12 July 2009

ಸಾಹಸ ಪ್ರೇಮ


Sahasa (05)
ನಂದಿಬೆಟ್ಟ ನೂರಾರು ಅಡಿ ಎತ್ತರದ ಬೋಳು ಬಂಡೆ. ಟಿಪ್ಪುಸುಲ್ತಾನ್ ಅದರ ಒಂದಂಚಿನಲ್ಲಿ ಅಪರಾಧಿಗಳನ್ನು ನಿಲ್ಲಿಸಿ ಪ್ರಪಾತಕ್ಕೆ ನೂಕಿಸಿ ಸಾಯಿಸುತ್ತಿದ್ದನಂತೆ. ಸಹಜವಾಗಿ ಆ ಕಮರಿಯನ್ನು ‘ಟಿಪ್ಪೂ ಡ್ರಾಪ್’ ಎಂದೇ ಜನ ಗುರುತಿಸಿದ್ದಾರೆ. ಈಚೆಗೆ ಅದರ ಅಂಚಿನಲ್ಲಿ ನಗುನಗುತ್ತಾ ನಿಂತಿದ್ದ ಒಬ್ಬ ಕಮರಿಗೆ ಹಾರಿದ! ಏನು ಜೀವನದಲ್ಲಿ ಜಿಗುಪ್ಸೆಯೇ ಎಂದೀರಿ. ಇಲ್ಲ, ಆತ ಜೊತೆಗೆ ತೇಲುವ ರೆಕ್ಕೆ ತಗುಲಿಸಿಕೊಂಡಿದ್ದ. ಮರದಿಂದುದುರುವ ಒಣ ಎಲೆಯಂತೆ ತೂಗುತ್ತಾ ತೊನೆಯುತ್ತಾ, ಹದ್ದಿನಂತೆ ಗಾಳಿಸುಳಿಯಲ್ಲಿ ಆರಾಮವಾಗಿ ವಿಹರಿಸುತ್ತಾ ದೂರದ ಬಯಲಿನಲ್ಲಿ ನಗೆ ಮಾಸದೆ ಇಳಿದ.

ಕತ್ತಲ ಪ್ರತಿನಿಧಿಗಳೇ ಆದ ಬಾವಲಿಗಳ ಪ್ರತಿರೋಧ. ಮಲಗಿ ಹೊಟ್ಟೆ ಎಳೆಯುವ ಕಿಷ್ಕಿಂಧೆಯಲ್ಲೂ ಮೂಗು ಮೇಲೆತ್ತಿ ಹಿಡಿಯಲೇ ಬೇಕೆನ್ನುವ ನೀರ ಹರಿವು. ಗುಹೆಯ ಮಾಡಿನ ಪೊಳ್ಳು, ನೆಲದ ಮಾಟೆ ಮತ್ತು ಅಕ್ಕ ಪಕ್ಕದ ಕಿರು ಕವಲು ಗುಹೆಗಳಿಂದ ಎಲ್ಲೂ ಎರಗಬಹುದಾದ ವಿಷ ಜಂತು, ಮುಳ್ಳು ಹಂದಿಗಳ ಅಪಾಯ. ಸಾಲದ್ದಕ್ಕೆ ಸ್ವಂತ ರಚನೆಯಲ್ಲೂ ಅಭ್ಹದ್ರವಾದ ಮುರಕಲ್ಲಿನ ಗುಹಾ ಸರಣಿಯನ್ನು ಒಬ್ಬ ನುಗ್ಗುತ್ತಾನೆ. ಏನು ಪೇಟೆಯ ವಸತಿ ಸಮಸ್ಯೆ ಇಷ್ಟು ಬಿಗಡಾಯಿಸಿತೇ ಎಂದು ಹುಬ್ಬೇರಿಸಬೇಡಿ! ಆತ ಗುಹೆಯ ಕೊನೆ ನೋಡಿ ಹಾಗೇ ಮರಳಿದ.Sahasa (01)
ಕಟ್ಟಡವಿ, ದಮ್ಮು ಕಟ್ಟಿಸುವ ನಡಿಗೆ, ಮೈಹರಿಯುವ ಮುಳ್ಳ ಬಳ್ಳಿ, ಸವರಿದರೂ ಮೈ ಉರಿಸುವ ಆಕಿರೆ ಸೊಪ್ಪು, ಹೆಜ್ಜೆ ಹೆಜ್ಜೆಗೆ ತೊಡರುವ ಬೇರು, ಅಡಿ ತಪ್ಪಿಸುವ ಸಡಿಲ ಗುಂಡು ಕಲ್ಲು, ಜಾಡು ಮುಚ್ಚುವಂತೆ ಕುಸಿದಿದ್ದ ಮರ, ಬಿದ್ದ ಕೊಂಬೆ ಎಲ್ಲವನ್ನೂ ನಿವಾರಿಸಿ ಏರಿಕಲ್ಲಿನ ನೆತ್ತಿಗೊಬ್ಬ ತಲಪುತ್ತಾನೆ. ಅವನಿಗೇನೋ ಕೊಪ್ಪರಿಗೆ ಸಿಕ್ಕಿರಬಹುದೆಂದು ಲೆಕ್ಕಾಚಾರಕ್ಕೇ ಇಳಿಯಬೇಡಿ. ಆತ ಮರಳಿ ದಾರಿಗೆ ಬರುವಾಗ ಇದ್ದ ಪರ್ಸೂ ಕಳೆದುಕೊಂಡು ಬಸ್ ಚಾರ‍್ಜಿಗೆ ಇನ್ನೊಬ್ಬರನ್ನು ಅವಲಂಬಿಸಿಯಾನು!

ತಲೆನೂರ‍್ಮಲೆ ಘಾಟಿ -- ಒಂದು ಮಾಜೀ ಕಾಡು ಓಡಿದ ದಾರಿ! ಅಂದರೆ ಸುಬ್ರಹ್ಮಣ್ಯ ಮಡಿಕೇರಿ ನಡುವಣ ಬೆಟ್ಟ ಸಾಲಿನ ಕಾಡನ್ನು ಕಡಿದು ಲಾರಿಗೆ ಹೇರಿ ಕಳಿಸಲು ಸಹಕಾರಿಯಾಗಿದ್ದ ಕೂಪು ದಾರಿ. ಇದು ಸುಮಾರು ಮೂವತ್ತೈದು ವರ್ಷಗಳಿಂದೀಚೆಗೆ ಉಪಯೋಗದಲ್ಲಿಲ್ಲ. ದಾರಿ ಕೊರಕಲಾಗಿದೆ, ದರೆ ಜರಿದಿದೆ, ಮರ ಅಡ್ಡ ಮಲಗಿದೆ. ಮರದ ಕಾಂಡಗಳನ್ನೇ ಒಟ್ಟಿ ಮಾಡಿದ ಸಂಕಗಳು ಕುಂಬಾಗಿವೆ, ಕೆಲವೆಡೆ ದಾರಿಯೇ ಕುಸಿದಿದೆ. ಈ ದಾರಿಯ ಮೇಲ್ಕೊನೆಯ ಕಾಳೂರು ಮಲೆಯ ಕೃಷಿಕರಿಗೆ ಅಂದು ಆಶ್ಚರ್ಯದ ಸದ್ದು. ಎಲ್ಲೋ ಕೆಳ ಹಾರಾಟದ ವಿಮಾನ ಇರಬೇಕು ಎಂದು ಅಂಗಳದ ಅಂಚಿಗೆ ಧಾವಿಸಿ ಆಕಾಶಕ್ಕೆ ಕತ್ತು ಚಾಚಿದರೆ ಅಲ್ಲೇ ಮೂಗಿನಡಿಯಲ್ಲಿ , ಅನೂರ್ಜಿತ ದಾರಿಯಲ್ಲಿ ಮೋಟಾರ್ ಸೈಕಲ್ ಏರೇರಿ ಹತ್ತೆಂಟು ಜೋಡಿ ಬರಬೇಕೇ! ಛೆ, ಇಷ್ಟೂ ದಾರಿ ತಪ್ಪಿಹೋಯ್ತೇ ಎಂದಂದುಕೊಂಡರೆ ಅದು ತಪ್ಪು!

Sahasa (06)
ಬಂಡೆಯಿಂದ ಬಂಡೆಗೆ ಜಿಗಿಯುತ್ತ, ತರಗೆಲೆ ಮುಚ್ಚಿದ ಸಂದುಗಳಲ್ಲಿ ಕಾಲು ಸಿಕ್ಕಿಸಿಕೊಳ್ಳದೆ, ನೀರು ಸವರಿ ಪಾಚಿಗಟ್ಟಿದ ಪಾದೆಗಳಲ್ಲಿ ಜಾರದೆ, ಕಟ್ಟಿರುವೆಗಳ ಮೂಟೆ ಮೈದಡವಿದರೂ ನಡೆಯಲ್ಲಿ ತಡವರಿಸದೆ, ಹುಲಿ ಜೇಡಗಳ ಬಲೆ ತಪ್ಪಿಸಿ, ಕಾಳಿಂಗದ ನೆಲೆ ಬಳಸಿ ಗಂಗಾವತರಣದ ಪ್ರತಿರೂಪ -- ಬಂಡಾಜೆ ಅಬ್ಬಿಯ ಬುಡ ತಲಪಿದವನಿಗೆ ‘ಏನು ಜೀವ ಹೆಚ್ಚಾಯ್ತೇ’ ಎಂದು ಉದ್ಗರಿಸೀರಿ ಜೋಕೆ!

ಸೈಕಲ್ಲೇರಿ ವಿಶ್ವ ಸುತ್ತಿದ (ಬ್ಲಾಗ್: ಹಳ್ಳಿಯಿಂದ ನೋಡಿ), ರೋಲರ್ ಸ್ಕೇಟಿಂಗ್‌ನಲ್ಲಿ ಊರೂರು ತಿರುಗಿದ ಕಡಲ ಅಲೆಗಳ ಮೇಲಾಡುವ ಹಲಗೆ ಏರುವ, ಹಿಮಬೆಟ್ಟದ ಇಳುಕಲಿನಲ್ಲಿ ಸುಳಿಗಾಳಿಯಂತೆ ಜಾರುವ, ಗಗನದೆತ್ತರದಿಂದ ಧುಮುಕಿ ಕೊಡೆ ಬಿಚ್ಚದೆ ಗಾಳಿ ಈಜುವ, ಬಿಸಿಗಾಳಿ ತುಂಬಿದ ಬುಗ್ಗೆಯಡಿಗಂಟಿ ಖಂಡಾಂತರ ಚಲಿಸುವ. ಕೋಡುಗಲ್ಲಿನ ಮುಂಚಾಚಿಕೆಯ ಇರುಕು ಬಿರುಕುಗಳನ್ನು ಆಯ್ದು ಓತಿ ಉಡಗಳಿಗೇ ಸವಾಲಿಕ್ಕುವ, ಸಾಗರಗಳ ಆಳವನ್ನು ಮೀನಿನಂತೆ ಹೊಗುವ, ಹಿಮನದಿಗಳಲ್ಲಿ ಎದುರೀಜಿನ ದೋಣಿ ನಡೆಸುವ ಹೀಗೆ ಪಟ್ಟಿ ಮಾಡಿದಷ್ಟೂ ಮುಗಿಯದ ಅಸಾಮಾನ್ಯ ಆದರೆ ಮನುಷ್ಯಸಾಧ್ಯವಾದ ಘಟನೆಗಳೇ ಸಾಹಸಗಳು.

‘ಸಾಹಸ’ ಒಂದು ದೃಷ್ಟಿಕೋನ. ಮೇಲಿನೆಲ್ಲಾ ಚಟುವಟಿಕೆಗಳು ಅದಕ್ಕೆ ಉದಾಹರಣೆಗಳು. ಇದು ಸಾಮಾನ್ಯರಿಗಲ್ಲ ಎಂದು ನಿಮಗನ್ನಿಸಿದರೆ ಅದು ತಪ್ಪು. ತೆವಳುವ ಮಗು ಒಮ್ಮೆಗೆ ಗೋಡೆ ಹಿಡಿದು ನಿಲ್ಲುವುದು, ಆಫೀಸಿಗೆ ನಿತ್ಯ ವಾಹನದಲ್ಲೇ ಓಡಾಡಿದವ ಎಂದೋ ಒಮ್ಮೆ ನಡೆದುಹೋಗುವುದು ಇತ್ಯಾದಿ ಲೌಕಿಕ ವ್ಯವಹಾರಗಳಲ್ಲಿ ಉದ್ದೇಶಪೂರ್ವಕವಾಗಿ ತೋರುವ ಪ್ರತಿ ಉತ್ತಮಿಕೆಯೂ ಸಾಹಸವೇ. ಇದೇ ಮಾತನ್ನು ಮುಂದುವರಿಸಿ ಲಂಚ ನೀಡದೆ ಕೆಲಸ ಸಾಧಿಸುವ ಛಲ, ಆಮಿಷಗಳನ್ನು ನಿರಾಕರಿಸಿ ನಿಯತ ದುಡಿಮೆಕೊಡುವ ಪ್ರಾಮಾಣಿಕತೆ ಮುಂತಾದವೂ ಸಾಹಸಗಳೇ ಆಗುತ್ತವೆ. ಆದರೆ ನಾನಿಲ್ಲಿ ಸ್ಪಷ್ಟ ದೈಹಿಕ ಸಾಹಸಗಳ ಕುರಿತಷ್ಟೇ ವಿವರಗಳನ್ನು ಬಿಡಿಸಿ ತೋರಲು ಪ್ರಯತ್ನಿಸುತ್ತೇನೆ.

Sahasa (07)
ಆನಂದ ಈಜಿನಲ್ಲಿ ಪ್ರವೀಣ. ಆತ ಮಿತ್ರರೊಡನೆ ಅಸ್ಸಾಂನ ಒಂದು ವಿಶಾಲ ನದಿಯಲ್ಲಿ ದೋಣಿ ವಿಹಾರ ಹೊರಟಿದ್ದ. ನದಿಯಲ್ಲಿ ಅಲ್ಲಲ್ಲಿ ಕಲ್ಲು ಮೇಲೆದ್ದಿತ್ತು, ನೀರ ಸೆಳವೂ ತೀವ್ರವೇ ಇತ್ತು. ಆಕಸ್ಮಿಕವಾಗಿ ಇವರ ದೋಣಿ ಮಗುಚಿತು. ಹತ್ತಕ್ಕೂ ಮಿಕ್ಕು ಇದ್ದ ಈಜು ಬಾರದ ಮಿತ್ರರನ್ನು ಆನಂದ ಏಕಾಂಗಿಯಾಗಿ ಪಾರುಗಾಣಿಸಿದ. ಮೂಲೆಗೆ ಬಿದ್ದ ಬಡಪಾಯಿ ಬೆಕ್ಕು ಗಡವ ನಾಯಿಯನ್ನು ಒಂದು ಕೈ ನೋಡುವ ಅಸಹಾಯಕ ಶೌರ್ಯ ಇದಲ್ಲ; ತಾಕತ್ತಿತ್ತು, ಪ್ರಸಂಗ ಬಂತು, ಬಚಾಯಿಸಿದ. ಒಬ್ಬ ದುರಾಡಳಿತಗಾರನ ಪ್ರತಿನಿಧಿಯ ಎದುರು ಸೆಡ್ಡು ಹೊಡೆಯುವ ಸಮುರಾಯ್ ಗಟ್ಟಿತನ ಇದು. ಶೌರ್ಯ ಪ್ರಶಸ್ತಿ ವಿಜೇತರ ಕಥೆಗಳಲ್ಲಿ, ಆಗಾಗ್ಗೆ ಲೋಕದ ವಿವಿಧ ಮೂಲೆಗಳಿಂದ ಇಂಥ ಘಟನೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಇವು ಎಲ್ಲರಿಗೂ ಸಿಗುವಂಥವಲ್ಲ, ಮತ್ತೆ ಮತ್ತೆ ಒದಗುವಂಥವೂ ಅಲ್ಲ. ಹಾಗಾಗಿ ಇಲ್ಲಿ ಸಾಹಸ ಶುದ್ಧ ಪ್ರಾಸಂಗಿಕ ಮಾತ್ರ.

ಅಗ್ನಿಕಾಂಡದ ಎದೆ ಬಗಿದು ಜೀವ ಉಳಿಸುವುದೋ ತಿರುಗಣಿ ಮಡುವಿನ ಗರ್ಭದಲ್ಲಿನ ಆರ್ತ ರಕ್ಷಣೆಯೋ ನಟಸಾಮ್ರಾಟನ ಬದಲಿಯಾಗಿ ಹಲವು ಅಂತಸ್ತಿನಿಂದ ಕೆಳಗೆ ಧುಮುಕುವುದೋ ಸರ್ಕಸ್ ಕಲಾವಿದರ ಚಟುವಟಿಕೆಗಳೋ ನಿಸ್ಸಂಶಯವಾಗಿ ಸಾಹಸಗಳೇ ಸರಿ; ಆದರೆ ವೃತ್ತಿಪರವಾದದ್ದು. ಹಾಗೇ ಕ್ರೀಡಾರಂಗದ ಸಾಹಸಗಳು ಸ್ಪರ್ಧಾತ್ಮಕವಾದವು. ಹಾಗಾಗಿ ಇವೆರಡೂ ನನ್ನ ವಿಶ್ಲೇಷಣೆಗೆ ಒಳಪಡುವುದಿಲ್ಲ.

ಒಬ್ಬನಿದ್ದಾನೆ -- ಸ್ವಘೋಷಿತ ಉರಗತಜ್ಞ. ಯಾರದೋ ಮನೆಯಿಂದ ಕೇರೇ ಹಾವು ಹಿಡಿಯಹೋಗಿ ನಾಗರಹಾವಿನಿಂದ ಕಡಿಸಿಕೊಂಡ. ಸಾಲದ್ದಕ್ಕೆ ತನ್ನ ಭ್ರಮಾಲೋಕದ ಮೂಲಿಕಾ ಪ್ರಯೋಗದಲ್ಲಿ ಉಪಶಮನ ಹುಡುಕಿ ಜೀವಕ್ಕೆ ಕುತ್ತು ತಂದುಕೊಳ್ಳುವುದರಲ್ಲಿದ್ದ. ಊರವರ ಒತ್ತಾಯದಿಂದ ಸರಿಯಾದ ವೈದ್ಯ ಚಿಕಿತ್ಸೆಗೆ ಸಿಕ್ಕಿ ಪಾರಾದ. ಹೀಗೆ ಪರಿಸ್ಥಿತಿ, ಪರಿಮಿತಿಗಳ ಅಂದಾಜಿಲ್ಲದೆ ಎಸಗುವ ಸಾಹಸಗಳು ಅಕಸ್ಮಾತ್ ಯಶಸ್ವಿಯಾದರೂ ಅವು ಆತ್ಮಹತ್ಯಾ ಪ್ರಯತ್ನಗಳೇ ಸರಿ.

Sahasa (03)
ಇನ್ನೊಬ್ಬ ಅದೃಷ್ಟದ ಬೆಂಬತ್ತಿ ಪೀಪಾಯಿಯೊಳಗೆ ಕುಳಿತು ನಯಾಗಾರಾ ಜಲಪಾತದಲ್ಲುರುಳಿ ಬದುಕಿದನಂತೆ. ಮತ್ತೊಬ್ಬ ಉನ್ನತ ಶಿಖರವೊಂದರ ಮೇಲೆ ಕಂಬ ಊರಿ ಅದನ್ನೇರಿ ದಾಖಲೆ ಮಾಡಿದನಂತೆ. ಐದು ಅಡಿ ಉದ್ದಕ್ಕೆ ನಿರಾತಂಕ ಸವಾರಿಗೂ ಅವಕಾಶವಿಲ್ಲದ ಜಮಾಲಾಬಾದ್ ಕೊಡಿಗೊಬ್ಬ ಸೈಕಲ್ ಒಯ್ದು ಪ್ರಚಾರಗಳಿಸಿದ. ಹೀಗೆ ಅನುಭವ ಸ್ತರಕ್ಕೆ ಆಯಾಮಕೊಡದ ಸಾಹಸಗಳು ಪ್ರದರ್ಶನ ಚಟಗಳು, ವೃಥಾ ದೇಹ ದಂಡನೆಗಳು.

ಇವನ್ನೆಲ್ಲ ಬಿಟ್ಟು ಬಿಡು ಸಮಯದ ಹವ್ಯಾಸವಾಗಿ, ಸ್ಪರ್ಧಾತೀತ ಮಟ್ಟದಲ್ಲಿ, ಪೂರ್ವಭಾವಿ ಅಸಾಮಾನ್ಯ ಕಸರತ್ತು ತರಬೇತಿಗಳನ್ನು ನಿರೀಕ್ಷಿಸದ, ಆರ್ಥಿಕ ಲಾಭವನ್ನು ಉದ್ದೇಶಿಸದ , ಕೇವಲ ಪ್ರದರ್ಶನವೂ ಆಗದ, ಅನುಭವ ದಿಗಂತವನ್ನು ಸದಾ ವಿಸ್ತರಿಸುವ ಚಟುವಟಿಕೆಗಳೇ ಸಾಹಸಗಳು. ಈ ಪ್ರಬಂಧದ ಮೊದಲ ಭಾಗದಲ್ಲಿ ಹೇಳಿದ ಅಷ್ಟೂ ಘಟನೆಗಳು ಕೆಲವು ಸಾಹಸಗಳಿಗೆ ಉದಾಹರಣೆಗಳು. ಅವನ್ನು ಕ್ರಮವಾಗಿ ಹೆಸರಿಸುವುದೇ ಆದಲ್ಲಿ ಹ್ಯಾಂಗ್‌ಗ್ಲೈಡಿಂಗ್ (ನೇತು ತೇಲಾಟ), ಗುಹಾಶೋಧನೆ, ಶಿಖರಾರೋಹಣ ಅಥವಾ ಚಾರಣ, ಒರಟು ಸವಾರಿ, ಜಲಪಾತ ದರ್ಶನ ಇತ್ಯಾದಿ.

ಸಾಹಸಿ ಒಂದೊಂದು ವಸ್ತುವಿನಲ್ಲೂ ಹಲವು ವಿಷಯಗಳನ್ನು ಹಾಗೇ ಒಂದೊಂದು ವಿಷಯದೊಡನೆಯೂ ಹಲವು ವಸ್ತುಗಳನ್ನು ಅನ್ವೇಷಿಸಬಹುದು.  ಉದಾಹರಣೆಗೆ ಶಿಖರಾರೋಹಣ ಎಂಬ ವಿಷಯಕ್ಕೆ ಎಷ್ಟೆಷ್ಟೋ ಬಂಡೆ, ಗುಡ್ಡ, ಬೆಟ್ಟಗಳನ್ನು ವಸ್ತುವಾಗಿ ಪರಿಗಣಿಸಬಹುದು. ಹಾಗೆ ಜಮಲಾಬಾದ್ ಎಂಬ ಏಕಶಿಲಾ ಶಿಖರವನ್ನು ( ಸಮುದ್ರ ಮಟ್ಟದಿಂದ ೧೭೭೮ ಅಡಿ) ವಸ್ತು ಎಂದು ಗ್ರಹಿಸಿಕೊಂಡರೆ ಹೊಳೆಯುವ ವಿಷಯ ವೈವಿಧ್ಯ ನೋಡಿ: ಅದರ ಬರಿಯ ಮೆಟ್ಟಿಲ ಸಾಲು ಹಿಡಿದು ಹಗಲು, ರಾತ್ರಿ, ಮಳೆಗಾಲದಲ್ಲಿ ಏರಿಳಿಯುವುದು ಒಂದೊಂದೂ ವಿಶಿಷ್ಟ. ಇನ್ನು ಸುತ್ತಣ ಹಲವು ತೆರನ ನೇರ ಮೈ ಶುದ್ಧ ಶಿಲಾರೋಹಿಗಳಿಗೆ ಸುಮಾರು ೧೨೦೦ ಅಡಿಗಳವರೆಗೂ ಸವಾಲನ್ನೆಸೆಯಬಹುದು. ಇದರ ನೆತ್ತಿಯಿಂದ ಹಗ್ಗ ಇಳಿಬಿಟ್ಟು ರ‍್ಯಾಪ್ಲಿಂಗ್ ತಂತ್ರ ಬಳಸುವುದು, ಶಿಖರಕ್ಕೆ ತೇಲು ರೆಕ್ಕೆ ಹೊತ್ತು ಉಡ್ಡಯನ, ಶಿಖರಕ್ಕೇ ಪ್ಯಾರಾಜಂಪ್ ಇತ್ಯಾದಿ ವಿಷಯ ವೈವಿಧ್ಯ ಕಲ್ಪನಾ ಲಹರಿಗಳಲ್ಲ. ಇದರ ಶಿಖರದಲ್ಲೋ, ತಪ್ಪಲಲ್ಲೋ ಶಿಬಿರವಾಸ, ಇದರ ಅಸಂಖ್ಯ ಪ್ರಾಕೃತಿಕ ಗವಿಗಳ ಅನ್ವೇಷಣೆ, ಭೌಗೋಳಿಕ ಜೈವಿಕ ಐತಿಹಾಸಿಕ ಭೂತ ವರ್ತಮಾನಗಳ ಸಂಶೋಧನೆ ಮತ್ತು ಭವಿಷ್ಯತ್ತಿನ ಸಾಧ್ಯತೆಗಳ ಊಹೆಗೇ ಇಳಿಯುವ ಕೆಲಸಗಳಾದರೆ ಈ ಲೇಖನವೊಂದೇ ಸ್ವತಂತ್ರ ಪುಸ್ತಕವಾದೀತು!

ಸಾಹಸಗಳು ಪರೋಕ್ಷವಾಗಿ ಸಾಮಾಜಿಕ ಕೊಡುಗೆಗಳನ್ನು ನೀಡುತ್ತಲೇ ಬಂದಿವೆ. ಇಂದಿನ ವೈಯಕ್ತಿಕ ಸಾಹಸ ನಾಳೆಯ ಸಮಷ್ಟಿಯ ಜೀವನ ಕ್ರಮವೇ ಆದ ಉದಾಹರಣೆಗಳು ಸಾಕಷ್ಟಿವೆ. ಹಾರುವ ಕನಸಿಗೆ ಹೆಣಗಿದ ರೈಟ್ ಸಹೋದರರ ಸ್ಮರಣೆಯಿಲ್ಲದೇ ಇಂದಿನ ವಿಮಾನ ಪ್ರಪಂಚ ಉಂಟೇ?

ಸಾಹಸಿಗಳು ಸೂಜಿ ಮೊನೆಯಿದ್ದಂತೆ. ಒರಟಾಗಿ ಬಳಸಿದರೆ ಮುರಿದು ಸಾಮಾಜಿಕ ಅಭಿವೃದ್ಧಿಗೆ ಅರ್ಥವೇ ಇಲ್ಲದಂತಾದೀತು. ಹಾಳತವಾಗಿ ಬಳಸಿದರೆ ಹಿಂದೆಯೇ ನೂಲೆಳೆದು ಅಸಂಗತ ಎರಡನ್ನು ಒಂದಾಗಿಸಿಯಾರು. ಅವರನ್ನು ಅರ್ಥೈಸಿಕೊಳ್ಳುವ ಮನೋಭೂಮಿಕೆ ಸಾಹಸ ಪ್ರೇಮ. ಆ ನಿಟ್ಟಿನಲ್ಲಿ ನಮ್ಮ ಸಮಾಜ ಸಾಹಸಪ್ರೇಮಿಯೇ ಎಂದು ಪ್ರಶ್ನಿಸಿಕೊಂಡರೆ "ಹೌದು" ಎನ್ನುವುದು ಆತ್ಮವಂಚನೆಯಾದೀತು!

Sahasa (02)
ಇಂದು ಸಾಮಾಜಿಕ ಧೋರಣೆಗಳನ್ನು ದೃಶ್ಯ, ಶ್ರಾವ್ಯ ಮಾಧ್ಯಮಗಳು ತುಂಬಾ ಪ್ರಭಾವಿಸುತ್ತವೆ; ರೂಪಿಸುವವೇ ಅವು ಎಂದರೆ ತಪ್ಪಿಲ್ಲ. ಇವುಗಳ ಬಳಕೆಯಲ್ಲಿ ಅಗ್ಗದ ರಂಜನೆಯ ಒತ್ತು ಹೆಚ್ಚಾಗಿದೆ. ಸಾಹಸಿಗೆ ತನ್ನನುಭವವನ್ನು ಸಮಾಜದಲ್ಲಿ ಹರಡುವುದರಲ್ಲಿ ಈ ಮಾಧ್ಯಮಗಳ ಬಳಕೆ ಅನಿವಾರ್ಯವಾಗುತ್ತದೆ. ಹಾಗೇ ಪ್ರತಿಕ್ರಿಯೆ ಅನುಕೂಲಕ್ಕಿಂಥ ಪ್ರತಿರೋಧದ್ದೇ ಬರುವುದು ಸಾಮಾನ್ಯವಾಗುತ್ತದೆ. ಇದಕ್ಕೆ ಬಲು ದೊಡ್ಡ ಉದಾಹರಣೆ ೧೯೮೧-೮೨ರಲ್ಲಿ ಸುಮಾರು ಒಂದು ವರ್ಷ ಕಾಲ ಉದಯವಾಣಿ ಪತ್ರಿಕೆಯ ಪುಟಗಳಲ್ಲಿ ನನ್ನ ಗುಹಾ ಶೋಧನೆಯ ಬಗ್ಗೆ ನಡೆದ ಜಿಜ್ಞಾಸೆ. ಶೋಧ, ವಾದಗಳಿಗೆ ಪ್ರತಿವಾದಗಳು ಬಂದವು ಹೊರತು ಪುನಃ ಶೋಧ ನಡೆಯಲಿಲ್ಲ. ಎಲ್ಲಿನ ‘ಜಾಂಬ್ರಿ’ಯೋ, ಯಾವ ‘ನೆಲ್ಲಿತಟ್ಟೋ’ (ನಾನು ಶೋಧಿಸಿದ್ದರಿಂದ ವಿವಾದ ಮೂಲವಾದ ಗುಹಾಲಯಗಳು) ಎಂದು ಓದಿದಷ್ಟಕ್ಕೇ ಮರೆತು ಮತ್ತೆ ತಮ್ಮ ‘ದುಗ್ಗುಳ ಮಾಟೆಯ’ ಬಾಯಲ್ಲೋ, ‘ನೆಲ್ಲಿತೀರ್ಥ’ದ ಗರ್ಭದಲ್ಲೋ (ಇವೂ ಗುಹಾಲಯಗಳೇ) ವ್ರತ ಸ್ನಾನ ಮಾಡಿ "ಗೋವಿಂದಾ" ಹಾಕಿದ ಜನ ಸಾಹಸಿಗಳು ಹೇಗಾದಾರು? ಯಾರದೋ ಅನುಭವ ಕಥನಕ್ಕೆ ಸ್ವಕಪೋಲ ಕಲ್ಪನೆಗಳನ್ನು ಬೆರೆಸಿ ಊರ ಹುಚ್ಚರನ್ನು ಸಾಹಸಿಗಳಿಗೆ ಸಮೀಕರಿಸಿದವರು, ತರ್ಕ ಸಂತೋಷಕ್ಕಾಗಿ ವಾದ ಬೆಳೆಸುವವರು, ಹುಸಿ ಸವಾಲನ್ನೆಸೆದು ಕಳ್ಳ ಹೆಸರಿನಲ್ಲಿ ಅಡಗುವವರು ಸಾಹಸ ಪ್ರೇಮಿಗಳು ಎಂತಾದಾರು? ಆಧುನಿಕ ಸವಲತ್ತುಗಳೊಡನೆ ಜೀವನ ನಡೆಸಿದರೂ ಅಕಾಲಿಕ ನಂಬಿಕೆಗಳ ಹೆಸರಿನಲ್ಲಿ ಬೆದರಿಕೆಯೊಡ್ಡಿದವರು, ಮೂಢ ಮೌಲ್ಯಗಳ ಪೋಷಣೆಗೆ ನೀರೆರೆಯದೆ ವಾಸ್ತವವನ್ನು ತೆರೆದು ತೋರಿದವರೊಡನೆ ದೊಣ್ಣೆಪೆಟ್ಟಿನಲ್ಲಿ ಮಾತಾಡ ಬಂದವರು ಸಾಹಸ ವೈರಿಗಳೇ ಸರಿ.

ನ್ಯಾಷನಲ್ ಜಿಯಾಗ್ರಾಫಿಕ್ ಸೊಸಾಯಿಟಿಯ ಶತಾಬ್ದಿಯ ಸ್ಮರಣ ಗ್ರಂಥದಲ್ಲಿ ಒಂದು ಸಚಿತ್ರ ಉಲ್ಲೇಖವಿದೆ. ಕ್ಯಾಲಿಫೋರ‍್ನಿಯಾದ ಬಾರ್ಸ್ಟೋಯಿಂದ ಲಾಸ್ವೆಗಾಸ್‌ನವರೆಗೆ, ಅಂದರೆ ಸುಮಾರು ನೂರೈವತ್ತು ಮೈಲು ದೀರ್ಘ ಮರುಭೂಮಿಯ ಮೇಲೆ ಮೋಟಾರ್ ಸೈಕಲ್ ಸ್ಪರ್ಧೆ ಸಾರ್ವಜನಿಕರಿಗೆ ಘೋಷಿಸಿದರಂತೆ. ಅತ್ಯುತ್ಸಾಹಿ ಸ್ಪರ್ಧಿಗಳ ಸಂಖ್ಯೆ ೩೩೦೦ಕ್ಕೂ ಮಿಕ್ಕಿತು. ಸ್ಪರ್ಧೆಯನಂತರ ಬಂದರು ಪರಿಸರ ತಜ್ಞರು; ಮರುಭೂಮಿಯ ಸೂಕ್ಷ್ಮ ಜೀವಜಾಲದ ಮೇಲೆ ಈ ಓಟದ ದುಷ್ಪರಿಣಾಮವನ್ನು ಅಳೆದರು. ಇಂಥಾ ಸ್ಪರ್ಧೆ ಮತ್ತೆ ನಡೆಯದಂತೆ ಖಂಡಿಸಿದರು. ಅದು ಮತ್ತೆ ನಡೆಯಲಿಲ್ಲವಂತೆ! ಸಾಹಸವೆಂದರೆ ಪಾಲ್ಗೊಳ್ಳಲು ಎಷ್ಟು ಜನ! ಮತ್ತದು ತಪ್ಪೆಂದಾದರೆ ಮರುಕಳಿಸದಂತೆ ತಡೆಗಟ್ಟುವಲ್ಲಿ ಎಷ್ಟು ದಿಟ್ಟತನ!

ಆರೋಹಣ ಪರ್ವತಾರೋಹಿಗಳು ಸಾಹಸಿಗಳು (ನಮ್ಮದು) ಎರಡು ಬಾರಿ ಸಾರ್ವಜನಿಕ ಸಾಹಸ ಕಾರ್ಯಕ್ರಮಗಳನ್ನು ನಡೆಸಿದ ವಿವರ ಹೀಗಿದೆ. ೧೯೮೦ರಲ್ಲಿ ಜಿಲ್ಲಾ ಮಟ್ಟದ ಪರ್ವತಾರೋಹಣ ಸಪ್ತಾಹ ಆಚರಿಸಿ, ಏಳು ಕಾಲೇಜುಗಳನ್ನು ಒಳಗೊಂಡಂತೆ ವಿಸ್ತೃತ ಪ್ರಚಾರ ಕೊಟ್ಟೆವು. ತಲಾ ಖರ್ಚು ಕೇವಲ ಎರಡೇ ರೂಪಾಯಿಯಾದರೂ ಬಂದ ಯುವಕರು ಸುಮಾರು ಎಪ್ಪತ್ತು. ಎರಡನೇ ಬಾರಿ ೧೯೮೨ರಲ್ಲಿ ಮುಕ್ತ ಪ್ರಚಾರ, ಕರೆ ಕೊಟ್ಟರೂ ಬಂದ ಜನ ಬರಿಯ ನಲವತ್ತು. ಇದು ಸಾಹಸದ ಕಥೆ. ‘ಪಶ್ಚಿಮ ಘಟ್ಟ ಉಳಿಸಿ’ ಪಾದಯಾತ್ರೆ ವ್ಯಾಪಕ ಪ್ರಚಾರ, ಆಕರ್ಷಣೆಗಳೊಡನೆ ನಡೆಯಿತು. ಉದಾರ ಚಿಂತನೆಯ ಜನಕ್ಕಿಂಥಲೂ ಬಾಡಿಗೆ ಜನ, ನೇರ ಸಂತ್ರಸ್ತರೇ ಪಾದ ಸವೆಸಿದ್ದು ಹೆಚ್ಚು. ಹೆಚ್ಚಿನದ್ದನ್ನು ತಿಳಿಯುವುದರಲ್ಲಿ, ಇರುವುದನ್ನು ಚೆನ್ನಾಗಿ ಉಳಿಸಿಕೊಳ್ಳುವುದರಲ್ಲಿ ತೊಡಗದ ನಾವು ಖಂಡಿತಾ ಸಾಹಸಪ್ರೇಮಿಗಳಲ್ಲ.

ಸಂಬಳ ಬಾರದ್ದಕ್ಕೆ, ನಲ್ಲಿ ಗೊಗ್ಗರಿಸಿದ್ದಕ್ಕೆ, ವಿದ್ಯುತ್ತು ಮುಗ್ಗರಿಸಿದ್ದಕ್ಕೆ, ಜೀವನ ವೆಚ್ಚ ಭಾರವಾದದ್ದಕ್ಕೆ ಬರಿದೇ ಕೊರಗಿ ಮುಗಿಸುವುದಲ್ಲ. ಪರಿಸರದ ಪರಿಚಯಕ್ಕೆ ತೊಡಗಬೇಕು. ಪ್ರಕೃತಿಯ ಯಾವುದೇ ಮುಖ, ಸವಾಲಿನ ಯಾವುದೇ ಕುಡಿ ಆತ್ಮೀಯವಾದಂತೆ ನಮ್ಮ ದೈನಂದಿನ ಕೊರತೆಗಳ ಮೂಲ ಶೋಧವಾಗುತ್ತದೆ, ಪರಿಹಾರವೂ ಕಾಣುತ್ತದೆ. ಅಷ್ಟು ಮಾತ್ರವಲ್ಲ, ನಮಗೇ ತಿಳಿಯದಂತೆ ನಾವು ಸಾಹಸಿಗಳೂ ಆಗುತ್ತೇವೆ; ಕನಿಷ್ಠ ಸಾಹಸ ಪ್ರೇಮಿಗಳಾದರೂ ಆಗಬಹುದು.
ಕೊಸರು: ಸಾಹಸಕ್ಕೆ ಸನ್ಮಾನ? [ವರದಿ: ವಿಕ್ಷಿಪ್ತ ಯುವಕನೊಬ್ಬ ಸಾರ್ವಜನಿಕ ಸ್ಥಳ ಒಂದರಲ್ಲಿ ಅಪ್ರಚೋದಿತವಾಗಿ ಎಂಟು ಗುಂಡು ಹಾರಿಸಿದ. ಅಲ್ಲಿದ್ದ ಪೋಲೀಸ್ ಅಧಿಕಾರಿ ಒಬ್ಬರು ಅವನನ್ನು ಸೆರೆ ಹಿಡಿದರು. ಅಧಿಕಾರಿಯ ಸಾಹಸಕ್ಕೆ ಸಾರ್ವಜನಿಕರೂ ಮಂತ್ರಿಗಳೂ ಸನ್ಮಾನಿಸಲು ಮುಂದಾದರು -- ಇದಕ್ಕೆ ಪ್ರತಿಕ್ರಿಯೆಯಾಗಿ ಉದಯವಾಣಿ ೨೬-೧-೮೧ರಲ್ಲಿ ನನ್ನ ಪತ್ರ]

ಹೊಡೆದ ಎಂಟು ಗುಂಡಿನಲ್ಲಿ ಒಂದೂ ಗುರಿಮುಟ್ಟಿಸದ ಗುರಿಕಾರ ಸುನೀಲ್ ಸಂದೀಪನನ್ನು ಆಕಸ್ಮಿಕವೆಂಬಂತೆ ಹಿಡಿದ ಶ್ರೀ ಅಪ್ಪಚ್ಚು ಅವರನ್ನು ಸನ್ಮಾನಿಸಲು, ಪದಕ ಪ್ರದಾನಿಸಲು ನಾಗರಿಕರೂ ಮಂತ್ರಿಗಳೂ ಮುಂದಾದದ್ದು ಸಂತೋಷ. ಆದರೆ ಇನ್ನೂ ಹೆಚ್ಚಿನ ಸಾಹಸವನ್ನು ಅದರ ಅಡ್ಡ ಪರಿಣಾಮಗಳ ಅರಿವಿದ್ದೂ ಎಸಗಿದ ಶ್ರೀ ಭೀಮಭಟ್ಟ್ ಮತ್ತು ಶ್ರೀ ನಾಗರಾಜು ಅವರ ಕುರಿತು ಇನ್ನೂ ಹೆಚ್ಚಿನ ಉತ್ಸಾಹ ತೋರುವುದ ಅಗತ್ಯ. (ಇವರು ಸಕ್ರಿಯ ರಾಜಕಾರಣಿಯೊಬ್ಬನ ಭ್ರಷ್ಟತೆಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರು.) ದಕ್ಷತೆ, ಪ್ರಾಮಾಣಿಕತೆ, ಸಾಹಸಗಳು ಆಕಸ್ಮಿಕದ ಕೂಸಲ್ಲ. ರಾಜಕೀಯ ಒತ್ತಡ, ವೈಯಕ್ತಿಕ ಹಿಂಸೆಗಳನ್ನು ಬದಿಗೊತ್ತಿ ಕರ್ತವ್ಯ ಪ್ರಜ್ಞೆಯಿಂದ ಅಪರಾಧಿಗಳನ್ನು ನ್ಯಾಯಾಲಯಕ್ಕೆ  ಎಳೆಯುವ ಸಾಹಸ ಮಾಡಿದ ಇವರಿಗೆ ಸಾರ್ವಜನಿಕ ಸನ್ಮಾನ ಮಾಡುವ (ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಪ್ರತ್ಯೇಕ) ಸಮಿತಿ ಆದೀತೋ? -- ಸಾಹಸಪ್ರಿಯ.

Sahasa (04)
ಜಲಸಾಹಸ ದುರಂತದ ಮುನ್ನೆಲೆಯಲ್ಲಿ...
[ಮಳೆಗಾಲದ ಪ್ರವಾಹದಲ್ಲಿ ದೋಣಿಚಾಲನೆಯ ಸಾಹಸಕ್ಕೆಳೆಸಿ ದುರಂತ ಸಂಭವಿಸಿದ್ದಾಗ ಸಾರ್ವಜನಿಕ ಅಭಿಪ್ರಾಯಗಳ ಎದುರೀಜಿನ ಪತ್ರ]

"ನಾ ಮೊದಲೇ ಹೇಳಿದ್ದೆ". ಇದು ಒಂದೋ ಪಲಾಯನವಾದಿಗಳ ಕೀಳರಿಮೆಯ ಉದ್ಗಾರ ಅಥವಾ ದೌರ್ಬಲ್ಯಗಳ ದುರುಪಯೋಗ ಪಡೆಯುವ ಫಲಜ್ಯೋತಿಷಿಗಳ ಉದ್ಘೋಷ. ಇವೆರಡೂ ಸೋಲು ಅಥವಾ ದುರಂತದ ಮುನ್ನೆಲೆಯಲ್ಲಿ ಪಡೆದಷ್ಟು ಪ್ರಭಾವ, ಪ್ರಚಾರ ಯಶಸ್ಸಿಗೆ ಸಿಕ್ಕುವುದಿಲ್ಲ! ’ದುರಂತ’ ಸುದ್ದಿಯ ಅಕ್ಷಯ ಖಜಾನೆ; ಯಶಸ್ಸು ಹೆಚ್ಚೆಂದರೆ ಒಂದು ಲೇಖನದ ವಸ್ತು ಮಾತ್ರ. ಇದು ಒಟ್ಟಾರೆ ಸಾಹಸಶೀಲತೆಯನ್ನು ಜನಮನದಿಂದ ಹೊಸಕಿ ಹಾಕುವ ಕ್ರಿಯೆಯಾಗುತ್ತಿದೆ. ದುರಂತದಲ್ಲಿ ಉಳಿದವರನ್ನು ಸುಖಿಗಳಾಗುವಲ್ಲಿ ಅವಸರ ಮೊದಲು ತೋರಬೇಕು. ಅಂದರೆ ಏಳು ಜನ ಭಾಗವಹಿಸಿದಲ್ಲಿ ಮೂವರು ಸಿಕ್ಕಿದ್ದಾರೆ. ಕಾಣೆಯಾದ ನಾಲ್ವರ ಬಗ್ಗೆ ಶೋಧಕ್ಕೆ ಪೂರ್ಣ ಗಮನ ಮೊದಲು. ಮತ್ತೆ ವೈಫಲ್ಯದ ಕಾರಣಗಳ ಶೋಧ. ತರಬೇತು, ಸಲಕರಣೆ, ಅನುಭವಗಳ ಕುರಿತು ಪರಿಣತರಿಂದ ಪ್ರಶ್ನೆ, ವೈಜ್ಞಾನಿಕ ವಿಶ್ಲೇಷಣೆ. ಕೊನೆಯದಾಗಿ ಕೊರತೆಯನ್ನು  ಹಿಂಗಿಸಿ ಹೆಚ್ಚಿನ ಸಾಹಸ ವರ್ಧಿಸುವ ಪರಿಸರ ನಿರ್ಮಾಣ.

ಸದ್ಯ ಕಾಣೆಯಾದವರಲ್ಲಿ ಒಬ್ಬನ ಹೆಣವಷ್ಟೇ ಸಿಕ್ಕಿರುವುದರಿಂದ ನಾನು ಉಳಿದ ಅಂಶಗಳ ಬಗ್ಗೆ ವಿವರಗಳನ್ನು ಬಿಡಿಸುವುದಿಲ್ಲ. ಆದರೆ ಇಷ್ಟು ಮಾತ್ರ ಸ್ಪಷ್ಟ ಹೇಳಬಲ್ಲೆ -- ಕೆಂಪೊಳೆಯೇ ಏಕೆ, ಘಟ್ಟ ಇಳಿಯುವ ನಮ್ಮೆಲ್ಲ ದೊಡ್ಡ ನದಿ ಹೊಳೆಗಳು ಅವಶ್ಯ ಸಾಹಸಯಾನಗಳಿಗೆ ಒಡ್ಡಿಕೊಳ್ಳಲೇಬೇಕು. ಇದಕ್ಕೂ ಎಷ್ಟೋ ಪಾಲು ಮಿಗಿಲಾದ ಭೂ ಅಸ್ಥಿರತೆ, ನೀರಮೊತ್ತ, ಹರಿವಿನವೇಗವಿರುವ ಹಿಮಾಲಯದ ನದಿಗಳೇ ಅಸಂಖ್ಯ ಸಾಧನಾ ಕಥನಗಳನ್ನು ಕೊಡುತ್ತಿರುವಾಗ ನಾವು ಕಣ್ಣು ಮುಚ್ಚುವುದು ಖಂಡಿತಾ ಬೆಳವಣಿಗೆಯ ಲಕ್ಷಣವಲ್ಲ. ಪ್ರಥಮ ಎವರೆಸ್ಟ್ ವಿಜಯಿಗಳಲ್ಲೊಬ್ಬರಾದ ಹಿಲರಿ ಗಂಗಾನದಿಯಲ್ಲಿ ಪ್ರವಾಹದ ಎದುರು ನಡೆದ ಸಾಹಸಯಾನದಲ್ಲಿ ತಮ್ಮ ಅಪರವಯಸ್ಸಿನಲ್ಲಿ ಪಾಲುಗೊಂಡು ಇನ್ನೂ ಸುಖವಾಗಿರುವುದು ಯಾರೂ ಮರೆಯಬಾರದು.

8 comments:

 1. ರಾಧಾಕೃಷ್ಣ12 July, 2009 23:00

  "ಲೌಕಿಕ ವ್ಯವಹಾರಗಳಲ್ಲಿ ಉದ್ದೇಶಪೂರ್ವಕವಾಗಿ ತೋರುವ ಪ್ರತಿ ಉತ್ತಮಿಕೆಯೂ ಸಾಹಸವೇ." ಎಷ್ಟೊಂದು ಸರಿಯಾದದ್ದು. ಖುಷಿಯಾಯಿತು.

  ನಿಮ್ಮೊಡನೆ ಕೆಲವೊಂದು ಬರೇ ಚಿಕ್ಕ ಸಾಹಸಗಳಿಗೆ ಸೇರಿಕೊಂಡು ಉಬ್ಬಿಕೊಂಡ ದಿನಗಳೆಲ್ಲ ಬರಹದೊಂದಿಗೆ ಅಳ್ಳಕವಾದ ಚಿತ್ರಗಳಿಂದ ನೆನಪಾದುವು. ಅರಂತೋಡಿನಿಂದ ಭಾಗಮಂಡಲಕ್ಕೆ ಹಳೆಯ ಜಾಡಿನಲ್ಲಿ ಬೈಕಿನಲ್ಲಿ ಸವಾರಿ ಮಾಡಿದ್ದು, ಜೋಗಕ್ಕೆ ತುಮ್ರಿಯ ಮೂಲಕ ಸಾಗಿದ್ದು , ವಾಲ್ಕುಂಜಕ್ಕೆ ಏರಿದ್ದು.. ನನ್ನ ಸಾಹಸದ ತುಣುಕುಗಳು.
  ಸಾಹಸಿ ನಾನಲ್ಲ. ಆದರೆ ಸಾಹಸ ಪ್ರೇಮಿಯಾಗಲು ನಿಜ ಸಾಹಸಿಯ ಪ್ರಭಾವ ಇರುವುದು ಸುಳ್ಳಲ್ಲ!
  ರಾಧಾಕೃಷ್ಣ

  ReplyDelete
 2. ವಿವೇಕ ಶಾನಭಾಗ14 July, 2009 07:57

  ಪ್ರಿಯ ಅಶೋಕವರ್ಧನ ಅವರಿಗೆ,
  ಇದು ಸಾಹಸಕ್ಕೂ, ಹುಂಬತನಕ್ಕೂ ಇರುವ ವ್ಯತ್ಯಾಸವನ್ನೂ, ಸಾಹಸಕ್ಕೂ ಅರ್ಥಹೀನ ಪ್ರಚಾರಕ್ಕಾಗಿ ನಡೆಸುವ ಡೊಂಬರಾಟಗಳಿಗೂ ಇರುವ ವ್ಯತ್ಯಾಸಗಳನ್ನೂ ಬಹು ಸೂಕ್ಷ್ಮವಾಗಿ ಹೇಳುತ್ತದೆ ಅನಿಸಿತು. ಅದರ ಹಿಂದಿನ ’ಸ್ಪಿರಿಟ್’ (ತಪ್ಪು ತಿಳಿಯಬೇಡಿ!!) ನನಗೆ ಬಹುಮುಖ್ಯ ಅನಿಸಿತು.
  ವಿವೇಕ

  ReplyDelete
 3. ಬೇದ್ರೆ ಮಂಜುನಾಥ14 July, 2009 07:59

  ಮಾನ್ಯರಿಗೆ,
  ನಮಸ್ಕಾರಗಳು.
  ಮೊನ್ನೆ ಪರಿಸರ ಪ್ರಜ್ಞೆ, ವನಮಹೋತ್ಸವ ಕುರಿತ ಚರ್ಚೆಯಲ್ಲಿ ತಮ್ಮ ಅಶೋಕವನದ ಪ್ರಸ್ತಾಪ ಬಂತು. ಆಕಾಶವಾಣಿಯಲ್ಲಿ ನೇರಪ್ರಸಾರವಾದ ಕಾರ್ಯಕ್ರಮವಾದ್ದರಿಂದ ಅಲ್ಲಿಯೇ ಕೇಳುಗರಿಂದ ಪ್ರತಿಕ್ರಿಯೆ ವ್ಯಕ್ತವಾಯಿತು. ಪರಿಸರ ಕುರಿತು ಮಕ್ಕಳಿಂದಲೇ ಹತ್ತಾರು ಕಾರ್ಯಕ್ರಮಗಳು ಜರುಗುತ್ತಿವೆ. ನಾವು ಸೂರ್ಯನಂತೆ ಎಲ್ಲೆಡೆಯೂ ಬೆಳಕು ಬೀರದಿದ್ದರೂ ಪುಟ್ಟ ಹಣತೆಯಂತೆ ನಮ್ಮ ಸುತ್ತಲೂ ಪುಟ್ಟ ಪರಿಧಿಯಲ್ಲಿ ಶಕ್ತ್ಯಾನುಸಾರ ಕೆಲಸ ಮುಂದುವರೆಸುತ್ತಲೇ ಇದ್ದೇವೆ. ಪ್ರಚಾರದಿಂದ ದೂರ ಅಷ್ಟೆ!
  ತಮ್ಮವ,
  ಬೇದ್ರೆ ಮಂಜುನಾಥ

  ReplyDelete
 4. ಅಶೋಕವರ್ಧನ14 July, 2009 08:06

  ಪ್ರಿಯರ‍ೇ
  ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಲೇಖನ. ಅಂದು ನನ್ನ ಮೇಲೇ ಇದ್ದ ಸಾಮಾಜಿಕ ಒತ್ತಡವನ್ನು ಎದುರಿಸಲು ನಾನು ಮಾದಿಕೊಂಡ ನಿವೇದನೆ. ಇದು ಯಾರನ್ನೂ ಸಣ್ಣ ಅಥವಾ ಅವಮಾನ ಮಾಡುವ ಉದ್ದೇಶದ್ದಲ್ಲವೇ ಅಲ್ಲ. ಬೇಸರವಾಗಿದ್ದರೆ ಕ್ಷಮಿಸಿ, ಮರೆತುಬಿಡಿ. ನಿಮ್ಮ ಕೆಲಸದ ಬಗ್ಗೆ ನನಗೆ ಯಾವ ಸಂಶಯವೂ ಇಲ್ಲ ಮತ್ತು ನಾನು ತೀರ್ಮಾನ ಕೊಡುವ ಉನ್ನತಾಸನದಲ್ಲೂ ಇಲ್ಲ. ಲೇಖನಕ್ಕೆ ನಿಮ್ಮ ಅನುಭವದ ಕೊಡುಗೆ ಸೇರಿಸುತ್ತೀರಿ ಎಂದು ಭಾವಿಸುತ್ತೇನೆ.
  ಇಂತು ವಿಶ್ವಾಸಿ
  ಅಶೋಕವರ್ಧನ

  ReplyDelete
 5. ನರೇಂದ್ರ18 July, 2009 10:33

  ಇಪ್ಪತ್ತು ವರ್ಷಗಳ ಹಿಂದಿನ ನಿಮ್ಮ ಬರೆಯುವ ಶೈಲಿ ನನಗೆ ಖುಶಿ ಕೊಟ್ಟಿತು. ನಿಮ್ಮ ಪಂಚ್, ಕೆಣಕು, ತಮಾಷೆ ಎಲ್ಲ ಇವತ್ತಿಗೂ ಹಾಗೆಯೇ ಇದೆ, ಹೆಚ್ಚು ಹರಿತಗೊಂಡಿದೆ. ಆದರೆ ಪ್ರಕಾರದ ನಿರ್ಬಂಧಗಳಿಂದ ನಿಮ್ಮ ಬರವಣಿಗೆ ಹೆಚ್ಚು ಮುಕ್ತವಾಗಿದೆ ಅನಿಸಿತು. ಇನ್ನು ಓದು-ಉದ್ಯೋಗ-ಸಂಸಾರ-ಸ್ವಂತ ಮನೆ ಮುಂತಾದ ಚಕ್ರದಲ್ಲೇ ಸುತ್ತುವ, ಸುತ್ತುವುದರಲ್ಲಿ ಕಳೆದೇ ಹೋಗುವ ನಮ್ಮಂಥವರಿಗೆ ಒಂದು ಅಪವಾದದಂತೆ ಬದುಕನ್ನು, ಬದುಕಿನ ಆದ್ಯತೆಗಳನ್ನು ರೂಢಿಸಿಕೊಂಡಿರುವ ನಿಮ್ಮ ಸಾಹಸ ಪ್ರವೃತ್ತಿ, ಶಿಸ್ತು ಮತ್ತು ಸಹಜ ಜೀವನಶೈಲಿಗೆ ಮಾರುಹೋಗಿದ್ದೇವೆ. ನೀವೇನೋ ಇದನ್ನು ತುಂಬ ಸರಳ ಎಂದುಕೊಂಡು ಎಲ್ಲರಲ್ಲೂ ಇಂಥ ಪ್ರವೃತ್ತಿಯನ್ನೇ ನಿರೀಕ್ಷಿಸಬಹುದು. ಆದರೆ ಸ್ವತಂತ್ರವಾಗಿ ಇಷ್ಟು ಸರಳ ಎನಿಸುವ ನಿಮ್ಮ ಅನೇಕ ಚಟುವಟಿಕೆಗಳ ಹಿಂದೆ ದೊಡ್ಡ ಸಂಸ್ಕಾರ ಮತ್ತು ಒಂದು ಪರಂಪರೆಯೇ ಇದೆ. ಅದು ಎಲ್ಲರಿಗೂ ದಕ್ಕಲಾರದು. ಇಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರ, ಅವರ ಹಿರಿಯರ ನೆನಪಾಗುತ್ತದೆ.

  ಒಂದು ಸಣ್ಣ ಉದಾಹರಣೆಗೆ ಹೇಳುವುದಾದರೆ, ಪ್ಲಾಸ್ಟಿಕ್ ಉಪಯೋಗಿಸದ ನಿಮ್ಮ ನಿಲುವು. ಪ್ರತಿದಿನ ಎಷ್ಟು ಬಾರಿ ನೀವು ‘ಇಲ್ಲ, ನಾವು ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ, ಬೇಕಿದ್ದರೆ ಪುಸ್ತಕಗಳನ್ನ ಕಟ್ಟಿಕೊಡುತ್ತೇವೆ’ ಎನ್ನಬೇಕಾಗುತ್ತದೆ ಎನ್ನುವುದನ್ನು ನೆನೆದರೇ ಸುಸ್ತಾಗುತ್ತದೆ. ಇಂಥಲ್ಲಿ ಸಾಮಾನ್ಯವಾಗಿ ಎಲ್ಲರೂ ಸುಲಭದ ದಾರಿಗೆ ಹೊರಳಿಕೊಳ್ಳುತ್ತಾರೆ, ಅದೂ ವ್ಯಾಪಾರವೇ ಅಂತಿಮ ಗುರಿಯಾಗಿರುವಾಗಲಂತೂ ಹೇಳುವುದೇ ಬೇಡ. ಈ ಹಾದಿಯಲ್ಲಿ ನೀವು ಬಾಯಿಬಿಟ್ಟು ಹೇಳದ ನೂರು ಸಂಕಟ-ತಾಪತ್ರಯಗಳು ಎದುರಾಗುತ್ತವೆ. ನಮ್ಮ ನೀತಿ ಸಂಹಿತೆಗಳು-ಆರಕ್ಷಕರೂ ಕೂಡ ಕಾನೂನು ಪಾಲಕರಿಗೇ ದಂಡ-ಶುಲ್ಕ ವಿಧಿಸುವುದು ಹೆಚ್ಚು. ಇದರ ಅನುಭವವೂ ನಿಮಗಿದೆ! ಆದರೂ ನೀವು ನಿಮ್ಮ ಅನೇಕ ನಿಲುವುಗಳನ್ನು ಒಂದು ವೃತದಂತೆ ಸಾಧಿಸುವುದನ್ನು ಕಂಡಿದ್ದೇನೆ, ಕಂಡು ಅಚ್ಚರಿಪಟ್ಟಿದ್ದೇನೆ ಕೂಡ. ಹಾಗೆ ನಿಮ್ಮ
  “ಲೌಕಿಕ ವ್ಯವಹಾರಗಳಲ್ಲಿ ಉದ್ದೇಶಪೂರ್ವಕವಾಗಿ ತೋರುವ ಪ್ರತಿ ಉತ್ತಮಿಕೆಯೂ ಸಾಹಸವೇ.” ಎಂಬ ಮಾತು ಮನಸ್ಸಿನಲ್ಲಿ ಅನುರಣಿಸುತ್ತದೆ.

  ReplyDelete
 6. Ashokvardhan,
  Now I recollect my involvements and participations in Arohana Parvatharohigalu Sahasigalu with U, after 17 years. Visits to Ishwara Kallu, overnight stay at Ajji Kunja Vaali Kunja via Kabbinale, Barkana Treck in Ambulance, deep sea fishing in ordinary boats, and many more. Enjoyed. Other refreshing moments of Adventure will be made known as and when I recollect. Now I am out-dated for adventurous act, I feel and I am confident to change my attitude. With regards, I remain.

  ReplyDelete
 7. Sir,

  I somehow had missed reading this Blog post. When ever you ask anyone as to what is adventure. Many will come up with sugar coated answers like exploring the unknown, etc etc. But this article perfectly sums up what adventure is all about.

  I really loved these lines which I believe holds lot of relevance, "ಸಂಬಳ ಬಾರದ್ದಕ್ಕೆ, ನಲ್ಲಿ ಗೊಗ್ಗರಿಸಿದ್ದಕ್ಕೆ, ವಿದ್ಯುತ್ತು ಮುಗ್ಗರಿಸಿದ್ದಕ್ಕೆ, ಜೀವನ ವೆಚ್ಚ ಭಾರವಾದದ್ದಕ್ಕೆ ಬರಿದೇ ಕೊರಗಿ ಮುಗಿಸುವುದಲ್ಲ. ಪರಿಸರದ ಪರಿಚಯಕ್ಕೆ ತೊಡಗಬೇಕು. ಪ್ರಕೃತಿಯ ಯಾವುದೇ ಮುಖ, ಸವಾಲಿನ ಯಾವುದೇ ಕುಡಿ ಆತ್ಮೀಯವಾದಂತೆ ನಮ್ಮ ದೈನಂದಿನ ಕೊರತೆಗಳ ಮೂಲ ಶೋಧವಾಗುತ್ತದೆ, ಪರಿಹಾರವೂ ಕಾಣುತ್ತದೆ. ಅಷ್ಟು ಮಾತ್ರವಲ್ಲ, ನಮಗೇ ತಿಳಿಯದಂತೆ ನಾವು ಸಾಹಸಿಗಳೂ ಆಗುತ್ತೇವೆ; ಕನಿಷ್ಠ ಸಾಹಸ ಪ್ರೇಮಿಗಳಾದರೂ ಆಗಬಹುದು."

  Thanks for providing the link in your last week's post.

  Regards,
  Sandeep CR

  ReplyDelete
 8. ಭಯ೦ಕರ ಮಾರಾಯರೆ. ಛೆ!! ನಾನು ಕನ್ನಡಕ ಹಾಕಿದ ಫ಼ೋಟೊ, ಗೋಡೆ ಹತ್ತುವುದು, ತಡೋಕೊಳ್ಳಲಿಕ್ಕೆಕೂಡದು. ಪಾ೦ಡವಪುರ, ನಮ್ಮ ಚಿಮಣಿ ಛೇ ಹೇಳಿ ಪ್ರಯೋಜನವಿಲ್ಲ ಭಾವ. ನೀನು ನನ್ನನ್ನು 42 ವರ್ಷ ಹಿ೦ದೆ ಕರೆದುಕೊ೦ಡು ಹೋದಿಯ ... ವಾವ್ ಮೂಕವಿಸ್ಮಿತನಾದೆ -ಆನ೦ದ ಭಾವ

  ReplyDelete