19 March 2009

ಅಂಡಮಾನ್ ಮೂರನೇ ಭಾಗ

ಪ್ರಿಯಾನಂದಾ,

`ಛಲಬಿಡದ ರಾಜಾ ತ್ರಿವಿಕ್ರಮನು ಮತ್ತೆ ಮರದ ಬಳಿಗೆ ಹೋಗಿ, ಬೇತಾಳನನ್ನು ಇಳಿಸಿ, ಹೆಗಲ ಮೇಲೆ ಹಾಕಿಕೊಂಡು ಮೌನವಾಗಿ ನಡೆಯತೊಡಗಿದ’ ಎಂಬ ಮಾತುಗಳು ನಿನಗೇನು, ಚಂದಮಾಮದ ಓದುಗರಿಗೆಲ್ಲಾ ಸುಪರಿಚಿತವೇ. ಹಾಗೇ ನಾನೂ ಮರದ ಮನೆಯಿಂದ ನೆನಪಿನ ಬೇತಾಳವನ್ನು ಹೊತ್ತು ಮೌನವಾಗಿ ಹೊರಟಿದ್ದೇನೆ. ಬೇತಾಳ ನಗುತ್ತದೆ “ಅಯ್ಯಾ ರಾಜಾ ಕತ್ತಲು ಬೇಗಾಯ್ತೆಂದ ಮಾತ್ರಕ್ಕೆ ನೀನು ನಿದ್ದೆಗೆ ಶರಣಾಗಬೇಕೆಂಬ ಭ್ರಮೆ ಬಿಡು. ನಿನ್ನ ಮಾರ್ಗಾಯಾಸಕ್ಕೆ ಹ್ಯಾವ್ಲಾಕ್ ದ್ವೀಪದ ಮರದ ಮನೆ ಸೇರಿದವರ ಮುಂದಿನ ಕಥೆ ಹೇಳುತ್ತೇನೆ...”

Andaman 1ಮರುದಿನದ ಕಾರ್ಯಕ್ರಮ ಗಟ್ಟಿಮಾಡುವ ಅವಸರದಲ್ಲಿ ಅಲ್ಲೇ ನಮ್ಮ ಚೀಲಗಳನ್ನು ಎಸೆದು (ಅಮೂಲ್ಯವಾದ್ದನ್ನು ನಾವೇ ಹೊತ್ತು) ಮತ್ತೆ ದಾರಿಗೆ ಬಂದೆವು. ಕಾರೇರಿ ದಕ್ಕೆಯಿಂದ ಬಂದ ದಾರಿಯಲ್ಲೇ ಸ್ವಲ್ಪ ಮುಂದೆಲ್ಲೋ ಡೈವ್ ಇಂಡಿಯಾದ ಕಛೇರಿಯಿದೆಯೆಂದು ತಿಳಿದು ನಡೆದಿದ್ದೆವು. ಸೂರ್ಯಾಸ್ತವಾಗಿ ಮಂದ ಬೆಳಕಷ್ಟೇ ಉಳಿದಿತ್ತು. ಅಪರಿಚಿತ ನೆಲದಲ್ಲಿ ನಮ್ಮ ಎಚ್ಚರಕ್ಕೆ ಟಾರ್ಚೇನೋ ಹಿಡಿದಿದ್ದೆವು ಆದರೆ `ಬರಬಹುದಾದದ್ದರ’ (ಹಾವೋ ಹುಲಿಯೋ) ಕಲ್ಪನೆ ಏನೂ ಇರಲಿಲ್ಲ. ಆಗ ಬಡಿಯಿತು ಕಿವಿಗೆ ಭೀಕರ ಆರ್ತನಾದ! ನಮ್ಮ ಹಿಂದೆ ದಾರಿಯ ಬಲಬದಿಯ ಕುರುಚಲು ಕಾಡಿನಾಚೆಯಿಂದೆಲ್ಲೋ ಅಲೆಯಲೆಯಾಗಿ ದೀರ್ಘ ಕೀರಲು ಕೂಗು. ಏಕಚಕ್ರಾನಗರಿಯಲ್ಲಿ ಭಿಕ್ಷಾಟನೆ ಮಾಡಿ ಊಟಕ್ಕೆ ಕೂತ ಪಂಚ-ಪಾಂಡವರಿಗೆ ಬಡಬ್ರಾಹ್ಮಣನ ಮನೆಯಿಂದ ಇಂಥದ್ದೇ ಕೇಳಿರಬೇಕು. ನಾವು ಪಾಂಡವರಲ್ಲದಿದ್ದರೂ ಪಂಚರು ಹೌದಷ್ಟೇ, ಇನ್ನೇನು ಅತ್ತ ಧಾವಿಸಬೇಕಿತ್ತು! ಅಷ್ಟರಲ್ಲಿ ಇಲ್ಲೇ ಎದುರಿನ ಕಾಲ್ದಾರಿಯ ಆಚಿನಿಂದಲೂ ಇನ್ನೊಂದೇ ಅಂಥದೇ ಕಳಕು ಕೇಳಿಸಿತು. ಮತ್ತೆ ಎಲ್ಲೆಲ್ಲಿಂದಲೋ ವಿವಿಧ ಶ್ರುತಿಗಳಲ್ಲಿ ಇನ್ನಷ್ಟು ಮತ್ತಷ್ಟು ಅಂಥವು ಅನುರಣಿಸತೊಡಗಿದಾಗ ಅಭಯನಿಗೆ ತ್ರಿಪುರದಲ್ಲಿ ಚಿತ್ರ ತೆಗೆಯಲು ಹೋಗಿದ್ದಾಗಿನ ಅನುಭವ ನೆನಪಿಗೆ ಬಂತು. ಮರಿಕೆ ಮನೆಯಲ್ಲಿ (ನಮ್ಮ ಅಜ್ಜನ ಮನೆ) ಅತ್ತಿಗೆ (ವಾಸ್ತವದಲ್ಲಿ ಸೋದರಮಾವನ ಹೆಂಡತಿ ಅತ್ತೆ) ಸೂರ್ಯಾಸ್ತದ ವೇಳೆ ಮನೆ ದೇವರ ದೀಪ ಹಚ್ಚಿ, ಮೂರು ಬಾರಿ ಶಂಖವಾದನ ಮಾಡುತ್ತಿದ್ದದ್ದೂ ಸಂವಾದಿಯಾಗಿ ನನಗೂ ನೆನಪಿಗೆ ಬಂತು. ಹ್ಯಾವ್ಲಾಕ್-ವಾಸಿ ಬಂಗಾಳಿಗಳಿಗೆ ಪ್ರತಿ ಸಂಜೆಯ ಈ ಕಳಕು ಅಂಥದ್ದೇ ಒಂದು ಕಳಚಿಕೊಳ್ಳಲಾಗದ ಸಂಪ್ರದಾಯವಂತೆ! ಬಕಾಸುರನನ್ನು ಬಡೀತಿದ್ವೋ ಇಲ್ವೋ ಬಂಡಿ ಅನ್ನವಂತೂ ಹೊಡೀತಿದ್ವೂ ಅನ್ನು.

ಅರ್ಧ-ಮುಕ್ಕಾಲು ಕಿಮೀ ನಡೆದಾಗುವಾಗ ಒಂದೆರಡು ರಿಸಾರ್ಟುಗಳ ಬೋರ್ಡು ಕಳೆದು ಡೈವ್ ಇಂಡಿಯಾ ತಲಪಿದೆವು. ಇದೂ ಮೂಲತಃ ಎರಡು ಸಾಲಿನಲ್ಲಿ ಸುವ್ಯವಸ್ಥಿತಗೊಂಡ ದೊಡ್ಡ ಗುಡಾರಗಳ ವಸತಿ ವ್ಯವಸ್ಥೆ. ಇವುಗಳ ಎಡ ಸಾಲಿನ ಕೊನೆಯ ಒಂದು ಗುಡಾರದಲ್ಲಿ ಕ್ಯಾಂಟೀನಿನ ವ್ಯವಸ್ಥೆ ಇದ್ದರೆ ಬಲಸಾಲಿನ ಕೊನೆಯದ್ದು ಕಡಲ ಶೋಧದ ಕ್ರೀಡಾಪ್ರಿಯರಿಗೆ ಅವಶ್ಯವಾದ ಡೈವ್ ಇಂಡಿಯಾದ ಉಗ್ರಾಣ/ಕಛೇರಿ. ಔಪಚಾರಿಕತೆಗಳನ್ನೆಲ್ಲ ಕಳಚಿಕೊಂಡ, ಪಕ್ಕಾ `ಕೆಲಸ'ವನ್ನಷ್ಟೇ ನಡೆಸುವಂತಿದ್ದ ಅದರ ವರಿಷ್ಠೆ ಒಬ್ಬ ಮಹಿಳಾಮಣಿ! ಪ್ರತಿ ಬೆಳಿಗ್ಗೆ ಇವರು ಆಸಕ್ತ `ಅತಿಥಿ'ಗಳಿಗೆ (ಹೊರಗಿನವರಿಗೂ) ಸ್ನಾರ್ಕೆಲಿಂಗ್ ಮತ್ತು ಸ್ಕೂಬಾ ಡೈವಿಂಗ್‌ಗಳ ಸಲಕರಣೆ ಸಹಿತ ಯೋಗ್ಯ ತಾಣಗಳಿಗೊಯ್ದು ಆವಶ್ಯಕವಿದ್ದರೆ ತರಬೇತಿ ಸಹಿತ ಅವಕಾಶ ಕಲ್ಪಿಸುತ್ತಾರೆ. ಒಂದು ಮುಳುಗಿಗೆ ರೂಪಾಯಿ ಸಾವಿರ ಮಿಕ್ಕುವ ಸ್ಕೂಬಾಕ್ಕೆ ನಿರೇನ್ ರೂಪಾಯಿ ನೂರು ಮೀರುವ ಸ್ನಾರ್ಕೆಲಿಂಗಿಗೆ ಉಳಿದ ನಾಲ್ವರು ಹೆಸರು ನೋಂದಾಯಿಸಿ ಮರಳಿದೆವು.

20042007110ನಾಲ್ಕೈದೇ ಕಿಮೀ ಉದ್ದವಿರಬಹುದಾದ ಆ ದ್ವೀಪ-ದಾರಿಯಲ್ಲೂ ಒಂದು ಪುಟ್ಟ ಬಸ್ಸು ಓಡಿದಾಗ ನಾವು ಮೂಗಿಗೆ ಬೆರಳೇರಿಸಿದೆವು. ದಾರಿಗೆ ಉಜ್ವಲ ಬೀದಿದೀಪದ ವೈಭವವಿರಲಿಲ್ಲ ಆದರೆ ಎಲ್ಲಾ ವಸತಿ ಕೇಂದ್ರಗಳನ್ನೂ ಗುರುತಿಸುವಷ್ಟು ಮಿನುಗು ದೀಪಗಳಿಗೆ ಕೊರತೆಯಿರಲಿಲ್ಲ. ಸುತ್ತ ಒತ್ತಿ ನಿಂತಿರುವುದು ಉಪ್ಪುನೀರಿನ ಮೊತ್ತ, ನೆಲವೋ ಹವಳಾವಶೇಷಗಳ ಮೇಲಿನ ತೋರಿಕೆಯ ಮಣ್ಣು. ಆದರೂ ಸಿಹಿನೀರಿನ ಕೊಳಾಯಿ ನಿರಂತರ ಎನ್ನುವ ಭಾವ ನಮಗೆ ಮೂಡಿಸಿತ್ತು! ಇವನ್ನೆಲ್ಲ ಒಂದು ಪುಟ್ಟ ನೆಲದ ತುಣುಕು (ದ್ವೀಪ) ಸ್ವತಂತ್ರವಾಗಿ ರೂಢಿಸಿಕೊಂಡಿದೆ ಎಂದು ಹೊಳೆದಾಗ ಮುಖ್ಯಭೂಮಿಂದ ಬಂದ ನಮಗೆ ಊರೆಲ್ಲಾ ಬೂದಿ ತುಂಬುವ, ಘಟ್ಟವೆಲ್ಲಾ ಮಟ್ಟಮಾಡಿ ಚತುಷ್ಪಥದ ಗೀಟೆಳೆಯುವ, ಸಹಜ ಪಾತ್ರೆ ಕೆಡಿಸಿ ಇನ್ನೆಲ್ಲಿಗೋ ನದಿತಿರುಗಿಸುವ ಕೆಟ್ಟ ಯೋಜನೆಗಳ ನೆನಪುಗಳು ಕಾಡದಿರಲಿಲ್ಲ.

ನಮ್ಮ ವಸತಿ ವ್ಯವಸ್ಥೆಗೆ ಮರಳಿದವರೇ ಊಟದ ಮನೆ ಹೊಕ್ಕೆವು. ಒಂದು ಬದಿಯಲ್ಲಿ ವಿಶೇಷ ಅನ್ಯೋನ್ಯವೇನೂ ಇಲ್ಲದಂತೆ ನಾಲ್ಕೆಂಟು ವಿದೇಶೀಯರು ಮೆಲುಧ್ವನಿಯಲ್ಲಿ ಬೇಕೋ ಬೇಡವೋ ಎಂಬಂತೆ ಮಾತನ್ನೂ ಏನೂ ಅವಸರವಿಲ್ಲದಂತೆ ಚಷಕವನ್ನೂ ಬಳಸುತ್ತಿದ್ದರು. ನಾವು ನಮ್ಮ ಸಹಜ ಸ್ಥಿತಿಯಲ್ಲಿ ಒಂದಷ್ಟು ರೊಟ್ಟಿ, ಅನ್ನ, ತೊವ್ವೆ (ದಾಲ್), ಪಲ್ಯ (ಸಬ್ಜಿ)ಗಳಿಗೆ ಆದೇಶಿಸಿ ನಮ್ಮಲ್ಲಿ ಮಾತಿಗೆ ಬರವಿಲ್ಲದಂತೆ ಕಾದೆವು. ಹೊತ್ತು ಕಳೆದು, ಒಂದೂವರೆ ಕಾಲಿನ (ಇಜಾರದ) `ವಾನರು'ಗಳು ಕೊಟ್ಟ ಏನೋ ಒಂದಷ್ಟು ಹೊಟ್ಟೆಗೆ ಹಾಕಿ ನಮ್ಮ `ಅರೆಮನೆ’ (ಈಗ ಅಮೆರಿಕಾದಲ್ಲೇ ಇರುವ ಶರತ್ ನಿನಗ್ಗೊತ್ತಿದೆ. ಆತ ಶಿರಾಡಿಯ ಬಳಿಯಲ್ಲಿ ತನ್ನ ಪಾಲಿಗೊದಗಿದ ಆಸ್ಥಿಗೆ ಕಾಲಿಟ್ಟಾಗ ಉಳಿದುಕೊಳ್ಳಲು ಒಂದು ಜೋಪಡಿ ಮಾಡಿಸಿಕೊಂಡಿದ್ದ. ಅರೆಬರೆ ಮನೆಯಂತೇ ಇದ್ದ ಅದಕ್ಕೆ ಅವನೇ ಪಿರೀತಿಯಿಂದ ಇಟ್ಟ ಹೆಸರು ಅರೆಮನೆ) ಸೇರಿದೆವು.

ಮಂದ ತಿಂಗಳ ಬೆಳಕಿನಲ್ಲಿ, ತೆಂಗಿನಕೈ ತೂಗುವ ಮೆಲುಗಾಳಿಯಲ್ಲಿ, ಮಿನುಗುವ ದಾರಿ ದೀಪಗಳ ಕೊನೆಯಲ್ಲಿ ಅರಮನೆ ನೇರ ಮಾಯಾಮಂತ್ರದ ಕಾಮಿಕ್ ಪುಟದಿಂದೆದ್ದಂತಿತ್ತು. ಮಾತ್ರವಲ್ಲ ಇನ್ನೂ ಏನೋ ಇದೆ ಎಂಬ ಲಹರಿ ವಾತವರಣದಲ್ಲಿ ಇತ್ತು! ನೋಡುವುದೇನು, ಹಾಳು ಸುರಿದಿದ್ದ ಜವುಗು ನೆಲ ಮಂಗಮಾಯ, ಅಲೆಯುಕ್ಕಿ ನಗುವ ಸಮುದ್ರ ಹಾಜರ್. ಕೊರಡಿನೊಡನೆ ಕೆಸರಿಗೊರಗಿದ್ದ ದೋಣಿಯ ಛಾಯೆಯೀಗ ಎರೆ ಕಂಡು ಸರಪಣಿ ಜಗ್ಗುವ ಬೇಟೆಗಾರ; ಕೊಟ್ಟಿಗೆಯಂಚಿನಲ್ಲಿ ಅಮ್ಮನಿಗೆ ಗುಮ್ಮಲು ಹಗ್ಗ ತುಯ್ಯುವ ಪುಂಡ. ಉಪಾದ್ಯರ ತಲೆಯೋಡಿತು "ಅಯ್ಯೋ ಮಾರಾಯ್ರೇ ನಾವಾವಾಗ ಕಂಡ ಸ್ಥಿತಿ ಇಳಿತ, ಈಗ ಭರತ. ರಾಜಕೀಯ ಭಾಷೆಯಲ್ಲಿ ಕರ್ನಾಟಕದ ಕರಾವಳಿಯೂ ಅಂಡಮಾನ್ ಕರಾವಳಿಯೂ ಭಾರತವೇ ಸರಿ. ಆದರೆ ಭೌಗೋಳಿಕ ಸತ್ಯದಲ್ಲಿ ಇಲ್ಲಿನ ಸೂರ್ಯಾಸ್ತ ಐದಕ್ಕೇ ಆಗುವುದಾದರೆ ರಾತ್ರಿ ಒಂಬತ್ತಕ್ಕೆ ಭರತ ನಡೆಯುವುದು ಸಂಭವವೇ..." ಅಕ್ಷಾಂಶ, ರೇಖಾಂಶ, ಶುಕ್ಲಪಕ್ಷ, ಕೃಷ್ಣಪಕ್ಷ, ಚಂದ್ರೋದಯಾಸ್ತ ಅಳೆದು ಸುರಿದು ಭಯಂಕರ ಲೆಕ್ಕವನ್ನೇ ಒಪ್ಪಿಸಿಬಿಟ್ಟರು. ನಿನ್ನ (ಈ ಬರೆಹದ ಓದುಗರ) ಸೌಭಾಗ್ಯವೋ ದುರದೃಷ್ಟವೋ ಅವಷ್ಟೂ ನನ್ನ ತಲೆಮೇಲಿನಿಂದ ಹೋಯ್ತು. (ಪ್ರವಾಸ ಕಥನದ ಮೊದಲ ಕಂತಿನ ಕೊನೆಯಲ್ಲಿ ಹೇಳಿದ ಆಗಸದೆತ್ತರದ ಉಷ್ಣಾಂಶವನ್ನೂ ಇದರೊಡನೇ ಎಂದೋ ಸೇರಿಸಿಬಿಟ್ಟಿದ್ದೇನೆ!) ಅಲ್ಲೇ ಅಡ್ಡ ಹಾಕಿದ್ದ ಒಂದು ದೊಡ್ಡ ಮರದ ಬೊಡ್ಡೆಯ ಮೇಲೆ ಕುಳಿತು ಆಗೀಗ ಕಾಲು ನೆಕ್ಕಲು ಬರುವ ತೆಳು ಅಲೆಗಳಾಟ ಅನುಭವಿಸುತ್ತಾ ತುಸು ಹೊತ್ತು ಕಳೆದು ಗುಡ್ನಾಯಿಟಿಸಿದೆವು.

20042007114"ಬೆಳ್ಳನೇ ಬೆಳಕಾಯಿತು..." ಎಂದು ಲತಾಮಂಗೇಶ್ಕರ್ ರಾಗ ತೆಗೆಯುವ ಮನಸ್ಸು ನನ್ನದು ಆದರೆ (ಗಂಟಲು ಗೊಗ್ಗರು ಎನ್ನುವುದು ಪ್ರತ್ಯೇಕ) ಗಂಟೆ ಇನ್ನೂ ನಾಲ್ಕರ ಆಸುಪಾಸು! ಇಲ್ಲಿನ ಸೂರ್ಯನ ಮೋಸ ತಿಳಿದವರಂತೆ ಎಲ್ಲರೂ ಗಾಢನಿದ್ರೆ. ಹೇಗೋ ಸ್ವಲ್ಪ ಸಮಯ ಸುಧಾರಿಸಿ ಮತ್ತೆ ಉಳಿದವರಿಗೆ ಸಾಕಷ್ಟು ಕೀಟಲೆ ಕೊಟ್ಟು, ಎಲ್ಲರೂ ಅರಮನೆ ಬಿಡುವಾಗ ಇನ್ನೂ ಸಾಕಷ್ಟು ಸಮಯ ಉಳಿದೇ ಇತ್ತು. (ಪ್ರಾತರ್ವಿಧಿಗಳನ್ನು ಮುಗಿಸಿಕೊಂಡಮೇಲೆ) ಹೊರಡಲು ಏನೂ ಆಗಬೇಕಿರಲಿಲ್ಲ ಎನ್ನುವುದು ಅಂದಿನ ಕಾರ್ಯಕ್ರಮದ ವಿಶೇಷ. ಕನಿಷ್ಠ ಲಗ್ಗೇಜು, ತೀರಾ ಅನೌಪಚಾರಿಕ ವೇಷ ಎಂದು ಧರಿಸಿದ್ದರೂ ಅವೂ ಹೊರೆಯಾಗುವಂತೆ ಸಮುದ್ರಮುಳುಗು ಸ್ನಾನವೇ ನಮ್ಮ ಗುರಿ. ಡೈವ್ ಇಂಡಿಯಾಕ್ಕೆ ನಾವು ಔಪಚಾರಿಕ ದಾರಿ ಹಿಡಿಯಲಿಲ್ಲ. ಮತ್ತೆ ಇಳಿತದಲ್ಲಿದ್ದ ನಮ್ಮಂಚಿನ ಕಿನಾರೆಯನ್ನು ನೋಡುತ್ತ ನಡೆದೆವು. ಹೊರನೋಟಕ್ಕೆ ನಮ್ಮೂರ ಕೆಟ್ಟ ಕೆರೆ ತೋಡುಗಳ ಕೊಳೆತ ಅಂಚಿನಂತೇ ಕಾಣುವ ಆ ನೆಲ ವಾಸ್ತವದಲ್ಲಿ ಪೂರ್ತಿ ಬೇರೇ. ನಾಡಿ ಮಿಡಿತದಂತೆ ತೆಳು ನೀರ ಅಲೆಯ ನಿಯತ ಒಲೆ ನಡೆದೇ ಇತ್ತು, ಒಟ್ಟು ಜಲರೇಖೆ ಕ್ಷಣದಿಂದ ಕ್ಷಣಕ್ಕೆ ದಂಡೆಯಿಂದ ದೂರ ಸರಿಯುತ್ತಲೂ ಇತ್ತು. ಹಿಂದಿನ ಸಂಜೆ ನಾವು ಭ್ರಮಿಸಿದಂತೆ ಎಲ್ಲೂ ಗೊಸರು, ಕೊಳೆಯಕುಪ್ಪೆ ಇರಲಿಲ್ಲ. ತೆರೆದಮೈಯಲ್ಲಿ ಹರಡಿ ಬಿದ್ದು, ಕಂಬಳಿ ಹೊದ್ದ ಬಂಡೆಗಳಂತೆ ತೋರುವ ಭಾರೀ ಆಕೃತಿಗಳಿಂದ ತೊಡಗಿ ಮರಳಂತೆ ತೋರುವ ಹುಡಿಯವರೆಗಿಲ್ಲಿ ಎಲ್ಲವೂ ಹವಳದವಶೇಷಗಳು. ಪಾದ ಹುಗಿಯುವ ಮಾತೇ ಇಲ್ಲ. ತಪ್ಪಿ ಬರಿಗಾಲಿನಲ್ಲಿ ನಡೆದಾಡಿದರೆ ಗೀರು, ಗಾಯ ಖಚಿತ.

ಏಡಿಯೇ ಮೊದಲಾಗಿ ಉಭಯಚರಿಗಳ ಸಂತೆ ಸರಕು ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಸೆಳೆಯುತ್ತಿತ್ತು. ನೆನಪಿರಲಿ, ಸರಕುಗಳು ಮಾತ್ರ, ಯಜಮಾನರುಗಳು ದರ್ಶನ ಕೊಟ್ಟದ್ದು ಬಹಳ ಕಡಮೆ! ಅಥವಾ ಬಿಗ್ ಬಜಾರಿನಂತೆ ನಮ್ಮನ್ನು ಸ್ವಸಹಾಯಪದ್ಧತಿಗೆ ಬಿಟ್ಟು ಮಾಯಾಕಣ್ಣಿನ ಮೂಲಕ `ಸೆರೆ’ ಹಿಡಿಯುವುದನ್ನೂ ಕಲಿತುಬಿಟ್ಟಿವೆಯೋ ಏನೋ. ಅವುಗಳಲ್ಲಿ ಬಹಳ ಎದ್ದು ಕಾಣುತ್ತಿದ್ದ ಒಂದನ್ನು ಕುರಿತು ನಾಲ್ಕು ನುಡಿಮಣಿ ಪೋಣಿಸದಿರಲಾರೆ. ಸುಮಾರು ಹದಿನೈದಿಪ್ಪತ್ತು ಮಿನಿಟುಗಳ ಹಿಂದೆ ನೀರು ಬಿಟ್ಟ ಪುಳಿನಕಿನಾರೆಯಲ್ಲಿ ಅಲ್ಲಲ್ಲಿ ಒಂದು ವಿಚಿತ್ರ ಮರಳಶಿಲ್ಪ; ಪ್ರಾಥಮಿಕ ಶಾಲಾ ಮಕ್ಕಳ ಚಿತ್ರಪುಸ್ತಕದ ಸೂರ್ಯನದೇ ಪ್ರತಿರೂಪ. ಅಕ್ಷತ ಮರಳಹಾಸಿನ ಮೇಲೆ ದಪ್ಪದ ದಬ್ಬಣ ಚುಚ್ಚಿ ಮಾಡಿದಂತಿದ್ದ ತೂತವೇ ಸೂರ್ಯ. ಅಲ್ಲಿಂದ ಹೊರಟು ವಿಸ್ತರಿಸುವ, ಹೆಚ್ಚು ಕಡಮೆ ಸರಳ ರೇಖೆಗಳುದ್ದಕ್ಕೆ ಪುಟ್ಟ ಮಣ್ಣಗೋಲಿಗಳ ಜೋಡಣೆ - ಥೇಟ್ ಕಿರಣಗಳ ಕೋಲಿನ ಕೊಲಾಜ್. ಈ ವಿಚಿತ್ರದ ಕಲಾವಿದ ಮಿನಿ ಏಡಿಗಳಂತೆ. ನಿರ್ಮೋಹಿ, ವೃತ್ತಿಪರರಂತೆ ಒಂದೂ ನಮಗೆ ದರ್ಶನ ಕೊಡಲಿಲ್ಲ. ಹೀಗೇ ಹಲವು ತೆರನ ಕಡಲ ವೈಶಿಷ್ಟ್ಯ, ಕಡಲಿನದ್ದೇ ತ್ಯಾಜ್ಯ. ನಮ್ಮೂರಲ್ಲಿ ಸಹಜವಾದ `ನಾಗರಿಕ ಕೊಳೆ’ ಒಮ್ಮೆಯೂ ಸಿಗಲಿಲ್ಲ!

21042007118ಭಾರೀ ದೂರವೇನೂ ನಡೆಯಲಿಲ್ಲ. ಸುಮಾರು ಇನ್ನೂರು ಮೀಟರು ಕಾಲೆಳೆಯುವಷ್ಟರಲ್ಲೇ ಡೈವ್ ಇಂಡಿಯಾದ ಕಿನಾರೆಯಲ್ಲಿದ್ದೆವು. ಅಲ್ಲಿನ ಕ್ಯಾಂಟೀನ್ ಹೊಕ್ಕು ಒಂದೆರಡು ತುಂಡು ಎಸಳು ಬ್ರೆಡ್, ಚಾ ನೆಕ್ಕಿ (ತಿಂದು ಕುಡಿಯುವ ಶಬ್ದಗಳು ತುಂಬಾ ದೊಡ್ಡವು. ಇನ್ನೂ ಸರಿಯಾಗಿ ಹೇಳುವುದಾದರೆ ಅಲ್ಲಿನ ತಿನಿಸುಗಳಿಗೆ ನಮ್ಮ ಹಣ ಅಪಮೌಲ್ಯಗೊಂಡಿತ್ತು!) ಕಛೇರಿಯಲ್ಲಿ ಹಾಜರೊಪ್ಪಿಸಿದೆವು. ನಮ್ಮ ಚಪ್ಪಲಿ ಅಲ್ಲಿ ಕಳಚಿಟ್ಟು ಅವರು ತೋರಿದ ಜಾಲಪಾದದ ತೊಡರುಗಳ ರಾಶಿಯಿಂದ ನಮ್ಮ ಅಳತೆಯನ್ನು ಹೆಕ್ಕಿಕೊಂಡೆವು. ನೀರ ಮೇಲ್ಪದರದಲ್ಲೇ ಚಟುವಟಿಕೆ ನಡೆಸಲಿದ್ದ ನಮ್ಮ ನಾಲ್ವರಿಗೆ ತೇಲುವ ಬೆಂಡಿನ ಕವಚ (ಲೈಫ್ ಜಾಕೆಟ್) ಮತ್ತು ಸ್ನಾರ್ಕೆಲ್, ಅಂದರೆ ಕಣ್ಣುಗಳನ್ನು ಬಿಗಿಯಾಗಿ ಆವರಿಸುವ ಕನ್ನಡಕ ಮತ್ತು ಬಾಯಲ್ಲಿ ಕಚ್ಚಿಕೊಂಡರೆ ತಲೆಯ ಹಿಂಬದಿಗೆ ಸುಮಾರು ಮೂರಿಂಚು ದೂರ ನಿಲ್ಲುವ ಒಂದು ಕೊಳವೆಯನ್ನು ಒದಗಿಸಿದರು. ನೀರಾಳಕ್ಕೇ ನುಗ್ಗಲಿದ್ದ ನಿರೇನಿನ ಸಲಕರಣೆಗಳು ನಮ್ಮದರಷ್ಟು ಸರಳವಲ್ಲವಾದ್ದರಿಂದ ಅವನ್ನು ಸಂಘಟಕರೇ ನಮಗಾಗಿದ್ದ ದೋಣಿಗೆ ಹೊತ್ತು ತುಂಬಿದ್ದರು. ನಾವು ಹಿಂದಿನ ದಿನ ನೋಡಿದ್ದ ಕೊರಡಿಗೆ ಕಟ್ಟಿದ್ದ ದೋಣಿಯಲ್ಲದೆ ಇನ್ನೊಂದೂ ಸಾಹಸಕ್ರೀಡೆಗೆ ಸಜ್ಜುಗೊಂಡಿತ್ತು. ಡೈವ್ ಇಂಡಿಯಾದ ಶಿಬಿರದಿಂದ ಮತ್ತು ಆಸುಪಾಸಿನಿಂದ ಬಂದ ಇತರೆಲ್ಲ ಭಾಗಿಗಳೂ ವಿದೇಶೀಯರೇ!

ಪರಂಗಿಗಳೋ ರೆಡಿ ಟು ಡೈವ್ ಅಂದರೆ ಕನಿಷ್ಠ ಉಡುಪಿನಲ್ಲೇ ಬಂದಿದ್ದರು. ಗಂಡಸರಿಗೆ ಆರಿಂಚಗಲದ ಒಂದು ತುಂಡು ಬಟ್ಟೆ ಸಾಕಾದರೆ ಹೆಂಗಸರು ಮೂರಿಂಚಗಲದ ಎರಡು ತುಂಡಿನ ತೊಡವಿನಲ್ಲಿ ಸುಧಾರಿಸಿಕೊಂಡಿದ್ದರು! ಆದರೆ ನಮ್ಮ ಶಿಷ್ಟಾಚಾರಗಳ ಅಡಿಕೋಲಿನಲ್ಲಿ ಪುರುಷರು ಬನಿಯನ್ನು, ದಗಳೆಚಡ್ಡಿ, ಚಪ್ಪಲಿ, ವಾಚಾಲಂಕೃತರಾಗಿದ್ದರೆ (ಏಕೈಕ) ಮಹಿಳೆ ಪೂರ್ಣ ಪಂಜಾಬೀ ಉಡುಪಿನಲ್ಲಿ ಮಾತ್ರವಲ್ಲ ಮಾರ್ಕೆಟಿಂಗಿಗೆ ಹೊರಟಂತೆ ಜಂಬದ ಚೀಲವನ್ನೂ ಹೆಗಲಿಗೇರಿಸಿದ್ದಳು! ಆನಂದಾ ನಿನ್ನ ಅಮೆರಿಕಾ ಅನುಭವದ ಮುನ್ನೆಲೆಯಲ್ಲಿ ನೀನು ಇದರ ಅವಾಸ್ತವತೆಯನ್ನು ನೆನೆಸಿಯೇ ಮನಸಾ ನಗಬಹುದು, ಆದರೆ ಒಂದು ವಿಚಾರ ಒಪ್ಪಲೇಬೇಕು, “ಚಕ್ರವನ್ನು ಪುನಃಶೋಧ ಮಾಡುವಲ್ಲೂ ಅಪಾರ ಸಂತೋಷವಿದೆ!” (ಇದು ನನ್ನ ಮಾತಲ್ಲ, ಉಪಾದ್ಯರದ್ದು.) `ಮಿಂದ’ ಮೇಲೆ ತಲೆ, ಮೈ ಒರೆಸುವುದು ಬೇಡವೇ? ಬದಲಿ ಬಟ್ಟೆ ಇಟ್ಟುಕೊಳ್ಳದಿದ್ದರೆ ಹೇಗೆ? ಐತಿಹಾಸಿಕ ಕ್ಷಣಗಳನ್ನು ಸೆರೆಹಿಡಿದಿಟ್ಟುಕೊಳ್ಳಲು ಕ್ಯಾಮರಾ? ಇಲ್ಲಿ ಕಾಲವನ್ನು ದಿನದ ಲೆಕ್ಕದಲ್ಲಿ ಕಳೆಯಲು ಬಂದರೂ ಗಂಟೆ ಮಿನಿಟುಗಳ ಕಾಳಜಿ ಉಳಿಸಿಕೊಳ್ಳಲು ವಾಚು? ಬಜಾರಿಲ್ಲದಲ್ಲೂ ಹಣಕಾಸು ಬೇಕಾಗಿಬಿಟ್ಟರೆ? ಮತ್ತಿವೆಲ್ಲವುಗಳ ನಿರ್ವಹಣಾ ಜವಾಬ್ದಾರಿ ಸಂಪ್ರದಾಯದಂತೆ ಮಹಿಳೆಯದ್ದೇ ಅಲ್ಲವೇ?

ಸಂಘಟಕಿ ಒಂದು ಜರ್ಮನ್ ಯುವ ದಂಪತಿಯೊಡನೆ ನಮ್ಮೈವರನ್ನು ಒಂದು ದೋಣಿಗೇರಿಸಿ ತರುಣನೋರ್ವನನ್ನು ಶಿಕ್ಷಕನನ್ನಾಗಿ ಬಿಟ್ಟಳು. ನಮ್ಮ ನಾವಿಕರಿಬ್ಬರು ಪುಟ್ಟ ಔಟ್ಬೋರ್ಡ್ ಎಂಜಿನ್ ಚಾಲೂ ಮಾಡಿ ನಮ್ಮ ವಸತಿಯ ದಿಕ್ಕಿಗೇ ಫಟಪಟಾಯಿಸಿದರು. ಸಂಘಟಕಿ ಉಳಿದಷ್ಟೂ ವಿದೇಶಿಯರನ್ನು ಕಟ್ಟಿಕೊಂಡು ಇನ್ನೊಂದೇ ನಾವೆಯಲ್ಲಿ ವಿರುದ್ಧ ಕಿನಾರೆಯಲ್ಲಿ ಮರೆಯಾದಳು. ನಮ್ಮ ದೋಣಿ ಓಟದಲ್ಲಿ ಸ್ಥಿರತೆಗೆ ಬಂದಂತೆ ಶಿಕ್ಷಕ ಮಹಾಶಯ ನಮ್ಮೆದುರು ಸಿಂಹಾಸನವೇರಿದ ಗಾಂಭೀರ್ಯದಲ್ಲಿ ಬಂದು ಕುಳಿತು, "ವೆಲ್ ಜಂಟಲ್ಮೆನ್ ಅನ್ಡ್ ಲೆಡೀಸ್ ಗುಡ್ಮೋರ್ನಿಂಗ್, ಗುಡ್ಮೋರ್ನಿಂಗ್, ಗುಡ್ಮೋರ್ನಿಂಗ್....." ಎಂದು ಪ್ರತಿಯೊಬ್ಬರಿಗೂ ತಲೆ ಕೊಡಹಿದ. ನಮಗೆ ಒಮ್ಮೆಗೆ ಬಾಲ್ಯಕ್ಕೆ ಮರಳಿದ ಭಾವ - ಒಕ್ಕೊರಲಿನಲ್ಲಿ ಗುಡ್ಮೋರ್ನಿಂಗ್ ಹೇಳಿ ಪೆಚ್ಚುನಗೆ ಬೀರುವಂತಾಯ್ತು. ಆತ ಮಹಾರಾಷ್ಟದ ಇಂಜಿನಿಯರಿಂಗ್ ಪದವೀಧರನಿದ್ದೂ ಡೈವಿಂಗಿನ ಅತೀವ ಪ್ರೀತಿಯಲ್ಲಿ ಹೀಗೇ ಇಲ್ಲಿ ದುಡಿಯುವವನಂತೆ. ಆತ ಸ್ಕೂಬಾ ಮತ್ತು ಡೈವಿಂಗ್‌ಗಳ ಪ್ರಾಯೋಗಿಕ ಸೂಕ್ಷ್ಮಗಳನ್ನು ಪರಿಚಯಿಸಿದ. ನಮ್ಮ ದೋಣಿ ಹ್ಯಾವ್ಲಾಕ್ ದ್ವೀಪಕ್ಕೆ ಅಪ್ರದಕ್ಷಿಣೆ ಹಾಕುವವರಂತೆ ಸುತ್ತಿ ಮುಖ್ಯ ದೋಣಿ ಕಟ್ಟೆಗೇ (ನಾವು ಹಿಂದಿನ ಸಂಜೆ ಬಂದಿಳಿದ ಜಾಗ) ಬಂತು. ಅಲ್ಲಿ ಹೆಚ್ಚು ಸಜ್ಜುಗೊಂಡಿದ್ದ ಇನ್ನೊಂದೇ ದೋಣಿಗೆ ಬದಲಿಕೊಂಡು ನಮ್ಮ ಅಪ್ರದಕ್ಷಿಣೆ ಮುಂದುವರಿಸಿದೆವು. ಕಡಿದಾದ ಕಲ್ಲಕೊರಕಲು ಅಥವಾ ತಾನು ನಿಂತ ನೆಲ ಮರೆಮಾಡಿ ನೀರಿಗೇ ಮುತ್ತಿಗೆ ಹಾಕಿದಂತೆ ಕಾಣುವ ಮ್ಯಾಂಗ್ರೋವ್ ಹಸಿರಗೋಡೆ ನೋಡುತ್ತ ಸಾಗಿದೆವು. ಒಟ್ಟಾರೆ ಸುಮಾರು ಎರಡು ಗಂಟೆ ಪಯಣಿಸಿ ನೆಲ ಸಣ್ಣದಾಗಿ ಒಳಮುರಿದಲ್ಲಿ ತಂಗಿದೆವು. ಇದು ಪುಟ್ಟ ಮರಳತೀರ. ಸುನಾಮಿ ಹೊಡೆತದಲ್ಲಿ ಅಡ್ಡ ಮಲಗಿದ ಭಾರೀ ಮರವೊಂದು ಸಮುದ್ರದ ಮೇಲೇ ಆರ್ತ ಕೈ ಚಾಚಿಕೊಂಡು ಬಿದ್ದಿತ್ತು. ನಮ್ಮ `ಈಜುಕೊಳಕ್ಕೆ’ ಅದು ಪ್ರಾಕೃತಿಕ ಜಿಗಿಹಲಗೆ. ಆದರೆ ಬರಿಯ ಈಜು, ಜಿಗಿತದ ಮೋಜಿಗಲ್ಲಿ ಬಿಡುವಿರಲಿಲ್ಲ. ದೋಣಿಯ ಸಹಾಯಕರು ಸಲಕರಣೆಗಳ ಹೊಂದಾಣಿಕೆ ನಡೆಸುತ್ತಿದ್ದಂತೆ ಶಿಕ್ಷಕ ಮತ್ತೆ “ವೆಲ್ ಲೇಡೀಸ್ ಅಂಡ್ ಜಂಟಲ್ಮನ್...” ನಿರೇನ್ ಮತ್ತು ವಿದೇಶೀ ದಂಪತಿ ಸಾಗರತಳ ಪರಿಶೋಧಕರು. ಉಳಿದ ನಾವು ಮೇಲ್ವಿಚಾರಕರು (ಛೆ ಛೆ, ಯಜಮಾನಿಕೆ ಅಥವಾ ಮದುವೆ ಊಟ ಬಡಿಸುವಲ್ಲಿ ಕಡಿಮೆ ಕೆಲಸ ಮಾಡಿ ಬೊಬ್ಬೆ ಭಾರಿಹೊಡೆಯುವವರನ್ನು ಕಾಣಬೇಡ) ಅಥವಾ ತೇಲ್ಗಣ್ಣರು (ಅಯ್ಯೋ ಮತ್ತೆ  ಅಮಲು ಪದಾರ್ಥ ಸೇವಿಸಿದವರೆಂದೂ ಯೋಚಿಸಬೇಡ); ಸುಲಭ ತರಬೇತಿನವರು, ಹಾಗಾಗಿ ಮೊದಲ ಪಾಠ ನಮಗೆ!

ಬೆಂಡು ತುಂಬಿದ ಅಂಗಿ (life jacket) ಧರಿಸಿ, ನೀರಮೇಲೆ ಮುಖಾಡೆ ಬಿದ್ದುಕೊಂಡು, ತೇಲುತ್ತಾ ನೀರಾಳವನ್ನು ಬರಿಯ ದೃಷ್ಟಿಯಲ್ಲಿ ನಿರುಕಿಸಲು ಇದ್ದವರು ನಾವು. ಉಪ್ಪುನೀರು ಕಣ್ಣು ಸೇರದಂತೆ ಕಣ್ಗಾಪು, ಉಸಿರಾಟಕ್ಕೆ ಬಾಯಿಗೊಂದು ಡೊಂಕಿನ ಕೊಳವೆ. ಚಲನೆಯ ಹೆಚ್ಚಿನ ಅನುಕೂಲಕ್ಕಷ್ಟೆ ಜಾಲಪಾದ. ಉಪಾದ್ಯರೊಬ್ಬರಿಗೆ ಮಾತ್ರ ಧಾರಾಳ ಸಮುದ್ರ ಈಜಿನ ಅನುಭವ ಇತ್ತು. ಅಭಯನಿಗೆ ಹೆಚ್ಚಿನ ಈಜಿನ ಪರಿಣತಿ ಇದ್ದರೂ ಅವನದೂ ಸೇರಿದಂತೆ ನನ್ನದು ಕೇವಲ ಕೆರೆಯ ಅನುಭವಗಳು. ದೇವಕಿಯದು ದೇವರೇ ಗತಿ, ಈಜು ಗೊತ್ತೇ ಇಲ್ಲವಲ್ಲಾ ಎಂದು ನಾವು ಯೋಚಿಸಿದ್ದೆವು (ಮನಸ್ಸಿನಾಳದಲ್ಲಿ ನಮ್ಮ ಮೇಲುಗೈ ಬಗ್ಗೆ ಹೆಮ್ಮೆಯೂ ಅವಳ ಸೋಲಿನ ಕುರಿತು ಕನಿಕರವೂ ಇತ್ತು!). ಆದರೆ ಹಾಗಿಲ್ಲ; ತೇಲಂಗಿ ಇರುವವರೆಗೆ ಎಲ್ಲರ ಸ್ಥಾನ ಸಮಾನ. ಮೊದಲಸುತ್ತಿನಲ್ಲಿ ನಾವಿಕನೊಬ್ಬ ತಾನೂ ಸ್ನಾರ್ಕೆಲ್ ಸಿಕ್ಕಿಸಿಕೊಂಡು ನಮ್ಮಲ್ಲೊಬ್ಬೊಬ್ಬರನ್ನೇ ನಮ್ಮ ತೇಲಂಗಿಯ ಅಂಚು ಜಗ್ಗಿಕೊಂಡು ದಂಡೆಯಿಂದ ದೂರ ಒಯ್ದ. ಲೆಕ್ಕಕ್ಕೆ ನಾವು ಕಾಲಿನಲ್ಲಿ ನೂಕುಬಲ ಕೊಟ್ಟುಕೊಂಡು ಕೈಯಲ್ಲಿ ದಿಕ್ಕುದೆಸೆ ಸಂಭಾಳಿಸಿಕೊಂಡು ಹೋಗಬೇಕಿತ್ತು. ಆದರೆ ಮೂಗಿನ ಶ್ವಾಸೋಚ್ಛ್ವಾಸ ಬಂದ್ ಮಾಡಿ, ಎದುರು ಹಲ್ಲುಗಳಲ್ಲಿ ಕೊಳವೆಯ ಬಾಯನ್ನು ಕಚ್ಚಿ, ತುಟಿ ಬಿಗಿದು, ಕೊಳವೆ ಮೂಲಕ ಉಸಿರಾಟ ನಡೆಸುವ ಏಕಧ್ಯಾನದಲ್ಲಿ ಲೋಕಮರೆತಿದ್ದೆವು! ಒಮ್ಮೊಮ್ಮೆ ತಪ್ಪಿ ಮೂಗಿನಲ್ಲಿ ನಿಶ್ವಾಸಿಸುತ್ತಿದ್ದೆವು; ಬುಡುಬುಡು ಗುಳ್ಳೆ ಕಣ್ಗಾಪಿನೊಳಗೆದ್ದು, ಹಬೆ ಕಟ್ಟಿ ದೃಷ್ಟಿ ಮಸುಕಾಗುತ್ತಿತ್ತು. ತೋಬಾ ತೋಬಾ ಹೇಳಿ ತಲೆ ಎತ್ತಿ ಕಣ್ಗಾಪು ಶುದ್ಧ ಮಾಡಿಕೊಂಡರೆ ಮುಗಿಯುತ್ತಿತ್ತು. ಆದರೆ ಹೆಚ್ಚು ತಪ್ಪಿ ಮೂಗಿನಲ್ಲೇ ಶ್ವಾಸ ಎಳೆದುಕೊಂಡಾಗ, ಉಪ್ಪು ನೀರು ಬ್ರಹ್ಮರಂಧ್ರಕ್ಕೇರಿ ರಂಪವಾದ್ದೂ ಇತ್ತು! ಹಾಗೇಂತ ಭಾರೀ ಬ್ರಹ್ಮವಿದ್ಯೆಯೇನೂ ಅಲ್ಲ, ಒಂದೆರಡು ತಪ್ಪಿನಲ್ಲೇ ಎಲ್ಲರೂ ಸುಧಾರಿಸಿಕೊಂಡು, ಆಳ ನೋಡುವುದು ಕಲಿತೆವು.

ಕಣ್ಣೆದುರು - ನೆನಪಿರಲಿ ನಾವೀಗ ನೀರಮೇಲೆ ಮುಖಾಡೆ ಮಲಗಿ ಆಳ ನೋಡುತ್ತಿದ್ದೇವೆ, ಮರಳ ಪಾತ್ರೆ ಕೆಳಕೆಳಗೆ ಇಳಿಯುತ್ತಿದ್ದಂತೆ ವಿವಿಧ ಹವಳಗಳ ರಚನೆಗಳು, ಜಲಸಸ್ಯಗಳ ಬಳುಕುಗಳು, ಅಪರಿಚಿತ ಜೀವಸಂದೋಹದ ಪಲುಕುಗಳು ತೆರೆದುಕೊಳ್ಳುತ್ತಿದ್ದವು. ಹೂದೋಟದಲ್ಲಿ ವಿಹರಿಸುವ ಮೋಹಿನಿಯರಂತೆ ಒಂಟಿಯಾಗಿ, ಹಿಂಡಾಗಿ ಸಂಚರಿಸುವ ಮತ್ಸ್ಯ ವೈವಿಧ್ಯ ಬೆರಗುಗೊಳಿಸಿತು. ಹವಳದ ರಚನೆಗಳು ಕಲ್ಲು, ಕೋಲು, ಹೂವಿನಂತೆಲ್ಲಾ ಇದ್ದರೂ ಅವು ಅಸಂಖ್ಯ ಕೀಟಗಳ ವಸತಿ ಸಂಕೀರ್ಣ. ಫ್ಯಾಶನ್ ರಮಣಿಯಂತೆ ಪಂಚರಂಗೀ ಸೆರಗು ಬೀಸಿಕೊಂಡು ಹೋದ `ಅಪ್ಸರೆ' ಒಂದು ಮೀನು. ನೀರಡಿಯಲ್ಲೂ ಚಾಮರ ಸೇವೆಯೇ? ಅಲ್ಲಲ್ಲ, ಅವು ಜಲಸಸ್ಯರಾಜಿ. ಹೀಗೆ ನೀರಲ್ಲಿ ಮುಳುಗು ಮೋರೆ ಹಾಕಿ, ಮುಳುಗಿದ್ದ ಬೆಟ್ಟದ ಕೊಡಿಯ ಸಮಾನಾಂತರದಲ್ಲಿ ಹೋಗುತ್ತಿದ್ದವನಿಗೆ ಒಮ್ಮೆಗೆ ಪ್ರಪಾತದಂಚಿನಿಂದ ಧುಮುಕಿದ ಅನುಭವ. ವಾಸ್ತವದಲ್ಲಿ ನಾನು ನಾವಿಕನ ನಿಯಂತ್ರಣದಲ್ಲೇ ನೀರ ಮೇಲೆಯೇ ಇದ್ದೆ. ಕ್ರಮವಾಗಿ ಇಳಿದಿಳಿದು ಸಾಗಿದ್ದ ದೃಷ್ಟಿಗೆ ಮಾತ್ರ ಪಾತಾಳದ ಬೀಳು ಒದಗಿತ್ತು. ಬೆಳ್ತಂಗಡಿಯ ಸಮೀಪದ ಬಲ್ಲಾಳರಾಯನದುರ್ಗದ (ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರ) ಅಂಚಿಗೆ ನಡೆದು ಒಮ್ಮೆಗೆ ಬಂಗಾಡಿ ಕೊಳ್ಳ ಇಣುಕಿದ ಅನುಭವ. ಬೆಟ್ಟದಲ್ಲಾದರೋ ಪರಿಸರ ನಮ್ಮನ್ನು ಸಜ್ಜುಗೊಳಿಸಿರುತ್ತದೆ.  ಮತ್ತೂ ಒಮ್ಮೆಗೆ ಬೆರಗು ಹುಟ್ಟಿಸಿದ ದೃಶ್ಯಗಳು (ಹಗಲಿನ ಬೆಳಕಿನಲ್ಲಿ) ಸ್ಫುಟವಾಗುತ್ತಿದ್ದಂತೆ ಪರಿಚಿತ ಮನೆ, ತೋಟಗಳ ಗುರುತು ಹತ್ತಿ, ಭಯ ನೀಗಿ ಸಂಭ್ರಮವನ್ನಷ್ಟೆ ಉಳಿಸುತ್ತದೆ. ಆದರಿಲ್ಲಿ ಸೂರ್ಯರಶ್ಮಿಯೂ ಸಾಗದ ಆಳ, ಮನಸ್ಸನ್ನು ಎಷ್ಟು ಸ್ತಿಮಿತದಲ್ಲಿಟ್ಟುಕೊಂಡರೂ ಎವರೆಸ್ಟ್ ಶಿಖರವನ್ನೇ ನುಂಗಬಲ್ಲ ಆಳವೂ ಇರಬಹುದು ಎನ್ನುವುದನ್ನು ಮರೆಯಲಾಗುವುದಿಲ್ಲ. ಅರೆಪಾರದರ್ಶಕ ಬಳುಕು ಬಳ್ಳಿಯಂತ ಅತಿ-ವಿಷದ ಜಂತುವಿನಿಂದ ತೊಡಗಿ ನೂರಾನೆಗಳಿಗೂ ಜಗ್ಗದ ತಿಮಿಂಗಿಲದವರೆಗಿನ ಸಕಲವೂ `ಮಾಹಿತಿ' ಹೊರೆಯಾಗಿದ್ದದ್ದಕ್ಕೋ ಏನೋ ದಂಡೆಗೆ ಹೆಚ್ಚು ದೂರಾಗದಂತೆ ಬಹಳ ಹೊತ್ತು ಕೈಕಾಲು ಬಡಿದೆವು! ನಾನು, ದೇವಕಿ ನಾವಿಕ ಕೊಟ್ಟ ಸುತ್ತನ್ನು ಅನುಭವಿಸಿದ ಮೇಲೆ ಲಂಗರು ಹಾಕಿದ್ದ ನಮ್ಮ ದೋಣಯ ಆಸುಪಾಸಿನಲ್ಲೇ ನಮ್ಮ ಪ್ರಯತ್ನಕ್ಕಿಂತ ಹೆಚ್ಚಾಗಿ ನೀರ ತುಯ್ತದಲ್ಲೇ ಹೊರಳಾಡಿಕೊಂಡಿದ್ದೆವು. ಸ-ಪ-ಸಾದಲ್ಲೇ ನಮ್ಮ ಸಂಗೀತ ಮುಗಿದಿತ್ತು! ಉಪಾದ್ಯ, ಅಭಯ ಕಡಲತರಂಗದ ಭಾವ, ಮಿಡಿತಗಳ ಹದವರಿತು ತುಸು ಹೆಚ್ಚೇ ಅನುಭವಿಸಿದರು ಎನ್ನುವುದನ್ನು ಅಭಯನ ಮಾತುಗಳಲ್ಲೇ ಕೇಳು.

“ಅದೋ ಅಲ್ಲೊಂದು ಮೀನು. ಅದನ್ನು ಹಿಂಬಾಲಿಸೋಣ ಎಂದರೆ ನೆಲದ ಮೇಲೇ ನಡೆದಷ್ಟೆ ಸುಲಭ ನಮಗೆ ಆಗ. ಮೀನಿನ ಹೆಜ್ಜೆ ಹಿಂಬಾಲಿಸುತ್ತಾ ಹೋಗುತ್ತಿರಬೇಕಾದರೆ, ಅದು ಇನ್ನೊಂದು ಮೀನಿನ ಬಳಿ ನಿಂತು ಅದೇನೋ ಮಾತನಾಡುತ್ತಿತ್ತು. ದಡದಲ್ಲಿಯ ಅಕ್ವೇರಿಯಂನಲ್ಲಿದ್ದ ಸೋದರ ಸಂಬಂಧಿಯ ಕುಶಲೋಪರಿ ತಿಳಿಸುತ್ತಿತ್ತೇ ಅದು. ಸರಿ ಈ ಮೀನಿಗಿಂತ ಆಚೆಯದೇ ಚಂದ ಎಂದು ಅದನ್ನು ಹಿಂಬಾಲಿಸತೊಡಗಿದೆ. ಅದು ಚಿತ್ರ ವಿಚಿತ್ರ ಕೊಳವೆಯಾಕಾರದ ಕೋರಲ್ ಸರಣಿಯನ್ನು ಶೋಧಿಸುತ್ತಾ ಅದರಲ್ಲೇನೋ ತಿನ್ನುತ್ತಿತ್ತು. ಏನು ತಿನ್ನುತ್ತಿದೆ ಎಂದು ನಾನು ಯೋಚಿಸುತ್ತಿರಬೇಕಾದರೆ, ಅಲ್ಲಿ ಒಂದು ಹಾವೂ ಅಲ್ಲದ ಮೀನೂ ಅಲ್ಲದ ಉದ್ದದ ಜಲಚರ ಒಂದು ಕೋರಲ್ ಕೊಳವೆಯೊಳಗಿನಿಂದ ಚಿಮ್ಮಿ, ನನ್ನ ಮೀನನ್ನು ಗಾಬರಿಬೀಳಿಸಿ ಇನ್ನೊಂದು ದಿಕ್ಕಿಗೆ ಹೊರಟಿತು. ಇದನ್ನು ಹಿಂಬಾಲಿಸಲೇ ಅದನ್ನೇ ಎಂಬ ಪ್ರಶ್ನೆ ಒಂದು ಕ್ಷಣ ಬಂದರೂ, ಈ ಹೊಸ ಮೀನಿನ ಆಕರ್ಷಣೆ ಹೆಚ್ಚಿ ಅದನ್ನೇ ಹಿಂಬಾಲಿಸಿದೆ. ಅದು ಈಜುತ್ತಾ ಹೋಗುತ್ತಿರಬೇಕಾದರೆ, ಕೋರಲ್ ಸರಣಿ ಮುಕ್ತಾಯವಾಯಿತು! ಸಾಗರ ತಳ ಒಮ್ಮೆಗೆ ಕುಸಿದಂತೆ ಗವ್ವನೆ ಕತ್ತಲಮೊತ್ತವಷ್ಟೇ ಉಳಿಯಿತು. ಅರೆ! ಇದೇನಾಯಿತು ಎಂದು ಯೋಚಿಸಬೇಕಾದರೆ, ನಾನು ನೆಲದ ಮೇಲಿಲ್ಲ ಎನ್ನುವ ಪ್ರಜ್ಞೆ ಮರುಕಳಿಸಿ ಕೊಂಚ ಅಧೀರನಾದೆ. ತಲೆ ಎತ್ತಿ ಸಮುದ್ರದ ಮೇಲ್ಮೈ ನೋಡಲು ಆಗಲೇ ದಡದಿಂದ ತುಂಬಾ ದೂರ ಬಂದುಬಿಟ್ಟಿದ್ದೆ. ಅನೇಕ ಹಾಲಿವುಡ್ ಚಿತ್ರಗಳಲ್ಲಿ ನೋಡಿದ್ದ ಶಾರ್ಕುಗಳು, ತಿಮಿಂಗಿಲಗಳು ನೆನಪಾಗಿ ಗಾಬರಿಯಾದೆ. ದಡದಿಂದ ಇಷ್ಟು ದೂರ ಬಂದು ಬಿಟ್ಟು, ಈಗ ಮರಳಿ ಹೋಗುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂದು ಅನುಮಾನ ಸುಳಿದರೂ ತೇಲಂಗಿ ಧೈರ್ಯಕೊಟ್ಟಿತು. ಸರಿ ಇನ್ನು ಹಿಂದೆ ಹೋಗೋಣ ಎಂದು ತಲೆ ನೀರಿನೊಳಗೆ ಹಾಕಿ ಈಜಲಾರಂಭಿಸಿದರೆ, ಮತ್ತೆ ಕೋರಲ್ ಸರಣಿಯ ದರ್ಶನ. ಮತ್ತಷ್ಟು ಹೊಸ ಹೊಸಾ ಮೀನುಗಳ ಹಿಡಿವಾಟ, ಕತ್ತಲಕೂಪದ ದರ್ಶನ ಮತ್ತೆ ದಡದ ಯೋಚನೆ ಹೀಗೆ ಸಾಗಿತ್ತು ನಮ್ಮ ಅನುಭವ.”

ನಿರೇನ್ ಬಳಗದ ಕಥೆ ಉಲ್ಟಾ. ನಮಗೇನೋ ಸಾಕು ಬೇಕಾಗುವಷ್ಟು ಸಮಯ ಕೊಟ್ಟಿದ್ದರು. ಮುಳುಗುಗಾರರಿಗೆ ಪ್ರತಿ ಮುಳುಗೂ ಸಾವಿರಕ್ಕೂ ಮಿಕ್ಕ ರೂಪಾಯಿ ಮೌಲ್ಯದ್ದು. ಅಂದರೆ ಒಮ್ಮೆ ಮುಳುಗಿದವ ಅವನ ಅನುಭವ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಒಂದು ಆಳದ ಮಿತಿ, ಸಮಯದ ಮಿತಿಯನ್ನು ಪ್ರಾಕೃತಿಕವಾಗಿಯೇ ಒಪ್ಪಿಕೊಳ್ಳಬೇಕಾಗುತ್ತಿತ್ತು. ಜಲ ಮಾಧ್ಯಮದ ನಾವೀನ್ಯ, ಜಲಚರಗಳ ಭಯ, ಆಳ ಆಳಕ್ಕೆ ಇಳಿದಷ್ಟು ಹೆಚ್ಚುವ ನೀರ ಒತ್ತಡ ನಮ್ಮ ನೆಲದ ಮೇಲಿನ ವೀರಾವೇಶಗಳನ್ನು ಇಳಿಸುತ್ತಿತ್ತು. ನಿರೇನ್ಗೆ ಅದು ಮೊದಲ ಅನುಭವವಾದ್ದರಿಂದ ಹದಿನೈದು ಮೀಟರಿಗಿಂತಲೂ ಹೆಚ್ಚು ಆಳದಲ್ಲಿ, ಮೂವತ್ತು ನಲ್ವತ್ತು ಮಿನಿಟಿಗಿಂತಲೂ ಹೆಚ್ಚು ಅವಧಿ ವಿಹರಿಸುವುದು ಅಸಾಧ್ಯವಾಯ್ತು. ನಮ್ಮದು ತೇಲಂಗಿಯಾದರೆ ಅವರದು ಮುಳುಗಂಗಿ; ಕೆಳ ಅಂಚಿನಲ್ಲಿ ಸೀಸದ ಗುಂಡುಗಳಿದ್ದ, ಮೈ ಬಿಗಿದು ಕೂರುವ ಅಂಗಿ. ಮುಳುಗುಗಾರನ ಉಸಿರಾಟ, ಅವಶ್ಯಬಿದ್ದಾಗ ತೇಲಿಸಲೂ ಸಹಕರಿಸುವ ಪ್ರಾಣವಾಯುವಿನ ಅಂಡೆ ಮತ್ತು ತತ್ಸಂಬಂಧಿ ಸಲಕರಣೆಗಳು ಭರ್ಜರಿಯಾಗಿಯೇ ಬೆನ್ನೇರುತ್ತಿದ್ದವು. ನಮಗೂ ಅವರಿಗೂ ಒಂದೇ ಸಮಾನಾಂಶ - ಒಳ್ಳೆಯ ನೂಕುಬಲಕೊಡುವ ಜಾಲಪಾದ. ಒಟ್ಟಾರೆ ಮುಳುಗುಶೋಧಕ್ಕೆ ತಾಂತ್ರಿಕತೆ, ತರಬೇತಿ ತುಸು ದೀರ್ಘ. ಹಾಗಾಗಿ ಅನುಭವರಹಿತ ಸ್ವಾತಂತ್ರ್ಯ ಇಲ್ಲಿ ಅಪಾಯಕಾರಿಯೂ ಹೌದು. ನಿರೇನ್ ಒಳ್ಳೆ ಈಜುಗಾರ. ಆದರೆ ತಮಾಶೆ ಎಂದರೆ ನಮ್ಮೆರಡೂ ಜಲಕ್ರೀಡೆಗಳಿಗೆ ಈಜುಗಾರಿಕೆ ಕನಿಷ್ಠ ಅವಶ್ಯಕತೆ ಅಲ್ಲ. ನಿರೇನ್ ಸುಮಾರು ಸೊಂಟಮಟ್ಟದ ನೀರಿನಲ್ಲಿ ನಿಂತೇ ಅರ್ಧ ಒಂದು ಗಂಟೆಯ ತರಬೇತಿ ಪಡೆದರು. ಮುಂದೆ ಸುಮಾರು ನಲ್ವತ್ತು ಮಿನಿಟಿನ ಒಂದು ಮುಳುಗು ಹಾಕಿದರೂ ಹೊಸ ಮಾಧ್ಯಮಕ್ಕೆ ಪಳಗುವುದರಲ್ಲೇ ಸಮಯ ಕಳೆದದ್ದು ಹೆಚ್ಚಂತೆ. ಜೊತೆಗೆ ಅಲ್ಲಿ ತೊಡಗಿದ ಸಣ್ಣ ಕಿವಿನೋವು ಮುಂದಿನೆರಡು ದಿನ ಸ್ವಲ್ಪ ಕಾಡಿದ್ದೂ ಪರಿಚಯದ ಸುತ್ತಿನಲ್ಲಿ ಅಸ್ವಾಭಾವಿಕವೂ ಅಲ್ಲವಂತೆ. ನಿರೇನ್ ತನ್ನ ಮುಂದಿನ ಜಲ-ಸಾಹಸಗಳಿಗೆ ಇದು ಒಳ್ಳೆಯ ಪ್ರವೇಶಿಕೆ ಎಂಬ ತೃಪ್ತಿ ಉಳಿಸಿಕೊಂಡೇ ಅಂದು ಹೆಚ್ಚಿನ ಮುಳುಗಿಗೆ ಮುಂದಾಗಲಿಲ್ಲ.

20042007112ಅಂತಿಮವಾಗಿ ಎಲ್ಲ ಮರಳ ದಂಡೆಯಲ್ಲಿ ಕುಳಿತು ಡೈವ್ ಇಂಡಿಯಾದವರ ಕೊಡುಗೆಯಾಗಿ ದೋಣಿಯ ಬಿಸಿಪೆಟ್ಟಿಗೆಯಲ್ಲಿದ್ದ ಬ್ರೆಡ್ ಸ್ಯಾಂಡ್ವಿಚ್, ಸಮೋಸಾ, ಬಿಸಿ ಚಾ ಸೇವಿಸಿ "ದೋಣಿ ಸಾಗಲಿ, ನಮ್ಮ ಗೂಡನು ಸೇರಲಿ" ಪಲ್ಲವಿ ಹಾಡಿದೆವು. ದಾರಿಯಲ್ಲಿ ಒಂದು ಕಲ್ಲ ಮುಂಚಾಚಿನ ದಂಡೆಯ ಬಳಿ ನಮ್ಮ ಬಳಗದ ಇನ್ನೊಂದು ದೋಣಿ ಲಂಗರು ಹಾಕಿತ್ತು. ಬಹುಶಃ ಅದರ ನಾವಿಕರೂ ಸೇರಿದಂತೆ ಹೆಚ್ಚಿನವರು ಮುಳುಗುಲೋಕದಲ್ಲೆಲ್ಲೋ ವಿಹರಿಸುತ್ತಿದ್ದಿರಬೇಕು. ತುಂಡು ಬಟ್ಟೆಯ (ವಿದೇಶೀ) ತರುಣಿಯೊಬ್ಬಳು ದೋಣಿಯ ಮೂಕಿಯ ಮೇಲೆ ಲೋಕದ ಪರಿವೆಯಿಲ್ಲದಂತೆ ಸೂರ್ಯ ಸ್ನಾನಪಡೆಯುವುದರಲ್ಲಿ ತೃಪ್ತಳಾಗಿದ್ದಳು. ಪ್ರವಾಸದ ಪ್ರತಿ ಹಂತದಲ್ಲಿ `ನಮ್ಮ ಹಣದ' ಮೌಲ್ಯ ದಕ್ಕಿತೇ ಇಲ್ಲವೇ ಎಂದು ತಹತಹಿಸುವ ನಮ್ಮ ಮನೋಸ್ಥಿತಿಗೆ ಆಕೆಯ ಧ್ಯಾನ ಈಗಲೂ ತಮಾಷೆಯಾಗಿಯೇ ಕಾಣುತ್ತದೆ. (ಮುಳುಗು-ಶೋಧಕ್ಕೆ ಹಣಕೊಟ್ಟು ಬರಿದೇ ಸೂರ್ಯಸ್ನಾನ ಮಾಡುವುದೇ?) ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಚೀಲ, ಬಾಲಕ್ಕೆ ಹೋರಾಡಿ, ಉಪಸ್ಥಿತಿಯ ಪ್ರಮಾಣಪತ್ರವನ್ನಂತೂ ಬೆಂಬತ್ತಿ ಸಂಗ್ರಹಿಸಿ ತಂದವರನ್ನು ಅಲ್ಲಿನ ಸಮ್ಮೇಳನಾಧ್ಯಕ್ಷರು ಯಾರು ಎಂದಾಗ ಉತ್ತರಿಸಲು ಸೋತ ಹಾಗೇ ಅಲ್ಲವೇ ಈ ಸೂರ್ಯಸ್ನಾತೆಯ ಸಾಧನೆ?

ನಮ್ಮ ಪ್ರವಾಸದ ಕಲ್ಪನೆಯಲ್ಲಿ ಉಣ್ಣುವ, ವಿಹರಿಸುವ, ವಿಶ್ರಾಂತಿಸುವ ಆವಶ್ಯಕತೆಗಳೆಲ್ಲ ಕನಿಷ್ಠ ಪ್ರಾಮುಖ್ಯತೆಯವು. ಹಾಗಾಗಿಯೇ ಮುಂದೊಂದು ದಿನ ಅಭಯನ ಗೋವಾ ಚಿತ್ರೋತ್ಸವಕ್ಕೆ ನಾನು ಹೋಗಿದ್ದಾಗ ನಮ್ಮ ಮಟ್ಟಿಗೆ ಉಚಿತವಾಗಿಯೇ ಪಂಚತಾರಾ ಸೌಕರ್ಯ ಒದಗಿದರೂ ಬಳಸುವಲ್ಲಿ ನಾನು ವಿಪರೀತ ಸಂಕೋಚವನ್ನು ಅನುಭವಿಸಿದೆ. ಆದರೆ ಅದನ್ನು ಅಭಯ ತಲೆಮಾರಿನಂತರ ಎಂದು ತಪ್ಪು ತಿಳಿದು ಎಲ್ಲೋ ಲೇಖನದಲ್ಲಿ ಬೇರೆ ತೋಡಿಕೊಂಡ! ಅಲ್ಲ, ಅದು ನಮ್ಮ ಜೀವನಶೈಲಿಯ ಅಭಿವ್ಯಕ್ತಿ ಎಂದು ಅವನಿಗೇನೋ ನಾನು ವಿವರಿಸಿದೆ. ಆದರೆ ಅಂಥ ವಿವರಣೆ ಪಥ್ಯವಾಗದವರು ದಿನೇ ದಿನೇ ಹೆಚ್ಚುತ್ತಿರುವುದು ನಿಜಕ್ಕೂ ಪರಿಸರ ಸಮಸ್ಯೆಯದ್ದೇ ಇನ್ನೊಂದು ಮುಖವೆನ್ನಬೇಕು. ಇನ್ನೆಲ್ಲೂ ಸಿಗದ ಪುಸ್ತಕ ನನ್ನಂಗಡಿಯಲ್ಲಿ ಸಿಕ್ಕರೂ ನಾನು ಪ್ಲ್ಯಾಸ್ಟಿಕ್ ಕವರಿನಲ್ಲಿ ಕೊಡುತ್ತಿಲ್ಲವೆಂದು ಕೋಪಿಸಿ, ಪುಸ್ತಕ ಬಿಟ್ಟುಹೋದದ್ದಿದೆ. ಅದಕ್ಕೂ ಮುನ್ನ ತಾನು ಬೈಕಿನಲ್ಲಿ ಹೇಗೆ ಒಯ್ಯಲೀ ಎಂದು ಸಮಸ್ಯೆ ಹೇಳಿಕೊಳ್ಳುವುದು, ಕಸ್ಟಮರ್ ಸರ್ವೀಸ್‌ನ ಬಗ್ಗೆ ಪಾಠ ಮಾಡುವುದು, ಬಯೋಡಿಗ್ರೇಡಬಲ್ ಪ್ಲ್ಯಾಸ್ಟಿಕ್ ಕವರ್, ಬಯೋ ಫ್ರೆಂಡ್ಲೀ ಪೇಪರ್ ಬ್ಯಾಗ್ಸ್, ರೀಯೂಸಬಲ್ (ಕ್ರಯಕ್ಕೇ ಆದರೂ ಸರಿ) ಕಾಟನ್ ಪೌಚಸ್‌ಗಳೆಲ್ಲವನ್ನು, ಎಲ್ಲವನ್ನೂ ನನಗೆ ಒಪ್ಪಿಸಲು ಒದ್ದಾಡುವ ಬುದ್ಧಿವಂತರು ಸ್ವಂತದ ಚೀಲ ತರುವುದಿರಲಿ “ಒಂದು ಪುಸ್ತಕ ಅಲ್ವಾ” ಎಂದು ಸೀದಾ ಕೈಯಲ್ಲಿ ಹಿಡಿದು ನಡೆಯುವುದನ್ನಾದರೂ ಯಾಕೆ ಅಭ್ಯಾಸ ಮಾಡಬಾರದು? (ಅಯ್ಯಾ ರಾಜನೇ ಈ ಪ್ರಶ್ನೆಗೆ ಉತ್ತರ ತಿಳಿದೂ ಹೇಳದಿದ್ದರೆ ಸಾಂಪ್ರದಾಯಿಕ ಶ್ರದ್ಧೆಯನ್ನು ಮತೀಯ ಮಠಗಳ ಮೇಲಾಟದಲ್ಲಿ ಕಳೆದುಕೊಂಡವನ ದುರ್ಗತಿ ನಿನಗೆ ತಪ್ಪಿದ್ದಲ್ಲ ಎನ್ನುವುದರೊಡನೆ...)

1 comment:

 1. ಛೇ, ನಾವೂ ಬರಬಹುದಿತ್ತು. ಬಾ ಎಂದರೆ ಬರದೇ ಮತ್ತೆ ಹಳಹಳಿಸಿದರೇನು ಪ್ರಯೋಜನ? ನೀರಿಗೆ ಮೊದಲು ಹಾರಬೇಕು - ಮತ್ತೆ ಈಜು. ನಿನ್ನ ಬಾಲ್ಯದಲ್ಲಿ ಈಜು ಕಲಿಯಲು ಹೋದಾಗ ಆದ ಅಧ್ವಾನವನ್ನು ಸೇರಿಸಿದ್ದರೆ ಒಗ್ಗರಣೆಗೆ ರುಚಿ ಬರುತ್ತಿತ್ತು.
  ಈಜಿನ ಮೋಜಿನ ಬರಹ ಸೆಳೆಯುತ್ತದೆ - ಈಜು ಬಲ್ಲನನ್ನು ನೀರು ಮತ್ತೆ ಮತ್ತೆ ಕರೆವಂತೆ.
  ಎಷ್ಟು ಖುಷಿ ಪಟ್ಟಿರಬಹುದು ನೀವೆಲ್ಲ!
  ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ. ಯಾವಾಗ ಬರುತ್ತದೆ?
  ರಾಧಾಕೃಷ್ಣ

  ReplyDelete