31 October 2010

ಅಪ್ಪಟ ಜವಳಿ, ಹೊಳೆಯುವ ರತ್ನ

ತೀರ್ಥಯಾತ್ರೆ (ಭಾಗ ಎರಡು)

‘ಶಿಕಾರಿ’ ಅಭಯನ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎರಡು-ಮೂರನೇ ಚಿತ್ರ! (ಹೌದು, ಇದು ಏಕಕಾಲಕ್ಕೆ ಕನ್ನಡ ಮತ್ತು ಮಲಯಾಳಗಳ ಸ್ವತಂತ್ರ ಚಿತ್ರೀಕರಣ ನಡೆಯುತ್ತಿದೆ (ವಿವರಗಳಿಗೆ ಇಲ್ಲಿ ನಿಮ್ಮ ಇಲಿಯ ಬಾಲ ತಿರುಚಿರಿ! ಏನು ಯೋಚಿಸ್ತೀರಿ, ಚಿಟಿಕೆ ಹೊಡೀರಿ ಅರ್ಥಾತ್ ಇಲ್ಲಿ ನಿಮ್ಮ ಮೌಸ್ ಕ್ಲಿಕ್ ಮಾಡೀ!!) ಸಿನಿಮಾದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಮತ್ತು ಕೊಚ್ಚಿನ್ನಿನಲ್ಲಿ ಆಗಿತ್ತು. ಅನಂತರ ಎರಡನೆಯ ಮತ್ತು ಬಲು ದೊಡ್ಡ ಅಂಶದ ಚಿತ್ರೀಕರಣಕ್ಕಾಗಿ ಯುಕ್ತ ಮನೆ ಹಾಗೂ ಪರಿಸರದ ಹುಡುಕಾಟ ನಡೆಸಿದರು. ಶಿವಮೊಗ್ಗ, ಉಡುಪಿ ಜಿಲ್ಲೆಗಳ ಮೂಲೆ ಮೊಡಕು ಸುತ್ತಿ ತೀರ್ಥಳ್ಳಿಯ ಸಮೀಪದ ಒಂದು ಹಳೆಗಾಲದ ಮನೆ ಮತ್ತು ಪರಿಸರವನ್ನು ತಿಂಗಳ ಹಿಂದೆಯಷ್ಟೇ ನಿಷ್ಕರ್ಷಿಸಿದ್ದರು. ಅದಕ್ಕೆ ಪೂರಕವಾಗಿ ಒದಗಿದ್ದು, ತೀರ್ಥಳ್ಳಿ - ಶಿವಮೊಗ್ಗ ದಾರಿಯಲ್ಲಿ ಐದನೇ ಕಿಮೀ ಕಲ್ಲಿನ ಬಳಿ ಬಲಕ್ಕೆ ಕವಲೊಡೆದು ಸ್ವಲ್ಪವೇ ಒಳಕ್ಕೆ ಸರಿದರೆ ಅಡಿಕೆ ಕಾಫಿ ತೋಟಗಳ ನಡುವೆ ಮೈಚಾಚಿಕೊಂಡಿದೆ ವಿಹಂಗಮ ಹೆಸರಿನ ವಿಹಾರಧಾಮ. ತುಂಗಾ ತೀರ ಸೇರಿದಂತೆ ಮಲೆನಾಡಿನ ಸೌಂದರ್ಯವನ್ನೂ ಆಧುನಿಕ ಆತಿಥ್ಯದ ಸಕಲ ಸವಲತ್ತುಗಳನ್ನೂ ಹೊಂದಿರುವ ಇದು ಈ ವಲಯಕ್ಕೆ ಏಕೈಕ. ಕುವೆಂಪು ಕುಟುಂಬಸ್ಥರೇ ಆದ ಕಡಿದಾಳು ದಯಾನಂದರ ಕಲ್ಪನೆ ಮತ್ತು ವೈಯಕ್ತಿಕ ಉಸ್ತುವಾರಿ ಇದಕ್ಕಿದೆ. ಅಭಯನಿಗೆ ಹೆಚ್ಚಿನ ಆಕರ್ಷಣೆ, ದಯಾನಂದರ ಮಗ ಕನೀನ ಅವನ ಕಾಲೇಜು ಸಹಪಾಠಿ. ಆತ ಈಗ ಅಪ್ಪನೊಡನೆ ವಿಹಾರಧಾಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ. ಅಲ್ಲಿನ (ಸುಮಾರು ಇಪ್ಪತ್ತೈದು) ವಸತಿಗೃಹಗಳ ವ್ಯವಸ್ಥೆ ಶಿಕಾರಿ ಚಿತ್ರ ತಂಡದ ಉನ್ನತ ವರ್ಗದವರಿಗೆ ಕಾಯ್ದಿರಿಸಲಾಗಿತ್ತು. ಎರಡು ಮತ್ತು ಮೂರನೇ ವರ್ಗಗಳಿಗೆ ತೀರ್ಥಹಳ್ಳಿಯ ಬಹುತೇಕ ಹೋಟೆಲುಗಳೂ ಚಿತ್ರೀಕರಣ ನಡೆಯುವ ಸ್ಥಳದ ಸಮೀಪದ ಒಂದು ಛತ್ರವೂ ನಿಗದಿಯಾಗಿತ್ತು.

ನಿಜ ಚಿತ್ರೀಕರಣಕ್ಕೆ ಇನ್ನೂ ಮೂರ್ನಾಲ್ಕು ದಿನಗಳಿತ್ತು. ಮುಂದಿನ ಸುಮಾರು ಒಂದೂಕಾಲು ತಿಂಗಳು ಅಲ್ಲಿಗೆ ವಿವಿಧ ಹಂತಗಳಲ್ಲಿ ಸಹಾಯಕರೂ ಕಲಾವಿದರೂ ಬಂದು ಹೋಗುವುದೂ ಕಣ್ಕಟ್ಟಿನ ರಚನೆ ಬಣ್ಣ ಮತ್ತು ಶಿಖರಪ್ರಾಯವಾಗಿ ಚಿತ್ರೀಕರಣವೂ ನಡೆಯಲಿತ್ತು. ಎಲ್ಲಕ್ಕು ಮೊದಲಿಗರಾಗಿ ಅಭಯ ಮತ್ತು ಅವನ ಸಹಾಯಕ - ಸಾಗರ್, ಕ್ಯಾಮರಾಮ್ಯಾನ್ - ಅಭಯನ ಎಫ್.ಟಿ.ಐ,ಐ ಸಹಪಾಠಿ ಮತ್ತು ಆತ್ಮೀಯ ಗೆಳೆಯ ಡಾ| ವಿಕ್ರಮ್ ಶ್ರೀವಾಸ್ತವ್ ಹಿಂದಿನ ದಿನ ಹಗಲಲ್ಲೇ ಬೆಂಗಳೂರಿನಿಂದ ಬಂದು ಕಾರ್ಯೋದ್ಯುಕ್ತವಾಗಬೇಕಿತ್ತು. ಆದರೆ ಏನೇನೋ ಕೆಲಸದ ಒತ್ತಡದಲ್ಲಿ ವಿಳಂಬಿಸಿ ಅಪ-ರಾತ್ರಿಯಲ್ಲಷ್ಟೇ ತಲಪಿದ್ದರು. ನಾವು ಮುಟ್ಟಿದಾಗ ಇನ್ನೂ ಅವರೆಲ್ಲ ಉದಯರಾಗದಲ್ಲಿದ್ದರು. ಅವರ ಜೊತೆಯಲ್ಲೇ (ಅಭಯನ ಹೆಂಡತಿ) ರಶ್ಮಿ ಬಂದಿದ್ದರೂ ಮೊದಲೇ ಹೇಳಿದಂತೆ ಅವಳ ಮುಂದಿನ ಓಡಾಟವೆಲ್ಲ ನಮ್ಮ ಜೊತೆಯದ್ದು. ಅತ್ತ ಮೈಸೂರಿನಿಂದ ಕೊಪ್ಪಕ್ಕೆ ಬಂದಿಳಿದಿದ್ದ ಅಭಿಜಿತ್ ಮತ್ತು ಗೆಳೆಯರನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳುವ ಯೋಚನೆಯನ್ನು ಸಮಯ ಹೊಂದಾಣಿಕೆಯ ತೊಂದರೆ ಕಾಣಿಸಿದ್ದರಿಂದ ಕಳಚಿಕೊಂಡೆವು. ಅವನ ಗೆಳೆಯರ ದಂಡು ಮೊದಲೇ ನಿಶ್ಚೈಸಿಕೊಂಡಂತೆ ಬೇರೇ ದಿಕ್ಕಿನಲ್ಲಿ ತಿರುಗಾಟ ನಡೆಸಿದರು. (ಅವರು ಕಂಡ ಕೌಲೇ ದುರ್ಗ, ಬರ್ಕಣ ನನಗೆ ಹಳೇಪೈಕಿ. ನಿಮಗೆ ಹೀಗೇ ಮುಂದೆಂದಾದರೂ...)

ಅಭಯ ವಿಕ್ರಂರ ಬಿಡಾರ ಗುಡ್ಡೆಯ ಓರೆಯಲ್ಲಿ ಹತ್ತೆಂಟು ಮೆಟ್ಟಿಲ ಎತ್ತರದಲ್ಲಿ ಚೆನ್ನಾಗಿತ್ತು. ಒಳಗಿಂದ ಅವರ ಉಡಿದುಂಬುವ ಗಣಕ (ಲ್ಯಾಪ್ ಟಾಪ್ ಕಂಪ್ಯೂಟರ್) ಶಿಕಾರಿಗಾಗಿ ಸಂಗೀತ ನಿರ್ದೇಶಕ ಕಳಿಸಿದ್ದ ರಾಗ ಬಿತ್ತರಿಸುತ್ತಿದ್ದಂತೆ ಹೊರಗೆ ಆಚೀಚೆ ಓಡಾಡಿ, ವಿಹಂಗಮದ ವಿಹಂಗಮ ನೋಟ ಪಡೆದುಕೊಂಡೆ. ದಯಾನಂದರ ಪಾಲಿಗೆ ಬಂದ ಕಾಡುಗುಡ್ಡೆಯನ್ನು ಅತ್ತ ಅಡಿಕೆ ತೆಂಗು, ಇತ್ತ ಕಾಫಿ ಕಿತ್ತಳೆಯೆಂದು ಕೃಷಿಗೆ ಪಳಗಿಸಿ ಫಲಕಾರಿಯಾದದ್ದು ಇಂದು ಮೂರು ದಶಕಗಳಿಗೂ ಹಿಂದಿನ ಕಥೆ. ‘ರೈತರೇ ದೇಶದ ಬೆನ್ನೆಲುಬು’ ಎಂಬ ಹೇಳಿಕೆಗೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ‘ಮಾಂಸ ರಕ್ತವೂ ತುಂಬಬೇಕು’ ಎನ್ನುವ ಸತ್ಯ ಸೇರದಿರುವುದು ನಮ್ಮ ಸಾಂಪ್ರದಾಯಿಕ ಕೃಷಿಯ ದುರಂತ. ಆದರೆ ಸಾಹಸಿ ದಯಾನಂದ ಸಸಿ ಮಡಿಗಳನ್ನು ಮಾಡಿ ಮಾರಿದರು. ಅಲಂಕಾರಿಕ ಉದ್ಯಾನವನ ರಚನೆಯಲ್ಲಿ ಇವರ ವೃತ್ತಿಪರ ಪಾದ ಅತ್ತ ಬೆಂಗಳೂರು ಇತ್ತ ಮಂಗಳೂರಿಗೂ ಚಾಚಿತ್ತು. ಕೃಷಿ ನೌಕರರ ಕೊರತೆ ವಿಕಸಿಸುತ್ತಿದ್ದಂತೆ ಇವರೂ ಕಾಲಕ್ಕೆ ತಕ್ಕ ಕೋಲ ಕಟ್ಟಿ ತೋಟದ ಜೊತೆಗೆ ವಿಹಾರಧಾಮವನ್ನೇ ರೂಪಿಸಿ ಯಶಸ್ವಿಯಾದರು. ಹಳಗಾಲದ ಕೃಷ್ಯುತ್ಪನ್ನದ ‘ಸ್ಟೋರ್ರೂಂ’ ನಮಗೆ ಬೆಳಗಿನ ರುಚಿಕರವಾದ ತಿಂಡಿ ತೀರ್ಥ ಕೊಟ್ಟ ಸುಂದರ ‘ಡೈನಿಂಗ್ ರೂಂ ಕಂ ಕಲ್ಚುರಲ್ ಸೆಂಟರ್.’ ಇಲ್ಲಿ ತಚಪಿಚ ಕೆಸರಿನ ಕಾಲುದಾರಿ ಇಲ್ಲ, ದಪ್ಪ ಹಸಿರುಹಾಸಿನ ನಡುವೆ ನಿಯತ ಮೆಟ್ಟಿನ ಜಾಡು. ಸ್ವಚ್ಛ ಡಾಮರು ಮಾರ್ಗ, ಕಳೆಕಸವಿಲ್ಲದ ಅಂಚಿನ ಅಲಂಕಾರಿಕ ಬೇಲಿಯನ್ನು ಸ್ವತಃ ‘ಬಾಸ್’ (ಗಮನಿಸಿ, ಕಮಟು ಬಟ್ಟೆ, ಕಾಲೆಳೆಯುವ ಚಪ್ಲಿ, ಭುಜಕ್ಕೊಂದು ಕೊಳಕು ಟವೆಲ್‌ನಲ್ಲಿ ಕೊನೆಗೆ ಬೇಕಾದ್ರೆ ಬಾಯಿಗೊಂದು ಮೋಟು ಮಂಗಳೂರು ಗಣೇಶ ಬೀಡಿಯೊಡನೆ ಕಾಣಬಹುದಾಗಿದ್ದ ‘ಯಜಮಾನ’ ಅಲ್ಲ!) ತ್ರೀಫ಼ೋರ್ತ್‌ಪ್ಯಾಂಟ್, ಕಲರ್ಫುಲ್ ಟಾಪೂ  ಕ್ಯಾಪೂ ಹಾಕಿ ನಿರ್ಲಿಪ್ತವಾಗಿ ಟ್ರಿಂ ಮಾಡುತ್ತಿದ್ದದ್ದೂ ಒಟ್ಟು ವ್ಯವಸ್ಥೆಗೆ ಸುಂದರ ವೃತ್ತಿಪರ ಸ್ಪರ್ಷ ಕೊಡುತ್ತಿತ್ತು. ಹಾಗೆಂದು ನಾನಾಗಿಯೇ ಮಾತಿಗೆ ಮುಂದಾದಾಗ ದಯಾನಂದರು ಔಪಚಾರಿಕ ಕೋಶದೊಳಗಿರದೇ ತೆರೆದುಕೊಂಡರು; ವಿಹಂಗಮದ ವಿಕಾಸ ನಿಸ್ಸಂದೇಹವಾಗಿ ವರ್ತಮಾನದ ತುರ್ತು.

ತೀರ್ಥಳ್ಳಿ - ಶಿವಮೊಗ್ಗ ದಾರಿಯಲ್ಲಿ ಸುಮಾರು ಹದಿನೇಳು ಕಿಮೀ ಅಂತರಕ್ಕೆ  ಸೀಗೇ ಹಳ್ಳಿ ಕ್ರಾಸ್. ಮುಂದೆ ಅಷ್ಟೇನೂ ಒಳ್ಳೆಯದಿಲ್ಲದ ಡಾಮರು ರಸ್ತೆಗೆ ಕವಲಾಗಿ ಸುಮಾರು ಎರಡು ಕಿಮೀ ಓಟ. ಅಲ್ಲಿ ಮತ್ತೆ ಬಲದ ಮಣ್ಣು ರಸ್ತೆ ಹಿಡಿದರೆ ಸುಮಾರು ಎರಡು ಕಿಮೀ ಕೊನೆಯಲ್ಲಿ ಸಿಗುವ ನಾಲ್ಕು ಸುತ್ತಿನ ತೋಟದ ಮನೆ ಅನೂಪ್ ಗೌಡರದು. ಅವರು ಮನೆಯನ್ನು ತೋರಗಾಣ್ಕೆಗೆ ಆಧುನಿಕಗೊಳಿಸದಿದ್ದರೂ ತಮ್ಮ ಕೃಷಿಕತನದ ಅಗತ್ಯಕ್ಕೂ ಅನಿವಾರ್ಯವಾದ ಆಧುನಿಕ ಜೀವನ ಶೈಲಿಗೂ ತುಂಬ ಚಂದಕ್ಕೆ ಹೊಂದಿಸಿಕೊಂಡಿದ್ದರು. ಆಶ್ಚರ್ಯಕರವಾಗಿ ಇದ್ದಷ್ಟೂ ಹಳಗಾಲದ ಕಾಷ್ಠವೈಭವ ಮತ್ತು ಪಾತ್ರೆಪರಡಿಗಳನ್ನು ಪ್ರದರ್ಶನಾಲಯಗಳ ಶಿಸ್ತಿನಲ್ಲಿ (ನೆನಪಿರಲಿ, ಇದು ಮ್ಯೂಸಿಯಂ ಅಲ್ಲ, ವಾಸದ ಮನೆ) ಜೋಡಿಸಿಟ್ಟಿದ್ದರು. ಒಳ ಅಂಗಳದಲ್ಲಿ ಅಲಂಕಾರಿಕ ಕೈತೋಟ ಮನೆಯವರ ಸದಭಿರುಚಿಯನ್ನು ಬಿಂಬಿಸುವಂತಿತ್ತು. ಅವರು ಬಯಸದೇ ಹಿಂದೊಂದೆರಡು ಸಿನಿಮಾಗಳಿಗೆ ಮನೆಯನ್ನು ಆಂಶಿಕವಾಗಿ ಕೊಟ್ಟಿದ್ದರಂತೆ. ಮತ್ತು ಅದು ಅಷ್ಟೇನೂ ಮಧುರವಲ್ಲದ ಅನುಭವವೂ ಆಗಿತ್ತಂತೆ. ಆದರೂ ಈಗ ಶಿಕಾರಿ ನಿರ್ಮಾಪಕರ (ಕೆ. ಮಂಜು) ಒತ್ತಾಯಕ್ಕೆ ಒಪ್ಪಿದ್ದು ಕೇಳಿ ನಮಗೆ ಸಂತೋಷದೊಡನೆ ಸಣ್ಣ ಆತಂಕವೂ ಆಗದಿರಲಿಲ್ಲ! (“kill the source”, ಪತ್ರಿಕೋದ್-ಯಮ ಹೀಗೂ ನಡೆದುಕೊಳ್ಳುವುದುಂಟು. ಆದರೆ ನಮ್ಮ ಮನೋಸ್ಥಿತಿ ಹೇಗಾದ್ರೂ ಗುರಿ ಸಾಧಿಸುವುದರಲ್ಲಿಲ್ಲ. ಸಮಷ್ಟಿಯ ಹಿತದಲ್ಲಿ ನಮ್ಮ ಏಳ್ಗೆ ಮೇಳೈಸಿದ್ದಕ್ಕೆ ಈ ಆತಂಕ.) ಅನೂಪ್ ಗೌಡ್ರು ಅಂದು ಊರಲ್ಲಿರಲಿಲ್ಲ. ಇದ್ದ ಮನೆಯ ಯಜಮಾಂತಿ, ಮಿತಭಾಷಿಯಾದರೂ ನಾವು ನಮ್ಮ ಆತಂಕವನ್ನು ಅವರಲ್ಲಿ ಸ್ವಲ್ಪ ಹಂಚಿಕೊಂಡೆವು. ಅಭಯ ಮತ್ತು ವಿಕ್ರಂ ಸಿನಿ-ಪಠ್ಯ ತೆರೆದು ಮಾತಾಡಿಕೊಳ್ಳುತ್ತ, ಟಿಪ್ಪಣಿಗಳಿಗಿಳಿಯುತ್ತಿದ್ದಂತೆ ನಾವು ಮನೆಗೆ ಒಂದು ಸುತ್ತು ಹಾಕಿ, (ಅವರಿಗೆ ಹೊರೆಯಾಗದಂತೆ) ರಶ್ಮಿಯನ್ನು ಜೊತೆಮಾಡಿಕೊಂಡು ಹೊರಬಿದ್ದೆವು.

ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) ಶಿಷ್ಯತ್ವದೊಡನೆ ಅವರ ಆಶಯದ ‘ದಂಡಧಾರಿ’ (ಕ್ವೀನ್ಸ್ ಬೇಟನ್ ಹಾಗೆ) ಅಂದರೆ ಅಕ್ಷರಶಃ ಸಾಹಿತ್ಯ ಕಲೆಗಳ ಕಿಂಕರ ಈ ನಾಗರಾಜರಾವ್ ಜವಳಿ. ಮಂಗಳೂರಿನ ಕೆನರಾ ಕಾಲೇಜಿನ ಖಾಲೀ ಕನ್ನಡ (ಇಲ್ಲಿ ಪಾಠಪಟ್ಟಿಯಲ್ಲಿ ಐಚ್ಛಿಕ ಕನ್ನಡ ಇಲ್ಲ) ಮೇಷ್ಟ್ರಾದರೂ ಇವರ ಆಸಕ್ತಿಗಳ ಹರಹು ಅಪಾರ. ಕನಿಷ್ಠ ವಾರಕ್ಕೊಮ್ಮೆಯಾದರೂ ನನ್ನ ಅಂಗಡಿ ಬಿಡಿ, ಊರಿನ ಎಲ್ಲಾ ಪುಸ್ತಕ ಮಳಿಗೆ ಶೋಧಿಸಿ ಪುಸ್ತಕ ಸಂಗ್ರಹ ನಡೆಸುತ್ತಿದ್ದರು. ಸಾಲದು ಎಂಬಂತೆ ಸ್ಟ್ಯಾಂಡರ್ಡ್ ಸರ್ಕ್ಯುಲೇಟಿಂಗ್ ಲೈಬ್ರೆರಿಯ ಖಾಯಂ ಸದಸ್ಯತ್ವ. ಇದ್ದ ಬದ್ದ ಆಡಿಯೋ ವೀಡಿಯೋ ಕೇಬಲ್ಲು, ವಿಡಿಯೋ ಲೈಬ್ರೆರಿಗಳು ಕೊಡುವ ಒಳ್ಳೇದೆಲ್ಲಾ ಇವರಿಗೆ ಅನುಭವಿಸಲು ಬೇಕೇಬೇಕು. ಯಾವುದೇ ವ್ಯಂಗ್ಯಾರ್ಥವಿಲ್ಲದೇ ಹೇಳ್ತೇನೆ - ನಾದಾ (ಪ್ರೊ| ನಾ ದಾಮೋದರ ಶೆಟ್ಟಿ), ವಿದ್ವದ್ಗಾಂಭೀರ್ಯದ ಸತ್ಯ (ಪ್ರೊ| ಸತ್ಯನಾರಾಯಣ ಮಲ್ಲಿಪಟ್ನ), ಸರಸಿ ನರಸಿಂಹಮೂರ್ತಿಯರ ಗೆಳೆತನದ ಬಂಧದಲ್ಲಿ ಇವರು ‘ದಾಸಜನ’ದಲ್ಲಿ ಜವಳಿ ಸ್ವಲ್ಪ ಸಾರ್ವಜನಿಕಕ್ಕೆ ತೆರೆದುಕೊಂಡರು. ಬಯಸದೇ ಬಂದ ಪ್ರಾಂಶುಪಾಲತ್ವವನ್ನು ಹೊಣೆಯಲ್ಲಿ ಗಟ್ಟಿಯಾಗಿಯೂ ಸಾರ್ವಜನಿಕದಲ್ಲಿ ತೀರಾ ಹಗುರಾಗಿಯೂ (ಇವರು ಕೋಟು, ಕಂಠಕೌಪೀನ ಕಟ್ಟಿದ್ದು ನಾ ನೋಡಿಲ್ಲ!) ನಿರ್ವಹಿಸಿದರು. ಎಸ್‌ವೀಪೀ ಅಥವಾ ಎಮ್ಮಾರ್ (ಎಂ ರಾಮಚಂದ್ರ) ಬಗೆಗಿನ ಅಖಂಡ ಅನುರಕ್ತಿಯಲ್ಲಿ ‘ಸಮ್ಮಾನ’ ನಡೆಸಿದರು. ಇಂದೂ ಹಳೇ ಪ್ರೀತಿಗಳು ಅವರನ್ನು ಮಂಗಳೂರಿಗೆ ಎಳೆದರೆ ಬೆನ್ನುಚೀಲ, ಹೆಲ್ಮೆಟ್ ಏರಿಸಿ, ಕಿವಿಗೆ ಮ್ಯೂಸಿಕ್ ಖಾರ್ಡ್ ತಗುಲಿಸಿ ವಿರಾಮದಲ್ಲಿ ಬೈಕರೂಢರಾಗುವುದೇ ಹೆಚ್ಚು! ಕುರಿತು ನೋಡದಿದ್ದರೆ ಜವಳಿ ಸಿಗರೇಟಿನ ಒಂದು ಕಿಡಿ, ಚಿಟಿಕೆ ಬೂದಿ. “ಅಶೋಕಾ ರಿಟೈರ್ ಆದ ಮೇಲೆ ಊರಿನಲ್ಲಿ ಮನೆ ಕಟ್ಟಿಸಿ ಆರಾಮಾಗಿ ಕೂತು ಬಿಡ್ತೇನೆ. ಇರೋ ಅಷ್ಟೂ ಪುಸ್ತಕ, ಸಂಗೀತವನ್ನು ‘ಬನ್ರಯ್ಯಾ ಅನುಭವಿಸಿ’ ಎಂದು ಸಾರ್ವಜನಿಕರಿಗೆ ತೆರೆದಿಟ್ಟು, ನನ್ನ ಪಾಡಿಗೆ ಸಂಗೀತ ಹಾಕಿ, ಪುಸ್ತಕ ಹಿಡಿದು, ಆಗೀಗ ಚಾ ಕುಡಿಯುತ್ತಾ ದಂ ಎಳೆಯುತ್ತಾ ಮಝವಾಗಿರ್ತೇನೆ” ಎಂದದ್ದನ್ನು ತೀರ್ಥಳ್ಳಿಯಲ್ಲಿ ಅಕ್ಷರಶಃ ನಡೆಸುತ್ತಿದ್ದಾರೆ.

ಅನೂಪ್ ಗೌಡ್ರ ಮನೆಯಿಂದ ನಾವು ತೀರ್ಥಳ್ಳಿ ಬಸ್ ನಿಲ್ದಾಣದ ಹೋಟೆಲಿಗೆ ಬಂದು, ದುಡ್ಡು ಕೊಟ್ಟು ಊಟಕ್ಕೆ ಕೂತ ಮೇಲೆ ಜವಳಿಯವರಿಗೆ ಸುದ್ದಿ ಕೊಟ್ಟೆ. (ಇಲ್ದೇ ಹೋದ್ರೆ ಕಡ್ಡಾಯವಾಗಿ ಆತಿಥ್ಯದ ಹೊರೆ ಜವಳಿ ವಹಿಸಿಕೊಳ್ಳುತ್ತಿದ್ದರು!) ಮತ್ತೆ ಐದೇ ಮಿನಿಟಿನಲ್ಲಿ ಬೈಕೇರಿ ಬಂದ ಜವಳಿಯವರನ್ನು ಕಾರಿಗೇರಿಸಿಕೊಂಡು ಕುಪ್ಪಳ್ಳಿಗೆ ಹೋದೆವು. ಕುವೆಂಪು ಮನೆ, ಸ್ಮಾರಕ ಭವನ, ಕಾಡುಕಲ್ಲಗುಡ್ಡ, ತೇಜಸ್ವಿ ಸ್ಮಾರಕ ಎಲ್ಲವನ್ನೂ ಪಿರಿಪಿರಿ ಮಳೆಯಲ್ಲಿ ಸುತ್ತಿದೆವು. ಸಾರ್ವಜನಿಕ ಹಣದ ಕೋಟ್ಯಂತರ ಅಪವ್ಯಯ ಮತ್ತೆ ಅಷ್ಟೂ ‘ನಿರಂಕುಶಮತಿಗಳಾಗಿ’ ಎಂದವರನ್ನೇ ಆರಾಧನಾ ಪೀಠಕ್ಕೇರಿಸಿದ ಕ್ರಮ ನನಗೇನೂ ಹಿಡಿಸಲಿಲ್ಲ. ‘ಮನೆಯನೆಂದೂ ಕಟ್ಟದಿರು’ ಎಂದವರ ಬಾಲ್ಯಕಾಲದ ಮನೆಯನ್ನು ಹೊಸಮನೆಗಿಂತಲೂ ಹೆಚ್ಚಿನ ಖರ್ಚಿನಲ್ಲಿ ಮರುರೂಪಿಸಿದ್ದಾರೆ. (ಅಷ್ಟಾಗಿಯೂ ಆ ಮನೆ ಈ ವಲಯದ ಒಳ್ಳೆಯ ಪ್ರತಿನಿಧಿಯೇನೂ ಅಲ್ಲ. ನಾವೇ ಕಂಡಂತೆ ಅನೂಪ್ ಗೌಡ್ರ ಮನೆ, ಅಭಯನ ಅನುಭವದಲ್ಲಿ ಹೇಳುವುದಾದರೆ ‘ಅದಕ್ಕೂ ಅಜ್ಜನಂಥ ಮನೆಗಳು’ ಮಲೆನಾಡಿನಲ್ಲಿ ಇನ್ನೂ ಎಷ್ಟೋ ಇವೆಯಂತೆ.) ಬೆಂಗಳೂರಿನಿಂದ ಮಹಾಮನೆಗೆ (ಕುವೆಂಪು ಮನೆಯ ಹೆಸರು) ನಿತ್ಯಕ್ಕೆರಡೇ ಪ್ರಯಾಣಿಕರಾದರೂ (ಚಾಲಕ ಮತ್ತು ನಿರ್ವಾಹಕ!) ರಾಜಹಂಸ ರಾತ್ರಿ ಬಸ್ಸಿನ ವ್ಯವಸ್ಥೆಯೂ ಆಗಿರುವುದು ಕಾಣುತ್ತದೆ. ಇಲ್ಲಿನ ಎಲ್ಲಾ ಕಲಾಪಗಳಿಗೆ ಸಂಪನ್ಮೂಲ ವ್ಯಕ್ತಿಗಳೂ ಪ್ರೇಕ್ಷಕರೂ ದೂರದೂರುಗಳಿಂದಲೇ ಬರಬೇಕು. ಮತ್ತೆ ನಡೆಯುವ ಬೈ-ಠಕ್ಕುಗಳು ತೌಡುಗುದ್ದುವುದರಿಂದ ಮೇಲೇನೂ ಸಾಧಿಸವು ಎನ್ನುವುದಂತೂ ಗೊತ್ತೇ ಇದೆ. ಅಭಿಮಾನದ ಹೆಸರಿನಲ್ಲಿ ಸರಕಾರದ ಖಜಾನೆಗೆ ಖಾಯಂ ಜಿಗಣೆಯಾದ ಇಂಥಾ ವ್ಯವಸ್ಥೆಗಳು ಪ್ರತಿ ಲೇಖಕ, ಕಲಾವಿದ, ಆಡಳಿತಗಾರರ ಹೆಸರಲ್ಲಿ ಬೆಳೆಯುತ್ತಾ ಹೋದರೆ ಸದ್ಯೋ ಭವಿಷ್ಯತ್ತಿನಲ್ಲಿ ಒಟ್ಟಾರೆ ಕನ್ನಡವೇ ಗೋರಿಗಳೊಳಗೆ ಹುದುಗಲಿದೆ ಎನ್ನುವುದಂತೂ ನಿಶ್ಚಯ. ಮತ್ತಿವುಗಳ ವಿರುದ್ಧ ಸೊಲ್ಲೆತ್ತಿದರೆ ‘ವಿಕೃತಿ, ದೇಶದ್ರೋಹ . . .’ ಮೊದಲಾದ ಮಹಾಪಾಪದ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಿಬಿಡುತ್ತದೆ! [ಈಗಾಗಲೇ ಮೇಲುಕೋಟೆಯಲ್ಲಿ ಪುತಿನ, ಧಾರವಾಡದಲ್ಲಿ ಬೇಂದ್ರೆ ಭಜನಾ ಮಂದಿರಗಳು ಸಾಕಷ್ಟು ಬಲ ಪಡೆದಿವೆ. ಮಂ. ಗೋವಿಂದ ಪೈಗಳ ಗೋರಿಶೃಂಗಾರಕ್ಕೆ ಎರಡೆರಡು ರಾಜ್ಯಗಳು ಕಟಿಬದ್ಧವಾಗಿವೆ! ಮಹಾಜಂಗಮ ಶಿವರಾಮಕಾರಂತರ ನಾಮದಬಲ ಪುತ್ತೂರು, ಸಾಲಿಗ್ರಾಮ ಮತ್ತು ಉಡುಪಿಯ ಭುಕ್ತಾದಿಗಳನ್ನು ಬ್ರಹ್ಮಾನಂದದ ಸ್ಥಿತಿಗೊಯ್ಯುವುದರಲ್ಲಿ ಸಂಶಯವಿಲ್ಲ. ರಾಜಕುಮಾರ್, ವಿಷ್ಣುವರ್ಧನ್, ಜನರಲ್ ಕಾರ್ಯಪ್ಪಾದಿಗಳ ಪಟ್ಟಿಗೆ ಕೇಳಿದ ಹೊಸ ಸೇರ್ಪಡೆ ಮೊನ್ನೆ ಮೊನ್ನೆ ನಂದಿಹೋದ ಅಂಧರದೀಪ, ಗಾನಯೋಗಿ ಪಂ. ಪುಟ್ಟರಾಜ ಗವಾಯಿ.]

ಕವಿಶೈಲದಲ್ಲಿ ಟನ್ನುಗಟ್ಟಲೆ ಭಾರದ ಬಂಡೆ ಖಂಡಗಳನ್ನು ಕುವೆಂಪು ಲೆಕ್ಕಕ್ಕೆ ಹೇರಿದ್ದಲ್ಲದೆ, ಈಚೆಗೆ ತೇಜಸ್ವೀ ಲೆಕ್ಕಕ್ಕೂ ಹತ್ತೆಂಟು ಬಂಡೆ ರಾಶಿ ಹಾಕಿರುವುದು ನಿಜಕ್ಕೂ ನಾಚಿಗೆಗೇಡು. ಅಷ್ಟೂ ಕಲ್ಲು ಇನ್ಯಾವುದೋ ಪ್ರಾಕೃತಿಕ ಪರಿಸರವನ್ನು ಹಾಳುಗೆಡವಿ ಬಂದವು ಎನ್ನುವುದನ್ನು ಗ್ರಹಿಸುವಾಗ ತೇಜಸ್ವಿ ಆತ್ಮ (ಹಾಗೊಂದು ಇದೆ ಎಂದು ಭಾವಿಸಿಕೊಳ್ಳಿ) ವಿಲವಿಲ ಒದ್ದಾಡದೇ? ಹೇರಿಕೆಯ ಅಷ್ಟೂ ಬಂಡೆ ಗುಂಡುಗಳು ಆ ಪರಿಸರಕ್ಕೆ ಕೇವಲ ತಮ್ಮ ಅಸಾಂಗತ್ಯದಿಂದಷ್ಟೇ ಆಕರ್ಷಣೆ ತರುತ್ತಿವೆ ಎನ್ನುವುದನ್ನು ತೀರಾ ವಿಷಾದದಿಂದಲೇ ಹೇಳಬಲ್ಲೆ. ಕ್ರಿಸ್ತ ಪೂರ್ವದಲ್ಲಿ ನಿಲ್ಲಿಸಿದ ಸ್ಟೋನ್ ಹೆಂಜ್, ಪಿರಮಿಡ್ಡುಗಳಿಗೆ ನಾವು ಸವಾಲು ಹಾಕುವಂತೆ ಈ ರಚನೆಗಳನ್ನು ತರುವುದೇ ಆದರೆ ನಾವು ಇತಿಹಾಸದಿಂದ ಕಲಿತದ್ದೇನು ಮಣ್ಣು?

ಜವಳಿಯವರನ್ನು ತೀರ್ಥಳ್ಳಿಗೆ ಮರಳಿಸಿ, ನಾವು ಶಿವಮೊಗ್ಗ ದಾರಿ ಹಿಡಿದೆವು. ಉದ್ದಕ್ಕೂ ತುಂಗಾನದಿ ಬಲಬದಿಯಲ್ಲಿ ಹೆಚ್ಚುಕಡಿಮೆ ಸಮಾನಾಂತರದಲ್ಲಿ ನಮಗೆ ಜೊತೆ ಕೊಡುತ್ತಿದೆ ಎಂಬ ಅರಿವು ನಮಗಿತ್ತು. ಮಾರ್ಗಾಯಾಸ ಕಳೆಯಲು ಕೆಲವು ಅಡ್ಡಪಯಣದ ಆಕರ್ಷಣೆಗಳೂ ನಮ್ಮ ತಿಳುವಳಿಕೆಯಲ್ಲಿತ್ತು. ಆದರೆ ಚೌತಿಯ ನೆಪದಲ್ಲಿ ಹೊಟೆಲುಗಳಲ್ಲಿ ವಾಸಾನುಕೂಲ ಸಿಗದಿದ್ದರೆ ಎಂಬ ನಮ್ಮ ಆತಂಕಕ್ಕೆ ಗೆಳೆಯ ರತ್ನಾಕರರನ್ನು ಬಲವಂತದಿಂದ (ಅವರು ಸ್ವಂತ ಮನೆಯಿಂದಾಚೆ ನಮ್ಮ ವಾಸ್ತವ್ಯವನ್ನು ಯೋಚಿಸಿದವರೇ ಅಲ್ಲ) ನಮಗಾಗಿ ಹೋಟೆಲ್ ರೂಮೊಂದನ್ನು ಕಾಯ್ದಿರಿಸಲು ಒಪ್ಪಿಸಿದ್ದೆವು. ಆಗ “ಬೇಗ ಬರಲು ಸಾಧ್ಯವಾದರೆ ನನ್ನ ಕ್ಲಿನಿಕ್ ಒಂದು ನೀವು ನೋಡಬೇಕು” ಎಂದು ಸೂಚಿಸಿದ್ದನ್ನು ಮನಸ್ಸಲ್ಲಿಟ್ಟು ಧಾವಿಸಿದೆವು. ಬಂದಂತೆಯೂ ಇಲ್ಲ, ಬಿಟ್ಟಂತೆಯೂ ಇಲ್ಲ ಎನ್ನುವ ಪಿರಿಪಿರಿ ಮಳೆ. ದಾರಿ ಅಗಲ ಕಡಿಮೆಯಿದ್ದರೂ ಚಂದ್ರಮುಖಿಯಾಗಿರಲಿಲ್ಲ; ನಯವಾಗಿತ್ತು! ವಿಶೇಷ ಏರಿಳಿತಗಳಾಗಲೀ ತಿರುವುಮುರುವಾಗಲೀ ಇಲ್ಲದ್ದರಿಂದ ನಮಗೆ ದಾರಿ ಕಳೆಯುವ ಸೋಮಾರೀ ಮಾತು ಮೊಳೆತು, ಮಾಸುತ್ತಿತ್ತು. ಏಕತಾನತೆಯನ್ನು ಮುರಿಯುವಂತೆ ಒಮ್ಮೆಗೆ ರಶ್ಮಿ “ವೋ! ಅದೇನು ಬಿಳಿ ಬಿಳಿ? ಪಕ್ಷಿಗಳು!!” ಎಂದು ಉದ್ಗರಿಸಿದಾಗಲೇ ನೆನಪಾದ್ದು ಮಂಡಗದ್ದೆ (ಪಕ್ಷಿಧಾಮ). ಊರು, ಜನ ನಾಳೆಯೂ ಸಿಕ್ಕಬಹುದು, ರೆಕ್ಕೆಯ ಮಿತ್ರರು ಹಾಗಲ್ಲ ಎಂದು ಹೊಳೆದು ಹತ್ತೇ ಮಿನಿಟಿಗೆ ವಿರಮಿಸಿದೆವು.

ಮಂಡಗದ್ದೆ ಎಂಬ ನಾಲ್ಕು ಅಂಗಡಿ, ಎಂಟು ಮನೆಯ ಹಳ್ಳೀ ಹಿತ್ತಿಲಿನ ತುಂಗಾ ನದಿಗೆ ಒಂದೆರಡು ನಡುಗಡ್ಡೆ, ಮತ್ತದರ ಮೇಲೆ ಭಾರೀ ಕುರುಚಲು ಎನ್ನುವಂತೆ ಮರ ಹಸಿರು. ಅವಕ್ಕೆಲ್ಲ ಬಿಳಿ ಕವಚ ತೊಡಿಸಿದಂತೆ ಹಕ್ಕಿಗಳೋ ಹಕ್ಕಿಗಳು. ಇತ್ತಿಂದತ್ತ ಅತ್ತಿಂದಿತ್ತ ನೀರ ಹರಹು ಅಳೆಯುವವರು, ಉಕ್ಕಿದ ಕಂದು ಮಂದ್ರವಾಹಿನಿಯುದ್ದಕ್ಕೆ ರೆಕ್ಕೆ ಬೀಸುವವರು (ಗಮನಿಸಿ, ಸ್ಫಟಿಕ ನಿರ್ಮಲವಲ್ಲ! ಹೌದು, ಮತ್ತೆ ಊರೂರುಗಳಲ್ಲಿ ‘ಭೂಮಿ ಅಲುಗಿಸುವ’ (=earth movers)  ಭೀಕರ ಅಭಿವೃದ್ಧಿ ಕಾರ್ಯಗಳು ನಡೆದಿರುವಾಗ), ಕೊಂಬೆ ರೆಂಬೆಗಳಲ್ಲಿ ಗರಿಗರಿ ಬಿಡಿಸಿ ಜಿಡ್ಡುಜ್ಜುವವರು, ತೆರೆದ ಹಸಿವಿನ ಚೀಲಕ್ಕೆ ತುತ್ತು ತುಂಬುವವರು, ಚೆಲ್ಲಿದ್ದನ್ನು ಹೆಕ್ಕಿ ಕೊಳೆ ಕಳೆಯುವವರು, ಬೇಟದ ನಾಟ್ಯವೋ ಜಾಗದ ವ್ಯಾಜ್ಯವೋ ಒಟ್ಟಾರೆ ಮಿಡಿಯುತ್ತಿತ್ತು ತುಂಗೆ ಮಡಿಲ ಒಕ್ಕಲು - ಬೆಳ್ಳಕ್ಕಿಗಳ ಹಕ್ಕಲು, “ಕಚಪಿಚಕಚಪಿಚ ಕ್ವೇಂ.”

ಎಡಕ್ಕೆ ಶೆಟ್ಟಿಹಳ್ಳಿ ಅಭಯಾರಣ್ಯ, ಬಲಕ್ಕೆ ಸಕ್ರೆಬೈಲು ಆನೆಗಳ ಶಿಬಿರ ಮುಂದುವರಿದಂತೆ ಗಾಜನೂರು ಅಣೆಕಟ್ಟು ನಮ್ಮ ಧಾವಂತಕ್ಕೆ ಕೇವಲ ನಾಮಫಲಕಗಳು ಅಥವಾ ಮಿಂಚುನೋಟಗಳು ಮಾತ್ರ. ಮೇಷ್ಟ್ರು ಜವಳಿ ದಾರಿ ಬಗ್ಗೆ ಒಳ್ಳೇ ಮಾರ್ಕ್ ಹಾಕಿದರೂ ದಟ್ಟ ಕಾಡಿನ ನಡುವೆ ಸಿಗುವ ಎರಡು ಬಹಳ ಅಪಾಯಕಾರೀ ವೇಗತಡೆ ದಿಬ್ಬಗಳ ಕುರಿತು ಹೇಳದಿರಲಿಲ್ಲ. ಆದರೆ ನಿಜವಾದ ರಗಳೆ ಬಂದದ್ದು ದಾರಿಯುದ್ದಕ್ಕೂ ಹುಗಿದ ನಡುಗುರುತಿಸುವ road studಗಳಿಂದ! ಅವನ್ನು ಬಲಕ್ಕೇ ಬಿಟ್ಟು ಧಾವಿಸೋಣವೆಂದರೆ ದಾರಿ ಕಿರಿದು. ಅವನ್ನು ಕಾರಿನ ಮಧ್ಯಕ್ಕೆ ಬಿಟ್ಟುಕೊಂಡು ಧಾವಿಸೋಣವೆಂದರೆ ಬೆಂಬತ್ತಿದ ಮಿನಿಬಸ್ಸೆಂಬ ಬೇತಾಳನ ಕಾಟ. ನಾವು ರತ್ನಾಕರರ ಕ್ಲಿನಿಕ್ ತಲಪುವಾಗ ಸ್ವಲ್ಪ ತಡವೇ ಆಗಿತ್ತು. ನಾನೆಲ್ಲಾದರೂ ಇನ್ನಷ್ಟು ವೇಗವರ್ಧನನಾಗಿದ್ದರೆ ಬರಿಯ ಕ್ಲಿನಿಕ್ಕೇನು, ಮೆಗ್ಗಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕವನ್ನೇ ನೋಡಬೇಕಾಗುತ್ತಿತ್ತು! ಹೌದು, ನಿಜಕ್ಕೂ ಹಾಗಿತ್ತು ನಮಗೆ ಸ್ಪರ್ಧೆ ಕೊಟ್ಟ ಮಿನಿಬಸ್ಸುಗಳ ಉತ್ಸಾಹ!

‘ಕರ್ಣಪಿಶಾಚಿ’ ಹೊತ್ತವರಿಗೆ ಸ್ವಾತಂತ್ರ್ಯವಿಲ್ಲ! ಕೆಲಸದ ಅವಧಿ ಮುಗಿದು ಕ್ಲಿನಿಕ್ ಬಿಟ್ಟು ಹೋಗಿದ್ದ ಮಿತ್ರವತ್ಸಲ ರತ್ನಾಕರರು ನಮಗೋಸ್ಕರ ತಿರುಗಿ ಬಂದರು. ಹಿಂದೆ ಇವರು ಅಹೋರಾತ್ರಿ ಯಕ್ಷಗಾನ ವ್ಯವಸ್ಥೆ ಮಾಡಿದ್ದಾಗ ನೋಡಲು ನಾನು ಶಿವಮೊಗ್ಗಕ್ಕೆ ಹೋಗಿದ್ದೆ. ಆಗ ಹೊರಗಿನಿಂದಷ್ಟೇ ಕ್ಲಿನಿಕ್ಕನ್ನು  ನೋಡಿದ್ದ ನಾನು ‘ಹಾಂ, ಒಂದು ವೈದ್ಯರ ಅಡ್ಡೆ’ ಎಂದು ಜಾರಿಸಿದ್ದೆ. ಆಗಲೇ ಅನಿವಾರ್ಯವಾಗಿ ಒಂದು ಗಳಿಗೆ ಅವರ ಮನೆಯನ್ನೂ ಹೊಕ್ಕದ್ದಿದ್ದರೂ ‘ಹಾಂ, ವಾಸಕ್ಕೆ ಒಂದು ಇರಬೇಕಾದ್ದೇ’ ಅಂತ ಮರೆತಿದ್ದೆ. ಆದರೆ ಸಾಲಿಗ್ರಾಮವೆಂಬ ಹಳ್ಳಿಮೂಲೆಯಿಂದ ಹೊರಗೆ ಕಣ್ಣಾಡಿಸದ ಪದವಿಪೂರ್ವ ಕಾಲೇಜಿನಿಂದ ಹೊರಬಿದ್ದ ಹುಡುಗ ರತ್ನಾಕರ, ಕೇವಲ ಅಂಕಪಟ್ಟಿಯ ಬಲದಲ್ಲಿ ಮೈಸೂರು ಸೇರಿ, ಆರಡಿ ಗುಣಿಸು ಎಂಟಡಿ ಕಿಷ್ಕಿಂಧೆಯಲ್ಲಿ (ಎರಡು ಪಂಚೆ ಮತ್ತಂಗಿಯಷ್ಟೇ ಇವರ ಉಡುಪು, ಕಾಲಿಗೆ ಚಪ್ಪಲಿ ಇವರಿಗೆಟುಕದ ವೈಭವ!) ನಳಪಾಕ ಸಹಿತ ಓದು, ಓದು ಮತ್ತೋದು ನಡೆಸಿ ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರನಾದದ್ದು ಸಣ್ಣ ಮಾತಲ್ಲ. [ಇಂದು, ೩೧-೧೦-೨೦೧೦ರ ಉದಯವಾಣಿಯ ಸಾಪ್ತಾಹಿಕದಲ್ಲಿ ಪ್ರಕಟವಾದ ಇವರ ಲಘು ಶೈಲಿಯ ಘನ ಪ್ರಬಂಧ - ನಾನ್‌ವೆಜ್ ಮೊಸರನ್ನದಿಂದ ಒಂದೆರಡು ತುತ್ತು ನೋಡಿ: ಪಿಯುಸಿವರೆಗೆ ನೂರಕ್ಕೆ ನೂರು ಅಂಕಗಳ ಕಿರೀಟ ಹೊತ್ತವರಿಗೆ(ನಿಗೆ) ನೂರರಲ್ಲಿ ಒಬ್ಬನಾಗಿ ಕಾಣಿಸುವುದು ಕಷ್ಟ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ . . . ] ಇವರ ಮನೆತನ ಪಾರಂಪಳ್ಳಿಯದ್ದೇ ಆದರೂ ಹಿರಿಯರ ಬಹುಮುಖೀ ಆಸಕ್ತಿ ಗುರುತಿಸಿ ಸಮಾಜ ಕೊಟ್ಟ ಅನ್ವರ್ಥನಾಮ - ಮಂಟಪ! ಸ್ಥಳೀಯವಾಗಿ ಲಭ್ಯ ಸಾಮಾನುಗಳಿಂದ ವೈವಿಧ್ಯಮಯ ಆಲಂಕಾರಿಕವಾದ (ಮದುವೆ ಮುಂತಾದ ವಿಶೇಷ ಕಾರ್ಯಕ್ರಮಗಳಿಗೆ) ಮಂಟಪ ರಚಿಸುವಲ್ಲಿ ಇವರ ಹಿರಿಯರು ಸುಪ್ರಸಿದ್ಧರು. ಹಾಗೆಂದು ‘ಕಲಾವಿದ’ರೆಂಬ ಹಮ್ಮು, ಕುಲನಾಮದ ಬಿಮ್ಮು ಏನೂ ಇಟ್ಟುಕೊಳ್ಳದ ಇವರಪ್ಪ ಚಂದ್ರಶೇಖರ ಉಪಾಧ್ಯರು ಹಿರೀಮಗ ಪ್ರಭಾಕರನನ್ನು ಶಾಲೆಗೆ ದಾಖಲಿಸುವಾಗ ಏನು ಹೇಳಿದರೋ ಬಿಟ್ಟರೋ ಮರೆತಿದ್ದರು. ಎರಡನೆಯವನನ್ನು ಹಾಕುವಾಗ ಖಾಲಿ ‘ರತ್ನಾಕರ’ ಎಂದುಬಿಟ್ಟರಂತೆ. ಹಾಗಾಗಿ ನಟಶೇಖರ ಮಂಟಪ ಪ್ರಭಾಕರ ಉಪಾಧ್ಯರ ಈ ಖಾಸಾ ತಮ್ಮನಿಗೆ ಉಪಾಧಿಗಳೇನಿದ್ದರೂ ಸ್ವಂತ ಗಳಿಕೆಯದ್ದು ಮಾತ್ರ - ಡಾ| (ಮಂಟಪ) ರತ್ನಾಕರ (ಉಪಾಧ್ಯ), ಎಂ.ಬಿ.ಬಿ.ಎಸ್., ಎಂ.ಡಿ.

‘ಎಂತಾದರೂ ಮಾಡಿ, ಶ್ರದ್ಧೆಯಿಂದ ಮಾಡಿ’ ಎಂಬ ಒಂದೇ ಮಂತ್ರ ಈ ಬರಿಗಾಲ ವೈದ್ಯ - ರತ್ನಾಕರರನ್ನು ಮೊದಲು ಸರಕಾರೀ ಮತ್ತೆ ಖಾಸಗೀ ಆಸ್ಪತ್ರೆಗಳ ಮೆಟ್ಟಿಲ ಮೂಲಕ ಏರಿಸಿ ಇಂದು ಶಿವಮೊಗ್ಗದ ಸ್ವಂತ ‘ಮಂಟಪ ಕ್ಲಿನಿಕ್’ ಎತ್ತರದಲ್ಲಿ ಕೂರಿಸಿದೆ. (ಗಿರೀಶರಲ್ಲದಿದ್ದರೂ ಬಹುಖ್ಯಾತ ಕಾಸರವಳ್ಳಿ ಮನೆತನದ ಒಂದು ಕವಲಿನ ವಾಣಿ ಇವರ ಮನೆತುಂಬಿದವರು. ಈ ದಂಪತಿ ಭವಿಷ್ಯಕ್ಕೆ ಇಟ್ಟ ಆಶಾಜ್ಯೋತಿಗಳು - ಎರಡು.) ರತ್ನಾಕರರ ವೃತ್ತಿ, ಕಲೆ, ಸಾಹಿತ್ಯ ಆಸಕ್ತಿಗಳೆಲ್ಲದರ ಸಂಗಮವಾಗಿ ಮತ್ತು ಸ್ವಾಂತಸುಖಾಯದ ಮಿತಿಯಲ್ಲಿ ರೂಪುಗೊಂಡಿದೆ ಇವರ ಕ್ಲಿನಿಕ್ ಮತ್ತು ಮನೆ. ದಯವಿಟ್ಟು ಗಮನಿಸಿ, ಇವೆರಡೂ ಅರೆ ಖಾಸಗಿಯಾದರೂ ಶುದ್ಧಾಂಗ ಸಾರ್ವಜನಿಕ ವೀಕ್ಷಣೆಗಿಟ್ಟ ರಚನೆಗಳಲ್ಲವಾದ್ದರಿಂದ ಇಲ್ಲಿ ವಿವರಗಳಿಗೆ ಇಳಿಯುವುದಿಲ್ಲ. ಮೊದಲೇ ಹೇಳಿದಂತೆ, ನಮ್ಮ ತೀವ್ರ ಒತ್ತಾಯಕ್ಕೆ ಮಣಿದು ವಾಸ್ತವ್ಯದ ಸ್ವಾತಂತ್ರ್ಯವನ್ನು (ಹೊಟೆಲ್) ಈ ದಂಪತಿ ನಮಗೆ ಬಿಟ್ಟಿದ್ದರು. ಉಳಿದಂತೆ ಸಂಜೆಯ ಕಾಫಿ, ರಾತ್ರಿಯ ಊಟ ಮರು ಬೆಳಿಗ್ಗೆಯ ತಿಂಡಿಯವರೆಗೆ ಅವರೇ ಕಲ್ಪಿಸಿದ ಹತ್ತೆಂಟು ನೆಪಗಳಲ್ಲಿ ನಾವು ಅವರ ಅತಿಥಿಗಳು.

ಶಿವಮೊಗ್ಗದ ಹೊರವಲಯದಲ್ಲಿರುವ ಹಳ್ಳಿ ಸಕ್ರೆಬೈಲು, ಆನೆಗಳ ತರಬೇತಿ ಕೇಂದ್ರವಾಗಿ ರಾಜ್ಯದಲ್ಲಿ ಪ್ರಸಿದ್ಧವಾಗಿದೆ. ಇಲ್ಲಿನ ಹತ್ತೆಂಟು ಸಾಕಾನೆಗಳನ್ನು ದಿನದ ಕಲಾಪ ಮುಗಿಸಿದ ಮೇಲೆ ಮುಂದಿನ ಕಾಲಿಗೆ ಸರಪಳಿ ಸುತ್ತಿ, ಒತ್ತಿನ ಶೆಟ್ಟಿಹಳ್ಳಿ ಅರಣ್ಯಕ್ಕೆ ಅಟ್ಟಿಬಿಡುತ್ತಾರಂತೆ. ಮತ್ತೆ ಹೆಚ್ಚಾಗಿ ಪ್ರತಿದಿನ ಕತ್ತಲು ಹರಿಯುವ ಎಷ್ಟೋ ಮೊದಲು ಮಾವುತರು ಕಾಡಿಗೆ ಹೋಗಿ, ಹುಡುಕಿ, ಸಿಕ್ಕಷ್ಟು ಆನೆಗಳನ್ನು ಸಕ್ರೆಬೈಲಿಗೆ ತರುವುದು, ತುಂಗೆಯಲ್ಲಿ ಸ್ನಾನ ಮಾಡಿಸುವುದು, ರಾಗಿ ಮುದ್ದೆ ತಿನ್ನಿಸುವುದು, ಜನರಂಜನೆ ನಡೆಸುವುದು ಕೊನೆಯಲ್ಲಿ ಮತ್ತೆ ಕಾಡಿಗೆ ಅಟ್ಟುವುದು ದಿನಚರಿಯಂತೆ. ಡಾ| ರತ್ನಾಕರರಲ್ಲಿ ಪ್ರಕೃತಿಪ್ರೇಮ, ಪ್ರಾಣಿದಯೆ, ಮನುಷ್ಯ ಪ್ರೀತಿ, ಫೊಟೋಗ್ರಫಿ ಹುಚ್ಚುಗಳೆಲ್ಲ ಒಂದಕ್ಕೊಂದು ಕಲಸಿ ಹೋಗಿ ಈ ಆನೆ ಕ್ಯಾಂಪಿಗೆ ಖಾಯಂ ಗಿರಾಕಿಯಾಗಿದ್ದರು. ಇಲ್ಲಿನ ಮಾವುತರು ಆನೆ ಚಾಕರಿಯನ್ನು ವಂಶಪಾರಂಪರ್ಯವಾಗಿ ಬಂದ ನಿಷ್ಠೆಯಲ್ಲಿ ನಡೆಸುತ್ತಾರೆ. (ಇಲ್ಲಿನ ಹೆಚ್ಚಿನ ಮಾವುತರು ಮುಸ್ಲಿಮರೇ ಆದರೂ ಆನೆ ಅವರಿಗೆ ದೇವರ ಸಮಾನ; ಚಪ್ಪಲಿಗಾಲಿನಲ್ಲಿ ಅದರ ಸವಾರಿ ಮಾಡರು!) ಅರಣ್ಯ ಇಲಾಖೆಗೂ ಇವರು ಅನಿವಾರ್ಯ ಸಂಗಾತಿಗಳು. ಆದರೆ ಅವರೊಡನಿದ್ದೂ ಅವರಂತಾಗದ ವ್ಯವಸ್ಥೆಯ ಲೋಪದಲ್ಲಿ ಇಲಾಖಾ ಆನೆಗಳ  ಮಾವುತರು ಮಾತ್ರ ಆಜೀವ ದಿನಗೂಲಿಗಳು. ವೃತ್ತಿಭದ್ರತೆಯಿಂದ ತೊಡಗಿ ಸವಲತ್ತುಗಳ ಪಟ್ಟಿ ಮಾಡಿದರೆ ‘ಇಲ್ಲ’ಗಳ ಸಂಖ್ಯೆ ಬಲು ದೊಡ್ಡದು. ಒಂದೇ ಒಂದು ಸ್ಪಷ್ಟ ಉದಾಹರಣೆ ಹೇಳುವುದಾದರೆ ಅವೇಳೆಯಲ್ಲಿ ಕಾಡು ನುಗ್ಗುವ ಇವರಿಗೆ ಒಂದು ಸರಿಯಾದ ಪಾದರಕ್ಷೆಯೂ ಇಲ್ಲ! ರತ್ನಾಕರ್ ವಾರಕ್ಕೊಮ್ಮೆ ಅಲ್ಲಿಗೇ ಹೋಗಿ, ಪೂರ್ಣ ಸ್ವಂತ ಸಮಯ ಮತ್ತು ವೆಚ್ಚದಲ್ಲಿ (ಉಚಿತ ಔಷಧ ಸಹಿತ) ವೈದ್ಯಕೀಯ ಸಲಹೆ, ಚಿಕಿತ್ಸೆ ಕೊಡುತ್ತಾರೆ! ಮತ್ತೆ ನೆಲದ ಮೇಲಿನ ಅತ್ಯಂತ ದೊಡ್ಡ ಜೀವಿಯಾದರೂ ‘ಶೃಂಖಲೆ ಸಹಿತ ಸ್ವಾತಂತ್ರ್ಯ’ ಅನುಭವಿಸುವ ಆನೆ ಬಗ್ಗೆ ರತ್ನಾಕರರಿಗೆ ನೋಡಿದಷ್ಟೂ ಹೇಳಿದಷ್ಟೂ ಸಾಲದು. ತನ್ನ ಸಂಪರ್ಕಕ್ಕೆ ಬಂದವರನ್ನೆಲ್ಲಾ ಅಲ್ಲಿಗೊಯ್ದು, ಮುಗ್ಧವಾಗಿ ಆನೆ ಕಲಾಪಗಳಲ್ಲಿ ಮುಳುಗಿಸಿ, ವ್ಯವಸ್ಥೆಯನ್ನು ಧಿಕ್ಕರಿಸುವ ಮಾರ್ಗದಲ್ಲಿ ಕಳೆದುಹೋಗುವ ಪರಿಸರ ಶಿಕ್ಷಣಕ್ಕೆ ‘ಪ್ರೀತಿಯ ದಾರಿ’ಯನ್ನು ಶೋಧಿಸುತ್ತಲೇ ಇರುತ್ತಾರೆ. (ಸಕ್ರೆಬೈಲಿಗೆ ಪ್ರವೇಶ ದರ ತಲಾ ಎಪ್ಪತ್ತೈದು ರೂಪಾಯಿ ಕೊಡಲಿದೆ ಎನ್ನುವುದನ್ನು ನಮ್ಮರಿವಿಗೇ ಬಾರದಂತೆ ಇವರು ಪಾವತಿಸಿ ಸುಧಾರಿಸಿದ್ದು ಮೊನ್ನೆ ಮೊನ್ನೆ ಅಭಯ ಸ್ವತಂತ್ರವಾಗಿ ಹೋದಾಗ ತಿಳಿಯಿತು!)

ಅಂದು ಚೌತಿಯಂತೇ ಮುಸ್ಲಿಮರಿಗೂ ಹಬ್ಬದ ದಿನ. ಹಾಗಾಗಿ ಕೆಲವೇ ಮಾವುತರು ಕಾಡಿಗೆ ಹೋಗಿದ್ದರಂತೆ. ನಾವು ಅಲ್ಲಿ ತಲಪಿದಾಗ ಎರಡೇ ಆನೆ ಇತ್ತು. ಸ್ವಲ್ಪೇ ಹೊತ್ತಿನಲ್ಲಿ ಮೂರನೆಯದೂ ಬಂತು. ಕೆಸರು ಬಳಿದುಕೊಂಡ ಅದರ ಬೆನ್ನಿನ ಮೇಲೆ ಮೂರು ಮೂರು ಮುತ್ತುಗದ ಎಲೆ ಹಾಕಿ (ತಮ್ಮ ಬಟ್ಟೆಗೆ ಕೊಳೆಯಾಗದಂತೆ) ಒಬ್ಬ ಮಾವುತ, ಆತನ ಎರಡು ಸಣ್ಣ ಮಕ್ಕಳ ಸವಾರಿ ಬಂತು. ಸೂಚನೆಯ ಮೇರೆಗೆ ಆನೆ ನಿಂತು, ಮುಂಗಾಲು ಎತ್ತಿ, ಡೊಂಕಿಸಿ ಕೊಟ್ಟು ಹುಡುಗರಿಬ್ಬರಿಗೆ ಇಳಿಯಲು ‘ಮೆಟ್ಟಿಲು’ ಒದಗಿಸಿತು. ಮತ್ತೆ ಮಾವುತನ ಸವಾರಿ ನೇರ ತುಂಗೆಯ ಮಡಿಲಿಗೇ ಹೋಯ್ತು. ಸುಮಾರು ಆನೆಯಾಳದ ನೀರಿನಲ್ಲಿ ಎರಡು ಮುಳುಗು ಹಾಕಿಸಿ, ತಾನು ಕೂರಲು ಉಪಯೋಗಿಸಿದ್ದ ಸೊಪ್ಪಿನಲ್ಲೇ ಉಜ್ಜುಜ್ಜಿ ಮಾವುತ ಕರಿಯ ಕೊಳೆ ಕಳೆದು ಬೆಳಗಿದ. ಮತ್ತದು ಸಾರ್ವಜನಿಕ ಸಂಪರ್ಕಕ್ಕಾಗಿಯೇ ಕಟ್ಟಿದ್ದ ಬೇಲಿಯ ಹಿಂದೆ ನಿಂತುಕೊಂಡಿತು. ಅದರ ಮೈ ತಡವುವವರು, ಅದರ ಸೊಂಡಿಲ ನೇವರಿಕೆಯನ್ನು ಆಶೀರ್ವಾದವಾಗಿ ಪಡೆಯುವವರು, ಸವಾರಿ ಹೋಗುವವರು, ಪಟ ಕ್ಲಿಕ್ಕಿಸಿಕೊಳ್ಳುವವರು ಎಲ್ಲಾ ಮುಗಿದ ಮೇಲೆ ಸ್ವಲ್ಪ ಆಚಿನ ಕಟ್ಟೆಯಲ್ಲಿ ಆನೆಫಳಾರ ನಡೆಯುವುದಿತ್ತು. ನಾವು ಕಾದು ನಿಲ್ಲದೆ ಮರಳಿದೆವು.

ತುಂಗಾ ಸಂಗಮಕ್ಕೆ ಒಂದು ಶ್ರೇಣಿಯಾಚೆ ಹೊಂಚುತ್ತಿದ್ದ ಭದ್ರೆಯೂ ಅಭಿವೃದ್ಧಿ ಸರಪಳಿಯನ್ನು ಕಾಲಿಗೆ ಕಟ್ಟಿಕೊಂಡೇ ಸುಂದರಳು! ಅದರ ಒಂದು ಮಗ್ಗುಲಿನ ನೆಲದ ಮೇಲೆ ಕುವೆಂಪು ವಿಶ್ವವಿದ್ಯಾನಿಲಯವಾದರೆ ಇನ್ನೊಂದು ಮಗ್ಗುಲಿನ ಹಿನ್ನೀರಿನ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ವಿಹಾರಧಾಮ ವಿರಾಜಿಸುತ್ತಿದೆ ಎಂದು ಕೇಳಿದ್ದೆ. ಶಿವಮೊಗ್ಗದಿಂದ ಲಕ್ಕವಳ್ಳಿಯತ್ತ ಸುಮಾರು ಮೂವತ್ತೇ ಕಿಮೀ ದೂರದಲ್ಲಿರುವ ಇದನ್ನು ನೋಡದೇ ಬಿಟ್ಟರುಂಟೇ! ತಡೀರಿ, ಕಾರಿಗೊಂದು ಚೂರು ಎಣ್ಣೆ ಕುಡಿಸಿ, ಕುಪ್ಪಳ್ಳಿ - ಶಿವಮೊಗ್ಗದುದ್ದಕ್ಕೆ ಅದರ ಕಣ್ಣಿಗೆ ಕಟ್ಟಿದ್ದ ಕಿಸರು ಕಳೆದು (ಏಯ್, ಪಾಠ ಶುರುವಾಗುವ ಮೊದಲೇ ಗೈಡ್ ಕೇಳುವ ಸ್ನಾತಕೋತ್ತರ ವಿದ್ಯಾರ್ಥಿಗಳಂತಾಡ್ತೀರಲ್ಲಾ! ಪೆಟ್ರೋಲ್ ಹಾಕಿ, ಕೆಸರು ದೂಳು ಅಂಟಿದ ಕಾರಿನ ಮುಂದು ಹಿಂದಿನ ಕನ್ನಡಿ ತೊಳೆದು) ತರ್ತೇನೆ. ಅಬ್ಬಬ್ಬಾಂದ್ರೆ ಒಂದೇ ವಾರದಲ್ಲಿ ಬರ್ತೇನೆ. ಅಷ್ಟರಲ್ಲಿ ಇಷ್ಟುದ್ದದ ಸವಾರಿಗೆ ನಂಗ್ ನಾಕ್ ಕಾಸ್ ಹಾಕ್ತೀರೀಂತ ನಂಬಿದ್ದೇನೆ.

11 comments:

 1. ಇಸ್ಮಾಯಿಲ್31 October, 2010 17:47

  ಗುಬ್ಬಚ್ಚಿ ತೋರಿಸಲು ಶಿವಮೊಗ್ಗೆಗೆ ಅಭಯನ ಜೊತೆ ಹೋದಾಗ ರತ್ನಾಕರ ಅವರ ಆತಿಥ್ಯದ ರುಚಿಯನ್ನು ಅನುಭವಿಸಿದ್ದೆ. ಆಹಾ ಎಷ್ಟು ಒಳ್ಳೆಯ ಊಟ. ಕವಿಗಳ ಸ್ಮಾರಕಗಳ ವಿಷಯದಲ್ಲಿ ನೀವು ಹೇಳಿದ್ದು ನಿಜ.

  ReplyDelete
 2. Laxminarayana Bhat P31 October, 2010 19:53

  ಅನಿಕೇತನರಿಗೆಲ್ಲಾ ಪೇಟ ತೊಡಿಸಿ ಉತ್ಸವಮೂರ್ತಿ ಮಾಡಿ ಧನ್ಯೋಸ್ಮಿ ಎಂದು ಅಬ್ಬರತಾಳಕ್ಕೆ ಕುಣಿಯುವ ಚಪಲಕ್ಕೆ ಕೊನೆಗಾಲವೆಂಬುದಿಲ್ಲಾ ಹರಹರಾ!!!!

  ReplyDelete
 3. ಜನ ಸಾವಿರಸರ್ತಿ ವಿವಿಧ ರೀತಿಯ ಬಸ್ಸುಗಳಲ್ಲಿ ಕಾರುಗಳಲ್ಲಿ ಕಣ್ಣು ಮುಚ್ಚಿ ಕುಳಿತು ಓಡಾಡಿದ ಆಗುಂಬೆಯ ಆಸುಪಾಸಿನ ಸವಕಲು ದಾರಿಯನ್ನೇ ತಾವು ಕಣ್ಣು ಬಿಟ್ಟು ಅದೆಷ್ಟು ಚೆನ್ನಾಗಿ ವರ್ಣಿಸಿದ್ದೀರಿ!
  ಆ ಸೋನೆ ಮಳೆ, ಕಾನನ, ಗಜಾನನ ( =ಆನೆ), ಮಾವುತ, ಮಲೆನಾಡ ಮನೆಗಳು, ಮಲೆನಾಡಿನ ಜನರು, ಅವರ ಜೀವನ ರೀತಿ, ಅವರ ಊಟೋಪಚಾರ, ಅವರ ನಡುವೆ ಹೊಗೆ ಬಿಡುತ್ತಾ ಇರುವ ಪ್ರೊ. ಜವಳಿ ಅವರು!
  ಇದಕ್ಕೆಲ್ಲ ಕಾರಣ ತಮ್ಮ ಸುಪುತ್ರನ ಶಿಕಾರಿ!

  ಅಭಯ ಸಿಂಹರಿಗೆ ಮತ್ತು ಅವರ ಶಿಕಾರಿಗೆ ನಮ್ಮ ಶುಭಹಾರೈಕೆಗಳು.

  ಮೀಸೆವರ್ಧನರೇ! ತಮ್ಮೊಂದಿಗೇ ಪಯಣಿಸಿದ ಅನುಭವ ಆಯಿತು. ನಾನು ತಮ್ಮನ್ನು ಕೆಲ ವರ್ಷಗಳ ಹಿಂದೇಯೇ ಪರಿಚಯಿಸಿಕೊಳ್ಳಬೇಕಾಗಿತ್ತೆಂಬ ವ್ಯಥೆಯೂ ಜತೆಗೆ ಇದೆ.
  ಆ ವ್ಯಥೆಗೆ ಈಗ ಮದ್ದಿಲ್ಲ.

  ವೈದ್ಯೋತ್ತಮ ಶಸ್ತ್ರ ವೈದ್ಯ ಡಾಕ್ಟರ್ ಪರಮಾನಂದರಾಯರು ಇನ್ನಿಲ್ಲ ! - ಎಂಬ ಸಂಗತಿ ತಿಳಿದು ತುಂಬಾ ದುಃಖ ಆಯಿತು. ಸದಾ ರೋಗಿಗಳ ಸೇವೆಯಲ್ಲೇ ತನ್ಮಯರಾಗಿ ತನ್ನ ದೇಹವನ್ನು ಅವಿರತವಾಗಿ ದಂಡಿಸಿಕೊಳ್ಳುತ್ತಾ ಇದ್ದ ನಗುಮುಖದ ಶಸ್ತ್ರವೈದ್ಯ ಶಿರೋಮಣಿಗೆ ಕಾಲನು ಈಗ ಚಿರ ವಿಶ್ರಾಂತಿ ಇತ್ತನೇ?
  ಅವರ ಆತ್ಮಕ್ಕೆ ಶಾಂತಿ ಇರಲಿ.

  ತಮ್ಮ ಮಿಂಚಂಚೆಯ ಪತ್ರಕ್ಕೆ ಮತ್ತು ಉತ್ತಮ ಪ್ರವಾಸ ಲೇಖನ ಮಾಲೆ ಹೊಂದಿದ ಬ್ಲಾಗ್ ಬರಹಕ್ಕೆ ನಾನು ಆಭಾರಿ.
  ನಮಸ್ಕಾರಗಳು.
  - ಪೆಜತ್ತಾಯ ಎಸ್. ಎಮ್.

  ReplyDelete
 4. ಅಶೋಕವರ್ಧನ31 October, 2010 23:02

  ಪೆಜತ್ತಾಯರ ನುಡಿಗೆ ಪ್ರೇರಣೆ ಕೊಟ್ಟ ನನ್ನ ಪತ್ರದ ಸಾರ:
  ನಿಮ್ಮನ್ನು ತೀರ್ಥಳ್ಳಿಯ ಹೊರವಲಯದಲ್ಲೇ ಬಿಟ್ಟು ನಾನು ಮಡಿಕೇರಿ ಅಜ್ಜಿಗೆ (ಘೋಷಿಸಿಕೊಳ್ಳದೇ) ವಿದಾಯ ಹೇಳುವುದು ಅನಿವಾರ್ಯವಾಯ್ತು (ಇದರ ಹಿಂದಿನ ಲೇಖನ ನೋಡಿ - ಅಜ್ಜಿಯೋ ಅಮ್ಮನೋ). ಇಂದು ನಮ್ಮ ಮನೆಯ ಪ್ರಿಯ ವೈದ್ಯ| ಕೆ. ಪರಮಾನಂದ ರಾವ್ ನಿಧನ ವಾರ್ತೆ ಉದಯವಾಣಿಯಲ್ಲಿ ಓದಿ ಮನಸ್ಸು ತಲ್ಲಣಿಸಿದೆ.

  ನನ್ನಪ್ಪನಿಗೆ ಹರ್ನಿಯಾ, ನನಗೆ ಪೈಲ್ಸ್, ನನ್ನ ಮಗನಿಗೆ ಅಪೆಂಡಿಸೈಟ್ ಕತ್ತರಿಸಿ ಮೂರೂ ತಲೆಮಾರನ್ನು ಜೀವಂತವಾಗಿಟ್ಟ, ಬಲುದೊಡ್ಡ ಪುಸ್ತಕ ಪ್ರೇಮಿ, ದಟ್ಟ ಹಾಸ್ಯಪ್ರಜ್ಞೆಯ ಮೂರ್ತಿಯಾದರೂ ಅರ್ಥ ಮಾಡಿಕೊಳ್ಳದವರು ಮುಂಗೋಪಿಯೆಂದೇ ಭ್ರಮಿಸಿದ್ದ, ಡಿಗ್ರಿಗಷ್ಟು ಕಳೆದುಕೊಂಡದ್ದನ್ನು ಮುಂದಿನ ಮೂರು ತಲೆಮಾರಿಗಾಗುವಷ್ಟು ಗಳಿಸುವ ಯಮರಾಜ ಸೋದರರ ನಡುವೆ ಪರಮ ಹೃದಯವಂತ, ಅಂದಿನ ವಿನಯಾ ಕ್ಲಿನಿಕ್ಕಿನ ಯಜಮಾನರು ಬೇರೇ ಇದ್ದರೂ ಎಲ್ಲರ ಬಾಯಲ್ಲಿ ‘ಬಾಸ್’ ಆಗಿದ್ದ ಡಾ| ಕೆಪಿ ರಾವ್ ಇನ್ನಿಲ್ಲ.

  ನನ್ನಪ್ಪ (ಜಿಟಿನಾ) ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ ದಿನಗಳಲ್ಲಿ ಇವರು ತಂದೆಯನ್ನು ಗುರುಸಮಾನರೆಂದು ಭಾವಿಸಿ, ವೃತ್ತಿಶುಲ್ಕ ತೆಗೆದುಕೊಳ್ಳಲಿಲ್ಲ. ನಾನು ಒತ್ತಾಯಿಸಲು ಹೋದಾಗ ಹುಬ್ಬು ಗಂಟು ಹಾಕಿ, "ಹೋಗಿ, ಅಂಗಡಿಗೆ ತಡವಾಯ್ತು" ಎಂದು ಗದರಿದರು. ಮತ್ತೆ ತಂದೆಯಲ್ಲಿ, "ದೊಡ್ಡ ಮೀಶೆಯವರಿಗೆ ಹೇಳಿ ನನಗೆ ಉಪದ್ರ ಕೊಡಬಾರದೂಂತ" ಎಂದೂ ಫರ್ಮಾನು ಹೊರಡಿಸಿಬಿಟ್ಟಿದ್ದರು. ನನ್ನ ಚಿಕಿತ್ಸೆ ಕಾಲದಲ್ಲಿ ಪ್ರವಾಸದಲ್ಲಿದ್ದ ನನ್ನ ತಾಯಿಯ ವ್ಯಾನು ಒಂದೆಡೆ ಮಗುಚಿದ್ದರೂ ಯಾರಿಗೇನೂ ಆಗದೆ ಬಚಾವಾಗಿ ಬಂದಿದ್ದರು. ಅವರನ್ನು ನೋಡಿದ ಕೂಡಲೇ ಕೆಪಿ ರಾಯರು ಗಂಭೀರ ದೃಷ್ಟಿ ನೆಟ್ಟು "ಏನು ನಿಮಗೆ ಟಿಕೇಟು ಸಿಗಲಿಲ್ವಾ" ಎಂದು ಕೇಳಿದ್ದು ಸುತ್ತಿನವರಿಗೆ ಗಾಬರಿ ಹುಟ್ಟಿಸಿದರೂ ತಾಯಿ ಇಂದೂ ನೆನೆಸಿಕೊಂಡು ಮನಸ್ವೀ ನಗುತ್ತಾಳೆ. ಮತ್ತೊಮ್ಮೆ ಅಮ್ಮ ತನ್ನ ಗಂಟು ನೋವಿಗೆ ಯಾರೋ ಹೇಳಿದ ಮಾತ್ರೆಯನ್ನು ಪರಮಾನಂದರಾಯರಿಗೆ ತೋರಿಸಿ ಅಭಿಪ್ರಾಯ ಕೇಳಿದ್ದಳು. ರಾಯರು ಆ ಮಾತ್ರೆ ನೋಡಿ ಮುನಿಸಿಕೊಂಡು "ಇದರ ದುಷ್ಪರಿಣಾಮ ಅಡ್ಡ ಹೊಡೆಯಲು ಇನ್ನೊಂದು ಮತ್ತದಕ್ಕೆ ಪ್ರತ್ಯಸ್ತ್ರ ಮಗುದೊಂದು ಹೇಳಿಲ್ಲವೇ" ಎಂದು ಸರಿಯಾಗೇ ಕೇಳಿದ್ದರು. ಅಮ್ಮ ಹೌದೆಂದು ಗೋಣು ಹಾಕುತ್ತಾ ಪರ್ಸಿನಿಂದ ಒಂದೊಂದೇ ತೆಗೆದು ತೋರಿಸಿದಾಗ, "ಇಷ್ಟೇ ಸಾಲದು ಔಷಧಿ ಕಂಪನಿ ಆರೋಗ್ಯಕ್ಕೆ" ಎಂದು ಮುಗಿಸಿದ್ದರು! ಪರಮ ಗೌರವಾನ್ವಿತ, ನಮ್ಮೆಲ್ಲರ ಆರೋಗ್ಯಾನಂದ ದಾಯಕ ರಾಯರು ನಮ್ಮ ನೆನಪಲ್ಲಂತೂ ಚಿರಸ್ಥಾಯೀ.
  ಅಶೋಕವರ್ಧನ

  ReplyDelete
 5. ಶ್ಯಾಮಲಾ ಮಾಧವ01 November, 2010 20:46

  ಫ್ರಿಯ ಶ್ರಿ ಆಸೊಕವರ್ಧನ,
  ರಜ್ಯೊಥ್ಸವದ ಷುಭಶಯಗಲು.
  ತೀರ್ಥಳ್ಳಿಯ ತೀರ್ಥಯಾತ್ರೆ, ಮನಸ್ಸಿಗೆ ಪ್ರಚ್ಚನ್ನ ಆನಂದವನ್ನಿತ್ತಂತೆಯೇ ಡಾ| ರತ್ನಾಕರ್ ಅವರ ಬಗ್ಗೆ ನೀವಿತ್ತ ಆತ್ಮೀಯ ಚಿತ್ರಣ ಆ ಪವಿತ್ರಾತ್ಮರ ಬಗ್ಗೆ ಗೌರವ, ಅಭಿಮಾನವನ್ನು ಮೂಡಿಸಿತು. ಮಂಡಗದ್ದೆಯ ಚಿತ್ರಣ ಅಪ್ಯಾಯಮಾನವೆನಿಸಿತು. ಮನ ಬಂದಂತೆ ಪ್ರಕೃತಿ ದರ್ಶನಕ್ಕೆ ಹೊರಡುವ ನೀವು ನಿಜಕ್ಕು ಧನ್ಯರು.
  ಶ್ಯಾಮಲ.

  ReplyDelete
 6. hoy marayre na ane bidaradalli entry fee yavathu kottilla.nanna jothe hodavrigu thagolalla.na thumba sala try madi ticket thagoloke hodre nanna vapas kalsthare. eno avra gratitude adu. howdu neevu helida hage aane andre nange vismaya. abhayna moolaka ondu olle documentary madisbeku antha kanaside. nanna bagge prachara jasthi madbedi. mosarannada nanthara 2 lekhana kalsidini.bhagya idre odo avkasha !

  Rathnakar

  ReplyDelete
 7. ಪೆಜತ್ತಾಯ ಎಸ್.ಎಂ02 November, 2010 06:28

  ಕುಪ್ಪಳ್ಳಿಯಲ್ಲಿ ಯಾರದೋ ಸ್ಟೋನ್ ಹೆಂಜ್ ಸ್ಮಾರಕದ ಡ್ಯೂಪ್ಲಿಕೇಟ್ ಕಂಡೆ.
  ಆಂಗ್ಲರು ಶೇಕಪ್ಪಯ್ಯರ ಏವನ್ ನದಿಯ ಬದಿಯ ಮನೆಯನ್ನು ಕಾಪಾಡಿದಂತೆ!
  ನಾವು ಕುಪ್ಪಳಿಮನೆಯನ್ನು ಕೆಡವಿ ಪುನರ್ನಿರ್ಮಾಣ ಮಾಡಿ ಆಗಿದೆ.
  ನಾವೂ ಏನಾದ್ರೂ ಮಾಡಬೇಕಲ್ಲ?
  ದೆಹಲಿಯಂತೂ ಸ್ಮಾರಕಗಳ ( ಮಾರಕಗಳ) ಸಂತೆ!
  ಅದೆಲ್ಲಾ ಇರಲಿ.
  ಡಾ. ಪರಮಾನಂದ ರಾಯರು ಅದೆಷ್ಟು ಜನರನ್ನು ಉಳಿಸಿದ್ದಾರೋ?
  ಡಾ. ಪರಮಾನಂದ ರಾಯರಿಗೆ ಜೀವಂತ ಸ್ಮಾರಕಗಳು ನಾವು!

  ReplyDelete
 8. S. Rghavendra Bhattaಪೆಜತ್ತಾಯ ಎಸ್.ಎಂ04 November, 2010 21:27

  Dear Ashoka,
  While joining you in paying tribute to Dr K P Rao whose qualities were praised by Sri GTN on some occasions permit me to narrate a notorious way one ( in ) famous doctor was ridiculed in Mysore for his prescriptions.
  If the total of the items in the proscriptions list is EVEN, then the patient has no ailment at all, is the inference !! Amazing, but how? It is this way -- Each item will cancel the next item and thus it is a clear case of " no problem variety " !!
  Instead of this, if the total of the items is ODD then there is some problem and hence, this prescrption. But the perplexing point is, as the doctor is not cocksure of which medicine is the really effective one, this long list is prepared. By permutation and combination with an added dose of luck of Bharateeya belief one of the many suggested may work!!
  Q E D !!
  S R Bhatta

  ReplyDelete
 9. ಅಶೋಕವರ್ಧನ04 November, 2010 21:46

  ಪ್ರೊ| ರಾಘವೇಂದ್ರ ಭಟ್ಟರ ಸಮ ಸಂಖ್ಯೆ, ಬೆಸ ಸಂಖ್ಯೆ ಲೆಕ್ಕಾಚಾರ ಕೇಳಲು ತಮಾಷೆಯಾಗಿದ್ದರೂ ವೃತ್ತಿಯಲ್ಲಿ ನೈತಿಕತೆ ತಲುಪಿದ ಆಳವನ್ನು ನಿಸ್ಸಂದೇಹವಾಗಿ ತೋರುತ್ತದೆ. ಆದರೆ ನಮ್ಮ ವೈದ್ಯ ಮಹಾಶಯ ಪರಮಾನಂದ ರಾಯರದು ವಿಶ್ವೇಶ್ವರಯ್ಯ ಮಟ್ಟದ ತತ್ವನಿಷ್ಠೆ ಎನ್ನುವುದಕ್ಕೆ ನಮ್ಮನುಭವಕ್ಕೆ ಬಂದ ಒಂದು ಘಟಣೆ ನೋಡಿ: ಹರ್ನಿಯಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಪೂರ್ಣ ಚೇತರಿಸಿದ ನನ್ನ ತಂದೆ ಮೈಸೂರಿಗೆ ಮರಳಿದ ಮೇಲೆ ಪರಮಾನಂದರಾಯರ ಬಗ್ಗೆ Star of Mysore ಪತ್ರಿಕೆಗೆ ಒಂದು ಲೇಖನ ಬರೆದು ಕೊಟ್ಟರು. ಅದು ಪ್ರಕಟವಾದ ಮೇಲೆ ಪ್ರತಿಯನ್ನು ಕಳಿಸಿಕೊಟ್ಟಿದ್ದರು. ಕೂಡಲೇ ಂತು ರಾಯರ ವಾಗ್ಭಾಣ "ಇಲ್ಲ, ಹೀಗೆಲ್ಲಾ ಬರೆಯಬಾರದು."
  ಅಶೋಕವರ್ಧನ

  ReplyDelete
 10. ವಂಟಿಮಾರು ಮಧುಸೂದನ05 November, 2010 00:29

  ಅಶೋಕವರ್ಧನರೇ, ಪರಮಾನಂದರಾಯರಂತಹ ವೈದ್ಯರ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ. ’ವಿಶ್ವೇಶ್ವರಯ್ಯ ಮಟ್ಟದ ತತ್ವನಿಷ್ಠೆ’ ಅಂತ ಸರಿಯಾಗಿ ಉಪಮೆ ಕೊಟ್ಟಿದ್ದೀರಿ. ಅಂತಹವರೊಬ್ಬರು ಇತ್ತೀಚಿನವರೆಗೆ ಮಂಗಳೂರೆಂಬ ನಗರಿಯಲ್ಲಿ ವೈದ್ಯವೃತ್ತಿ ಮಾಡುತ್ತಿದ್ದರೆಂಬುದೇ ಒಂದು ನೆಮ್ಮದಿಯ ವಿಷಯ.

  ReplyDelete
 11. ಹರೀಶ ಪೇಜಾವರ07 November, 2010 15:04

  ವ್ಯಾಘ್ರ ಗಾಂಭೀರ್ಯದ ನಿಜವಾಗಿಯೂ ಹ್ಯಾಂಡ್ಸಂ ಆಗಿದ್ದ ಪರಮಾನಂದ ರಾಯರನ್ನು ಮರೆಯುವುದು ಸಾಧ್ಯವೇ ಇಲ್ಲ. ನನ್ನ ಔಷಧ ಮಾರಾಟದ ದಿನಗಳಲ್ಲಿ ಭಾರತ್ ಬಿಲ್ಡಿಂಗಿನ ಮೂಲೆಯ ಕ್ಲಿನಿಕ್ಕಿನಲ್ಲಿ ಇವರನ್ನು ಸಂಧಿಸುತ್ತಿದ್ದ ದಿನಗಳಲ್ಲಿ ಒಂದು ಸಲ "ಪೌರುಷದ " ಮಾತ್ರೆಗಳ ಬಗ್ಗೆ ಹೇಳಿದಾಗ ತನ್ನ ಸುಂದರ ಮೀಸೆಯಡಿಯಿಂದ ತುಂಟ ನಗೆ ನಕ್ಕದ್ದಂತೂ ಚೆನ್ನಾಗಿ ನೆನಪಿದೆ .

  ತಲೆ ಯಾವಾಗಲೂ ಹೆಗಲ ಮೇಲೆಯೇ ಇರುವ ವೈದ್ಯರ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಇವರು ಹೊರತು ಹೋಗಿರುವುದು ಖೇದ ಹುಟ್ಟಿಸುತ್ತದೆ.

  ಹರೀಶ ಪೇಜಾವರ

  ReplyDelete