15 September 2008

ಪುಸ್ತಕ ಚೋರನೂ ಅಶೋಕನೆಂಬ ರಿಸಿಯೂ...

ಅದೊಂದು ಬೆಳಿಗ್ಗೆ ನನ್ನ ಪುಸ್ತಕ ಮಳಿಗೆಯಲ್ಲಿ ಒಮ್ಮೆಲೆ ನಾಲ್ಕೈದು ಜನ, ಅದರಲ್ಲೂ ಕೆಲವು ಎರಡು ಮೂರು ಜನರ ಗುಂಪುಗಳು ನನ್ನ ಮೇಜನ್ನು ಬಿಲ್ಲಿಗಾಗಿ ಮುತ್ತಿಗೆ ಹಾಕಿದ್ದವು. ಇವುಗಳ ಎಡೆಯಲ್ಲಿ ನನ್ನಿಂದಲೇ ಬಲಕ್ಕೆ ಅಂದರೆ ಶೋಕೇಸಿನ ಕನ್ನಡಿಯ ಆಚೆಗೆ ಏನೋ ಅಸಹಜ ಚಲನೆ ಕಂಡಂತಾಗಿ ತಿರುಗಿ ನೋಡಿದೆ. ಎಂದಿನ ಪರಿಚಿತ ಮುಖ - ಕಪ್ಪು ಛಾಯೆಯ ಕನ್ನಡಕ ಹಾಕಿದ ಹರಕು ಗಡ್ಡದವ - ಗಡ್ಡು, ಎಂದಿಟ್ಟುಕೊಳ್ಳಿ. ಇಲ್ಲೇ ನಮ್ಮ ನೆರೆಕರೆಯಲ್ಲೇ ಎಲ್ಲೋ ಕೆಲಸ ಮಾಡಿಕೊಂಡು, ನನಗೆ ಎದುರು ಸಿಕ್ಕಾಗೆಲ್ಲಾ ನಮಸ್ಕಾರ ಕೊಟ್ಟುಕೊಂಡು, ಆಗೀಗ ಅಂಗಡಿಗೂ ನುಗ್ಗಿಕೊಂಡಿದ್ದವ ವಿಚಿತ್ರ ಭಂಗಿಯಲ್ಲಿದ್ದ. ಆತನ ಕೈಗೆಲ್ಲಿಂದ ಬಂತೋ ಗೊತ್ತಿಲ್ಲ, health in your hands ಪುಸ್ತಕದ ಪುಟ ತಿರುವುತ್ತಿದ್ದ. ನಾನು ತಿರುಗಿ ನೋಡಿದ್ದು ಗಮನಿಸಿದ ಮೇಲೆ ಆತ ಹಾಗೇ ಬಗ್ಗಿ ಬಾಗಿಲ ಕಂಡಿಯಲ್ಲೇ ಕೈಚಾಚಿ ಪುಸ್ತಕವನ್ನು ಶೋಕೇಸಿನ ಹಲಗೆಯಲ್ಲಿ ಇಟ್ಟು, ಸೊಂಯ್ಕ್ ಅಂತ ಅಂಗಡಿಯ ಒಳಗೇ ಹೋದ. ನಾನು ಮತ್ತೆ ನಿರ್ಯೋಚನೆಯಿಂದ ಕೆಲಸದಲ್ಲಿ ಮುಂದುವರಿದೆ.


ಆದರೆ ಐದೇ ಮಿನಿಟಿನಲ್ಲಿ ಶಾಂತಾರಾಮ (ಆಂಗಡಿ ಸಹಾಯಕ) ಗಡ್ಡುವನ್ನು ನನ್ನಲ್ಲಿಗೆ ನೂಕಿಕೊಂಡು ಬಂದಂತೆ ತಂದ. ಶೆಲ್ಫ್ ಸಾಲಿನ ಇನ್ನೊಂದು ಬದಿಯಿಂದ ಎರಡನೇ ಸಹಾಯಕ - ಅಫ್ಜಲ್, ತುರ್ತು ಸನ್ನಿವೇಶ ನಿಭಾವಣೆಗೆ ಸಜ್ಜಾದಂತೆ ಇಣುಕುತ್ತ ನಿಂತ. ಗಡ್ಡು ಶರಟಿನ ಗುಂಡಿ ಹಾಕಿಕೊಳ್ತಾ ಇದ್ದ, ಶಾಂತಾರಾಮನ ಕೈಯಲ್ಲಿ ಎರಡು ಪುಸ್ತಕ ಇತ್ತು. ನಾನು ವ್ಯವಹರಿಸುತ್ತಿದ್ದ ಜನರ ಲೆಕ್ಕ ಮುಗಿಸಿ ಏನ್ಕಥೇಂತ ಶಾಂತಾರಾಮನನ್ನು ಹುಬ್ಬಿನಲ್ಲೇ ಪ್ರಶ್ನಿಸಿದೆ. "ನೋಡಿ!! ಎರಡು ಪುಸ್ತಕ ಅಂಗಿಯ ಒಳಗೆ ಹಾಕಿದ್ದ. ಯಾಕೆ ಕದ್ದದ್ದೂಂತ ಕೇಳಿದರೆ ನಮ್ಮ ದೇವರು ಕೃಷ್ಣನೂ ಕಳ್ಳನಲ್ಲವೇ ಅಂತಾನೆ." ನನಗೂ ಸಿಟ್ಟೇರಿ "ಯಾಕೆ ಕದ್ದದ್ದು..." ಎನ್ನುವುದರೊಳಗೆ ಆತ ತಣ್ಣಗೆ "ಇಲ್ಲಾ ಇವೆರಡಕ್ಕೆ ನಾನು ದುಡ್ಡು ಕೊಡಲಿಲ್ಲ" ಎಂದ. ನಾನು ಅವನ ನಿರುಮ್ಮಳ ಭಾವಕ್ಕೆ ಮತ್ತಷ್ಟು ರೇಗಿ "ಅಂದ್ರೆ ಕದ್ದದ್ದು ಎಂದೇ ಅರ್ಥ. ಪರಿಚಯದವರು ಎಂದು ನಿರ್ಯೋಚನೆಯಿಂದ ಒಳಗೆ ಬಿಟ್ಟದ್ದಕ್ಕೆ ಈ ಹಿಂದೆಯೂ ಎಷ್ಟು ಕದ್ದಿದ್ದೀರೋ..." ಮತ್ತದೇ ನಿರುದ್ವಿಗ್ನತೆಯಲ್ಲಿ "ಈಗ ನನ್ನಲ್ಲಿ ಹಣವಿಲ್ಲ. ನನಗೆ ಆ ಪುಸ್ತಕ ಬೇಕು ಅಂತ ಅನಿಸಿತು. ಇನ್ನೊಮ್ಮೆ ಬರ್ತೇನೆ" ಎಂದವನೇ ನಮ್ಮ ಪ್ರತಿಕ್ರಿಯೆ ಕಾಯದೇ ಹೊರಗೆ ನಡೆದೇಬಿಟ್ಟ!


ಸಂದ ಮೂರು ದಶಕಗಳಿಗೂ ಮೀರಿದ ಅನುಭವದಲ್ಲಿ ಅಸಂಖ್ಯ ಕಳ್ಳರನ್ನು ನಾವು ಹಿಡಿದಿದ್ದೇವೆ. ನಾಚಿಗೆಗೆಟ್ಟ ವೈದ್ಯ, ಭಂಡ ಪುಢಾರಿ, ಹೊರಲಾಗದಷ್ಟು ಹೇರಿಕೊಂಡ ಕಾಲೇಜುರಮಣಿ, ನಮ್ಮ ಕಾಲು ಕಟ್ಟುವ, ನೂರೆಂಟು ಬಾರಿ ಕ್ಷಮೆ ಕೋರುತ್ತಾ ತಮ್ಮನ್ನೇ ಹಳಿದುಕೊಳ್ಳುವ, ಹಿಡಿದ ಕೈಕೊಸರಿಕೊಂಡು ಓಡಿ ದಾರಿಹೋಕರ ಕೈಗೆ ಸಿಕ್ಕಿ ಸತ್ತುಬದುಕಿದ ಹಲವರನ್ನೆಲ್ಲ (ದೈಹಿಕ ದಂಡನೆ ಕೊಡದಂತೆ ಮನೋನಿಗ್ರಹ ಬಲು ಕಷ್ಟದಿಂದ ತಂದುಕೊಂಡು) ಸಾಕಷ್ಟು ಮಾತಿನ ದಂಡನೆಗೊಳಪಡಿಸಿ ಮತ್ತಿತ್ತ ಸುಳಿಯದಂತೆ ನಿವಾರಿಸಿಕೊಂಡಿದ್ದೇವೆ. ಆದರೆ ಇಂತದ್ದು ಇದೇ ಮೊದಲು! ಅವನ ಕಪ್ಪು ಕನ್ನಡಕ, ಹರಕು ಗಡ್ಡ, ಸಿಕ್ಕು ಬಿದ್ದಲ್ಲೂ ಮಾಸದ ಕಿರು ನಗೆ ಒಮ್ಮೆಗೆ ನನಗೆ ಹಂಗಿಸಲು ವಸ್ತುವೇನೋ ಆಯ್ತು. ಆದರೆ ಆತ ತನಗೆ ಅಧಿಕಾರವಿಲ್ಲದೆಯೂ (ಹಣವಿಲ್ಲ) ಪುಸ್ತಕ ದಕ್ಕಿಸಿಕೊಳ್ಳಬೇಕಿತ್ತು ಎಂಬ ಭಾವ ಉಳಿಸಿಕೊಂಡೇ ನಮ್ಮೆದುರಿನಿಂದ ಮಾಯವಾಗಿದ್ದ. `ಒಬ್ಬ ದೇವರು - ಕೃಷ್ಣ, ಕಳ್ಳತನ ಮಾಡೆಂದರೆ ಇನ್ನೊಬ್ಬ ದೇವರು - (ಶಾಂತಾ-) ರಾಮ ದಂಡಿಸ್ತಾನೇಂತ ಹೇಳಿ ನಾಲ್ಕು ಬಾರಿಸಬೇಕಿತ್ತು (ತುಳುವಿನಲ್ಲಿ - ಕ್ರಿಷ್ಣೆ ಕಳ್ವೆಯಾಂಟ ರಾಮೆ ಕೆರ್ಪೆ)'  ಎಂಬೆಲ್ಲಾ ನಮ್ಮ ಮಾತಿನ ವೈಭವವನ್ನು ನಿರಸ್ತ್ರಗೊಳಿಸಿ ಕಾಣೆಯಾದ. ಕಳ್ಳನದು ಧಿಮಾಕೇ ಮಾನಸಿಕ ಅವ್ಯವಸ್ಥೆಯೇ ಎಂಬ ಜಗಿರಬ್ಬರ್ (chewing gum) ಇನ್ನೆನು ಉಗಿಯುವ ಹಂತಕ್ಕೆ ಬರುವಾಗ...

ಅಂದೇ ಸಂಜೆ ಪುನರಾಯಾನ್ ಚೋರ ಮಹಾಶಯನ್. ಖಾಕೀ ರಟ್ಟು ಹಾಕಿಕೊಂಡಿದ್ದ ಎರಡು ಸಾಕಷ್ಟು ದೊಡ್ಡ ಪುಸ್ತಕಗಳನ್ನು ತಂದಿದ್ದ. ರಟ್ಟು ಕಳಚಿ ಎರಡನ್ನೂ ನನ್ನ ಮೇಜಿನ ಮೇಲಿಟ್ಟು, ಜೊತೆಗೆ ಐದು ರೂಪಾಯಿಯಷ್ಟು ನಾಣ್ಯಗಳನ್ನೂ ಇಟ್ಟ.
"ಏನಿದು" ನನ್ನ ಪ್ರಶ್ನೆ.
"ಇಲ್ಲಿಂದ ಒಯ್ದಿದ್ದೆ, ದುಡ್ಡು ಕೊಟ್ಟಿರಲಿಲ್ಲ." ದಂಡವೆಂದೋ ಬಾಡಿಗೆಯೆಂದೋ ಚಿಲ್ಲರೆ ಕೊಟ್ಟ ಭಾವ. ಸಿಟ್ಟು ಮಾಡುವ ಅಧಿಕಾರವೇ ನನ್ನಲ್ಲಿರಲಿಲ್ಲ!
"ಮತ್ತೆ ಕದ್ದದ್ದು ಎನ್ನಿ. ಇನ್ನೆಷ್ಟು ಹೀಗೇ..." ಎಂದು ಅಡಿಗೆ ಬಿದ್ದರೂ ಮೀಸೆ ಮೇಲುಳಿಸಿಕೊಳ್ಳುವ ಮಾತೆತ್ತಿದೆ.
"ಇಲ್ಲ, ರಾಧಾಕೃಷ್ಣನ್ ಉಪನಿಷತ್ ಒಮ್ಮೆ ಹೀಗೇ ತೆಗೆದುಕೊಂಡು ಹೋಗಿದ್ದೆ. ಅದು ತುಂಬಾ costly, ನನಗೆ ಅರ್ಥವೂ ಆಗುವ ಹಾಗಿರಲಿಲ್ಲ. ಮತ್ತೊಮ್ಮೆ ಬಂದಾಗ ತಂದು ಇಟ್ಟುಬಿಟ್ಟೆ." ನನ್ನಿಬ್ಬರೂ `ಪತ್ತೇದಾರಿಗಳಿಗೆ' ಉಚ್ಛ್ರಾಯದಲ್ಲಿದ್ದ ಗುರು ನೀಚಕ್ಕೆ ಬಿದ್ದ ಅನುಭವ. ಗಡ್ಡು ಮುಂದುವರಿದ "ನೀವು ನನ್ನ ನಂಬಬೇಕೂಂತ ಇಲ್ಲ ಆದ್ರೂ ಹೇಳ್ತೇನೆ. ಒಮ್ಮೆ ಬ್ಯಾಂಕಿಗೆ ಹದಿನೈದು ಸಾವಿರ ಡ್ರಾ ಮಾಡಲು ಹೋಗಿದ್ದೆ. ಕ್ಯಾಶಿಯರ್ ನೂರು ರೂಪಾಯಿಗಳ ನೋಟು ಎಣಿಸಿ ಕೊಟ್ಟ. ನಾನು ಅಷ್ಟು ಪ್ಯಾಂಟ್ ಕಿಸೆಗೆ ಜಾಸ್ತಿಯಾಗುತ್ತೆ ಎಂದು ಹತ್ತು ಸಾವಿರ ವಾಪಾಸು ಕೊಟ್ಟೆ. ಆತ `ಮೊದಲೇ ಹೇಳಬಾರದೇ' ಎಂದು ರೇಗಿಕೊಂಡು ಅಷ್ಟನ್ನು ಹಾಗೆ ಒಳಗೆ ಹಾಕಿ ಮತ್ತೆ ಹದಿನೈದಕ್ಕೆ ಐನೂರರ ನೋಟು ಎಣಿಸಿ ಕೊಟ್ಟ! ನಾನು ಐದು ಸಾವಿರ ಮರಳಿಸಲು ತೊಡಗುವಾಗ ಆತ ಮತ್ತಷ್ಟು ಸಿಡುಕಿನಲ್ಲಿ `ಇಲ್ಲ, ಇನ್ನು ಕೊಡಲ್ಲ' ಎಂದ. ನಾನು ಅವನಿಗೆ ಸಮಾಧಾನದಲ್ಲಿ ವಿವರಿಸಿ ಐದು ಸಾವಿರ ಮರಳಿಸಿ ಬಂದೆ."


ನನ್ನಲ್ಲಿ ಮುಂದುವರಿಸಲು ಮಾತಿರಲಿಲ್ಲ. ಆದರೂ ನ್ಯಾಯ ನಮ್ಮದೇ ಎಂಬ ತೋರಿಕೆಯಲ್ಲಿ "ಅದೆಲ್ಲಾ ನನಗೆ ಬೇಡ. ಇನ್ನೊಂದು ಸಲ ನೀವು ನನ್ನಂಗಡಿಯೊಳಗೆ ಬರುವುದು ಬೇಡ. ಈ ಪುಡಿಗಾಸು ಯಾಕೆ, ತೆಗೊಂಡು ಹೋಗಿ..." ಎನ್ನುತ್ತಿದ್ದಂತೇ ಗಡ್ಡು ಚಿಲ್ಲರೆಯನ್ನು ಹಾಗೇ ಕೈಯಲ್ಲಿ ಮತ್ತೆ ನನ್ನತ್ತ ನೂಕಿ "ಇದು ಇರಲಿ. ಯಾಕೇಂತ ಇನ್ನೊಮ್ಮೆ ಹೇಳ್ತೇನೆ" ಎಂದು ಮತ್ತೆ ಬೀಸುಗಾಲು ಹಾಕಿ ಮಾಯವಾದ!

11 comments:

 1. ಇಂಥ ಚಿಟ್ಟೆಕಥೆಗಳನ್ನು, ಪುಸ್ತಕ ಪ್ರಚಾರದ ಅನುಭವಗಳನ್ನು ಆಗಾಗ್ಗೆ ಹೇಳ್ತಿದ್ರೆ ಜನಕ್ಕೆ ಕನಿಷ್ಟ ಪುಸ್ತಕ ಪ್ರೀತಿ ಇದೆ ಅಂತಲಾದ್ರೂ ತಿಳಿಯುತ್ತೆ. ಚೆನ್ನಾಗಿದೆ ಬರಹ. ಅರ್ಧಕ್ಕೇ ನಿಂತಂತಿದೆ? ಮುಂದುವರೆಸಿರಿ,ಸರ್.
  ಬೇದ್ರೆ ಮಂಜುನಾಥ

  ReplyDelete
 2. ಅಶೋಕವರ್ಧನ16 September, 2008 11:51

  ಇದು ಕಥೆಯಲ್ಲ ಸಾರ್! ಮತ್ತೆ ನಿಮಗ್ಗೊತ್ತು ಜೀವನಕಥೆಗೆ ಮುಕ್ತಾಯ ಒಂದೇ! ಗಡ್ಡು ಮತ್ತೆ ಬಂದರೆ, ಹೇಳುವಂತದ್ದು ಇದ್ದರೆ ಅವಶ್ಯ ಬರೀತೇನೆ.
  ಅಶೋಕವರ್ಧನ

  ReplyDelete
 3. ನಾನು ಇನ್ನೊಮ್ಮೆ ಬಂದಾಗ ಈ ಗಡ್ಡುವನ್ನು ಭೇಟಿ ಮಾಡಿಸಿ. ಯಾರಿಗೆ ಗೊತ್ತು, ಈತ ನನ್ನ ಮನೋವೈಜ್ಞಾನಿಕ ಕತೆಗೆ ವಸ್ತುವಾದರೂ ಆಗಬಹುದು !
  - ಹರೀಶ್ ಕೇರ

  ReplyDelete
 4. idonthara manovaignyanika vishayave..kaddaroo kadde annisikolladantha ondu reethiya manassina sambhavitha oppikolluvike...idarinda nimma Gudduvige thaanu kalla endu guilty yaguva prameyave illa...ee Guddu saamanya davanalla..innomme bandaaga chennagi maatanadisi.

  :)

  ReplyDelete
 5. ಚೆನ್ನಾಗಿದೆ ಬರಹ, ಗಡ್ಡು ಪುಸ್ತಕ ಕದ್ದದ್ದೂ ನ್ಯಾಯಯುತವಾಗಿಯೇ ಇದೆ ಅನ್ಸತ್ತೆ ನಂಗೆ.

  ReplyDelete
 6. ಅಶೋಕವರ್ಧನ30 September, 2008 22:34

  ಕೀಟಲೆ ಕಿಟ್ಟೀ ಅಂಗಡಿಯ ಗಲ್ಲಾವನ್ನು ನಾನು ಮನೋ ಚಿಕಿತ್ಸಕನ ನೆಲೆಯಲ್ಲಿ ನಿರ್ವಹಿಸುವುದು ಕಷ್ಟವಾಗುತ್ತದೆ. ಬೇದ್ರೆ ಹೇಳಿದ ಹಾಗೆ ಸೃಜನಶೀಲ ತುಣುಕಾಗಿದ್ರೆ, ಕೇರ ಬಯಸಿದಂತೆ ಇನ್ಯಾವುದೋ ಉದ್ದೇಶಕ್ಕೆ ದುಡಿಸಿಕೊಳ್ಳಬಹುದಾದ ಅವಕಾಶವಾದ್ರೆ ಎಲ್ಲಾ ಸರಿ, ನನ್ನದಲ್ಲ. ನನ್ನದು ಕೇವಲ ಪೋಲಿಸ್ ಪಾತ್ರ, ಇದು ಕೇವಲ FIR

  ReplyDelete
 7. ಗಡ್ಡು ಮತ್ತೆ ಯವಾಗ್ ಬರ್‍ತಾನೆ? ಏನ್ ಹೇಳಬಹುದು?

  ReplyDelete
 8. pusthaka choranu tammaa manasalli nenapu ullisi hodanu. Pusthaka krayakke padedavanu ?

  ReplyDelete
 9. PRASANNA KUMAR K23 October, 2008 10:52

  It’s a good article. As I read your “PUSTAKA MARATA & HORATA”, I suggest you that you must add this to the continued version of above captioned book when you reach another milestone. The pressure a man face in the life may makes him to involve value less activity. Certain disciplined punch can repair them!

  ReplyDelete
 10. I remember that we could borrow books[technical]from a book stores in Bangalore, makenotes and return by paying 10-15% of the amount.
  Paapa, ee gaddu na stores inda odisabedi...may be you should give him apart time opportunity to serve in the stores.

  ReplyDelete
 11. Sir,
  one saying is there " If you want steal,steal the knowledge.But this person stolen the book, but we have to admire his love for books, but thief is thief...

  ReplyDelete