ಅಂಡಮಾನ್ ಮಾಲಿಕೆ - ಭಾಗ ಒಂದು
ಪ್ರಿಯಾನಂದಾ ನಿಂಗೆ ಬೇಕೋ ಬೇಡವೋ ಎಂಬ ಪ್ರಶ್ನೆ ಇಲ್ಲ, ನನಗೆ ಪುರ್ಸೊತ್ತಾಗಿದೆ, ಅಂಡಮಾನ್ ಪ್ರವಾಸದ ಅನುಭವ (೨೦೦೭ ಏಪ್ರಿಲ್ನಿಂದ) ವರ್ಷಕ್ಕೂ ಮಿಕ್ಕು ಕಾಲದಿಂದ ಒತ್ತಡ ಹಾಕುತ್ತಲೇ ಇದೆ. ಈಗ ಇಳಿಸ್ಕೊಳ್ಳಲು ನಿನ್ನ ಹೆಸರಿನಲ್ಲಿ ಒಂದಷ್ಟು ಕುಟ್ಟಿ ಕಂತುಗಳಲ್ಲಿ ಬ್ಲಾಗಿಗೇರಿಸಿ ಒಂದಷ್ಟು ಜನರನ್ನು ಗೋಳುಹೊಯ್ಕೊಳ್ತೇನೆ. ಸಿಂಡಿಕೇಟ್ ಬ್ಯಾಂಕಿನ ಗೆಳೆಯರಾದ ಶಕುಂತಲಾ ಉಚ್ಚಿಲ್ ಸುಮಾರು ಹದಿನೆಂಟು ವರ್ಷಗಳ ಹಿಂದೆ ಅಲ್ಲಿಗೆ ವರ್ಗಾವಣೆ ಪಡೆದು ಹೋಗಿದ್ದಾಗ, ಎಡೆಡೆಯಲ್ಲಿ ರಜಾದಲ್ಲಿ ಬಂದಾಗೆಲ್ಲಾ ನಮ್ಮ ಹುಚ್ಚು ಚೆನ್ನಾಗಿ ಗೊತ್ತಿದ್ದುದರಿಂದ “ಬನ್ನಿ, ಭನ್ನೀ”ಂತ ಕರೀತ್ಲೇ ಇರ್ತಿದ್ರು. ಅಖಿಲಭಾರತ ಮಹಾಯಾನದ (`ಕುವೆಂಪು ಸೃಜಿಸಿದೀ ಮಹಾಕಾವ್ಯ’ ಎಂಬಂತೆ!) ಕಲ್ಪನೆಗಳಿಗೆ ದಿನ ಹೊಂದಿಸುವ ಉನ್ನತಿಕೆಯಿಂದ ಅಪಾರ ನೀರ ನಡುವಿನ ನಾಲ್ಕೆಂಟು ತುಂಡು ನೆಲ, ಅಲ್ಲಿನ ಒಂದೆರಡು ಬೆತ್ಲೆಪುರ್ಕರನ್ನು ನೋಡಲು ಮನಸ್ಸು ಇಳಿಯಲೇ ಇಲ್ಲ. ಇತ್ತ ಅಂಗಡಿಯ ಶೆಲ್ಫುಗಳ ಪರಿಷ್ಕರಣ, ಮುಖ ಎತ್ತುವಿಕೆ, ಅಭಿಮಾನೀ ಕೊಳ್ಳುಗರಿಗಿನ್ನೊಂದಿಷ್ಟು (ಇಲ್ಲಿ ಓದುಗ ಮಹಾಶಯ ಈಚೆಗೆ ಸಂದುಹೋದ ಕನ್ನಡದ ಮೇರುನಟನ ಪ್ರಿಯಪದದ ಪ್ರಭಾವವನ್ನು ಅವಶ್ಯ ಗಮನಿಸಬೇಕು) ಅನುಕೂಲವೆಲ್ಲ ಕಲ್ಪಿಸುವ ಅಂದಾಜು ಹಾಕಿ ಆಚಾರಿಯ ಬಿಡುವು ಕಾದಿದ್ದೆ. ಅಭಯ ಪ್ರಥಮ ಕನ್ನಡ ವೃತ್ತಿಪರ ಸಿನಿರಂಗದೊಡನೆ ತೊಡಗುವ ಉತ್ಸಾಹದಲ್ಲಿ ಬೆಂಗಳೂರಿಸಿದ್ದಾನೆ. ಬೇಸಗೆಯ ಉರಿ, ಹಂಪನ್ಕಟ್ಟಕ್ಕೆ ಹೋಗುವ ದಾರಿ ಬಂದಾಗಿ ನಿರೀಕ್ಷೆಯ ಜನರ ಸಮ್ಮರ್ದವಿಲ್ಲದ ದಿನ ಎಂದೆಲ್ಲಾ ಸೇರಿರುವಂತಾ ಗಳಿಗೆಯಲ್ಲಿ ನಿರೇನ್ ಫಕ್ಕನೆ ದೂರವಾಣಿಸಿ ಕೇಳಿದರು, ಅಂಡಮಾನಿಗೆ ಬರ್ತೀರಾ? ಆಫ಼್ ಸೀಸನ್ ರೇಟಿನಲ್ಲಿ ಅಂಡಮಾನಿಗೆ ಹೋಗೋಣ ಬರ್ತೀರಾ? ನನ್ನ ಸುಮಾರು ಹದಿನಾರು ವರ್ಷಗಳ ಸುಪ್ತ ಬಯಕೆಗೆ ಒಮ್ಮೆಲೇ ಮೀಟುಗೋಲು ಸಿಕ್ಕಿದ ಹಾಗಾಯ್ತು. ಅದೂ ಪೂರ್ತಿ ಪ್ರಯಾಣ ವಿಮಾನದಲ್ಲಾದರೂ ರೈಲು ಹಡಗುಗಳ ಖರ್ಚಿಗೂ ಕಡಿಮೆಯಲ್ಲಿ ಎಂದಾಗ ಯಾಕೆ ಬೇಡ ಎಂದು ದೊಡ್ಡದಾಗಿಯೇ ಹೂಂಗುಟ್ಟಿದೆ.
ಒಂದು ಆಪ್ತ ಪತ್ರ-ಪ್ರವಾಸ ಕಥನ
[ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಒಮ್ಮೆಗೇ ಉಣಬಡಿಸುವ ಉಮೇದು ನನ್ನದು. ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿನಲ್ಲಿ ಮುಂದಿನ ಕಂತುಗಳನ್ನು ಬೇಗಬೇಗನೆ ಅನಾವರಣಗೊಳಿಸಲಿದ್ದೇನೆ - ಅಶೋಕವರ್ಧನ]
ಜೊತೆಗೆ ದೇವಕಿ ಮಾತ್ರ ಎಂದು ಲೆಕ್ಕ ತೆಗೆಯುವಾಗ ಸಾಲಿಗ್ರಾಮದ ಎಂಕ್ಟ್ರಮ್ಣ ಉಪಾಯ್ದರೂ ಅಭಯನೂ ಯಾವುದೋ ಮಾಯೆಯಲ್ಲಿ ಸೇರಿಹೋದ್ದು ಹೇಳಲೇಬೇಕು. ನಾನು ಮೊಬೈಲ್ ದೂಡಿದ್ರೆ ಆ ಪುಣ್ಯಾತ್ಮ ಫೋನೇ ಬೇಡಾಂದವ್ರು. ಇನ್ನು ಅವರಣ್ಣ ಮಂಜ್ಞಾತ್ರಿಗೆ ಹೇಳಿ, ಬಿಡುವು ನೋಡಿ ನಿರ್ಧಾರ ಮಾಡುವುದೆಲ್ಲಾ ಆಪುದಲ್ಲ ಹೋಪುದಲ್ಲಾನ್ನುವಾಗಲೇ ಅಂಗ್ಡೀಲ್ಲಿ ಪ್ರತ್ಯಕ್ಷ. ಅವರು ಅಶೋಕರನ್ನು ನೋಡದೇ ಬಹುಕಾಲವಾಯ್ತೆಂದು ಹೀಗೇ ಅಂಗಡಿಗೆ ಬಂದವರು ಅಂಡಮಾನ್ ಕೊಕ್ಕೆಗೆ ಸಿಕ್ಕಿಕೊಂಡರು. (ಕಡೇ ಮಿನಿಟಿನ ಸೇರ್ಪಡೆಯ ಈ ಹಳೆ ಹುಲಿ, ವೆಂಕ್ಟ್ರಮಣ ಉಪಾದ್ಯ ನಿನಗ್ಗೊತ್ತಲ್ಲಾ? ಅದೇ ಮೈಸೂರಿನ ಬೆಂಕಿ ನವಾಬ ಬೀದೀಂದ ಅದೆಂಥದ್ದೋ ಮಣ್ಣು ತೆಕ್ಕೊಂಡು, ಮುರುಕಲು ಹಡಗಿನ ಕಂಡಿ ಗಾಜು ಕೊಂಡು, ಉಜ್ಜುಜ್ಜುಜ್ಜಿ ಮಸೂರ, ದುರ್ಬೀನು, ಧೂಮಕೇತುವಿನ ಫೋಟೋ ಇತ್ಯಾದಿ - ಹೂಂ ಅದೇ ಮನ್ಸಾ!) ಅಭಯ `ಯೂತ್ ನೆಕ್ಸ್ಟ್' ಎಂಬ ಸಾಕ್ಷ್ಯ ಚಿತ್ರದ ತಯಾರಿಯಲ್ಲಿ ಹತ್ತಿಪ್ಪತ್ತಕ್ಕೂ ಮಿಕ್ಕು ವಿಮಾನಯಾನದಲ್ಲಿ ಅಖಿಲಭಾರತದ ಹದಿನೈದಕ್ಕೂ ಮಿಕ್ಕು ಸ್ಥಳಗಳನ್ನು ತಿರುಗಿ ಬಂದು, ಉಸಿರುಗಟ್ಟಿ ಹತ್ತು ಕಂತಿನ ಸಾಕ್ಷ್ಯ ಚಿತ್ರ ಮುಗಿಸಿದ್ದ. ಅದರ ಬೆನ್ನಿಗೆ ತಾರಾಮೌಲ್ಯದ ಸಿನಿಮಾವೊಂದರ ಪೂರ್ವ ಕರ್ಮಗಳಿಗೆ ಬೆಂಗಳೂರಿಗೆ ಓಡಿದ್ದ. ಆದರೆ ಅಲ್ಲಿ ಇವನ ಅದೃಷ್ಟಕ್ಕೆ ಕೆಲಸ ಹತ್ತು ದಿನಗಳಿಗೆ ಮುಂದೂಡಲ್ಪಟ್ಟು “ಅಂಡಮಾನಿಗೆ ನಾನೂ ಇದ್ದೇನೆ” ಎಂದ. ನಿರೇನ್ ಮತ್ತು ಅಭಯ ಲೋನ್ಲಿ ಪ್ಲಾನೆಟ್ಟಿನ ಇಂಡಿಯಾ ಗೈಡ್ ಇಟ್ಟುಕೊಂಡು ಅಂತರ್ಜಾಲದಲ್ಲಿ ಭಾರೀ ಸರ್ಕಸ್ ಮಾಡಿ ಏಪ್ರಿಲ್ ಹದಿನೆಂಟರಿಂದ ಇಪ್ಪತ್ತೈದರವರೆಗೆ ಕಾರ್ಯಕ್ರಮ ಗಟ್ಟಿ ಮಾಡುವಾಗ ತಯಾರಿಗೆ ಉಳಿದ ದಿನಗಳು ಎರಡೇ! ಇಪ್ಪತ್ತರಿಂದ ಅಥವಾ ಇಪ್ಪತ್ತೆರಡರಿಂದ ಸುಮಾರು ಒಂದು ವಾರ ಎಂದು ತೊಡಗಿದ್ದವರು ಎಲ್ಲಾ ನಿಶ್ಚಯವಾಗಿ ಟಿಕೇಟ್ ಬಂತು ಎನ್ನುವಾಗ ಹದಿನೆಂಟರಿಂದ ಇಪ್ಪತ್ತೈದು ಎನ್ನಬೇಕೇ! ಪ್ರಸ್ತುತ ಪ್ರವಾಸದ ಮುಖ್ಯ ಪ್ರಯಾಣದ ವಿವರಗಳ ಮಟ್ಟಿಗೆ ಅಭಯ, ಅಲ್ಲಿ ಏನೇನು ನೋಡಬೇಕು, ಎಲ್ಲೆಲ್ಲಿ ಸುತ್ತಬೇಕು ಎಂಬ ಸೂಕ್ಷ್ಮಗಳ ಬಗ್ಗೆ ನಿರೇನ್ ಹೊಣೆವಹಿಸಿಕೊಂಡರು. ಮತ್ತೆ ನನ್ನ ನಾಯಕತ್ವ ಎಂದು ಪ್ರಶ್ನಿಸಿದ್ಯಾ? ಇಂಥಾ ಸಂಶಯಗಳು ಮುಂದೆಯೂ ಕೆಲವು ಬರಬಹುದಾದ್ದರಿಂದ ಓದುಗ ಮಹಾಶಯ ನನ್ನನ್ನು ಕಿಂಗ್ಮೇಕರ್ ಎಂಬ ಮತ್ತಷ್ಟು ಉಚ್ಛಸ್ಥಾನದಲ್ಲಿ ಗುರುತಿಸತಕ್ಕದ್ದು; ಮೀಸೆ ಮಣ್ಣಾಗಿಲ್ಲ ಏನು!
ದಿನ ಒಂದು (೧೮) ಕನಿಷ್ಠ ಒಂದು ವಾರವಾದರೂ ಅಂಗಡಿಯಲ್ಲಿ ನೋಟೀಸು ಹಚ್ಚಿ ಮತ್ತೆ ಬಾಗಿಲಮೇಲೂ ಹಚ್ಚಿ ಹೋಗಬೇಕು, ಪೂರ್ವಸೂರಿಗಳ ಅನುಭವಕಥನಗಳೆಲ್ಲವನ್ನೂ ಸಮೂಲಾಗ್ರ ಓದಿ, ಟಿಪ್ಪಣಿ ಮಾಡಿ, ಕೆಲವಂ ಬಿಲ್ಲವರಿಂದ, ಅಲ್ಲಲ್ಲ (ಇದು ಶಾಂತ್ರಾಮನ್ನ ತಮಾಶೆ ಮಾಡಿ ಮಾಡಿ ರೂಢಿಸಿದ ಪ್ರಯೋಗ. ಮತ್ತೆ ಲಟಪಟಾಚಾರಿ ನೆಪದಲ್ಲಿ ಕಾರಂತ ಕೆಟ್ಟಂತೆ ನನ್ನನ್ನು ಯಾರಾದರೂ ನರಕಕ್ಬಿಟ್ಟು ನಾಲ್ಗೆ ಸೀಳ್ಸಿಯಾರಲ್ವಾ) ಬಲ್ಲವರಿಂದ ಕಲ್ತು ಎಂಬೆಲ್ಲಾ ಯೋಚನೆ ಬಿಟ್ಟು, ೧೮ರ ಬೆಳಿಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟೇ ಬಿಟ್ಟೆವು. ನಮ್ಮ ಸಂಖ್ಯೆ ಐದು, ಗೊತ್ತಲ್ಲಾ ಅಮ್ಮ ಹೇಳಿಯಾಳು ಪಂಚಮಂ ಕಾರ್ಯಸಿದ್ಧಿಃ (ಪಂಚಪಾಂಡವರೂಂದ್ರೇ ಮಂಚದ ಕಾಲಿನ ಹಾಗೆ ಕೈಯಲ್ಲಿ ಮೂರು ತೋರ್ಸಿ ಎರ್ಡು ಹೇಳಿದ ಹಾಗಲ್ಲ ದಾನೇ?) ಏರ್ ಡೆಕ್ಕನ್ನಿನವರ ವಿಚಿತ್ರ ಕೊಡುಗೆಗಳ ಲಾಭದಲ್ಲಿ ಮಂಗಳೂರು-ಬೆಂಗಳೂರು-ಚೆನ್ನೈ- ಪೋರ್ಟ್ ಬ್ಲೇರ್ (ಅಂಡಮಾನಿನ ರಾಜಧಾನಿ) ಹಾಗೇ ವಾಪಾಸು ಟಿಕೆಟ್ಟುಗಳು (ಇದರಲ್ಲಿ ಬ್ಲೇರಿನಿಂದ ಚೆನ್ನೈಗೆ ಮಾತ್ರ ಏರ್ ಇಂಡಿಯಾ ಹಿಡಿಯಬೇಕಾಯ್ತು) ನಮ್ಮ ಕೈಯಲ್ಲಿದ್ದವು. ಮನೇಂದ ನಿಲ್ದಾಣಕ್ಕೆ ಮತ್ತೆ ಒಳಗಿನ ಔಪಚಾರಿಕತೆಗೆ ಹಾಳಾಗುವ ಸಮಯಕ್ಕೆ ವಾಸ್ತವದ ಬೆಂಗಳೂರು ಪಯಣದ ಅವಧಿ ಹೋಲಿಸಿದರೆ ನಾವು ಕನಿಷ್ಠ ಎರಡು ಬಾರಿ ಬೆಂಗಳೂರಿಗೆ ಹೋಗಿಬರಬಹುದಿತ್ತು! ಸಮುದ್ರಕ್ಕೆ ದೂರದ ಸಲಾಂ. ಸೂರ್ಯನ ಕಣ್ಣಿರಿಯುವ ಗುರಿ ವಿಮಾನದ್ದು. ಇದು ನೇತ್ರಾವತಿಯೇ? ಇದು ಉಪ್ಪಿನಂಗಡಿಯ ಸಂಗಮವೇ? ಪಶ್ಚಿಮ ಘಟ್ಟದ ಮಹಾಗಂಬಳಿಯಲಿಷ್ಟೊಂದು ಹರಕೇ? ಹೀಗೇ ವಿಸ್ಮಯಗಳು ಮೂಡುವುದರೊಳಗೆ ಹೊಸಹೊಸತು ಕಿಟಕಿಯಂಚಿನಾಚೆ ಕಾದಿರುತ್ತಿತ್ತು. ನಾವು ಕಂಡ ಜಲಾಶಯವನ್ನು ಹೇಮಾವತಿ ಹಾರಂಗಿ ಅಣೆಕಟ್ಟುಗಳ ನಡುವೆ ಇತ್ಯರ್ಥ ಮಾಡಲಾಗಲಿಲ್ಲ. ಶ್ರವಣಬೆಳ್ಗೊಳದ ಗೊಮ್ಮಟಗಿರಿಯೇ ಶಿವಗಂಗೆಯ ಮಹಾ ಬಂಡೆಯೇ ಎಂದು ಚೌಕಾಸಿ ಮುಗಿಯುವುದರೊಳಗೆ ನಿರ್ವಿವಾದವಾಗಿ ಬೆಂಗಳೂರು ಧಾವಿಸಿ ಬಂದಿತ್ತು. ಸದ್ಯದಲ್ಲೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದ ಅಭಯ ಅಲ್ಲಿವರೆಗೆಂದೇ ಎರಡು ಭಾರೀ ಪೆಟ್ಟಿಗೆಗಳಷ್ಟು ಖಾಸಗಿ ಸಾಮಾನುಗಳನ್ನು ಸಾಗಿಸಿದ್ದ. ಹತ್ತುಗಂಟೆಗೆ ಇಳಿದವರಿಗೆ ಮಧ್ಯಾಹ್ನ ಒಂದು ಹತ್ತರವರೆಗೂ ಬಿಡುವು. ಅಭಯ ತನ್ನ ಸಾಮಾನು ಸಾಗಣೆಗೆ ಹೋದ. ಕನಿಷ್ಠ ಎರಡು ಗಂಟೆಯುದ್ದಕ್ಕೆ ವ್ಯಾಪಿಸಬೇಕಿದ್ದ (ಕಾಯುವ ಸಮಯವನ್ನು) ಆಲಸ್ಯವನ್ನು ಕಡಿಮೆ ಮಾಡುವಂತೆ ಹೊರೆ ನೂಕುವ ಗಾಡಿಯೊಡನೆ ಕಾಲೆಳೆಯುತ್ತಾ ಹೋದ ನಮಗೆ ಎದೆಗುಂದಿಸುವಂತೆ ಸಿಕ್ಕಿತು ಸುದ್ದಿ -- ಏರ್ ಡೆಕ್ಕನಿನ ಮಧ್ಯಾಹ್ನದ ನಮ್ಮ ಯಾನ ರದ್ದಾಗಿದೆ. ಬಸ್ನಿಲ್ದಾಣದ ತಾರಸ್ಥಾಯಿಯ ವಿಚಾರಣೆ ಬಿಟ್ಟು (ಮತ್ತೆ ಸ್ಥಳಗೌರವ ಕಾಪಾಡಬೇಕಲ್ಲ) ಸಾಕಷ್ಟು ಎಕ್ಸ್ಕ್ಯೂಸ್ಮಿಗಳು, ಪಾರ್ಡನ್ಮಿಗಳು ವ್ಯಯಿಸಿದಾಗ ರಾತ್ರಿ ಹತ್ತು ಐವತ್ತರ ಯಾನದಲ್ಲಿ ನಮಗೆ ಸೀಟು ಹೊಂದಿಸಿಕೊಡುವ ಕೃಪೆ ಮಾಡಿದರು. ನಿರ್ದಾಕ್ಷಿಣ್ಯವಾಗಿ ನಮ್ಮ ಕಾರ್ಯ ಗೌರವ ಒಂದಕ್ಕೇ ಚೂಪುಗೊಟ್ಟಾಗ (ಈಗ ಬೇಕಾದ್ರೆ ಬಸ್ ನಿಲ್ದಾಣದ ಸ್ಟೈಲ್ ಅನ್ನು ಅಥವಾ ಇನ್ನೂ ವಾಚ್ಯವಾಗಿ ಹೇಳುವುದಾದರೆ ನಮ್ಮಂಗಿ ಕೈ ಮೇಲ್ಮಾಡಿ, ಕಾಲರ್ ಕುತ್ತ ಮಾಡಿ, ಸ್ವಾಗತಕಾರನ ಕತ್ತ್ನ್ ಪಟ್ಟಿ ಹಿಡ್ದ್ ಬೋ.... ಮಗ, ಸೂ... ಮಗ ಹೇಳೋ ಮಟ್ಟಕ್ಕಿಳಿದಾಗ) ಕ್ಷಮೆ ಯಾಚಿಸುತ್ತಾ ರಾತ್ರಿ ಏಳೂವರೆಗೆ ಹೊಂದಿಸಿ ಕೊಟ್ಟರು. ಉಳಿದ ಸಮಯಕೊಲ್ಲುವ ಕೆಲಸದಲ್ಲಿ ನಿಲ್ದಾಣದ ಸೋಮಾರಿ ಕಟ್ಟೆ ಸಾಕಷ್ಟು ಬಳಸಿದೆವು. ಅಲ್ಲಿನ ದುಬಾರಿ ಊಟ ಕಾಪಿ ತಿರಸ್ಕರಿಸಿ, ನಿಲ್ದಾಣದ ಪರಿಸರ ಮೀರಿ ಅಂದರೆ ನೂರು ಮೀಟರಾಚೆ ಊರಿನ ಬೆಲೆಯ ಒಳ್ಳೆಯ ಹೋಟೆಲಿರುವುದನ್ನೂ ಶೋಧಿಸಿದೆವು! ವಿಮಾನ ನಿಲ್ದಾಣದಲ್ಲಿ ತಂಗುವ ಯಾವುದೇ ವಾಹನಕ್ಕೆ ದುಬಾರಿ ನೆಲ ಬಾಡಿಗೆ ಬೀಳುವುದರಿಂದ ಮತ್ತದರ ಗಡಿಯಾಚೆ ಅಂದರೆ ಅದೇ ನೂರು ಮೀಟರ್ ನಡೆದರೆ ಊರಿನ ಎಲ್ಲಾ ಸಾರಿಗೆ ಸೌಕರ್ಯಗಳೂ ಲಭ್ಯ ಎಂದೂ ಕಂಡುಕೊಂಡೆವು (ಅಭಯ ಅವಸರದಲ್ಲಿ ಎಂಜಿ ರಸ್ತೆಗೆ ಆಟೋರಾಕ್ಷಸನಿಗೆ ಐವತ್ತು ರೂಪಾಯಿ ದಂಡ ತೆತ್ತರೆ ನಾನು ವಿರಾಮದಲ್ಲಿ ಎಂಟೇ ರೂಪಾಯಿಯ (ಕೊಲಂ)ಬಸ್ಸೇರಿದ್ದೆ!). ರಾತ್ರಿಯೂ ಸಾಕಷ್ಟು ಜ್ಞಕ್ಕು ಜ್ಞಯ್ಯಿ ಮಾಡಿದ ವಿಮಾನ ಕಂಪೆನಿ ಹತ್ತು ಗಂಟೆಗೆ ನಮ್ಮನ್ನು ಚೆನ್ನೈಗೆ ಹೊತ್ತು ಹಾಕಿತು. ಅಲ್ಲಿ ಹತ್ತೋ ಹನ್ನೆರಡೋ ಕಿಮೀಯಾಚೆಗಿದ್ದ ಪಾಂಗ್ರೋವ್ ಹೋಟೆಲ್ ನಮ್ಮನ್ನು ಕಾದಿದ್ದರೂ ದಾರಿಯಾವುದಯ್ಯಾ ಎಂದು ಸಿಕ್ಕ ಕಾರೋ ಜನವೋ ಕೇಳುವಂತಿರಲ್ಲಿಲ್ಲ. ಇದಕ್ಕಾಗಿಯೇ ಮಾಡಿದ ಪೂರ್ವಪಾವತಿಯ ಕಾರಿನ ವ್ಯವಸ್ಥೆಗೆ ಶರಣಾಗಿ, ವ್ಯಾಜ್ಯಗಳಿಲ್ಲದೆ ಹೋಟ್ಲ್ ತಲಪಿದೆವು. ಖಂಡಿತವಾಗಿಯೂ ಊರಿನ ದರಕ್ಕೆ ಎರಡುಪಟ್ಟು ಜಾಸ್ತಿಯೇ ಈ ಪ್ರೀಪೇಡ್ ವ್ಯವಸ್ಥೆಯಲ್ಲಿರಬಹುದು ಅದರೆ ಉತ್ತರೋತ್ತರವಾಗಿ ಇಳಿದು ಹೋಗುವಾಗ `ಮೊದಲೇ ಕೊಡಲಿಲ್ಲವೇ' ಎನ್ನುವ ಗತ್ತು, ಗೌರವ ನಮಗಿತ್ತು! ಮತ್ತೆ ಅಜ್ಞಾನಂ ಪರಮ ಸುಖಂ!
ಏನೋ ಅದ್ಭುತ ಅನಾವರಣಗೊಳ್ಳುತ್ತದೆ, ರಸಘಟ್ಟಿ ಪರಿಮಳಿಸಲಿದೆ ಎಂಬ ಕುತೂಹಲ. ಆದರೆ ಇದ್ದದ್ದೇನು -- ಬೆಣ್ಣೆ ತೋರಿಸಿದ, ಜ್ಯಾಂ ಮೂಸಿಸಿದ ಎರಡು ಬ್ರೆಡ್ಡಿನ ಹಳಕುಗಳು! ಮೂವತ್ತೋ ನಲವತ್ತೋ ಕಕ್ಕಿದ್ದಕ್ಕೆ ಸರಿಯಾಗಿ ಆತ ಅದನ್ನು `ಪರಿಷ್ಕಾರವಾಗಿ' ತಿಂದು, ಗಂಗೋದಕವನ್ನು ಕುಡಿದ. ನಿಜಾ ಹೇಳಬೇಕೆಂದರೆ ಆ ಬ್ರೆಡ್ಡು ನನ್ನ ಹಲ್ಲಿನ ತೂತು ತುಂಬಲೂ ಸಾಲದಿತ್ತು. ಇನ್ನು ನೀರು ನವರಾತ್ರಿಯಲ್ಲಿ ಪಂಚಾಮೃತಕ್ಕೆ ಕೈ ಒಡ್ಡಿದಾಗ ಅಣ್ಣ (ನಿಜದಲ್ಲಿ ಸೋದರ ಮಾವ) ಉದ್ಧರಣೆಯಲ್ಲಿ ಕೈ ತೊಳೆಯಲೆಂಬಂತೆ ಬಿಡುವ ನೀರ ಬೊಟ್ಟಿಗೂ ಸಮವಿರಲಿಲ್ಲ! ಇಲ್ಲಿ ನನ್ನ ಬಾಲ್ಯದ ನೆನಪು ಸ್ವಲ್ಪ ಹೇಳಲೇಬೇಕು. (ಇದು ನಿನಗಷ್ಟಾಗಿ ದಕ್ಕಿರಲಾರದು, ಯಾಕಂದರೆ ನಿನ್ನ ಬಾಲಲೀಲೆಗಳು ವಿಕಸಿಸಿದ್ದು ಬಳ್ಳಾರಿ, ಬೆಂಗಳೂರ ಹಿನ್ನೆಲೆಯಲ್ಲಲ್ಲವೇ?) ಪುತ್ತೂರಿನಿಂದ (ಅಜ್ಜನ ಮನೆ) ಮಡಿಕೇರಿಗೆ ಅಪರಾಹ್ನ ಹೊರಟ ಕೂರ್ಗ್ ಟ್ರಾನ್ಸ್ಪೋರ್ಟ್ ಓಡೋಡೋಡಿ, ಏದುಸಿರು ಬಿಡುತ್ತಾ ಅರೆಘಟ್ಟ ಹತ್ತುವಾಗ ಜೋಡುಪಾಲ ಸಿಗುತ್ತದೆ. ಅಲ್ಲಿ ಅದು ನಿಲ್ಲುವುದು ತಡವಾಯ್ತೆಂಬಂತೆ ಜನ ಹಾರಿಳಿದು, ಮುರುಟಿದ ಕೈಕಾಲು ಬಿಡಿಸಿ, ನಸು ಚಳಿಗೆ ಆಆಆಆಃ ಎಂದು ಮೈಮುರಿದು ನೀರು ಸುರಿವ ದಂಬೆಗಳ ಮರೆಯ ಕ್ಯಾಂಟೀನು ಸೇರುತ್ತಿದ್ದರು. ದೋಸೆ, ಚಟ್ನಿ, ಪಲ್ಯ, ಸಾಂಬಾರುಗಳ ಪರಿಮಳ ಸುಳಿಸುಳಿದು ಬಂದು ನನ್ನ ಮೂಗನ್ನು ಕೆಣಕುತ್ತಿತ್ತು. ಆದರೇನು ಅಪ್ಪಮ್ಮರ ಆರೋಗ್ಯ ಪ್ರಜ್ಞೆಯೋ ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸುವ ಕ್ರಮವೋ ನಾಲಗೆ ಚಪ್ಪರಿಸಿ ಉತ್ತರಿಸಲು ಅವಕಾಶ ಒದಗಿಸಿದ್ದೇ ಇಲ್ಲ. ಹುಡುಗಾಟಿಕೆಯಲ್ಲಿ ಎಷ್ಟೋ ಬಾರಿ ಇದು ಜಿಪುಣತನವೇ ಇರಬೇಕೆಂದು ಕಂಡದ್ದೂ ಇತ್ತು. ಆದರಿಂದು ನಾನೇ ಯಜಮಾನನಾಗಿಯೂ ಬಾಯಿ ಚಪಲವೇನೂ ಕಡಿಮೆಯಾಗಿಲ್ಲದಿದ್ದರೂ ಬುದ್ದಿಪೂರ್ವಕವಾಗಿ `ತಿಂಡಿ ತೀರ್ಥಗಳನ್ನು' ತಿರಸ್ಕರಿಸಿದ್ದಕ್ಕೆ ವಿಷಾದವಿಲ್ಲ. (ಅಭಯನ್ನ ಕೇಳಿಲ್ಲ ಆದರೂ ಯಾರೂ ಜಿಪುಣತನದ ಆಪಾದನೆ ಹೊರಿಸಲಾರರು!). ವಿಮಾನದ ಈ ಜಿಗುಪ್ಸೆಯ ವಹಿವಾಟುಗಳಿಗೆ ಕೊನೆ ತರುವಂತೆ ಪೋರ್ಟ್ ಬ್ಲೇರ್ ಸಮೀಪಿಸಿದ ಸೂಚನೆ ಬಂತು. ಅದುವರೆಗೆ ಹಾರುತ್ತಿದ್ದ ಎತ್ತರ, ಅಲ್ಲಿನ ಊಹಾತೀತ ತಾಪಮಾನ (ಅದು ಶುಭ್ರ ಬಿಸಿಲಿನ ಹಗಲಾದರೂ ಎಷ್ಟೋ ಡಿಗಿ ಮೈನಸ್ ಇತ್ತು!), ಅದನ್ನು ಕಳಚಿಕೊಂಡು ಸಮೀಪಿಸುತ್ತಿರುವ ಭೂಮಿಯ ವಾಸ್ತವದ ವಿವರಗಳೂ ಪೈಲಟ್ಟಿನ ಮಾತುಗಳಲ್ಲಿ ಯಾಂತ್ರಿಕವಾಗಿ ಬಂತು, ಆದರೆ ಇಳಿಯಲು ಸಂಭ್ರಮಿಸುವವರ ಗದ್ದಲದಲ್ಲಿ ಎಲ್ಲ ಅಸ್ಪಷ್ಟವಾಗಿ ಕರಗಿಹೋಯ್ತು. ಉತ್ತರ ಧ್ರುವಕ್ಕೆ ಸಮೀಪವರ್ತಿಯಾಗಿರುವ, ಅಲ್ಲೂ ಎಲ್ಲೆಲ್ಲೂ ಅಸಂಖ್ಯ ವಿಮಾನಯಾನ ಮಾಡಿರುವ ನಿನಗಿದೇನೂ ವಿಷಯವಲ್ಲದಿರಬಹುದು. ಆದರೆ ನನ್ನನುಭವದ ಅಂಡಮಾನ್ಗೆ ಇದು ಬೇಕೇ ಬೇಕಲ್ಲಾ! ಉಪಾದ್ಯರನ್ನೋ ನಿರೇನನ್ನೋ ಸಾವಕಾಶವಾಗಿ ಕೇಳಿ ತಿಳ್ಕೊಂಡು ಮುಂದಿನ ಕಂತು ಕೊಡ್ತೇನೆ. ಅಲ್ಲಿವರೆಗೆ ಶುಭವಿದಾಯ.
ಇಂತು ನಿನ್ನಣ್ಣ ಅಶೋಕವರ್ಧನ
ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯ ಅನ್ನುವುದರ ಜತೆಗೆ ನನ್ನ ತಮ್ಮನೆಂದು ಗುರುತಿಸಲು ಸಾದ್ಯವಾಗುವಷ್ಟು ಮೀಸೆ ಬೆಳೆಸಿದ್ದಾನೆ ಎಂದು ಸೇರಿಸಬಹುದಾಗಿತ್ತು.
ReplyDeleteಈ ಕಡಿಮೆ ಬೆಲೆಯ ವಿಮಾನಯಾನ ಇಂಗ್ಲೇಂಡಿನ ಫ್ರೆಡ್ಡಿ ಲಾಕರ್ ಎಂಬಾತನ ಅವಿಶ್ಕಾರ. ಯುರೋಪಿನಿಂದ ಅಮೇರಿಕಕ್ಕೆ ನೂರು ಡಾಲರ್. ಆದರೆ ನಾಲ್ಕಾರು ತಿಂಗಳುಗಳಲ್ಲಿ ಮುಚ್ಚಿದ ಕಾರಣ ನಾನು ಆಸೆ ಪಟ್ಟು ಸಮೀಪ ಹೋದರೂ ಪ್ರಯಾಣಿಸಲು ಅವಕಾಶ ಸಿಕ್ಕಿರಲಿಲ್ಲ. ನಂತರದ ಕಂಪೇನಿಗಳು ಉಳಿವಿಗಾಗಿ ಆಕಾಶದಲ್ಲೇ ನಮ್ಮ ಜೇಬಿಗೆ ಕೈ ಹಾಕುವ ಅಬ್ಯಾಸ ಬೆಳೆಸಿಕೊಂಡವು.
ಪ್ರವಾಸಿಗಳು ಹೆಚ್ಚಿರುವ ಪ್ರದೇಶದಲ್ಲಿ ವ್ಯವಸ್ಥಿತವಾಗಿ ದೋಚುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿರುತ್ತಾರೆ. ಅದನ್ನು ಬೇದಿಸಿ ಸ್ಥಳೀಯರ ದರದಲ್ಲಿ ಉಣ್ಣುವುದು ನಿಜಕ್ಕೂ ಸಾಹಸ. ಅದರಲ್ಲಿ ಲೋನ್ಲಿ ಪ್ಲಾನೆಟ್ಟಿನ ಗೈಡ್ಗಳು ಸಹಾಯಕ. ಮುಂದಿನ ಕಂತಿಗೆ ಕಾಯುತ್ತಿರುವ
- ಗೋವಿಂದ
Namaskara
ReplyDeleteNimma mail nodidha koodale nimma Andaman Pravasa Katheyannu 00dhi mugisidhe.
Nimmantha pravasigalannu kurithu odhidhaga bengaloorinalle koothu kanasu kano nannanthavarige mujugaravagutthade.
Aadare nimmanthavaru elligadharu hogi bandhaga adhannu kurithu mikkavarige tilisuva abhyasa ittukondiruvudharindha neevu hodha kadegella naavoo hodha anubhavavagutthadhe. Idhakkagi nimage krithagyathe.
preethiya ashokavardhana avarige
ReplyDeletenamaskaara. andaman bagege nivu baredaddu odide. tejasvi rahamath avaranthavaru baredamelu bareyalu enirutte endu odalu shurumaadidavanige helalu tumba ide annisitu. nija helabekendare neevu heluttiruvudu neevu kanda andaman bagegina barahavalla naanu munde kaanuvudu namma andaman alve. yakendare nimma prayanada anubhavagalella nammavu kuda.
bega mundina kanthu please
ravi
ಪ್ರಿಯ ಅಶೋಕವರ್ಧನರೇ
ReplyDelete'ಕೆಲವಂ ಬಿಲ್ಲವರು' ಎಂದು ಓದಿದಾಗ ಇವರೂ 'ಬಿಲ್'ಗಾರ ಜಾತಿಯವರೇ ಇರಬೇಕೆಂದುಕೊಂಡಿದ್ದೆ. ಕಂಸದಲ್ಲಿರುವ ನಿಮ್ಮ ಕಮೆಂಟ್ ಓದಿದ ಮೇಲೆ ಇವರದ್ದು ಬೇರೆ ಜಾತಿ ಎಂದು ತಿಳಿಯಿತು. ಯೂನಿಟೇಸ್ಟ್ ಪ್ರಯೋಗ ನನಗೆ ಮುಂದಿನ ದಿನಗಳಲ್ಲಿ ಬಹಳ ಉಪಯೋಗಕ್ಕೆ ಬರಲಿದೆ.
ನ.ರವಿಯವರೇ
ತೇಜಸ್ವಿ, ರಹ್ಮತ್ ಎಲ್ಲಾ ಬರೆದ ಮೇಲೆ ಅಂಡಮಾನ್ ಬಗ್ಗೆ ಬರೆಯಲು ಏನು ಉಳಿದಿದೆ ಎಂದುಕೊಂಡೇ ಓದಲು ಆರಂಭಿಸಿದರೂ ಮತ್ತೆ ಅಭಿಪ್ರಾಯ ಬದಲಿಸಿಕೊಂಡದ್ದು ಸಂತೋಷ ತಂದಿತು. ಕನ್ನಡದಲ್ಲಿ ಬಂದ ಏಕರೂಪೀ ಪ್ರವಾಸ ಕಥನಗಳ ಭಾರ ನಿಮ್ಮಿಂದ ಹೀಗೆ ಹೇಳಿಸಿರಲೂ ಬಹುದು (ನೀವು ಸೂಚಿಸಿದ ಎರಡೂ ಕೃತಿಗಳು ಇದಕ್ಕೆ ಅಪವಾದ). ಭಿನ್ನವಾಗಿ ಬರೆಯಬಲ್ಲವರೆಲ್ಲಾ ಹಿಂದೆ ಯಾರ್ಯರೋ ಬರೆದಿದ್ದಾರೆ ಎಂದು ಸುಮ್ಮನೆ ಕುಳಿತಿರುವುದರಿಂದ ಹೀಗಾಗುತ್ತದೆ. ಪ್ರತಿ ಬರೆಹವೂ ಪ್ರತಿಯೊಬ್ಬ ಓದುಗನಲ್ಲೂ ಹೊಸ ರೂಪ ತಳೆಯುವಂತೆ ಪ್ರತೀ ಸ್ಥಳವೂ ಒಬ್ಬೊಬ್ಬ ಪ್ರವಾಸಿಯ ದೃಷ್ಟಿಯಲ್ಲೂ ಬೇರೆ ಬೇರೆಯಾಗಿರುತ್ತದೆ. ಪ್ರವಾಸಿ ಇದನ್ನು ಗ್ರಹಿಸಿ ಅಭಿವ್ಯಕ್ತಿಸಿದರೆ ಆ ಪ್ರವಾಸ ಕಥನ ಭಿನ್ನವಾಗಿ ಇದ್ದೇ ಇರುತ್ತದೆ.