ನಾಲ್ಕನೆಯ ಮಾಳಿಗೆಯ ಹಿಂದಿನ ಕೊನೆಯಲ್ಲಿ ‘ಮೇಲ್ವರ್ಗದ’ ವಿಸ್ತಾರ ಊಟದ ಮನೆಯೂ ಮುಂದಿನ ಕೊನೆಯಲ್ಲಿ ಸಾರ್ವಜನಿಕ ರಂಜನೆಗೇ ಮೀಸಲಾದ ಪುಟ್ಟ ಹಾಲೂ ಇದೆ. ಹೆಸರಿನಲ್ಲಿ ರಂಜನೆ ಇದ್ದರೂ ಅಲ್ಲಿನ ದೊಡ್ಡ ಕೊರತೆ ಎರಡು ಸಜೀವ ಟಿವಿ ಮತ್ತೆ ಜಾಗ ಉಳಿಯದಂತೆ ಎದುರು ಹತ್ತೈವತ್ತು ಕುರ್ಚಿ. (ಅರುಂಧತೀ ರಾಯ್ ದಾಂತೇವಾಡ ವಲಯದ ನಕ್ಸಲ್ ಕುರಿತು ಬರೆದ ಲೇಖನ ಮಾಲೆಯಲ್ಲಿ ಮೂಲವಾಸಿಗಳ ಸಂಘ ಶಕ್ತಿಯನ್ನು, ಸಂಸ್ಕೃತಿಯನ್ನು ನಿರ್ವೀರ್ಯಗೊಳಿಸಲು ಪ್ರಸ್ತಾಪಗೊಂಡ ಪ್ರಮುಖ ತಂತ್ರ ಅವರಿಗೆಲ್ಲ ಟಿವಿ ಕೊಡುವುದು - ನೆನಪಿಸಿಕೊಳ್ಳಿ) ಈ ವಲಯದ ಹಳೆಯ ಹುಲಿ - ಎಂವಿ ಟಿಪ್ಪುಸುಲ್ತಾನಿನಲ್ಲಿ ಟೀವೀ ಇದ್ದರೂ ಇತರ ಚಟುವಟಿಕೆಗಳಿಗೆ ಖಾಲೀ ವೇದಿಕೆ ಇರುವುದೂ ಸಹಯಾನಿಗಳ ಪ್ರತಿಭಾ ಪರಿಚಯಕ್ಕೆ ಅವಕಾಶ ಒದಗುವುದೂ ಉಷಾ ಪಿ. ರೈ ಅವರ ಪ್ರವಾಸ ಕಥನದಲ್ಲಿ (ಲಕ್ಷ ದ್ವೀಪಕ್ಕೆ ಲಗ್ಗೆ ಇಟ್ಟಾಗ) ತಿಳಿಯುತ್ತದೆ. ಬಿಸಿಲೇ ಕಾಡಿನಲ್ಲಿ, ದೇವಂದಬೆಟ್ಟದ ಕೊಡಿಯಲ್ಲಿ, ಜಲಕನ್ಯೆಯರ ಕುದುರಿನಲ್ಲೆಲ್ಲಾ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿದ ದಿನೇಶ ಹೊಳ್ಳರಿಗೇನಾದರೂ ‘ಕಡಲ ಕನವರಿಕೆ’ ಅಭಿವ್ಯಕ್ತವಾದರೆ ಅನಾವರಣಕ್ಕೆ ಎಂವಿ ಟಿಪ್ಪು ನೋಡಿ ಎನ್ನಬಹುದೇನೋ!
ಹಡಗಿನ ಆರನೇ ಮಾಳಿಗೆ ವಾಸ್ತವದಲ್ಲಿ ಬೋಳು ತಾರಸಿ. ಅದರ ಮುಂದಿನ ತುದಿಯಲ್ಲಿ ಮುಖ್ಯ ಅಧಿಕಾರಿ (ಇಲ್ಲಿ ಕ್ಯಾಪ್ಟನ್ ಅಥವಾ ಕಪ್ತಾನ ಎನ್ನುವುದಿಲ್ಲ - ಮಾಸ್ಟರ್ ಅಂತೆ. ತಮಾಷೆ ಗೊತ್ತಾ -ಕುಡ್ಲದ ಸಿಟಿಬಸ್ ಕಂಡೋರ್-ಕುಟ್ಟಿಗೆ ಪ್ರಯಾಣಿಕರೆಲ್ಲ ಮೇಸ್ಟ್ರೇ) ಮತ್ತು ನಿಯಂತ್ರಣ ಕೇಂದ್ರವಿದೆ. ನಡುವೆ ಹಡಗಿನಗಲಕ್ಕೂ ಹಬ್ಬಿದಂತೆ ಆಳದಿಂದೆದ್ದ ಅನಿವಾರ್ಯ ಯಂತ್ರ ಭಾಗಗಳು, ಮುಖ್ಯವಾಗಿ ಕಾಣುವಂತೆ ಹೊಗೆ ನಳಿಕೆ. ಉಳಿದಂತೆ ಮುಂದಷ್ಟು ಹಿಂದಷ್ಟು ವಿಸ್ತಾರವಾದ ಮತ್ತು ಸಾರ್ವಜನಿಕರಿಗೆ ಮುಕ್ತವಾದ ತಾರಸಿ. ಇದಕ್ಕೂ ಹೆಚ್ಚಿನ ಹಡಗಿನ ವಿನ್ಯಾಸ ವಿವರಿಸುವುದಿರಲಿ, ಗ್ರಹಿಸುವುದಕ್ಕೂ ನಮ್ಮ ನಾಲ್ಕು ರಾತ್ರಿ ಮೂರು ಹಗಲೇ ಸಣ್ಣದಾಯ್ತೆಂದ ಮೇಲೆ ನೀವು ಓದಿ ಮಾಡುವುದು ಅಷ್ಟರಲ್ಲೇ ಇದೆ.
ಸಂಜೆ ಚಾ, ಬಿಸ್ಕತ್ತಿನೊಡನೆ ಹಡಗಿನ ಸಾರ್ವಜನಿಕ ವಕ್ತಾರನ ಮುಖ ಪರಿಚಯವಾಯ್ತು. ಆತ ಹಡಗು, ಪ್ರವಾಸ ಮತ್ತು ಆಪತ್ಕಾಲೀನ ಕ್ರಮಗಳ ಬಗ್ಗೆ ಆಸಕ್ತರಿಗೆ ತಿಳಿಸುವ ಕಾರ್ಯಕ್ರಮವನ್ನು ಟೀವೀ ಕೋಣೆಯಲ್ಲಿಟ್ಟುಕೊಂಡಿದ್ದಾನೆಂದು ನಮಗೆ ತಿಳಿಯುವಾಗ ತಡವಾಗಿತ್ತು. ಆದರೂ ಅಪಾರ ಸಹನಾಶೀಲನಾಗಿ ಲೇಟ್-ಲತೀಫ್ಗಳಾದ ನಮ್ಮ ಕೇಳಿದಷ್ಟೂ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ಕೊಡುವವನಿದ್ದ. ಆದರೆ ಅಲ್ಲಿದ್ದ ಎರಡೂ ಟೀವೀಗಳು ಐಪಿಎಲ್ ಆಟದ ನೇರಪ್ರಸಾರ ಕೊಡಲು ಸುರುಮಾಡಿದಾಗ ಎಲ್ಲರ ಮನಸ್ಥಿತಿಯೂ ಹೋಂ ಎವೇ ಫ಼್ರಂ ಹೋಂ ಆಗಿತ್ತು. ಕ್ಯಾಂಟೀನಿನಿಂದ ಕುರುಕಲು ತಂದು, ಕಾಲು ಎಲ್ಲೆಂದರಲ್ಲಿ ಎಸೆದು ಕೂತು, ಕಮೆಂಟರಿಗೆ ಸಮತೂಕದ ಮೊಮೆಂಟರಿ ಉದ್ಗಾರಗಳನ್ನು ಹೊಡೆಯುವವರನ್ನು ಬಿಟ್ಟು ನಾವು ತಾರಸಿಗೋಡಿದೆವು. (ಇಂದು ಬಹುಜನರ ಭಾರೀ ಹಾಬಿ - ಟೀವೀ ವೀಕ್ಷಣೆ!) ಅಲ್ಲಿ ಬೀಳ್ಕೊಡುವ ಕೊಚ್ಚಿ, ಸ್ವಾಗತಿಸುವ ಅರಬೀ ಸಮುದ್ರಕ್ಕೆ ಕಣ್ಣಾಗುವವರು ಹೆಚ್ಚಿರಲಿಲ್ಲ. ದಿನದ ಚಿತ್ತಾರ ಮುಗಿಸಿದ ಸೂರ್ಯನ ಬ್ರಷ್ ತೊಳೆದ ನೀರು ದಿಗಂತದಲ್ಲಿ ಹರಡಿದ್ದರೆ, ಆಕಾಶ ಒಣ ಒರೆಸಿಕೊಂಡ ವಿಸ್ತಾರ ಚಿಂದಿ. ನಮ್ಮ ಸಣ್ಣ ಗ್ರಹಿಕಾ ಮಿತಿಯಲ್ಲಿ ಎಂವಿ ಕವರಟ್ಟಿಯ ತಿರುಗಣಿ ಹುಟ್ಟು ಸಪ್ತಸಾಗರಗಳಿಗೆ ಹಾಕಿದ ಮಹಾ ಕಡೆಗೋಲಾಗಿ ಏನದ್ಭುತಗಳನ್ನು ತರಲಿದೆಯೋ ಎಂದು ನಿರುಕಿಸುತ್ತಲೇ ಇದ್ದೆವು. ಹಡಗಿನ ಸುವ್ಯವಸ್ಥಿತ ಸಾರ್ವಜನಿಕ ಘೋಷಣಾ ಜಾಲದಲ್ಲಿ ಊಟದ ಕರೆ ಕೇಳದಿದ್ದರೆ ಊಟ, ನಿದ್ರೆಯ ಪರಿವೆಯೂ ಇರುತ್ತಿರಲಿಲ್ಲವೋ ಏನೋ!
ನಮ್ಮ ಇಪ್ಪತ್ತೊಂದು ಜನಕ್ಕೆ ಟಿಕೇಟ್ ದರದಲ್ಲಿ ಅರ್ಧ, ಇಡೀ ಇದ್ದರೂ ಇಬ್ಬರಿಗೆ ಒಂದರಂತೆ ಸಜ್ಜುಗೊಂಡ ಕೋಣೆಗಳನ್ನು ಧಾರಾಳ ಕೊಟ್ಟಿದ್ದರು. ಕೆಲವರದು ನಾಲ್ಕನೆಯ ಮಾಳಿಗೆ, ನಮ್ಮದು ಐದನೆಯದು. ಎರಡಂತಸ್ತಿನ ಮಂಚ, ಹಾಸಿಗೆ, ರಗ್ಗು, ಕಪಾಟು, ಮೇಜು, ಕುರ್ಚಿ, ಫ್ಯಾನು, ಬಿಗಿಮುಚ್ಚಿದ ಕನ್ನಡಿ ಕಿಟಕಿ ಹೆಚ್ಚೇನೂ ಬೇಡವೆನ್ನುವಂತಿತ್ತು. ಪ್ರತಿ ಕೋಣೆಗೂ ಸೇರಿದಂತಿದ್ದ ಪುಟ್ಟ ಬಚ್ಚಲಿನಲ್ಲಿ ಎಲ್ಲ ಹೊತ್ತಿಗೂ ಬೇಕಾದ ಬಿಸಿಯ ನೀರಿನ ವ್ಯವಸ್ಥೆಯೊಡನೆ ವಾಶ್ ಬೇಸಿನ್, ಕಮೋಡ್, ಸ್ನಾನದ ವ್ಯವಸ್ಥೆಯೂ ಸಾಬೂನು, ಟವೆಲಿನವರೆಗೆ ಒಪ್ಪವಾಗಿತ್ತು. ಇಲ್ಲಿನ ಬಾಗಿಲುಗಳಿಗೆ ಒಳಗಿನಿಂದ ಅಗುಳಿಯಿದೆಯಾದರೂ ಹೊರಗಿನಿಂದ ಬೀಗವಿಲ್ಲ! ಹಗಲಿನ ಚಟುವಟಿಕೆಗಳಿಗೆ ನಾವು ಹಡಗು ಬಿಟ್ಟು ಹೋಗಿ ಮರಳುವಾಗ ಕೋಣೆ ಮಡಿಗೊಳಿಸುತ್ತಾರೆ. ದ್ವೀಪಗಳಲ್ಲೂ ನಾವು ನಮ್ಮೆಲ್ಲಾ ಸೊತ್ತುಗಳನ್ನು ಎಲ್ಲೆಂದರಲ್ಲಿ ಬಿಟ್ಟು ದಿನಪೂರ್ತಿ ನಿರ್ಯೋಚನೆಯಿಂದ ವಿಹರಿಸಿ ಮರಳಿದರೂ ಕಳ್ಳತನದ ಸೊಲ್ಲು ಬರಲೇ ಇಲ್ಲ. ಒಟ್ಟು ಪ್ರವಾಸವೇ ಆಶ್ಚರ್ಯಕರವಾಗಿ ಯಾನಿ-ಸಿಬ್ಬಂದಿಗಳ ಮೇಲಿನ ಅಪಾರ ವಿಶ್ವಾಸದಿಂದ ನಡೆಯುತ್ತಿದೆ. ಇದು ಆಕಸ್ಮಿಕವಲ್ಲ, ಸಿಬ್ಬಂದಿ ಸ್ಪಷ್ಟವಾಗಿ ಘೋಷಿಸಿ ಹಾಗೇ (ಈ ಕಾಲದಲ್ಲೂ) ನಡೆಸಿಕೊಂಡು ಬರುತ್ತಿರುವ ವಾಸ್ತವ.
ಕೊಚ್ಚಿಯಿಂದ ಕಲ್ಪೆನಿಗೆ ಸುಮಾರು ಹದಿಮೂರು ಗಂಟೆಯ ಯಾನವಂತೆ. ಹಡಗಿನ ಸೌಮ್ಯ ಏಕನಾದದಲ್ಲಿ, ಸಣ್ಣ ಒಲೆತದ ಸಂತಸದಲ್ಲಿ (ಅವರಿವರು ಹೇಳಿದ ಸೀ-ಸಿಕ್ನೆಸ್ ಅಥವಾ ಕಡಲ-ಕಾಯಿಲೆ ಕಾಡಿಸಬಹುದಾದ ಸಮುದ್ರದ ಆಟೋಪ ನಮಗೆ ಸಿಗಲೇ ಇಲ್ಲ), ಕಲ್ಪಿತ ಚಳಿಗೆ ಬಿಸಿ ರಗ್ಗಿನ ಆಳಕ್ಕಿಳಿದು ನಿದ್ರಿಸಿದೆವು. ರಾತ್ರಿ ಆಗೀಗ ಎದ್ದರೂ ಕಂಡಿಯಾಚೆಗೆ ಹಡಗಿನದೇ ಬೆಳಕಿನಲ್ಲಿ ನೊರೆನೀರ ಮೊತ್ತ ಹಿಂದೆ ಸರಿಯುವ ಚಂದ ಕಾಣುತ್ತಿತ್ತು. ನಗರದ ಬೆಳಕಿಲ್ಲದೆ, ಚಂದ್ರನೂ ವಿಶೇಷ ಆಕ್ರಮಿಸದೆ (ಅಮಾವಾಸ್ಯೆ ಕಳೆದು ಎರಡೇ ದಿನವಾಗಿತ್ತು), ಯಾವ ಚೌಕಾಸಿಯಿಲ್ಲದೆ ಎಲ್ಲಾ ದಿಕ್ಕುಗಳಲ್ಲೂ ದಿಗಂತದವರೆಗೆ ಹಬ್ಬಿ ನಿಂತ ರಾತ್ರಿಯಾಕಾಶದ ಕಲ್ಪನೆ ನನ್ನ ತಂದೆ(ಜಿಟಿನಾ)ಗೆ (ನಕ್ಷತ್ರ ವೀಕ್ಷಣೆಗೆ) ಪುಳಕ ತರಿಸುತ್ತಿತ್ತು. ನಾನು ಅವರ ಕಿಂಚಿದಂಶ ಮಾತ್ರವಾದ್ದರಿಂದ ನಿದ್ದೆಗೇಡು, ಕತ್ತುನೋವು ಇಲ್ಲದೇ ನಿದ್ದೆ ಮುಂದುವರಿಸಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಅತಿ ಹತ್ತಿರದ ನಕ್ಷತ್ರ - ಸೂರ್ಯನನ್ನೂ ಮರೆತು ಮಲಗುವುದುಂಟೇ? ಅದು ಹೊದಿಕೆ ಝಾಡಿಸುವುದರಿಂದ ಹಿಡಿದು ಮೇಲೇಳುವವರೆಗೆ ಎಲ್ಲಾ ನೋಡಬೇಕೆಂದು ನಾನು, ದೇವಕಿಯೂ ಐದು ಗಂಟೆಗೇ ಮೇಲಿನ ಧಕ್ಕೆಗೆ ಓಡಿದೆವು.
ಸೂರ್ಯೋದಯದ ಚಂದವನ್ನು ಸಾವಿರ ಮಾತಿನ ಸೋಲಿನಲ್ಲಿ ಕಾಣುವುದಕ್ಕಿಂತ ಗೆಳೆಯ ಕೃಶಿ ತೆಗೆದ ಚಿತ್ರ ಸರಣಿಯಲ್ಲಿ ನೀವೇ ಅನುಭವಿಸುವುದು ಲೇಸು. (ಇಲ್ಲಿ ಚಿಟಿಕೆ ಹೊಡೆಯಿರಿ) ಅಲ್ಲಿ ಕೃಶಿ ಕಂತು-ಕಥನದಲ್ಲಿ ನನ್ನಿಂದ ದಿನ ಮುಂದೆ ಓಡಿದ್ದರೆ, ಇತ್ತ ಮೈಸೂರಿನಲ್ಲಿ ರುಕ್ಮಿಣಿ ತನ್ನ ಮಾಲಾಲಹರಿ ಬ್ಲಾಗಿನಲ್ಲಿ (ಇಲ್ಲಿ ಚಿಟಿಕೆ ಹೊಡೆಯಿರಿ) ಇನ್ನಷ್ಟು ಆತುರದಲ್ಲಿ ಇಡಿಯ ಪ್ರವಾಸವನ್ನೇ ಮುಗಿಸಿಬಿಟ್ಟಿದ್ದಾಳೆ. ಅಲ್ಲೆಲ್ಲಾ ‘ಕ್ವಿಕ್ಕೀ’ ಸಿಕ್ಕಿತೆಂದು ನನ್ನ ಸಹ-ಯಾನ ಮರೆಯಬೇಡಿ. ಇದುವರೆಗಿನ ಕೊರೆತಕ್ಕೆ ನಿಮ್ಮ ಚಡಪಡಿಕೆ, ಮುಂದಿನ ಭೈರಿಗೆಗೆ ನಿಮ್ಮ ಹಾರೈಕೆ ಕೊಡುತ್ತೀರಲ್ಲಾ?
ಉತ್ತಮ 'ಯಾನ' ಲೇಖನಕ್ಕೆ ಅಭಿನಂದನೆಗಳು. ಟೀವಿನೋಡುವ ಗೀಳಿನಂತೆ ನೌಕಾಯಾನದ ಗೀಳೂ ಒಂದು ಪುರಾತನ ಗೀಳು. ಸಮುದ್ರಯಾನದ ಗೀಳುಹತ್ತಿದವ ತನ್ನ ಜೀವನದುದ್ದಕ್ಕೂ ರೂಪಧರನಂತೆ ( ಯುಲಿಸಿಸ್ನಂತೆ ) ನಿರಂತರ ಪ್ರವಾಸಿಯಾಗಲು ಇಚ್ಛಿಸುತ್ತಾನೆ. ಇದನ್ನು Call of the Sea ಅಥವಾ 'ಸಮುದ್ರದ ಕರೆ ' ಎನ್ನ ಬಹುದೆ? ವಂದನೆಗಳು. - ಪೆಜತ್ತಾಯ ಎಸ್. ಎಮ್.
ReplyDeleteಒಲೆತನದ ಸ೦ತಸ ಎ೦ದಿದ್ದೀಯಲ್ಲಾ, ಅನುಭವಿಸಿದ ಕಾರು-ಶೂರರಿಗೇ ಗೊತ್ತು, ಅದರ ಗಮ್ಮತ್ತು ! ಬಹುಶಃ ಮೀನುಗಾರಿಕೆ ದೋಣಿ/ಹಡಗಿನ೦ತಾ ಚಿಕ್ಕದರಲ್ಲಿರುವ ಒಯ್ದಾಟ ದೊಡ್ಡದರಲ್ಲಿ ಇರಲಿಕ್ಕಿಲ್ಲ, ನನ್ನ ಕುತೂಹಲದ ದೊಡ್ಡ ಪಾಲು ಇದರ ಬಗ್ಗೆ ಇತ್ತು!, ೨೫ ವರ್ಷ ಹಿ೦ದಿನ ಬಸವರಾಜಗಢ, ಅ೦ಕೋಲಾ
ReplyDeleteಹತ್ತಿರದ ದ್ವೀಪ, ದ೦ಡಯಾತ್ರೆ ಅದರಲ್ಲಿ ಅನುಭವಿಸಿದ ತೊಳಲಾಟ, ಈಗಲೂ ವೊಲ್ವೋ ಬಸ್ ಹತ್ತಿದಾಗ ಕೆಲವೊಮ್ಮೆ ಕಾಡುವ ವಾ೦ತಿ ಸಮಸ್ಯೆ ಹಿನ್ನೆಲೆಯಲ್ಲಿ, ನಿಮಗ್ಯಾರಿಗೂ ಸೀ ಸಿಕ್ ನೆಸ್ ಕಾಡಲೇ ಇಲ್ಲ ಎ೦ದು ತಿಳಿದು ಸ್ವಲ್ಪ ನಿರಾಸೆಯಾಯಿತು ! ನಿಮ್ಮ ಹಡಗಿನ ಚಿತ್ರ, ಮಾಲಾ ಲಹರಿಯಲ್ಲಿ ಸೊಗಸಾಗಿ ಬ೦ದಿದೆ,
ಜೋರಾಗಿ ದೂಡಿದರೆ ಮಗುಚಿಕೊ೦ಡೀತೇನೋ ಎ೦ಬ೦ತೆ, ಅ೦ತಹದೊ೦ದು ಚಿತ್ರ ಹಾಕಿ, ಪ್ಲೀಸ್. ಕುತೂಹಲ ಕೆರಳಿಸುತ್ತ ಸಾಗುತ್ತಿದೆ ನಿಮ್ಮ ಯಾತ್ರೆ, ದೋಣಿ ಸಾಗಲಿ, ಮು೦ದೆ ಹೋಗಲಿ, ದೂರ,, ,,,,
ದಿಕ್ಕು ದೆಸೆಗಳ ಬಗ್ಗೆ ಸ್ಪಷ್ಟ ಕಲ್ಪನೆ ಹಾಗೂ ಅರಿವನ್ನು ನೀಡುವ ಇನ್ದಿನ ವೈಜ್ಞಾನಿಕ ದಿನಗಳ ಸಮುದ್ರಯಾನವೇ ಇಷ್ಟು ರೋಮಾಂಚಕವಾಗಿರುವಾಗ ಹಿಂದೆ ಕೊಲಂಬಸ್ ಕಾಲದ ಅಥವಾ ಉಲಿಸೆಸ್ ಕಾಲದ ಯಾನದ ಸಾಹಸ ಹೇಗಿದ್ದಿರಬಹುದೆಂದು ಊಹಿಸುವುದೇ ಕಷ್ಟ. ಗಿರೀಶ.
ReplyDeleteಅರುಂಧತಿ ರಾಯ್ ಕಾಸರವಳ್ಳಿಯವರ ಸಿನೆಮಾ ’ಗುಲಾಬಿ ಟಾಕೀಸು’ ನೋಡಿರಬಹುದೇ...? ಗಿರೀಶರು ಕರಾವಳಿಯಲ್ಲಿ ಸರಕಾರ ಟೀವಿ ಹಂಚಿದ್ದನ್ನು ವ್ಯಾಖ್ಯಾನಿಸುತ್ತಾರೆ.
ReplyDeleteನಿಮ್ಮ ಸಮುದ್ರ ಅನುಭವಗಳನ್ನು ಆಸಕ್ತಿಯಿಂದ ಓದಿದೆ.
ReplyDeleteಅನುಭವ ಸಮುದ್ರವಾಗುವಷ್ಟರಲ್ಲಿ ಮುಗಿದೇ ಹೋಗಿದೆ!
ಕೃಷ್ಣಮೋಹನರ ಚಿತ್ರಗಳು ಅದ್ಭುತವಾಗಿವೆ.
ಸದಾ ಕಾಡುವ ಸಮುದ್ರ ಆಕಾಶದ ನೆನಪುಗಳಿಗೆ ಔತಣ ದೊರೆತಿದೆ.
Naanu nimmalaksha dweepada pravaasa odi tumbaa santhosha patte
ReplyDeleteRaghu Narkala
ಲೇಖನ ಖುಷಿ ಕೊಟ್ಟಿದೆ. ನಿತ್ಯದ ಜಂಜಾಟಗಳಿಂದ ಬಿಡುಗಡೆ ಪಡೆಯುವ ಯಾವ ಯಾನವೂ ಸ್ವಾಗತಾರ್ಹವೇ ಸರಿ!
ReplyDeleteನೀವು ಅದೃಷ್ಟವ೦ತರು. ಸು೦ದರ ಆಕಾಶ ನಿಮಗೆ ನೋಡಲು ಸಿಕ್ಕಿತ್ತು. ನಾವು ಎಷ್ಟು ಕಾದರೂ ಅ೦ತಹ ಸು೦ದರ ದೃಶ್ಯ ಸಿಕ್ಕಿರಲೇ ಇಲ್ಲ. ಕಥನ ತು೦ಬಾ ಚೆನ್ನಾಗಿಮೂಡಿ ಬ೦ದಿದೆ. ಖುಷಿಯಾಯಿತು.
ReplyDelete