿತು ಒಮ್ಮೆ ವೀಕ್ಷಿಸಲು ಖಂಡಿತಾ ಒಳ್ಳೆಯ ಸಿನಿಮಾ ೧೨೭ ಗಂಟೆಗಳು.

11 comments:

 1. ಪ್ರಿಯರೆ,
  ಈ ಚಿತ್ರವನ್ನು ನಾನು ನೋಡಿದಾಗ ಮೊದಲಿಗೆ ಇದನ್ನು ನೀವು ನೋಡುವಂತಾಗಲಿ ಅನಿಸಿತು.
  ಚಿತ್ರದ ತಾಂತ್ರಿಕತೆ ಕಲಾತ್ರಮಕತೆಗಳನ್ನು ಒತ್ತಟ್ಟಿಗೆ ಇಟ್ಟು ನೋಡುವಾಗ ನಡೆದ ವಾಸ್ತವ ಘಟನೆಯ
  ಭೀಕರತೆ ನನ್ನನ್ನು ಮೂಕನಾಗಿಸಿತು.
  ನೀವು ಹೇಳಲಿರುವ ಘಟನೆ ಇದಕ್ಕಿಂತ ಕಡಿಮೆಯದಲ್ಲ ಎನ್ನುವುದು ಆತಂಕದಿಂದ ನಿರೀಕ್ಷಿಸುವಂತೆ ಮಾಡಿದೆ.

  ReplyDelete
 2. Magnifient and is it your won story?!

  ReplyDelete
 3. kaleda ondu vaaradinda maga vishnu heltha idda.... picture olledide,,nodi

  antha...Eega illi kathe keli picture nodida haagaithu.... thanks!!!!

  ReplyDelete
 4. Krishnamohan Bhat13 February, 2011 20:27

  ಹಿ೦ದೊಮ್ಮೆ ಒ೦ದು ಇ೦ಗ್ಲೀಷ್ ಸಿನೆಮ ನೋಡಿದ್ದೆ ಹೆಸರು ನೆನಪಿಲ್ಲ ಅದರಲ್ಲಿ ವೈಮಾನಿಕನೊಬ್ಬ ತನ್ನ ಏಳುವರ್ಷದ ಮಗನನ್ನು ವಿಮಾನದಲ್ಲಿ ಕೊ೦ಡು ಹೋಗುವಾಗ ಹೃದಯಾಘಾತಕ್ಕೆ ತುತ್ತಾಗುತ್ತಾನೆ ಸವಿಗೆ ಮೊದಲು ತಾನಿರುವ ಸ್ಥಳದ ಸ೦ದೇಶ ವಯರ್ಲೆಸ್ಸಿನ ಮೂಲಕ ತಿಳಿಸಿರುತ್ತಾನೆ.ಅಲ್ಲಿ೦ದ ಆ ಹುಡುಗ ತನ್ನ ಪುಟ್ಟ ನಾಯಿಯೊ೦ದಿಗೆ ಬದುಕಿಗಾಗಿ ನಡೆಸುವ ಹೋರಾಟ ಅವನನ್ನು ಹುಡುಕಲು ಉಳಿದವರು ಪಡುವಪಾಡು ಅದ್ಬುತವಾಗಿ ಮೂಡಿ ಬ೦ದಿತ್ತು.ಅದರಲ್ಲೂ ಇದು ವಾಸ್ತವ ಕತೆ ಯೆ೦ದು ತಿಳಿಸಿದ್ದರು.ನೀವು ಈ ಸಿನೆಮಾಕತೆ ಬೈರೆದುದನ್ನು ಓದಿದಾಗ ನನಗೆ ಆ ಸಿನಿಮಾ ನೆನಪಾಯಿತು.ಆ ಹುಡುಗನ ನಟನೆಯಿ೦ದಾಗಿ ಅದು ಅದ್ಬುತ ಎನಿಸಿದ್ದು ಸುಳ್ಳಲ್ಲ.ಇರಲಿ ರಾಮಾಯಣದ ಎಡೆಯಲ್ಲಿ ಪಿಟ್ಕಾಯಣ ಯಾಕೆ?ಶುಭ ಹಾರೈಕೆಯೊ೦ದಿಗೆ.

  ReplyDelete
 5. ನಾಗೇಶ ಹೆಗಡೆ13 February, 2011 21:42

  ಕೊಡಂಜೆ ಕಲ್ಲಿನಿಂದ ದೂರ ಸಾಗಿ ಬೇರೊಂದು ಬಂಡೆಯ ನಡುವೆ ನಮ್ಮನ್ನು ಒಯ್ದಿದ್ದಕ್ಕೆ ತಲೆನೋವಂತೂ ಬರಲಿಲ್ಲ. ಸಿನೆಮಾದ 127 ಗಂಟೆಗಳು ಅಷ್ಟೇ ಸೆಕೆಂದ್ ಗಳಲ್ಲಿ ಕಣ್ಣಿಗೆ ಕಟ್ಟುವಂತೆ ಮಾಡಿದಿರಿ.
  ಆಗೀಗ ಇಂಥ ವಿಮರ್ಶೆಯನ್ನು ಚಾರಣದ ಮಧ್ಯೆ ಸೇರಿಸುತ್ತಿರಿ. ಸಿನೆಮಾದ್ದೇ ಆಗಬೇಕೆಂದಿಲ್ಲ. ಪುಸ್ತಕಗಳದ್ದಾದರಂತೂ ಇನ್ನೂ ಉತ್ತಮ, ಇನ್ನೂ ಉಪಯುಕ್ತ.
  ಧನ್ಯವಾದ.
  ನಾ

  ReplyDelete
 6. ಶಶಿಧರ ಹಾಲಾಡಿ14 February, 2011 13:00

  ೧೨೭ ಗಂಟೆಗಳು ಚಿತ್ರವನ್ನು ನೆನಪಿಸಿಕೊಂಡು ನೀವು ಬರೆಯಲಿರುವ ಲೇಖನವನ್ನು ಓದಲು ಕುತೂಹಲಿಯಾಗಿದ್ದೇನೆ.
  ಜೊತೆಗೆ ಆ ಸಿನಿಮಾವನ್ನು ಸಹಾ ನೋಡುವ ಕುತೂಹಲವನ್ನು ಕೆರಳಿಸಿದ್ದೀರಿ.
  ಧನ್ಯವಾದಗಳು.
  -ಶಶಿಧರ ಹಾಲಾಡಿ.

  ReplyDelete
 7. ಅನುಪಮಾ14 February, 2011 21:09

  ನನ್ನ ದುಃಖದ ಮೋಹ ಸಿನೆಮಾ ಮೆಚ್ಚಲು ತಡೆಯಾಗಿರಬಹುದೇ ಅನ್ನುತ್ತ ನಿಮ್ಮನ್ನು ನೀವೇ ವಿಮರ್ಶೆಗೆ ಹಚ್ಚಿದ್ದೀರಿ. ಹಾಗಾಗಿ ಇನ್ನಷ್ಟು ಕುತೂಹಲದಿಂದ ಆ ಅನುಭವದ ಓದಿಗೆ ಕಾಯುವಂತಾಗಿದೆ.
  ಅನುಪಮಾ

  ReplyDelete
 8. ಅಭಯ ಸಿಂಹ15 February, 2011 08:55

  ಕಥಾನಾಯಕನ ಕಷ್ಟಭರಿತ, ಲಂಬಿತ ದಿನಗಳನ್ನು ತೋರಿಸುವಲ್ಲಿ, ನಿರ್ದೇಶಕ ಸೋತಿದ್ದಾನೆ ಎನ್ನುವುದನ್ನು ನಾನು ಇನ್ನೊಂದು ರೀತಿಯಲ್ಲಿ ಅರ್ಥೈಸುತ್ತೇನೆ. ಅಲ್ಲಿ ಸರಕಿಲ್ಲದೇ ಸೋತದ್ದಲ್ಲ ಎಂದು ನನ್ನ ಅನಿಸಿಕೆ. ಏಕೆಂದರೆ, ಆ ಸರಕು ಸುಲಭವಾಗಿ ಪಡೆಯಬಹುದಾದಂಥದ್ದು. ಘಟನೆಯಲ್ಲಿ ಇದ್ದ ವ್ಯಕ್ತಿ ಇನ್ನೂ ಬದುಕಿರುವುದರಿಂದ ಅವನೊಡನೆ ಮಾತನಾಡುತ್ತಾ ಎಲ್ಲಾ ವಿವರಗಳೂ ಸಿಕ್ಕುತ್ತಿದ್ದವು. ಆದರೆ ಇಲ್ಲಿ ತೊಂದರೆ, ಅವರು ಆರಿಸಿಕೊಂಡಿರುವ ಕಥನ ಕ್ರಮ ಜನ್ಯವಾದದ್ದು ಎಂದು ನನ್ನ ಅನಿಸಿಕೆ. ಇದೇ ನಿರ್ದೇಶಕನ ಹಿಂದಿನ ಚಿತ್ರ ಸ್ಲಂಡಾಗ್ ಮಿಲಿಯನೇರ್ ತೆಗೆದುಕೊಂಡು ನೋಡಿ, ಈ ಸಿನೆಮಾ ನೋಡಿ ಇಲ್ಲೆಲ್ಲಾ ಒಂದು ವೇಗದ ಕಥನ ಕ್ರಮ ಇದೆ. ಆ ವೇಗಕ್ಕೆ, ಕಾಯುವಿಕೆಯ ಗತಿ ಹೊಂದುವುದಿಲ್ಲ. ಹಾಗೆ ನೋಡಿದರೆ, ಚಿತ್ರದಲ್ಲಿ ಬರುವ ಇಬ್ಬರು ಹುಡುಗಿಯರೊಡನೆ ಕಥಾ ನಾಯಕ ಕಳೆಯುವ ಸಮಯ ನೇರ ಕಥೆಗೆ ಭಾರೀ ಸಹಾಯಕವೇನೂ ಅಲ್ಲವಲ್ಲಾ? ಅದು ಸ್ಕ್ರೀನ್ ಟೈಮ್ ತಿನ್ನುತ್ತದೆ ಅಷ್ಟೇ! ಆದರೆ ಚಿತ್ರದ ವೇಗ ನಿರ್ವಹಣೆಗೆ ಅದು ಬಳಕೆಯಾಗಿದೆ. ಹೀಗಾಗಿ ಈ ಚಿತ್ರ ಒಂದು ನಿರ್ದಿಷ್ಟ ಮನೋವ್ಯಾಪಾರದ ಹಿನ್ನೆಲೆ ಹೊಂದಿದೆ. ಇದೇ ಮನೋವ್ಯಾಪಾರವೇ ಚೈನಾ ಚೂರಿಯನ್ನು ದೂರುವುದು ಕೂಡಾ. ಅಮೇರಿಕಾದಲ್ಲಿ ದಟ್ಟವಾಗಿ ಬೆಳೆಯುತ್ತಿರುವ (ಬೆಳೆದಿರುವ?) ಚೈನಾವಿರೋಧೀ ಭಾವನೆಗೆ ಇದು ಧ್ವನಿ ಮಾತ್ರ. ಇದು ಯಾವುದೇ ಪಾಪ್ಯುಲಿಸ್ಟ್ ಸಿನೆಮಾ ಮಾಡುವ ಜನಪ್ರಿಯ ಗಿಮಿಕ್ಕುಗಳು ಅಷ್ಟೇ...

  ReplyDelete
 9. ಸಿನಿಮಾ ನೋಡಿದೆ. ಚೆನ್ನಾಗಿದೆ ಅನಿಸಿತು. ಈ ಶೈಲಿಯ ಹೆಚ್ಚಿನ ಸಿನಿಮಾಗಳ೦ತೆ ಇತ್ತು. ಆರ೦ಭದಲ್ಲಿ ನಾಯಕನ ಜೀವನಶೈಲಿಯನ್ನು ನಿರ್ದೇಶಕ ತೋರಿಸಿದ್ದಾನೆ. ವಾರಾ೦ತ್ಯದ ಸಾಹಸ, ಮೋಜು ಇತ್ಯಾದಿ. ನಾಯಕನ ಅವಸರ ಅವಸರದ ಮನೋಭಾವವನ್ನು ಸೈಕಲ್ ಮುಗ್ಗರಿಸುವುದು, ಕಡಿದಾದ ಕೊರಕಲಲ್ಲಿ ಓಡುವುದು ಮು೦ತಾದವುಗಳಲ್ಲಿ ತೋರಿಸಿದ್ದಾರೆ. ಬ೦ಡೆಯೆಡೆ ಸಿಲುಕಿದಾಗಿನ ೧೨೭ ಘ೦ಟೆಗಳನ್ನು, ಆತನ ಪರಿಸ್ಥಿತಿಯನ್ನು ತೋರಿಸಲು ಬಳಸಿದ ಸಮಯ ಕಡಿಮೆ ಎ೦ದು ನನ್ನ ಅನಿಸಿಕೆ. ಆದರೂ ತೋರಿಸಿರುವುದು ತೀವ್ರವಾಗಿಯೇ ಇದೆ. ಅದರಲ್ಲೂ ರೇಡಿಯೋ ಕಾರ್ಯಕ್ರಮದ ಅಭಿವ್ಯಕ್ತಿ ಮೆಚ್ಚುವ೦ತಹದ್ದು. ಹತ್ತಾರು "ಪರ"ಭಾಷಾ ಡಿವಿಡಿಗಳನ್ನು ನೋಡಿ ಇಲ್ಲಿ ಇಳಿಸುವವರು ಒ೦ದಷ್ಟು ಇ೦ತಹ ಸಿನಿಮಾಗಳನ್ನು ನೋಡಬಾರದೇ :-)

  ReplyDelete
 10. ನಿಮ್ಮ ಕೊಡಂಜೆ ಅನುಭವವು ‘127 HOURS' ಸಿನೇಮಾದ ಅನುಭವಕ್ಕೆ ಭಾರೀ ದೂರದ್ದೇನೂ ಅಲ್ಲ ಎಂಬ ಭಾವನೆಯನ್ನು ನಾನು ಸಮರ್ಥಿಸುವೆ. ನಿಮ್ಮ ಅನುಭವದ ಉಪಮೇಯ ತು೦ಬಾ ಹಿಡಿಸಿತು. ಧನ್ಯವಾದಗಳು.

  ReplyDelete