18 October 2008

ಗ್ರಂಥಾಲಯ ಸಮ್ಮೇಳನದ ನೇಪಥ್ಯದ ಕ(ವ್ಯ)ಥೆ

ಯಾವುದೇ ಸಾಹಿತ್ಯ ಸಮ್ಮೇಳನದ ಅಬ್ಬರಕ್ಕೆ ಕಡಿಮೆಯಿಲ್ಲದಂತೆ (ಪ್ರಥಮ?) ಗ್ರಂಥಾಲಯ ಸಮ್ಮೇಳನ ಕಳೆದ ಜುಲೈಯ ೧೯ ಮತ್ತು ೨೦ರಂದು ಧಾರವಾಡದಲ್ಲಿ ನಡೆದಿತ್ತು. ಅಲ್ಲಿ ನಾನು ಮಂಡಿಸಿದ ಪ್ರಬಂಧ - ಗ್ರಂಥಾಲಯದ ಆರೋಗ್ಯಕ್ಕೊಂದಿಷ್ಟು ಕಷಾಯ ನೀವು ಎಂದಿನ ವಿಶ್ವಾಸದೊಡನೆ ಓದಿದ್ದೀರಿ. ಸಭೆಯಲ್ಲಿ ಮತ್ತು ಸಂಘಟನೆಯಲ್ಲಿ ಮಂತ್ರಕ್ಕಿಂತ ಹೆಚ್ಚು ಉಗುಳು ಹಾರಿತ್ತು. ಕರ್ನಾಟಕ ವಿದ್ಯಾವರ್ಧಕ ಸಂಘ - ಒಂದು ಸಾರ್ವಜನಿಕ ಸಂಸ್ಥೆ, ಮತ್ತೆ ವಿನಿಯೋಗಗೊಂಡ ಭಾರೀ ಮೊತ್ತ - ಪೂರ್ಣ ಸಾರ್ವಜನಿಕ, ಹೀಗೆ ಹಾಳಾದ್ದು ನನಗೆ ಸರಿಕಾಣಲಿಲ್ಲ. ಅದಕ್ಕೂ ಹೆಚ್ಚಾಗಿ ಇದರ ಪ್ರಭಾವದಲ್ಲಿ ಇನ್ನೆಷ್ಟೋ ವಿವಿನಿಲಯ, ಸಂಘಗಳು ಬರುವ ವರ್ಷಗಳಲ್ಲಿ ಇಂಥವೇ ಮಹಾಮೇಳಗಳಿಗೆ (ಎರಡನೇ ಗ್ರಂಥಾಲಯ ಸಮ್ಮೇಳನ?) ಸಜ್ಜಾಗುವ ಮತ್ತಷ್ಟು ಸಾರ್ವಜನಿಕ ಹಣದ ಅಪವ್ಯಯವಾಗುವ ಅಪಾಯವೂ ಮರೆತುಬಿಡುವಂತದ್ದಲ್ಲ. ಹಾಗಾಗಿ ನಾನು ಕ.ವಿ.ಸಂಘಕ್ಕೆ ಬರೆದ ವೈಯಕ್ತಿಕ ಪತ್ರವನ್ನು ಸಾರ್ವಜನಿಕ ತಿಳುವಳಿಕೆಗಾಗಿ ಪರಿಷ್ಕರಿಸಿದ್ದೇನೆ.

ಗ್ರಂಥಾಲಯ ಸಮ್ಮೇಳನವೊಂದು ನಡೆಯಲಿರುವ ಬಗ್ಗೆ ಮತ್ತದರಲ್ಲಿ ನಾನು ಭಾಗವಹಿಸುವ ಬಗ್ಗೆ ನನಗೆ ಯಾವುದೇ ಸುಳಿವು, ಆಸಕ್ತಿ ಇರಲಿಲ್ಲ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯವರು ಪ್ರಭಾವೀ ಉಭಯ ಮಿತ್ರ - ಸಾಹಿತ್ಯಪ್ರಕಾಶನದ ಮಾಲಿಕ ಸುಬ್ರಹ್ಮಣ್ಯರ ಮೂಲಕ ನನ್ನನ್ನು ಸಂಪರ್ಕಿಸಿದರು. ನನ್ನ ಒಪ್ಪಿಗೆಗೆ ಒಡ್ಡಿದ ಮೂರು ಆಮಿಷ: ೧. (ಅಂದಿನ) ಗ್ರಂಥಾಲಯ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪೂರ್ಣ ಕಲಾಪಕ್ಕೆ ಕಿವಿಗೊಟ್ಟು, ಒಳ್ಳೆಯ ಅಂಶಗಳನ್ನು ಅನುಷ್ಠಾನಕ್ಕೆ ತರಲು ಉತ್ಸುಕರಾಗಿದ್ದಾರೆ. ಅದಕ್ಕೆ ಅನುಭವದ ನೆಲೆಯಿಂದ ಮತ್ತು ಸಾರ್ವತ್ರಿಕ ದೃಷ್ಟಿಯಿಂದ, ಸುಮಾರು ಹತ್ತು ಮಿನಿಟಿಗೆ ಮೀರದಂತೆ ವಿಚಾರ ಮಂಡಿಸುವ ಮೂವರಷ್ಟೇ (ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ, ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಮತ್ತು ನಾನು) ಪ್ರಬಂಧಕಾರರು. ೨. ಸ್ವತಃ ಪಾಟೀಲ ಪುಟ್ಟಪ್ಪನವರೇ ನನ್ನ ಹೆಸರನ್ನು ಗಟ್ಟಿಯಾಗಿ ಶಿಫಾರಸು ಮಾಡಿದ್ದರು. ೩. ಕಲಾಪಗಳು ಎರಡು ದಿನಗಳದ್ದಿದ್ದರೂ ನನಗೆ ಅನುಕೂಲವಾಗುವಂತೆ ಆದಿತ್ಯವಾರವನ್ನೇ ಹೊಂದಿಸಿದ್ದರು.

ನನ್ನ ಮೌಖಿಕ ಒಪ್ಪಿಗೆಯ ಬೆನ್ನಿಗೆ, ಸಮ್ಮೇಳನದ ಕಾರ್ಯದರ್ಶಿಯವರಿಂದ ಲಿಖಿತ ಆಹ್ವಾನವೂ ಬಂತು. ಅದರಲ್ಲಿ ಸೂಚಿಸಿದಂತೆ ನಾನು ಪ್ರಬಂಧವನ್ನು ತಯಾರು ಮಾಡಿ ಸಾಕಷ್ಟು ಮುಂಚಿತವಾಗಿಯೇ ಕಳಿಸಿಕೊಟ್ಟೆ. ಅದರೊಡನೆ ಬರೆದ ಪತ್ರದಲ್ಲಿ ನಾನು ಕೇಳಿದೆ `ಧಾರವಾಡ ನನಗೆ ಅಷ್ಟೇನೂ ಪರಿಚಯದ ಊರಲ್ಲ. ಆಮಂತ್ರಣ ಪತ್ರಿಕೆಯೊಡನೆ ಆತಿಥ್ಯದ ವಿವರಗಳನ್ನೂ ತಿಳಿಸಿ.’ ಸಭೆಗಿನ್ನು ನಾಲ್ಕೇ ದಿನವಿರುವಾಗ ತೀರಾ ಔಪಚಾರಿಕ ಆಮಂತ್ರಣ ಪತ್ರಿಕೆ (ಉದ್ಘಾಟನೆ ಮತ್ತು ಸಮಾರೋಪದ ವಿಷಯ ಮಾತ್ರ ಇತ್ತು. ಕಲಾಪಗಳ ವಿವರ ಇರಲಿಲ್ಲ. ನನ್ನ ಹೆಸರು ಕೇವಲ ತಜ್ಞರ ಪಟ್ಟಿಯಲ್ಲಿತ್ತು) ಮಾತ್ರ ಸಾದಾ ಅಂಚೆಯಲ್ಲಿ ಬಂತು. ಪ್ರಯಾಣದ ವಿವರಗಳು, ವಾಸದ ವ್ಯವಸ್ಥೆ, ಕಲಾಪದ ವಿವರಗಳು ಮತ್ತು ನನ್ನ ಪ್ರಬಂಧ ಸಕಾಲಕ್ಕೆ ತಲಪಿತೇ ಎನ್ನುವುದಕ್ಕೆಲ್ಲ ಅವರಿಂದ ಪತ, ಕನಿಷ್ಠ ದೂರವಾಣಿ ಕರೆಯೂ ಬರಲಿಲ್ಲ.

ನಾನೇ ಅಂದಾಜಿಸಿ ಬಸ್ಸಿನಲ್ಲಿ ಹೋಗಿ, ಒತ್ತಾಯದಲ್ಲಿ ವಾಸ ಸೌಕರ್ಯ ಪಡೆದು, ಎರಡನೇ ದಿನದ ಅಂದರೆ ಆದಿತ್ಯವಾರದ ಕಲಾಪಕ್ಕೆ ಸಕಾಲದಲ್ಲಿ ಹಾಜರಾದೆ. ಆಗ ದೊರೆತ ಕಲಾಪ ಪಟ್ಟಿಯಿಂದ ತಿಳಿಯಿತು - ಹಿಂದಿನ ದಿನ ಕೇವಲ ಉದ್ಘಾಟನಾ ಸಮಾರಂಭ ಮಾತ್ರ ನಡೆದಿತ್ತು. ಅಂದು ಎರಡು ಗೋಷ್ಠಿಗಳು ಪೂರ್ವಾಹ್ನದಲ್ಲೂ ಸಂಜೆಗೆ ಸಮಾರೋಪ ಸಮಾರಂಭವೂ ನಡೆಯುವುದಿತ್ತು. ನನ್ನ ಪಾಲಿನ ಗೋಷ್ಠಿಗೆ ನಿಗದಿತ ಸಮಯ ಮಧ್ಯಾಹ್ನ ಹನ್ನೆರಡು ಗಂಟೆ. ದಿನದ ಮೊದಲ ಗೋಷ್ಠಿ ಮೂವತ್ತೈದು ಮಿನಿಟು ತಡವಾಗಿ ತೊಡಗಿತು. ಹಾಜರಿದ್ದ ಪ್ರಬಂಧಕಾರರೇ ಡಜನ್ನಿಗೆ ಕಡಮೆಯಿರಲಿಲ್ಲ (ಮೊದಲು ನನಗೆ ಹೇಳಿದ್ದ ಪ್ರಬಂಧಕಾರರ ಸಂಖ್ಯೆ `ಮೂರು’ ಬಹುಶಃ `ನೂರು’ ಆಗಿರಬೇಕು! ಸಚಿವ ಕಾಗೇರಿ ಭಾಗವಹಿಸುವುದಿರಲಿ, `ಆಪರೇಷನ್ ಕಮಲದಲ್ಲಿ’ ಗ್ರಂಥಾಲಯ ಖಾತೆಗೇ ಎರವಾಗಿದ್ದರು). ಆದರೂ ಔಪಚಾರಿಕತೆಗಳನ್ನೆಲ್ಲ ಉಳಿಸಿಕೊಂಡು, ಪ್ರಬಂಧಗಳನ್ನು ಮಾತ್ರ ಎಂಟೇ ಮಿನಿಟಿಗೆ ಮಿತಿಗೊಳ್ಳಲು ನಿರ್ವಾಹಕರು ಸೂಚಿಸಿದರು. ಕಲಾಪದ ಅಧ್ಯಕ್ಷರು ಕರಾರುವಾಕ್ಕಾಗಿ ಆ ಮಿತಿ ಹೇರಿದರೂ ಮೊದಲ ಗೋಷ್ಠಿ ಮುಗಿಯುವಾಗ ಅಪರಾಹ್ನ ಒಂದು ಗಂಟೆ ಹತ್ತು ಮಿನಿಟು; ಊಟಕ್ಕೆ ಪ್ರಶಸ್ತ ಸಮಯ! ಆದರೆ ಸಂಘಟಕರು ಘೋಷಿಸಿದ್ದು ಚಾ ವಿರಾಮ! ಮತ್ತೂ ತಮಾಷೆಯೆಂದರೆ ಹೊರಗೆ ಚಾ ಇರಲಿಲ್ಲ. ಸಹಜವಾಗಿ ಸಾಮಾನ್ಯ ಸಭಿಕರು ಬಿಡಿ, ಗಣ್ಯ ಮಹಾವ್ಯಕ್ತಿಗಳೂ ಸೇರಿದಂತೆ ಮುಕ್ಕಾಲುಪಾಲು ಸಭೆ ನಮ್ಮ ಎರಡನೇ ಗೋಷ್ಠಿಗೆ ಗೈರು ಕಾಣಿಸಿದರೆನ್ನಲೇ ಭೋಜನಶಾಲೆಯಲ್ಲಿ ಹಾಜರಾದರು ಎನ್ನಲೇ! ತಪ್ಪು ಖಂಡಿತವಾಗಿಯೂ ಅವರದಲ್ಲ. ಎಲ್ಲರನ್ನೂ ಊಟಕ್ಕೇ ಬಿಟ್ಟು ಎರಡು ಗಂಟೆಗೆ ಮುಂದಿನ ಗೋಷ್ಠಿ ತೊಡಗಿದ್ದರಾಗುತ್ತಿತ್ತು. ಇದು ಸಂಜೆ ನಾಲ್ಕು ಗಂಟೆಗೆ ನಿಗದಿಗೊಂಡಿದ್ದ ಸಮಾರೋಪಕ್ಕೇನೂ ತೊಂದರೆಯಾಗುತ್ತಿರಲಿಲ್ಲ ಎಂದು ಯಾರಿಗೂ ಕಾಣದೆ ಹೋಯ್ತು.

ಎರಡನೇ ಗೋಷ್ಠಿಗಾಗುವಾಗ ಸಮಯ ಪಾಲಕನ ಗಂಟೆ ಎಂಟರಿಂದ ಮೂರೇ ಮಿನಿಟಿಗೆ ಹೃಸ್ವಗೊಂಡಿತು! ಆದರೂ ಹೆಚ್ಚಿನ ಪ್ರಬಂಧಕಾರರು ತಮಗಿರುವ ಸಮಯದ ಮತ್ತು ಕಾರ್ಯದ ಮಿತಿಗಳನ್ನು ಮರೆತು ವೇದಿಕೆಯ ಮೇಲೆ ಇರುವ, ಇಲ್ಲದಿರುವ ಹತ್ತೆಂಟು `ಅವರೇ, ಇವರೇ’ಗಳನ್ನು ಆವಾಹಿಸಿ, ಕೊನೆಯಲ್ಲಿ ಸಂಘಟಕ ನೂರೆಂಟರ ಸ್ತುತಿ ಮುಗಿಸುವ ಭಟ್ಟಂಗಿಗಳಾದದ್ದು ಭಳಾ ವಿಚಿತ್ರಂ! (ಮತ್ತೆ ಇವನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸುವ, ಹುಟ್ಟಡಗಿಸುವ `ಔದಾರ್ಯ’ ಸಂಘಟಕರಲ್ಲೂ ಇರದಿದ್ದುದು ಇನ್ನೊಂದು ವಿಪರ್ಯಾಸ.) ಸರದಿ ಬಂದಾಗ ನನ್ನೊಳಗಿನ ಅಸಹನೆಯನ್ನು ಅದುಮಿಕೊಂಡು ಪ್ರಬಂಧ ಓದತೊಡಗಿದೆ. ಕಾಲನ ಕೈಗೊಂಬೆ ಮೂರು ಮಿನಿಟಿನ ಗಂಟೆ ಕೊಟ್ಟಾಗ ಸ್ಪಷ್ಟವಾಗಿ ಘೋಷಿಸಿದೆ, “ನಾನು ಮಂಗಳೂರಿನ ದೂರದಿಂದ (ಸುಮಾರು ನಾಲ್ಕುನೂರು ಕಿಮೀ) ರಾತ್ರಿ ನಿದ್ದೆಗೆಟ್ಟು ಬಂದು ಕಾದಿರುವುದು ನೀವೇ ಆಹ್ವಾನಿಸಿದಂತೆ ಹತ್ತು ಮಿನಿಟಿನ ಪ್ರಬಂಧ ಓದುವ ಭ್ರಮೆಗಾಗಿ. ಈಗ ಅದನ್ನು ಪೂರೈಸಿಯೇ ಸಿದ್ಧ”. ಮೊದಲ ಗೋಷ್ಠಿಯ ಸುಮಾರು ಹತ್ತು ಮಂದಿ, ನನ್ನ ಗೋಷ್ಠಿಯ ಮೊದಲ ಮೂರ್ನಾಲ್ಕು ಮಂದಿ (ಮತ್ತಿನ ಆರೇಳು ಮಂದಿಯೂ) - ಹಲವರು ಪ್ರಾಯದಲ್ಲಿ ಬಲು ಹಿರಿಯರಿದ್ದವರೂ ಈ ಗಂಟೆಗೆ ತಗ್ಗಿ ನಡೆದವರೇ. ನನ್ನ ನಡವಳಿಕೆ ಎಲ್ಲರಿಗೂ ಅನಿರೀಕ್ಷಿತ. ಆದರೂ ಅಧ್ಯಕ್ಷರಾದಿ ಎಲ್ಲರೂ ಸಂಭಾಳಿಸಿಕೊಂಡು “ಇಲ್ಲಿಲ್ಲ, ಮುಂದುವರಿಸಿ, ಪೂರ್ಣ ಓದಿ” ಎಂದರು! ಇನ್ನು ಪ್ರಶ್ನೋತ್ತರ? ಪ್ರಬಂಧ ಕೇಳಲೇ ತಾಳ್ಮೆಯುಳಿಯದಲ್ಲಿ ಚರ್ಚೆ ಎಲ್ಲಿ ಸಾಧ್ಯ? ಇದು ಎಲ್ಲರಿಗೂ ತಿಳಿದಂತಿತ್ತು. ಹಾಗಾಗಿ ನನ್ನ ಕಟು ಟೀಕೆ, ವ್ಯಂಗ್ಯಗಳಿಗೆ ಸಭೆಯಲ್ಲಿ ಸಂಚಲನ ಸ್ಪಷ್ಟವಿದ್ದರೂ (ಚಪ್ಪಾಳೆ, ನಗೆ ಇತ್ಯಾದಿ) ಚರ್ಚೆ ಶೂನ್ಯ. `ಪೂರ್ಣ ಪ್ರಬಂಧ ಪುಸ್ತಕದಲ್ಲಿ ಹೇಗೂ ಉಂಟಲ್ಲ’ ಎಂಬ ಹೇಳಿಕೆ ಸಂಘಟನೆಯ ಅದಕ್ಷತೆಗೆ ತಿಪ್ಪೆಸಾರಿಸುವ ಪ್ರಯತ್ನ. ಎಲ್ಲರೂ ಪ್ರಬಂಧಗಳನ್ನು ಪುಸ್ತಕಗಳಲ್ಲೇ ಓದಿಕೊಳ್ಳುವುದೇ ಆದರೆ ಎಲ್ಲೆಲ್ಲೆಂದಲೋ ಬಂದು ಅಷ್ಟು ಜನ ಸೇರುವುದು, ಊಟವಾಸ ಮಾಡುವುದು, ಎರಡು ದಿನ ಹುಡಿಹಾರಿಸುವುದು ಹಣಹಾಳು ಪ್ರಯತ್ನಗಳಾಗಿಯೇ ತೋರುವುದಿಲ್ಲವೇ?

 • ಯಾವುದೇ ಗೋಷ್ಠಿ, ಉದ್ಘಾಟನೆ ಸಮಾರೋಪಗಳಂತೆ ಔಪಚಾರಿಕ ಕೂಟವಲ್ಲ. ಹಾಗಾಗಿ ಆ ಅವಧಿಯಲ್ಲಿ ಗಣ್ಯಾಗಣ್ಯತೆಯನ್ನು ನಿರ್ಲಕ್ಷಿಸಿ ವಿಷಯಕ್ಕೆ ಪ್ರಸ್ತುತರಾದವರು ಮಾತ್ರ ವೇದಿಕೆಯ ಮೇಲೆ ಆಸೀನರಾಗುವುದು ಔಚಿತ್ಯ. ಆದರೆ ಇಲ್ಲಿ ಗೋಷ್ಠಿಗಳ ವೇದಿಕೆಯೂ ಸಮ್ಮೇಳನದ ಪದಾಧಿಕಾರಿಗಳ ಪ್ರದರ್ಶನಕ್ಕೆ ಪೀಠವಾಗಿತ್ತು. ಹಾಗೆ ಕುಳಿತವರಿಗೆ ನಿಜ ಕಲಾಪದ ಮೇಲಿನ ಲಕ್ಷ್ಯ ಅಷ್ಟಕ್ಕಷ್ಟೆ. ತಮ್ಮ `ಬಿಡುವಿಲ್ಲದ ಓಡಾಟ’ಗಳ ನಡುವಿನ ವಿರಾಮದ ನೆಲೆಯನ್ನಷ್ಟೆ  ವೇದಿಕೆಯಲ್ಲಿ ಕಂಡುಕೊಂಡಿದ್ದರು; ನನ್ನ ಗೋಷ್ಠಿಯ ಅವಧಿಯಲ್ಲಂತೂ ಹೆಚ್ಚಿನವರು ನಿಜ ಹಸಿವನ್ನು ತಣಿಸಲು ಭೋಜನಶಾಲೆಗೆ ಹೋಗಿದ್ದರು! ಇನ್ನು ಘನತೆವೆತ್ತ ಪ್ರಬಂಧಕಾರರು ಮೊದಲು ನಿರ್ವಾಹಕ ಹೆಸರು ಕೂಗಿದಾಗ ಶಾಲಾಬಾಲಕರಂತೆ ಸಭೆಯ ನಡುವಿನಿಂದ ಹಾಜರಿಯೊಪ್ಪಿಸಿ, ಸರದಿಯಲ್ಲಿ ವೇದಿಕೆಗೆ ಬಂದು ಕಂಠಶೋಷಣೆ ನಡೆಸುತ್ತ, ಗಂಟೆ ಹೊಡೆದಾಗ ಬಾಯ್ಮುಚ್ಚಿ ನಿರ್ಗಮಿಸಬೇಕಿತ್ತು. (ಮೊದಲ ಗೋಷ್ಠಿಯಲ್ಲಿ ಕೆಲವರಿಗೆ ವೇದಿಕೆಯ ಮೇಲೆ ಉಪಸ್ಥಿತರಿದ್ದ ಸರ್ವಾಧ್ಯಕ್ಷರಿಂದ ಸ್ಮರಣಿಕೆ ಸ್ವೀಕರಿಸುವ ಮತ್ತು ನಿರ್ವಾಹಕನಿಂದ ಒಂದು `ಕೃತಜ್ಞತೆ’ ಪಡೆಯುವ ಯೋಗವಾದರೂ ಇತ್ತು. ನಮ್ಮ ಅವಧಿಯಲ್ಲಿ ಅದಕ್ಕೂ ತತ್ವಾರ!)

 • ಗೋಷ್ಠಿಯ ನಿರ್ದೇಶಕನಾದವನು ಕೊನೆಯಲ್ಲಿ ಎಲ್ಲರ ನಾಲ್ನಾಲ್ಕು ವಾಕ್ಯ ಉದ್ಧರಿಸುವ ಜಾಣನಾದರೆ ಸಾಲದು. ಪಕ್ಕಾ ನ್ಯಾಯಾಧೀಶನಂತೆ ವಿಷಯ, ಸಮಯಗಳ ನಿರ್ವಹಣೆಯೊಂದಿಗೆ ಚರ್ಚೆಗೂ ಅವಕಾಶ ಕಲ್ಪಿಸಿ, ಕೊನೆಯಲ್ಲಿ ಕಲಾಪದ ನೆಲೆಯಲ್ಲಿ ತೀರ್ಪು ಕೊಡಬಲ್ಲ ಸಾಮರ್ಥ್ಯವಂತನಾಗಬೇಕು. ನಿರ್ವಾಹಕ, ಶುದ್ಧ ಸಮಯ ಹಾಳ ಬೇಕೇ ಇರಲಿಲ್ಲ.

ಮಹತ್ತ್ವದ ಸಮ್ಮೇಳನಕ್ಕೆ ಪ್ರಬಂಧಕಾರನಾಗುವ ಯೋಗ ಎಲ್ಲರಿಗೂ ಒದಗಲಾರದು. ಹೀಗೆ ಬಂದವನ ಯೋಗ್ಯತೆಯೇನು ಎಂಬುದನ್ನು ಒಂದೆರಡು ಮಾತುಗಳಲ್ಲಾದರೂ ಸಭೆಗೆ ಪರಿಚಯಿಸುವ ಕೆಲಸ ಅವಶ್ಯವಾಗಿ ನಿರ್ವಾಹಕನಿಂದ ಆಗಬೇಕಿತ್ತು. ವೈಯಕ್ತಿಕ ಸ್ನೇಹಾಚಾರದ ಮೇಲೆ ಎಲ್ಲೋ ಒಬ್ಬಿಬ್ಬರ ಬಗ್ಗೆ ಅದೂ ಯಾರ್ಯಾರದೋ ಮಾತುಗಳಲ್ಲಿ ಪರಿಚಯ ಬಂದಂತಾದುದು ಪರಿಪೂರ್ಣವೂ ಅಲ್ಲ. ಇಂದಿನ ಮಾಹಿತಿ ಸಮೃದ್ಧಿ ಸ್ಥಿತಿಯಲ್ಲಿ ಯಾರೂ ಯಾವುದೇ ವಿಷಯದ ಮೇಲೂ ಪ್ರಬಂಧಗಳನ್ನು ಮಂಡಿಸಿಬಿಡಬಹುದು, ರಮ್ಯ ಆದರ್ಶಗಳನ್ನು ಬಿಂಬಿಸಲೂ ಬಹುದು. ಹಾಗಾಗಿ ನಿರ್ವಾಹಕನಾದವನು ಪ್ರಬಂಧಕಾರರ ಪದವಿ ಬಿರುದುಗಳನ್ನಲ್ಲ, ಅನುಭವದ ಆಳವನ್ನು ಸಭೆಗೆ ಸೂಕ್ಷ್ಮವಾಗಿಯಾದರೂ ಪರಿಚಯಿಸಬೇಕಿತ್ತು. ಕನಿಷ್ಠ ಸಮ್ಮೇಳನದ ಪ್ರಬಂಧ ಸಂಕಲನದ ಅನುಬಂಧದಲ್ಲಾದರೂ ಸೇರಿಸಲೇಬೇಕಿತ್ತು. ಇದು ನಿಸ್ಸಂದೇಹವಾಗಿ ಸಮ್ಮೇಳನದ ಗಾಂಭೀರ್ಯವನ್ನು ಹೆಚ್ಚಿಸುತ್ತಿತ್ತು.

ಅಂದು ಬೆಳಿಗ್ಗೆ ಗೋಷ್ಠಿಯ ಕಛೇರಿಯಿಂದ ನನ್ನ ಪ್ರಬಂಧ ಸೇರಿಯೇ ಪ್ರಕಟವಾಗಿದ್ದ ಸಂಕಲನವನ್ನು ಕೇಳಿ ಪಡೆದೆ. ಗೋಷ್ಠಿ ಮುಗಿದ ಮೇಲೆ ನಾಚಿಕೆ ಬಿಟ್ಟು ಪ್ರಯಾಣವೆಚ್ಚ ಕೊಡುವ ವ್ಯವಸ್ಥೆಯುಂಟೇ ಎಂದು ಕಛೇರಿಯಲ್ಲಿ ವಿಚಾರಿಸಿದೆ. ಊಟ ಮಾಡಿ ಬಂದ ಮೇಲೆ, ಅಪರಾಹ್ನದ ವಿಶ್ರಾಂತಿ ಮುಗಿದ ಮೇಲೆ, ಸಮಾರೋಪದ ಸಭೆ ಮುಗಿದ ಮೇಲೂ ವಿವಿಧ ಬಿರುದಾಂಕಿತರ ಬಳಿ ಮತ್ತೆಮತ್ತೆ ಕೇಳಿದೆ - ಉತ್ತರ ಸಿಗಲಿಲ್ಲ. ರಾತ್ರಿಯ ವಿದಾಯ ಊಟದ ಮುನ್ನ ನಾನಿದನ್ನೇ ಘಟ್ಟಿಸಿ ಕೇಳಿದಾಗ ಒಬ್ಬರಿಗೆ  ಜ್ಞಾನೋದಯವಾಯ್ತು - `ಇಂವಾ ನಾವು ಪತ್ರ ಬರೆದು ಕರೆಸಿಕೊಂಡಾಂವ ಅದಾನೆ; ಅತಿಥಿ! (ಹುಚ್ಚರ ಸಂತಿಯೊಳಗ ಉಂಡು ಹೋಗಾಂವ ಅಲ್ಲ!)’. ಮತ್ತೆ ನನ್ನನ್ನೇ ವಿಚಾರಿಸಿ ಪ್ರಯಾಣವೆಚ್ಚವನ್ನು ಮಾತ್ರ ಕೊಟ್ಟರು. ಏನೋ ನೆನಪಾದಂತೆ ಅವರ ಸಹಾಯಕರು ಸಮ್ಮೇಳನದ ನೆನಪಿನ ಚೀಲ, ಪೆನ್ನು, ಬರೆಯೋ ಪುಸ್ತಕ ತಂದು ಕೊಟ್ಟರು. ರಾಜ್ಯಗ್ರಂಥಾಲಯ ಇಲಾಖೆ, ಕರ್ನಾಟಕ ವಿವಿನಿಲಯ ಮತ್ತು  ಶತಮಾನೋತ್ತರ ಹಿರಿಮೆಯಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ತಾವೇ ಗುರುತಿಸಿದ ವಿಷಯ ತಜ್ಞನನ್ನು ಗೌರವಿಸಲು ನಾನು ಹೇಳಿಕೊಡುವಂತಾದ್ದು ದುರಂತ. ಸಮರ್ಪಕವಾಗಿ ನಡೆಯದ ವಿಚಾರ ಮಂಥನದ ನೆಪದಲ್ಲಿ ಭರ್ಜರಿ ಉದ್ಘಾಟನೆ ಮತ್ತು ಸಮಾರೋಪ ನಡೆಸುವುದು ನಿರರ್ಥಕ ಹಣಹಾಳು. ಸಂಘಟಕರ ವೈಯಕ್ತಿಕ `ಸಾಲತೀರುವಳಿ’ಯಂತೆ ಧಾರಾಳ ಹರಿದ ಹಾರತುರಾಯಿ, ಸ್ಮರಣಿಕೆಗಳು, ಫಲಶಾಲು, ಸಮ್ಮಾನ ಮತ್ತು ದೊಡ್ಡ ದೊಡ್ಡ ಬ್ಯಾನರ್ ಮುನ್ನೆಲೆಯಲ್ಲಿ ಮಾಧ್ಯಮದ ಪ್ರಖರ ಬೆಳಕಿಗೆ ಹಲ್ಲುಗಿಂಜುವುದು ಮಕ್ಕಳಾಟಿಕೆ ಮಾನಸಿಕ ವ್ಯಾಧಿ. ಒಟ್ಟು ಸಮ್ಮೇಳನ ಗಂಭೀರ ವಿಷಯದ ಹೆಸರಿನಲ್ಲಿ ನಡೆದ ಸಾರ್ವಜನಿಕ ವಿನಿಯೋಗದ ಅಪವ್ಯಯ. ನಿಮಗೆ ಹೌದು ಅನ್ನಿಸುವುದಿಲ್ಲವೇ?

1 comment:

 1. Ganapathi Bhat K11 March, 2009 10:12

  Sir,
  This is what happens now. Every organisation wants to organise the conferences. But they do not organise it in a proper way. They have to respect the invited guests in a diginified manner. Sorry for what happend to you and may be for other invited guest paper presenters. This is also a lesson for us those who are working in this field. The comments from people like you will surely help us the organisers to conduct the conferences in a proper way in futrue.

  Ten years back i too had another experience at Hubli. The orgnsiers had promised a copy of the conference volume for all. But they had printed only five - ten volumes for the sake of releasing it on that occasion. After the conference they had not bothered to send the copy even after my several reminders.

  Hope the organisers in any place will take more care in organising the conferences which will help the society instead of wasting the money

  Thank you

  ReplyDelete