
ಎರಡನೇ ಅರಬ್ಬಾಯಿ ನನ್ನ ಚಿಕ್ಕಮ್ಮನ ಮಗ ಸತ್ಯನಾರಾಯಣ ಉರುಫ್ ಸತ್ಯ ಅಲಿಯಾಸ್ ಪಾಪಣ್ಣನದು. ನನ್ನ ಒಂದೆಕ್ರೆ ವಿಸ್ತೀರ್ಣದ ಅಭಯಾರಣ್ಯವಾದರೋ ಹೆಸರಿಗೆ ಮಾತ್ರ. ವಾಸ್ತವದಲ್ಲಿ ಅದನ್ನೂ ಆವರಿಸಿದಂತಿರುವ ದೊಡ್ಡ ನೆಲ (ಸುಮಾರು ಐವತ್ತು ಎಕ್ರೆ), ಕಾರ್ಯಸಾಧ್ಯ ಸವಲತ್ತುಗಳು ಅದಕ್ಕೂ ಮುಖ್ಯವಾಗಿ ನಡೆಸುವ ಮನಸ್ಸಿರುವುದು ಸತ್ಯನಲ್ಲಿ ಮತ್ತು ಅವರ ಎಡೆಂಬಳೆ ಕೃಷಿಕ್ಷೇತ್ರದಲ್ಲಿ. ಹಿಂದೆ ನಂಬಿಯಾರರ ಪ್ರಯೋಗ ‘ನಾನು’ ನಡೆಸಿದ್ದೂ ಹಾಗೇ. ಆಗ ಡಾಮರು ದಾರಿಗೆ ನೇರ ಕಾಣುವಂತಿದ್ದ. ಸಾರ್ವಜನಿಕಕ್ಕೆ ಸುಲಭ ಗಮ್ಯವಾದ ಪದವಿನಲ್ಲಿ ನಡೆಸಿದ್ದೆವು. ಈ ಬಾರಿ ನಾಗರಿಕ ಗದ್ದಲ, ಬೆಳಕುಗಳಿಂದ ಮತ್ತಷ್ಟು ದೂರಸರಿದು, ರಬ್ಬರ್ ತೋಟದ ಮುನ್ನೆಲೆಯಲ್ಲಿ, ಹಿಂದೆಂದೋ ತಟ್ಟು ಮಾಡಿಬಿಟ್ಟಿದ್ದ ಮನೆ ನಿವೇಶನವನ್ನೇ ಕೇಂದ್ರವಾಗಿಟ್ಟುಕೊಂಡು ಸ್ಥಳ ಆಯ್ಕೆ ಮಾಡಿದ್ದೆವು. ಸತ್ಯ ಇಮ್ಮಡಿಸಿದ ಉತ್ಸಾಹದಿಂದ ಪ್ರವೇಶದ ತೆರೆಯ ಹಿಂದೆ ಒಜ್ಜೆಯ ಹೆಜ್ಜೆಗಳನ್ನು ಇಡತೊಡಗಿದ್ದ.

ಓಲಂಪಿಕ್ ಜ್ಯೋತಿ ಬಿಡಿ, ನಮ್ಮ ಚರ್ಮುರಿ ಮೈದಾನದ ನೂರಿಪ್ಪತ್ತೆಂಟನೇ ಚಡುಗುಡು ಸ್ಪರ್ಧಾಕೂಟವೂ ಗ್ಯಾಸ್ ದೀವಟಿಗೆಗಳನ್ನು ಬಳಸುತ್ತಿರುವುದು ನಾವೆಲ್ಲಾ ತಿಳಿದವರೇ. ಅದನ್ನೇ ಯಕ್ಷಗಾನಕ್ಕೆ ಒಲಿಸುವ ಕುರಿತು ನಾನು ಒಬ್ಬ ಗ್ಯಾಸ್ ಸ್ಟೌ ರಿಪೇರಿಯವನ ಬಳಿ ವಿಚಾರಿಸಿದೆ. ಆತ ಭಾರೀ ಉತ್ಸಾಹವೇನೋ ತೋರಿಸಿದ ಆದರದು ಕೆಲಸಕ್ಕಿಳಿಯಲೇ ಇಲ್ಲ. ಆತನ ಅಣ್ಣ, ಇನ್ನೊಂದೇ ಗ್ಯಾಸ್ ಡೀಲರ್, ಅಷ್ಟೇ ಆಕಸ್ಮಿಕವಾಗಿ ಪರಿಚಯವಾಗಿ, ಸತಾವಣೆಯಲ್ಲಿ ಅಳಿಲಸೇವೆ ಸಲ್ಲಿಸಿದರೂ ಪ್ರದರ್ಶನಕ್ಕೆ ಇನ್ನು ಹತ್ತೇ ದಿನ ಎನ್ನುವಾಗ ನಾಲ್ಕೂ ದೀವಟಿಗೆಗಳನ್ನು ಕೊಟ್ಟ. ಅದರ ತಾಂತ್ರಿಕ ವಿವರಗಳು, ಕೊರತೆಗಳು ಇಲ್ಲಿ ಬೇಡ. ಆದರೆ ಅವು ಸುಲಭವಾಗಿ ಸುಧಾರಿಸಬಹುದಾದ ತಿದ್ದುಪಡಿಗಳೆಂದು ಕಂಡು ನಾವು ಪರ್ಯಾಯ ವ್ಯವಸ್ಥೆಯನ್ನು ಯೋಚಿಸದೆ ಮುಂದುವರಿದೆವು. ವಾಸ್ತವವಾಗಿ ಅಂತಿಮ ಅಟ್ಟಹಾಸ ಕೊಟ್ಟು ನಾವು ರಂಗಕ್ಕೇ ಧುಮುಕಿದ್ದು ಗ್ಯಾಸ್ ದೀವಟಿಗೆಯ ರೂಪಣೆಯೊಡನೆ.
ಒಂದು ಜೊತೆ ದೀವಟಿಗೆ ಹಿಡಿದು ಮನೋಹರರೊಡನೆ ಅಭಯಾರಣ್ಯಕ್ಕೆ ಹೋಗಿದ್ದೆವು. ಸತ್ಯನಿಗೆ ನಮ್ಮ ಅಗತ್ಯಗಳನ್ನು ನೆಲದ ಮೇಲೇ ಸ್ಪಷ್ಟಪಡಿಸಿ, ದೀವಟಿಗೆಯನ್ನು ಹಗಲಲ್ಲೆ ಉರಿಸಿ ನೋಡಿ ಸಂತೋಷಿಸಿದೆವು. ಮಂಗಳೂರಿಗೆ ಮರಳಿದ ಮೇಲೆ ಮನೋಹರರಿಗೆ ಅದರ ಚಂದವನ್ನು ಕತ್ತಲಲ್ಲೇ ನೋಡಬೇಕೆಂದು ಆಸೆ ಬಲಿತದ್ದಕ್ಕೆ ರಾತ್ರಿ ನನ್ನ ಮನೆಗೇ ಬಂದು ಅಂಗಳದಲ್ಲಿ ಹಚ್ಚಿ ನೋಡಿದ್ದೂ ಆಯ್ತು. ಅದರ ಮಾರುದ್ದ ಜ್ವಾಲೆಯ ಕೆಂಪು ಹಳದಿ ವರ್ಣಗಳ ಒಲೆತವನ್ನು ಬಳಿಯಲ್ಲಿ ನಿಂತ ನನ್ನ ಬಿಳಿ ಬಟ್ಟೆಗಳ ಮೇಲೆ, ತುಸು ದೂರದ ಮನೆಯ ಗೋಡೆಯ ಮೇಲೆ ಮತ್ತೂ ಆಚಿನ ಗಿಡಮರಗಳ ಮೇಲಿನದ್ದೆಲ್ಲಾ ಫೋಟೋ ದಾಖಲೆಗೊಳಪಡಿಸಿ ಆನಂದಿಸಿದರು ಉಪಾಯ್ದರು. ಆ ಚಿತ್ರಗಳನ್ನು ಬೆಂಗಳೂರಿನಲ್ಲಿದ್ದ ಅಭಯನಿಗೂ ಎರಡು ಪ್ರದರ್ಶನಗಳ ನಿರ್ದೇಶಕರಿಗೂ ಮತ್ತೊಂದಷ್ಟು ಸಮಾನ ಮನಸ್ಕರಿಗೂ ಕಳಿಸಿ ಸಂತೋಷವನ್ನು ಸಾಂಕ್ರಾಮಿಕವಾಗಿಸಿದರು ಈ ವೈದ್ಯ!
“ಈಗ ಪ್ರದರ್ಶನದ ಜ್ವರ ನಮ್ಮನ್ನೂ ಹಿಡಿಯಿತು,” ನವೆಂಬರ್ ಆರರಂದು ಸ್ಥಳ ಪರಿಶೀಲನೆಗೆ ಬಂದ ಎರಡೂ ನಿರ್ದೇಶಕರು (ಸುವರ್ಣ, ಕವತ್ತಾರ್) ಉದ್ಗರಿಸಿದರು. ಮೊದಲು, ಕಣಿವೆಗಿಳಿದಲ್ಲೇ ತೋಟದೊಳಗಿನ ಎರಡು ದಾರಿ ಸಂಗಮದಲ್ಲೇ ಊಟ ತಿಂಡಿಯ ವಿತರಣೆಗೆ ಸ್ಥಳ ಆರಿಸಿದೆವು (ಊಟದಲಿ ಮುಂದು!). ದಾರಿಯ ಬಲ ಕವಲಿನಲ್ಲಿ ಚೌಕಿ, ಮುಂದುವರಿದರೆ ವೇಷಗಳಿಗೆ ಹಿಂದಿನಿಂದ ರಂಗಕ್ಕೇರಲು ದಾರಿ. ತುಸುವೇ ಗುಡ್ಡೆ ಏರುವ ಮುಖ್ಯ ದಾರಿಯ ಎಡಬಲಗಳು, ಬಲಕ್ಕೊದಗುವ ಮನೆ ನಿವೇಶನದ ಹಿಂದಿನಂಚನ್ನು ರಂಗಕ್ಕೆ ಮೀಸಲಿಟ್ಟು ಉಳಿದಷ್ಟೂ ಜಾಗ ಪ್ರೇಕ್ಷಾಂಗಣ. ವೇದಿಕೆಯ ಆಯ ಅಳತೆ, ಕಂಬ ತೋರಣ, ಪ್ರೇಕ್ಷಾಂಗಣದ ವ್ಯಾಪ್ತಿ, ದೀವಟಿಗೆಯ ಸ್ಥಾನ ನಿರ್ದೇಶನ, ಗ್ಯಾಸ್ ಅಂಡೆಗಳ ಮರಸು ಇತ್ಯಾದಿ ಹಲವು ತಲೆ ಸೇರಿತು. ವಾರ ಕಳೆಯುವುದರೊಳಗೆ ಅಭಯನೂ ಬಂದು ಕ್ಯಾಮರಾ ‘ದೃಷ್ಟಿ’ಯ ಅಗತ್ಯಗಳನ್ನೂ ನಿಷ್ಕರ್ಷಿಸಿ ಹೋದ.
ಬಡಗು ತಿಟ್ಟಿನ ತಂಡ ಯಕ್ಷಗಾನ ಕೇಂದ್ರದ್ದೇ ಅರ್ಥಾತ್ ವ್ಯವಸಾಯೀ ಮೇಳದ ತಿರುಗಾಟ ಇಲ್ಲದ್ದು. ಹಾಗಾಗಿ ಅವರಿಗೆ ಯಾವ ದಿನ ಯಾವ ಹೊತ್ತು ಎಂದರೂ ಆಕ್ಷೇಪವಿರಲಿಲ್ಲ. ತೆಂಕು ತಿಟ್ಟಿನ ತಂಡವನ್ನು ಪೃಥ್ವೀ ವಿವಿಧ ವ್ಯಾವಸಾಯಿಕ ಮೇಳಗಳಿಂದ ಆಯ್ದ ಕಲಾವಿದರಿಂದ ಕಟ್ಟಬೇಕಾಗಿತ್ತು. ಅಂದರೆ ಮಳೆ ಮುಗಿದು ಮೇಳಗಳು ತಿರುಗಾಟಕ್ಕಿಳಿಯುವ ಮೊದಲು ನಮ್ಮ ಪ್ರದರ್ಶನ ನಡೆಯಬೇಕಿತ್ತು. ಆದರೆ ಈ ಬಾರಿ ಅಕಾಲಕ್ಕೆ ಮುಂದುವರಿದ ಮಳೆ, ಯಕ್ಷಗಾನ ಕೇಂದ್ರಕ್ಕೆ ಅಂತಾರಾಷ್ಟ್ರೀಯ ಮೇಳ ಒಂದರಲ್ಲಿ ಭಾಗಿಯಾಗಬೇಕಾದ ಅವಕಾಶ ತಪ್ಪಿಹೋಗದಂತೆ ಹೊಂದಾಣಿಕೆ ಎಲ್ಲಾ ಸೇರಿ ನವೆಂಬರ್ ಇಪ್ಪತ್ತೆಂಟು ಅಂತಿಮಗೊಳಿಸಬೇಕಾಯ್ತು. ತೆಂಕು ತಿಟ್ಟಿನ ಪ್ರದರ್ಶನವನ್ನು (ಕತ್ತಲಾದ ಕೂಡಲೇ) ಮೊದಲಿಗಿಟ್ಟುಕೊಂಡು, ಮುಗಿದ ಕೂಡಲೇ (ಸುಮಾರು ರಾತ್ರಿ ಹತ್ತು ಗಂಟೆಗೆ) ಕಲಾವಿದರನ್ನು ಅವರವರ ಮೇಳಕ್ಕೆ ತಲಪಿಸುವ ವ್ಯವಸ್ಥೆ ಮಾಡಿಕೊಂಡೆವು. ಆದರೂ ಆದರೂ ಬಂಗಾಳದಲ್ಲಿ ನಿಮ್ನ ಒತ್ತಡ, ಅರಬ್ಬಿಯಲ್ಲಿ ಚಂಡಮಾರುತದ ವರದಿಗಳು ನಮ್ಮನ್ನು ಕೊನೆಯ ಗಳಿಗೆಯವರೆಗೂ ಕಾಡುತ್ತಲೇ ಇತ್ತು!
ಯಕ್ಷಗಾನ ಕೇಂದ್ರಕ್ಕೆ ತಿರುಗಾಟದ ಹಂಗಿಲ್ಲ. ಮತ್ತದು ದಿನದ ಇಪ್ಪತ್ನಾಲ್ಕು ಗಂಟೆಯೂ ಯೋಜಿತ ಏಕ ಲಕ್ಷ್ಯಕ್ಕೇ ದುಡಿಯುವುದರಿಂದ ಅವರಾರಿಸಿಕೊಂಡ ಪ್ರಸಂಗ - ಅರಗಿನ ಮನೆಯ ಕಥಾ ಸಾರಾಂಶದಿಂದ ತೊಡಗಿ ಹಿಮ್ಮೇಳ ಮುಮ್ಮೇಳಗಳ ಪಟ್ಟಿ ಸಕಾಲಕ್ಕೆ ನಮಗೂ ತಿಳಿದಿತ್ತು. ಅವರ ತಯಾರಿ, ತರಬೇತಿಗಳ ಬಗ್ಗೆಯೂ ನಮಗೆ ಅಪಾರ ಭರವಸೆಯಿತ್ತು. ಆದರೆ ವಿವಿಧ ಪರಿಣತಿಯ (ಮತ್ತು ವಿವಿಧ ಮೇಳಗಳ) ಹಿರಿಯ ಕಲಾವಿದರನ್ನು ಪೃಥ್ವಿ ತನ್ನ ಪ್ರಾಯದ ಕಿರಿತನದ ತೊಡಕಿನೊಡನೆ ಒಲಿಸಿ, ಒಪ್ಪಿಸಿ, ದಿನಮುಂಚಿತವಾಗಿ ಒಂದು ಅಭ್ಯಾಸ ಕೂಟಕ್ಕೂ ಕರೆಸಿ ಪ್ರದರ್ಶನ ಕಳೆಗಟ್ಟಿಸುವ ಛಲ ಸಾಮಾನ್ಯದ್ದಲ್ಲ. ಉಪಾಯ್ದರ ಮತ್ತು ನನ್ನ ಅಲ್ಪಸ್ವಲ್ಪ ಯಕ್ಷ ಚಟುವಟಿಕೆಯ ‘ನಾಮದ ಬಲ’ ಬಳಸಿಕೊಳ್ಳಲು ಪೃಥ್ವೀಗೆ ನಾವು ಸ್ವಾತಂತ್ರ್ಯವನ್ನಷ್ಟು ಕೊಡುವುದು ಬಿಟ್ಟು ಬೇರೇನು ನಮ್ಮಿಂದ ಆಗುವಂತದ್ದಿರಲಿಲ್ಲ.
ಬಡಗಿನಲ್ಲಿ ಸಂಜೀವರಿದ್ದಂತೆ ತೆಂಕಿನಲ್ಲಿ ಸಮತೂಕಕ್ಕೆ ಒದಗುವವರು ಕರ್ಗಲ್ಲು ವಿಶ್ವೇಶ್ವರ ಭಟ್ಟರು. ಪೃಥ್ವಿ ಮುಖ್ಯ ಪಾತ್ರದಲ್ಲಿ ಅವರ ಹೆಸರು ಅಂದಾಜಿಸಿಯೇ ‘ಕುಂಭಕರ್ಣ ಕಾಳಗ’ ಪ್ರಸಂಗ ಘೋಷಿಸಿಕೊಂಡರು. ಆದರೆ ಕಲಾವಿದರ ಪಟ್ಟಿ ಗಟ್ಟಿ ಮಾಡುವ ಕಾಲಕ್ಕೆ ಕರ್ಗಲ್ಲು ಭಾಗಿಯಾಗಲು ಒಪ್ಪಲೇ ಇಲ್ಲ. ನಾನು ವಿಶ್ವೇಶ್ವರ ಭಟ್ಟರನ್ನು ಪರಿಚಯ ಹಿಡಿದು ಕಂಡವನಲ್ಲ, ಮಾತಾಡಿಸಿದ್ದೂ ಇಲ್ಲ. ಆದರೂ ಎಲ್ಲಿಂದಲೋ ಅವರ ಚರವಾಣಿ ಸಂಖ್ಯೆ ಸಂಗ್ರಹಿಸಿ ಸಂಪರ್ಕಿಸಿದೆ. ಸೂಕ್ಷ್ಮದಲ್ಲಿ ನನ್ನ ಪ್ರವರ ಹೇಳಿಕೊಂಡು ಮಾತಿಗಿಳಿಯುವುದರೊಳಗೆ ‘ತಾನು ಪ್ರಯಾಣದಲ್ಲಿದ್ದೇನೆ. ಗಂಟೆ ಬಿಟ್ಟು ಮಾಡಿ’ ಎಂಬ ಸೂಚನೆ ಅವ್ರಿಂದ ಬಂತು. ಮತ್ತೆ ಒಂದೂವರೆ ದಿನ ಅವರ ಚರವಾಣಿ ‘ಸ್ವಿಚ್ ಆಫ್!’ ಅಸಂಖ್ಯ ಪ್ರಯತ್ನಗಳ ಒಂದು ಹಂತದಲ್ಲಿ ಅವರು ಮತ್ತೆ ಸಂಪರ್ಕಕ್ಕೆ ಸಿಕ್ಕರೂ ಅವರಲ್ಲಿದ್ದ ಕಲಾವಿದ ಯಕ್ಷಗಾನದ ಮುಖ್ಯವಾಹಿನಿಗೆ ಸ್ವಿಚ್ ಆಫ್ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದಷ್ಟೇ ಆಯ್ತು. “ಯಕ್ಷ ಪರಿಸರ ಮಾಲಿನ್ಯದಲ್ಲಿ ನನಗಾಗುವ ವೇಷಭೂಷಣಗಳು, ಸಹಕಲಾವಿದರು, ಯೋಗ್ಯ ಹಿಮ್ಮೇಳ, ಕೊನೆಗೆ ಗ್ರಹಿಸುವ ಸಹೃದಯರೂ ಇಲ್ಲ. (ಆ ಲೆಕ್ಕದಲ್ಲಿ) ನನಗೆ ಯಕ್ಷಗಾನ ಗೊತ್ತಿಲ್ಲ. ನನ್ನನ್ನು ಬಿಟ್ಟುಬಿಡಿ” ಎನ್ನುವ ಮನವಿಯನ್ನು ತೀರಾ ವಿಷಾದದಿಂದ ಎನ್ನುವಂತೆ ನನ್ನಲ್ಲಿ ಹೇಳಿಕೊಂಡರು. ನಾನು ಕೆದಕಿ ಕೇಳಿದಾಗ ಈ ನಿಲುವಿನ ಹಿಂದಿನ ಅವರ ಒಂದೆರಡು ಕಹಿ ಅನುಭವಗಳ ಪರಿಚಯವೇನೋ ನನಗಾಯ್ತು ಆದರೆ ಅದನ್ನು ಮೀರಿ ಅವರನ್ನೊಪ್ಪಿಸುವ ದಾರಿ ನನಗೆ ಕಾಣದಾಯ್ತು. ಮುಂದುವರಿದು ಅವರದೇ ಸಂಶೋಧನೆ, ಸಾಧನೆ ಮತ್ತು ಯೋಜನೆಗಳ ಸೂಕ್ಷ್ಮ ನನ್ನಲ್ಲಿ ಹೇಳಿಕೊಂಡರೂ ನನಗವಮಾನವಾಗದಂತೆ ನಮ್ಮ ಪ್ರದರ್ಶನದ ವೀಳ್ಯವನ್ನು ತಿರಸ್ಕರಿಸಿದರು.
ಹಿಂದೆ ನಂಬಿಯಾರರೂ ಹೇಳಿದ್ದರು (ಮತ್ತೂ ಕರೆಸಿದ್ದರು), ಈಗ ಪೃಥ್ವಿಯೂ ಹೇಳಿದರು, “ಇಂದು ಸಾಂಪ್ರದಾಯಿಕ ಭಾಗವತಿಕೆಗೆ ಬಲಿಪರೊಬ್ಬರೇ.” ನಮಗೇನೂ ವಿರೋಧವಿರಲಿಲ್ಲ. ಆದರೆ ಇನ್ನೊಂದೇ ಸುದ್ಧಿ ಬಂತು, ಬಲಿಪರ ಹೆಸರು ಇಪ್ಪತ್ತೆಂಟರಂದೇ ಕೊಡಮಾಡುವ ಯಾವುದೋ ಒಂದು ಮಹತ್ತರ ಪ್ರಶಸ್ತಿಗೆ ಆಯ್ಕೆಯಾಗಿದೆ. ಆದರೆ ಘೋಷಣೆ ಮಾತ್ರ ತಡವಾಗಿ ಆಗಲಿದೆ. ಬಲಿಪರು ಇದಕ್ಕೂ ಮೊದಲೇ ಪೃಥ್ವಿಗೆ ಒಪ್ಪಿಗೆ ಸೂಚಿಸಿ ಆಗಿತ್ತು. ಆದರೆ “ಪ್ರಶಸ್ತಿ ತಿರಸ್ಕರಿಸಿ ನಮ್ಮಲ್ಲಿಗೇ ಬರುತ್ತೀರಾ ಎಂದು ಬಲಿಪರನ್ನು ಯಾವ ಬಾಯಿಯಲ್ಲಿ ಕೇಳಲಿ” ಪೃಥ್ವಿಗೆ ಸಂಕೋಚ. “ಅಧಿಕೃತವಾಗಿ ಪ್ರಶಸ್ತಿ ಇನ್ನೂ ಘೋಷಿಸದ ಸಂಘಟನೆಯನ್ನು ಕೇಳಹೋದರೆ ಎಲ್ಲಿ ಬಲಿಪರಿಗೆ ಅವಮಾನಕಾರಿಯಾಗಿ ತಿರುಗುತ್ತದೋ” ಪೃಥ್ವಿಗೆ ದ್ವಂದ್ವ! ಅನಿವಾರ್ಯವಾಗಿ ನಾನು ಪರಿಚಯದ ಬಲದಲ್ಲಿ ಸಂಘಟಕರನ್ನು ನೇರ ವಿಚಾರಿಸಿದಾಗ ಹೆಸರಿನ ಗುಟ್ಟು ರಟ್ಟಾಗದಿದ್ದರೂ ದಿನ ಅದಲ್ಲ ಎಂದು ಖಾತ್ರಿಯಾಗಿ, ಅಷ್ಟರ ಮಟ್ಟಿಗೆ ಮನಸ್ಸು ನಿಶ್ಚಿಂತವಾಯ್ತು. ಹೀಗೇ ಕುಂಭಕರ್ಣ ಪಾತ್ರಕ್ಕೆಂದು ನಿಶ್ಚಯವಾಗಿದ್ದ ಜಗದಭಿರಾಮರಿಗೆ ದಿಲ್ಲಿಯಿಂದ ವಿದ್ಯಾ ಕೋಳ್ಯೂರು ಅವರಿಂದ ವಿಮಾನಯಾನದ ಸೌಕರ್ಯದೊಡನೆ ತುರ್ತು ಬುಲಾವ್! ಇಲ್ಲ, ಇವರು ನಿಷ್ಠೆ ಬದಲಾಯಿಸುವ ಪುಡಾರಿಗಿರಿ ಮಾಡಲಿಲ್ಲ. ಇದು ನಮ್ಮ ಉದ್ದೇಶದ ಉದಾತ್ತತೆಗೆ ಸಂದ ಗೌರವವೂ ಹೌದು.
ಕಾಡಮೂಲೆಯಲ್ಲಿ, ಕತ್ತಲಮೊತ್ತದಲ್ಲಿ, ಕೇವಲ ದೀವಟಿಗೆ ಯೋಜಿತ ದಾಖಲೀಕರಣಕ್ಕೆ ಸರಿ. ಆದರೆ ಚೌಕಿಗೆ ದೀಪ ಬೇಕಲ್ಲಾ. ಪ್ರದರ್ಶನಕ್ಕೆ ಸಾರ್ವಜನಿಕರ ಪ್ರವೇಶವನ್ನು ತೀರಾ ಕಡಿತಗೊಳಿಸಿದ್ದೆವು. ಆಮಂತ್ರಣ ಪತ್ರ ಬಿಡಿ, ಸ್ಪಷ್ಟ ಬಾಯ್ದೆರೆ ಕರೆಯನ್ನೂ ನಾವು ಯಾರಿಗೂ ಕೊಡಲಿಲ್ಲ. ಆದರೆ ಯಕ್ಷ-ಸಂಶೋಧಕರು, ಕಷ್ಟಪಟ್ಟಾದರೂ ಗುಣಶುದ್ಧವಾದ್ದನ್ನು ಕಾಣುವ ಗೀಳು (ನಂಬಿಯಾರ್ ಮತ್ತೆ ಮತ್ತೆ ಬಳಸುವ ಶಬ್ದ) ಹತ್ತಿಸಿಕೊಂಡವರನ್ನಂತೂ ನಾವು ದೂರಮಾಡುವಂತಿರಲಿಲ್ಲ. ಈ ಜನ, ಆವಶ್ಯಕ ಓಡಾಟ, ಹೊಟ್ಟೆಪಾಡು, ಅಪರಾತ್ರಿಯಲ್ಲಿ ಪ್ರದರ್ಶನ ಮುಗಿದಮೇಲೆ ವಿಶ್ರಾಂತಿಗಳಿಗೆಲ್ಲ ವ್ಯವಸ್ಥೆಬೇಡವೇ? ನನ್ನ ಅಂಗಡಿ ನವೀಕರಣದಲ್ಲಿ ಕಿತ್ತು ಗುಡ್ಡೆ ಹಾಕಿದ ಒಂದಷ್ಟು ವಯರು ಮನೆಯಲ್ಲಿತ್ತು. ಅದಕ್ಕೊಂದಷ್ಟು ಟೇಪು, ಹೋಲ್ಡರು, ಬಲ್ಬು ಜೋಡಿಸಿ ಚೌಕಿಗೂ ಕಾಡ್ಮನೆಗೂ ತತ್ಕಾಲೀನ ವಯರಿಂಗ್ ಮಾಡಿದೆ. ನನ್ನಂಗಡಿಯ ಮತ್ತು ನೆರೆಯಂಗಡಿಯ ಮಹಮ್ಮದರ (ಔದಾರ್ಯದ) ಜನರೇಟರ್ ಸಂಪರ್ಕದಲ್ಲಿ ಅವನ್ನು ಝಿಗ್ಗಗೊಳಿಸಿದ್ದಾಯ್ತು! ಆಯಕಟ್ಟಿನ ಜಾಗಗಳಿಗೆ ಕೆಲವು ಮಿತ್ರರ ಎಮರ್ಜೆನ್ಸಿ ದೀಪಗಳು, ಉಸ್ತುವಾರಿಯವರಿಗೆ ಸತ್ಯನ ರಬ್ಬರ್ ಕೊಯ್ಕರ ತಲೆದೀಪಗಳೂ ತಯಾರಿದ್ದವು.
ಸಾಮಾನು, ಸರಂಜಾಮು ಒಟ್ಟು ಮಾಡಿ ರಂಗದಿಂದೊಂದಷ್ಟು ದೂರದಲ್ಲೋ ಕಾಡ್ಮನೆಯಲ್ಲೋ ಎಡೆಂಬಳೆ ಮನೆಯಲ್ಲೋ ದೊಡ್ಡ ಒಲೆಹೂಡಿ, ಎರಡು ಅಡಿಗೆಯವರನ್ನು ತರಿಸುವ ಯೋಚನೆಯೂ ಬಂತು. ಉಪಾಯ್ದರು ಅದನ್ನು ನಿರಾಕರಿಸಿ ಗೃಹಿಣಿಯರ ಹೊರೆ ಇಳಿಸಿದರು. ಅವರ ಪರಿಚಯ ಬಲದಲ್ಲಿ ಹೊತ್ತು ಹೊತ್ತಿಗೆ ಬಿಸಿಬಿಸಿ ಸಿದ್ಧ ಆಹಾರವನ್ನಷ್ಟೇ ಮಂಗಳೂರಿನಿಂದ ಸಾಗಿಸಿ ತಂದು ಸಮರ್ಥವಾಗಿ ವಿತರಿಸುವ ಜನ ನಿಷ್ಕರ್ಷಿಸಿಬಿಟ್ಟರು. ಆದರೂ ಮನೆ ಎಂದ ಮೇಲೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವುದು ಹೇಗೆ?
ಅಭಯ ಬೆಂಗಳೂರಿನಲ್ಲಿ ಅವನ ವೃತ್ತಿಪರ ಸಂಪರ್ಕದಲ್ಲಿ ಕ್ಯಾಮರಾ ಮತ್ತು ಧ್ವನಿ ತಂತ್ರಜ್ಞರನ್ನು ಮುಂಗಡ ಕೊಟ್ಟು ಸಜ್ಜುಗೊಳಿಸಿದ್ದ. ಯಕ್ಷಗಾನ ದಾಖಲೀಕರಣದ ಮಾಡು, ಮಾಣ್ಗಳ (ಅಪ್ಪಟ ಕನ್ನಡಿಗರಿಗಾಗಿ: do s & don’ts) ವಿವರಗಳನ್ನು ಅವನೇ ತನ್ನ ಬ್ಲಾಗಿನಲ್ಲಿ ಈಗಾಗಲೇ ಸಾಕಷ್ಟು ಚರ್ಚಿಸಿರುವುದರಿಂದ (ನೋಡಿ: ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ, ವೇದಿಕೆಯಿಂದಾಚೆಗೆ ಚೆಲ್ಲಿದ ಬೆಳಕು) ನಾನು ಲಂಬಿಸುವುದಿಲ್ಲ (ಕತ್ತೆ ಮೇದಲ್ಲಿ ಇನ್ನು ಮೇವುಂಟೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ). ಅವನ ಇತರ ಕೆಲಸಗಳು, (ಅವನ ಹೆಂಡತಿ) ರಶ್ಮಿಯ ಬಿಡುವುಗಳು (ಟೀವೀ ಧಾರಾವಾಹಿಗಳ ಲೋಕದಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿದ್ದಾಳೆ) ಪರಿಹರಿಸಿಕೊಳ್ಳುತ್ತಿದ್ದಂತೆ ದಿನಗಳ ಓಟವ್ಯಾಕೋ ಚುರುಕಾದಂತೆ ಅನ್ನಿಸಿತು! ಎರಡು ದಿನವಿರುವಂತೆಯೇ ಅಭಯ ಸ್ವಂತ ಕ್ಯಾಮರಾ ಹೊತ್ತುಕೊಂಡೇ ಬಂದ. ಉಡುಪಿಗೆ ಹೋಗಿ ಪೂರ್ವ ತಯಾರಿಯ ದೃಶ್ಯಗಳನ್ನಷ್ಟು ಹಿಡಿದು ತಂದ. ಪ್ರದರ್ಶನದ ಮುನ್ನಾ ದಿನ ಕಿನ್ನಿಗೋಳಿಯಲ್ಲಿ ತೆಂಕುತಿಟ್ಟಿನ ಕಲಾವಿದರೆಲ್ಲ ಸೇರಿ ಅಭ್ಯಾಸ ನಡೆಸಿದರು. ಅಭಯ ಇದಕ್ಕೂ ಹೋಗಬೇಕಿತ್ತು. ಉಡುಪಿಗೆ ಹೋಗಿಬಂದವನಿಗೆ ಹಿಡಿದ ಶೀತ ಹೆದರಿಸಿತು. ಮರುದಿನವಂತೂ ಗಟ್ಟಿಯಿರಬೇಕಲ್ಲಾಂತ ವಿಶ್ರಾಂತಿಗೆ ಶರಣಾದ.
ಇಪ್ಪತ್ತೇಳರ ಕತ್ತಲಾವರಿಸುತ್ತಿದ್ದಂತೆ ಅಭಯನ ಬೆಂಗಳೂರಿನ ಚರವಾಣಿ ಸಂಪರ್ಕ ಹೆಚ್ಚಿತು. ಕ್ಯಾಮರಾಮ್ಯಾನ್ ಧರ್ಮೇಂದ್ರ ಅಲ್ಲಿನ ಏಕ ಸೂತ್ರಧಾರಿ. ‘ವ್ಯಾನ್ ಬಂತು’, ‘ಎರಡು ಕ್ಯಾಮರಾ, ಜೊತೆಗೆರಡು ಕ್ಯಾಮರಾ ಸಹಾಯಕರೂ ಸೇರಿಕೊಂಡರು’, ‘ಆಕಸ್ಮಿಕಗಳಿಗೊದಗುವಂತೆ ಕೆಲವು ವಿದ್ಯುದ್ದೀಪ ಜೊತೆಗೊಬ್ಬ ಎಲೆಕ್ಟ್ರೀಷಿಯನ್’, ‘ಧ್ವನಿ ತಜ್ಞ, ಚಾಲಕ ಪ್ರತ್ಯೇಕ’ ಎಂದಿತ್ಯಾದಿ ಅಭಯನಿಂದ ವರದಿ ಬರುತ್ತಲೇ ಇತ್ತು. ಮೈಸೂರು ದಾರಿಯಲ್ಲಿ ಬರುವ ತಂಡ ಮೊದಲು ಮಂಗಳೂರಿಗೆ ಬಂದು, ನಮ್ಮನೆಯಲ್ಲಿ ಪ್ರಾತರ್ವಿಧಿಗಳನ್ನು ಮುಗಿಸಿ ಅಭಯಾರಣ್ಯಕ್ಕೆ ಹೋಗುವುದೆಂದು ನಿಶ್ಚೈಸಿದ್ದೆವು. ಹಾಗಾಗಿ ಎಡೆ ಎಡೆಯಲ್ಲಿ ಉಪಾಯ್ದರ, ಸತ್ಯನ ಮತ್ತೆ ಮರುದಿನ ಪ್ರೇಕ್ಷಕರಾಗಿ ಬರುವ ಅಸಂಖ್ಯರ ಕಿಣಿಕಿಣಿಯೋ ಕಿಂಕಿಣಿ!
ನಾನು ಸರಕಾರೀ ಬಕ್ರೀದ್ ರಜೆಯನ್ನು ಸದುಪಯೋಗಪಡಿಸುವಂತೆ ಮೂರ್ನಾಲ್ಕು ದಿನ ಮೊದಲೇ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟು ರಾತ್ರಿ ಬಾಗಿಲ ಮೇಲೆ ‘೨೮ ಶನಿವಾರ ಅತ್ರಿಗೆ ವಿಶೇಷ ರಜೆ’ ಪ್ರಕಟಣೆ ಅಂಟಿಸಿ ಬಂದಿದ್ದೆ. (ಮೊದಲೇ ದೂರವಾಣಿಸಿ ಕೇಳಿದ ಕೆಲವರಿಗೆ ‘ಬಕ್ರೀದ್ ರಜೆ’ ಎಂದೇ ಹೇಳಿ ಕಾಲೆಳೆದಿದ್ದೆ!) ಮನೆಯ ವಠಾರದಲ್ಲೇ ಚಿಕಿತ್ಸಾಲಯವೂ ಇದ್ದ ಉಪಾಯ್ದರ ಕೆಲಸ ಇಷ್ಟು ಸುಲಭದ್ದಲ್ಲ. ಕೆಲಸದ ವೇಳೆ ಎಂಟರಿಂದ ಎಂದು ಫಲಕ ಹಾಕಿದ್ದರೂ ಏಳೂವರೆಗೇ ಬೊಗಳುವವರು, ಪರಚುವವರು ಅಂಗಳದಲ್ಲಿ ಸಂತೆ ಸೇರುತ್ತಾರೆ! ಓ ಕ್ಷಮಿಸಿ, ನಿಮಗೆ ಗೊತ್ತಿರಲಾರದು, ಉಪಾಯ್ದರು ಪಶುವೈದ್ಯರು. ನಾ ಹೇಳಿದ್ದು ಸರಪಳಿಯ ಕೊನೆಯಲ್ಲಿರುವ ನಾಯಿ, ಮುದ್ದಿನ ಅಪ್ಪುಗೆಯಲ್ಲಿರುವ ಬೆಕ್ಕುಗಳ ಸಮಾಜಾರ. ಅದೇನೇ ಇರಲಿ ಅವರು ರಜೆಯನುಭವಿಸಬೇಕೆಂದಿದ್ದರೆ ಏಳೂವರೆಯೊಳಗೇ ಮನೆಬಿಡಲೇ ಬೇಕಿತ್ತು. ಹಾಗೆಂದು ಅಂದು ಮಡದಿ ಮಗನನ್ನು ಹೊರಡಿಸುವಂತೆಯೂ ಇರಲಿಲ್ಲ. (ಮಗ - ಸುಧನ್ವನಿಗೆ ಶಾಲೆ, ಮಡದಿ ದಂತವೈದ್ಯೆ ವಿದ್ಯಾರಿಗೆ ಮಗನ ಮತ್ತು ವೃತ್ತಿ ಜವಾಬ್ದಾರಿ.) ಹಾಗಾಗಿ ಒಂದು ಜನರೇಟರ್ ಅವರ ಕಾರಿಗೆ ದಿನ ಮುಂಚಿತವಾಗಿಯೇ ಏರಿಸಿದ್ದರೂ ನಮ್ಮ ಮನೆಯಿಂದ ಹೋಗುವ ಹೆಚ್ಚುವರಿ ಸಾಮಾನು ತುಂಬಿಸಿಕೊಳ್ಳುವ ನೆಪ ಮಾಡಿ ಅವರೂ ನಮ್ಮನೆಗೇ ಬೇಗ ಬರುವುದಿತ್ತು.
ಮತ್ತೇನಾಯ್ತೂ?
ಇಷ್ಟುದ್ದಕ್ಕೆ ಬೋರಿದವನ ಬಳಿ ನಿಮಗಿನ್ನೂ ಕುತೂಹಲವುಳಿದಿದೆಯೇ?! ಖಂಡಿತಾ ಮುಂದಿನವಾರ ತಿಳಿಸುತ್ತೇನೆ. ದಯವಿಟ್ಟು ಅಲ್ಲಿಯವರೆಗೆ ಕಾಯುತ್ತೀರಲ್ಲಾ? ದಾರಿಖರ್ಚಿಗೆ ನಮ್ಮ ಪ್ರದರ್ಶನದ ಹಲವು ಸ್ಥಿರಚಿತ್ರಗಳನ್ನು ಈಗಾಗಲೇ ಗೆಳೆಯರಾದ ಡಾ|ಕೃಷ್ಣಮೋಹನ್ ಮತ್ತು ಪ್ರಸನ್ನ ಅವರವರ ಬ್ಲಾಗಿಗೇರಿಸಿದ್ದರ ಸೇತು ಕೊಟ್ಟಿದ್ದೇನೆ. ನೋಡಿ ಸಂತೋಷಿಸಿ. ಆದರೆ ನನ್ನ ‘ದೀವಟಿಗೆ’ ನಂದಾದೀಪವಾಗುವಂತೆ ಕೆಳಗಿರುವ ಪ್ರತಿಕ್ರಿಯೆಯ ಒಳಲೆಗೆ ನಿಮ್ಮುತ್ಸಾಹದ ಎಣ್ಣೆ ಹೊಯ್ಯುವುದನ್ನು ಮರೆಯಬೇಡಿ. (ನೋಡಿ: ಡಾ| ಕ್ರಿಷಿಯ ಚಿತ್ರ ಕೃಷಿ ಮತ್ತು ಪ್ರಸನ್ನ ಚಿತ್ರಣಗಳು)
kutuhaladinda oduttiddene
ReplyDeleteಆಸಕ್ತಿ ಉಳಿಸಿಕೊಂಡ ಲೇಕ ವನ್ನು ಪೂರ್ತಿ
ReplyDeleteಓದಲು ಕಾಯುತ್ತಿದ್ದೇನೆ .
ಅಪ್ಪ-ಮಗನ
ReplyDeleteಪ್ರಯತ್ನದ ಚಿತ್ರಣ-ಬರೆಹ ದಿಂದಾಗಿ
ಒಂದು ಪ್ರದರ್ಶನ
ನೋಡಲೇ ಬೇಕು ಅಂತ ಅನಿಸಿದೆ .
ಅವಕಾಶ ಒದಗೀತು ಎಂದುಕೊಂಡಿದ್ದೇನೆ .
ಅನಿಲ ದೀವಟಿಗೆ ಆಟದ ಪೂರ್ವಸಿದ್ಧತೆಯ ಕಥೆ ಅತ್ಯಂತ ಸ್ವಾರಸ್ಯಕರವಾಗಿದೆ. ನೇರ ಅನುಭವವನ್ನೇ ಕೊಡುವಷ್ಟು ವಿವರಗಳಿಂದ ಕೂಡಿದೆ.
ReplyDeleteಕೆಲವರು ಆಟ ನೋಡಲೆಂದು ಬಂದವರು ಚೌಕಿಯಲ್ಲೇ ಹೊತ್ತು ಕಳೆಯುವುದುಂಟು. ವೇಷಗಳು ಸಿದ್ಧವಾಗುವುದು, ರಂಗಸ್ಥಳಕ್ಕೆ ಅವು ಹೋಗುವುದು-ಬರುವುದನ್ನು ನೋಡುವುದರಲ್ಲೇ ಅವರು ಆಟ ನೋಡಿದ ಆನಂದವನ್ನು ಅನುಭವಿಸುತ್ತಾರೆ.
ಹಾಗೆಯೇ ' ಪುವ್ಯಾ-ಪವೈ ' ಜೋಡಿ ಏರ್ಪಡಿಸಿದ ಈ ವಿನೂತನ ಆಟದ ಪೂರ್ವಸಿದ್ಧತೆಯ ಕಥೆ ಆಟದಷ್ತೇ ಆನಂದವನ್ನು ನನಗಂತೂ ನೀಡಿದೆ.
ಪ್ರಿಯರೆ, ಲೇಖನ ಸಲೀಸಾಗಿ ಓದಿಸಿಕೊಂಡು ಹೋಯಿತು. ನಿಮ್ಮ wit ನನಗೆ ಇಷ್ಟ.
ReplyDeleteಒಂದು ಕಾರ್ಯಕ್ರಮದ ಸಂಘಟನೆಯ ಹಿಂದಿನ ಒತ್ತಡ, ಕಷ್ಟ, ಚಾಲೆಂಜುಗಳು ಇಲ್ಲಿ ಸ್ಪಷ್ಟವಾಗಿ ಮೂಡಿವೆ. ಸ್ವತಃ ಪ್ರದರ್ಶನ ನೋಡಿರುವ ನನಗೂ ಅದರ 'ಪೂರ್ವರಂಗ' ಅರ್ಥಮಾಡಿಕೊಳ್ಳುವುದಕ್ಕೆ ಈ ಲೇಖನದ ಸಹಾಯವೇ ಬೇಕಾಯ್ತು! ಇಂತಹ ಕೆಲಸ ಮಾಡುವವರು ವಿರಳ. ಮಾಡಬೇಕೆಂದು ಮನಸ್ಸಿರುವವರಿಗೂ ಅದರ ಒಟ್ಟು ತಲೆನೋವುಗಳ ಕಲ್ಪನೆಗೇ ಬೆವರಿಳಿಯುವುದುಂಟು. ಬಹುಶಃ ಆ ಬೆವರನ್ನೂ ಆನಂದಿಸಿಕೊಂಡೆ ಕೆಲಸ ಮಾಡಿದ್ದೀರಿ. ನಿಮ್ಮ ತಂಡದ ಸರ್ವ ಸದಸ್ಯರಿಗೆ ಅಭಿನಂದನೆ.
ತುಂಬ ಮಹತ್ವದ ದಾಖಲೆ ಮಾಡಿದ್ದೀರಿ. ನಿಮ್ಮ ಉತ್ಸಾಹ ಅನನ್ಯವಾದದ್ದು. ಬೇಗ ಮುಂದಿನ ಕಥೆ ಹೇಳಿ.
ReplyDeleteI was one of witness for this historical dondibelakinata.I had no details of preparations of this rare effort of documenting yakshagana before the programme.It is true that only sacrifices can create a chance for preservation of this true culture of yakshagana.My special respects to ashokavardhana,abhayasimha,manohara,sathya ,devaki and many more.Waiting for remaining part of witty write up from ashokavardhana
ReplyDeleteಪ್ರಿಯರೇ, ಅನಿವಾರ್ಯ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ನಿಮ್ಮ ಲೇಖನ ಆ ಕೊರತೆಯನ್ನು ಭಾಗಷಃ ತುಂಬಿಕೊಟ್ಟಿತು. ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುವೆ.
ReplyDeleteಧನ್ಯವಾದಗಳು.
ದೀವಟಿಗೆ ಯಕ್ಷಗಾನ ಪ್ರದರ್ಶನದ ತಯಾರಿಯ -"ಪೂರ್ವರಂಗ"ದ - ವಿವರಗಳು ಅನನ್ಯವಾಗಿ ಮೂಡಿವೆ. ಓದುತ್ತ ಸಮಯ ಸರಿದದ್ದೇ ತಿಳಿಯಲಿಲ್ಲ. ಎಷ್ಟೊಂದು ತಯಾರಿಗಳು. ಇನ್ನೂ ಯಕ್ಷಗಾನ ಪ್ರದರ್ಶನದ ಹಗಲಿಗೂ ಬಂದಿಲ್ಲ ನಾವು. ಕೇಳಿ ಹೊಡೆಯುವ ಹೊತ್ತಿನ ತನಕ ಏನೆಲ್ಲಾ ಆದುವು ? - ತಿಳಿಯುವ ಕುತೂಹಲ. ಕಾಯುತ್ತಿದ್ದೇವೆ ಆ ಬರಹಕ್ಕೆ.
ReplyDeleteರಾಧಾಕೃಷ್ಣ
namaskar sir innu mundina prayogagala bagge thilisutthiri dhanyavadagalu. Deshpande
ReplyDeletenaanu deevatige yakshagana pradarshanakke baralaagadiddakke tumba besarvagude. aadare nimma blogina vivara odi santoshavayitu. nimma mundina program tilidaaga bandu nodabekemba utsaahadalliddeene
ReplyDeleteWith regardsRaghu Narkala
ಪ್ರಿಯ ಅಶೋಕರೇ
ReplyDeleteರಾಧಾಕೃಷ್ಣರು ಹೇಳುವಂತೆ ಇನ್ನೂ ಪ್ರದರ್ಶನದ ಹಗಲಾಗುವುದರ ಕಾಯುತ್ತಿದ್ದೇವೆ.
ಸತ್ಯಣ್ಣನಿಗೆ ಪ್ರಸಂಗ ಎಲ್ಲಿ ತಲಪಿತು ಎಂದರೆ ತಟಕ್ಕನೆ ಉತ್ತರ ಕೊಡಲು ಸಾದ್ಯವಾಗದಿದ್ದರೂ
ಅಂಡೆಯಲ್ಲಿ ಗ್ಯಾಸೆಷ್ಟು ಉಳಿದಿದೆ ಪ್ರಶ್ನಿಸಿದರೆ ಕ್ಷಣಾರ್ಧದಲ್ಲಿ ಉತ್ತರ ಬಂದೀತು.
ಅವರ ತೆರೆಮರೆಯ ಕೊಡುಗೆ ನಿಜಕ್ಕೂ ಅದ್ಬುತ.
ಪ್ರೀತಿಯಿಂದ
ಗೋವಿಂದ
Nimma poorvasiddathegala bagge chennaagi niroopisiddeeri. Naanoo nanna dwanimudrana prayoga nadesidde. Chennaagi baralilla.Keli hodeda sandharbada dhwani chennaagi bandide.
ReplyDeleteDear Ashok,
ReplyDeletePlease tell us were and how can we get Video.
nijavaagiyu nimma saadhane mechhuvantadu.
ReplyDeletedeevatige yakshaganada cd bega kodi.
vandanegalu.
idu ಅಗತ್ಯವಾದ ಉತ್ತಮ ಪ್ರಯತ್ನ. ಸಂಸ್ಥೆಗಳು ಮಾಡಬೇಕಾದ್ದನ್ನು ನೀವೇ ಮಾಡಿದ್ದೀರಿ. ಅಭಿನಂದನೆಗಳು.
ReplyDeleteOndu olleya avakashadinda vanchitanada besara innoo shamanavagilla
ReplyDelete