17 November 2021

ಆಷ್ಟಭುಜೆ ರಮಾದೇವಿಗೆ ನಮನ


ಚಿತ್ರ ಕೃಪೆ: ಅಭಿಜಿತ್ ಎಪಿಸಿ

"ದಿಬ್ಬಣ ವೆಂಕಪ್ಪು ಮನೆಗೆ ಬಂದಿದೆ" ಎಂದು ಕೇಳಿದಾಗ, ಹೊಸ ಚಡ್ಡಿ ಎಳೆದುಕೊಂಡು ಅರ್ಧ ಕಿಮೀ ದೂರದ ತೋಡಿನಾಚೆ ದಂಡೆಗೆ ಓಡಿದ ಐದರ ಹುಡುಗ ನಾನು. ಅಜ್ಜ - ಎಪಿ ಸುಬ್ಬಯ್ಯ, ಸಕಾಲದಲ್ಲೇ ಹಿರೀಮಗ - ತಿಮ್ಮಪ್ಪಯ್ಯನಿಗೆ ಮದುವೆಯನ್ನೇನೋ ಮಾಡಿದ್ದರು. ಆದರೆ ದುರದೃಷ್ಟಕ್ಕೆ ಪತ್ನಿ ಗಂಗಮ್ಮ, ಚೊಚ್ಚಲ ಹೆರಿಗೆಯಲ್ಲಿ ಮಗುವನ್ನಿತ್ತು (ಸುಬ್ಬಯ್ಯ ದ್ವಿತೀಯ), ಬಾಣಂತಿಸನ್ನಿಗೆ ಪ್ರಾಣ ನೀಗಿದ್ದರು. ಇಂಥ ಸ್ಥಿತಿಯಲ್ಲಿ ೨೯ರ ತರುಣನಿಗೆ, ೧೬ರ ನವವಧುವಾಗಿ ಬಂದವರು (೧೯೫೭) ವರ್ಮುಡಿಯ ರಮಾದೇವಿ. ತಿಮ್ಮಪ್ಪಯ್ಯ - ನನಗೆ ಸೋದರಮಾವ, ಹುಟ್ಟಿದಾರಭ್ಯ ರೂಢಿಸಿದಂತೆ ಏಕವಚನದ ಅಣ್ಣ. ಅದೇ ರೂಢಿಯ ಮುಂದುವರಿಕೆಯಾಗಿ ರಮಾದೇವಿ ಅತ್ತಿಗೆಯಾದರೂ ಬಂಧ ಬಹುವಚನದ್ದು! ಆದರೆ ಸಂದ ಆರು ದಶಕಗಳಿಗೂ ಮಿಕ್ಕ ಕಾಲದಲ್ಲಿ ಪರಸ್ಪರ ಪ್ರೀತ್ಯಾದರಗಳು ಗಾಢವೇ ಇದ್ದವು ಎನ್ನುವ ಅರಿವು ಮೂಡಿದ್ದು ಮಾತ್ರ ತೀರಾ ಈಚೆಗೆ!

07 August 2021

‘ನಕ್ಷೆ’ತ್ರಿಕನ ವಿಷಾದದ ಎಳೆ


ಈಚೆಗೆ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್, ನನ್ನ ಗಣಪತಿ ಗುಹಾ ನಕ್ಷೆ (೧೯೯೪) ನೋಡಿ ಮೋಹಗೊಂಡು, ವಿವರ ವಿಚಾರಿಸಿದರು. ಸೀಮಿತ ಮುದ್ರಿತ ನಕಾಶೆಗಳಿದ್ದ ಕಾಲದ ಅಗತ್ಯಕ್ಕೆ ನಾನು ಬಿಡಿಸಿದ ೯೬ ನಕ್ಷೆಗಳ ಕುರಿತು ಒಂದೆರಡು ಮಾತು ಹೇಳಿದೆ. ಆತ ಎಲ್ಲವನ್ನು ಪುಸ್ತಕವಾಗಿ ಪ್ರಕಟಿಸಲು ಒತ್ತಾಯಿಸಿದರು. ನಾನೋ ‘ಇದು ಮುದ್ರಿತ ಪುಸ್ತಕಗಳ ಕಾಲವೇ ಅಲ್ಲ’ ಎಂದು ಘೋಷಿಸಿ ಇದ್ದ ಪುಸ್ತಕ ಪ್ರಕಾಶನ, ಅಂಗಡಿಗಳನ್ನು ಮುಚ್ಚಿದವ! "ಅದೆಲ್ಲ ಯಾಕೆ? ಕೇವಲ ನನ್ನ ಆವಶ್ಯಕತೆಗೆ ಮಾಡಿಕೊಂಡ ಈ ನಕ್ಷೆಗಳು ಯಾರಿಗಾದರೂ ಉಪಯೋಗವಾಗುವುದಿದ್ದರೆ ಇಲ್ಲೇ ಹಾಕಿಬಿಡುತ್ತೇನೆ" ಎಂದೆ. ಈಗ ಫೇಸ್ ಬುಕ್ಕಿನಲ್ಲಿ ಸರಣಿಯಲ್ಲಿ ಪ್ರಕಟಿಸಿ ಮುಗಿಸಿದ್ದೇನೆ. ನಕ್ಷೆಗಳನ್ನು ಸ್ಕ್ಯಾನ್ ಮಾಡಿ, ಪ್ರವೇಶಿಕೆಯ ಎರಡು ಮಾತು, ಲೇಖನವಿದ್ದರೆ ಸೇತು ಸೇರಿಸುತ್ತ ಬಂದೆ. ಈ ಕ್ರಿಯೆ ನನ್ನನ್ನು ಮೂವತ್ತಾರು ವರ್ಷಗಳ ಹಿಂದಿನಿಂದ (೧೯೮೫) ತೊಡಗಿ, ಇಪ್ಪತ್ತೊಂದು ವರ್ಷಗಳ ಹಿಂದಿನವರೆಗಿನ (೨೦೦೦) ಪರಿಸರ ಮತ್ತು ಮನೋಸ್ಥಿತಿಗೆ ಒಯ್ದಿತ್ತು. ಪರಿಣಾಮವಾಗಿ, ನಕ್ಷೆಗಳನ್ನು ಮೀರಿದ ಕೆಲವು ಮಾತುಗಳು.

03 July 2021

ಗುಹಾ ನೆನಪುಗಳು, ಇನ್ನಷ್ಟು


ಮಂಗಳೂರಿನಲ್ಲಿ ನಾನು ವೃತ್ತಿಪರನಾಗಿ (ಪುಸ್ತಕೋದ್ಯಮಿ - ೧೯೭೫) ನೆಲೆಸಿದಂದಿನಿಂದ ‘ಸಾಹಸ’ದ ಹೊದಿಕೆಯಲ್ಲಿ ಪ್ರಾಕೃತಿಕ ಅನ್ವೇಷಣೆಯನ್ನು (ಬೆಟ್ಟ, ಕಾಡು, ಜಲಪಾತ ಇತ್ಯಾದಿ ಸೇರಿದಂತೆ) ಗಟ್ಟಿ ಹವ್ಯಾಸವಾಗಿ ರೂಢಿಸಿಕೊಂಡೆ. ಅದರಲ್ಲಿ ಗಳಿಸಿದ ಸಂತೋಷ ಇತರರಿಗೂ ಪ್ರೇರಕವಾಗಬೇಕೆಂಬ ಆಸೆಯಲ್ಲಿ ಯುಕ್ತ ಪ್ರಚಾರಕ್ಕೂ ಇಳಿದೆ. ಆ ದಿನಗಳಲ್ಲಿ ಇದ್ದ ಬಹುಶಕ್ತ ಮಾಧ್ಯಮ ಮುದ್ರಣದ್ದು. ಅದಾದರೂ ನನ್ನ ಅಷ್ಟೇನೂ ಜನಪ್ರಿಯವಲ್ಲದ ವಿಷಯಕ್ಕೆ, ಶಬ್ದಗಳ ಮಿತಿಯನ್ನೂ ಚಿತ್ರಗಳಲ್ಲಿ ಗುಣಮಟ್ಟದ ಮಡಿಯನ್ನೂ ತೋರುತ್ತಿದ್ದವು.

23 June 2021

ದುಗ್ಗುಳಮಾಟೆ ಮತ್ತಿತರ ಮಣಿಪಾಲ ಗುಹೆಗಳು


ಉಡುಪಿ ಇಂದ್ರಾಳಿ ಸಮೀಪದ ಜಗನ್ನಾಥರಿಗೆ (ವೃತ್ತಿತಃ ಏನೋ ವರ್ಕ್ ಶಾಪ್ ಮಾಲಿಕ) ಮೂಡಬಿದ್ರೆಯ ಸೋನ್ಸರೊಂದಿಗೆ ಒಳ್ಳೆಯ ಸ್ನೇಹಾಚಾರವಿತ್ತು. ಅವರಂತೆ ಇವರೂ ಹವ್ಯಾಸೀ ಡೌಸರ್. ಜಗನ್ನಾಥರ ಇನ್ನೋರ್ವ ಗೆಳೆಯ ಕೃಷ್ಣ ಭಟ್. ಭಟ್ಟರು ಜಿಲ್ಲೆಗೆ ಬರುತ್ತಿದ್ದ ವಿದೇಶೀಯರೂ ಸೇರಿದಂತೆ ಜನಪದ ತಜ್ಞರಿಗೆ ಕ್ಷೇತ್ರಕಾರ್ಯದಲ್ಲಿ ಸಹಾಯಕನಾಗಿ, ದುಭಾಷಿಯಾಗಿ ಕೆಲಸ ಮಾಡುತ್ತ ಅಪಾರ ಅನುಭವ ಗಳಿಸಿದ್ದವರು. ಸಹಜವಾಗಿ ಅವರಿಗೂ ನನ್ನಲ್ಲಿ ಒಳ್ಳೆಯ ಸ್ನೇಹಾಚಾರವಿತ್ತು. ಜಗನ್ನಾಥರ ಆಸಕ್ತಿ ಸಹಸ್ರದಲ್ಲಿ ಧ್ಯಾನ, ಪಿರಮಿಡ್ ಶಕ್ತಿ, ಅಂಜನ, ಆರ, ಜೀವಚೈತನ್ಯ, ರೇಕಿ, ನಿಧಿಶೋಧ ಮುಂತಾದ ಅಲೌಕಿಕ, ಅಧ್ಯಾತ್ಮಿಕ ತಂತ್ರಗಳೂ ಇದ್ದವು. ಜಗನ್ನಾಥರಿಗೆ ಇವಕ್ಕೆ ಬೇಕಾದ ಪುಸ್ತಕಗಳಲ್ಲಿ ಹಲವು ಕಾಲಕಾಲಕ್ಕೆ ನನ್ನಲ್ಲೇನೋ ಖರೀದಿಗೆ ಸಿಗುತ್ತಿತ್ತು. ಆದರೆ ಅವನ್ನು ಗಟ್ಟಿಯಾಗಿ ಓದಿ ಹೇಳುವ ಮತ್ತು ಅರ್ಥೈಸಿಕೊಡುವ ಜವಾಬ್ದಾರಿ ಕೃಷ್ಣಭಟ್ಟರದ್ದಾಗಿತ್ತು.

18 June 2021

ಅಂಬರೀಷ ಗುಹೆ


೧೯೮೦ರ ದಶಕದಲ್ಲಿ ಬುಲ್ಡೋಜರ್ ಮತ್ತು ತೂತು ಭಾವಿಯ ಕ್ರಾಂತಿ ಚುರುಕಾಗಿತ್ತು. ಭೂಗರ್ಭದ ಜಲನಿಧಿ ಸರ್ವವ್ಯಾಪಿ ಮತ್ತು ಅಕ್ಷಯ ಎನ್ನುವ ಹುಚ್ಚಿನಲ್ಲಿ ಕೃಷಿಕರು ಎಲ್ಲೆಂದರಲ್ಲಿ ಗುಡ್ಡೆಗಳನ್ನು ತಟ್ಟಾಗಿಸುತ್ತ ತೋಟ ವಿಸ್ತರಣೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ಭೂಗರ್ಭ ಶಾಸ್ತ್ರಜ್ಞರು, ಮೂಲನೆಲದ ರಚನೆ ನೋಡಿ, ಕೆಲವು ಯಂತ್ರೋಪಕರಣಗಳ ಪ್ರಯೋಗದಿಂದ (ವೆಚ್ಚವೂ ಸಾಕಷ್ಟು ಇದ್ದಿರಬೇಕು), ಅಸ್ಪಷ್ಟ ಜಲಮೂಲಗಳನ್ನು ಗುರುತಿಸಿಕೊಡುತ್ತಿದ್ದರು. ಆದರೆ ‘ವಿಜ್ಞಾನದ ವಿನಯ’ಕ್ಕೆ ಒಗ್ಗಿಕೊಳ್ಳದ ಮತ್ತು ಕೃಷಿಯ ಹೆಸರಿನಲ್ಲಿ ವಾಣಿಜ್ಯ ಬೆಳೆಯ ಗೀಳು ಹಿಡಿಸಿಕೊಂಡ ಜನರಿಗೆ ಅಷ್ಟು ಸಾಲದಾಯ್ತು. ಆಗ ವಾಸ್ತುಬ್ರಹ್ಮರು,