08 January 2010

ಹೋಗೋಣ ಬನ್ನಿ ತಾತಾರಿಗೆ

“ಕ್ರಿಸ್ಮಸ್ ರಜೆಗೆ ಬಸ್ಸೇರಿ ರಾಮೋಜಿ ಸಿಟಿ ನೋಡಲು ಹೊರಟಿದ್ದೇವೆ” ಗೆಳೆಯ ಮನೋಹರ ಉಪಾಧ್ಯ ಹೇಳಿದ್ದರು. ಆದರೆ ತೆಲಂಗಾಣದ ಗದ್ದಲಕ್ಕೆ ಹೆದರಿ, ಕಡೇ ಮಿನಿಟಿಗೆ ಯೋಜನೆ ಬದಲಿಸಿ, ಸ್ವಂತ ವಾಹನದಲ್ಲಿ ಊಟಿಯನ್ನು ಮುಟ್ಟಿ ಬಂದರು. ಎರಡೂವರೆ ಜನ (ಹೆಂಡತಿ ವಿದ್ಯಾ ಮತ್ತು ಮಗ ಸುಧನ್ವ, ಸಣ್ಣವನಾದ್ದರಿಂದ ೧/೨) ಮಾತ್ರ ತುಂಬಿಕೊಂಡು ಎರಡು ದಿನದ ಹೋ-ಬರುವ ಚಾಲನೆಯ ನಡುವೆ ಉಳಿದ ಎರಡೂವರೆ ದಿನದಲ್ಲಿ ಎಷ್ಟು ನೋಡಿರಬಹುದು, ಏನು ಅನುಭವಿಸಿರಬಹುದು ಎಂದು ಉಪೇಕ್ಷೆಯಲ್ಲೇ ವಿಚಾರಿಸಿದೆ. ಕಾಸರಗೋಡು, ಸುಲ್ತಾನ್ ಬತ್ತೇರಿಯ ದಾರಿ ಹಿಡಿದಿರಬೇಕು ಎಂಬ ನನ್ನೂಹೆ ತಪ್ಪಾಗಿತ್ತು. ಮನೋಹರ್ ಮೈಸೂರು ದಾರಿಯನ್ನೇ ಹಿಡಿದಿದ್ದರು. ೧೯೭೧ರಲ್ಲಿ ಇದೇ ಊಟಿವಲಯದಲ್ಲಿ ನನ್ನೊಂದು ಸಾಹಸ ಯಾತ್ರೆ ತೊಡಗಿದ್ದೂ ಮೈಸೂರಿನಿಂದ ಎಂದು ಮನಸ್ಸು ಒಮ್ಮೆಲೇ ಜಾಗೃತವಾಯ್ತು. ಮನೋಹರ್ ಮುಂದುವರಿದು “ನಾವ್ short cut, ಮಾಸ್ನಿಗುಡಿ ದಾರಿ ಹಿಡಿತ್ತ್” ಎಂದರು. ಅವರಿಗೆ ಬಲುದೂರದಿಂದಲೇ ಆಕಾಶಕ್ಕೆದ್ದ ದಿಗಂತದಂತೇ ತೋರುವ ಉದಕಮಂಡಲ ಶ್ರೇಣಿ ಒಟ್ಟಾರೆ ವಾಹನಸಾಧ್ಯ ಹತ್ತಿರದ ದಾರಿಯಲ್ಲಿ ಹತ್ತುವುದಷ್ಟೇ ಗುರಿ. ಒತ್ತಿನ ಕಾಡು, ಮಂಜುಮೋಡ ಮುಡಿದ ಬೆಟ್ಟಸಾಲುಗಳೆಲ್ಲ ದಾರಿ ಸಾಗುವಾಗ ದಕ್ಕುವ ಸಹಜ ಸುಂದರ ದೃಶ್ಯ ಮಾತ್ರ. ಸುಮಾರು ನಾಲ್ಕು ದಶಕದ ಹಿಂದೆ ನನಗೋ ‘ಮಸಣಿಗುಡಿ’ ಮಹಾಸಾಹಸಕ್ಕೆ ತಳಶಿಬಿರ. ಇನ್ನು ಕಾಡು, ನಡಿಗೆಯಲ್ಲಿ ಪಾರುಗಾಣಲೇಬೇಕಾದ ‘ದುಷ್ಟಮೃಗ’ಗಳ ಬೀಡು. ಮತ್ತೆ ಬೆಟ್ಟ, ಹತ್ತಿ ಜಯಿಸಲೇ ಬೇಕಾದ ತಾತಾರ್ ಶಿಖರದ ಸವಾಲು. ನನ್ನ ಉದಕಮಂಡಲದ ಪ್ರಥಮ ಸಂದರ್ಶನದ ನೆನಪು ಇನ್ನಿಲ್ಲದಂತೆ ಒತ್ತರಿಸಿ ಬಂತು. ಉಪಾಯ್ದರು ಸ್ವಭಾವತಃ ದಾಕ್ಷಿಣ್ಯಪರರು, ಮಾತು ಕಡಿಮೆಯವರು. ಇನ್ನು ಅನ್ಯರ ಅನುಭವಗಳಿಗೆ ಕಿವಿಯಾಗುವ ನೆಪದಲ್ಲಿ ತಮ್ಮ ಕಡತ ಬಿಚ್ಚುವವರ ‘ಮುದಿತನ’ವನ್ನು ನಾನು ಪ್ರಕಟಿಸಿಬಿಟ್ಟಿದ್ದರೆ ಫಜೀತಿಯಾಗುತ್ತಿತ್ತು; ಬಹಳ ಕಷ್ಟದಿಂದ ನಿಯಂತ್ರಿಸಿದೆ! ಆದರೆ ಅನೂಹ್ಯಲೋಕದ, ಅಸಂಖ್ಯಭಾವದ ಜಾಲಿಗರೇ ನಿಮ್ಮೆದುರು ನನಗೇನೂ ಸಂಕೋಚವಿಲ್ಲ. (ನಿಮಗೆ ಬೇಡವೆನ್ನಿಸಿದಾಗ ಇಲ್ಲೇ ಮೇಲಿನ ಬಲಮೂಲೆಯಲ್ಲಿ ಚಿಟಿಕೆ ಹೊಡೆದು, ಮೌನವಾಗಿದ್ದರೆ ನಾನು ಕೇಳಲುಂಟೇ!)

೧೯೬೯ಕ್ಕೆ ನನ್ನ ತಂದೆ (ಜಿಟಿ ನಾರಾಯಣ ರಾವ್) ಮೈಸೂರು ವಿವಿನಿಲಯದ ಕನ್ನಡ ವಿಶ್ವಕೋಶಕ್ಕೆ ವಿಜ್ಞಾನ ಸಂಪಾದಕರಾಗಿ ನೇಮನಗೊಳ್ಳುವುದರೊಡನೆ ನನಗೆ ಮಹಾರಾಜಾ ಕಾಲೇಜಿನಲ್ಲಿ ಸ್ನಾತಕ ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾಯ್ತು. ಅಂದು ವಿಶ್ವಕೋಶ ಯೋಜನಾ ಬಳಗದಲ್ಲಿ ನಿಯಮಕ್ಕೆ ತಕ್ಕ ಕೆಲಸ ಆಗುತ್ತಲೇ ಇರಲಿಲ್ಲ; ಹೆಚ್ಚೇ ಆಗುತ್ತಿತ್ತು! ದೇಜಗೌ ಮಾಂತ್ರಿಕ ಪ್ರೇರಣೆ ಅಂಥದ್ದು. ಎಚ್ಚೆಸ್ಕೆ, ಪ್ರಹ್ಲಾದರಾವ್ ಆದಿಯಾಗಿ ಅವರು ಕಟ್ಟಿದ್ದ ಕೂಟಕ್ಕೆ ಕೆಲಸವೇ ಅಮಲು. ಬೆಳಕು ಹರಿದಲ್ಲಿಂದ ಕತ್ತಲು ಮುಸುಕುವವರೆಗೂ ಇವರು ಪ್ರೀತಿಯಿಂದ ದುಡಿದಿದ್ದರು. (ಅಚ್ಚುಕೂಟದ ಕೆಲಸಕ್ಕಾಗಿ ಬೆಂಗಳೂರಿಸಿದಾಗ ರಾತ್ರಿ ಪಾಳಿಯಲ್ಲೂ ಯಾವ ಹೆಚ್ಚಿನ ಆರ್ಥಿಕ ಪ್ರಯೋಜನ ಕಾರಣವಾಗದೇ ಶ್ರಮಿಸಿದ್ದರು) ಜಗತ್ತಿನ ಎಲ್ಲಾ ಆಗುಹೋಗುಗಳನ್ನೂ ಕನ್ನಡಕ್ಕೆ ಮೂಲದಿಂದ ತರುವಲ್ಲಿ, ಅನುಭವದ ಬಲದಲ್ಲಿ ರೂಢಿಸುವಲ್ಲಿ ಅಂದು ಪ್ರತಿಯೊಬ್ಬ ವಿಶ್ವಕೋಶ ನೌಕರನೂ ಬದ್ಧ. (ಸ್ವಾಮೀ ಚಿನ್ಮಯಾನಂದರು ತಮ್ಮ ಅಜ್ಞಾನದಲ್ಲಿ ಕೇಳಿದಂತೆ ಇಂಗ್ಲಿಷಿನ ಖ್ಯಾತ ವಿಶ್ವಕೋಶ - ಬ್ರಿಟಾನಿಕಾವೋ ಅಮೆರಿಕಾನವೋ ಒಂದರ ಅನುವಾದ ಅಲ್ಲ) ನನ್ನ ತಂದೆ (ಗುಡ್ಡಗಾಡಿನ) ಕೊಡಗಿನ ಹಿನ್ನೆಲೆ ಮತ್ತೆ ಎನ್.ಸಿ.ಸಿಯ ಅಧಿಕಾರಿಯಾಗಿದ್ದ ಅನುಭವದಲ್ಲಿ ಸಾಕಷ್ಟು ಗುಡ್ಡಬೆಟ್ಟಗಳನ್ನು ಹುಡಿಮಾಡಿದ್ದರು. ಸಹಜವಾಗಿ ಇವರಿಗೆ ಮೊದಲ ಸಂಪುಟದ ‘ಎವರೆಸ್ಟ್’ ನಮೂದಿನಲ್ಲಿ ಭೂವಿಜ್ಞಾನದೊಡನೆ ‘ಪರ್ವತಾರೋಹಣ’ ಕಾಣಿಸಿತು. ಕನ್ನಡವೆಷ್ಟು ಸಮೃದ್ಧವೋ ಕನ್ನಡಿಗರೂ ಅವಕಾಶ ಒದಗಿದರೆ ಅಷ್ಟೇ ಸಂಪನ್ನರು ಎಂದು ಜಾಹೀರುಗೊಳಿಸುವ ಹಠ ನನ್ನ ತಂದೆಗೆ ಯಾವತ್ತೂ ಇತ್ತು. ಸಹಜವಾಗಿ ಅವರು “ಯಾರಿದ್ದಾರೆ ಪರ್ವತಾರೋಹಣಕ್ಕೆ” ಎಂದು ಡಂಗುರಿಸಿದಾಗ ಮೈಸೂರಿನಲ್ಲೇ ಸಮರ್ಥವಾಗಿ ಸಿಕ್ಕವರು ವಿ. ಗೋವಿಂದರಾಜ್.

ವಿದ್ಯಾರ್ಥಿ ದೆಸೆಯಿಂದಲೇ ಸ್ಕೌಟ್ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಗೋವಿಂದರಾಜ್ ಜಿಲ್ಲಾ ಉಪ-ವರಿಷ್ಠನ ಸ್ಥಾನದವರೆಗೂ ಏರಿದವರು. (ಅಲ್ಲಿನ ರಾಜಕೀಯಗಳಿಗೆ ಬೇಸತ್ತು ಇವರು ಹೊರ ಬಾರದಿರುತ್ತಿದ್ದರೆ ರಾಷ್ಠ್ರಮಟ್ಟಕ್ಕೂ ಏರುವ ಯೋಗ್ಯತಾವಂತರು) ಪರ್ವತಾರೋಹಣದಲ್ಲಿ ಸ್ವತಃ ಪ್ರಥಮ ಎವರೆಸ್ಟ್ ಆರೋಹಿ ತೇನ್‌ಸಿಂಗರ ಶಿಷ್ಯ. ಇನ್ನೊಂದೇ ಹವ್ಯಾಸವಾದ ದೇಹದಾರ್ಢ್ಯ ಮತ್ತು ಕುಸ್ತಿಪಟುತನಗಳ ಮೇಳದಲ್ಲಿ ಗೋವಿಂದರಾಜ್ ಬಲುಬೇಗನೆ (೧೯೬೬) ಹಿಮಾಲಯದ ಸಾಹಸಯಾತ್ರೆಯೊಂದಕ್ಕೂ ಆಯ್ಕೆಯಾದರು. ಹಿಮಾಲಯದ ಚತುರಂಗಿ ಶ್ರೇಣಿಯಲ್ಲಿ ‘ಭಗೀರಥ - ೨’ ಶಿಖರ (ಸಮುದ್ರ ಮಟ್ಟದಿಂದ ೨೨,೦೦೦ ಅಡಿಗಳು) ಇವರ ಲಕ್ಷ್ಯ. ಅದರ ಮೇಲಿನ ವಿಜಯಘೋಷ ಇವರಿಗೆ ಸುಲಭದಲ್ಲಿ ದಕ್ಕಲಿಲ್ಲ. ವಿಪರೀತದ ಹವಾಮಾನದಲ್ಲಿ ಶಿಖರ ಸಾಧಿಸಿದವರು ಮೂವರಾದರೂ ಅವರೋಹಣದ ಅವಘಡದಲ್ಲಿ ಇವರೊಬ್ಬರೆ ಉಳಿದುಬಂದರು. (ವಿವರಗಳಿಗೆ ನೋಡಿ: ‘ನಾನು ಸಾವಿನ ದವಡೆಯಿಂದ ಪಾರಾದೆ’ ಕಸ್ತೂರಿ ಜನವರಿ ೧೯೬೮) ಅದರ ಪರಿಣಾಮವಾಗಿ ಕಾಲಿನ ಎಲ್ಲಾ ಬೆರಳುಗಳೂ ಕೈಯ ಎರಡು ಬೆರಳೂ ಹಿಮವ್ರಣದಲ್ಲಿ ಲೋಪವಾದರೂ ಗೋವಿಂದರಾಜರ ಒಳಗಿನ ಸಾಹಸಿ ಸುಮ್ಮನುಳಿಯಲಿಲ್ಲ. ಸಂಜೆ ಕಾಲೇಜಿನಲ್ಲಿ ಓದುತ್ತಾ ವೃತ್ತಿಯಾವಶ್ಯಕತೆಯಲ್ಲಿ ಜಾವಾ ಮೋಟಾರು ಸೈಕಲ್ ಕಾರ್ಖಾನೆಯಲ್ಲಿ ಸ್ವಾಗತಕಾರನಾಗಿ ದುಡಿಯುತ್ತಾ ದಖ್ಖಣ ಪರ್ವತಾರೋಹಣ ಸಂಸ್ಥೆಯನ್ನು ಕಟ್ಟಿದರು. ಪರ್ವತಾರೋಹಣದ ಬಗ್ಗೆ ರಂಜನೀಯ ಕಥೆಗಾರನಾಗಿ ಉಳಿಯದೆ ಮೈಸೂರಿನಲ್ಲಿ ಸಾಹಸಪ್ರಜ್ಞೆಯ ಹರಿಕಾರನಾಗಿ ದುಡಿದರು. (ಇಲ್ಲಿ ಅವರ ಅಭಿಮಾನಿಗಳಿಗೊಂದು ನಷ್ಟದ ನುಡಿ: ೨೦೦೯ರಲ್ಲಿ ಗೋವಿಂದರಾಜರು ಪ್ರಕೃತಿಯಲ್ಲಿ ಲೀನವಾದರು.) ಗೋವಿಂದರಾಜರಿಂದ ತಂದೆ ಲೇಖನ ಮಾತ್ರ ಪಡೆದದ್ದಲ್ಲ, ಪರ್ವತಾರೋಹಣದ ಒಲವು ತೀವ್ರವಾಗಿದ್ದ ಮಗನಿಗೆ (ಮೊದಲು ನನಗೆ, ಸ್ವಲ್ಪ ಕಾಲಾನಂತರ ನನ್ನ ತಮ್ಮ ಆನಂದನಿಗೂ) ಸಮರ್ಥ ಗುರುವನ್ನೂ ಕಂಡುಕೊಂಡರು.

ಶನಿವಾರ ಸಂಜೆ ಮೀಟಿಂಗು, ಆದಿತ್ಯವಾರ ಔಟಿಂಗು. ಚಾಮುಂಡಿ ಬೆಟ್ಟ, ಕರಿಘಟ್ಟ, ಪಾಂಡವಪುರದ ಕುಂತಿಬೆಟ್ಟದ ಜಾಡು ಮೇಡುಗಳು, ಬಂಡೆ ಕೊರಕಲುಗಳು ನಮಗೆ ಅಂಗೈ ರೇಖೆ. ಸೂರ್ಯನುದಯಿಸುವ ಮೊದಲು  ಬುತ್ತಿ, ನೀರು ಕಟ್ಟಿಕೊಂಡು ಸೈಕಲ್ ಏರಿ ಹೋದವರಿಗೆ ದೂರ, ವಿಶ್ರಾಂತಿಗಳ ಪರಿವೆಯೇ ಇರುತ್ತಿರಲಿಲ್ಲ. ಎರಡೋ ಮೂರೋ ಗಂಟೆಗೆ ಇನ್ನು ದೇಹ ತಡೆಯಲಾರದು ಎನ್ನುವ ಹೊತ್ತಿನಲ್ಲಿ, ಬುತ್ತಿಯೂಟ ಮುಗಿಸಿ, ಹೆಚ್ಚಿನುತ್ಸಾಹದಲ್ಲಿ ಮನೆಗೆ ಪೆಡಲ್ ಮೆಟ್ಟುತ್ತಿದ್ದೆವು. ಒಂದು ರಾತ್ರಿಯ ಶಿಬಿರವಾಸದ ಅನುಭವಕ್ಕೆ ರಾಮನಗರದ (ಸುಮಾರು ೯೨ ಕಿಮೀ) ಮತ್ತು ಮೇಲುಕೋಟೆಯ (ಸುಮಾರು ೩೮ ಕಿಮೀ) ಬಂಡೆಗಳೂ ನಮ್ಮ ಸೈಕಲ್ ಯಾನಕ್ಕೆ ದೂರವಾಗುತ್ತಿರಲಿಲ್ಲ. ಇವನ್ನು ಮೀರಿದ ವರ್ಷದ ವಿಶೇಷಕ್ಕೆ ಅಂದು, ಅಂದರೆ ೧೯೭೧ರ ಕೊನೆಯ ದಿನಗಳಲ್ಲಿ ನಮ್ಮ ಸಂಸ್ಥೆ ಆರಿಸಿಕೊಂಡದ್ದು ಉದಕಮಂಡಲ ಶ್ರೇಣಿಯ, ಹತ್ತುವಲ್ಲಿ ಅತ್ಯುನ್ನತಿಯನ್ನು ಪಡೆದ ಶಿಖರ - ತಾತಾರ್ (ಹೆಸರಿಗೆ ದಕ್ಷಿಣ ಭಾರತಕ್ಕೆ ದೊಡ್ಡದೆನಿಸಿದ ಶಿಖರ - ದೊಡ್ಡಬೆಟ್ಟವನ್ನು ತೇನವಿನಾ ಪಂಗುಂ ಲಂಘಯತೇ!).

ಜಾವಾ ಮೋಟಾರ್ ಸೈಕಲ್ ಕಾರ್ಖಾನೆಯ ಮಾಲಿಕ ಎಫ್. ಕೆ ಇರಾನಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ಅಧ್ಯಕ್ಷ. ಇವರ ಪೂರ್ಣ ಪ್ರೋತ್ಸಾಹದೊಡನೆ ಆಗಸ್ಟ್ ತಿಂಗಳಲ್ಲೇ ಗೋವಿಂದರಾಜ್ ಮಿತ್ರನೊಬ್ಬನನ್ನು ಕೂಡಿಕೊಂಡು ಮೋಟಾರ್ ಸೈಕಲ್ಲಿನಲ್ಲಿ ಆ ವಲಯಕ್ಕೆ ಹೋಗಿ, ಮೋಜಣಿ ನಡೆಸಿ, ಡಿಸೆಂಬರಿಗೆ ದಿನ ನಿಶ್ಚಯ ಮಾಡಿಬಂದರು. ಡಿಸೆಂಬರ್ ಹನ್ನೆರಡರಂದು ಇಪ್ಪತ್ತು ಜನರ ತಂಡಕ್ಕೆ ಇರಾನಿಯವರಿಂದ ಔಪಚಾರಿಕ ಬೀಳ್ಕೊಡುಗೆ. ಮುಂದಿನ ಮೂರು ದಿನ ಮೂರುಕ್ಷಣ. ಗೋವಿಂದರಾಜ್ ತಂಡದಲ್ಲಿದ್ದರೂ ಆ ಸಾಹಸಯಾತ್ರೆಯ ನಾಯಕತ್ವವನ್ನು ಸುಜಾತರಿಗೆ ವಹಿಸಿದ್ದರು. ವಿಜ್ಞಾನ ಪದವೀಧರೆ, ಎನ್.ಸಿ.ಸಿಯ ಪೂರ್ಣಕಾಲಿಕ ಶಿಕ್ಷಕಿ ಸುಜಾತ ಸಂಸ್ಥೆಯ ಹಳೆಯ ಪೈಕಿಯಲ್ಲಿ ಮುಖ್ಯರು. ಹಿಮಾಲಯದಲ್ಲೇ ಪರ್ವತಾರೋಹಣ ಶಿಕ್ಷಣವನ್ನೂ ಪಡೆದಿದ್ದ ಈಕೆ ಶಿಸ್ತು ಸಂಯಮಗಳಿಗೆ ಇನ್ನೊಂದು ಹೆಸರು. ತಂಡದ ಉಗ್ರಾಣಿ - ರಮೇಶ, ಕುಶಲ ಬಾಣಸಿಗನೂ ಹೌದು. ಈತ ತಮ್ಮ ನರೇಶನ ಜತೆಯಲ್ಲಿ ನಾಯಕಿಗೆ ಸಾಮಾನು ಸರಂಜಾಮುಗಳ ಒಟ್ಟಣೆಯಲ್ಲಿ ತೊಡಗಿಕೊಂಡ. ಸುಮಾರು ಇಪ್ಪತ್ತೆರಡು ಮಂದಿಗೆ (ಸ್ಥಳೀಯವಾಗಿ ಸೇರಲಿದ್ದ ಮಾರ್ಗದರ್ಶಿಗಳು ಸೇರಿ) ಕನಿಷ್ಠ ಮೂರು ದಿನಕ್ಕೆ ಹೊಟ್ಟೆಪಾಡು, ಅದೂ ನಾವೇ ಹೊತ್ತು ಸಾಗಿಸುವುದರೊಡನೆ, ಅಟ್ಟು ರುಚಿಸಿಕೊಳ್ಳಬೇಕಾದ ರೀತಿಯಲ್ಲಿ ಸಂಗ್ರಹಿಸುವುದು ಸಾಮಾನ್ಯ ಕೆಲಸವಲ್ಲ.

ಸುಜಾತರ ಎನ್.ಸಿ.ಸಿ ಸಹೋದ್ಯೋಗಿ - ಕಾವೇರಿ ಕೂಡಾ ಹಿಮಾಲಯದಲ್ಲಿ ತರಬೇತಾದ ಪರಿಣಿತೆ, ನಮ್ಮ ಸಾಹಸಯಾತ್ರೆಯಲ್ಲೂ ಜತೆಗಾತಿ. ನಿರ್ಮಲಾ ಪ್ಯಾಟ್ರಿಕ್ (ಬಿ.ಎ., ಎಂ.ಎ ಗಳಲ್ಲಿ ನನ್ನ ಸಹಪಾಠಿ, ಇವಳೂ ಹಿಮಾಲಯದಲ್ಲಿ ಪರ್ವತಾರೋಹಣ ತರಬೇತು ಪಡೆದವಳು) ಮತ್ತು ಪದ್ಮ (ತಂಡದಲ್ಲಿ ಅತಿಕಿರಿ ಪ್ರಾಯದವಳು) ಇತರ ಮಹಿಳಾ ಸದಸ್ಯರು. ಪ್ರಾಯದಲ್ಲಿ ಎಲ್ಲರಿಗೂ ಹಿರಿಯ (ಉದ್ಯಮಿ) ಬಾಹುಸಾರ್ ಅಚ್ಚುತರಾವ್ ತಂಡದ ಉಪನಾಯಕ. ಈಗಾಗಲೇ ಹೆಸರಿಸಿದ ರಮೇಶ ನರೇಶರಲ್ಲದೆ ಜಸವಂತ, ಶ್ರೀನಿವಾಸ (ಪದ್ಮಳ ಅಣ್ಣ), ಜಾವೀದ್ ಸೇಟ್, ನಾಗರಾಜ್, ಗಿರೀಶ, ಜಯರಾಮ, ರವಿ, ಜಯರಾಮ ಪುರಾಣಿಕ್, ರುದ್ರಪ್ಪ ಮತ್ತು ಬಾಲಸುಬ್ರಹ್ಮಣ್ಯ ಇತರ ಸದಸ್ಯರು. ಇವರೆಲ್ಲರ ನೆನಪು ಸಂದ ಮೂವತ್ತು ವರ್ಷಗಳನಂತರ ಇಂದು ನನಗೆ ಹೇಗಾಯ್ತು, ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.

ಯಾತ್ರೆಗೆ ಮುನ್ನ ನಾಯಕಿ ಸದಸ್ಯರ ಒಲವರಿಯದೆ ಹೊಣೆ ಹಂಚುತ್ತ ಜಸವಂತನನ್ನು ‘ತಂಡದ ಲೇಖಕ’ ಎಂದಿದ್ದರು. ಜಸವಂತ ಏನೂ ಮಾಡಲಿಲ್ಲ ಬಿಡಿ. ಆದರೆ (ನಗಾಡಬೇಡಿ) ಅಂದು ನನ್ನ ಮಟ್ಟಿಗೆ ಅದೊಂದು ಕ್ರೌಂಚವಧಾ ಪ್ರಸಂಗ! ಯಾತ್ರೆ ಮುಗಿಸಿ ಮನೆಗೆ ಬಂದು ಕುಳಿತದ್ದೇ (ವಲ್ಮೀಕದೊಳಗಲ್ಲ) ಮೂವತ್ತು ನಲವತ್ತು ಪುಟದುದ್ದಕ್ಕೆ ‘ಕಾವ್ಯಧಾರೆ’ ಹರಿದಿತ್ತು. ಮಾರಣೇ ದಿನ ನಮ್ಮ ಪರ್ವತಾರೋಹಣ ಸಂಸ್ಥೆಯ ವಠಾರದಲ್ಲಿ ನಾವೇ ಭಾಗಿಗಳು ಸಂತೋಷ ಹಂಚಿಕೊಳ್ಳಲು ಸೇರಿದ್ದೆವು. ಹುತ್ತವನ್ನು ಹಿಮಾಲಯ ಮಾಡುವ ಮಾತುಗಳ ಎಡೆಯಲ್ಲಿ, ನನ್ನ ಬರವಣಿಗೆ ವಾಚನ. ಅಳಿದೂರಿಗೆ ಉಳಿದವನೇ ಗೌಡ! ಗೋವಿಂದರಾಜ್ ಆದಿಯಾಗಿ ಎಲ್ಲರೂ ಆ ಬರವಣಿಗೆ ಪರಿಪೂರ್ಣಗೊಂಡು, ಪುಸ್ತಕವಾಗಿ ಪ್ರಕಟವಾಗಲೇ ಬೇಕು ಎಂದು ಆಶಿಸಿದರು, ಹಾಗೇ ಆಯ್ತು. (ವಿವರಗಳಿಗೆ ನೋಡಿ: ಇನ್ನು ಬರುವುದಿಲ್ಲ ಡೀವೀಕೆ)

‘ತಾತಾರ್ ಶಿಖರಾರೋಹಣ’ (೧೯೭೩) ಎಂಬತ್ನಾಲ್ಕು ಪುಟಗಳ (ಐದು ಹಾಲುಕಾಗದದಲ್ಲಿ ಇಪ್ಪತ್ತೊಂದು ಚಿತ್ರಗಳ ಸಹಿತ) ಸರಳ ಗದ್ಯ ಪ್ರವಾಸಕಥನ (ಬೆಲೆ? ಕೇವಲ ಎರಡೂವರೆ ರೂಪಾಯಿ). ಪ್ರಕಟಣಪೂರ್ವ ಪುಸ್ತಕ ಓದಿ, ಪ್ರಮಾಣಪತ್ರ ಕೊಟ್ಟ ಖ್ಯಾತ ಲೇಖಕ ಎನ್. ಪ್ರಹ್ಲಾದರ ರಾಯರದೇ ಬೆನ್ನುಡಿ. ಅವರು ಬರೆದರು “ಪುಸ್ತಕದುದ್ದಕ್ಕೂ ಪರ್ವತಾರೋಹಣ ತಂತ್ರವನ್ನು, ಸಾಮಾನ್ಯ ಓದುಗರಿಗೆ ಹೊರೆಯಾಗದಂತೆ, ಈ ಲೇಖಕರು ಅವಧರಿಸಿದ್ದಾರೆ. ಜೀವನದ ರಸ ಹಾಗೂ ವಿಷ ನಿಮಿಷಗಳನ್ನು ಇವರು ನಿರಪೇಕ್ಷ ದೃಷ್ಟಿಯಿಂದ ಅವಲೋಕಿಸಿ, ಆಕರ್ಷಕವಾಗಿ ನಿರೂಪಿಸಬಲ್ಲರು ಎನ್ನುವುದಕ್ಕೆ ಈ ಪುಸ್ತಕ ಸಾಕ್ಷಿ. ಪರ್ವತಾರೋಹಣವೇ ಆಗಲಿ, ಅದರ ನಿರೂಪಣೇಯೇ ಆಗಲಿ ಎಂದೂ ಕಳಾಹೀನವಾಗವು - ಯಾರು ಮತ್ತು ಯಾವ ಬದಿಯಿಂದ ಏರುತ್ತಾರೆ ಎನ್ನುವುದರ ಮೇಲೆ ಅವು ಅವಲಂಬಿಸಿವೆ.” ಹೋಂ ಗಾರ್ಡ್ಸ್ ಭವನದಲ್ಲಿ ಎಫ್. ಕೆ. ಇರಾನಿಯವರ ಅಧ್ಯಕ್ಷತೆಯಲ್ಲಿ ಪ್ರೊ| ದೇ. ಜವರೇಗೌಡರು  ಅದಕ್ಕೊಂದು ಭರ್ಜರಿ ಅನಾವರಣದ ನೂಕು ಬಲವನ್ನೂ ಕೊಟ್ಟರು. ಹಾಗಾದರೆ ಕಥನ ಹೇಗಿದೆ ಕುತೂಹಲವೇ?

ಮನೋಹರ ಉಪಾಧ್ಯರ ನೆಪದಲ್ಲಿ ಇಷ್ಟುದ್ದ ಕೊರೆದು, ನನ್ನೊಂದು ಪುಸ್ತಕ ‘ಪುಷ್ ಮಾಡುತ್ತಿದ್ದೇನೆ’ ಎಂದು ನಿಮಗನ್ನಿಸಿದ್ದರೆ ಕ್ಷಮಿಸಿ, ಅದು ಪ್ರತಿಗಳು ಮುಗಿದು ವರ್ಷ ಇಪ್ಪತ್ತು ಸಂದವು. ನಿಮಗಿನ್ನೂ ಅದರಲ್ಲಿ ಕುತೂಹಲವುಳಿದಿದ್ದರೆ ಇಲ್ಲೇ ಕೆಳಗೆ ಮಾಯಾಪೆಟ್ಟಿಗೆಗೆ ನಾಲ್ಕು ಮಾತು ಹಾಕಿ. ಕಾಲಕೋಶವನ್ನು ನಲ್ವತ್ತು ವರ್ಷಗಳ ಹಿಂದಕ್ಕೆ ಸಜ್ಜುಗೊಳಿಸಿ, ಮುಂದಿನವಾರ ಘೋಷವಾಕ್ಯ ಹಾಕುತ್ತೇನೆ “ಹೋಗೋಣ ಬನ್ನಿರೋ ತಾತಾರಿಗೆ.”

ಚಿತ್ರ ಕೃಪೆ: ಪುಸ್ತಕದಲ್ಲೂ ಪ್ರಕಟವಾಗಿದ್ದ ಹಳೆಯ ಚಿತ್ರಗಳು: ರಮೇಶ್. ಉದಕಮಂಡಲ ಶ್ರೇಣಿ: ಡಾ| ಮನೋಹರ ಉಪಾಧ್ಯ.

7 comments:

 1. Waiting for tataar trekking story

  ReplyDelete
 2. ಈಗ ತಿಳಿಯಿತು ನಿಮ್ಮ ಕಡಿಮೆ ಕೊಬ್ಬಿನ [ದೇಹದ್ದು ]ರಹಸ್ಯ!ಮಯ್ಸೂರಿನಲ್ಲಿ ಅಶ್ಟೊಂದು ಸಯಿಕಲ್ ಮೆಟ್ಟಿದ್ದು!

  ReplyDelete
 3. thudi gaalalli kayuthiddeve

  ReplyDelete
 4. ನರೇಂದ್ರ09 January, 2010 13:53

  ಅರೆ! ಪುಸ್ತಕ ಪುಶ್ ಮಾಡಿದ್ದರೂ ನಾವೆಲ್ಲ ತಯಾರಿದ್ದೆವು ಸ್ವಾಮೀ! ಪುಕ್ಕಟೆ ಕೊಡುತ್ತೇನೆ ಅನ್ನುತ್ತಿದ್ದೀರಿ! ನಿಮಗೇಕೆ ಅನುಮಾನ, ಹೊರಟು ನಿಂತಿದ್ದೇವೆ ಆಗಲೆ, ರೈಟ್ ಪೋಯಿ!

  ReplyDelete
 5. ಎಲ್ಲರನ್ನೂ ಒಟ್ಟಿಗೆ ಬೆಟ್ಟ ಹತ್ತಿಸಿ ಬಿಡಿ.ಅನಾಯಾಸವಾಗಿ ಸಿಗಲಿ ನಮಗೊಂದು ವಿಹಂಗಮ ನೊಟ.

  ReplyDelete
 6. ನಾಗರಾಜ ರಾವ್ ಜವಳಿ10 January, 2010 14:16

  ಪ್ರಿಯ ಅಶೋಕ್,
  ಜತೆಟ್ಟು ಯಾನ್‍ಲಾ ಬರ್ಪೆ. ರೈಟ್ ಪೋಯಿ.
  ಜವಳಿ.

  ReplyDelete
 7. Balagangadhara Thilak21 January, 2010 19:28

  When "manas" is the horse it carries us to the amazing places and makes this life floating in the sky.

  ReplyDelete