26 November 2009

ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ


“ಪರ್ವತಾರೋಹಣ ವನ್ಯಸಂರಕ್ಷಣೆಗಳ ಬಗ್ಗೆ ಮಾತಾಡಿದ ತೀವ್ರತೆಯಲ್ಲಿ ನೀವು ಯಕ್ಷಗಾನವೋ ಇನ್ನೊಂದು ಕಲಾಪ್ರಕಾರದ ಬಗ್ಗೆಯೋ ಮಾತಾಡ್ತೀರಿ. ಅದನ್ನು ಪರಿಸರ ಪ್ರೀತಿ ಎನ್ನಬಹುದು. ಇದು?” ಮಣ್ಣು, ನೀರು, ಗಾಳಿ, ಹಸಿರು, ಜೀವವೈವಿಧ್ಯ ಇತ್ಯಾದಿ ಹೆಸರಿಸುವ ಎಲ್ಲಾ ಪ್ರಾಕೃತಿಕ ಸತ್ಯಗಳು ಮನುಷ್ಯನ ಜೀವ-ಪರಿಸರವನ್ನು ಪೋಷಿಸಿದಷ್ಟೇ ಮುಖ್ಯವಾಗಿ ಆಗಬೇಕಾದದ್ದು ಮನುಷ್ಯನ ಭಾವ-ಪರಿಸರದ ಪೋಷಣೆ. ಅದಕ್ಕಾಗಿ ಶುದ್ಧ ಗಾಳಿ, ಶುದ್ಧ ನೀರು ಎಂದಿತ್ಯಾದಿ ಹಕ್ಕೊತ್ತಾಯ ನಡೆಸಿದಷ್ಟೇ ತೀವ್ರವಾಗಿ ರುಚಿ ಶುದ್ಧವಾದ ಕಲೆ, ರಾಜಕಾರಣರಹಿತ ಧರ್ಮ, ಪ್ರದರ್ಶನಕ್ಕೆ ಕಳೆದುಹೋಗದ ಸಂಸ್ಕೃತಿಗಳ ಬಗ್ಗೆ ಕೆಲಸ ಮಾಡಬೇಕಾಗಿದೆ.

ಸುಮಾರು ಎರಡು ದಶಕಗಳ ಹಿಂದೆ, ‘ಪ್ರವಾಸೋದ್ದಿಮೆ’ ಎನ್ನುವುದು ಭಾರೀ ಚಲಾವಣೆಗೆ ತೊಡಗಿದ ಕಾಲದಲ್ಲಿ ಗೆಳೆಯ ನಟೇಶ್ ಉಳ್ಳಾಲರೊಡನೆ ನಾವು ಕೆಲವು ಸಮಾನಮನಸ್ಕರು ಸೇರಿ ‘ಯಾನ’ ಎಂಬ ಔಪಚಾರಿಕ ಹೆಸರಿನ ಸ್ವಯಂಸೇವಾ ಸಂಸ್ಥೆ ಕಟ್ಟಿಕೊಂಡು ಎದುರೀಜಿಗೆ ಇಳಿದಿದ್ದೆವು. ತಮಾಷೆ ಎಂದರೆ ನಾವೆಲ್ಲ ಪ್ರವಾಸಪ್ರಿಯರೇ ಆದರೂ ‘ಉದ್ದಿಮೆ’ ಶಿಫಾರಸು ಮಾಡುತ್ತಿದ್ದ ಸ್ತರದಲ್ಲಿ ಬದ್ಧ ವೈರಿಗಳಾಗಿದ್ದೆವು! ಎರಡು ದಿನದ ಕಮ್ಮಟ ನಡೆಸಿದೆವು. ವಿಶ್ವಪ್ರವಾಸ ದಿನದಂದು ಪ್ರವಾಸೋದ್ದಿಮೆಯ ಹಾನಿಗಳ ಕುರಿತು ನಗರದ ಕೇಂದ್ರದ (ಹಂಪನಕಟ್ಟ) ಪುಟ್ಟಪಥದಲ್ಲೇ ಚಿತ್ರಪ್ರದರ್ಶನ, ಕರಪತ್ರ ಹಂಚಿಕೆ ಮಾಡಿದೆವು. ವಿಚಾರವಿಲ್ಲದೆ ಆತಿಥ್ಯದ ಹೆಸರಿನಲ್ಲಿ ಪ್ರಾದೇಶಿಕ ಆವಶ್ಯಕತೆಗಳು ದುಬಾರಿಯಾಗುವುದು ಮತ್ತು ದುರ್ಬಳಕೆಯಾಗುವುದು (“ನೀವು ನಿತ್ಯ ಬನ್ನಿ, ನಮಗೂ ತುಪ್ಪ ಹಪ್ಪಳ ಸಿಗುತ್ತದೆ” ಎಂದಿತಂತೆ ‘ಹೋಂ ಸ್ಟೇ’ ಮನೆಯ ಮಗು) ಕೌಟುಂಬಿಕ ಆರೋಗ್ಯ ಅಥವಾ ಸಾಮಾಜಿಕ ಬಂಧ ಶಿಥಿಲವಾಗುವುದು (ಥಾಯ್ ಲ್ಯಾಂಡಿನ ಫುಕೆಟ್ ದ್ವೀಪ ಪೂರ್ಣ ಪ್ರವಾಸೋದ್ಯಮಕ್ಕೇ ಮೀಸಲು. ಅದರ ಪ್ರಾಕೃತಿಕ ಸೌಂದರ್ಯ ಮೋಹಿಸಿ ಹೋಗಿ ಮೊನ್ನೆಯಷ್ಟೇ ಬಂದ ಮಿತ್ರ ಗಾಬರಿಯಲ್ಲಿ ಉದ್ಗರಿಸಿದ “ಅಲ್ಲಿನ ಶೇಕಡ ತೊಂಬತ್ತು ಮಹಿಳೆಯರಿಗೆ ‘ಖಾಸಗಿ ಜೀವನ’ ಇಲ್ಲ!”) ಮೊದಲಾದವನ್ನು ಎಷ್ಟೂ ಉದಾಹರಣೆಗಳೊಡನೆ ಪ್ರಚುರಿಸಲು ಹೆಣಗಿದ್ದೆವು. ಸ್ಪಷ್ಟ ಅರಿವಿಗೆ ತಂದುಕೊಳ್ಳದೇ ಮನುಷ್ಯ ಭಾವ-ಪರಿಸರಕ್ಕೇ ಹೋರಾಡಿದ್ದೆವು. ನಮ್ಮನಮ್ಮ ವೃತ್ತಿಯ ಅಗತ್ಯದಲ್ಲಿ ನಟೇಶ್ ಮತ್ತು ನಾನು ದೂರ ಸರಿದಿದ್ದೆವು. (ನಟೇಶ್ ಸಿನಿ-ನಿರ್ದೇಶಕ, ನಿರ್ಮಾಪಕ) ಆದರೆ ಪ್ರವೃತ್ತಿಯಲ್ಲಿ ನಾನು ಜೀವಪರಿಸರದ ಬೆಂಬತ್ತಿದಂತೆ ನಟೇಶ್ ಭಾವಪರಿಸರದ ಕೊರತೆ ತುಂಬಲು ಭಾರೀ ಹೋರಾಟ ನಡೆಸಿದ್ದಾರೆ. ‘ವಿಶೇಷ ಆರ್ಥಿಕವಲಯ’ (ಎಂ.ಎಸ್.ಇ.ಜೆಡ್) ಅಭಿವೃದ್ಧಿಯ ಕಳ್ಳಮುಸುಕಿನಲ್ಲಿ ನಡೆಸಲು ಹೊರಟಿರುವ ಪರಿಸರ ನಾಶವನ್ನು ನಟೇಶ್ ಸಂಸ್ಕೃತಿ ನಾಶದ ಆಯಾಮದಲ್ಲೂ ಕಾಣುತ್ತಾರೆ. (“ದೇವರು ನನ್ನ ಪ್ರಥಮ ವೈರಿ” ಎಂದೇ ಹೇಳುತ್ತಿದ್ದ ನನ್ನ ತಂದೆ ದೇವಾಧಿದೇವತೆಗಳನ್ನು ಅವಲಂಬಿಸಿದ ಸಾಹಿತ್ಯ, ಕಲೆಗಳನ್ನೆಂದೂ ನಿರಾಕರಿಸಲಿಲ್ಲ.) ವೈಯಕ್ತಿಕವಾಗಿ ಲೌಕಿಕ ಆಚರಣೆಗಳಲ್ಲಿ ದೇವ ದೈವಗಳನ್ನು, ಭಾಷಾಂಧತೆಯನ್ನು ಪೋಷಿಸದ ನಟೇಶ್ ಉಳ್ಳಾಲ್ ಅವುಗಳನ್ನು ಗಟ್ಟಿ ಸಂಸ್ಕೃತಿಯೊಂದರ ಪ್ರತಿನಿಧಿಯಾಗಿ ಗುರುತಿಸುತ್ತಾರೆ.


ಎಂ.ಎಸ್.ಇ.ಜೆಡ್ಡಿನ ಪ್ರಾಕೃತಿಕ ಪರಿಸರ ಶೋಷಣೆಯ ಒಂದು ಮುಖವನ್ನು ನೀವು ನನ್ನ ಇನ್ನೊಬ್ಬ ಗೆಳೆಯ ಸುಂದರರಾಯರ ಬ್ಲಾಗಿನಲ್ಲಿ (‘ಸುಂದರ ವಸುಂಧರ’) ಅವಶ್ಯ ಓದಿ ತಿಳಿದಿದ್ದೀರಿ ಎಂದು ಭಾವಿಸುತ್ತೇನೆ. ಬ್ಲಾಗ್ ಲೋಕದಲ್ಲಿ ವಿಶೇಷ ವಿಹರಿಸದ ನಟೇಶ್ ಈಚೆಗೆ ಪ್ರಜಾವಾಣಿಗೆ ಬರೆದ ಲೇಖನದ ಪೂರ್ಣ ಆವೃತ್ತಿಯನ್ನು ಪೂರಕವಾಗಿ ಅವರೇ ಕೊಟ್ಟ ಚಿತ್ರಗಳೊಂದಿಗೆ ಕೆಳಗೆ ಕೊಟ್ಟಿದ್ದೇನೆ. ಅವಶ್ಯ ಓದಿ, ದೊಡ್ಡದಾಗಿ ನಟೇಶರನ್ನು ಬೆಂಬಲಿಸುವ ಮಾತು, ಕ್ರಿಯೆಗಳ ಶಕ್ತಿಯಾಗುವಿರಾಗಿ ನಂಬಿದ್ದೇನೆ.


ನೆಲೆ ಕಳೆದುಕೊಳ್ಳುತ್ತಿರುವ ತುಳು ಸಂಸ್ಕೃತಿ
* ನಟೇಶ್ ಉಳ್ಳಾಲ್

ನಿನ್ನೆಗೆ ಸಂಸಾರ ನನಗೆ ಬೇಕಾಗಿತ್ತು. ನಾನು ಸಂಸಾರಕ್ಕೆ ಬೇಕಾದೆ. ಸಂಸಾರಕ್ಕೆ ಬಲದ ಸಿರಿ ಮೊಲೆ ಕೊಟ್ಟು ಸಾಕಿದೆ. ಇವತ್ತಿಗೆ ನನ್ನ ಆಭರಣ ಆಯುಧ ಭಂಡಾರ ಅವರಿಗೆ ಬೇಕಾಯಿತು. ಬೆಂಕಿಗೆ ಹಾತೆಗಳು ಬೀಳುವಂತೆ ಅಳಿಯುವ ಕಾಲಕ್ಕೆ ನನ್ನ ವಸ್ತುವಿಗೆ ಕೈ ಹಾಕಿದರು. ಅವರಿಗೆ ಉಳಿಗಾಲವಿಲ್ಲ. ಮೂರು ತಿಂಗಳು ಕಳೆಯಲು ಬಿಡಲಾರೆ. ಆರು ತಿಂಗಳು ತುಂಬಲು ಬಿಡಲಾರೆ. ಅವರ ಎದೆಯಲ್ಲಿ ಭಾರದ ಗುಂಡು ಹೊರಳಿಸುತ್ತೇನೆ. ವರುಷ ಕಾಲಾವಧಿ ಬರಬೇಕಾದರೆ ಗೋರಿ ಕಟ್ಟಿಸುತ್ತೇನೆ. ಇರುಳು ಮರುಳು ಹಿಡಿಸುತ್ತೇನೆ. ನನ್ನ ಸೊತ್ತುಗಳನ್ನು ಈ ಜಾಗಕ್ಕೆ ತರಿಸುತ್ತೇನೆ.
- ಲಾಲ ಗ್ರಾಮದ ಮೂಜುಲ್ನಾಯ ಭೂತ - ಡಾ| ಚಿನ್ನಪ್ಪಗೌಡರ ಭೂತಾರಾಧನೆ ಜಾನಪದೀಯ ಅಧ್ಯಯನದಿಂದ.
ಸುಮಾರು ೨೦ಲಕ್ಷದಷ್ಟು ತುಳು ಮಾತೃ ಭಾಷೆಯಾಗುಳ್ಳವರು ಮಾತ್ರವಲ್ಲದೆ ತುಳುಬಾಷೆ ಆಡಬಲ್ಲ ಇತರರೂ ಸೇರಿದಂತೆ ಸುಮಾರು ೩೦ರಿಂದ ೪೦ ಲಕ್ಷದಷ್ಟು ಮಂದಿ ತುಳುಭಾಷಿಕರು ಪ್ರಪಂಚದಲ್ಲೆಲ್ಲಾ ಹರಡಿದ್ದಾರೆ ಎಂದು ಒಂದು ಅಧ್ಯಯನ ಅಂದಾಜಿಸುತ್ತದೆ. ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡಿರುವ ಭಾಷಾ ತಜ್ಞ ರೋಬರ್ಟ್ ಕಾಲ್ಡ್‌ವೆಲ್ ಪ್ರಕಾರ ‘ತುಳು’ ಒಂದು ವಿಶಿಷ್ಟ ಹಾಗೂ ಅತ್ಯಂತ ಕುತೂಹಲಕಾರಿಯಾದ ಭಾಷೆ ಮತ್ತು ದ್ರಾವಿಡ ಭಾಷೆಗಳಲ್ಲೇ ಅತ್ಯಂತ ಅಭಿವೃದ್ಧಿಗೊಂಡಿರುವ ಭಾಷೆ.  ತುಳು ಹೇಗೆ ಒಂದು ವಿಶಿಷ್ಟ ಮತ್ತು ಕುತೂಹಲಕಾರಿಯಾದ ಭಾಷೆಯೋ, ಅಷ್ಟೇ ವಿಶಿಷ್ಟವಾಗಿದೆ ತುಳುವ ಸಂಸ್ಕೃತಿ ಕೂಡ. ಶತಮಾನಗಳ ಕಾಲ ಎಲ್ಲಾ ರೀತಿಯ ಸಾಂಸ್ಕೃತಿಕ ಧಾಳಿಗಳನ್ನು ಅರಗಿಸಿಕೊಂಡು ತನ್ನ ಅನನ್ಯತೆಯನ್ನು ಸುಮಾರು ೨೦ ನೇ ಶತಮಾನದ ಅಂತ್ಯದವರೆಗೂ ಉಳಿಸಿಕೊಂಡು ಬಂದ ತುಳುವ ಸಂಸ್ಕೃತಿ ಈಗ ಅನ್ಯ ಸಂಸ್ಕೃತಿಗಳ ಆಕ್ರಮಣಕ್ಕೆ ತುತ್ತಾಗಿ ಈ ಭೂಮಿಯಿಂದಲೇ ಮಾಯವಾದ ಅನೇಕ ಸಂಸ್ಕೃತಿಗಳ ಹಾದಿ ಹಿಡಿದಂತೆ ಕಾಣುತ್ತಿದೆ.

ಪ್ರಾಚೀನ ತಮಿಳು ಸಂಗಂಕಾಲದ ಸಾಹಿತ್ಯದಲ್ಲಿರುವ ಉಲ್ಲೇಖಗಳ ಪ್ರಕಾರ ತುಳುನಾಡು ಉತ್ತರದಲ್ಲಿ ಗೋಕರ್ಣದಿಂದ ಹಿಡಿದು, ದಕ್ಷಿಣದಲ್ಲಿ ಚಂದ್ರಗಿರಿಯನ್ನೂ ದಾಟಿ ಎಜಿಮಲೆ ಬೆಟ್ಟಗಳವರೆಗೂ ಹಬ್ಬಿತ್ತು. (Vishwanath, ೨೦೦೭) ಕಾಲಾನಂತರ ಸತತವಾಗಿ ಹೊರಗಿನವರಿಂದ ಆಳಿಸಿಕೊಂಡ ತುಳುನಾಡು ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ಕುಗ್ಗುತ್ತಾ ಭಾಷಾ ಸೀಮೆಯಾಗಿ ಉತ್ತರಕ್ಕೆ ಬ್ರಹ್ಮಾವರದಲ್ಲಿ ಮಿತಿಗೊಂಡರೆ, ರಾಜಕೀಯವಾಗಿ ದಕ್ಷಿಣದ ತಲಪಾಡಿಯಲ್ಲಿ ಭೌಗೋಳಿಕ ತಡೆಗೋಡೆಯನ್ನೆದುರಿಸಿತು. ಆಡಳಿತಾತ್ಮಕವಾಗಿ ಭಿನ್ನ ಸಂಸ್ಕೃತಿಯ ಕರ್ನಾಟಕದ ಭಾಗವಾಗಿ ಹೋದ ತುಳುನಾಡು ಮತ್ತು ತುಳು ಸಂಸ್ಕೃತಿ, ಭೌಗೋಳಿಕ ಮಿತಿಯಿಂದಾಗಿ ಮತ್ತು ಸಂಖ್ಯಾ ಮಿತಿಯಿಂದಾಗಿ (ತುಳು ಮಾತೃ ಭಾಷೆಯಾಗಿರುವವರ ಸಂಖ್ಯೆ ಕರ್ನಾಟಕದ ಒಟ್ಟು ಜನಸಂಖ್ಯೆಯ ಸುಮಾರು ೪% ಮಾತ್ರ) ಬಹುಮತವೇ ಸರಿಮತವೆನ್ನುವ ಪ್ರಜಾಪ್ರಭುತ್ವದಲ್ಲಿ ತನ್ನ ಉಳಿವಿಗೆ ಸೂಕ್ತವಾದ ಅಭಿವೃದ್ಧಿಯ ಪಥವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಕಳೆದುಕೊಂಡಿದೆ.

ತುಳು ಸಂಸ್ಕೃತಿ ಪ್ರಳಯದ ಹೊಸ್ತಿಲಿಗೆ ಕಾಲಿರಿಸುವಂತೆ ಕಾಣಿಸುತ್ತಿದ್ದರೆ ಅದಕ್ಕೆ ಕಾರಣಗಳು ಹಲವು. ನನಗೆ ಪ್ರಮುಖವೆನಿಸುವ ಕಾರಣಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಬಯಸುತ್ತೇನೆ.

ಒಂದನೆಯದ್ದು - ತುಳು ಸಂಸ್ಕೃತಿಯ ವಿಶಿಷ್ಟತೆಯನ್ನು ನೋಡಬಲ್ಲ ಮತ್ತು ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯ ಇಲ್ಲದ ಕಛೇರಿ ಸಂಸ್ಕೃತಿಯ ಆಡಳಿತಗಾರರು ಮತ್ತು ಅವರ ಮಾರ್ಗದರ್ಶನವನ್ನೇ ಅವಲಂಬಿಸಿರುವ ರಾಜಕಾರಣಿಗಳ ಮುಷ್ಠಿಯಲ್ಲಿ ತುಳುನಾಡಿನ ಅಭಿವೃದ್ಧಿಯ ಸೂತ್ರಗಳಿರುವುದು. ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ತುಳುನಾಡನ್ನು ಅಭಿವೃದ್ಧಿಗೆ ಲಭ್ಯವಿರುವ ಸಂಪನ್ಮೂಲಗಳಿರುವ ಪ್ರಾಂತ್ಯ ಎಂದು ಮಾತ್ರ ಪರಿಗಣಿಸಲಾಗುತ್ತಿದೆಯೇ ಹೊರತು, ವಿಶಿಷ್ಟವಾದ ಸಂಸ್ಕೃತಿಯುಳ್ಳ ಪ್ರದೇಶ ಎಂದು ನೋಡುತ್ತಿಲ್ಲ. ತುಳು ಸಂಸ್ಕೃತಿ ತುಳುನಾಡಿನ ಮಣ್ಣು ಬಿಟ್ಟು ಬೇರೆಲ್ಲೂ ವಿಕಸಿಸಲು ಸಾಧ್ಯವಿಲ್ಲ ಎಂಬ ಸತ್ಯ ಆಡಳಿತಗಾರರಿಗೆ ಅರ್ಥವಾಗುತ್ತಿಲ್ಲ.

ಎರಡನೆಯ ಕಾರಣ - ತುಳು ಸಂಸ್ಕೃತಿಯನ್ನು ಬೆಳೆಸಿ ಮುಂದೊಯ್ಯಬೇಕಾದ ಪರಂಪರಾಗತವಾದ ಜವಾಬ್ದಾರಿ ಇದ್ದವರೇ ಅಧಿಕಾರಸ್ಥರ ಪಾದ ಪೂಜೆ ಮಾಡಿಕೊಂಡು ತುಳು ಸಂಸ್ಕೃತಿಗೆ ಕೊಡಲಿ ಏಟು ನೀಡುವಂತಹ ಯೋಜನೆಗಳನ್ನು, ರಾಜಕೀಯ ನಿರ್ಧಾರಗಳನ್ನು ಕೆಲವೊಮ್ಮೆ ಪ್ರತ್ಯಕ್ಷವಾಗಿ ಕೆಲವೊಮ್ಮೆ ಪರೋಕ್ಷವಾಗಿ ಬೆಂಬಲಿಸುತ್ತಾ, ತುಳು ಸಂಸ್ಕೃತಿಯನ್ನು ಪ್ರದರ್ಶನ ಮತ್ತು ಮ್ಯೂಸಿಯಂ ಸಂಸ್ಕೃತಿಯ ಮಟ್ಟಕ್ಕೆ ಇಳಿಸಿರುವುದು. ಮತ್ತು ಈ ಸಿಲಿಕಾನ್ (ಮೋಡೆಲ್‌ಗಳು, ಚಿತ್ರ ನಟಿಯರು ತಮ್ಮ ಎದೆಯ ಗಾತ್ರ ಹೆಚ್ಚಿಸಲು ಬಳಸುವ ವಸ್ತು) ಸಂಸ್ಕೃತಿಯನ್ನೇ ಜೀವಂತ ತುಳುವ ಸಂಸ್ಕೃತಿ ಎಂಬಂತೆ ಬಿಂಬಿಸುತ್ತಾ ಬಂದಿರುವುದು. ಹೀಗಾಗಿ ಬೃಹತ್ ಯೋಜನೆಗಳ ಸ್ಥಾಪನೆಗಾಗಿ ಭೂಮಿ ಕಿತ್ತುಕೊಳ್ಳುವುದರ ಜೊತೆಗೆ ತುಳುವರ ಮಣ್ಣಿನ ಸಂಬಂಧವನ್ನು ಭದ್ರಗೊಳಿಸಿರುವ ಪಾರಂಪರಿಕ ನಾಗಾರಾಧನಾ/ಭೂತಾರಾಧನಾ ಕ್ಷೇತ್ರಗಳನ್ನು ಅವು ಸಿಲಿಕಾನ್ ಅಂಗಗಳೋ ಎಂಬಂತೆ ಕೆಡವಿ, ಸ್ಥಳಾಂತರಿಸುವುದನ್ನು ತುಳು ಸಂಸ್ಕೃತಿಯ ಗುರ್ಕಾರರುಗಳು ಬೆಂಬಲಿಸುತ್ತ ಬಂದಿದ್ದಾರೆ! ನಂಬಿಕೆಗಳು ಬೆಳೆದಿರುವುದು ದೈವಗಳು ನೆಲೆಯಾಗಿವೆ ಎಂದು ಹಿರಿಯರು ಹೇಳಿರುವ ನೆಲದ ಮೇಲೆ ಹೊರತು ಯೋಜನಾಧಿಕಾರಿಗಳು ‘ಸ್ಥಳಾಂತರಿಸಿ ಅದ್ಧೂರಿಯಾಗಿ ಕಟ್ಟುತ್ತೇವೆ’ ಎಂದ ಸಿಮೆಂಟ್ ಗೋರಿಗಳ ಮೇಲೆ ಅಲ್ಲ ಎನ್ನುವುದು ಸಿಲಿಕಾನ್ ಸಂಸ್ಕೃತಿಯ ಪ್ರವರ್ತಕರಿಗೆ ಅರ್ಥವಾಗುತ್ತಿಲ್ಲ. “ಹಿರಿಯರ ಕಾಲದಿಂದ ನಂಬಿಕೊಂಡು ಬಂದ ದೈವಗಳನ್ನೇನು ಮಾಡಲಿ”  ಎನ್ನುವುದು ನೆಲದ ಮಕ್ಕಳ ಪ್ರಶ್ನೆ. ಮನೆ ತೆರವು ಮಾಡಿಸಲು ಬಂದ ಎಸ್ ಇ ಜೆ ಡ್ ಅಧಿಕಾರಿಗಳು ನೀಡಿದ ಉತ್ತರ “ಮರಕ್ಕೆ ಕಟ್ಟಿ ಹೋಗು.” ಸಿಲಿಕಾನ್ ಸಂಸ್ಕೃತಿಯ ಹೃದಯ ಹೀನತೆ ಹಾಗೂ ಅದು ತುಳುವ ಸಂಸ್ಕೃತಿಗೆ ಕೊಡುತ್ತಿರುವ ಆಘಾತಕ್ಕೆ ಬೇರೆ ಉದಾಹರಣೆ ಬೇಕಾಗಿಲ್ಲ.

ಮೂರನೆಯ ಕಾರಣ - ತುಳು ಸಂಸ್ಕೃತಿಯ ಬಗ್ಗೆ ತೋರಿಕೆಯ ಗೌರವಾದರಗಳನ್ನು ಮಾತ್ರ ಇಟ್ಟುಕೊಂಡಿರುವ, ಪ್ರದರ್ಶನ (ಸಿಲಿಕಾನ್) ಸಂಸ್ಕೃತಿಯೇ ನಿಜವಾದ ತುಳು ಸಂಸ್ಕೃತಿ ಎಂದು ನಂಬಿರುವ, ಶತಮಾನಗಳ ತುಳುವ ಚರಿತ್ರೆಯ ಬಗ್ಗೆ ಪಾಸಿಟಿವ್ ಆದ ಅರಿವು ಇಲ್ಲದೆ ಕೀಳರಿಮೆಯಿಂದ ಬಳಲುತ್ತಿರುವಂಥ ವ್ಯಕ್ತಿಗಳ ಕೈಗೆ ತುಳುವರನ್ನು, ತುಳುಸಂಸ್ಕೃತಿಯನ್ನು, ತುಳುನಾಡನ್ನು ಪ್ರತಿನಿಧಿಸುವ ರಾಜಕೀಯ ಅಧಿಕಾರವನ್ನು ಕಣ್ಣುಮುಚ್ಚಿ ನೀಡಿದಂತಹ ತುಳುವ ಮತದಾರರು.

“ನನ್ನ ಹಿರಿಯರು ನೆಲೆಯಾಗಿದ್ದ ಭೂಮಿ ಇದು. ಕೃಷಿಯೇ ನನ್ನ ಧರ್ಮ, ನನ್ನ ಸಂಸ್ಕೃತಿ. ಈಗ ನನ್ನ ನೆಲ ವಶಪಡಿಸಿಕೊಳ್ಳುವ ಮೂಲಕ ನನ್ನ ಧರ್ಮಾಚರಣೆಗೆ ಅಡ್ಡಿ ಬರುತ್ತಿದ್ದಾರಲ್ಲ! ನನ್ನ ಮಣ್ಣಿನ ಸಂಬಂಧವನ್ನು ಬಿಟ್ಟು, ನನ್ನ ಹಿರಿಯರ/ದೈವಗಳ ನೆಲೆಯನ್ನು ಬಿಟ್ಟು ನಾನು ಸ್ವಾತಂತ್ರ್ಯದಿಂದಿರಲು ಅವಕಾಶ ಮಾಡಿಕೊಟ್ಟಿದ್ದ ಕೃಷಿ ಧರ್ಮವನ್ನು ತ್ಯಜಿಸಿ, ಇವರು ನೀಡುವ ವಾಚ್‌ಮ್ಯಾನ್ ಕೆಲಸದ ಗುಲಾಮಗಿರಿಯ ಧರ್ಮವನ್ನು ಒಪ್ಪಿಕೊಳ್ಳಬೇಕೆಂದು ಹೇಳುತ್ತಾರಲ್ಲ ಇದಕ್ಕಿಂತ ದೊಡ್ಡ ಮತಾಂತರ ಬೇರೆ ಯಾವುದಾದರೂ ಇದೆಯೇ...!?” ಎನ್ನುತ್ತಾರೆ ಮಂಗಳೂರು ಎಸ್ ಇ ಜೆಡ್‌ಗೆ ಭೂಮಿ ನೀಡಲು ನೋಟೀಸು ಪಡೆದ ರೈತರೊಬ್ಬರು.  ಇಂತಹ ಜನಸಾಮಾನ್ಯರೆನಿಸಿಕೊಂಡವರ ಮಾತುಗಳನ್ನು ಕೃಷಿ ಚಟುವಟಿಕೆಗಳೊಂದಿಗೆ ತಳಕು ಹಾಕಿರುವ ತುಳುನಾಡಿನ ಧಾರ್ಮಿಕ/ಸಾಂಸ್ಕೃತಿಕ ಆಚರಣೆಗಳ ಹಿನ್ನೆಲೆಯಲ್ಲಿ ಅವಲೋಕಿಸ ಬೇಕು.

ಲಿಪಿಯೇ ಇಲ್ಲವೆಂದು ನಂಬಲಾಗಿದ್ದ ತುಳುವನ್ನು ಜೀವಂತವಾಗಿಟ್ಟದ್ದು ಜನಸಾಮಾನ್ಯರು. ಬರವಣಿಗೆಯ ಮುಖಾಂತರ ಮುಂದಿನ ಪೀಳಿಗೆಗೆ ತೆಗೆದಿಡುವ ಸಾಮರ್ಥ್ಯವಿಲ್ಲದಿದ್ದರೂ ತುಳುನಾಡಿನ ಐತಿಹ್ಯಗಳನ್ನು, ಆಚಾರ, ವಿಚಾರಗಳನ್ನು, ಕಟ್ಟು ಕಟ್ಟಳೆಗಳನ್ನು, ಬರೀ ನೆನಪು ಮತ್ತು ನಾಲಗೆಗಳನ್ನೇ ಸಾಧನವನ್ನಾಗಿಸಿ ತಲೆಮಾರುಗಳಿಗೆ ದಾಟಿಸುವ ಮೌಖಿಕ ಸಂಪ್ರದಾಯದ ಮೂಲಕ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿದವರು ಜನಸಾಮಾನ್ಯರು. ಬದಲಾವಣೆ ನಿರಾಕರಿಸುವ ಲಿಖಿತ ಶಾಸ್ತ್ರದಂತಿರದೆ, ಆಯಾ ಕಾಲಘಟ್ಟಕ್ಕೆ ಸ್ಪಂದಿಸುತ್ತಾ ಪೀಳಿಗೆಯಿಂದ ಪೀಳಿಗೆಗೆ ಹರಿದ ಮೌಖಿಕ ಶಾಸ್ತ್ರದ ಬೆಂಬಲದಿಂದ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಾ ಬಂದ ತುಳುವ ಸಂಸ್ಕೃತಿಯ ನೆಲೆಗಟ್ಟಿದ್ದದ್ದು, ಮಣ್ಣನ್ನೇ ನಂಬಿ, ಪೀಳಿಗೆಯಿಂದ ಪೀಳಿಗೆಗೆ ನಿಂತ ನೆಲದಲ್ಲೇ ಆಳವಾಗಿ ಬೇರುಬಿಡುತ್ತಾ ಸಾಗಿದ ತುಳುವರಲ್ಲಿ. ಅಂತಹ ತುಳುವರ ಕಾಲಡಿಯ ನೆಲವನ್ನೇ ಬೃಹತ್ ಯೋಜನೆಗಳ ನೆಪದಲ್ಲಿ ಕಿತ್ತುಕೊಳ್ಳುತ್ತಾ ಬಂದರೆ, ಹಾಗೂ ಆ ಕ್ರಿಯೆಗೆ ತುಳು ಸಂಸ್ಕೃತಿಯ ಗುರ್ಕಾರರಾಗಿದ್ದವರು ಮತ್ತು ತುಳುವರ ರಾಜಕೀಯ ಪ್ರತಿನಿಧಿಗಳು ಬೆಂಬಲ ನೀಡುತ್ತಾ ಬಂದರೆ ನೆಲೆಯನ್ನೇ ಕಳೆದುಕೊಂಡ ತುಳುವ ತನ್ನ ಸಂಸ್ಕೃತಿಯನ್ನು ಉಳಿಸುವುದಾದರೂ ಹೇಗೆ? ಬೆಳೆಸುವುದಾದರೂ ಹೇಗೆ?

ಪ್ರತೀ ಸಂಸ್ಕೃತಿಯೂ ಅನನ್ಯ. ಆಯಾ ಪ್ರಾದೇಶಿಕ ಪರಿಸರ ಅಲ್ಲಿನ ಜನಜೀವನವನ್ನು, ಆಚಾರ ವಿಚಾರಗಳನ್ನು, ಸಂಸ್ಕೃತಿಯನ್ನು ರೂಪಿಸಿರುತ್ತದೆ.  ತನ್ನ ಸಂಸ್ಕೃತಿಯೇ ಶ್ರೇಷ್ಠ ಎಂಬ ‘ಮೇಲರಿಮೆ’ಯಿಂದ ಬಳಲುವ, ತನ್ನ  ಚೌಕಟ್ಟಿನೊಳಗೆ ಬರದಿದ್ದುದನ್ನು ಅಲ್ಲಗಳೆವ ಆಕ್ರಮಣಕಾರೀ ನಗರ ಸಂಸ್ಕೃತಿ, ಹಲವು ಸಾವಿರ ವರ್ಷಗಳ ಚರಿತ್ರೆ ಇರುವ ಆದರೆ ಮಹತ್ವಾಕಾಂಕ್ಷಿಯಲ್ಲದ ಸಂಸ್ಕೃತಿಗಳನ್ನೆಲ್ಲಾ ಅಳಿಸಿ ಹಾಕುತ್ತಿದೆ. ‘ಅನನ್ಯತೆಯ ನಾಶವೇ ಅಭಿವೃದ್ಧಿ’ ಎನ್ನುವ ಮನೋಸ್ಥಿತಿಯ, ವಿದೇಶಿ ನಗರಗಳ ಮತ್ತು ಬಾಹ್ಯ ಸಂಸ್ಕೃತಿಗಳ ಭೌತಿಕ ಸ್ವರೂಪದ ಅಚ್ಚಿನಲ್ಲಿ ದೇಶದ ಎಲ್ಲಾ ಪ್ರಾಂತ್ಯಗಳನ್ನೂ ಎರಕಹೊಯ್ಯುವುದನ್ನೇ ಜಾಗತೀಕರಣವೆನ್ನುವ ಲ್ಯಾಪ್‌ಟಾಪ್ ಕನ್ಸಲ್ಟೆಂಟ್‌ಗಳ ಹುಚ್ಚಿಗೆ ಜೊತೆಗೊಡುವ (ಸ್ಥಳೀಯ ಸಂಸ್ಕೃತಿಯನ್ನು ಅರಿತುಕೊಳ್ಳುವ ವ್ಯವಧಾನವೇ ಇಲ್ಲದ) ಅಧಿಕಾರಸ್ಥರಿಂದಾಗಿ ಮಹತ್ವಾಕಾಂಕ್ಷಿಯಲ್ಲದ ಹಾಗೂ ಆಕ್ರಮಣಕಾರಿಯಲ್ಲದ ತುಳು ಸಂಸ್ಕೃತಿಯ ನೆಲೆಗಟ್ಟು ಶಿಥಿಲವಾಗುತ್ತಿದೆ.

ಎಂ ಆರ್ ಪಿ ಎಲ್ ವಿಸ್ತರಣೆ, ಬಿ ಎ ಎಸ್ ಎಫ್ ವಿಸ್ತರಣೆ, ಎಮ್ ಎಸ್ ಇ ಜೆ ಡ್, ಪಿಸಿಪಿಐಆರ್, ನಾಗಾರ್ಜುನ, ಇಂಡಸ್ಟ್ರಿಯಲ್ ಕಾರಿಡಾರ್, ಮಿಡ್ಲ್ ಈಸ್ಟ್ ಆಯಿಲ್ ರಿಸರ್ವ್, ಲ್ಯಾಂಡ್ ಬ್ಯಾಂಕ್ ಯೋಜನೆಗಳ ಹೆಸರಿನಲ್ಲಿ ತುಳುನಾಡಿನ ಉದ್ದಗಲಕ್ಕೂ ಹರಡಿರುವ ತುಳುವರ ಲಕ್ಷಾಂತರ ಎಕರೆ ನೆಲವನ್ನು ಕಸಿದು ಅವರನ್ನೆಲ್ಲಾ ಅವರ ಪ್ರಸಕ್ತ ಬದುಕಿನ ಪರಿಸರಕ್ಕಿಂತ ಇಕ್ಕಟ್ಟಾದ ಪುನರ್ವಸತಿ ಕೇಂದ್ರದಲ್ಲಿ ಕೂಡಿ ಹಾಕಿ, ಹೊರ ಪ್ರಾಂತ್ಯಗಳವರನ್ನೆಲ್ಲಾ ಉದ್ಯೋಗವಾಕಾಶದ ಹೆಸರಿನಲ್ಲಿ ತುಳುನಾಡಿನಲ್ಲಿ ನೆಲೆಗೊಳಿಸಿ, ಕರ್ನಾಟಕದಲ್ಲಿ ಹೇಗೂ  ಭಾಷಾ ಅಲ್ಪಸಂಖ್ಯಾಕರಾಗಿರುವ ತುಳುವರನ್ನು ಅವರ ತಾಯ್ನಾಡಿನಲ್ಲೇ ಅಲ್ಪಸಂಖ್ಯಾತರನ್ನಾಗಿಸುವ ತಲೆಕೆಟ್ಟ ಯೋಜನೆಗಳನ್ನು ತುಳುನಾಡಿನ ಮೇಲೆ ಹೇರದಂತಹ ಸದ್ಬುದ್ಧಿಯನ್ನು ಅಧಿಕಾರಸ್ಥರಿಗೆ ತುಳುನಾಡಿನ ದೈವಗಳು ನೀಡಲಿ ಎಂದು ಪ್ರಾರ್ಥಿಸುವ ಶಕ್ತಿ ಮಾತ್ರ ಶಿಥಿಲವಾಗುತ್ತಿರುವ ತುಳು ಸಂಸ್ಕೃತಿಯ ನೆಲೆಗಟ್ಟನ್ನು ಭದ್ರವಾಗಿ ಇರಿಸಿಕೊಳ್ಳಲು ಚಡಪಡಿಸುತ್ತಿರುವ ತುಳುವರಲ್ಲಿ ಉಳಿದಿದೆ.

ಮಣ್ಣು ಪಾಲಾದರೂ ಮಾಯೆ ಪಾಲಾಗಲಿಲ್ಲ. ಇವತ್ತು ಮಾಯೆಯನ್ನು ಪಾಲು ಮಾಡುತ್ತಾರೆ. ಮನುಷ್ಯನ ಗೋರಿ ನೋಡಿದವರುಂಟು, ಮಾಯೆಯ ಗೋರಿ ಕಂಡವರಿ. ಮನುಷ್ಯನ ಗೋರಿಯನ್ನು ಕೆಡವಬೇಕು ಮಾಯೆಗೆ ಗೋರಿಯನ್ನು ಕಟ್ಟಬೇಕು ಎಂದು ನೋಡುವವರಿದ್ದಾರೆ. ಸರ್ಪ ಮುದಿ ಆಯಿತು. ಮಣ್ಣು ಕುಂಬು ಆಯಿತು ವಿಷಕ್ಕೆ ಮುಪ್ಪಡರಿತು ಎಂದು ಅಂಜಬೇಡಿ. ದೂರದಿಂದಲೇ ಬೆತ್ತದಲ್ಲಿ ತಿರುಗಿಸುವೆ. ತಿರುಗದಿದ್ದರೆ ಹಗ್ಗ ಹಾಕಿ ಎಳೆಯುತ್ತೇನೆ. ಹಗ್ಗ ತುಂಡು ಮಾಡಿದರೆ ಮೂಗುದಾರ ಹಾಕುವೆ. ಮಾಯದ ದೈವಕ್ಕೆ ಗೋರಿ ಕಟ್ಟಲು ನೋಡಿದವರ ಗೋರಿಯನ್ನೇ ಕಟ್ಟಿಸುವೆ...

--ಲಾಲ ಗ್ರಾಮದ ಮೂಜುಲ್ನಾಯ ಭೂತ - ಡಾ| ಚಿನ್ನಪ್ಪಗೌಡರ ಭೂತಾರಾಧನೆ ಜಾನಪದೀಯ ಅಧ್ಯಯನದಿಂದ


ಚಿತ್ರಗಳು: ನಟೇಶ್ ಉಳ್ಳಾಲ್

8 comments:

 1. ತುಳು ವಿಶ್ವ ಸಮ್ಮೇಳನದ ಈ ಸಮಯದಲ್ಲಿ
  ಗಮನಸೆಳೆಯುವ ಲೇಕನ.
  ಚೆನ್ನಾಗಿದೆ .
  ಚಿಂತನೆ ಮಾಡಬೇಕಾದ ಸಂಗತಿಯಂತು
  ಹವ್ದೇ ಹವ್ದು .

  ReplyDelete
 2. Emotionally touching article!Children and our life should be more in "touch" with MANNU!-soil---Thank you

  ReplyDelete
 3. ಎಸ್.ಎಂ ಪೆಜತ್ತಾಯ27 November, 2009 14:21

  ಅಶೋಕ ವರ್ಧನರೇ!
  ನಾನು ಹೊಟ್ಟೆಯ ಪಾಡಿಗಾಗಿ ತುಳುನಾಡು ತೊರೆದು ನಾಲ್ಕು ದಶಕಗಳೇ ಸಂದುವು. ಪ್ರಚಲಿತ ವಿಷಯಗಳ ಅರಿವು ನನಗಿಲ್ಲ. ತಮ್ಮ ಬ್ಲಾಗ್ ಓದಿದಿದನಂತರ ನನಗೆ ತೋಚಿದ ವಿಚಾರಗಳನ್ನು ಇಲ್ಲಿ ಬರೆದಿದ್ದೇನೆ. ತಾವು ಹಂಸ ಕ್ಷೀರ ನ್ಯಾಯ ವಹಿಸಿ ಪರಾಂಬರಿಸ ಬೇಕಾಗಿ ವಿನಂತಿ.

  ಯಕ್ಷಗಾನದ ದೀವಟಿಗೆ ಬದಿಗಿಟ್ಟು ತಾವು ಸದ್ಯಕ್ಕೆ ಭೂತ ರಾಯನ ದೀವಟಿಗೆ ಹಿಡಿದಿದ್ದೀರಿ! ಇವೆರಡೂ ನಿಜವಾಗಿ ಒಳ್ಳೆಯ ಕೆಲಸಗಳೇ! ತೆಂಕು ತಿಟ್ಟು ಯಕ್ಷಗಾನ ಮತ್ತು ಭೂತಾರಾಧನೆ ತುಳುವರಾದ ನಮ್ಮ ಸಂಸ್ಕೃತಿಯ ಮುಖ್ಯ ಅಂಗಗಳೇ ಹೌದು.
  ಇವೆರಡನ್ನು ದೂರ ಇಟ್ಟರೆ ನಮ್ಮ ಬದುಕಿನ ರಂಗೇ ದೂರ ಆಗುತ್ತದೆ.

  ಇವನ್ನು ಮರೆತರೆ, ನಮ್ಮ ತೌಳವ ಸಮಾಜಕ್ಕೆ ಅಳಿದು ಉಳಿದಿರುವ ಕಂಬುಲ, ಕೋರ್ದಟ್ಟ, ಲಗೋರಿ, ಚಡುಗುಡು, ಕುಟ್ಟಿದೊಣ್ಣೆ ಮತ್ತು ತೆಂಗಿನ ಕಾಯಿ ಕ‍ಟ್ಟ ಮಾತ್ರ ಉಳಿದಾವು.
  ಇವೇ ಮುಂದಕ್ಕೆ ನಮ್ಮ ಸಂಸ್ಕೃತಿಯ ಮನೋರಂಜನಾ ದ್ಯೋತಕಗಳು ಆದಾವು.

  ಕಾಲಿಮಂಡದ ಜುಗಾರಿಯ ಎಂಬ ಮನೋರಂಜನೆಯ ಬಗ್ಗೆ ಕೇಳಿಬಲ್ಲೆ. ಆದರೆ, ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ ! ಅದು ಒಂದು ಜನಪದ ದ್ದ್ಯೂತವೆ? ... ನಾನು ಹದಿಹರೆಯದ ಹುಡುಗನಾಗಿ ನಮ್ಮ ಊರಿನಲ್ಲಿ ಇದ್ದಾಗ ನನ್ನಂತಹಾ 'ಎಲ್ಯ ಜೋಕುಲೆಗ್ ' ಅಲ್ಲಿ ಪ್ರವೇಶ ಇದ್ದಿಲ್ಲ.

  ಪರಕೆದ ಆಟ, ಪಾತ್ರಿ, ದರ್ಶನ, ನುಡಿಕಟ್ಟು, ಬ್ರಹ್ಮ ಬೈದರ್ಕಳ ಕೋಲ , ಕೋಲ, ನುಡಿನೇಮ, ನಾಗ ಬೆರ್ಮೆರ ಪೂಜೆ , ತಂಬಿಲ, ಅಪರೂಪದ ಅಂಬಿದಾರ, ತೂಟೆ ದಾರ ಮತ್ತು ಅಪರೂಪದ ಢಕ್ಕೆದ ಬಲಿ ಮತ್ತು ನಾಗಮಂಡಲ ..... ಮುಂತಾದುವೆಲ್ಲಾ ತಮ್ಮ ಮೂಲದ ನೆಲೆಯ ತಾಣಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಳೆದುಕೊಂಡ ನಂತರ, ಅವು ಘಟ್ಟ ಹತ್ತಿ ಬಯಲು ಸೀಮೆಯಲ್ಲಿ ನೆಲೆ ನಿಲ್ಲಲು ಸಾದ್ಯವೆ?

  ಬಹು ದುಃಖದ ವಿಚಾರವೆಂದರೆ, ಇಂದಿಗೆ ನಮ್ಮ ಪ್ರೀತಿಯ ತುಳು ಭಾಷೆಯನ್ನು 'ಇದೂ ಒಂದು ಭಾಷೆ' ಎಂದೇ ಹಲವರು ಪರಿಗಣಿಸಿಲ್ಲ.

  ತುಳು ಒಂದು ಆಡು ಭಾಷೆ ಅಥವಾ ಅದು ಒಂದು ' ಲಿಂಗೋ' ಅಂತ ಹಲವರು ಅನ್ನುತ್ತಾರೆ. ಅದಕ್ಕೆ ಹಾಸುಹಿಕ್ಕಾಗಿರುವ ತೌಳವ ಸಂಸ್ಕೃತಿಯ ಅರಿವು ಅವರಿಗೆ ಇದ್ದಂತೆ ಇಲ್ಲ.

  ನಮ್ಮ ತುಳುವ ಸಂಸ್ಕೃತಿಯು ನಿಜವಾಗಿಯೂ ಶೋಚನೀಯ ಸ್ಥಿತಿಯಲ್ಲಿ ಇದೆ.

  ತುಳುವರು ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಸೇರಿಸುವಾಗ ಮಾತೃ ಭಾಷೆ 'ತುಳು ' ಎಂದು ಬರೆಯದೆ ' ಇಂಗ್ಲಿಷ್ ' ಅಂತ ಬರೆಯುವ ಕಾಲ ಇದಾಯಿತೆ?

  ಹಲವಾರು ತುಳುವ ಮಕ್ಕಳಿಗೆ ತುಳು ಭಾಷೆಯನ್ನು ಹೆತ್ತವರು ಕಲಿಸಿಲ್ಲ. ( ನನ್ನ ಮಕ್ಕಳಿಗೆ "ಒಂತೆ ಒಂತೆ ತುಳು ಬರ್ಪುಂಡು!" )

  ಮಾನ್ಯ ಶ್ರೀ ನಟೇಶ್ ಉಲ್ಲಾಳರು ಉಲ್ಲೇಖಿಸಿದಂತೆ ನಮ್ಮ ತುಳುವ ಸಂಸ್ಕೃತಿಯನ್ನು ಉಳಿಸುವ ಬಗ್ಗೆ ನಾವು ಇದೀಗ ಬಹು ಗಂಭೀರವಾಗಿ ಆಲೋಚಿಸುವ ಕಾಲ ಬಂದಿದೆ.


  ಅಶೋಕ ವರ್ಧನರೇ! ತಾವು ಸದ್ಯಕ್ಕೆ ಕೈಗೆತ್ತಿಕೊಂಡ ಭೂತದ ದೀವಟಿಗೆ ಯನ್ನು ಬದಿಗೆ ಇಟ್ಟ ನಂತರ; ತಾವು ನಗಾರಿಯನ್ನು ಕೈಗೆತ್ತಿಕೊಳ್ಳಬೇಕು.

  ಈಗ "ನಗಾರಿ ಬಾರಿಸಿ ಜನಜಾಗೃತಿ " ಮೂಡಿಸುವ ಕಾಲ ಬಂದಿದೆ.

  ತುಳು ಸಂಸ್ಕೃತಿಯ ವರ್ಧನೆ ಆಗಲಿ!

  ತಮ್ಮ ಪ್ರಯತ್ನಗಳಿಗೆ ಜಯ ಸಿಗಲಿ!

  ನಮಸ್ಕಾರಗಳು


  ಕೇಸರಿ ಪೆಜತ್ತಾಯ

  ReplyDelete
 4. great article.. this shoud come in news papers too... we shoud tell the peope that karnataka is not only old mysore part...

  ReplyDelete
 5. naalige mattu nambikeya baladalle istu dina nele nintiruva tulu bhashe samscrutiya bagegina lekhana sakalikavagide.t.a.pai avaru industry minister aagiddaga helutiddarante ee jille industry yogyavalla endu.eega illiya janare nelakke parakeyaraguva stiti bandide.nateshru tulu samscrutiya mele aguttiruva akramanavannu mattu karanagalannu chennagi guritisiddare.vandanegalu.

  ReplyDelete
 6. ಹೊರಗಿನವರು ತುಳುನಾಡ ಸಂಸ್ಕೃತಿ ಮೇಲೆ ತೀರ್ಮಾನಗಳ ಹೇರುವುದು ಶುಕ್ರುಂಡೆ ತಿಂದ ಬಿಳಿ ತೊಗಲಿನ ಅಧಿಕಾರಿ ನಾಳೆ ನಮ್ಮಪ್ಪನ ತಿಥಿ ಮಾಡು ಎಂಬಂತಾಗುತ್ತದೆ.

  ತುಳುನಾಡ ಸಂಸ್ಕೃತಿ ಉಳಿಯುತ್ತದೆ ಎಂದು ಆಶಿಸೋಣ.

  ReplyDelete
 7. ನಟೇಶ್ ಉಳ್ಳಾಲ್02 December, 2009 06:33

  ಅಶೋಕ್,
  ಬ್ಲಾಗಿಗೆ ಹಾಗೂ ಲೇಖನವನ್ನು ಅರ್ಥವತ್ತಾಗಿಸಿದ ಪೀಠಿಕೆ ಮತ್ತು ಲೇಖನದ ಅಂದ ಹೆಚ್ಚಿಸಿದ ಸೂಕ್ಷ್ಮ ತಿದ್ದುಪಡಿಗಳಿಗೆ ವಂದನೆಗಳು. ಪ್ರಯಾಣದಲ್ಲಿದ್ದರಿಂದ ಬ್ಲಾಗ್ ಗಮನಿಸಲು ಆಗಲಿಲ್ಲ ಹಾಗೂ ಪ್ರತಿಕ್ರಿಯಿಸಲು ಆಗಲಿಲ್ಲ, ಕ್ಷಮೆಯಿರಲಿ. ಮಂಗಳೂರಿನ ರಸ್ತೆಯ ಹಳ್ಳಗಳಲ್ಲಿ ಬೈಕು ಓಡಿಸಿದ ತಪ್ಪಿಗೆ ಮೆಲ್ಲಗೆ ಸುರು ಆದ ಬೆನ್ನು ನೋವು ಪ್ರಯಾಣ ಕಾಲದಲ್ಲಿ ಜೋರಾದ್ದರಿಂದ ಅರ್ಧಕ್ಕೆ ನಿಲ್ಲಿಸಿ ತಿರುಗಿ ಬಂದೆ, ಈಗ ಕುಳಿತುಕೊಳ್ಳುವುದಕ್ಕೂ ವೈದ್ಯರ ಅನುಮತಿ ಇಲ್ಲ!
  ವಂದನೆಗಳೊಂದಿಗೆ
  ನಟೇಶ್

  ReplyDelete
 8. ಕೇಸರಿ ಪೆಜತ್ತಾಯ03 December, 2009 20:55

  ಗೋವಿಂದರೇ!
  ತಾವು ಬರೆದ ಪತ್ರದ ಉಪಮೆ - ಶುಕ್ರುಂಡೆ ತಿಂದ ಬಿಳಿ ತೊಗಲಿನ ಅಧಿಕಾರಿ ನಾಳೆ ನಮ್ಮಪ್ಪನ ತಿಥಿ ಮಾಡು! ..... ಓದಿಯೇ ನನಗೆ ತುಂಬಾ ಖುಷಿ ಆಯಿತು.

  ೧೯೬೭ರಲ್ಲಿ ಶಿರೂರಿನ ಫಾರ್ಮಿನಲ್ಲಿ ಇದ್ದ ಒಬ್ಬರು ಘಟ್ಟದ ಮೇಲೆ ಹುಟ್ಟಿದ ಎ. ಎ. ಓ ( ಸಹಾಯಕ ಅಗ್ರಿಕಲ್ಚರ್ ಆಫೀಸರ್ ) ಅವರು ನನ್ನ ಫಾರ್ಮಿಗೆ ನನ್ನ ಖರ್ಚಿನಲ್ಲೇ ಕುಶಲ ಭೇಟಿ ಇತ್ತರು. ಸಕಲ ಒಡ್ಡೋಲಗಗದ ವಿಧಿಗಳನ್ನು ಪೂರೈಸಿ ಔತಣ ಉಂಡು ಹೊರಡುವಾಗ " ಪೆಜತ್ತಾಯರೇ! ನನಗೆ ನಿಮ್ಮ ಕುಚ್ಚಿಲು ಅಕ್ಕಿಯ ಗದ್ದೆಗಳನ್ನು ಯಾಕೆ ತೋರಿಸಲಿಲ್ಲ? " ಅಂತ ರಾಂಗ್ ಆದರು!
  ಕೇಸರಿ ಪೆಜತ್ತಾಯ

  ReplyDelete