24 October 2009

ಬರಗಾಲದಲ್ಲಿ ಮಸಾಲೆದೋಸೆ

ಕರ್ನೂಲಿನ ನನ್ನ ಹಿರಿಯ ಗೆಳೆಯ ಶ್ರೀ ಚಂದ್ರಶೇಖರ ಕಲ್ಕೂರರ ಸ್ಥಿರ, ಚರ ಸೊತ್ತುಗಳೆಲ್ಲ ಈಚೆಗೆ ಅವರ ಮಾತಿನಲ್ಲೇ ಹೇಳುವಂತೆ ‘ಮೂವತ್ತೆರಡು ಗಂಟೆಗಳ ಕಾಲ ತುಂಗಭದ್ರಮ್ಮನ ಹೊಟ್ಟೆಯಲ್ಲಿತ್ತು.’


ಚಂದ್ರಶೇಖರ ಕಲ್ಕೂರರ ಅಜ್ಜ ಊರಿನಲ್ಲಿ (ಉಡುಪಿ ಜಿಲ್ಲೆಯ ಬ್ರಹ್ಮಾವರ) ಹೊಟ್ಟೆಗೂ ಗತಿಯಿಲ್ಲದ ಕಾಲದಲ್ಲಿ ‘ಒಂದು ಸೌಟು’ ಹಿಡಿದುಕೊಂಡು ಭವಿಷ್ಯ ಅರಸಿ ಆಂಧ್ರಪ್ರದೇಶಕ್ಕೆ ವಲಸೆಹೋದವರು. ‘ಅನ್ನ ಮಾರಿ’ ಮಗ, ಮೊಮ್ಮಗನ ಕಾಲಕ್ಕೆ ಸಮೃದ್ಧಿ, ವಿದ್ಯೆ, ಸಂಸ್ಕೃತಿಗಳ ನೆಲೆ ಕಾಣಿಸಿದರು. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಮೋಟಾರ್ ಸೈಕಲ್ಲಿನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕಲ್ಕೂರರ ಹೋಟೆಲ್ ಕರ್ನೂಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಚಂದ್ರಶೇಖರ ಕಲ್ಕೂರ ಆಂಧ್ರಪ್ರದೇಶ ಹೋಟೆಲಿಗರ ಸಂಘದ ಅಧ್ಯಕ್ಷ. ಇವರು ನೆಚ್ಚಿದ ಪಕ್ಷ ಕಾಂಗ್ರೆಸ್ಸಾದರೂ ‘ಪಕ್ಷಪಾತ’ ಇವರ ಸಾರ್ವಜನಿಕ ಸೇವೆಯಲ್ಲಿರಲಿಲ್ಲ. ಅಪಾರ ಓದು (ಆಂಧ್ರದ ವಿದ್ಯಾರ್ಥಿಯಾದರೂ ಸ್ವಂತ ಗಳಿಕೆಯಲ್ಲಿ ಬಲು ದೊಡ್ಡ ಕನ್ನಡ ಓದುಗ ಮತ್ತು ಕಾರ್ಯಕರ್ತನೂ ಹೌದು), ಲೋಕಾನುಭವ ಮತ್ತು ಅಪರಿಮಿತ ಮಿತ್ರಬಳಗದ ಚಂದ್ರಶೇಖರರು ಕಾನೂನು ಪದವೀಧರರೂ ಹೌದು. ಈಚೆಗೆ ತನ್ನ ವಾಣಿಜ್ಯ ವ್ಯವಹಾರಗಳನ್ನು ಉತ್ತರಾಧಿಕಾರಿಗಳಿಗೆ ಬಿಟ್ಟು ಹವ್ಯಾಸೀ ವಕೀಲರಾಗಿದ್ದರು. ಇವರ ಸಾಮಾಜಿಕ ಸಂಶೋಧನಾಸಕ್ತಿ ಕರ್ನೂಲಿನ ಪಕ್ಕದ ನದಿ ತುಂಗಭದ್ರೆಯ ಕುರಿತು ವಿಸ್ತಾರವಾಗಿ ಹರಿದಿತ್ತು. ದುರಂತವೆಂದರೆ ಅದೇ ತುಂಗಭದ್ರೆ ಮೊನ್ನೆ ಶುದ್ಧ ಮಾನವಕೃತ ಅವ್ಯವಸ್ಥೆಯಲ್ಲಿ ಇವರನ್ನು ಕೇವಲ ಉಟ್ಟ ಬಟ್ಟೆಯಲ್ಲಿ ದಿಕ್ಕೆಡಿಸಿ ಓಡಿಸಿತ್ತು.


ಚಂದ್ರಶೇಖರ ಕಲ್ಕೂರರು ಈಗ ಸ್ವಂತಮನೆ, ಸೊತ್ತುಗಳನ್ನು ಪುನಃ ಸ್ಥಾಪಿಸುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಸಾಮಾಜಿಕ ಪರಿಸರವನ್ನು ಸಂಘಟಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ಆ ಕುರಿತ ಅವರ ಮನವಿಯನ್ನೂ ಮತ್ತವರೇ ಕಳಿಸಿದ ಸಣ್ಣ ತಿದ್ದುಪಡಿಯನ್ನೂ ನನ್ನ ಬ್ಲಾಗಿನ ಮಿತ್ರ ಬಳಗಕ್ಕೆಲ್ಲ ನಾನು ತಳ್ಳಿದ್ದೆ. ಅದರ ಬೆನ್ನಿಗೇ ನನ್ನ ತಿರುಗೂಳಿ ವೃತ್ತಾಂತದ ಮೂರು ಕಥನಗಳ ಬಗ್ಗೆ ನನ್ನ ಬ್ಲಾಗ್ ಬಳಗಕ್ಕೆ ತಿಳುವಳಿಕೆ ಪತ್ರವನ್ನು ಎಂದಿನಂತೆ ರವಾನಿಸಿದ್ದೆ. ಎರಡನೇ ಪತ್ರವನ್ನು ಸ್ವಲ್ಪ ತಡವಾಗಿ ನೋಡಿ, ಅದಕ್ಕೆ ಪ್ರತಿಕ್ರಿಯೆಯಾಗಿ ಕಲ್ಕೂರರು ಕ್ಷಮಾಪೂರ್ವಕವಾಗಿ ಬರೆಯುತ್ತಾರೆ “Dear Ashokgaru, Vandemataram. I have been glancing at your mails. I am neck deep in the flood relief operations……” ಪುರುಸೊತ್ತಾದಾಗ ಅವಶ್ಯ ಓದಿ ಪ್ರತಿಕ್ರಿಯಿಸುತ್ತೇನೆ ಎಂದೇ ಅವರು ಪತ್ರ ಮುಗಿಸಿದ್ದನ್ನು ನೋಡಿ ನನಗೆ ತುಂಬಾ ಸಂಕೋಚವಾಯ್ತು. ಹಾಗಾಗಿ ನಾನು ಬರೆದ ಪತ್ರವನ್ನಷ್ಟೇ ಇಲ್ಲಿ ಸಾರ್ವಜನಿಕಗೊಳಿಸಿ ಮುಗಿಸುತ್ತೇನೆ:


ಪ್ರಿಯರೇ ಈ ಗಣಕ, ಅಂತರ್ಜಾಲದ ಸೌಕರ್ಯಗಳಲ್ಲಿ ನಾನು (ಯಾವುದೇ ವ್ಯಕ್ತಿ) ಒಬ್ಬರಿಗೆ ಬರೆದುದನ್ನು ಹತ್ತು ಜನರಿಗೋ ನೂರು ಜನರಿಗೋ ಕುರುಹು ಕೊಡದೆ ಕಳಿಸುವುದು ತುಂಬಾ ಸುಲಭ. ನನ್ನ ಆತ್ಮೀಯ ಬ್ಲಾಗಿಗರ ವಿಳಾಸ ಪಟ್ಟಿಯಲ್ಲಿ ನಿಮ್ಮ ವಿಳಾಸ ಇರುವುದರಿಂದ ಮತ್ತು ಅದನ್ನು ತೆಗೆದುಹಾಕಲು ಯಾವುದೇ ಕಾರಣಗಳಿಲ್ಲವಾದ್ದರಿಂದ ನಿಮಗೆ ನನ್ನ ಪತ್ರಗಳು, ‘ಬ್ಲಾಗ್ ನೋಡಿ’ ಮನವಿಗಳು ಬರುತ್ತಿರುತ್ತವೆ. ಆದರೆ ನೀವು ಇರುವ ಸಂತ್ರಸ್ತ ಸ್ಥಿತಿಯಲ್ಲಿ ಆದ್ಯತೆಗಳು ತೀರಾ ಭಿನ್ನ ಮತ್ತು ಮನೋಸ್ಥಿತಿ ನನ್ನ ಚಿಲ್ಲರೆ ಬರವಣಿಗೆಗಳನ್ನು ಸವಿಯುವಂತದ್ದಲ್ಲ ಎಂದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ನನ್ನ ಕುರಿತು ನೀವು ಏನೂ ಗಂಭೀರವಾಗಿ ಯೋಚಿಸಬೇಡಿ, ಪ್ರತಿಕ್ರಿಯೆ ಕೊಡುವ ಕಷ್ಟಪಡಬೇಡಿ.


ನಿಮ್ಮ ಎರಡೂ ಪತ್ರಗಳನ್ನು ನನ್ನ ಬ್ಲಾಗ್ ಸಂಪರ್ಕದವರಿಗೆಲ್ಲ ಕಳಿಸಿದ್ದೇನೆ (ಯಾಂತ್ರಿಕವಾಗಿ ನಿಮಗೂ ಅವು ಬಂದಿರುತ್ತವೆ). ಇಲ್ಲಿ ನೆರೆಯ ವರದಿಗಳು ಬರ ತೊಡಗಿದಂದಿನಿಂದಲೇ ಅಧಿಕೃತ ರೂಪಿನ ಹಲವು ಬಕೆಟ್ ಮೆರವಣಿಗೆಗಳು (ಅನಧಿಕೃತ ಬಿಡಿ; ಅಣಬೆಗಳು ಸಾವಿರ) ನಡೆದಿವೆ. ಜಿಲ್ಲಾಧಿಕಾರಿ, ಉಸ್ತುವಾರಿ ಮಂತ್ರಿಯಿಂದ ತೊಡಗಿ, ರಾಜಕೀಯ ಪಕ್ಷಗಳು, ಸಿನಿಮಾ ತಾರೆಯರು, ವಿವಿಧ ಮಠಗಳು, ಕಾಲೇಜು, ಸಂಘ ಸಂಸ್ಥೆ ಮುಂತಾದವು ನೆರೆ ಪರಿಹಾರಕ್ಕಿಂತಲೂ ತಮ್ಮ ‘ಜನಪ್ರಿಯತೆಯನ್ನು’ ಒರೆದು ಪರೀಕ್ಷಿಸುವ ಪ್ರಯತ್ನಗಳನ್ನು ಸಾಕಷ್ಟು ನಡೆಸಿವೆ. ನನ್ನದು ಒಂದು ನಿಟ್ಟಿನಲ್ಲಿ ಶಿವರಾಮ ಕಾರಂತರದ್ದೇ ಧೋರಣೆ: ವಿಶ್ವ ಕನ್ನಡ ಸಮ್ಮೇಳನ (ಈ ಸಮ್ಮೇಳನಗಳದ್ದೇ ಔಚಿತ್ಯವನ್ನು ಪ್ರಶ್ನಿಸುವುದು ಬೇರೇ) ಉದ್ಘಾಟನೆಯಂದು ಅವರು ಹೇಳಿದರು "ಎಲ್ಲೋ ಬರಗಾಲ ಬಂತೆಂದು ಇಲ್ಲಿ ಮಸಾಲೆ ದೋಸೆ ಬಿಡಬೇಕಾಗಿಲ್ಲ." ಇದು ಸಂವೇದನಾ ಶೂನ್ಯತೆ ಅಲ್ಲ, ‘ಜೀವ’ದ ನಿರಂತರತೆಯನ್ನು ಸ್ಪಷ್ಟಪಡಿಸುವ ನುಡಿ ಮಾತ್ರ.


ನನ್ನ ತಂದೆಯ ಶವವನ್ನು ದೇಜಗೌ ಮುಂತಾದ ಹಿರಿಯರ ಒತ್ತಾಯದ ಮೇರೆಗೆ ನಮ್ಮ ಮನೆಯಲ್ಲಿ ಕೆಲವು ಗಂಟೆಗಳ ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇಡಲೇಬೇಕಾಯ್ತು (ತಂದೆ ಇದೂ ಕೂಡದು ಎಂದು ಸ್ಪಷ್ಟ ಹೇಳಿದ್ದರು). ಅಲ್ಲಿ ಸಹಜವಾಗಿ ಮಧ್ಯಾಹ್ನ ಬಂತು. ತಾಯಿ ಮೊದಲೇ ಗಂಟುವಾತದ ನಿಶ್ಶಕ್ತಿಯಿಂದ ಬಳಲುತ್ತಿದ್ದರು, ಒಬ್ಬ ಚಿಕ್ಕಪ್ಪ ಮಧುಮೇಹದ ಗಿರಾಕಿ..... ಹೀಗೆ ಹಲವು ನಿತ್ಯದ ಸಮಸ್ಯೆಗಳು ಎಲ್ಲರಿಗೂ ಬೇರೆ ಬೇರೆ ಇತ್ತು, ಹಲವರಿಗೆ ಅದು ತಿಳಿದೂ ಇತ್ತು. ಸಹಜವಾಗಿ ಕೆಲವು ಬಂಧುಗಳು ಅವರ ಮನೆಯಲ್ಲಿ ಅವಸರದ ಅಡುಗೆ ಮಾಡಿ ಒಬ್ಬೊಬ್ಬರನ್ನೇ ಅಲ್ಲಿಗೆ ಕರೆದು ಬಾಯಾರಿಕೆ, ಊಟ ನೀಗಿಸಿದರು. ನಮ್ಮ ಮನೆಗೇ ಡಬ್ಬಿಯಲ್ಲಿ ತಿನಿಸು ತಂದು, ತಾಯಿಯನ್ನೂ ಒತ್ತಾಯ ಮಾಡಿ, ಒಳಗೆ ಕೂರಿಸಿ ಊಟ ಮಾಡಿಸಿದರು. ಹಾಗೇ ನಿಮ್ಮ (ನೆರೆಹಾವಳಿಗೆ ಒಳಗಾದವರ) ಎಲ್ಲಾ ಕಷ್ಟದ ಕತೆಗಳನ್ನು ಕೇಳುತ್ತಾ ಮಿತಿಯಲ್ಲಿ ಸ್ಪಂದಿಸುತ್ತಲೂ ಇರುವುದರೊಂದಿಗೆ ನಮ್ಮ ನಿತ್ಯದ ಅಗತ್ಯಗಳನ್ನೂ ಪೂರೈಸಿಕೊಳ್ಳುತ್ತಿದ್ದೇವೆ ಎಂದರೆ ನೀವು ಬೇಸರಿಸಲಾರಿರಿ ಎಂದು ನಂಬುತ್ತೇನೆ.


ಹೋಲಿಕೆಯ ಚಂದಕ್ಕೆ ಯಾರೋ ಎಲ್ಲೋ ಶುರು ಮಾಡಿದರು - ಅಂದು ರಾಜರ ಆಶ್ರಯದಲ್ಲಿ ಸಾಹಿತ್ಯ ಕಲೆಗಳು ಅರಳಿದವು, ಧರ್ಮ ವಿಜೃಂಭಿಸಿತು ಇತ್ಯಾದಿ. ಇದನ್ನು ಸ್ವಾರ್ಥ ರಾಜಕಾರಣ ಧಾರಾಳವಾಗಿ, ನಿರ್ಲಜ್ಜವಾಗಿ ಬಳಸಿಕೊಂಡು ಇಂದು (ಪ್ರಜಾಸತ್ತಾ) ಸರಕಾರಗಳು  ರಾಜಸತ್ತೆಗಳೇ ಆಗಿವೆ! ಕಣ್ಣೆದುರಿನ ಖಾಲಿಪೋಲಿಗಳು ಸನ್ಮಾನ್ಯ ಸಚಿವ, ಬಹುಮಾನ್ಯ ರಾಜ್ಯಪಾಲನೋ ಅತಿವಂದ್ಯ ರಾಷ್ಠ್ರಪತಿಯೋ ಆಗುವುದು ನಡೆದಿದೆ. ಸರಕಾರಗಳು ಕೇವಲ ಆಡಳಿತ ವ್ಯವಸ್ಥೆಗಳು ಎನ್ನುವುದನ್ನು ಬಿಟ್ಟು ಬಟವಾಡೆ ಸಂಸ್ಥೆಗಳೇ ಆಗಿವೆ. ಗದಗದ ಬಳಿ ನೆರೆ ಸಂತ್ರಸ್ತರ ಮರುವಸತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಚಿತ್ರ ಪತ್ರಿಕೆಯಲ್ಲಿ ನೋಡಿ ನನಗೆ ವಾಕರಿಕೆ ಬಂತು. ಆಳೆತ್ತರದ ಪಾಲಿಶ್ಡ್ ಕಪ್ಪು ಕಲ್ಲಿನ ಮೇಲೆ ಎಲ್ಲಾ ಆಡಳಿತದಾರರ ಹೆಸರು ಕೆತ್ತಿಸಿ, ಅದನ್ನು ತಳಿರು ತೋರಣಗಳಿಂದ ಅಲಂಕರಿಸಿ, ಶಾಮಿಯಾನ ಇತ್ಯಾದಿ ಭರ್ಜರಿ ವ್ಯವಸ್ಥೆಯಡಿ, ಯಡ್ಡಿಯಿಂದ ಹಿಡಿದು ಎಲ್ಲಾ ಚಡ್ಡಿಗಳವರೆಗೂ ಹಲ್ಲು ಕಿರಿದು ಪೋಸು ಕೊಟ್ಟಿದ್ದಾರೆ. ಕಾಲಂ ತುಂಬಾ (ಅಲ್ಲಿ ಗಂಟೆಗಟ್ಟಳೆ) ಕಾಳಜಿಯನ್ನು ಕೊರೆದಿದ್ದಾರೆ. ಇಂಥವು ಇಲ್ಲದ ದಿನವೇ ಇಲ್ಲ. ಇಂಥ ಒಂದೊಂದು ಸಭೆಯ, ಸಮಾರಂಭದ ವ್ಯವಸ್ಥೆಯ ಖರ್ಚಿನಲ್ಲಿ ಕನಿಷ್ಠ ಒಂದೊಂದು ಸಂತ್ರಸ್ತ ಕುಟುಂಬವಾದರೂ ಪುನರ್ವಸಿತವಾಗುತ್ತಿರಲಿಲ್ಲವೇ ಎನ್ನುವ ಸಾಮಾನ್ಯರ ಕೊರಗಿಗೆ ಅಭಿವ್ಯಕ್ತಿ ಕೊಡುವ ಒಂದೂ ಮಾಧ್ಯಮವಿಲ್ಲ. ಮಳೆ ಸುರಿಯುವಂತೆ, ಹೂ ಅರಳುವಂತೆ ಧಾರಾಳವಾಗಿ, ಸಹಜವಾಗಿ, ಸೂಕ್ಷ್ಮವಾಗಿ ನಡೆಯಬೇಕಾದ ಕ್ರಿಯೆಗಳು ಆಡಳಿತ ವರ್ಗದಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಹಲವು ಸಾರ್ವಜನಿಕ ವ್ಯವಸ್ಥೆಗಳು, ಉದಾರ ವ್ಯಕ್ತಿಗಳು ಇಂಥವುಗಳಿಂದ ರೋಸಿಹೋಗಿ ಸ್ವತಂತ್ರವಾಗಿ ಪರಿಹಾರ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಿವೆ. ಸುತ್ತೂರಿನ ಶಿವರಾತ್ರೀಶ್ವರ ಸ್ವಾಮಿಗಳು (ಇನ್ನೂ ಹಲವರೂ ಹೇಳಿರಬೇಕು) "ನಾವು ಎತ್ತಿದ ಭಿಕ್ಷೆಯನ್ನು ನಾವೇ ಪರಿಹಾರ ಕ್ರಿಯೆಯಲ್ಲಿ ತೊಡಗಿಸುತ್ತೇವೆ, ಸರಕಾರದ ಜೋಳಿಗೆಗೆ ಹಾಕುವುದಿಲ್ಲ" ಎಂದದ್ದು ನೂರಕ್ಕೆ ನೂರು ಸರಿಯಾದ ಮಾತು.


ಈ ಯೋಚನೆ ಮತ್ತು ಪ್ರಭಾವಗಳೊಡನೆ ನಾನೆಲ್ಲಿ ಸ್ವಾರ್ಥದ ರಕ್ಷಣೆಗೆ ತರ್ಕ ಹೊಸೆಯುತ್ತಿದ್ದೇನೋ ಜಿಪುಣನಾಗುತ್ತಿದ್ದೇನೋ ಎಂಬ ಭಾವವೂ ಕಾಡುವ ಮೊದಲು ವೈಯಕ್ತಿಕ ದೇಣಿಗೆಯನ್ನು ಪ್ರಜಾವಾಣಿಯ ಮೂಲಕ (ರಸೀತಿ ಸಹಿತ ಇವರು ಸಾರ್ವಜನಿಕ ಲೆಕ್ಕ ಒಪ್ಪಿಸಿ, ಸರಕಾರಕ್ಕೆ ಕೊಡುತ್ತಾರೆ) ಕೊಟ್ಟಿದ್ದೇನೆ. ಇದು ಕೇವಲ ನನ್ನ ಅಪರಾಧೀ ಪ್ರಜ್ಞೆ ತಣಿಸುವುದಕ್ಕೆ ಮಾತ್ರ, ವಾಸ್ತವದ ಕೊರತೆಯ ಗಾತ್ರಕ್ಕೆ ಏನೂ ಅಲ್ಲ. ಹಾಗೆಯೇ ನಾನು ಮತ್ತು ಡಾ| (ಮಂಟಪ) ಮನೋಹರ ಉಪಾದ್ಯ ಆರು ತಿಂಗಳ ಹಿಂದೆಯೇ ಯೋಜಿಸಿದಂತೇ ಯಕ್ಷಗಾನದ (ಉಳಿವಿಗಾಗಿ) ವಿಡಿಯೋ ದಾಖಲೀಕರಣದ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ಇಲ್ಲಿ ನಿರ್ಮಾಣಕ್ಕೆ ತೊಡಗುವ ಹಣ ಪೂರ್ತಿ ನಮ್ಮದೇ ಆದಾಯದ ಭಾಗ. ಸರಕಾರದ ಯಾವುದೇ ಇಲಾಖೆ, ಸಾರ್ವಜನಿಕ ಉದಾರಿಗಳ್ಯಾರಿಂದಲೂ ಕೇಳುವುದೂ ಇಲ್ಲ, ಅವರಾಗಿಯೇ ಕೊಡಲು ಬಂದರೆ ಸ್ವೀಕರಿಸುವುದೂ ಇಲ್ಲ. (ಇದಕ್ಕೆ ಪ್ರಾಯೋಜಕರು, ಜಾಹೀರಾತುದಾರರು, ಬ್ಯಾನರ್ ಕೊಡುವವರು ಇಲ್ಲವೇ ಇಲ್ಲ) ಭಾಗವಹಿಸುವ ಕಲಾವಿದ, ತಂತ್ರಜ್ಞರುಗಳ ವೃತ್ತಿ ಧರ್ಮಕ್ಕೆ ತಕ್ಕ ಆರ್ಥಿಕ ಗೌರವವನ್ನೂ ಕೊಟ್ಟೇ ‘ನಮ್ಮ ಸೇವೆ’ಯನ್ನು ಸಾರ್ಥಕಗೊಳಿಸುತ್ತೇವೆ. ಎಲ್ಲಾ ಹೊರೆಗಳನ್ನು ನಾವಿಬ್ಬರೇ ತುಂಬಲಿದ್ದೇವೆ. ಆದರೆ ಫಲಿತಾಂಶದ ವಾಣಿಜ್ಯ ಉಪಯುಕ್ತತೆಯನ್ನು ಶೋಧಿಸಲು ಮತ್ತು ಮಾಡಿಕೊಳ್ಳಲು ಎರಡು ಘನ ಸಂಸ್ಥೆಗಳಿಗೆ ದಾನನೀಡುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಮುಂದೆ ಯಥಾನುಕೂಲದಲ್ಲಿ ಸಾರ್ವಜನಿಕಗೊಳಿಸಿದಂತೇ ನಿಮಗೂ ತಿಳಿಸುತ್ತೇನೆ.


ಇಂತು ವಿಶ್ವಾಸಿ
ಅಶೋಕವರ್ಧನ

12 comments:

 1. ಅಶೋಕ ಭಾವ,
  ನೆರೆ - ಬರ ಬಂದಾಗ ಸಮಾಜದ ಭಾಗವಾದ ನಾವೆಲ್ಲರೂ ಸ್ಪಂದಿಸಬೇಕಾದದ್ದು ಸಹಜ ಮತ್ತು ಮಾನವ ಧರ್ಮ. ಯಥಾನುಶಕ್ತಿಯಲ್ಲಿ ಅವರವರ ಭಾವಕ್ಕೆ ತಕ್ಕ ಹಾಗೆ ಕೊಡುತ್ತಿರುತ್ತಾರೆ. ಹಾಗಾಗಿಯೇ ಸಮಾಜ ಹಾಗೂ ಹೀಗೂ ಸಾಗಿದೆ - ಸರಕಾರದಿಂದ ಅಲ್ಲ ಎಂದು ನನ್ನ ಭಾವನೆ. ನೆರೆ ಬಂತು ಎಂದೊಡನೆ ಹಣ ಕೇಳುವ ಪರಿ ಅಲ್ಲಿ ಘನ ಪೃಷ್ಟರು ಫೊಟೊಗಳಿಗೆ ಪೋಸು ಕೊಡುವುದು ಕಂಡಾಗ ರೇಜಿಗೆಯಾಗುತ್ತದೆ. ಮೊನ್ನೆ ಲಲಿತ ಟ್ಯಾಕ್ಸ್ ಆಫೀಸಿಗೆ ಹೋದಾಗ ನೆರೆ ಪರಿಹಾರಕ್ಕೆ ಹತ್ತು ಸಾವಿರ ಮಡಗಿಡಲು ಹೇಳಿದರು. ಕೊಡದಿದ್ದರೆ ಇವರ ಮೇಲೆ ಮತ್ತೆ ನೆರೆಯ ಬರೆಯ ಅಪಾಯ. ನಮಗೆ - ಶಿಕ್ಷಕರಿಗೆ ಒಂದು ದಿನದ್ದೋ - ಹತ್ತು ದಿನದ್ದೋ ತಿಳಿಯದು - ಸಂಬಳದಲ್ಲೇ ನೆರೆ ಪರಿಹಾರಕ್ಕೆ ಹೋಗುತ್ತದೆ. ಇದಕ್ಕೆ ಅಪಸ್ವರವಿಲ್ಲ. ನ್ಯಾಯವಾದದ್ದೇ.
  ಹೊಸ ಯುಜಿಸಿ ಬರುವಾಗ ಉಳಿಕೆ ಹಣ (ಏರಿಯರ್ಸ್) ದಲ್ಲಿ ಶೇಕಡಾ ಇಪ್ಪತ್ತು ನೆರೆಗೆ ಹೋಗುತ್ತಂತೆ. ಇದು ಸುಮಾರು ಪ್ರತಿಯೊಬ್ಬನಿಂದ ಇಪ್ಪತ್ತರಿಂದ - ಐವತ್ತು ಸಾವಿರದ ಹತ್ತಿರ.
  ಉಸಿರೆತ್ತಿದರೆ ಮಾನವೀಯತೆ ಇಲ್ಲದ ಮಂದಿ ಎಂಬ ಹಣೆಪಟ್ಟಿ ಇದೂ ಒಂದು ಬಗೆಯ ಶೋಷಣೆ.

  ReplyDelete
 2. purushottama Bilimale25 October, 2009 09:28

  ಹೀಗೆ ಸಮಕಾಲೀನ ಚಿಂತನಾ ಕ್ರಮದಿಂದ ಸಿಡಿದು ದೂರ ನಿಂತು ಯೋಚಿಸುವುದು ಸುಲಭವಲ್ಲ. ದೇಶ ಸ್ವಾತಂತ್ಯ್ರ ಹೋರಾಟದ ಅಮಲಿನಲ್ಲಿ ಇದ್ದಾಗ ಡಾ. ಕಾರಂತರು ತಣ್ಣಗೆ ಚೋಮನ ದುಡಿ ಬರೆದು ದೇಶದ ಸಮಸ್ಯೆ ಇರುವುದು ನೆಲದ ಹಂಚಿಕೆಯಲ್ಲಿ ಎಂಬ ಸಂದೇಶವನ್ನು ರವಾನಿಸಿದರು. ಪ್ರವಾಹದ ಒಟ್ಟು ಸಮಸ್ಯೆಯನ್ನು ಉದಾರವಾದಿ ನೆಲೆಗಳಿಂದ ನೋಡಿದಾಗ ಕಾಣುವ ಚಿತ್ರವೇ ಬೇರೆ, ವಾಸ್ತವವಾದಿ ನೆಲೆಗಳಿಂದ ನೋಡಿದಾಗ ಕಾಣುವ ಚಿತ್ರವೇ ಬೇರೆ.

  ReplyDelete
 3. ಪ್ರೀಯರೆ,
  ಪರಿಹಾರವನ್ನು ನೇರವಾಗಿ ನೊಂದವರಿಗೆ ತಲುಪಿಸಲು ನಮಗೆಲ್ಲರಿಗೂ ವೈಯಕ್ತಿಕವಾಗಿ ಸಾಧ್ಯವಿಲ್ಲದ್ದರಿಂದ ಲಭ್ಯವಿರುವ ಸರಕಾರ ಮತ್ತು ಇತರ ಸೇವಾ ಸಂಸ್ಥೆಗಳಿಗೆ ನಮ್ಮ ಪರಿಹಾರ ಸಾಮಗ್ರಿಗಳು ಮತ್ತು ಹಣವನ್ನು ಕೊಡಬೇಕಾಗಿರುವದು ಅನಿವಾರ್ಯ.
  ನಮ್ಮ ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ ವು ಅಕ್ಟೋಬರ್ ೫ರಂದು ವಿಶ್ವ ಶಿಕ್ಷಕರ ದಿನದಂದು ಆ ವರ್ಷ ನಿವೃತ್ತರಾದ ಅಧ್ಯಾಪಕರನ್ನು ಗೌರವಿಸುವ ಸಲುವಾಗಿ ತಂದಿದ್ದ ಶಾಲುಗಳಲ್ಲಿ (ಅಧ್ಯಾಪಕರು ಬಾರದ ಕಾರಣ) ಏಳು ಉಳಿದಿದ್ದವು.
  ಶಾಲುಗಳನ್ನು ಇನ್ನು ಎರಡು ವರ್ಷಗಳ ವರೆಗೆ ನಮ್ಮಲ್ಲಿ ಉಳಿಸಿಕೊಳ್ಳದೆ, ಅವನ್ನು ನೆರೆ ಸಂತ್ರಸ್ಥರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿಗಳನ್ನು ಕೋರಿ ಅವರ ಕಛೇರಿಗೆ ತಲುಪಿಸಿದೆವು. ಅದನ್ನು ಸ್ವೀಕರಿಸಿದ್ದಕ್ಕೆ ದಾಖಲೆಯನ್ನು ನೀಡಿ ತಲಪಿಸುವುದಾಗಿ ಹೇಳಿದ್ದಾರೆ. ವಿಶ್ವಿದ್ಯಾನಿಲಯದ ಎಲ್ಲ ನೌಕರರ ಒಂದು ದಿನದ ಸಂಬಳದ ಮೊತ್ತವನ್ನು ವಿಶ್ವವಿದ್ಯಾನಿಲಯವು ಈಗಾಗಲೇ ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ನೆರೆಯಿಂದ ನೊಂದಿರುವ ಏಳು ಜೀವಗಳಿಗೆ/ಕುಟುಂಬಗಳಿಗೆ ಆ ಶಾಲುಗಳಿಂದ ಸ್ವಲ್ಪವಾದರೂ ಚಳಿಯಿಂದ ರಕ್ಷಣೆ ದೊರೆತರೆ ಅಷ್ಟರಮಟ್ಟಿಗೆ ನಮ್ಮ ಆಶಯ ಸಾರ್ಥಕ.

  ಲಭ್ಯವಿರುವ ವ್ಯವಸ್ಥೆಯನ್ನು ನಂಬದಿರುವುದಕ್ಕೆ ಕಾರಣ ಕಾಣುತ್ತಿಲ್ಲ.
  ನೆರವಿನ ಅಗತ್ಯವಿರುವ ಅಸಹಾಯಕರಿಗೆ ಸೋರುವ ಶಂಕೆಯಿಂದ ನೆರವನ್ನೇ ನಿಲ್ಲಿಸುವಂತಿಲ್ಲ.
  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 4. ಅಶೋಕವರ್ಧನ ಜಿ.ಎನ್25 October, 2009 22:34

  ಮೇಲಿನ ಲೇಖನದಲ್ಲಿ ಹೇಳಿದಂತೆ ಈ ಬಾರಿ ನನ್ನ ಬ್ಲಾಗಿಗರಿಗೆ ಹಾಕಿದ ಪತ್ರದ ಯಥಾ ನಕಲು ಹೀಗಿದೆ.
  ಪ್ರಿಯರೇ
  ಅಂಗಡಿಯಲ್ಲಿ ಒಂದು ಮುಸ್ಸಂಜೆ ಗಿರಾಕಿ ಇರದ ಹೊತ್ತು. ದಾರಿಯಲ್ಲೇನೋ ಅಪಸ್ವರ ಕೇಳಿದಂತಾಯಿತು, ನನ್ನ ಶೋಕೇಸಿನ ಪುಸ್ತಕಗಳ ಎಡೆಯಿಂದ ಇಣುಕಿದೆ. ದಾರಿಯ ಆಚೆ ಬದಿಯಲ್ಲಿ ಪಾದಚಾರಿಯೊಬ್ಬನಿಗೆ ಆಟೋರಿಕ್ಷಾ ಗುದ್ದಿ ಬೀಳಿಸಿದಂತಿತ್ತು. ಅವರಿವರು ಗಡಿಬಿಡಿಸುತ್ತಿದ್ದಂತೆ ಯಾರೋ "ನೀರು, ನೀರು ತನ್ನಿ" ಎಂದರು, ಇನ್ಯಾರೋ ನಮ್ಮಂಗಡಿ ಸಾಲಿನ ಕಡೆಗೆ ನೀರು ಕೇಳಲು ಧಾವಿಸುವುದೂ ಕಂಡೆ. ಸಹಜವಾಗಿ ನಾನು ಒಳಗೆ ತಿರುಗಿ ಸಹಾಯಕನಿಗೆ ನೀರು ತರಲು ಬೊಬ್ಬೆ ಹಾಕಿದೆ. ಅವನು ತರುತ್ತಿದ್ದಂತೆ ಮತ್ತೆ ನನ್ನ ದೃಷ್ಟಿ ದಾರಿಯತ್ತ ತಿರುಗಿತ್ತು. ಆ ಧಾವಂತದ ಜನ ನೇರ ನನ್ನಲ್ಲಿಗೇ ಬಂದು ಏಕ್‍ದಂ ಜಬರಿದ "ಏನ್ ನೋಡ್ತಾ ಇದ್ದೀರಿ, ನೀರು ಕೊಡಿ, ಬೇಗ." ನನಗೆ ಒಮ್ಮೆಲೆ ರೇಗಿ ಹೋಯ್ತು, "ಬರ್ತಾ ಇದೆ. ನಾವು ದಾರಿಯಲ್ಲಿ ಯಾರೋ ಬೀಳ್ತಾರೇಂತ ನೀರು ಹಿಡಿದುಕೊಂಡು ಕಾಯುತ್ತಿರಲು ಸಾಧ್ಯವೇ?" ಆತ ಪೆಚ್ಚಾದ, ಸಾರಿ ಸಾರಿ ಹೇಳುತ್ತಲೇ ಒಳಗಿನಿಂದ ಬಂದಿದ್ದ ನೀರ ಕುಪ್ಪಿ ಹಿಡಿದು ವಾಪಾಸು ಓಡಿದ. ಅಷ್ಟರಲ್ಲಿ ಅಲ್ಲಿ ಬಿದ್ದವನನ್ನು ಯಾರೋ ರಿಕ್ಷಾಕ್ಕೆ ಹಾಕಿ ಆಸ್ಪತ್ರೆಯತ್ತ ರವಾನಿಸಿದ್ದರು. ಪರೋಪಕಾರಿ ಪಾಪಣ್ಣ ನಮ್ಮ ನೀರಕುಪ್ಪಿಯನ್ನು ಏನು ಮಾಡಿದನೋ ಬಿಟ್ಟನೋ ನಮಗೆ ವಾಪಾಸು ಬರಲಿಲ್ಲ, ಆತನೂ ಅಲ್ಲಿ ಕಾಣಲಿಲ್ಲ.

  ಮೊನ್ನೆ ಮೊನ್ನೆ ಉತ್ತರ ಕರ್ನಾಟಕ, ಆಂಧ್ರಗಳ ನೆರೆಗಾಲದಲ್ಲೂ ಇಂಥವೇ ಸಮಯಸಾಧಕರ ದಾಳಿ ಅಸಂಖ್ಯವಿತ್ತು, ಇರಲೇಬೇಕು. ಅದರ ನಡುವೆ ನಿಜ ಕಾಳಜಿಯವರ ಪ್ರಯತ್ನಗಳೂ ಇರುತ್ತವೆ. ನಮ್ಮ ಸಗಟು ನಿರ್ಧಾರಗಳು ತಪ್ಪೂ ಆಗುವುದಿವೆ ಎಂಬ ಎಚ್ಚರದೊಡನೆ ಒಂದು ‘ತಪ್ಪೊಪ್ಪಿಗೆ’ಯನ್ನು ಬ್ಲಾಗಿಗೇರಿಸಿದ್ದೇನೆ. ನಿಮ್ಮ ಅನುಭವ, ಅನಿಸಿಕೆಗಳ ಅಭಿವ್ಯಕ್ತಿಗೆ Comments box ಇದೆ, ಮರೆಯಬೇಡಿ. ಇಂತು ವಿಶ್ವಾಸಿ.

  ಹೌದು, ಆರಾಧ್ಯರ ಮಾತಿನಂತೆ ಇನ್ನೊಂದೇ ಇಂಥ ಪರಿಸ್ಥಿತಿ ಬಂದರೆ ನಾನು ಮತ್ತೆ ನೀರ ಕುಪ್ಪಿಯನ್ನೋ ಸೀಮಿತ ದೇಣಿಗೆಯನ್ನೋ ಕೊಡದಿರುವುದಿಲ್ಲ.

  ReplyDelete
 5. ಪಂಡಿತಾರಾಧ್ಯ25 October, 2009 22:38

  ಪ್ರೀತಿಯ ಅಶೋಕರಿಗೆ,
  'ಬೆಂದ ಮನೆಯಲ್ಲಿ ಹಿರಿದದ್ದೇ ಲಾಭ' ಎನ್ನುವುದನ್ನು ನಮಗೆ ಮನವರಿಕೆ
  ಮಾಡಿಕೊಡುವ ಪರೋಕಾರ ಬುದ್ಧಿಯ ಪಾಪಣ್ಣರು ಇದ್ದೇ ಇರುತ್ತಾರೆ.
  ಹಾಗೆಂದು (ಪ್ರಾಮಾಣಿಕವೇ ಆದ) ಈ ನೆವದಿಂದ ಅಗತ್ಯವಿರುವವರಿಗೆ
  ಮಾಡಬಹುದಾದ ಸಹಾಯವನ್ನು ಮಾಡದಿರಲು ಸಾಧ್ಯವಿಲ್ಲ.
  'ಕಲಿತ ಪಾಠಕ್ಕೆ ಶುಲ್ಕ ಕುಪ್ಪಿ ' ಅಷ್ಟೆ.
  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 6. ಎಸ್.ಎಂ ಪೆಜತ್ತಾಯ25 October, 2009 22:44

  ಅಶೋಕ ವರ್ಧನರೇ!
  ಇತರರು ಆಪತ್ತಿನಲ್ಲಿರುವಾಗ ಸಂಪತ್ತು ಗಳಿಸುವ ಮನುಜರು ಅನಾದಿಕಾಲದಿಂದಲೂ ಇದ್ದವರೇ! ತಮ್ಮ ಮಿಂಚಂಚೆ ನೋಡಿ ನನಗೆ ಅಚ್ಚರಿ ಆಗಲಿಲ್ಲ.

  ಇಲ್ಲಿ ನನ್ನ ಇಂದಿನ ಅನುಭವ ನೋಡಿ! ಈ ಯುಗದಲ್ಲೂ ಶಿಬಿ ಚಕ್ರವರ್ತಿಗಳು ಇದ್ದಾರೆ!

  ನನಗೆ ಗೊತ್ತಿರುವ ಒಬ್ಬ ಉತ್ತರ ಕರ್ನಾಟಕದ ಸೆಕ್ಯೂರಿಟಿ ವಾಚ್‍ಮ್ಯಾನ್ ನೆರೆಪೀಡಿತ ಪ್ರದೇಶದ ಹತ್ತು ವರ್ಷ ಅನಾಥ ಗಂಡು ಮಗು ಒಂದನ್ನು ಕಾನೂನು ಪ್ರಕಾರ ದತ್ತು ಪಡೆದು ಸಾಕಲು ತೊಡಗಿದ್ದಾನೆ! ಆತನಿಗೆ ಮಕ್ಕಳಿಲ್ಲವೇ? ಎಂದು ಕೇಳಿದರೆ : ನನ್ನದೇ ಮೂರು ಮಕ್ಕಳು ಅದಾವ್ರೀ ಸಾಹೇಬ್ರ! ಒಂದು ಹೆಣ್ಣು ಎರಡು ಗಂಡು. ಆದರೂ, ನಮ್ಮೂರಿಗೆ ಹೋದಾಗ ಈ ಹುಡುಗನನ್ನು ಕಾನೂನು ಪ್ರಕಾರ ದಾಖಲಾತಿ ಮಾಡ್ಸಿಕೊಂಡೇ ದತ್ತು ತೆಗೆದುಕೊಂಡು ಇಲ್ಲಿಗೆ ಕರ್ಕೊಂಡು ಬಂದೀನ್ರಿ. ನನ್ನ ಎಂಡ್ರು ಬಸವ್ವಗೆ ಇನ್ನೂ ಎರಡು ರೊಟ್ಟಿ ಜಾಸ್ತಿ ತಟ್ಟಿ ಈ ಮಗುವಿಗೂ ಹಾಕು! ಅಂತ ಅಂದೀನ್ರಿ!
  ಈಗ ಆ ಮಗೀನ ನನ್ನ ಮಕ್ಕಳ ಜತಿಗಿ ಕಾರ್ಪೋರೇಸನ್ ಇಸ್ಕೂಲಿಗೂ ಸೇರ್ಸೀನ್ರಿ. ಮಧ್ಯಾಹ್ನ ಇಸ್ಕೂಲಾಗೆ ಎಲ್ಲಾ ಮಕ್ಕಳಿಗೂ ಬಿಸಿ ಊಟ ಹಾಕ್ತವ್ರೇ! ಜೀವನ ಹೆಂಗೋ ನಡಿಯುತ್ತೇ ಸರ! ದಿನದ ಶಿಫ್ಟ್ ಆದ ಮೇಲೆ ಹೆಚ್ಚಿಗೆ ನಾಲ್ಕು ತಾಸು ಓವರ್ ಟೈಮ್ ಮಾಡ್ತೀನ್ರೀ! ಆ ಶಿವ ಕೈಬುಡಾಕಿಲ್ಲ! - ಅಂದ ಆ ಸ್ವಾಭಿಮಾನಿ.

  ಆತನಿಗೆ ಕೊಂಚ ಹಣ ಕೊಡ ಹೋದರೆ - ಬ್ಯಾಡ್ರೀ ಸರ! ಬಿಕ್ಷಕ್ಕೆ ಒಂದು ದಪಾ ಕೈ ಚಾಚಿದರ, ಆ ಮ್ಯಾಕೆ ಅದೇ ರೂಢಿ ಆಕೈತ್ರಿ! ಬ್ಯಾಡ್ರೀ ಸಾಹೇಬ್ರ! ಶಿವ ಎಂಗೋ ನಡೆಸ್ತಾನೆ!

  ಆ ಮಹಾಶಯನಿಗೆ ನಾನು ಒಂದು ದಪ ಕೈಮುಗಿದು ಕಾರು ಹತ್ತಿದೆ. ಆತ ಖಂಡಿತವಾಗಿ ನಮ್ಮ ನಾಡಿನ ಜೀವಾಳವಾದ ತ್ರಿವಿಕ್ರಮ!
  ಕೇಸರಿ ಪೆಜತ್ತಾಯ

  ReplyDelete
 7. nimma pustakada angadiyalli " ondu pustakakke ondu nirina batli free" endu board hakidare heege?

  ReplyDelete
 8. ಚಂದ್ರಶೇಖರ ಕಲ್ಕೂರ. ಕರ್ನೂಲು26 October, 2009 22:27

  Namaskara, Gaddehithluravarige. Vandemataram.
  It is not my grandfather, but my elder brothers Late Sri K.Ramachandra Kalkura and Late Sri K.H.Govindna Kalakura, in their early teens (Child Labours), searching greener pasture landed in Kurnool in 1944. By that time our grandfather(1924) and father(1944) were no more.
  I had my literacy; Navabharath Elementary School, Kuradi, Board Highier Elementary School, Barkur, National High School, Barkur and Poornapragna College, Udupi. I had my undergraduate literacy in Osmania College, Kurnool, then affiliated to Sri Venkateswara University. Tirupati and my Bachelor of Law from Government Law College, (Bangalore University) Bengluru. In one my of my earlier mails, I told you that 'what is taught in our academic institutions is only literacy and not education'. (Remember Kannada Subhashita: Thande makkalige balyadolakkarada vidiyeya kalisadirdode kondam. Lakka dhanamirdodam kedugum.). I learnt Telugu from the Hotel workers and customers. I read Modern Telugu literature also. There are references to me, particularly for my love of MOTHER TONGUE in a couple of autobiographies of renowned Telugu Writers and they won Kendra Sahithya Academy Awards. This correction is just for your information.
  Jai Hind, Kalkura.

  ReplyDelete
 9. ಆಂಧ್ರದ ಸಾಹಿತಿಗಳು ಕಲ್ಕೂರ ಅವರು ಮಾತೃಭಾಷಾಪ್ರೇಮ, ಮತ್ತು ಮಾನವೀಯತೆಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುವಷ್ಟು ಅವರನ್ನು ಪ್ರಭಾವಿಸಿರುವುದನ್ನು ತಿಳಿದು ತುಂಬ ಸಂತೋಷವಾಯಿತು. ದೇಶಾದ್ಯಂತ ಉದ್ಯೋಗ ಅರಸಿ ಹೋಗಿರುವ ಬಹಳಷ್ಟು (ದಕ್ಷಿಣ) ಕನ್ನಡಿಗರು ಸ್ಥಳೀಯರ ಅಭಿಮಾನ ಗೌರವಗಳಿಗೆ ಪಾತ್ರರಾಗರುವುದು ಅಭಿಮಾನದ ಸಂಗತಿ.
  ಕಲ್ಕೂರ ಅವರಿಗೆ ಪ್ರೀತಿಯ ಅಭಿನಂದನೆಗಳು.

  ReplyDelete
 10. ರಾಘವೇಂದ್ರ ಭಟ್ಟ27 October, 2009 13:49

  Daer Sri Ashok,
  You are absolutely correct in assessing the present mood of the hawks that conirm the proverb -- benda maneyalli hiridadde laabha --because these are the very people who come under the category
  of ' gaLu eNisuva puNyaatmaru".
  Namaskaara
  S R Bhatta

  ReplyDelete
 11. ಗೋವಿಂದ ಭಟ್29 October, 2009 13:49

  ಪ್ರಿಯ ಅಶೋಕರೇ
  ಸುಂದರ ರಾಯರ ಚುಟುಕು ಚೆನ್ನಾಗಿತ್ತು.
  ಮಕ್ಕಳ ಶಾಲೆಯಲ್ಲಿ ಬಕೇಟು ಇತ್ತು. ಪ್ರಜಾವಾಣಿಗೂ ಸದ್ಯದಲ್ಲಿ ಕಳುಹಿಸುತ್ತೇನೆ. ನಿಮ್ಮ ಬರಹ ಸಕಾಲಿಕವಾಗಿತ್ತು. ಈ ರಾಜಕೀಯದವರ ನೋಡುತ್ತಾ ನೆರೆ ಸಂತ್ರಸ್ತರ ಮರೆಯುವುದು ಸರಿಯಲ್ಲ.
  ಪ್ರೀತಿಯಿಂದ
  ಗೋವಿಂದ

  ReplyDelete
 12. ಪ್ರಿಯ ಅಶೋಕವರ್ಧನರೇ,

  ತರತರದ ‘ಸಂತ್ರಸ್ಥ’ರನ್ನು ನಾನೂ ಹಲವಾರು ಬಾರಿ ಜೀವನದಲ್ಲಿ ಎದುರುಗೊಂಡಿದ್ದೇನೆ, ಮುಂದೆಯೂ ಕಾಣುತ್ತೇನೆ. ಕೆಲವೊಮ್ಮೆ ‘ಕೈಲಾದಷ್ಟು’ ಸಹಾಯ ಮಾಡುತ್ತೇವೆ, ಇನ್ನು ಕೆಲವೊಮ್ಮೆ ಇವರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಹಲವಾರು ಅಡಚಣೆಗಳಿರುತ್ತವೆ, ಉತ್ತರವಿಲ್ಲದ ಪ್ರಶ್ನೆಗಳೂ ಎದುರಾಗುತ್ತವೆ. ಕೊನೆಗೆ ಕೆಲವೊಮ್ಮೆ ಏನೂ ಮಾಡದೆ ಮೌನವಾಗಿಬಿಡುವ ಸಂದರ್ಭಗಳೂ ಇವೆ, ಇಲ್ಲದ್ದಿಲ್ಲ.

  ನಿಮ್ಮ ಕೆಲವು ಲೇಖನಗಳು ನನ್ನನ್ನೂ ಸವಿವರವಾಗಿ ಬರೆಯಲು ಪ್ರೇರೇಪಿಸುತ್ತವೆ. ಈ ವಿಷಯವಾಗಿ ವಿವರವಾಗಿ ಬರೆಯುವೆ, ಸ್ವಂತ ಅನುಭವಗಳನ್ನು ಹಾಗೂ ಅನಿಸಿಕೆಗಳನ್ನು - ಆದರೆ ಸಾಕಷ್ಟು ಸಮಯ ಹಿಡಿಯಬಹುದು, ಯಾಕೆಂದರೆ ಇದು ಬಲು ಕ್ಲಿಷ್ಟವಾದ ವಿಷಯ.

  ಇತಿ,
  ಕೃಷ್ಣ ಶಾಸ್ತ್ರಿ.

  ReplyDelete