
[ಸುಮಾರು ಇಪ್ಪತ್ತು ವರ್ಷ ಕಳೆದು ಬಂದೊಬ್ಬ ಪ್ರಸಾರಾಂಗ ನಿರ್ದೇಶಕನ ‘ಬಯೋಡೇಟಾ ಉತ್ತಮ ಪಡಿಸುವ ಯೋಜನೆಯಲ್ಲಿ’, ಈ ಪ್ರಬಂಧ ಗೋಷ್ಠಿಯ ಇತರ ಲಭ್ಯ ಪ್ರಬಂಧಗಳೊಡನೆ ‘ಕನ್ನಡ ಗ್ರಂಥೋದ್ಯಮ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಪ್ರಸಾರಾಂಗದ ಈ ಪ್ರಕಟಣೆಯ ಮುದ್ರಣ ಇತಿಹಾಸ ಗಮನಾರ್ಹ: ಕಲಾಪ ೧೯೮೩ರದ್ದು. ಆ ಪುಸ್ತಕದಲ್ಲೇ ಉಲ್ಲೇಖಿಸಿದಂತೆ ಮುದ್ರಣ ಆಜ್ಞೆ ೧೯೯೩. ಮುದ್ರಿತ ಪ್ರಕಟಣಾ ವರ್ಷ ೧೯೯೭. ಪುಸ್ತಕದ ಮುನ್ನುಡಿಯ ಕಾಲಮಾನ ೧೯೯೮. ಲೇಖಕನಾದ ನನಗೆ ಅಂದರೆ ಪರೋಕ್ಷವಾಗಿ ಮಾರುಕಟ್ಟೆಗೆ ಪ್ರತಿಗಳು ಬಿಡುಗಡೆಗೊಂಡ ವರ್ಷ ಸುಮಾರು ೨೦೦೨; ತುಟಿಗೂ ತುತ್ತಿಗೂ ನಡುವಣ ಕಂದರ!]
“ನಾನೇ ಅದರ ಪ್ರಾದೇಶಿಕ ಸಂಘಟಕ ಸಾರ್. ಪುಸ್ತಕೋದ್ಯಮದಲ್ಲಿ ಮಾರಾಟಗಾರನ ಪಾತ್ರವನ್ನು ಕುರಿತಂತೆ ಮಾತಾಡೋದ್ರಲ್ಲಿ ನೀವು ಭಾರೀ ಫೇಮಸ್ಸೂ ಬಿಡಿ ಸಾರ್. . . . . . . .”
೧೯೮೫ರ ಕನ್ನಡದ ಪ್ರಥಮ ವಿಶ್ವಸಮ್ಮೇಳನದ (ಮೈಸೂರು) ಗೋಷ್ಠಿ ವೇದಿಕೆಯಿಂದಲೂ ನನಗೆ ಮತ್ತದೇ ಕರೆ. ಮಸೆಗೊರಡಿನ ಮೇಲೆ ಮತ್ತಷ್ಟು ಬೆಣಚುಕಲ್ಲ ಪುಡಿ ಹಾಕಿ ೮೩ರ ಪ್ರಬಂಧವನ್ನು ತಿಕ್ಕಿ ತೀಡಿ ಸಜ್ಜುಗೊಂಡೆ. ಆಗ ತಾನೇ ಉದ್ಘಾಟನೆಗೊಂಡಿದ್ದ ಭವ್ಯ ಕಲಾರಂಗದ ಹೊರಗೂ ಒಳಗೂ ಏನ್ಜನಾ ಸಾರ್ ಏನ್ಜನಾ! “ನಾನು ವೇದಿಕೆ ಮೇಲಿರಬೇಕಾದವ್ನೂಊಊ” ಎಂದು ಮೊಣಕೈ ಮುಂದೂಡಿ ದಾರಿ ಬಿಡಿಸಿಕೊಂಡು ಹೋಗುವಷ್ಟೂ ಜಗುಲಿ, ಕುರ್ಚಿಸಾಲುಗಳ ನಡುವಣ ಓಣಿಯಲ್ಲಿ, ಕಡೇಗೆ ವೇದಿಕೆಯ ಮೇಲೂ ಜನವೋ ಜನ. ಸಭೆ ಸುರುವಾಗುವ ಮೊದಲೇ (ಹಿಂದೆ ನನಗೆ ವಿದ್ಯಾಗುರುವಾಗಿದ್ದ) ಆಲನಹಳ್ಳಿ ಕೃಷ್ಣ ಬಂದು “ರ್ರೀ ಅಶೋಕ್ ಸಭೆಗೆ ನಿಮ್ಮನ್ನು ಪರಿಚಯಿಸುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ, ಏನಾರ ನಾಲ್ಕು ಸಾಲು ಬರಕೊಡ್ರೀ” ಎಂದು ಖಾಲಿ ಹಾಳೆ ಕೈಗೆ ತುರುಕಿ ನಾಪಾತ್ತೆಯಾದ್ದೂ ಆಯ್ತು, ವಾಸ್ತವದ ನನ್ನ ಪರಿಚಯ ಭಾಷಣ ಗಡಿನಾಡ ಕಿಡಿ, ಕವಿ ಕಯ್ಯಾರ ಕಿಞ್ಞಣ್ಣರೈಗಳು (ಸಮ್ಮೇಳನದ ಸ್ವಾಗತ ಸಮಿತಿಯ ಓರ್ವ ಪದಾಧಿಕಾರಿಯ ನೆಲೆಯಲ್ಲಿ ಮತ್ತು ಅನೌಪಚಾರಿಕವಾಗಿ ನನ್ನನ್ನು ಸಾಕಷ್ಟು ಬಲ್ಲವದಾದ್ದರಿಂದ ನನ್ನಿಂದೇನೂ ಟಿಪ್ಪಣಿ ಬಯಸದೇ) ನಡೆಸಿದ್ದೂ ಆಯ್ತು! ಮೈಸೂರಿನ ಕಲಾಮಂದಿರದ ಭವ್ಯ ವೇದಿಕೆಯ ಮೇಲೆ ಪ್ರಬಂಧವನ್ನು ಓದಿಯೇ ಬಿಟ್ಟೆ; ನನ್ನ ಮಟ್ಟಿಗೆ ಅದು ‘ಚಿಕಾಗೋ ಉಪನ್ಯಾಸ’. ಕಿಕ್ಕಿರಿದ ವೇದಿಕೆಯಲ್ಲೂ ಜನಸಾಗರವೇ ಆಗಿದ್ದ ಸಭೆಯಲ್ಲೂ ಅಸಂಖ್ಯ ವಿದ್ವನ್ಮಣಿಗಳೂ ಉದ್ಯಮ ಪರಿಣತರೂ ಗಿಡಿದು ತುಂಬಿದ್ದರು. ಒಂದೆರಡು ಕಡೆ ನಾಲಗೆಯಲ್ಲಿ ಪಸೆಯೊಣಗಿ ತಡವರಿಸಿದೆ. ಬರಹಕ್ಕೆ ಆಡುನುಡಿಯ ಸ್ಪರ್ಶ ಕೊಡುವಲ್ಲಿ ಅಥವಾ ನಾಟಕೀಯ ಸ್ವರಭಾರ ಕೊಡುವಲ್ಲಿ ನಾನು ವಿಫಲನೂ ಆಗಿರಬೇಕು (ಈಗಲೂ ಅಷ್ಟೇ). ಆದರೂ ಹಾಸ್ಯ, ವ್ಯಂಗ್ಯ, ಗಂಭೀರ ಭಾವಗಳನ್ನು ಸಹೃದಯ ಸಭೆ ಭಾರೀ ಪ್ರಕ್ರಿಯೆಯಿಂದ ಸ್ವೀಕರಿಸಿದ್ದಂತೂ ಇಂದಿಗೂ ಮರೆಯಲಾರೆ.
[ಈ ಪ್ರಬಂಧ ಎರಡು ವರ್ಷ ಕಳೆದು (೧೯೮೬) ನಾಲ್ಕು ಸಂಪುಟಗಳಲ್ಲಿ ಪ್ರಕಟವಾದ ‘ವಿಶ್ವ ಕನ್ನಡ’ ಮಾಲಿಕೆಯ ಸಂಪುಟ ಎರಡರಲ್ಲಿ ಸೇರಿದೆ. ನನ್ನದೇ ‘ಪುಸ್ತಕ ಮಾರಾಟ ಹೋರಾಟ’ದಲ್ಲೂ (೧೯೯೯) ಸೇರಿಕೊಂಡಿದೆ.]
“ಉದ್ಯಮಿಗಳಿಗೆಲ್ಲಾ ನಿಮ್ಮ ಅನುಭವ ದಕ್ಕಬೇಕು, ಮಾತಿನ ಖಡಕ್ ನಾಟಬೇಕೂ ಸಾರ್. . . . . . .”

“ನಿಮಗೆ ಅನುಕೂಲವಾಗಬೇಕೂಂತನೇ ಭಾನುವಾರ ಇಟ್ಟುಕೊಂಡಿದ್ದೇವೆ. ರಜಾದಿನ ಅಲ್ದೇ ಹೋದ್ರೆ ಬೇರೆ ಬುಕ್ ಸೆಲ್ಲರ್ಸ್ಗೆಲ್ಲಾ ನಿಮ್ಮೆಕ್ಸ್ಪೀರಿಯೆನ್ಸ್ ತಲ್ಪೋದಾದ್ರೂ ಹೇಗೇ ಸಾರ್ . . . . . . . .”
“ಗೋಷ್ಠಿಯಲ್ಲ, ಕಮ್ಮಟ. ಸಾರ್ವಜನಿಕರಿಗಲ್ಲ, ಬರಿಯ ಪುಸ್ತಕೋದ್ಯಮಿಗಳಿಗೆ ಮಾತ್ರ. ಒಂದು ಕಟ್ಟಿನಲ್ಲಿ ಬರುವ ಪ್ರಬಂಧ ಬೇಕಾಗಿಲ್ಲ, ಸ್ಪಷ್ಟ ಸೂಚನೆಗಳ ಟಿಪ್ಪಣಿಗಳಷ್ಟೇ ಸಾಕು” ಎಂದಿತ್ಯಾದಿ ಈ ಬಾರಿ ಕತ್ತೆಯೆದುರು ಮೂಲಂಗಿ ಕಟ್ಟಿದವರು ಎಲ್.ಎಸ್ ಶೇಷಗಿರಿ ರಾವ್. ಆಮಂತ್ರಣವನ್ನು ಯಾವುದೋ ಇಲಾಖೆಯ ಉಪೋಪ ಶಾಖೆಯ, ಕುರ್ಚಿಯಿಂದ ಹೆಸರಾಂತವರು ಅಧಿಕೃತಗೊಳಿಸಿದ್ದಲ್ಲ. ಕನ್ನಡ ಕಾಳಜಿ ಮತ್ತು ಶುದ್ಧ ಹಸ್ತಗಳಿಗೆ ಹೆಸರಾದ ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶಕರಾಗಿದ್ದ ಹಿರಿಯರೊಬ್ಬರು (ಅವರು ಕ್ಷಮಿಸಬೇಕು, ಇಂದು ನಾನವರ ಹೆಸರು ಮರೆತಿದ್ದೇನೆ.) ಸಹಿ ಮಾಡಿ ಮನವಿ ಪತ್ರವನ್ನೂ ಕಳಿಸಿಕೊಟ್ಟರು. ನಾನು ಬೆಂಗಳೂರಿಗೆ ಹೋದೆ. ಕಮ್ಮಟ ಪುರಭವನದಲ್ಲೇ ನಡೆಯಿತಾದರೂ ಭೂರೀ ಸಭಾಭವನ ಬಿಟ್ಟು ಪಕ್ಕದ ಮಧ್ಯಮ ಗಾತ್ರದ ಕೋಣೆಯಲ್ಲಿ, ಆಪ್ತ ಶೈಲಿಯಲ್ಲಿ ಸಜ್ಜುಗೊಂಡಿತ್ತು. ಇಲಾಖೆಯ ನಿರ್ದೇಶಕ, ಎಲ್ಲೆಸ್ಸೆಸ್ ಅಲ್ಲದೆ ವಿಶೇಷ ಆಹ್ವಾನಿತರಾದ ನಾವು ಎರಡೋ ಮೂರು ಮಂದಿಯಷ್ಟೇ ಪುಟ್ಟ ವೇದಿಕೆಯ ಮೇಲೆ. ಹೆಚ್ಚು ಕಡಿಮೆ ಸುತ್ತುವರಿದಂತೆ ಉಳಿದೆಲ್ಲರೂ ಕುಳಿತಿದ್ದರು. ಅವರಲ್ಲಿ ಹೆಚ್ಚಿನವರು, ನನಗೆ ಪೂರ್ವಭಾವಿಯಾಗಿ ಎಲ್ಲೆಸ್ಸೆಸ್ ಕೊಟ್ಟ ಆಶ್ವಾಸನೆಯಂತೇ ಸಾಮಾನ್ಯವಾಗಿ ಯಾವುದೇ ಸಮ್ಮೇಳನ ಗೋಷ್ಠಿಗಳಲ್ಲಿ ಕಾಣಸಿಗದ ಕನ್ನಡ ಪ್ರಕಾಶಕ, ವಿತರಕರು. ಇಲಾಖೆಯ ನಿರ್ದೇಶಕರ ಆಶಯದ ಮಾತುಗಳಲ್ಲಿ ನಾನು ಗ್ರಹಿಸಿದು ಇಷ್ಟು: ವೇದಿಕೆಯ ಮೇಲಿನ ನಮಗೆ (ಕಲ್ಲಿನ ಕೋರೆಯೊಂದರಲ್ಲಿ ಭಾರೀ ಬಿಂಬವೊಂದನ್ನುದ್ದೇಶಿಸಿ, ಘನ ಬಂಡೆಯ ತುಂಡನ್ನು ಗುರುತಿಸಿ, ಎಬ್ಬಿಸಿ, ಅಂತಿಮ ರೂಪದವರೆಗೆ ನಿರ್ದೇಶಿಸಲು ಅನುಕೂಲವಾಗುವಂತೆ) ತುಸು ದೀರ್ಘ ಮಾತಿನವಕಾಶ. ಆದರೆ ಕೊನೆಯಲ್ಲಿ ಮೂಡುವ ಬಿಂಬ ಏನಿದ್ದರೂ ಸಮಷ್ಟಿಯ ಚರ್ಚೆಯ ಚಾಣದ ಪೆಟ್ಟಿನಲ್ಲಾಗಬೇಕಿತ್ತು. ಸಭೆಗೂ ತಿಂಗಳ ಮೊದಲೇ ನನ್ನಂಥವರು ಹಾಕಿದ “ಐಸಾsssss” ಗದ್ದಲ ಕೇಳಿ ಶತಾವಧಾನಿ ಗಣೇಶರಂಥವರೂ ಕಮ್ಮಟಕ್ಕೆ ಬಂದವರು, ಕಣ್ಣು ಬಿಡಿಸುವ ನುಡಿಕಿಡಿ ರಟ್ಟಿಸಿದ್ದೂ ಆಯ್ತು. ನೆನಪಿಡಿ ಅದು ಇಸವಿ ೧೯೯೩. ಅದು ವಾಸ್ತವದಲ್ಲಿ ನಮಗೆ ಸ್ಪಷ್ಟ ಸೂಚನೆ ಕೊಡದೇ ಪ್ರಕಟವಾದ - ಕನ್ನಡ ಪುಸ್ತಕ ಪ್ರಾಧಿಕಾರದ ಹೆರಿಗೆನೋವು! ಸಭೆಯ ಚರ್ಚೆಗಳನ್ನು ನಿರ್ವಹಿಸಿದವರ ಕ್ರಮದಲ್ಲಿ ನಾನು ಬೇಗನೇ ಕಂಡುಕೊಂಡೆ, ನಾವು ದೂರದೂರದಿಂದ ಬಂದ ಬುದ್ಧಿವಂತರೇ ಇರಬಹುದು, ಆದರೆ ಇಲ್ಲಿ ‘ಪುಸ್ತಕೋದ್ಯಮದ ರಕ್ಷಕ’ನ ಅವತರಣಕ್ಕೆ ಕೇವಲ ಸಾಕ್ಷಿಗಳು.
“ಮತ್ತೆ ಗೋಷ್ಠಿಯ ನೆಪದಲ್ಲಿ ಮೈಸೂರಿನ ನಿಮ್ಮ ಮನೆಗೂ ಬಂದಂತಾಗುತ್ತಲ್ವೇ ಸಾರ್. . . . . . .”
ಹೌದು ನಿಮ್ಮನೆ, ನಿಮ್ಮೂರು, ನಿಮ್ಮವೇದಿಕೆ ಈ ಹುಚ್ಚು ಭಾವವೇ ಮತ್ತೆ ಮತ್ತೆ ನನ್ನನ್ನು ಎಲ್ಲೆಲ್ಲಿಗೋ ಎಳೆಯಿತು. ಮಲ್ಲೇಪುರಂ ಜಿ. ವೆಂಕಟೇಶ್ ಕಪುಪ್ರಾ ಅಧ್ಯಕ್ಷರಾಗಿದ್ದಾಗ “ನಿಮ್ಮೂರು ಎನ್ನೀ (ನನ್ನ ಪ್ರಯೋಗಭೂಮಿ - ಅಭಯಾರಣ್ಯ, ಅದರೊಳಗಿನ ‘ಕಾಡ್ಮನೆ’ ಇರುವುದು ಬಂಟ್ವಾಳ ತಾಲೂಕಿನಲ್ಲೇ!) ‘ನಿಮ್ಮವನೇ’ ಎಂದರೂ ಸರಿ” ಎಂದು ದುಂಬಾಲು ಬಿದ್ದು, ಬಂಟ್ವಾಳದ ಪುಸ್ತಕ ಮೇಳದ ಗೋಷ್ಠಿಯಲ್ಲಿ ಆಶಯ ಭಾಷಣಕ್ಕೆ ನನ್ನನ್ನು ಒಪ್ಪಿಸಿಬಿಟ್ಟರು. ಹೋಗಿದ್ದೆ, ವೇದಿಕೆ ಮೇಲೆ ಹನ್ನೆರಡು ಮಂದಿ, ಸಭೆಯಲ್ಲಿ ನಾಲ್ಕು ಮಂದಿ. ನನ್ನ ದೇದೀಪ್ಯಮಾನವಾದ ವಾಕ್ ಶಲಾಕಗಳಿಂದ ತನ್ನವಧಿಯುದ್ದಕ್ಕೆ ದಾರಿ ಬೆಳಗಿಸಿಕೊಳ್ಳುತ್ತೇನೆಂದ ಕಪುಪ್ರಾದ ಅಧ್ಯಕ್ಷರೇ ನಾಪತ್ತೆ. ಶಂಖ ಊದಿ ಸುಮ್ಮನುಳಿಯಲಿಲ್ಲ ದಾಸಯ್ಯ. ಪತ್ರಿಕಾಲೇಖನ ಮಾಡಿ ಜಾಗಂಟೆ ಬಡಿದೆ. ಸಲಹೆಗಳನ್ನು ಅಳವಡಿಸಿಕೊಳ್ಳುವುದಿರಲಿ, ಕನಿಷ್ಠ ಓದಿ ಪ್ರತಿಕ್ರಿಯಿಸಿಯಾರೆಂದು ಪ್ರಬಂಧವನ್ನು ಅಂಚೆಯಲ್ಲಿ ಅಧ್ಯಕ್ಷರಿಗೆ ಕಳಿಸಿಕೊಟ್ಟೆ, “ವೆಂಕಟೇಶ ಗೋವಿಂದಾssss ಗೋsssssssವಿಂದ.” ನಿರುತ್ತರ ಕಂಡಾಗ ಯಾರದ್ದೋ ಮಂಡೆಗೆ ಚುರುಕಾಯಿಸಲು ಅಂಚೆವೆಚ್ಚ ವ್ಯರ್ಥ ಮಾಡುವ ಬದಲು ಇಲ್ಲೇ ಆ ಲೇಖನಕ್ಕೆ ಕಿಡಿ ಮುಟ್ಟಿಸಿದ್ದರೆ ಹಂಡೇ ನೀರಾದರೂ ಚೂರು ಕಾಯ್ತಿತ್ತು ಅನ್ನಿಸಿದ್ದು ಸುಳ್ಳಲ್ಲ.
ಅಖಿಳ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮುಧೋಳದಲ್ಲೂ (ಎಚ್.ಎಲ್ ನಾಗೇಗೌಡರ ಅಧ್ಯಕ್ಷತೆ) ಯಾವುದೋ ಮಾಯೆಗೊಳಪಟ್ಟು ಪುಸ್ತಕೋದ್ಯಮೋದ್ಧಾರಕನಾಗಿ ಸಿಕ್ಕಿಬಿದ್ದೆ. ನ್ಯುಮೋನಿಯಾದ ಜ್ವರ ಪೂರ್ತಿ ಬಿಡುವ ಮುನ್ನ ಒಬ್ಬನೇ ರಾತ್ರಿ ಬಸ್ಸೇರಿ ಹೊರಟ ತಪ್ಪಿಗೆ ಹುಬ್ಬಳ್ಳಿಯಲ್ಲಿ ಹೋಟೆಲ್ ರೂಮು ಹಿಡಿದು, ಅರೆಬರೆ ಚೇತರಿಸಿಕೊಂಡು ಮುಧೋಳ ತಲುಪಿದ್ದೆ. ಪ್ರಬಂಧ ಓದಿ ಮುಗಿಸಿದಾಗ ಸಿಕ್ಕಿದ ಒಂದೇ ಪ್ರಾಮಾಣಿಕ ಸಮ್ಮಾನ ಸಮಾಜ ಪುಸ್ತಕಾಲಯದ ರವಿ ಘಾಣೇಕರ್ ಕೊಟ್ಟ ಎಳನೀರು! ಅಂಕೋಲಾದಲ್ಲಿ ವಿಷ್ಣು ನಾಯ್ಕರ ವ್ಯವಸ್ಥೆಯಲ್ಲಿ ನಡೆದ ಕಪುಪ್ರಾದ ಕಮ್ಮಟಕ್ಕಾಗುವಾಗ ನನ್ನದೇ ವೇದಿಕೆ ಎಂಬ ಭ್ರಮೆ ಅಡರಿತ್ತು. ಸಾಲದ್ದಕ್ಕೆ ಅಂದಿನ ಕಪುಪ್ರಾದ ಅಧ್ಯಕ್ಷ ಎಸ್.ಜಿ ಸಿದ್ಧರಾಮಯ್ಯನವರ ಪ್ರಭಾವಳಿಯಾದರೋ ನನ್ನ (ಸರಕಾರೀ ಪುಸ್ತಕೋದ್ಯಮದ ಕುರಿತ) ನಾಸ್ತಿಕ್ಯವನ್ನೂ ಅಲುಗಾಡಿಸುವಂತಿತ್ತು. ನನಗೇನೂ ಮಹತ್ವದ ಪಾತ್ರವಿರದಿದ್ದರೂ ಅಂಕೋಲಕ್ಕೆ ಹೋದೆ, (ಅ-)ದಕ್ಷಯಾಗಕ್ಕೆ ಹೋದ ಶಿವೆಯಂತೆ ಕುದ್ದುಹೋದೆ. ಅಸಹನೆಯ ಉತ್ತುಂಗದಲ್ಲಿ ನಾಲ್ಕು ನುಡಿಯಾಡಿದೆ. ಅನ್ಯಾಯವನ್ನು ಸಹಿಸದ ವಿಟ್ಠಪ್ಪ ಭಂಡಾರಿಗಳಾದಿ (ಯಾಗಮಂಟಪದಲ್ಲಿದ್ದ ದೇವರ್ಕಳಂತೆ) ಆತಿಥೇಯತನದ ದಾಕ್ಷಿಣ್ಯದಲ್ಲೋ ಏನೋ ಮೌನಿಗಳಾಗಿದ್ದರು. ನಾನು ಸಭಾತ್ಯಾಗ ಮಾಡಿದರೂ ಪತ್ರವ್ಯವಾಹಾರದಲ್ಲಿ ತಾರ್ಕಿಕ ಕೊನೆ ಅನ್ವೇಷಿಸಿ ಬಹುಕಾಲ ಹೆಣಗಿದೆ. ಅಷ್ಟೆ.
“ಸ್ವತಃ ಅಧ್ಯಕ್ಷ ಸಿದ್ಧಲಿಂಗಯ್ಯನವರು ಗೋಷ್ಠಿಯಲ್ಲಿ ಭಾಗವಹಿಸ್ತಾರೆ ಸಾರ್. ಅವ್ರೂ. . . . . . . .”
ಸಿದ್ಧಲಿಂಗಯ್ಯನವರು ಕಪುಪ್ರಾ ಅಧ್ಯಕ್ಷತೆ ವಹಿಸಿಕೊಂಡ ಹೊಸತರಲ್ಲಿ ಒಮ್ಮೆ ನನಗೆ ಒಂದಲ್ಲ, ಮೂರು ಪ್ರತಿ ಒಂದೇ ಆಮಂತ್ರಣ ಬಂದಿತ್ತು! ಕಪುಪ್ರಾದಿಂದ ನೇರ, ದಕ ಜಿಲ್ಲಾಧಿಕಾರಿ ಕಛೇರಿಯಿಂದ ಮತ್ತು ಕಸಾಪ ಜಿಲ್ಲಾಧ್ಯಕ್ಷರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಅಂಚೆಯಲ್ಲಿ ಬಂದ ಇವುಗಳ ಸಾರಾಂಶ ಒಂದೇ - ‘ಇಂಥಾ ಒಂದು ದಿನ ಕಪುಪ್ರಾ ಅಧ್ಯಕ್ಷರು ಮಂಗಳೂರಿಗೆ ಬರುತ್ತಿದ್ದಾರೆ. ಪುಸ್ತಕ ಪ್ರೇಮಿಗಳಾದ ನಿಮ್ಮಂಥವರೊಡನೆ ಅನೌಪಚಾರಿಕ ವಿಚಾರ ವಿನಿಮಯ ಅವರ ಉದ್ದೇಶ. ದಯವಿಟ್ಟು ಪಾಲ್ಗೊಳ್ಳಿ.’ ಅಂದೇ ನಾನು ಮಹಾಸಿನಿಕತನದಲ್ಲಿ ಹೋಗದಿರುವ ದೃಢ ನಿರ್ಧಾರ ಮಾಡಿದ್ದರಿಂದ ಮತ್ತಿನ ತಿದ್ದುಪಡಿಗಳನ್ನು ಗಂಭೀರವಾಗಿ ಗಮನಿಸಿರಲಿಲ್ಲ. ಅದು ಒಮ್ಮೆ ತಿದ್ದುಪಡಿಯ ಪತ್ರದೊಡನೆ ಮತ್ತೊಮ್ಮೆ ಕೇವಲ ಪತ್ರಿಕಾ ಪ್ರಕಟನೆಯೊಡನೆ ಮುಂದೆ ಮುಂದೆ ಹೋಗಿ ಎಂದೋ ನಡೆದಿರಬೇಕು. ಆ ದಿನ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಫೋನಾಯಿಸಿದರು “ಅಶೋಕವರ್ಧನ್ ಈಗ ನೀವು ಅಂಗಡೀಲೇ ಇರ್ತೀರಲ್ಲಾ? ಅಧ್ಯಕ್ಷ ಸಿದ್ಧಲಿಂಗಯ್ಯನವರು ನಿಮ್ಮನ್ನು ಅಲ್ಲಿಗೇ ಬಂದು ಭೇಟಿ ಮಾಡಬಹುದೇ?” ನನಗೆ ತಿರಸ್ಕರಿಸಲು ಯಾವ ಕಾರಣವೂ ಇರಲಿಲ್ಲ ಎನ್ನಲೇ ಸಮ್ಮಾನವೇ ಆಯ್ತು ಎನ್ನಲೇ! ಅವರು ಖ್ಯಾತಿಯ, ಅಧಿಕಾರದ ಹಮ್ಮುಗಳೇನೂ ಇಲ್ಲದೆ ಬಂದರು. ಅವರ ಯಾವುದೋ ಮೀಟಿಂಗೂ ಕಾಸರಗೋಡು ಭೇಟಿಂಗೂ (ಕ್ಷಮಿಸಿ, ವಿಜಿಟಿಂಗೂ) ಎಂದೆಲ್ಲಾ ಸಂಯೋಜಕ ಕಲ್ಕೂರರು ಥಕಥಕ ನಡೆಸಿರುವಾಗಲೇ ಸಿದ್ಧಲಿಂಗಯ್ಯ ತಣ್ಣಗೆ ಒಂದೂವರೆ ಗಂಟೆಯ ಕಾಲ ನನ್ನ ಸಂಗ್ರಹಗಳ ಮೇಲೆ ಕಣ್ಣೂ, ಕೈಯೂ ಆಡಿಸಿ ಸುಮಾರು ಎರಡು ಸಾವಿರಕ್ಕೂ ಮಿಕ್ಕು ಮೌಲ್ಯದ ಪುಸ್ತಕಗಳನ್ನು ಸ್ವಂತಕ್ಕೆ ನಗದು ಕೊಟ್ಟು ಖರೀದಿಸಿದರು.
ಸಿದ್ಧಲಿಂಗಯ್ಯನವರು ಒಳಗೆ ಬರುತ್ತಿದ್ದಂತೇ ಈಚೆಗೆ ಎಲ್ಲಾ ಕನ್ನಡಮ್ಮನ ಆವೇಶದವರು ಕೇಳುವಂತೆ ಕನ್ನಡ ಪುಸ್ತಕಗಳ ಮಾರಾಟದ ಬಗ್ಗೆಯೇ ಮೊದಲ ಪ್ರಶ್ನೆ ಎಸೆದರು. “ರಿಸರ್ವೇಶನ್ ಅಡಿಯಲ್ಲಿ ವ್ಯಾಪಾರಕ್ಕೆ ಏನೂ ತೊಂದರೆಯಿಲ್ಲ” ಎಂದು ಬಿಟ್ಟೆ. ಅವರ ಹುಬ್ಬು ಮೇಲೆ ಹಾರಿತು. ನಾನೇ ಕಟಕಿಯಿಲ್ಲದೆ ವಿವರಿಸಿದೆ - ಸರಕಾರದ ಆಜ್ಞೆ, ಅನುದಾನ, ಗ್ರಂಥಾಲಯ ಪಾಲುಪಟ್ಟಿಗಳೆಲ್ಲದರಲ್ಲೂ ಕನ್ನಡಕ್ಕೆ ವಿಶೇಷ ಮಣೆ ಕಾಯ್ದಿರಿಸಲಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆಯಲು ರುಚಿ ಶುದ್ಧವಿರುವ ಕನ್ನಡಿಗರಿಲ್ಲ (ಭಾಷಾ ಅಧ್ಯಾಪಕರು ಸರ್ವಜ್ಞರಲ್ಲ), ಕೊಡಲು ವಿಷಯ ವೈವಿಧ್ಯದ ಪ್ರಕಟಣೆಗಳೂ ಇಲ್ಲ. ದಿನ ನೂಕಿ, ಆರ್ಥಿಕ ವರ್ಷದ ಕೊನೆಗೆ ಅನುದಾನ ರದ್ಧಾಗುವ ಅಥವಾ ಈ ವರ್ಷದ ಕೊರೆ ಗಮನಿಸಿ ಬರುವ ವರ್ಷದ್ದಕ್ಕೆ ಕಡಿತ ಬೀಳುವ ಭಯದಿಂದ ಗ್ರಂಥಪಾಲರೇ ಇದ್ದದ್ದನ್ನು ತುಂಬುವ ಕ್ರಿಯೆಯಿಂದ ಮಾರಾಟಗಾರರು ಆರ್ಥಿಕವಾಗಿ ಕುಶಿಯಲ್ಲೇ ಇದ್ದೇವೆ. ಕಪುಪ್ರಾದ ಬಗ್ಗೆ ಇತರ ಕನ್ನಡ ಪ್ರಕಟಣೆಗಳ ಬಗ್ಗೆ ಅವರ ಪ್ರಶ್ನೆಗಳು ವಿಸ್ತರಿಸುತ್ತಿದ್ದಂತೆ ನನ್ನ ‘ಪುಸ್ತಕ ಮಾರಾಟ ಹೋರಾಟ’ ಪುಸ್ತಕವನ್ನೇ ಅವರಿಗೆ ತೋರಿಸಿದೆ. ನಾನು ಅದನ್ನವರಿಗೆ ಗೌರವಪ್ರತಿಯಾಗಿ ಕೊಡುವುದಿರಲಿ, ನಗದಿಗೆ ಮಾರಲೂ ಪ್ರತಿಗಳು ಮುಗಿದಿವೆ ಎಂದು ಕೇಳಿ ನಿರಾಶರಾದರು. ಕೊನೆಗೆ ಕಪುಪ್ರಾದ ಬಗೆಗಿನ ಅದರ ಒಂದು ಅಧ್ಯಾಯವನ್ನು ಮಾತ್ರ ನೆರಳಚ್ಚು ಮಾಡಿಸಿ ಕೊಟ್ಟು ಸುಧಾರಿಸಿದೆ. ಹೋಗುವ ಮುನ್ನ “ಬೆಂಗಳೂರಿಗೆ ಬನ್ನಿ, ಹೀಗೇ ಬಂದಾಗಲೂ ಭೇಟಿಯಾಗಿ. ತುಂಬಾ ಮಾತಾಡುವುದಿದೆ” ಎಂದು ವಿನಯದಿಂದಲೇ ಕರೆಕೊಟ್ಟು ಹೋದರು.
“ದೊಡ್ಡ ಪುಸ್ತಕ ಮೇಳದ ಅಂಗ ಸಾರ್ ಈ ಗೋಷ್ಠಿ. ನಿಮ್ದೂ ಪ್ರಕಟಣೆಗಳಿದ್ದಾವಲ್ಲಾ ಸಾರ್. ನೀವೂ ಮಳಿಗೆ ಹಾಕಬಹುದಲ್ವಾ?”

ಸ್ಪಷ್ಟ ನುಡಿಗಳಲ್ಲಿ ಮೈಸೂರು ಮೇಳಕ್ಕೆ, ಗೋಷ್ಠಿಗೆ ನನ್ನ ನಿರಾಕರಣವನ್ನು ಹೇಳಿಬಿಟ್ಟೆ. ಕಟು ಭಿನ್ನಾಭಿಪ್ರಾಯವನ್ನೇ ಆದರೂ ಹೇಳಲು ಒಳ್ಳೆಯ ವೇದಿಕೆ ಎಂದು ಭಾವಿಸಿ ಇಂಥಾ ಕರೆಗಳನ್ನು ಮನ್ನಿಸುತ್ತಿದ್ದ ತಪ್ಪನ್ನು ನಾನು ಈ ಬಾರಿ ಮಾಡಲಿಲ್ಲ. ಪುಸ್ತಕೋದ್ಯಮ ಪ್ರಚಂಡ (ಉಡುಪಿ ಮೇಳದ ಮೊದಲ ದಿನ ನನ್ನ ಮಳಿಗೆಗೆ ಬಂದಿದ್ದ ಮಲ್ಲೇಪುರಂ ‘ಪುಸ್ತಕ ಮಾರಾಟ ಹೋರಾಟ’ವನ್ನು ಜೊತೆಯಲ್ಲಿದ್ದ ಕಪುಪ್ರಾದ ಕುಲಸಚಿವ ಮತ್ತು ಓರ್ವ ಸದಸ್ಯರಿಗೆ “ಪುಸ್ತಕೋದ್ಯಮದ ಭಗವದ್ಗೀತೆ” ಎಂದು ಹೊಗಳುವುದರೊಂದಿಗೆ ನನಗಿತ್ತ ಬಿರುದು), ವ್ಯಂಗ್ಯ ಹಾಸ್ಯಗಳ ಹದವರಿತ ಪ್ರಬಂಧಕಾರ, ರಚನಾತ್ಮಕ ವಿಮರ್ಶಾತಜ್ಞ ಇತ್ಯಾದಿ ಬಿರುದಾಂಕಿತ ಈ ಬಾರಿ ಸಾಮ್ರಾಜ್ಯ ವಿಸ್ತರಣೆಗೆ ಮೈಸೂರಿಗೆ ಲಗ್ಗೆ ಹಾಕುತ್ತಿಲ್ಲ.
******
ಹೆಚ್ಚಿನ ಓದಿಗೆ ಅವಶ್ಯ ‘ಪುಸ್ತಕ ಮಾರಾಟ ಹೋರಾಟ’ ಹಾಗೂ ಇದೇ ಬ್ಲಾಗಿನಲ್ಲಿ ಪುಸ್ತಕ ಲೋಕ ವಿಭಾಗವನ್ನು ನೋಡಬಹುದು.
ಪ್ರಿಯ ಅಶೋಕವರ್ಧನ ಅವರಿಗೆ,
ReplyDeleteಚೆನ್ನಾಗಿದೆ ನಿಮ್ಮ ಭಾಷಣದ ಕಥೆ ! ಎಲ್ಲಾದರೂ ಅದಕ್ಕೆ ಯಶಸ್ಸು ಸಿಕ್ಕೀತೋ ಎಂದು ಓದುತ್ತ ಓದುತ್ತ ಕೊನೆಯವರೆಗೂ ಆಸೆಯಿಂದ ಇದ್ದೆ. ನಿಮ್ಮ ಹಾಗೆ ನನಗೂ ಕನ್ನಡಿಗರ ಬಗ್ಗೆ ತುಸು ಹೆಚ್ಚು ವಿಶ್ವಾಸ !! ಆದರೆ ಬುಧ್ಧಿವಂತನಿಗೆ ಮಾತಿನ ಪೆಟ್ಟು ಕತ್ತೆಗೆ ಲತ್ತೆಯ ಪೆಟ್ಟು ಎಂಬ ಮಾತು ನೀವು ಕೇಳಿಲ್ಲವೇ?
ನಿಮ್ಮ,
ವಿವೇಕ
Dear Sir,
ReplyDeleteWonderful.
It is one your best pieces. I have been reading almost all your articles for last 20 years. We need this type of rebuking sometimes. Please do keep writing.
Yours,
Bedre Manjunath
Priya Ashokavardhana,
ReplyDeleteNimma hejjegalannu ballavanaaddarinda ascharyavaagalilla. Innu nimmannu gostigalige karedu baisikoltaaralla avara bagge paapa annabeku!
ಪ್ರೀತಿಯ ಅಶೋಕವರ್ಧನ ಅವರಿಗೆ ನಮಸ್ಕಾರ.
ReplyDeleteಲೇಖನ ಓದಿದೆ.ನೇರ, ಸೀದಾ ಆದರೆ ಖಡಕ್ ಮಾತಿನ ನಿಮ್ಮ ಶೈಲಿ ಎಲ್ಲರಿಗೂ ಸಾಧ್ಯವಿಲ್ಲ.
ಮತ್ತೊಮ್ಮೆ ನಿಮ್ಮ ಪುಸ್ತಕವನ್ನೋದಿದ ಹಾಗನ್ನಿಸಿತು. ಮತ್ತೆ ಬರೆವೆ
ರವಿಕುಮಾರ
ಪ್ರೀತಿಯ ಅಶೋಕರಿಗೆ ನಮಸ್ಕಾರಗಳು.
ReplyDeleteಪುಸ್ತಕ ಮಾರಾಟ ಒಂದು ಉದ್ಯಮ ಹೌದು. ಆದರೆ ಅದು ಅಷ್ಟು ಮಾತ್ರವಲ್ಲ, ನಮ್ಮ ಅಭಿರುಚಿ, ಸಂಸ್ಕಾರಗಳನ್ನು ಬೆಳೆಸುವ ಮಹತ್ವದ ಕೆಲಸವನ್ನೂ ಮಾಡುತ್ತದೆ ಎನ್ನುವ ಅರಿವೂ ಇಲ್ಲದಿರುವುದರ ಫಲವನ್ನೇ ನಾವೆಲ್ಲರೂ ಅನುಭವಿಸುತ್ತಿದ್ದೇವೆ.
ಪ್ರೀತಿಯಿಂದ
ಪಂಡಿತಾರಾಧ್ಯ
Dear Ashokvardhan,
ReplyDeleteYou tried again and again to express "what needs to be done", by attending so many seminars, workshops etc. The impact is certainly felt. Now, a few of the publishers are ready to express their opinions in open forums.
This time, rejecting the invitation to present your views is also a strong way of protest. Keep it up.
- Addoor Krishna Rao
addoor@gmail.com
ಪ್ರಿಯ ಅಶೋಕ್,
ReplyDeleteನಿಮ್ಮ ನಿರ್ಧಾರ ಸರಿಯಾಗಿದೆ. ಅದೇನೋ ಹೇಳುತ್ತಾರಲ್ಲ. ಕೋಣನ ಮುಂದೆ.... ಹಾಗೆ ಆಗಿದೆ ಪರಿಸ್ಥಿತಿ. ಯಾರನ್ನೂ ಸುಧಾರಿಸಲು ಸಾಧ್ಯವಿಲ್ಲವೇನೋ.
ಪ್ರಿಯ ಅಶೋಕರೇ
ReplyDeleteಉದಯವಾಣಿಯಲ್ಲಿ ಪ್ರಕಟವಾದ ಬರಹ ಓದುವಾಗ ಸಿಕ್ಕ ಅನುಭವವೇ ಬೇರೆ. ಪತ್ರಿಕೆ ದೂರವಾಣಿಯಲ್ಲಿ ಅಲಿಸಿದ ಮಾತುಗಳಿಗೆ ದಪ್ಪಕ್ಷರ ಹಾಕಿದ ಕಾರಣ ಹೆಚ್ಚು ಮನಸ್ಸನ್ನು ನಾಟುತ್ತದೆ.
ಅಲ್ಲಿ ಮಂಡಿಸುವ ಪ್ರಬಂದಗಳಿಂದ ಹೆಚ್ಚು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಅಶೋಕವರ್ಧನರ ನಿಲುವನ್ನೇ ಸೇರಿದವರು ಮಾತನಾಡಿಕೊಳ್ಳುವ ಸಾದ್ಯತೆಗಳು ದಾರಾಳ.
ಗೋವಿಂದ
ಗೆಳೆಯರಾದ ಅಶೋಕ್ರವರೇ
ReplyDeleteಈ ಲೇಖನ ಓದಿ ನಮ್ಮ ಹಳೆಯ ನೆನಪು ಮರುಕಳಿಸಿತು. ಪುಸ್ತಕೋದ್ಯಮದ ಬಗ್ಗೆ ನಿಮ್ಮೆಲ್ಲಾ ಪ್ರಬಂಧ ಮಂದನೆಗಳು, ನಿಮ್ಮ ಅಭಿಪ್ರಾಯಗಳನ್ನು ಓದಿದ ಮೇಲೆ ನೀವು ತೆಗೆದುಕೊಂಡ ತೀರ್ಮಾನ ಸರಿ ಎನ್ನಿಸಿತು. ನಾನು ವಿಶೇಷ ಆಹ್ವಾನಿತನಾಗಿ ಒಂದೂವರೆ ಗಂಟೆ ಕಾಲ ದಿ. ೧೦-೧೦-೨೦೦೯ರ ಗೋಷ್ಠಿಯ ಪ್ರಬಂಧಗಳನ್ನು ಕೇಳಿದೆ. ಅದೇ ಮಾಮೂಲು ತೌಡು ಕುಟ್ಟುವ ಕೆಲಸವೇ ಆಯ್ತು. ಜಿ.ಬಿ ಜೋಶಿಯವರ ಮಗ ತಿಳಿಸಿದ ಕೆಲವು ಮಾಹಿತಿಗಳು ಉಪಯುಕ್ತವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಕಾಡೆಮಿಗಳ, ವಿವಿಗಳ ಗೋಷ್ಠಿಗಳ ಗತಿಯೂ ಇದೇ ಆಗಿದೆ. ಅವುಗಳ ಫಲಶ್ರುತಿ ಶೂನ್ಯ. ‘ಬುದ್ಧಿಜೀವಿಗಳ’ ಕಿಸೆಗೆ ಬಡಬೋರೇಗೌಡನ ಸುಂಕದ ಹಣ ಸೇರ್ಪಡೆ ಅಷ್ಟೆ. ಅದೇ ರಾಗ ಅದೇ ತಾಳ. ನಿಮ್ಮನ್ನು ಒಂದೇ ವಿಷಯಕ್ಕೆ ಕರೆದಂತೆ ಬೇರೆ ಬೇರೆ ವಿಷಯಗಳಿಗೂ ನಿಗದಿತರೇ ಪ್ರಬಂಧಕಾರರು. ನೀವು ಮಾತ್ರ ಪ್ರಾಮಾಣಿಕವಾಗಿ ನಿಮ್ಮ ಬಗ್ಗೆ ಹೇಳಿದ್ದೀರಿ.
ಅಪರೂಪಕ್ಕೊಮ್ಮೆ ನಿಮ್ಮಂಥ ಸೂಕ್ಷ್ಮ ಮತಿಗಳು ಈ ರೀತಿ ಪತ್ರಿಕಾ ಲೇಖನದ ಮೂಲಕ ಪ್ರತಿಕ್ರಿಯಿಸಿದ್ದು ಸರಿ ಎನಿಸಿತು. ಇದನ್ನು ಓದಿ ನಿಮ್ಮನ್ನೇ ನೋಡಿದಷ್ಟು ಸಂತೋಷವಾಯಿತು. ವಂದನೆಗಳೊಡನೆ
ಜಿ.ಟಿ ವೀರಪ್ಪ
nanna kalpaneyannu meide nimma anubhava.
ReplyDeleteadare
yenu upayoga heli sir?
nemmalli helidanthe ,
namma samadanakke,
yeno sadane eandu
samaadanakke,
aste.
ee blakinalli odalu thumba ede.
odthene.
vandanegalu.
ಬರವಣಿಗೆ ಮತ್ತು ವಿಚಾರ ವಿಮರ್ಶೆ ಕುತೂಹಲಕರವಾಗಿದೆ. ತೀಕ್ಷ್ಣ ಹಾಗೂ ನೇರ ಮಾತುಗಳಿಂದ ತಮ್ಮ ವಿಚಾರ ಮಂಡಿಸಿದ್ದೀರಿ. ನಿಮ್ಮ ತೀರ್ಮಾನ ಕೂಡಾ ಮೆಚ್ಚುವಂತಾಗಿದೆ. ಪುಸ್ತಕ ವ್ಯಾಪಾರದಲ್ಲಿ ಕಷ್ಟ ನಷ್ಟ ಅನುಭವಿಸುತ್ತಿರುವ ನೀವು ಅಥವಾ ನಿಮ್ಮಂತಹ ಪುಸ್ತಕ ಪ್ರೀತಿಯುಳ್ಳ ವಿತರಕರು ಅಭಿಮಾನಶೂನ್ಯ ಕನ್ನಡಿಗರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅಸಾಧ್ಯವೆಂದೇ ಹೇಳಬಹುದು.
ReplyDeleteಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೃಹತ್ ಬಂಗಲೋ ಅಥವಾಸೌಧಗಳನ್ನು ನಿರ್ಮಿಸಿ, ಅದರೊಳಗೆ ಅಂದದ showcase ಇರಿಸಿ ಹಲವಾರು ನಿರ್ಜೀವ ಬೊಂಬೆಗಳನ್ನು ಇರಿಸಿ ಸಂಭ್ರಮಿಸುವ ಜನರನ್ನು ನಾವೆಲ್ಲಲ್ಲೂ ಕಾಣಬಹುದು. ಆದರೆ ಅದೇ ಸೌಧಗಳಲ್ಲಿ ಒಂದು ಪುಟ್ಟ book case ಕಾಣುವುದು ಬಲು ಅಪರೂಪ. ನಮ್ಮ ಜನರಿಗೆ ಎಲ್ಲಿಯವರೆಗೆ ಜ್ಞಾನದಾಹವಿರುವುದಿಲ್ಲವೋ ಅಲ್ಲಿಯವರೆಗೆ show caseಗಳು ತುಂಬಿ ತುಳುಕಾಡುತ್ತಿರುತ್ತವೆ.
ಜರ್ಮನಿಯ ಪ್ರತಿಯೊಬ್ಬನ ಮನೆಯಲ್ಲಿ ಮೂರು ವಸ್ತುಗಳು ಕಾಣಸಿಗುತ್ತವೆ ಎಂದು ನಾನು ಎಲ್ಲೋ ಓದಿದ ನೆನಪು. ಒಂದು ಹೂಕುಂಡ, ಒಂದು ಬಾರ್ (bar) ಮತ್ತು ಒಂದು Book case. ಆದರೆ ಇಲ್ಲಿ thirst for beer, brandy, whisky ಕಾಣುತ್ತದೆ. But there is no thirst for knowledge.
ಈ ವಿಷಯದಲ್ಲಿ ಪೋಷಕರು, ಶಿಕ್ಷಕರು ಮತ್ತು ಬುದ್ಧಿಜೀವಿಗಳು ಒಂದು ಆಂದೋಳನವನ್ನು ಪ್ರಾರಂಭಿಸಬೇಕಾಗುತ್ತದೆ. ತಮ್ಮಂತಹ ಸಹೃದಯ, ಪುಸ್ತಕ ಪ್ರೀತಿಯುಳ್ಳವರು ಈ ಆಂದೋಳನಕ್ಕೆ ಮುಂದಾಗಿದ್ದರೂ ಈ ಪ್ರಯತ್ನದಲ್ಲಿ ಸರ್ವರೂ ಕೈ ಜೋಡಿಸಬೇಕಾಗಿದೆ. ಇದು ನಮ್ಮೆಲ್ಲರ ಕರ್ತವ್ಯ ಎಂದೂ ನಾನು ನಂಬಿದ್ದೇನೆ.
ಆಗುಂಬೆ ಎಸ್. ನಟರಾಜ್