ಬಳ್ಳಾರಿಯಲ್ಲಿ ನಾನು ಆರನೇ ತರಗತಿಯಲ್ಲಿದ್ದಾಗಿನ (೧೯೬೨-೬೩) ಕಥೆ. ಅಲ್ಲಿ ಪೂರ್ಣಾವಧಿ ಎನ್.ಸಿಸಿ ಅಧಿಕಾರಿಯಾಗಿದ್ದ ತಂದೆಗೆ ಸಂಜೆಯ ಕಾಫಿ ಒಯ್ಯಲು ದೂತ ಮೊಯ್ನುದ್ದೀನ್ ಸೈಕಲ್ ಏರಿ ಮನೆಗೆ ಬರುತ್ತಿದ್ದ. ತಾಯಿ ಬಿಸಿ ಕಾಫಿ ಫ್ಲಾಸ್ಕಿಗೆ ತುಂಬಿ ಕೊಡುವ ಅಂತರದಲ್ಲಿ ನನಗೆ ಮೊಯ್ನುದ್ದೀನ್ ಸೈಕಲ್ ಗುರು. ಮುಂದೆ ಕೌಲ್ ಬಜಾರಿನ ಗಿರಣಿಗೆ ಅಕ್ಕಿ, ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇ ಬೇಕಾಗುತ್ತಿತ್ತು. ಅಕ್ಕಿ, ಗೋಧಿ ಚೀಲವನ್ನು ಹ್ಯಾಂಡಲಿಗೆ ತೂಗು ಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕಾಫ್ ಆದವನಿಗೆ ಗಿರಣಿಯೆದುರಿನ ಮೋಟು ಜಗಲಿ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ ಲ್ಯಾಂಡು!
ಬಳ್ಳಾರಿಯಲ್ಲಿ ನಿತ್ಯ ನಾನು ಕಂಟೋನ್ಮೆಂಟಿನಿಂದ ರೈಲ್ವೇ ಹಳಿಯ ಅಂಚಿನ ಸವಕಲು ಜಾಡಿನಲ್ಲಿ ನಡೆದು ಕೋಟೆಯೊಳಗಿನ ಸಂತ ಜಾನ್ ಪ್ರೌಢ ಶಾಲೆಗೆ ಹೋಗುತ್ತಿದ್ದೆ. ಆಗ ರೈಲ್ವೇ ದಿಬ್ಬಕ್ಕೆ ಹತ್ತಿಳಿಯುವ ಜಾಡು, ಪ್ರತಿ ಕಿರು ಸೇತುವೆ, ಹಳಿದಾಟುವ ಹೆಜ್ಜೆಗಳಲ್ಲೆಲ್ಲಾ ನಾನು ಸೈಕಲ್ ಏರಿ ಬಂದರೆ ನಿಭಾಯಿಸುವ ಕನಸನ್ನೇ ಕಾಣುತ್ತಿದ್ದೆ. ನಾನು ಏಳನೇ ಕ್ಲಾಸಿಗೆ ಬಂದಾಗ ನನ್ನದೇ ಶಾಲಾ ಸಂಗಾತಿಗಳಾದ ವಿಲ್ಸನ್, ಜಾಯ್ಸನ್ (ಅವಳಿ ಸೋದರರು) ನಮ್ಮ ಪಕ್ಕದ ವಠಾರಕ್ಕೆ ಬಂದರು. ಅವರು ಸಣ್ಣಾಳುಗಳೇ ಆದರೂ ಅವರಪ್ಪ ಅವರಿಗೆ ಶಾಲೆಗೆ ಹೋಗಿಬರಲು ಒಂದು ದೊಡ್ಡ ಸೈಕಲ್ಲನ್ನೇ ಕೊಟ್ಟಿದ್ದರು (ಅಂದು ನನ್ನ ಲೆಕ್ಕಕ್ಕೆ ಅವರು ಭಾರೀ ಶ್ರೀಮಂತರೇ ಸರಿ!). ನಿತ್ಯ ಡಬ್ಬಲ್ ರೈಡಿನಲ್ಲೇ ಶಾಲೆಗೆ ಹೋಗಿ ಬರುತ್ತಿದ್ದ ಆ ಹುಡುಗರಾದರೋ ಸೈಕಲ್ ತುಳಿಯಲು ನಾನು ಮುಂದಾದಾಗ ತ್ರಿಬ್ಬಲ್ ರೈಡ್ ಬೇಡ ಎನ್ನದ ಉದಾರಿಗಳು. ಹಿಂದಿನ ವರ್ಷವಷ್ಟೇ ಕನಸುತ್ತಿದ್ದ ರೈಲ್ವೇ ಒತ್ತಿನ ಜಾಡುಗಳಲ್ಲೇ ಮೂವರ ಸವಾರಿ ಹಾಯುವಾಗ, ಕೋಟೆ ಬಾಗಿಲಿನಿಂದ ಮೆಟ್ಟಿಲ ಸಾಲಿನವರೆಗಿನ ಏರನ್ನು ಮೂವರ ಹೇರಿನೊಡನೆ ಹತ್ತಿಸುವಾಗ ನನ್ನನ್ನು ಬಳ್ಳಾರಿಯ ಉರಿಬಿಸಿಲು ಕಾಡಲಿಲ್ಲ!

ಮೈಸೂರಿನಲ್ಲಿ ನನ್ನ ಐದು ವರ್ಷಗಳ ವಿದ್ಯಾರ್ಥಿ ದೆಸೆಯಲ್ಲಿ ಸೈಕಲ್ ಅನಿವಾರ್ಯ ಸಂಗಾತಿ. ದಖ್ಖಣ ಪರ್ವತಾರೋಹಣ ಸಂಸ್ಥೆಯ ಸದಸ್ಯನಾದ ಮೇಲಂತೂ ಸೈಕಲ್ ಬಿಡುವುದು ಒಂದು ಪ್ರತ್ಯೇಕ ಶ್ರಮವೆಂಬುದೇ ಮರೆತುಹೋಗುವಷ್ಟು ಸದಸ್ಯರೆಲ್ಲರೂ ಸೈಕಲ್ ಬಳಸುತ್ತಿದ್ದೆವು. ಶ್ರೀರಂಗಪಟ್ಟಣದ ಬಳಿಯ ಕರಿಘಟ್ಟದ ಬಂಡೆಗೋ ಪಾಂಡವಪುರದ ಫ್ರೆಂಚ್ ರಾಕ್ಸ್ ಅಥವಾ ಕುಂತಿಬೆಟ್ಟಕ್ಕೋ ನಾವೇ ಬೆಳಗು ಮಾಡುವವರಂತೆ ಸೈಕಲ್ಲಿನಲ್ಲಿ ಹೋಗುತ್ತಿದ್ದೆವು. ಅಲ್ಲಿ ಸೈಕಲ್ಲುಗಳನ್ನು ನೆರಳಿನಲ್ಲಿ ನಿಲ್ಲಿಸಿ, ಇಡೀ ದಿನ ಶಿಲಾರೋಹಣದಲ್ಲಿ ಹೊಸ ಜಾಡುಗಳ ಅನಾವರಣ, ಬಂಡೆ ಇಳಿಯುವಲ್ಲಿ ಹೊಸ ಸಿದ್ಧಿಗಳಿಗೆ ಪರಿಶ್ರಮ ಮಾಡುತ್ತಿದ್ದೆವು. ಎಲ್ಲ ಸೋತಾದಾಗ ಅಂದರೆ ಅಪರಾಹ್ನ ಸುಮಾರು ಎರಡು ಮೂರು ಗಂಟೆಯ ವೇಳೆಗೆ ಬುತ್ತಿಯೂಟದ ನೆನಪಾಗುತ್ತಿತ್ತು. ಮತ್ತೆ ತರಚಲು ಗಾಯ, ಬಳಲಿದ ಸ್ನಾಯುಗಳ ಪರಿವೆಯಿಲ್ಲದವರಂತೆ ಅಷ್ಟೂ ಪರ್ವತಾರೋಹಣ ಸಲಕರಣೆಗಳನ್ನು ನಮ್ಮ ಮೇಲೆ ಹೇರಿಕೊಂಡು ವಾಪಾಸು ಹೊರಡುತ್ತಿದ್ದೆವು. ಆಗ ಅಕಸ್ಮಾತ್ ಯಾವುದಾದರೂ ಒಂದೋ ಎರಡೋ ಸೈಕಲ್ ಪಂಚೇರಾಗಿದ್ದರೆ ಅದರ ಸವಾರನನ್ನು ಡಬ್ಬಲು ಮಾಡುವುದರ ಜೊತೆಗೇ ಹಾಳಾದ ಸೈಕಲ್ಲನ್ನು ಒಂದು ಕೈಯಲ್ಲಿ ನೂಕಿಕೊಂಡು ತಂದದ್ದರ ಲೆಕ್ಕ ತೆಗೆದರೆ ಇಂದು ಕೇಳಿದವರು ನಕ್ಕಾರು, “ ಏ ಎಲ್ಲ ಸುಳ್ಳು!”
ಪರ್ವತಾರೋಹಣ ತರಬೇತಿಯ ಉಪೋತ್ಪನ್ನವಾಗಿ ಗಳಿಸಿದ ಈ ಸೈಕಲ್ ತಾಕತ್ತು ನನ್ನನ್ನು ತುಯ್ಯದ ದಿಕ್ಕುಗಳಿಲ್ಲ. ವಿವರಗಳಿಗೆ ಹೋಗದೇ ಕೆಲವನ್ನು ಮಾತ್ರ ಇಲ್ಲಿ ಸೂಕ್ಷ್ಮವಾಗಿ ನೆನಪಿಸಿಕೊಳ್ಳುತ್ತೇನೆ. ನಾನು ಗಿರೀಶ ಪುತ್ರಾಯ ಅದೊಂದು ಎರಡು ದಿನದ ರಜಾ ಸಮಯ ನೋಡಿಕೊಂಡು ಮೈಸೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದೆವು. ನಂಜನಗೂಡು, ಚಾಮರಾಜನಗರ ಆದಮೇಲೆ ಕ್ಯಾತೇ ದೇವರಗುಡಿ ಸೇರಿದಂತೆ ಕಟ್ಟಾ ಏರು, ದಟ್ಟ ಕಾಡು. ಏಕಮುಖದಲ್ಲಿ ಸುಮಾರು ನೂರಾಹದಿನೆಂಟು ಕಿಮೀ ಪಯಣಿಸಿ ಗಿರಿಧಾಮದಲ್ಲಿ ರಾತ್ರಿ ಕಳೆದು ಮರುದಿನ ಮೈಸೂರಿಗೆ ಮರಳಿದ ವಿವರಗಳನ್ನು ಸ್ವಲ್ಪ ಮಟ್ಟಿಗೆ ನನ್ನ ಚಕ್ರವರ್ತಿಗಳು ಪುಸ್ತಕದಲ್ಲಿ ದಾಖಲಿಸಿದ್ದೇನೆ. ಪೂರ್ವಾಲೋಚನೆ ಅಥವಾ ಯೋಜನೆಯಿಲ್ಲದೆ ಕಿಸೆಯಲ್ಲಿ ನಾಲ್ಕೆಂಟು ಕಾಸಷ್ಟೇ ಇಟ್ಟುಕೊಂಡು ಹೋದ ನಾವು ಏರು ಮತ್ತು ಹಾಳು ದಾರಿಯ ಪಾಡು ಅನುಭವಿಸಿದ್ದು, ಆನೆಗಳ ಭಯದಲ್ಲಿ ಬಳಲಿದ್ದು, (ಆ ಕಾಲದಲ್ಲಿ ಹೋಟೆಲ್ ಎಲ್ಲಾ ಕೇಳಬೇಡಿ) ಪ್ರವಾಸಿ ಬಂಗ್ಲೆ ಒಳಗುಳಿಯಲು ಕಾಸಿಲ್ಲದೆ ಜಗುಲಿಯಲ್ಲಿ ಮುರುಟಿಕೊಂಡದ್ದು, ನಡುರಾತ್ರಿ ಬೆಟ್ಟದ ಚಳಿಗೆ ಕೊರಡುಗಟ್ಟುವ ಹೆದರಿಕೆಯಲ್ಲಿ ಯುಗಯುಗಗಳ ದೂಳು, ಕಮಟು ಹಿಡಿದ ಜಮಖಾನೆಯ ಅಡಿಗೆ ನುಸಿದದ್ದು, ಮರುದಿನ ಸತ್ತ ಚಕ್ರಕ್ಕೆ ಬದಲಿ ವಿಚಾರಿಸಿ “ಸುಮಾರು ಆರು ವರ್ಷದಿಂದ ಬೆಟ್ಟಕ್ಕೆ ಸೈಕಲ್ಲೇ ಬಂದಿಲ್ಲ” ಕೇಳಿದ್ದು, ಬಸ್ಸಿನವರ ಕೃಪೆಯಲ್ಲಿ ಅಂತೂ ಚಾಮರಾಜನಗರಕ್ಕೆ ಬಂದು ಬಿದ್ದದ್ದು, ಪರಿಚಯದವರಲ್ಲಿ ಸಾಲ ಮಾಡಿ ಚಕ್ರ ಬದಲಿಸಿ ಮರಳಿದ್ದು ಯೋಚಿಸುವಾಗ ನಗೆ ಬರುತ್ತದೆ.
ಮಹಾರಾಜ ಕಾಲೇಜಿನಲ್ಲಿ ಬೀಎ ಓದುತ್ತಿದ್ದಾಗ ನನ್ನ ಏಕೈಕ ಆತ್ಮೀಯ ಗೆಳೆಯ ಶಂಕರಲಿಂಗೇಗೌಡ. (ಮುಂದೆ ನಾವು ಎಂಎಯಲ್ಲೂ ಜೊತೆಗಾರರೇ. ಶಂಲಿಂಗೌ ಒಂದೋ ಎರಡೋ ವರ್ಷ ಅಧ್ಯಾಪಕರಾಗಿದ್ದರು. ಮತ್ತೆ ಕೆ.ಎ.ಎಸ್ ಉತ್ತೀರ್ಣನಾಗಿ, ತರಬೇತಾವಧಿಯಲ್ಲಿ ಮಂಗಳೂರಿಗೇ ಬಂದದ್ದು ಮತ್ತೂ ನಾನಿದ್ದ ಅಲೋಶಿಯಸ್ ಹಾಸ್ಟೆಲ್ಲಿನಲ್ಲೆ ಇರುವಂತಾದ್ದು ಹೇಳುತ್ತಾ ಹೋದರೆ ಭಾರೀ ಕಥೆ ಬಿಡಿ. ಸದ್ಯ ರಾಜ್ಯ ಸರಕಾರದಲ್ಲಿ ಸಾರಿಗೆ ಸಚಿವಾಲಯದ ಹಿರಿಯ ಐಎಎಸ್ ಅಧಿಕಾರಿ ಇದೇ ಶಂಲಿಂಗೌ) ಮೂರೂ ವರ್ಷದ ಅಂತಿಮ ಪರೀಕ್ಷೆ ಮುಗಿದ ಮರುದಿನವೇ ನಾವಿಬ್ಬರು ಒಂದು ವಾರದ ಕೊಡಗು ಸೈಕಲ್ ಪ್ರವಾಸ ಹೋದದ್ದು ನನ್ನ ಸೈಕಲ್ ಯಾನದ ದೀರ್ಘ ಮತ್ತು ಸವಿಸ್ಮರಣೆಂii ಅನುಭವ. (ವಿವರಗಳನ್ನು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಲು ಶಂಲಿಂಗೌ ಸಾಯೇಬ್ರನ್ನೇ ಕೇಳಿಕೊಳ್ತೇನೆ) ಆ ಅನುಭವದ ಬಲದಲ್ಲಿ ಪ್ರಥಮ ಎಂಎ ಬೇಸಗೆ ರಜೆಯಲ್ಲಿ ಒಂಟಿಯಾದರೂ ಸೈ, ಕರ್ನಾಟಕ ಸೈಕಲ್ ಯಾತ್ರೆ ನಡೆಸಿಯೇ ಸಿದ್ಧ ಎಂದುಕೊಂಡಿದ್ದೆ. ಡಿವಿಕೆ ಮೂರ್ತಿಯವರು ನನ್ನ ದಾರಿ ತಪ್ಪಿಸಿ (ನನ್ನ ಒಳ್ಳೇದಕ್ಕೇ) ಮುಂಬೈಗೆ ರೈಲು ಟಿಕೇಟು ಮತ್ತು ಮಾರಾಟಕ್ಕೆ ಪುಸ್ತಕದ ಕಟ್ಟೂ ಕೊಟ್ಟದ್ದು ಇಂದು ನನ್ನನ್ನು ಇಲ್ಲಿ ಯಸಸ್ವಿ ಪುಸ್ತಕ ವ್ಯಾಪಾರಿಯಾಗಿ ನಿಲ್ಲಿಸಿದೆ. ಹಾಗಾಗಿ ಇನ್ನು ಹೆಚ್ಚಿನ ಉರುಳುವ ಚಕ್ರಗಳ ಮೇಲಿನದೇ ಕನಸುಗಳನ್ನು, ಸಾಧನೆಗಳನ್ನು ಎಲ್ಲಕ್ಕೂ ಮಿಕ್ಕು ಅದ್ಭುತಗಳನ್ನು ಕನ್ನಡದಲ್ಲಿ ಓದಲು ನೀವು ಅವಶ್ಯ ಎಂ. ಶಿವು ಅವರ ‘ಸೈಕಲ್ವಾಲಾ’ ಪುಸ್ತಕಕ್ಕೇ ಮೊರೆ ಹೋಗಬೇಕು.

ತಂತಿಯ ಮೇಲಿನ ಚೆಲುವೆ ಎಂಬ ಅಧ್ಯಾಯದಲ್ಲಿ ಸರ್ಕಸ್ಸಿನಲ್ಲಿ ಕಾಣಸಿಗುವ ಹಲವು ಸೈಕಲ್ (ಸಾಹಸಗಳು) ಸಾಧ್ಯತೆಗಳನ್ನು ಹೇಳುತ್ತಾ ಶಿವು, ತಮ್ಮ ಬಾಲ್ಯದ ನೆನಪೊಂದನ್ನು ಹೆಕ್ಕುತ್ತಾರೆ. ನಮಗೆಲ್ಲಾ ತಿಳಿದೇ ಇರುವ ಬಿಗಿಸರಿಗೆಯ ಮೇಲಿನ ಸೈಕಲ್ ಸವಾರಿಯ ನಿರೂಪಣೆಯಲ್ಲಿ “ತರುಣಿ ಕೈಲಿದ್ದ ದಂಡವನ್ನು ಹಾಗೂ ಹೀಗೂ ಆಡಿಸುತ್ತಾ ನಿಧಾನವಾಗಿ ಸೈಕಲ್ ಪೆಡಲು ತುಳಿದಳು. ತಂತಿಯ ಮೇಲೆ ಸೈಕಲ್ ಮುಂದೆ ಚಲಿಸಿತು. ಆ ತರುಣಿ ಸೈಕಲ್ ನಡೆಸುತ್ತಿದ್ದ ವೈಖರಿ, ಅವಳ ಫ್ರಾಕಿನ ಅಂಚಿನಲ್ಲಿ ಹೊಳೆಯುತ್ತಿದ್ದ ಕೆಂಪು ಹಸಿರು ನಕ್ಷತ್ರಗಳು, ಅವಳ ಗಾಂಭೀರ್ಯ ಇವನ್ನೆಲ್ಲಾ ತದೇಕಚಿತ್ತದಿಂದ ನೋಡುತ್ತಿದ್ದ ನನಗೆ ಅವಳನ್ನೇ ಮದುವೆಯಾಗಬೇಕೆಂಬ ಅಚಲ ನಿರ್ಧಾರ ಮನಸ್ಸಿನಲ್ಲಿ ಮೂಡಿತು. ಮದುವೆಗೂ ತಂತಿಯ ಮೇಲಿನ ಸವಾರಿಗೂ ಇದ್ದ ನಿಗೂಢ ಸಂಬಂಧ ಆ ಎಳೆಯ ವಯಸ್ಸಿನಲ್ಲಿಯೇ ನನಗೆ ಹೊಳೆದದ್ದು ಕಂಡು ನನಗೆ ಇಂದಿಗೂ ಆಶ್ಚರ್ಯವಾಗುತ್ತದೆ.”
ಹಲವು ರೇಖಾಚಿತ್ರಗಳ ಸಹಿತ ನೂರು ಪುಟಗಳ ಆದರೆ ಕೇವಲ ನಲ್ವತ್ತೇ ರೂಪಾಯಿ ಬೆಲೆಯ ‘ಸೈಕಲ್ವಾಲಾ’ ಹದಿನಾರು ವರ್ಷಗಳ ಮೇಲೂ ಮಾರಾಟಕ್ಕೆ ಲಭ್ಯ ಎನ್ನುವುದನ್ನು ಅದೃಷ್ಟ ಎನ್ನಲೇ ಕನ್ನಡದ ದೌರ್ಭಾಗ್ಯ ಎನ್ನಲೇ! ಆ ಪುಸ್ತಕ ಪ್ರಕಾಶಕರ ಮುಂದುವರಿದ ಒಂದು ಮಾತನ್ನೂ ನಾನಿಲ್ಲಿ ಉಲ್ಲೇಖಿಸಲೇಬೇಕು. “ಮುದ್ರಣ ಕಾಗದದ ಬೆಲೆ ಮತ್ತು ಆಫ್ ಸೆಟ್ ಮುದ್ರಣದ ಪ್ಲೇಟ್ಗಳ ಬೆಲೆ ತಾರಾಮಾರಿ ಏರಿರುವುದರಿಂದ ಅದ್ಭುತ ಜಗತ್ತು ಸರಣಿಯ ಬೆಲೆಯನ್ನು ನಾಲ್ಕು ರೂಪಾಯಿ ಏರಿಸಲೇಬೇಕಾಗಿ ಬಂದುದಕ್ಕೆ ವಿಷಾದಿಸುತ್ತೇವೆ.” ಇಂದು ಪುಸ್ತಕ ಕೊಳ್ಳುಗರ ಕುರಿತು ಕಾಳಜಿಪೂರ್ಣವಾಗಿ ಒಂದು ಸಾಲು ಬರೆಯುವುದಿರಲಿ, ಹೀಗೆಲ್ಲಾ ಯೋಚನೆ ಮಾಡುವುದೂ ಹುಚ್ಚು ಎನ್ನುವ ವಾತಾವರಣ ಬಲಿದಿರುವುದಕ್ಕೇ ನಾನು (ಅತ್ರಿ ಪ್ರಕಾಶನ ಮುಚ್ಚಿದೆ ಮತ್ತು) ಈಚಿನ ಕೆಲವು ಕಾಲದಿಂದ ಗೊಣಗುತ್ತ ಬಂದದ್ದನ್ನು ಇಲ್ಲಿ ಗಟ್ಟಿಯಾಗಿ ಹೇಳುತ್ತೇನೆ “ಕನ್ನಡವೂ ಸಂಸ್ಕೃತದಂತೆ ಸದ್ಯದಲ್ಲೇ ಮೃತಭಾಷೆಯಾಗಲಿದೆ.”
ವಿದ್ಯಾರ್ಥಿ ದೆಸೆಯಿಂದಲೂ ನನ್ನ ಸೈಕಲ್ ಚಾಲನೆ ‘ಟಾಪ್ಗೇರ್’ನಲ್ಲೇ ಇರುತ್ತಿತ್ತು. ಪ್ರತಿ ಮುಂದಿನ ಸವಾರನೂ ನನಗೆ ಹಿಂದಿಕ್ಕಲೇ ಬೇಕಾದ ಸವಾಲು! ಎಂಎ ತರಗತಿಯಲ್ಲಿದ್ದಾಗಲಂತೂ ಮಧ್ಯಾಹ್ನ ಜೊತೆಜೊತೆಗೇ ಮನೆಗೆ ಹೊರಟ ಪ್ರೊಫೆಸರರ ಕಾರಿಗೆ ದಕ್ಕದಂತೆ ನಾನು ಸೈಕಲ್ ಓಡಿಸಿದಾಗ ತರಗತಿಯಲ್ಲಿನ ಮಳ್ಳನಿಗೆ ಸಾರ್ವಜನಿಕದಲ್ಲಿ ಹೀರೋ ಆದ ಸಂತೋಷ! ಮಂಗಳೂರಿನಲ್ಲಿ ಅಂಗಡಿ ತೆರೆದ ಕಾಲದಲ್ಲಿ (೧೯೭೫) ಲಾರಿಯಾಫೀಸಿನಿಂದ ಪಾರ್ಸೆಲ್ ತರಲು ಮತ್ತು ಶಾಲೆ ಕಾಲೇಜುಗಳಿಗೆ ಪುಸ್ತಕಗಳ ಕಟ್ಟು ಕೊಡಲು ನನ್ನ ಅಂಗಡಿ ಸಹಾಯಕರಿಗೆ ಸೈಕಲ್ ಅನಿವಾರ್ಯ ಸಂಗಾತಿ. ಆದರೆ ಉಳಿದಂತೆ ಅದು ನನ್ನ ‘ಮರ್ಸಿಡಿಸ್ ಬೆಂಜ್.’ ಹಂಪನಕಟ್ಟದಿಂದ ಬಲ್ಮಠಕ್ಕೆ ಬರುವಲ್ಲಿ (ಆಗ ಬಲ್ಮಠ ರಸ್ತೆಯಲ್ಲಿ ದ್ವಿಮುಖ ಸಂಚಾರವಿದ್ದರೂ) ನನ್ನ ಆಯ್ಕೆ - ದಮ್ಮು ಕಟ್ಟಿಸುವ ಬಾವುಟಗುಡ್ಡ ರಸ್ತೆ. ಅಲೋಶಿಯಸ್ ಹಾಸ್ಟೆಲ್ಲಿನಿಂದ ಸೈಕಲ್ ಏರಿದವ ಸೀಟಿನಲ್ಲಿ ಕುಳಿತಂತೇ ಕುತ್ತ ಏರಿನ ಕೋರ್ಟುಗುಡ್ಡೆಯನ್ನುತ್ತರಿಸಿ, (ಆಗ ಅತ್ತ ಹಾಯಲು ದಾರಿಯಿರಲಿಲ್ಲವಾದ್ದರಿಂದೆ ಕೋರ್ಟಿನ ಮೆಟ್ಟಿಲಲ್ಲಿ ಮಾತ್ರ ಸೈಕಲ್ಲನ್ನು ಎತ್ತಿ ದಾಟಿಸಿ) ಅಲೋಶಿಯಸ್ ಕಾಲೇಜ್ ಮತ್ತೆ ಜ್ಯೋತಿಯತ್ತಣ ಇಳಿಜಾರಿನಲ್ಲಿ ಮಿಂಚಿನಂತೆ ಸಾಗಿ ಅಂಗಡಿ ಸೇರದಿದ್ದರೆ ಏನೋ ಸೋತ ಭಾವ! ಫರಂಗಿಪೇಟೆಯ ದಿವಾಕರ ಶೆಟ್ಟಿ ಎನ್ನುವ ಹುಡುಗನೊಬ್ಬ ಕೆಲವು ಸಮಯ ನನ್ನಲ್ಲಿ ಕೆಲಸಕ್ಕಿದ್ದ. ರಾತ್ರಿ ನನ್ನಂಗಡಿ ಮುಚ್ಚುವ ವೇಳೆ ಎಂಟು. ದಿವಾಕರನಿಗೆ ಫರಂಗಿಪೇಟೆಗೆ ದಿನದ ಕಡೇ ಬಸ್ಸು ಹಂಪನಕಟ್ಟೆ ಬಿಡುವ ಸಮಯ ಎಂಟೂ ಐದೋ ಹತ್ತೋ ಇತ್ತು. ಆದರೆ ಅಂಗಡಿಗೆ ಬೀಗ ಜಡಿದು, ದಿವಾಕರನನ್ನು ಹಿಂದೆ ಕೂರಿಸಿಕೊಂಡು ನಾನು ಹಂಪನಕಟ್ಟೆಗೆ ಧಾವಿಸುವ ವೇಗಕ್ಕೆ ಆತ ಒಂದು ದಿನವೂ ಬಸ್ಸು ತಪ್ಪಿಸಿಕೊಳ್ಳಲಿಲ್ಲ!
ಜಡಿ ಮಳೆಗಾಲದ ಒಂದು ಆದಿತ್ಯವಾರ ನಾನು ಗೆಳೆಯ ಸಮೀರನನ್ನು ಜೊತೆಮಾಡಿಕೊಂಡು (ಪ್ರತ್ಯೇಕ ಸೈಕಲ್ಲುಗಳಲ್ಲಿ) ಗಣಿಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ಕುದುರೆಮುಖ ಪಟ್ಟಣಕ್ಕೆ ಹೊರಟದ್ದು ನಿಜಕ್ಕೂ ರೋಚಕ ಅನುಭವ. ದೀರ್ಘ ಓಟಕ್ಕೆ ಕೊಡೆಗಿಡೆ ಹಿಡಿಯುವ ಸಂಭವವಿಲ್ಲ. ಮತ್ತೆ ಮಳೆಕೋಟೋ ಮತ್ತೊಂದೋ ನಮ್ಮಲ್ಲಿರಲಿಲ್ಲ. ಗಂಟೆಗಟ್ಟಳೆ ಸ್ನಾನ ಮಾಡಿದರೆ, ಕೆರೆಯಲ್ಲಿ ಈಜುಹೊಡೆದರೆ ಜ್ವರ ಶೀತ ಆಗದ ನಮಗೆ ಮಳೆಯಲ್ಲಿ ನೆನೆಯುವುದು ಒಂದು ಸವಾಲೇ ಆಗಿರಲಿಲ್ಲ. ಮಧ್ಯಾಹ್ನದೊಳಗೇ ಗಂಗಾಮೂಲವೇನೋ ಸರಾಗ ತಲಪಿದ್ದೆವು. ಆದರೆ ಘಟ್ಟದ ಮೇಲಿನ ಶೈತ್ಯ ಮತ್ತು ಭಗವತೀ ಕಾಡೂ ಸೇರಿ ಒತ್ತರಿಸುತ್ತಿದ್ದ ಕಾವಳಕ್ಕೆ ಮಣಿಯಲೇ ಬೇಕಾಯ್ತು. ಅಲ್ಲೇ ರಸ್ತೆ ನಿರ್ಮಾಣ ಕಾಲದ ಒಂದು ಮುರುಕು ಜೋಪಡಿಯೊಳಗೆ ಕುಳಿತು, ಬುತ್ತಿಯೂಟ ಮುಗಿಸಿ, ವಾಪಾಸು ಹೊರಟೆವು. ನಮ್ಮ ಯೋಚನೆ ಭಾರೀ ಸ್ಪಷ್ಟವಿತ್ತು - ಹತ್ತುವುದಷ್ಟೇ ಶ್ರಮ, ಮರಳುವಾಗ ಕಣ್ಣು ಮುಚ್ಚಿ ಕೂತರಾಯ್ತು, ರೊಂಯ್ಯಂತ ಮಂಗಳೂರು! ಆದರೆ ಮರಳಿ ಹೊರಟ ಒಂದೇ ಮಿನಿಟಿನಲ್ಲಿ ಈ ಭ್ರಮಾ ಗುಳ್ಳೆ ಒಡೆದುಹೋಯ್ತು. ಅಲ್ಲಿ ಸೈಕಲ್ ವೇಗಗಳಿಸುವ ಪರಿ ನೋಡಿ ನಾವಿಬ್ಬರೂ ಕಂಗಾಲು. ನಿಯಂತ್ರಣಕ್ಕೆ ಬ್ರೇಕ್ ಹಿಡಿದರೆ ಕುಂಭದ್ರೋಣ ಮಳೆ ಅಪ್ಪಟ ಕೀಲೆಣ್ಣೆಯಂತೆ ಒದಗಿ ನಾವು ಚಂದ್ರಯಾನಕ್ಕೆ ಹೊರಟ ರಾಕೆಟ್ಟಿನಂತೆ ಈಗಲೋ ಇನ್ನೊಂದು ಕ್ಷಣದಲ್ಲೋ ‘ವಿಮೋಚನಾವೇಗ’ (escape velocity) ಮುಟ್ಟುವ ಭಯ ಬಂತು. ಪಾಪಪುಣ್ಯಗಳ ಅಲೌಕಿಕ ಶಕ್ತಿಯಲ್ಲಿ ನನಗೆ (ಈ ವಿಚಾರದಲ್ಲಿ ಸಮೀರ ನನ್ನ ಜೊತೆಯಲ್ಲಿಲ್ಲ!) ನಂಬಿಕೆಯಿಲ್ಲದಿದ್ದರೂ ನಮ್ಮನೆಯ ಏಕೈಕ ಪುಣ್ಯವಂತೆ ಅಮ್ಮನ ಪೂಜೆ ವ್ರತಾದಿಗಳೇ ನಮ್ಮನ್ನು ಅಂದು ಉಳಿಸಿರಬೇಕು. ಹೇಗೋ ಒಮ್ಮೆಗೆ ಸೈಕಲ್ಲನ್ನು ನಿಲ್ಲಿಸಿ ಇಳಿದಾಗ ನಿಜಕ್ಕೂ ‘ನೀರೊಳಗಿರ್ದೂ ಬೆಮರ್ದನ್’ ಆಗಿದ್ದೆವು. ಮತ್ತೆ ಹತ್ತಿದ್ದಕ್ಕಿಂತ ನಿಧಾನವಾಗಿ, ಒಂದೆರಡು ಬಾರಿ ಬ್ರೇಕ್ ಶೂ ಒತ್ತಡ ತಡೆಯದೆ ಕಡ್ಡಿಗೆ ಸಿಕ್ಕಿ ರಟ್ಟಿಹೋದದ್ದನ್ನು ಹುಡುಕಿ, ಮರುಸಂಧಾನಗೊಳಿಸಿ ಮಾಳ ಗಡಿ ತಲಪಬೇಕಾದರೆ ಸಾಕೋ ಸಾಕು.
ಸೈಕಲ್ ಹುಚ್ಚು ಹೆಚ್ಚಾದ ಕಾಲದಲ್ಲೊಮ್ಮೆ ಸಾಂಪ್ರದಾಯಿಕ ಸೈಕಲ್ಲನ್ನು ಅಂಗಡಿ ಹುಡುಗನಿಗೇ ಮೀಸಲಿಟ್ಟು ‘ಧನಿಯ ಘನತೆಗೆ’ ತಕ್ಕಂತೆ, ಇದೇ ಜ್ಯೋತಿ ಸೈಕಲ್ ಮಾರ್ಟಿನಿಂದ ಐದು ಗೇರಿನ ಸೈಕಲ್ಲೊಂದನ್ನು ಖರೀದಿಸಿದ್ದೆ. ಆದರೆ ವ್ಯಾಪಾರಕ್ಕಾಗಿ ಬ್ಯಾಂಕ್ ಸಾಲಗಾರನಾಗಿದ್ದ ನನಗೆ ಆ ದಿನಗಳಲ್ಲಿ ಅದರ ನ್ಯಾಯಬೆಲೆಯೇ ಆದ ಸಾವಿರದಿನ್ನೂರು ರೂಪಾಯಿ ಭಾರೀ ಹೊರೆ ಎಂದೆನ್ನಿಸಿ, ಸೋದರ ಮಾವ ರಾಮನಾಥರಾಯರಿಗೆ ಸ್ವಲ್ಪ ಪೂಸಿ ಹೊಡೆದು ಮಾರಿಬಿಟ್ಟೆ! ಇಷ್ಟೆಲ್ಲ ಆದರೂ ನನಗೆಂದೂ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮಾತ್ರ ಹಿಡಿಸಲೇ ಇಲ್ಲ. ಮುಂದೆ ಕೆಲವು ಕಾಲ ನನ್ನಲ್ಲಿ ಮಾಮೂಲಿ ಸೈಕಲ್ ಬಿಡುವ ಉತ್ಸಾಹ ಇತ್ತಾದರೂ ಮಂಗಳೂರಿನ ಬೆವರು ಬಸಿಯುವ ವಾತಾವರಣದಲ್ಲಿ ಅಂಗಡಿಯ ಕಲಾಪ ನಡೆಸಲು ತುಂಬ ತೊಂದರೆಯಾಗುತ್ತಿದ್ದುದರಿಂದ ಸವಾರಿ ಕಡಿಮೆ ಮಾಡಿದೆ. ಅಂಗಡಿಯ ವಹಿವಾಟು ಹೆಚ್ಚಿದಂತೆ ಪುಸ್ತಕ ಕಟ್ಟುಗಳ ಓಡಾಟಕ್ಕೂ ಹೊರಗಿನ ವ್ಯವಸ್ಥೆಗಳನ್ನೇ ನೆಚ್ಚ ಬೇಕಾದ್ದರಿಂದ, ಇದ್ದ ಸೈಕಲ್ ಕೇವಲ ಸಹಾಯಕನ ಖಾಸಗಿ ವಾಹನವಾಯ್ತು. ಮತ್ತೂ ಮುಂದುವರಿದ ದಿನಗಳಲ್ಲಿ ಸಹಾಯಕರುಗಳಿಗೂ ಅದರ ಖಾಯಸ್ಸಿಲ್ಲ ಎಂದು ಕಂಡಾಗ ಕಾಲವೂ ಹಳಸಿತ್ತು; ಗುಜರಿಗೆ ಹಾಕಿ ಕೈತೊಳೆದುಕೊಂಡೆ.
ನನ್ನ ತಂದೆ ತಾರುಣ್ಯದಲ್ಲಿ, ಎನ್.ಸಿ.ಸಿ ಅಧಿಕಾರದ ಬಲದಲ್ಲಿ ಒದಗಿದ್ದ ಅಂಬಾಸಿಡರ್ ಕಾರೇನು ತ್ರೀ ಟನ್ನರ್ ಲಾರಿಯನ್ನೂ ಸರಾಗ ಓಡಿಸಿದವರು. ಆದರೆ ಮುಂದೆ ಸಾಮಾಜಿಕ ನಿರೀಕ್ಷೆಯಲ್ಲೂ ಆರ್ಥಿಕವಾಗಿಯೂ ಕಾರೇನು, ಕನಿಷ್ಠ ಬೈಕೋ ಸ್ಕೂಟರ್ರೋ ಇಟ್ಟುಕೊಳ್ಳಬಹುದಾಗಿದ್ದರೂ ಸ್ವಂತ ವಾಹನವಾಗಿ ಸಂತೋಷದಲ್ಲೇ ಸೈಕಲ್ಲನ್ನು ನೆಚ್ಚಿದ್ದರು. ಎಪ್ಪತ್ತೆಂಟರ ಹರಯದ ಸುಮಾರಿಗೆ, ದೇಹ ಮಾಲುವಂತಾದಾಗ, ತನ್ನ ಪ್ರಾಯದ ದೋಷದಲ್ಲಿ ಇತರರಿಗೆ ತೊಂದರೆಯಾಗಬಾರದೆಂಬ ಎಚ್ಚರದಲ್ಲಿ ಸೈಕಲ್ ಬಿಟ್ಟರು. (ಅದುವರೆಗೆ ರಿಪೇರಿಗೆ ಒದಗಿದ್ದ ಅಂಗಡಿಯವನಿಗೇ ಅದನ್ನು ದಾನ ಮಾಡಿದರು) ಚಿಕ್ಕಪ್ಪ ಈಶ್ವರನೂ ಅಷ್ಟೇ; ಕೊನೆಗಾಲದವರೆಗೂ ಫ್ಯಾಂಟಮನಿಗೆ ಹೀರೋ (ಕುದುರೆಯ ಹೆಸರು) ಇದ್ದಂತೆ ತನಗೆ ಸೈಕಲ್ಲು ಎಂದುಳಿಸಿಕೊಂಡವನು.

(ಮುಗಿಯಿತು)
[ನನ್ನ ಸೈಕಲ್ಲಿನ ಬಾಗು ಬಳುಕಿನ ಇಷ್ಟುದ್ದಕ್ಕೂ ಅನುಸರಿಸಿದ ನಿಮಗಿದು ಅಜೀರ್ಣವಾದರೆ ದಯವಿಟ್ಟು ಹೇಳಿ. ನಿಮ್ಮ ಕಡತವೇನಾದರೂ ಇದ್ದರೆ ದಯವಿಟ್ಟು ಬಿಡಿಸಿ. ಎರಡಕ್ಕೂ ಆಸರೆ ಕೆಳಗಿನ ಪ್ರತಿಕ್ರಿಯಾ ಅಂಕಣ ಎನ್ನುವುದನ್ನು ಮರೆಯಬೇಡಿ]
ಸೈಕಲ್ ಗೀಳಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು "ಗೇರು ಸೈಕಲ್ ಭಟ್ಟರು" ಎಂದೇ ಬಲ್ಲವರಿಗೆ ಪರಿಚಿತರಾದ ಆಪ್ತಮಿತ್ರ ಆರ್. ಜಿ. ಭಟ್ ಬೆಂಗಳೂರಿನಿಂದ ಹದಿನೈದನೇ ತಾರೀಕು ಹೊರಟು ಕರಾರುವಾಕ್ಕಾಗಿ ಪೆಡಲಿಸುತ್ತಾ ಏಳುದಿನಗಳ ಅವಧಿಯಲ್ಲಿ ಏಳುನೂರ ಹತ್ತು ಕಿ. ಮೀ. ದೂರದ ಭಾರತ ಭೂಶಿರ ಕನ್ಯಾಕುಮಾರಿಯನ್ನು ನಿನ್ನೆ ಸಾಯಂಕಾಲ ತಲುಪಿದ್ದಾರೆ.
ReplyDeleteದಾರಿಯುದ್ದಕ್ಕೂ ನಮ್ಮ ದೇಶದಲ್ಲಿ ಇನ್ನೂ ಬೇರು ಬಿಟ್ಟಿರುವ ಪೋಲಿಯೋ ಎಂಬ ಪೆಡಂಭೂತವನ್ನು "ನಮ್ಮ ದೇಶದಿಂದಲೇ ಹೊಡೆದೋಡಿಸುವ ಬಗ್ಗೆ " ಸಂದೇಶವನ್ನು ಬೀರಿದ್ದಾರೆ.
ಸಾರ್ಥಕ ಯಾತ್ರೆ ಮುಗಿಸಿದ ಅವರನ್ನು ಅಭಿನಂದಿಸುತ್ತಾ ಇರುವ ಈ ಸಂದರ್ಭದಲ್ಲಿ ತಮ್ಮ ಸೈಕಲ್ ಗಾಥೆಯನ್ನು ಮನಸಾರೆ ಸ್ವಾಗತಿಸುತ್ತಾ ಇದ್ದೇನೆ. ತಮ್ಮ ನೆನಪಿನ ಸೈಕಲ್ ಯಾನದ ವಿವರಗಳು ತಮ್ಮ ಕೀಲಿಮಣೆಯಿಂದ ಇದೇರೀತಿ ಹರಿದುಬರಲಿ! - ಪೆಜತ್ತಾಯ ಎಸ್. ಎಮ್.
ಸವಿ ಸವಿ ನೆನಪುಗಳು---- ಮುಂದುವರಿಯಲಿ.
ReplyDeleteನಿಮ್ಮ ಸೈಕಲ್ ಚಿತ್ರಗಳು ಖುಶಿ ಕೊಟ್ಟಿತು. ನೀವು ಈಗ ಹೇಗಿದ್ದೀರೋ ಆಗ್ಲೂ ಹೀಗೇ ಇದ್ದಿರಿ. ವಾಹ್.....
ReplyDeleteಗುರುಗಳೇ,
ReplyDeleteನಿಮ್ಮ ಹಾಗೂ ಆನಂದರ ರಿಲೇ ಓಟ ಮತ್ತು ನಿಮ್ಮ ಬಿಳಿಗಿರಿ ರಂಗನ ಬೆಟ್ಟ ಸವಾರಿ ಓದಿದ ನಂತರ ನೀವು ನನ್ನಿಂದ ಒಂದು ಕೈ ಮೇಲು ಎಂದು ಒಪ್ಪಿಕೊಳ್ಳುವಂತಾಗಿದೆ.
ನಾನು ದಿನವೊಂದಕ್ಕೆ ನೂರ ಎಂಬತ್ತು ಇನ್ನೂರು ಕಿಮಿ ಗೇರಿರುವ ಸೈಕಲಿನಲ್ಲಿ ಸಾದಿಸಿದ್ದರೂ ಮಾಮೂಲಿ ಸೈಕಲಿನಲ್ಲಿ ಕನಿಷ್ಟ ಇನ್ನೂರ ಮೂವತ್ತರ ನಿಮ್ಮ ರಿಲೇ ಓಟ ಉತ್ತಮ ಸಾಧನೆ. ಗೇರುಗಳು ಯಂತ್ರದ ಉಷ್ಣತೆ ವಿಪರೀತ ಏರುವುದರ ತಡೆಯುತ್ತದೆ. ಬಾಟರಿ ಸಹಾಯಕ ಸವಾರಿಯನ್ನು ಇನ್ನೂ ಆರಾಮದಾಯಕವನ್ನಾಗಿಸುತ್ತದೆ.
ನನ್ನ ಪರದೇಶಿಯಾತ್ರೆಗೆ ಮೊದಲು ನಿತ್ಯ ಸೈಕಲಿನಲ್ಲಿ ಕೆಲಸಕ್ಕೆ ಬರುವ ನನ್ನ ಬಾವನವರ ಸಹಾಯಕರ ಜತೆ ನಾನೂ ಮೈಸೂರಿನಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದೆ. ಆಗ ನನಗೆ ದಿನವೊಂದಕ್ಕೆ ಇಪ್ಪತ್ತು ಕಿಮಿ ಸೈಕಲು ಓಡಿಸಿಯೂ ಅನುಭವ ಇರಲಿಲ್ಲ. ಕೊನೆಯ ಹಂತದಲ್ಲಿ ಕತ್ತಲು ಮತ್ತು ಸುಸ್ತಿಗೆ ಹೆದರಿ ದಾರಿಯಲ್ಲಿ ಬಂದ ಲಾರಿಯನ್ನು ನಿಲ್ಲಿಸಿ ಅದನ್ನೇರಿದ ತಂಡದ ಸದಸ್ಯರಲ್ಲಿ ನಾನೂ ಒಬ್ಬನಾಗಿದ್ದೆ. ವಾಪಾಸು ಬರುವಾಗ ಯಳಂದೂರು ರಸ್ತೆಯಲ್ಲಿ ಮದ್ಯಾಹ್ನ ಊಟದ ನಂತರ ಬೆಟ್ಟದಿಂದ ಹೊರಟರೂ ರಾತ್ರಿ ಮೈಸೂರಿನಲ್ಲಿದ್ದೆವು.
ವಾರದೊಳಗೆ ಪೆಡಲಿಸುತ್ತಾ ಟ್ರೈಕಿನಲ್ಲಿ ಬರುತ್ತೇನೆ. ಅಪರಂಜಿ ಶಿವು ಸೈಕಲ್ ಕಥೆಗಳ ಓದುವ ತವಕದಲ್ಲಿದ್ದೇನೆ.
ಗೋವಿಂದ
ಮಂಗಳೂರಿನ ನನ್ನ ಸೈಕಲ್ನೊಂದಿಗಿನ ತಿರುಗಾಟ ನೆನಪಾಯಿತು...ನಗರದ ಸಂದಿಗೊಂದಿಗಳಲ್ಲಿ ಓಡಾದಿಕೊಂಡಿದ್ದು ನೆನಪಾಯಿತು. ಆಹಾ ಎಂತ ದಿನಗಳು
ReplyDeleteಇದಪ್ಪ ಸೈಕಲ್ ಯಾನ ಅಂದರೆ. ಓದಿ ಸಂತೋಷವಾಯಿತು. ನನ್ನೊಂದಿಗೆ ೨೧ ವರ್ಷದಿಂದ ಇರುವ ಬಿಎಸ್ಎ ಎಸ್ ಎಲ್ ಆರ್ ಸೈಕಲನ್ನು ಅಭಿಮಾನದಿಂದ ಸವರಿದೆ. ಸೈಕಲ್ ತುಳಿಯುವುದು ಮಹದಾನಂದ. ಕಾರ್ ಸ್ಕೂಟರ್ ಚಾಲನೆಯಿಂದ ಸಿಗದ ಸಂತೋಷ ಸೈಕಲ್ ಸವಾರಿಯಿಂದ ಸಿಗುತ್ತದೆ ನನಗೆ. ಸೈಕಲ್ ಗೆ ಜೈ.
ReplyDeletePriya Ashokavardhanare,
ReplyDeleteAbbabba! Yenenu sahasa madidirappa neevu. Namage busnalli hogi baroke kashta aguthe. Neevu cycle/bike nalli hogi bandiddeera andre namboke agtha illa. Great. Tamma yella anubhavagalannu heege bareetha iri. Namaskara.
Udupa
ಸೈಕಲ್ಲ್ ಪ್ರಯಾಣದ ಗಮ್ಮತ್ತು ನಾನು ಅನುಭವಿಸಿದವನಲ್ಲ.ನಮ್ಮ ಚಿಕ್ಕ ವಯಸಿನಲ್ಲಿ ಬೀಡಿ ಸೇದುವುದು ಸೈಕಲ್ಲು ಮೆಟ್ಟುವುದು ಪೋಲಿ ಹುಡುಗರ ಕೆಲಸ ಎ೦ಬ ಭಾವನೆ ಹಿರಿಯವರಲ್ಲಿ ಇತ್ತು ಹಾಗಾಗಿ ಆ ಅನುಭವದಿ೦ದ ನಾನು ವ೦ಚಿತ.ಮು೦ದೆ ಸ್ಕೂಟರು ಕೊ೦ಡಾಗ ಸೈಕಲು ಕಲಿತಿದ್ದರೆ ಒಳಿತಿತ್ತೇನೋ ಅನ್ನಿಸಿದ್ದು ಸತ್ಯ ಅ೦ತೂ ಸ್ಕೂಟರೆ ನನ್ನ ಪ್ರವಾಸ ಸ೦ಗಾತಿಯಾಗಿ ಒ೦ದು ಹತ್ತು ವರ್ಷ ಮತ್ತೆ ಇಪ್ಪತ್ತು ವರ್ಷ ಬೈಕಿನಲ್ಲಿ ಸುತ್ತಟ ಈಗ ಎಲ್ಲಾ ಬಿಟ್ಟು ಕಾರಿಗೆ ಶರಣು.ಅ೦ತೂ ನಿಮ್ಮ ಸೈಕಲು ಪಯಣದ ಕಥನ ಓದಿದಾಗ ನಾನೇನೊ ಕಳಕೊ೦ಡೆ ಎ೦ಬ ಭಾವ ಬ೦ದದ್ದು ಸುಳ್ಳಲ್ಲ.ಉತ್ತಮ ಕಥನಕ್ಕೆ ಒ೦ದು ಧನ್ಯವಾದ.
ReplyDeleteThank you for mentioning about my book Cyclewallah.
ReplyDeleteYour monograph makes absorbing reading.
Congratulations.
Aparanji Shivu
ಪ್ರೀಯರೆ,
ReplyDeleteನಾನು ಮಂಗಳೂರಿನಲ್ಲಿದ್ದಾಗಲೂ ಬಳ್ಳಾರಿ ಮತ್ತಿತರೆಡೆಗಳ ನಿಮ್ಮ ಸೈಕಲ್ ಸಾಹಸಗಾಥೆ ಗೊತ್ತಿರಲಿಲ್ಲ.
ಓದಿ ತುಂಬ ಸಂತೋಷವಾಯಿತು. ಬೆಂದರೆ ತೀರ್ಥಕ್ಕೊ ನೆಲ್ಲಿತೀರ್ಥಕ್ಕೋ ಆರೋಹಣದ ಗೆಳೆಯರು ಮತ್ತು ಅಲೋಶಿಯಸ್ ಕಾಲೇಜು ಹುಡುಗರ ಜೊತೆ ನಿಮ್ಮೊಡನೆ ಸೈಕಲ್ ನಲ್ಲಿ ಹೋಗಿದ್ದ ನೆನಪಿದೆ.
ಅಡ್ಯಾರು ಸಮೀಪ ರೈಲಿನ ಕೆಳಸೇತುವೆ ಹಾಯುವಾಗ ವಿದ್ಯಾರ್ಥಿಯೊಬ್ಬ ಎತ್ತರದ ರೈಲು ಸೇತುವೆ ತಲೆಗೆ ತಾಗಬಹುದು!? ಎಂದು 'ತರೆ, ತರೆ!' ಎಂದು ಎಚ್ಚರಿಸಿದ್ದ! ಅದು ಮಂಗಳೂರಿಗೆ ಬಂದಾಗೆಲ್ಲ ಆ ಸೇತುವೆ ದಾಟುವಾಗೆಲ್ಲ ನೆನಪಾಗುತ್ತದೆ!. ಬಸ್ಸಿನಲ್ಲಿ ಕುಳಿತಿದ್ದರೂ ಸೇತುವೆಗೆ ತಲೆತಾಗದಂತೆ ತಗ್ಗಿಸುವಂತಾಗುತ್ತದೆ!
ಸೈಕಲ್ ಯಾನ ಕುರಿತ ನನ್ನ ಚಿಂತನ(ಮೈಸೂರು ಆಕಾಶವಾಣಿ)ದ ಕೊಂಡಿ ಕಳುಹಿಸುವೆ.
Dear Ashok,
ReplyDeleteYour "cycle experiences" made me nostalgic.As usual, your style of narration keeps us engeged till the end.Thank you. MLSAMAGA
ಪ್ರಿಯ
ReplyDeleteಅಶೋಕವರ್ಧನ ಅವರೆ
ನಿಮ್ಮ ಎಲ್ಲ ಬರೆಹಗಳನ್ನ
ಓದುತ್ತಿದ್ದೇನೆ. ಒಂದು ಬಗೆಯ ಆಸಕ್ತಿದಾಯಕ ಬರವಣಿಗೆ
ನಿಮ್ಮದು. ನನಗೆ ಒಂದು ವಿಚಾರ ಮಾತ್ರ ಅರ್ಥವಾಗಲಿಲ್ಲ
ಎಲ್ಲವು ಕೊಂಕಿನ ರೀತಿ ಇರುತ್ತದೆ ಏಕೆ? ನಿಮ್ಮ ಬರೆವಣಿಗೆಯ ರೀತಿಯೇ ಅದಿರಬಹುದೇ?
ಏನಾದರಾಗಲಿ ನಿಮ್ಮ ವಿಚಾರ ಮಂಡನೆ ಚೆನ್ನಾಗಿರುತ್ತದೆ. ಭಾಷೆಯ ಮೊನಚನ್ನು ಕಡಿಮೆ ಮಾಡಿಕೊಂಡು
ಖುಷಿಯಿಂದ ಹೇಳಿದರೆ ಅಪ್ಯಾಯ ಎನಿಸುತ್ತದೆ ಎಂಬುದು ನನ್ನ ಅಭಿಪ್ರಾಯ.
ಭೈರೇ ಗೌಡ
ಪ್ರಿಯ ಭೈರೇ ಗೌಡರೇ
ReplyDeleteಇತರರಿಗೆ ಪ್ರೇರಣೆ ಕೊಡುವಂತೆ ನನ್ನನುಭವವನ್ನು ಹಂಚಿಕೊಳ್ಳಬೇಕೆನ್ನುವುದೇ ನನ್ನ ಸಾರ್ವಜನಿಕ ಬರಹಗಳ (ಸದ್ಯ ಬ್ಲಾಗ್ ಬರಹಗಳು) ಸಾಮಾನ್ಯ ಲಕ್ಷ್ಯ. ಆದರೆ ಮುಖಾಮುಖಿಯಾಗುವ ಅವ್ಯವಸ್ಥೆಗಳನ್ನು ಕಾಣದಿರುವಷ್ಟು ಮುಗ್ಧತೆ ನನ್ನಲ್ಲಿಲ್ಲ ಮತ್ತೆ ಕುಟುಕದೇ ಮುಂದುವರಿಯುವುದು ಹೇಗೆ? ‘ಪರನಿಂದೆ ಆತ್ಮ ಶ್ಲಾಘನೆ’ ಎಲ್ಲರಲ್ಲೂ ಇರುವ ದೌರ್ಬಲ್ಯ. ನಾನು ಇಲ್ಲ ಇಲ್ಲ ಎಂದರೂ ಗೊತ್ತಿದೆ, ಒಂದು ಮಿತಿಯಲ್ಲಿ ನನ್ನದೂ ಅದೇ. ಆದರೆ ಬರಿದೇ ಬಾಯಿಚಪಲ ಮೀರಿ ಕೃತಿಯಲ್ಲೂ ತೊಡಗಿದ ಪ್ರಸಂಗಗಳನ್ನಷ್ಟೇ ನಾನು ಅಭಿವ್ಯಕ್ತಿಸುವುದರಿಂದ ನೀವು ಹೇಳಿದ, ನನಗೂ ಗೊತ್ತಿರುವ ಹುಳಿ-ಸಿಹಿ ಅನಿವಾರ್ಯ. (ಅನುಭವಿಸುವ ಕಾಲದಲ್ಲಿ ನಾವೇ ಮಾತಾಡಿಕೊಳ್ಳುವುದುಂಟು - ಛೆ, ಈ ಕೊಕ್ಕೆ ಬಿಟ್ಟು ಅನುಭವಿಸಲು ಆಗುತ್ತಿಲ್ಲವಲ್ಲಾಂತ) ನನ್ನ ನೇರ ಪರಿಚಿತ ವರ್ಗಕ್ಕೆಲ್ಲಾ ಗೊತ್ತಿದೆ - ನನ್ನಲ್ಲಿ ಸಾದಾ ಬರಹಗಳಿಲ್ಲ, ಇರುವುದೆಲ್ಲಾ ‘ಜಗಳಗಂಟ ಕಡತ’ ಮಾತ್ರ. ಆದರೆ ಒಂದು ಸ್ಪಷ್ಟ, ಇಷ್ಟಾಗಿಯೂ ಹೊಸತನ್ನು ಅನುಭವಿಸದ ಸಿನಿಕತನದ ಶಿಖರಕ್ಕೆ ನಾನಿನ್ನೂ ಮುಟ್ಟಿಲ್ಲ! ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಕೃತಜ್ಞ.
ಅಶೋಕವರ್ಧನ
ಪ್ರೀತಿಯ ಶೈಲಿ ವರ್ಜನರೆ,
ReplyDeleteನಿಮ್ಮ ಮುಕ್ತ ಮನದ ನಿಲುವಿಗೆ ಅಭಿನಂದನೆಗಳು.
ನಿಮ್ಮ ವರ್ಜನ ಅಭಿಯಾನ ಮುಂದುವರೆಯಲಿ.
ಪ್ರಿಯ ಅಶೋಕವರ್ಧನರಿಗೆ, ವಂದೇಮಾತರಮ್.
ReplyDeleteನನ್ನ ಹತ್ತಿರದ ಬಳಗದವರೊಬ್ಬರು ತನ್ನ ಕೋకోటేశ్వರದ ಮಿತ್ರನ ಅಂಗಡಿಯಿಂದ ಸೈಕಲೊಂದನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನು ಭದ್ರಗಿರಿಯಲ್ಲಿ ಒಬ್ಬರಿಗೆ ೩೫ ರೂಪಾಯಿಗೆ ಮಾರಿ ತನ್ನ ಅವಸರವನ್ನು ತೀರಿಸಿಕೊಂಡಿದ್ದರು. ನಿಮ್ಮಪ್ಪ ನೊಡನೆ "ಏನ್ರೀ ನಿಮ್ಮ ಮಗ ಕಾರಿನಲ್ಲಿ ತಿರುಗುತ್ತಾನೆ, ನೀವು ಸೈಕಲ್ಲಲ್ಲೇ...." ಎಂದರೆ, ಇವರ ಉತ್ತರ "ನಾನು ಕೊ ಒಪರೇಟಿವ್ ಇನ್ಸ್ಪೆಕ್ಟರರ ಮಗ. ನನಗೆ ಸೈಕಲು ಸಾಕು ನನ್ನ ಮಗ ಪ್ರೊಫೆಸರರ ಮಗ. ಅವನಪ್ಪನ ಸ್ಥಾನಕ್ಕೆ ಸರಿಯಾಗಿ ಅವನು ಕಾರಿನಲ್ಲೇ ತಿರುಗಬೇಕು" ಎನ್ನುತ್ತಿದ್ದರು.
ಮಗ ಕೂಡಾ ಸೈಕಲ್ಲಿನಲ್ಲಿ ಸಾಹಸ ಯಾತ್ರೆಗಾಗಿಯಾದರೂ ತಿರುಗುತ್ತಿರುವುದು కేవల భావనాత్మక మాత్రవల్ల.
ಚಂದ್ರಶೇಖರ ಕಲ್ಕೂರ
ಅಯ್ಯೋ ಅದಾ. ಇಡೀ ದಿನ ಬಂಡೆಯಲ್ಲಿ ಹತಿಳಿದು, ಕಾದು ತಣಿದು ಮಾಡುತ್ತಇದ್ದವರಿಗೆ ಅದೇನೂ ದೊಡ್ಡ ಸಂಗತಿಯಾಗಿರಲಿಲ್ಲ. ಆಗ ಬಹುಶಃ ಅವನು(ಆನಂದವರ್ಧನ) ಎಂಜಿನೀರಿಂಗ್ ಸುರು ಮಾಡಿದ್ದಿರಬೇಕು (ಸುಮಾರು ಷೋಡಶ ಪ್ರಾಯ ಸಂಭೂತ)
ReplyDeleteಅವನ ಭಾಷೆಯಲ್ಲಿ ಹೇಳಬೇಕಾದರೆ ಯೌವನದ ಮದ !
ನಾನು ಸೈಕಲು ಕಲಿತುದು ಗುಡ್ಡಪ್ಪ ಶೆಟ್ಟರ ಮಾರ್ಗದರ್ಶನದಲ್ಲಿ ಪುತ್ತೂರು ಮನೆಯಲ್ಲಿ, ಮರಿಕೆ ದೊಡ್ಡಪ್ಪನ ಸೈಕಲಿನಲ್ಲಿ. ನಂತರ ಬಾಡಿಗೆ ಸೈಕಲ್ ತರಲು ಪ್ರಾರಂಭಿಸಿದೆವು.
ಹಳೆತೆಲ್ಲಾ ನೆನಪಾದವು.
ಶೈಲ
ಪ್ರಿಯ ಅಶೋಕವರ್ಧನರೆ,
ReplyDeleteನಿಮ್ಮ ಸೈಕಲಾಯಣ ಆಪ್ತವಾಗಿ ಬಂದಿದೆ. ಚಿಕ್ಕವನಿದ್ದಾಗ ಗಂಟೆಗೆ ಐದು ಪೈಸೆ ಬಾಡಿಗೆಗೆ ಪುಟಾಣಿ ಸೈಕಲ್ಲು ತೆಗೆದುಕೊಂಡು ಅಭ್ಯಾಸ ಮಾಡುತ್ತಿದ್ದಾಗ ಬಿರಿ ಹಿಡಿಯುವುದು ಮರೆತೇ ಹೋಗಿ ಅಡ್ಡದ ಬೀದಿಯಲ್ಲಿ [ವಿಟ್ಲ ಜೋಷಿಯವರು ವಾಸಿಸುತ್ತಿದ್ದ ಬೀದಿ - ಜನ, ವಾಹನ ಸಂಚಾರವಿಲ್ಲದ್ದರಿoದ ನಮ್ಮ ಸೈಕಲ್ ಅಭ್ಯಾಸಕ್ಕೆ ಹೇಳಿ ಮಾಡಿಸಿದಂತಿದ್ದ ಟ್ರಯಲ್ ಟ್ರಾಕ್!] ನಡೆದುಕೊಂಡು ಬರುತ್ತಿದ್ದ ಅಜ್ಜಿಯೊಬ್ಬರ ಕಾಲುಗಳೆಡೆಯಲ್ಲಿ ಸೈಕಲ್ ಸಮೇತ ಜಾಮ್ ಆದದ್ದು ಮತ್ತು ಆ ಅಜ್ಜಿ 'ಇಂಚ ಸೈಕಲ್ ಬುಡುoಡ ಎಂಚ ಮಗಾ!' ಎಂದು ಬೊಚ್ಚು ಬಾಯಲ್ಲಿ ಗದರಿಸಿದ್ದೂ ನೆನಪಾಗಿ ಖುಷಿಯಾಯಿತು. ನಮಸ್ಕಾರ.
ಸೈಕಲ್ ಪ್ರಿಯರಿಗೆ ಒಂದು ಸಂತೋಷದ ಸುದ್ದಿ.
ReplyDeleteಕರಾಚಿ/ಲಾಹೋರ್ ಗಳಿಂದ ಪ್ರಕಟವಾಗುವ ದಿ ನ್ಯೂಸ್ ಇಂದಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ೀ ಸುದ್ದಿ ನಿಮ್ಮ ಸೈಕಲ್ ಯಾನದ ಸಂತೋಷವನ್ನು ಮುಮ್ಮಡಿಸಬಹುದು!!!
http://www.jang.com.pk/thenews/dec2010-weekly/nos-26-12-2010/she.htm#1
ಓಡಿಸಿ ! ಓಡಿಸಿ !
ಸೈಕಲ್ ಓಡಿಸಿ!!
ಚಳಿಯನ್ನು ಓಡಿಸಿ!!!
http://www.jang.com.pk/thenews/dec2010-weekly/nos-26-12-2010/she.htm#1
ReplyDeleteಈ ತಾಣವನ್ನು ವೀಕ್ಷಿಸಿ!
ಪ್ರೀಯರೆ,
ReplyDeleteಸೈಕಲ್ ಸವಾರರ ಹಕುಗಳ ಪ್ರತಿಪಾದನೆಗೆ ಪ್ರತಿ ತಿಂಗಳು ನಡೆಸುವ ಸೈಕಲ್ ಯಾನ ಕುರಿತ ಕ್ರಿಟಿಕಲ್ ಮಾಸ್ ತಾಣವನ್ನು ಎಲ್ಲ ಸೈಕಲ್ ಪ್ರಿಯರು ವೀಕ್ಷಿಸಬೇಕಾಗಿ ಕೋರುತ್ತೇನೆ.
http://critical-mass.info/
ಪಂಡಿತಾರಾಧ್ಯ
ನಿಮ್ಮ ಗೇರಿಲ್ಲದ ಸೈಕಲ್ ಕಾರುಬಾರುಗಳನ್ನು ಓದಿದರೆ ನಾವು ಇಪ್ಪತ್ತೊಂದು ಗೇರಿನ ಮೌಂಟೆನ್ ಬೈಕು ಹಿಡಿದುಕೊಂಡು ಮಾಡಿದ್ದು ಸೊನ್ನೆ ಅನ್ನಿಸುತ್ತೆ. Highly inspiring. ಸೈಕಲ್ ಮೇಲೆ ಮಾಡಿದ ಇನ್ನೂ ಏನಾದರೂ ಕಸರತ್ತುಗಳಿದ್ದರೆ ದಯವಿಟ್ಟು ಬರೆಯಿರಿ atleast ಅವನ್ನೆಲ್ಲಾ ಕೈಗೊಳ್ಳುವ ಕನಸಾದರೂ ಕಾಣುತ್ತೇವೆ.
ReplyDeleteಮಾನ್ಯ ಹಿರಿಯರಾದ ಅಶೋಕ ವರ್ಧನರವರಿಗೆ,
ReplyDeleteಸ್ಫೂರ್ತಿದಾಯಕವಾದ ನಿಮ್ಮ ಸೈಕಲ್ ಯಾನ ನೋಡಿ ಸಂತೋಷಪಟ್ಟೆವು.
ನಿಮಗೆ ಅಭಿನಂದನೆಗಳು
ವಿದ್ಯಾರ್ಥಿಗಳು ಎಂ. ಎ. ಮೂರನೇ ಚತುರ್ಮಾಸ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
ಪ್ರೀತಿಯ ಅಶೋಕಮಾಮ,
ReplyDeleteನಿಮ್ಮ ಸೈಕಲ್ ಸವಾರಿಯ ಕಥೆ ರೋಚಕವಾಗಿದೆ... ಓದಿಸಿಕೊಂಡು ಹೋಯಿತು...
ಅಸ್ತಲ್ಲದಿದ್ದರೂ, ಕಳೆದ ವರ್ಷ ಇದೇ ದಶಂಬರ ತಿಂಗಳಲ್ಲಿ ಮಂಗಳೂರಿನಿಂದ ನಮ್ಮ ನೆರೆಯ ಕಾಸರಗೋಡು ತಾಲೂಕಿನ ಬದಿಯಡ್ಕದ ಪಕ್ಕವಿರುವ ಮಾವ್ವಾರು ಎಂಬ ಹಳ್ಳಿಯಲ್ಲಿರುವ ನನ್ನಜ್ಜನ ಮನೆಗೆ ಸೈಕಲ್ ಏರಿ ೭ ಗಂಟೆಗಳಲ್ಲಿ ತಲುಪಿದ ನೆನಪಾಯಿತು.
ಇನ್ನು ನಿಮ್ಮ ಬಾಲ್ಯದ ಸೈಕಲ್ ಲಂಚಕ್ಕೂ, ಹೆಚ್ಹು ಹಿಂದಿನದಲ್ಲದ ನನ್ನ ಬಾಲ್ಯದ ಸೈಕಲ್ ಲಂಚಗಳಿಗೂ ಇರುವ ಸಾಮ್ಯವನ್ನ ಗಮನಿಸಿ ತುಟಿಯಂಚಿನಲ್ಲಿ ನಗೆಯಾಡಿತು...
ಇನ್ನು ನಮ್ಮ ಜ್ಯೋತಿಷಿ xyz ಭಟ್ಟರ ಶನಿಗ್ರಹಚಾರ ಪಾಠಗಳ ನೆನಪೂ ಆಯಿತು ಮಾತ್ರವಲ್ಲ ಆ ಶನಿ-ಭಟ್ಟರ (ನಾನು ಅವರನ್ನ ಹಾಗೆಯೇ ಉಲ್ಲೇಖಿಸುತ್ತೇನೆ. ಕಾರಣ ಅವರು ಶನಿರಾಯನಿಗೂ ಸಂಶಯ ಬರುವಂತೆ ಆತನ ಪ್ರತಾಪಗಳನ್ನ ಬಣ್ಣಿಸುತ್ತಿದ್ದರು) ಗ್ರಹಚಾರ ಪರೀಕ್ಷಾರ್ಥ ಮಾಡಿದ ಸಣ್ಣ ಪುಟ್ಟ ಕಳ್ಳತನಗಳು (ಸೈಕಲ್ ಬಾಡಿಗೆಗಾಗಿ) ಹಾಗೂ ಮನೆಯವರಿಗೂ ಹೇಳದೆ ಬೇಕಲ ಕೋಟೆಗೆ ಗೆಳೆಯರೊಂದಿಗೆ ಹೋಗಿ ಸಮುದ್ರದ ಮರಳಲ್ಲಿ ಒಂದು ರಾತ್ರಿ ಮಲಗಿ ಹಿಂದಿರುಗಿದ ಅನುಭವಗಳೆಲ್ಲವೂನನಪಾದವು.
ವಂದನೆಗಳೊಂದಿಗೆ,
ವಿನಾಯಕ
ಶಿವಕುಮಾರರ ಸೈಕಲ್ವಾಲ ದಲ್ಲಿ ಬರೆದ ಸೈಕಲ್ ಚರಿತೆ ತುಂಬಾ ಚೆನ್ನಾಗಿದೆ ! ಅದು ಹಾಸ್ಯ ಪುಸ್ತಕ ಅಲ್ಲ. ಅದೊಂದು ಸೈಕಲ್ Treatise!
ReplyDeleteನಾನು ಅದನ್ನು ಸೈಕಲ್ ಬಗೆಗಿನ ವಿಡಂಬನೆ ಮತ್ತು ಹಾಸ್ಯ ಪುಸ್ತಕ ಅಂತ ತಿಳಿದಿದ್ದೆ. ಶಿವರಾಮ್ ಅವರ ಹೆಸರು ನನ್ನನ್ನು ಈ ಭ್ರಮೆಗೆ ಈಡು ಮಾಡಿತು.
ಮನಸ್ಸಿನಲ್ಲೇ ಅವರ ಕ್ಷಮೆ ಬೇಡಿದೆ. Famous names can mislead!
ಪೆಜತ್ತಾಯ
ನಿಮ್ಮ ಕಪ್ಪು ಬಿಳಿ ಫೋಟೋಗಳು ತು೦ಬಾ ಹಿಡಿಸಿತು. ನಿಮ್ಮ ಸೈಕಲ್ ಸವಾರಿಯ ಅನುಭವವನ್ನು ಚೆನ್ನಾಗಿ ವಿವರಿಸಿರುವಿರಿ. ನಿಮ್ಮ ಬ್ಲಾಗಿನಲ್ಲಿ ನನ್ನ ಸೈಕಲ್ ಸವಾರಿಯ ಬಗ್ಗೆ ನಮೂದಿಸಿದ್ದಕ್ಕೆ ಧನ್ಯವಾದಗಳು. ಶಿವಕುಮಾರ್ ರವರ 'ಸೈಕಲ್ ವಾಲ' ಪುಸ್ತಕ ಮು೦ದಿನ ಸಲ ನಿಮ್ಮ ಅ೦ಗಡಿಗೆ ಬ೦ದಾಗ ಖರೀದಿಸಿ ಓದಬೇಕೆoದಿರುವೆ. ಅದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ReplyDeleteರಾಮ ಭಟ್
ಕ್ಯಾ೦ಪ್ - ಮ೦ಗಳೂರು
ಅಶೋಕರೇ, ನಿನ್ನೆ, ಮೊನ್ನೆ ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನೋಡಿದ, ಅದರ ಬಗ್ಗೆ ಓದಿದ ನನಗೆ ನಿಮ್ಮ “ಕನ್ನಡವೂ ಸಂಸ್ಕೃತದಂತೆ ಸದ್ಯದಲ್ಲೇ ಮೃತಭಾಷೆಯಾಗಲಿದೆ.” ಎಂಬ ಗಟ್ಟಿಯಾದ ಘೋಷಣೆ ಓದಿ ಗಾಬರಿಯಾಯಿತು ಮಾರಾಯ್ರೇ. ಛೆ, "ಕನ್ನಡವು ಎಂದೆಂದಿಗೂ ಜೀವಿಸುವ ಭಾಷೆ" ಎಂದು ನಮ್ಮ ಜೀವಿಯವರು ಅಲ್ಲಿ ಹೇಳಿದರೆ ನೀವು ಇಲ್ಲಿ ಸಾಯಲಿದೆ ಅಂದಿದ್ದೀರಲ್ಲ! ಅಲ್ಲಿನ ಗೋಷ್ಠಿಯೊಂದರಲ್ಲಿ ಡಾ|| ಪ್ರಧಾನ ಗುರುದತ್ತರು ಅಂದಂತೆ ಕನ್ನಡದಲ್ಲಿ ಪ್ರತಿ ವರ್ಷ ಸುಮಾರು ೪೦೦೦ ಪುಸ್ತಕಗಳು ಪ್ರಕಟವಾಗುತ್ತವೆ!! ಮತ್ತು ಅವುಗಳಲ್ಲಿ ಸುಮಾರು ೮೦೦ರಿಂದ ೧೦೦೦ದಷ್ಟು ಅನುವಾದಿತ ಕೃತಿಗಳು. ಇಂತಿಪ್ಪ ಕನ್ನಡವು ಸದ್ಯಕ್ಕೆ ಸಾಯುವುದೆಂತು? ಅದಕ್ಕೆ ಸಮಸ್ತ ಕನ್ನಡಿಗರ ಒಗ್ಗಟ್ಟಿನ ಪರಿಶ್ರಮ ಬೇಕು...
ReplyDeleteಆದರೆ ಕನ್ನಡದ ಪುಸ್ತಕ ಪ್ರಕಾಶಿಗರು ಪುಟಕ್ಕೊಂದು ರೂಪಾಯಿ ಅಥವಾ ಹೆಚ್ಚೇ ಇಟ್ಟು ’ಪ್ರಕಾಶಿಸುತ್ತಿರುವುದು’ ಮತ್ತು ಪುಸ್ತಕ ಕೊಳ್ಳುಗನ ಬಗ್ಗೆ ಕಾಳಜಿ ವಹಿಸದಿರುವುದು ನೀವಂದತೆ ಅಕ್ಷರಶಃ ಸತ್ಯ. ಆದರ ಮಧ್ಯೆ ನಿಮ್ಮಂಥ ಮೌಲಿಕ ಪ್ರಕಾಶಕರು ಪ್ರಕಾಶನ ನಿಲ್ಲಿಸಿದ್ದು ನಮ್ಮಂತಹ ಕೊಳ್ಳುಗರ ನಷ್ಟ.
ನಾನು ಶಾಲೆಗೆ ಹೋಗುವಾಗಲೂ ಸಹಾ "ಸೈಕಲ್ ಬ್ಯಾಲೆನ್ಸ್" ಮಾಡುವ ಮಳೆಯಾಳಿಗಳು ನಮ್ಮ ಶಾಲೆಯ ಬಳಿಯೋ ಅಥವಾ ಹಾಲಾಡಿಯ ಬಸ್ ಸ್ಟೇಂಡ್ ಬಳಿಯೋ ಝಂಡಾ ಊರಿ, ಹಗಲೂ ರಾತ್ರಿ ಸೈಕಲ್ ಹೊಡೆಯುತ್ತಿದ್ದರು. ಅವರು ರಾತ್ರಿ ಸಹಾ ಅದರ ಮೇಲೇ ಕಾಲ ಕಳೆಯುತ್ತಾರಂತೆ ಎಂದು ಒಬ್ಬ ಸಹಪಾಠಿ ಹೇಳಿದರೆ, "ಅದು ಸುಳ್ಳೇ ಹೇಳ್ತಾರೆ , ನಾವೆಲ್ಲಾ ಹೋದ ಮೇಲೆ ನೆಲದ ಮೇಲೆ ಮಲಗ್ತಾನಂತೆ" ಅಂತಾನೆ ಮತ್ತೊಬ್ಬ; "ಇಲ್ಲಪ್ಪ, ಹೋಟ್ಲು ಕಿಣಿಯರು ನಡೂ ರಾತ್ರಿ ಎದ್ ಕಂಡೀರಂಬ್ರು, ಸೈಕಲ್ ಬ್ಯಾಲೆನ್ಸ್ನವ ಸೈಕಲ್ ನ್ನು ಮಲಗಿಸಿ, ಅದರ ಮೇಲೇ ನಿದ್ರೆ , ಎಲ್ಲಾ ಮಾಡ್ತನಂಬ್ರು " ಎಂದ ಮಗದೊಬ್ಬ. ಅಂದಹಾಗೆ, ಈಗ ಸೈಕಲ್ ಬ್ಯಾಲೆನ್ಸ್ ಮಾಡುವವರು ಎಲ್ಲಾ ಎಲ್ಲಿಗೆ ಹೋದ್ರು?
ReplyDelete-ಶಶಿಧರ ಹಾಲಾಡಿ
ನೀವು ಹಣಕಾಸಿನ ಸ್ಥಿರತೆ, ಭೋಗ್ಯ ಸೀಕ್, ಮತ್ತು ನೀವು ಕೆಟ್ಟ ಕ್ರೆಡಿಟ್ ಅಂಕವನ್ನು ಹೊಂದಿರುತ್ತಾರೆ?
ReplyDeleteಗಮನ:
ಸರ್ / ಮ್ಯಾಡಮ್,
ಒಳ್ಳೆಯ ಸುದ್ದಿ ಇಲ್ಲಿ ನಾವು ಪ್ರಸ್ತುತ 3,000.00 ಯುರೋ ಪ್ರಪಂಚದ ಯಾವುದೇ ಭಾಗಕ್ಕೆ 150,000,000.00 ಯುರೋ ಗರಿಷ್ಠ ಪ್ರಮಾಣದ ವರೆಗೆ 2% ತುಂಬಾ ಒಳ್ಳೆ ಬಡ್ಡಿದರದಲ್ಲಿ ಎಲ್ಲಾ ವರ್ಗಗಳ ಸಾಲ ನೀಡಲು ಇವೆ. ಕೆಳಗಿನ ಇಮೇಲ್ ವಿಳಾಸವನ್ನು ಹೆಚ್ಚಿನ ಮಾಹಿತಿಗಾಗಿ ಆಸಕ್ತಿ ಇದ್ದರೆ ತಕ್ಷಣ ನಮಗೆ ಸಂಪರ್ಕಿಸಿ.
information@fidfinltd.co.cc
NB: ನೀವು ಆಸಕ್ತಿ ಇದ್ದರೆ ಮೃದುವಾಗಿ ಹೆಚ್ಚಿನ ಮಾಹಿತಿಗಾಗಿ ಅಮೇರಿಕಾದ ಸಮೂಹ ಮೇಲೆ ಸಂಸ್ಥೆಯಾದ ಜಾಹೀರಾತುಗಳಲ್ಲಿ IS
ಧನ್ಯವಾದಗಳು.
ಮಾಹಿತಿ ಅಧಿಕಾರಿ
ಫಿಡಿಲಿಟಿ ಹಣಕಾಸು ಸೀಮಿತ ®