21 June 2010

ಯಕ್ಷಗಾನ ವಿಮರ್ಶೆಗಾಗಿ ದಾಕ್ಷಿಣ್ಯಬಿಟ್ಟವರು

“ಪ್ರದರ್ಶನದಲ್ಲಿ ಏನಾದರೂ ಹುರುಳುಂಟೇ ಅಥವಾ ಇದು ಕೇವಲ ನನ್ನೊಬ್ಬನ ಹಳವಂಡವೋ?” ಇದು ತನ್ನ ದೀವಟಿಗೆ ಪ್ರದರ್ಶನದ ಬೆನ್ನಲ್ಲಿ ಸದಾ ರಾಘವ ನಂಬಿಯಾರರು ಕೇಳುತ್ತಿದ್ದ ಪ್ರಶ್ನೆ. ಮನೋಹರ ಉಪಾಧ್ಯರ ಸೂಚನೆಯೊಂದಿಗೆ ನಾವು ಎರಡು ದೀವಟಿಗೆ ಪ್ರಯೋಗಗಳನ್ನು ವಿಡಿಯೋ ದಾಖಲೀಕರಣಕ್ಕಾಗಿಯೇ ಆಡಿಸಿ, ಮಾಡಿಸಿದ ಮೇಲೂ ಉಳಿದದ್ದು ಅದೇ ಪ್ರಶ್ನೆ “ದಾಖಲೀಕರಣದಲ್ಲಿ (ದೀವಟಿಗೆ ಪ್ರದರ್ಶನದಲ್ಲಿ) ಏನಾದರೂ ಹುರುಳುಂಟೇ ಅಥವಾ ಕೇವಲ ನಮ್ಮ ಶ್ರೇಷ್ಠತೆಯ ವ್ಯಸನವೇ?” ಪ್ರದರ್ಶನದಂದೇ ಕಲಾವಿದ ಗೋವಿಂದ ಭಟ್ಟರು ಪರೋಕ್ಷವಾಗಿ ಇಂಥ ಪ್ರಯತ್ನಗಳನ್ನೇ ಗೇಲಿಮಾಡಿದ್ದು ವಿಡಿಯೋ ದಾಖಲೆಯಲ್ಲೇ ನೀವು ಗಮನಿಸಬಹುದು. ಅದೇ ಗೋವಿಂದ ಭಟ್ಟರು ವಿಡಿಯೋ ಪ್ರಕಟವಾದ ಕೆಲವು ವಾರಗಳ ಮೇಲೆ ಹೀಗೇ ಅಂಗಡಿಗೆ ಬಂದವರನ್ನು ನಾನು ಎರಡೂ ವಿಡಿಯೋ ನೋಡಿದಿರಾ? ಹೇಗಾಯ್ತು ಎಂದು ಕುರಿತು ವಿಚಾರಿಸಿದೆ. “ಬಡಗಿನದ್ದು ನೋಡಿದೆ, ಒಳ್ಳೇದಾಗಿದೆ. ತೆಂಕು ಇನ್ನೂ ನೋಡಿಲ್ಲ. ಪ್ರದರ್ಶನ ಕಳೆಗಟ್ಟಿರಲಾರದು. ನಮ್ಮಲ್ಲಿ (ತೆಂಕುತಿಟ್ಟಿನಲ್ಲಿ) ತಂಡವಾಗಿ ಹೊಂದಿಕೊಂಡು ಹೋಗುವುದಿಲ್ಲ, ಎಲ್ಲರೂ ಬುದ್ಧಿವಂತರೇ” ಎಂದು ಹೇಳಿ, ಅವರ  ಗುಟ್ಟುಬಿಡದ ತೆಳು ನಗೆಯೊಡನೆ ಜಾರಿದರು!

ನಂಬಿಯಾರರು ದೀವಟಿಗೆ ಪ್ರದರ್ಶನ ಪೂರ್ವದಲ್ಲಿ ಆಹಾರ್ಯ ಅರ್ಥಾತ್ ಪಾತ್ರಗಳ ಬಣ್ಣ, ಬಟ್ಟೆ, ಆಭರಣಗಳ ಬಗ್ಗೆ, ರಂಗಚಲನೆ ಅರ್ಥಾತ್ ಬೆಳಕಿನ ಮೂಲವನ್ನನುಸರಿಸಿ ಪ್ರೇಕ್ಷಕನಿಗೊದಗುವ ನೆರಳು ಬೆಳಕಿನಾಟದ ಬಗ್ಗೆ, ಶ್ರವಣಸುಖದ ಬಗ್ಗೆ ವರ್ಷಗಟ್ಟಳೆ ತಾವು ಸಂಶೋಧಿಸಿ ಕಂಡುಕೊಂಡ ಸತ್ಯಗಳನ್ನು ರೂಢಿಸಲು ತುಂಬಾ ಶ್ರಮಿಸುತ್ತಿದ್ದರು. ಅಸಂಖ್ಯ ಅಭ್ಯಾಸಗಳನ್ನು ನಡೆಸಿಯೂ ಸಾರ್ವಜನಿಕ ಪ್ರದರ್ಶನದಲ್ಲಿ ಉದ್ದಕ್ಕೂ ವೀಕ್ಷಕರ ಏಕಾಗ್ರತೆಯನ್ನು ಹಾಳುಮಾಡದ ಎಚ್ಚರದೊಡನೆ (ಕೈಯಲ್ಲಿ ಬಾರುಕೋಲು ಹಿಡಿದ ಅಪ್ಪಟ ಶಾಲಾಮಾಸ್ತರನಂತೆ) ಪಾತ್ರಧಾರಿಗಳನ್ನು ಎಚ್ಚರಿಸುತ್ತಲೇ ಇರುತ್ತಾರೆ. (ರಂಗದ ನಡುವೆ ವ್ಯವಹರಿಸುವ ಪಾತ್ರಕ್ಕೆ ತನ್ನ ನೆರಳು ಬೀಳಿಸುತ್ತಿದ್ದ ಇತರ ಪಾತ್ರಗಳನ್ನು ಎಷ್ಟೋ ಬಾರಿ ಹಿಂದಿನಿಂದ ಎಳೆದೋ ನೂಕಿಯೋ ಇವರು ಸರಿಪಡಿಸುತ್ತಿದ್ದದ್ದೂ ನಾನು ಗಮನಿಸಿದ್ದೇನೆ. ಕೊಣಾಜೆಯ ಪ್ರದರ್ಶನದಲ್ಲಿ ಈ ಕೆಲಸದಲ್ಲಿ ಹಿರಿಯಡಕ ಗೋಪಾಲರಾಯರೂ ಸ್ವಯಂಪ್ರೇರಿತವಾಗಿ ತೊಡಗಿದ್ದನ್ನು ಕಂಡಿದ್ದೇನೆ!) ಈ ನಿಟ್ಟಿನಲ್ಲಿ ನಮ್ಮ ಪ್ರಯೋಗಗಳ ಯಶಸ್ಸಿಗೆ ಗುರು ಸಂಜೀವರೂ ‘ಸಂಯೋಜಕ’ ಪೃಥ್ವೀರಾಜರೂ ಸಾಕಷ್ಟು ಹೆಣಗಿದ್ದಾರೆ. ಆದರೂ...

ಮೊದಲು ನನ್ನದೇ ಎರಡು ಮಾತು. ಮಳೆಗಾಲ ಮುಗಿದ ಹೊಸತರಲ್ಲಿ, ಮೇಳಗಳು ತಿರುಗಾಟ ಸುರುಮಾಡುವ ಮೊದಲೇ ಇದಾಗಬೇಕೆಂದು ಉಪಾಧ್ಯರು ಮತ್ತು ನಾನು ಸಂಕಲ್ಪಿಸಿದ್ದೆವು, ಸ್ಪಷ್ಟ ಸೂಚನೆಯನ್ನೂ ಕೊಟ್ಟಿದ್ದೆವು. ಆದರೆ ದಿನ ಇನ್ನೂ ಸಾಕಷ್ಟು ಇರುವಂತೆ ಕೇಂದ್ರದ ತಂಡಕ್ಕೆ ಕೋಲ್ಕತ್ತಾದಲ್ಲಿ ಒಂದು ಅಂತಾರಾಷ್ಟ್ರೀಯ ಪ್ರದರ್ಶನ ಮೇಳದಲ್ಲಿ ಭಾಗವಹಿಸಲು ಕರೆ ಬಂತು. ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ಟರು “ಕೊಟ್ಟ ಮಾತನು ತಪ್ಪಲಾರೆನು” ಎಂದರು. ಆದರೆ ಕೇಂದ್ರಕ್ಕೆ ಅರ್ಹತೆಯಿಂದ ಒದಗಿದ ಈ ಗೌರವ ಬಿಡಬೇಡಿ ಎಂದು ಅವರನ್ನೊಪ್ಪಿಸಿ, ನಮ್ಮ ಪ್ರದರ್ಶನವನ್ನು ತಿರುಗಾಟದ ಋತುವಿನಲ್ಲೇ ನಡೆಸುವ ಅನಿವಾರ್ಯತೆ ಬಂತು.

ಯಕ್ಷಗಾನ ಕೇಂದ್ರದ ತಂಡ (ಬಡಗುತಿಟ್ಟು) ಒಂದೇ ಮತ್ತು ನಿರಂತರ ಸಾಂಪ್ರದಾಯಿಕ ಪ್ರದರ್ಶನಗಳನ್ನು ಕೊಡುವಲ್ಲೇ ತೊಡಗಿಕೊಳ್ಳುವುದಾದ್ದರಿಂದ ‘ದೀವಟಿಗೆಗೆ ಅಭ್ಯಾಸ ಶಿಬಿರ’ ಎಂಬ ವಿಶೇಷ ವ್ಯವಸ್ಥೆ ಬೇಕಿರಲಿಲ್ಲ. ಆದರೂ ಗುರು ಸಂಜೀವರು ಹೇಳಿದಂತೆ ಇದೇ ಪ್ರಸಂಗವನ್ನಿಟ್ಟುಕೊಂಡು ಕೇಂದ್ರದಲ್ಲೇ ಕೆಲವು ಅಭ್ಯಾಸ ನಡೆಸಿಯೇ ಬಂದಿದ್ದರು. ಸಾಲದ್ದಕ್ಕೆ ನಮ್ಮ ನಿರೀಕ್ಷೆಯಂತೆ (ಸೂಚನೆ, ಆದೇಶಗಳಲ್ಲ) ಸ್ವತಃ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಿದ್ದ ಸಂಜೀವರು ಪ್ರದರ್ಶನದಂದು ಕೇವಲ ಪೂರ್ವರಂಗದಲ್ಲಿ ಸಣ್ಣ ಕೆಲಸ ಮಾಡಿ ಉಳಿದಂತೆ ಪೂರ್ಣ ನೇಪಥ್ಯ ನಿರ್ದೇಶನಕ್ಕೆ ನಿಂತುಕೊಂಡಿದ್ದರು. ಅವರು ಸ್ಪಷ್ಟ ಮಾತಿನಲ್ಲಿ, ಉಳಿದಂತೆ ಇಡಿಯ ತಂಡ ತನ್ನ ಕೃತಿಯಲ್ಲಿ ತೋರಿದ್ದಿಷ್ಟು ‘ಕಲೆಯ ಉಳಿವು, ಉತ್ತಮಿಕೆಗಾಗಿ ನಡೆಯುತ್ತಿರುವ ಈ ಕೆಲಸಕ್ಕೆ ನಾವು (ಕಲಾವಿದರು) ಎಷ್ಟು ಕೃತಜ್ಞರಾಗಿದ್ದರೂ ಸಾಲದು.’

ತೀರಾ ವಿಷಾದಪೂರ್ವಕವಾಗಿ ದಾಖಲಿಸುತ್ತಿದ್ದೇನೆ, ತೆಂಕುತಿಟ್ಟಿನದು ಹಾಗಾಗಲಿಲ್ಲ. ವಾಸ್ತವದಲ್ಲಿ ಪ್ರದರ್ಶನದ ನಿರ್ದೇಶಕ ಪೃಥ್ವಿರಾಜ ಕವತ್ತಾರು. ಆದರೆ ಅವರ ಎಳೆಹರಯ ಅದಕ್ಕೂ ಮಿಗಿಲಾಗಿ ಸಹಜ ಸಂಕೋಚ ಮತ್ತು ವಿನಯದಿಂದ ಮೊದಲು ತನ್ನ ಕೈಯನ್ನೇ ಕಟ್ಟಿಕೊಂಡರು. ಮುಂದುವರಿದು, ಕೊರತೆಗಳೇನಿದ್ದರೂ ತನ್ನದು. ದಾಖಲೆಯಲ್ಲಿ ನಿರ್ದೇಶಕನೆಂದು ಕಾಣಿಸುವಲ್ಲಿ ಮತ್ತು ಪ್ರದರ್ಶನದ ಒಳ್ಳೆಯದಕ್ಕೆಲ್ಲ ಬಲಿಪ ಭಾಗವತರನ್ನೇ ಹೆಸರಿಸತಕ್ಕದ್ದು ಎಂದೂ ನಮ್ಮಲ್ಲಿ ಕರಾರು ಹಾಕಿಯೇ ಬಂದಿದ್ದರು! ಅವರು ಹರಿಸಿದ ಬೆವರು, ಮಾಡಿದ ಖರ್ಚು (ಗೌರವಧನ ಬಿಡಿ, ಕನಿಷ್ಠ ತನ್ನ ಖರ್ಚಿಗೂ ಒಂದು ಪೈಸೆ ತೆಗೆದುಕೊಳ್ಳಲಿಲ್ಲ!) ಎಲ್ಲಕ್ಕೂ ಮಿಗಿಲಾಗಿ ವಹಿಸಿಕೊಂಡ ಜವಾಬ್ದಾರಿಗೆ ಕಲಾವಿದರ ಸ್ಪಂದನ ತೀರಾ ಕಡಿಮೆ ಎಂದೇ ನನಗನ್ನಿಸಿತು. ಮೇಳದ ನಿಗದಿತ ಆದಾಯ ಮೀರಿ ದಕ್ಕುವ ಇನ್ನೊಂದು ಆದಾಯದ ಮಟ್ಟದಲ್ಲೇ ಪ್ರದರ್ಶನವನ್ನು ನಿರ್ವಹಿಸಿದರು. ವಿಶೇಷ ವಿಡಿಯೋ ದಾಖಲೀಕರಣದ ಅಗತ್ಯಗಳಿಗೆ ಹೊಂದಿಕೊಳ್ಳಲಾದರೂ ‘ಮಧ್ಯಾಹ್ನ ಊಟಕ್ಕೇ ನಮ್ಮಲ್ಲಿಗೆ ಬನ್ನಿ’ ಎಂದು ನಾವು ಮನವಿ ಮಾಡಿಕೊಂಡಿದ್ದೆವು. ಸಂಜೆ ಕತ್ತಲಾವರಿಸಿದ ಕೂಡಲೇ ಯಾವ ಔಪಚಾರಿಕತೆಗಳು ಇಲ್ಲದೆ ಪ್ರದರ್ಶನ ಶುರು ಎಂದೂ ನಾವು ಸ್ಪಷ್ಟಪಡಿಸಿದ್ದೆವು. ಆದರೂ ಕೆಲವು ಕಲಾವಿದರು ಅವಸರವಸರವಾಗಿ ಬಣ್ಣಕ್ಕೆ ಕೂರುವ ವೇಳೆಗಷ್ಟೇ ಬಂದರು, ಮಾಡಿದರು, ಹೋದರು!

ವ್ಯಾವಸಾಯಿಕ ಮೇಳಗಳಿಗೆ ರೂಢಿಯಲ್ಲಿ ವಿಭಿನ್ನ ಶೈಲಿಗಳಿವೆ, ಶೈಥಿಲ್ಯಗಳೂ ನುಸುಳಿರುತ್ತವೆ. ನಮ್ಮ ಪ್ರಯೋಗಕ್ಕಾಗುವಾಗ ವಿವಿಧ ಮೇಳಗಳಿಂದ ಆರಿಸಿ ಬಂದವರಿಗೆ ಕನಿಷ್ಠ ಎರಡೂ ಮೂರಾದರೂ ಅಭ್ಯಾಸ ಶಿಬಿರ ನಡೆಯಬೇಕಿತ್ತು. ಹಿಂದಿನ ರಾತ್ರಿಯ ನಿದ್ರೆ ಮುಗಿಸಿ, ವಿವಿಧ ದೂರಗಳಿಂದ ಬಂದು ಕಿನ್ನಿಗೋಳಿಯಲ್ಲಿ ಒಂದು ಅಭ್ಯಾಸವನ್ನಷ್ಟೇ ನಡೆಸಲು ಸಾಧ್ಯವಾದದ್ದು ಕೊರತೆಯೇ. ಅದನ್ನೂ ಮೀರಿದ ಕೊರತೆ - ಒಟ್ಟು ಕಲಾಪದ ಮೌಲ್ಯವನ್ನು, ಉದಾತ್ತತೆಯನ್ನು ಅರ್ಥಮಾಡಿಕೊಂಡು ಒಂದು ಉತ್ತಮ ಸಾಂಘಿಕ ಪ್ರದರ್ಶನ ಕೊಡಲಿಲ್ಲ.

ತೆಂಕಿನ ಆಯ್ದ ಕಲಾವಿದರನ್ನು ತಂಡಕ್ಕೆ ಛಾಯಾಚಿತ್ರಗ್ರಾಹಿ, ಸಣ್ಣಮಟ್ಟದ ವೇಷ ಹಾಗೂ ಅರ್ಥದಾರಿ ಎಲ್ಲಕ್ಕೂ ಮುಖ್ಯವಾಗಿ ಯಕ್ಷಗಾನದ ವೈಚಾರಿಕ ಬೆಳವಣಿಗೆಯನ್ನು ಗೀಳಾಗಿಸಿಕೊಂಡ ಮನೋಹರ ಕುಂದರ್ ಹಿಂದಿನ ನಮ್ಮ ಎಲ್ಲಾ ಪ್ರಯೋಗಗಳಿಗೂ ಬಂದಂತೆ ದಾಖಲೀಕರಣದಂದು ಹಾಜರಿದ್ದರು. ಅವರಿಗೆ ಬಹಳ ನೋವು ತಂದ ಅಂಶ ದೀವಟಿಗೆಯ ಮಂದ ಬೆಳಕಿನ ಪ್ರದರ್ಶನವೆಂದು ಗೊತ್ತಿದ್ದೂ ರಾಮ ಪಾತ್ರಧಾರಿ ಪ್ರಖರ ಬೆಳಕಿಗೊಪ್ಪುವ ನೀಲವರ್ಣನಾದದ್ದು. ಪ್ರದರ್ಶನದಂದು ಅನ್ಯಕಾರ್ಯನಿಮಿತ್ತ ಬರಲಾಗದ ನಂಬಿಯಾರ್ ಅಂತೂ ವಿಡಿಯೋ ನೋಡಿ ಕೋಪಾವಿಷ್ಟರಾಗಿ “ನನ್ನ ಪ್ರದರ್ಶನವಾಗಿದ್ದರೆ ನಾನು ಆ ವೇಷಕ್ಕೆ ರಂಗಪ್ರವೇಶ ಕೊಡುತ್ತಲೇ ಇರಲಿಲ್ಲ” ಎಂದರು!

ಶ್ರೀರಾಮನ ಒಡ್ಡೋಲಗ ನಡೆಯಬೇಕಾದಲ್ಲಿ ಲಕ್ಷ್ಮಣನ ಕ್ರಿಯೆ ರಂಗ ತುಂಬಿದ್ದನ್ನು ಅನೇಕರು ಆಕ್ಷೇಪಿಸಿದರು. ಇಲ್ಲಿ ಸಾಂಪ್ರದಾಯಿಕತೆಯನ್ನೇ  ದಾಖಲೀಕರಣಕ್ಕೆ ಒಳಪಡಿಸುತ್ತಿರುವುದು ಎಂಬ ಪೂರ್ಣ ಅರಿವಿದ್ದೂ ವಿಕ್ಷಿಪ್ತ ಪ್ರಯೋಗವಷ್ಟೇ ಆಗಬಹುದಾದ್ದನ್ನು ಬಲಿಪರಾದರೂ ಹೇಗೆ ಒಪ್ಪಿಕೊಂಡರೆಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದರು.

ಹಾಸ್ಯಕ್ಕಿದ್ದ ಒಳ್ಳೆಯ ಒಂದೇ ಅವಕಾಶ - ಕುಂಭಕರ್ಣನನ್ನು ನಿದ್ದೆಯಿಂದೆಬ್ಬಿಸುವ ಸನ್ನಿವೇಶ. ಇದನ್ನು ಸಂದಶಕ್ತಿಗೆ (spent force) ವಹಿಸಿದ್ದು ತೀರಾ ನಿರಾಶಾದಾಯಕವಾಯ್ತು ಎಂದು ಅನೇಕ ಗೊಣಗುಗಳು ಕೇಳಿದ್ದೇನೆ. ಉಳಿದಿರುವ (ಎಲ್ಲ ಎಪ್ಪತ್ತರ ಮೇಲಿನ ಪ್ರಾಯದವರು) ಕರ್ಕಿಶೈಲಿಯ ದಾಖಲೀಕರಣ, ಇಂದಿನ ಮಹಾಬಲ ಹೆಗಡೆ ಎಂದೆಲ್ಲಾ ವ್ಯಕ್ತಿ ಕೇಂದ್ರಿತ ದಾಖಲೀಕರಣಗಳನ್ನು ನಾವು ನೋಡಿದ್ದೇವೆ. ಹಾಗೆ ಇದು ವ್ಯಕ್ತಿ ಕೇಂದ್ರಿತ ಅಲ್ಲ- ಕಲಾಕೇಂದ್ರಿತ. ಹಾಸ್ಯ ಕಲಾವಿದನ ಆಯ್ಕೆ ಪ್ರದರ್ಶನದ ಉತ್ತಮಿಕೆಗೆ ಪೂರಕವಾಗಿರಬೇಕಿತ್ತು. ಸರಳ ರಂಗಚಲನೆಯೂ ಅಸಾಧ್ಯವಾದ ಪ್ರಾಯದ ಕಲಾವಿದನ ನಿರ್ವಹಣೆ ಕರುಣಾಜನಕವಾಗಿತ್ತು. ಯಾರೂ ತಪ್ಪು ತಿಳಿಯಬಾರದು ಎಂದು ಒಂದು ಸ್ಪಷ್ಟನೆ. ಈ ಪ್ರದರ್ಶನ ಅವರ ಗತವೈಭವಕ್ಕೋ ಹಿರಿತನಕ್ಕೋ ಗೌರವ ಕೊಡುವ ಉದ್ದೇಶದ್ದಲ್ಲ ಎಂದಷ್ಟೇ ಅರ್ಥ.

“ದೀವಟಿಗೆ ಪ್ರದರ್ಶನದ ಚೌಕಿಗೂ ದೀವಟಿಗೆಯನ್ನೇ ಒದಗಿಸಬೇಕಿತ್ತು” ಎಂದರೊಬ್ಬರು. ಏರು ತಗ್ಗಿನ ಸೀಮಿತ ಹರಹಿನಲ್ಲಿ, ಮಳೆಗಾಳಿ ಕಾಡುವ ನಿರೀಕ್ಷೆಯಲ್ಲಿ ಚೌಕಿಗೆ ನಾವು ಪೂರ್ತಿ ಜ಼ಿಂಕ್ ಶೀಟಿನ ಮಾಡು ಕಟ್ಟಿಸಿದ್ದೆವು. ಅದರೊಳಗೆ ಎರಡು ತಿಟ್ಟುಗಳ ಸಾಮಾನು ಸರಂಜಾಮು ಹರಡಿಕೊಂಡು ಪ್ರದರ್ಶನಕ್ಕೆ ಸಜ್ಜಾಗುವ ಸನ್ನಿವೇಶದಲ್ಲಿ ಮತ್ತು ಪೂರ್ಣ ತತ್ಕಾಲೀನ ವ್ಯವಸ್ಥೆಯಲ್ಲಿ ಎಣ್ಣೆ ದೀಪಗಳನ್ನು ಒದಗಿಸುವುದು ನಮಗೆ ಅಪ್ರಾಯೋಗಿಕವಾಗಿಯೇ ಕಂಡಿತು. ಮತ್ತದರ ಮೇಲೆ ಒದಗಿಸಿದ ವಿದ್ಯುತ್ ದೀಪವಾದರೂ ಮಾಮೂಲೀ ಚೌಕಿಗಳಂತೆ ಐನೂರೋ ಸಾವಿರ ವಾಟಿನದಾಗಿರಲಿಲ್ಲ- ಮಂದಪ್ರಕಾಶವನ್ನಷ್ಟೇ ಕೊಡುತ್ತಿದ್ದ ಅರವತ್ತು ವಾಟಿನದು ಎಂಬುದನ್ನು ಸಹೃದಯರು ಗಮನಿಸಬೇಕು.

ರಂಗಸಜ್ಜಿಕೆಯಿಂದ ಹಿಡಿದು ಪ್ರಕಟಗೊಂಡ ಡೀವೀಡೀಯನ್ನು ವೀಕ್ಷಿಸುವವರೆಗೆ ನಮಗೆ ಜೊತೆಗೊಟ್ಟ ಆತ್ಮೀಯ ಸದಾಶಿವ ಮಾಷ್ಟ್ರು (ಔಪಚಾರಿಕವಾಗಿ ಕುಂಬಳೆ ಸದಾಶಿವರು) ಸ್ವಪ್ರೇರಣೆಯಿಂದ ಪತ್ರಿಕಾ ಪ್ರಕಟಣೆಗೊಂದು ಲೇಖನವನ್ನೇ ಬರೆದಿದ್ದರು. ಅದು ಪ್ರಕಟವಾಗಬಹುದಾದ ದಿನಗಳು ಮುಗಿದಂತನ್ನಿಸಿ ಈಗ ನಮಗೇ ಕಳಿಸಿಕೊಟ್ಟಿದ್ದಾರೆ. ನಿಮ್ಮ ಒಳ್ಳೆಯ ಓದಿಗೆ, ಇನ್ನೂ ಆ ಡೀವೀಡಿಗಳನ್ನು ಕೊಂಡು ನೋಡಿರದಿದ್ದರೆ ಪ್ರೇರಣೆಗೆ, ಕೊನೆಯಲ್ಲಿ ನೋಡಿಯೂ ಇದುವರೆಗೆ ನಿಮ್ಮಭಿಪ್ರಾಯವನ್ನು ಹಂಚಿಕೊಳ್ಳದ ‘ಅಪರಾಧ ಪರಿಮಾರ್ಜನೆಗೆ’ ದಾರಿಯಾಗಲಿ ಎಂಬ ಹಾರೈಕೆಯೊಡನೆ...

ಎರಡು  ಅತ್ಯುತ್ತಮ ಯಕ್ಷಗಾನ ಡಿವಿಡಿಗಳು
ಲೇಖಕ: ಸದಾಶಿವ ಕುಂಬಳೆ


ನೂರಾರು ವರ್ಷಗಳ ಹಿಂದೆ ಯಕ್ಷಗಾನ ಬಯಲಾಟಗಳು ದೀವಟಿಗೆ ಬೆಳಕಿನಲ್ಲಿ ಪ್ರದರ್ಶಿಸಲ್ಪಡುತ್ತಿದ್ದುವು.  ಆ ಬಳಿಕ ಗ್ಯಾಸ್ ಲೈಟ್ ಬಂತು; ಮತ್ತೆ ವಿದ್ಯುದ್ದೀಪಗಳು ಬಂದ ಬಳಿಕ ಸೌಲಭ್ಯದ ಕಾರಣದಿಂದ ಅವೇ ಈಗ ಮುಂದುವರಿಯುತ್ತಿವೆ.  ಡಾ. ರಾಘವ ನಂಬಿಯಾರ್ ಮತ್ತು ಇನ್ನು ಕೆಲವರು ಯಕ್ಷಗಾನ ಪ್ರದರ್ಶನದಲ್ಲಿ ದೀವಟಿಗೆ ಬೆಳಕಿನ ಮಹತ್ವವನ್ನು ಮನಗಂಡು, ದೀವಟಿಗೆ ಬೆಳಕಿನಲ್ಲೇ ಯಕ್ಷಗಾನ ಬಯಲಾಟಗಳನ್ನು ಆಡಿಸುವ ಹಲವು ಪ್ರಯೋಗಗಳನ್ನು ನಡೆಸಿದರು. ದೀವಟಿಗೆಗಳ ಕಾಲದಲ್ಲಿ ರೂಪುಗೊಂಡ ಯಕ್ಷಗಾನ, ದೀವಟಿಗೆಗಳ ಮಂದ ಬೆಳಕಿನಲ್ಲಿ ತೋರುವ ಸೊಗಸನ್ನು ಆಧುನಿಕ ವಿದ್ಯುತ್ ಬೆಳಕಿನ ಅತಿಪ್ರಕಾಶದಲ್ಲಿ ಪ್ರಕಟಗೊಳಿಸಲು ಸಾಧ್ಯವೇ ಇಲ್ಲ, ಎಂಬ ಅಂಶವೇ ದೀವಟಿಗೆ ಬೆಳಕಿನ ಆಟಗಳ ಬಗ್ಗೆ ಇಂದು ಯೋಚಿಸುವಂತಾಗಲು ಕಾರಣ.  ಹಾಗೆಂದು ದೀವಟಿಗೆ ಬೆಳಕಿನ ಆಟಗಳನ್ನು ಸಂಯೋಜಿಸುವುದು, ಈ ಕಾಲದಲ್ಲಿ ಕಷ್ಟಸಾಧ್ಯವೇ. ಅಲ್ಲಲ್ಲಿ ಕೆಲವರು ಪ್ರಯೋಗದೃಷ್ಟಿಯಿಂದ ದೀವಟಿಗೆ ಆಟಗಳನ್ನು ಏರ್ಪಡಿಸಿದರೂ, ಬೇಕೆಂದಾಗ ಅವು ಎಲ್ಲಾ ಕಡೆ ನೋಡ ಸಿಗುವುದಿಲ್ಲ.

ಇದೀಗ ದೀವಟಿಗೆ ಬೆಳಕಿನ ಆಟದ ಒಂದು ಉತ್ತಮ ಡಿವಿಡಿ ನಿರ್ಮಾಣಗೊಂಡು, ಯಕ್ಷಗಾನ ಕಲಾರಸಿಕರಿಗೆ ಲಭ್ಯವಾಗಿರುವುದು ಒಂದು ಮಹತ್ವದ ವಿಷಯವಾಗಿದೆ.  ಈ ಡಿವಿಡಿ ಯನ್ನು ಅತ್ಯಂತ ಎಚ್ಚರಿಕೆಯಿಂದ ಗುಣಮಟ್ಟಕ್ಕೆ ಕೊರತೆಯಾಗದಂತೆ, ಸಾಕಷ್ಟು ಸಿದ್ಧತೆ ಹಾಗೂ ಪರಿಶ್ರಮಗಳಿಂದ ತಯಾರಿಸಲಾಗಿದೆ.  ವಾಸ್ತವದಲ್ಲಿ ಇಲ್ಲಿ ದೀವಟಿಗೆ ಆಟದ ಎರಡು ಡಿವಿಡಿಗಳಿದ್ದು ಒಂದು ಬಡಗು ತಿಟ್ಟಿನದು ಮತ್ತೊಂದು ತೆಂಕು ತಿಟ್ಟಿನದು.  ದೀವಟಿಗೆ ಆಟಗಳ ಕಾಲದಲ್ಲಿ ಯಕ್ಷಗಾನ ಹೇಗಿದ್ದಿರಬಹುದು, ಅದರ ಸೊಗಸು ಯಾವ ರೀತಿಯದ್ದು ಎಂದು ತಿಳಿದುಕೊಳ್ಳಲು, ಈ ಡಿವಿಡಿಗಳು ಒಂದು ಅಪೂರ್ವ ದಾಖಲೆಯೇ ಸರಿ.

ತೆಂಕು, ಬಡಗು ಎರಡೂ ಪ್ರಕಾರಗಳಲ್ಲಿ ಪ್ರಸಂಗ ಪ್ರಾರಂಭಕ್ಕೆ ಮೊದಲು ಪೂರ್ವರಂಗದ ಸ್ವಲ್ಪ ಭಾಗವನ್ನು ಇದರಲ್ಲಿ ಅಳವಡಿಸಲಾಗಿದೆ.  ಭಾಗವತರೂ, ಹಿಮ್ಮೇಳದವರೂ ದೀಪ ಸಹಿತ ರಂಗಸ್ಥಳಕ್ಕೆ ಬರುವ ದೃಶ್ಯ; ಆಟ ಮುಕ್ತಾಯಗೊಂಡ ಬಳಿಕ ‘ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೋ...’ ಪದ್ಯದ ಹಾಡುವಿಕೆಯೊಂದಿಗೆ ನಿರ್ಗಮಿಸುವ ದೃಶ್ಯಗಳು ಅತ್ಯಂತ ಮನೋಹರವಾಗಿ ಕಾಣಿಸುತ್ತವೆ.  ಬಡಗು ತಿಟ್ಟಿನ ‘ಹಿಡಿಂಬಾ ವಿವಾಹ’ (ಅರಗಿನ ಮನೆ) ಪ್ರಸಂಗದಲ್ಲಿ ಪಾಂಡವರ ಒಡ್ಡೋಲಗದ ದೃಶ್ಯ, ಕುಂತಿ ಸಹಿತ ಪಾಂಡವರು ವಾರಣಾವತಕ್ಕೆ ಹೋಗುವ ಪ್ರಯಾಣ ಕುಣಿತಗಳು ಅತ್ಯಂತ ಸೊಗಸಾಗಿವೆ.  ರಂಗಸ್ಥಳದ ಹಿಂಭಾಗದಲ್ಲಿ ಒಂದು ಪಕ್ಕಕ್ಕೆ ವ್ಯವಸ್ಥೆಗೊಳಿಸಿದ್ದ ಅರಗಿನ ಮನೆಗೆ ಬೆಂಕಿ ಹಿಡಿದಾಗ, ಅದರೊಳಗಿಂದ ಪಾಂಡವರು ಓಡಿ ಪಾರಾಗುವ ದೃಶ್ಯ ರಮ್ಯಾದ್ಭುತವಾಗಿ ಚಿತ್ರಣಗೊಂದಿದೆ.

ಸಾಮಾನ್ಯವಾಗಿ ಯಕ್ಷಗಾನ ಬಯಲಾಟಗಳಲ್ಲಿ ಅರಮನೆ, ಕಾಡು, ದೇವಲೋಕ, ಕೈಲಾಸ, ಯುದ್ಧರಂಗ ಮುಂತಾದ ದೃಶ್ಯಗಳನ್ನು ರಂಗಸ್ಥಳದಲ್ಲಿ ಸಾಂಕೇತಿಕವಾಗಿ ನಿರೂಪಿಸುವುದು ಕ್ರಮ.  ಆದರೆ ಬೆಂಕಿಯ ಬಳಕೆ ಇರುವ ಸಂದರ್ಭಗಳಲ್ಲಿ ಅದನ್ನು ವಾಸ್ತವ ರೂಪದಲ್ಲೇ ತೋರಿಸುವುದೇಕೆಂದು ಈ ದೃಶ್ಯ ನೋಡಿದಾಗ ಅರಿವಾಗುತ್ತದೆ.  ಲಂಕಾದಹನ ಪ್ರಸಂಗದಲ್ಲೂ ಬೆಂಕಿಯಿಂದ ಮನೆಗಳನ್ನು ಸುಡುವ ದೃಶ್ಯವನ್ನು ತೋರಿಸಲಾಗುತ್ತದೆ.  ಕಗ್ಗತ್ತಲ ಹಿನ್ನೆಲೆಯಲ್ಲಿ, ಬೆಂಕಿ ಹಿಡಿದು ಉರಿಯುತ್ತಿರುವ ಮನೆಯಿಂದ ಓಡುವ ಪಾಂಡವರನ್ನು (ಯಕ್ಷಗಾನದ ವೇಷಗಳನ್ನು) ನೋಡುವಾಗ, ಅರಗಿನ ಮನೆ ಕಥೆಯ ಇಡೀ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ಈ ಪ್ರಸಂಗದಲ್ಲಿ ಬರುವ ಹಿಡಿಂಬ, ಹಿಡಿಂಬೆ ಎರಡೂ ಬಣ್ಣದ ವೇಷಗಳು - ದೀವಟಿಗೆ ಬೆಳಕಿನಲ್ಲಿ ಮೆರೆಯುವುದನ್ನು ನೋಡಬೇಕಾದ್ದೆ.  ಆ ಪಾತ್ರಗಳ ವೇಷಭೂಷಣ, ಮುಖವರ್ಣಿಕೆಗಳು ದೀವಟಿಗೆಯ ಮಂದ ಬೆಳಕಿನಲ್ಲಿ ಬೀರುವ ಪರಿಣಾಮವೇ ಅತ್ಯಂತ ಬೆರಗಿನದ್ದು.  ಯಕ್ಷಗಾನದ ಬಣ್ಣಗಾರಿಕೆ, ವೇಷಭೂಷಣಗಳೆಲ್ಲಾ ದೀವಟಿಗೆ ಬೆಳಕಿನ ಪ್ರಮಾಣಕ್ಕೇ ವಿನ್ಯಾಸಗೊಂಡಿರುವುದನ್ನು ಈ ಡಿವಿಡಿ ನೋಡಿದಾಗ ಗುರುತಿಸಬಹುದಾಗಿದೆ.  ಈ ಪ್ರಸಂಗದಲ್ಲಿ ಕಲಾವಿದರೆಲ್ಲರೂ ಉತ್ತಮ ರೀತಿಯಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಿ ಪ್ರಸಂಗವನ್ನು ಯಶಸ್ವಿಗೊಳಿಸಿದ್ದಾರೆ.

ತೆಂಕು ತಿಟ್ಟಿನ ಡಿವಿಡಿಯಲ್ಲಿ ‘ಕುಂಭಕರ್ಣಕಾಳಗ’ ಪ್ರಸಂಗದ ಪ್ರದರ್ಶನವಿದ್ದು, ಬಲಿಪ ನಾರಾಯಣ ಭಾಗವತರ ನೇತೃತ್ವದಲ್ಲಿ ಹಿರಿಯ ಮತ್ತು ನುರಿತ ಕಲಾವಿದರು ಇದರಲ್ಲಿ ಪಾತ್ರ ವಹಿಸಿ ಪ್ರಸಂಗವನ್ನು ಯಶಸ್ವಿಗೊಳಿಸಿದ್ದಾರೆ. ಪೂರ್ವರಂಗದ ಭಾಗವನ್ನು ಅಗತ್ಯಕ್ಕೆ ತಕ್ಕಂತೆ ಮೊಟಕುಗೊಳಿಸಲಾಗಿದ್ದರೂ, ಇನ್ನೂ ಉತ್ತಮಪಡಿಸಲು ಅವಕಾಶವಿತ್ತು.  ರಾಮಲಕ್ಷ್ಮಣರ ಒಡ್ಡೋಲಗದ ದೃಶ್ಯ, ಹನುಮಂತನ ತೆರೆಪರ್ಪಾಟ, ರಾವಣನ ಶಿವಪೂಜೆ, ಕುಂಭಕರ್ಣನ ನಿದ್ರೆ, ಬಾರಣೆಯಂತಹ ಒಳ್ಳೆಯ ದೃಶ್ಯಗಳು ಈ ಭಾಗದಲ್ಲಿವೆ.  ಹೆಣ್ಣುಬಣ್ಣವಾಗಿ ಶೂರ್ಪನಖೆಯ ಪಾತ್ರವೂ ಈ ಪ್ರಸಂಗದಲ್ಲಿದ್ದು, ಎಲ್ಲಾ ವೇಷಗಳು ರಂಗಸ್ಥಳವನ್ನು ತುಂಬಿಕೊಳ್ಳುವ ರೀತಿಯೇ ಭವ್ಯವಾಗಿ ಕಾಣಿಸುತ್ತದೆ. ರಾವಣ, ಕುಂಭಕರ್ಣ, ಶೂರ್ಪನಖೆ, ಹನುಮಂತ, ಸುಗ್ರೀವ, ಜಾಂಬವ ಮುಂತಾದ ವೇಷಗಳು, ಅವುಗಳ ಮುಖವರ್ಣಿಕೆ - ದೀವಟಿಗೆ ಬೆಳಕಿನಲ್ಲಿ ನೀಡುವ ಪರಿಣಾಮ ನಿಜಕ್ಕೂ ಅದ್ಭುತ.

ದೀವಟಿಗೆ ಬೆಳಕಿನ ಈ ಎರಡೂ ಆಟಗಳಲ್ಲಿ ರಂಗಸ್ಥಳದ ಬಗ್ಗೆ ಹೇಳಲೇ ಬೇಕು.  ಅತ್ಯಂತ ಸರಳವಾಗಿ ನಾಲ್ಕು ಬಿದಿರ ಕಂಬಗಳನ್ನು ನೆಟ್ಟು, ಮೇಲೆ ಮಾವಿನ ಸೊಪ್ಪಿನ ತೋರಣ ಕಟ್ಟಿ ಸಿದ್ಧಗೊಂಡ ಈ ರಂಗಸ್ಥಳಕ್ಕೆ ದೀವಟಿಗೆ ಬೆಳಕನ್ನು ಮಾತ್ರ, ಸಂಪ್ರದಾಯದಂತೆ ಎಣ್ಣೆ ಬಳಸಿ ಉರಿಸುವ ಬದಲು, ಪೆಟ್ರೋಲಿಯಂ ಅನಿಲ ಬಳಸಿ ಉರಿಸಲಾಗಿತ್ತು.  ಎಣ್ಣೆ ದೀವಟಿಗೆಗಳಿಂದ ಹೊರಹೊಮ್ಮುವ ಕರಿಹೊಗೆಯ ಕಾಟವಾಗಲೀ, ಎಣ್ಣೆ ಹೊಯ್ಯುವವರ ಅಲೆದಾಟವಾಗಲೀ ಇಲ್ಲಿ ಇಲ್ಲದೆ ಇರುವುದು, ಅನಿಲ ದೀವಟಿಗೆಯ ಅತ್ಯಂತ ಧನಾತ್ಮಕ ಅಂಶ.  ಇವು ಅನಿಲ ದೀವಟಿಗೆಗಳೆಂದು ಭಾಸವಾಗದಂತೆ ಅವನ್ನು ರಂಗಸ್ಥಳದ ಪಾರ್ಶ್ವಗಳಲ್ಲಿ ಅಳವಡಿಸಿದ ರೀತಿ ಮತ್ತು ಅವು ಪ್ರಸಂಗದುದ್ದಕ್ಕೂ ಒಂದೇ ರೀತಿ ಉರಿಯುತ್ತಾ ಏಕಪ್ರಕಾರದ ಬೆಳಕಿನ ಪರಿಣಾಮವನ್ನು ಕಾಯ್ದುಕೊಂಡದ್ದು ಈ ವ್ಯವಸ್ಥೆಯ ಗಮನಾರ್ಹ ಅಂಶ.

ಯಕ್ಷಗಾನ ಪ್ರದರ್ಶನಕ್ಕೆ ಆಯ್ದುಕೊಂಡ ಜಾಗ ಕೂಡ ಇಲ್ಲಿ ಬಹಳ ಮುಖ್ಯ. ಅದು ರಸ್ತೆಯಿಂದ, ಊರಿನಿಂದ ಸಾಕಷ್ಟು ದೂರದಲ್ಲಿ ಇದ್ದು, ಮರಗಳಿಂದ ಸುತ್ತುವರಿದಿರುವ ಅರಣ್ಯದಂತಹ ಪ್ರದೇಶವಾಗಿತ್ತು. ಅಲ್ಲದೆ ಯಾವುದೇ ರೀತಿಯ ಬೆಳಕು ರಂಗಸ್ಥಳದ ಆಸುಪಾಸಿನಲ್ಲಿ ಇರದಂತೆ ನೋಡಿಕೊಳ್ಳಲಾಗಿತ್ತು. ಇದರಿಂದಾಗಿ ಸದಾ ಹೆಚ್ಚಿನ ಬೆಳಕಿಗೇ ರೂಢಿಗೊಂಡಿದ್ದ ಪ್ರೇಕ್ಷಕರ ಕಣ್ಣುಗಳು ಇಲ್ಲಿನ ಕಡಿಮೆ ಬೆಳಕಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವೂ ಆಗಿರಲಿಕ್ಕಿಲ್ಲ.

ರಂಗಸ್ಥಳದ ದೀವಟಿಗೆಯ ಮಂದಪ್ರಕಾಶದಲ್ಲಿ ಯಕ್ಷಗಾನದ ವೇಷಗಳು ಅತ್ಯಂತ ಮನೋಹರವಾಗಿ ಕಾಣಿಸಿಕೊಳ್ಳುವ ರೀತಿಯೇ ಈ ಡಿವಿಡಿಗಳಲ್ಲಿರುವ ವೈಶಿಷ್ಟ್ಯ.  ಸುತ್ತಲಿನ ಕಗ್ಗತ್ತಲ ಹಿನ್ನೆಲೆಯಲ್ಲಿ ದೀವಟಿಗೆಯ ಹಳದಿ ಹಾಗೂ ಮಂದವಾದ ಬೆಳಕಿನಲ್ಲಿ ಯಕ್ಷಗಾನದ ವೇಷಗಳು ಸೊಗಯಿಸುವುದನ್ನು ಕಾಣುವಾಗ, ಈಗಿನ ವಿದ್ಯುದ್ದೀಪಗಳ ಬೆಳಕಿನಲ್ಲಿ ನಡೆಯುವ ಆಟಗಳು ಪೇಲವವಾಗಿ ಕಾಣಿಸುತ್ತವೆ.  ಈಗಿನ ಆಟಗಳಲ್ಲಿ ರಂಗಸ್ಥಳಕ್ಕೆ ಗರಿಷ್ಠ ಪ್ರಮಾಣದ ಬೆಳಕು, ಗರಿಷ್ಠ ಧ್ವನಿವ್ಯವಸ್ಥೆ, ಗರಿಷ್ಠ ಅಲಂಕಾರಗಳನ್ನು ಮಾಡುವ ಗೀಳಿನಿಂದಾಗಿ, ಬಯಲಾಟಗಳು ಅದೆಷ್ಟು ಸೊರಗಿವೆ ಎಂಬುದನ್ನು ಈ ಡಿವಿಡಿಗಳನ್ನು ನೋಡಿದಾಗ ಅನಿಸುತ್ತದೆ.  ಯಕ್ಷಗಾನ ರಸಿಕರಿಗೆ ಒಳ್ಳೆಯ ಯಕ್ಷಗಾನವನ್ನು ತೋರಿಸುವ ಬದಲು, ಬೆಳಕು, ಧ್ವನಿ, ಅಲಂಕಾರಗಳ ಅತಿರೇಕದಲ್ಲಿ ಅವುಗಳನ್ನು ಕೆಡಿಸಿ ತೋರಿಸುವ ಪರಿಪಾಠವೇ ಎಲ್ಲೆಡೆ ನಡೆಯುತ್ತಿದೆ. ಹಾಗೆಂದು ದೀವಟಿಗೆ ಬೆಳಕಿನ ಆಟಗಳನ್ನೇ ಆಡಬೇಕೆಂಬುದು ಅಭಿಪ್ರಾಯವಲ್ಲ.  ಅನಿಲ ದೀವಟಿಗೆ ಬೆಳಕನ್ನು ನಿತ್ಯದ ಆಟಗಳಲ್ಲಿ ವ್ಯವಸ್ಥೆಗೊಳಿಸುವುದೂ ತ್ರಾಸದಾಯಕವೇ.  ಆದರೆ ಈ ದೀವಟಿಗೆಗಳು ಎಷ್ಟು ಪ್ರಮಾಣದ ಮತ್ತು ಯಾವ ಬಣ್ಣದ ಬೆಳಕನ್ನು ನೀಡುತ್ತವೋ, ಅಷ್ಟನ್ನು ಈಗಿನ ವಿದ್ಯುದ್ದೀಪಗಳನ್ನು ಬಳಸಿ ನೀಡಲು ಸಾಧ್ಯ.  ಯಕ್ಷಗಾನ ಕಲೆ ತನ್ನ ನಿಜವಾದ ಸೊಗಸಿನೊಂದಿಗೆ ಪ್ರಕಟವಾಗಬೇಕಾದರೆ, ಈ ದಾರಿಯಲ್ಲಿ ಮುಂದುವರಿಯಲೇಬೇಕು. ತೆಂಕು ಬಡಗಿನ ಈ ಎರಡೂ ಡಿವಿಡಿಗಳು ಈ ದಿಸೆಯಲ್ಲಿ ಮಾರ್ಗದರ್ಶಕವಾಗಬಲ್ಲುದು.

ಈ ಡಿವಿಡಿಗಳ ನಿರ್ಮಾಣಕ್ಕೆ ಕಾರಣರಾದವರನ್ನು ಉಲ್ಲೇಖಿಸಲೇಬೇಕು. ಬಡಗು ತಿಟ್ಟಿನ ಆಟದ ಹೊಣೆಯನ್ನು ಉಡುಪಿಯ ಯಕ್ಷಗಾನ ಕೇಂದ್ರದ ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರು ವಹಿಸಿದ್ದರೆ, ತೆಂಕುತಿಟ್ತಿಗೆ ಸಂಬಂಧಪಟ್ಟಂತೆ ಶ್ರೀ ಪೃಥ್ವೀರಾಜ ಕವತ್ತಾರು ಇವರು ವಹಿಸಿದ್ದರು.  ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಶ್ರೀ ಅಭಯಸಿಂಹ ಇವರು ಬಯಲಾಟಗಳ ದಾಖಲೀಕರಣ ನಡೆಸಿದ್ದಾರೆ.  ಸಾಮಾನ್ಯವಾಗಿ ಮೂರು ಕಡೆಗಳಲ್ಲಿ ಕ್ಯಾಮರಾಗಳನ್ನಿಟ್ಟು ಚಿತ್ರೀಕರಿಸುವ ರೀತಿಯನ್ನು ಬಿಟ್ಟು, ಎರಡು ಕ್ಯಾಮರಾಗಳನ್ನು ರಂಗಸ್ಥಳದ ಮುಂಭಾಗದಲ್ಲಿಟ್ಟು, ರಂಗಸ್ಥಳವು ಸಂಪೂರ್ಣವಾಗಿ ದೃಶ್ಯದಲ್ಲಿ ತುಂಬಿಕೊಳ್ಳುವಂತೆ ಅಳವಡಿಸಿದ್ದಾರೆ.  ದೃಶ್ಯಗಳನ್ನು ಸಮೀಪ ಯಾ ದೂರದಲ್ಲಿ ತೋರಿಸುವಾಗಲೂ ಅಷ್ಟೆ, ಅತ್ಯಂತ ಸಂಯಮದಿಂದ ದೃಶ್ಯಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಈ ಡಿವಿಡಿಗಳ ಮಾರಾಟದ ಹೊಣೆ ಮತ್ತು ಆದಾಯದ ಫಲಾನುಭವಿಗಳು ಉಡುಪಿಯ ಎರಡು ಪ್ರಮುಖ ಯಕ್ಷಗಾನ ಸಂಸ್ಥೆಗಳಾದ ಎಂಜಿಎಂ ಕಾಲೇಜಿನ ‘ಯಕ್ಷಗಾನ ಕೇಂದ’ ಮತ್ತು ‘ಯಕ್ಷಗಾನ ಕಲಾರಂಗ (ರಿ)’.  (ಎರಡೂವರೆ ಗಂಟೆಯ ಡೀವೀಡೀಯೊಂದಕ್ಕೆ ರೂ ಒಂದು ನೂರು ಮಾತ್ರ)

ಎರಡೂ ಡಿವಿಡಿಗಳಲ್ಲಿ ಪ್ರಸಂಗ ಮತ್ತು ಪೂರ್ವರಂಗ ಪ್ರಾರಂಭವಾಗುವ ಮೊದಲು ಡಿವಿಡಿ ನಿರ್ಮಾಣದ ಉದ್ದೇಶ, ಹಿನ್ನೆಲೆ, ಸಿದ್ಧತೆಗಳ ಬಗ್ಗೆ ಸ್ವಲ್ಪ ಮಾಹಿತಿ ನೀಡುವ ದೃಶ್ಯಗಳನ್ನು ಅಳವಡಿಸಲಾಗಿದ್ದು, ಹಿರಿಯ ಕಲಾವಿದರ, ವಿದ್ವಾಂಸರ ಸಂದರ್ಶನದ ತುಣುಕುಗಳೂ ಈ ಡಿವಿಡಿಗಳಲ್ಲಿವೆ.  ಪ್ರತಿಯೊಂದು ಡಿವಿಡಿಯೂ ಸುಮಾರು ಎರಡೂವರೆ ಗಂಟೆಯಷ್ಟು ದೀರ್ಘವಾಗಿರುವುದನ್ನು ಸಹಿಸಬಹುದಾದರೆ, ಈ ಡಿವಿಡಿಗಳು ಒಂದು ಅತ್ಯುತ್ತಮ ಕಲಾನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.

ಬಡಗುತಿಟ್ಟಿನ ಪೂರ್ವರಂಗದ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಬೇಕು. ಇದರಲ್ಲಿ ಕೋಡಂಗಿವೇಷ, ಬಾಲಗೋಪಾಲ, ಪೀಠಿಕೆ ಸ್ತ್ರೀ ವೇಷಗಳಲ್ಲದೆ ಸಂಜೀವ ಸುವರ್ಣರ ಪೀಠಿಕಾ ಹಾಸ್ಯವೇಷವೂ ಇದೆ. ಸಭಾವಂದನೆಯ ದೃಶ್ಯ ಮತ್ತು ಈ ಭಾಗದ ಒಟ್ಟು ಪ್ರದರ್ಶನ - ನಮ್ಮನ್ನು ಸುಮಾರು ನೂರು ವರ್ಷ ಹಿಂದಕ್ಕೊಯ್ಯುವ ರೀತಿಯಲ್ಲಿ ನಿರೂಪಿತವಾಗಿವೆ.  ಇಂತಹ ದೃಶ್ಯಗಳು ನೋಡಸಿಗುವುದೇ ಅಪರೂಪ.  ಯಕ್ಷಗಾನ ಕಲಾರಸಿಕರ ಸಂಗ್ರಹದಲ್ಲಿ ಇರಲೇಬೇಕಾದ ಎರಡು ಡಿವಿಡಿಗಳಿವು.

(ಕುಂಬಳೆ ಸದಾಶಿವರ ಲೇಖನ ಮುಗಿದುದು)

ಪೂರಕ ಓದಿಗೆ ಇಲ್ಲೇ ಯಕ್ಷಗಾನ ವರ್ಗೀಕರಣಕ್ಕೆ ಹೋದರೆ ಕ್ರಮವಾಗಿ - ದೀವಟಿಗೆಯ ಆಟಕ್ಕೆ ಕೇಳಿಹೊಡೆಯುತ್ತಾ, ದೀವಟಿಗೆಯಲ್ಲಿ ಸಭಾಕ್ಲಾಸ್, ದೀವಟಿಗೆ ಆಟವನು ಬಣ್ಣಿಪೆನು ಪೊಡಮಡುತ, ತೆರೆಮರೆಯ ಕುಣಿತ ಮತ್ತು ಯಕ್ಷದಾಖಲೀಕರಣದ ಫಲಶ್ರುತಿಗಳನ್ನು ಅವಶ್ಯ ಓದಬಹುದು. ಮತ್ತೆ ಈ ಮೊದಲೇ ಹೇಳಿದಂತೆ - ನೀವು ಇನ್ನೂ ಆ ಡೀವೀಡಿಗಳನ್ನು ಕೊಂಡು ನೋಡಿರದಿದ್ದರೆ ಬಡಗು ತಿಟ್ಟಿನದ್ದಕ್ಕೆ - ನಿರ್ದೇಶಕರು, ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜು, ಕುಂಜಿಬೆಟ್ಟು, ಉಡುಪಿ ೫೭೬೧೦೨ (email: mgmcollegeudupi@dataone.in) ಮತ್ತು ತೆಂಕು ತಿಟ್ಟಿನದ್ದಕ್ಕೆ  ಯಕ್ಷಗಾನ ಕಲಾರಂಗ, ಅದಮಾರು ಮಠದ ಓಣಿ, ಉಡುಪಿ ೫೭೬೧೦೧ (email: yakshaganakalaranga@rediffmail.com) ಸಂಪರ್ಕಿಸಿ. ಮತ್ತೆ ಕೊಂಡು ನೋಡಿಯೂ ಇದುವರೆಗೆ ನಿಮ್ಮಭಿಪ್ರಾಯವನ್ನು ಹಂಚಿಕೊಳ್ಳದಿದ್ದರೆ ಇನ್ನಾದರೂ ‘ಅಪರಾಧ ಪರಿಮಾರ್ಜನೆಗೆ’ ಕೆಳಗಿನ ಪ್ರತಿಕ್ರಿಯಾ ಅಂಕಣವನ್ನು ಧಾರಾಳ ಬಳಸಿಕೊಳ್ಳಿ.

21 comments:

 1. ಯಕ್ಷಗಾನದ ಕಟ್ಟಾ ಅಭಿಮಾನಿ ನಾನಲ್ಲ. ಎಂದೇ, ಆ ಕುರಿತು ಏನನ್ನೂ ಹೇಳುವುದಿಲ್ಲ. ಆದರೂ ಡಿ ವಿ ಡಿ ಮಾಡಲೋಸುಗ ಈ ವಿಷಿಷ್ಟ ಕಲೆಯನ್ನು ಬಳಸಿ ವಾಣಿಜ್ಯೀಕರಿಸುವುದು ಎಷ್ಟರ ಮಟ್ಟಿಗೆ ಸರಿ? ಮುಂದೊಂದು ದಿನ ಎಲ್ಲರೂ ಮನೆಯಲ್ಲಿಯೇ ಕುಳಿತು ಸಂಕ್ಷಿಪ್ತ ಯಕ್ಷಗಾನವನ್ನು ಕಿರುತೆರೆಯ ಮೇಲೆ ನೋಡುವಂತಾದರೆ?

  ReplyDelete
 2. ಎಂಥದೇ ಡಿವಿಡಿಗಳು ಬರಲಿ. ಆದರೆ ಯಕ್ಷಪ್ರೇಮಿಗಳು ಡಿವಿಡಿ ಮಾತ್ರ ನೋಡಿ ಆನಂದಿಸುವವರಲ್ಲ. ಎಲ್ಲಿ ಆಟ ಇದ್ದರೂ ಅದನ್ನು ಮುಖತಾ ನೋಡಿ ಆನಂದಿಸುವರು. ಯಕ್ಷಕಲೆಯ ಅಭಿಮಾನಿಗಳು ಅಂದರೆ ಆಟ ನೋಡಲು ಹೋಗುವವರು ಇದ್ದೇ ಇರುತ್ತಾರೆ. ಮಾವ ಹೇಳುತ್ತಿದ್ದರು. ಜೀವಂತ ಸಂಗೀತ ಕೇಳಲು ಹಿತವಾಗುವಷ್ಟು ಕ್ಯಾಸೆಟ್ನಲ್ಲಿ ಕೇಳಿದರೆ ಆಗುವುದಿಲ್ಲ. ಅದೇನಿದ್ದರೂ ಮೃತ ಸಂಗೀತ ಅಂತ. ಯಕ್ಷಗಾನಂ ಗೆಲ್ಗೆ.

  ReplyDelete
 3. ಅಶೋಕವರ್ಧನ21 June, 2010 14:21

  ನಾವು ಮಾಡಿದ್ದು ಈ ಕಾಲಘಟ್ಟದಲ್ಲಿ ಯಕ್ಷಗಾನದ ಸಾಂಪ್ರದಾಯಿಕ ರೂಪವನ್ನು ಎಷ್ಟರ ಮಟ್ಟಿಗೆ ಪುನರುಜ್ಜೀವಿಸಲು ಸಾಧ್ಯ ಎಂಬ ಪ್ರಯೋಗ-ಪ್ರದರ್ಶನದ ವಿಡಿಯೋ ದಾಖಲೀಕರಣ (Documentation). ಇದು ಐತಿಹಾಸಿಕ ಮಹತ್ವ ಮತ್ತು ಸಂಶೋಧನಾತ್ಮಕ ಪ್ರೇರಣೆ ಕೊಡುವಂತದ್ದೇ ಇರುತ್ತದೆ. ಗೋವಿಂದರಾಯರು ಸಣ್ಣದಾಗಿ ತಪ್ಪು ತಿಳಿದುಕೊಂಡಂತೆ ಜೀವಂತ ರಂಗಭೂಮಿಯನ್ನು ಡೀವೀಡಿಗಳಲ್ಲಿ ಶೀಥಲೀಕರಿಸುವ ಪ್ರಯತ್ನ ಅಲ್ಲ. ಈಚಿನ ದಿನಗಳಲ್ಲಿ ಪ್ರಸಿದ್ಧ ಯಕ್ಷ-ಪ್ರದರ್ಶನಗಳಲ್ಲೆಲ್ಲಾ ಅನಿವಾರ್ಯವೆಂಬಂತೆ ಕನಿಷ್ಠ ಒಂದು ವಿಡಿಯೋ ಕ್ಯಾಮರಾ ಕೆಲಸ ನಡೆಸುತ್ತಿರುವುದನ್ನು ನೋಡಬಹುದು. ಮತ್ತೆ ಕೆಲವೇ ದಿನಗಳಲ್ಲಿ ಅದು, ಹಾಗೇ ಇನ್ನು ಯಾವ್ಯಾವುದೋ ಸಂದರ್ಭಗಳಲ್ಲಿ ವಿಡಿಯೋಗ್ರಹಣಕ್ಕೊಳಗಾದ ಪ್ರದರ್ಶನಗಳ ಡೀವೀಡೀಗಳು ಮಾರುಕಟ್ಟೆ ಧ್ವಂಸ ಮಾಡುವುದೂ ನಿಜವೇ. ನಮ್ಮದು ಅಂಥಾ ಕೆಲಸವಲ್ಲ. ಮತ್ತೆ ಇಲ್ಲಿ ಬರೆದ ಅಷ್ಟೂ ಲೇಖನಗಳು ‘ನಮ್ಮ ಮಾಲನ್ನು ಮಾರುವ’ ಕರಪತ್ರ ಮೌಲ್ಯದ್ದೂ ಅಲ್ಲ.
  ಅಶೋಕವರ್ಧನ

  ReplyDelete
 4. Ajithkumar Hegde.S21 June, 2010 17:20

  deevatige aata 2 thittinavaraddu nodiddene thenkinavara prayathnakkintha badaginavara prayathna chennagithu.Karki shaili kurithu hechchinavarige gothiralilla.adannu dakalikarana madidakkagi vishesha abhinandanegalu.

  ReplyDelete
 5. ವಿಜಯರಾಜ್ ಕನ್ನಂತ22 June, 2010 13:59

  good one

  ReplyDelete
 6. OLLE LEKHANA.
  Swamy, namma kalavalayada ottu samsye, adrallu tenkuthittinaddu enendare intaha kelasakke thavu bandu bhagavahisuvudu upakara madidanthe endu kelavu bhaagigalu bhavisuvudu.
  ene irali huccharu thamma hucchu bidade munduvarisabeku.
  Bhavabhuthi bredanthe kalohyayam niravadhih vipulach prithvi.
  mpjoshy.

  ReplyDelete
 7. Krishnamohan Bhat23 June, 2010 18:33

  Nanu DVD nodalilla aaddarinda elli vimarshe nimma lekhnada bagye maada bahudaste.aadare adakke ennondu dina eduttene.kaarana namma Phone haalagi Intrnet work aaguttiralilla.eegatane Phone repair aada kuudale internet on madi nimma lekhana oodide.Malana abhiprayakke nanna sahamatha ede.yeniddaru Yakshagana nodi anubhavisabekaste.

  ReplyDelete
 8. pratyakshavAgi yakshagAnavannu nODuva avakASavilladavarige adannu accukaTTAgi vaNijyoddESavillade aDakataTTeyalli baDisidakke iSToMdu AkShEpave? hAge mADidavarige dhanyavAdagalannu hLuvudu dharma.

  ReplyDelete
 9. @ಮಾಲ(ಅತ್ತಿಗೆಮ್ಮ;)

  ಜೀವಂತ ಸಂಗೀತ ಕೇಳಲು ಹಿತವಾಗುವಷ್ಟು ಕ್ಯಾಸೆಟ್ ನಲ್ಲಿ ಕೇಳಿದರೆ ಆಗುವುದಿಲ್ಲ ನಿಜ,ಆದರೆ ನನ್ನಂಥ ಅಭ್ಯಾಸಿಗಳಿಗೆ ಕ್ಯಾಸೆಟ್ ಮೂಲಕ ಎಷ್ಟೋ ರಾಗಗಳ ಪರಿಚಯ ಆಗುತ್ತದೆ,ಮತ್ತೆ ಮತ್ತೆ ಅದನ್ನು ಕೇಳುವುದರಿಂದ ರಾಗದ ಸ್ಥೂಲ ಪರಿಚಯವಾಗಿ ಕಲಿಕೆಯಲ್ಲಿ ಅನುಕೂಲವಾಗುತ್ತದೆ,ಇದನ್ನು ದೊಡ್ಡಪ್ಪನೊಂದಿಗೆ(ನಿನ್ನ ಮಾವ) ಹೇಳುವಷ್ಟು ಧೈರ್ಯ ಇರಲಿಲ್ಲ ಆಗ.ಇಲ್ಲಿನ ವಿಷಯಕ್ಕೆ ಅಪ್ರಸ್ತುತವಾದರೂ ನಿನ್ನೊಂದಿಗೆ ಹೇಳಿಬಿಡುತ್ತಿದ್ದೇನೆ.

  ReplyDelete
 10. ದೊಂದಿ ಬೆಳಕಿನ ಯಕ್ಷಗಾನ ವೀಡಿಯೊದಲ್ಲಾದರೂ ನೋಡುವ ಉತ್ಸಾಹದಿಂದ, ಮತ್ತು ತೆಂಕು ಹಾಗು ಬಡಗು ಯಕ್ಷಗಾನ ಸಿ ಡಿ ಗಳನ್ನು ಕೊಳ್ಳುವ ಬಯಕೆಯಿಂದ ಮೇಲೆ ಹೇಳಿದ ವಿವರಗಳಿಗೆ ಪತ್ರ ಬರೆದೆ. ಮರುದಿನವೇ ಬಡಗು ತಿಟ್ಟಿನ ಸಿ.ಡಿ ಯವರು ಖುದ್ದಾಗಿ ಕರೆ ಮಾಡಿ ಉತ್ಸ್ಸಹ ತೋರಿಸಿ ನನಗೆ ತಲಪಿಸುವುದಾಗಿ ಹೇಳಿದರು. ಅದರಂತೆ ಆ ಸಿ.ಡಿ ಕೈಗೆ ಸಿಗುವ ನಿರೀಕ್ಷೆ ಇದೆ. ಆದರೆ ತೆಂಕಿನವರು ಇದರಲ್ಲೊ ಔದಾಸಿನ್ಯ ತೋರಿದರು. ಇದುವರೆಗೆ ನಾನು ಮಾಡಿದ ಈ ಮೇಲ್ ಸಂದೆಶಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ.

  ReplyDelete
 11. ನನಗೆ ವೈಯಕ್ತಿಕವಾಗಿ ಕರೆಮಾಡಿ , ನನ್ನ ಪ್ರತಿಕ್ರಿಯೆಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ತುಂಬ ಧನ್ಯವಾದಗಳು "ಯಕ್ಷಗಾನಂ ಗೆಲ್ಗೇ"

  ReplyDelete
 12. nanoo nodidhe. asadharana prayathna......sadharana nirvahane(samarthyavidhavaroo udhasinathe yak maadtharo?)

  ReplyDelete
 13. ಅಶೋಕವರ್ಧನ14 July, 2010 06:11

  ಪ್ರಿಯರೇ
  ನಿಮ್ಮ ಸ್ಪಷ್ಟ ಮಾತುಗಳಿಗೆ ಕೃತಜ್ಞ.
  ದಾಖಲೀಕರಣ ಎಂದೇ ಇಳಿದ ನಮಗೆ ಯಾವ ಹಂತದಲ್ಲೂ ಪಕ್ಷಪಾತ, ನಮ್ಮ ಭ್ರಮೆಗಳ ಪ್ರಭಾವ ಬರಕೂಡದು ಮತ್ತು ಅವೆಲ್ಲವೂ ದಾಖಲೀಕರಣದ ಭಾಗವೂ ಆಗಬೇಕು ಎಂದು ನಿಶ್ಚೈಸಿಕೊಂಡಿದ್ದೆವು. ಹಾಗಾಗಿ ಮೊದಲೇ ಸಂಪರ್ಕಕ್ಕೆ ಬಂದವರಿಗೆಲ್ಲಾ ಮತ್ತು ಬ್ಲಾಗಿನಲ್ಲೂ ಸವಿವರವಾಗಿ ದಾಖಲೀಕರಣದಲ್ಲಿ ನಮ್ಮ ಪೂರ್ವೇತಿಹಾಸ ಮತ್ತು ಪ್ರಸ್ತುತ ಯೋಜನೆಯ ವಿವರಗಳನ್ನು ಬರೆದುಕೊಂಡಿದ್ದನ್ನು ನೀವು ಈಗಲೂ ಕಾಣಬಹುದು. ಅದರ ಮುಂದುವರಿಕೆಯಾಗಿಯೇ ವಿಮರ್ಶೆಗಾಗಿ ದಾಕ್ಷಿಣ್ಯಬಿಟ್ಟವರನ್ನು ಬರೆದೆ (ಬ್ಲಾಗಿನಲ್ಲಿ ಹಣಕಾಸಿನ ವಿವರಗಳೂ ಇದ್ದಾವೆ - ನೀವು ನೋಡಿರಬೇಕು). ಅದರಲ್ಲಿ ಸ್ಪಷ್ಟವಾಗಿ ಪೃಥ್ವೀರಾಜರದ್ದೇ ನಿಜ-ನಿರ್ದೇಶನವೆಂದೂ ಒಳ್ಳೆಯ ಅಂಶಗಳೇನಾದರೂ ಇದ್ದರೆ ಶ್ರೇಯಸ್ಸು ಬಲಿಪರಿಗೆ ಸೇರಬೇಕೆಂದೂ ಅವರೇ ಹೇಳಿದ್ದನ್ನು ಕೂಡಾ ಹಾಗೇ ಕಾಣಿಸಿದ್ದೇನೆ. ‘ನಾಳೆಗಳು’ ತಪ್ಪಿಯೂ ಮನೋಹರ ಮತ್ತು ಅಶೋಕರ ಖಯಾಲಿಯ ದಾಖಲೀಕರಣವೆಂದು ಹೇಳಬಾರದಲ್ಲಾ. ಹರಕೆದಾರ ದುಡ್ದಿನಕುಳಗಳು ಬಯಲಾಟಗಳನ್ನು ತಮ್ಮ ಪ್ರತಿಷ್ಠೆಯ ಮೆರೆತಕ್ಕೆ ಬಳಸಿದ್ದರಿಂದಲ್ಲವೇ ಝಗಮಗಿಸುವ ದೀಪಾಲಂಕಾರಗಳು, ಬ್ಯಾಂಡು ಗರ್ನಾಲುಗಳು ಇಂದು ಅನಿವಾರ್ಯ ಭಾಗವೆಂಬ ರೂಲಲ್ಲದ ರೂಲು ಎಂಬ ಜ್ಯಾರಿಯಲ್ಲಿರುವುದು? ಈ ವಿಸ್ತೃತ ನೋಟದಲ್ಲಿ ನಮ್ಮ ಪ್ರಯೋಗ ಮತ್ತು ನನ್ನ ಬರಹವನ್ನೂ ಬಲಿಪರು ಅರ್ಥಮಾಡಿಕೊಳ್ಳುತ್ತಾರೆಂದೇ ನಾನು ಆಶಿಸಿದ್ದೆ. ನನ್ನ ದೂಷಣೆಯ ಚೂಪು ಮುಮ್ಮೇಳದವರನ್ನೆ ಉದ್ದೇಶಿಸಿದ್ದು. ಸ್ವಲ್ಪ ಮಟ್ಟಿಗೆ ಅದು ಅನುಕಂಪೆಯ ಧ್ವನಿಯಲ್ಲಿ ತಾಗುವುದಿದ್ದರೂ ಪೃಥ್ವೀರಾಜ ನೊಂಡುಕೊಳ್ಳಬೇಕು - ಖಂಡಿತವಾಗಿಯೂ ಬಲಿಪರಲ್ಲ. ಎಲ್ಲಕ್ಕೂ ಮುಖ್ಯವಾಗಿ ಇದು ಇನ್ನೊಂದು ಕಾಲಘಟ್ಟದಲ್ಲಿ ನಮ್ಮೆಲ್ಲಾ ಹುಸಿ-ಖ್ಯಾತಿಗಳನ್ನು ತಿಳಿಯದೆ ನೋಡುವರನ್ನು ವೈಚಾರಿಕವಾಗಿ ತಪ್ಪು ನಿರ್ಧಾರಗಳಿಗೆ ದೂಡಲೇಬಾರದು ಎಂಬ ಯೋಚನೆಯಲ್ಲಿ ಬರೆದೆ. ಬ್ಲಾಗ್ ಬರಹಗಳು ಇನ್ನೂ ಸಾಮಾನ್ಯರ ಸಂವಹನ ಮಾಧ್ಯಮವಲ್ಲದಿರುವುದಕ್ಕೆ ನಾನೊಂದು ಪ್ರಿಂಟೌಟನ್ನು ಹೀಗೇ ಕಿಸಿಎಯಲ್ಲಿಟ್ಟುಕೊಂಡು ಉದೂಪಿಯ ಪ್ರಸಂಗ ಸಾಹಿತ್ಯ ರಚನಾ ಕಮ್ಮಟಕ್ಕೆ ಹೋಗಿದ್ದೆ. ಮೊದಲು ತಾರಾನಾಥ ಬಲ್ಯಾಯರು ಸಿಕ್ಕಾಗ ಅವರಿಗೆ ಕೊಟ್ಟೆ. ಅವರು ಶ್ರದ್ಧೆಯಿಂದ ಓದಿ, "ನಾವೆಲ್ಲಿ ತಪ್ಪಿದ್ದೇವೆಂದು ಚೆನ್ನಾಗಿ ಹೇಳಿದ್ದೀರಿ. ತಡವಾಗಿ ಬಂದು ಬಣ್ಣಕ್ಕೆ ಕುಳಿತವರಲ್ಲಿ ನಾನೂ ಒಬ್ಬ. ಉಳಿದವೆಲ್ಲ ಎಶ್ತು ಸರಿಯಿದ್ದರೂ ಸಮಜಾಯಿಷಿ ಕೊಡಲು ನಾನು ಅಧಿಕಾರಿಯಲ್ಲ, ತುಂಬ ಕಿರಿಯ" ಎಂದು ಪ್ರಾಮಾಣಿಕವಾಗಿ ಹೇಳಿದರು. ಆಮೇಲೆ ಬಲಿಪರು ಸಿಕ್ಕಾಗ ಅವರಿಗೆ ವಿರಾಮದಲ್ಲಿ ಓದಿಕೊಳ್ಳಲಿ ಎಂದು ಕಾಗದವನ್ನು ಅವರಿಗೇ ಕೊಟ್ಟುಬಿಟ್ಟೆ. ಅವರನ್ನು ಅವಮಾನಿಸುವ ಅಥವಾ ಸಣ್ಣ ಮಾಡುವ ಉದ್ದೇಶವೂ ಯೋಚನೆಯೂ ನನಗಿರಲೇ ಇಲ್ಲ. (ಮತ್ತಿದೆಲ್ಲದರಲ್ಲೂ ಮನೋಹರ ಉಪಾಧ್ಯರ ಪಾಲು ಏನೂ ಇಲ್ಲ.)

  ಮೊನ್ನೆ ಶನಿವಾರ ಸುರತ್ಕಲ್ಲಿನಲ್ಲಿ (ಶೇಣಿ ನೆನಪಿನ ಕಾರ್ಯಕ್ರಮ) ಬಲಿಪರು ಸಿಕ್ಕಾಗ, "ನೀವು ಬರೆದದ್ದೆಲ್ಲಾ ಸತ್ಯ. ನನ್ನ ಬಾಯಿ ಬಂದಾಗಿದೆ" ಎಂಬರ್ಥದ ಮಾತಾಡಿದರು. ನಾನವರಿಗೆ ಸೂಕ್ಶ್ಮವಾಗಿ ಇದು ನಿಮ್ಮ ಮೇಲಿನ ಆರೋಪವಲ್ಲ ಎಂದು ಹೇಳಿದರೂ ವಿವರಗಳಿಗೆ ಹೋಗಲು ಇತರ ಪರಿಚಿತರ, ಅಭಿಮಾನಿಗಳ (ಅನ್ಯ ವಿಚಾರಗಳ) ಮಾತುಗಳು ಅಡ್ಡಿಯಾದವು. ಮತ್ತೆ ಅಲ್ಲಿನ ಕಲಾಪಗಳಲ್ಲಿ ಬಲಿಪರು ಎಂದಿನ ಸಹಜತೆಯಿಂದ, ಉತ್ಸಾಹದಿಂದ ಭಾಗಿಯಾಗುವುದನ್ನು ಕಂಡಮೇಲೆ ನೀವು ಗ್ರಹಿಸಿದ ತೀವ್ರ ಪರಿಣಾಮ ಆಗಿಲ್ಲವೆಂದೇ ನನಗೆ ಕಾಣುತ್ತದೆ. ಮತ್ತು ಆಗುವುದೂ ಬೇಡ ಎಂದು ಆಶಿಸುತ್ತೇನೆ.

  ಇಂಥ ವಿಚಾರಗಳು ಇನ್ನಷ್ಟು ಜನರ ಮನಃಕಷಾಯಕ್ಕೆ ಕಾರಣವಾಗಬಾರದೆಂದೂ ಮತ್ತು ಮುಖ್ಯವಾಗಿ ಬಲಿಪರಮೇಲಿನ ತಪ್ಪು ತಿಳುವಳಿಕೆಗೆ ಕಡಿವಾಣ ಹಾಕುವಂತೆ ಎರಡೂ ಪತ್ರಗಳನ್ನು ನನ್ನ ಬ್ಲಾಗಿನ ಪುಟಕ್ಕೂ ಈಗಲೇ ಏರಿಸಿಬಿಡುತ್ತಿದ್ದೇನೆ. ಮುಂದೆಯೂ ಹೀಗೆ ಬರೆಯುತ್ತಿರಿ.
  ಇಂತು ವಿಶ್ವಾಸಿ
  ಅಶೋಕವರ್ಧನ

  ReplyDelete
 14. ವಿಷಯ ಯಾವುದೇ ವಿವಾದ ಉಂಟುಮಾಡದೇ ಸಮಾಧಾನಕರವಾಗಿ ಮುಗಿಯಲಿ ಎಂದು ಬಯಸಿದ ನನಗೆ ನಿಮ್ಮ ಉತ್ತರ ಹಿತ ನೀಡಿದೆ. ನನ್ನ ಬಾಲಿಷ ಭಾಷೆಗೆ ನಿಮ್ಮ ಸ್ಪಂದನೆಗಳಿಗೆ ನಾನು ಆಭಾರಿ. ಧನ್ಯವಾದಗಳು

  ReplyDelete
 15. ಇತ್ತೀಚಿಗೆ ಚಿತ್ರೀಕರಣಗೊಂಡ ದೊಂದಿ ಬೆಳಕಿನ ಯಕ್ಷಗಾನವೆರಡನ್ನು ನೋಡಿದೆ. ತೆಂಕುತಿಟ್ಟಿನವರು ಪ್ರದರ್ಶಿಸಿದ ಕುಂಭಕರ್ಣ ಕಾಳಗದಲ್ಲಿ ರಾಮನ ಪಾತ್ರ ಮತ್ತು ದೂತನ ಹಾಸ್ಯ ತೀರಾ ನೀರಸವಾಗಿತ್ತು . ಪೂರ್ತಿ ಪ್ರದರ್ಶನದಲ್ಲಿ ಯುವ ಕಲಾವಿದರೇ ಚೆನ್ನಾಗಿ ಅಭಿನಯಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ . ಸಾರ್ವಕಾಲಿಕವಾಗಿ ದಾಖಲಾಗಿ ಉಳಿಯಬಹುದಾದ ಇಂಥ ಪ್ರದರ್ಶನಗಳ ಚಿತ್ರೀಕರಣವು ಮುಮ್ಮೇಳದ ಕೆಲವು ಹಿರಿಯ ಕಲಾವಿದರ ನಿರಾಸಕ್ತಿ , ನಿರ್ಲಜ್ಜ ಧೋರಣೆಯಿಂದಾಗಿ ಕಳಪೆಯಾದದ್ದು ಮಾತ್ರ ವಿಷಾದನೀಯ.

  ಕೆ. ಗೋವಿಂದ ಭಟ್ಟರು ತಿಳಿದೂ ತಿಳಿದೂ ಇಂಥ ಒಳ್ಳೆಯ ಕಾರ್ಯಕ್ರಮದಲ್ಲಿ ಸ್ವಾರ್ಥ ಷಡ್ಯಂತ್ರವನ್ನು ಮಾಡಿದ್ದು "ತಾನು ಕೇವಲ ಹೊಟ್ಟೆಪಾಡಿಗಾಗಿ ಕೆಲಸ ಮಾಡುವುದೆಂದು " ಹೇಳಿದರೂ ತೆಗೆದುಕೊಂಡ ಸಂಭಾವನೆಗಾದರೂ ನ್ಯಾಯ ಒದಗಿಸಬಹುದಾಗಿತ್ತು. ತಾನು ಮಾಡಿದ್ದೆ ಶಾಸನವಾಗಬೇಕು ಎಂದು ಪ್ರಯತ್ನಿಸುವ ಇವರು ಕನಿಷ್ಠ ಪಕ್ಷ ತಾನು ಮಾಡುವುದು ಮುಂದೆ ದಾಖಲೆಯಾಗಿ ಉಳಿದುಬಿಡುತ್ತದೆ ಎಂಬ ಪ್ರಜ್ಞೆಯಿದ್ದು ಅಸಡ್ಡೆಯಿಂದ ವರ್ತಿಸಿದ್ದು ಖಂಡನೀಯ .

  ಬಡಗಿನ ಯಕ್ಷಗಾನ ಶಿಸ್ತುಬದ್ಧವಾಗಿ ಮೂಡಿ ಬಂದರೂ ಪರಿಪೂರ್ಣ ಎನ್ನುವಂತಿಲ್ಲ . ಸಣ್ಣಪುಟ್ಟ ಕೊರತೆಗಳು ಆ ಪ್ರದರ್ಶನದಲ್ಲಿದ್ದರೂ ವ್ಯವಸ್ಥಿತವಾಗಿ ಮೊದಲೇ ಅಭ್ಯಾಸ ಮಾಡಿದ ಕಾರಣ ಚೆನ್ನಾಗಿ ಮೂಡಿ ಬಂದಿದೆ.

  ReplyDelete
 16. ರಾಜಕುಮಾರ್ ಎಂ17 July, 2010 06:09

  ದೊಂದಿ ಆಟದ ಬಗ್ಗೆ ನನ್ನ ಅನುಭವಗಳ ಸಂಕ್ಷೇಪವಾಗಿ ಇಲ್ಲಿ ವಿವರಿಸಿದ್ದೇನೆ.
  http://yakshachintana.blogspot.com/2010/07/blog-post_16.html

  ReplyDelete
 17. ಅಶೋಕವರ್ಧನ ಜಿ.ಎನ್21 August, 2010 06:45

  ಶ್ರೀಕೃಷ್ಣ ಭಟ್ಟರ ಸವಿವರ ವಿಶ್ಲೇಷಣೆಗೆ ಕೃತಜ್ಞತೆಗಳು.
  ಹಿಂದೆ ರಾಜಕುಮಾರ್ ಅವರ ಪತ್ರದಲ್ಲೂ ಇಲ್ಲೂ ಸಣ್ಣ ತಪ್ಪುಗ್ರಹಿಕೆಯಾಗಿದೆ. ನಾನು ಯಾವ ವ್ಯಕ್ತಿಯನ್ನೂ ನೇರ ತಪ್ಪಿತಸ್ಥನನ್ನಾಗಿಸಲಿಲ್ಲ. ಸಾಂಪ್ರದಾಯಿಕ ಮಾತಿನಂತೆ ‘ಭಾಗವತ ಮೊದಲ ವೇಷ ಅಥವಾ ನಿರ್ದೇಶಕ ಎನ್ನುವ ನೆಲೆಯಲ್ಲಿ ಬಲಿಪರು ಇದನ್ನು ಬಿಡಬಹುದಿತ್ತೇ’ ಎಂಬ ಮಾತು ಬಂದದ್ದು ಹೊರಗಿನವರಿಂದ. ಇದು ನಮ್ಮ ಮಾತಲ್ಲ ಮತ್ತು ಪರೋಕ್ಷ ಮಾರ್ಗಗಳಲ್ಲಿ ಈ ಅಭಿಪ್ರಾಯವನ್ನು ತೂರಿಬಿಡುವ ಅಗತ್ಯ ನಮಗೇನೂ ಇಲ್ಲ. ನಮಗೆ ಗೊತ್ತಿರುವಂತೆ ಮತ್ತು ನಾನು ಬರೆದುಕೊಂಡಂತೆ ನಿಜದ ನಿರ್ದೇಶಕ ಪೃಥ್ವಿ. ಆದರೆ ಪೃಥ್ವಿ ಪ್ರಾಯದ ಕಿರಿತನದಿಂದ, ಸಹಜ ಸಂಕೋಚ ಭಾವದಿಂದ ಕಲಾವಿದರಲ್ನ್ನು ಕೇಳಿಕೊಂಡರೇ ವಿನಾ ‘ಹೀಗೇ ಆಗಬೇಕು’ ಎಂದು ಹೇಳುವ ಸ್ಥಿತಿಯಲ್ಲಿರಲಿಲ್ಲ ಎನ್ನುವುದೂ ನಮಗೆ ತಿಳಿದಿದೆಯಾದ್ದರಿಂದ ಖಂಡಿತವಾಗಿಯೂ ‘ಅಪರಾಧಿ’ ಪಟ್ಟವನ್ನು ಅವರ ಮೇಲೂ ನಾನು ಹೊರಿಸಲಾರೆ. ತಾಕತ್ತಿನ ಅನುಭವಿಗಳನ್ನು ಒಟ್ಟುಗೂಡಿಸಬೇಕು, ಒಳ್ಳೆಯದನ್ನು ಹೊರತೆಗೆಯಬೇಕು ಎನ್ನುವ ಹಪಹಪಿಕೆ ಪೃಥ್ವಿಗೆ ಬಹಳ ಹಿಂದಿನಿಂದಲೇ ಇರುವುದು ಮತ್ತದಕ್ಕೆ ಇನ್ನಿಲ್ಲದಂತೆ ಶ್ರಮಿಸುತ್ತಿರುವುದೂ ನಮಗೆ ಗೊತ್ತಿರುವುದರಿಂದಲೇ ನಾಯಕತ್ವ ವಹಿಸಿದ್ದು. ಇಲ್ಲಿ ಸುಣ್ಣಂಗುಳಿಯವರು ನಿಡ್ಲೆಯವರ ಮಾತನ್ನು ಸರಿಯಾಗಿಯೇ ಉದ್ಧರಿಸಿದ್ದು ಜ್ಞಾಪಿಸಿಕೊಳ್ಳಬೇಕು. “ಇಂದಿನ ಕಲಾವಿದರು ನಮಗಿಂತ (ಅವರನ್ನೂ ಸೇರಿದಂತೆ ಹಿರಿಯ ಕಲಾವಿದರಿಂದ) ಕೆಲವು ಮೈಲುಗಳಷ್ಟು ಮುಂದೆ ಹೋಗಿದ್ದಾರೆ. ಇನ್ನು ನಿಲ್ಲಿಸಲು ಸಾಧ್ಯವಿಲ್ಲ.” ತೆಂಕುತಿಟ್ಟಿನ ಕಲಾವಿದರು ಒಟ್ಟು ಕಲಾಪದ ಮೌಲ್ಯವನ್ನು, ಉದಾತ್ತತೆಯನ್ನು ಅರ್ಥಮಾಡಿಕೊಂಡು ಒಂದು ಉತ್ತಮ ಸಾಂಘಿಕ ಪ್ರದರ್ಶನ ಕೊಟ್ಟಿಲ್ಲ. ಸುಣ್ಣಂಗುಳಿಯವರು ಗೋವಿಂದ ಭಟ್ಟರನ್ನು ಹೆಸರಿಸಿ ಹೇಳಿದ ಭಾವ ‘ಲಘುವಾಗಿ ತೆಗೆದುಕೊಳ್ಳುವುದು’ ಇಡಿಯ ತಂಡಕ್ಕೆ ಅನ್ವಯಿಸಬಹುದು. Team spirit - ಯೂಥಸ್ಫೂರ್ತಿ, ತೆಂಕು ತಿಟ್ಟಿನ ಪ್ರದರ್ಶನದಲ್ಲಿ ದೊಡ್ಡ ಕೊರತೆ. ದಾಖಲೀಕರಣ ಎಂದರೆ ಒಂದು ಜಾಮದಲ್ಲಿ ಎಲ್ಲೋ ಭೂತಕೋಲದ ಅಂಗಳದಲ್ಲಿ ವೇಷಕಟ್ಟಿ ಹಾಗೇ ಕಾರಿನಲ್ಲಿ ಧಾವಿಸಿ, ಇನ್ನೊಂದು ಜಾಮದಲ್ಲಿ ಪುರಭವನದ ಟಿಕೇಟ್ ಪ್ರೇಕ್ಷಕರ ಎದುರು ಬೇರೇ ಪಾತ್ರ ಒಪ್ಪಿಸಿದಷ್ಟು ಹಗುರದ್ದಲ್ಲ ಎಂದು ಮುಖ್ಯವಾಗಿ ಬಹುತೇಕ ಮುಮ್ಮೇಳದ ಕಲಾವಿದರು ಭಾವಿಸಲೇ ಇಲ್ಲ. ಹೀಗಾಗಿ ಕಿನ್ನಿಗೋಳಿಯ ರಿಹರ್ಸಲ್, ಪ್ರದರ್ಶನದಂದು ಬೇಗ ಬಂದು ಪರಿಸರ ಮತ್ತು ಪರಿಸ್ಥಿತಿಗೆ ತಮ್ಮನ್ನು ಹೊಂದಿಸಿಕೊಳ್ಳುವ ಪ್ರಯತ್ನ, ಕೊನೆಗೆ ದಾಖಲೀಕರಣದಲ್ಲೂ ಎಚ್ಚರವಹಿಸಿದ್ದು ಸಾಕಾಗಲಿಲ್ಲ. ಇದನ್ನು ಹೇರುವವರು ಯಾರೂ ಇರಲಿಲ್ಲ, ಕಲಾವಿದರು ಸ್ವಯಂ ತಿಳಿದುಕೊಂಡು ನಡೆಯಲೂ ಇಲ್ಲ ಎನ್ನುವ ನಮ್ಮ ಕೊರಗೊಂದೇ ಉಳಿದದ್ದು.

  ಸುಣ್ಣಂಗುಳಿಯವರು ಬಡಗುತಿಟ್ಟಿನ ಸಾಂಪ್ರದಾಯಿಕತೆಯ ಬಗ್ಗೆ ಎತ್ತಿದ ಸಂಶಯಗಳಿಗೆ (ಆರೋಪಗಳಲ್ಲ) ಯಕ್ಷಗಾನ ಕೇಂದ್ರದೊಡನೆ ಆಪ್ತ ಸಂಬಂಧವಿರುವುದರೊಡನೆ, ಈ ವಿದ್ಯುನ್ಮಾನ ಮಾಧ್ಯಮದಲ್ಲೂ ಸಾಕಷ್ಟು ಹಿಡಿತವಿರುವ ಗೆಳೆಯ ಎಂ. ಎಲ್ ಸಾಮಗರು (ಅಥವಾ ಸ್ವಪ್ರೇರಣೆಯಿಂದ ಇನ್ಯಾವ ಬ್ಲಾಗ್ ಓದುಗರೂ ಕೊಡಬಹುದು) ಪರಿಹಾರ ಒದಗಿಸಿಯಾರು ಎಂದು ಆಶಿಸುತ್ತೇನೆ.
  ಅಶೋಕವರ್ಧನ

  ReplyDelete
 18. Dear Sir,
  I must congratulate you for providing me an opportunity to get introduced to a new form of ART - Yakshagana. Hidimbavana is no other place than Chitradurga itself. We have one Hidimbana hallu (Hidimba's Tooth) here in a temple. Except for the Voice Quality, the narration and video are excellent. Congratulations Sir.
  Bedre

  ReplyDelete
 19. ಯಕ್ಷಚಿಂತನದ ಅನಾಮಿಕ | September 24, 2010 at 2:40 am |
  ಮೂರು ಘಂಟೆ ಅವಧಿಯ ಪ್ರತಿಯೊಂದು ಯಕ್ಷಗಾನದಲ್ಲಿ ಪ್ರಥಮಾರ್ಧದಲ್ಲಿ ತೆಂಕುತಿಟ್ಟಿನ ಕೇಳಿಕೆ, ಅದರ ಜತೆ ಮಹನೀಯರ ಅಭಿಪ್ರಾಯಗಳ ವಿನಿಮಯದ ಚಿತ್ರಣ, ರಂಗಸ್ಥಳದ ನಿರ್ಮಾಣ ಪ್ರತಿಹಂತದ ಚಿತ್ರಣ, ತುಂಬ ಸರಳವಾದ ರಂಗಸ್ಥಳವಾದರೂ ಕಾದಿನ ನಡುವೆ ಎಲ್ಲವೂ ಸ

  ರಾಜಕುಮಾರ್ ಎಂ | July 17, 2010 at 12:39 am |
  ದೊಂದಿ ಆಟದ ಬಗ್ಗೆ ನನ್ನ ಅನುಭವಗಳ ಸಂಕ್ಷೇಪವಾಗಿ ಇಲ್ಲಿ ವಿವರಿಸಿದ್ದೇನೆ.
  http://yakshachintana.blogspot.com/2010/07/blog-post_16.html
  ಅದು ಹೇಗೆ ಯಕ್ಷಚಿಂತನದ ಅನಾಮಿಕ ಎಂದು ಉಲ್ಲೇಖಿಸಿದರೋ ಆಶ್ಚರ್ಯವಾಗಿದೆ.

  ReplyDelete
 20. ಅನಂತ ವರ್ಧನ ಜಿ. ಎನ್06 October, 2010 06:21

  ಸಂಜೀವ ಸುವರ್ಣರ ಉತ್ತರ ವಾಕ್ಯಗಳು ಲೀಲಾಜಾಲವಾಗಿ ಅವರ ಕುಣಿತದಂತೆ ಅಮೋಘವಾಗಿ ನಲಿದಾಡಿವೆ. ಸಾಹಿತ್ಯ, ಜ್ಞಾನ ಮತ್ತು ಬರೆದ ವಿಧಾನ ಅವರ ಅರಿವನ್ನು ತೋರಿಸುತ್ತದೆ.
  ಅನಂತ

  ReplyDelete
 21. Guru Sanjeeva has correctly answered the doubts raised by ANAAMIKA, though authoritatively tinged with irony.I feel that ANNAMIKA has taken the superficial aspects of yakshagana, in his zeal for traditional purity, more seriously than necessary.However, it was a good dialogue on your CDS. My good wishes to both of them. NAMASTE, ML SAMAGA

  ReplyDelete