
ಆ ಕಾಲದಲ್ಲಿ ನಡ ಗ್ರಾಮ ದಾಟಿ ಬಂಗಾಡಿಗೆ ವಿರಳವಾಗಿ ಸರ್ವಿಸ್ ಕಾರುಗಳು ಮಾತ್ರ ಓಡುತ್ತಿದ್ದವು, ಇಂದಿನ ಬಸ್ಸೋ ವಟವೃಕ್ಷಾವೋ ಇರಲಿಲ್ಲ. ಹಾಗಾಗಿ ನಾವು ಬೆಳ್ತಂಗಡಿಯಿಂದಲೇ ನಡಿಗೆಗಿಳಿದೆವು. ಚಾರ್ಮಾಡಿಯತ್ತ ಅರ್ಧ ಕಿಮೀ ಮತ್ತೆ ಬಂಗಾಡಿ ದಾರಿಯಲ್ಲಿ ಅರ್ಧ ಕಿಮೀ ಕಳೆದದ್ದೇ ಮಾಮೂಲು ದಾರಿ ಬಿಟ್ಟೆವು. ತೋರುತ್ತಿದ್ದ ಜಮಾಲಾಬಾದ್ನ ದಕ್ಷಿಣ ಮೈಯನ್ನೇ ಗುರಿಮಾಡಿಕೊಂಡು ಸಿಕ್ಕ ಕಚ್ಚಾ ಮಣ್ಣದಾರಿ (ಲಾಯ್ಲಾ ದಾರಿ) ಹಿಡಿದು ಹೊಳೆದಂಡೆಗಿಳಿದೆವು. ಬೇಸಗೆಯ ದಿನಗಳು -- ತೆಳು ನೀರಿತ್ತು. ಕೆಲವರು ಶೂ ಬಿಚ್ಚಿ ಹಿಡಿದುಕೊಂಡು ನೀರು ದಾಟಿದರು. ಬುದ್ಧಿವಂತರು (ಕಪಿವೀರರು?) ಆಯಕಟ್ಟಿನ ಜಾಗಗಳಲ್ಲಿ ಕಾಡಕಲ್ಲುಗಳನ್ನು ಹಾಕಿ ಸೇತುಬಂಧನ ಮಾಡಿದರು. ಅನಂತರ ಸರ್ಕಸ್ ಕಲಾವಿದರಂತೆ ಆಚೀಚೆ ಕೈಯೆಸೆದು ಅಸ್ಥಿರ ಕಲ್ಲಿನಿಂದ ಕಲ್ಲಿಗೆ ಲಂಘಿಸಿದರು. ಹೀಗೆ ಹೊರಟವರೆಲ್ಲ ಹನುಮಂತರೇನಲ್ಲ - ಒಬ್ಬಿಬ್ಬರು ಮಾತ್ರ ದಾಟಿದರು! ಹೆಚ್ಚಿನವರು ಕಾಲುಜಾರಿಯೋ ಸಮತೋಲನ ತಪ್ಪಿಯೋ ಬೂಟು ಬುಳುಂಕಾಯಿಸಿ, ಶೂ ಮಾತ್ರವಲ್ಲ ಮೊಣಕಾಲವರೆಗೆ ಪ್ಯಾಂಟೂ ತೊಯ್ಯಿಸಿಕೊಂಡು ಹೆಡ್ಡು ನಗೆ ಬೀರಿದ್ದರು. ಮುಂದೆ ತೆಂಗು, ಬಾಳೆತೋಟಗಳನ್ನು ಹಾದು, ಕುರುಚಲು ಕಾಡು ಕಳೆದು, ಜಮಾಲಾಬಾದಿನ ನೇರ ತಪ್ಪಲಿನ ಸವಕಲು ಜಾಡು ಸವೆಸಿದೆವು. ದಿಣ್ಣೆಗಳಂತಹ ಪುಟ್ಟಗುಡ್ಡಗಳನ್ನು ಏರಿಳಿಯುತ್ತ ಅಡಗುವಾಟ ಆಡುವಂತಿದ್ದ ಜಮಾಲಾಬಾದನ್ನು ದೃಷ್ಠಿ ಸಂಕಲೆಯಿಂದಲೇ ಎಳೆದು ಹತ್ತಿರ ಮಾಡಿದಂತೆ ಬುಡ ಸೇರಿದೆವು.
ನೈಜ ಶಿಲಾರೋಹಣದ ಬಗ್ಗೆ ನನ್ನಿಂದ ರೋಚಕ ಅನುಭವಗಳನ್ನಷ್ಟೇ ಕೇಳಿದ್ದ ತಂಡಕ್ಕೆ ಇಲ್ಲೊಂದು ಪ್ರಾತ್ಯಕ್ಷಿಕೆ. ಸುಮಾರು ಇಪ್ಪತ್ತಡಿ ಎತ್ತರದ ಸ್ವತಂತ್ರ ಬಂಡೆ ತುಂಡೊದನ್ನು ಆಯ್ದೆವು. ಒಬ್ಬ ಅದರ ಸುತ್ತ ನಡೆದು, ಸಿಕ್ಕ ಸುಲಭ ಮೈ ಹಿಡಿದು ಹತ್ತಿ "ಇದೇನು ಮಹಾ" ಎಂದು ಅಜ್ಞಾನ ಮೆರೆದ. ನಾನು ಬಂಡೆಯ ನೇರ ಮೈ ತೋರಿ "ಅದಲ್ಲ, ಸವಾಲಿರುವುದು ಇಲ್ಲಿ" ಎಂದೆ. ಆರಂಭ ಶೂರನೊಬ್ಬ ತೇನ್ಸಿಂಗಿಗೆ ಜೈಕಾರ ಹಾಕಿ (ನಾಮದ ಬಲವೊಂದಿದ್ದರೆ ಸಾಕು?) ಬಂಡೆಗೆ ಇಡಿಗಾಲು ಹಚ್ಚಿ ಧಾವಂತಕ್ಕಿಳಿದು, "ತಬ್ಬಿಕೋ" ಕಹಳೆ ಊದಿದ; ಮೊಣಕಾಲು, ಅಂಗೈ ತರಚಿಕೊಂಡು ಹಿಂದೆ ಸರಿದು "ರಾಕು ರಫ಼್ಫಾಗಿದೆ ಸಾರ್" ಎಂದು ತೀರ್ಪೂ ಕೊಟ್ಟ. ಮತ್ತೊಬ್ಬ - ಅಭಿನವ ಜಕ್ಕಣಾಚಾರಿ, "ಉಳಿ ಸುತ್ಗೆ ಇದ್ರೆ ಇದೆಲ್ಲ ಏನಲ್ಲ. ಚಕಚಕಾಂತ ಸ್ಟೆಪ್ಸ್ ಕಟ್ ಮಾಡಿ ಏರ್ಬಿಡ್ತಿದ್ದೆ.” ಮಗುದೊಬ್ಬ ನಾನು ಚಾಲ್ತಿಮಾತಿನಲ್ಲಿ ಹೇಳಿದ ರಾಕ್ ಕ್ಲೈಂಬಿಂಗ್ನ್ನು ರೋಪ್ ಕ್ಲೈಂಬಿಂಗ್ ಎಂದು ಗ್ರಹಿಸಿಕೊಂಡು “ಹಾಕಿ ಸಾರ್ ರೋಪೂ ಒಂದು ಕೈ ನೋಡೇಬುಡಾವಾ...”
ಹೀಗೇ ಇನ್ನೊಮ್ಮೆ ಇನ್ನೊಂದೇ ಕಾಲೇಜಿನ ತಂಡವನ್ನೂ ಬಂಡೆ ಬುಡಕ್ಕೆ ಒಯ್ದು ಪಾಠಕ್ಕೆ ಸನ್ನಿವೇಶ ಬಲಿಯಲು ಕಾದಿದ್ದೆ. ತಂಡ ಏಕಾಗ್ರ ಚಿತ್ತದಿಂದ ನನ್ನ ಮಾತು, ಕ್ರಿಯೆಗಳಲ್ಲಿ ಮುಳುಗಿದ್ದಾಗ ಸ್ವಲ್ಪ ಆಚೆಗೆ ಮರಗಳ ಮರೆಯಲ್ಲಿ ಯಾರೋ ‘ಸ್ವತಂತ್ರ ಸಾಹಸ’ ನಡೆಸಿದ ಸದ್ದು ಕೇಳಿ ವಿಚಾರಿಸಿದೆ. ತಂಡದ ನಾಯಕತ್ವ ವಹಿಸಿಕೊಂಡು ಬಂದಿದ್ದ ಅಧ್ಯಾಪಕ ಮಿತ್ರ ಪೊದರ ಮರೆಯಿಂದಲೇ ಉತ್ತರಿಸಿದ “ಇಲ್ಲ, ಇಲ್ಲ ನಾನು ಲೆಕ್ಚರರ್, ಹೀಗೇ. . . . .” ನನಗರಿವಿಲ್ಲದೆ ಕಟಕಿ ಬಾಯಿಯಿಂದ ಜಾರಿತು “ಇಲ್ಲಿ ನಾನೊಬ್ಬನೇ ಲೆಕ್ಚರರ್. ನಿಮ್ಮನ್ನೂ ಸೇರಿಸಿದಂತೆ ಎಲ್ಲರೂ ವಿದ್ಯಾರ್ಥಿಗಳು. ಬನ್ನಿ, ಗಮನಕೊಡದಿದ್ದರೆ ಬಂಡೆ ನಿಮ್ಮನ್ನು ಕ್ಷಮಿಸದು.” ಇಂಥ ಹತ್ತು ಹಲವು ಸಾರ್ವಜನಿಕ ಮುಖಾಮುಖಿಗಳಲ್ಲಿ ನಾನು ಕೊರೆದದ್ದನ್ನೆ ಕೊರೆಸಿಕೊಳ್ಳುವ ಹಳೇ ಗಾನದೋಸೆಯಾಗುವ ಅಪಾಯವಿತ್ತು. ಅಳಿದೂರಿಗೆ ಉಳಿದವನೇ ಗೌಡ ನಾನಾಗುತ್ತಿದ್ದೇನೋ ಎಂಬ ಭಾವ ಹೆಚ್ಚಿದಾಗ ನನ್ನ ಯೋಗ್ಯತೆಯನ್ನು ಹರಿತಗೊಳಿಸಲು ಸವಾಲು ಹುಡುಕಿದಾಗ ಕಾಣಿಸಿದ್ದು...
ಜಮಾಲಾಬಾದಿನ ಪೂರ್ವದ ನೇರಮೈ


ತಳದ ಕಾಡು, ಸುತ್ತುವರಿದ ತೋಟ ಗದ್ದೆ ಮೀರಿ ದೃಷ್ಟಿ ಹರಿಯುವಷ್ಟು ಎತ್ತರದಲ್ಲಿದ್ದೆವು. ನಾವು ತಂಗಿದ್ದ ಓಣಿ ಸ್ವಲ್ಪ ಮುಂದೆ ಶಿಖರದೆಡೆಗೆ ನೇರ ಏರುವ ಕೊರಕಲು; ಪರ್ವತರಾಯ ಕಲ್ಲಿನ ಪಂಚೆ ಸುತ್ತಿಕೊಳ್ಳುವಾಗ ಒಂದು ನಿರಿಗೆ ಸಿಕ್ಕಿಸಿ ಬಿಟ್ಟಹಾಗೆ. ಕೆಳ ಕೊನೆಯಲ್ಲಿದ್ದ ನಮಗೆ ದಕ್ಕಿದ್ದು ವಿಸ್ತೃತ ಸಂದು. ಅಂದರೆ ಕಲ್ಲ ಕೊರಕಲು ನಮ್ಮ ‘ಚಿಮಣಿ ತಂತ್ರ’ಕ್ಕೆ ಒಲಿಯಿತು. ಪ್ರಾಕೃತಿಕವಾಗಿ ಲಂಬವಾಗಿರುವ ಕೊರಕಲುಗಳನ್ನು ಕಾರ್ಖಾನೆಗಳ ಸಾಮ್ಯತೆ ಅನುಲಕ್ಷಿಸಿ ಪರ್ವತಾರೋಹಣ ಭಾಷೆಯಲ್ಲಿ ಚಿಮಣಿ ಎನ್ನುತ್ತಾರೆ. ಚಿಮಣಿ ಬಳಸುವವನ ದೇಹಗಾತ್ರ ಅವಲಂಬಿಸಿ ಸುಮಾರು ಎರಡೂವರೆ ಅಡಿ ಅಗಲದಿಂದ ಹಿಡಿದು ನಾಲ್ಕಡಿ ಅಗಲದವರೆಗಿನ ಚಿಮಣಿಗಳನ್ನು ಬಹುಸುಲಭವಾಗಿ ಬಳಸಿ ಎಷ್ಟೂ ಎತ್ತರವನ್ನು ಸಾಧಿಸಬಹುದು. (ನಮ್ಮಮ್ಮನಿಗೆ ಹೇಳ್ಬೇಡಿ, ಮೊದಲೆಲ್ಲ ಮೈಸೂರಿನ ಅತ್ರಿ ಮನೆಯ ಬಚ್ಚಲು ಮನೆಯ ಓಣಿಯ ಗೋಡೆ ತಾರಸಿ ಎತ್ತರಕ್ಕೂ ಬಣ್ಣ ಕಳೆದುಕೊಳ್ಳುತ್ತಿದ್ದದ್ದು ನನ್ನ, ತಮ್ಮ ಆನಂದನ chimney practice ನಿಂದ). “ಒಂದು ಗೋಡೆಗೆ ಬೆನ್ನು ಒತ್ತು, ಇನ್ನೊಂದನ್ನು ಎಡಗಾಲಿನಲ್ಲಿ ತುಳಿ, ಬಲಗಾಲು ಹಿಂದೆ ಮಡಚು, ಬಲಗೈಗೆ ಮುಂದಿನ ಬಂಡೆ, ಎಡಗೈಗೆ ಹಿಂದಿನದೇ. ಈಗ ಬೆನ್ನೆತ್ತು, ತುಳಿದ ಕಾಲು ಚಾಚಲಿ, ಮಡಚಿದ ಕಾಲು ಬಿಡಿಸಲಿ. ದೇಹ ಮೇಲೇರಿದ್ದೇ ಮತ್ತೆ ಬೆನ್ನೊತ್ತು. ಈಗ ಬಲಗಾಲು ಎದುರು ತುಳಿ, ಎಡಗಾಲು ಹಿಂದೆ ಮಡಚು, ಬಲಗೈಗೆ ಹಿಂದಿನ ಬಂಡೆ, ಎಡಗೈಗೆ ಎದುರಿನ ಬಂಡೆ...." ಇದು ಚಿಮಣಿ ಏರುವ ಕ್ರಮಪಾಠ! ಮುಖ್ಯ ಬಂಡೆಗೆ ಬೆನ್ನು ಕೊಟ್ಟು, ಮೇಲೆ ಅರ್ಧ ಕವುಚಿದಂತಿದ್ದ ಬಂಡೆಗೆ ಕಾಲು, ಕೈ ಕೊಟ್ಟು ಸರಾಗ ಏರಿದೆವು. ಸುಮಾರು ನೂರಿನ್ನೂರಡಿ ಏರಿದ ಮೇಲೆ ಸಂದು ಕೂಡುತ್ತ ಬಂತು. ಬಹುಶಃ ಪರ್ವತರಾಯನ ಸೊಂಟ ಸಮೀಪಿಸಿರಬೇಕು.
ಚಿಮಣಯೊಳಗೆ ಕೈಕಾಲು ಆಡಿಸುವುದು ಕಷ್ಟವಾಗುವಲ್ಲಿ ನಾವು ಮತ್ತೆ ಬಂಡೆಯ ತೆರೆಮೈಗೆ ಬಂದೆವು. ಚಿಮಣಿ ತಂತ್ರದಲ್ಲಿ ಬಂಡೆಯ ನೈಜ ಒರಟುತನ ಧಾರಾಳ ಸಾಕಾಗುತ್ತದೆ. ಆದರಿಲ್ಲಿ ಸ್ವಲ್ಪವಾದರೂ ಒಡಕು, ಚಕ್ಕೆ ಎದ್ದ ಸ್ಥಿತಿ ಇರುವುದು ಅಪೇಕ್ಷಣೀಯ. ನಮ್ಮ ದುರದೃಷ್ಟಕ್ಕೆ ಆ ಜಾಗ ಮಳೆಗಾಲದ ನೀರಿಳಿಯುವ ಅಗಲ ಪಾತ್ರೆಯ ಚರಂಡಿ. ಒಡಕು, ಬಿರುಕು ಇಲ್ಲವೇ ಇಲ್ಲ ಎಂಬಷ್ಟು ವಿರಳ. ಕೃತಕ ಶಿಲಾರೋಹಣ ತಂತ್ರ ನೆಚ್ಚುವವರೋ ಇಂಥಲ್ಲಿ ಮೊಳೆ ಜಡಿದೋ ಬೋಲ್ಟ್ ಹೊಸೆದೋ (ಇವುಗಳ ತಾಂತ್ರಿಕ ವಿವರಣೆ ಇಲ್ಲಿ ಅಪ್ರಸ್ತುತ) ಸುಲಭವಾಗಿ ಏರಿಬಿಡುತ್ತಿದ್ದರೋ ಏನೋ. ಆದರೆ ನಾವು ನೈಜ ತಾಕತ್ತನ್ನು, ಕೌಶಲವನ್ನು ಮಾತ್ರ ನೆಚ್ಚಿ ಹೊರಟವರು. ನಮ್ಮ ರಕ್ಷಣಾತಂತ್ರದಲ್ಲಿ ಕೇವಲ ಹಗ್ಗ ಬಳಸುತ್ತಿದ್ದೆವು. ಹಗ್ಗವನ್ನು ಮೇಲಕ್ಕೆಸೆದೋ ಅಥವಾ ಅಲ್ಲಲ್ಲಿ ಕಲ್ಲಾಣಿ ಜಡಿದು ಆಧಾರ ಕಲ್ಪಿಸಿಕೊಳ್ಳುವುದೋ ರೂಢಿಸಿರಲಿಲ್ಲ. ಕಡೆಗೆ ನಮ್ಮಲ್ಲಿ ಶಿಲಾರೋಹಣದಲ್ಲಿ ಹೆಚ್ಚು ಅನುಭವಿಯಾದ ಆನಂದ, ‘ಮಾಡು ಇಲ್ಲವೇ ಮಡಿ’ ಛಲದೊಡನೆ ನುಗ್ಗಿದ. ಆತ ಹಿಡಿತ ಕಳೆದುಕೊಂಡರೂ ಬಂಡೆಗೆ ಪೂರ್ಣ ಮೈ ಒರೆಸಿಕೊಂಡು ನಿಧಾನವಾಗಿ ಜಾರಬಹುದಾದ ಮನೋಸಿದ್ಧತೆಯೊಡನೆ (ಅಂದರೆ ಮೇಲಿನಿಂದ ರಕ್ಷಣಾ ಹಗ್ಗವಿರುವ ಶಿಲಾರೋಹಣ ಅಭ್ಯಾಸಗಳಲ್ಲಿ ಹಿಡಿತ ತಪ್ಪಿದಲ್ಲಿ ತರಚಲು ಗಾಯಗಳಾಗದಂತೆ ಹಗ್ಗಕ್ಕೆ ನೇತು ಬೀಳುವ ಪರಿಪಾಠವಿದೆ. ಅದು ಸರಿಯಲ್ಲ ಎಂಬುದನ್ನು ಪ್ರದರ್ಶಿಸುವಂತೆ) ಹೊರಟ. ಆತ ಕೆಳಗೆ ಜಾರಿದರೂ ನನ್ನಿಂದ ಕೆಳಗೆ ಹತ್ತಿಪ್ಪತ್ತು ಅಡಿಗಳಲ್ಲೇ ತಡೆದುಳಿಯುವಂತೆ ಹಗ್ಗದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಒತ್ತುಕೊಟ್ಟು ನಾನು ಕುಳಿತೆ. ಬಲು ದುರ್ಬಲ ಚಕ್ಕೆ, ಸೂಕ್ಷ್ಮ ಬಿರುಕುಗಳನ್ನೇ ಅರೆಮನಸಿನಲ್ಲಿ ಆದರೆ ಪೂರ್ಣ ಶಕ್ತಿಯಲ್ಲಿ ಬಳಸಿಕೊಳ್ಳುತ್ತಾ ಸುಮಾರು ಐವತ್ತಡಿ ಸಾಧಿಸಬೇಕಾದರೆ ಸಾಕೋ ಸಾಕು. ಮತ್ತವನು ಕೊಟ್ಟ ಸ್ಪಷ್ಟ ಹಗ್ಗದ ರಕ್ಷಣೆಯಲ್ಲಿ (ಕೆಲವರು ಕೆಲವು ಕಡೆ ಅದನ್ನೇ ನೆಚ್ಚಿ) ಮೇಲೆ ಒಟ್ಟಾದೆವು. ನಾಲ್ಕೈದು ಚಕ್ಕೆ ಕಿತ್ತು ಬಂದದ್ದು, ಒಂದೆರಡು ಕಡೆ ಉಗುರ ಸೆಲೆಯಲ್ಲಿ ರಕ್ತ ಜಿನುಗುವಷ್ಟು ಒತ್ತಡ ಹೇರಿದ್ದು, ಕೊನೆಯ ದೊಡ್ಡ ತಗ್ಗು ಹಿಡಿಯಲು ಕಾಲಿನಲ್ಲಿ ನಡುಕ ಬರುವಷ್ಟು ಮೈ ಚಾಚಿದ್ದು ವಿರಾಮದಲ್ಲಿ ವಿಮರ್ಶಿಸಿದೆವು.
ಮೂರ್ನಾಲ್ಕಡಿ ಅಗಲದ ಜಗುಲಿಯಂಥ ಜಾಗ ತಲಪಿದೆವು. ಅಲ್ಲಿನ ಮಟ್ಟಿಗೆ ದೊಡ್ಡ ವಿರಾಮ. ತರಚಲು ಗಾಯ, ಮಾಂಸ ಖಂಡಗಳ ಸೆಡವು, ಮನಸ್ಸಿನ ಬಿಗಿತವೆಲ್ಲಕ್ಕೂ ಅರೈಕೆ. ಬಾಟಲಿಯ ನೀರು ಕುಡಿಯುವಾಗ ತುಳುಕಿ ಮೈತಣಿಸಿತು. ಕಳಚಿ ಎಸೆದ ಮೋಸುಂಬಿ ಸಿಪ್ಪೆ ಉರುಳುರುಳಿ ಕುಪ್ಪಳಿಸಿ ಕಣ್ಮರೆಯಾಗುವಾಗ ಬೀರಮಲೆಯ ‘ಸಿಂಹಾಸನದಲ್ಲಿ’ ಮಲೆತು ಪುಂಡುಗಲ್ಲುಗಳನ್ನು ‘ಪಾತಾಳಕ್ಕೆ’ ನೂಕಿ ಶಿಕ್ಷಿಸಿದ ನನ್ನ ಪುತ್ತೂರಿನ ಬಾಲ್ಯವೇ ಬಂತು. ಮತ್ತೆ ಮುಂದಿನ ಜಾಡಿನ ಮೇಲೆ ಕಣ್ಣು ಹಾಯಿಸಿದೆವು. ಮಳೆನೀರ ಪಾತ್ರೆಯ ಬಲದಂಡೆ ಅಲ್ಲಲ್ಲಿ ಹಳ್ಳ ದಿಣ್ಣೆ, ಒರಟು ಒಡಕುಗಳನ್ನು ತೋರಿ ನಮ್ಮ ಅನಾಗರಿಕ ಪ್ರಜ್ಞೆಗೆ (ಪುಣ್ಯಕ್ಕೆ ಇಲ್ಲಿ ನುಣ್ಣನೆ ಕಾಂಕ್ರೀಟೋ ಒತ್ತಾಗಿ ಕೂರಿಸಿದ ಇಂಟರ್ಲಾಕೋ ಇರಲಿಲ್ಲ!) ಸಂತೋಷವನ್ನೇ ಕೊಟ್ಟಿತು. ಅದರಿಂದಾಚೆ ಬಹುಶಃ ಇನ್ನೂರು-ಮುನ್ನೂರಡಿ ಮೇಲೆ ಮರಗಳ ಕೊಡಿಯೂ ಕಾಣಿಸಿ ಇನ್ನೇನು ಶಿಖರ ಸಮೀಪಿಸಿತು ಎನ್ನುವ ಸಂಭ್ರಮ ಬೇರೆ. ಆದರೂ ಎಚ್ಚರ ಕಳೆದುಕೊಳ್ಳದಂತೆ ನಮ್ಮ ‘ಹಗ್ಗ ಮಾಲೆ’ಯ ರಕ್ಷಣಾ ತಂತ್ರವನ್ನು ಉಳಿಸಿಕೊಂಡೆವು. ಹಾಗೇಂತ ಪೂರ್ತಿ ಎಚ್ಚರವನ್ನು ವಹಿಸಿದೆವೇ? ಮೊದಲೇ ಹೇಳಿದಂತೆ ಹಗ್ಗಮಾಲೆಯ ವ್ಯವಸ್ಥೆಯಲ್ಲಿ ಒಬ್ಬನನ್ನು ಬಿಟ್ಟು ಒಬ್ಬನಂತೆ (ನಮ್ಮ ತಂಡಕ್ಕೆ ಅನ್ವಯಿಸಿದರೆ) ಒಮ್ಮೆಗೆ ಇಬ್ಬರು ಚಲಿಸಬೇಕು, ಇಬ್ಬರು ರಕ್ಷಣೆಗೆ ಸಜ್ಜಾಗಿರಬೇಕಿತ್ತು. ಆದರೆ ನಾವಿದರಲ್ಲಿ ತಪ್ಪಿದೆವು. ‘ಇನ್ನೇನು ಶಿಖರ ಬಂತು’ ಭಾವದಲ್ಲಿ ಎಲ್ಲರೂ ಸಾಲಿನಲ್ಲೇ ಇದ್ದರೂ ಒಟ್ಟಿಗೇ ಏರತೊಡಗಿದೆವು. ಮುಂದಿದ್ದವ ಸಣ್ಣಾಳು -- ಕಿರಣ್ ಕುಲಕರ್ಣಿ. ಆತ ನಾವು ವಿಶ್ರಮಿಸಿದ್ದ ಜಗುಲಿಯ ಸಪುರ ಕೊನೆಯವರೆಗೆ ಅಡ್ಡ ಸರಿದ. ಅಲ್ಲಿ ನಾಲ್ಕೈದು ಅಡಿ ಎತ್ತರದ ನೇರ ದರೆ ಹತ್ತಬೇಕಿತ್ತು. ಅದಕ್ಕನುಕೂಲವಾಗುವಂತೆ ಅಲ್ಲೊಂದು ದೊಡ್ಡ ಬಂಡೆ ಗುಂಡು ದರೆಗೆ ಒರಗಿ ನಿಂತಿತ್ತು. ಕಿರಣ್ ಅದನ್ನೇ ಬಳಸಿ ಮೇಲೇರಿದ. ಹಿಂಬಾಲಿಸಿದವ ದೊಡ್ಡಾಳು -- ನಾನು. ಇಬ್ಬರ ನಡುವಿನ ಹಗ್ಗದ ಅಂತರ ತೀರಾ ಹೆಚ್ಚು ಕಡಿಮೆಯಾಗದಂತಷ್ಟೇ ಎಚ್ಚರವಹಿಸಿ ಅನುಸರಿಸಿದ್ದೆ. ಜಗುಲಿ ಮುಗಿಸಿ ಗುಂಡಾನ್ನು ಏರಿ ಮುನ್ನುಗ್ಗಿದೆ. ಆದರೆ ಗುಂಡಿನ ಮೇಲಿನ ಕೊನೆ ಹೆಜ್ಜೆ ಕೀಳುವಾಗಿನ ನನ್ನ ನೂಕು ಬಲಕ್ಕೆ ಅನಿರೀಕ್ಷಿತವಾಗಿ ಗುಂಡು ಸಮತೋಲನ ಕಳೆದುಕೊಂಡಿತು. ಒಮ್ಮೆಗೆ ಅದು ಭಾರೀ ಸದ್ದಿನೊಡನೆ ಹಿಂದಕ್ಕೆ ಮಗುಚಿ ಜಗುಲಿಯ ಅಂಚಿನಲ್ಲಿ ನಿಂತಿತು. ಅದರಡಿಗೆ ನನ್ನಿಂದ ಮೂರನೆಯವನಿಗೆ ಹೋಗುತ್ತಿದ್ದ ಹಗ್ಗ ಸಿಕ್ಕಿಕೊಂಡಿತು. ನಮ್ಮ ಅದೃಷ್ಟ ಚೆನ್ನಾಗಿತ್ತು - ಹಗ್ಗ ತುಸುವೇ ಜಗ್ಗಿದಂತಾಗುವಷ್ಟರಲ್ಲಿ ಕಲ್ಲಿನ ಆಘಾತಕ್ಕೆ ಕಡಿದೇ ಹೋಯ್ತು! ಇಲ್ಲಿ ಬೆಲೆ ಬಾಳುವ ಹಗ್ಗ ಹಾಳಾದರೂ ಅದೃಷ್ಟ ನಮ್ಮ ಕಡೆಗೇ ಇತ್ತು! ಮೂರು, ನಾಲ್ಕನೆಯವರು (ಸಮೀರ, ಆನಂದ) ಇನ್ನೂ ವಿಶ್ರಾಂತಿ ನೆಲೆಯಿಂದ ಏಳದೇ ಏನೋ ಹರಟಿಕೊಂಡು ಪರಸ್ಪರ ಅಂತರದ ಹಗ್ಗದ ಸುರುಳಿ ಕರಗುವುದನ್ನಷ್ಟೇ ಕಾದಿದ್ದರು. ಬಂಡೆ ಹಗ್ಗ ಜಗ್ಗಿಕೊಂಡು ಕೊಳ್ಳಹಾರಿದ್ದರೆ ನಾಲ್ಕೂ ಜನ ಬೇಹುಶಾರಿಗೆ ಪ್ರಾಣ ತೆತ್ತ ಶಿಲಾರೋಹಿಗಳ ಪಟ್ಟಿಗೆ ಸಂದುಹೋಗುತ್ತಿದ್ದೆವು.
ಮುಂದೆ ನಿರೀಕ್ಷಿಸಿದಂತೆಯೇ ಸುಲಭವಾಗಿಯೇ ಶಿಖರ ಸೇರಿದೆವು. ಅದರ ನೇರ ಮೈಯ ಅವರೋಹಣ ಸ್ವತಂತ್ರ ಕಾರ್ಯಕ್ರಮವೇ ಆಗಬಹುದು. ಮತ್ತದು ನಮ್ಮ ಯೋಜನೆಯಲ್ಲಿ ಇಲ್ಲದ್ದರಿಂದ ಸಾರ್ವಜನಿಕ ಮೆಟ್ಟಿಲಲ್ಲೇ ಇಳಿದು ಮುಗಿಸಿದೆವು.
ಬಾಲಂಗೋಚಿ
ಅಂದು ಸಾಹಸವನ್ನು ಅಧಿಕೃತಗೊಳಿಸುವ, ದಾಖಲೆ (ಗಿನ್ನಿಸ್ಸೋ ಲಿಮ್ಕಾವೋ ಪುಸ್ತಕದ ಜ್ವರ ಕೆಲವರಿಗಿಲ್ಲವೇ ಹಾಗೆ) ಎಂದು ಸಾರುವ ಉಮೇದಿನ ಪ್ರಾಯ ನಮ್ಮದು. ಹಾಗಾಗಿ ಆರೋಹಣಾವಧಿಯ ಗಂಟೆ ಮಿನಿಟುಗಳಿಂದ ತೊಡಗಿ ತಿಳಿದ ವಿವರಗಳನ್ನೆಲ್ಲ ಕೂಡಿಸಿ ಒಂದು ಪ್ರಮಾಣ ಪತ್ರ ತಯಾರಿಸಿ ಜಿಲ್ಲಾಧಿಕಾರಿಗಳ ಕಛೇರಿಗೂ ಭಾರತೀಯ ಪರ್ವತಾರೋಹಣ ಪ್ರತಿಷ್ಠಾನಕ್ಕೂ ಕಳಿಸಿದೆ. ಅಭಿನಂದನೆ, ಪ್ರಚಾರ ಬಿಡಿ, ಕನಿಷ್ಠ ‘ತಲಪಿತು’ ಎಂಬ ಪ್ರತಿಕ್ರಿಯೆಯೂ ಬರಲಿಲ್ಲ.
ಇದೇ ಸುಮಾರಿಗೆ ಋತುವಿನ ಮೊದಲ ಮಳೆಯ ಆಘಾತಕ್ಕೆ ಶಿರಾಡಿಯಲ್ಲಿ ದರೆ ಕುಸಿದು ಹಲವು ಬಸ್ಸುಗಳೂ ಸಾರ್ವಜನಿಕರೂ ಸಿಕ್ಕಿಬಿದ್ದ ಸನ್ನಿವೇಶ ಬಂತು. ಆಗ ಜಿಲ್ಲಾಧಿಕಾರಿಗೆ ಪ್ರಥಮಾದ್ಯತೆಯಲ್ಲಿ ಜನರನ್ನು ಪಾರುಗಾಣಿಸಲು ನಮ್ಮ ನೆನಪಾದದ್ದೇ ನಮಗೆ ಸಮ್ಮಾನ! (ನಾವು ಜಿಲ್ಲಾಧಿಕಾರಿಯ ವ್ಯವಸ್ಥೆಯಲ್ಲಿ ಸ್ಥಳ ತಲಪುವಾಗ ಜನ ಸಮೀಪದ ಉಪ್ಪಿನಂಗಡಿಯಿಂದ ಧಾವಿಸಿದ ಬಾಡಿಗೆ ಕಾರುಗಳನ್ನು ಹಿಡಿದು, ಅವರಷ್ಟಕ್ಕೇ ಪಾರಾಗಿದ್ದರು!) ಅದರ ಬೆನ್ನಿಗೇ ರಾಜ್ಯದ ಯುವಜನ ಸೇವಾ ಇಲಾಖೆಯ ವರಿಷ್ಠರೊಬ್ಬರು ಮಂಗಳೂರಿಗೆ ಭೇಟಿಯಿತ್ತಾಗ ಮತ್ತೆ ಅದೇ ಜಿಲ್ಲಾಧಿಕಾರಿಯ ಶಿಫಾರಸಿನ ಮೇಲೆ ನನ್ನನ್ನು ಕರೆಸಿಕೊಂಡು ಆರೋಹಣದ ಸಾಂಸ್ಥೀಕರಣ, ಅನುದಾನದ ಕುರಿತು ಮಾತಾಡಿದ್ದೂ ಆಯ್ತು. ಆದರೆ ಪ್ರಜಾಪ್ರಭುತ್ವದ ಅಣಕದಲ್ಲಿ ಆರೋಹಣ ಒಂದು ಪಾತ್ರ ನಿರ್ವಹಿಸುವಂತೆ ಅವರು ಸೂಚಿಸಿದ್ದರು. ಅಂದರೆ ಅಧ್ಯಕ್ಷ, ಕಾರ್ಯದರ್ಶಿ ಇತ್ಯಾದಿ ಕೂಟ ರಚಿಸಿ, ಸಂವಿಧಾನ ಹೊಸೆದು ಯುವಜನ ಸೇವಾ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಅನಂತರ ಇಲಾಖೆಯ ಕೆಲವು ಅಪ್ರಾಯೋಗಿಕ ನಿಬಂಧನೆಗಳನ್ನು ಪೂರೈಸುವುದರೊಡನೆ ಸಾಹಸ ಯೋಜನೆಯೊಂದನ್ನು ಪತ್ರದಲ್ಲಿ ಮೂಡಿಸಿ ರಸೀದಿ ವಗೈರೆ ಹೊಂದಿಸಿ ಪಾವತಿಗೆ ಮನವಿ ಸಲ್ಲಿಸಬೇಕಿತ್ತು. ನಾನು ಮಾಡಲಿಲ್ಲ. ಮಾರ್ಚ್ ಕೊನೆಯ ವಾರದಲ್ಲಿ ಇಲಾಖೆಯ ಮಂಗಳೂರು ಅಧಿಕಾರಿಯಿಂದ ನನಗೆ ದೂರವಾಣಿ ಸೂಚನೆ ಬಂತು, "ಅನುದಾನ ಬಂದಿದೆ, ಔಪಚಾರಿಕತೆಗಳನ್ನು ಕೂಡಲೇ ಪೂರೈಸಿಕೊಡಿ". ನಾನು ಜಗ್ಗಲಿಲ್ಲ. ಕೊನೆಗೆ ಆತ ನನ್ನಲ್ಲಿಗೇ ಬಂದು ತಾನು ಕಳಿಸಿದ್ದ ಹಲವು ಅನುದಾನ ಬೇಡಿಕೆಗಳು ತಿರಸ್ಕೃತಗೊಂಡರೂ ಆರೋಹಣದ್ದು ಗಟ್ಟಿ ಶಿಫಾರಸು ಮತ್ತು ಸತ್ತ್ವದಿಂದಲೇ ಮೇಲೆ ಬಿದ್ದಿದೆ. ಅದನ್ನೂ ನೀವು ನಿರಾಕರಿಸಿದರೆ ತನಗೆ ಕಾರಣ ಕೊಡುವುದು ಕಷ್ಟವಾಗುತ್ತದೆ ಎಂದೂ ನಿವೇದಿಸಿಕೊಂಡರು. ಆದರೂ ಹವ್ಯಾಸೀ ಸಂತೋಷವನ್ನು ಸರಕಾರೀ ಕಡತಗಳಿಗೆ ಕಳೆದುಕೊಳ್ಳದೆ ಅನುದಾನದ ಬಲೆ ಹರಿದದ್ದಕ್ಕೆ ಇಂದಿಗೂ ನಾನು ಸಂತೋಷಿ.
ನೆನಪುಗಳು ಮರುಕಳಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು.
ReplyDeleteನಮ್ಮೊಟ್ಟಿಗೆ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಕುಡಿಯುವ ನೀರಿನ (ಆಗಿನ್ನೂ ಪ್ಲಾಸ್ಟಿಕ್ ಬಾಟಲುಗಳು ಬಂದಿರಲಿಲ್ಲ) ಪೊಟ್ಟಣಗಳನ್ನು ನನಗೆ ಒಪ್ಪಿಸಿ ತಾವು ಬರಿಗೈಯಲ್ಲಿ ಹತ್ತಲು ಆರಂಭಿಸಿ ಸ್ವಲ್ಪ ಸಮಯದಲ್ಲೇ ನೀರಿಗಾಗಿ ಅಂಗಲಾಚಿದ್ದು , `ತುದಿಯವರೆಗೆ ನೀರು ಕೇಳದೆ ಹತ್ತಿದರೆ ತರಗತಿ ಪರೀಕ್ಷೆಯಲ್ಲಿ ಒಂದು ಅಂಕ ಹೆಚ್ಚು ಕೊಡುವು'ದಾಗಿ ಹೇಳಿದಾಗ `ಅಂಕ ಬೇಡ ಈಗಲೇ ನೀರು ಕೊಟ್ಟುಬಿಡಿ' ಎಂದು ಗೋಗರೆಯುತ್ತಿದ್ದುದು, ಮತ್ತು ತುದಿಯನ್ನು ತಲುಪಿದ ಮೇಲೆ ನೀರು ಕೊಟ್ಟು `ಇನ್ನೇ ನು ಅಂಕ ಬೇಡವಲ್ಲ!' ಎಂದಾಗ ಮರುಳು ನಗೆ ಬೀರಿದ್ದು ನೆನಪಿನಲ್ಲಿ ಹಚ್ಚ ಹಸುರಾಗಿದೆ.!
ವಾವ್, ಬ್ಲಾಗ್ನ ಹೊಸ ರೂಪ ಚೆನ್ನಾಗಿದೆ. ನಿಮ್ಮ ಸಾಹಸಗಳೆಲ್ಲಾ ಒಂದೊಂದಾಗಿ ಅನಾವರಣಗೊಳ್ಳಲಿ. ಹಾಗೇ ಜಗಳಗಳೂ.
ReplyDelete- ಹರೀಶ್ ಕೇರ
I am unable to access baraha from this site. You took me along rock climbing! I am glad you did not seek publicity or or fortune thro' this pure fun of yours. Keep up the badukuva chala.
ReplyDeleteನಿಮ್ಮ ರೋಮಾಂಚಕ ಸಾಹಸವನ್ನೋದಿ, ನಾನು ಬಾವುಟ ಗುಡ್ಡೆ ಏರಿ (ಬರಹ ಓದಿದ ಮೇಲೆ ನಡೆದು ಎನ್ನೋಣ ಎನಿಸುತ್ತದೆ) ಕಾಲೇಜು ತಲುಪಲೇ ಉಸ್ಸಪ್ಪಾ ಅನ್ನುತ್ತಿದ್ದುದು ನೆನೆದು ಅಂಜಿದೆ. ನೀವೊಂದು ವಿಸ್ಮಯ !!
ReplyDeleteಗಡಾಯಿ ಕಲ್ಲಿನ ಚಾರಣದ ಲೇಖನ ಚೆನ್ನಾಗಿದೆ. ಓದುತ್ತಾ ಹೋದಂತೆ , ಹಗ್ಗ ತುಂಡಾದ ಪ್ರಸಂಗ ಓದುವಾಗ ಎದೆ ಝಲ್ಲೆಂದಿತು..
ReplyDeleteಕುಶಲ ಶೆಟ್ಟಿ, ಅಳಿಕೆ
ಬರಹ ಚೆನ್ನಾಗಿದೆ...ಅಂದಿನ ದಿನಗಳ ಸಾಹಸ ಯಾತ್ರೆ ಇಂದಿಗೂ ಸ್ವಾರಸ್ಯಕರ.
ReplyDeleteಗಿರೀಶ್, ಬಜಪೆ
ನಾವೇ ನಿಮ್ಮ ಜತೆಗಿದ್ದಂತಿತ್ತು.
ReplyDelete