ದಿಟದ ನಾಗರಕ್ಕೆ ಮಣಿಯಿರೋ

ನನ್ನ ಹವ್ಯಾಸೀ ವಾಸನೆಗಳು ನನ್ನ ವೃತ್ತಿರಂಗಕ್ಕೂ (ಪುಸ್ತಕ ವ್ಯಾಪಾರ) ದಟ್ಟವಾಗಿ ವ್ಯಾಪಿಸಿರುವುದರಿಂದ ಪರ್ವತಾರೋಹಣ ಕೂಟ ಕಟ್ಟಿದೆ, ಯಕ್ಷಗಾನಾಸಕ್ತರನ್ನು ಮೇಳೈಸಿದೆ, ಬಳಕೆದಾರ, ವನ್ಯ, ಪರಿಸರ ಇತ್ಯಾದಿ ಜಾಗೃತಿಗಳಲ್ಲಿ ಕೈಜೋಡಿಸುವಂತಾದೆ. ನನ್ನ ಹುಚ್ಚುಗಳಿಗೆ ಪೂರಕವಾಗಿ ನನ್ನಲ್ಲಿಗೆ ಬರುವ ಗಿರಾಕಿಗಳಲ್ಲೂ ಸುಮಾರು ಜನ ‘ವಿಚಿತ್ರದವರೇ’! ಉಳಿದವರ ವಿಚಾರ ಹಾಗಿರಲಿ, ಹೀಗೇ ಕೆಲವು ವರ್ಷಗಳ ಹಿಂದೆ ಪರಿಚಯವಾದ ಉಡುಪಿಯ ಗುರುರಾಜ ಸನಿಲ್ ಬಗ್ಗೆಯಂತೂ ‘ಇವರದು ಒಂದು ಸುತ್ತು ಹೆಚ್ಚು’ ಎಂದನ್ನಲೇಬೇಕು. ಪ್ರಾಯ ನಲ್ವತ್ಮೂರು ವರ್ಷ, ಓದು ಕೇವಲ ಎಸ್ಸೆಲ್ಸಿ, ಹೆಂಡತಿ ಮತ್ತು ಒಬ್ಬ ಮಗನ ಸಂಸಾರಿ, ವೃತ್ತಿಯಲ್ಲಿ ಕಾರು ಬಾಡಿಗೆಯ ಚಾಲಕ. ಇವರ ಹವ್ಯಾಸ ಜೀವಪಣಕ್ಕಿಟ್ಟು ಹಾವುಗಳ ರಕ್ಷಣೆ ಎಂದರೆ ನೀವು ನಂಬಲೇಬೇಕು. ಒಂದಲ್ಲ, ಎರಡಲ್ಲ ಹನ್ನೊಂದು ಬಾರಿ ವಿಷದ ಹಾವುಗಳಿಂದ ಕಚ್ಚಿಸಿಕೊಂಡು ಪಡಬಾರದ ಸಂಕಟವೆಲ್ಲ ಅನುಭವಿಸಿ (ಅದರಲ್ಲೂ ಎರಡು ಸಲವಂತೂ ಮರಣಾಂತಿಕ ಎನ್ನುವ ಸ್ಥಿತಿ ಮುಟ್ಟಿ, ಮರಳಿ) ಬಂದರೂ ಸ್ವಂತ ಮಗನ ತಲೆಯ ಮೇಲೇ ಕೈಯಿಟ್ಟು ಪಾರಂಪರಿಕ ನಂಬಿಕೆಯ ಆಣೆ ಹಾಕಿ ‘ಹಾವಿನ ಉಸಾಬರಿ ಬಿಟ್ಟೆ’ ಎಂದರೂ ಬಿಡದ ನಂಟು ಇವರದು ಹಾವುಗಳೊಡನೆ. ಸುಮಾರು ಮೂವತ್ತು ವರ್ಷಗಳಲ್ಲಿ ಇವರು ರಕ್ಷಿಸಿದ ಹಾವುಗಳ ಸಂಖ್ಯೆ ಕಡಿಮೆ ಎಂದರೂ ಹದಿನೈದು ಸಾವಿರ ಮೀರುತ್ತದೆ!

ಆಗ ಪ್ರಧಾನ ‘ಹಾವಾಡಿಗ’ನಾಗಿದ್ದ ಶರತ್ ಅಧ್ಯಾಪಕನಾಗಿದ್ದುಕೊಂಡು ಬಿಸಿಲೆ ವಲಯದಲ್ಲಿ ಕೇರೇ ಹಾವಿನ ಮೇಲೆ ಸಂಶೋಧನೆ ನಡೆಸಿದ್ದಲ್ಲದೆ ಹೆಚ್ಚಿನ ಅಧ್ಯಯನ ಮತ್ತೆ ವೃತ್ತಿ ಆಸಕ್ತಿಗಳಲ್ಲಿ ಅಮೆರಿಕದಲ್ಲಿ ಕಳೆದುಹೋದ! ಆದರೆ ಚಾರ್ಲ್ಸ್ (ಚರವಾಣಿ: ೯೮೪೪೦೦೧೩೫೧) ಯಾವುದೇ ಪ್ರಚಾರದ ಕುದುರೆ ಏರದೆ ಇಂದಿಗೂ ಮಂಗಳೂರಿನ ಆಸುಪಾಸಿನಲ್ಲಿ ಆಪ್ತ ಉರಗರಕ್ಷಕನಾಗಿಯೇ ಮುಂದುವರಿದಿದ್ದಾರೆ. ಅವರ ಸಂಚಾಲಕತ್ವದ Animal Care Trustನ ಸೇವೆಯಲ್ಲಿ ಬರಿಯ ಉರಗಗಳಲ್ಲ (ಮನುಷ್ಯನೆಂಬ ದುಷ್ಟಮೃಗವನ್ನು ಬಿಟ್ಟು) ಮಂಗಳೂರಿನ ಸಕಲ ಜೀವರಾಶಿಯೂ ಲಾಭ ಪಡೆಯುತ್ತಿದೆ ಎಂದರೆ ಅತಿಶಯೋಕ್ತಿಯಾಗದು. ಜಿಲ್ಲೆಯೊಳಗಿನ ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಆ ಕಾಲದಲ್ಲೇ ನಾನು ಮನ್ಮಥ, ಐತಾಳ, ವಳಲಂಬೆ ಮುಂತಾದವರ ಇನ್ನೊಂದೇ ಸ್ತರದ ‘ನಾಗಾಭರಣರ’ ಬೆಳವಣಿಗೆಯನ್ನೂ ಸಾಕಷ್ಟು ಕಂಡವನೇ. ಪ್ರಚಾರದ ಹುಚ್ಚೋ ಹಣಮಾಡುವ ಗೀಳೋ ಅಂತೂ ಒಂದು ಮಟ್ಟದ ಪರಿಸರ ಜಾಗೃತಿ ಮೂಡಿಸುವಲ್ಲಿ ಅವರು, ಅಂಥವರು ತೀರಾ ಆವಶ್ಯಕರೇ ನಿಜ. ಹಾಗೇ ಇನ್ನೊಬ್ಬ ಎನ್ನುವಂತೆ, ಅಲ್ಲಿ ಇಲ್ಲಿ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಾ ನನ್ನಲ್ಲಿಗೆ ಪುಸ್ತಕ ಹುಡುಕಿ ಬಂದಾಗ ಮಾತು ಬೆಳೆಸುತ್ತಾ ಒಂದು ಮಟ್ಟಿನ ಆಪ್ತರಾದವರು ಈ ಗುರುರಾಜ ಸನಿಲ್.

‘ಹಾವು ನಾವು’ ತಣ್ಣಗೆ ನನ್ನೊಳಗೆ ಹರಿಯುತ್ತ ಹೋಯ್ತು. ಗುರುರಾಜನೆಂಬ ಬಡ ಹಳ್ಳಿ ಹುಡುಗ ಸುತ್ತಣ ಜೀವವೈವಿಧ್ಯಕ್ಕೆ ಕುತೂಹಲದ ಆದರೆ ಕಾಳಜಿಪೂರ್ಣ ಕಣ್ಣು ತೆರೆದದ್ದು ಮೊದಲು ನನ್ನನ್ನು ಆಕರ್ಷಿಸಿತು. ಆತನ ಪ್ರೀತಿಯ ಬಿಳಿ ಇಲಿಗಳನ್ನು ನುಂಗಬಂದ ನಾಗರಹಾವನ್ನು ದೂರಮಾಡಲು ಹೋಗಿ, ಆತನ ಅಜ್ಜಿಯೇ ಪ್ರಾಣಕ್ಕೆರವಾದದ್ದು, ಸಹಜವಾಗಿ ಹಾವುಗಳ ಬಗ್ಗೆ ಬಾಲಕ ಸನಿಲನಿಗೆ ದ್ವೇಷ ಮೂಡಿದ್ದು ಆಶ್ಚರ್ಯವಾಗಲಿಲ್ಲ. ಆದರೆ ಬಡಿದು ಕೊಲ್ಲಲೆಂದೇ ಆತ ಹಿಡಿದು ತಂದ ನಾಗರಹಾವಿನ ಎದುರು ಆತನ ಬಗೆಗಣ್ಣು ತೆರೆದು, ಉರಗಪ್ರೇಮವಾಗಿ ಪರಿವರ್ತನೆಗೊಂಡದ್ದು ನಿಜಕ್ಕೂ ವಿಶಿಷ್ಟ. ಬಾಲಕನಾಗಿದ್ದಾಗ ಸನಿಲ್ ಮುಗ್ಧವಾಗಿ ಮೀನಿನ ಬಲೆಗೆ ಕೈ ಹಾಕಿ ನೀರೊಳ್ಳೆಯಿಂದ ಕಡಿಸಿಕೊಂಡು ತಾಯಿಯಿಂದ ಗಾಯಕ್ಕೆ ಉಪಚಾರದೊಡನೆ ಬುದ್ಧಿಗೊಂದು ಗುದ್ದೂ ತಿಂದಿದ್ದ. ಆದರೆ ಮುಂದೆ ಬೆಳೆದ ಬುದ್ಧಿಗೆ ತಾನೇ ವಿಧಿಸಿಕೊಂಡ ಸಾಮಾಜಿಕ ಬದ್ಧತೆಯ ಹೊರೆ ಇತ್ತು. ಅದೊಂದು ದಿನ ಎಂದಿನಂತಲ್ಲ. ದಿನದ ಹದಿನೇಳನೇ ‘ಕೊಳ್ಳೆ’ ಹಿಡಿಯಲು ಕರೆ ಸನಿಲ್ ನಿರಾಕರಿಸಲಿಲ್ಲ. ರಾತ್ರಿಯ ಅವೇಳೆ, ಹಾವು ವಿಷಪೂರಿತ ಎಂದೆಲ್ಲ ಅರಿವಿದ್ದೂ ಹಾವನ್ನೇನೋ ಪಾರುಗಾಣಿಸಿದ ಗುರುರಾಜ ಸನಿಲ್ ಪರಿಸ್ಥಿತಿಯ ಪಿತೂರಿಯಲ್ಲಿ ಕಚ್ಚಿಸಿಕೊಂಡು, ತಿಂಗಳುಗಟ್ಟಳೆ ನರಳಿ, ಮರಳಿದ ಆಖ್ಯಾಯಿಕೆಯಂತೂ ಪರಮಾಶ್ಚರ್ಯದೊಡನೆ ಯಾರಲ್ಲೂ ತೀವ್ರ ಭಾವಸ್ಪಂದನ ಮಾಡದಿರದು.
ಹೆಚ್ಚೆಂದರೆ ಹಾವು ಹಿಡಿಯುವ ಇನ್ನೊಬ್ಬ ವ್ಯಕ್ತಿಯಾಗಷ್ಟೇ ಉಳಿಯಬಹುದಾಗಿದ್ದ ‘ಟ್ಯಾಕ್ಸೀ ಡ್ರೈವರನಿಗೆ’ ನೈತಿಕ ಬಲ ಉದ್ದಕ್ಕೂ ಕೊಟ್ಟು, ಉಪಯುಕ್ತ ಕೃತಿಕಾರನ ಮಟ್ಟಕ್ಕೆ ಏರಿಸಿದರೂ ತನ್ನನ್ನು ಮೆರೆಸಿಕೊಳ್ಳದ ಬಲರಾಂ ಭಟ್ಟರು ಬಹುಮುಖ್ಯವಾಗಿ ಅಭಿನಂದನಾರ್ಹರು. (ಕೃತಿ ಪ್ರಕಟಣೆಗೆ ನೆರವಾದವರ ಚಿತ್ರಪುಟದಲ್ಲಿ ಭಟ್ಟರು ತನ್ನ ಚಿತ್ರ ಹಾಕುವುದನ್ನು ಒಪ್ಪಲಿಲ್ಲ. ದಾಖಲೆಯ ಮಟ್ಟದಿಂದ ಆಚೆಗೆ ತನ್ನ ಬಣ್ಣಿಸಲೂ ಅವಕಾಶ ಕೊಟ್ಟಿಲ್ಲ!) ಗೆದ್ದವರ ಆಚೀಚೆ ಮುಖ ತೂರುವವರು ಇದ್ದದ್ದೇ. ಆದರೆ ಜೀವನದುದ್ದಕ್ಕೆ ಎಲ್ಲವನ್ನೂ ಸಮಸ್ಥಿತಿಯಲ್ಲಿ ಪರಿಗ್ರಹಿಸಿ ಜೊತೆಗೊಟ್ಟ ಇವರ ಹೆಂಡತಿ, ಮಗ, ಭಾವ ಇತ್ಯಾದಿ ಪುಸ್ತಕದಲ್ಲಿ ಹೆಸರಿಸಲಾದ ಕೆಲವು ಬಂಧುಗಳ ಪಾತ್ರ ಹೆಚ್ಚು ಹೇಳದಿದ್ದರೂ ಮರೆಯುವಂತದ್ದಲ್ಲ.

ನನ್ನ ಮೇಲಿನ ಮಾತೆಲ್ಲ ಕೇಳಿ ನೀವು ‘ಹಾವು ನಾವು’ ಪುಸ್ತಕದ ಬಗ್ಗೆ ಇದೇನು ಮಂಡನೆಯೋ ಖಂಡನೆಯೋ ಎಂಬ ತಪ್ಪುಗ್ರಹಿಕೆಗೆ ಒಳಗಾಗಬೇಡಿ. ಪುಸ್ತಕದ ಬಹುದೊಡ್ಡ ಪಾಲು ಅಂದರೆ ಸುಮಾರು ನೂರಿಪ್ಪತ್ತಕ್ಕೂ ಮಿಕ್ಕು ಪುಟಗಳು ಅವಿಭಜಿತ ದಕ ಜಿಲ್ಲೆಯ ಹಾವುಗಳ ಸಚಿತ್ರ ಪರಿಚಯಕ್ಕೇ ಮೀಸಲು. ಗುರು(ಗಳ)ರಾಜ ತನ್ನ ಶಾಲಾ ಕಲಿಕೆಯ ಮಿತಿಯನ್ನು ಕಳಚಿಕೊಂಡು, ಆಧುನಿಕ ಪ್ರಾಣಿ ವಿಜ್ಞಾನದ ವಿದ್ಯಾರ್ಥಿಯಾಗಿ ಮಾಡಿದ ಮನೆಗೆಲಸ ಅಚ್ಚುಕಟ್ಟಾಗಿ ಮೂಡಿದೆ. ಸಾಮಾನ್ಯ ತಿಳುವಳಿಕೆಗೆ ಧಾರಾಳವಾಗುವಷ್ಟು ಹಾವುಗಳ ಲಕ್ಷಣಗಳು, ವರ್ತನ ವಿವರಣೆಗಳು, ಆಕಸ್ಮಿಕಗಳಿಂದ (ಮುಖ್ಯವಾಗಿ ವಿಷ ಕಡಿತ) ಒದಗುವ ಪರಿಣಾಮಗಳು ಮತ್ತು ಪರಿಹಾರಗಳು ನಿಸ್ಸಂದಿಗ್ಧವಾಗಿ ಇಲ್ಲಿದೆ. (ಸ್ವತಃ ಹನ್ನೊಂದು ಬಾರಿ ಕಡಿಸಿಕೊಂಡ ಅನುಭವಿ!) ಇವಕ್ಕೆಲ್ಲ ಸಹಕರಿಸಿದವರನ್ನು ಪುಸ್ತಕದಲ್ಲಿ ಪಟ್ಟಿ ಮಾಡುವುದು ಅಪ್ರಾಯೋಗಿಕವಾದರೂ ಅದನ್ನು ವಿನಯಪೂರ್ವಕವಾಗಿ ಸೂಚಿಸುವ ಕೆಲಸದಲ್ಲಿ ಸನಿಲ್ ಹಿಂದೆ ಬಿದ್ದಿಲ್ಲ. ಮುಖ್ಯವಾಗಿ ಭಾಷೆ ಬಂಧಗಳ ಒಪ್ಪಕ್ಕೆ ಪ್ರಾಧ್ಯಾಪಕ ಗಣನಾಥ ಎಕ್ಕಾರು ಕೈಗೂಡಿಸಿದ್ದಾರೆಂಬ ಉಲ್ಲೇಖ ಮತ್ತೆ ಪುಸ್ತಕಕ್ಕೆ ಅವರ ಬೆನ್ನುಡಿ ಉಚಿತೋಚಿತವಾಗಿದೆ.
ಹಾವುಗಳು ನಮ್ಮವಾಗುವಲ್ಲಿ (ಹಾವು ನಾವು) ಗುರುರಾಜ ಸನಿಲರ ಪುರೋಹಿತ-ತನವನ್ನು ಅರ್ಥಪೂರ್ಣವಾಗಿಸೋಣ. (ಕೊಂಡು, ಮನನ ಮಾಡಿ, ಅನುಷ್ಠಾನಿಸುವಲ್ಲಿ ಪ್ರಾಮಾಣಿಕರಾಗೋಣ) ಆಕಸ್ಮಿಕವಾಗಿ ಬಂದು ಹೋದ ವನ್ಯಜೀವಿ ಸಪ್ತಾಹಕ್ಕೆ (ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರ) ಅದಕ್ಕಿಂತ ದೊಡ್ಡ ಗೌರವ ಇನ್ನೊಂದಿರಲಾರದು. ಅವಾಸ್ತವವಾಗಿ ಗಗನದೆತ್ತರಕ್ಕೆ ನಿಂತು, ತನ್ನ ನೂರೆಂಟು ಜಡೆಬಿಡಿಸಿ, ಸಮಾಜವನ್ನು ಕಾಳಿಂದೀ ಮಡುಮಾಡಿದ ಪರಿಸರನಾಶದ ಕಾಳಿಂಗಗಳನ್ನು ಮೆಟ್ಟಿ ನಿಲ್ಲೋಣ.
(ವಿಶೇಷ ಸೂಚನೆ: ನನ್ನಿಂದ ‘ಹಾವು ನಾವು’ ಕೊಳ್ಳಲಿಚ್ಚಿಸುವವರು ರೂ ಮುನ್ನೂರು ಮತ್ತು ನಿಮ್ಮ ವಿಳಾಸವನ್ನು ಮುಂದಾಗಿ ಕಳಿಸಿಕೊಡಬಹುದು)
ನರಸಿಂಹಾಷ್ಟಮಿ!
ಅಷ್ಟಮಿ ಕಳೆದು ದಿನವೆರಡರಲ್ಲಿ ನನಗೆ ಮಾಮೂಲಿನಂತಲ್ಲದ ಒಂದು ಕೊರಿಯರ್ ಬಂತು. ಎಚ್ಚರಿಕೆಯಿಂದ ಬಿಚ್ಚಿದರೆ ಅಷ್ಟವಿಧದ ಸವಿತಿನಿಸುಗಳ ಹೊರೆ! ಜೊತೆಯಲ್ಲೊಂದು ಮಧುರತರವಾದ ಪತ್ರ - “ಗೋಕುಲಾಷ್ಟಮಿ, ಶ್ರೀವೈಷ್ಣವರಿಗೆ ಅತಿ ವಿಶಿಷ್ಟವಾದ ಹಬ್ಬ. ಅಂದು ಶ್ರೀ ಕೃಷ್ಣನಿಗೆ ದೊಡ್ಡ ಮಂಟಪವನ್ನು ಕಟ್ಟಿ, ಫಲವಸ್ತ್ರದಿಂದ ಸಿಂಗರಿಸಿ, ರಾತ್ರಿ ಆರಾಧಿಸುತ್ತೇವೆ. ಜೊತೆಗೆ ಬೆಲ್ಲ-ಕಲ್ಲು ಸಕ್ಕರೆಯ ಮಿಶ್ರಣವಾದ ನವನೀತ, ಅವಲಕ್ಕಿಯಿಂದ ಮಾಡಿದ ತಿನಿಸು ಮತ್ತು ವಿವಿಧ ತಿಂಡಿಗಳನ್ನು ಮಾಡಿ ವಾಸುದೇವನಿಗೆ ಸಮರ್ಪಿಸುತ್ತೇವೆ. ಆ ವಾರವೆಲ್ಲ ನಮಗೆ ಸಂಭ್ರಮ! ಬಂಧುಮಿತ್ರರನ್ನು ಆಹ್ವಾನಿಸಿ, ಮುಕುಂದನಿಗೆ ಆರತಿಯೆತ್ತಿ, ಎಲ್ಲರಿಗೂ ಪ್ರಸಾದವನ್ನಿತ್ತು ಸತ್ಕರಿಸುತ್ತೇವೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಸಾದವನ್ನು ಈ ವರ್ಷ ನಿಮಗೆ ಕಳುಹಿಸಿದ್ದೇನೆ. ದಯವಿಟ್ಟು ಸ್ವೀಕರಿಸಿ. “ಪರಮಭಕ್ತಪರಿಪಾಲನ ಚತುರನಾದ ಶ್ರೀಗೋಪಾಲನು ನಿಮ್ಮೆಲ್ಲರಿಗೂ ಸಕಲ ಐಶ್ವರ್ಯ, ಆಯುರಾರೋಗ್ಯವನ್ನಿತ್ತು ಸಲಹಲೆಂದು ಪ್ರಾರ್ಥಿಸುತ್ತೇನೆ. ಇತಿ ತಮ್ಮವ ಎಸ್.ವಿ ನರಸಿಂಹನ್.”

ಹೌದು, ಕಳೆದ ವರ್ಷ ಇಲ್ಲೇ ನನ್ನ ಬ್ಲಾಗಿನಲ್ಲಿ ಕಾಣಿಸಿದ ವಿರಾಜಪೇಟೆಯ ಡಾ| ಎಸ್.ವಿ. ನರಸಿಂಹನ್ ಇವರೇ (ನೋಡಿ: ಕೀಪಿಟಪ್ ನರಸಿಂಹನ್ ೭-೧೦-೨೦೦೯ರ ನನ್ನ ಲೇಖನ ಅಥವಾ ಬಳಸಿ ಈ ಸೇತು. ನಾನವರಿಗೆ ಬರೆದೆ “ವರ್ಷಕ್ಕೊಂದು ಬಾರಿ ಕಡ್ಡಾಯವಾಗಿ ಕಾಣುವ ವಿಳಾಸದೊಡನೆ ದೊಡ್ಡ ಡಬ್ಬಿ ಕೊರಿಯರಿನಲ್ಲಿ ಬಂದಾಗ ನಿಜಕ್ಕೂ ಆಶ್ಚರ್ಯವಾಯ್ತು. ಈ ಬಾರಿ ಚಿತ್ರ, ಸಂದೇಶ ಬಿಟ್ಟು ಹಕ್ಕಿ ಗರಿ, ನಕ್ಷತ್ರದ ತುಣುಕು ಏನು ಕಳಿಸಿದ್ದಾರಪ್ಪಾಂತ ಬಿಲ್ ಮಾಡುತ್ತಿದ್ದ ಗಿರಾಕಿಯನ್ನು ತಳ್ಳಿ ಕಟ್ಟು ಬಿಡಿಸುವ ಕುತೂಹಲ, ಸಂಭ್ರಮ. ಅಂತೂ ಇಂತೂ ಬಿಡುವಾದಾಗ ತೆಗೆದು ನೋಡಿದರೆ ಅಪ್ಪಟ ಗೃಹಸ್ಥ ನರಸಿಂಹನ್! ಹೀಗೂ ನೆನಪಿಸಿಕೊಳ್ಳಬಹುದಲ್ಲವೇ! ನಿನ್ನೆಯಷ್ಟೇ ಅಕ್ಷರಪ್ರಕಾಶನದಿಂದ ಭಾರೀ ಪುಸ್ತಕವೊಂದು ಬಂತು - ಸ್ಮೃತಿ, ವಿಸ್ಮೃತಿ ಮತ್ತು ಭಾರತೀಯ ಸಂಸ್ಕೃತಿ (ಇಂಗ್ಲಿಷಿನಲ್ಲಿ ಎಸ್.ಎನ್. ಬಾಲಗಂಗಾಧರ, ಕನ್ನಡಕ್ಕೆ ರಾಜಾರಾಮ ಹೆಗಡೆ. ಬೆಲೆ ರೂ ೪೧೫). ಅದರಲ್ಲಿ ನಾನು ಗ್ರಹಿಸಿದ್ದಿಷ್ಟು, ‘ಭಾರತದಲ್ಲಿ ಜಾತಿಗಳಿಲ್ಲ, ಬ್ರಿಟಿಷರ ಅಪಾರ ಅಜ್ಞಾನದಲ್ಲಿ ಹೇಳಿದ್ದನ್ನು ನಾವು ನಂಬಿಕೊಂಡು, ಸಂಸ್ಕೃತಿಯನ್ನು ಜಾತಿಯೆಂದು ಭ್ರಮಿಸಿದ್ದೇವೆ, ಸಂಭ್ರಮಿಸುತ್ತಿದ್ದೇವೆ.’ (ನಾನಿನ್ನೂ ಪೂರ್ತಿ ಪುಸ್ತಕ ಓದಿಲ್ಲ.) ಎಷ್ಟು ಸರಿಯಾದ ಮಾತು ಎನ್ನುವಂತೆ ‘ಶ್ರೀವೈಷ್ಣವರಿಗೆ ದೊಡ್ಡ ಹಬ್ಬ’ ಎಂದೇ ನೀವು ಹೇಳಿಕೊಂಡರೂ ಲೋಕ ಕಾಣುವಂತೆ ಈ ಸ್ಮಾರ್ತನಿಗೆ, ಇನ್ನೂ ಸರಿಯಾಗಿ ಹೇಳಬೇಕಾದರೆ ಈ ಪಾಖಂಡಿಗೆ (ದೇವರಾಣೆಯಾಗಿ ಮನೆಯಲ್ಲಿ ಒಂದು ಪಟ, ಮೂರ್ತಿ ನಾನು ಇಟ್ಟವನಲ್ಲ. ಒಂದು ಪೂಜೆ, ಒಂದು ಧ್ಯಾನ ಮಾಡಿದವನೂ ಅಲ್ಲ) ಹಬ್ಬದ ಹೆಸರಿನಲ್ಲಿ ಸವಿ ಹಂಚಿಕೊಂಡಿದ್ದೀರಿ, ರಕ್ಷಾಕವಚ ತೊಡಿಸಿದ್ದೀರಿ! ನಿಮ್ಮ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆಗಳು. ಆದರೆ ದಯವಿಟ್ಟು ಈ ಸಾಂಕೇತಿಕತೆಯನ್ನು ಮುಂದಕ್ಕೆ ವಾರ್ಷಿಕ ವಿಧಿಯನ್ನಾಗಿ ಖಂಡಿತಾ ಮಾಡಬೇಡಿ. ನಮ್ಮೊಳಗಿನ ಆತ್ಮೀಯತೆಗೆ ಇಂಥ ‘ಊರೇಗೋಲುಗಳು’ ಬೇಕಾಗದು.”

ತುಂಬಾ ಖುಷಿಯಿಂದ ನಿಮ್ಮ ಲೇಖನ ಓದಿದೆ. ಅಂಗಡಿಗೆ ಪುಸ್ತಕಕ್ಕಾಗಿ - ಹಾವು-ನಾವು - ಬಂದೆ ಬರುತ್ತೇನೆ. ನಮಸ್ಕಾರ.
ReplyDeleteSir,nice to hear from you.I will be with you on my next visit
ReplyDeleteಪ್ರತೀವರ್ಷ ವೈದ್ಯರಿಂದ ಅಷ್ಟಮಿ ತಿಂಡಿ ಮಾವನಿಗೆ ಬರುತ್ತಿತ್ತು. ಈ ವರ್ಷ ನಿಮಗೆ ಕಳಿಸಿದ್ದಾರೆ. ತಿಂದು ಕೃಷ್ಣಾಯನಮಹ ಅನ್ನಿ. ಕೊಟ್ಟವರು ಕೃತಾರ್ಥರಾಗುತ್ತಾರೆ.
ReplyDeleteಹಾವುಗಳಿಗೂ ಈ ಭೂಲೋಕದಲ್ಲಿ ಬದುಕುವ ಹಕ್ಕು ಖಂಡಿತವಾಗಿ ಇದೆ - ಅಂತ ನಿರೂಪಿಸಿದ್ದೀರಿ.
ReplyDeleteಹಾವಿಗೆ ಹಾರ್ಮ್ ಎಸಗುವ ಮಾನವನ್ನು ಯಾರು ಶಿಕ್ಷಿಸುತ್ತಾರೋ ಗೊತ್ತಿಲ್ಲ.
ತಮಗೂ ತಮ್ಮ ಸ್ನೇಹಿತವರ್ಗಕ್ಕೂ ನನ್ನ ನಮನ.
ಡಾ. ನರಸಿಂಹನ್ ಅವರ ಪ್ರಕೃತಿ ಪ್ರೇಮದ ಶುಭಾಶಯದ ಕಾರ್ಡುಗಳು ಅವರ ಸೌಹಾರ್ದ ಸಂದೇಶವನ್ನು ಸಾರುತ್ತಿವೆ.
ಮಾನವ ಉರಗ ಜಲಚರ ಪ್ರಾಣಿ ಪಕ್ಷಿ ಕೀಟ ಮತ್ತು ಸಸ್ಯಗಳೆಲ್ಲಾ ಪ್ರಕೃತಿಯ ಸೃಷ್ಟಿ. ಅಂತೆಯೇ ಭೂಮಿ, ನದಿ, ಖನಿಜ ಮತ್ತು ಸಮುದ್ರದ ಸಂಪತ್ತು.
ಸೌಹಾರ್ದದಿಂದ ಮತ್ತು ಪರಸ್ಪರ ಗೌರವಗಳಿಂದ ಬಾಳೋಣ.
- ಪೆಜತ್ತಾಯ ಎಸ್. ಎಮ್.
haavu-naavu pusthka ideya nimmalli?
ReplyDeletenaale barthene angadige'''
೧೬-೧೦-೧೦ರ ಪ್ರಜಾವಾಣಿಯ ‘ಕರಾವಳಿ’ ಪುರವಣಿಯ ಅಂಕಣ ‘ವರ್ಣಲೋಕ’ದಲ್ಲಿ:
ReplyDeleteಹಾರುವ ಹಕ್ಕಿ, ಓಡುವ ಜಿಂಕೆ, ಚಿಗುರುವ ಹುಲ್ಲು, ಮಾಗುವ ಹಣ್ಣು, ತೆವಳುವ ಹಾವು! ಈ ಪುಸ್ತಕಗಳ ಬಗ್ಗೆ ಕರಾವಳಿಯ ಸಾಹಿತ್ಯ, ಕಲೆ, ಸಂಸ್ಕೃತಿಗಳ ‘ವರ್ಣಲೋಕ’ದಲ್ಲಿ ಏಕೆ ಜಾಗ ಎಂಬ ಪ್ರಶ್ನೆ ಬರುತ್ತದೆ ಅಲ್ಲಾ? ಇದು ಕಲೆ ಸಂಸ್ಕೃತಿ ಬಗ್ಗೆ ನಮ್ಮ ಕಲ್ಪನೆ ತೆಳುವಾದುದರ ಫಲ. ಯಾವನೋ ಒಬ್ಬ/ ಒಬ್ಬಾಕೆ ಸಾಹಿತ್ಯದ ಹೆಸರಿನಲ್ಲಿ ಒಂದಷ್ಟು ಕಾಗದ ಹಾಳು ಮಾಡಿದರೆ ಅದು ಸಂಸ್ಕೃತಿ ಸೇವೆಯಾಗಿ ವಿಮರ್ಶೆಯಲ್ಲಿ ಮೆರೆಯುತ್ತದೆ! ಕಲೆ, ನಾಟಕದ ಹೆಸರಿನಲ್ಲಿ ಕರೆಂಟು, ಸರ್ಕಾರದ ಹಣ ಮುಗಿಸಿದರೆ ರಂಗಕರ್ಮವಾಗುತ್ತದೆ! ಆಟೋ ಡ್ರೈವರ್ ವೃತ್ತಿಯ ಗುರುರಾಜ ಸನಿಲ್ ಹಾವುಗಳನ್ನು ಅರ್ಥಮಾಡಿಕೊಂಡ ಬಗೆ ಸಂಸ್ಕೃತಿಯ ಭಾಗ ಏಕೆ ಅಲ್ಲ? ಕಲ್ಲೂರು ನಾಗೇಶರು ತೆವಳಾಡುವ ಈ ಮುಗ್ಧ ಜೀವಿಗಳನ್ನು ಮುದ್ರಿಸಿದ ಚಂದ ಯಾಕೆ ಕಲಾಸೇವೆಯಾಗುವುದಿಲ್ಲ?
ವಾಸ್ತವದಲ್ಲಿ ಉತ್ಕೃಷ್ಟ ಸಾಹಿತ್ಯ, ಕಲೆಗಳು ಬಾಳುವ ಬದುಕಿನ ಅರಿವನ್ನು ಹಿಗ್ಗಿಸುತ್ತವೆ. ಹಾಗೆಯೇ ಅಂಥ ಗ್ರಂಥಗಳುನಾವು ನಿಂತ ನೆಲದ ಅರಿವನ್ನು ಹೆಚ್ಚಿಸುತ್ತವೆ. ಸ್ಥಳೀಯ ಅಧ್ಯಯನವೆಂದರೆ ಜನಾಂಗ, ಭಾಶೆ, ರೀತಿರಿವಾಜು, ಜಾನಪದ, ಆಚರಣೆ, ಆರಾಧನೆ, ಇತಿಹಾಸ ಇಂಥವುಗಳೇ ಆಗುವಂತೆ ನಮ್ಮ ಕೆಲವರು ಚಿಂತಕರು ಇಷ್ಟೂ ವರ್ಷಗಳಲ್ಲಿ ಮಾಡಿಬಿಟ್ಟಿದ್ದಾರೆ. ಬಣ್ಣದ ಕಟ್ಟುಗಳಿದ್ದ ಹಾವುಗಳನ್ನೆಲ್ಲ ‘ವಿಷದ ಕಟ್ಟಕಡಂಬಳ’ ಗಳೆಂದು ಅದೆಷ್ಟು ಸಲ ನಾನೂ ನಮ್ಮ ಮನೆಯವರೂ ಕೊಂದುಬಿಟ್ಟೆವಲ್ಲಾ ಎಂಬ ಪಶ್ಚಾತ್ತಾಪ ತರುವ ಹಾವು ನಾವು ಗ್ರಂಥ ಯಾವ ಸಂಸ್ಕೃತಿ ಚಹರೆಗೂ ಕಡಿಮೆಯಲ್ಲ.
ಮಹಾಲಿಂಗ
ಪುಸ್ತಕದ ಗುಣಗಾನದ ಜೊತೆಗೆ ಮುದ್ರಣದ ನನ್ನ ಕೆಲಸವನ್ನು ಗುರುತಿಸಿ, ಪ್ರಶಂಸಿಸಿದ್ದೀರಿ. ನಿಮ್ಮದಕ್ಕೆ ಪೂರಕವಾಗಿ ಮಹಾಲಿಂಗ ಭಟ್ಟರೂ ತಮ್ಮ ದನಿಗೂಡಿಸಿದ್ದಾರೆ. ಇಬ್ಬರಿಗೂ ಕೃತಜ್ಞತೆಗಳು.
ReplyDeleteಹಾವುಗಳ ಬಗೆಗಿರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವುದರೊಡನೆ ಅವುಗಳ ಕುರಿತು ಅಪಾರ ಕಾಳಜಿಯಿಂದ ದುಡಿದ ತಮ್ಮ ಹಲವಾರು ವರ್ಷಗಳ ಅನುಭವದಲ್ಲಿ ರಕ್ಷಣೆಯ ಕುರಿತೂ ಈ ಪುಸ್ತಕ ಬರೆದಿದ್ದಾರೆ ಗುರುರಾಜ ಸನಿಲ್. ಅವರಿವರಲ್ಲಿ ಕಾಡಿಬೇಡಿ ಹಣ ಹೊಂದಿಸಿಕೊಂಡು ಸನಿಲ್, ಯಾವ ವ್ಯಾವಹಾರಿಕ ಲೆಕ್ಕಾಚಾರಗಳೂ ಇಲ್ಲದೆ ಪುಸ್ತಕ ಪ್ರಕಟಣೆಗಿಳಿದದ್ದು ನೋಡಿ ನಾನು ದಂಗಾಗಿ ಹೋದೆ. ಸಹಜವಾಗಿ ನಾನು ಹೊಟ್ಟೆಪಾಡಿನ ಮಿತಿಯನ್ನು ಮೀರಿ ಅವರೊಡನೆ ಸಹಕರಿಸಿದೆ. ನನ್ನ ಶ್ರಮ ಅತ್ಯಲ್ಪ. ಆದಾಗ್ಯೂ ಅವರ ಜೊತೆ ನನಗೂ ಇಷ್ಟೊಂದು ಪ್ರಶಂಸೆ ಸಂದಿರುವುದರಿಂದ ಭಯವಾಗಿದೆ! (ಇದರಿಂದುಂಟಾದ ನಿರೀಕ್ಷೆಯನ್ನು ನಾನು ಮುಂದೆ ಹುಸಿಮಾಡಬಾರದಲ್ಲಾ!)
ಅಂದ ಹಾಗೆ ನನಗೆ ಕುಶಿ ಕೊಟ್ಟ ಇನ್ನೊಂದು ವಿಚಾರ ನೀವು ಮನುಷ್ಯನನ್ನ ‘ದುಷ್ಟಮೃಗ’ ಎಂದು ಕರೆದದ್ದು!
ಗುರುರಾಜ ಸನಿರ್ ಅಂಥವರ ಸಂತತಿ ಸಾವಿರವಾಗಲಿ
ಕಲ್ಲೂರು ನಾಗೇಶ
ಅಶೋಕವರ್ಧನರೇ,
ReplyDeleteತಮ್ಮ ಎಂದಿನ ಸ್ವಾರಸ್ಯಪೂರ್ಣ ಶೈಲಿಯಲ್ಲಿ ಗುರುರಾಜರ ಪುಸ್ತಕದ ಪರಿಚಯ ಮಾಡಿಸಿದ್ದೀರಿ, ಧನ್ಯವಾದಗಳು. ಹಾವುಗಳ ಬಗ್ಗೆ ಕನ್ನಡದಲ್ಲಿ ಕೆಲವೇ ಕೆಲವು (ಅನುವಾದಿತವೂ ಸೇರಿ) ಪುಸ್ತಕಗಳಿದ್ದರೂ ದಕ್ಷಿಣ ಕನ್ನಡದ ಹಾವುಗಳ ಬಗ್ಗೆ ಇರುವ ಪುಸ್ತಕ ನನಗೆ ತಿಳಿದಂತೆ ಯಾವುದೂ ಇರಲಿಲ್ಲ. ಗುರುರಾಜರು ಈ ಕೊರತೆಯನ್ನು ನೀಗಿಸಿದ್ದಾರೆ. ನರಸಿಂಹನ್ರ ಮುದ್ದಾದ ಪಕ್ಷಿಗಳ ಚಿತ್ರದೊಂದಿಗೆ ಅವರು ನಿಮಗೆ ಕಳಿಸಿದ ಸಿಹಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಮನಸ್ಸಿಗೆ ಮುದ ನೀಡಿತು. "ಇದನ್ನು ವಾರ್ಷಿಕ ವಿಧಿಯನ್ನಾಗಿ ಖಂಡಿತಾ ಮಾಡಬೇಡಿ" ಎಂಬ ನಿಮ್ಮ ಕೋರಿಕೆ ಸೂಕ್ತವೆನಿಸಿತು!
ಕಲ್ಲೂರು ನಾಗೇಶರೇ,
ಮೊನ್ನೆ ತಾನೇ ’ಆಳ್ವಾರ ನುಡಿಸಿರಿ-೨೦೧೦’ದಲ್ಲಿ ಭಾಗವಹಿಸಿದ ನನಗೆ ಕಾರ್ಯಕ್ರಮದ ಮಧ್ಯೆ ಹಂಚಿದ ಅಧ್ಯಕ್ಷರ ಭಾಷಣ ಮತ್ತು ಸನ್ಮಾನಿತರ ಪರಿಚಯ ಪುಸ್ತಿಕೆಗಳನ್ನು ನೋಡಿದಾದ ಥಟ್ಟನೆ ಗಮನ ಸೆಳೆದದ್ದು ಅದ ಒಪ್ಪ, ಓರಣದ ಮುದ್ರಣ. ನೋಡಿದರೆ ’ಆಕೃತಿ ಪ್ರಿಂಟ್ಸ್, ಮಂಗಳೂರು’ ಅಂತ ಇತ್ತು. ಆ ಮೇಲೆ ನನ್ನ ಚಿಕ್ಕಪ್ಪನ ಮನೆಯಲ್ಲಿದ್ದ ಆಳ್ವಾ ಪದವಿ ಕಾಲೇಜಿನ ವಾರ್ಷಿಕ ಪುರವಣಿ ’ಸ್ವರೂಪ’ ನೋಡಿದ ಮೇಲಂತೂ ನಿಮ್ಮ ಆಕೃತಿ ಮುದ್ರಣವು ಅಶೋಕರು ಹೇಳಿದಂತೆ ಯಾರೂ ಮೋಹಿಸುವ ಮುದ್ರಣವನ್ನು ಮಾಡುವುದೆಂದು ನಾನೂ ಒಪ್ಪುತ್ತೇನೆ.
i read this late. thanks for introducing these books. as i was reading the snakes ofindia by vitekar etc., i was thinking of the need of such books in kannada. these books brings us back to life of that world and the passion of the author behing it is well capture. by the by, i am reading this after buying the books in your shop last week :-) i am glad that sri mahalinga bhat wrote on it in prajavani. as i am writing a column in udayavani on sundays (nedhana shruthi ) i am now tempted to speak on this book. Regards s.r. vijayashankar
ReplyDeleteDear Mr. Madhusudhan
ReplyDeleteThank you for your appreciation in this regard.
udupiya parisaradalli nagaraj sanil avaru maduva kelasa slaganiya adare samajavu avarannu innu hechu parinamakariyagi upayogisakollabahudittu mattu gurutisakollabahudittu adare hagagalilla. sanil avaru taxi driver alla riksha malaka chalakaru
ReplyDeleteashok nini
ಮೊನ್ನೆ ಬೆಂಗಳೂರು ಸಾಹಿತ್ಯ ಸಮ್ಮೇಳನದ ಕಿಕ್ಕಿರಿದ ಜನಸಂದಣಿಯಲ್ಲಿ ಜಾಗ ಹುಡುಕುತ್ತಾ ಪುಸ್ತಕದ ಮಳಿಗೆಗಳನ್ನು ಅವಲೋಕಿಸುತ್ತಿರುವಾಗ ಒಂದೆಡೆ ಈ ಪುಸ್ತಕ ಕಂಡಿತು. ಒಡನೆಯೇ ಕೈಗೆತ್ತಿಕೊಂಡೆ. ಆಂಗ್ಲ ಭಾಷೆಯಲ್ಲಿ ಪರಿಚಿತವಿದ್ದ ಹೆಸರುಗಳಿಗೆ ಕನ್ನಡ, ತುಳು ಹೆಸರುಗಳ ಅಥವಾ ಕನ್ನಡ/ತುಳುಗಳಲ್ಲಿ ಕೇಳಿದ್ದ ಹೆಸರುಗಳಿಗೆ ಆಂಗ್ಲ ಹೆಸರುಗಳ ಉಲ್ಲೇಖವಿರುವುದು ಬಹುಶಃ ಇದೊಂದೇ ಪುಸ್ತಕದಲ್ಲಿ ಅಂತನ್ನಿಸಿತು. ಇನ್ನು ವಿವರ, ಚಿತ್ರಗಳು, ಹುಸಿನಂಬಿಕೆಗಳ ಉಲ್ಲೇಖ ಮತ್ತು ಅವುಗಳ ವಾಸ್ತವಾಂಶದ ವಿವರಣೆ ಮತ್ತು ಇವೆಲ್ಲವುಗಳ ಮುದ್ದಾದ ಮುದ್ರಣ ನೋಡಿದ ಮೇಲೆ ಪುಸ್ತಕ ಕೊಳ್ಳದೆ ಬಿಡಲಾಗಲಿಲ್ಲ. ಗುರುರಾಜರ ಪ್ರಯತ್ನ, ಪರಿಶ್ರಮ ಪ್ರಶಂಸನೀಯವೇ.
ReplyDeleteಅಶೋಕರಿಗೆ ಇನ್ನೊಮ್ಮೆ ಧನ್ಯವಾದ. ತಾವು ಈ ಪುಸ್ತಕದ ಬಗ್ಗೆ ಇಲ್ಲಿ ಬ್ಲಾಗಿಸದಿದ್ದಲ್ಲಿ ಕೇವಲ ಬದಿಮೇಲಾಗಿ ಅಸಂಖ್ಯ ಪುಸ್ತಕಗಳ ಮಧ್ಯೆ ಆ ಮಳಿಗೆಯಲ್ಲಿ ಮಲಗಿದ್ದ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವ ಯೋಚನೆ ಬಹುಶಃ ನನಗೆ ಬರುತ್ತಿರಲಿಲ್ಲ.