25 February 2010

ಅಯನದ್ವಯಕ್ಕೂ ಭೀಷ್ಮ ಕಾಯ

(ತಾತಾರ್ ೪)

ತಾತಾರ್ ಶಿಖರಾರೋಹಣ ಪುಸ್ತಕವನ್ನು ಅಂದು (೧೯೭೨) ಪುಣೆಯಲ್ಲಿದ್ದ ನನ್ನ ಸೋದರತ್ತೆ ಸೀತಾ ಓದಿ ಕಾಲೆಳೆದಿದ್ದಳು, “ಇದು ‘ಕುದುರೆಮುಖದೆಡೆಗೆ’ ಬರೆದ ನಾರಣ್ಣಯ್ಯನೇ (ನನ್ನ ತಂದೆ) ಬರೆದುಕೊಟ್ಟಿರಬೇಕು.” ಕುದುರೆಮುಖದೆಡೆಗೆ (೧೯೬೮) ಬೆಂಗಳೂರು ವಿಶ್ವವಿದ್ಯಾನಿಲಯದ ಪಠ್ಯೇತರ ಪ್ರಕಟಣೆಗಳಲ್ಲಿ ಪ್ರಥಮ ಪುಸ್ತಕ. ಮುಂದೆ ಇದು ತಂದೆಯದೇ ಎನ್.ಸಿ.ಸಿ ದಿನಗಳಲ್ಲಿ, ಸವಾಲನ್ನು ಎದುರಿಸುವ ಛಲದಲ್ಲಿ ಮತ್ತು ಕೊನೆಯದಾಗಿ ಮುಗಿಯದ ಪಯಣದಲ್ಲಿ ಸಮಕಾಲೀನ ಆವಶ್ಯಕತೆಗಳಿಗನುಗುಣವಾಗಿ ಪರಿಷ್ಕೃತಗೊಂಡು ಮರುಮುದ್ರಣಗಳನ್ನೂ ಕಂಡಿದೆ. ತಂದೆಯ ಸಾಹಿತ್ಯ ಕೊಡುಗೆಗಳಲ್ಲಿ ಸರಸ ಶೈಲಿ, ಹಾಸ್ಯಪ್ರಜ್ಞೆಗಳಿಂದ ನಿರ್ವಿವಾದವಾಗಿ ಜನಪ್ರಿಯತೆಯನ್ನು ಗಳಿಸಿದ ಬರವಣಿಗೆಗಳು ಇಂಥವು. ಆದರೆ ತಂದೆ ಯಾವುದನ್ನು ತನ್ನ ಜೀವನದ ಪರಮಲಕ್ಷ್ಯ (ಕನ್ನಡದಲ್ಲಿ ವಿಜ್ಞಾನಸಾಹಿತ್ಯ ಪ್ರಸರಣ) ಎಂದು ಭಾವಿಸಿ (‘ವಿಜ್ಞಾನ ಎನ್ನಶನ’ ಎಂದೇ ಘೋಷಿಸಿ) ದುಡಿದರೋ ಅಲ್ಲಿ ಹೀಗಳೆವ ಕೆಲವು ಪ್ರಯತ್ನಗಳನ್ನು ಆಗಾಗ ಅನುಭವಿಸಿದ್ದುಂಟು. (ತಪ್ಪು ತಿಳಿಯಬೇಡಿ, ಅದರಿಂದ ವಿಷಾದ, ಸಂತ್ರಸ್ತತನದಂಥ ಭಾವಗಳು ಅವರನ್ನೆಂದೂ ಕಾಡಲಿಲ್ಲ.) ಕಳೆದ ವಾರ ‘ಕೆಂಡಸಂಪಿಗೆ’ಯಲ್ಲಿ ಕೆ.ವಿ ತಿರುಮಲೇಶ್ ಕೂಡಾ ಇಂಥದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾಗ, ಅವರ ಬೆಂಬಲಕ್ಕೆ ತಂದೆಯ ಉದಾಹರಣೆ ಕೊಟ್ಟು ನನ್ನ ಮಿತಿಯ ನಾನೂ ನಾಲ್ಕು ಮಾತು ಹೊಸೆದೆ. ಮೊದಲು ಅದನ್ನಷ್ಟು ಉದ್ದರಿಸಿ, ನಿರುಮ್ಮಳವಾಗಿ ತಾತಾರಿನತ್ತದ ಯಾತ್ರೆ ಮುಂದುವರಿಸುತ್ತೇನೆ, ಸೇರಿಕೊಳ್ಳಿ, ಜೊತೆ ಬಿಡಬೇಡಿ.

ನನ್ನ ತಂದೆ (ಜಿಟಿ ನಾರಾಯಣ ರಾವ್), ಅವರ ವಿಜ್ಞಾನ ಬರವಣಿಗೆ ಕುರಿತಂತೆ ‘ಸರಳವಾಗಿಲ್ಲ, ಸಂಸ್ಕೃತಭೂಯಿಷ್ಟ (ಭೋ ಇಷ್ಟ?) ಕಬ್ಬಿಣದ ಕಡಲೆ, ಪದ್ಯ ತುರುಕುವ ಚಟ’ ಎಂದಿತ್ಯಾದಿ ಕಟಕಿಗಳನ್ನು ಆಗೀಗ ಜೀವನದುದ್ದಕ್ಕೂ ಕೇಳಿದರು. ಅವರು ಮುಖಾಮುಖಿಯ ಅವಕಾಶ ಒದಗಿದಲ್ಲಿ, ತನ್ನ ಹಲವು ಬರಹಗಳಲ್ಲಿ ಶೈಲಿ ಮತ್ತು ವ್ಯಕ್ತಿಯ ಅವಿನಾಭಾವವನ್ನು ವಿಷದಪಡಿಸುತ್ತಲೇ ಬಂದರು. ತನ್ನ ಆತ್ಮಕಥೆ - ‘ಮುಗಿಯದ ಪಯಣ’ದಲ್ಲಿ ಸುಮಾರು ಹನ್ನೊಂದು ಪುಟಗಳಷ್ಟು ಉದ್ದಕ್ಕೆ ‘ಕನ್ನಡದಲ್ಲಿ ಜನಪ್ರಿಯ ವಿಜ್ಞಾನ: ವಸ್ತು, ಶೈಲಿ, ವಿನ್ಯಾಸ’ ಎಂಬ ಅಧ್ಯಾಯವನ್ನೇ ಬರೆದರು. ಕನ್ನಡ ಬಲ್ಲವರಿಗೆಲ್ಲ ವಿಜ್ಞಾನ ಸಾಹಿತ್ಯ ದಕ್ಕಬೇಕೆಂಬ ‘ಕನ್ನಡ ಮೇಷ್ಟ್ರಗಿರಿ’ಯನ್ನು ನಿರಾಕರಿಸಿ, ಅದನ್ನು ವಿಜ್ಞಾನಭಾಷೆಯಾಗಿ ದೃಢಗೊಳಿಸುವಲ್ಲಿ ಅವಿರತ ದುಡಿದರು. ಹಗುರ ಅಥವಾ ಬೇಜವಾಬ್ದಾರಿ ಮಾತುಗಳ ಸುಳಿ ತಣಿಸುವ ಕಾಯಕ ಬಿಟ್ಟು ತೊಡಗಿಕೊಳ್ಳುವ ಛಾತಿಯಿದ್ದವರಿಗೆಲ್ಲ ಪ್ರೇರಣೆಯ ಮಹಾಮೂಲವಾದರು. ವಿಜ್ಞಾನ ಲೇಖನ ಕಮ್ಮಟಗಳಲ್ಲಿ, ವಿಶ್ವಕೋಶ, ವಿಜ್ಞಾನ ಪದ ಕೋಶದಂಥ ಕನ್ನಡ ಕಟ್ಟುವ ವಿಶಿಷ್ಟ ಕೂಟಗಳಲ್ಲಿ, (ಸ್ವಸಮರ್ಥನೆಯ ಗಂಧವಿಲ್ಲದೆ) ಜ್ಞೇಯನಿಷ್ಠ ಜಿಜ್ಞಾಸೆಗಳಲ್ಲಿ ಇವರದು ಅಂತಿಮ ಮಾತು. ಸರಳತೆಯ ಹೆಸರಿನಲ್ಲಿ, ‘ಎಲ್ಲರಿಗೂ ಅರ್ಥಮಾಡಿಸುವ’ ಭ್ರಮೆಯಲ್ಲಿ ಪಟ್ಟುಬಿಡದವರಿಗೆ ತಂದೆಯ ಕೊನೆಯಲ್ಲಿ ಹೇಳಿಯೇ ಹೇಳುತ್ತಿದ್ದರು “ಕಲಗಚ್ಚು ಅತಿ ಸರಳ. ಕುಂಕುಮ ಕೇಸರಿ ಮಿಶ್ರಿತ ಕೆನೆ ಹಾಲು ಅತಿ ಕಠಿಣ. ಆಯ್ಕೆ ಸ್ವಾತಂತ್ರ್ಯ ನಿಮ್ಮದು.”

ಪ್ರೊ| ತಿರುಮಲೇಶ್ ತಡವರಿಸಬೇಡಿ, ನಿಜದಲ್ಲಿ ಸಮೃದ್ಧಿ ಬಯಸುವ ಬಹುಸಂಖ್ಯಾತರು ಮೌನಿಗಳು, ಬರಹ ದೂರರು, ಆದರೆ ನಿಮ್ಮನ್ನು ಉತ್ಸಾಹದಿಂದ ಅನುಸರಿಸುತ್ತಲೇ ಇದ್ದೇವೆ. ***** ಇನ್ನು ನನ್ನನ್ನು ಅನುಸರಿಸುವವರತ್ತ...

ನಿದ್ರಿಸದಿರು ವೀರಾ?

ಬೆಟ್ಟದ ಕಡಿದಾದ ಮೈಯಲ್ಲಿ ತೋರಿಕೆಯ ತೆಳು ಮಣ್ಣಪದರು ಮತ್ತು ಹುಲ್ಲ ಹಾಸು ಸೀಳಿದಂತೆ ಅಲ್ಲಲ್ಲಿ ಬಂಡೆ ಹಾಸೇ ಎದ್ದು ಕಾಣುವುದೋ ಸಹಜವಿತ್ತು. ಇನ್ನೆಲ್ಲಿಂದಲೋ ಕಳಚಿ ಬಿದ್ದು ಸದ್ಯ ಇರುವಲ್ಲೇ ನೆಲ ಕಚ್ಚಿ ಕೂತ  ಭಾರೀ ಗುಂಡುಗಳೂ ಸಾಕಷ್ಟಿತ್ತು. ಅಂಥ ಒಂದು ಭಾರೀ ಬಂಡೆ ಗುಂಡು (ಜ್ವಾಲಾಮುಖೀ ದೇವಿಯವರ ವಗ್ಗರಣೆ ಸಟ್ಟುಗದಿಂದ ಸಿಡಿದ ಸಾಸಿವೆ ಕಾಳು!), ಸುಮಾರು ಐವತ್ತಡಿ ಎತ್ತರಕ್ಕೆ ನಿಂತಿತ್ತು. ಯುಗಯುಗಗಳ ಹಿಂದೆ ಏಕವಿದ್ದಿರಬಹುದಾದ ಮಹಾ ಬಂಡೆ ಹಾಸಿನಿಂದ ಕಳಚಿಕೊಳ್ಳುವಾಗಲೋ (ಸ್ವಾತಂತ್ರ್ಯ ಸಂಗ್ರಾಮ?) ಅನಂತರ ಸಿಡಿಲು ಬಡಿದೋ ಇದರ ಮೈಯಲ್ಲಿ ದೊಡ್ಡ ಹಳಕುಗಳು ಕಳಚಿಹೋದ, ಸೀಳು ಬಿಟ್ಟ ಗುರುತುಗಳು ಧಾರಾಳವಿತ್ತು. ಕಾಲಾನುಕ್ರಮದಲ್ಲಿ ಬಂಡೆಯ ಸೀಳಿನಲ್ಲಿ, ನೆತ್ತಿಯಲ್ಲಿ ಹುಲ್ಲು, ಆಲದ ಜಾತಿಯ ಹಸಿರು ವ್ಯಾಪಿಸಿ ಗಾಯಗಳನ್ನು ಮರೆಸಿತ್ತು. ಹಾವಸೆ, ಶಿಲಾವಲ್ಕಲ, ಮಣ್ಣಕಲೆಗಳೂ ಸೇರಿ ಅದಕ್ಕೆ ಸೌಮ್ಯತೆಯನ್ನೂ ವನ್ಯಶಿಲ್ಪದ ಭವ್ಯತೆಯನ್ನೂ ತಂದಿತ್ತು.

ಹಿಂದೆಯೇ ಹೇಳಿದಂತೆ ಈ ಬಂಡೆಯ ನೆತ್ತಿ ಸುಮಾರು ಐದಾರಡಿ ಮುಂಚಾಚಿಕೊಂಡಿದ್ದದ್ದು ನಮಗೆ ಒಮ್ಮೆಗೆ ಆಶ್ರಯದಾತನ ಭ್ರಮೆ ಉಂಟುಮಾಡಿದ್ದು ನಿಜ. ಆದರೆ ವಾಸ್ತವದಲ್ಲಿ ಈ ಮುಂಚಾಚಿಕೆ ಬಲು ಎತ್ತರದಲ್ಲಿದ್ದುದರಿಂದ ಮಂಜು ಸುರಿತದ ಎದುರು ಪೂರ್ಣ ರಕ್ಷಣೆ ಖಾತ್ರಿಯಿರಲಿಲ್ಲ, ಮತ್ತೆ ಮಳೆ ಬಂದರಂತೂ ನಿಶ್ಚಿಂತೆಯಿಂದ ಸಚೇಲ ಸ್ನಾನಕ್ಕೆ ಹಾಕಬಹುದು  “ಗೋವಿಂದ”! ಪ್ರಪಾತಕ್ಕೆ ಬಂಡೆ (ಎಂಬ ವ್ಯಕ್ತಿ) ಮುಖ ಹಾಕಿದೆ ಎಂದುಕೊಳ್ಳಿ. ಅದರ ಎಡ ಅಂಚಿನಿಂದ ಬಲ ಅಂಚಿನತ್ತ ನೆಲ ಇಳಿಜಾರಾಗಿತ್ತು. ಎಡ ಅಂಚಿನಲ್ಲಿ ಮಣ್ಣು ಸ್ವಲ್ಪ ಮುಂದೊತ್ತಿ ಬಂದು ಸಣ್ಣ ಗುಹೆಯೇ ಏರ್ಪಟ್ಟಂತಿತ್ತು. ಆ ಮೂಲೆಯಲ್ಲಿ ಗಾಳಿ ಹೊಡೆತ ಕಡಿಮೆ ಎಂದು ಅಂದಾಜಿಸಿ ‘ಕಿಚನ್’ ಕಿಚ್ಚಿದೆವು. ಅಲ್ಲಿಂದ ಬಲಕ್ಕೆ ಸರಿಯುತ್ತ ಮಧ್ಯಂತರದಲ್ಲಿ, ಅಂದರೆ ಅಡುಗೆಮನೆಯ ತಟ್ಟಿಗಿಂತ ಸುಮಾರು ಒಂದಡಿ  ಕೆಳಗೆ ಒಂದು ಸಪಾಟು ಬಂಡೆಯ ಹಾಸು ಇತ್ತು. ಅದು ಒಮ್ಮೆಗೆ ಆರೇಳು ಜನಕ್ಕೆ ವಿರಮಿಸಲು ಅನುಕೂಲವಿತ್ತು; ಕಾನ್ಫರೆನ್ಸ್ ಹಾಲ್, ಹೇಳಬಹುದೇ - ಕೂಟಕಟ್ಟೆ? ಅದರ ತಳ ಇನ್ನೊಂದೇ ತಟ್ಟು ಇತ್ತು, ಮೈ ಚಾಚಲು ಹೆಚ್ಚಿನ ನೆಲ; ಬೆಡ್ ರೂಂ? ಅಲ್ಲೇ ನೆಲ ಒಳ ಅಂಚಿನಲ್ಲಿ, ಅಂದರೆ ಮುಖ್ಯ ಬಂಡೆಯನ್ನು ಸಂಪರ್ಕಿಸಿದಲ್ಲಿ ನಿಗೂಢವಾದ ಗವಿಯೂ ಏರ್ಪಟ್ಟಿತ್ತು; ಗೆಸ್ಟ್ ರೂಂಗಳೇ ಇದ್ದಿರಬಹುದು. ಆದರೆ ಈಗಾಗಲೇ ಚತುಷ್ಪಾದಿ ಗೆಸ್ಟ್‌ಗಳು ಯಾರಾದರೂ ಎಂಗೇಜ್ ಮಾಡಿ ಘೋಸ್ಟ್ ರೂಂ ಆಗಿದ್ದರೆ ಎಂಬ ಸಂಶಯದಲ್ಲಿ ಮೊದಲು ನಾವು ಎಂಟ್ರಿ ಹಾಕಲಿಲ್ಲ.

ಬಂಡೆಯ ಎರಡೂ ಅಂಚುಗಳಲ್ಲಿ, ಬಂಡೆಯಿಂದ ಸ್ವಲ್ಪೇ ಹೊರಗೆ ಎರಡು ಸಣ್ಣ ಮರಗಳಿದ್ದವು. ಅವರೆಡರನ್ನು ಸೇರಿಸಿದಂತೆ ನಮ್ಮ ಪರ್ವತಾರೋಹಣದ (ಅರೆ ನೈಲಾನ್) ಹಗ್ಗವನ್ನು ಬಿಗಿದು, ನಮ್ಮ ಕೆಲವು ಜಮಖಾನ ಹೊದಿಕೆಗಳನ್ನು ತೂಗು ಹಾಕುವುದರೊಡನೆ ಶಿಬಿರ ಸ್ಥಾನಕ್ಕೆ ಗಾಳಿಯ ಹೊಡೆತವನ್ನು ಕಡಿಮೆ ಮಾಡಿಕೊಂಡೆವು. ನೀರು ತರಲು ಹೋದವರು ಬಂದಿರಲಿಲ್ಲ. ಆದರೆ ಹಸಿವೆ ಕೇಳುತ್ತದೆಯೇ. ಒಣಪೂರಿಯನ್ನು ಜಗಿಜಗಿದು, ಇಲ್ಲದ ಜೊಲ್ಲಿನಲ್ಲೇ ನೆನೆನೆನೆಸಿ ಕಷ್ಟದಿಂದ ನುಂಗತೊಡಗಿದೆವು. ಒದ್ದೆ ಮೈಯನ್ನು ಆರಿಸಲು, ವಾತಾವರಣದಲ್ಲಿ ಏರುತ್ತಿದ್ದ ಚಳಿಯನ್ನು ನಿಭಾಯಿಸಲು ಆಚೀಚೆ ಓಡಾಡಿ ಸಿಕ್ಕ ಕಡ್ಡಿಪುರುಳೆಗಳನ್ನು ಒಟ್ಟುಮಾಡಿ, ಎರಡನೇ ಜಗುಲಿಯಲ್ಲಿ ಸಣ್ಣ ಶಿಬಿರಾಗ್ನಿಯನ್ನು ಎಬ್ಬಿಸಿದೆವು. ಅತ್ತ ನೀರಿಗೆ ಹೋದವರಿಗೆ ಅನತಿ ದೂರದಲ್ಲೇ ಬೆಟ್ಟಕುವರಿಯೊಬ್ಬಳು ಒಲಿದು ಮೈದೋರಿದ್ದಳು. ಆದರೆ ಹೊತ್ತು ತರುವಲ್ಲಿ ಜಾವೀದ್ ಕಂಗಾಲು. ಅವನ ಧ್ವನಿ ಮಾತ್ರ ಕೇಳಿ ನಮ್ಮಲ್ಲಿ ಕೆಲವರು ಹುಡುಕ ಹೋದವರು ಬಕೆಟ್ ನೀರಲ್ಲದೆ, ಕುಸಿದ ಜಾವೀದನಿಗೂ ಭುಜಕೊಟ್ಟು ಮೇಲೆ ತರಬೇಕಾಯ್ತು!  ಮತ್ತವನಿಗೆ ಶಾಖ ಕೊಟ್ಟು, ಕಾಲು ಅಂಗೈಗಳಿಗೆ (ಅಮೃತಾಂಜನದ) ಮಾಲೀಷು ಮಾಡಿ, ಹೊಟ್ಟೆಗೊಂದು ಚೂರು ಗ್ಲುಕೋಸ್, ಪೂರಿ, ನೀರು ಎಲ್ಲಾ ಹೊಗಿಸಿದ ಮೇಲೆ ಪೂರ್ಣ ಚೇತರಿಸಿಕೊಂಡ. ಅನಂತರ ಹೆಚ್ಚಿನವರು ಬೆಚ್ಚನೆಯ ತಿನಿಸುಗಳ ನಿರೀಕ್ಷೆಯಲ್ಲಿ, ಹಿಂಬಾಲಿಸುವ ದೇಶಕಾಲಗಳನ್ನು ಮರೆಸುವ ನಿದ್ರೆಯ ಕಲ್ಪನೆಯಲ್ಲಿ ಸುಖಸಂಕಥಾ ಕಾಲಕ್ಷೇಪ ನಡೆಸುವುದೊಂದೇ ಉಳಿಯಿತು! ನಮ್ಮ ಸ್ಟವೆರಡೂ ಜೀವ ತಳೆದಿತ್ತು, ರಮೇಶ್ ಬಳಗ ಪಾತ್ರೆ ಜೀನಸುಗಳ ಹೊಂದಾಣಿಕೆಯಲ್ಲಿ ಹೋರಾಟ ನಡೆಸಿದ್ದರು.

ಮೊದಲ ನೀರಿನಲ್ಲಿ ಕಾಫಿ ಕುಣಿಯಿತು. ಅನಂತರ ಅಕ್ಕಿ ಬೇಳೆಗಳು ಸ್ಟೌ ಏರಿ ರಂಗೇರುತ್ತಿದ್ದಂತೆ ಪಾಲು ಕೇಳಲು ಬಂದ ತಟಪಟ ಹನಿರಾಯ! ಪೂರ್ವರಂಗದ ಕಲಾಪಗಳಿಲ್ಲದೇ ನೇರ ಮಳೆಯದ್ದೇ (ಅಧಿಕ?) ಪ್ರಸಂಗ. ಅಡುಗೆಯವರಿಗೆ ಹೊಗೆಕಾಟ ತಪ್ಪಿಸಲೆಂದು ಕೆಳ ಜಗುಲಿಯ ಸ್ವಲ್ಪ ಹೊರಭಾಗಕ್ಕೆ ಜಾರಿಸಿದ್ದ ಶಿಬಿರಾಗ್ನಿ ಮಳೆಗೆ ಮೊದಲ ಬಲಿ. ಆಶ್ರಯದಾತ ಬಂಡೆಯ ಮೈಯಲ್ಲೂ ಧಾರೆಗಳಲ್ಲಿ ಇಳಿದ ನೀರು ಮೂಲೆ ಮೂಲೆಗಳಿಗೆ ಸರಿದುಕೊಳ್ಳುತ್ತಿದ್ದ ನಮ್ಮ ಮೇಲೆ ಹಗೆಯ ಈಡಿನಂತೆ ಬಿದ್ದು ಹಿಂಸಿಸಿತು. ಮೊದಲೇ ಶೀತ ಹಿಡಿದ ಮೈ, ಸಾಮಾನು ಸರಂಜಾಮುಗಳನ್ನು ಮತ್ತಷ್ಟು ನೆನೆಯದಂತೆ ಕಾಪಾಡಿಕೊಳ್ಳುವುದು ಭಾರೀ ಪ್ರಯಾಸದ ಕೆಲಸವೇ ಆಯ್ತು. ಈ ಒದ್ದಾಟದಲ್ಲೂ ನಮಗೆ ನೆನಪಾದದ್ದು ಆ ದಿನಗಳಲ್ಲಿ ಸುದ್ಧಿಯ ತುರೀಯಾವಸ್ಥೆಯಲ್ಲಿದ್ದ ಪೂರ್ವ ಪಾಕಿಸ್ಥಾನದ್ದು. ಅಂತಃಕಲಹದ ಬಿಸಿಯಲ್ಲಿ ಮಾನವ ಸಂಬಂಧಗಳ ತೀವ್ರ ನಷ್ಟದಲ್ಲಿ, ಮನೆಮಾರು ಬಿಟ್ಟೋಡಿ ಭಾರತಕ್ಕೆ ವಲಸೆ ಬಂದ ಲಕ್ಷಾಂತರ ನಿರಾಶ್ರಿತರ ಶಿಬಿರಗಳ ದಾರುಣ ಚಿತ್ರ ಪತ್ರಿಕೆಗಳಲ್ಲೆಲ್ಲ ಕಂಡವರಿದ್ದೆವು. ಪರೋಕ್ಷ ಯುದ್ಧದಲ್ಲಿ, ಭಾರತದ ಸೈನ್ಯ (ಬಾಂಗ್ಲಾ ಮುಕ್ತಿ ಸೇನೆಯ ಮುಖವಾಡದಲ್ಲಿ) ಪಾಕಿಸ್ಥಾನೀ ಸೈನ್ಯವನ್ನು ಅದರದೇ ನೆಲದಲ್ಲಿ ಹಂತಹಂತವಾಗಿ ಹಿಮ್ಮೆಟ್ಟಿಸುತ್ತಿದ್ದ ವಾರ್ತೆ ಕ್ಷಣ ಕ್ಷಣಕ್ಕೂ ರೋಮಾಂಚನವನ್ನುಂಟು ಮಾಡುತ್ತಿತ್ತು. ಅಂದು ಡಿಸೆಂಬರ್ ೧೭, ಗೋವಿಂದರಾಜರ ಪುಟ್ಟ ಟ್ರಾನ್ಸಿಸ್ಟರ್ ರೇಡಿಯೋ ಘೋಷಿಸಿತು ಬಾಂಗ್ಲಾ ವಿಜಯ! ಅದು ತಾತಾರ್ ಮೈಯಲ್ಲಿ ಹೆಚ್ಚು ಕಡಿಮೆ ನಿರಾಶ್ರಿತರ ಶಿಬಿರದಂತ ಪರಿಸ್ಥಿತಿಯಲ್ಲೇ ಇದ್ದ ನಮಗೆ ಭವಿಷ್ಯವನ್ನು ಗಟ್ಟಿಯಾಗಿ ಎದುರಿಸಲು ಸ್ಫೂರ್ತಿ ಕೊಟ್ಟಿತು ಎಂದೇ ಹೇಳಬೇಕು.

ನಳವಲಲರಂತೆ ರಮೇಶ ಶ್ರೀನಿವಾಸರು ಸ್ತ್ರೀ ಸದಸ್ಯರ ನೆರವಿನಿಂದ ಅಡುಗೆ ಮುಗಿಸುವಾಗ ಗಂಟೆ ಹನ್ನೊಂದು. ಹೇಗೋ ಇದ್ದ ಅನ್ನಕ್ಕೆ ಬಿಸಿಯಾದ ಸಾಂಬಾರನ್ನು ಬೆರೆಸಿ ಜಠರಾಗ್ನಿಯನ್ನು ತಣಿಸಿದೆವು. ಮಳೆ, ಚಳಿಯ ಹೊಸಪೆಟ್ಟಿಗೆ ನಿಲುಕದಂತೆ ಎಲ್ಲರೂ ತಟ್ಟೆಬಟ್ಟಲನ್ನು ಬಯಲಿಗೆ ನೂಕಿ, ಕೈಗಳನ್ನು ತಂತಮ್ಮ ಪ್ಯಾಂಟಿಗೆ ಒರೆಸಿಕೊಂಡು ಡ್ರೈ ಕ್ಲೀನಾದೆವು! ಮತ್ತೆ ಇಷ್ಟರಲ್ಲೇ ಬಂಡೆಯ ವಿವಿಧ ಧಾರೆಗಳಿಗನುಗುಣವಾಗಿ ಪುನಃ ವ್ಯವಸ್ಥೆಗೊಂಡ ನಮ್ಮ ಬಂಡೆಕ್ಯಾಂಪ್, ಮಲಗಲು ಹೊಸತೇ ಪರದಾಟಕ್ಕಿಳಿಯಿತು. ನಾನು ಮತ್ತು ಗಿರೀಶ ಅದುವರೆಗೆ ತಿರಸ್ಕರಿಸಲ್ಪಟ್ಟ ‘ಗೆಸ್ಟ್-ರೂಮಿ’ಗೇ ಲಗ್ಗೆ ಹಾಕಿದೆವು. ಒಳಗೆ ಒಂದೆರಡು ಸಣ್ಣ ಕಲ್ಲಿನ ಮೊಳಕೆಗಳಿದ್ದರೂ ನಮಗಿಬ್ಬರಿಗೆ ಮೈಚಾಚಲು ಮಣ್ಣಿನ ನೆಲ, ಬೆಚ್ಚಗಿನ ಗೂಡು ಅದು ಒದಗಿಸಿತು. ನಮ್ಮ ಶಯನ ಸ್ಥಿತಿಯ ದ್ವಾರಪಾಲಕ ಭಾಸ್ಕರ, ಅವನ ಪಾದ ಸೇವಕ ರವಿ! ನಮ್ಮಿಂದ ಕೆಳಗವಿಯಲ್ಲಿ ಜಾವೀದ್ ಮಾತ್ತು ಪುರಾಣಿಕ್. ಅಲ್ಲಿನ ಹೊಸ್ತಿಲ ಪಾರ ಜಯರಾಮನದು. ಗುಹೆ ಎನ್ನುವುದು ದೊಡ್ಡ ಮಾತು, ಬಂಡೆಯ ಸಂದು ಎನ್ನಿ, ಅದರ ಅಂತರಾಳದಲ್ಲಿದ್ದಿರಬಹುದಾದ ಜೀವವೈವಿಧ್ಯ ವಾತಾವರಣದ ಶೀತಕ್ಕೆ ಚೈತನ್ಯ ಪಡೆಯಲಾರದು, ನಮ್ಮ ಮೇಲೆ ಹಲ್ಲೆ ಮಾಡದು ಎಂಬ ನಮ್ಮ ಭಂಡ ನಂಬಿಕೆ ಆ ರಾತ್ರಿಗಂತೂ ಹುಸಿಯಾಗದ್ದು ನಮ್ಮ ಅದೃಷ್ಟ.

ಗಂಟೆ ಹನ್ನೆರಡು, ದಿನ ಕಳೆದು ದಿನ ಬರುವ ಹೊತ್ತು. ಕತ್ತಲನ್ನು ಸೀಳಿ ಬಂತು ನಮ್ಮ ಮಾರ್ಗದರ್ಶಿ ರಾಜುವಿನ ಅರಚಾಟ “ಸ್ವಾಮೀ ಊಟಾ!” ಓಹ್! ನಮ್ಮ ಗಡಿಬಿಡಿಯಲ್ಲಿ ಈ ಮಾರ್ಗದರ್ಶಿಗಳ ಬಗ್ಗೆ ನೆನಪೇ ಹಾರಿಹೋಗಿತ್ತು ಎಂದು ತಿಳಿಯಬೇಡಿ. ನಮ್ಮ ಬಂಡೆಯಿಂದ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಬಂಡೆಯ ಮಾಟೆಯಲ್ಲಿ ಆ ಮೂವರೂ ನೆಲೆ ಕಂಡುಕೊಂಡಿದ್ದರು. ಮತ್ತೆ ರಾತ್ರಿಯ ಮಟ್ಟಿಗೆ ಅವರನ್ನು ತುಸುವೇ ದೂರ ಇರಿಸಲು ನಮಗೆ ಹಿಂದಿನ ದಿನ ಅರಣ್ಯಾಧಿಕಾರಿ ಎಚ್ಚರಿಸಿದ್ದೂ ನೆನಪಿತ್ತು. “ಅವರು ಅಸಂಸ್ಕೃತರು, ಕಾಡಿನ ಪರಿಸರದಲ್ಲೆ ಬೆಳೆದು ಬುದ್ಧಿಯಲ್ಲೂ ಪಶು ಪ್ರವೃತ್ತಿ ಹೆಚ್ಚು. ನಾಲ್ಕು ಹುಡುಗಿಯರು ಬೇರೇ ಇರುವ ಈ ತಂಡದ ಮೇಲೆ ರಾತ್ರಿ ಅವರ ದೃಷ್ಟಿಕೋನ ಯಾವ ತೆರನದು ಎಂದು ಹೇಳುವುದು ಕಷ್ಟ. ಅಷ್ಟಲ್ಲದೆ ರಾತ್ರಿಯ ಚಳಿ ಸಹಿಸಲು ಅವರು ಸಾರಾಯಿ ಸೇವಿಸುವುದೂ ಖಂಡಿತ. ಹಾಗಾಗಿ ಕತ್ತಲಾಗುತ್ತಿದ್ದಂತೆ ಅವರನ್ನು ದೂರವೇ ಇಡಿ.” ಅದನ್ನೆಲ್ಲ ನೆನಪಿಟ್ಟುಕೊಂಡು ಗೋವಿಂದರಾಜರು ಅವರನ್ನು ದೂರ ಇಟ್ಟಿದ್ದರು. ಅಷ್ಟು ಸಾಲದೆಂಬಂತೆ ನಮ್ಮ ‘ನಾಗರಿಕ’ ಭಯಗಳಿಗೆ ಸಹಜವಾಗಿ, ಏನೋ ಸುಳ್ಳು ನೆಪಗಳನ್ನು ಹೇಳಿ ಅವರಲ್ಲಿದ್ದ ಎರಡು ಕತ್ತಿಗಳಲ್ಲಿ ಒಂದನ್ನು ಕೇಳಿ ಪಡೆದು, ರಾತ್ರಿಯ ಮಟ್ಟಿಗೆ ನಮ್ಮಲ್ಲೇ ಉಳಿಸಿಕೊಂಡಿದ್ದರು!

[ನನ್ನ ಇಂದಿನ ಅನುಭವದಲ್ಲಿ ಅದು ಅಂದಿಗೂ ತೀರಾ ಅನುಚಿತ ಸಲಹೆ, ನಾವದನ್ನು ಅನುಸರಿಸಿದ್ದು ಮತ್ತಷ್ಟು ಕೆಟ್ಟ ಕ್ರಮವಾಗಿ ತೋರುತ್ತದೆ. ಆ ಕುರಿತು ಇಂದು ನಾನು ಏನು ಹೇಳಿದರೂ ಮಸೀದಿ ಉರುಳಿದ ಮೇಲೆ ವಿಷಾದ ವ್ಯಕ್ತಪಡಿಸಿದಷ್ಟೇ ಪರಿಣಾಮಕಾರಿ. ಆದರೆ ತಮಾಷೆ ಎಂದರೆ, ಇಂದಿಗೂ ಸರಕಾರೀ ಯಂತ್ರ ಈ ತತ್ವವನ್ನು ಜಾತಿಬೇಧದಷ್ಟೇ ವ್ರತನಿಷ್ಠೆಯಲ್ಲಿ, ಸೂಕ್ಷ್ಮದಲ್ಲಿ ಕಾಪಾಡಿಕೊಂಡಿರುವುದನ್ನು ಕಾಣಬಹುದು!]

ರಾಜು ಧ್ವನಿಯಲ್ಲಿದ್ದ ಒರಟು ಕೇಳಿ ಗೋವಿಂದರಾಜ್ ಅಷ್ಟೇ ಅಬ್ಬರದಲ್ಲಿ “ಇಲ್ಲೇ ಬನ್ನಿ, ಕೊಡ್ತೇವೆ” ಎಂದರು. ಅವನಿಗೆ ಸಿಟ್ಟು ಬಂದಿರಬೇಕು, ಜವಾಬೂ ಜನವೂ ಬರಲಿಲ್ಲ. ಅಮಲುಕೋರರ ಕೋಪ ತಡವಾಗಿ ನಮ್ಮ ತಂಡದ ಮೇಲೆ ಎರಗಿದರೆ ಎಂದು ಭಯಪಟ್ಟು ಗೋವಿಂದರಾಜ್ ಒಂದು ನಾಟಕವನ್ನೂ ಮಾಡಿದರು. ನಮ್ಮಲ್ಲಿ ಚಾರಣದಲ್ಲೆಲ್ಲಾದರೂ ಕಾಡಾನೆ ಅಟಕಾಯಿಸಿದರೆ ಬೆದರಿಸಲೆಂದು ಒಯ್ದ ‘ಆಟಂ ಬಾಂಬ್’ ಪಟಾಕಿ ಇತ್ತು. ಅದರಲ್ಲಿ ಒಂದನ್ನು ಹೊಟ್ಟಿಸಿದರು. ಹಿಂಬಾಲಿಸಿದಂತೆ ಏರು ಧ್ವನಿಯಲ್ಲಿ, ತಾವು ತಂದ ತುಪಾಕಿಯ ಆರು ಗುಂಡಲ್ಲಿ ಒಂದನ್ನು ಯಾಕೆ ವ್ಯರ್ಥಗೊಳಿಸಿದೆ ಎಂದು ರಮೇಶನ ಮೇಲೆ ರೇಗಾಡಿದಂತೆ ಮಾತಾಡಿದರು. ಕೇವಲ ಆತ್ಮರಕ್ಷಣೆಗೆ ಎಂದು ತಂದ ಈ ತೋಟೆಗಳ ಲೆಕ್ಕ ನಾಳೆ ಅರಣ್ಯಾಧಿಕಾರಿಗೆ ಹೇಗೆ ಕೊಡಲಿ ಎಂದೆಲ್ಲಾ ಬೊಬ್ಬೆ ಹೊಡೆಯುವ ಭರದಲ್ಲಿ ರಾಜು ಮತ್ತವನ ಬಳಗಕ್ಕೆ ನಮ್ಮಲ್ಲಿ ತುಪಾಕಿಯಿದೆ ಎಂಬ ಪರೋಕ್ಷ ಸಂದೇಶ ಬಿತ್ತರಿಸಿದರು. ಅದು ಎಷ್ಟು ಪರಿಣಾಮಕಾರಿಯಾಯ್ತೋ ಬಿಟ್ಟಿತೋ ಅಂತು ಮತ್ತೆ ರಾತ್ರಿಯಿಡೀ ರಾಜು ಬಳಗದಿಂದ ಯಾವ ಸದ್ದೂ ಬರಲಿಲ್ಲ!

ಮತ್ತೊಂದು ರಾತ್ರಿ ತೆವಳುತ್ತಿತ್ತು. ಅಚ್ಯುತರಾಯರು ಉಣ್ಣೇ ಶರಾಯಿ, ಅಂಗಿ ಮೇಲೆ ಅಂಗಿ ಹಾಕಿ, ತಲೆಯನ್ನೂ ಎರಡು ಮಂಗನ ಟೊಪ್ಪಿಯೊಳಗೆ ಹುಗಿದು, ಒಟ್ಟು ಕಂಬಳಿ ಸುತ್ತಿ ಮತ್ತೆ ಮಳೆಕೋಟೂ ಹೇರಿಕೊಂಡು ಜಗುಲಿಯೊಂದರ ಮೂಲೆಪಾಲಾದರು; ಮೂರನೆಯವರು ನೋಡಿದ್ದರೆ ದೇವರಾಣೆಗೂ ಆ ಬಟ್ಟೆ ಗಂಟಿನೊಳಗೆ ಒಂದು ಮನುಷ್ಯ ಜೀವ ಉಂಟೆಂದು ಹೇಳುವಂತಿರಲಿಲ್ಲ. ರಮೇಶ್ ಜಸವಂತರು ಅಡುಗೆಮೂಲೆಯಲ್ಲೇ ಮುದುಡಿಕೊಂಡರು. ಹುಡುಗಿಯರಷ್ಟೂ ಮೂಟೆಗಟ್ಟಿದಂತೆ ಇನ್ನೊಂದೇ ಮೂಲೆ ಸೇರಿಬಿಟ್ಟರು. ಉಳಿದ ರುದ್ರಪ್ಪ, ಗೋವಿಂದರಾಜ್, ಶ್ರೀನಿವಾಸ್ ಜಗುಲಿಯಲ್ಲಿ ಕೂತಲ್ಲೇ ಹರಟೆಕೊಚ್ಚುತ್ತಿದ್ದರು, ಬಾಲು ಹಾಗೇ ನಿಂತು (ಅವನು ಜಾವೀದ್ ಹೊಕ್ಕ ಗವಿ ಸೇರಲು ಹೆದರಿದ್ದ) ಶೋತೃವಾದ. ಆದರೆ ಯಾವುದೋ ಹೊತ್ತಿನಲ್ಲಿ ಅವನು ಜೊಂಪು ಹತ್ತಿ, ಮುಗ್ಗರಿಸಿ, ಬಂಡೆಗೆ ಸಣ್ಣದಾಗಿ ತಲೆ ಘಟ್ಟಿಸಿ, ನಮ್ಮ ಏಕೈಕ ಬೆಳಕಿನ ಮೂಲ - ಪೆಟ್ರೋಮ್ಯಾಕ್ಸ್ ಪಲ್ಟಿಸಿದ. ಮತ್ತದರ ಗಾಜು, ಮ್ಯಾಂಟಲ್ ಬದಲಿಸಿ ಉರಿಸುವವರೆಗಾದರೂ ಶ್ರೀನಿವಾಸ್ ಚಟುವಟಿಕೆಯ ಸಂತೋಷ ಅನುಭವಿಸಿದರು!

ಬಿಸಿ ಕಾಫಿಯಾದರೂ ಕುಡಿಯೋಣವೆಂದು ‘ಸೂರಿ’ನ ನೀರಿಗೆ ಬಕೆಟಿಡುವಲ್ಲಿಂದ ಕ್ರಮಪಾಠ ಚೆನ್ನಾಯ್ತು, ನಿದ್ದೆಗೇಡಿಗಳಿಗೆ ಬಿಸಿಕಾಫಿ ರುಚಿಸಿದ್ದೂ ಆಯ್ತು. ಆದರೆ ಬೆಳಿಗ್ಗೆ ಎದ್ದ ಮೇಲೆ ತಿಳಿಯಿತು ನಾವು ಕುಡಿದ ಪಾನೀಯದಲ್ಲಿ ಸಾಂಪ್ರದಾಯಿಕ ಕಾಫಿಯ ಮೇಲೆ ಇಷ್ಟು ಮಣ್ಣು, ಬಂಡೆಗಂಟಿದ್ದ ಪಾಚಿಯೂ ಸೇರಿತ್ತು. ಜಸವಂತ ಮುಸುಕಿನೊಳಗಿಂದ ಒಮ್ಮೆಲೆ ಕಾಲು ಚಾಚಿದಾಗ ಬಕಧ್ಯಾನದಲ್ಲಿದ್ದ ಸುಜಾತರಿಗೊಂದು ಲತ್ತೆ ಉಚಿತ. ಸರದಿಯ ಮೇಲೆ ಯಾರ್ಯಾರೋ ಜೋಮುಗಟ್ಟಿದ ಕೈಕಾಲು ಬಿಡಿಸಿಕೊಳ್ಳಲು ಪ್ರಕಟವಾಗುತ್ತಿದ್ದದ್ದು, ಇದ್ದವರು ಅಲ್ಲಲ್ಲೇ ಜೂಗರಿಸುತ್ತಿದ್ದದ್ದು ಹೀಗೆಲ್ಲಾ ಶಯನ ವೈವಿಧ್ಯ ವಿವರಿಸುತ್ತಾ ಹೋದರೆ ಮಹಾಭಾರತದಲ್ಲಿ ಶರಶಯ್ಯೆಯನ್ನು ಸರಳ ಮಂಚವಾಗಿಸಿಕೊಂಡ ಭೀಷ್ಮ ಪಿತಾಮಹನೂ ಬರಬಹುದಾದ ಪುಣ್ಯಕಾಲವನ್ನು ನಿರಾಕರಿಸುತ್ತಿದ್ದನೋ ಏನೋ.

ಹೊಸದಿನದ ಬೆಳಕೇನೋ ಬಂತು. ಆದರೆ “ಬಂಡೆಯಿಂದಾಚೆ ತಲೆ ಹಾಕಲು ಬಿಟ್ಟರೆ ಕೇಳಿ” ಎನ್ನುವಂತಿತ್ತು ದೆವ್ವ ಬಡಿದ ಗಾಳಿ, ಹನಿ ಕಡಿಯದ ಮಳೆ.  ಆದರೂ ಹೊಸದೊಂದು ಸೌಲಭ್ಯ ಒದಗಿತ್ತು. ನಮ್ಮ ಶಿಬಿರದ ಹೊರ ಅಂಚಿನ ಬೆಟ್ಟದ ಒಣ ಝರಿ ಈಗ ಸಂಪನ್ನೆ! [ಪರಿಸರ ಮಾಲಿನ್ಯದ ಯಾವ ಸೋಂಕೂ ತಗುಲದ ಜಾಗವದು ಮತ್ತು ಇಂದು ಅನಿವಾರ್ಯವಾಗಿ ಆ ಕುರಿತು ಉಂಟಾಗಿರುವ ಜಾಗೃತಿಯೂ ಇಲ್ಲದ ದಿನಗಳವು] ವಿಪರೀತದಲ್ಲೂ ನಮ್ಮದು ಹಿಂಗದ ಉತ್ಸಾಹ. ಆ ತೊರೆಯನ್ನೇ ಬೇರೆ ಬೇರೆ ಹಂತಗಳಲ್ಲಿ ಬಳಸಿಕೊಂಡು, ಗಡಗಡಾ ನಡುಗಿಕೊಂಡೇ ನಮ್ಮೆಲ್ಲ ಪ್ರಾತರ್ವಿಧಿಗಳನ್ನು ಪೂರೈಸಿಕೊಂಡೆವು. ಅನುಸರಿಸಿದಂತೆ ಆಯ್ತು ಪಾಕಬ್ರಹ್ಮರು ಕೊಟ್ಟ ಶುದ್ಧ ನೀರಿನ ಕಾಫಿ, ಬಿಸಿಯುಪ್ಪಿಟ್ಟಿನ ಸಂಗಮ [ವರ್ಷ ನಲವತ್ತು ಕಳೆದು ಇಂದು ನೆನೆಸಿದರೂ ಆಹ್, ಅದಕ್ಕೆಂಥ ಗಮಗಮ!].

ಇನ್ನೇನು ಗಂಟು ಗದಡಿ ಕಟ್ಟುವುದು, ತಾತಾರ್ ವಿಜಯ ಸಾರುವುದು ಎಂದು ಸಜ್ಜಾಗತೊಡಗಿದವರಿಗೆ ಎದುರಾಯ್ತೊಂದು ಕಗ್ಗಂಟು! ಬಿಡಿಸಲು ಉಗುರು ಹಲ್ಲುಗಳ ಪ್ರಯೋಗದ ಯೋಚನೆ ಬಿಡಿ, ವಾರ ಕಾಲ ಕಾದು ನೋಡಿ. ಏತನ್ಮಧ್ಯೆ ಸಾಹಸ ಕಥನಕ್ಕೆ ಬಂದ ನಿಮಗಿದು ಜಗಿರಬ್ಬರ್ ಆಯ್ತೇ ಮಂಗಳೂರಿನ ವರ್ಲ್ಡ್ ಫೇಮಸ್ ತಾಜ್ ಮಹಲ್ ಹಲ್ವಾ ಆಯ್ತೇ ಎಂದು ತಿಳಿದುಕೊಳ್ಳುವ ನನ್ನ ಕುತೂಹಲಕ್ಕೊಂದಿಷ್ಟು ಕಾಣಿಕೆ ಹಾಕಲು ಮರೆಯಬೇಡಿ.

2 comments:

 1. ಎಸ್. ಎಮ್. ಪೆಜತ್ತಾಯ25 February, 2010 21:23

  ಪರ್ವತ ವರ್ಧನರೇ!
  ಪರ್ವತ ಏರುತ್ತಿದ್ದಂತೆಯೇ ನಿಮಗೆ ದೇವ ಭಾಷೆ ಹತ್ತಿರ ಆದಂತೆ ನನಗೆ ಭಾಸ ಆಯಿತು.
  ಅದರ ಮಧ್ಯ ತಮ್ಮ ಪಾಚಿ ಯುಕ್ತ ಕಾಫಿ ಮತ್ತು ಉಪ್ಪಿಟ್ಟೆಂಬ ಗೋಂದನ್ನು ಹೊಗಳಿ ಬರೆದುದು ತುಂಬಾ ಇಷ್ಟ ಆಯಿತು. ಈ ಪ್ರಸ್ತಾಪ ನಿಜಕ್ಕೂ ಓದುಗನನ್ನು ವಾಸ್ತವ ಪ್ರಪಂಚಕ್ಕೆ ಹೊತ್ತು ಬಂದುವು.

  ಆದಿಮಾನವರು ಬಾರ್ಬೆಕ್ಯೂ.ತಯಾರಿಸುವ ಚಿತ್ರ ಲೇಖನದ ಮದ್ಯೆ ಯಾಕೆ ಬಂತು?- ಎಂಬುದೇ ನನಗೆ ಒಂದು ಯಕ್ಷ ಪ್ರಶ್ನೆ. ಉತ್ತರಿಸದೇ ಇದ್ದರೆ ತಮ್ಮ ಮೀಸೆ ಡಿಪ್ ಗೆಲ್ವನಾ ಮೀಟರಿನಂತೆ ನೆಲ ತೋರಿಸೀತು!

  ತಮ್ಮ ನಿರಾಶ್ರಿತರ ಶಿಬಿರ ನನ್ನ ವೈರಿಗೂ ಬೇಡ!

  ವಂದನೆಗಳು

  ಎಸ್. ಎಮ್. ಪೆಜತ್ತಾಯ

  ReplyDelete
 2. /nimma pravasa kathan-vanyaloka odide. Nimma vishishtavada shyliyannu naanu yaavaagalu tumbaa mecchuttene.
  Nimma eeterada blog baraha munduvariyuttirali

  Gauravagalondige
  Raghu Narkala

  ReplyDelete