08 August 2010

ಅತ್ರಿ - ಪುಸ್ತಕ ಪ್ರಕಾಶನವನ್ನು ಮುಚ್ಚಿದೆ!


ಸಾಮಾಜಿಕ ಋಣಸಂದಾಯ: ೧೯೭೫ರಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ಬಿಡಿ ಮಾರಾಟಗಾರನಾಗಿ ಮಂಗಳೂರಿನಲ್ಲಿ ತೊಡಗಿಕೊಳ್ಳುವಾಗಲೇ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಸ್ವತಂತ್ರನಾಗಿ, ಪ್ರಕಾಶನದಲ್ಲೂ ಸ್ವಲ್ಪ ತೊಡಗಿಕೊಳ್ಳಬೇಕೆಂದು ಅಂದಾಜಿಸಿದ್ದೆ. ಆದರೆ ವಾಸ್ತವ ನನ್ನ ಮೊದಲ ಪ್ರಕಟಣೆಗೆ ಸುಮಾರು ಹದಿನೈದು ವರ್ಷಗಳ ಅಂತರವನ್ನೇ ವಿಧಿಸಿತು (ನೋಡೋಣು ಬಾರಾ ನಕ್ಷತ್ರ - ಜಿಟಿನಾ-೧೯೯೦). ಹಣ ಹೂಡಿಕೆ ಮತ್ತು ಪುಸ್ತಕಗಳ ವಿತರಣೆ ಎರಡನ್ನುಳಿದು ಇತರೆಲ್ಲ ಜವಾಬ್ದಾರಿಗಳನ್ನು ಮತ್ತು ಬಹುತೇಕ ಬರವಣಿಗೆಗಳನ್ನೂ ಕೊಟ್ಟ ನನ್ನ ತಂದೆ - ಜಿಟಿ ನಾರಾಯಣ ರಾವ್, ನನ್ನ ಪ್ರಕಾಶನದ ಅಘೋಷಿತ ಬಹುಮುಖ್ಯ ಪಾಲುದಾರ. ಅವರು ತಮ್ಮ ಬರಹಗಳಿಗೆ (ಗೌರವಧನ), ಮುದ್ರಣ ಕಾರ್ಯದ ಸಂಪೂರ್ಣ ನಿರ್ವಹಣೆಗೆ (ಓಡಾಟ, ಅಂಚೆವೆಚ್ಚ ಇತ್ಯಾದಿ) ಚಿಕ್ಕಾಸು ತೆಗೆದುಕೊಳ್ಳುತ್ತಿರಲಿಲ್ಲ. ಅವರ ಆದರ್ಶದ ಮಾತುಗಳನ್ನೇ ನಾನು ಹೆಚ್ಚು ಕಡಿಮೆ ಪುನರುಚ್ಚರಿಸುತ್ತ “ಪುಸ್ತಕಗಳ ಬಿಡಿ ಮಾರಾಟವೇ ನನ್ನ ಪ್ರಧಾನ ವೃತ್ತಿ. ಪ್ರಕಾಶನವೇನಿದ್ದರೂ ನನ್ನ ಮತ್ತು ಮುಖ್ಯವಾಗಿ ತಂದೆಯ ಒಲವಿನ ಬರಹಗಳನ್ನು (ಅದರಲ್ಲೂ ಜನಪ್ರಿಯ ವಿಜ್ಞಾನ ಸಾಹಿತ್ಯ), ಕೇವಲ ಸಾಮಾಜಿಕ ಋಣ ಸಂದಾಯದ ನೆಲೆಯಲ್ಲಿ ಮಾಡುತ್ತೇನೆ. ಓದುಗ ಪ್ರಕಾಶನದ ಪರಮ ಲಕ್ಷ್ಯ. ಕಾಗದ, ಮುದ್ರಣಗಳಲ್ಲಿ ಆವಶ್ಯಕತೆಯನ್ನಷ್ಟೇ ನೋಡಿ ಬಳಸಿದರೂ ಸರಳ ಸೌಂದರ್ಯಕ್ಕೆ ಕೊರತೆ ಮಾಡುತ್ತಿಲ್ಲ” ಎಂದೇ ಘೋಷಿಸಿಕೊಂಡೆ.

ಡಿವಿಕೆ ಮೂರ್ತಿ ಐನ್ಸ್ಟೈನ್ ಜನ್ಮ ಶತಾಬ್ದಿಯನ್ನು ಮುಂಗಂಡು, ನನ್ನ ತಂದೆಗೆ ಒತ್ತಡ ಹೇರಿ, ಅವರು ಬರೆದ ಮೇಲೆ ಪ್ರಕಟಿಸಿದ ಪುಸ್ತಕ ಐನ್ಸ್ಟೈನ್ ಬಾಳಿದರಿಲ್ಲಿ (ಇಂದು ನಾಲ್ಕನೇ ಪರಿಷ್ಕೃತ ಮುದ್ರಣ, ನನ್ನದೇ ಪ್ರಕಟಣೆಯಲ್ಲಿ ಲಭ್ಯ). ಡಿವಿಕೆ ಹೀಗೆ ಒಬ್ಬಿಬ್ಬರನ್ನಲ್ಲ, ಒಂದೆರಡು ವಿಷಯಗಳಲ್ಲೂ ಅಲ್ಲ - ಸದಾ ಸಮರ್ಥ ವ್ಯಕ್ತಿಗಳನ್ನು ಹಿಡಿಯುತ್ತಲೇ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಲೇ ಇದ್ದದ್ದು ನನಗೆ ಎಂದೂ ಮರೆಯದ ಆದರ್ಶವಾಗಿ ಕಾಣುತ್ತಿತ್ತು. ಅದನ್ನು ನನ್ನದೇ ಪ್ರಕಾಶನದಲ್ಲಿ ಅನುಸರಿಸುವಲ್ಲಿ ನನಗೆ ವಿದ್ವತ್ ಬಂಡವಾಳ ಮತ್ತು ಸಂಪರ್ಕಗಳು ಏನೇನೂ ಸಾಲದಿತ್ತು. ಅಲ್ಲೆಲ್ಲಾ ನನಗೆ ನನ್ನ ತಂದೆ ನೂರಾನೆ ಬಲ. ಪಾವೆಂ ಆಚಾರ್ಯರು ಕಸ್ತೂರಿಯ ತಿಂಗಳು ತಿಂಗಳು ಪುಟ ತುಂಬುವ ಸಾಹಸದಲ್ಲಿ ಬರೆದು ಮೂಲೆ ಸೇರಿಸಿದ್ದ ಪದಾರ್ಥ ಚಿಂತಾಮಣಿಯನ್ನು ಮೊದಲು ಪುಸ್ತಕ ರೂಪದಲ್ಲಿ ‘ನಾನು’ ಪ್ರಕಟಿಸಿದೆ. ತಮ್ಮ ವಿದ್ವತ್ತಿಗೆ ತಕ್ಕಷ್ಟು ಬರವಣಿಗೆಗಿಳಿಯದ ಜೆ. ಆರ್ ಲಕ್ಷ್ಮಣರಾಯರಿಂದ ಬರೆಯಿಸಿ, ಬೈಜಿಕ ವಿದ್ಯುತ್ ಪ್ರಕಟಿಸಿದ ಖ್ಯಾತಿಯೂ ‘ಅತ್ರಿ’ಗೆ ದಕ್ಕಿತು. ಮುರಳೀಧರರಾಯರ ಉದ್ಗ್ರಂಥ ‘ನೃತ್ಯಲೋಕ’ದ್ದಂತೂ ಭಾರೀ ಕಥೆ. ತಂದೆಯ ವಿಶ್ವಕೋಶ ಯೋಜನೆಗೆ ಹೊರಗಿನ ಚಿತ್ರಕಾರನ ಮಟ್ಟದಲ್ಲಷ್ಟೇ ಒದಗಿದವರು ಮುರಳೀಧರರಾಯರು. ತಂದೆಯ ವಿಭಿನ್ನ ಆಸಕ್ತಿಗಳ ಬಲದಲ್ಲಿ ಅವರೊಬ್ಬ ನಾಟ್ಯಾಚಾರ್ಯನೂ ಹೌದೆಂದು ತಿಳಿದದ್ದು, ಅವರ ತರಗತಿ ನಡೆಸುವ ಅನುಕೂಲಕ್ಕೆ ನಮ್ಮ ಮೈಸೂರು ಮನೆಯ ಶೆಡ್ ಉಚಿತವಾಗಿ ಒದಗಿದ್ದು, ಲೋಕಾಭಿರಾಮ ಮಾತಿನಲ್ಲಿ ಅವರ ವಿದ್ವತ್ತು ಪುಸ್ತಕ ರೂಪಕ್ಕೆ ಇಳಿಯುವಂತಾದದ್ದು, ‘ನೃತ್ಯಲೋಕ’ದ ಪ್ರಕಟಣಪೂರ್ವ ಸಂಚಲನ ಮತ್ತು ಮುರಳೀಧರರಾಯರ ಸಮ್ಮಾನದೊಡನೆ ಅದು ಅತ್ರಿ ಪ್ರಕಾಶನದಲ್ಲೇ ಅರಳಿದ್ದು ಬಹುದೊಡ್ಡ ಭಾವಲಹರಿ. ಹೀಗೇ ‘ನನ್ನಲ್ಲಿ’ ಬೆಳಕು ಕಂಡ ಇನ್ನೊಂದು ಮಹಾಕೃತಿ ಸ.ಜ ನಾಗಲೋಟಿಮಠರ ಬಿಚ್ಚಿದ ಜೋಳಿಗೆ. ಕುರಿತು ಯೋಚಿಸಿದರೆ ಅತ್ರಿ ಪ್ರಕಾಶನದ ಒಂದೊಂದು ಪ್ರಕಟಣೆಯ ಹಿಂದೆಯೂ ತಂದೆಯ ನೀತಿಯುಕ್ತ ಪ್ರೀತಿಯ ಸಾಧನೆ ಎದ್ದು ತೋರುತ್ತದೆ.

ವೃತ್ತಿಪರ ಪ್ರಕಾಶನದಲ್ಲಿ ಅನಿವಾರ್ಯವಾದ ಬೆಲೆ ನಿಷ್ಕರ್ಷೆಯ ಅಂಶಗಳು ನನ್ನನ್ನು ಬಾಧಿಸಲಿಲ್ಲ. ಬೆಲೆ ನಿರ್ಧಾರದಲ್ಲಿ ಮುದ್ರಣ ವೆಚ್ಚ ಮತ್ತು ವೃತ್ತಿಪರ ಪುಸ್ತಕ ಮಾರಾಟಗಾರರಿಗೆ ಕೊಡಬೇಕಾದ ವ್ಯಾಪಾರೀ ವಟ್ಟಾ (ನ್ಯಾಯವಾದ ಮೂರನೇ ಒಂದು) ಮಾತ್ರ ನನ್ನ ಗಮನದಲ್ಲಿರುತ್ತಿತ್ತು. ಅನ್ಯ ಲೇಖಕರಿದ್ದರೆ ಗೌರವಧನದ ಮೊತ್ತ ಸೇರಿಕೊಳ್ಳುತ್ತಿತ್ತು (ನನ್ನ ಹರಕೆಗೆ ಇತರರು ಕುರಿಗಳಾಗಬಾರದು). ಪ್ರಕಾಶಕನಾಗಿ ನನಗೆ ಲಾಭಾಂಶ ಬಿಡಿ, ಸಮಯ ಸಂದಂತೆ ತೊಡಗಿಸಿದ ಹಣಕ್ಕೆ ಸರಳ ಬಡ್ಡಿಯೂ ದಕ್ಕದಷ್ಟು ಕಡಿಮೆ ಬೆಲೆ ಇಡುತ್ತಿದ್ದೆ. (ನನ್ನದೇ ಅಂಗಡಿಯಲ್ಲಿ ಬಿಡಿಯಾಗಿ ಮಾರಿಹೋದದ್ದಷ್ಟೇ ನನಗೆ ಆದಾಯ ತರುತ್ತಿತ್ತು) ಸಹಜವಾಗಿ ಕೊಳ್ಳುಗನಿಗೆ ನಮ್ಮ ಪ್ರಕಟಣೆಗಳು ಕಡಿಮೆ ಬೆಲೆಯಲ್ಲಿ ದೊರಕುತ್ತಿವೆ. ನನ್ನ ಈ ‘ವ್ರತ’ಕ್ಕೆ ಅನ್ಯ ಮೂಲಗಳಿಂದ ಅನುದಾನ, ಸಹಾಯಧನವನ್ನು ಸ್ವೀಕರಿಸದಿರುವುದೂ ನನ್ನ ಅಚಲ ನಿರ್ಧಾರಗಳಲ್ಲಿ ಒಂದು. ಮತ್ತೆ ಹಣ ಹಾಕಿ ಅವಸರದಲ್ಲಿ ಹಣ ತೆಗೆಯುವ ಯಾವುದೇ ಒಳದಾರಿಗಳನ್ನು ಅಂದರೆ - ಸಗಟು ಖರೀದಿ, ಗ್ರಂಥಾಲಯ ಖರೀದಿ, ಪಠ್ಯ ಮಾಡಿಸುವುದು, ಮೇಳಗಳಲ್ಲಿ ಭಾಗವಹಿಸುವುದು, ದರಕಡಿತದ ಮಾರಾಟ ಇತ್ಯಾದಿ ಪುಸ್ತಕವನ್ನು ಕೇವಲ ಒಂದು ಮಾಲು ಮಾಡುವ ಪ್ರಯತ್ನವನ್ನು ನಾನು ಘೋಷಿಸಿಯೇ ತಿರಸ್ಕರಿಸುತ್ತ ಬಂದಿದ್ದೇನೆ.

ಶೇಕಡಾ ಐವತ್ತೋ ಅರುವತ್ತೋ ರಿಯಾಯ್ತಿ ದರದಲ್ಲಿ ದಳ್ಳಾಳಿಗಳಿಗೆ ತಮ್ಮ ಪ್ರಕಟಣೆಗಳನ್ನು ದಾಟಿಸಿ, ಅವರ ಮೂಲಕ ಸಗಟು ಖರೀದಿ ದಕ್ಕಿಸಿಕೊಳ್ಳುವ, ಪರೋಕ್ಷವಾಗಿ ತಾವು ಶುದ್ಧಾತ್ಮರಾಗಿ ಉಳಿಯುವವರು ಅನೇಕರಿದ್ದಾರೆ. ನಾನು ಇದನ್ನೂ ನಿರಾಕರಿಸಿದ್ದೇನೆ. ನೆಲಮನೆ ದೇವೇಗೌಡರೆಂದೇ ಖ್ಯಾತರಾದವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ನನ್ನ ತಂದೆಯ ಮೇಲಿನ ಗೌರವದಿಂದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ ಪುಸ್ತಕದ ಸಣ್ಣ ಸಗಟು ಖರೀದಿ ನಡೆಸಿದ ಪ್ರಸಂಗವನ್ನು ನಾನೀಗಾಗಲೇ ‘ಪುಸ್ತಕ ಮಾರಾಟ ಹೋರಾಟ’ದಲ್ಲಿ ಬರೆದಿದ್ದೇನೆ. ಕಾಲೇಜಿನ ನನ್ನ ಐದು ವರ್ಷಗಳ ಸಹಪಾಠಿ, ಆತ್ಮೀಯ ಗೆಳೆಯನೊಬ್ಬ (ಎಂ.ಕೆ. ಶಂಕರಲಿಂಗೇ ಗೌಡ) ವೃತ್ತಿಜೀವನದ ಆಕಸ್ಮಿಕದಲ್ಲಿ ಸರಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕನಾದ. ಆ ಕಾಲಕ್ಕೆ ನನ್ನ ಮೋಟರ್ ಸೈಕಲ್ ಸಾಹಸ ಯಾನಗಳ ಸಂಕಲನ - ‘ಚಕ್ರವರ್ತಿಗಳು’, ನನ್ನ ಯಾವ ಪ್ರಯತ್ನಗಳೂ ಇಲ್ಲದೆ ಆತನ ಗಮನಕ್ಕೆ ಬಂತು. ಆತ ಪುಸ್ತಕವನ್ನು ತನ್ನ ಇಲಾಖೆಯ ಎಲ್ಲಾ ಶಾಖೆಗಳಿಗೆ ವಿತರಿಸುವ ಉತ್ಸಾಹದಲ್ಲಿ ಎರಡು ಸಾವಿರ ಪ್ರತಿಗಳವರೆಗೆ ಖರೀದಿಸಲು ಮುಂದಾದ. ಪ್ರವಾಸೋದ್ಯಮ ಇಲಾಖೆಗೆ ಅದರ ಉಪಯುಕ್ತತೆ ಸಹಜವಾಗಿ ಒದಗುತ್ತಿತ್ತಾದರೂ ಲೋಕದ ಕಣ್ಣಿಗೆ ನಮ್ಮ ಸ್ನೇಹಾಚಾರವೂ ಕಾಣುತ್ತಿತ್ತಲ್ಲ; ನಾನು ಚಕ್ರವರ್ತಿ ಮಾರಲಿಲ್ಲ. ನನ್ನೀ ನಿಲುವುಗಳಿಗೆ ಪೂರಕವಾಗುವ ಎರಡೇ ಆಖ್ಯಾಯಿಕೆಗಳನ್ನು ಇಲ್ಲಿ ಸ್ವಲ್ಪ ವಿವರದಲ್ಲಿ ಹೇಳುವುದು ಅಪ್ರಸ್ತುತವಾಗದು ಎಂದು ಭಾವಿಸುತ್ತೇನೆ.

ಪುಸ್ತಕ ಒಂದು ಮಾಲು: ನನ್ನ ಪ್ರಕಟಣೆಗಳಲ್ಲಿ ಮೂರು ಇಂಗ್ಲಿಶ್ ಪುಸ್ತಗಳಿವೆ. ಎಲ್ಲ ತಂದೆಯದೇ ಬರವಣಿಗೆ. ೧. Scientific Temper (viii +110 pages, Rs 15), ೨. With the great minds (viii+88 pages, Rs. 30), ೩. Crossing the dateline (viii+ 144 pages, Rs. 40). ತಂದೆ ವೈಜ್ಞಾನಿಕ ಚಿಂತನೆಯ ಕುರಿತು ಎಲ್ಲಂದರಲ್ಲಿ ಮಾತಾಡಿದ್ದಾರೆ, ದಣಿವರಿಯದೇ ದಾಕ್ಷಿಣ್ಯಕ್ಕೆ ಬಲಿ ಬೀಳದೇ ಲೇಖನಗಳನ್ನೂ ಬರೆದಿದ್ದಾರೆ. ಜಾತಕ ಭವಿಷ್ಯ, ಭವಿಷ್ಯ ವಾಚನದಂಥ ಕನ್ನಡ ಕಿರು ಪುಸ್ತಕಗಳು ನೇರವಾಗಿ ಉಳಿದ ಪುಸ್ತಕಗಳಲ್ಲಿ ಧಾರಾಳವಾಗಿ ಆ ಚಿಂತನೆಯನ್ನು ವಿಸ್ತರಿಸಿದ್ದಾರೆ. ಆ ಕಾಲಕ್ಕೆ ಅವರ ಹಿರಿಯ ಮಿತ್ರ ಬಿ.ವಿ ಕಕ್ಕಿಲ್ಲಾಯರು ಕೊಟ್ಟ ಪ್ರೇರಣೆಯಲ್ಲಿ ವಿಸ್ತೃತವಾಗಿ ‘ವೈಜ್ಞಾನಿಕ ಮನೋಧರ್ಮ’ ಎಂಬ ಪುಸ್ತಕವನ್ನೇ ಬರೆದದ್ದು, ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ್ದು (೧೯೯೦), ಅಸಂಖ್ಯ ಮರುಮುದ್ರಣ ಮಾಡಿ (೨೦೦೭ ಏಳನೇ ಪರಿಷ್ಕೃತ ಮುದ್ರಣ) ಈಗಲೂ ಮಾರುತ್ತಿರುವುದು ನಿಮಗೆ ತಿಳಿದೇ ಇದೆ. ಆಗ ಅಜ್ಞಾತದಿಂದ ಎದ್ದ ಪ್ರಭಾನಂದ ಅತ್ತಾವರ ಎನ್ನುವ ತಂದೆಯ ಹಳೇ ಶಿಷ್ಯ, ತಂದೆಯನ್ನು ವೈಜ್ಞಾನಿಕ ಮನೋಧರ್ಮದ ಇಂಗ್ಲಿಶ್ ಆವೃತ್ತಿಗೆ ನಕ್ಷತ್ರಿಕನಂತೆ ಕಾಡಿದರು. ಅದಕ್ಕೊಲಿದು ತಂದೆ ೧೯೯೭ರಲ್ಲಿ ಸ್ವತಂತ್ರವಾಗಿ ಇಂಗ್ಲಿಶ್ನಲ್ಲಿ ಬರೆದು, ನನ್ನ ಪ್ರಕಟಣೆಗಳಲ್ಲಿ ಪ್ರಥಮವಾಗಿ ಬಂದ ಇಂಗ್ಲಿಶ್ ಪುಸ್ತಕ ಈ Scientific temper. ಇದನ್ನು ಅತೀವ ಸಂಭ್ರಮದಲ್ಲಿ, ಅಕ್ಷರಶಃ ತಲೆಯ ಮೇಲೆ ಹೊತ್ತು, ದಾರಿಯಲ್ಲಿ ಸಿಕ್ಕ ಅರೆಪರಿಚಿತರಿಗೆ, ಪರಿಚಿತರ ಮನೆಮನೆಗೆ ನುಗ್ಗಿ ಮಾರಿ, ಎಷ್ಟೋ ಬಾರಿ ಉಚಿತವಾಗಿ ಕೊಟ್ಟು ಓದಿಸಿದ ಖ್ಯಾತಿಯೂ ಪ್ರಭಾನಂದರಿಗೇ ಸಲ್ಲುತ್ತದೆ.

With the great minds - ಇದು ತಂದೆ ಬರೆದ ಐದು ಮಹಾಮೇಧಾವಿಗಳ ಸಾಧನೆ ಪ್ರಧಾನವಾದ ಜೀವನ ಚರಿತ್ರೆ. ತಂದೆಯ (ಒಂದು) ಪ್ರೀತಿ ಮತ್ತು ವೃತ್ತಿ ಸಮನ್ವಯಗೊಂಡದ್ದು ಗಣಿತ ವಿಜ್ಞಾನದಲ್ಲಿ. ಸಹಜವಾಗಿ ತಂದೆ ಶ್ರೀನಿವಾಸ ರಾಮಾನುಜನ್ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿ ೧೯೮೮ರಲ್ಲೇ ಸಾಕಷ್ಟು ದೊಡ್ಡದೇ ಪುಸ್ತಕ ಪ್ರಕಟಿಸಿದ್ದರು. (ಇಂದು ಅದು ‘ರಾಮಾನುಜನ್ ಬಾಳಿದರಿಲ್ಲಿ’ ಎಂಬ ಹೆಸರಿನಲ್ಲಿ ಪರಿಷ್ಕೃತ ನಾಲ್ಕನೇ ಆವೃತ್ತಿಯಲ್ಲಿ ಲಭ್ಯ) ಆದರೂ ಅದರ ಸೂಕ್ಷ್ಮವನ್ನು ಪ್ರಸ್ತುತ ಇಂಗ್ಲಿಶ್ ಸಂಕಲನಕ್ಕೆ ತರುವಲ್ಲಿ ಅವರು ಸ್ವಲ್ಪ ಸಂಕೋಚಪಟ್ಟಂತಿದೆ. ತನಗೆ ಅನಿವಾರ್ಯವಾಗಿ ಶ್ರೀನಿವಾಸ ರಾಮಾನುಜನ್ ಅವರೊಡನೆ ಮುಖಾಮುಖಿ ಸಾಧ್ಯವಾಗದ್ದಕ್ಕೋ ಏನೋ (ರಾಮಾನುಜನ್ ದೇಹಾಂತ್ಯ ೧೯೨೦. ನನ್ನ ತಂದೆಯ ದೇಹಧಾರಣೆ ೧೯೨೬) ‘ಸುಬ್ರಹ್ಮಣ್ಯನ್ ಚಂದ್ರಶೇಖರ್ ಕಂಡಂತೆ’ ಎಂಬ ಆತ್ಮೀಯ ಮತ್ತು ಸ್ವತಂತ್ರ ಚಿತ್ರಣವನ್ನೇ ಇಲ್ಲಿ ಕೊಟ್ಟಿದ್ದಾರೆ. ಇನ್ನುಳಿದ ನಾಲ್ಕೂ ಜನರನ್ನು ತಂದೆ ತನ್ನ ಆಪ್ತ ಸಂಬಂಧದ ನೆಲೆಯಲ್ಲೇ ಲೇಖಿಸಿದ್ದಾರೆ. ತಂದೆ ಸಿ.ವಿ ರಾಮನ್ನರನ್ನು ಮೊದಲು ಭಂಡತನದಿಂದ ಸಂದರ್ಶಿಸಲು ಹೋಗಿ ಉಚ್ಚಾಟಿಸಿ ಕೊಂಡದ್ದು, ಅನಂತರ ಯೋಗ್ಯತೆ ಗಳಿಸಿ ಅವರನ್ನು ಸಂದರ್ಶಿಸಿದ್ದು ಈಗ ಇತಿಹಾಸ. ಅದು ಮೊದಲು ದೀರ್ಘ ಲೇಖನವಾಗಿ ಅನಂತರ ಪುಸ್ತಕ ರೂಪದಲ್ಲಿ ಬಂದದ್ದು, ಸದ್ಯ ಕನ್ನಡಿಗರಿಗೆ ‘ವಿಜ್ಞಾನ ಸಪ್ತರ್ಷಿಗಳು’ ಸಂಕಲನದಲ್ಲಿ ಲಭ್ಯವಿದೆ. ಅದರ ಇಂಗ್ಲಿಶ್ ಅವತರಣಿಕೆಯೂ ಇಲ್ಲಿದೆ (ಗಮನಿಸಿ, ಇದು ಅನುವಾದವಲ್ಲ). ನೊಬೆಲ್ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ತನ್ನ ಜೀವಿತ ಕಾಲದಲ್ಲಿ ಸಾಮಾನ್ಯರಿಗೆ ಎಲ್ಲ ರೀತಿಯಲ್ಲೂ ಅಲಭ್ಯರಾಗಿದ್ದರು. ಆದರೆ ಅದು ಗರ್ವದಿಂದಲ್ಲ, ನಿರಂತರ ಅಧ್ಯಯನ ಮತ್ತು ಅದಕ್ಕಡ್ಡಿಯಾಗುವ ಪ್ರಚಾರದಿಂದ ದೂರವಿರುವ ತಂತ್ರ ಅಷ್ಟೇ. ಶಿಕಾಗೋದ ದೂರದಲ್ಲಿದ್ದ ಅವರನ್ನು ಒಲಿಸಿಕೊಂಡು ತಂದೆ ಬರೆದ ‘ಸುಬ್ರಹ್ಮಣ್ಯನ್ ಚಂದ್ರಶೇಖರ್’ (ವೈಜ್ಞಾನಿಕ ಜೀವನ ವೃತ್ತಾಂತ) ಕನ್ನಡ ಪುಸ್ತಕ ಲೋಕದಲ್ಲೇ ಅನನ್ಯ. ಇದನ್ನು ರಾಮನ್ಸ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರ ಮಾತುಗಳಲ್ಲಿ ನೋಡಿ: When no other Indian language had thought of bringing out a book on Chandrashekhar, you have done it in Kannada. ಅದರ ಸಾರ ಸಂಗ್ರಹವನ್ನು ತಂದೆಯೇ ಇಂಗ್ಲಿಶ್ನಲ್ಲಿ ಪರಿಭಾವಿಸಿ ಕೊಟ್ಟದ್ದೂ ಇಲ್ಲಿದೆ. ಈ ಸಂಕಲನಕ್ಕೆ ಗೌರವ ತಂದ ಮತ್ತಿಬ್ಬರು ಕಲಾಮೇರುಗಳು - ಕೊಳಲ ಮಾಂತ್ರಿಕ ಬಿಎನ್ ಸುರೇಶ್ ಮತ್ತು ನಾಟ್ಯ ಸರಸ್ವತಿ ಕೆ. ಮುರಳೀಧರ ರಾವ್.

Crossing the dateline - ಈಗಾಗಲೇ ಹೇಳಿದಂತೆ ತಂದೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದ ಮೇಲೆ ಅದನ್ನು ಖುದ್ದು ಚಂದ್ರಶೇಖರರಿಗೆ ಕೊಡುವ ಉತ್ಸಾಹದಲ್ಲಿ (ತಾಯಿಯ ಜೊತೆಗೇ) ಅಮೆರಿಕಾ ಯಾತ್ರೆ ಕೈಗೊಂಡರು. (ಲಘು ಲಹರಿಯಲ್ಲಿ ತಂದೆ ಸದಾ ಹೇಳುತ್ತಿದ್ದ ಮಾತು - ದೇವರು ಮತ್ತು ಪ್ರವಾಸ ನನ್ನ ವೈರಿಗಳು! ಅದು ಅವರ ಪ್ರಥಮ ಮತ್ತು ಏಕೈಕ ವಿದೇಶಗಮನವೂ ಹೌದು) ಅಮೆರಿಕಾದ ಪ್ರಜೆಗಳೇ ಆಗಿರುವ ನನ್ನ ತಮ್ಮ ಆನಂದವರ್ಧನನ ಕುಟುಂಬದ ಒತ್ತಾಯ, ಆಕರ್ಷಣೆ, ಒಡನಾಟ ಮತ್ತು ಓಡಾಟದ ಸ್ವಾರಸ್ಯಕರ ಕಥನದೊಡನೆ, ಅಲ್ಲಿ ಚಂದ್ರಶೇಖರರನ್ನು ಭೇಟಿಯಾಗಿ ಪುಸ್ತಕ ಕೊಟ್ಟದ್ದಲ್ಲದೆ, ಎರಡು ದಿನ ನಡೆಸಿದ ಅನೌಪಚಾರಿಕ ಮತ್ತು ಅಪೂರ್ವ (ಮತ್ತು ಅಂತಿಮ ಎಂದೂ ಹೇಳುವಂತಾದ್ದು ಕೇವಲ ಕಾಕತಾಲೀಯ. ಅದಾಗಿ ಕೆಲವೇ ದಿನಗಳಲ್ಲಿ ಚಂದ್ರಶೇಖರ್ ದೇಹಾಂತ್ಯವಾಯ್ತು) ವಿವರಗಳೆಲ್ಲ ‘ಸಪ್ತಸಾಗರದಾಚೆಯೆಲ್ಲೋ’ ಪುಸ್ತಕದಲ್ಲಿ ದಾಖಲಾಗಿದೆ. ಆ ಪುಸ್ತಕದ ತಯಾರಿಯ ಜೊತೆಜೊತೆಗೆ, ತಂದೆಯ ಹಳೆಯ ವಿದ್ಯಾರ್ಥಿ, ಪ್ರಸ್ತುತ ಮೈಸೂರಿನ ಇಂಗ್ಲಿಶ್ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಇದರ ಸಂಪಾದಕ ಕೆಬಿ ಗಣಪತಿ ಅವರ ಒತ್ತಾಯದ ಮೇರೆಗೆ ಅದನ್ನೇ ಇಂಗ್ಲಿಶಿನಲ್ಲಿ ಧಾರಾವಾಹಿಸಿದರು. ಹಾಗೆಂದು Crsossing the dateline  ಅನುವಾದವಲ್ಲ, ಭಾಷೆಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡೇ ಮೂಡಿದ ಸ್ವತಂತ್ರ ಕೃತಿ.
[ತಂದೆ ತನ್ನನ್ನೆಂದೂ ‘ಅನುವಾದಿಸಿಕೊಳ್ಳಲು’ ಅವಕಾಶ ಕೊಡಲಿಲ್ಲ! ಪೈಗಳ ಆಹ್ವಾನದ ಮೇರೆಗೆ ತರಂಗದ ಪ್ರಥಮ ಸಂಚಿಕೆಗೆ ಇವರು ಕನ್ನಡದಲ್ಲೇ ಬರೆದಿದ್ದ ಲೇಖನವನ್ನು ಸಂತೋಷ ಕುಮಾರ ಗುಲ್ವಾಡಿ ‘ಸಾಮಾನ್ಯರಿಗಾಗಿ ಸರಳಗೊಳಿಸುತ್ತೇನೆ’ ಎಂದಾಗ ತಿರಸ್ಕರಿಸಿ, ವಾಪಾಸು ತರಿಸಿಕೊಂಡಿದ್ದರು. ಖ್ಯಾತ ಭಾಷಾಶಾಸ್ತ್ರಜ್ಞ ಡಿ.ಎನ್ ಶಂಕರ ಭಟ್ಟರು ತಮ್ಮ ವಾದಕ್ಕೆ ತಂದೆಯ ಶೈಲಿಯನ್ನು ತಿದ್ದಲು ಹೊರಟಾಗ ಸಾಕಷ್ಟು ಚರ್ಚೆ ನಡೆಸಿದ್ದರು. ಕೊನೆಯಲ್ಲಿ, ಸರಳತೆಯೆಂಬ ಕಲಗಚ್ಚನ್ನು ತನ್ನಿಂದ ನಿರೀಕ್ಷಿಸದಿರಿ. ತನ್ನದೇನಿದ್ದರೂ ಕುಂಕುಮಕೇಸರೀ ಮಿಶ್ರಿತ ಕೆನೆಹಾಲು ಎಂದೇ ಮುಗಿಸಿದ್ದರು. ಛಲ ಬಿಡದ ಭಟ್ಟರು ತನ್ನ ‘ಕನ್ನಡ ಬರಹವನ್ನು ಸರಿಪಡಿಸೋಣ’ ಪುಸ್ತಕದಲ್ಲಿ ಚರ್ಚೆಯ ವಿವರಗಳನ್ನು ಬಿಟ್ಟು, ತನ್ನ ವಾದಕ್ಕೆ ಪೂರಕವಾಗಿ ತಂದೆಯ ವಾಕ್ಯಗಳನ್ನು ಉದ್ಧರಿಸಿಕೊಂಡರು. ತಂದೆ ನಿರುಮ್ಮಳವಾಗಿ ನಕ್ಕು “ನೋಡಿ ಸ್ವಾಮೀ ನಾನಿರುವುದೇ ಹೀಗೆ. He is entitled to his opinion” ಎಂದುಬಿಟ್ಟಿದ್ದರು. ತಂದೆಯ ವಿಚಾರ ಬಂದಾಗ ಭಾವುಕನಾಗಿ ದಾರಿ ತಪ್ಪಿದೇಂತನ್ನಿಸಿತೇ - ಕ್ಷಮಿಸಿ.]

ದಿಲ್ಲಿಯ ಖ್ಯಾತ ಪ್ರಕಾಶಕ ಮತ್ತು ವಿತರಕನೊಬ್ಬ ನನ್ನ ಈ ಮೂರೂ ಇಂಗ್ಲಿಶ್ ಪ್ರಕಟಣೆಗಳನ್ನು ನೋಡಿ ಆಕರ್ಷಿತನಾದ. ಇವುಗಳ ಕುರಿತು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಂ ಅವರ ಮೆಚ್ಚುಗೆಯ ಮಾತುಗಳೂ ಆತನಿಗೆ ಹೆಚ್ಚಿನ ಪ್ರೇರಣೆ ಕೊಟ್ಟವು. ಆತ ಅವನ್ನು ಅಖಿಲ ಭಾರತ ಮಾರುಕಟ್ಟೆಗೇರಿಸಲು ಅಪೂರ್ವ ಖರೀದಿ ಯೋಜನೆ ಮುಂದಿಟ್ಟ. “ಮೂರೂ ಪುಸ್ತಕಗಳನ್ನು ಕೂಡಲೇ ತಲಾ ಎರಡು ಸಾವಿರ ಪ್ರತಿಗಳ ಸಂಖ್ಯೆಯಲ್ಲಿ, ಶೇಕಡಾ ಒಂದೂ ರಿಯಾಯ್ತಿ ಬಯಸದೇ ಈಗಿನ ಮುದ್ರಿತ ಬೆಲೆಯಲ್ಲೇ ನಗದು ಕೊಟ್ಟು ಕೊಳ್ಳುತ್ತೇನೆ. ಆದರೆ ಎರಡೇ ನಿಬಂಧನೆ. ೧. ಸರಳ ಮುಖಪುಟಗಳನ್ನು ನನ್ನದೇ ವೆಚ್ಚದಲ್ಲಿ ಬದಲಿಸುತ್ತೇನೆ. ೨. ಸಹಜವಾಗಿ ನನ್ನದೇ ಮುದ್ರಿತ ಬೆಲೆ ನಮೂದಿಸುತ್ತೇನೆ.” ಮುಂದುವರಿದು ಪರೋಕ್ಷವಾಗಿ ನನ್ನ ಪ್ರಕಾಶನದ ಧೋರಣೆಯನ್ನೆ ಗೇಲಿಮಾಡುವಂತೆ “ಯಾವುದೇ ವ್ಯಾಪಾರಿ ಈ ಗಾತ್ರದ ಪುಸ್ತಕವನ್ನು ದಾಸ್ತಾನಿಟ್ಟು ಮಾರುವಲ್ಲಿ ಕೇವಲ ರೂ ಐದೋ ಹತ್ತೋ ಗಳಿಸುವುದನ್ನು ತಿರಸ್ಕರಿಸುತ್ತಾನೆ. ಅದೇ ಸ್ಥಾನದಲ್ಲಿ ಮೂವತ್ತೋ ನಲ್ವತ್ತೋ ಬರುವುದಿದ್ದರೆ ಖಂಡಿತಾ ಐದೋ ಹತ್ತೋ ಪ್ರತಿಗಳಿಗೆ ಅವಕಾಶ ಕೊಡುತ್ತಾನೆ! ಇಂದು ಇಂಗ್ಲಿಷ್ ವೈಚಾರಿಕ ಪುಸ್ತಕಗಳಲ್ಲಿ ಪುಟಕ್ಕೆ ರೂ ಒಂದರಂತೆ ದರವಿದ್ದರೆ ಗಿರಾಕಿ ಗೊಣಗುವುದಿಲ್ಲ ಎನ್ನುವುದನ್ನು ಗಮನಿಸಿದರೆ ನಿಮ್ಮ ಹದಿನೈದು ರೂಪಾಯಿ ಬೆಲೆಯ Scientific temperಗೆ ನಾನು ನಿಗದಿಸುವ ಕನಿಷ್ಠ ಬೆಲೆ ನೂರು ರೂಪಾಯಿ” ಎಂದೇ ಆತ ಮುಗಿಸಿದ. ಆದರೆ ಅಂತಿಮವಾಗಿ ಕೊಳ್ಳುಗರ ಕಿಸೆಗೆ ಎಂಬತ್ತೈದು ರೂಪಾಯಿ ಹೆಚ್ಚುವರಿ ಹೊರೆಯಾಗಲು ನಾನು (ತಂದೆಯೂ ಸೇರಿದಂತೆ ಹೇಳುವುದಾದರೆ ನಾವು) ಒಪ್ಪಲಿಲ್ಲ!

ಜಾತಿ ಕೆಡುವ ಭಯಕ್ಕೆ ಜನಿವಾರ ಕಳಚಿಟ್ಟು ಬನ್ನಿ! ಕನ್ನಡದ ಬಲು ಪ್ರಚುರಿತ ಪುಸ್ತಕ ಮಳಿಗೆ (‘ಬಪುಮ’ ಎಂದಿಟ್ಟುಕೊಳ್ಳಿ) ಒಂದರೊಡನೆಯೂ ಇಂಥದ್ದೇ ಇನ್ನೊಂದು ಅನುಭವ ಕೇಳಿ. ಆಗ ಸಗಟು ಖರೀದಿಯ ಯಾವುದೋ ಒಂದು ಮುಖದಲ್ಲಿ ನನ್ನ ತಂದೆಯ ಅಭಿಮಾನೀ ಶಿಷ್ಯರೊಬ್ಬರು ಅಧಿಕಾರಿಯಾಗಿದ್ದರು. ಅವರು ಜಿಟಿನಾ ಕೃತಿಯನ್ನು ಎಷ್ಟೂ ಕೊಳ್ಳುತ್ತಾರೆಂಬ ವಿಶ್ವಾಸ ಬಪುಮಕ್ಕೆ ಬಂತು. ನನಗೆ ಅದರ ಯಜಮಾನರ ದೂರವಾಣಿ, “ಸ್ವಾಮೀ ನಮಗೆ ನಿಮ್ಮ ‘ನೋಡೋಣ ಬಾರಾ ನಕ್ಷತ್ರ’ ಸ್ವಲ್ಪ ಪ್ರತಿಗಳು ಬೇಕಿತ್ತು, ಹೇಗೆ ಕೊಡ್ತೀರಿ?” ನಾನು ಎಂದಿನ ಮೂರನೇ ಒಂದು ರಿಯಾಯ್ತಿ ಮಾತಾಡಿದೆ. ಬಪುಮ ಕೂಡಲೇ  “ಇಲ್ಲ ಇಲ್ಲ. ಅದಾಗುವುದಿಲ್ಲ ನೀವು ಕನಿಷ್ಠ ೫೦% ಕೊಡಬೇಕು. ನಾವು ಎಂಟು ಹತ್ತು ಕೇಳ್ತಿಲ್ಲ, ಇನ್ನೂರು ಮುನ್ನೂರು ಪ್ರತಿ ನಗದು ಕೊಟ್ಟು ಕೊಳ್ತೇವೆ” ಎಂದರು. ನಾನು ವಾಸ್ತವವನ್ನು ಬಿಡಿಸಿಡುತ್ತಾ “ಸದ್ಯ ಕೊಡುತ್ತೇನೆಂದರೂ ನನ್ನಲ್ಲಿರುವುದು ನೂರೇ ಪ್ರತಿ. ಮತ್ತೆ ಅದನ್ನು ಯಾವ ಕಾರಣಕ್ಕೂ ಹೆಚ್ಚಿನ ರಿಯಾಯ್ತಿ ದರದಲ್ಲಿ ಕೊಡುವ ಯೋಚನೆ ನನಗಿಲ್ಲ.” ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಬಪುಮ “ತಿಂಗಳೊಳಗೆ ಮರುಮುದ್ರಿಸಿ ಕೊಡಿ, ಬೆಲೆ ನಮ್ಮ ೫೦%ಗೆ ಸರಿ ಹೊಂದುವಂತೆ ಹೆಚ್ಚೇ ಇಡಿ” ಎಂದರು. ನಾನೊಪ್ಪಲಿಲ್ಲ. ಪ್ರತಿ ಸಂಖ್ಯೆಯನ್ನು ಸಾವಿರದ ಮೇಲಕ್ಕೂ ಏರಿಸಿ ಆಮಿಷ ಒಡ್ಡಿದರು, ನಮ್ಮ ಪ್ರಕಾಶನ ತತ್ತ್ವದ ಉಲ್ಲಂಘನೆಯಾಗುವುದೆಂಬ ಭಯವಿದ್ದರೆ ತಮ್ಮದೇ ಹೆಸರಿನಲ್ಲಿ ಒಂದು ಮುದ್ರಣಕ್ಕೆ ಅವಕಾಶ ಕೊಟ್ಟರೂ ಸಾಕೆಂದು ಒತ್ತಾಯವನ್ನೂ ಹೇರಿದರು. ನಾನು ಯಾವುದಕ್ಕೂ ಜಗ್ಗಲಿಲ್ಲ!

ಸೋಲಿನ ಆಟ: ನನ್ನ ಪ್ರಕಟಣೆಗಳ ಸಂಪರ್ಕಕ್ಕೆ ಬಂದ ಸಣ್ಣ ಸಂಖ್ಯೆಯ ಪುಸ್ತಕ ಪ್ರೇಮಿಗಳಲ್ಲಿ ‘ಅತ್ರಿ ಪ್ರಕಟಣೆ ಎಂದರೆ ಗಟ್ಟಿ ಸಾಹಿತ್ಯ ಮತ್ತು ಸುಲಭ ಬೆಲೆಯದ್ದು’ ಎಂಬ ಉದ್ಗಾರವೇನೋ ತೆಗೆಯುತ್ತಿದ್ದರು. ಆದರೆ ಇಂದು ಪುಸ್ತಕೋದ್ಯಮ ಬೆಳೆದ ಕ್ರಮದಲ್ಲಿ ನಾನ್ಯಾಕೋ ಸೋಲಿನ ಆಟ ಆಡುತ್ತಿದ್ದೇನೆ ಎಂಬ ಭಾವವೂ ನನ್ನೊಳಗೆ ಬೆಳೆಯುತ್ತಲೇ ಬಂತು. ನಾನು ಬಿಡಿ ಪುಸ್ತಕ ವ್ಯಾಪಾರಿಯಾಗಿ ಮಂಗಳೂರು ಪರಿಸರದಲ್ಲಿ, ನನ್ನ ತಾಕತ್ತಿನಲ್ಲಿ ಮಾರಿಹೋಗಬಹುದಾದ್ದೆಲ್ಲವನ್ನು ಎಲ್ಲಿಂದಲೂ ನಗದು ಕೊಟ್ಟು ಕೊಂಡು, ಪ್ರದರ್ಶಿಸಿ, ಮಾರುವಲ್ಲಿ ನಿರಂತರ ತೊಡಗಿದ್ದೇನೆ. ಇದಕ್ಕೆ ಕರ್ನಾಟಕದ ಯಾವ ಮೂಲೆಯ ಪ್ರಕಾಶನವನ್ನೂ ನಾನು ಬಳಸದೇ ಬಿಟ್ಟಿಲ್ಲ. ಆದರೆ ರಾಜ್ಯದ ಇತರ ಪುಸ್ತಕ ಮಳಿಗೆಗಳು (ತೀರಾ ಕೆಲವರನ್ನು ಬಿಟ್ಟು), ಸ್ವತಂತ್ರ ಬಿಡಿ-ಮಾರಾಟದ ಮಳಿಗೆಯೂ ಇರುವ  ಅನ್ಯ ಪ್ರಕಾಶಕರು (ನನ್ನ ಪೂರೈಕೆದಾರರು) ನನ್ನ ಪ್ರಕಟಣೆಗಳ ಬಗ್ಗೆ ನನ್ನದೇ ಧೋರಣೆ ತಾಳಲಿಲ್ಲ. ಕೆಲವರು ಸ್ಥಳೀಯವಾಗಿ ಅನಿವಾರ್ಯತೆ ಬಂದಾಗ ಆ ಒಂದೊಂದು ಶೀರ್ಷಿಕೆಯನ್ನು, ಬೇಡಿಕೆ ಇರುವಷ್ಟೇ ತರಿಸಿಕೊಂಡರು. ಓರ್ವ ಖ್ಯಾತಿವೆತ್ತ ಪ್ರಕಾಶಕ/ ಮಾರಾಟಗಾರರಂತೂ ಎಂದೋ ತರಿಸಿಕೊಂಡ ನನ್ನ ಕೆಲವೇ ಪುಸ್ತಕಗಳನ್ನು, ಅವರಂಗಡಿಯ ಅವ್ಯವಸ್ಥೆಗೆ ಬಣ್ಣ ಕಳೆದು ಮುಕ್ಕಾದ ಸ್ಥಿತಿಯಲ್ಲಿ, ‘ಕ್ಷಮಿಸಿ, ಮಾರಾಟವಾಗೋಲ್ಲ’ ಎಂಬ ಪುಟ್ಟ ಷರಾ ಸಹಿತ ಮರಳಿಸಿ, ನಿರ್ಲಜ್ಜವಾಗಿ ಅವರ ಪುಸ್ತಕಗಳ ಬಿಲ್ಲಿನ ಜೊತೆ ಹಣ ಕೇಳಿಕೊಂಡಿದ್ದರು! ಅವರು ಕಳಿಸುವ ಮೊದಲು ನನ್ನನ್ನು ವಿಚಾರಿಸುವ ಸೌಜನ್ಯವನ್ನೂ ತೋರಲಿಲ್ಲ. (ನಾನು ಮಾರಿ ಇಲ್ಲವೇ ಮರಳಿಸಿ ಕರಾರಿನಲ್ಲಿ ಅವನ್ನು ಕೊಟ್ಟದ್ದಲ್ಲ. ಮತ್ತವರು ತಮ್ಮ ಪ್ರಕಟಣೆಗಳ ಬಗ್ಗೆ ಬಿಲ್ಲಿನಲ್ಲಿ ಸ್ಪಷ್ಟವಾಗಿ ಘೋಷಿಸಿಕೊಂಡಿದ್ದಾರೆ - ಒಮ್ಮೆ ಮಾರಾಟವಾದ ಪುಸ್ತಗಳನ್ನು ಹಿಂದೆ ಪಡೆಯುವುದಿಲ್ಲ!).  ‘ನೀ ನನಗಿದ್ದರೆ ನಾ ನಿನಗೆ’ ಎಂಬ ಬಾಲಪಾಠದಲ್ಲಿ ಬರುವ ಕತ್ತೆಯ ವಿವೇಚನೆಯೂ ಬಹುತೇಕ ಪುಸ್ತಕೋದ್ಯಮಿಗಳಿಗಿಲ್ಲ.

ಜನಪರ ಎಂದು ಹೇಳಿಕೊಳ್ಳುವ ಸರಕಾರಗಳು (ಪಕ್ಷಾತೀತವಾಗಿ) ಮತ, ಭಾಷೆ, ನೆಲ, ಜಲವೆಂದು ಜನರ ಭಾವನೆಗಳಲ್ಲಿ ಆಡುತ್ತಲೇ ಇರುತ್ತವೆ. ಎಲ್ಲದರ ಬಗ್ಗೆ ಟೀಕಾಸ್ತ್ರ ಎಸೆಯುವುದು ಇಲ್ಲಿ ಹೆಚ್ಚಾಗಬಹುದು. ಆದರೆ ಕನ್ನಡದ ಘೋಷಣೆ ಮಾಡುತ್ತಾ ಇಂಗ್ಲಿಷ್ ಮಾಧ್ಯಮದ ಹುಚ್ಚುಚ್ಚು ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿವೆ ಎನ್ನುವುದನ್ನಂತೂ ಸಾವಿರನೇ ಬಾರಿ ಪುನರುಚ್ಚರಿಸದಿರಲಾರೆ. ಶಿಕ್ಷಣ, ಸಂಸ್ಕೃತಿಗಳ ಪೂರಕಾಂಗವಾಗಿ ಸಹಜ ವಿಕಸನದಲ್ಲಿದ್ದ ಕನ್ನಡ ಪುಸ್ತಕೋದ್ಯಮವಂತೂ ವನಮಹೋತ್ಸವದ ಸಂಭ್ರಮದಲ್ಲಿ ತಾವೇ ನೆಟ್ಟ ಸಸಿಯನ್ನು ತೊತ್ತಳ ತುಳಿಯುವ ಉಡಾಫೆಯಲ್ಲಿ ನರಳುತ್ತಿದೆ. ಕನ್ನಡದ ಓದನ್ನು ಬಯಸುವ ಯುವ ಪೀಳಿಗೆಯೇ ಬರುತ್ತಿಲ್ಲ. ಪ್ರೇರಣೆ ನೀಡಬೇಕಾದ ಮನೆ, ಶಾಲೆ ಮತ್ತು ಪರಿಸರಗಳು ಯೋಜನೆಯಿಲ್ಲದೆ ಅಭಿವೃದ್ಧಿಯ ಶಾಪಕ್ಕೊಳಗಾಗಿರುವ ನಮ್ಮ ದಾರಿಗಳಂತೇ ಆಗಿದೆ. ಇಂಥಲ್ಲಿ ನನ್ನ ಪ್ರಕಟಣೆಗಳು ಯಾವುದೇ ಪಾಠಪಟ್ಟಿಯನ್ನು ನೇರ ಮುಟ್ಟುವುದಿಲ್ಲ. ಕೇವಲ ರೋಚಕ ಓದಿಗೆ ಅಥವಾ ವಿಚಾರಹೀನ ಭಾವುಕತೆಗೆ ಅವಕಾಶ ಇವುಗಳಲ್ಲಿಲ್ಲ. ಪ್ರಾಥಮಿಕದಿಂದ ಸ್ನಾತಕೋತ್ತರದವರೆಗಿರುವ ಸಾವಿರಾರು (ಲಕ್ಷಾಂತರವೂ ಇರಬಹುದು) ಸಂಸ್ಥೆಗಳ ಕೇವಲ ಪ್ರಾತಿನಿಧಿಕ ಖರೀದಿಗೊಳಗಾಗಲೂ ಇವಕ್ಕೆ ಜನಪ್ರಿಯತೆಯ ಮುಖವಾಡವಿಲ್ಲ. ಮುದ್ರಣ ಪ್ರಾವೀಣ್ಯ ಮೆರೆಯುವ ಮತ್ತು ಹೊಸ ಓದು, ಬೆಸ್ಟ್ ಆಫ್, ಸಮಗ್ರ, ಅಂಕಣ ಸಂಕಲನ ಇತ್ಯಾದಿ ಚರ್ವಿತಚರ್ವಣಗಳ ಅಡ್ಡೆಯಲ್ಲಿ ನನ್ನ ಪ್ರಕಟಣೆಗಳು ಎದ್ದು ಕಾಣುವುದು ಸಾಧ್ಯವೇ ಇಲ್ಲ! ಎತ್ತಿ ಆಡಬಹುದಾದ ಮಾಧ್ಯಮದ ಅಂಕಣಗಳು, ಅಂಕಣಕಾರರು ನನ್ನ ಲೆಕ್ಕಕ್ಕೆ ತುಂಬಾ ಕಡಿಮೆ ದಕ್ಕಿದ್ದನ್ನು ಅದೃಷ್ಟದ ತಲೆಗೆ ಕಟ್ಟಲು ನನ್ನ ಮನ ಒಪ್ಪದು. ಇದಕ್ಕೆ ಪೂರಕವಾಗಿ ಒಂದೆರಡು ಉದಾಹರಣೆಗಳು.

ಬೆನ್ನೆಲುಬಿಲ್ಲದ ಪತ್ರಿಕೋದ್ಯಮ: ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿತ ಪುಸ್ತಕಗಳ ಪಟ್ಟಿಯಾಗಲೀ (ಸಾದರ ಸ್ವೀಕಾರ ಎನ್ನಿ), ಕನಿಷ್ಠ ಹಾಗೆ ಬಂದವುಗಳ ಶಿಸ್ತುಬದ್ಧ ಪರಿಚಯವೋ ವಿಮರ್ಶೆಯೋ ಒಂದು ತತ್ತ್ವವಾಗಿ ಎಂದೂ ಬಂದದ್ದಿಲ್ಲ. ಮೊದಮೊದಲು ನಾನು ಎಲ್ಲಾ ಪತ್ರಿಕೆಗಳಿಗೂ ತಲಾ ಎರಡು ಪ್ರತಿಗಳನ್ನು ‘ವಿಮರ್ಶೆಯ ಕೃಪೆಗಾಗಿ’ ಎಂದು ಷರಾ ಹಚ್ಚಿಯೇ ಕಳಿಸುತ್ತಿದ್ದೆ. ಎಷ್ಟೋ ಪುಸ್ತಕಗಳಿಗೆ ವಿಮರ್ಶೆಯಿರಲಿ, ‘ಸ್ವೀಕಾರ’ ಪಟ್ಟಿಯಲ್ಲೂ ಅವಕಾಶ ಸಿಗದಿದ್ದುದು ಒಂದು ಕಥೆ. ಮತ್ತೆಷ್ಟೋ ಬಾರಿ ವಿಮರ್ಶಕನ ಅಸಾಮರ್ಥ್ಯ ಕೃತಿಯ ಕೊರತೆಯಾಗಿಬಿಡುತ್ತಿತ್ತು. ‘ರಾಮಾನುಜನ್ ಬಾಳಿದರಿಲಿ’ ಕೃತಿಪರೀಕ್ಷಕನೊಬ್ಬ ಗಣಿತೀಯ ವಿವರಣೆಗಳನ್ನು ಕಬ್ಬಿಣದ ಕಡಲೆ ಎಂದ. ಕಪ್ಪುಕುಳಿ, ಕಪ್ಪು ರಂಧ್ರಗಳು ಯಾಕೇ ಬ್ಲ್ಯಾಕ್ ಹೋಲೇ ಇದ್ದರೇನು ಎನ್ನುವವರು ‘ಕೃಷ್ಣವಿವರ’ ಎಂಬ ಪದವನ್ನು ತಂದೆ ಬಳಸಿದಾಗಲಂತೂ (ಗಮನಿಸಿ, ಇದನ್ನು ಠಂಕಿಸಿದ್ದು ತಂದೆ ಅಲ್ಲ, ಖ್ಯಾತ ಖಭೌತ ವಿಜ್ಞಾನಿ ಜಯಂತ್ ನಾರಳೀಕರ್) ‘ಸಂಸ್ಕ್ರುತ ಭೋ ಇಷ್ಟ’ ಎಂದು ಗೇಲಿ ಮಾಡಿದರು. ಎಲ್ಲ ಮಕ್ಕಳಿಗೂ ಒಂದೇ ಅಳತೆಯ ಚಡ್ಡಿ ಹೊಲಿಯುವುದಲ್ಲ ಎನ್ನುತ್ತಿದ್ದರು ತಂದೆ. ಗಡ್ಡ ಹೆರೆಸಲು ಬ್ಲೇಡು, ಗೆಲ್ಲು ಕಡಿಯಲು ಕತ್ತಿ, ಮರದ ಬುಡಕ್ಕಾದರೆ ಕೊಡಲಿಯೇ ಸರಿ ಎಂದೂ ವಿವರಿಸಿದ್ದುಂಟು. ಪರ್ಯಾಯ ಪದಗಳ ವಿಪುಲತೆಯಲ್ಲಿ ವಿಜ್ಞಾನದ ಭಾಷೆಯನ್ನು ಸರಳಗೊಳಿಸಿದ್ದೇವೆ ಎನ್ನುವುದು ಅಪಕಲ್ಪನೆ, ಗೊಂದಲಕ್ಕೆ ದಾರಿ. ಇದು ಒಂದು ಕ್ಷಣದ, ಶಬ್ದದ, ವಾಕ್ಯದ ಅಗತ್ಯವಲ್ಲ, ಒಂದು ಪರಂಪರೆಯ ಒಂದು ಜೀವಮಾನದ ಚಿಂತನೆಯ ಫಲ. ಮೆಟ್ಟಲಿನಲ್ಲಿ ಎಡವಿದವರನ್ನು ಉಪಚರಿಸಿ, ಸೌಧದ ಸೌಂದರ್ಯದತ್ತ ಸೆಳೆಯಲು ತಂದೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಅಡ್ಡಕಸಬಿಗೆ ಇಟ್ಟಿಗೆಯ ಮೇಲೆ ಇಟ್ಟಿಗೆಯಿಟ್ಟರೆ ಗೋಡೆ. ಪರಿಣತ ಮೇಸ್ತ್ರಿಗೆ ನೆಲದ ಹದ, ಅಡಿಪಾಯದ ದೃಢತೆಯೂ ಕಾಡುತ್ತದೆ. ಮುಂದುವರಿದು ಸಾಲಿಗೆ ಹಗ್ಗ, ಪ್ರತಿ ಕಲ್ಲಿಗೂ ಮಟ್ಟಗೋಲು, ತೂಕದ ಗುಂಡು, ಜಲಮಟ್ಟವೂ ಬಳಕೆಯಾದರಷ್ಟೇ ಶಿಲ್ಪ (ಇಲ್ಲವಾದರೆ ಬಳಕೆದಾರನ ಗೋರಿ!). ತಂದೆ ಇದು ತನ್ನದು, ಸರ್ವಪ್ರಥಮ ಸಾಧನೆ ಎಂಬಿತ್ಯಾದಿ ಹಮ್ಮು ಎಂದೂ ತೋರಿದ್ದಿಲ್ಲ. ಭಾಷೆಯನ್ನು ವಿಜ್ಞಾನಕ್ಕೆ ದುಡಿಸುವಲ್ಲಿ ಅವರಿಗೆ ಇಂಗ್ಲಿಷಿನಲ್ಲಿ ಅಸಿಮೋವ್ ಗ್ಯಾಮೋವ್‌ಗಳು ಆದರ್ಶ. ಕನ್ನಡಕ್ಕೆ (ತಾನಲ್ಲ) ಆರ್.ಎಲ್ ನರಸಿಂಹಯ್ಯ, ಸಿ.ಎನ್ ಶ್ರೀನಿವಾಸ ಅಯ್ಯಂಗಾರ್ ಹಾಕಿಕೊಟ್ಟಿದ್ದಾರೆ ದಾರಿ ಎಂದು ಪ್ರಚುರಿಸುತ್ತಿದ್ದದ್ದು ಜಾಣ ಕಿವುಡಿನ ಮೇಲೆ ಬೀಳುತ್ತಿತ್ತು. ದುರಂತವೆಂದರೆ ನಮ್ಮ ಬಹುತೇಕ ಪತ್ರಿಕಾ ವಿಮರ್ಶಕರು ಕೇವಲ ಸಾಹಿತ್ಯ ವಿದ್ಯಾರ್ಥಿಗಳು! ಪತ್ರಿಕಾ ಬ್ರಹ್ಮರುಗಳ ಇಸ್ಪೀಟ್ ಆಟದಲ್ಲಿ ಜೋಕರುಗಳಿಗೇ ಪ್ರಾಧಾನ್ಯ. ವಿವಿಧ ಶಿಸ್ತುಗಳಿಗೆ ಸಮರ್ಥರನ್ನು ಆಯ್ದು, ಬಳಸುವುದು ಅವರಿಗೆ ಅನಾವಶ್ಯಕ ವೈಭವ! ಮೊನ್ನೆ ಸಿಕ್ಕ ಗೆಳೆಯ ಪಿ.ಮಹಮ್ಮದ್ (ಪ್ರಜಾವಾಣಿ ಬಳಗದ ವ್ಯಂಗ್ಯಚಿತ್ರಕಾರ) ಹೇಳಿದ ಮಾತು - ದಿನಕ್ಕೆ ನಾಲ್ಕೋ ಎಂಟೋ ಗೀಟು ಹಾಕುವ ನರೇಂದ್ರ (ಇನ್ನೋರ್ವ ಹಿರಿಯ ವ್ಯಂಗ್ಯಚಿತ್ರಕಾರ) ಉಳಿದ ಹೊತ್ತಿನಲ್ಲಿ ಕಛೇರಿಯ ದೂಳು ಯಾಕೆ ಹೊಡೆಯಬಾರದು ಎಂದು ಶ್ಯಾಮರಾಯರ ಮನಸ್ಸು ತರ್ಕಿಸುತ್ತಿತ್ತು!

ಬದ್ಧತೆಯಿಲ್ಲದ ಬುದ್ಧಿಗಳು: ತಂದೆಯ ಬರಹಗಳಿಗೆ ನನ್ನ ವಕಾಲತ್ತೇನೂ ಬೇಕಿಲ್ಲ. ನನ್ನದೇ ಒಂದು ಪುಸ್ತಕವನ್ನು ಮೊದಲು ವಿಚಾರಪರವಾದ್ದೊಂದು ಮತ್ತೆರಡು ತೋರಿಕೆಯ ‘ಬುದ್ಧಿ’ಗಳು ಸ್ವೀಕರಿಸಿದ ಪರಿಯನ್ನು ನಾನು ಹೇಳಲೇಬೇಕು.

೧೯೯೯ರಲ್ಲಿ ನನ್ನ ‘ಪುಸ್ತಕ ಮಾರಾಟ ಹೋರಾಟ’ (ಪುಮಾಹೋ ಎನ್ನಿ) ಪ್ರಕಟವಾಯ್ತು. ಆ ಹೊಸತರಲ್ಲೇ ಅನ್ಯ ಕಾರ್ಯನಿಮಿತ್ತ ಉಡುಪಿಗೆ ಹೋದವನು ಕೇವಲ ವೈಯಕ್ತಿಕ ಗೌರವದಲ್ಲಿ ಕುಶಿ ಹರಿದಾಸ ಭಟ್ಟರಿಗೆ ಒಂದು ಪ್ರತಿ ಕೊಟ್ಟು ಬಂದೆ. ಆ ರಾತ್ರಿಯಿಂದ ತೊಡಗಿ ಎರಡೋ ಮೂರೋ ದಿನದವರೆಗೆ ನನಗೆ ಬಿಟ್ಟು ಬಿಟ್ಟು ಕುಶಿಯವರಿಂದ ದೂರವಾಣಿ. ಅವರ ದಣಿವರಿಯದ ಕೆಲಸಗಳ ನಡುವೆ ನನ್ನ ಪುಸ್ತಕದ ಓದಿನ ವಿವಿಧ ಹಂತಗಳ ಸಂತೋಷ ಹಂಚಿಕೊಳ್ಳುತ್ತಲೇ ಹೋದರು. ಹತ್ತೇ ದಿನದಂತರದೊಳಗೆ (ತಮ್ಮ ಮೊಮ್ಮಗಳಿಂದಲೇ ಚಿತ್ರ ಬರೆಸಿ, ಸೇರಿಸಿ) ತಮ್ಮ ಖ್ಯಾತ ಲೋಕಾಭಿರಾಮ ಅಂಕಣದಲ್ಲಿ ಪುಮಾಹೋವನ್ನು ಕಣಕಣಾ ಹಿಂಜಿ ನನಗೆ ಪ್ರಶಂಸಾ ಮಾಲಿಕೆ ತೊಡಿಸಿಬಿಟ್ಟಿದ್ದರು. ಎಲ್ಲಾ ಪುಸ್ತಕ ಪ್ರೇಮಿಗಳ, ಉದ್ಯಮಿಗಳ, ಸರಕಾರದ ಕಣ್ತೆರೆಸುವ ಕೆಲಸವನ್ನು ಗಟ್ಟಿಯಾಗಿ ಮಾಡಿದ್ದರು.

ಹೀಗೇ ಮೈಸೂರಿನ ನನ್ನ ಮುದ್ರಕರಲ್ಲಿಗೆ ಹೋಗಿದ್ದ ಹಾಮಾ ನಾಯಕರು ವಾಸ್ತವದಲ್ಲಿ ಪುಸ್ತಕ ಮಾರಾಟ ಹೋರಾಟದ ಮೊದಲ ಪ್ರತಿಯ ಗೌರವವನ್ನು ದಕ್ಕಿಸಿಕೊಂಡಿದ್ದರು. ಅದನ್ನು ನೋಡಿ (ಖಂಡಿತವಾಗಿ ಪೂರ್ಣ ಓದಿ ಅಲ್ಲ) ಅವರು ಸುಧಾ ವಾರಪತ್ರಿಕೆಯ ಅಂಕಣದಲ್ಲಿ ಬರೆದ ಲೇಖನ ತೀರಾ ನಿರಾಶಾದಾಯಕವಾಗಿತ್ತು. ಅವರು ಆರೋಪ ಹೊರಿಸಿದ್ದರೆ ನಾನು ಉತ್ತರಿಸಬಹುದಿತ್ತು. ಜೀವಮಾನದುದ್ದಕ್ಕೂ ಸಾರ್ವಜನಿಕ ವ್ಯವಸ್ಥೆಯ ಭಾಗವಾಗಿಯೇ ನಿಂತ ಅವರ ಅಪಾರ ಅನುಭವದ ಬೆಳಕಿನಲ್ಲಿ ಖಂಡಿತವಾಗಿಯೂ ಭಿನ್ನಾಭಿಪ್ರಾಯವನ್ನು ದಾಖಲಿಸುವ ಅವಕಾಶವಿತ್ತು. ಇಲ್ಲ, ಜಾಣತನ ಮೆರೆದರು. ೧೫೮ ಪುಟ ಮತ್ತು ೧೭ ಮುಖ್ಯ ಶೀರ್ಷಿಕೆಗಳ ಪುಸ್ತಕದಲ್ಲಿ ಮುನ್ನುಡಿ ಒಂದು ಚೂರು, ಮತ್ತೆ ೨೦ ಪುಟಗಳಲ್ಲಿದ್ದ, ಒಂದು ಶೀರ್ಷಿಕೆಯಡಿಯಲ್ಲಿದ್ದ ಪುಸ್ತಕೋದ್ಯಮದ ರಸಪ್ರಸಂಗಗಳನ್ನು ಸ್ವಲ್ಪ ನೋಡಿ, ಒಂದು ಘಟನೆಯನ್ನಂತೂ ಹಾಗೇ ಉದ್ಧರಿಸಿ ವಾರದ ಪುಟ ತುಂಬಿಕೊಂಡಿದ್ದರು. ಇಂದಿಗೂ ಹಾಮನಾ ಬರಹಗಳ ಅಭಿಮಾನಿಗಳು ಎಷ್ಟೋ ಜನ ಪುಮಾಹೋ ಅಂದರೆ ಪುಸ್ತಕೋದ್ಯಮದ ಹಾಸ್ಯ ಬರಹಗಳ ಸಂಕಲನವೆಂದೇ ತಿಳಿದಿದ್ದಾರೆ!

ನಾನು ಅದುವರೆಗೆ ಲಂಕೇಶರನ್ನು ಭೇಟಿಯಾದವನಲ್ಲ. ಅನ್ಯ ಕಾರ್ಯಾರ್ಥ ಬೆಂಗಳೂರಿಸಿದವನು, ತುಂಬು ವಿಶ್ವಾಸದಿಂದ ಪುಮಾಹೋದ ಪ್ರತಿ ಹಿಡಿದುಕೊಂಡು ಅವರ ಕಛೇರಿಗೆ ಹೋದೆ. ಶೂದ್ರ ಶ್ರೀನಿವಾಸರಿಗೆ ನಿತ್ಯದ ಸಭೆ ಕೊಟ್ಟಂತಿದ್ದ ಲಂಕೇಶರೆದುರು ನಾನು ಸ್ವಪರಿಚಯ ಹೇಳಿಕೊಂಡು, ಪುಸ್ತಕ ಕೊಡುವುದರಲ್ಲಿದ್ದೆ. “ಓ, ಮಂಗ್ಳೂರಾ! ಪತ್ರಿಕೇ ಇಡ್ತೀರೇನ್ರೀ?” “ಇಲ್ಲ ಸಾರ್. ನನ್ನದು  ಪುಸ್ತಕ ಮಾತ್ರ...” “ಪತ್ರಿಕೆ ಇಡ್ರೀ. ನಿಮ್ಮ ಬಸ್ ಸ್ಟ್ಯಾಂಡ್ ಬೋಳಿ ಮಗ ಏನು ಸುಖವಿಲ್ಲಾ.” ಕುಸಿದ ಧೃತಿಯಲ್ಲೇ ನಾನು ಪುಸ್ತಕ ತೋರಿಸಿದೆ, ಕೊಟ್ಟೆ. ಪುಟ ಬಿಡಿಸುವ ಸೌಜನ್ಯವನ್ನೂ ತೋರದೆ, ಪಕ್ಕಕ್ಕಿಟ್ಟು, ಸಹಾಯಕನನ್ನು ಕರೆದು ತನ್ನ ಅದೇ ಬಂದ ಹೊಸ ಪುಸ್ತಕ - ‘ಅಕ್ಕ’ ಕೊಟ್ಟು, ‘ಲೆಕ್ಕ ಚುಕ್ತಾ’ ಮಾಡಿದವರಂತೆ ಮುಖಭಾವ ಮಾಡಿದರು. ನಾನು ಎದ್ದು ಬಂದೆ. ಮುಂದೆಂದೋ ಯೋಗಪ್ಪ ಎನ್ನುವವರು ಕಾಟಾಚಾರಕ್ಕೆ ಪುಸ್ತಕದ ಕುರಿತು ಒಂದಷ್ಟು ಪತ್ರಿಕೆಯಲ್ಲಿ ಗೀಚಿದರು.

ಅನ್ಯರ ಸ್ನೇಹ ಸರಿ, ಔದಾರ್ಯದಲ್ಲಿ ಬದುಕುವುದು ನನಗೆ ಎಂದೂ ಹಿಡಿಸಿಲ್ಲ. ವಿವಿಧ ಕೇಂದ್ರಗಳಲ್ಲಿ ನನ್ನದೇ ವಿತರಣಾ ಜಾಲ ಬೆಳೆಸುವ (big business) ಅರ್ಥಾತ್ ನನ್ನ ವೈಯಕ್ತಿಕತೆಯನ್ನು ಅಡವಿಟ್ಟು ಅಂಗಡಿಯನ್ನು ಬೆಳೆಸುವ ಹುಚ್ಚು ನನಗೆ ಎಂದೂ ಬಂದದ್ದಿಲ್ಲ. ಅತ್ರಿ ಅಂಗಡಿಗೆ (ನನ್ನ ಕಾಲಾನಂತರ) “ಮುಂದೇನು” ಎಂದು ಕೇಳುವವರಿಗೆ ನಾನು ಲಘುವಾಗಿಯೇ ಆದರೆ ವಾಸ್ತವವನ್ನು ಹೇಳುತ್ತೇನೆ. “ನನ್ನಜ್ಜ ಕೃಷಿಕ. ಅಪ್ಪ ಅಧ್ಯಾಪಕ. ನಾನು ಎರಡೂ ಬಿಟ್ಟ ವ್ಯಾಪಾರಿ. ಮಗ ಮೂರೂ ಬಿಟ್ಟಾಗ (ಸಿನಿಮಾ ನಿರ್ದೇಶಕ) ನನ್ನನಂತರ ಅತ್ರಿ ಮುಚ್ಚಿದರೆ ನನಗೆ ಆಶ್ಚರ್ಯವೂ ಇಲ್ಲ, ದುಃಖ ಖಂಡಿತಾ ಇಲ್ಲ”. ಹಾಗಿರುವಾಗ ಇಪ್ಪತ್ತೇ ವರ್ಷ ಪ್ರಾಯದ ಪ್ರಕಾಶನದ ಬಗ್ಗೆ ಯಾಕೆ ಮೋಹ! ಅಶೋಕ, ಆನಂದ, ಅನಂತಗಳ (ನಾವು ಮೂವರು ಸೋದರರು) ಆದ್ಯಕ್ಷರ ತ್ರಯಗಳ ಸೂಚನೆಯಾಗಿ ಬಂದದ್ದು ಅತ್ರಿ (ಇಂಗ್ಲಿಶಿನಲ್ಲಿ A-three). ಇದರ ಹೃಸ್ವ ರೂಪ ಇಂಗ್ಲಿಶಿನಲ್ಲಿ ಜ್ಞಾನಪ್ರಪಂಚದ ವ್ಯಾಪಕತ್ವ ಸೂಚಿಸುವಂತೆ (ABC) Book Centre ಸೇರಿಸಿದ್ದೆ. ಅತ್ರಿಯಿಂದ ದತ್ತವಾದದ್ದು ಎಂಬರ್ಥದಲ್ಲಿ ಪ್ರಕಾಶನವನ್ನು ನಾನು ಮೊದಲು ‘ದತ್ತಾತ್ರೇಯ’ ಎಂದೇ ತೊಡಗಿದ್ದೆ. ಸಾಂಸ್ಥಿಕ ರೂಪದಲ್ಲಿ ಅತ್ರಿಯಿಂದ ಏನೂ ಭಿನ್ನವಲ್ಲದ ಪ್ರಕಾಶನಕ್ಕೆ ಹೆಸರಿನ ಬೇಧದಿಂದ ಸರಕಾರೀ ನೋಂದಾವಣೆ ಇತ್ಯಾದಿ ಅನಾವಶ್ಯ ಆಡಳಿತ ವೆಚ್ಚಗಳು ಏರುತ್ತವೆ ಎಂದು ಕಂಡಾಗ ಅತ್ರಿಗೇ ಮರಳಿದ್ದ ಪ್ರಕಾಶವನ್ನು ಈಗ ಮುಚ್ಚಿದ್ದೇನೆ. ಲೋಕೋಪಯೋಗಿಯಾಗಬಹುದಾದ ನನ್ನನುಭವದ ಹಂಚಿಕೆಗಷ್ಟೇ ನಾನು ಲೇಖನಗಳನ್ನು ಬರೆದದ್ದುಂಟು, ತೀರಾ ಕಡಿಮೆ ಸಂಖ್ಯೆಯಲ್ಲಿ ಪುಸ್ತಕವಾಗಿ ಸಂಕಲಿಸಿದ್ದೂ ಆಗಿದೆ. ಉಳಿದವಕ್ಕೆ ಈಗ ಈ ಅಂತರ್ಜಾಲದ ಪುಟಗಳು ದಕ್ಕಿ ಅಪಾರ ಸ್ವಾತಂತ್ರ್ಯವನ್ನೂ ಸಂತೋಷವನ್ನೂ ಕಾಣುತ್ತಿರುವಾಗ ‘ಚಿಂತೆಯಾತಕೋ ಮನುಜಾ ಪುಸ್ತಕೋದ್ಯಮದ ಭ್ರಾಂತಿಯಾತಕೋ’ ಎಂದು ಪ್ರಕಾಶನವನ್ನು ಮುಚ್ಚಿದ್ದೇನೆ. ಅಭಿನವ ಪ್ರಕಾಶನದ ಅತ್ಯುತ್ಸಾಹೀ ಗೆಳೆಯ ರವಿ ಕುಮಾರ್ ಹಿಂದೆಂದೋ “ನಿಮ್ಮ ಒಂದು ಪುಸ್ತಕವನ್ನಾದರೂ ನನಗೆ ಪ್ರಕಟಿಸಲು ಕೊಡಿ” ಎಂದದ್ದು ನೆನಪಿನಲ್ಲಿತ್ತು. ಹಾಗಾಗಿ ನಾನಿಲ್ಲಿ ಅಂಡಮಾನ್ ಪ್ರವಾಸ ಕಥನ ನಡೆಸಿದ್ದಂತೆ ರವಿಗೆ ‘ಇದು ಬೇಕೇ’ ಎಂದು ಸೂಚನೆ ಕೊಟ್ಟಿದ್ದೆ. ಅವರು ತುಂಬು ಮನಸ್ಸಿನಿಂದ ‘ಹೂಂ’ ಎಂದದ್ದಕ್ಕೆ ಈಗ ಲಕ್ಷದ್ವೀಪ ಕಥನವನ್ನೂಸೇರಿಸಿ ಕೊಟ್ಟಿದ್ದೇನೆ. ಕಾಲದ ಹಕ್ಕೊತ್ತಾಯಗಳು ಬಂದರೆ, ನನಗೆ ಒಪ್ಪಿಗೆಯಾದರೆ (ನನ್ನದೂ ಇನ್ನಷ್ಟು ಬರಹಗಳು ಸೇರಿದಂತೆ) ತಂದೆಯವರ ಎಲ್ಲಾ ಕೃತಿಗಳು ಅನ್ಯ ಪ್ರಕಾಶನಗಳಲ್ಲಿ ಹೊಸ ರೂಪಗಳಲ್ಲಿ ಬಂದಾವು.

ನಾ ನಡೆದಷ್ಟು ದಾರಿ ಚೆನ್ನಾಗಿತ್ತು (ಇಲ್ಲವಾದರೆ ಖಂಡಿತವಾಗಿ ಯಾಕೆ) ಎಂಬ ನಿಮ್ಮ ಮಾತು ಕೇಳಲು ಕಾತರನಾಗಿದ್ದೇನೆ.

53 comments:

 1. ಇಸ್ಮಾಯಿಲ್08 August, 2010 22:36

  ನಮಸ್ಕಾರ

  ಬರೆಹ ಓದಿದೆ. ಇದರಲ್ಲಿ ಬದಲಾಯಿಸಬೇಕಾದುದೇನೂ ಇಲ್ಲ. ಎಂದಿನಂತೆ ಕಹಿಯಾದ ಸತ್ಯವನ್ನು ಹೇಳಿದ್ದೀರಿ. ನನಗೆ ದುಃಖವಾಗುತ್ತಿರುವುದು ಬೇರೆಯೇ ಒಂದು ಕಾರಣಕ್ಕೆ.

  ನನ್ನ ಅಪ್ಪ ನೋಡೋಣ ಬಾರಾ ನಕ್ಷತ್ರವನ್ನು ತಂದುಕೊಟ್ಟು ನಕ್ಷತ್ರ ನೋಡಲು ಹಚ್ಚಿದ್ದರು. ಐನ್ಸ್ಟೀನ್ ಪುಸ್ತಕ ಓದಿಸಿ ಕೇಳಿದ್ದರು. ಗಣಿತ ಗಗನ ಗಮನ ಇಟ್ಟುಕೊಂಡು ನಮಗೇನೋ ಕಲಿಸಲು ಪ್ರಯತ್ನಿಸಿದ್ದರು. ಮಲಯಾಳಿಯಾದ ಅವರಿಗೆ, ಕನ್ನಡ ಮಾಧ್ಯಮದಲ್ಲೇ ಓದಿದ ನಾವು ಮೂವರು ಮಕ್ಕಳಿಗೂ ಯಾವತ್ತೂ ಜಿ.ಟಿ.ಎನ್. ಭಾಷೆ ಕಠಿಣ ಎನ್ನಿಸಿದ್ದಿಲ್ಲ. ಇಷ್ಟಕ್ಕೂ ಜಿಟಿಎನ್ ವಿವರಿಸುತ್ತಾ ಇದ್ದದ್ದು ಮೂಲಭೂತ ವಿಜ್ಞಾನವನ್ನು. ಅದನ್ನು 'ಸರಳವಾಗಿ' ಹೇಗೆ ಹೇಳಬಹುದಿತ್ತು ಎಂಬುದು ನನಗೆ ಇವತ್ತಿಗೂ ಅರ್ಥವಾಗುತ್ತಿಲ್ಲ. ಹೈಸ್ಕೂಲಿನ ತನಕವೂ ವಿಜ್ಞಾನವನ್ನೂ ಗಣಿತವನ್ನೂ ಕನ್ನಡ ಮಾಧ್ಯದಲ್ಲೇ ಕಲಿತ ನನಗೆ ಮೊನ್ನೆ ಯಾರೋ ಪ್ರೈಮ್ ನಂಬರ್ ಏನೆಂದು ಕೇಳಿದರೆ ಅರ್ಥ ಮಾಡಿಕೊಳ್ಳಲು ಬಹಳ ಹೊತ್ತು ಬೇಕಾಯಿತು. ಕೊನೆಗೆ ಆ ಸಂಖ್ಯೆಗಳನ್ನು ಹೇಳಿ ಎಂದೆ ಅವರು ಹೇಳ ತೊಡಗಿದಾಗ ನನಗದು 'ಅವಿಭಾಜ್ಯ ಸಂಖ್ಯೆಗಳು' ಎಂದು ತಿಳಿಯಿತು.

  ವಿಜ್ಞಾನ ನಿಂತ ನೀರಲ್ಲ. ನಿರಂತರವಾಗಿ ವಿಕಾಸ ಹೊಂದುತ್ತಲೇ ಇರುವಂಥದ್ದು. ಹಳೆಯ ಪರಿಕಲ್ಪನೆಗಳು ಹೆಚ್ಚು ಹೆಚ್ಚು ಸ್ಪಷ್ಟಗೊಳುತ್ತಾ, ಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುತ್ತಾ ಹೋಗುವಾಗ ನನ್ನ ಅಪ್ಪ ತನ್ನ ಮಕ್ಕಳಿಗೆ ಹೇಳಿದಂತೆ ನಾನು ನನ್ನ ಮಗಳಿಗೆ ಹೇಳಲಾರೆ ಅನಿಸುತ್ತದೆ. ನನ್ನ ಅಪ್ಪನಿಗೆ ಜಿಟಿಎನ್ ಪುಸ್ತಕಗಳು ಸಹಾಯ ಮಾಡಿದಂತೆ ನನ್ನ ತಲೆಮಾರಿನವರಿಗೆ ಸಹಾಯ ಮಾಡುವ ಪುಸ್ತಕಗಳು ಬಹುಶಃ ಇಂಗ್ಲಿಷ್ ನಲ್ಲಷ್ಟೇ ಲಭ್ಯವೇನೋ...?

  ಫಿಲಾಸಫಿ ಆಫ್ ಸೈನ್ಸ್ ಮತ್ತು ಹಿಸ್ಟರಿ ಆಫ್ ಸೈನ್ಸ್ ಎಂಬ ಜ್ಞಾನಶಾಖೆಗಳನ್ನು ಜಿಟಿಎನ್ ಕನ್ನಡದಲ್ಲಿ ಅದೂ ಜನಪ್ರಿಯ ಮಟ್ಟದಲ್ಲಿ ಸಾಕಾರಗೊಳಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದರು. ಕಂಪ್ಯೂಟರ್ ಕುರಿತ ಬರೆವಣಿಗೆಗೆ ಸಂಬಂಧಿಸಿದಂತೆ ನಾನು ಮಾತನಾಡುವಾಗಲೆಲ್ಲಾ ಇದನ್ನು ಹೇಳುತ್ತಲೇ ಬಂದಿದ್ದೇನೆ. ನಿಖರವಾಗಿ ಅಭಿವ್ಯಕ್ತಿಸುವುದಕ್ಕೆ ನನಗೆ ದೊರೆಯುವ ಅತ್ಯುತ್ತಮ ಉದಾಹರಣೆ ಜಿಟಿಎನ್ ಅವರದ್ದು ಮಾತ್ರ. ವಿಜ್ಞಾನ ಹಾಗೆ ನೋಡಿದರೆ ಯಾವುದೇ ಶಾಸ್ತ್ರ ಸಂಬಂಧಿ ಬರೆವಣಿಗೆಯ ಮಟ್ಟಿಗೂ ಇದು ಅಗತ್ಯ. ಇದನ್ನು ಮರೆತು 'ಸರಳೀಕರಿಸುತ್ತಾ' ಹೋದುದರ ಪರಿಣಾಮವೇ ಇಂದು ನಮಗೆ ಸಮಾಜ ವಿಜ್ಞಾನದ ಪರಿಕಲ್ಪನೆಗಳ ನಿಖರ ಅಭಿವ್ಯಕ್ತಿಯೂ ಸಾದ್ಯವಿಲ್ಲದಂಥ ಪದ ಕೊರತೆಯನ್ನು ಅನುಭವಿಸುತ್ತಿದ್ದೇವೆ.

  ಪಾರಿಭಾಷಿಕಗಳಿಗೆ ಸಂಬಂಧಿಸಿದಂತೆ ಜಿಟಿಎನ್ ಅವರ ನಿಲುವಿಗೆ ಸಂಬಂಧಿಸಿದಂತೆ ಬರುವ ಟೀಕೆಗಳಿಗೆ ಅನೇಕ ಬಾರಿ ನಾನೂ ಉತ್ತರಿಸಲು ಪ್ರಯತ್ನಿಸಿದ್ದೇನೆ. ಗೆಳೆಯ ಯು.ಬಿ. ಪವನಜ ಕೂಡಾ ನನ್ನಂತೆಯೇ ಮಾತನಾಡುವವರು. ನಾವು ಜಿಟಿಎನ್ ಭಾಷೆ ಹಾಗೇಕಿದೆ ಎಂದು ವಿವರಿಸಲು ಹೊರಟ ತಕ್ಷಣ 'ನೀವು ಅಭಿಮಾನಿಗಳು ಬಿಡಿ' ಎಂಬ ಸರಳೀಕೃತ ಉತ್ತರ ಬಂದುಬಿಡುತ್ತದೆ.

  ಕನ್ನಡದಲ್ಲಿ ಜ್ಞಾನಸೃಷ್ಚಿ ಆಗಬೇಕು ಎಂದು ಭಾಷಣ ಮಾಡುವವರಿಗೆ ಜ್ಞಾನದ ಅಭಿವ್ಯಕ್ತಿಗೆ ಬೇಕಾದ ಭಾಷೆಯನ್ನೂ ರೂಪಿಸಬೇಕೆಂಬುದು ಅರಿವಾಗುವುದಿಲ್ಲ. ಲ್ಯಾಟೀನ್ ನಲ್ಲಿ ಬರುತ್ತಿದ್ದ ವೈಜ್ಞಾನಿಕ ಪ್ರಬಂಧಗಳು ಇಂಗ್ಲಿಷ್ ನಲ್ಲಿ ಬರಲು ತೊಡಗಿದ್ದು ಕೇವಲ ಸರಳೀಕರಣದ ಕಾರಣಕ್ಕೆ ಮಾತ್ರ ಅಲ್ಲ. ಇಂಗ್ಲಿಷ್ ಕೂಡಾ ಶಾಸ್ತ್ರೀಯ ಅಭಿವ್ಯಕ್ತಿಗಳಿಗೆ ತಕ್ಕಂತೆ ಬೆಳೆಯುತ್ತಾ ಹೋದದ್ದಕ್ಕೆ ಎಂಬುದನ್ನೂ ನಮ್ಮ 'ಪಂಡಿತರು' ಅರ್ಥ ಮಾಡಿಕೊಳ್ಳುವುದಿಲ್ಲ. ಇಂಗ್ಲಿಷ್ ನಲ್ಲಿರುವ ಅನ್ಯ ದೇಶ್ಯ ಪದಗಳನ್ನೆಲ್ಲಾ ತೆಗೆದು ಹಾಕಿದರೆ ಏನಾಗಬಹುದು? ಇಂಗ್ಲಿಷ್ ಗೆ ಇರುವ ಆಂಡ್ರೋ ಸೆಂಟ್ರಿಕ್ ಗುಣ ಈಗಲೂ ಸ್ವಲ್ಪ ಮಟ್ಟಿಗೆ ಉಳಿದುಕೊಂಡಿಲ್ಲವೇ?

  ಜಿಟಿಎನ್ ಬರೆಹಗಳನ್ನು ಶಿವರಾಮ ಕಾರಂತರ ವೈಜ್ಞಾನಿಕ ವಿಷಯಗಳ ಅಭಿವ್ಯಕ್ತಿಯೊಂದಿಗೆ ಹೋಲಿಸುವ ಕೆಲಸ ಕೆಲವರದ್ದು. ಶಿವರಾಮ ಕಾರಂತರಾಗಲೀ ತೇಜಸ್ವಿಯಾಗಲೀ ವೈಜ್ಞಾನಿಕ ಪರಿಕಲ್ಪನೆಗಳ ಮೂಲಪಠ್ಯವನ್ನು ನೋಡಿಕೊಂಡು ಬರೆದವರಲ್ಲ. ಅವರು ಮಾಡಿದ್ದು ಆ ಕುರಿತಂತೆ ಬಂದ ಜನಪ್ರಿಯ ಬರೆವಣಿಗೆಗಳನ್ನು ಆಧಾರವಾಗಿಟ್ಟುಕೊಂಡು ಬರೆದರು. ಜಿ.ಟಿ.ಎನ್. ಫೆರ್ಮಾನ ಕೊನೆಯ ಪ್ರಮೇಯ ವಿವರಿಸಲು ಮೂಲಕ್ಕೇ ತೆರಳುತ್ತಾರೆ. ಈ ಲೇಖನ ಓದಿದ ಮೇಲೆ ನಾನು ಸೈಮನ್ ಸಿಂಗ್ ಈ ಕುರಿತಂತೆ ಬರೆದ ಪುಸ್ತಕವನ್ನು ಓದಿದೆ. ಜಿಟಿಎನ್ ಅವರ ಲೇಖನ ಓದದೇ ಇದ್ದಿದ್ದರೆ ನನಗೆ ಸೈಮನ್ ಸಿಂಗ್ ಪುಸ್ತಕವನ್ನು ಓದಲು ಬೇಕಾದ ಸಿದ್ಧತೆಯೇ ಇರುತ್ತಿರಲಿಲ್ಲ.

  ಕನ್ನಡದ ವಿಜ್ಞಾನ ಬರೆವಣಿಗೆಯ ಅಗತ್ಯಗಳು ಕಾಣಿಸುವುದು ಇಂಥ ಸಂದರ್ಭಗಳಲ್ಲಿ. ಭವಿಷ್ಯ ವಿಜ್ಞಾನದ ಕುರಿತ ಅವರ ಪುಸ್ತಕವನ್ನು ಓದಿದ ಮೇಲೆ ನನಗೆ ಅಂಥದ್ದೊಂದು ಶಾಸ್ತ್ರಶಾಖೆಯಿದೆ ಎಂದು ತಿಳಿದದ್ದು. ಅಷ್ಟೇಕೆ ಸಿಯಾಟ್ಲ್ ನ ರೆಡ್ ಇಂಡಿಯನ್ ನಾಯಕನ ಭಾಷಣವನ್ನು ನಾನು ಓದಿದ್ದೂ ಅಲ್ಲಿಯೇ.

  ನಿಮ್ಮ ಬರೆಹಕ್ಕೆ ಪ್ರತಿಕ್ರಿಯಿಸಲು ಹೊರಟು ನನ್ನ ಪ್ರವರ ಬರೆಯುತ್ತಿದ್ದೀನೇನೋ ಅನ್ನಿಸುತ್ತಿದೆ. ಪ್ರಕಾಶನದಲ್ಲಿ ನಿಮಗೆ ತೃಪ್ತಿ ಸಿಗದೇ ಇರಬಹುದು. ಕಹಿ ಅನುಭವಗಳಿರಬಹುದು. ಆದರೆ ಜಿಟಿಎನ್ ಮತ್ತು ನೀವು ಒಂದು ಆದರ್ಶಕ್ಕಾಗಿ ಕೆಲಸ ಮಾಡಿದ್ದು ನನ್ನಂಥ ಅನೇಕರ ವಿಜ್ಞಾನದ ಜ್ಞಾನವನ್ನು ಹೆಚ್ಚಿಸಿದ್ದು ನಿಜ. ಅದಕ್ಕೆ ನಾನು ವೈಯಕ್ತಿಕವಾಗಿ ಕೃತಜ್ಞತೆ ಹೇಳಬೇಕು ಅನ್ನಿಸುತ್ತಿದೆ.

  ReplyDelete
 2. ಅಶೋಕ ವರ್ಧನರೇ!
  ಯಾರ ಮುಲಾಜೂ ಇಲ್ಲದೇ ತಮ್ಮ ನೇರ ನುಡಿ ನಡೆಯನ್ನು ಎಂದಿನಂತೆ ಇಂದೂ ಪಾಲಿಸುತ್ತಾ ಇದ್ದೀರಿ.
  ಸಿನಿಕತನ ತಮ್ಮ ಬಳಿ ಎಂದಿಗೂ ಸುಳಿಯದು.
  ಪ್ರೊ. ಜಿ. ಟಿ. ಎನ್ ಅವರ ಲೇಖನಗಳನ್ನು ಪುಸ್ತಕರೂಪದಲ್ಲಿ ಕನ್ನಡಿಗರಿಗೆ ಮತ್ತು ಆಂಗ್ಲ ಭಾಷೆಯ ಓದುಗರಿಗೆ ಲಭ್ಯ ಆಗುವಂತೆ ಮಾಡಿದಿರಿ. ತಮ್ಮ ಕೊಡುಗೆ ಅಪಾರ.
  ಮುಂದಿನ ಪೀಳಿಗೆಯವರಿಗೂ ಪ್ರೊ. ಜಿ. ಟಿ. ಎನ್. ಅವರ ಮತ್ತು ತಮ್ಮ ಪುಸ್ತಕಗಳು ಲಭ್ಯ ಆಗುವಂತೆ ಅಭಿನವ ಪ್ರಕಾಶನದವರು ನೋಡಿಕೊಂಡಾರು! - ಎಂಬ ಆಶಾ ಭಾವನೆಯೊಂದಿಗೆ ನನ್ನ ಪ್ರತಿಕ್ರಿಯೆಯನ್ನು ಮುಗಿಸಲೆ? ನಮಸ್ಕಾರಗಳು.
  - ಪೆಜತ್ತಾಯ ಎಸ್. ಎಮ್.

  ReplyDelete
 3. You are entitled to have your own opinion, Sir. Sorry to say that Kannada Book Industry has reached another dimension, scaling a new height on e-Book arena. Athree has brought valuable books and some of them are with me. I am proud to be owner of them. Some of the Athree titles are re-printed by Academies and other Publications. They will also survive. I hope, at least, Athree will think of re-prints, if required.
  Bedre Manjunath

  ReplyDelete
 4. Dear Sir,

  Really sad to know the development.

  Warmly,
  Anil

  ReplyDelete
 5. Dear Ashok:

  Your piece sharing your thoughts on the closure of Athree Prakashana, late GTN's contributions and your own perceptions on status of Kannada book trade were very moving. The entity based at "Athree" - in the form your book store, the publishing house, the mountaineering group, fearless advocacy of conservation causes, and now Abhaya's films - have all contributed hugely to both Kannada culture and conservation. I am sure you will keep going..as far as you can go with your characteristic grit and stoicism, in the process inspiring many others. It has been my pleasure being a part of this "Athree" enterprise for two decades or more.. With warm regards,

  Ullas

  ReplyDelete
 6. While new publishers are making entry into kannada publishing, hoping to make good business, sad to know that athree is closing its shutters.

  ReplyDelete
 7. Krishnamohana Bhat09 August, 2010 14:26

  hanadahinde ooduva eekaaladalli gatti manasininda nittu vyapaari dharmada laabhavannu maatra ettukondu ee varege vichaarasheela pustakagalannu maatra prakatisutta munduvarida Atree Pustaka Prakaashanavannu muchha bekaagi bandudu nijakku dhukha daayaka.Aadare maulya kaledukonda janagalu vyapaarigalu sarakaaravu eruvalli nimma nirdhara sari annistade.Hegiddaru eevarege tale taggisade nadeda nimma vyapaarakku prakashanakku hats up.

  ReplyDelete
 8. ಅತ್ರಿ ಪ್ರಕಾಶನ ಮುಚ್ಚುವ ನಿರ್ಧಾರವನ್ನು ನಿರೀಕ್ಷಿಸುತ್ತಿದ್ದೆ. ಪ್ರಕಾಶನದ ಹುಟ್ಟಿಗೂ ಎಷ್ಟೇ ಕಷ್ಟವಾದರೂ ಕೆಲವು ಆದರ್ಶಗಳನ್ನು ಮರೆಯದಿರಲು ಕಾರಣವಾಗಿದ್ದ ಪ್ರೇರಕ ಶಕ್ತಿ ಕಾಲಪ್ರವಾಹಿನಿಯಲ್ಲಿ ಲೀನವಾದ ಬಳಿಕ ಪ್ರಕಾಶನ ಮುಚ್ಚುವ ನಿರ್ಧಾರ ಕೆಲವರಿಗೆ ಅಪ್ರಿಯವಾದದ್ದಾದರೂ ಸಮಯೋಚಿತವಾದ್ದು.
  ಲೇಖನದಲ್ಲಿ ಹೆಸರಿಸಿದ 'ಗಣ್ಯ'ರ ವರ್ತನೆ ಹಾಗಿದ್ದುದರಿಂದಲೇ ಅವರು 'ಗಣ್ಯ'ರಾದದ್ದು. ಇಂಥ ಅನೇಕ 'ಖ್ಯಾತನಾಮ'ರ ಪರಿಚಯ ನನಗಿದೆ. ಲೇಖನ ಓದಿ, ಭಾಷಣ ಕೇಳಿ ವ್ಯಕ್ತಿಯ ಚಾರಿತ್ರ್ಯ ಅಳೆಯುವುದು ಮೂರ್ಖತನ ಎಂಬ ಅರಿವು ಮೂಡಿ ಬಹಳ ವರ್ಷಗಳೇ ಕಳೆದಿವೆ.
  'ಇತರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಅಪಕಾರ ಮಾಡದಿದ್ದರೆ ಅದೇ ಸಮಾಜಕ್ಕೆ ಕೊಡಬಹುದಾದ ಬಲುದೊಡ್ಡ ಕೊಡುಗೆ'

  ReplyDelete
 9. maanya ashokavardhanare, prakashana muchchuva nirdhara tappu ennalaagadu. aadaru adu besarada sangati.

  ReplyDelete
 10. ಪ್ರೀತಿಯ ಅಶೋಕರಿಗೆ ನಮಸ್ಕಾರಗಳು.
  ನಿಮ್ಮ ಪತ್ರ ಓದಿ ದುಃಖವಾಯಿತು ಎಂದರೆ ಅದು ಶ್ರದ್ಧಾಂಜಲಿ ಅಲ್ಲ ವೆನ್ನುವುದು ನಿಮಗೆ ಗೊತ್ತು.
  ಆದರ್ಶವನ್ನೇ ನೆಮ್ಮಿ ಬದುಕಲು ಪ್ರಯತ್ನಿಸುವವರಿಗೆ
  ಇಂಥ ದಿನ ಹೀಗೆ ಎದುರಾಗುವುದು ಸಹಜ ಎನ್ನುವುದೇ ವಾಸ್ತವಾಗಿದೆ.

  ವಿಶ್ವವಿದ್ಯಾನಿಲಯಗಳಂಥ ದೊಡ್ಡ ಸಂಸ್ಥೆಗಳ ಪ್ರಕಾಶನ ವಿಭಾಗಗಳು ಪ್ರಸಾರಾಂಗದ ಪರಿಕಲ್ಪನೆಯಿಂದ ಕೆಲಸ ಮಾಡಲು ಯತ್ನಿಸಿ ಸೋತು ವಾಣಿಜ್ಯೀಕರಣಕ್ಕೆ ಶರಣಾಗಿರುವುದನ್ನು ನೋಡಿದರೆ ನೀವು ಒಬ್ಬ ವ್ಯಕ್ತಿಯಾಗಿ ಇಷ್ಟುವರ್ಷ ಯಾವುದೇ ರಾಜಿಗೆ ಒಳಗಾಗದೆ ನಿಮ್ಮ ನಂಬಿಕೆಗೆ ಒಪ್ಪುವ ಪುಸ್ತಕಗಳನ್ನು ಜನರಿಗೆ ಸುಲಭವಾಗಿ ಸಿಗುವ ಬೆಲೆಯಲ್ಲಿ ಪ್ರಕಟಿಸಿರುವುದು ಸಾಮಾನ್ಯ ಸಂಗತಿಯಲ್ಲ.
  ಇದು ಕನ್ನಡ ಪ್ರಕಾಶನ ಲೋಕಕ್ಕೆ ಮಾದರಿಯಾಗುವ ಬದಲು
  ಇದು ಆಗಬೇಕಾಗಿದ್ದೇ ಹೀಗೆ ಎಂದು ಪ್ರಕಾಶಕರು ಸಮಾಧಾನದ ನಿಟ್ಟುದಸಿರು ಬಿಡುವಂತಾಗಿರುವುದು
  ಕನ್ನಡದ ದೌರ್ಭಾಗ್ಯವೆನ್ನದೆ ಬೇರೇನು ಹೇಳಬೇಕೊ ತಿಳಿಯುತ್ತಿಲ್ಲ.

  ನಿಮ್ಮ ಭಾವನೆಗಳೊಂದಿಗೆ ನಾನುಇದ್ದೇನೆ.
  ಪ್ರೀತಿಯಿಂದ
  ಪಂಡಿತ

  ReplyDelete
 11. ರವಿಕುಮಾರ್09 August, 2010 22:20

  ಪ್ರೀತಿಯ ಅಶೋಕ ವರ್ಧನ
  ಎಷ್ಟೋ ವಿಚಾರಗಳು ನನ್ನವನ್ನೇ ನೀವು ಹೇಳುತ್ತಿದ್ದೀರಿ ಎನಿಸಿತು. ಅಂದರೆ ನಿಮ್ಮವು ಮಾತ್ರವಲ್ಲ ಇಂಥಾ ಪರಿಸ್ಥಿತಿಯಲ್ಲಿ ನಿಂತ ಎಲ್ಲರವು ಕೂಡ.
  ಒಂದು ಪ್ರಕಾಶನ ಆರಂಭಿಸುವುದು ನಿಲ್ಲಿಸುವುದು ಅದು ವೈಯುಕ್ತಿಕ ಕೆಲಸ. ಅದನ್ನು ಸಂತೋಶವಾಗಿಯೂ ಬೇಸರವಾಗಿಯೂ ನೋಡಲಾಗದು. ಹುಟ್ಟು ಅಕಸ್ಮಿವಾದಂತೆ ಯಾವುದೇ ವ್ಯಕ್ತಿ ಸಂಸ್ಥೆಗಳ ಸಾವು ಕೂಡ ಸಹಜವಾದದ್ದಾದರೆ ಅದನ್ನು ಗೌರವಿಸಬೇಕು. ಆದರೆ ಮುಖ್ಯವಾಗಿ ಆ ವ್ಯಕ್ತಿ ಅಥವಾ ಸಂಸ್ಥೆ ನಡೆದ ದಾರಿಗಳಷ್ಟೇ ಮುಖ್ಯವಾದದ್ದು.
  ಡಿ ವಿ ಕೆ ಅವರು ಅವರದೇ ವ್ಯಕ್ತಿತ್ವ ರೂಪಿಸಿಕೊಂಡು ತಮ್ಮ ಕೆಲಸಗಳ ಮೂಲಕ ನಿಮ್ಮಂಥವರಲ್ಲಿ ವಿಶ್ವಾಸ ತುಂಬಿ, ಅವರ ಮೌಲ್ಯಗಳು ನಿಮ್ಮಂಥವರಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಆ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ನೀವೂ ದಾಟಿಸಿದ್ದೀರಿ. ಮುಂದೆ ಇನ್ನೊಬ್ಬ ನಿಮ್ಮ ಕೆಲಸವನ್ನು ಮುಂದುವರೆಸುತ್ತಾನೆಂಬ ಅಭಿಲಾಷೆಯಿಂದ ಪತ್ರ ಮುಗಿಸುತ್ತೇನೆ. ಎಲ್ಲ ಒಳ್ಳೆಯದಾಗಲಿ
  ರವಿಕುಮಾರ
  ಅಭಿನವದ ಪರವಾಗಿ

  ReplyDelete
 12. Vijayashankar SR09 August, 2010 22:24

  Read it. writing a response to that needs a lot of thinking at my end. You are committed to a cause and have your definite views. Ethically you are right in pursuing the values you believe right. What are the equations of book selling and business is what I am trying to think. Publishers have a problem. Writiners have another problem.
  Let me think.
  But, one thing is clear. We are sad. I could not believe yet that 1\ selling one thousand copies in Karnataka is so big a thing.
  Is it an individual problem or networking problem?
  Or are we so down culturally?
  You made me think a lot again, as you always do with out minsing words.
  Regards
  Vijayashankar

  ReplyDelete
 13. S Raghavendra Bhatta10 August, 2010 00:10

  Dear Sri Ashoka,
  Let me qoute a few lines from VSee's Abheeh!!

  MaNiyadiha manavomdu,
  saadhisuva haTavomdu/
  nijada nErake naDeva nischalateyomdu//
  anyaayakemdemdu baagadeccharavomdu/
  marukakke prEmakke chiratereda edeyomdu/
  -- abheeh! abheeh! abheeh! emba taarakavaakya/

  naaDiyanu naDasutire, baaLannu tiddutire/
  naDe mumdakennutte koogutive nuggisutive///
  --------------------------------------------------------
  To quote a familiar proverb in kannada --
  Ella oLLeyadakkoo koneyaagalE bEku.
  -----------------------------------------------------
  We, the Kannadigas known for our notorious love for culture and its innumerable manifestations shall at the best babble " ayyo paapa "
  and retire to our coccon of kumbhEmdriyatva !!
  S R Bhatta

  ReplyDelete
 14. Matter of factly speaking, when the publishing venture was not looked at from commercial perspective, the closure was obvious.

  Emotionally, considering the efforts and dreams associated with the venture, sure, it is a tough decision.

  We will always meet at ABC.

  Regards
  R V Pai

  ReplyDelete
 15. ಪ್ರಿಯ ಅಶೋಕ ವರ್ಧನರೆ,
  ಬಹಳ ದುಃಖವಾಗಿದೆ. ಈ ಕ್ರಮ ಬರೀ ಪುಸ್ತಕದಂಗಡಿಯೊಂದು ಮುಚ್ಚಲಿಲ್ಲ. ಅದರೊಂದಿಗೆ ಹಾಸು ಹೊಕ್ಕಾಗಿದ್ದ ಪ್ರುಸ್ತಕ ಪ್ರೀತಿ, ಸಂಸ್ಕೃತಿ, ಮೌಲ್ಯ, ಚಿಂತನ ಕ್ರಮಗಳು ಮರೆಯಾಗಿವೆ. ಮಂಗಳೂರಿಗೆ ಬಂದಾಗಲೆಲ್ಲಾ ಮರೆಯದೇ ಭೇಟಿ ನೀಡುತ್ತಿದ್ದ ಅಂಗಡಿಗೆ ಇನ್ನು ಬರಲಾಗದು ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ.
  ಶುಭವಾಗಲಿ,
  ಭರತ್

  ReplyDelete
 16. ಅತ್ರಿ ಪುಸ್ತಕ ಪ್ರಕಾಶನವನ್ನಷ್ಟೇ ಮುಚ್ಚಿದೆ. ಪುಸ್ತಕದ ಅಂಗಡಿ ಇನ್ನೂ ಮುಚ್ಚಿಲ್ಲ. ಅದಕ್ಕಿನ್ನೂ ಕಾಲವಿದೆ. ಪುಸ್ತಕ ಪ್ರಕಾಶನ, ಮತ್ತದರ ಮಾರಾಟ ಇತ್ಯಾದಿಗಳ ಸಮಸ್ಯೆಗಳ ಸುಳಿಯಲ್ಲಿ ಇಷ್ಟು ಕಾಲ ಪುಸ್ತಕ ಪ್ರಕಟಣೆ ಮಾಡಿದ್ದು ದೊಡ್ದದು. ಪುಸ್ತಕದೊಳಗಿನ ಸರಕಿಗಿಂತ ಪತ್ರಿಕೆಯ ಕೃಪಾಪೋಷಿತ ಜಾಹೀರಾತಿನಂಥ ಲೇಖನಗಳು ಪುಸ್ತಕದ ಮಾರಾಟವನ್ನು ನಿರ್ಧರಿಸುವ ಹೊತ್ತಿನಲ್ಲಿ ವೈಚಾರಿಕ ಕೃತಿಗಳ ಪ್ರಕಟಣೆ ಮತ್ತು ಮಾರಾಟ ಮಾಡಲು ಅಗಾಧ ಧೈರ್ಯ ಬೇಕು. ಆದರೂ ಮೌಲಿಕ ಕೃತಿಗಳು ಜನರಿಗಿನ್ನೂ ಬೇಕೆನ್ನುವ ನಂಬಿಕೆ ನನ್ನದು. ಜನರು ಇವುಗಳಿಗೆ ಹುಡುಕಿಕೊಂಡು ಹೋಗುವ ಪರಿ ಮಾತ್ರ ಕಾಲದಿಂದ ಕಾಲಕ್ಕೆ ಭಿನ್ನವಾಗುತ್ತ ಹೋಗುತ್ತದೆ. ಅತ್ರಿಯಿಂದ ನನ್ನದೊಂದು ಪುಸ್ತಕ ಬರಬೇಕೆನ್ನುವ ಕನಸಿತ್ತು. ಅದು ನನಸಾಗದೇ ಹೋದದ್ದಕ್ಕೆ ಸಂಪೂರ್ಣ ನಾನೇ ಹೊಣೆ. - ಕನಸು ಕಾಣುವವನಿಗೆ ಕನಸಿಗಿಂತ ಬೇರೊಂದು ಖುಷಿ ಇಲ್ಲವಂತೆ !
  ರಾಧಾಕೃಷ್ಣ

  ReplyDelete
 17. ಪ್ರಿಯ ಅಶೋಕವರ್ಧನರಿಗೆ,
  ನಮಸ್ಕಾರ. ನಿಮಗೆ ಸಾಂತ್ವನ ಹೇಳುವಷ್ಟು ನಾನು ದಡ್ಡನಲ್ಲ! ಆದರೆ ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಿಮ್ಮ ಸೋಲು ವೈಯಕ್ತಿಕವಾದುದಲ್ಲ. ಅದು ವ್ಯವಸ್ಥೆಯ ಕಪಿಮುಷ್ಟಿಗೆ ಒಂದು ಉದಾಹರಣೆ ಮಾತ್ರ. ವ್ಯವಸ್ಥೆಯ ವಿರುದ್ಧ ಕೆಲಸಮಾಡುವಾಗಲೆಲ್ಲ ನಮ್ಮ ಶಕ್ತಿಯ ಬಹು ದೊಡ್ಡ ಪಾಲು ಗಾಳಿಯೊಡನೆ ಗುದ್ದಾಡಿದಂತೆ ವ್ಯರ್ಥವಾಗುತ್ತದೆ. ಹಾಗಾಗಿ ಒಂದು ಹಂತದಲ್ಲಿ "ಇನ್ನು ಸಾಕಪ್ಪ" ಅಂತ ಅನಿಸಿದರೆ ಅದು ತಪ್ಪೂ ಅಲ್ಲ; ಅದಕ್ಕಾಗಿ ಕೊರಗಬೇಕಾಗೂ ಇಲ್ಲ! ನಿಮ್ಮ ಹೋರಾಟ ನಿಮ್ಮ ಬದುಕಿನ ಸಾರ್ಥಕ ಮೈಲುಗಲ್ಲಾಗಿ ನಿಮ್ಮೊಂದಿಗೂ, ನಮ್ಮಂಥ ಸ್ನೇಹಿತರ ನೆನಪಲ್ಲೂ ಶಾಶ್ವತವಾಗಿ ಉಳಿದಿರುತ್ತದೆ ಎಂಬುದಂತೂ ಸತ್ಯಸ್ಯ ಸತ್ಯ!!

  ReplyDelete
 18. ಆಗಾಗ ಪತ್ರಿಕೆಯ ಯಾವುದಾದರೊಂದು ಮೂಲೆಯಲ್ಲಿ ಸುದ್ದಿ ಇರುತ್ತದೆ: "ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರಕಾರಿ ಶಾಲೆ". ಕೊಳ್ಳುವ ಶಕ್ತಿ ಇರುವ ವರ್ಗದವರು, ಅದಿಲ್ಲದ ವರ್ಗದವರು ಎಲ್ಲರೂ ಇಂಗ್ಲಿಷ್ ಕಡೆಗೆ ಹೋಗುತ್ತಿದ್ದಾರೆ. ಕಾಲೇಜುಗಳಲ್ಲಿ ಕನ್ನಡವನ್ನು ಕಲಿಸುವ ಅಧ್ಯಾಪಕರು - ಕನ್ನಡ ಬಿಟ್ಟು ಬೇರೇನನ್ನೂ ಕಲಿಸಲು ತಿಳಿಯದವರು - ಸಹ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳಿಸುತ್ತಿದ್ದಾರೆ. ಇಂಗ್ಲಿಷು, ಅಮೆರಿಕಾ, ಗಲ್ಫು, ಸಯನ್ಸು, ಕಂಪ್ಯೂಟರು, ಅಭಿವೃದ್ಧಿ, ದೊಡ್ಡ ಸಂಬಳದ ಉದ್ಯೋಗ ಹೀಗೆ ಏನೆಲ್ಲ ಹೆಣೆದುಕೊಂಡು ಹಗ್ಗವಾಗಿ ಭಾರತೀಯರನ್ನು ಕಟ್ಟಿ, ಕೆಡವಿ, ಬೀಜ ಒಡೆದುಬಿಟ್ಟಿದೆ. ಇಂಗ್ಲಿಷ್ ನಲ್ಲಿಯೇ "ಭಾರತೀಯ ಸಂಸ್ಕೃತಿ"ಯನ್ನು ಕಲಿಸುವ, ವಿದ್ಯೆ ಮಾರುವ ಅಂಗಡಿಗಳನ್ನು, ತಮ್ಮನ್ನು ತಾವು "ಭಾರತೀಯ ಸಂಸ್ಕೃತಿ"ಯ ಅನಭಿಷಿಕ್ತ ವಾರಸುದಾರರೆಂದು ತಿಳಿದುಕೊಂಡಿರುವ ಎಷ್ಟೋ ಸ್ವಾಮೀಜಿಗಳೂ ತೆರೆದಿದ್ದಾರೆ. ಈ ವಾತಾವರಣದಲ್ಲಿ ನೀವು ಪ್ರಕಾಶನ ಮುಚ್ಚುತ್ತಿರುವುದು, ನನ್ನ ಮಟ್ಟಿಗೆ ದುಃಖದ ವಿಷಯವಾದರೂ, ಸರಿಯಾದ, ಅನಿವಾರ್ಯವೂ ಆದ ನಿರ್ಧಾರ. ಸುತ್ತ ಕವಿದಿರುವ ಇಂಗ್ಲಿಷಿನ ಈ ದಟ್ಟ ಹೊಗೆಗೆ ಕನ್ನಡದ ಉಸಿರು ಕಟ್ಟುತ್ತಿರುವುದನ್ನು, ಕನ್ನಡವು ಕಣ್ಣು ಮುಚ್ಚುತ್ತಿರುವುದನ್ನು ಅಸಹಾಯಕರಾಗಿ ನೋಡಬೇಕಾಗಿ ಬಂದಿರುವುದು ನಮ್ಮ ದೌರ್ಭಾಗ್ಯ.
  ಪ್ರಕಾಶನವನ್ನು ಮುಚ್ಚಿದರೂ, ನಿಮ್ಮ ಕನ್ನಡದ ಬರವಣಿಗೆಯ ಶುದ್ಧ ಗಾಳಿ ಬೀಸುತ್ತಲೇ ಇರುತ್ತದೆ ಎಂದು ನನಗೆ ಪೂರ್ಣ ವಿಶ್ವಾಸವಿದೆ. ಈ ವಿಷಯದಲ್ಲಿ ನಾನೂ ನಿಮ್ಮೊಂದಿಗಿದ್ದೇನೆ.

  ReplyDelete
 19. ಅಶೋಕವರ್ಧನ11 August, 2010 05:57

  ಗೆಳೆಯ ಮೋಹನ್ ಈ ಬರಹವನ್ನು ತಮ್ಮ ಅವಧಿಯಲ್ಲೂ ಪ್ರಕಟಿಸಿ, ಸೇತು ಕಲ್ಪಿಸಿದ್ದರು. ಕೆಳಕಾಣಿಸಿದ ನಾಲ್ಕು ಪ್ರತಿಕ್ರಿಯೆಗಳು ಅಲ್ಲಿ ಪ್ರಕಟವಾಯ್ತು.
  ವಿಶ್ವಾಸ ಮಹಾಪೂರಕ್ಕೆ ಎಲ್ಲರಿಗೂ ಕೃತಜ್ಞತೆಗಳು.
  ಅಶೋಕವರ್ಧನ
  #
  ಪೂರ್ಣಪ್ರಜ್ಞ
  Aug 10, 2010 @ 15:30:47

  ಅಶೋಕವರ್ಧನರ ಲೇಖನ ಒದಿ ಬೇಸರವಾಯಿತು. ಈ ಹಿಂದೆ ದೇಶ-ಕಾಲದಲ್ಲಿ “ಸಮಯ ಪರೀಕ್ಷೆ” ಯಲ್ಲಿ ಭಾಗವಹಿಸುತ್ತ ಅವರು ಹಾಗು ಲೇಖಕ ವಸುಧೇಂದ್ರರು ಪುಸ್ತಕೋದ್ಯಮದಲ್ಲಿ ನಡೆಯುತ್ತಿರುವ ವ್ಯವಹಾರಗಳ (ಅವ್ಯವಹಾರಗಳ?) ಹಾಗು ಅದರಲ್ಲಿಯ ಅಸಹ್ಯಕರ ವಾತವರಣದ ಬಗ್ಗೆ ಬರೆದಿದ್ದರು.

  ಆದರೂ ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸಿ, ನಿಲ್ಲಿಸಬೇಡಿ ಎನ್ನುವುದೇ ನನ್ನ ಕೋರಿಕೆ
  #
  vijayendra
  Aug 09, 2010 @ 20:34:03
  puttaswamy yavara abhiprayakke nanna mouna sammathi ide.- vijayendra 9448320220
  #
  k puttaswamy
  Aug 09, 2010 @ 16:57:10
  ಪ್ರಿಯ ಅಶೋಕರ್ಧನರವರೆ, ನೀವು ಪ್ರಕಾಶನ ಮುಚ್ಚಲು ನಿರ್ಧರಿಸಿರುವುದು ನನಗೆ ತುಂಬಾ ಬೇಸರವೆನಿಸಿತು. ನೀವು ನನ್ನ ದೃಷ್ಟಿಯಲ್ಲಿ ಅತ್ಯಂತ ಲೇಖಕಮಿತ್ರರಾದ ಪ್ರಕಾಶಕ. ನಾನು 1999ರಲ್ಲಿ ಪ್ರಕಟಿಸಿದ ಜೀವಜಾಲ ಕೃತಿಯನ್ನು ಪಾರ್ಸೆಲ್ ಮೂಲಕ ಕಳುಹಿಸಿದ 10 ಪ್ರತಿಗಳಿಗೆ ಮರುಟಪಾಲಿನಲ್ಲಿಯೇ ಚಕ್ ಕಳುಹಿಸಿದಿರಿ. ಜೊತೆಗೆ ಪಾರ್ಸೆಲ್ ವೆಚ್ಚವನ್ನು ತಗ್ಗಿಸಲು ತಾವು ಮೆಜೆಸ್ಟಿಕ್ಕ್ ನಲ್ಲಿರುವ ಬಸ್ ಬುಕಿಂಗ್ ಒಂದರ ವಿಳಾಸವನ್ನು ನೀಡಿ ಅಲ್ಲಿಗೆ ಪುಸ್ತಕದ ಕಟ್ಟು ಕಳುಹಿಸಿದರೆ ಬೇಗ ಖಾತ್ರಿಯಾಗಿ ತಲುಪುವುದಲ್ಲದೆ ಸಾಗಾಣಿಕೆ ವೆಚ್ಚವೂ ಕಡಿಮೆಯಾಗುತ್ತದೆಂದು ಸಲಹೆ ನೀಡಿದ್ದಿರಿ. ಚೆಕ್ ಜೊತೆಯಲ್ಲೇ ನಿಮ್ಮ ಪುಮಾಹೋ ಕೃತಿಯನ್ನು ಕಳುಹಿಸಿದಿರಿ. ಅದನ್ನು ಸಂಪೂಣರ್ಣ ಓದಿ ನಿಮಗೆ ಪತ್ರ ಬರೆದಿದ್ದೆ. ಸರ್ಕಾರದ ಯೋಜನೆಗಳು, ಗ್ರಂಥಾಲಯಗಳು ಪುಸ್ತಕ ಖರೀದಿಯಲ್ಲಿ ನಡೆಸುತ್ತಿದ್ದ ಅನೀತಿಗಳನ್ನು ಬಿಡಿಸಿದ್ದ ನಿಮ್ಮ ಪುಸ್ತಕ ಆಳವಾದ ಸಂಶೋಧನೆ- ಅನುಭವಗಳಿಂದ ರೂಪುಗೊಂಡಿತ್ತು. ಜೀವಜಾಲ ಕೃತಿಯ ಬಗ್ಗೆ ತಮ್ಮ ತಂದೆಯವರಾದ ಪ್ರೊ. ಜಿ ಟಿ ನಾ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ವಿಮರ್ಶೆ ಬರೆದು ನಮ್ಮ ( ಕೃಪಾಕರ್-ಸೇನಾನಿ ಮತ್ತು ನಾನು)ಪ್ರಯತ್ನವನ್ನು ಶ್ಲಾಘಿಸಿದ್ದರು. ನಿಮ್ಮ ಲೇಖನ ಓದಿದ ನಂತರ ಻ಅದೆಲ್ಲ ನೆನಪಾಯಿತು.ಈಗ ನೀವು ಪ್ರಕಾಶನ ಮುಚ್ಚುತ್ತಿರುವ ವಿಷಯ ನಿಮ್ಮ ವೈಕ್ತಿಕ ನಿರ್ಧಾರ ಮಾತ್ರವಾಗಿರದೆ ದಂಧೆಯಾಗಿರುವ ಪುಸ್ತಕೋದ್ಯಮ ಅನೀತಿಯ ಪಾತಾಳ ತಲುಪಿರುವ ಸೂಚನೆಯಾಗಿದೆ. -ಕೆ.ಪುಟ್ಟಸ್ವಾಮಿ
  #
  ವಿ.ಎನ್.ಲಕ್ಷ್ಮೀನಾರಾಯಣ
  Aug 09, 2010 @ 13:02:33
  ಭಲೆ ಅತ್ರಿ!

  ReplyDelete
 20. bhavani shankar11 August, 2010 11:19

  nimma bichchu maatugalu ishtvaayitu. idu anivaaryate endu tilididdene. kaalave kaaranavo. nima paatravnnu nivu arthapoornavaagi nibhayisiddiri emba trapti ellarigoo ide endu nanna bhavane.

  ReplyDelete
 21. priya ashOkavardhanarE,
  No comments on your decisions. You sure know what is right and good.
  Warm regards,
  KPRao

  ReplyDelete
 22. Dear Ashokvardhan,
  A brilliant and thought-provoking article, as always. Often your strictness in everything frightens me! But a society should be grateful that there are people like you in its midst.
  Yes, today’s Kannada journalism is packed with mostly literary people. I wish it opens up to journalists having expertise in themes such as science, art, music and education. Your father’s service to Kannada is great and I am sure it is appeciated by all.
  If Ravikumar of Abhinava agrees to bring out your books, that is good news, for he is one of the best publishers in Kannada.
  kvtirumalesh

  ReplyDelete
 23. ವಾದಿರಾಜ ಕಲ್ಲೂರಾಯ11 August, 2010 22:09

  ನಿಮ್ಮ ನಿರ್ಧಾರವನ್ನು ಕೇಳಿ (ಓದಿ) ಕ್ಷಣ ಹೊತ್ತು ದಿಗ್ಮೂಡನಾದೆ. "ಹೀಗೂ ಉಂಟೆ" ತರ್ಕಕ್ಕೆ ಸಿಲುಕದು............
  ಯಾಕೆ? ಎಂಬ ಪ್ರಶ್ನೆಗೆ ನಿಮ್ಮಲ್ಲಿ ನನ್ನ ನವದ್ವಾರಗಳೂ ಮುಚ್ಚುವಷ್ಟು ಉತ್ತರವಿರಬಹುದು......
  ಆದರೆ ಆದರ್ಶ ತತ್ವಕ್ಕೆ ನಿಮ್ಮದೆ ಆದ ಭಾಷೆಯಲ್ಲಿ ವ್ಯಾಖ್ಯಾನ ಕೊಟ್ಟು ಅದಕ್ಕೆ "ಟೀಕೆ" ನೀವೆ ಬರೆದಂತಾಯ್ತು.
  ಪ್ರಕಾಶನವನ್ನು ಮುಚ್ಚುವ ನಿರ್ಧಾರ ನಿಮ್ಮ ಸ್ವಂತದ್ದಾದರೂ ಒಬ್ಬ ಒದುಗನಾಗಿ ನಾನದನ್ನು ವಿರೊಧಿಸುವವನೇ. ನಿಮ್ಮ ಈ ನಿರ್ಧಾರ " ನಿಮ್ಮ ಅಷ್ಟು ವರ್ಷಗಳ ಅರಾಧನೆಗೆ ನೀವೆ ಬಂಡಾಯ ಗೀತೆ ಹಾಡುವುದೆ? "ವರ್ಷಕ್ಕೆ ಒಂದು ಸಣ್ಣ ಪುಸ್ತಕ ಸಾಕು. ನನ್ನಂತ ೧-೨ ಒದುವ ಮನಸ್ಸುಗಳಾದರೂ ನಿಮ್ಮ ಈ ನಿರ್ಧಾರದಿಂದ ನೋವುಂಡಿದೆ.

  ನಿಮಗೆ ನಿಮ್ಮದೆ ಆದ ನೋವುಗಳಿರಬಹುದು. ಪ್ರಸ್ಫುಟವಾಗಿರುವ ನಿಮ್ಮ ಅಷ್ಟೂ ಮಾತುಗಳನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತ ಅದಕ್ಕೆ ಪರಿಹಾರ ಇದಲ್ಲದೆ ಬೇರೆ ಹುಡುಕಬಹುದಿತ್ತೇನೋ?

  ಪ್ರಕಾಶಕರೆಲ್ಲರೂ ಓದುಗರಲ್ಲದಿರುವುದೇ ಇಂಥ ಸಮಸ್ಯೆಗಳಿಗೆ ಕಾರಣ ಏನಂತೀರೀ?

  ಪಕ್ಕಾ ವ್ಯಾವಹಾರಿಕ ಮುಖದ "ಬೆತ್ತಲೆ ಜಗತ್ತನ್ನು" ನೋಡಿ (ನಿಮ್ಮ ಬರಹದಲ್ಲಿ) ವಿಸ್ಮಿತನದೆ.
  ಸರಿ.........ಪ್ರಕಾಶನ ಮುಚ್ಚಿದಿರಿ......
  ಮುಂಧೆ? ????????????????????

  ಪ್ಲೀಸ್.......ಹೇಳಿಬಿಡಿ.


  ವಾದಿರಾಜ ಕಲ್ಲೂರಾಯ

  ReplyDelete
 24. 25-26 varshagala hinde modala bari GTN avara AKHASHA VEEKSHANE class ge hogidde. Avattu avaru helikottaddu egaloo nenapide. Astu saralavagi vijnana pata madida innobbaru nanage gottilla. Avara baravanigeya bashe kuda akarshaka hagu sarala. adannu katina endavaru dari tappidavaru, aste.
  BM Haneef

  ReplyDelete
 25. Chandrashekara Damle12 August, 2010 21:07

  ಪ್ರಿಯರೇ
  ಕನ್ನಡ ಮಾಧ್ಯಮದಲ್ಲಿ ಖಾಸಗಿ ಅನುದಾನ ರಹಿತವಾಗಿ ಮಾದರಿ ಶಾಲೆಮಾಡಿ ಇನ್ನು ಮುಚ್ಚುವುದು ಈ ವರ್ಷವೋ ಅಥವಾ ಬರುವ ವರ್ಷವೋ ಎಂಬ ಸ್ಥಿತಿಗೆ ತಲುಪಿರುವ ನನಗೆ ನಿಮ್ಮ ನಿರ್ಧಾರ ಅಚ್ಚರಿಯಾಗಿಲ್ಲ.
  ಚಂದ್ರಶೇಖರ ದಾಮ್ಲೆ

  ReplyDelete
 26. DS Nagabhushana13 August, 2010 06:13

  ಪ್ರಿಯಶ್ರೀ ಅಶೋಕವರ್ಧನ,
  ನಿಮ್ಮ ನಿ’ವೇದನೆ’ ಓದಿದೆ. ನಿಮ್ಮ ಸಾಹಸ, ಪ್ರಾಮಾಣಿಕತೆ ಮತ್ತು ಧೈರ್ಯಗಳು ಮೆಚ್ಚುಗೆಯಾದವು ಎಂದು ಹೇಳಿದರೆ ಅದು ನಿಮ್ಮ ಶ್ಲಾಘನೆ ಮಾತ್ರವಲ್ಲ, ನಾವು ಒಂದು ಸಾಂಸ್ಕ್ರೃತಿಕ ಸಮಾಜವಾಗಿ ತಲುಪಿರುವ ಅಧೋಗತಿಯನ್ನು ಕುರಿತ ಮರುಕವೂ ಹೌದು. ಅದರಲ್ಲಿ ಸ್ವಯಂ ಮರುಕದ ದುರಂತವೂ ಅಡಗಿದೆ ಎಂಬುದನ್ನು ನಾನು ಬಲ್ಲೆ. ಇಂದು ಹಲವು ಹೆಸರುಗಳಲ್ಲಿ ಪ್ರಕಾಶನಗಳನ್ನು ತೆರೆದು ಗ್ರಂಥಾಲಯ ಇಲಾಖೆಯನ್ನೂ, ಲೇಖಕ ಸಮುದಾಯವನ್ನೂ ಭ್ರಷ್ಟಗೊಳಿಸಿ ಪ್ರಕಾಶನ ಉದ್ಯಮವನ್ನೇ ಒಂದು ಅಸಾಂಸ್ಕೃತಿಕ ದಂಧೆಯನ್ನಾಗಿ ಮಾಡಿರುವವರ ಮಧ್ಯೆ ನೀವು ಇರಲಾಗದ ಪರಿಸ್ಥಿತಿ ಉಂಟಾಗಿದೆ ಎಂದು ನಾನು ಬಲ್ಲೆ.
  ಇಂದಿನ ಒಟ್ಟಾರೆ ಪರಿಸ್ಥಿಯಲ್ಲಿ ನಿಮ್ಮಂತಹವರು ಒಬ್ಬಿಬ್ಬರಾದರೂ ನಮ್ಮ ಮಧ್ಯೆ ಇದ್ದಾರಲ್ಲಾ ಎಂಬುದೊಂದೇ ಆಶಾಕಿರಣ.
  -ಡಿ.ಎಸ್.ನಾಗಭೂಷಣ

  ReplyDelete
 27. ಅತ್ರಿ ಪ್ರಕಾಶನವನ್ನು ಮುಚ್ಚುವ ನಿರ್ಧಾರದೊಂದಿಗೆ ಕೆಲವು ನೆನಪುಗಳನ್ನು ಮುನ್ನೆಲೆಗೆ ತಂದಿರಿ. ಕಡಿಮೆ ಬೆಲೆಯಲ್ಲಿ ಪುಸ್ತಕ ಮುದ್ರಿಸಿ ಜನರಿಗೆ ನೆರವಾಗಿ ತಲುಪಿಸುವ ನಿಮ್ಮ ಕೆಲಸಗಳಿಂದ ಪ್ರಯೋಜನ ಪಡೆದವರಲ್ಲಿ ನಾನು ಒಬ್ಬ. ಬಂಡಾಯ ಚಳುವಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ನೀವು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ವೈಜ್ಞಾನಿಕ ಮನೋಧರ್ಮ, ಜಾತಕ ಮತ್ತು ಭವಿಷ್ಯ ಮತ್ತಿತರ ಪುಸ್ತಕಗಳು ತುಂಬಾ ಸಹಾಯಕ್ಕೆ ಬರುತ್ತಿದ್ದವು. ದುಖಾರ್ತರು ನನ್ನ ಮೆಚ್ಚಿನ ಪುಸ್ತಕ. ಜಿ ಟಿ ನಾ ಅವರೊಡನೆ ದೂರವಾಣಿಯಲ್ಲಿ ಮಾತಾಡಿದರೆ ಉತ್ಸಾಹ ಬರುತ್ತಿತ್ತು. ಆದರೆ ಪ್ರವಾಹಕ್ಕೆ ಇದಿರಾಗಿ ಈಜುವ ಕೆಲಸ ಸುಲಭವಲ್ಲ ಅಂತ ನಮಗೆಲ್ಲರಿಗೂ ತಿಳಿದಿದೆ. ಪ್ರಕಾಶನ ಮುಚ್ಚಿದರೂ ಅತ್ರಿಯ ಪುಸ್ತಗಳು ನಾಲ್ಕು ಕಾಲ ಉಳಿಯುತ್ತವೆ. ಜಿ ಟಿ ನಾ ಬರೆದಂತೆ 'ಬಗೆ ನೇರ ನುಡಿ ನೇರ ನಡೆನೇರವಿರಲಿ' ಅಷ್ಟು ಸಾಕು

  ReplyDelete
 28. ಅಶೋಕ ಭಾವ,
  ನಾನು ಅತ್ರಿ ಪ್ರಕಾಶನ ಪ್ರಾರಂಭಿಸಿದಾಗ ಮಂಗಳೂರಿನಲ್ಲಿರಲಿಲ್ಲ. ಆದರೆ ಅದಕ್ಕೋಸ್ಕರ ಮಾಡಿದ್ದ ತಯಾರಿ( ಮನೆಯಲ್ಲೇ ಮೇಲಿನ ಕೋಣೆಗಳನ್ನು ಕಟ್ಟಿಸಿ,ಮರದ ಕೆಲಸ ಮಾಡಿಸಿದ್ದು ನನಗೆ ತಿಳಿದಿವೆ. ನಂತರದ ದಿನಗಳಲ್ಲಿ ಮನೆಯಿಡೀ ಪುಸ್ತಕಗಳಿಂದ ತುಂಬಿ ಹೋಗಿರುತ್ತಿತ್ತು. ) ಹೀಗೆ ನನಗೆ ಇವೆಲ್ಲಾ ಪರೋಕ್ಷವಾಗಿ ತಿಳಿದಿವೆ. ಆದರೆ ಮುಚ್ಚುತ್ತಿರುವ ಸುದ್ದಿ ಮಾತ್ರ ನೇರವಾಗಿ ತಲುಪಿದೆ. ನಮ್ಮ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ (ಒಳ್ಳೆಯದು,ಕೆಟ್ಟದು) ಎಂದು ತೋರಿಸಲು ಇದೊಂದು ನಿದರ್ಶನ. ಆಗಲಿ, ಆದರೆ ಈ ರೀತಿಯ ಉಪಯುಕ್ತ ಕೆಲಸಗಳನ್ನು ಮಾಡಬೇಕೆಂಬ ಭಾವ, ನಿನ್ನನ್ನು ನೋಡಿ ಸ್ಫೂರ್ತಿ ಪಡೆದ ಮುಂಬರುವ ಯುವ ಜನರಿಂದ ಮುಂದುವರಿಯಲಿ ಎಂದೇ ನನ್ನ ಹಾರೈಕೆ.
  ಶೈಲ

  ReplyDelete
 29. ಪ್ರಿಯ ಅಶೋಕ ವರ್ಧನರೆ,

  ಸಾಂತ್ವನ ಬಯಸಿ ನೀವು ಈ ಲೇಖನ ಬರೆಯಲಿಲ್ಲವೆಂದು ನಿಮ್ಮನ್ನು ಬಲ್ಲವರಿಗೆ ಅರ್ಥವಾಗುತ್ತದೆ. ವಾಸ್ತವವನ್ನು ಹೇಳಿದಿರಿ. ನಿಮ್ಮ ತಂದೆಯ ಕುರಿತು ಬರೆಯುವಾಗ ನೀವು ಅತಿ ಭಾವುಕರಾದಿರಿ ಅನಿಸಲಿಲ್ಲ. ಅವತ್ತಿಗೂ ಇವತ್ತಿಗೂ ಜಿ.ಟಿ.ನಾ.ರ ಪುಸ್ತಕಗಳು ಮೂಲಭೂತ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತಲೇ ಇವೆ. `ಅತ್ರಿ' ಅಂಗಡಿಗೆ ಮುಂದೇನು? ಅನ್ನುವ ಕಲ್ಪನೆಯೇ ಅತ್ರಿ ಅವಲಂಬಿತರಿಗೆ, ಅದರೊಳಗಿನ ಸ್ನೇಹ ಅನುಭವಿಸಿದವರಿಗೆ ಜೀರ್ಣವಾಗುವುದು ಕಷ್ಟ. ಸ್ವಲ್ಪ ಭಾವುಕ ಮಾತಿದು ಅನಿಸಿದರೂ ಇದು ವಾಸ್ತವ.

  ವಂದನೆಗಳು.

  ReplyDelete
 30. ಛೇ!ಬೇಸರದ ಸಂಗತಿ.ಈ ಪ್ರಕಾಶನ ಸುರು ಆಗುತ್ತದೆ,ಅದರ ಹೆಸರಿನ ಹಿನ್ನೆಲೆ ಯನ್ನೆಲ್ಲ ದೊಡ್ಡಪ್ಪ ವಿವರಿಸುತ್ತಿದ್ದುದು ನೆನಪಿದೆ.

  ReplyDelete
 31. Praveen Kavoor16 August, 2010 18:06

  Dear Ashok
  I was trying to write in Kannada for sometime then I gave up. I grew up coming to your shop, reading book for me is one of the favorite pastime, thinking of future of Athree it self emotional moment for me, like the later commenter said we know you never expected any sympathy from anyone when you wrote this.
  Reading books of your GTN really fascinated me. I was thirsty of science books in my school days and I dint knew english. GTN books thrilled me, gave me lot of knowledge along with Navakarnataka Publication books when we had very limited Kannada science books.
  I have read almost all books of your publications I have seen birth of your Publications,(I remember your house grew because of this) books of GTN has evoked scientific curiosity inside me, has made me think out of the box. Visiting Athree in my school days was like entering new world, I would forget my self and it was the only book shop I had seen.
  Athree and Ashok are very important part of my life, ideologies of both has made lot o differences in my life.....

  ReplyDelete
 32. Dear ashok,

  what ever you decide it is welcome.It is understood with the trade philosophy in every aspect of life and its means ,going to be tough for people of your nature to carry on publishing books.Literature word may not accept your decision right now.For dropping a such powerful athree prakashana, i wish you will take up something else which is interesting to you.Please do not stop inspiring people with your ideas of nature conservation and its value for human life

  ReplyDelete
 33. ಅಶೋಕವರ್ಧನ ಅವರಿಗೆ, ನನ್ನ ಕಥಾಸ೦ಕಲನ ಪ್ರಕಟಮಾಡಿ, ಅತ್ಯ೦ತ ಚೆ೦ದದ ಮುಖಚಿತ್ರ, ಕಾಗದ ಬಳಸಿ ಆಕರ್ಶಕವಾಗಿ ಅತ್ರೀ ಪ್ರಕಾಶನ ಪ್ರಕಟಿಸಿದ್ದೀರಿ. ಅ೦ತಹ ಒ೦ದು ಪ್ರಕಟನಾ ಸ೦ಸ್ಥೆ ಮುಚ್ಚಿತು ಮುಚ್ಚಿತು ಎ೦ದು ತಿಳಿದಾಗ ಆದ ವೇದನೆ ಅಪಾರ. ಈ ಹಿ೦ದೆ ಬೇರೆ ಒ೦ದು ಪ್ರಕಾಶನ ಸ೦ಸ್ಥೆಯೂ ಹೀಗೆ ಮುಚ್ಚಿತು ಎ೦ದು ಕೇಳಿ ತಿಳಿದಿದ್ದೆ. ಈಗ ನಿಮ್ಮ ಸರದಿ. ಇನ್ನು ಮು೦ದೆ ಬೇರೆ ಬೇರೆ ಪ್ರಕಾಶಕರು ಹೀಗೆ ಇದೇ ಹಾದಿ ಹಿಡಿದರೆ ಕನ್ನಡ ಪುಸ್ತಕಗಳ ಗತಿ, ಭವಿಷ್ಯ ಹೇಗಿದ್ದೀತು? ಊಹಿಸಲಾರೆ. ನನ್ನ೦ಥ ಲೇಖಕಿಗೆ ಹೀಗಾದರೆ ಪುಸ್ತಕ ಮಾರಾಟ-ಹೋರಾಟದಲ್ಲಿ ಅತ್ಯ೦ತ ಉತ್ಸಾಹಿತರಾದ ತಮ್ಮ ಮನಸ್ಥಿತಿ ಹೇಗಿರಬೇಡ? ಆದರೂ ತಮ್ಮ ಮಗ ಅಭಯನ ಕಾಲದಲ್ಲಿ ಸಿನಿಮಾನಿರ್ದೇಶನದ ಜೊತೆಗೆ ಆ ಮಾಧ್ಯಮದಲ್ಲಿ ಕನ್ನಡ ಉಳಿದು ಬೆಳೆದೀತು ಎ೦ಬ ಆಶಾವಾದ.
  ಎ.ಪಿ.ಮಾಲತಿ

  ReplyDelete
 34. ಪ್ರಿಯ ಅತ್ರಿಸೂನನಿಗೆ,

  ಅತ್ರಿ ಪುಸ್ತಕ ಪ್ರಕಾಶನದ ಪುಸ್ತಕಗಳು ಪರಿಚಯವಾಗಿದ್ದು 2004 ರಲ್ಲಿ ಕ.ರಾ.ವಿ.ಪ ಮೈಸೂರಿನಲ್ಲಿ ಆಯೋಜಿಸಿದ್ದ ಜನಪ್ರಿಯ ವಿಜ್ಞಾನ ಬರಹಗಾರರ ಶಿಬಿರದಲ್ಲಿ. ಅದು ನನ್ನ ಎರಡನೆ ಬಾರಿಯ ಶಿಬಿರ. ಅಂದು ಮೊದಲನೆಯ ಬಾರಿ ಜನಪ್ರಿಯ ವಿಜ್ಞಾನ ಬರಹಗಾರರಲ್ಲಿ ಪ್ರಸಿದ್ಧರಾಗಿದ್ದ ಜಿ.ಟಿ. ನಾರಾಯಣರಾವ್ ರವರೊಂದಿಗಿನ ಸಂವಾದದೊಂದಿಗೆ.

  ಅಂದು ಸ್ವತಃ ಲೇಖಕರೆ ರುಜುಮಾಡಿದ " ಐನ್ ಸ್ಟೀನ್ ಬಾಳಿದರಿಲ್ಲಿ... " ಪುಸ್ತಕ ಇಂದಿಗೂ ನನ್ನ ಸ್ನೇಹಿತರಿಗೆ ಮತ್ತು ವಿದ್ಯಾಥಿಱಗಳಿಗೆ ಸರಳ ರೀತಿಯಲ್ಲಿ ವಿಜ್ಞಾನದ ಹಸಿವನ್ನು ನೀಗಿಸುತ್ತಿದೆ. ಇಂತಹ ಪ್ರಕಾಶನ ಪ್ರಕಟಣೆಗಳನ್ನು ನಿಲ್ಲಿಸುತ್ತಿದೆ ಎಂಬುದು ಸಾಮಾನ್ಯ ವಿಜ್ಞಾನ ಜಿಜ್ಞಾಸುಳಿಗೆ ದುಃಖಕರ ಸಂಗತಿ. ವಿಜ್ಞಾನ ಸಂಸ್ಥೆಗಳು ಮತ್ತು ಸಕಾಱರ ಪ್ರಕಾಶನವನ್ನು ಉಳಿಸುವಲ್ಲಿ ಸಹಾಯ ಹಸ್ತ ಚಾಚಬೇಕೆಂಬುದು ನನ್ನ ಆಶಯ.

  ಪ್ರಕಾಶಕರ ಬಳಗದವರಿಗೆ ಒಂದು ವಿನಂತಿ, ನನ್ನ ಸ್ನೇಹಿತರಿಗೆ ತಮ್ಮ ಪ್ರಕಟಣೆಯಲ್ಲಿ ಒಟ್ಟು ಪುಸ್ತಕಗಳನ್ನು ಕಳುಹಿಸುವುದಾದಲ್ಲಿ ಒಟ್ಟು ಮೊಬಲಗನ್ನು ತಿಳಿಸಿ. ಇವುಗಳು ಮುಂದಿನ ಪೀಳಿಗೆಗಳಿಗೆ ಕನ್ನಡದ ವಿಜ್ಞಾನ ವಿಷಯಕ್ಕೆ ಮೂಲ ಗ್ರಂಥಗಳಾವುದರಲ್ಲಿ ಎರಡು ಮಾತಿಲ್ಲ.

  ಗಣೇಶ್ ಎ.ಪಿ.
  Mob: 9036669528

  ReplyDelete
 35. ಅಶೋಕವರ್ಧನ ಜಿ.ಎನ್18 August, 2010 22:51

  ನಾನು ಪ್ರಕಾಶನವನ್ನು ಮುಚ್ಚಿದರೂ ಇರುವ ದಾಸ್ತಾನು ಕರಗುವವರೆಗೆ ನಾನು ಪೂರ್ಣ ಮುಕ್ತನಲ್ಲ. ಇದಕ್ಕಾಗಿಯೋ ಪ್ರಕಾಶನವನ್ನೇ ಉಳಿಸಿಕೊಳ್ಳಲೋ ನಾನು ಸರಕಾರದ ಅಥವಾ ಇನ್ಯಾರದೋ ಅಸ್ಥಾನಿಕ ಸಹಾಯ ಯಾಚಿಸುವುದಕ್ಕೋ ಈ ಲೇಖನ ಹೊರಟದ್ದಲ್ಲ. ಮೊದಲೇ ಹೇಳಿದಂತೆ ನೇರ ಓದುಗರು ಅಥವಾ ಆಸಕ್ತ ಸಂಗ್ರಾಹಕರು ಈಗಲೂ ನನ್ನ ಲಭ್ಯ ಪ್ರಕಟಣೆಗಳನ್ನು ಕೊಳ್ಳಬಹುದು. ನಿಮ್ಮನುಕೂಲಕ್ಕಾಗಿ ನನ್ನ ಪ್ರಕಟಣೆಗಳ ಪಟ್ಟಿ (ವಿಷಯ, ಲೇಖಕ/ಕಿ, ಬೆಲೆ ನಮೂದಿಸಿದ್ದೇನೆ. ನಿಮ್ಮ ಪೂರ್ಣ ವಿಳಾಸ ಸಹಿತ ಪುಸ್ತಕದ ಬೆಲೆಯನ್ನು ನೇರ ಕಳಿಸುವವರಿಗೆ, ನೇರ ಸಾದಾ ಅಂಚೆಯಲ್ಲಿ ನಾನು ಪುಸ್ತಕ ಕಳಿಸಲು ಸಿದ್ಧನಿದ್ದೇನೆ - ದಾಸ್ತಾನು ಮುಗಿಯುವವರೆಗೆ)
  ಇತರ:
  ೧. ಅಕ್ಷಮಾಲಾ (ಮಕ್ಕಳ ಕತೆಗಳು) - ರುಕ್ಮಿಣಿಮಾಲಾ ರೂ ೨೦
  ೨. ತಾರಾವಲೋಕನ (ಆಕಾಶವೀಕ್ಷಣೆಗೆ ಹೊಚ್ಚಹೊಸ ಕೈಪಿಡಿ. ಹನ್ನೆರಡು ಆಕಾಶ ನಕ್ಷೆ ಸಹಿತ) - ಎ.ವಿ. ಗೋವಿಂದರಾವ್ ರೂ ೮೦
  ೩. ದೀವಟಿಗೆ (ಸಾಂಪ್ರದಾಯಿಕ ಯಕ್ಷಗಾನ ಪ್ರದರ್ಶನಕ್ಕೆ ಒಂದು ಕೈಪಿಡಿ) - ರಾಘವ ನಂಬಿಯಾರ್ ರೂ ೬೦
  ೪. ದುಃಖಾರ್ತರು - (ಫ್ರೆಂಚ್ ಮೂಲದ ವಿಖ್ಯಾತ ಕಾದಂಬರಿ ಲೆ ಮಿಸರೆಬಲ್ಸ್ ಅನುವಾದ. ಮೂಲ ಲೇಖಕ ವಿಕ್ಟರ್ ಹ್ಯೂಗೋ) ಎ. ಪಿ ಸುಬ್ಬಯ್ಯ ರೂ ೭೦
  ೫. ನೃತ್ಯಲೋಕ (ಶಾಂತಲಾ ಪ್ರಶಸ್ತಿ ಪುರಸ್ಕೃತ ಲೇಖಕ ಇದನ್ನು ಎಲ್ಲ ವರ್ಗದ ನಾಟ್ಯಾಭ್ಯಾಸಿಗಳಿಗೂ ರಸಿಕರಿಗೂ ಉಪಯುಕ್ತವಾಗುವಂತೆ ರಚಿಸಿದ್ದಾರೆ)- ಮುರಳೀಧರ ರಾವ್ ರೂ ೩೦೦
  ೬. ಮಾರಿಷಾ ಕಲ್ಯಾಣ (ಯಕ್ಷಗಾನ ಕಾವ್ಯ ಮತ್ತು ಒಂದು ಪ್ರದರ್ಶನದ ಪೂರ್ಣ ಪಾಠ) - ಅಮೃತ ಸೋಮೇಶವರ ರೂ ೧೮
  ೭. ಸಂಜೆ ಬಿಸಿಲು (ಸಣ್ಣ ಕತೆಗಳು) - ಎ.ಪಿ ಮಾಲತಿ ರೂ ೬೦
  ಜಿ.ಟಿ.ನಾ ಕೃತಿಗಳು:
  ೧. ಆಲ್ಬರ್ಟ್ ಐನ್ಸ್ಟೈನ್ ಮಾನವೀಯ ಮುಖ (Human side of Einstein ಇದರ ಭಾವಾನುವಾದ) ರೂ ೫೦
  ೩. ಎನ್ಸಿಸಿ ದಿನಗಳು (ಎನ್.ಸಿಸಿ ಅಧಿಕಾರಿಯ ಆತ್ಮಕಥನ) ರೂ ೫೫
  ೪. ಐನ್ಸ್ಟೈನ್ ಬಾಳಿದರಿಲ್ಲಿ (ಆಲ್ಬರ್ಟ್ ಐನ್ಸ್ತೈನ್ ವ್ಯಕ್ತಿ ಮತ್ತು ಸಾಧನೆಯ ವಿಸ್ತೃತ ಪರಿಚಯ) ರೂ ೭೦
  ೫. ಕುವೆಂಪು ದರ್ಶನ ಸಂದರ್ಶನ (ಕುವೆಂಪು ಕುರಿತ ಬರಹಗಳು) ರೂ ೪೫
  ೬. ಕೃಷ್ಣ ವಿವರಗಳು (ಖಗೋಳ ವಿಜ್ಞಾನದಲ್ಲಿ ಬಹುಖ್ಯಾತ ನಾಕ್ಷತ್ರಿಕ ಅಂತಿಮ ನೆಲೆ ಬ್ಲ್ಯಾಕ್ ಹೋಲ್ಸಿನ ಸವಿವರಗಳು) ರೂ ೩೦
  ೭. ಕೊಪರ್ನಿಕಸ್ ಕ್ರಾಂತಿ (ಖಗೋಳ ವಿಜ್ಞಾನಿ ಕೊಪರ್ನಿಕಸ್ ಜೀವನ ಸಾಧನೆ) ರೂ ೩೦
  ೮ ಜಾತಕ ಮತ್ತು ಭವಿಷ್ಯ (ಜಾತಕ ಮಾತ್ತು ಭವಿಷ್ಯ ವಾಚನದ ವೈಜ್ಞಾನಿಕ ವಿಶ್ಲೇಷಣೇ) ರೂ.೧೫
  ೯. ಫರ್ಮಾ ಯಕ್ಷ ಪ್ರಶ್ನೆ (ಗಣಿತವೇ ಮೊದಲಾದ ವೈಜ್ಞಾನಿಕ ಲೇಖನಗಳ ಸಂಕಲನ) ರೂ ೬೦
  ೧೦. ಬಾನ ಬಯಲಾಟ ಗ್ರಹಣ (ನಾಕ್ಷತ್ರಿಕ ನಾಟಕದ ವೈಜ್ಞಾನಿಕ ಕಥನ) ರೂ ೧೦
  ೧೧ ರಾಮಾನುಜನ್ ಬಾಳಿದರಿಲ್ಲಿ (ಅಪ್ರತಿಮ ಗಣಿತಪ್ರತಿಭೆಯ ಜೀವನ, ಸಾಧನೆ) ರೂ ೫೦
  ೧೧ ವಿಜ್ಞಾನ ಸಪ್ತರ್ಷಿಗಳು (ಏಳು ಖ್ಯಾತನಾಮ ವಿಜ್ಞಾನಿಗಳ ಜೀವನ, ಸಾಧನೆ) ರೂ ೩೫
  ೧೨ ಸಂಗೀತ ರಸನಿಮಿಷಗಳು (ಕಲೆ, ಸಂಗೀತ - ಮುಖ್ಯವಾಗಿ ಕರ್ಣಾಟಕ ಸಂಗೀತದ ಕುರಿತ ಮೌಲಿಕ ಲೇಖನಗಳು) ರೂ ೬೦
  ೧೩ ಸಪ್ತ ಸಾಗರದಾಚೆಯೆಲ್ಲೋ (ಅಮೆರಿಕಾ ಪ್ರವಾಸ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಎಸ್. ಚಂದ್ರಶೇಖರ್ ಸಂದರ್ಶನ) ರೂ ೬೦
  ೧೪ ಸವಾಲನ್ನು ಎದುರಿಸುವ ಛಲ (ವ್ಯಕ್ತಿತ್ವ ವಿಕಸನಕ್ಕೆ ಸೋದಾಹರಣ ಮಾರ್ಗದರ್ಶಿ) ರೂ.೩೦
  ೧೫ ಸುಬ್ರಹ್ಮಣ್ಯನ್ ಚಂದ್ರಶೇಖರ್ (ನೊಬೆಲ್ ಪ್ರಶಸ್ತಿ ಪುರಸ್ಕೃತ ಖ-ಭೌತ ವಿಜ್ಞಾನಿಯ ಜೀವನ ಸಾಧನೆ) ರೂ ೫೫
  ೧೬ ಸೂಪರ್ನೋವಾ (ನಕ್ಶತ್ರ ಲೋಕದ ವಿಸ್ಮಯಗಳಿಗೆ ಬಹುನಿಖರ ಕೈಪಿಡಿ) ರೂ ೨೪
  ೧೭ Crossing the dateline (ಅಮೆರಿಕಾ ಪ್ರವಾಸ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಎಸ್. ಚಂದ್ರಶೇಖರ್ ಸಂದರ್ಶನದ ಸ್ವತಂತ್ರ, ಸಂಕ್ಷಿಪ್ತ ಇಂಗ್ಲಿಶ್ ಅವತರಣಿಕೆ) Rs. 40.
  ೧೮ Scientific Temper (ವೈಜ್ಞಾನಿಕ ಮನೋಧರ್ಮದ ವಿಶ್ಲೇಷಣಾತ್ಮಕ ಕೈಪಿಡಿ) Rs. 15
  ೧೯ With the great minds (ಐವರು ಮಹಾಮೇಧಾವಿಗಳ ಮುಖ್ಯವಾಗಿ ಸಂದರ್ಶನಾಧಾರಿತ ಜೀವನ ಸಾಧನೆ) Rs. 30
  ಜಿ.ಎನ್.ಅಶೋಕವರ್ಧನ

  ReplyDelete
 36. ನಮಸ್ಕಾರ ಅಶೋಕವರ್ಧನ ಅವರೆ,

  ಈ ಬೆಳವಣಿಗೆ ನನಗೂ ಬೇಸರ ತಂದ ಸಂಗತಿ. ಆದರೆ ನೀವು ಇದರ ಒಳ-ಹೊರ ಚೆನ್ನಾಗಿ ಬಲ್ಲವರು, ಸ್ವಾರ್ಥ-ನಿಸ್ವಾರ್ಥದ ಮಧ್ಯೆ, ಒಳಿತು-ಕೆಡುಕುಗಳ ಮಧ್ಯೆ ದಪ್ಪನೆಯ ಗೆರೆ ಎಳೆದು, ಸ್ವಂತ ತತ್ವಗಳನ್ನು ಗಟ್ಟಿಯಾಗಿ ಅಪ್ಪಿಕೊಂಡು, ಆಮಿಷ-ಅವಮಾನ-ತಿರಸ್ಕಾರ-ನಷ್ಟ ಇತ್ಯಾದಿಗಳಿಗೆ ತಲೆಬಾಗಿ ಅವುಗಳನ್ನು ಬಿಟ್ಟುಕೊಡದವರು ಎಂದು ಕಂಡುಬರುತ್ತದೆ, ನಿಮ್ಮ ಅನುಭವದ ಆಧಾರದ ಮೇಲೆ ನಿಮ್ಮೀ ನಿರ್ಧಾರ (ಸಂತಸದಾಯಕವಲ್ಲದಿದ್ದರೂ) ಸರಿಯಾಗಿಯೇ ಇರಬಹುದು ಎಂದು ನಂಬುತ್ತೇನೆ.

  ನಿಮ್ಮ ನನ್ನ ಪರಿಚಯ ಹೊಸದು, ನಾವು ಪರಸ್ಪರ ಅರಿತುಕೊಂಡಿರುವುದು ಕಡಿಮೆ, ಈ ಕ್ಷೇತ್ರದಲ್ಲಿ ನನ್ನ ಲೋಕಾನುಭವ ಏನೇನೂ ಸಾಲದು, ಕೊನೆಗೆ ನಾನು ನಿಮಗಿಂತ ತುಂಬಾ ಕಿರಿಯ, ಕಲಿಯುವುದು ಬಹಳವಿದೆ, ಈ ಎಲ್ಲಾ ಸಂಗತಿಗಳನ್ನು ಗಮನಿಸಿ ಈ ಕೆಳಗೆ ಹೇಳಿದ್ದು ಉದ್ಧಟತನ ಅಥವಾ ಅಪರಿಪಕ್ವ ಆಲೋಚನೆಗಳು ಎನಿಸಿದರೆ ಕ್ಷಮಿಸಿ. ನನ್ನ ಕೆಲ ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ಹೇಳಬಯಸುವೆನು - ಒಳ್ಳೆಯ ಕೆಲಸ ಮಾಡುವಾಗ ದುಡ್ಡು ಮಾಡದಿದ್ದರೂ ನಷ್ಟ ಮಾಡಿಕೊಳ್ಳದಿರುವಂತೆ ನೋಡಿಕೊಂಡರೆ ತಪ್ಪೇನಿಲ್ಲ, ಅಲ್ಲವೇ? ‘ಗ್ರಂಥಾಲಯ ಖರೀದಿ’, ‘ಮೇಳಗಳಲ್ಲಿ ಭಾಗವಹಿಸುವುದು’, ‘ಪಠ್ಯ ಮಾಡಿಸುವುದು’ ಇವನ್ನು ‘ಸಗಟು ಖರೀದಿ’, ‘ದರಕಡಿತ ಮಾರಾಟ’ಗಳ ಸಾಲಿಗೆ ಸೇರ್ಪಡಿಸಿರುವುದು ನನಗೆ ಸುಲಭದಲ್ಲಿ ಜೀರ್ಣವಾಗದ ಸಂಗತಿ. ನಿಮ್ಮ ಅನುಭವದಲ್ಲಿ ಇದರಲ್ಲಿ ಕೂಡ ಸಾಕಷ್ಟು ಹೊಲಸು ಕಂಡಿರಬಹುದು, ನಾನು ಅಲ್ಲಗಳೆಯಲಾರೆ. ಆದರೆ ನೀವು ನೈತಿಕತೆಯ ಮಿತಿಯೊಳಗೇ ಇದ್ದು ಈ ಕೆಲವು ಮಾರ್ಗಗಳ ಉಪಯೋಗ ಪಡೆಯಬಹುದಿತ್ತು ಎಂದು ನನಗೆ ಕಾಣುತ್ತದೆ. ಆದರೆ ಈ ಮಾರ್ಗಗಳ ಬಗ್ಗೆ ಸಾರಾಸಾಗಟಾಗಿ ನಿಮಗೆ ಬೇರೆಯೇ ಅಭಿಪ್ರಾಯಗಳಿದ್ದರೆ ಅದು ಬೇರೆ ವಿಷಯ, ಸಮಯ ಸಿಕ್ಕಿದಾಗ ನಿಮ್ಮಿಂದ ತಿಳಿಯಲು ಯತ್ನಿಸುತ್ತೇನೆ.

  ಹಾಗೆಯೇ ಪುಸ್ತಕಗಳನ್ನು ಮುದ್ರಿಸುವಾಗ ‘ಸರಳ ಸೌಂದರ್ಯ’ ಸಾಕು ಎನ್ನುವ ನಿಲುವು ಕೂಡ ನನಗೆ ಅಷ್ಟಾಗಿ ಹಿಡಿಸದ ತತ್ವ, ಪುಸ್ತಕದ ಬೆಲೆಯನ್ನು ಆದಷ್ಟೂ ಕಡಿಮೆ ಇಡಬೇಕು ಎನ್ನುವ ಉದ್ದೇಶದಿಂದ ಈ ನಿಲುವು ತಳೆದದ್ದೋ ಅಥವಾ ‘ಅನಗತ್ಯ’ ವಿಷಯಗಳ ಬಗ್ಗೆ ವೃಥಾ ಕಾಲಹರಣ ಮಾಡುವುದು ಬೇಡ ಎಂಬ ಕಾರಣಕ್ಕೋ ಅಥವಾ ಇನ್ಯಾವುದಾದರೂ ಕಾರಣಕ್ಕೋ ಗೊತ್ತಿಲ್ಲ, ಆದರೆ ಬಾಹ್ಯ ಸೌಂದರ್ಯ ಕೂಡ "ವಾಹ್!" ಅನ್ನುವ ಹಾಗೆ ಇದ್ದರೆ, ಮಕ್ಕಳಿಗೆ ಆಕರ್ಷಣೀಯವಾಗಿ ಕಂಡರೆ ತಪ್ಪೇನು?

  ಒಟ್ಟಿನಲ್ಲಿ, ನಿಮ್ಮ ಪ್ರಕಾಶನದ ವಿಷಯಕ್ಕೆ ಬಂದಾಗ ಕೆಲವು ಸಂಗತಿಗಳು ನನಗೆ ‘ಅನಗತ್ಯ ಆದರ್ಶ’ ಅಥವಾ ‘ಮೊಂಡುವಾದ’ಗಳಂತೆ ಮೇಲ್ನೋಟಕ್ಕೆ ತೋರಿಬರುತ್ತಿವೆ. ಆದರೆ, ಯಾವ ತತ್ವಾದರ್ಶಗಳಿಗೆ ಈ ರೀತಿಯ ಹಣೆಪಟ್ಟಿ ಸಿಗುವುದಿಲ್ಲ ಹೇಳಿ? :-) ಮಾತ್ರವಲ್ಲ, ನಿಮ್ಮ ಅಭಿಮಾನಿಗಳು ಬರೆದ ಪತ್ರಗಳನ್ನು ಗಮನಿಸಿದರೆ ಅಷ್ಟೇ ಮೇಲ್ನೋಟಕ್ಕೆ ಕಾಣುವ ಇನ್ನೊಂದು ಸಂಗತಿಯೆಂದರೆ ನೀವು ನಡೆದುಬಂದ ದಾರಿ ಗಟ್ಟಿಯಾಗಿದೆ ಎಂದು, ಹೀಗಾಗಿ ನಿಮ್ಮೊಡನೆ ಈ ಬಗ್ಗೆ ಸಾವಕಾಶವಾಗಿ ಮಾತನಾಡಿ ಹೆಚ್ಚಿಗೆ ತಿಳಿದುಕೊಳ್ಳುವ ಇಚ್ಛೆಯಂತೂ ನನಗಿದೆ. ‘ಒಳ್ಳೆಯತನ’ದ ಒಂದೊಂದು ಸೋಲು ಕೂಡ ಪ್ರಜ್ಞಾವಂತರ ಆತ್ಮಗೌರವಕ್ಕೆ, ಕನಸಿಗೆ ಬೀಳುವ ಒಂದೊಂದು ಕೊಡಲಿಯೇಟು, ಅಂತಹ ಸೋಲಿನ ಬಗ್ಗೆ ‘ಯಾಕೆ?’ ಎಂಬ ಚರ್ಚೆ ಅಗತ್ಯ ಎಂದು ನನ್ನನಿಸಿಕೆ.

  ನಿಮ್ಮಲ್ಲಿ ಈ ಮೊದಲೇ ಹಂಚಿಕೊಂಡಂತೆ, ನನಗೆ ಕೂಡ ಪ್ರಕಾಶನದ ವಿಷಯದಲ್ಲಿ ಕೆಲವೊಂದು ಸಣ್ಣ ಯೋಜನೆಗಳಿವೆ, ಸದ್ಯಕ್ಕೆ ಮನದಲ್ಲೇ ಇದೆ, ಕಾರ್ಯರೂಪಕ್ಕೆ ತರಲು ಅನೇಕ ಅಡಚಣೆಗಳನ್ನು ದಾಟಿ ದೀರ್ಘದಾರಿ ಸವೆಸಬೇಕು, ಯಾವಾಗ ಆಗುತ್ತದೋ ಗೊತ್ತಿಲ್ಲ - ಉದ್ದೇಶ ಸರಳ - ಮಕ್ಕಳಿಗೆ ಕನ್ನಡದಲ್ಲಿ ಉತ್ತಮ ವಿಜ್ಞಾನ ಸಾಹಿತ್ಯವನ್ನು ಒದಗಿಸಬೇಕು ಎನ್ನುವುದು, ಲಾಭ ಖಂಡಿತವಾಗಿಯೂ ಅಲ್ಲ, ನಷ್ಟ ಮಾಡಿಕೊಳ್ಳುವ ಮನಸ್ಸೂ ಇಲ್ಲ! ಹೀಗಾಗಿ ಮುಂಬರುವ ವರುಷಗಳಲ್ಲಿ ನಿಮ್ಮೊಡನೆ ವಿಚಾರ ವಿನಿಮಯ ಮಾಡಿದರೆ ಅದರಿಂದ ನನಗೆ (ಅರ್ಥಾತ್ ನನ್ನ ಉದ್ದೇಶಕ್ಕೆ) ಲಾಭವಾಗುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ.

  ಈಗಾಗಲೇ ಕೆಲವರು ಹೇಳಿರುವಂತೆ ಇದು ಒಬ್ಬ ವ್ಯಕ್ತಿಯ ಸೋಲಲ್ಲ, ಕನ್ನಡಿಗರ ಅವಸ್ಥೆಗೆ ಹಿಡಿದ ಕೈಗನ್ನಡಿ. ಮುಂದಿನ ಪೀಳಿಗೆಯಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಬೇಕೆಂದು ಬಯಸುವವರು ಎಷ್ಟು ಮಂದಿ ಇರುತ್ತಾರೋ ಗೊತ್ತಿಲ್ಲ, ಆದರೆ ಅಂಥವರ ಹೋರಾಟದ ಹಾದಿಯಲ್ಲಿ ನಿಮ್ಮ ಅಮೂಲ್ಯ ಅನುಭವಗಳು ಸಹಾಯಕವಾಗಿ ಸದಾ ಇರಲಿ ಎಂದು ನನ್ನ ಹಾರೈಕೆ.

  ಇತಿ,
  ಕೃಷ್ಣ ಶಾಸ್ತ್ರಿ

  ReplyDelete
 37. ಅಶೋಕವರ್ಧನ ಜಿ.ಎನ್20 August, 2010 22:50

  ಪ್ರಿಯ ಕೃಷ್ಣ ಶಾಸ್ತ್ರಿಗಳೇ
  ನಿಮ್ಮ ಸವಿನಯ, ಕಾಳಜಿಪೂರ್ಣ ಪತ್ರಕ್ಕೆ ವಂದನೆಗಳು. ಯಾವುದೂ ಸಾರ್ವಕಾಲಿಕ ಸತ್ಯವಾಗಲಾರದು. ಅದರ ಹತ್ತತ್ತಿರ ನಾನಿದ್ದರೂ ಕಾಲಕಾಲಕ್ಕೆ ಅದನ್ನು ಸಾರ್ವಜನಿಕಕ್ಕೆ ಶ್ರುತಪಡಿಸುವುದು ಅವಶ್ಯ ಎಂಬ ತಿಳುವಳಿಕೆಯೊಡನೆ ನಿಮ್ಮ ಕೆಲವು ಸಂಶಯಗಳಿಗೆ ಹೊಸದಾಗಿ ಉತ್ತರಿಸುತ್ತೇನೆ.

  ಗ್ರಂಥಾಲಯ ಖರೀದಿಯ ಇನ್ನೊಂದು ಮುಖವೇ ಸಗಟು ಖರೀದಿ. ಹಾಗೇ ಮೇಳಗಳಲ್ಲಿ ಭಾಗವಹಿಸುವುದು ಎಂದರೆ ದರ ಕಡಿತ ಮಾರಾಟವನ್ನು ಒಪ್ಪಿಕೊಳ್ಳುವುದು ಎಂದೇ ಅರ್ಥ. ಇವುಗಳ ಕುರಿತು ಹೆಚ್ಚಿನ ವಿವರಗಳಿಗೆ ನನ್ನ ಪುಸ್ತಕ - ಪುಸ್ತಕ ಮಾರಾಟ ಹೋರಾಟವನ್ನು ನೋಡಬಹುದು. ಇಲ್ಲೇ ಬ್ಲಾಗಿನಲ್ಲೂ ಪುಸ್ತಕೋದ್ಯಮದ ಹಳೆಯ ಕಡತಗಳನ್ನು ಕೆದರಬಹುದು. ಲ್ಲಿ ಹಳೇಇವೆಲ್ಲ ಹೆಚ್ಚಾಗಿ ಬೆಂಗಳೂರು ಕೇಂದ್ರೀಕೃತ ವ್ಯವಸ್ಥೆ. ಮತ್ತೆಲ್ಲವೂ ನೇರ ಉತ್ಪನ್ನಗಳ ಮೇಲಿನ ಪ್ರೀತಿಗಿಂತ ಉಪೋತ್ಪನ್ನಗಳ ಆಸೆಗೇ ಹುಟ್ಟಿಕೊಂಡವು ಎಂದು ಸೂಚ್ಯವಾಗಿ ಮಾತ್ರ ಇಲ್ಲಿ ಹೇಳಬಲ್ಲೆ. ಯಾವುದೇ ಪುಸ್ತಕ, ಬರವಣಿಗೆಯ ಭಾಗ ಪಠ್ಯ ಆಗುವುದು ಬೇರೆ ಮಾಡಿಸುವುದು ಬೇರೆ. ಮೊದಲನೆಯದ್ದು ಕೃತಿಯ ಗುಣವನ್ನು ಹೇಳಿದರೆ ಎರಡನೆಯದು ಕೃತಿಕಾರನ ‘ಪರಿಚಯ ಬಲ’ವನ್ನು ಹೇಳುತ್ತದೆ! ಈ ಪರಿಚಯ ಬಲ ದೇಶ, ಕಾಲ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

  ನಾನು ಪ್ರಕಾಶನದಲ್ಲಿ ಬಾಲ ಸಾಹಿತ್ಯವನ್ನು ಹೆಚ್ಚಾಗಿ ಮುಟ್ಟಿದವನಲ್ಲ. ನನ್ನ ಪ್ರಕಟಣೆಗಳು ಸಾರ್ವಜನಿಕರಿಗೆ ಸುಲಭವಾಗಿ ಮುಟ್ಟುವುದರೊಡನೆ, ತೊಡಗಿಸಿದ ಹಣವನ್ನು ನನಗೆ ಮರಳಿಸಬೇಕು ಎನ್ನುವ ಸ್ವಾವಲಂಬೀ ತತ್ವ, ಪುಸ್ತಕಗಳ. ಸರಳ ಸೌಂದರ್ಯಕ್ಕಷ್ಟೇ ಅನುವು ಮಾಡಿಕೊಡುತ್ತಿತ್ತು. ಹೆಚ್ಚು ಖರ್ಚು ಮಾಡಿ ಕಡಿಮೆ ಬೆಲೆ ಇಡುವಷ್ಟು ಸ್ಥಿತಿವಂತನೂ ಅನ್ಯ ಮೂಲಗಳ ಆದಾಯವಂತನೂ ನಾನಲ್ಲ. ಇನ್ನು ಸಹಾಯಧನಕ್ಕೆ ಕೈಚಾಚಿದ್ದರೆ ನಾನು ಇಂದಿನ ಬಹುತೇಕ ಪತ್ರಿಕಾ ಲೇಖನಗಳ ರೀತಿಯಲ್ಲಿ, ಹಂಗಿನರಮನೆ ಮಾತ್ರ ನಿಲ್ಲಿಸುತ್ತಿದ್ದೆ. ‘ನನ್ನ’ ಇರವು ಕನ್ನಡ ಪುಸ್ತಕೋದ್ಯಮಕ್ಕೆ ಹೆಚ್ಚಿನ ಸಂಭ್ರಮವನ್ನು ತರುತ್ತಿರಲಿಲ್ಲ, ಅವಸಾನ ಇಷ್ಟು ಸಂಚಲವನ್ನೂ ಉಂಟುಮಾಡುತ್ತಿರಲಿಲ್ಲವೆಂದೇ ನಾನು ನಂಬಿದ್ದೇನೆ. ನಿಮ್ಮ ಆಶಯಕ್ಕೆ ನನ್ನ ಶುಭಾಶಯಗಳಿವೆ.
  ಅಶೋಕವರ್ಧನ

  ReplyDelete
 38. Vinayaka Damle23 August, 2010 21:11

  ASHOK MAMA,
  sad to here of it...

  when all plan to start out new.... why is this old experienced people moving away????
  Vinu

  ReplyDelete
 39. ರಾಮಚಂದ್ರ ದೇವ24 August, 2010 08:38

  ಬೇಡ ಅನ್ನಿಸಿದ್ದನ್ನು ಮಾಡಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಜೀವನ ಇರುವುದೇ ಜೀವಂತಿಕೆಗಾಗಿ.
  ಆದರೆ ನಿಮ್ಮ ಅನೇಕ ಪುಸ್ತಕಗಳು ಮುಖ್ಯವಾದವು. ಬೇರೆ ಪ್ರಕಾಶಕರ ಮೂಲಕವೇ ಆದರು ಅವು ಸಿಕ್ಕುವಂತಾದರೆ ಚೆನ್ನಾಗಿರುತ್ತದೆ.
  ರಾಮಚಂದ್ರ ದೇವ

  ReplyDelete
 40. ramesh kainthaje25 August, 2010 07:16

  ಇದು ಅನ್ಯಾಯ ಸ್ವಾಮಿ .....
  ಸುಮಾರು ೨ ವಾರಗಳ ಹಿಂದೆ ನಿಮ್ಮ ಪುಸ್ತಕ ಮಳಿಗೆಗೆ ಬಂದಾಗ ಪತ್ರವೊಂದನ್ನ್ನು ನೀವು ತೋರಿಸಿ ನಾನಿನ್ನು ಪುಸ್ತಕ ಪ್ರಕಾಶನ ನಿಲ್ಲಿಸುಥ್ಥೆನೆ ಅಂದಾಗ ನಾನೇನು ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನವಾದೆ.
  ಅದಕ್ಕೆ ಕಾರಣಗಳೂ ಇದ್ದವು.ಮನಸ್ಸಿನ ಮೂಲೆಯಲ್ಲಿ ನೆನಪುಗಳು ಒತ್ಹ್ಹರಿಸಿ ಬಂದು ಬೇಸರವಾಗಿ ಹಾಗೆಯೇ ಸುಮ್ಮನ ಮನೆಗೆ ಬಂದೆ...
  ಬಸ್ಸಿನಲ್ಲಿ ನೆನಪಾದದ್ದು...ನಾನು ಪುಸ್ತಕ ಪ್ ಪ್ರಕಾಶನಕ್ಕಿಲಿದಾಗ ನೀವು ನೀಡಿದ ಸಲಹೆಗಳು..
  ನನ್ನ ಪುಸ್ತಕ ಮಾರಟಕ್ಕೆ ಮೈಸೂರಿನ D V K ಮೂರ್ತಿ ಅವರನ್ನು ನೀವು ಪರಿಚಯಿಸಿದ್ದು , ೧೨ ವರ್ಷಗಳ ಹಿಂದೆ ಕರ್ನಾಟಕ ಸರಕಾರ ಪುಸ್ತಕ ಪ್ರಕಾಶಕರ ಮೇಲೆ ತೆರಿಗೆ ಹೇರಿದಾಗ ನಿಮ್ಮೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ನಾವೆಲ್ಲಾ ದೂರು ನೀಡಿದ್ದು, ಪ್ರಕಾಶಕರಿಗೆ ಎಂದು ಕಂಮತವೊಂದನ್ನು ಪುಸ್ತಕ ಪ್ರಾಧಿಕಾರ ಉಡುಪಿಯಲ್ಲಿ ಏರ್ಪಡಿಸಿದಾಗ ಅನ್ಯಾಯವನ್ನು ಪ್ರತಿಭಟಿಸಿ ನೀವು ಕಾರ್ಯಕ್ರಮ ಉದ್ಹ್ಗಾತನೆಗೂ ಮುನ್ನ ವೇದಿಕೆ ಏರಿ ಕಾರ್ಯಕ್ರಮದ ಮುಕ್ತಾಯ ಘೋಷಿಸಿದ್ದು , ನೀವು ಪ್ರಕಾಶನ ಮಾಡಿದ ಕಾದಿನೋಳಗೊಂದು ಜೀವ ಎಂಬ ಪುಸ್ತಕದ ಬಿಡುಗಡೆ ಕೊಣಾಜೆ ಸಮೀಪದ ನಿಮ್ಮ ಕಾಡಿನಲ್ಲಿ ಬಿಡುಗಡೆಯ ಸಂಬ್ರಮದಲ್ಲಿ ಪಾಲ್ಗೊಂಡಿದ್ದು, ನನ್ತರ G T ನಾರಾಯಣ ರಾಯರ ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮ ದಲ್ಲಿ ಅವರ ಹಸ್ಥಕ್ಷರವನ್ನು ಪುಸ್ತಕದಲ್ಲಿ ಪಡೆದದ್ದು... ಹೀಗೆ ಅನೇಕ ನೆನಪುಗಳು...
  ನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿಶಿಷ್ಟಹೆ ಬಂದ ಅತಿಥಿಗಳಿಗೆ ನಮ ಊರಿನ ಬನ್ಸು ಚ ...ಇದೆಲ್ಲ ಇನ್ನು ಇಲ್ಲ್ಲಿ?
  ಎಲ್ಲಕ್ಕೋ ಮಿಗಿಲಾಗಿ ಪ್ರಕಶಕನ ಲೋಕದಲ್ಲಿ ಆಗುತ್ಹ್ಹಿರುವ ಅನ್ಯಾಯಗಳಿಗೆಲ್ಲ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತ ಪಡಿಸಿ ವಿರೋಧಿಸಿ ಗುಡುಗುವ ನಿಮ್ಮ ಪತ್ರಗಳ ಸರಮಾಲೆ ಇನ್ನೆಲ್ಲಿ?
  ಎಂಬ ಭಯವಾಗುಥಿದೆ.ನಿಮ್ಮ್ಮಂಥಹ ಪುಸ್ತಕ ಪ್ರಕಾಶಕರೇ ಇನ್ನು ಪುಸ್ತಕ ಪ್ರಕಾಶನ ನಿಲ್ಲ್ಲಿಸುಥ್ಹೇನೆ ಎಂದಾಗ ಪ್ರಕಾಶನ ಲೋಕದ ಕಷ್ಟಗಳು ನೆನಪಾಗಿ ನನ್ನತಹಾ ಹಳ್ಳಿ ಮೂಲೆಯ ಪುಟ್ಟ ಪ್ರಕಶಕನ ಪಾಡೇನು ಎಂದು ಯೋಚನೆಯಾಗುಥ್ಹಿದೆ.
  ನಿಮ್ಮ ಅನೇಕ ಪುಸ್ತಕಗಳನ್ನು ಕೊಂಡು ಓದಿದ್ದೇನೆ. ಪುಸ್ತಕ ಮಾರಾಟ ಹೋರಾಟವನ್ನಂತೂ ಅನೇಕ ಸಲ ಓದಿದ್ದೇನೆ. ಇಡೀ ಪುಸ್ತಕ ಪ್ರಕಾಶನ ರಂಗದ ಒಳಹೊರಗನ್ನು ಬಹಿರಂಗ ಪಡಿಸುವ ಪುಸ್ತಕವದು.ನಿಮ್ಮ ಪ್ರಕಾಶನದ ಅನೇಕ ವಿಜ್ಞಾನ ಪುಸ್ತಕಗಲಂತೂ ಬಹಳ ಜನಪ್ರಿಯತೆ ಪಡೆದಿವೆ. ನೃತ್ಯ ಲೋಕದ ಬಗ್ಗೆ ನೀವು ಪ್ರಕಟ ಪಡಿಸಿದ ನೃತ್ಯ ಲೋಕ ಕೃತಿಯಂತೂ ಅತ್ಯನ್ತ ಸುಂದರ ಮಾಹಿತಿಕೋಶ.
  ನಾನು ಹೇಳುವುದಿಷ್ಟೇ ... ನಿಮ್ಮನತಹವರು ಪುಸ್ತಕ ಪ್ರಕಾಶನ ನಿಲ್ಲಿಸಬಾರದು.ಪುಸ್ತಕೋದ್ಯಮದ ಹುಳುಕುಗಳನ್ನು ಬಹಿರಂಗಪಡಿಸಲು ಒಂದಿಷ್ಟೂ ಸಮಯ ತಡ ಮಾಡದೇ ಪತ್ರಗಳ ಬಾನವನ್ನೇ ಹೂಡುವ ನಿಮ್ಮಂತಹವರು ನಮ್ಮಂತಹ ಪುಟ್ಟ ಪ್ರಕಾಶಕರ ಎದುರಿಗೆ ಇರಬೇಕು ಸ್ವಾಮಿ ....
  ಇದು ಸದ್ಯಕ್ಕೆ ಮನಸಿನ ಮೂಲೆಯಿಂದ ಬಂದದ್ದು .
  ರಮೇಶ್ ಕೈಂತಜೆ, ಕೈಂತಜೆ ಪ್ರಕಾಶನ

  ReplyDelete
 41. Dear Ashok
  I read your write up on the closure of the publication and the comments from the well wishers. It is really sad to know that the publication institutions with principles can't survive.
  Now, I am realising how my father could build 'Bharatha Darshana' organization with the sole motto of distributing books at the lowest price, to reach the commons.
  I would like to have the complete set of your publications which you have listed. I will be sending the cheque, including the postage. Kindly send them to Bharath Darshan.
  Best regards
  Yoga

  ReplyDelete
 42. ಅಶೋಕವರ್ಧನ02 September, 2010 06:22

  ಪ್ರಿಯ ಯೋಗಾನರಸಿಂಹ
  ನೀವು ನಿಮ್ಮ ತಂದೆಯ ಬಗ್ಗೆ ಹೇಳಿದ ಮಾತು ತುಂಬಾ ಕಡಿಮೆಯೇ ಆಯ್ತು. ನಾನು ಬಿಡಿ ವ್ಯಾಪಾರ ಮತ್ತು ಹಿಂದೆ ತೆಗೆಯ ಬೇಕಿಲ್ಲದ ಬಂಡುವಾಳ ಗಟ್ಟಿಯಾದ ಮೇಲೇ ಪ್ರಕಾಶನಕ್ಕೆ ಇಳಿದವ. ನಿಮ್ಮ ತಂದೆಯಾದರೋ ಮಹಾಭಾರತ, ರಾಮಾಯಣ, ಭಾಗವತ ಮತ್ತು ಹರಿವಂಶಗಳ ಅನುವಾದ, ಮುದ್ರಣ , ಪ್ರಕಟಣೆ ಮತ್ತು ವಿತರಣೆಗಳೊಡನೆ ಸ್ವಂತ ಜೀವನ ನಿರ್ವಹಣೆಯನ್ನೂ ಜೊತೆಗೂಡಿಸಿ ನಡೆದವರು. ಐನೂರು ಪುಟಗಳಿಗೆ ಕಡಿಮೆ ಬಾರದ ಎಷ್ಟೊಂದು ಸಂಪುಟಗಳು (ಐವತ್ತೆಂಟು + ಅಸಂಖ್ಯ ವಿಶೇಷಗಳು), ಅದೂ ಎಷ್ಟು ಕೊಳ್ಳುಗ ಸ್ನೇಹಿಯಾಗಿ ತಂದರು. ಇದಕ್ಕೆ ಅವರು ಜೀವನದುದ್ದವನ್ನೂ ಶಿಸ್ತುಬದ್ಧಗೊಳಿಸಿದ ಕ್ರಮದಲ್ಲಿ ಎಷ್ಟೊಂದು ತ್ಯಾಗಗಳು ನಡೆದಿರಬಹುದೆಂದು (ಕೆಲವೊಮ್ಮೆ ಅವರ ಅರಿವಿಗೂ ಬರದೇ) ಹೇಳುವುದು ಕಷ್ಟ. ಅವರ ತ್ಯಾಗ, ಆದರ್ಶಗಳನ್ನು ಮೆಚ್ಚಿ ಮುಂದುವರಿಸುವ ಮಕ್ಕಳಾದ ನೀವೂ ಅಭಿನಂದನಾರ್ಹರು.
  ಅಶೋಕವರ್ಧನ

  ReplyDelete
 43. Dear Ashok
  Thank you. Yes, it is very true, I can imagine the years, when all four of us were growing up and the hardship my parents went through.
  The sheer will power and their strong belief with the divine moved all the hurdles and could succeed in completing their life’s ambitions. We are fortunate and blessed to be their children. One thing I have learnt is the art of management skills from the very beginning in the press, has given me greater edge in my life in managing the people and the large industrial functioning.
  Yoga

  ReplyDelete
 44. I read about this post in Vijaya Karnataka news paper ("webbagilu" column). I was disheartened to read about this. I have read book "Vijnanika Manobhavane" and later got to know that English version is also available. I searched a lot in many book stalls but could not get it. From another book by GTN, I got to know about Athree Book Centre (ABC) in Managlore and I could get few copies of "Scientific temper" through courier. I could not believe that book is priced at Rs.15 when I called ABC.
  As suggested in one of the comments, is it possible to look at publishing some of the books in the form of e-books? Personally I am fan of books "Vaijnanika Manobhavane" and "Scientific temper". I think these books should reach more and more people and benefit in day to day life. I am personally ready to put effort in making "Scientific temper" an e-book. Please let me know.
  Prakash
  Bangalore.

  ReplyDelete
 45. ಅಶೋಕವರ್ಧನ13 September, 2010 06:12

  ಪ್ರಿಯ ಪ್ರಕಾಶ್
  Scientific Temper ಅಥವಾ ತಂದೆಯ ಯಾವುದೇ ಪುಸ್ತಕವನ್ನು ಮೂಲಕ್ಕೆ ಏನೂ ಊನಬರದಂತೆ, (ಅನುಕೂಲವಿದ್ದರೆ ಹೆಚ್ಚಿನ ಪೂರಕ ಚಿತ್ರಗಳನ್ನು ಒದಗಿಸಿ) ವಿ-ಪುಸ್ತಕ ಮಾಡಿ, ಸಾರ್ವಜನಿಕ ಓದಿಗೆ, ಸಂಗ್ರಹಕ್ಕೆ ಉಚಿತವಾಗಿ ದೊರೆಯುವಂತೆ ನೀವು ಅಥವಾ ಯಾರೂ ಮಾಡುವುದಿದ್ದರೂ ನಾನು ಅನುಮತಿಯನ್ನು ಉಚಿತವಾಗಿ ಕೊಡಬಲ್ಲೆ.
  ಅಶೋಕವರ್ಧನ

  ReplyDelete
 46. ರಮಾಕಾಂತ ಜೋಶಿ ಮತ್ತು ಅಶೋಕವರ್ಧನ23 September, 2010 06:16

  ಕನ್ನಡ ಪುಸ್ತಕೋದ್ಯಮದಲ್ಲಿ ಹೆಸರಾಂತ ಸಂಸ್ಥೆ - ಮನೋಹರ ಗ್ರಂಥ ಮಾಲಾ, ಧಾರವಾಡ. ಅದರ ವರಿಷ್ಠ ಶ್ರೀ ರಮಾಕಾಂತ ಜೋಷಿಯವರು ಖಾಸಗಿ ಪ್ರಕಾಶನದಿಂದ ಹೊರಗೂ ಸರಕಾರೀ ಪುಸ್ತಕೋದ್ಯಮದ ಸಂಸ್ಥೆಗಳಲ್ಲಿ ಪಾತ್ರವಹಿಸಿದ ಪರಿಣತಿಯುಳ್ಳವರು. ಹಾಗಾಗಿ ಅವರನ್ನು ಅತ್ರಿ ಪ್ರಕಾಶನ ಮುಚ್ಚಿದ್ದರ ಕುರಿತಂತೆ ನನ್ನ ಬ್ಲಾಗ್ ನೋಡಿದಿರಾ, ಪ್ರತಿಕ್ರಿಯೆ ಏನು ಎಂದು ವಿಶೇಷವಾಗಿ ವಿಚಾರಿಸಿಕೊಂಡೆ. ಪ್ರಾಸ್ತಾವಿಕವಾಗಿ ಆಗ ತಾನೇ ಬಂದಿದ್ದ ಕನ್ನಡ ಪುಸ್ತಕ ಪ್ರಾಧಿಕಾರ (ಕಪುಪ್ರಾ)ದ ಮುಖವಾಣಿ - ಪುಸ್ತಕಲೋಕದ ಮೂರನೇ ಸಂಚಿಕೆಯನ್ನೂ ಟೀಕಿಸಿದ್ದೆ. ಅದಕ್ಕವರ ಲಿಖಿತ ಉತ್ತರದ ಸಾರಾಂಶ ಇಷ್ಟು:
  [ಮೊದಲು ತಮಗೆ ಗಣಕದ ಪರಿಚಯವಿಲ್ಲ ಎಂದು ಹೇಳಿಕೊಂಡರು. ಹಾಗಾಗಿ ನನ್ನ ಲೇಖನ ನೋಡದಿದ್ದರೂ ಮುಂದುವರಿದು . . . . ]
  "ಬಹುಶಃ ನೀವು ಹೊಸ ಜನಾಂಗದ ಜನರೊಡನೆ ವ್ಯವಹರಿಸುತ್ತಿರುವುದರಿಂದ ಹೊಸಹೊಸ ವಿಧಾನಗಳ ಬಳಕೆಯನ್ನು ಉಪಯೋಗಿಸುತ್ತಿರಬೇಕು. ಆದರೆ ನಮ್ಮಂಥ ಹಳೆಯ ತಲೆಮಾರಿನ ಜನರಿಗೆ ಇವೆಲ್ಲ ಕೈಗೆ ನಿಲುಕುವ ವಿಷಯವಲ್ಲ ಎಂಬುದನ್ನೂ ನೀವು ಅರಿತಿರಬೇಕಾಗಿತ್ತು.
  ಇನ್ನು ‘ಪುಸ್ತಕಲೋಕ’ದ ಇತ್ತೀಚಿನ ಆವೃತ್ತಿಯ ಬಗ್ಗೆ ಬರೆದಿದ್ದೀರಿ. ಅಲ್ಲಿಯ ಲೇಖನಗಳೆಲ್ಲ ಕತ್ತರಿಸಿ ಅಂಟಿಸಿದ ಲೇಖನಗಳೆಂದು ಹೇಳಿದ್ದೀರಿ. ಅದು ನಿಜವೇ! ಕಪುಪ್ರಾ ಕನ್ನಡ ಪುಸ್ತಕೋದ್ಯಮದ ಏಳಿಗೆಯ ಬಗ್ಗೆ, ಚೈತನ್ಯದ ಬಗ್ಗೆ ಮಾಡಬೇಕಾದಷ್ಟು ಕೆಲಸ ಮಾಡಲು ಪ್ರಯತ್ನಿಸುತ್ತಿಲ್ಲ ಎನ್ನಬಹುದು. ಆದರೆ ನನ್ನ ಮೂಗಿನ ನೇರಕ್ಕೇ ನಡೆಯಬೇಕೆನ್ನುವ [ನಿಮ್ಮ] ಅಪೇಕ್ಷೆಯೂ ತಪ್ಪಲ್ಲವೇ? ಜಗತ್ತಿನ ಡೊಂಕನ್ನು ತಿದ್ದುವದು ಸಾಧ್ಯವಾಗದ ಕೆಲಸ. ಈಗಿನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಈಸುವುದು ದುಃಸಾಧ್ಯವಾದ ಮಾತು ಎನಿಸಿದರೂ ವೈಯಕ್ತಿಕ ಮನೋಸ್ಥೈರ್ಯದ ಮೂಲಕ ಸಾಧಿಸಲು ಅಸಾಧ್ಯವೇನಲ್ಲ. ಆಗ ನಾವು ನಮ್ಮದೇ ಆದ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಈ ಹೊತ್ತಿನ ಓದುಗರ ಅಭಿರುಚಿಯನ್ನು, ಅಭಿಲಾಷೆಯನ್ನು ಅರಿತುಕೊಳ್ಳಬೇಕಾಗುತ್ತದೆ. ನಮಗೆ ಸರಿ ಎನಿಸಿದ್ದನ್ನು ಓದುಗ ಸ್ವೀಕರಿಸಲೇಬೇಕು ಎನ್ನುವ ಸಿದ್ಧಾಂತ ನಡೆಯುವುದಿಲ್ಲ. ಮನುಷ್ಯನಿಗೆ ಇರುವ ಹುಟ್ಟು, ಜೀವನ, ಸಾವು ಹೇಗೆ ನೈಸರ್ಗಿಕವೋ ಹಾಗೆ ಸಂಘ ಸಂಸ್ಥೆಗಳಿಗೂ ಅನಿವಾರ್ಯ. ಈ ತತ್ವಜ್ಞಾನ ಹೇಳಲು ಸುಲಭವಾದರೂ, ಸ್ವಂತಕ್ಕೆ ಬಂದಾಗ ಅರಗಿಸಿಕೊಳ್ಳುವುದು ಕಷ್ಟ ಸಾಧ್ಯ
  ನಿಮ್ಮ ರಮಾಕಾಂತ ಜೋಶಿ."
  ನಾನು ಮರುಟಪಾಲಿಗೆ ಬ್ಲಾಗ್ ಲೇಖನದ ಮುದ್ರಿತ ಪ್ರತಿಯನ್ನು ಕಳಿಸಿಕೊಟ್ಟೆ. ಜೊತೆಗೆ ಬರೆದೆ:
  ಕಪುಪ್ರಾವನ್ನು ನಾನು ನನ್ನ ಮೂಗಿನ ನೇರಕ್ಕೆ ತರುವ ಪ್ರಯತ್ನ ಎಂದೂ ಮಾಡಿಲ್ಲ. ಅದು ಹುಟ್ಟುವ ಮೊದಲು ವ್ಯವಸ್ಥಾಪಕರು ಬೆಂಗಳೂರಿಗೆ ನನ್ನನ್ನು ಕರೆಸಿಕೊಂಡು ‘ಹೀಗೊಂದು ಸಂಸ್ಥೆ ಬೇಕೇ ಬೇಡವೇ’ ಎಂದು ಕೇಳಿದಾಗ ಸಕಾರಣ ಬೇಡ ಎಂದೆ. ಆದರೂ ಅದು ಬಂತು. ಮತ್ತೆ ಮತ್ತೆ ವೇದಿಕೆ ಕೊಟ್ಟು ಅದರ ಮೇಲೂ ಅಭಿಪ್ರಾಯ ಕೇಳಿದಾಗ ತಪ್ಪೇನು ಎಂದು ಸಕಾರಣ ವಿವರಿಸುತ್ತಲೇ ಬಂದೆ. ಉದ್ದಕ್ಕೂ ನನಗೆ ಉತ್ತರ ಕೊಟ್ಟವರಿಲ್ಲ (ಬಹುಶಃ ನನ್ನ ಅನುಮೋದನೆಯನ್ನಷ್ಟೇ ಅವರು ನಿರೀಕ್ಷಿಸುತ್ತಿದ್ದರು!). ಇಂಥಾ ಟೀಕೆಗಳನ್ನು, ವಿಮರ್ಶೆಗಳನ್ನು ಸಂಕಲಿಸಿ ‘ಪುಸ್ತಕ ಮಾರಾಟ ಹೋರಾಟ’ ಎಂಬ ಹೆಸರಿನಲ್ಲಿ ಮುದ್ರಿಸಿ ಮಾರುಕಟ್ಟೆಗೂ ಹಾಕಿದೆ. (ಒಂದು ಸಾವಿರ ಪ್ರತಿಗಳು ಇಂದು ಮುಗಿದಿವೆ - ಮರುಮುದ್ರಣ ಹಾಕಿಲ್ಲ) ಓದಿದವರೆಲ್ಲ "ಒಳ್ಳೆ ಬರಹಗಾರ" ಎಂದರು (ಹಿಂದೆ ಬಿಟ್ಟು ಏನೇ ಹೇಳಲಿ) ಮುಖಾಮುಖಿಯಾದಲ್ಲಿ ನನ್ನ ಆದರ್ಶಗಳನ್ನು ಕೊಂಡಾಡಿದರು (ಅನುಸರಿಸಿದರೋ!).ಏನು ಫಲ? ‘ಲೋಕದ ಡೊಂಕನ್ನು ತಿದ್ದುವವರು ಯಾರು’ ಎನ್ನುವಲ್ಲಿ ದಾಸರೂ ತಿದ್ದುತ್ತಿದ್ದರು ಎನ್ನುವುದನ್ನು ಮರೆಯಬೇಡಿ. ಮತ್ತೆ ನನ್ನ ಪ್ರಕಟಣೆಗಳು ಜನರ ಅಗತ್ಯವನ್ನೇ (ಇಲಾಖೆಗಳ ಮರ್ಜಿಯನ್ನಲ್ಲ) ನೋಡಿಕೊಂಡು ಬಂದವು. ಆದರೆ ಇಲಾಖೆಗಳು ಮಾರುಕಟ್ಟೆಯನ್ನೇ ಹಾಳು ಮಾಡಿದ್ದರೆ ಬಗ್ಗೆ ನನ್ನ ಆಕ್ರೋಶವಿಲ್ಲಿದೆ. ನನಗೆ ನನ್ನ ಪ್ರಕಾಶನದ ಬಗ್ಗೆ ಯಾವ ಮೋಹವೂ ಇಲ್ಲ (ಲೇಖನದ ಕೊನೆ ನೋಡಿ). ನಲವತ್ತಕ್ಕೂ ಮಿಕ್ಕು ಮಂದಿ ಪ್ರತಿಕ್ರಿಯಿಸಿದ್ದನ್ನು ನೋಡಲು ಇನ್ನಾದರೂ ಬ್ಲಾಗ್ ನೋಡಿ.
  ಇಂತು ವಿಶ್ವಾಸಿ
  ಅಶೋಕವರ್ಧನ

  ReplyDelete
 47. ರಮಾಕಾಂತ ಜೋಶಿ23 September, 2010 06:54

  ಪ್ರಿಯ ಶ್ರೀ ಜಿ.ಎನ್. ಅಶೋಕವರ್ಧನರಿಗೆ ನಮಸ್ಕಾರಗಳು. ತರುವಾಯ. . . . . . .
  ‘ಅತ್ರಿ ಪುಸ್ತಕ ಪ್ರಕಾಶನ ಮುಚ್ಚಿದೆ!’ ಎಂಬ ನಿಮ್ಮ ಲೇಖನಕ್ಕೆ ನೀವು ಬೇರೆಯವರ ಪ್ರತಿಕ್ರಿಯೆಯನ್ನು ಅಪೇಕ್ಷಿಸುವದು ತಿಳಿದು ನನಗೆ ವೈಯಕ್ತಿಕವಾಗಿ ಸ್ವಲ್ಪು ಬೇಸರವೆನಿಸಿತು. ನೀವು ಪ್ರಕಾಶನವನ್ನು ಪ್ರಾರಂಭಿಸಿದಾಗ ನಿಮ್ಮ ಮನಸ್ಸಿನಲ್ಲಿ ಕೆಲವು ನಿರ್ದಿಷ್ಟ ಧ್ಯೇಯ ಧೋರಣೆಗಳನ್ನು ಇರಿಸಿಕೊಂಡು ಪ್ರಾರಂಭಿಸಿದ್ದಿರಿ. ಅದರ ಪ್ರಕಾರ ಸಾಧ್ಯವಾದಷ್ಟು ಕಾಲ ಪ್ರಕಾಶನ ನಡೆಸಿದಿರಿ. ಈಗ ಆ ರೀತಿಯಾಗಿ ನಡೆಸಲು ಸಾಧ್ಯವಿಲ್ಲವೆಂದು ಮುಚ್ಚಿದ್ದೀರಿ. ಅದಕ್ಕೆ ಬೇರೆಯವರ ಪ್ರತಿಕ್ರಿಯೆ ಏಕೆ ಬೇಕು? ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಧ್ಯೇಯ ಧೋರಣೆಗಳನ್ನು ರೂಢಿಸಿಕೊಂಡು ಅದಕ್ಕೆ ತಕ್ಕಂತೆ ಜೀವಿಸಲು ಪ್ರಯತ್ನಿಸುತ್ತಾರೆ. ಆದರೆ ನಾವು ನಡೆದಂತೆಯೇ ಇತರರೂ ನಡೆಯಬೇಕೆಂದು ಆಶಿಸುವುದು ತಪ್ಪಲ್ಲವೇ? ‘ಲೋಕದ ಡೊಂಕನ್ನು ತಿದ್ದುವವರು ಯಾರು?’ಎಂಬ ಪ್ರಶ್ನೆ ಕೇಳಿ, ದಾಸರ ಉದಾಹರಣೆಯನ್ನು ಕೊಟ್ಟಿದ್ದೀರಿ. ಆದರೆ ದಾಸರೂ ನಿಮ್ಮ ರೀತಿ ಬೇರೆಯವರ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ತಮ್ಮಷ್ಟಕ್ಕೆ ತಾವು ಜೀವನ ಸಾಗಿಸುತ್ತಿದ್ದರು. ನಿಮ್ಮ ಪತ್ರದ ಕೊನೆಯಲ್ಲಿ ನಿಮ್ಮ ‘ಬ್ಲಾಗ್’ ನೋಡಿ ನಲವತ್ತಕ್ಕೂ ಮಿಕ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ ಎಂದು ಬರೆದಿದ್ದೀರಿ. ನಿಮ್ಮ ಒಳಗೆ ಇರುವ ‘ಇತರರ ಪ್ರತಿಕ್ರಿಯೆ’ಯ ಆಸೆ ನೋಡಿ ಮನಸ್ಸಿಗೆ ವಿಷಾದವಾಯಿತು. ‘ಮೋಹವಿಲ್ಲ’ ಎನ್ನುತ್ತಲೇ ಮೋಹದ ಅಂಶ ಹೊರಗೆಡವಿದ್ದೀರಿ.

  ಪ್ರಿಯ ಅಶೋಕವರ್ಧನ, ನಿಮ್ಮ ತಂದೆಯವರ ಆದರ್ಶ, ಅವರು ಜೀವಿಸಿದ ರೀತಿ ಇವು ನಿಮಗೆ ಆದರ್ಶವಾಗಿದ್ದಲ್ಲಿ ನೀವು ನಿರ್ಲಿಪ್ತರಾಗಿ ನಿಮ್ಮ ಕಾರ್ಯ ಮಾಡುತ್ತ ಹೋಗುತ್ತಿದ್ದಿರಿ. ಆದರೆ ನಿಮಗೆ ವೃತ್ತಿ ಹಾಗೂ ಸಾಮಾಜಿಕ ಸೇವೆಗಳ ತಾಕಲಾಟದಿಂದ ದ್ವಂದ್ವದಲ್ಲಿ ಬಿದ್ದಿದ್ದೀರಿ. ಅದರ ಜೊತೆಗೆ ನಿಮ್ಮ ಹಟಮಾರಿತನಕ್ಕೆ ಸಮಾಜವನ್ನು ಬಗ್ಗಿಸುವ ಪ್ರಯತ್ನಕ್ಕೆ ಗಂಟು ಬಿದ್ದಿದ್ದೀರಿ. ಇಂಥ ವಿಶಾಲವಾದ ಜೀವನ ಸಂಘರ್ಷದಲ್ಲಿ ನಮಗೆ ಸರಿ ಕಂಡಂತೆ ಬದುಕುವ ಸ್ವಾತಂತ್ರ್ಯ ನಮಗೆ ಇದ್ದೇ ಇದೆ. ಆದರೆ ಅದನ್ನು ಜನ ನೋಡಬೇಕು, ಮೆಚ್ಚಬೇಕು ಎಂಬ ಆಸೆಯಿದ್ದರೆ ಕಷ್ಟ.

  ನಿಮ್ಮ ತಂದೆಯಂತೆಯೇ ನನ್ನ ತಂದೆಯೂ ಅಂಥದೇ ಆದರ್ಶವಾದದಲ್ಲಿ ಬೆಳೆದು ಬಂದವರು. ಅದಕ್ಕಿಂತ ಹೆಚ್ಚಾಗಿ ನಾನು ದರಾ ಬೇಂದ್ರೆ, ರಂಶ್ರೀ ಮುಗಳಿ, ಕೀರ್ತಿನಾಥ ಕುರ್ತಕೋಟಿ ಮುಂತಾದವರ ಜೊತೆಗೆ ಅತಿ ನಿಕಟವಾಗಿ ಬೆಳೆದದ್ದರ ಪರಿಣಾಮವಾಗಿ ಅವರ ಜೀವನ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.

  ಈ ವಾತಾವರಣದಲ್ಲಿ ಬದುಕಬೇಕಾದರೆ, ಅದರಲ್ಲಿಯೂ ವ್ಯವಹಾರದಲ್ಲಿದ್ದು ಬದುಕಬೇಕಾದರೆ ಕೆಲವೊಂದು ಹೊಂದಾಣಿಕೆಗಳು ಅನಿವಾರ್ಯ. ನನ್ನ ತೀರಿಯಲ್ಲಿ, "ಲಂಚ ತೆಗೆದುಕೊಳ್ಳದೇ ಬದುಕುವದು ನನ್ನ ಕೈಯಲ್ಲಿ ಇದೆ. ಹಾಗೆ ನಾನು ಬದುಕ ಬಲ್ಲೆ. ಆದರೆ ಲಂಚ ಕೊಡದೇ ಬದುಕುವ ಸಾಧ್ಯತೆ ನನ್ನ ಕೈಯಲ್ಲಿ ಇಲ್ಲ." ಜನರೊಂದಿಗೆ ವ್ಯವಹಾರ ಮಾಡುವಾಗ ಉದ್ದರಿ ನೀಡುವದು ಅನಿವಾರ್ಯವಾಗುತ್ತದೆ. ಕೆಲವು ಸಲ ಉದ್ದರಿ ಹಣ ಬರುವದಿಲ್ಲ. ಅಂಥವರೊಂದಿಗೆ ಕಠಿಣವಾಗಿ ನಡೆದುಕೊಳ್ಳುವದು ಆಗುವದಿಲ್ಲ. ೧೦-೧೫ ವರ್ಷಗಳ ಹಿಂದಿನ ಚಂದಾದಾರರು ಇತ್ತೀಚೆಗೆ ಭೇಟಿಯಾದಾಗ, "ಜೋಶಿಯವರೇ ನಿಮ್ಮ ಚಂದಾ ಬಾಕಿ ಹಾಗೇ ಉಳಿದಿದೆ. ಈಗ ತೀರಿಸುತ್ತೇನೆ" ಎನ್ನುವವರೂ ಇದ್ದಾರೆ. ಹಾಗೆಯೇ ಪುಸ್ತಕ ವಿತರಣೆ ಎಂದು ಒಬ್ಬರನ್ನು ನಿಯಮಿಸಿಕೊಂಡಾಗ ಮೊದಲಿನ ೨-೩ ವರ್ಷ ಕೆಲಸ ಸರಿಯಾಗಿ ಮಾಡಿದಂತೆ ಮಾಡಿ, ೪ನೆಯ ವರ್ಷ ಚಂದಾದಾರರಿಂದ ಸುಮಾರು ೫೦,೦೦೦/- ರೂ ವಸೂಲು ಮಾಡಿ, ಚಂದಾದಾರರಿಗೆ ಪಾವತಿಯನ್ನೂ ಕೊಡದೆ, ಅದೃಶ್ಯನಾದ ವ್ಯಕ್ತಿ ಈ ತನಕವೂ ಪತ್ತೆಯಿಲ್ಲ. ಅಲ್ಲದೆ ಇದೇ ಸಂದರ್ಭ ಉಪಯೋಗಿಸಿ ಚಂದಾದಾರರೂ (ಕೆಲವೇ ಕೆಲವರು ಮಾತ್ರ) ದುರುಪಯೋಗ ಪಡಿಸಿಕೊಂಡರು. ವ್ಯವಹಾರದಲ್ಲಿ ಇವೆಲ್ಲವೂ ಬರತಕ್ಕಂಥವೇ. ಅದಕ್ಕೆ ಅವನ್ನು ಎದುರಿಸಲು ತಯಾರಾಗಬೇಕು. ಮುಖ್ಯವಾಗಿ, ನೀವು.ನಿಮಗೆ ಹೇಗೆ ಬೇಕೋ ಹಾಗೆ ಬದುಕುತ್ತಿದ್ದೀರಿ. ಹಾಗೆಯೇ ಬದುಕಿರಿ. ಅದರೆ ನಿಮ್ಮ ಬದುಕಿನ ರೀತಿಗೆ ಇತರಿಂದ ಪ್ರತಿಕ್ರಿಯೆ ಅಪೇಕ್ಷಿಸಬೇಡಿರಿ. ಹೀಗೆ ನೇರವಾಗಿ, ಸ್ಪಷ್ಟವಾಗಿ ಬರೆದದ್ದಕ್ಕೆ ಕ್ಷಮಿಸಿರಿ.
  ನಿಮ್ಮ ರಮಾಕಾಂತ ಜೋಶಿ.
  [ವಿಸೂ: ರಮಾಕಾಂತ ಜೋಶಿಯವರು ನಾನು ಕಳಿಸಿದ ಮುದ್ರಿತ ಲೇಖನದ ಪ್ರತಿಯನ್ನು ಓದಿ ಮತ್ತೆ ಪತ್ರಿಸಿದರು. ಅದರ ಇಲ್ಲಿಗೆ ಪ್ರಸ್ತುತವಾಗಬಹುದಾದ ಅಂಶಗಳನ್ನಷ್ಟೇ ಯಥಾವತ್ತು ಪ್ರಕಟಿಸಿದ್ದೇನೆ - ಅಶೋಕವರ್ಧನ]

  ReplyDelete
 48. ಅಶೋಕವರ್ಧನ23 September, 2010 07:12

  ಪ್ರಿಯ ಶ್ರೀ ರಮಾಕಾಂತ ಜೋಶಿಯವರೇ
  ನನ್ನ ಸಾರ್ವಜನಿಕರನ್ನು ಉದ್ದೇಶಿಸಿದ ಭಾಷಣಗಳು, ಬರಹಗಳು ವೈಯಕ್ತಿಕ ಅನುಭವದಿಂದಲೇ ಬಂದವಾದರೂ ಯಾವತ್ತೂ ಸಾರ್ವಜನಿಕ ಹಿತವನ್ನೇ ಬಯಸಿ ಬಂದವು [ವೈಯಕ್ತಿಕ ಅಹವಾಲುಗಳಲ್ಲ] - ನೀವು ಇದನ್ನು ಗಮನಿಸಿದಂತಿಲ್ಲ. ಕನ್ನಡ, ಪುಸ್ತಕೋದ್ಯಮಗಳ ಬಗ್ಗೆ ನಾನು ಎತ್ತಿರುವ ಧ್ವನಿಯ ವಿಸ್ತರಣೆಯನ್ನಷ್ಟೇ ನಾನು ಓದುಗರಲ್ಲಿ ಸ್ಪಷ್ಟವಾಗಿ ಕೇಳುತ್ತಿದ್ದೆ. ಹಿರಿಯ ಪುಸ್ತಕೋದ್ಯಮಿ ಎಂಬ ನೆಲೆಯಲ್ಲಿ ನಿಮ್ಮನ್ನು [ಪ್ರತ್ಯೇಕ ಮುದ್ರಿತ ಲೇಖನ ಕಳಿಸಿ] ಅಭಿಪ್ರಾಯ ಕೇಳಿದರೆ ನೀವು ಅರ್ಥೈಸಿಕೊಂಡ ಕ್ರಮ ವಿಚಿತ್ರ. ಅತ್ರಿಗೆ ಸಗಟು ಖರೀದಿ ಒಲಿಯಲಿಲ್ಲ, ಪ್ರಕಟಣೆಗಳಿಗೆ ಪ್ರಶಸ್ತಿ ಬರಲಿಲ್ಲ, ನನಗೆ ಸಮ್ಮಾನ ಪುರಸ್ಕಾರ ಬಿರುದು ಕೊಟ್ಟವರಿಲ್ಲ ಎಂಬಿತ್ಯಾದಿ ಮಾತು, ಕೊರಗಾಗಲೀ ನೀವೆಲ್ಲಾದರೂ ಕಂಡಿದ್ದೀರಾ? (ಮತ್ತೆ ಅಂಥ ಯಾವುದಕ್ಕೂ ನಾನು ಭಾಗಿಯೇ ಆಗುವುದಿಲ್ಲ ಎಂದೂ ನಿಮಗೆ ಗೊತ್ತು.) ನಾನಾಗಿಯೇ ಅತ್ರಿಗೆ ದಶ, ವಿಂಶತಿ, ಬೆಳ್ಳಿ ಪ್ರಾಯಗಳು ತುಂಬಿದಾಗ, ಹೊಸ ಪ್ರಕಟಣೆಗಳು ಬಂದಾಗ ಪ್ರಚಾರದ ಸಮಾರಂಭ ನಡೆಸಿದ್ದೂ ಇಲ್ಲ. [ನನ್ನನ್ನು] ಕಂಡು, ಮಾತಾಡಿ, ಫೋಟೋ ಮಾಹಿತಿಯಂತದ್ದು ಸಂಗ್ರಹಿಸಿ ತಿಳಿದ ನಿಮಗೂ ನಾನು ಇಷ್ಟೇ ಅರ್ಥವಾದದ್ದೇ ಎಂದು ಪರಮಾಶ್ಚರ್ಯವಾಯ್ತು. ಪ್ರಕಾಶನ ಮುಚ್ಚಿದ್ದಕ್ಕೆ ಬರದ ವಿಷಾದ ಈಗ ಬಂತು.
  ಹಾಯ್ ಕನ್ನಡ ತಾಯ್!
  ಇಂತು ವಿಶ್ವಾಸಿ
  ಅಶೋಕವರ್ಧನ

  ReplyDelete
 49. Gopalakrishna BHAT S.K.06 October, 2010 07:56

  A very good article. But closing publications is not good. I am very sorry to hear it.

  ReplyDelete
 50. @ASHOK SIR.
  IT REALLY MAKES ME LAUGH READING THE REPLY OF MR. JOSHI.
  WHEN I STARTED READING THERE WAS AN EXPECTATION IN MY MIND, BEING A PERSON SITTING IN A (HIGHLY DIGNIFIED ??!) POSITION OF KANNADA PUSTAKA PRAADHIKARA AND MANOHARA GRANTHA.....
  WOULD ENCOURAGE OR REQUEST YOU TO REOPEN IT...
  OR ATLEAST CUT A SORRY FIGURE...
  BUT THE WAY HE HAS COMMENTED IS SOME THING THAT WOULD BE AN EXPLAINATION OR A DEFINITION FOR THE LIMIT MAXIMA OF MISS UNDERSTANDING....

  @MR. JOSHI.
  MY PERSONAL OPINION ON YOUR COMMENT IS... PLEASE GO THROUGH THE COMMENT YOU HAVE WRITTEN TWICE AND JUST READ THE ARTICLE POSTED BY MR. ASHOK VARDHAN ONCE...
  MAY BE YOU WILL GET WHERE YOU HAVE MISSUNDERSTOOD THE ARTICLE
  (ONLY IF YOUR COGNITIVE AND REASONING PARTS OF YOUR BRAIN WORKS...)..!!

  ReplyDelete
 51. Book publishing also seems to be going the visual media way..Hyper commercialisation is snuffing its soul out..Bookstalls once used to be 'islands of sanity' amidst all the madnes..Exploring the seemingly endless rows of books cramped together in crowded shelves is an experience beyond words..But,alas even those esoteric little stores are falling victim to 'change'..Visits to recently opened reliance 'book malls' only confirmed my worst fears..These stores have sections such as'Bestselling','We Recommend' and related sort..Who decides to recommend or what is criterion for a bestseller isn't very clear..One thing is clear,book selling/publishing has fallen victim to commercialisation..this is a dangerous precedent..places like athree continue to be'Islands of sanity'..
  We hope you weather this storm..

  ReplyDelete
 52. ಎಂ.ವಿ. ಭಟ್ ‘ಶ್ರೀಮಿತ್ತೂರು’31 October, 2010 07:03

  ಮಾನ್ಯರೆ
  ಅಕ್ಟೋಬರ್ ತಿಂಗಳ ಅನಂತ ಪ್ರಕಾಶನದಲ್ಲಿ ನಿಮ್ಮ ಈ ಲೇಖನವನ್ನು ಆಸಕ್ತಿಯಿಂದ ಓದಿದೆ. ಉತ್ತಮ ಪ್ರಕಾಶನ ಸಂಸ್ಥೆಯೊಂದು ಮುಚ್ಚಿಹೋಯ್ತೆಂದು ತುಂಬಾ ಬೇಸರಪಟ್ಟುಕೊಂಡೆ. ನಿಜ ಹೇಳುವುದಾದರೆ ಆತ್ಮವಂಚನೆ ಮಾಡದೆ ಇಂದು ಪುಸ್ತಕ ಪ್ರಕಾಶನವನ್ನು ನಡೆಸಿಕೊಂಡು ಹೋಗುವುದು ಸಾಧ್ಯವಾಗದ ಮಾತು. ಇಲ್ಲಿ ಪ್ರಾಮಾಣಿಕತೆ ನಡೆಯದ ನಾಣ್ಯ. ವಂಚನೆ, ಸುಳ್ಳು ಭರವಸೆ ಗಣ್ಯ ಮಾನ್ಯ. ಅತಿಥಿಗಳನ್ನು - ಅವರು ಅಕ್ಷರ ರಾಕ್ಷಸರಾಗಿದ್ದರೂ ಬರಮಾಡಿ, ಹೊಗಳಿ ಅದ್ದೂರಿಯಿಂದ ಸಮಾರಂಭ ನಡೆಸಿ, ಮೊದಲೇ ಪತ್ರಿಕೆಗಳಲ್ಲಿ ಕೃತಿಯ ಬಗ್ಗೆ ಹೊಗಳಿಸಿ ಲೇಖನ ಪ್ರಕಟಪಡಿಸಿ, ಮುಖ ಸುಂದರವಾಗಿ ಚಿತ್ರಿಸಿ - ಒಳಗೆ ಕೊಳಚೆ ನೀರಿರುವುದಾದರೂ - ದಲ್ಲಾಳಿಗಳ ಮೂಲಕ ಸಾವಿರಾರು ಗ್ರಂಥಾಲಯಗಳಿಗೆ, ಪುಸ್ತಕ ಪ್ರಾಧಿಕಾರ ಇತ್ಯಾದಿ ಸಂಸ್ಥೆಗಳಿಗೆ ದಾಟಿಸುವ ಕಲೆ, ಚಮತ್ಕಾರ ನಮ್ಮಲ್ಲಿಲ್ಲದಿದ್ದರೆ, ಲಾಭವಿಲ್ಲದೆ ನಿಜವಾದ ಮೂಲ ಬೆಲೆಯ ಮೂರನೇ ಒಂದು ಪಾಲು ಸೋಡಿ ಕೊಟ್ಟು ಉದ್ಯಮವನ್ನು ಬದುಕಿ ಉಳಿಯುವಂತೆ ಮಾಡಲು ಸಾಧ್ಯವಾಗದು.

  ೧೯೬೨ರಲ್ಲಿ ನಾನು ಮೂಲ್ಕಿಯಲ್ಲಿದ್ದಾಗ ‘ಜನ ಜೀವನ ಸಾಹಿತ್ಯ ಸದನ’ವೆಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಮೂರ್ನಾಲ್ಕು ಕಾದಂಬರಿ , ಕಥಾ ಸಂಗ್ರಹಗಳನ್ನು ಪ್ರಕಟಪಡಿಸಿದ್ದೆ. ಖರ್ಚಾದ ಹಣವನ್ನಷ್ಟೇ ಸಂಗ್ರಹಿಸುವ ಉದ್ದೇಶದಿಂದ ಅತ್ಯಲ್ಪ ಬೆಲೆ ನಿಗದಿಪಡಿಸಿ ಮಾರಲು ಹೊರಟರೂ ನೂರು ಪುಸ್ತಕಗಳನ್ನು ಮಾರಲು ಸಾಧ್ಯವಾಗಿರಲಿಲ್ಲ. ಕೊನೆಗೆ ಊರು ಬಿಟ್ಟು ಹೋಗಬೇಕಾಗಿ ಬಂದಾಗ ಮುದ್ರಿತ ಎಲ್ಲಾ ಪುಸ್ತಕಗಳನ್ನು ಮಣಿಪಾಲದ ಮಾಧವ ಪೈಗಳು ನಡೆಸುತ್ತಿದ್ದ ವಿದ್ಯಾಸಂಸ್ಥೆಗಳಿಗೆ ಕೊಟ್ಟು ಬಂದೆ - ಫ್ರೀಯಾಗಿ! ಮಾಧವ ಪೈಗಳು ಕೊಟ್ಟ ಕೃತಜ್ಞತೆಯ ಪತ್ರ ಈಗಲೂ ನನ್ನಲ್ಲಿದೆ. ಬೇಸಿಗೆ ಕಾಲದಲ್ಲಿ ಪುಸ್ತಕಗಳನ್ನು ಹೊತ್ತುಕೊಂಡು ಊರಿನಲ್ಲಿ ಮನೆಮನೆಗೆ ಹೋಗಿ ಮಾರಲು ಪ್ರಯತ್ನಿಸಿದ್ದೆ. ಹತ್ತು ಪುಸ್ತಕಗಳನ್ನು ದಾಟಿಸಲು ಸಾಧ್ಯವಾಗಲಿಲ್ಲ. ದುಡ್ಡು ಕೊಡಬೇಡಿ. ಒಂದು ಪ್ರತಿ ಇರಲಿ ಎಂದು ಕೊಟ್ಟರೆ, "ನಮಗೆ ಕಥೆ ಕಾದಂಬರಿ ಓದುವ ಅಭ್ಯಾಸವಿಲ್ಲ" ಎಂದು ಹೇಳಿ ಪುಸ್ತಕವನ್ನು ಹಿಂದಕ್ಕೆ ನನ್ನ ಕೈಯಲ್ಲಿತ್ತರೆ ತೆಗೆದುಕೊಳ್ಳಲಿಕ್ಕಿಲ್ಲವೆಂದು ಬಗೆದು ನನ್ನ ಚೀಲಕ್ಕೇ ತುಂಬಿಸಿ ಧನ್ಯರಾಗುತ್ತಿದ್ದರು. ಹಿಂದಿನಿಂದ, ಹೊಲಸು ಕಥೆ ಕಾದಂಬರಿಗಳನ್ನು ಬರೆದು ದುಡ್ಡು ಮಾಡಲು ಹೊರಟಿದ್ದಾನೆಂದು ನಿಂದಿಸುತ್ತಿದ್ದರು.

  ಇನ್ನು ಬೆಂಗಳೂರಿನಲ್ಲಿರುವ ಪುಸ್ತಕ ಪ್ರಕಾಶಕರ ಕುರಿತು ಏನೂ ಹೇಳದಿರುವುದೇ ಒಳ್ಳೆಯದು. ಸಂಭಾವನೆ ಎಂದು ಮೂರು ಕಾಸು ಎಸೆದು - ಅದು ಹತ್ತಾರುಸಲ ಕಾಡಿದ ಮೇಲೆ - ವಾಮ ಮಾರ್ಗದಿಂದ ಪುಸ್ತಕಗಳನ್ನೆಲ್ಲ ಮಾರಿ ದುಡ್ಡು ಸಂಪಾದಿಸುವ ದೊಡ್ಡ ಜಾಲವೇ ಇದೆ. ಮತ್ತೆ ಮುಂದಿನ ವರ್ಷ ಅದೇ ಕೃತಿಯ ಶೀರ್ಷಿಕೆ ಬದಲಾಯಿಸಿ, ಬೇರೇ ಗಾತ್ರದಲ್ಲಿ ಮುದ್ರಿಸಿ ದಲ್ಲಾಳಿಗಳ ಮೂಲಕವೋ ಅಥವಾ ಸಂಸ್ಥೆಗಳ ಯಜಮಾನರುಗಳ ಕೈಕಾಲು ಹಿಡಿದೋ ಹಣ ದೋಚುತ್ತಾರೆ.

  ಒಟ್ಟಿನಲ್ಲಿ ಹೇಳುವುದಾದರೆ ಆತ್ಮಾಭಿಮಾನ, ಪ್ರಾಮಾಣಿಕತೆ ಹಾಗೂ ಸಜ್ಜನಿಕೆಯುಳ್ಳ ಮನುಷ್ಯ ಇಂದು ತಿಪ್ಪೆಯ ಪಾಲಾಗಿದ್ದಾನೆ. ಹಣ ಸಂಪಾದನೆ ಒಂದೇ ಜೀವನದ (ಪುಸ್ತಕೋದ್ಯಮದ) ಗುರಿಯಾಗಿದೆ. ಹೇಗಾದರೂ ಏನಾದರೂ ಮಾಡಿ ಹಣ ಸಂಪಾದಿಸಿ ಬಿಡಿ. ಮತ್ತೇನೂ ಬೇಕಾಗಿಲ್ಲ. ಮತ್ತೆ ನಾವೇ ಭೂಪತಿಗಳು.

  ಕ್ಷಮಿಸಿರಿ, ಬೇಡವಾದುದನ್ನ ಬರೆದುಬಿಟ್ಟೆ. ವಂದನೆಗಳು
  ಶ್ರೀಮಿತ್ತೂರು

  ReplyDelete
 53. Shashidhara Halady06 November, 2010 11:44

  ಪುಸ್ತಕ ಪ್ರಕಾಶನವನ್ನು ತಾವು ಮುಚ್ಚುತ್ತಿರುವುದು ತುಂಬಾ ಬೇಸರದ ಸಂಗತಿ. ಸಗಟು ಖರೀದಿಗೆ ತಾವು ಒಡ್ಡಿಕೊಳ್ಳದಿರುವುದು, ಮಾರಾಟ ಮೇಳಗಳಲ್ಲಿ ಭಾಗವಹಿಸದಿರುವುದು, ಮುಖಪುಟ ಸರಳವಾಗಿರಿಸಿ ಮುದ್ರಿಸುವುದು ಇವೇ ಮೊದಲಾದ ನಿಮ್ಮ "ಚಾಳಿ"ಗಳು ೨೧ನೆಯ ಶತಮಾನದಲ್ಲಿ ಅಚ್ಚರಿಯಾಗಿ ಕಾಣುತ್ತವೆ. ೨೦ ನೆಯ ಶತಮಾನದ ಕತೆಗಳನ್ನು ನಾವು ನೆನಪಿಸಿಕೊಳ್ಳುವ ಸಮಯ ಬಂದಾಗ, ಅತ್ರಿ ಅನುಸರಿಸಿದ ಇಂತಹ ವಿಶಿಷ್ಟ ಪದ್ದತಿಗಳನ್ನೂ ನೆನಪಿಸಿಕೊಳ್ಳಬಹುದು. ಪುಸ್ತಕ ಪ್ರಕಾಶಕರಾದ ತಾವು ತಮ್ಮ ಪುಸ್ತಕಗಳನ್ನು ದುಡ್ಡು ಕೊಟ್ಟು ಕೊಳ್ಳುತ್ತೇವೆಂದ ತಮ್ಮ ಗೆಳೆಯರಿಗೂ (ನೆಲಮನೆ ದೇವೇಗೌಡರಿಗೆ) ಸಗಟು ರೂಪದಲ್ಲಿ ಮಾರಾಟವನ್ನು ಮಾಡದಿರುವುದಂತೂ ವಿಸ್ಮಯವನ್ನು ಮೂಡಿಸಿತು - ಅಧಿಕಾರದಲ್ಲಿದ್ದ ಗೆಳೆಯನ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡನೆಂದು "ಇತರರು" ತಿಳಿದುಕೊಂಡಾರೆಂಬ ಅಪವಾದ ಬರಬಾರದೆಂದು! ಸರ್. ಎಂ.ವಿ.ಯವರು ದಿವಾನರಾದಾಗ, ಬಂಧುಗಳನ್ನು ಔತಣಕೂಟಕ್ಕೆ ಕರೆದು, " ನೀವು ವಶೀಲಿ ಮಾಡಲು ಮತ್ತು ಯಾವುದೇಸಹಾಯ ಪಡೆಯಲು ನನ್ನ ಬಳಿ ಬರುವುದಿಲ್ಲ ಎಂದು ಪ್ರಮಾಣ ಮಾಡಿದರೆ ಮಾತ್ರ ದಿವಾನಗಿರಿಯನ್ನು ಒಪ್ಪಿಕೊಳ್ಳುವೆ" ಎಂದು ಆ ದುಖತಪ್ತ ಬಂಧುಗಳಿಂದ ಪ್ರಮಾಣ ಮಾಡಿಸಿಕೊಂಡ ಪ್ರಸಂಗ ಯಾಕೊ ಇಲ್ಲಿ ನೆನಪಾಯ್ತು! ಮತ್ತೆ, ನಿಮ್ಮ ಪ್ರಕಾಶನ ಮುಚ್ಚಿದ್ದು, ಕನ್ನಡ ಪುಸ್ತಕ ಪ್ರಕಾಶನದ ಮುಂದಿನ ದಿನಗಳ ಭವಿಷ್ಯ ಹೇಳುತ್ತಿರುವಂತಿದೆ - ಅದೇನಿದ್ದರೂ, ನಿಮ್ಮ ಅಂಗಡಿಯಂತೂ ಇನ್ನೂಸಾಕಷ್ಟು ದಿನ ಇದ್ದೇ ಇರುತ್ತದಲ್ಲ , ಅದೇ ಒಂದು ಸಮಾಧಾನ! - ಶಶಿಧರ ಹಾಲಾಡಿ.

  ReplyDelete