03 August 2009

ಬಿರುಮಳೆಗೆ ಜಗ್ಗದ ಕರಿರಾಯ

MAP
(ಕುದುರೆಯ ನೆರಳಲ್ಲೊರಗಿದ ಆನೆ ೨)ಬೆಳ್ತಂಗಡಿಯ ದಿಗಂತದಲ್ಲಿ, ಬಂಗಾಡಿ - ಕಿಲ್ಲೂರು ಕೊಳ್ಳದ ಬಾಗಿಲಲ್ಲಿ ನಿಂತ ಏಕಶಿಲಾ ಶಿಖರ ಜಮಾಲಾಬಾದ್. ಉತ್ತರ ದಕ್ಷಿಣವಾಗಿ ಹಬ್ಬಿದ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯಿಂದ ಕರಾವಳಿಯತ್ತ ಚಾಚಿದ ಒಂದು ಕಿರುಶ್ರೇಣಿಯ ಪೂರ್ಣ ಶಿಲಾಕೊನೆಯಿದು. ಅಂತಿಂಥ ಬಂಡೆ ಇದಲ್ಲ! ಪಶ್ಚಿಮ ಘಟ್ಟದ ತಪ್ಪಲಲ್ಲಿ ಇಂಥ ಮಹಾಕಾಯ ಇನ್ನೊಂದಿಲ್ಲ. ಸುತ್ತಣ ನೆಲದಿಂದ ಸುಮಾರು ೧೨೦೦ ಅಡಿಗಳವರೆಗೂ ಸಮುದ್ರ ಮಟ್ಟದಿಂದ ೧೭೭೮ ಅಡಿಗಳ ಎತ್ತರಕ್ಕೂ ಮಲೆತಿದೆ ಇದರ ತಲೆ. (ಶಿಖರದ ನೆಲ ಸುಮಾರು ದಕ್ಷಿಣೋತ್ತರಕ್ಕೆ ಚಾಚಿಕೊಂಡಂತಿದೆ.) ಹಿಂದೆ ಕರಾವಳಿ ಘಟ್ಟಸೀಮೆಗಳ ನಡುವೆ ನಿತ್ಯ ಸಂಚಾರಕ್ಕೆ ಅಸಂಖ್ಯ ಕಾಲ್ದಾರಿಗಳನ್ನು ಜನ ಗುರುತಿಸಿಕೊಂಡಿದ್ದರು. ಅವುಗಳಲ್ಲಿ ಕಿಲ್ಲೂರು ಮೂಲಕ ಏರುವ ಯಳನೀರು ಘಾಟಿಯೂ ಒಂದು. ಆ ಕಾಲದ ರಾಜ್ಯ ರಕ್ಷಣಾ ತಂತ್ರದಲ್ಲಿ ಇದು ಮುಖ್ಯ ಕಣ್ಗಾಪು ಕೇಂದ್ರವಾಗಿ ಮಹತ್ತ್ವ ಪಡೆದಿರಬೇಕು. ಸಹಜವಾಗಿ ಇದರ ಪ್ರಾಕೃತಿಕ ದುರ್ಗಮತೆಗೆ ಮಾನವ ರಚನೆಯ ಒಪ್ಪ ಸಿಕ್ಕಿತು. ಜನ ಕೆಲವು ರಚನೆಗಳ ಖ್ಯಾತಿಯನ್ನು ನರಸಿಂಹನೆಂಬೊಬ್ಬ ಪಾಳೇಗಾರನ ಖಾತೆಗೆ ಸೇರಿಸುತ್ತಾರೆ. ಹಾಗೆ ಇದು ನರಸಿಂಹ ಗಢ. ಟಿಪ್ಪುಸುಲ್ತಾನ ಗಢ ಗೆದ್ದ. ಹೆಚ್ಚಿನ ಭದ್ರತೆ ಒದಗಿಸಿದ. ಖ್ಯಾತಿ ಮತ್ತು ಖಾತೆ ಆತ ನಾಮಕರಣ ಮಾಡಿದಂತೆ ಆತನ ತಾಯಿ ಹೆಸರಿಗೆ ವರ್ಗಾವಣೆಗೊಂಡು ಮುಂದೆ ಇದು ಜಮಾಲಬಾದ್ ಗಢ.

ಶಿಲಾಶಿಖರದ ಉತ್ತರ ಕೆಳ ಅಂಚಿನಿಂದ ಮೆಟ್ಟಿಲ ಸಾಲು ತೊಡಗುತ್ತದೆ. ಮಧ್ಯಂತರದವರೆಗೆ ಏರು ಸಾಮಾನ್ಯವಿರುವುದರಿಂದ ಅಲ್ಲಲ್ಲಿ ತುಂಡು ಕಲ್ಲುಗಳನ್ನು ಜೋಡಿಸಿ ಮೆಟ್ಟಿಲು ರಚಿಸಿದ್ದಷ್ಟೇ ಕಾಣುತ್ತದೆ. (ಇಂದು ಹಲವು ಅಭಿವೃದ್ಧಿ ಯೋಜನೆಗಳ ಸೋರು ಸೇವೆಯಲ್ಲಿ ಮೆಟ್ಟಲುಗಳು ಅಷ್ಟಿಷ್ಟು ಜೀರ್ಣೋದ್ಧಾರವಾದ್ದನ್ನು ಗಮನಿಸಬಹುದು) ಮತ್ತಿನರ್ಧದಲ್ಲಿ ಬಂಡೆ  ತೀರಾ ಕಡಿದಾಗಿದೆ. ಅಲ್ಲಿ ಆಯಕಟ್ಟಿನ ಜಾಗದಲ್ಲಿ ಓರೆಯಲ್ಲಿ ಉದ್ದದ ಓಣಿಯನ್ನೇ ಕಡಿದು ತಳದಲ್ಲಿ ಮೆಟ್ಟಿಲುಗಳನ್ನೂ ರೂಪಿಸಿದ್ದಾರೆ. ಎಲ್ಲ ಕಾಲಕ್ಕೂ ನೀರೂಡುವ ಒಡ್ಡುಗಳು, ಮಟ್ಟಸ ನೆಲ, ಗೋಡೆ, ಬುರುಜು, ದ್ವಾರ, ಕಾವಲು ಕೋಣೆ ಇತ್ಯಾದಿ ರಚನೆಗಳು ಹಲವಿವೆ. ಬರಿಯ ‘ಕಲ್ಲು’ ‘ಗಢ’ವಾದ್ದಕ್ಕೆ ಕುರುಹುಗಳು ಇವು. ಆದರೆ ಇಂದು ಒಡಕು ತೋಪು, ಜರಿದ ಗೋಡೆ, ಜಾರಿದ ಮೆಟ್ಟಿಲು, ಹಾಳು ಬಿದ್ದ ಕೆರೆ ಇತ್ಯಾದಿ ಗತವೈಭವಕ್ಕಷ್ಟೇ ಸಾಕ್ಷಿಗಳು. ಕಾಲಕ್ಕೆ ಪಕ್ಕಾಗಿ ಇಂದು ಗಢ ಕಳಚುತ್ತ ಬಂದು ಬರಿಯ ಜಮಾಲಾಬಾದ್ ಉಳಿದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಗವಾಗಿ, ಕೇವಲ ಗಡಾಯಿಕಲ್ಲಾಗಿ ಮರಳಿ ಪ್ರಕೃತಿಗೇ ಸೇರುವುದು ಹೆಚ್ಚು ನ್ಯಾಯವೇ ಇರಬೇಕು. ಕರಾವಳಿ ವಲಯದಲ್ಲಿ ಪ್ರಾಕೃತಿಕ ವೈಭವವನ್ನು ತೀವ್ರವಾಗಿ ಅನುಭವಿಸುವುದಿದ್ದರೆ ಅದಕ್ಕೆ ಬಿರುಸಿನ ಮಳೆಗಾಲವೇ ಸರಿ. ಅದೂ ಘಟ್ಟದ ತಪ್ಪಲಿನಲ್ಲಿ ಬಿರ್ರುಸು! ಹಾಗಾದರೆ ಕಿಲ್ಲೂರು ಕಣಿವೆಗೆ ನುಗ್ಗುವ ಪಡುವಣ ಗಾಳಿ, ಮೋಡ, ಮಳೆಗಳನ್ನು ನಿಷ್ಕರುಣಿ ಸುಂಕದ ಕಟ್ಟೆಯವನಂತೆ ತಡೆಯುವ ಜಮಾಲಾಬಾದಿನ ನೆತ್ತಿಯಲ್ಲಿ ಹೇಗಿದ್ದೀತು ಎಂಬ ಕುತೂಹಲದಲ್ಲಿ ಅದೊಂದು ದಿನ ನಾವಾರು ಜನ ಹೊರಟೆವು.

ಏರುಮಲೆ ಹೊಳೆಗೆ ಏರುಜವ್ವನದ ಸೊಕ್ಕು. ಕಾಂಕ್ರೀಟ್ ಸೇತುವೆ ಅಲ್ಲಿಗಿನ್ನೂ ಬಂದಿರಲಿಲ್ಲ. ಹೊಳೆ ಅಟ್ಟಹಾಸಗೈಯುತ್ತಾ ಮುದಿಪಾಲದ ನಡುಗುರ್ಜಿಗೆ (ಮರ, ಬಳ್ಳಿಯನ್ನು ಹೆಚ್ಚು ಸಂಸ್ಕರಿಸದೆ ಬಿಗಿದು ರಚಿಸಿದ ಸೇತುವೆ = ಪಾಲ. ಪಾಲದ ಆಧಾರಕ್ಕಾಗಿ ಹೊಳೆ ಪಾತ್ರೆಯಲ್ಲಿ ಬೀಳಲಿನ ಕಟ್ಟಿನೊಳಗೆ ಕಾಡುಕಲ್ಲು ಮರದ ಬೊಡ್ಡೆ ಗಿಡಿದು ಮಾಡುವ ಸ್ತಂಭ = ಗುರ್ಜಿ) ಕೆನ್ನೀರನ್ನಪ್ಪಳಿಸಿ ನಡುಗಿಸುತ್ತಿತ್ತು. ಅರುವತ್ತಡಿ ಉದ್ದದ ಸಂಕದಲ್ಲಿ ಎಲ್ಲ ನೆಚ್ಚುವಂತಿರಲಿಲ್ಲ. ಭಯ ಹತ್ತಿಕ್ಕಿ ದಾಟುವುದೇನೋ ಸರಿ, ಆದರೆ ಸಂಜೆ ವಾಪಾಸಾಗುವಾಗ ನೀರ ಅಬ್ಬರದಲ್ಲಿ ಇಷ್ಟಾದರೂ ಉಳಿದಿರುತ್ತದೆಯೇ ಎಂಬ ಸಂಶಯ. ಆದರೂ ಸರದಿಯಲ್ಲಿ ಒಮ್ಮೆ ಒಬ್ಬರಂತೆ, ಅವರವರ ತಾಕತ್ತಿನಂತೆ ನಡೆದು, ಕೂತು, ತೆವಳಿ ಹೊಳೆ ದಾಟಿದ್ದು ಸ್ವತಂತ್ರ ಸಾಹಸವೇ ಸರಿ.

JB1ಮೆಟ್ಟಿಲ ಸಾಲಿನಲ್ಲೇ ಬಂಡೆ ಏರತೊಡಗಿದೆವು. ನಮ್ಮ ರಬ್ಬರ್ ಅಟ್ಟೆಯ ಶೂ ಪಾಚಿಗಟ್ಟಿದ ಬಂಡೆಯ ಮೇಲೆ ಅಪಾಯಕಾರಿ. ಸಾಲದ್ದಕ್ಕೆ ತುಂಡು ಕಲ್ಲುಗಳ ಜೋಡಣೆಯ ಮೆಟ್ಟಿಲು ಹೆಚ್ಚು ಶಿಥಿಲವಾಗಿ ಕೆಲವೆಡೆಗಳಲ್ಲಿ ಬೆಟ್ಟವೇ ಮೈಮೇಲೆ ಬರುವ ಅನುಭವ! ಭದ್ರ ಬಂಡೆಯ ಸ್ವಾಭಾವಿಕ ಚಡಿ, ಪೊಳ್ಳು ಅರಸಿ ಅತ್ತಿತ್ತ ಹೋಗೋಣವೆಂದರೆ ಪ್ರತಿ ಕಿರು ಸೀಳೂ, ತಗ್ಗೂ ಮಳೆ ನೀರ ಮೊತ್ತದಲ್ಲಿ ಬಿರುಝರಿಯಾಗಿ ಅಡಿಗೆಡಿಸುತ್ತಿತ್ತು. ರಭಸದ ಗಾಳಿ, ಎಡೆಬಿಡದ ಮಳೆ ಹುಯ್ಲಿಡುತ್ತಲೇ ಇತ್ತು. ನಮ್ಮಲ್ಲಿ ಮೂವರು ಛತ್ರಪತಿಗಳು (ಕೊಡೆ ಹಿಡಿದವರು), ಉಳಿದವರು ನೀಳಂಗಿಗಳು (ಮಳೆಕೋಟು). ಗಾಳಿಗೂಳಿ ಕೊಡೆಗಳನ್ನು ಅತ್ತಿತ್ತ ಕುಣಿಸಿ ನೋಡಿತು. ಛತ್ರಪತಿಗಳು ದೈನ್ಯದಲ್ಲಿ ಸೊಂಟ ಬಗ್ಗಿಸಿ, ಕೊಡೆಯ ಕಾಲನ್ನು ಕುದುರೆಯ ಬಳಿಯೇ ಹಿಡಿದು ಸಂಭಾಳಿಸಿದರು. ಉನ್ಮತ್ತ ಗಾಳಿ ಹಾಕಿತು ಜಾಣ ಜಟ್ಟಿಯ ಪಟ್ಟು, ನೆಲ ಬಡಿದು ಕೊಡೆ ತುಂಬುವ ಪೆಟ್ಟು! ಕೊಡೆಗಳು ಒಳಹೊರಗಾಗಿ, ಕಡ್ಡಿಕೋಲು ಮುರಿದು ಅವಶೇಷಗಳ ಕಟ್ಟಾಗಿ ಕಂಕುಳು ಸೇರಿದವು. ಕೊಡೆಗಣ್ಣ ನೋಟಕ್ಕೆ ಕೋಟುಧಾರಿಗಳು ಪರಮಸುಖಿಗಳು. ಆದರೆ ಕಂಕುಳು ಬಿಟ್ಟ ಕಳಪೆ ಪ್ಲ್ಯಾಸ್ಟಿಕ್ ಶರಟು, ರಬ್ಬರ್ ಪುಡಿ ಉದುರಿ ಸಹಸ್ರಾಕ್ಷವಾದ ಡಕ್‌ಬ್ಯಾಕ್‌ಗಳು ಅಂತರಂಗ ಬಹಿರಂಗ ಒಂದಾಗಿಯೇ ಉಳಿಸಿದ ಕಥೆ ಅವರಿಗೆ ಹೇಳಿಕೊಳ್ಳಲು ಗರ್ವಬಿಡಬೇಕಲ್ಲಾ. ಹೇಳಿ ಕೇಳಿ ಏರು ಜಾಡು. ಕಾಲೆತ್ತೆತ್ತಿ ಮುಂಭಾಗದಲ್ಲಿ ಸೊಂಟದವರೆಗು ನೀರೊಸರಿ ಒದ್ದೆಯಾಗುವುದಂತೂ ಅನಿವಾರ್ಯ. ಮತ್ತೆ ಕತ್ತಿನ ಪಟ್ಟಿಯೆಡೆಯಿಂದ ಇಳಿದ ಧಾರೆ, ಜಿಪ್ಪಿನ ಸಂದಿನಿಂದ ಜಿನುಗಿದ ಒಸರು ಸೇರಿ ಒಟ್ಟಾರೆ ನಖಶಿಖಾಂತ ಒದ್ದೆ ಮುದ್ದೆ.

ಮಧ್ಯಂತರದ ಕಿರು ಕಾಡು ಬಂತು. ಅಲ್ಲಿ ಮರಗಳ ಚಪ್ಪರದಡಿಯಲ್ಲಿ ಮಳೆ ತಪ್ಪಿಸಿ, ಗೋಡೆಯ ಮರೆಯಲ್ಲಿ ಗಾಳಿ ನಿವಾರಿಸಿ ಸುಧಾರಿಸಿಕೊಳ್ಳೋಣವೆಂದು ನಿಂತೆವೇ....... ಇಲ್ಲ, ಇಲ್ಲ! ಕ್ಷಣಾರ್ಧದಲ್ಲಿ ಮುಂದಿನ ಜಾಡಿಗೆ ಧಾವಿಸಿದೆವು; ಅಟಕಾಯಿಸಿತ್ತು ಜಿಗಣೆಗಳ ದಂಡು, ಸೊಳ್ಳೆಗಳ ಹಿಂಡು! ಮಿಲಿಮೀಟರಿನ ಕಿರುಕುಳದಿಂದ ಗೇಣಿಕ್ಕುವ ಮಹಾಹುಳದವರೆಗೆ ಎಲೆತೊಟ್ಟು, ಕಡ್ಡಿ, ಹುಲ್ಲು, ಮುಳ್ಳೆಲ್ಲ ನಿಶ್ಶಬ್ದವಾಗಿ ಜೀವ ತಳೆದು ತಣ್ಣಗೆ ನಮ್ಮ ರಕ್ತ ಹೀರಲು ಕಾದು ನಿಂತಂತಿತ್ತು. ತಟಪಟ ಹನಿಗಳಿಗೆ ಕೊಂಡಿಮೂಡಿತೇ ಭೋರ್ಗಾಳಿ ಮೂಡಿದ್ದೇ ಇವುಗಳ ಸಂದಣಿಯಿಂದಲೇ ಎಂದು ಭ್ರಮಿಸುವಂತೆ ಸೊಳ್ಳೇ ಸೊಳ್ಳೆ. ಕಿತ್ತೆಸೆದಷ್ಟೂ ಅಂಟುವ, ಬಡಿದಷ್ಟೂ ಬೆಳೆಯುವ ರಕ್ತಬೀಜಾಸುರನ ಕತೆಯೇ ಮೈದಳೆದಂತನ್ನಿಸಿ ಮೇಲಿನ ಮಜಲಿಗೆ ದೌಡಾಯಿಸಿದೆವು.

JB2ಮೆಟ್ಟಿಲ ಓಣಿ ಅಂದು ವಿಶಿಷ್ಟ ಕಾಲುವೆ. ಶಿಖರದೆಡೆಯಿಂದ ಮೆಟ್ಟಿಲಗುಂಟ ಮೊಣಕಾಲಾಳದ ನೀರು ಹರಿದು ಬರುತ್ತಿತ್ತು. ಮೇಲೆ ಮುಂಚಾಚಿದ ಬಂಡೆಯಿಂದ ಉದ್ದಕ್ಕೂ ಜಲಪಾತ. ಹಾಗೂ ಖಾಲಿಯುಳಿದಲ್ಲಿ ತುಂಬಿಕೊಡುವಂತೆ ಮತ್ತೂ ಎತ್ತರದಿಂದ ಧಾರೆ ಕಡಿಯದ ಮಳೆ! (ಜೋಗದ ಗುಂಡಿಯಲ್ಲಿ ನಿಂತ ಮುಗ್ದ ಉದ್ಗರಿಸಿದನಂತೆ "ಇಷ್ಟೆತ್ತರದಿಂದ ನೀರು ಬೀಳೋದು ನಾ ಬೇರೆ ನೋಡ್ಲಿಲ್ಲಾ". ಶಾಣ್ಯಾ ಕುಟ್ಟಿದನಂತೆ "ಮಳೆ?") ಜಲಪಾತ ಸರಿಸಿ ಏರುವಲ್ಲಿ ಫ್ಯಾಂಟಮನ ತಲೆಬುರುಡೆ ಗುಹೆ ಹೊಕ್ಕ ರೋಮಾಂಚನ. ಆದರೆ ನೀರ ಸೆಳೆತ, ಜಾರು ನೆಲ ರಮ್ಯವಿರಲಿಲ್ಲ. ನಮ್ಮಲ್ಲೇ ಶಿಲಾರೋಹಣವನ್ನು ರೂಢಿಸಿಕೊಂಡ ಯುಕ್ತಿವಂತನೊಬ್ಬ ಮುಂದಾದ. ಓಣಿಯ ಅಂಚಿನಲ್ಲಿ ಅಲ್ಲೊಂದು ಇಲ್ಲೊಂದು ಇದ್ದ ಗಿಡ, ಬೇರು, ಬಂಡೆಯ ಸೀಳು, ಸಂದು ಆಧರಿಸುತ್ತ ನಾಲ್ಕು ಕಾಲಿನಲ್ಲೇ ಎಂಬಂತೆ ಸ್ವಲ್ಪ ಸ್ವಲ್ಪ ಏರಿದ. ಜೊತೆಗೆ ಒಯ್ದಿದ್ದ ಉದ್ದ ಹಗ್ಗದಿಂದ ಹಿಂಬಾಲಕರಿಗೆ ವಿವಿಧ ಹಂತಗಳಲ್ಲಿ ಆಧಾರ ಕಲ್ಪಿಸಿ ಏರಿಸಿಕೊಳ್ಳುತ್ತ ನಡೆದ. ಪ್ರವಾಹದ ಎದುರು ಸಿಕ್ಕಿ ಬಿದ್ದ ಕಸ ಕಡ್ಡಿಯಂತೆ ಹಗ್ಗಕ್ಕೆ ಜಗ್ಗಿ ಬಿದ್ದು, ಅತ್ತಿತ್ತ ತೊನೆಯುತ್ತ, ನಾಲ್ಗಾಲರಾಗ ಹೋಗಿ ಆಗೀಗ ತೆವಳಿ ತೇಕುತ್ತ ಎಲ್ಲ ಹಿಂಬಾಲಿಸಿದರು. ಅಂದು ಮೆಟ್ಟಿಲುಗಳ ಲೆಕ್ಕ, ಏರುನಡೆಯ ಶ್ರಮ, ಅಂಚುಗಟ್ಟೆ ಏರಿ ಕೊಳ್ಳ ಹಣಿಕುವ ಕುತೂಹಲ ಯಾರಿಗೂ ಬರಲಿಲ್ಲ. ಮೇಲಿನ ದಿಡ್ಡಿ ಬಾಗಿಲು ಬಲು ದೊಡ್ಡ ಧಾರಾವಾಹಿಯ ಸುಖಾಂತ. ಓಣಿಯ ಝರಿಯಲ್ಲಿ ಹಗ್ಗ ಹರಿದುಹೋಗಿ ನುಗ್ಗು ನುರಿಯಾಗುವುದು, ಮತ್ತೆ ಕೆಳಗಿನ ಆಳಕ್ಕೆಲ್ಲೋ ಜಲಪಾತವಾಗಿ ಕೆಡೆದುಹೋಗುವುದು, ಕೊನೆಯದಾಗಿ ಏರುಮಲೆ ಹೊಳೆಯ ಕೆನ್ನೀರ ಬಣ್ಣಕ್ಕಿಷ್ಟು ಬಣ್ಣವಾಗಿ ಕರಗುವುದು ಸದ್ಯಕ್ಕೆ ಮಿಥ್ಯ; ನಾವು ನೆತ್ತಿ ತಲಪಿದ್ದೊಂದೇ ಸತ್ಯ. ವಿಜ್ಞಾನ ಹೇಳುತ್ತದೆ ಮನುಷ್ಯ ದೇಹ ಶೇಕಡಾ ಅರವತ್ತೇಳು ನೀರು. ಆದರೆ ನಮಗನ್ನಿಸುತ್ತಿತ್ತು ನಾವಂತೂ ನೂರಕ್ಕೆ ನೂರು ನೀರು!

ಶಿಖರದ ಗಾಂಭೀರ್ಯವನ್ನು ಸಾರುವ ಸುತ್ತಣ ಕೊಳ್ಳ ಅಂದು ಕಳೆದುಹೋಗಿತ್ತು. ಎಲ್ಲೆಲ್ಲು ಮೆದೆಯೊಡ್ಡಿದ ಕರಿಮೋಡ. ಅದರ ಒಕ್ಕಲಿನ ಭರಾಟೆಯಲ್ಲಿ ತೂರಿಬರುವ ಧಾನ್ಯದಂತೆ ರಾಚುವ ಮಳೆಹನಿ. ಮೇಘಾವಳಿ ಪಶ್ಚಿಮದ ಗಾಳಿ -- ಹುಚ್ಚುಗುದುರೆಯನ್ನು ಏರಿತ್ತು. ಕುದುರೆಮುಖ ಶ್ರೇಣಿಗೆ ಬಡಿದು ಮರಳಿತು. ಇಮ್ಮಡಿಸಿದ ಆಟೋಪಕ್ಕೆ ಎದೆಯೊಡ್ಡಿ ನಿಂತ ದಿಟ್ಟ ಜಮಾಲಾಬಾದ್. ಘರ್ಷಣೆಯ ಕಿಡಿಗಳಂತೆ, ಬೆಳ್ಳಿಮಣಿಗಳಂತೆ ನೀರಹನಿ ಕೋಟೆಗೋಡೆಯ ಪಶ್ಚಿಮ ಅಂಚಿನಿಂದ ಆಕಾಶಕ್ಕೆ ಸಿಡಿಯುತ್ತಿತ್ತು. ನಮ್ಮ ಸುತ್ತಲೂ ಮಲೆತ ಆಳೆತ್ತರದ ದಟ್ಟ ಹುಲ್ಲು ಮಳೆಗಾಳಿಗೆ ಜಗ್ಗುವಾಗ, ನೆಲದ ಸೊಕ್ಕಿಗೆ ನೇರಾಗುವಾಗ ಬೆಟ್ಟವೇ ಏದುಸಿರು ಬಿಡುವಂತಿತ್ತು. ನಮ್ಮನ್ನು ಕುಟ್ಟಿ ಪುಡಿಮಾಡುವಷ್ಟು ಘನ ಮೋಡವಿರಲಾರದು ಎಂದು ದೈರ್ಯ ಮಾಡಿಕೊಂಡು ಗೋಡೆಯಂಚಿಗೆ ಸರಿದೆವು. ಕುಂಭದ್ರೋಣ ಸುರಿವ ಮಳೆಯನ್ನು ಬಾಯಲ್ಲೇ ಊದಿ ಉಸಿರಾಡುತ್ತಾ ಕಣ್ಣ ಮೇಲೆ ಕೈ ಓರೆ ಮಾಡಿ ಪಿಳುಕಿದೆವು, ಹುಡುಕಿದೆವು "ಕೊಳ್ಳವೆಲ್ಲಿ, ಎಲ್ಲಿ?" ಮೋಡಗಳೆಡೆಯಲ್ಲಿ ಆಗೊಮ್ಮೆ ಈಗೊಮ್ಮೆ ಕಂಡಿ ಬಿದ್ದಂತೆ, ಎಲ್ಲ ನುಂಗುವ ಕೃಷ್ಣವಿವರದಂತೆ ಏನೂ ಇಲ್ಲದೆಯೂ ಏನೋ ಕಂಡಂತೆ ಭಾಸ ಮಾತ್ರ. ಬಹುಶಃ ಜಲಪ್ರಳಯವೇ ಆಗಿದೆ. ಎಲ್ಲ ಮುಳುಗಿದೆ, ನಾವು ಮಾತ್ರ ಉಳಿದಿದ್ದೇವೆ. ಇನ್ನು ಇಲ್ಲೇ ನಿಲ್ಲುವುದೇ ಇಳಿದು ನೋಡುವುದೇ ಎಂಬ ಸಂದೇಹದೊಡನೇ ಹಿಂದೆ ಹೊರಟೆವು. ಪ್ರತಿ ಮೆಟ್ಟಿಲಲ್ಲೂ ಅದರ ಕೆಳಗಿನದ್ದರ ಬಗ್ಗೆ ಮಾತ್ರ ವಿಶ್ವಾಸಿಸುತ್ತಾ ಮರಳಿದೆವು!
ದಾಖಲೆಗಳ ಬಗ್ಗೆ ಎರಡು ಮಾತು: ದಕ ವಲಯದಲ್ಲಿ ನನ್ನ ಮೊದಲ ‘ಸಾಹಸ’ ಕಾರ್ಯಕ್ರಮಗಳನ್ನು ನೆನಪಾದಾಗ, ಕುಶಿ ಬಂದಂತೆ, ಒಂದು ಪುಸ್ತಕದಲ್ಲಿ ಕಿರುಟಿಪ್ಪಣಿಗಳ ರೂಪದಲ್ಲಿ ದಾಖಲಿಸಲು ತೊಡಗಿದ್ದೆ. ಮುಂದುವರಿದು ಕೆಲವು ಕಾಲ ಯಾವ್ಯಾವುದೋ ಮದುವೆ, ಶುಭಾಶಯ ಪತ್ರಗಳ ಬೆನ್ನಿನ ಖಾಲಿಬದಿಯಲ್ಲಿ ನಕ್ಷೆಯ ಮೂಲಕ ದಾಖಲಿಸುತ್ತಿದ್ದೆ. ಅಂಥ ಒಂದರ ಛಾಯಾ ನಕಲು ಇಲ್ಲಿ ಲಗತ್ತಿಸಿದ್ದೇನೆ.

ನನ್ನಲ್ಲಿ ಡಬ್ಬಿ ಕ್ಯಾಮರಾ ಇದ್ದರೂ ತಂತ್ರಜ್ಞಾನ ಇಂದಿನಷ್ಟು ಮುಂದುವರಿದಿರದ ಮತ್ತು ಅದಕ್ಕೆ ಹಣ ಹಾಕುವಲ್ಲೂ ನನ್ನ ಆದಾಯ ಸಾಕಾಗದೋ ಎಂಬ ಭಯದಿಂದ ಹೆಚ್ಚು ಫೋಟೋ ತೆಗೆದವನಲ್ಲ. ಹಾಗೂ ತೆಗೆದವು ಮತ್ತು ಕೆಲವು ವೇಳೆ ತಂಡದ ಮಿತ್ರರು ಕೊಟ್ಟವನ್ನು ಒಂದೋ ಪತ್ರಿಕಾ ಲೇಖನಗಳಿಗೆ ಬಳಸಿ ಕಳೆದುಕೊಂಡಿದ್ದೇನೆ. ಇಂದು ಉಳಿದ ಕೆಲವಲ್ಲಿ ಕಾಲನ ಖತಿಯುಳಿದವನ್ನು ಇಲ್ಲಿ ಬಳಸಿದ್ದೇನೆ. (ಮತ್ತೆ ಈ ಕಾರ್ಗಾಲದ ಸಾಹಸಕ್ಕೆ ಕ್ಯಾಮರಾ ಒಯ್ಯುವ ಯೋಚನೆಯನ್ನೂ ನಾವು ಮಾಡಿರಲಿಲ್ಲ)

7 comments:

 1. S Raghavendra Bhatta03 August, 2009 16:13

  Dear Sri Ashoka,
  Recently when my second daughter and her family was here on vacation we made atrip to Wayanad and had been to the famous Edakallu Caves. My secind grand daughter Poorvi gave me company to rest at the foot of the hills !! Your narration really brings before my eyes the thrill as well as the risks that shroud all such adventures hich, as brave trekkers you simply ignore and thrust forward to reach the goal set before your. That joy is really supreme and worth all the trouble and hardships that you encounter.
  SaahasigaLoo udyamasheelaroo sadaa bennaTTuva ghanaghora gurigaLoo ondarthadalli agOcharada aasheervaadavE sari!!
  Namaskaara
  S R Bhatta
  03 August 2009

  ReplyDelete
 2. ವೆಂಕಟೇಶ ಮೂರ್ತಿ ಎಚ್.ಎಸ್03 August, 2009 21:21

  ಪ್ರಿಯರೆ,
  ಆನೆಯ ಮಳೆ ಸ್ನಾನ ಓದಿದೆ. ಯಥಾಪ್ರಕಾರ ಆಸಕ್ತಿಹುಟ್ಟಿಸುವ ಆಕರ್ಷಕ ಬರವಣಿಗೆ.ಅಭಿನಂದನೆಗಳು.
  ಎಚ್.ಎಸ್.ವಿ

  ReplyDelete
 3. ಎಂದಿನಂತೆ ಬರಹ ಚೆನ್ನಾಗಿ ಓದಿಸಿಕೊಂದು ಹೋಗುತ್ತದೆ. ಇನ್ನು ಕೆಲವು ಕಾಲದಲ್ಲಿ ಬಂಡೆ ಮಾತ್ರ ಉಳಿದು ಮತ್ತೆಲ್ಲ ವಿವರಗಳು ಕಾಣೆಯಾಗಿಬಿಡಬಹುದು. ಆಗ ಬರಹದಲ್ಲಿ ಉಳಿದದ್ದಷ್ಟೇ ಸತ್ಯವಾಗುವ ಸಂಕಷ್ಟದಲ್ಲಿ ನಾವಿದ್ದೇವೆ. ಹೀಗೆ ಯೋಚಿಸಿದಾಗ ನಿಮ್ಮ ಬರಹದ ಮಹತ್ವ ತಿಳಿಯುತ್ತದೆ. ನೀವು ಉಲ್ಲೇಖಿಸಿದ ಎಳನೀರು ಘಾಟಿಯಲ್ಲಿ ಕಲ್ಯಾಣ ಸ್ವಾಮಿಯನ್ನು ಸೆರೆ ಹಿಡಿಯಲಾಯಿತು. ಬಂಗಾಡಿ ಮಾರ್ಗದಿಂದ ಪ್ರಖ್ಯಾತ ಶಿರಾಡಿ ಭೂತ ತುಳುನಾಡಿಗೆ ಇಳಿದು ಬಂತು. ಆಯಕಟ್ಟಿನ ಜಾಗದಲ್ಲಿ ಇರುವ ಗಡಾಯಿ ಕಲ್ಲಿನೊಂದಿಗೆ ತುಳುನಾಡಿನ ಇತಿಹಾಸದ ಕೆಲವು ಪುಟಗಳು ಸೇರಿಕೊಂಡಿರುವುದರಿಂದ ನಿಮ್ಮ ಬರಹವನ್ನು ಇನ್ನಿಲ್ಲದ ಕುತೂಹಲದೊಂದಿಗೆ ಓದಿದೆ. ಅಭಿನಂದನೆಗಳು .

  ReplyDelete
 4. ಅಬ್ಬೆಯ ಜಪತಪ ನಿಮ್ಮನ್ನೆಲ್ಲ ಹಿಂದೆ ಕ್ಷೇಮವಾಗಿ ಹಿಂದಿರುಗುವಂತೆ ಮಾಡಿರಬಹುದು ಆಗ! ಎಷ್ಟು ಜಪಮಾಡಿರಬಹುದೊ ಆಗ ಇಂಥ ಸಾಹಸಕ್ಕೆ ಮಗ ಹೊರಡುವಾಗ! ಅಲ್ಲ ಹೇಳದೇ ಹೋಗಿರಬಹುದೋ ಎಂಬ ಸಂಶಯ ನನಗೆ.
  ಮಾಲಾ

  ReplyDelete
 5. Dear Sri Ashoka Vardhana,
  As you promised to me when I had the opportunity to meet at your Athree Book Centre I got your 3 blogs. This is my first experience as also very thrilling! Thanks a lot.

  Raghu Narkala

  ReplyDelete
 6. namasthe sir,

  nice! nimma punyave punya:)

  ReplyDelete
 7. wonderful. in your jamalabad writeup you have not mentioned that I was the only one who did not fall. i will keep writing. best wishes for the new year.
  mksgowda.

  ReplyDelete