02 March 2009

ಸಲಾಮು ತೆಕ್ಕೋ ಕೆರೆಮನೆ ಜೀಯಾ

ನನ್ನ ಬಾಲ್ಯದ ಮಡಿಕೇರಿ ಮತ್ತೆ ಬಳ್ಳಾರಿ ಮುಂದುವರಿದು ಬೆಂಗಳೂರು (೧೯೬೯ರ ಆಸುಪಾಸಿನಲ್ಲಿ) ಯಕ್ಷಗಾನ ಸಮೃದ್ಧ ಪ್ರದೇಶಗಳಲ್ಲ. ಆದರೆ ರಜಾದಿನಗಳಲ್ಲಿ ಅಜ್ಜನೂರು - ಪುತ್ತೂರಿಗೆ ಬಂದರೆ ಒಂದೆರಡಾದ್ರೂ ಆಟ ಗ್ಯಾರಂಟಿ.  ಮಹಾಲಿಂಗೇಶ್ವರ ದೇವರ ಜಾತ್ರೆಯುದ್ದಕ್ಕೂ ಹಗಲು ನಿದ್ದೆ, ರಾತ್ರಿ ಯಕ್ಷಗಾನ ನನಗಂತೂ ಖಾಯಂ. ಅಜ್ಜ ಅಜ್ಜಿಯರಿಗೋ ಮಾವ, ಚಿಕ್ಕಮ್ಮಾದಿಗಳಿಗೋ ಯಕ್ಷಗಾನ ವಿಶೇಷ ಹಚ್ಚಿಕೊಳ್ಳುವಂತದ್ದೇನೂ ಆಗಿರಲಿಲ್ಲ; ಮಡಿ, ವಿರೋಧ ಏನೂ ಇರಲಿಲ್ಲ. ಹಾಗಾಗಿ ನನ್ನ ಐವತ್ತು ಪೈಸೆಯ ಬೇಡಿಕೆಗಳು (ಚಾಪೆ ಕ್ಲಾಸಿನ ಟಿಕೆಟ್ಟಿಗೆ) ಎಂದೂ ತಿರಸ್ಕೃತಗೊಂಡದ್ದಿರಲಿಲ್ಲ. ನನ್ನ ಚಿಕ್ಕ-ಚಿಕ್ಕಮ್ಮ ಅನುರಾಧೆ, ತಮ್ಮ ಆನಂದ, ಮುಂದುವರಿದ ದಿನಗಳಲ್ಲಿ ಮಾವಂದಿರ ಮಕ್ಕಳು ನನಗೆ ಜೊತೆಗೊಡುವುದಿತ್ತು. ಆದರೆ ಮಕ್ಕಳ ಯಕ್ಷಗಾನ ಹುಚ್ಚಿಗೆ ಸರ್ವಮಾನ್ಯತೆಯೂ ಮಹಾಬಲವೂ ಬರುತ್ತಿದ್ದದ್ದು ಇನ್ನೊಬ್ಬ ಚಿಕ್ಕಮ್ಮಳ (ಲಲಿತ) ಗಂಡ ಚಿಕ್ಕಪ್ಪ, ಬಂಗಾರಡ್ಕ ಮಹಾಬಲ ಭಟ್ಟರಿಂದ.

ಪುತ್ತೂರಿನಿಂದ ದೂರದೂರುಗಳಿಗೂ ನಮ್ಮ ಯಕ್ಷಾಸಕ್ತಿಯನ್ನು (ಅಂದು ನಮ್ಮ ಸಂಬಂಧಿಗಳಲ್ಲಿ ಯಾರಲ್ಲೂ ಇರದ) ಚಿಕ್ಕಪ್ಪ ಅವರ ಕಾರಿನಲ್ಲಿ ಒಯ್ದು ಪೂರೈಸುತ್ತಿದ್ದರು. ಮತ್ತೆ `ಕೊಳಕಟೆ’ ಚಾಪೆಯಿಂದ ಮುಂಚೂಣಿಯ ಈಸಿಚೇರಿಗೆ ಭಡ್ತಿ, ಅಗತ್ಯ ಬಂದಲ್ಲಿ class ತಿನಿಸುಗಳ ಅಯಾಚಿತ ಲಾಭ ಇವರಿಂದಾಗುತ್ತಿತ್ತು. (ಆ ದಿನಗಳಲ್ಲಿ ಅಪರೂಪಕ್ಕೆ ಐದು ಪೈಸೆಯ ದೂದ್‌ಕ್ಯಾಂಡಿಯೋ ಹುರಿಗಡಲೆಯಿಂದಲೋ ಮೇಲೆ ನೋಡಲು ಗೊತ್ತಿರದ ನಮಗೆ ಝಗಮಗಿಸುವ ಸ್ವೀಟ್ ಸ್ಟಾಲಿನಿಂದ ಸೇರು ತೂಕದ ಕಡ್ಲೆಮಿಠಾಯಿ, ಕಲ್ಲಡ್ಕದ ರಿಂಜಿಂ ಕಾಫಿ ಎಂಬ ಅದ್ಭುತ,  ಮಂಗಳೂರಿನ ಉಡ್‌ಲ್ಯಾಂಡ್ಸ್ ಎಂಬ `ಫೈವ್ ಸ್ಟಾರ್’ ಇತ್ಯಾದಿ ಇವರು ಪರಿಚಯಿಸಿದ್ದು ಮರೆಯಲುಂಟೇ!) ಜತೆಯಲ್ಲಿ ಯಕ್ಷರಸಾಸ್ವಾದನೆ, ಪ್ರಸಂಗ, ಕಲಾವಿದರ ಮಾಹಿತಿಗಳ ಪೂರಣೆಯಲ್ಲೂ ಚಿಕ್ಕಪ್ಪ ತನ್ನ ಮಿತಭಾಷೆಯಲ್ಲೂ ಖಚಿತ ಸಂಸ್ಕಾರ ಕೊಡುತ್ತಿದ್ದರು. ಚಿಕ್ಕಪ್ಪ ಉಗ್ರ ತೆಂಕುತಿಟ್ಟು ಅದರಲ್ಲೂ ಆಟದ (ತಾಳಮದ್ದಳೆ ಅಲ್ಲ) ಪ್ರತಿಪಾದಕ. ರಂಗದ ಮೇಲಿನದ್ದು ಸತ್ಯವೋ myth-ಯೆಯೋ ಎಂದು ನಿಷ್ಕರಿಸಲೇ ಗೊತ್ತಿರದ, ತಿಟ್ಟುಗಳ ವೈವಿಧ್ಯ ಮತ್ತು ಶಿವರಾಮ ಕಾರಂತ ಪ್ರಯೋಗಗಳ ಹರಹಿನ ಪರಿಚಯವೇ ಇರದ ಪ್ರಾಯದ ನನಗೆ ಚಿಕ್ಕಪ್ಪ ತೆಂಕು ತಿಟ್ಟಿನ ಸರ್ವ ಶ್ರೇಷ್ಠತೆಯನ್ನು ಹೇಳಿಯೇ ಹೇಳುತ್ತಿದ್ದರು. ಅಳಿಕೆ ರಾಮಯ ರೈ, ದಾಮೋದರ ಮಂಡೆಚ್ಚ, ಮಿಜಾರು ಅಣ್ಣಪ್ಪ, ಪುತ್ತೂರು ನಾರಾಯಣ ಹೆಗ್ಡೆ ಮುಂತಾದವರ ಬಗ್ಗೆ ಆ ದಿನಗಳಲ್ಲಿ ನಾನು ಏನಾದರೂ ಮಾತಾಡಿದ್ದು, ಬರೆದದ್ದೂ ಇದ್ದರೆ ಶೇಕಡಾ ನೂರು ಬಂಗಾರಡ್ಕ ಚಿಕ್ಕಪ್ಪನ ಕೃಪೆ!

`ನಭೂತೋ ನಭವಿಷ್ಯತ್’ ಎಂಬ ಉಕ್ತಿಗೆ ಪೂರ್ಣ ಅರ್ಥಗೌರವ ದಕ್ಕುವಂತೆ ಉಡುಪಿಯಲ್ಲಿ `ಕಾರಂತ ಅರುವತ್ತು’ (೧೯೬೯/೭೦) ನಡೆಯಿತು. ಆ ಅದ್ಭುತವನ್ನು ಸಂಘಟಿಸಿದ ರೂವಾರಿ ಕುಶಿ ಹರಿದಾಸ ಭಟ್ಟ. ಕುಶಿಯವರೊಡನಿದ್ದ ಆತ್ಮೀಯತೆ ಬಲದಲ್ಲಿ (ವಿದ್ಯಾರ್ಥಿ ದೆಸೆಯಿಂದಲೂ ನನ್ನ ತಂದೆಯ ಆತ್ಮೀಯ ಮಿತ್ರ) ಅಷ್ಟೂ ದಿನ ಎಂ.ಜಿ.ಎಂ ಕಾಲೇಜು ಸ್ವಯಂ ಸೇವಕರ ತಂಡದೊಳಗೆ ನನಗೆ ಒಂದು ವಿಶೇಷ ಅವಕಾಶ ಪ್ರಾಪ್ತಿಸಿತ್ತು. (ಇನ್ನೂ ಪ್ರಥಮ ಬೀಯೇ ವಿದ್ಯಾರ್ಥಿಯಾಗಿದ್ದ ನನಗೆ ಆ ಐದೂ ದಿನಗಳ ರಾತ್ರಿವಾಸದ ರೂಂಮೇಟ್ ಅಲ್ಲೇ ಅಂತಿಮ ಬೀಯೇ ವಿದ್ಯಾರ್ಥಿ ಎಂ.ಎಲ್ ಸಾಮಗರು.) ಅಲ್ಲಿ ಸಮ್ಮಾನ ಒಂದು ದಿನ. ನಿಜ ಸಂಭ್ರಮವಿದ್ದದ್ದು ಅದಕ್ಕೆ ಪೂರ್ವಭಾವಿಯಾಗಿ ನಡೆದ ಯಕ್ಷಗಾನ ಗೋಷ್ಠಿಯಲ್ಲಿ. ಕಾರಂತರದೇ ನಿರ್ದೇಶನದಲ್ಲಿ ನಾಲ್ಕೈದು ದಿನ ನಡೆದ ಆ ಗೋಷ್ಠಿ ನನ್ನ ಯಕ್ಷವೀಕ್ಷಣಾ ದೃಷ್ಟಿಗೆ ಉಪನಯನ ಸಂಸ್ಕಾರ ಕೊಟ್ಟಿತು. ಅಂದು ನನಗೆ ದಕ್ಕಿದ್ದು ಕಾರಂತರ ಪ್ರಯೋಗಗಳು ಮಾತ್ರ. ಆದರೆ ವ್ಯಾವಸಾಯಿಕ ಯಕ್ಷ-ಪ್ರೇಕ್ಷಣೆಯಲ್ಲಿ ನಾನು ಪೂರ್ಣ ತೊಡಗಿದ್ದಿದ್ದರೆ ಅದು ಆ ಕಾಲಕ್ಕೆ ದ.ಕ ಜಿಲ್ಲೆಗೆ ವ್ಯವಸ್ಥಿತವಾಗಿ ಬರತೊಡಗಿದ್ದ ಇಡಗುಂಜಿ ಮೇಳದಿಂದ; ಕೆರೆಮನೆ ಶಂಭು ಹೆಗಡೆಯವರ ಆಟಗಳಿಂದ ಎಂದು ಘಂಟಾಘೋಷವಾಗಿ ಹೇಳಬಲ್ಲೆ.

ನನ್ನ ನೆನಪಿನ ಭಿತ್ತಿಗೆ ಇತಿಹಾಸ ಪ್ರಜ್ಞೆ, ಕಾಲಾನುಕ್ರಮಣಿಕೆ ಇಲ್ಲ. ನಾನು ಪುಸ್ತಕ ವ್ಯಾಪಾರಿಯಾಗಿ ಮಂಗಳೂರಿನಲ್ಲಿ ನೆಲೆಸಿದ ಮೇಲೆ (೧೯೭೫ ರಿಂದ ಮುಂದೆ) ವಾರದ ದಿನಗಳಲ್ಲೂ ಆ ಊರು ಈ ಊರು ಎಂದು ಹುಡುಕಿ ಹೋಗಿ ನೋಡಿದ್ದಿದೆ. ಅಂಗಡಿಯ ಅನಿವಾರ್ಯ ಹನ್ನೆರಡುಗಂಟೆಯ ಕಾರ್ಯಭಾರದಿಂದ ಇಲ್ಲೂ ಅಲ್ಲೂ ತೂಕಡಿಸಿದ್ದಿರಬಹುದು. ಆದರೆ ಗ್ರಹಿಸಿದ್ದಷ್ಟರಲ್ಲಿ ಗುಣಾತ್ಮಕತೆಯ ಬಲು ದೊಡ್ಡಹೊರೆ ಕೊಟ್ಟವರು ಈ ಗುಣವಂತೆಯ ಬಳಗ.  ಹಾಗಾಗಿ ನಾನು ನೋಡಿದ ಅಸಂಖ್ಯ ಇಡಗುಂಜಿ ಮೇಳದ ಆಟಗಳ ಕೊನೆಯಲ್ಲಿ ಸಂತೋಷವೊಂದು ಅಪರಿಮಿತವಾಗಿರುತ್ತಿತ್ತು. ವಿವರಗಳನ್ನು ಹೇಳಹೊರಟರೆ ಎಲ್ಲ ಗೋಜಲು.  ಸ್ಮರಣೀಯವಾಗಿ ಉಳಿದ ಒಂದಿಷ್ಟನ್ನು ಮಾತ್ರ ಶಂಭು ಹೆಗಡೆಯವರ ಪ್ರೀತ್ಯರ್ಥ ಇಲ್ಲಿ ದಾಖಲಿಸುತ್ತೇನೆ.

೯-೯-೧೯೭೮ರ ಉದಯವಾಣಿಯಲ್ಲಿ ಪ್ರಕಟವಾದ ನನ್ನ ಪತ್ರವೊಂದರ ಆಯ್ದ ತುಣುಕು: ಮಳೆಗಾಲದ ಆಟ ಎಂದರೆ ಘಟಾನುಘಟಿಗಳ ಸಂಯೋಜನೆಯಿಂದಾಗುವ ಗದ್ದಲ. ಇದಕ್ಕೊಂದು ಅಪವಾದ ವರದೇಂದ್ರ ಕಲಾಮಂದಿರದ ಪ್ರದರ್ಶನ - ಮಾಗಧ, ಕಾರ್ತವೀರ್ಯ, ಕರ್ಣ... ಕಾರ್ತವೀರ್ಯ (ಶಂಭುಹೆಗಡೆ) ಹೊಂದದ ಸಹಕಲಾವಿದರೊಡನೆ, ಒಗ್ಗದ ರಂಗಮಂಚದಮೇಲೆ ಕೂಡಿತಾದಷ್ಟು ಒಳ್ಳೆಯದನ್ನು ತೋರಿಸುವ ಶ್ರಮವಹಿಸುವಾಗ ಇವರು ತಮ್ಮ ಹೆಸರಿನಲ್ಲಿ ಉಸಿರಾಡುವುದನ್ನು ಕಾಣುತ್ತೇವೆ. ಭಾಗವತ ಬಾಯಿತೀಟೆ ತೀರಿಸಲು ಉಪಮಾನಸಹಿತ ಪದಕೊಡುವುದಲ್ಲ. ತಾಕತ್ತಿದ್ದ ಕಲಾವಿದ ಭಾಗವತನನ್ನು ದುಡಿಸಿಕೊಳ್ಳುತ್ತಾನೆ ಎಂಬೆರಡು ಮಾತಿಗೆ ಸಾಕ್ಷಿ ಕಾರ್ತವೀರ್ಯ.

೧೯-೪-೮೦ ರ ಉದಯವಾಣಿಯಲ್ಲಿನ ನನ್ನ ಪತ್ರವೊಂದರ ಪರಿಷ್ಕೃತ ರೂಪ: ಪುರಭವನದಲ್ಲಿ ಬ್ರಹ್ಮಕಪಾಲ ನಡೆದಿತ್ತು. ಶಿವಪಾತ್ರಧಾರಿ ಕೆಳಗೆ ಮತ್ತು ಮಹಡಿಯಲ್ಲಿ ಒಂದು ಸಾಲೂ ಬಿಡದಂತೆ ಸಭೆಯಲ್ಲಿ ಸುತ್ತಿ, ನಿದ್ರಿಸಿದವರನ್ನು ಬಡಿದೆಬ್ಬಿಸುವಂತೆ ಒರಲಿ ಭಿಕ್ಷೆ ಬೇಡಿದ. ಪಾತ್ರಿಗೆ ಒಳ್ಳೇ ಸಂಪಾದನೆ. (ಅಧಿಕಪ್ರಸಂಗ: ಈ ಪ್ರಸಂಗ ಆಡುವಲ್ಲೆಲ್ಲಾ ಕಲಾವಿದರೊಳಗೆ ಶಿವನ ಪಾತ್ರಕ್ಕೆ ಭಾರೀ ಸ್ಪರ್ಧೆಯಂತೆ. ಪಾತ್ರ ನಿಷ್ಕರ್ಷೆಯ ಮತ್ತು ಭಿಕ್ಷಾಟನೆಯ ಉದ್ದಕ್ಕೆ ರಂಗಕ್ರಿಯೆ ಸುಧಾರಿಸುವ ಭಾಗವತನಿಗೆ ಭಿಕ್ಷೆಯ ಆದಾಯದಲ್ಲಿ ಆತ ಪಾಲು ಮಾತ್ರ ಕೊಡಲೇಬೇಕಂತೆ) ಇನ್ನೊಮ್ಮೆ ಮೇಳ ಒಂದರಲ್ಲಿ ಇದೇ ಪ್ರಸಂಗ ನಡೆದಿತ್ತು. ಪ್ರಖ್ಯಾತ ವೇಷಧಾರಿಯೊಬ್ಬರು ಕಪಾಲಹಿಡಿದ ಶಿವನಾಗಿ ಬಿಕ್ಷೆ ಬೇಡುತ್ತಾ ಸಭೆಯ ನಡುವೆ ಬಂದರು. ಸಭೆಯಲ್ಲಿದ್ದ ಪ್ರಖ್ಯಾತ ಅರ್ಥದಾರಿಯೊಬ್ಬರು ತಾನು ಸೇದುತ್ತಿದ್ದ ಸಿಗರೇಟು ಮೋಟನ್ನೇ ಬಿಕ್ಷೆ ಹಾಕಿದರು! ಸಮಜಾಯಿಷಿ ಕೇಳಿದವರಿಗೆ ಅವರು `ರಂಗಸ್ಥಳ ಬಿಟ್ಟು ವ್ಯವಹರಿಸುವವನನ್ನು ವೈಯಕ್ತಿಕ ನೆಲೆಯಲ್ಲಿ ಪುರಸ್ಕರಿಸಬಹುದು ವಿನಾ ಆತ ತೊಟ್ಟ ವೇಷದ ನೆಲೆಯಲ್ಲಲ್ಲ’ ಎಂದು ಪಾಠ ಹೇಳಿದರಂತೆ. ನಾನು ಇಡಗುಂಜಿ ಮೇಳದ `ಬ್ರಹ್ಮ ಕಪಾಲ’ಕ್ಕೆ ಸಾಕ್ಷಿಯಾದೆ. ಕಪಾಲ ಕಚ್ಚಿದ ಶಿವನ (ಶಂಭುಹೆಗಡೆ) ನಡೆಗೆ ಸಭೆಯ (ಕೆಟ್ಟ) ಸಾಂಪ್ರದಾಯಿಕ ಉತ್ಸಾಹ ಕಾಸು ಎಸೆಯುತ್ತಿತ್ತು. ಆದರೆ ಶಿವ ಶಂಭು (ಹೆಗಡೆ) ಆಗಲಿಲ್ಲ, ಇನ್ನೂ ಸರಿಯಾಗಿ ಹೇಳುವುದಾದರೆ ಶಂಭುಹೆಗಡೆ ಶಿವನ ನೆಪದಲ್ಲಿ ಮೇಲ್ಸಂಪಾದನೆಯ ಅವಕಾಶ ಬಳಸಲೇ ಇಲ್ಲ. ಹುಚ್ಚುಕಟ್ಟುವ ಜನ ಎಸೆದ ನಾಣ್ಯಕ್ಕೆ ಫೋಕಸ್ (ಲೈಟ್) ಒಂದು ಹುಡಿಯಾದರೂ ಆ ಕ್ಷಣದಲ್ಲಿ ಶಂಕರನ ಫೋಕಸ್ ಕಪಾಲದ ಮೇಲೇ. ಬ್ರಹ್ಮಕಪಾಲದ ರಣಹಸಿವಿನ ಚಿಂತೆ ಪ್ರಕಟಿಸುವವನಿಗೆ ವಾಸ್ತವದಲ್ಲಿ (ಮೇಳದ ಯಜಮಾನಿಕೆಯ ನೆಲೆಯಲ್ಲಿ) ಸುಮಾರು ಆರ್ನೂರು ರೂಪಾಯಿ ಬೆಲೆಯ ಹೊಸದೊಂದು ಬಲ್ಬ್ ಹೊಂದಿಸುವ ನೋವು ಹುಗಿದೇ ಹೋಯ್ತು.

ನಾನು ನನ್ನ ಮನೆಯ ಮಹಡಿಯ ಗೃಹಪ್ರವೇಶದ ನೆಪದಲ್ಲಿ, ಡಾ| ಮನೋಹರ ಉಪಾದ್ಯರ ಎಂದಿನ ಕಲಾಪ್ರೀತಿ ಸಹಯೋಗದಲ್ಲಿ ಇಡಗುಂಜಿ ಮೇಳದ `ಲಂಕಾದಹನ’ ಪ್ರಸಂಗ ಇಟ್ಟುಕೊಂಡಿದ್ದೆವು. `ವೀಳ್ಯ’ ನಮ್ಮದಾದರೂ ವೈಯಕ್ತಿಕ ಪ್ರಚಾರ ನಿರಾಕರಿಸಿ ಪ್ರಚಾರದಲ್ಲೆಲ್ಲ (ನನ್ನ ಮಗ ಅಭಯಸಿಂಹ ಕಾರ್ಯದರ್ಶಿಯಾಗಿದ್ದ ನೆಪದೊಡನೆ ಉಚಿತ ಸಭಾಭವನ ಒದಗಿಸಿದ್ದ) ಸಂತ ಅಲೋಶಿಯಸ್ ನಾಟಕ ಸಂಘ ಕಾಣಿಸಿದ್ದೆವು. ನಾನು ಮನೆಯಲ್ಲಿ ಸೇರಿದ್ದ ಆತ್ಮೀಯರ ಊಟದ ಕೂಟದಲ್ಲಿ ತೊಡಗಿಕೊಂಡಿದ್ದುದರಿಂದ ಪ್ರದರ್ಶನಕ್ಕೆ ಸಾಕಷ್ಟು ಮೊದಲೇ ಬರುವ ಮೇಳದವರ ಸ್ವಾಗತಕ್ಕೆ ಅಭಯ ನಿಯೋಜಿತನಾಗಿದ್ದ. ಆದರೆ ಆತನ ಹುಡುಗು ಬುದ್ಧಿಗೆ ರಂಗಮಂಚದ ಮರೆಯಲ್ಲಿನ ಮುರುಕು ಸಾಮಾನುಗಳು, ಬಲೆ, ದೂಳು ತೆಗೆದು ಕಲಾವಿದರಿಗೆ `ಚೌಕಿ’ ಕಲ್ಪಿಸುವ ಸಾಮಾನ್ಯ ಜ್ಞಾನ ಬರಲಿಲ್ಲ. ಕಲಾವಿದರು “ಕನಿಷ್ಠ ಹಿಡಿಸೂಡಿ ಕೊಡಿ. ನಾವೇ ಗುಡಿಸಿಕೊಳ್ಳುತ್ತೇವೆ” ಎಂದದ್ದು ಮತ್ತೂ ಅವರು ಹಾಗೇ ಮಾಡಿಕೊಳ್ಳುವಂತಾದ್ದು ನನಗೆ ತಡವಾಗಿ ತಿಳಿಯಿತು.  ಅದು ನಮ್ಮ ಅಕ್ಷಮ್ಯ ತಪ್ಪು ಮತ್ತು ಆಕುರಿತು ನಾನು ಶಂಭು ಹೆಗಡೆಯವರಲ್ಲಿ ಕ್ಷಮೆಯನ್ನೂ ಕೇಳಿದ್ದೆ. ಅದಕ್ಕೂ ಮಿಗಿಲಾಗಿ...

ಮೊದಲೇ ಹೇಳಿದಂತೆ ಗೃಹಪ್ರವೇಶದ ನೆಪವಿದ್ದರೂ ಮುಖ್ಯವಾಗಿ ಯಕ್ಷಗಾನದ ಪ್ರೀತಿಗೇ ನನ್ನ ತಮ್ಮ - ಅನಂತವರ್ಧನ, ಮೈಸೂರಿನಿಂದ ಬಂದಿದ್ದ. ಅಂದು ಶಂಭುಹೆಗಡೆ ಮನೋಹರ ಉಪಾದ್ಯರ ಬಯಕೆಗೆ ತಕ್ಕಂತೆ ಹನುಮಂತ. ಆದರೆ ಪ್ರಾಯದ ಬಳಲಿಕೆ ಮತ್ತು ಅಂದು ವಿಶೇಷವಾಗಿ ಅವರನ್ನು ಕಾಡುತ್ತಿದ್ದ ಜ್ವರ ಒಟ್ಟು ಪ್ರದರ್ಶನ ನೀರಸವಾಗುವಂತೆ ಮಾಡಿತ್ತು. ಆದರೆ ನನ್ನ ತಮ್ಮ ಪ್ರದರ್ಶನದ ಚೌಕಟ್ಟು ಮೀರಿ, ಹೆಚ್ಚು ಕಡಿಮೆ ಶಂಭುಹೆಗಡೆಯವರ ವ್ಯಕ್ತಿತ್ವವನ್ನೇ ಅವಹೇಳನ ಮಾಡುವಂತೆ `ಮಂಗನ ಕೈಯಲ್ಲಿ ಮಾಣಿಕ್ಯ’ ಎಂಬ ಶೀರ್ಷಿಕೆಯಲ್ಲಿ ಒಂದು ವಿಮರ್ಶೆ ಬರೆದು ನನಗೆ ತಿಳಿಸದೆ ಯಕ್ಷಪ್ರಭಾ ಪತ್ರಿಕೆಗೆ ಕಳಿಸಿಬಿಟ್ಟ. ಅದು ಪ್ರಕಟವೂ ಆಯ್ತು. ಆತಿಥೇಯನ ಸ್ಥಾನದಲ್ಲಿದ್ದುಕೊಂಡು ನಿರ್ದಾಕ್ಷಿಣ್ಯ ವಿಮರ್ಶೆಕೊಡಲಾಗದ್ದಕ್ಕೆ ನಾನೇ ತಮ್ಮನ ಹೆಸರಿನಲ್ಲಿ ಅಥವಾ ಅವನಿಗೆ ಹೇಳಿಕೊಟ್ಟು ಬರೆಸಿರಬೇಕು ಎಂಬ ಅರ್ಥ ನನಗೇ ಹೊಳೆದು ನನ್ನ ಅಪರಾಧ ಪ್ರಜ್ಞೆ ಇಲ್ಲಿ ದುಪ್ಪಟ್ಟಾಯಿತು. ದೂರವಾಣಿಸಿ ಅನಂತನಿಗೇನೋ ಹೇಳಿದೆ. ಅನಂತ “ಓ! ನನಗೆ ಹಾಗನ್ನಿಸಿತು, ಬರೆದುಬಿಟ್ಟೆ. ಅವಸರವಾಯ್ತಾ ತಪ್ಪಾಯ್ತಾ? ಸರಿ ಸರಿ” ಎಂದು ತೇಲಿಸಿಬಿಟ್ಟ. ಆದರೆ ಪರಂಪರೆ, ಅಧ್ಯಯನ, ಪ್ರಯೋಗಗಳ ಸಾತತ್ಯವುಳಿಸಿಕೊಂಡವರಿಗೆ ಬರಿಯ ಮಾತಿನುಪಚಾರ ಸಾಕಾಗದು ಎಂದನ್ನಿಸಿ ಒಂದು ಪತ್ರವನ್ನೇ ಬರೆದೆ. ಸಂಬೋಧನೆ ಅನಂತನಿಗೇ ಆದರೂ ಯಥಾಪ್ರತಿಯನ್ನು ಶಂಭುಹೆಗಡೆಯವರಿಗೂ ಕಳಿಸುತ್ತಿದ್ದೇನೆ ಎಂಬ ಔಪಚಾರಿಕತೆಯನ್ನು (ಠಕ್ಕಲ್ಲ) ಒಕ್ಕಣೆ. ಶಂಭುಹೆಗಡೆಯವರಿಂದೇನೂ ಪ್ರತಿಕ್ರಿಯೆ ಕಾಣಲಿಲ್ಲ! ಕೆಂಡಾಮಂಡಲ ಕೋಪ ಬಂದಿರಬಹುದು ಎಂದುಕೊಂಡಿದ್ದೆ. ಕೆಲಕಾಲಾನಂತರ ಹೀಗೇ ಸಭೆಯಲ್ಲೆಲ್ಲೋ ಸಿಕ್ಕಾಗ ಎಂದಿನ ಸ್ನೇಹಮಯಿ ಶಂಭುಹೆಗಡೆಯನ್ನೇ ಕಂಡೆ. ನಾನು ಕ್ಷಮಾಪೂರ್ವಕವಾಗಿಯೇ ನನ್ನ ಪತ್ರದ ಮಾತು ತಂದೆ. ಆದರವರು `ಹೌದು ಪತ್ರವೇನೋ ಬಂತು. ಆದರೆ ನಾನು ಮೂಲ ವಿಮರ್ಶೆಯನ್ನೇ ನೋಡಲಿಲ್ಲವಲ್ಲಾ. ಮತ್ತೆ ನನಗೆ ಆಗದ ನೋವಿಗೆ ನೀವು ಉಪಶಮನಕಾರಕ ಪತ್ರ ಬರೆದಮೇಲಂತೂ ನಾನು ನಿರಾಳವಾಗಿ ಬಿಟ್ಟೆ’ ಎಂಬ ಅರ್ಥದಲ್ಲಿ ಮಾತಾಡಿ ನನ್ನ ಆತಂಕವನ್ನು ಪೂರ್ಣ ನೀಗಿದರು.

ಪ್ರತಿ ಪ್ರದರ್ಶನದ ಕೊನೆಯಲ್ಲಿ ಶಂಭುಹೆಗಡೆ ಸಭಿಕರನ್ನುದ್ದೇಶಿಸಿ ನಾಲ್ಕು ಮಾತಾಡುವುದಿತ್ತು. ಅಂಥಲ್ಲಿ ಒಮ್ಮೆ ಅಭಿಮಾನೀ ಸಂಘಗಳ ಬಗ್ಗೆ ಚಿಕಿತ್ಸಕ ನೋಟ ಹರಿಸಿ ಅವರಾಡಿದ್ದ ಮಾತು `ಅಭಿಮಾನಿಗಳು ಬೇಕು, ವ್ಯಕ್ತಿಯ ಕುರಿತಲ್ಲ - ಆತ ಪ್ರತಿನಿಧಿಸುವ ಕಲೆಯ ಕುರಿತು’. ನಾವು ಹೊಗಳಿ ಬರೆದ ಪತ್ರಕ್ಕೆ ಅವರಲ್ಲಿ ಕೃತಜ್ಞತೆ ಇತ್ತು, ಗುರುತೂ ಇಟ್ಟುಕೊಳ್ಳುತ್ತಿದ್ದರು. ಆದರೆ ಚಿಕಿತ್ಸಕ ಟೀಕೆಯೇ ಏಕೆ, ಸಹೃದಯತೆ ಮರೆತ ಬಯ್ಗುಳಕ್ಕೂ ಅವರಿಂದ ಸಮಾಧಾನದ ಪ್ರತಿಕ್ರಿಯೆ ಬರುತ್ತಿತ್ತು. ಪ್ರತಿಬಯ್ಗುಳ, ಟೀಕೆಯ ಖಂಡನೆ ಇರುತ್ತಿರಲಿಲ್ಲ, ತಮ್ಮ ದೃಷ್ಟಿಯ ವಿಸ್ತರಣೆ ಮಾತ್ರ ಬರುತ್ತಿತ್ತು. ಹೆಚ್ಚಿನ ಓದಿಗೆ ಅವಶ್ಯ ನೋಡಿ ಬ್ಲಾಗ್: www.apkrishna.wordpress.com ಶಂಭುಹೆಗಡೆಗೆ ನುಡಿನಮನ.


ಈ ಬ್ಲಾಗಿನಲ್ಲಿ ಕೊಟ್ಟಿರುವ ಚಿತ್ರಗಳ ಮೂಲಗಳಿಗೆ ಕೃತಜ್ಞರಾಗಿದ್ದೇವೆ. ಅವುಗಳ ಉಲ್ಲೇಖ ಈ ರೀತಿಯಾಗಿವೆ:
 • http://farm4.static.flickr.com/3112/2918511654_4a64ccd4b4.jpg
 • http://mangalorean.com/images/newstemp20/20090203hegde.jpg
 • http://farm4.static.flickr.com/3271/2959551308_71388218ed.jpg

18 comments:

 1. ಶಂಭು ಹೆಗಡೆಯವರ ಮೂರ್ನಾಲ್ಕು ವೇಷಗಳನ್ನಷ್ಟೇ ನೋಡಿದ್ದೇನೆ. ಅವು, ಜಾತ್ರೆಯ ನಡುವೆ ನೋಡಿದ ದೇವರ ಮೂರ್ತಿಯಂತೆ, ನೆನಪಿನಲ್ಲಿವೆ. ನಿಮ್ಮಂಥವರ ಬರಹಗಳಿಂದ ಅವರು ನನ್ನ ಭಾವಕೋಶದಲ್ಲಿ ಇನ್ನಷ್ಟು ಎತ್ತರದ ಸ್ಥಾನ ಪಡೆದಿದ್ದಾರೆ.
  -ಹರೀಶ್ ಕೇರ

  ReplyDelete
 2. ಶಂಭು ಹಗ್ಗಡೆಗೆ ನಿಜವಾದ ಸಲಾಮು ಹೊಡಿದಿದ್ದಿ. ಎಷ್ಟೊಂದು ಪಡೆದಿದ್ದೇವೆ ನಾವೆಲ್ಲ. ಬಂಗಾರ್ಡಕ್ಕ ಚಿಕ್ಕಪ್ಪನನ್ನು (ನಮಗೆ ಮಾವ) ನೆನೆಸಿಕೊಂಡದ್ದು ಸರಿಯಾದದ್ದೆ. ಆ ದಿನಗಳು ಮರಳಿ ಬಂದಂತಾಯಿತು.
  ಕೆಲವು ದಿನಗಳ ಹಿಂದೆ ಕೊಂಡದಕುಳಿ ತಂಡದಿಂದ ಪುತ್ತೂರಿನಲ್ಲಿ ಯಕ್ಷಗಾನವಿತ್ತು. ಶಂಭು ಹೆಗ್ಡೆಯವರ ಸಂಸ್ಮರಣೆಯಾಗಿ ಮತ್ತೆ ನಡೆದ ಗದಾಯುಧ್ಧ - ತೀರ ತೀರ ನೀರಸ, ಆ ಕಾರಣಕ್ಕೋ ಏನೋ ಶಂಭು ಹೆಗ್ಗಡೆ ಮತ್ತೆ ಮತ್ತೆ ನೆನಪಾದರು. ಮರುದಿನ ಲವ-ಕುಶ. ರಾಮನಾಗಿ ಕೊಂಡದಕುಳಿ ಪರಿಪೂರ್ಣ. ಸರಿಮಿಗಿಲಾಗಿ ತೋಟಿಮನೆಯ ಕುಶ. ಒಟ್ಟಂದದ ಯಕ್ಷಗಾನ. ಎರಡೂ ದಿನ ವೇದಿಕೆಯ ಬದಿಯಲ್ಲಿ ಶಂಭು ಹೆಗ್ದೆಯವರ ಭಾವಚಿತ್ರ. ಎಲ್ಲ ನೋಡುತ್ತಿರುವಂತೆ ಕಾಣುತ್ತಿತ್ತು. ಪುಣ್ಯ, ತೃಪ್ತಿಯ ನಗೆ ಬಂದಿರಬಹುದು ಅವರಿಗೆ - ನಮಗೆ ಬಂದದ್ದರಿಂದ
  ರಾಧಾಕೃಷ್ಣ

  ReplyDelete
 3. tumba chennaagi barediddeeri.

  ReplyDelete
 4. ಶ್ರೀ ಪಡ್ರೆ03 March, 2009 07:42

  ನಿಮ್ಮ ಬರವಣಿಗೆಯಲ್ಲಿ ಮಾರಿಯೋ ಮಿರಾಂಡಾರ ವ್ಯಂಗ್ಯಚಿತ್ರಗಳಲ್ಲಿರುವಂಥ ಕುಸುರಿ ಕೆಲಸ, ಹಾಸ್ಯಗಳಿವೆ.ತನ್ನನ್ನೇ ಹಾಸ್ಯಕ್ಕೆ ಒಡ್ಡಿಕೊಳ್ಳುವ ದೊಡ್ಡತನವಿದೆ. ಇದು ಬಹಳ ಮುದ ಕೊಡುವ ಅಂಶ.
  ಯಕ್ಷಗಾನ ಪ್ರಪಂಚಕ್ಕೆ ನಾನು ನಿರಕ್ಷರಿ. ಆದರೆ ಶಂಭು ಹೆಗಡೆಯವರನ್ನು ಬಲ್ಲೆ. ಒಳ್ಳೆ ನುಡಿನಮನ.

  ReplyDelete
 5. Purushotham Bilimale03 March, 2009 08:22

  ಕೆರೆಮನೆಯವರಿಗೆ ಸೂಕ್ತ ರೀತಿಯಲ್ಲಿ ಗೌರವ ಸಲ್ಲಿಸಿದ್ದಿರಿ. ಅವರ ವೇಷ ನೋಡುವ ಭಾಗ್ಯ ನಮಗೆ ಇತ್ತಲ್ಲ ಎಂಬುದೇ ದೊಡ್ಡ ಸಂಗತಿ. ಅವರು ಮಾಡಿದ ಹನುಮಂತನ ವೇಷಗಳು ಹಿಂದಿಲ್ಲ ಮುಂದಿಲ್ಲ. ಯಕ್ಷಗಾನಕ್ಕೆ ರಾಷ್ಟ್ರಿಯ ಮನ್ನಣೆ ತಂದುಕೊಟ್ಟ ಶಿವರಾಮ ಕಾರಂತರು ಮತ್ತು ಕೆರೆಮನೆಯರು ನಮ್ಮ ಕಾಲದ ಬಹಳ ದೊಡ್ಡ ಮನುಷ್ಯರು

  ReplyDelete
 6. Vijayashankar S.R.03 March, 2009 09:17

  Ashoka Vardhana has a unique style of blending personal experience with out compromising his focus on arts. In my childhood in and around Vittal (Bantwal Taluk) a few like minded friends always used to go to all the shows of Idagunji. Their "Ardhachandrakruthi rangastala, a team of great artistss like, Shambhu, Gajanana and Mahabala hegdes taught us new perspective of Yakshagana. They helped to make many tenkutittu artists review their own performances. Balances comments of Dr. prabhakara Joshi during those days added value to the appreciation of yakshagaana. My respectful homage to keremane Shabhu Hegde one of the greatest artists I knew as a spectator. he shaped the tastes of several hundreds and thousands of art lovers like me.

  ReplyDelete
 7. HS Venakatesha Murthy03 March, 2009 16:11

  ಶ್ರೀ ಶಂಭು ಹೆಗಡೆ ಬಗ್ಗೆ ನಿಮ್ಮ ಲೇಖನ ಓದಿ ತುಂಬ ಸಂತೋಷವಾಯಿತು. ಜೊತೆಗೆ ಅವರ ಸಂದರ್ಶನ ಮತ್ತು ಅಭಿನಯದ ತುಣುಕುಗಳು ನನ್ನ ಹಳೆಯ ನೆನಪುಗಳನ್ನು ಉಜ್ಜೀವಿಸಿದವು. ಹೆಗಡ ಅವರು ನನ್ನ ಮೆಚ್ಚಿನ ಕಲಾವಿದರು. ಅವರ ನೆನಪು ತಂದ ನಿಮ್ಮ ಲೇಖನಕ್ಕೆ ತುಂಬ ಆಭಾರಿ.
  HSV

  ReplyDelete
 8. priya Ashokvardhan, writeup on keremane was excellent in the sense that it was so genuine. it made me nostalgic. thats the strength of the article. ability to marshal memories for a critique without being sentimental. the way keremane left is too symbolic. sharanara guna maranadalli nodu...
  thank you for that remarkable piece

  ReplyDelete
 9. ರಾಘವೇಂದ್ರ ಭಟ್ಟ07 March, 2009 07:40

  Dear Sri Ashoka vardhana,
  " sharanara guTTannu maraNadalli noDu " has been amply confirmed by the demise of this yakshagaana legend, Sri Keremane Shambhu Heggade.
  Each one of such stalwarts has proved that their life itself was a message for others to watch and emulate if they care to.
  But the truth is the world moves on at its own pace and fashion however strenously such reformers attempted to bring about some change for a better world.
  Namaskara
  S R Bhatta

  ReplyDelete
 10. ಹಳೆಯ ಒಬಿಚ್ಯುಅರಿ ಸಾಲೊಂದು ನೆನಪಾಗುತ್ತಿದೆ.

  ಶಂಭು ಹೆಗಡೆಯವರಿಗೆ:
  "It is wrong to mourn when men like you die,
  Rather we should thank God that such men lived."

  ReplyDelete
 11. ಯಕ್ಷಗಾನದ ರಂಗಭೂಮಿಯ ಚಟುವಟಿಕೆ ಅಂದ್ರೆ ಜಾತ್ರೆಯೋ /ಸಂತೆಯೋ ? . ಉದಾಹರಣೆ ನೋಡುವುದಿದ್ದರೆ ಹಿಮ್ಮೇಳದವರಿಗೆ ಚಾ ಬರುವುದು , ಖಾಲಿ ಲೋಟ ವಾಪಾಸ್ ಕೊಂಡು ಹೋಗುವುದು - ಇಂತಹ ಸನ್ನಿವೇಶಗಳು ರಾಮನೋ ರಾವಣನೋ ರಂಗದಲ್ಲಿರುವಾಗ ಅನುಭವಿಸುವ ಬಗೆ ಹೇಗೆ ?

  ಆಟಕ್ಕೆ ಒಬ್ಬರು ಪ್ರಾಯೋಜಕರು ಸಿಕ್ಕಿದರು ಅಂತ ಅವ್ರ ದೊಡ್ಡ ಬ್ಯಾನರನ್ನು ರಂಗದ ಹಿಂದಿನ ತೆರೆಗೆ ಬಿಗಿದು ಕಂಗೊಲಿಸುವಾಗ ಅದನ್ನು ಮೀರಿ ಆಟ ನಮ್ಮ ತಲೆ ಒಳಗೆ ಹೊಗ್ಗಬೇಕಿದ್ರೆ ಕಲಾವಿದ ಕಾಲು ಮೇಲೆಮಾಡಿ ತಲೆ ಕೆಳೆಗೆ ಮಾಡಿ ಕುಣಿದಾಗ ಮಾತ್ರ.

  ಗಡಂಗ್, ಹೂಸು ವಾಸನೆ [ಹೂ - ಸುವಾಸನೇ, ಅದು ಬೇರೆಯೇ], ಜರ್ದಾ ತಿಂದು ನಿಮ್ಮ ಬೆನ್ನ ಹಿಂದೆಯೇ ಪುಚಕ್ ಎಂದುಗಿದು ಬರೆಯುವ ಚಿತ್ತಾರದ ವಾತರಾವಣ - ಎಂಬ ವಾತಾವರಣದಲ್ಲಿ ೯೯% ಗಂಡಸರೇ ಪ್ರೇಕ್ಷಕರು ......... ಇಂತಹದ್ದನ್ನೆಲ್ಲಾ ನಾವು ನುನ್ಗಿದ್ದೇವೆ ಎಂದು ಒಂದು ಕಡೆ ಆಶ್ಚರ್ಯವಾದ್ರೆ, ರಸ ಶುದ್ಧಿ ಕನಸುಗಳನ್ನೇ ಹೊತ್ತು ಬೆಳೆದ ಸಾತ್ವಿಕ ಪ್ರಪಂಚದ ದೈತ್ಯ ಪ್ರತಿಭೆ ಕೆರೆಮನೆ ಶಂಭು ಹೆಗಡೆ ಕೊಟ್ಟ ಸಿಂಚನಗಳನ್ನು ನೆನೆಪಿಸುವಾಗ ಸಿಗುವ ಧನ್ಯತೆಯೇ ಬೇರೆ.

  ಶಂಭು ಹೆಗಡೆಯವರು ರಾಮನ ವೇಷಕ್ಕೆ ತಯಾರಾಗುವ ೩೬ ಹೆಜ್ಜೆಗಳ ದಾಖಲೀಕರಣ ಈ ತಾನಗಳಲ್ಲಿವೆ.

  1. www.udayavani.com/Special/ShambuHegde/SHegde2.htm
  2. www.flickr.com/photos/yakshagana/sets/72157613362419978

  ReplyDelete
 12. ಅನುಭವದ ನುಡಿಗಳು ಮರೆಯಾದ ಹೆಗಡೆಯವರನ್ನು ಮರಳಿ ತಂದಿದೆ. ಬ್ಲಾಗ್ ತುಂಬಾ ಚೆನ್ನಾಗಿದೆ.

  ReplyDelete
 13. ಅಶೋಕವರ್ಧನರೆ, ಯಕ್ಷಲೋಕದ ಗಂಧರ್ವರನ್ನು ಈ ರೀತಿ ಚಿತ್ರಿಸಿ ನಮ್ಮಂಥ ಚಿಕ್ಕವರಿಗೆ ಹೆಚ್ಚು ಜ್ಞಾನ ನೀಡಿದ್ದೀರಿ. ಶಂಭು ಹೆಗಡೆಯವರಿಗೆ ಭಾವಪೂರ್ಣ ನುಡಿ ನಮನ.. ನಾನು ಮಂಗಳೂರಿನ ಸೈಂಟ್ ಮೇರೀಸ್ ಶಾಲೆಯಲ್ಲಿ ಓದಿದ ಹುಡುಗಿ. ನಿಮ್ಮ ಮೀಸೆ ಕಂಡು ಭಯಕ್ಕೆ ನಿಮ್ಮ ಅಂಗಡಿಗೆ ಬರುತ್ತಿರಲಿಲ್ಲ ಎಂಬ ಸತ್ಯ ಹೇಳಿದರೆ ನಗಬೇಡಿ. ಆದ್ರೆ ಈಗ ಬೆಂಗಳೂರುವಾಸಿಯಾದ ನಂಗೆ ಸಪ್ನಾ ನಿರಂತರ ಸಂಗಾತಿ.

  ಮಾಲಾರವರ ಬ್ಲಾಗಿನಲ್ಲಿ "ಅದಕ್ಕೆ ಕಪ್ಪು ಬಳಿಯುವ ಯೋಚನೆಗಿಂತ ಎಲ್ಲೆಡೆ ಕನ್ನಡ ನಾಮಫಲಕಗಳೂ ಬರುವ ಸ್ಥಿತಿ ನಾನು ಬಯಸುತ್ತೇನೆ." ಎಂದಿರಲ್ಲ ಸತ್ಯ. ನಾನೂ ಇದೇ ಅಭಿಪ್ರಾಯಕ್ಕೆ ಓಟ್ ಹಾಕುತ್ತೇನೆ.

  ReplyDelete
 14. ಅಶೋಕವರ್ಧನ05 April, 2009 15:25

  ಪ್ರಿಯ ಮಿಂಚುಳ್ಳಿ
  ಓ! ಮಾರ್ಜಿಲ್ (ಮಾರ್ಜಾಲ?) ಶಾಲೆಯಲ್ಲಿ ಓದಿದವರು.
  ದಯವಿಟ್ಟು ಇಲ್ಲೇ ಇರುವ `ಪುಸ್ತಕೋದ್ಯಮ ಭಯಂಕರ ಆಕ್ರೋಶವರ್ಜನ ಕೃತ.........' ಅವಶ್ಯ ಓದಿ ನಿಮ್ಮ ಉಳಿದಿರಬಹುದಾದ ಭಯ ನಿವಾರಣೆ ಮಾಡಿಕೊಳ್ಳಬೇಕಾಗಿ ವಿನಂತಿ. ನಿಮ್ಮ ನಿಜನಾಮಧೇಯ ಮತ್ತು ಮಿಂಚಂಚೆ ವಿಳಾಸ ಕೊಟ್ಟರೆ ಹೀಗೇ ಹೊಸ `ಹರಟೆಗಳ' ಬಗ್ಗೆ ಕಾಲಕಾಲಕ್ಕೆ ಮಾಹಿತಿ ಕಳಿಸಬಲ್ಲೆ.
  ಇಂತು ವಿಶ್ವಾಸಿ
  ಆಕ್ರೋಶವರ್ಜನ

  ReplyDelete
 15. ನನ್ ಬ್ಲಾಗಿನ ಮೇಲಾಣೆ ಈಗ ಭಯವಿಲ್ಲ.. ಮಾರ್ಜಿಲ್ ಶಾಲೆಯಲ್ಲೇ ಅದನ್ನು ಬಿಟ್ಟು ಬರಲಾಗಿದೆ.. ಈಗ ನಾನೇ ಯಾರನ್ನಾದರೂ ಭಯ ಪಡಿಸಬಲ್ಲೆ.. (ನನ್ ಗಾತ್ರದಿಂದಲ್ಲ.. ಮಾತಿನಿಂದ) ... ಅಂದ ಹಾಗೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಗೆ ಬಂದವರೂ ನೀವೇ ಅಂತ ನೆನಪು.. ನಾನಾಗ ಏಳನೇ ಕ್ಲಾಸು ಮತ್ತು ಅಲ್ಲಿನ ಸಕ್ರಿಯ ಸದಸ್ಯೆಯೂ ಆಗಿದ್ದೆ. ನಂಗೆ ಅಪ್ಪ ಅಮ್ಮ ಇತ್ತ ಹೆಸರು ವಿಜಯಲಕ್ಷ್ಮಿ . ಮಹಾಬಲ ಭಟ್ರ ಏಕೈಕ ಮಗಳು. ನಾನಿತ್ತುಕೊಂಡ ಹೆಸರು ಶಮ. ಅದು ಅಪ್ಪ ಅಮ್ಮನ ಹೆಸರಿನ ಮೊದಲಕ್ಷರ ತೆಗೆದು ಮಾಡಿಕೊಂಡದ್ದು .. ನನ್ ಮಿಂಚಂಚೆ ವಿಳಾಸ shamasukrutham@gmail.com or shamainternational@gmail.com

  ReplyDelete
 16. ಮೂರ್ತಿ ದೇರಾಜೆ09 October, 2012 22:19

  ಅಶೊಕ್...ಇಷ್ಟು ಸಮಯ ಕಳೆದ ಮೇಲೆ ...ಈ ಲೇಖನ ಓದಿದೆ... ಕುರ್ಯ ವಿಠಲಶಾಸ್ತ್ರಿಗಳ ವೇಶಗಳನ್ನು ನೋಡಿದ ನೆನಪು (ಬ್ರಹ್ಮಕಪಾಲ ಅಲ್ಲ...!!!)ನನ್ನಲ್ಲಿ ಸರಿಯಾಗಿದ್ದುದರಿಂದ...ಅವರ ನಿವೃತ್ತಿಯ ನಂತರ...ಯಕ್ಷಗಾನದ ಬಗ್ಗೆ ನಾನು ಕಳಕೊಂಡ ರುಚಿ ಮತ್ತೆ ನನಗೆ ಸಿಕ್ಕಿದ್ದೇ ಶಂಭು ಹೆಗ್ಡೆಯವರಿಂದ....ಅವ್ರ ವೇಷದ ಹುಚ್ಚುಹಿಡಿದು, ಅವರು ಬೇರೆ ಬೇರೆ ರೀತಿಯಲ್ಲಿ ಕಲಾತ್ಮಕತೆಗೆ ಕೊಟ್ಟ ಪ್ರಾಮುಖ್ಯತೆಗೆ ಮಾರು ಹೋಗಿ....ಅವರ ಹಿಂದೆ...ಅವರ ಮೇಳದ ಜೊತೆಗೇ ತಿರುಗಿದ್ದಿದೆ....ಮೊನ್ನೆ ನೆಬ್ಬೂರು ಭಾಗವತರು ನೆನಪಿಸಿಕೊಂಡರು..."ಬ್ರಹ್ಮಕಪಾಲ ನಮ್ಮ ಮೇಳಕ್ಕೆ ಬೇಡಾ...."ಅಂತ ದೇರಾಜೆಯವರು ಹೇಳ್ತಿದ್ರು ಅಂತ....ಬ್ರಹ್ಮಕಪಾಲ ನಿಜಕ್ಕೂ ಕೆರೆಮನೆ ಸಹೋದರರಿಗೆ ಯಾರಿಗೂ ಇಷ್ಟ ಇರಲಿಲ್ಲ....ಆದರೆ...ನೀವು ಹೇಳಿದ ಶಿವ ಭಿಕ್ಷೆ ಬೇಡುವ ಪ್ರಸಂಗ.... "ಶಿವ ರಂಗಸ್ಥಳದಿಂದ ಕೆಳಕ್ಕಿಳಿಯುವುದು ಸರಿಯಲ್ಲ ..." ಎಂದರೆ ಅವರ ಒಂದು ಸಮರ್ಥನೆ ಇತ್ತು...ನಮ್ಮ ಜನಪದ ರಂಗಭೂಮಿಯ ಕಲ್ಪನೆಯಲ್ಲಿ ಪ್ರೇಕ್ಷಕರನ್ನೂ ಸೇರಿಸಿ ರಂಗಸ್ಥಳ...ಎಂದಿದ್ದರು....ಆಗ ನಾನು ಕೇಳಿದ್ದೆ...ಅದು ಸರಿ...ಆದರೆ ಯಾವಾಗ ಈ "ಪ್ರೊಸೀನಿಯಂ" ಸುರುವಾಯ್ತೋ, ಪ್ರೇಕ್ಷಕರು ಬೇರೆ ಎನ್ನುವ ಕಲ್ಪನೆ ಬಂತೋ...ಆಗ ನೀವು ಹೇಳಿದ್ದು ಕೇವಲ ಸಮರ್ಥನೆ ಮಾತ್ರ ಆಗುವುದಿಲ್ಲವೇ...ಅಂತ. ಆಗ ಅವರು...ನಗಾಡ್ತಾ..."ನಮ್ಮ ವೇಷಧಾರಿಗಳನ್ನು ಬಿಟ್ಟು ಕೊಡುವುದು ಯಾಕೆ...ಅಂತ ಅಷ್ಟೆ....ನನಗಂತೂ ಒಗ್ಗುವುದಿಲ್ಲ....ಆದರೂ ಒಂದು ಸಾರಿ ನಾನೂ ಪ್ರೇಕ್ಷಕರ ನಡುವೆ ಹೋಗಿದ್ದೆ...ಒಂದು ಮುನ್ನೂರು ರುಪಾಯಿ ಸಿಕ್ಕಿದೆ... ಮತ್ತೆ ಬ್ರಹ್ಮ ಕಪಾಲ ಒಗ್ಗದೇ ಇದ್ದರೂ ಮೇಳದ ಆರ್ಥಿಕ ಪರಿಸ್ಥಿತಿಯಿಂದಾಗಿ ಆಡಬೇಕಾಗ್ತಿತ್ತು....ಒಳ್ಳೆ ಕಲೆಕ್ಷನ್ ಆಗ್ತಿತ್ತು..." ಅಂತ ಹೇಳಿದ್ದ್ರು....ಇಷ್ಟು ತಡವಾಗಿ ಯಾಕೆ ಇಷ್ಟು ಬರೆದೆ ಅಂದರೆ...ಮೊನ್ನೆಯಷ್ಟೇ ನೆಬ್ಬೂರ್ ಭಾಗವತರ ಜೊತೆ ಇಡುಗುಂಜಿ ಮೇಳದ,ಕಲಾವಿದರ ಆಪ್ತ ನೆನಪನ್ನು ಹಂಚಿಕೊಂಡೆವು.......

  ReplyDelete
  Replies
  1. ಕಪಾಲಧಾರೀ ಶಿವನಿಗೆ ಸಿಗರೇಟು ಹಾಕಿದ ಖ್ಯಾತ ಅರ್ಥದಾರಿ ನಿಮ್ಮಪ್ಪ - ದೇರಾಜೆ ಸೀತಾರಾಮಯ್ಯ ಎಂದು ನಿಮಗೆ ಗೊತ್ತು ಎಂದು ಭಾವಿಸುತ್ತೇನೆ. ಆಗ ಶಿವನ ಪಾತ್ರದಲ್ಲಿದ್ದವರು ರಾಮದಾಸ ಸಾಮಗರು. (ಜಾಲತಾಣದ ಸೌಕರ್ಯದಲ್ಲಿ ನೀವು ಎಂದು ಓದಿ ಟಿಪ್ಪಣಿಸಿದರೂ ಒಮ್ಮೆಗೆ ಚರ್ಚಾ ವೇದಿಕೆಯಲ್ಲಿ ಮೇಲೆ ಕಾಣುವ ಸೌಕರ್ಯ ಇದ್ದೇ ಇದೆ ನೋಡಿ)
   ಅಶೋಕವರ್ಧನ

   Delete
  2. ಮೂರ್ತಿ ದೇರಾಜೆ11 October, 2012 01:01

   ನೆನಪಿದೆ ಅಶೋಕ್....ಆದರೆ ಶಿವನ ಪಾತ್ರ ಮಾಡಿದವರು...ಕುರ್ಯ ವಿಠಲ ಶಾಸ್ತ್ರಿಗಳೇ... ದೇರಾಜೆಯವರ ಯಾವ ಸಲಹೆಯನ್ನೂ ಶಾಸ್ತ್ರಿಗಳು ಮೀರುತ್ತಿರಲಿಲ್ಲವಂತೆ....ಬ್ರಹ್ಮಕಪಾಲ ಎಂತ ಕೊಳಕ್ಕು ಪ್ರಸಂಗ ಎಂದರೂ ಬಿಡದೇ....ಎಲ್ಲ ಲಾಇಕ ಆವುತ್ತು ಹೇಳ್ತವು...ನೀನೊಂದರಿ ನೋಡೆಕ್ಕು....ಅಂತ ಹೇಳಿದ್ದಕ್ಕೆ ...ದಾಕ್ಶಿಣ್ಯಕ್ಕೆ ಕಟ್ಟು ಬಿದ್ದು ಹೋದರೂ...ಭಿಕ್ಷಾಪಾತ್ರೆಗೆ "ಸಿಗರೇಟಿನ ಬಿಕ್ಷೆ" ಹಾಕಲು ದಾಕ್ಷಿಣ್ಯ ಮಾಡಲಿಲ್ಲ....ಆದರೆ ...ವಿಶೇಷ ಅಂದರೆ...ದೇರಾಜೆಯವರು ಇದ್ದ ದಿನ ಅಥವಾ ದೇರಾಜೆಯವರಿಗೆ ಸುದ್ದಿ ಮುಟ್ಟೀತು ಎಂದಿದ್ದ ದಿನ...ಶಾಸ್ತ್ರಿಯವರು...ರಂಗಸ್ಥಳದಿಂದ ಕೆಳಗಿಳಿಯುತ್ತಿರಲಿಲ್ಲವಂತೆ...........ಇಷ್ಟೆಲ್ಲಾ ಇದ್ದರೂ....ವಿಠಲ ಶಾಸ್ತ್ರಿಗಳ ಅದ್ಭುತ ಪ್ರತಿಭೆಯನ್ನೂ....ಅವರಿದ್ದ ಕಾಲದ ನಾಜೂಕು ಇಲ್ಲದ ಯಕ್ಷಗಾನದ ಸಂದರ್ಭವನ್ನೂ ನೆನಪಿಸಿಕೊಂಡರೆ....ಶಾಸ್ತ್ರಿಗಳ ಈ ತಪ್ಪು (!!)ಮತ್ತು ಶಾಸ್ತ್ರಿಗಳು ಯಕ್ಷಗಾನವನ್ನು ವಿರೂಪ ಗೊಳಿಸಿದರು...ಎನ್ನುವ ಆರೋಪವು..ಬಿದ್ದು ಹೋದೀತು....ಎನ್ನುವುದು ನನ್ನ ಭಾವನೆ........... ಅವರ ನೆನಪಿಗೆ ಬರೆದ ಲೇಖನ ಒಂದಿದೆ...ಮೈಲ್ ಮಾಡ್ತೇನೆ...ಬಿಡುವಾದರೆ ಓದಿ....

   Delete