13 December 2009

ಇನ್ನು ಬರುವುದಿಲ್ಲ ಡೀವೀಕೇ

ಡಿವಿಕೆ ಮೂರ್ತಿ ಬೀಯೇ ಆನರ್ಸಿನಲ್ಲಿ (ಅರ್ಥಶಾಸ್ತ್ರ) ಸ್ವರ್ಣಪದಕ ಗಳಿಸಿ, ಅಧ್ಯಾಪನ ಮತ್ತು ಸಂಶೋಧನ ಅವಕಾಶಗಳು ಕೈಬೀಸಿ ಕರೆಯುತ್ತಿದ್ದಾಗ, ಸ್ವಇಚ್ಛೆಯಿಂದ ಅವನ್ನೆಲ್ಲ ನಿರಾಕರಿಸಿ, ಸ್ಪಷ್ಟ ವಿಚಾರದೊಡನೆ ಪುಸ್ತಕ ಲೋಕಕ್ಕೆ ಕಾಲಿಟ್ಟವರು. ಇವರು ನನ್ನಲ್ಲೇನು ಕಂಡರೋ ಬಿಟ್ಟರೋ ನನ್ನನ್ನೂ ಪುಸ್ತಕಲೋಕಕ್ಕೆ ತಂದರು. ಪ್ರಥಮ ಎಂಎ ಬೇಸಗೆ ರಜೆಯಲ್ಲಿ (೧೯೭೩) ಊರು ಸುತ್ತ ಹೊರಟವನಿಗೆ ಪುಸ್ತಕದ ಗಂಟಿನ ಅಂಟು ಹಾಕಿ, ಮುಂಬೈಯ ನಂಟು ಬೆಳೆಸಿಕೊಟ್ಟರು. ಹಸಿದವನಿಗೆ ಅನ್ನ ಕೊಡುವುದಿರಲಿ, ಅನ್ನ ಗಳಿಸುವ ಮಾರ್ಗವನ್ನೇ ಕಲಿಸಿಬಿಟ್ಟವರಿವರು. ನನಗೊಬ್ಬನಿಗೇಂತ ಅಲ್ಲ, ತನಗೆ ಸಹಜವಾಗಿ ಸ್ಫುರಿಸಿದ್ದನ್ನು (ಪುಸ್ತಕೋದ್ಯಮ) ಸಂಪರ್ಕಕ್ಕೆ ಬಂದವರ ಒಲವು ಗುರುತಿಸಿ ಹೇಳಿಕೊಟ್ಟರು, ಎಷ್ಟು ಕಾಲಕ್ಕೂ ಬಲವಾಗಿ ಬೆಂಬಲಿಸಿದರು. ಏಕಸ್ವಾಮ್ಯ, ವೃತ್ತಿ ಮಾತ್ಸರ್ಯ, ಅನಾರೋಗ್ಯಕರ ಸ್ಪರ್ಧಾಮನೋಭಾವ, ಅನುದಾರತೆ ಮುಂತಾದ ಶಬ್ದಗಳು ಡಿವಿಕೆ ಶಬ್ದಕೋಶದಲ್ಲೇ ಇರಲಿಲ್ಲ! ಈ ಕೆಲಸ ಇವರು ನನಗಿಂತಲೂ ಮೊದಲು ಹಲವರಿಗೆ ಮಾಡಿದ್ದರು. ನನ್ನನಂತರವೂ ಇನ್ನಷ್ಟು ಮಂದಿಗೆ ಮಾಡುತ್ತಲೇ ಇದ್ದರು. ಆದರೆ ಕನ್ನಡಮ್ಮನ ಸೇನೆಗೆ ತಾನೆಷ್ಟು ಹುರಿಯಾಳುಗಳನ್ನು ಸಜ್ಜುಗೊಳಿಸಿದೆನೆಂದು ಲೆಕ್ಕ, ಜಾಹೀರಾತು ಕೊಟ್ಟು ಪರೋಕ್ಷ ಲಾಭಗಳು ಬಿಡಿ, ಕನಿಷ್ಠ ಉಪಕೃತರ ಕೃತಜ್ಞತಾರ್ಪಣೆಗೂ ಅವಕಾಶ ಕೊಟ್ಟವರಲ್ಲ ಡಿವಿಕೆ!

೧೯೭೫ರ ಅಕ್ಟೋಬರಿನಲ್ಲಿ ನಾನು ಮಂಗಳೂರಿನಲ್ಲಿ ಅತ್ರಿ ಮಳಿಗೆ ತೆರೆಯುವ ಕಾಲಕ್ಕೆ ಅವರನ್ನು ಆಹ್ವಾನಿಸಿದ್ದೆ. “ಅಯ್ಯೋ ಬರೋಣಾ. . .” ತೇಲಿಸಿದ್ದರು. ಅಂದು ನನ್ನ ವ್ಯಾಪಾರಕ್ಕೆ ತೊಡಗಿಸಿದ್ದ ಪುಸ್ತಕ ರಾಶಿಯಲ್ಲಿ ಬಲುದೊಡ್ಡ ಪಾಲು ಡಿವಿಕೆಯವರದ್ದೇ ಮತ್ತು ಅಷ್ಟೂ ಸಾಲದ ಲೆಕ್ಕದ್ದು. ಅವರು ಪಾವತಿಗೆ ಯಾವುದೇ ಸಮಯಮಿತಿಯಿಟ್ಟಿರಲಿಲ್ಲ ಮತ್ತು ನನ್ನಲ್ಲಂತೂ ಎಂದೂ ಕೇಳಿದ್ದೂ ಇಲ್ಲ. ಅಂಗಡಿಯಲ್ಲಿ ‘ನನ್ನ’ ಎಂಬ ಭಾವವೇ ಡಿವಿಕೆಯಾಗಿದ್ದಾಗ ಪ್ರತ್ಯೇಕ ಡಿವಿಕೆ ಬರುವುದ್ಯಾಕೆ, ಬಂದರೂ ನೋಡುವುದೇನು ಅನಿಸಿ ಸುಮ್ಮನಾಗಿಬಿಟ್ಟೆ.

೧೯೮೦ರ ಜೂನ್ ತಿಂಗಳಲ್ಲಿ ಪುತ್ತೂರಿನ ಆಸುಪಾಸಿನಲ್ಲಿ ನನ್ನ ಮದುವೆಯಾಯ್ತು. ಕುಂಭದ್ರೋಣ ಮಳೆಯಲ್ಲೂ ನಮ್ಮ ಮನೆಯವರೇ ಆಗಿ ಡಿವಿಕೆ ದಂಪತಿ ನಮ್ಮ ಜೊತೆಗಿದ್ದರು. (ಅವರು ತಾರುಣ್ಯದಲ್ಲಿ ಪುತ್ತೂರೇನು, ಕರ್ನಾಟಕದ ಮೂಲೆಮೂಲೆಗಳಿಗೂ ಕನ್ನಡ ಪುಸ್ತಕ ಹೊತ್ತುಕೊಂಡು ಹೋಗಿ ಮಾರಿದ್ದರ ಸಣ್ಣ ಪರಿಚಯವೂ ಆಗ ನನಗಾಗಿತ್ತು.) ಆಗ ನಾನು ಅಂಗಡಿ ತೆರೆದು ವರ್ಷ ಐದಾದರೂ ಏಕೈಕ ಕಾರಣಪುರುಷ (ಡಿವಿಕೆ) ಅದನ್ನಿನ್ನೂ ನೋಡಿಲ್ಲವೆನ್ನುವುದನ್ನು ನಾನು ಜ್ಞಾಪಿಸಿದೆ. ಅವರ ಉಲ್ಲಾಸದ ನಗೆ ಮತ್ತದೇ “ಈಗ ನೀವೇ ಅಲ್ಲಿರೋಲ್ವಲ್ಲಾ. ಅಯ್ಯೋ ಬರೋಣಾ. . . ” ಮದುವೆ ನೆಲೆಯಿಂದಲೇ ವಾರಕಾಲ ಅನ್ಯ ಊರು ಸುತ್ತುವ ನಾನಾದರೂ ಡಿವಿಕೆಯವರನ್ನು ಮಂಗಳೂರು ಭೇಟಿಗೆ ಒತ್ತಾಯಿಸುವುದು ಸಾಧ್ಯವಾಗಲಿಲ್ಲ.

೧೯೭೧, ಮೈಸೂರಿನಲ್ಲಿ ನಾನಿನ್ನೂ ಬೀಏ ವಿದ್ಯಾರ್ಥಿ. ವಾರಾಂತ್ಯಗಳಲ್ಲಿ ದಖ್ಖಣ ಪರ್ವತಾರೋಹಣ ಸಂಸ್ಥೆಯ ಸಾಮಾನ್ಯ ಆದರೆ ಸಕ್ರಿಯ ಸದಸ್ಯ. ಹೀಗೇ ಗಳಿಸಿದ ಒಂದು ಅನುಭವವನ್ನು ನಾನು ಪುಟ್ಟ ಪುಸ್ತಕದ ಗಾತ್ರಕ್ಕೇ - ‘ತಾತಾರ್ ಶಿಖರಾರೋಹಣ’ ಎಂದು ಬರೆದುಬಿಟ್ಟಿದ್ದೆ. ನಗರದ ಹಿರಿಯ ಉದ್ಯಮಿ - ಎಫ್.ಕೆ ಇರಾನಿ, ನಮ್ಮ ಸಂಸ್ಥೆಯ ಅಧ್ಯಕ್ಷ ಎರಡು ಕರಾರಿನ ಮೇರೆಗೆ ಆ ಪುಸ್ತಕದ ಮುದ್ರಣ ವೆಚ್ಚ ಭರಿಸಲು ಮುಂದಾದರು. ೧. ವಿಶ್ವವಿದ್ಯಾನಿಲಯದ ಹಿರಿಯರು ಯಾರಾದರೂ ಬರವಣಿಗೆ ಪ್ರಕಟಣಯೋಗ್ಯ ಎನ್ನಬೇಕು. ೨. ವೃತ್ತಿಪರ ಪ್ರಕಾಶಕರೊಬ್ಬರು ಇದರ ಮಾರುಕಟ್ಟೆ ಬೇಡಿಕೆಯ ಬಗ್ಗೆ ಭರವಸೆ ಕೊಡಬೇಕು. ಪ್ರೊ| ಎನ್. ಪ್ರಹ್ಲಾದರಾಯರು, ನನ್ನ ತಂದೆಯೊಡನೆ ಕನ್ನಡ ವಿಶ್ವಕೋಶದ ಹಿರಿಯ ಸಂಪಾದಕ ಬಳಗದವರು, ಕುಶಿಯಿಂದ ಓದಿ ಶಿಫಾರಸು ಪತ್ರ ಕೊಟ್ಟರು. ಕುಟುಂಬ ಮಿತ್ರ ಡಿವಿಕೆ ಮಾರುಕಟ್ಟೆಯ ಭರವಸೆ ಕೊಟ್ಟರು. ಮಾತ್ರವಲ್ಲದೆ ಅದು ಪ್ರಕಟವಾದಾಗ ನೇರ ನಗದು ಕೊಟ್ಟು ಅರೆ ವಾಸಿ (ಸುಮಾರು ಐದುನೂರು ಪ್ರತಿ) ದಾಸ್ತಾನು ಖರೀದಿಸಿಯೇ ಬಿಟ್ಟರು.

ಕಾಲಾನುಕ್ರಮದಲ್ಲಿ (ನಾಲ್ಕು ವರ್ಷ ಕಳೆದು) ನಾನು ಪುಸ್ತಕದಂಗಡಿ ತೆರೆದಾಗ, ನನ್ನ ಅಜ್ಞಾನದಲ್ಲಿ ಅಷ್ಟೂ ತಾತಾರ್ ಶಿಖರಾರೋಹಣವನ್ನು ಡಿವಿಕೆ ಮಾರಿಮುಗಿಸಿರಬೇಕೆಂದು ಅಂದುಕೊಂಡಿದ್ದೆ. ಆದರೂ ನಾನು ಹೀಗೇ ಕೇಳಿದಾಗ ಉಳಿದಿದ್ದ ನೂರಕ್ಕೂ ಮಿಕ್ಕು ಪ್ರತಿಗಳನ್ನು ಅವರು ಪೂರೈಸಿದರು. ಅದರ ಬಿಲ್ಲು, ಲೆಕ್ಕ ಎಂದು ನಾನು ವಿಚಾರಿಸಿದಾಗೆಲ್ಲಾ ಮುಂದೂಡುತ್ತಲೇ ಬಂದು ಯಾವುದೋ ‘ಶುಭದಿನ’ ಅಷ್ಟೂ ತನ್ನ ಕೊಡುಗೆ ಎಂದು ಮುಗಿಸಿಬಿಟ್ಟರು. ನನ್ನ ತಂದೆ ಡಿವಿಕೆಯ ಸಮಪ್ರಾಯದವರು ಮತ್ತು ತೀರಾ ಆಪ್ತ ಸ್ನೇಹಾಚಾರ ಇದ್ದವರು. ಆದರೆ ಇಂಥ ತತ್ತ್ವದ ವಿಚಾರಗಳು ಬಂದಾಗ ಅವರು ಹೇಳುತ್ತಿದ್ದರು, “ಡಿವಿಕೆಯಲ್ಲಿ ಚರ್ಚೆಯಿಲ್ಲ, ಸುಮ್ಮನೆ ಒಪ್ಪಿಕೊಳ್ಳಬೇಕು.”

ವಾಸ್ತವವಾಗಿ ನನಗೆ ಮೊದಲ ಪುಸ್ತಕ ಕೊಡುಗೆ ಬಂದದ್ದೇ ಡಿವಿಕೆಯಿಂದ! ನನ್ನ ಬಾಲ್ಯದಲ್ಲಿ ತಂದೆ (ಜಿ.ಟಿ.ನಾರಾಯಣ ರಾವ್) ಮಡಿಕೇರಿ ಕಾಲೇಜಿನ (ಗಣಿತ ಉಪನ್ಯಾಸಕತನದ ಜೊತೆಗೆ) ಸಹಕಾರಿ ಸಂಘದ ಕಾರ್ಯದರ್ಶಿ ಆಗಿದ್ದರು. ಅವರು ದೊಡ್ಡ ಮೊತ್ತದ ಪುಸ್ತಕ ಖರೀದಿಗೆ ಒಮ್ಮೆ ಮೈಸೂರಿಗೆ ಹೋಗಿ ಬರುವಾಗ ಯಾರೋ ದೊಡ್ಡ ಪ್ರಕಾಶಕ ಅಯಾಚಿತವಾಗಿ, “ನಿಮ್ಮನೆ ಮಕ್ಕಳಿಗಿರಲಿ” ಎಂದು ಒಂದಷ್ಟು ಮಕ್ಕಳ ಕಥೆ ಪುಸ್ತಕಗಳ ಕಟ್ಟು ಉಚಿತವಾಗಿ ಕೊಟ್ಟಿದ್ದರು. ಕಾಲೇಜು ಸಹಕಾರಿ ಸಂಘದಲ್ಲಿ ಸ್ವಂತ ಮಗ (ನಾನಾಗ ಐದಾರು ವರ್ಷದ ಬಾಲಕ) ಅಪರೂಪಕ್ಕೆ ತಿಂದ ಒಂದೊಂದು ಚಾಕಲೇಟಿಗೂ (ಒಂದು ಪೈಸೆ?) ಬಿಲ್ಲು ಬರೆದು, ಕಿಸೆಯಿಂದ ಗಲ್ಲಾಕ್ಕೆ ಹಣ ಸೇರಿಸಿಬಿಡುತ್ತಿದ್ದ ತಂದೆಯನ್ನೂ ಮೊದಲ ಪರಿಚಯದಲ್ಲೇ ಹೀಗೆ ಪುಸ್ತಕ ಉಡುಗೊರೆ ಕೊಟ್ಟು ಸೋಲಿಸಿದ ಮಹಾಪ್ರಕಾಶಕ ಡಿವಿಕೆ.

ಡಿವಿಕೆ ಎಂದೂ ಸಾಮಾನ್ಯ ಮಟ್ಟದಲ್ಲಿ ವ್ಯಾಪಾರದ ಮಾತಾಡುತ್ತಿರಲೇ ಇಲ್ಲ. ತಮ್ಮ ಪ್ರಕಟಣೆಯಿರಲಿ, ಅನ್ಯರದ್ದೇ ಇರಲಿ ಅವುಗಳ ಗುಣದ ಬಗ್ಗೆ ಹೇಳುತ್ತಿದ್ದರು. ಅವುಗಳ ಜನೋಪಯೋಗಿತ್ವ, ವ್ಯಾಪಕ ಪ್ರಸಾರದ ಬಗೆಗೇ ಅವರ ಕಾಳಜಿ ಇರುತ್ತಿತ್ತು. ಅವರ ಮನೆಗೆ (ಅದೇ ಅವರ ಕಛೇರಿಯೂ ದಾಸ್ತಾನು ಕೋಠಿಯೂ ಹೌದು) ಯಾರೇ ಪುಸ್ತಕಪ್ರೇಮಿ ಬಂದರೆ ವೈಯಕ್ತಿಕ ಅಗತ್ಯಕ್ಕೆ ಪುಸ್ತಕ ಕೊಳ್ಳಲಾಗುತ್ತಿರಲಿಲ್ಲ! ಧಾರಾಳ ಮಾತಾಡಿಸಿ, ತಿಂಡಿತೀರ್ಥ ಕೊಟ್ಟು, ಅವರು ವಿಚಾರಿಸಿದ ಒಂದಕ್ಕೆ ನಾಲ್ಕು ಪುಸ್ತಕ ಶಿಫಾರಸು ಮಾಡಿ, ಮತ್ತೆಲ್ಲವನ್ನೂ ಉಚಿತವಾಗಿ ಹೊರಿಸಿ ಕಳಿಸುತ್ತಿದ್ದದ್ದು ಡಿವಿಕೆ ಶೈಲಿ. ಪುಸ್ತಕ ಕೊಂಡೇ ಓದುವ ಛಲದವರು, ರಿಯಾಯ್ತಿಗೆ ಗಿಂಜುವ ಹುನ್ನಾರದವರು ಏಕಕಾಲಕ್ಕೆ ಅಪ್ರತಿಭರಾಗುವಂತೆ ಡಿವಿಕೆ ಉದ್ಗರಿಸುತ್ತಿದ್ದರು “ಅಯ್ಯೋ ಇರತ್ತೆ.”

ನಾನು ಮಂಗಳೂರು ಸಮೀಪ ಒಂದೆಕ್ರೆ ಹಾಳುನೆಲ ಕೊಂಡು, ಪ್ರಾಕೃತಿಕ ಪುನರುತ್ಥಾನಕ್ಕಾಗಿ ‘ಅಭಯಾರಣ್ಯ’ ಎಂದು ಹೆಸರಿಸಿ ಅರ್ಥಪೂರ್ಣ ಪ್ರಾರಂಭೋತ್ಸವ ಹಮ್ಮಿಕೊಂಡಿದ್ದೆ. “ನಾನು ಅಂಗಡಿ ತೆರೆದು ಇಪ್ಪತ್ತೈದು ವರ್ಷವಾದರೂ ನೀವು ಬರಲೇ ಇಲ್ಲ. . .” ಎಂದೆಲ್ಲಾ ಡಿವಿಕೆಗೆ ಬರೆದು, ಮಂಗಳೂರಿಗೆ ಕರೆಸಿಕೊಳ್ಳಲು ಒತ್ತಾಯಿಸಿದೆ. ನನ್ನ ಕೆಲಸವನ್ನೇನೋ ತುಂಬಾ ಮೆಚ್ಚಿಕೊಂಡರು. ಎಂದಿನಂತೆ ಏನೇನೋ ಅನಾನುಕೂಲಗಳನ್ನು ಮುಂದೊಡ್ದಿ ಸದ್ಯ ಬರಲಾರೆ ಎಂದೂ ಸ್ಪಷ್ಟಪಡಿಸಿದರು. ಆದರೆ ಕಾರ್ಯಕ್ರಮಕ್ಕೆ ಎರಡುದಿನ ಮುಂಚಿತವಾಗಿ ದೊಡ್ಡದೊಂದು ಪುಸ್ತಕಗಳ ಕಟ್ಟು ಕಳಿಸಿದರು ಮತ್ತು “ಉಡುಗೊರೆ ಗಿಡುಗರೆ ಏನಲ್ಲ. ಉಪಯೋಗಕ್ಕೆ ಬರುತ್ತೆ. ಅದರ ಬಗ್ಗೆ ಏನೂ ಮಾತಾಡೋದು ಬೇಡ” ಎಂದುಬಿಟ್ಟರು. ಇವರಿಗೆ ‘ಕೊಡುವುದರಲ್ಲಿದ್ದ’ ಸಂತೋಷಕ್ಕೆ ಉದಾಹರಣೆಗಳನ್ನು ನನ್ನ ನೆನಪಿನಿಂದ ಹೆಕ್ಕಿದರೂ ಈ ಬರಹದ ಉದ್ದ ಇಮ್ಮಡಿಸೀತು, ಬಿಡಿ.

ಡಿವಿಕೆ ಪತ್ನಿ ವಿಯೋಗಾನಂತರ ಕೆಲವು ಕಾಲ ಏಕಾಂಗಿಯಾಗಿ ಪ್ರಕಾಶನದ ವ್ಯವಹಾರದೊಡನೆ ಗೃಹಕೃತ್ಯವನ್ನೂ ನಡೆಸಿದ್ದರು. ಮೊದಲೇ ಅವರು ಇಷ್ಟದಿಂದ ಒಳ್ಳೆಯ ಪಾಕಶಾಸ್ತ್ರಿಯಂತೆ. ಈಗ ಅವಶ್ಯಕತೆಯೂ ಸೇರಿ ಪ್ರಯೋಗಗಳು ಧಾರಾಳ ನಡೆಸುತ್ತಿದ್ದರು. ಕೆಲವೊಮ್ಮೆ ಯಾವುದೋ ಉತ್ಕೃಷ್ಟ ಪಾಕವನ್ನು ‘ಹೀಗೇ’ ಪಾತ್ರೆಯಲ್ಲಿ ತುಂಬಿಕೊಂಡು, (ಮೈಸೂರಿನ) ನಮ್ಮನೆಗೆ ಕಾರಿನಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ತಂದು ಕೊಡುವುದೂ ಕೇಳಿದ್ದೆ. ನಾನು ಮೈಸೂರಿಗೆ ಹೋದಾಗೆಲ್ಲಾ ಡಿವಿಕೆ ನೋಡದೇ ಬಂದದ್ದಿಲ್ಲ. ಹಾಗೇ ಈ ಕಾಲದಲ್ಲೂ ಒಮ್ಮೆ ಹೋಗಿದ್ದೆ, ಇವರ ಅಡಿಗೆ ಮತ್ತದರ ಬಟವಾಡೆ ವಿವರಗಳು ಕಂಡು ಬೆರಗಾಗಿದ್ದೆ. ಪ್ರಕಾಶನದ ಸಹಾಯಕರು, ಮನೆಗೆಲಸದ ಸಹಾಯಕರು, ಅವರಿವರೆನ್ನದೆ ಕೊನೆಗೆ ಎದುರಿನ ರಾಘವೇಂದ್ರ ಸ್ವಾಮಿ ಮಠದ ಗೇಟಿನ ಬಳಿಯ ಭಿಕ್ಷುಕನವರೆಗೆ ಎಲ್ಲರಿಗೂ ಲೆಕ್ಕ ಹಾಕಿಯೇ ಪಾಕದ ವಿವರಗಳು ಮತ್ತು ಬಟವಾಡೆ ನಡೆಯುತ್ತಿತ್ತು. (ತಿಂದು ಉಳಿದದ್ದನ್ನೋ ಹಳಸಿದ್ದನ್ನೋ ‘ದಾನ’ ಮಾಡಿದ ಪುಣ್ಯಾತ್ಮ ಡಿವಿಕೆ ಅಲ್ಲ!)

“ಡಿವಿಕೆ ಪ್ರಕಾಶಕ ಮತ್ತು ಸಗಟು ವಿತರಕ. ನಿಮ್ಮಂತ ಬಿಡಿ ಮಾರಾಟಗಾರರೆಂದರೆ ಅಷ್ಟಷ್ಟು ಅವರ ಪ್ರಕಟಣೆಗಳ ಪ್ರಸಾರಾವಕಾಶ  ಹೆಚ್ಚಿದಂತೆಯೇ ಸರಿ. ನಿಮ್ಮಂಥವರನ್ನು ಪ್ರೋತ್ಸಾಹಿಸುವುದರಲ್ಲೇನೂ ವಿಶೇಷವಿಲ್ಲ” ಎನ್ನುವ ಸಂಕುಚಿತ ಮನಸ್ಕರನ್ನು ನಾನು ಕೇಳಿದ್ದೇನೆ. ಆದರೆ ಮೂವತ್ನಾಲ್ಕಕ್ಕೂ ಮಿಕ್ಕು ವರ್ಷಗಳ ನನ್ನನುಭವಕ್ಕೆ ಸಿಕ್ಕ ವಾಸ್ತವ ಬೇರೇ. ಅವರ ಉದಾರಚರಿತವನ್ನು ಸ್ಪಷ್ಟೀಕರಿಸಲು ಎರಡೇ ಎರಡು ಉದಾಹರಣೆ.

೧. ಆಲ್ಬರ್ಟ್ ಐನ್ಸ್‌ಟೈನ್ ಜನ್ಮ ಶತಾಬ್ದಿ ಸಮೀಪಿಸುತ್ತಿದ್ದ ಕಾಲದಲ್ಲಿ ಅವರ ಬಗ್ಗೆ ವಿಸ್ತೃತ ವಿಜ್ಞಾನ-ಜೀವನ ಕಥನ ಬರೆಯಲು ನನ್ನ ತಂದೆಗೆ ಪ್ರೇರಣೆ ಕೊಟ್ಟ ಮುಖ್ಯರಲ್ಲಿ ಡಿವಿಕೆ ಒಬ್ಬರು. ತಂದೆ ಬರೆದದ್ದನ್ನು ನಿಷ್ಠೆಯಿಂದ ಪ್ರಕಟಿಸಿ, ಮಾರುಕಟ್ಟೆಯಲ್ಲಿ ಯಶಸ್ವಿಯಾಗಿಸಿದವರು ಡಿವಿ.ಕೆ. ಅದರ ಪ್ರತಿಗಳು ಮುಗಿದು, ಮರುಮುದ್ರಣದ ಬೇಡಿಕೆ ಹೆಚ್ಚಿದ್ದ ಕಾಲದಲ್ಲಿ ನಾನು ಪ್ರಕಾಶನರಂಗದಲ್ಲೂ ಸಣ್ಣದಾಗಿ ತೊಡಗಿಕೊಂಡಿದ್ದೆ. ಸಹಜವಾಗಿ “ನಾನು ಹಾಕಲೇ” ಎಂದು ಕೇಳುವ ಮುನ್ನವೇ ಡಿವಿಕೆ “ಬೇಡಿಕೆ ಇದೆ. ಮರುಮುದ್ರಣ ನೀವೇ ಮಾಡಿ, ನನಗೂ ಪ್ರತಿಗಳನ್ನು ಕೊಡಿ” ಎಂದಿದ್ದರು. ಡಿವಿಕೆ ಎಂದೂ ಯಾವುದೇ ಲೇಖಕನ ಕೃತಿಸ್ವಾಮ್ಯವನ್ನು ತನ್ನ ಒಂದು ಮುದ್ರಣದಿಂದಾಚೆಗೆ ‘ಕೊಂಡದ್ದು’ ಇಲ್ಲ. (ಆ ಕಾಲದಲ್ಲಿ ಲೇಖಕರ ಮತ್ತು ಒಂದು ಮಿತಿಯಲ್ಲಿ ಪ್ರಕಾಶನರಂಗದ್ದೂ ಬಡತನ ಮಹಮಹಾ ಲೇಖಕರನ್ನೂ ನಾಲ್ಕು ಕಾಸಿಗೆ ಕೃತಿಸ್ವಾಮ್ಯ ಮಾರಿಕೊಳ್ಳುವಂತೆ, ಎಷ್ಟೋ ಬಾರಿ ಅದರ ವ್ಯಾಪ್ತಿಯ ಬಗ್ಗೆ ಅರಿವೇ ಇಲ್ಲದೆ ಕಳೆದುಕೊಳ್ಳುವಂತೆ ಮಾಡಿದ್ದಕ್ಕೆ ಉದಾಹರಣೆಗಳು ಅಸಂಖ್ಯ. ಅದರ ವಿಸ್ತರಣೆ ಇಲ್ಲಿ ಅಪ್ರಸ್ತುತ!)

೨. ಸಗಟು ವಿತರಕನ ನೆಲೆಯಲ್ಲಿ ಡಿವಿಕೆ (ಅನ್ಯ) ನಾಮಕಾವಸ್ಥೆ ಪ್ರಕಾಶಕರಿಂದ ಹೆಚ್ಚುವರಿ ರಿಯಾಯ್ತಿದರದಲ್ಲಿ ಪುಸ್ತಕಗಳನ್ನು ನಗದು ಕೊಟ್ಟು ಖರೀದಿಸುತ್ತಿದ್ದದ್ದು ನ್ಯಾಯವಾಗಿತ್ತು. ಇದಕ್ಕೆ ಮೊದಮೊದಲು ನಾನೂ ನನ್ನ ಪ್ರಕಾಶನದ ಪುಸ್ತಕಗಳನ್ನು ಒಡ್ಡಿಕೊಂಡಿದ್ದೆ. ಆದರೆ ಒಂದು ಹಂತದಲ್ಲಿ ಇತರ ಪುಸ್ತಕ ವ್ಯಾಪಾರಿಗಳೊಡನೆ ಪ್ರಕಾಶಕನಾಗಿ ನನ್ನೆಲ್ಲ ನೇರ ಸಂಪರ್ಕಗಳು ಪ್ರಭಾವ ಕಳೆದುಕೊಳ್ಳುತ್ತಾ ಬರುವುದನ್ನು ಗಮನಿಸಿದೆ. ನೂರೆಂಟು ಇತರ ಪ್ರಕಟಣೆಗಳೊಡನೆ ನಾಲ್ಕೆಂಟು ‘ಅತ್ರಿ’ ಪ್ರಕಟನೆಗಳನ್ನು ಅತ್ರಿಯದೇ ರಿಯಾಯ್ತಿ ದರದಲ್ಲಿ ಡಿವಿಕೆಯಿಂದ ಪಡೆಯುವ ಸೌಕರ್ಯಕ್ಕೆ ವ್ಯಾಪಾರಿಗಳು ಒಲಿದದ್ದರಲ್ಲಿ ತಪ್ಪೇನಿರಲಿಲ್ಲ. ಮತ್ತೆ ಡಿವಿಕೆಯವರ ಸಹಜ ವ್ಯಾಪಾರ ಶೈಲಿಯೇ ಅದಾಗಿದ್ದುದರಿಂದ (ನಾನೂ ಅದರ ಫಲಾನುಭವಿಯೇ) ಟೀಕಿಸುವುದಂತು ಸಾಧ್ಯವೇ ಇರಲಿಲ್ಲ. (ಕುರು ಪಿತಾಮಹ ಭೀಷ್ಮರೆದುರು ಪಾಂಡವ ಸೇನೆ ಒಂಬತ್ತು ದಿನ ಹೋರಾಡಿಯೂ ನಿಸ್ತೇಜವಾಯ್ತಂತೆ. ಆಗ ಶ್ರೀಕೃಷ್ಣ ರಾತೋರಾತ್ರಿ ಮೊಮ್ಮಕ್ಕಳನ್ನು ಅಜ್ಜನ ಕಾಲಿಗೆ ಬೀಳಿಸಿ, ಕೇಳಿದಂತೆ) ನಾನು ಡಿವಿಕೆಗೆ ಪತ್ರ ಬರೆದೆ. ‘ನನ್ನ ಪ್ರಕಟಣೆಗಳ ನಿಮ್ಮ ವಿತರಣಾಜಾಲ ನನ್ನನ್ನು ಪ್ರಕಾಶಕನನ್ನಾಗಿ ಸೋಲಿಸುತ್ತಿದೆ. ಏನು ಮಾಡಲಿ?’ ಅವರು ಕೂಡಲೇ ಸಗಟು ವಿತರಕನಾಗಿ ಪಡೆಯುತ್ತಿದ್ದ ವಿಶೇಷ ರಿಯಾಯ್ತಿಯನ್ನು “ನಿಲ್ಲಿಸಿ” ಎಂದರು. ತೀರಾ ಅನಿವಾರ್ಯವಾದಲ್ಲಿಗೆ ಮಾತ್ರ ನಾನು ಕೊಡುವ ಸಾಮಾನ್ಯ ರಿಯಾಯ್ತಿಯಲ್ಲೇ ನನ್ನ ಪ್ರಕಟಣೆಗಳನ್ನು ಕೊಂಡು ವಿತರಣೆ ನಡೆಸಿದರು. ಉಳಿದಂತೆ ಎಲ್ಲರಿಗೂ ನೇರ ನನ್ನೊಡನೆ ವ್ಯವಹರಿಸುವಂತೆ ನಿರ್ವಂಚನೆಯಿಂದ ಹೇಳಿದರು. ಮತ್ತಿದು ಯಾವ ರೀತಿಯಲ್ಲೂ ನನ್ನ ಕುರಿತ ಅವರ ವ್ಯಾಪಾರೀ ಧೋರಣೆಯಲ್ಲಾಗಲೀ ವೈಯಕ್ತಿಕ ಸಂಬಂಧಗಳಲ್ಲಾಗಲೀ ಬದಲಾವಣೆಯನ್ನು ತರಲಿಲ್ಲ.

ಡಿವಿಕೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶಕ’ ಪ್ರಶಸ್ತಿಯ ಪ್ರಸ್ತಾಪ ಬಂದದ್ದು, ಅವರು ನಿರಾಕರಿಸಿದ್ದು ಸಾಕಷ್ಟು ಪ್ರಚಾರದಲ್ಲಿದೆ. ಸರಕಾರೀ ವ್ಯವಸ್ಥೆಯ ಯಾವುದೇ ಪ್ರಶಸ್ತಿ, ಪುರಸ್ಕಾರ, ಬಟವಾಡೆಗಳ ಹಿಂದೆ ವಶೀಲೀಬಾಜಿಯೋ ಹಂಗಿನ ಕುಣಿಕೆಯೋ ಏನಲ್ಲದಿದ್ದರೂ ಸಾರ್ವಜನಿಕ ಆವಶ್ಯಕತೆಯ ದುರುಪಯೋಗವೋ ಇದ್ದೇ ಇರುತ್ತದೆ. ಹೆಚ್ಚೆಂದರೆ ಮೇಲೆ ಹೇಳಿದ ವಿನಿಯೋಗಗಳು ಆಡಳಿತ ವ್ಯವಸ್ಥೆಯ ಅದಕ್ಷತೆಗೆ ಪರೋಕ್ಷ ಸಾಂತ್ವನಗಳು. ಆದರೆ ಮಂಗಳೂರಿನ ‘ಪ್ರೊ| ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ’ ಅಂಥಾ ಎಲ್ಲಾ ಕಿಲ್ಬಿಷಗಳಿಂದ ದೂರ. ಆ ಪ್ರಶಸ್ತಿಯ ಹಿಂದಿರುವ ವ್ಯಕ್ತಿಗಳು (ಎಸ್ವೀಪೀ ಶಿಷ್ಯಬಳಗ) ಎಸ್ವೀಪೀ ಪ್ರೀತಿ ಮತ್ತು ಸ್ಮರಣೆಯೊಂದೇ ಲಕ್ಷ್ಯವಾದ್ದರಿಂದ ಸ್ವಂತ ದುಡ್ಡು ಹಾಕಿ ವರ್ಷಕ್ಕೊಂದು ಸಾಹಿತ್ಯ ಸೇವಾನಿರತರನ್ನು ಪ್ರಾಮಾಣಿಕವಾಗಿ ಆರಿಸಿ, ಸಾಂಕೇತಿಕವಾಗಿ ಸಮ್ಮಾನಿಸುತ್ತಾರೆ. ಅದೊಂದು ವರ್ಷ ಡಿವಿಕೆ ಹೆಸರು ಇಲ್ಲಿ ಮೇಲಕ್ಕೆ ಬಂತು. ಪರೋಕ್ಷ ಸೂಚನೆಗಳು ಬಂದಾಗಲೇ ಡಿವಿಕೆ ನಿರಾಕರಿಸಿದರು.

ಎಸ್ವೀಪೀ ಸಮಿತಿಯ ಮಿತ್ರರು ನನ್ನ, ಡಿವಿಕೆಯ ಸಂಬಂಧ ತಿಳಿದಿದ್ದುದರಿಂದ “ನೀವಾದರೂ ಹೇಳಿ” ಎಂದರು. ಆ ನೆಪದಲ್ಲಿ ಡಿವಿಕೆಗೆ ನನ್ನಂಗಡಿಯಾದರೂ ತೋರಿಸಬಹುದಲ್ಲವೇ ಎಂದು ನಾನೂ ಉತ್ತೇಜಿತನಾದೆ. ಇಲ್ಲೊಂದು ಸಣ್ಣ ಉಪಕಥೆ. ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಿತ್ರ ಸುಬ್ರಹ್ಮಣ್ಯ ತನ್ನ ತಂದೆಯ ವರ್ಷಾವಧಿ ನೆನಪಿಗೆ ಹೀಗೇ ಒಬ್ಬೊಬ್ಬ ಪುಸ್ತಕೋದ್ಯಮಿಯನ್ನು ಗೌರವಿಸುವ ಕೆಲಸ ಸುರು ಮಾಡಿದ್ದರು. ಅವರೂ ಒಮ್ಮೆ ಡಿವಿಕೆಯನ್ನು ಅಪಾರ ಗೌರವದಿಂದ ಆರಿಸಿದರು. ಮತ್ತವರ ಜಾರುಪಟ್ಟುಗಳನ್ನು ಸ್ಪಷ್ಟವಾಗಿ ತಿಳಿದಿದ್ದುದರಿಂದ ಸರಳ ಸಮಾರಂಭವನ್ನೇ ಆಯೋಜಿಸಿದ್ದಲ್ಲದೆ, ಡಿವಿಕೆಯ ಹಳೆಗಾಲದ ಹುಬ್ಬಳ್ಳಿ ಮಿತ್ರನ ಸಮಾಗಮದ ಆಮಿಷವನ್ನೂ ಒಡ್ಡಿ ಕಾರ್ಯ ಸಾಧಿಸಿದ್ದರು. ಎಸ್ವೀಪೀ ಪ್ರಶಸ್ತಿ ಸಂದರ್ಭದಲ್ಲಿ ನಾನು ಪ್ರಶಸ್ತಿ ಪ್ರದಾನದ ಪ್ರಾಮಾಣಿಕತೆ, ಸರಳತೆಯನ್ನೆಲ್ಲ ಖಾತ್ರಿಪಡಿಸುವುದರೊಡನೆ, ನನ್ನ ಕಾರ್ಯಕ್ಷೇತ್ರ ನೋಡುವುದನ್ನು ಆಮಿಷವಾಗಿ ಒಡ್ಡಿದೆ. ಆದರೆ  ‘ನಿಷ್ಕಾಮಕರ್ಮ’ ಶಬ್ದಕ್ಕೆ ಗೀತಾಶಾಸ್ತ್ರಿ ಏನೇ ಹೇಳಲಿ, ಡಿವಿಕೆ ಅದರ ಮೂರ್ತರೂಪ. ಅವರಿಗೆ ಹುಬ್ಬಳ್ಳಿಯಲ್ಲಿನ ಸಮಕಾಲೀನ ಮಿತ್ರನ ಮರುಭೇಟಿ ಪ್ರಕರಣವನ್ನು ಇಲ್ಲಿ ಕಿರಿಯನೊಡನೆ (ಮಿತ್ರ, ಅಭಿಮಾನಿ, ಶಿಷ್ಯ ಇತ್ಯಾದಿ ಏನು ಗ್ರಹಿಸಿದ್ದರೋ ನನಗೆ ತಿಳಿದಿಲ್ಲ!) ಸಮೀಕರಿಸಲು ಮನಸ್ಸು ಒಪ್ಪಿರಲಾರದು. ಆ ಮುಜುಗರವನ್ನು ತಪ್ಪಿಸಲೋ ಅಥವಾ ನಿಜ ಅನಾನುಕೂಲದಿಂದಲೋ ಪ್ರಶಸ್ತಿ ಒಪ್ಪಿಕೊಳ್ಳಲಿಲ್ಲ, ಅಂದು ಮಂಗಳೂರಿಗೆ ಬರಲಿಲ್ಲ.

೯-೧೨-೨೦೦೯ರ ಬೆಳಿಗ್ಗೆ ಡಿವಿಕೆಯವರ ದೇಹಾಂತ್ಯವಾಯಿತು. ಅವರು ಇನ್ನೆಂದೂ ಮಂಗಳೂರಿಗೆ ಬರುವುದಿಲ್ಲ.

18 comments:

 1. ರಾಧಾಕೃಷ್ಣ14 December, 2009 07:35

  ಡಿವಿಕೆ ಮೂರ್ತಿ ಮರೆಯಾದದ್ದು ಇಲ್ಲಿ ಬಂದ ನುಡಿ ನಮನದಿಂದಲೇ ಗೊತ್ತಾದದ್ದು ತೀವ್ರವಾಗಿ ಬದಲಾಗುತ್ತಿರುವ ಮೌಲ್ಯಗಳಿಗೆ ಸಾಕ್ಷಿ.

  ನಿಜ, ಪತ್ರಿಕೆಗಳಲ್ಲಿ ಬರದೇ ಇದ್ದದ್ದು ಸಹಜವೇ. ಆದರೂ ಅಪರೂಪವೆನ್ನುವಂತೆ ಋಜು ಜೀವನ ನಡೆಸಿದವರು ತೀರ ತೀರ ಅಪ್ರಸ್ತುತರಾಗುತ್ತಿದ್ದಾರೆಯೋ ಎಂಬ ಕಸಿವಿಸಿಯಾಗುತ್ತದೆ.

  ಪುಸ್ತಕ ಪ್ರಕಾಶನಕ್ಕೆ ಗೌರವ ಮನ್ನಣೆ ತಂದು ಕೊಟ್ಟ ಡಿವಿಕೆ ಇವರ ಬಗ್ಗೆ ಬರೆದ ಆಪ್ತವಾದ ಈ ನುಡಿ ನಮನ ಪತ್ರಿಕೆಗಳಲ್ಲಿ ಮುದ್ರಿತವಾಗಿ ಎಲ್ಲರನ್ನು ತಲಪಬೇಕು.

  ಡಿವಿಕೆ ಅವರನ್ನು ನೋಡಿ ಗೊತ್ತು. ನಾ.ಮಾವನಿಂದ ಕೇಳಿ ಗೊತ್ತು. ಒಮ್ಮೆ ಮೈಸೂರಿನಲ್ಲಿ ಮಾವನೊಂದಿಗೆ ಡಿವಿಕೆ ಮನೆಗೆ ಹೋದದ್ದು ಮತ್ತು ಎಂದಿನಂತೆ ಅವರದೇ ಶೈಲಿಯಲ್ಲಿ ನನ್ನ ಪರಿಚಯ ಮಾಡಿದಾಗ ನಾನು ನಾಚಿಕೊಂಡದ್ದು ನೆನಪಾಗುತ್ತಿದೆ. ಆ ಇಬ್ಬರು ಸಾಹಿತ್ಯ ಪ್ರಿಯರ ಸಲ್ಲಾಪವನ್ನು ಬೆರಗಿನಿಂದ ಸವಿದದ್ದು ನೆನಪಾಗುತ್ತದೆ.

  ನನ್ನ ಅಮ್ಮನ ಮೊದಲ ಕಾದಂಬರಿ "ಅನಿಶ್ಚಯ" ವನ್ನು ಸುಂದರವಾಗಿ ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ಅಮ್ಮನ ಪಾದಗಳು "ನಿಶ್ಚಯ"ವಾಗಿ ಮೂಡಲು ಕಾರಣರಾದವರು ಅವರು. ನಂತರದ ದಿನಗಳಲ್ಲಿ ಅಮ್ಮನ ಕಾದಂಬರಿಗಳ ಪ್ರಕಟಣೆಗೆ ಗೀತಾ ಬುಕ್ ಹೌಸ್ ಅವರ ಪರಿಚಯ ಮಾಡಿಕೊಟ್ಟದ್ದು ಅವರ ಅಂತ:ಕರಣಕ್ಕೆ ಸಾಕ್ಷಿ.


  ಡಿವಿಕೆ ಕಾರಣರಾಗಿ ಪುಸ್ತಕ ಲೋಕಕ್ಕೆ ಅತ್ರಿ ಬಂದದ್ದು ಆಕಸ್ಮಿಕ. ಆ ಮೂಲಕ ಮಂಗಳೂರಿನಲ್ಲಿ ಸದಭಿರುಚಿಯ ಓದಿಗೆ ಅದ್ಭುತ ಅವಕಾಶವೊಂದು ತೆರೆದುಕೊಂಡು ನಮ್ಮಲ್ಲಿ ಓದಿನ ಆಸಕ್ತಿ ಚಿಗುರಿತು ಎನ್ನುವುದನ್ನು ಮರೆಯುವಂತಿಲ್ಲ.

  ಮಂಗಳೂರಿನ ಅತ್ರಿಗೆ ಬಾರದೇ ದೂರದ ಮೈಸೂರಿನಿಂದಲೇ ಹರಸುತ್ತ ಇದ್ದ ಡಿವಿಕೆ, ಇನ್ನೆಷ್ಟೋ ದೂರದಲ್ಲಿರುವ ತನ್ನ ಪರಮಾಪ್ತ ಮಿತ್ರ ಅತ್ರಿಸೂನುವಿನೊಡನೆ ಸಲ್ಲಾಪಕ್ಕೆ ನಡೆದೇ ಬಿಟ್ಟಿದ್ದಾರೆ.
  ರಾಧಾಕೃಷ್ಣ

  ReplyDelete
 2. ಪ್ರೀತಿಯ ಅಶೋಕರಿಗೆ ನಮಸ್ಕಾರಗಳು.
  ಡಿವಿಕೆ ಅವರು ನಿಧನರಾದಾಗ ನಿಮಗೆ ಬರಲು ಸಾಧ್ಯವಾಗಬಹುದೆಂದು ನಾನು ನಿರೀಕ್ಷಿಸಿರಲಿಲ್ಲ. ನಾನೂ ನಿನ್ನೆ ಬೆಂಗಳೂರಿಗೆ ಹೋಗಿ ರಾತ್ರಿ ಅಲ್ಲೇ ಉಳಿಯಬೇಕೆಂದಿದ್ದವನು ಸಂಜೆ ಮೂಸರೂರಿಗೆ ವಾಪಸಾಗಲು ರೈಲಿನಲ್ಲಿ ಕುಳಿತಿದ್ದಾಗ ಮೇ. ಒಂಬತ್ಕೆರೆಯವರು ಟಿ ಎಸ್ ಸತ್ಯನ್ ಅವರ ನಿಧನದ ಸಂದೇಶ ಕಳುಹಿಸಿದ್ದರು. ಮೈಸೂರು ತಲುಪಿದಾಗ ಅವರ ಅಂತ್ಯಕ್ರಿಯೆ ಸಂಜೆಯೇ ನಡೆದ ವಿಷಯ ಜಿ ಎಚ್ ಅವರಿಂದ ತಿಳಿಯಿತು.

  ಆದರೆ ನಿಮ್ಮ ಆತ್ಮೀಯ ನೆನಪುಗಳ ಜಾಲಚರಿಯ (ವೆಬ್‌ಲಾಗ್) ನಿರೀಕ್ಷೆ ಇತ್ತು.
  ನನಗೆ ಅವರೊಂದಿಗೆ ನಿಮ್ಮಷ್ಟು ನಿಕಟ ಒಡನಾಟವಿರದಿದ್ದರೂ ಅವರನ್ನು ಭೇಟಿಯಾದಾಗಲೆಲ್ಲ ಆತ್ಮೀಯ ಹಿರಿಯರೊಬ್ಬರ ಪ್ರೀತಿಯಲ್ಲಿ ಮಿಂದ ಅನುಭವವಾಗುತಿತ್ತು.
  ಅವರು ನನ್ನ ತಂದೆಯವರ `ಕನ್ನಡ ವಿಕ್ರಮೋರ್ವಶೀಯಂ' ನಾಟಕ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕ ವಾದಾಗ ಅದರ ವಿದ್ಯಾರ್ಥಿ ಆವೃತ್ತಿಯನ್ನು ಸಿದ್ಧಪಡಿಸಿ ಮಾರಾಟವನ್ನು ವಹಿಸಿಕೊಡಿದ್ದರು. ಮೈಸೂರು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಿತವಾಗಿ ಡಿವಿಕೆ ಮೂರ್ತಿ ಪ್ರಕಟಣೆಗಳ ಮುಖಪುಟ ವಿನ್ಯಾಸದ (ಕೆಂಪು ಗೆರೆಯ ಅಂಚಿನ) ಪ್ರಬೋಧ ಪುಸ್ತಕಮಾಲೆಯ ಪುಸ್ತಕ ಅದೊಂದೆ ನಮ್ಮಲ್ಲಿರುವುದು. ಆಗ ಅವರು ಮಕ್ಕಳಿಗಾಗಿ(ನಮಗೆ) ಎಂದು ಕಳುಹಿಸಿಕೊಟ್ಟಿದ್ದ `ನಡಿ ಕುಂಬಳವೇ ಟರ್ ರಾ ಪುರ್ ರಾ' `ಬೆಳೆಯಿತು ಮೂಗು ನೋಡಣ್ಣಾ', `ಕೊಳಲನು ಊದಿದ ಸಂತೋಷಿ' ಗಳನ್ನು ಓದಿದ ಸಂತೊಷ ನನ್ನ ಮನದಲ್ಲಿ ಇಂದಿಗೂ ಹಸಿರಾಗಿದೆ. ಅವರನ್ನು ನೋಡಲು ಹೋದಾಗ ದೀರ್ಘಕಾಲ ಮಾತನಾಡುತ್ತಾ ಕೂರಿಸಿಕೊಂಡು ಆತಿಥ್ಯ ನೀಡಿ ಅವರ ಭೇಟಿಯ ನೆನಪಿಗೆ ಕೊಂಡ ಪುಸ್ತಕಗಳಿಗೆ ರಿಯಾಯತಿಯನ್ನೂ ನೀಡಿ ಪುಸ್ತಕ ಖರೀದಿಯನ್ನು ಪ್ರೋತ್ಸಾಹಿಸುತ್ತಿದ್ದರು.
  ನನಗೆ ಅವರ ಮೌಲಿಕ ಪ್ರಕಟಣೆಗಳ ವಿದ್ಯನ್ಮಾನ ಆವೃತ್ತಿಯನ್ನೂ (ವಿ-ಪುಸ್ತಕಗಳು) ಆರಂಭಿಸಿ ಕನ್ನಡ ಪ್ರಕಾಶನ ಲೋಕವನ್ನು ವಿದ್ಯುನ್ಮಾನದ ಹೊಸ ಮಜಲಿಗೆ ಅವರು ಕೊಂಡೊಯ್ಯಲಿ ಎನ್ನುವ ಆಸೆ ಇತ್ತು.
  ಅವನ್ನೆಲ್ಲ ನೀವು ಮುಮದುವರೆಸುವಿರೆಂಬ ಸಮಾಧಾನ ನನ್ನದು.
  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 3. ನರೇಂದ್ರ14 December, 2009 09:33

  ಡಿ.ವಿ.ಕೆ.ಮೂರ್ತಿಯವರ ಪರಿಚಯ ನಮಗೆಲ್ಲ ಪುಸ್ತಕಗಳ ಮೂಲಕ. ನಾಲ್ಕೂ ಕಡೆ ಗುಲಾಬಿ ಬಣ್ಣದ ಪಟ್ಟಿಯುಳ್ಳ ಬಿಳಿಯ ಮುಖಪುಟದ ಸರಳ ಮುದ್ರಣದಲ್ಲಿ ಅವರ ಹೆಸರು ಕಂಡು ಗೊತ್ತು, ಅಷ್ಟೇ. ಆದರೆ ಆ ಪುಸ್ತಕಗಳೊಡನೆ ನಮ್ಮ ನಂಟು ಬಾಲ್ಯದ್ದು ಎನ್ನುವ ಕಾರಣಕ್ಕೋ ಏನೋ, ಡಿ.ವಿ.ಕೆ. ಮೂರ್ತಿ ನನ್ನಂಥವರಿಗೂ ಮರೆಯಲಾಗದ ಪುಸ್ತಕ ಬಂಧು. ಸದ್ದಿಲ್ಲದೆ ಮರೆಯಾಗುವ ಅಂಥ ಮಹಾತ್ಮರ ಮನದಾಸೆಯನ್ನು ಮಾಧ್ಯಮದವರು ಕೇಳಿಕೊಳ್ಳದೆಯೂ ಈಡೇರಿಸಿದ್ದು ಮಾತ್ರ ನನ್ನಂಥವರು ಮರೆಯಬಹುದಾದ ಸಣ್ಣ ಸಂಗತಿಯಲ್ಲ!
  ನಿಮ್ಮ ಲೇಖನ ಅಪ್ಪಟ ಪ್ರೀತಿ, ಅಭಿಮಾನ ಮತ್ತು ಗೌರವದ ನುಡಿಪಾಕ.

  ReplyDelete
 4. S Raghavendra Bhatta14 December, 2009 13:11

  Dear Sri Ashoka vardhana,

  While reaching DVK Murthy's residence to pay my last respects to the departed soul I naturally started remembring the visits I made with GTN to DVK who was invariably sick but, as GTN was always saying " the hard ware is no doubt on the wane but the soft ware is quite intact. Activities associated with publication was keeping him both active and alive as well, DVK would proudly mention.
  As days passed by, --let me confess--I would accompany GTN some three out of ten such visits.The traffic hazhards and the dust and noise pollution that are now making Mysore next to B'lore on was the main reason for most of such withdrawals. But, GTN who would keep his self -assigned appointments would never tease/ admonish me for refraining from accompanying him. That was GTN and thus the next evening will be as usual because he needed somebody to keep company which was his family's desire as well.
  One more thing I must mention here. DVK had his own theories of literature reflective of Marxist ideology and Premchand was the only Indian writer whom DVK rated so high as deserving Nobel Prize. So both of us --GTN and I-will simply lend our ears to DVK's talk.
  Such was DVK whose personality was tempered by genuine humanism and endeared him to greats like Murthy Rao, GTN, Thipperudra Swamy and a host of others.
  May Kannadigas enjoy the benifits of such values as enunciated by DVK & GTN and emulated by your generation is our fond hope.
  S R Bhatta/ 1 10 P M / 14 Dec 2009

  ReplyDelete
 5. Ajith Kumar Hegde14 December, 2009 13:46

  arthapoorna shraddanjali
  Ajithkumar Hegde

  ReplyDelete
 6. Chandrashekara Kalkura14 December, 2009 13:51

  Dear Ashokgaru, Vandemataram.
  I have been reading your mails. We are yet to recover from the 'shock' and of the Floods. It may take decades to resettle.
  Reverting to the sad demise of Sri D.V.K.Murthygaru, I heard and read his name in my student days. He must have been a nonagenarian or at least in his late eighties. I share your anguish about the indifference of the present generation of the past. We forget, I repeat (?times) "Every living thing shares and ancestry". (Charlels Robert Darwin). Our ancestors set a code to offer TILANJALKI to our three generations. Masthi Venkatesha Ayyengar in his master piece DHARMA SAMRAKSHNAE and the renowned Telugu Writer Panuganti Lakshminarasimha Rao Pantulu in his magnum opus SAKSHI have brilliantly explained the purpose of SRADDHA. Suffice to say it is only intended to remember our ancestry and express our gratitude and offer charities in their memory. When our own children and siblings forget our past, can you blame the Media for the non publication of the demise of a notable person of the bygone era. How many more copies a newspaper can be sold by publishing the obituary coloumn of Murthy. These are realities. Remember every media enterprise is also a business organisation.
  Bhavadeeya, Jai Hind.
  Kalkura.

  ReplyDelete
 7. ಪ್ರಪಂಚವೇ ಕಣ್ತೆರೆದು ನೋಡುವಂತಹ ವ್ಯಕ್ತಿತ್ವದ ಡಿವಿಕೆ ಮೂರ್ತಿಯವರ ನಿಧನದ ಬಗ್ಗೆ ನಮ್ಮ ಪತ್ರಿಕೆಗಳು ಸರ್ವ ಆವೃತ್ತಿಗಳಲ್ಲಿ ಒಂದು ಸಾಲಾದರೂ ಬರೆಯದ್ದು ವಿಚಿತ್ರವೇ ಸರಿ. ಇದು ಸೋಜಿಗವಷ್ಟೇ ಅಲ್ಲ, ದುರಂತ ಕೂಡಾ. ಅವರ ಪ್ರಕಾಶನಗಳನ್ನಷ್ಟೇ ಓದಿದ್ದ ನನಗೆ ಅವರ ವ್ಯಕ್ತಿತ್ವದ ತುಂಬು ಪರಿಚಯ ಮಾಡಿಕೊಟ್ಟದ್ದಕ್ಕೆ ನಿಮಗೆ ಕೃತಜ್ಞತೆ ಹೇಳಲೇಬೇಕು. ಅಂದಹಾಗೆ, ೧೩.೧೨.೨೦೦೯ರ 'ಪ್ರಜಾವಾಣಿ'ಯಲ್ಲಿ ರವೀಂದ್ರ ಭಟ್ಟರು "ಮಾನವತಾವಾದಿ ಡಿವಿಕೆ ಮೂರ್ತಿ" ಎಂಬ ಸುಂದರ ಲೇಖನ ಬರೆದಿದ್ದಾರೆ. (ಅದರಲ್ಲಿ ತಮ್ಮದೊಂದು ಅನಿಸಿಕೆಯೂ ಇದೆ.)

  ReplyDelete
 8. ಅಶೋಕವರ್ಧನ ಜಿ.ಎನ್15 December, 2009 05:42

  ಹೌದು, ರವೀಂದ್ರ ಭಟ್ಟರದ್ದು ಓದಿದೆ, ಚೆನ್ನಾಗಿದೆ. ಹಾಗೇ ಒಂಬತ್ತನೇ ತಾರೀಕಿನಂದೇ ‘ಅವಧಿ’ ತನ್ನ ಮಿತಿಯಲ್ಲಿ ಸಕಾಲಿಕ ಟಿಪ್ಪಣಿ ಹಾಕಿದೆ. http://avadhi.wordpress.com/2009/12/09/%E0%B2%A1%E0%B2%BF-%E0%B2%B5%E0%B2%BF-%E0%B2%95%E0%B3%86-%E0%B2%AE%E0%B3%82%E0%B2%B0%E0%B3%8D%E0%B2%A4%E0%B2%BF-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2/
  ತಮಾಷೆ ಎಂದರೆ ಇಬ್ಬರಿಗೂ ಸಿಕ್ಕ ಆಕರ - ಅಭಿನವ ಪ್ರಕಾಶನದ ಕಿರುಪುಸ್ತಕ. ಇನ್ನೂ ತಮಾಷೆ ಎಂದರೆ ಡಿವಿಕೆ ಬಗ್ಗೆ ನನ್ನ ಟಿಪ್ಪಣಿ ಮುಗಿಸಿ, ಭಾವಚಿತ್ರಕ್ಕಾಗುವವಾಗ ನನಗೂ ಒದಗಿದ್ದು ಅದೇ!

  ReplyDelete
 9. ದೇವಕಿ ಜಿ.ಎ15 December, 2009 06:19

  ನಮ್ಮ ಮಗ ಅಭಯ ಅವರಿಗೆ ಸ್ವಂತ ಮೊಮ್ಮಗನಿಗಿಂತ ಕಮ್ಮಿ ಇರಲಿಲ್ಲ. ಅವರ ‘ವೆಂಕಪ್ಪಯ್ಯನ ಕೊನೆಯ ದಿನಗಳು’ ನೀಳ್ಗತೆಯನ್ನು ಅಭಯ ಕಿರುಚಿತ್ರ ಮಾಡಬೇಕೆಂದು ಬಯಸಿದ್ದು, ಇವನು ಚಿತ್ರಜಗತ್ತಿಗೆ ಇನ್ನೂ ಆರಂಭಿಕನ ಬಿಕ್ಕುಗಳ ಹಂತದಲ್ಲೇ ಇರುವಾಗ ಅವರು ಇನ್ನಿಲ್ಲವಾದದ್ದು ನನಗೂ ವಿಷಾದದ ಎಳೆಯಾಗಿಯೇ ಕಾಣುತ್ತದೆ.
  ದೇವಕಿ (ಅಶೋಕವರ್ಧನ)

  ReplyDelete
 10. ಪ್ರಾತಕಾಲದಲ್ಲಿ ಸ್ಮರಣಿಸುವಂತಹ ಮಾದರಿ ವ್ಯಕ್ತಿಯ ಪರಿಚಯಿಸಿದ್ದಕ್ಕೆ ದನ್ಯವಾದಗಳು.
  ಪ್ರಜಾವಾಣಿ ಪ್ರಕಟಿಸಿದ ಬರಹದ ಕೊಂಡಿಯೂ ಇಲ್ಲಿದ್ದರೆ ಚೆನ್ನ ಅನಿಸಿತು. http://www.prajavaniepaper.com/pdf/2009/12/13/20091213a_007100002.jpg

  ReplyDelete
 11. ಇಸ್ಮಾಯಿಲ್ ಎನ್.ಎ.ಎಂ15 December, 2009 13:43

  ನಮಸ್ಕಾರ,
  ನೀವು ಡಿವಿಕೆ ಮೂರ್ತಿಯವರ ಬಗ್ಗೆ ಬರೆದಿದ್ದನ್ನು ಓದಿದೆ. ನಾನು ಮೊದಲು ನನ್ನ ಅಪ್ಪನಿಗಾಗಿ ಓದಿದ ಆಲ್ಬರ್ಟ್ ಐನ್ಸ್ಟೀನ್ ಪುಸ್ತಕ ಡಿವಿಕೆಯವರೇ ಪ್ರಕಟಿಸಿದ್ದೆಂಬುದು ನೆನಪಾಯಿತು. ದಿನಕ್ಕೊಂದು ಕಥೆ ಸರಣಿಯ ಪುಸ್ತಕಗಳು, ಎ ಎನ್ ಮೂರ್ತಿರಾಯರ ಪುಸ್ತಕಗಳು, ಚಿರಸ್ಮರಣೆಯಂಥ ಕಾದಂಬರಿ ಡಿವಿಕೆ ಮೂರ್ತಿಯವರ ಪ್ರಕಟಿಸಿದ ಪುಸ್ತಕಗಳನ್ನು ಓದಿಲ್ಲ ಎಂದರೆ ಕನ್ನಡದ ಮೂಲಭೂತ ಪಠ್ಯಗಳನ್ನೇ ಓದಿಲ್ಲ ಎಂದಾಗಿಬಿಡುತ್ತದೆಯಲ್ಲವೇ?

  ReplyDelete
 12. M.Prabhakara Joshy16 December, 2009 13:39

  DVK obba vishishta vichithra vyakthi. ditta, nera , total committmentna dodda manushya.avarondige sambhashishidaga aada ananda iigalu nenapide.kannada prakashana lokadalli avarobba standard setter.
  avara vyaktitvakke bhara hridayada namanagalu.
  M . PRABHAKARA JOSHY.

  ReplyDelete
 13. DVK bagge bahalastu thilidukollalu saadyavayithu.

  ReplyDelete
 14. ಡಾ ನರಸಿಂಹನ್, ವೀರಾಜಪೇಟೆ16 December, 2009 23:06

  ಮಾನ್ಯ ಮಿತ್ರ ಅಶೋಕವರ್ಧನ,

  ಕೊಡುವುದರಲ್ಲಿ ಇರುವ ಆತ್ಮತೃಪ್ತಿ ಯಾವ ಮಟ್ಟಂದ್ದೆಂದು ಮನಮುಟ್ಟುವಂತೆ ಡಿವಿಕೆ ಮೂಲಕ ನಮಗೆ ತಿಳಿಸಿದ್ದೀರಿ.

  ಧನ್ಯವಾದಗಳು.

  ReplyDelete
 15. ಕೆ.ಎಲ್.ರೆಡ್ಡಿ16 December, 2009 23:54

  ಡಿವಿಕೆ ಮೂರ್ತಿಯವರ ಬಗ್ಗೆ ಬರೆದಿದ್ದನ್ನು ಓದಿದೆ.ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಉದಾಹರಣೆ ಸಹಿತ ತಿಳಿಸಿಕೊಟ್ಟಿದ್ದೀರಿ. ಪುಸ್ತಕ ಮಾರಾಟಕ್ಕೆ ಅವರಿಂದ ಪಡೆದದ್ದು ಪ್ರೇರಣೆ ಮಾತ್ರವಲ್ಲ, ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೀರಿ.
  ಪ್ರೀತಿಯಿಂದ
  ಕೆ.ಎಲ್.ರೆಡ್ದಿ

  ReplyDelete
 16. ಅಜಕ್ಕಳ ಗಿರೀಶ18 December, 2009 20:37

  ಡಿ.ವಿ.ಕೆ.ಯವರನ್ನು ನಾನೂ ಒಂದು ಸಲ ಭೇಟಿ ಮಾಡಿದ್ದೆ.
  ೨೦೦೩ರಲ್ಲಿ ನನ್ನ ಇಂಗ್ಲಿಶನ್ನು ಪಳಗಿಸೋಣ ಪುಸ್ತಕ ಮಾರಾಟಕ್ಕಾಗಿ ಮೈಸೂರಿಗೆ ಹೋಗಿದ್ದಾಗ ಅವರ ಮನೆಗೆ ಹೋಗಿದ್ದೆ.ಮೊದಲ ಬಾರಿ ಪುಸ್ತಕ ಪ್ರಕಟಿಸಿದ್ದ ಎಳಸು ಆಗ ನಾನು. ಮಾರಾಟದ ಘೋಷಿತ/ಅಘೋಷಿತ ನಿಯಮಗಳಾವುವೂ ನನಗೆ ಆಗ ಗೊತ್ತಿರಲಿಲ್ಲ. ಆದರೆ ಬಹಳ ಪ್ರೀತಿಯಿಂದ ಚಾ ಕೊಟ್ಟು ಮಾತಾಡಿಸಿದರು.ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಕೂರಿಸಿ ಕನ್ನಡ ಸಾಹಿತ್ಯ ,ಪುಸ್ತಕ , ಬದುಕಿನ ಮೌಲ್ಯಗಳ ಬಗ್ಗೆ ಫಿಲಸಫಿಕಲ್ ಆಗಿ
  ಕೂಡ ಈ ಹೊಸಬನ ಜೊತೆ ಮಾತಾಡಿದರು.೫೦ ಪುಸ್ತಕಗಳನ್ನು ನಗದು ಕೊಟ್ಟು ಖರೀದಿಸಿದರು. ಮೈಸೂರಲ್ಲಿ ನಾನು ಬೇರೆ ಅಂಗಡಿಗೆ ಕೊಡಬಹುದೇ ಎಂದು ಕೇಳಿದೆ. "ಮಾಡಬಹುದು, ಆದರೆ ಶೇ.೫೦ಕ್ಕಿಂತ ಹೆಚ್ಚು ಕೊಟ್ಟು ತೆಗೆದುಕೊಳ್ಳುವ ಅಂಗಡಿಯವರು ನಿನಗೆ ಸಿಗೋದು ಕಷ್ಟ " ಅಂದರು.( ಅದು ಸತ್ಯವೆಂದು ಒಂದೆರಡು ಅಂಗಡಿ ತಿರುಗಿದಾಗ ಆ ನಂತರ ಗೊತ್ತಾಯಿತು.) ಅವರೇ ಬರೆದಿದ್ದ ಎರಡು ಪುಸ್ತಕಗಳನ್ನು ದುಡ್ಡು ತೆಗೆದುಕೊಳ್ಳುವುದಿಲ್ಲವೆಂದು ಹೇಳಿ ಕೊಟ್ಟರು.ಅವರ ಮನೆಯಲ್ಲಿ ಮೈಸೂರು ವಿ.ವಿ.ಅರ್ಥಶಾಸ್ತ್ರ ಪ್ರಾಧ್ಯಾಪಕರೊಬ್ಬರು ಕೂದ ಚೆನ್ನಾಗಿ ಮಾತಾಡಿಸಿದ್ದರು. ಹೆಸರು ಮರೆತಿದೆ.ಒಟ್ಟಿನಲ್ಲಿ ತುಂಬ ಗೌರವ ಹುಟ್ಟಿಸುವ ವ್ಯಕ್ತಿತ್ವ ಅವರದು.ಆ ದಿನ "ಐ ಫೆಲ್ಟ್ ಐ ವಾಸ್ ರಿಯಲ್ಲೀ ಆನರ್ಡ್ " ಅಂತ.
  ಅವರಿಗೆ ನನ್ನದೂ ಇಂತೊಂದು ನಮನ.
  ಗಿರೀಶ.

  ReplyDelete
 17. ಹೌದು ದೊಡ್ಡ ವ್ಯಕ್ತಿತ್ವದವರು ಮೂತಿ ರಾಯರು, ದೇವರು ಪುಸ್ತಕವನ್ನು ನಾನೂ ಅವರಿಂದ ನೇರ ತರಿಸಿಕೊಂಡು ತುಂಬಾ ಪುಸ್ತಕ ಮಾರಿದ್ದಿದೆ. ಅಂತೆಯೇ ಅಪರ ವಯಸ್ಕನ ಅಮೇರಿಕಾ ಮಾತ್ರೆ, ಮುಸ್ಸಂಜೆ.... ಈ ಪುಸ್ತಕಗಳನ್ನೂ ಅವರಿಂದ ತರಿಸಿಕೊಂಡ ನೆನಪು..... ಇಂದು ಅವರನ್ನು ನಾವು ಕಳಕೊಂಡಿದ್ದೇವೆಂದು ನನಗೆ ತಿಳಿದದ್ದೇ ಇಂದು.....
  ಅಯ್ಯೋ ಅವರು ಹೋಗಿರಲಿಕ್ಕಿಲ್ಲ..... ಮೈಸೂರಿನಲ್ಲೇ ತನ್ನದು, ಸೇರಿದಂತೆ ಹಲವಾರು ವೈದ್ಯ ಸಾಯಿತಿಗಳ ಪುಸ್ತಕ ಅಚ್ಚು ಹಾಕುವುದಲ್ಲದೆ, ಪುಸ್ತಕದ ಕಟ್ಟು ಕಟ್ಟಿ ಕಳಿಸಿಕೊಡುವ ಕಾಯಕದಲ್ಲೇ ನಿರತರಾಗಿರಬಹುದು. ಹಾಗೆ ಇಂದು ಅವರಿಲ್ಲ ಎಂದು ಹೇಳಿದರೆ ಹೇಗೆ.... ಅವರ ಪುಸ್ತಕ ಮತ್ತಿತರ ಪುಸ್ತಕ ಖಾಲಿಯಾಗುವುದಾದರೂ ಹೇಗೆ???? ಅದಕ್ಕೆ ಮೂ. ರಾಯರೇ ಬೇಕಲ್ಲ

  ReplyDelete
 18. ಸಿಪಿಕೆ21 January, 2010 21:04

  ಪ್ರಿಯ ಅಶೋಕವರ್ಧನ ಅವರೆ
  ಶ್ರೀ ಡಿವಿಕೆ ಕುರಿತ ಲೇಖನ ಚೆನ್ನಾಗಿದೆ.
  ಅವರ ಬಗೆಗಿನ ಸಂತಾಪ ಸೂಚಕ ಸಭೆಯೊಂದರಲ್ಲಿ ಮಾತನಾಡುತ್ತ, ಅವರ ಔದಾರ್ಯವನ್ನು ನಾನು ಪ್ರಸ್ತಾಪಿಸಿದೆ. ಅವರ ಆ ಗುಣದ ಅಲ್ಪ ಪರಿಚಯವಷ್ಟೆ ನನಗಿದ್ದುದು! ಆದರೆ ನಿಮ್ಮ ಲೇಖನವನ್ನೋದಿದ ಬಳಿಕ ಅವರ ಔದಾರ್ಯ ಎಷ್ಟು ಅತಿಶಯವಾಗಿತ್ತೆಂದು ತಿಳಿದು, ನನಗೆ ಸಮರ್ಥನೆ ಸಿಕ್ಕಿತು! ಅಂಥವರು ಈಗ ವಿರಳ.
  ವಂದನೆಗಳೊಡನೆ
  ಸಿಪಿಕೆ

  ReplyDelete