02 February 2021

ಬಿಸಿಲೆಯಲ್ಲಿ ಹೊಸ ಬೆಳಕು - ಕಪ್ಪೆಗೂಡು


ಸ್ವಾಗತ:

"ನಾನು ಅಶೋಕವರ್ಧನ, ಎಲ್ಲರಿಗೂ ನಮಸ್ಕಾರ. ನನ್ನ ಮತ್ತು ಗೆಳೆಯ ಡಾ| ಕೃಷ್ಣಮೋಹನ ಪ್ರಭುಗಳ ಅನೌಪಚಾರಿಕ ಆಮಂತ್ರಣದ ಮೇಲೆ, ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಕುತೂಹಲ ಮತ್ತು ಅಪಾರ ಸಹಾನುಭೂತಿ ಇಟ್ಟುಕೊಂಡು ಬಂದ ಎಲ್ಲರಿಗೂ ಹಾರ್ದಿಕ ಸ್ವಾಗತ. ಖಾಸಗಿ ವನ್ಯ ಸಂರಕ್ಷಣೆಯ ತೀರಾ ಸಣ್ಣ ಪ್ರಯೋಗವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳುವ ತಾಳ್ಮೆ ಹೊತ್ತು ಬಂದ ಒಬ್ಬೊಬ್ಬರ ಪರಿಚಯ ಮತ್ತು ಉಪಸ್ಥಿತಿಯ ಮಹತ್ವ ವಿಸ್ತರಿಸಲು ನನ್ನ ಸಾಮರ್ಥ್ಯವೂ ದಿನವೂ ಸಣ್ಣದಾಗುವುದರಿಂದ ಮಾಡುತ್ತಿಲ್ಲ, ಕ್ಷಮಿಸಿ. ಸಭೆ ತೀರಾ ಸಣ್ಣದು ಮತ್ತು ಅನೌಪಚಾರಿಕವೂ ಇರುವುದರಿಂದ ನೀವು ನೀವೇ ವನ್ಯಸಂರಕ್ಷಣೆಯ ಹಿತಕ್ಕಾಗಿ ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಸ್ನೇಹಸಂಬಂಧ ಬೆಳೆಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ." 

ಇದು ಮೊನ್ನೆ, ೨೦೨೧ರ ಜನವರಿ ೨೪, ಆದಿತ್ಯವಾರದಂದು ಬೆಳಿಗ್ಗೆ, ಸುಮಾರು ಹನ್ನೊಂದು ಗಂಟೆಗೆ, ನಾನು ಮಾಡಿದ ಸ್ವಾಗತ ಭಾಷಣ. ಪಶ್ಚಿಮಘಟ್ಟದ ಎತ್ತರದಲ್ಲಿ, ನಿಬಿಡ ಕಾನನಾಂತರದಲ್ಲಿ, ನಿಖರವಾಗಿ ಹೇಳುವುದಿದ್ದರೆ - ಬಿಸಿಲೆ ಡಾಮರು ಮಾರ್ಗದ ಒತ್ತಿನಲ್ಲೇ ಇರುವ ‘ಅಶೋಕವನ’ದಲ್ಲಿ, ವರ್ಷಪೂರ್ತಿ ಕಲಕಲಿಸುವ ಝರಿ ದಂಡೆಯಲ್ಲಿನ ಪುಟ್ಟ ಸಭೆಯ ನಾಂದಿ ಮಾತುಗಳು. ಸಭಾಲಂಕಾರ, ವೇದಿಕೆ, ಅಧ್ಯಕ್ಷ - ಅತಿಥಿ, ಮಾಲೆ ಶಾಲುಗಳು, ದೀಪೋಜ್ವಲನ, ಪ್ರಾರ್ಥನೆ, ಧ್ವನಿವರ್ಧಕ... ಏನೂ ಇರಲಿಲ್ಲ. ಸಹಜ ಹುಲ್ಲಹಾಸಿನ ಮೇಲೆ

ವೃತ್ತಾಕಾರಕ್ಕೆ ಹಾಕಿದ್ದ ನಲ್ವತ್ತು ಕುರ್ಚಿಗಳಲ್ಲಿ ಕುಳಿತೋ ನಿಂತೋ ಇದ್ದ ಸಭೆ ಮಾತ್ರ ಪಕ್ಕಾ ಆಯ್ದ ವ್ಯಕ್ತಿಗಳದ್ದೇ ಆಗಿತ್ತು. ಹೌದು, ನಮ್ಮ ಆಮಂತ್ರಣ ಮತ್ತು ಒತ್ತು ಇದ್ದದ್ದೇ ಆಯ್ದ ಸಭೆಗೆ. ‘ಇಷ್ಟ ಮಿತ್ರ ಬಂಧು ಬಾಂಧವರನ್ನು ಜತೆಮಾಡಿಕೊಂಡು, ದಿನಮುಂಚಿತವಾಗಿ ಬರಬೇಕೆಂಬ’ ಮಾತಿಗೆ ಖಡಕ್ ಕತ್ರಿ ಹಾಕಿದ್ದೆವು. ಅದರ ಅನೌಪಚಾರಿಕತೆಯ ಸ್ವರೂಪ ನೋಡಿ.... 

ಕರೆಯೋಲೆ:


ಮಿಂಚಂಚೆ ಹಾಗೂ ವಾಟ್ಸಪ್ಪಿನಲ್ಲಷ್ಟೇ ಕಳಿಸಿದ್ದೆವು. ಮುದ್ರಣ ಮಾಡಿಸಲಿಲ್ಲ. ಅದು ಬರಿಯ ಆಮಂತ್ರಣವಲ್ಲ, ಸವಿವರ ಕರಾರುಪತ್ರವೆಂಬಂತೆ ಹೀಗಿತ್ತು "ವನ್ಯ ಸಂರಕ್ಷಣೆಯ ಉದ್ದೇಶಕ್ಕಾಗಿ ಡಾ|ಕೃಷ್ಣಮೋಹನ ಪ್ರಭು ಮತ್ತು ನಾನು ೨೦೦೬ರಲ್ಲಿ ಬಿಸಿಲೆಯಲ್ಲಿ ಹದಿನೈದು ಎಕ್ರೆ ಪ್ರಾಕೃತಿಕವಾಗಿ ಕಾಡುಬಿದ್ದ ಏಲಕ್ಕಿ ಮಲೆಯನ್ನು ಕೊಂಡು ಕಾಪಿಟ್ಟಿರುವುದು ನಿಮಗೆ ತಿಳಿದೇ ಇದೆ. (ನೋಡಿ: ಅಶೋಕವನ ) ಅಲ್ಲೀಗ ಆಯ್ದ ವನ್ಯ ಸಂಶೋಧಕರಿಗೆ ಉಚಿತ ವಸತಿ ಹೂಡಿಕೊಳ್ಳಲು ಕಂಟೇನರ್ ಮನೆ - ಕಪ್ಪೆಗೂಡು, ನಿಲ್ಲಿಸಿದ್ದೇವೆ. ಅದನ್ನು ಕೇವಲ

ಗಂಭೀರ ಕ್ರಿಯಾಶೀಲ ವ್ಯಕ್ತಿಗಳ ಸಮಕ್ಷಮದಲ್ಲಿ ಲೋಕಾರ್ಪಣ ಮಾಡುತ್ತಿದ್ದೇವೆ. ಈ ಅನೌಪಚಾರಿಕ ಆದರೆ ಅಷ್ಟೇ ಅರ್ಥಪೂರ್ಣ ಕಲಾಪಕ್ಕೆ ನಿಮ್ಮನ್ನು ಮಾತ್ರ ಆದರದಿಂದ ಆಮಂತ್ರಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಪ್ರೇರಕರಾದ ಡಾ| ಕೆ.ವಿ. ಗುರುರಾಜ ಹಾಗೂ ಕೆಲವು ಗಣ್ಯ ಜೀವವಿಜ್ಞಾನಿಗಳು ಉಪಸ್ಥಿತರಿರುತ್ತಾರೆ. ಇದರ ಯಶಸ್ಸಿಗೆ ನೀವು ಅಷ್ಟೇ ಅವಶ್ಯ. "ಸಭೆಯಲ್ಲಿ ಯಾವುದೇ ಔಪಚಾರಿಕ ಕಲಾಪ ಅಥವಾ ಉದ್ದ ಭಾಷಣಗಳು ಇರುವುದಿಲ್ಲ. ‘ವನ್ಯ ಸಂರಕ್ಷಣೆಯಲ್ಲಿ ಖಾಸಗಿ ತೊಡಗಿಕೊಳ್ಳುವಿಕೆ’ಯ ಕುರಿತು ಚುಟುಕು ಅಭಿಪ್ರಾಯಗಳ ವಿನಿಮಯ ಮಾತ್ರ. ಇದು

ಸ್ವಾನುಭವ ಆಧಾರಿತ ಇರಲಿ. ಎಲ್ಲರಿಗೂ ವಿಷಯದ ಕುರಿತು ಕೆಲವೇ ಮಾತುಗಳನ್ನು ಪ್ರಸ್ತುತಪಡಿಸುವ (ಮಾತಾಡಲೇ ಬೇಕೆನ್ನುವ ಒತ್ತಾಯವಿಲ್ಲ) ಅವಕಾಶವಿದೆ. ಇದನ್ನು ಯಾವುದೇ ವ್ಯಕ್ತಿಯ (ನಮ್ಮನ್ನು ಸೇರಿಸಿ) ಹೊಗಳಿಕೆ ಅಥವಾ ತೆಗಳಿಕೆಯ ಅವಕಾಶವಾಗಿಸಬಾರದು. ಸರಕಾರ ಅಥವಾ ಇಲಾಖಾ ಟೀಕೆಗೂ ಇದು ವೇದಿಕೆ ಅಲ್ಲ. ಒಟ್ಟು ಕಲಾಪವನ್ನು ದಾಖಲೀಕರಿಸಿಕೊಂಡು, ಉತ್ತಮವಾದ್ದನ್ನು ಅನುಸರಿಸುವ ಉದ್ದೇಶ ನಮ್ಮದು."


ನಿಬಂಧನೆಗಳು:

ಆಮಂತ್ರಣದೊಡನೆ ಕೆಲವು ನಿಬಂಧನೆಗಳನ್ನು ಸೇರಿಸಿಯೇ ಕಳಿಸಿದ್ದೆವು. "ಪೂರ್ಣ ನಿರ್ಜನ ಕಗ್ಗಾಡ ಮೂಲೆಯಲ್ಲಿ, ಭಾಗಿಗಳಿಗೆ ಲಘೂಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದೇವೆ. ನಿಮ್ಮ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿ. ಮತ್ತು ನಮ್ಮ ವ್ಯವಸ್ಥೆಗೆ ಹೊರೆಯಾಗುವಂತೆ ಇಷ್ಟ ಮಿತ್ರರನ್ನು ದಯವಿಟ್ಟು ಕರೆತರಬೇಡಿ. ಹೂಗುಚ್ಛ, ಸ್ಮರಣಿಕೆಗಳನ್ನು ತರಬೇಡಿ, ಅವು ಪರಿಸರ ವೈರಿಗಳು..." ಪೂರ್ವರಂಗ: 

ನಾವು ಐವರು (ಹೆಂಡತಿ, ಮಗ, ಸೊಸೆ ಮತ್ತು ಮೊಮ್ಮಗು) ಹಿಂದಿನವೇ ಬುತ್ತಿ ಕಟ್ಟಿಕೊಂಡು ಹೋಗಿ ಕಣ ಸಜ್ಜುಗೊಳಿಸಿದೆವು. ದಿನೇಶ ಹೊಳ್ಳ ಮಾಡಿಕೊಟ್ಟ ಸ್ಟೆನ್ಸಿಲ್ಲಿನ ಮುದ್ರೆಯನ್ನು ಕಪ್ಪೆಗೂಡಿನ ಎರಡು ಮಗ್ಗುಲುಗಳಿಗೆ ಹಚ್ಚೆ ಹಾಕಿದೆವು. ಬಿಸಿಲೆ ಹಳ್ಳಿಯಿಂದ ಇಬ್ಬರು ಕೂಲಿಕಾರರು ನಮ್ಮ ಸಹಾಯಕ್ಕೆ ಒದಗಿದರು. ದೇವಕಿಯ ಸೋದರರ ಮಕ್ಕಳಿಬ್ಬರು (ಆದಿತ್ಯ, ಸುಹಾಸ) ಅಂದು ಸಂಜೆಯವರೆಗೆ ನಮಗೆ

ಜತೆಗೊಟ್ಟರು. ಅಂದು ಬೆಳಿಗ್ಗೆಯೇ ಬೆಂಗಳೂರಿನಿಂದ ಹೊರಟ ಮೂವರು ಸಂಪನ್ಮೂಲ ವ್ಯಕ್ತಿಗಳು - ಡಾ| ಕೆ.ಎಸ್. ಶೇಷಾದ್ರಿ, ವಿದಿಷಾ ಮತ್ತು ಡಾ| ಎಚ್.ಎಸ್ ಸುಧೀರ್ ಮಧ್ಯಾಹ್ನಕ್ಕೆ ನಮ್ಮನ್ನು ಸೇರಿಕೊಂಡರು. ಅವರು ಮರುದಿನದ ಅವರದೇ ಮಾತಿಗೆ ಪೂರಕವಾದ ಸಣ್ಣ ಪ್ರದರ್ಶನಕ್ಕೆ ಸ್ವಲ್ಪ ಸಿದ್ಧತೆಯನ್ನೂ ಮಾಡಿಕೊಂಡರು. ಮೂಲದಲ್ಲಿ ರಾತ್ರಿಗೆ ಅವರು ಅಲ್ಲೇ ಗುಡಾರ ಬಿಡಿಸುವ, ನಾವೈವರು ಕಪ್ಪೆಗೂಡಿನೊಳಗೇ ಉಳಿದುಕೊಳ್ಳುವ ಯೋಜನೆ ಇತ್ತು. ಆದರೆ ಅನಿವಾರ್ಯತೆಯಲ್ಲಿ (ಮುಂದಿನ ಕಂತಿನಲ್ಲಿ ಹೇಳುತ್ತೇನೆ) ಅವರು ಸಮೀಪದ ರೆಸಾರ್ಟಿನಲ್ಲೂ

ನಾವು ಸುಬ್ರಹ್ಮಣ್ಯದ ಹೋಟೆಲಿನಲ್ಲೂ ರಾತ್ರಿವಾಸ ಮಾಡಿದೆವು. 

ಲೋಕಾರ್ಪಣದಂದು:

ಬೆಳಿಗ್ಗೆ (೨೪-೧-೨೦೨೧) ಏಳು ಗಂಟೆಗೆ ನಾವು ಅಶೋಕವನ ತಲಪುವಾಗ, ಬೆಂಗಳೂರಿನಿಂದ ರಾತ್ರಿಯಲ್ಲಿ ಪಯಣಿಸಿ ಬಂದಿದ್ದ ಕ್ಯಾಮರಾ ತಂಡ ಕಾದಿತ್ತು. ಏಳೂವರೆಗೆ ಸುಬ್ರಹ್ಮಣ್ಯದಿಂದ ಶಾರದಾ ಕ್ಯಾಂಟೀನಿನಿಂದ ತಿಂಡಿ ತೀರ್ಥಗಳೂ ಗಣೇಶರ

ವ್ಯವಸ್ಥೆಯಲ್ಲಿ ಕೂಡು ರಸ್ತೆಯಿಂದ ಕುರ್ಚಿಗಳೂ ಬಂದವು. ದಾರಿ ಬದಿಗೆ ‘ಅಶೋಕವನ’ದ ಬ್ಯಾನರ್ ಕಟ್ಟಿದ್ದೂ ಆಯ್ತು. ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಬೆಂಗಳೂರು ಬಿಟ್ಟ ಪ್ರಧಾನ ಸಂಪನ್ಮೂಲ ವ್ಯಕ್ತಿ ಡಾ| ಗುರುರಾಜ್, ಡಾ| ಪ್ರೀತಿ ಮತ್ತು ಅವರ ಪುಟ್ಟ ಮಗ ಅವ್ಯಕ್ತ ಹಾಗೂ ಖ್ಯಾತ ಫೊಟೋಗ್ರಾಫರ್ ಮಹೇಶ್ ಭಟ್ ಸಕಾಲಕ್ಕೆ ತಲಪಿದರು. ಇತರ ಆಮಂತ್ರಿತರು, ಕಲಾಪದ ಘೋಷಿತ ಸಮಯವನ್ನು (ಹತ್ತು ಗಂಟೆ) ಮೀರಿಯೂ ಬಂದು ಸೇರಿಕೊಳ್ಳುತ್ತಲೇ ಇದ್ದರು. ವ್ಯಕ್ತಿ, ದೇಶ ಮತ್ತು ಕಾಲದ ಪರಿಗಣನೆಯಲ್ಲಿ ಎಲ್ಲ ಒಂದೆಡೆ ಕೂತು ನಡೆಸುವ ಕಲಾಪವನ್ನು

ಸುಮಾರು ಒಂದು ಗಂಟೆ ವಿಳಂಬವಾಗಿಯೇ ಶುರು ಮಾಡಿದ್ದೆವು. ವನ್ಯ ಪರಿಸರ ಯಾರಿಗೂ ಬೇಸರವನ್ನು ಉಂಟು ಮಾಡಿರದು ಎಂದು ಭಾವಿಸುತ್ತೇವೆ. ಹನ್ನೊಂದು ಗಂಟೆಯ ಸುಮಾರಿಗೆ ಎಲ್ಲರು ಸುತ್ತುವರಿದು ಕುಳಿತಂತೆ, ಮೊದಲೇ ಹೇಳಿದ ಸ್ವಾಗತದ ಮಾತುಗಳಿಂದ ನಾನು ಪ್ರಾಸ್ತಾವಿಕ ಮಾತುಗಳಿಗೆ ಮುಂದುವರಿದೆ.

ಹಿನ್ನೆಲೆ:


"೧೯೭೫ರಲ್ಲಿ ನಾನು ಮೈಸೂರಿನಿಂದ ಮಂಗಳೂರಿಗೆ ಪುಸ್ತಕ ವ್ಯಾಪಾರಿಯಾಗಿ ಬಂದು ನೆಲೆಸಿದೆ. ಜತೆಗೇ ನನ್ನ ಪರ್ವತಾರೋಹಣದ ಹವ್ಯಾಸವನ್ನು ಈ ವಲಯದ ಬೆಟ್ಟ ಕಾಡುಗಳಿಗೆ ಆರೋಗ್ಯಪೂರ್ಣವಾಗಿ, ಹೆಚ್ಚು ತೀವ್ರವಾಗಿ ವಿಸ್ತರಿಸಿದೆ. ಹಾಗೆ ಗಳಿಸಿದ ಅನುಭವಗಳನ್ನು ಪತ್ರಿಕಾ ಲೇಖನಗಳ ಮೂಲಕ ಪ್ರಚುರಿಸತೊಡಗಿದೆ. ಆ ‘ಸಾಹಸ’ಗಳಿಗೆ ವನ್ಯ ಸಂರಕ್ಷಣೆಯ ಸ್ಪಷ್ಟ ದಿಕ್ಕನ್ನು ತೋರಿದವರು - ಕುಟುಂಬ ಗೆಳೆಯ ಉಲ್ಲಾಸ ಕಾರಂತ. (ನೋಡಿ: ಪರ್ವತಾರೋಹಿಗೆ ವನ್ಯದೀಕ್ಷೆ) ಕಾರಂತರು ನಾಗರಹೊಳೆಯಲ್ಲಿ ನಡೆಸಿದ್ದ

ದೀರ್ಘಕಾಲೀನ ಹುಲಿ ಅಧ್ಯಯನದಲ್ಲಿ ನಾನು ಕೇವಲ ಒಂದು ವಾರದ ಅಪರಿಣತ ಸ್ವಯಂಸೇವಕನಾಗಿದ್ದೆ. ಅಂದೂ ನನ್ನ ಜತೆಗಾರನಾಗಿದ್ದವರು ಇಂದಿನ ಅಶೋಕವನದ ಪಾಲುಗಾರ - ಡಾ| ಕೃಷ್ಣಮೋಹನ್ ಪ್ರಭು." 

ಬಿಸಿಲೆ ಹೇಗೆ ದಕ್ಕಿತು?:

ದೀರ್ಘ ಕಾಲದ ವ್ಯಾಪಕ ಪ್ರಚಾರಗಳಿಂದ (ವನಮಹೋತ್ಸವ, ಪರಿಸರ ದಿನ ಇತ್ಯಾದಿ), ಇಂದು ನಾಗರಿಕ ಲೋಕಕ್ಕೆ ಹಸಿರಿನ

ಬಗ್ಗೆ ಅರಿವು ಸಾಕಷ್ಟಿದೆ. ಆದರೆ ಶುದ್ಧ ವನ್ಯ ಸಂರಕ್ಷಣೆ, ಅದರಲ್ಲೂ ಅರಣ್ಯ ಇಲಾಖೇತರ ನಾಗರಿಕರಿಂದ ಹೇಗೆ ಸಾಧ್ಯ, ಎನ್ನುವುದಕ್ಕೆ ಮಂಗಳೂರು ವಲಯದಿಂದ ನಾಯಕತ್ವ ಕೊಟ್ಟವರು ಗೆಳೆಯ ನಿರೇನ್ ಜೈನ್. ಆ ದಿನಗಳಲ್ಲಿ ನಿರೇನ್ ತನ್ನ ಆರ್ಕಿಟೆಕ್ಟ್ ವೃತ್ತಿಯ ಅಗತ್ಯಗಳನ್ನು ಸಣ್ಣ ಮಾಡಿ, ವನ್ಯಸಂರಕ್ಷಣೆಯ ಕೆಲಸವನ್ನು ತೀವ್ರವಾಗಿ ನಡೆಸಿದರು. (ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬಗಲ ಮುಳ್ಳಾಗಿದ್ದ ಗಣಿಗಾರಿಕೆಯನ್ನು ಕಾನೂನಾತ್ಮಕವಾಗಿಯೇ ನಿವಾರಿಸಿದ್ದು ಮತ್ತು ಅಲ್ಲಿನ ಗ್ರಾಮೀಣ ಮಂದಿಯ ಮರುವಸತಿಯ

ಸಂಕಟಗಳಿಗೆ ವ್ಯವಸ್ಥಿತವಾಗಿ ಸ್ಪಂದಿಸಿದ್ದು ಇವರ ಉಲ್ಲೇಖನೀಯ ಸಾಧನೆಗಳು.) ಆ ದೊಡ್ಡ ಸಾಹಸದಲ್ಲಿ ನಿರೇನರಿಗೆ ಸಿಕ್ಕ ಅಸಂಖ್ಯ ಪರಿಸರ ಸಹಕಾರಿಗಳಲ್ಲಿ ಬಿಸಿಲೆ ವಲಯದ ಹಿರಿಯ ಕೃಷಿಕ ಗೊದ್ದು ಉಮೇಶ್ ಮುಖ್ಯರು. ಅವರ ಒಡನಾಟದಲ್ಲಿ ಬಿಸಿಲೆಯ ಈ ನೆಲ ನಿರೇನರಿಗೆ ತಿಳಿಯಿತು. ಇಲ್ಲಿ ಮೇಲಿನ ಬಿಸಿಲೆ ಗೇಟಿನಿಂದ ಕೆಳಗಿನ ಕುಳ್ಕುಂದದವರೆಗೆ, ಅಂದರೆ ಸುಮಾರು ೨೩ ಕಿಮೀ ದಾರಿಯ ಉದ್ದಕ್ಕೆ, ಎರಡೂ ಮಗ್ಗುಲಿನಲ್ಲಿ ದಟ್ಟ ಕಾಡು ಮಾತ್ರವಿದೆ. ಇವು ಒಂದೋ ಪುಷ್ಪಗಿರಿ ವನಧಾಮ ಇಲ್ಲಾ ಬಿಸಿಲೆ ಕಾಯ್ದಿರಿಸಿದ ಕಾಡು. ಅದರ ನಡುವೆ

ಇದ್ದೊಂದು ಸಣ್ಣ ತುಣುಕು ಭೂಮಿ ಖಾಸಗಿ ಒಡೆತನಕ್ಕೆ ಸೇರಿತ್ತು. ಆ ನೆಲ ವನ್ಯವಾಗಿಯೇ ಮುಂದುವರಿದರೆ ಒಳ್ಳೆಯದೆಂಬ ನಿರೇನ್ ಬಯಕೆಗೆ ಸ್ಪಂದಿಸಿ, ನಾನು ಮತ್ತು ಕೃಷ್ಣಮೋಹನ್ ಸಂಪೂರ್ಣ ವೈಯಕ್ತಿಕ ಹಣಕಾಸಿನಲ್ಲಿ ಖರೀದಿಸಿದೆವು. ಮತ್ತು ಇಲ್ಲಿ ವನ್ಯಕ್ಕೆ ಶೋಕವಿಲ್ಲ ಎನ್ನುವ ಅರ್ಥದಲ್ಲಿ ‘ಅಶೋಕವನ’ವೆಂದೇ ಹೆಸರಿಸಿದೆವು. 

ವನ್ಯ ಎಂದರೇನು?:


ಜನಪ್ರಿಯ ಪರಿಸರ ಚಳವಳಗಳೆಲ್ಲ (ಅರಣ್ಯ ಇಲಾಖೆ ಸೇರಿ) ಹಸಿರು ಬೆಳೆಸುವ ಹಂತದಲ್ಲೇ ನಿಲ್ಲುತ್ತವೆ. ಅಭಿವೃದ್ಧಿ ಯೋಜನೆಗಳು ಬಯಸುವ ಯಾವುದೇ ವನ್ಯಭೂಮಿಗಳ ಪರಿಸರ ವರದಿ ನೋಡಿದರೆ, "ಹಾಳು ಭೂಮಿ" ಎನ್ನುವುದು ಢಾಳಾಗಿ ಕಾಣುತ್ತದೆ. ಇದು ಪರಮ ಉಡಾಫೆ ಹಾಗೂ ಅನಧ್ಯಯನದ ಫಲ. ನಿಜದಲ್ಲಿ ಮನುಷ್ಯ ಹಸ್ತಕ್ಷೇಪ ಅಥವಾ ಪ್ರಭಾವ ಇಲ್ಲದೆ ಪ್ರಾಕೃತಿಕವಾಗಿ ವಿಕಸಿಸುವ ಬೆಟ್ಟ, ಬಂಡೆ, ತೊರೆ, ಕೆರೆ, ಹುಲ್ಲು, ಹುಳ, ಹಕ್ಕಿ ಹುಲಿ ಮುಂತಾದವುಗಳ ಜೀವಾಜೀವಗಳ ಜಾಲವೇ ವನ್ಯ. ಈ ಸ್ಪಷ್ಟತೆಯೊಡನೆ

‘ಅಶೋಕವನ’ದಲ್ಲಿ ನಾವು ಯಾವುದೇ ವಾಣಿಜ್ಯ ಕಲಾಪ ಅಥವಾ ನಾಗರಿಕ ಚಟುವಟಿಕೆಗಳನ್ನು ನಡೆಸಿಲ್ಲ. ಇದುವರೆಗೆ ನಾವು ಇಲ್ಲಿ ಒಂದು ಬೀಜ, ಒಂದು ಗಿಡ ಹಾಕಿಲ್ಲ. ಇಲ್ಲಿ ಬೆಳೆಯುವ ಏಲಕ್ಕಿ, ಸೀಗೆ, ಕಣಿಲೆಗಳಾದಿ ವನೋತ್ಪತ್ತಿಗಳನ್ನು ಕನಿಷ್ಠ ನಮ್ಮ ಮನೆ ಅಗತ್ಯಕ್ಕೂ ಸಂಗ್ರಹಿಸಿಲ್ಲ. ‘ಅಶೋಕವನ’ ಮಾಡಿದ ಹೊಸತರಲ್ಲಿ, ಅಂದರೆ ಹದಿನಾಲ್ಕು ವರ್ಷಗಳ ಹಿಂದೆ, ನಾವು ಪತ್ರಿಕಾ ಲೇಖನದ ಮೂಲಕ, ಬಾಯಿ ಮಾತಿನ ಮೂಲಕ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ವನ್ಯ ಸಂರಕ್ಷಣೆಯ ಈ ಕ್ರಮವನ್ನು ಪ್ರಚಾರ ಮಾಡಿದ್ದಿತ್ತು. ಹೀಗೇ ಕಾಡಿನ

ಅಂಚಿನಲ್ಲಿದ್ದುಕೊಂಡು, ಅನಿವಾರ್ಯವಾಗಿ ಕೃಷಿಬಿಟ್ಟು ಬೀಳಾಗಿರುವ ಖಾಸಗಿ ನೆಲಗಳು ಈ ವಲಯದಲ್ಲಿ ಇನ್ನಷ್ಟು ಇವೆ. ಅವನ್ನು ಸಮಾನಾಸಕ್ತರು ಕೊಳ್ಳುವಂತಾಗಬೇಕು. ತುಣುಕುಗಳು ಸಣ್ಣವಾದರೂ ‘ಖಾಸಗಿ ವನ್ಯಸಂರಕ್ಷಣೆ’ ಒಂದು ಚಳವಳವಾಗಬೇಕು ಎಂದೂ ಆಶಿಸಿದ್ದೆವು. ಆದರೆ ಕಾಡು ಬೋಳಿಸುವಲ್ಲಿ, ನೆಲವನ್ನು ವಾಣಿಜ್ಯ ಉದ್ದೇಶಕ್ಕೆ ದುಡಿಸುವಲ್ಲಿ ಇರುವ ಆಕರ್ಷಣೆಗಳು ಬರಿದೇ ಉಳಿಸಿಕೊಳ್ಳುವಲ್ಲಿ ಇಲ್ಲ. ನಮ್ಮ ಪ್ರಯತ್ನ ಯಾರಿಗೂ ಅನುಕರಣೀಯವಾಗಿ ಕಾಣಲೇ ಇಲ್ಲ. 


ಸಂರಕ್ಷಣೆಯ ಪಥದಲ್ಲಿ:

ವನ್ಯ ಸಂರಕ್ಷಣೆಯ ಪ್ರಾಥಮಿಕ ಅಗತ್ಯ - ಮನುಷ್ಯ ಚಟುವಟಿಕೆಗಳ ವಿರುದ್ಧ ಗಡಿ ಭದ್ರತೆ. ಆದರೆ ಅಶೋಕವನದ ಸುತ್ತ ಸರಕಾರೀ ಅರಣ್ಯಗಳೇ ಇರುವಾಗ ನಮಗೆ ಗಡಿ, ಬೇಲಿಯ ಆವಶ್ಯಕತೆ ಕಾಣಲಿಲ್ಲ. ಬದಲಿಗೆ ಅನುಕೂಲದಲ್ಲಿ ನಾವೇನನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂಬ ಅರಿವನ್ನು ಸಣ್ಣದಾಗಿ ಬೆಳೆಸಿಕೊಳ್ಳುತ್ತಿದ್ದೆವು. ಸಮಾನಾಸಕ್ತ ಗೆಳೆಯರೊಡನೆ ಇಲ್ಲಿಗೆ ಹಲವು ಬಾರಿ ಬಂದು, ಪುಟ್ಟ ಗುಡಾರ

ಹೂಡಿ, ಸುತ್ತಣ ಪರಿಸರದ ಅಲ್ಪಸ್ವಲ್ಪ ಪರಿಚಯ ಮಾಡಿಕೊಳ್ಳುತ್ತಲೇ ಇದ್ದೆವು. ಅಂಥಾ ಒಂದು ಶಿಬಿರವಾಸದ ಕಾಲದಲ್ಲಿ ನಮಗಿಲ್ಲಿ ಮರನಾಯಿ ಅರ್ಥಾತ್ ನೀಲಗಿರಿ ಮಾರ್ಟಿನ್ ಕಾಣಿಸಿತ್ತು. ಈ ವಲಯದಲ್ಲಿ ಅಳಿದೇ ಹೋಗಿದೆ ಎಂದು ನಂಬಲಾಗಿದ್ದ ಮರನಾಯಿಯ ದರ್ಶನ ವನ್ಯ ವಿಜ್ಞಾನ ವಲಯದಲ್ಲಿ ಬಹಳ ದೊಡ್ಡ ರೋಮಾಂಚನವನ್ನೇ ಉಂಟು ಮಾಡಿತ್ತು. (ನೋಡಿ: ಕಾನನದೊಳಗಿಂದೆದ್ದು ಬಂದವನಾವನಿವಂ?) ಇದು ನಮ್ಮ ಅನಿಶ್ಚಿತ ಪ್ರಯೋಗಗಳಿಗೆ

ಸ್ಪಷ್ಟ ಮುಖ ಕೊಟ್ಟಂತಾಯ್ತು.....

ಕಪ್ಪೆ ಶಿಬಿರಗಳು:

ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಕಿರಿಯ ವನ್ಯ ಉತ್ಸಾಹಿ ಗೆಳೆಯರು - ಮುಖ್ಯವಾಗಿ ಹೆಸರಿಸುವುದಾದರೆ ದೀಪಿಕಾ, ಸಂದೀಪ್ ಮತ್ತು ವಿವೇಕ್ ಇಲ್ಲಿ ಏನಾದರೂ ಗಂಭೀರ ಅಧ್ಯಯನ ನಡೆಸಬೇಕೆಂಬ ಹುಚ್ಚು ಹತ್ತಿಸಿಕೊಂಡರು. ಉಡುಪಿಯ ಪ್ರಾಣಿಶಾಸ್ತ್ರ ಅಧ್ಯಾಪಕ ಅದಕ್ಕೂ ಹೆಚ್ಚಿಗೆ ವನ್ಯ

ಸಂರಕ್ಷಣಾ ಹವ್ಯಾಸಿ ಎನ್.ಎ. ಮಧ್ಯಸ್ಥ ಮತ್ತು ಅಲ್ಲಿನವರೇ ಆದ ಸಸ್ಯ ವಿಜ್ಞಾನಿ ಕಾಕುಂಜೆ ಗೋಪಾಲಕೃಷ್ಣ ಭಟ್ ಒಮ್ಮೆ ನಮ್ಮ ಬಳಗದೊಡನೆ ಇಲ್ಲಿಗೆ ಬಂದು, ಯುವಕರ ಹುಚ್ಚಿಗೆ ಹೆಚ್ಚಿನ ಕುಮ್ಮಕ್ಕು ನೀಡಿದರು. ಆದರೆ ಈ ಬಳಗಕ್ಕೆ ದೃಢ ದಿಕ್ಕು ಸಿಕ್ಕಿದ್ದು ಕೆವಿ ಗುರುರಾಜರಲ್ಲಿ. ಯಾವ ಪೂರ್ವ ಪರಿಚಯವಿಲ್ಲದೆ ಕೇವಲ ಅಂತರ್ಜಾಲಾಟದಲ್ಲಿ ಸಿಕ್ಕವರು ಈ ಜೀವವಿಜ್ಞಾನಿ, ಕಪ್ಪೆಗಳ ವಿಶೇಷಜ್ಞ ಗುರುರಾಜ್. ಅವರು ವಾರ್ಷಿಕ ವ್ರತದಂತೆ ಏಳೆಂಟು ವರ್ಷಗಳಿಂದ ನಡೆಸುತ್ತ ಬಂದ ಕಪ್ಪೆ ಶಿಬಿರಗಳ ವಿಜ್ಞಾನ ಆವೇಶಕ್ಕೆ ಬಲಗೊಟ್ಟವರು ಗುಬ್ಬಿ ಲ್ಯಾಬ್ಸಿನ ಎಚ್.ಎಸ್.

ಸುಧೀರ. ಜತೆಗೊಟ್ಟ ಅನೇಕರಲ್ಲಿ ಕೆ.ಎಸ್. ಶೇಷಾದ್ರಿ, ಮಧುಶ್ರೀ ಮುಡ್ಕೆ, ಶ್ರೀಕಾಂತ ಗುನಗ ಸದ್ಯ ನನ್ನ ನೆನಪಿಗೆ ಬರುತ್ತಾರೆ. ಶಿಬಿರಗಳ ಸಂಘಟನಾತ್ಮಕ ಜವಾಬ್ದಾರಿಗಳಲ್ಲಿ ಮುಖ್ಯವಾಗಿ ರೋಹಿತ್ ರಾವ್ ಮತ್ತೆ ವಿನೀತ್ ತುಂಬ ಶ್ರಮಿಸಿದ್ದಾರೆ.

ಹದಿನೈದು ಎಕ್ರೆ ಸಾಕೇ?:

"ಪ್ರಾಕೃತಿಕ ಸತ್ಯಾನ್ವೇಷಣೆಯಲ್ಲಿ ಹುಲಿ ಆನೆಗಳಂಥವುಗಳಿಗೆ ನೂರಾರು ಚದರ ಕಿಮೀ ವ್ಯಾಪ್ತಿಯ ಕಾಡು, ಬಯಲು, ನೀರು

ಬೇಕಾಗುತ್ತದೆ. ಆದರೆ ಅಷ್ಟೇ ಪರಿಣಾಮಕಾರಿಯಾದ ಪರಿಸರ ಸೂಚ್ಯಂಕವನ್ನು ಕೊಡಬಲ್ಲ ಕಪ್ಪೆ, ಹಾವು, ಚಿಟ್ಟೆ, ಜೇಡ, ಇರುವೆ, ವಾಟೆ, ಹುಲ್ಲು, ಅಣಬೆ, ಮಣ್ಣು, ಕಲ್ಲು ಮುಂತಾದವುಗಳ ಅಧ್ಯಯನಕ್ಕೆ ಇಂಥ ಸಣ್ಣ ಭೌಗೋಳಿಕ ತುಣುಕುಗಳು ಧಾರಾಳವಾಗುತ್ತವೆ. ಇದನ್ನು ಕಪ್ಪೆ ಶಿಬಿರಗಳು ಯಾವ ಗದ್ದಲವಿಲ್ಲದೆ ಮಾಡಿ ತೋರಿಸುತ್ತಲೇ ಇವೆ. ಬಿಸಿಲೆ ಗೇಟ್ ಬಳಿ ದೀಪ, ನೀರು, ಶೌಚ, ಸ್ನಾನಗಳೊಂದೂ ಸರಿಯಿಲ್ಲದ, ಸಮುದಾಯದ ಹೆಸರಿನ ಸೋರು ಭವನ ವಾಸಕ್ಕೆ. ದೇವೇಗೌಡ, ಕಮಲಮ್ಮ ದಂಪತಿಯ ಬಡ ತುಳಸಿ ಹೋಟೆಲ್

ತಿಂಡಿತೀರ್ಥಕ್ಕೆ ಎರಡೋ ಮೂರೋ ದಿನಗಳ ಮಟ್ಟಿಗೆ ಹೇಗೋ ಸುಧಾರಿಸಿಹೋಗುತ್ತಿತ್ತು. ರಾಜ್ಯದ ಯಾವ್ಯಾವ ಮೂಲೆಯಿಂದ ಕಾಸು ಖರ್ಚು ಮಾಡಿ ಬಂದು ಸೇರುತ್ತಿದ್ದ ಹದಿನೈದಿಪ್ಪತ್ತು ಸದಸ್ಯರು, ಕಪ್ಪೆಗಳ ಸಂಗಮ ಸಂಭ್ರಮದ ವೇಳೆ - ಅಂದರೆ ಜಡಿಮಳೆಯ ಅಪರಾತ್ರಿಗಳಲ್ಲಿ ಇಲ್ಲಿ ನಡೆಸಿದ ಕ್ಷೇತ್ರ ಕಾರ್ಯಗಳು ಬಹಳ ಮಹತ್ವದವು. ಅಶೋಕವನದ ಹೆಮ್ಮೆಯ ಸಾಧನೆಗಳು. ಆದರೆ ಹಾಗೆ ಸಿಕ್ಕ ಪ್ರಾಥಮಿಕ ಮಾಹಿತಿಗಳನ್ನು ಸಂಶೋಧನೆಗಳ ಮಟ್ಟಕ್ಕೆ ಏರಿಸಲು, ಲಭ್ಯ ಸವಲತ್ತುಗಳು ಸೋಲುತ್ತಿದ್ದವು. ಎರಡು ಮೂರು ಮಂದಿಗೆ ಇಲ್ಲಿ ವರ್ಷವಿಡೀ

ವಿವಿಧ ಅವಧಿಗಳಲ್ಲಿ ಉಳಿದುಕೊಳ್ಳಲು ಅಸಾಧ್ಯವೇ ಆಗುತ್ತಿತ್ತು. ಆ ಅಡ್ಡಿಯನ್ನು ನಿವಾರಿಸುವಲ್ಲಿ ನನಗೆ ಹೊಳೆದ ಮತ್ತು ವೈಯಕ್ತಿಕ ಸಾಮರ್ಥ್ಯಕ್ಕೆ ನಿಲುಕಿದ ವ್ಯವಸ್ಥೆ - ಕಂಟೇನರ್ ಮನೆ. ಊಟ, ವಾಸ ಮತ್ತು ಕ್ಷೇತ್ರಕಾರ್ಯಕ್ಕೆ ಎಲ್ಲಾ ಋತುಮಾನಗಳಲ್ಲೂ ಒಡ್ಡಿಕೊಳ್ಳುವಂತೆ ಕಂಟೇನರನ್ನು ಪ್ರಯೋಗ ಕ್ಷೇತ್ರ ಅಂದರೆ, ಅಶೋಕವನದೊಳಗೇ ನಿಲ್ಲಿಸಿದ್ದೇವೆ. ಹೀಗೊಂದು ಪ್ರಯೋಗಕ್ಕೆ ಪ್ರೇರಣೆ ಕೊಟ್ಟ ಕಪ್ಪೆ ಶಿಬಿರಗಳ ನೆನಪಿಗೆ ಇದನ್ನು ‘ಕಪ್ಪೆಗೂಡು’ ಎಂದೇ ಹೆಸರಿಸಿದ್ದೇವೆ. 


ಕಪ್ಪೆಗೂಡು: 

ಇದರಲ್ಲಿ ಗರಿಷ್ಠ ನಾಲ್ಕು ಮಂದಿ ಸ್ವಯಂಪಾಕ ಮಾಡಿಕೊಂಡು, ಸುಭದ್ರವಾಗಿ ವಾಸಿಸಬಹುದು. ಇದನ್ನು ನಿಲ್ಲಿಸುವಲ್ಲಿ ಪರಿಸರ ಸ್ವಾಸ್ಥ್ಯ ಉಳಿಸಿಕೊಳ್ಳುವುದನ್ನು ದೊಡ್ಡ ಸವಾಲಾಗಿಯೇ ನಿರ್ವಹಿಸಿದ್ದೇವೆ. ಹಿಂದಿನವರು ಕೃಷಿ ಕಾರ್ಯಕ್ಕೋ ಮರ ಸಾಗಣೆಗೋ ಮಾಡಿಕೊಂಡಿದ್ದ ತುಂಡು ದಾರಿಯನ್ನೇ ನಾವು ನಮ್ಮ ಸೀಮಿತ ಉಪಯೋಗಕ್ಕಾಗಿ ಊರ್ಜಿತದಲ್ಲಿಟ್ಟುಕೊಂಡಿದ್ದೇವೆ. ಈ ದಾರಿಯೂ ಸಾರ್ವಜನಿಕರ

ಕೆಟ್ಟ ಕುತೂಹಲಕ್ಕೆ ಕಾರಣವಾಗದಂತೆ ಡಾಮರ್ ಮಾರ್ಗದ ಅಂಚಿನಲ್ಲಿ ಸಣ್ಣದಾಗಿ ಬಂದೋಬಸ್ತು ಮಾಡಿದ್ದೇವೆ. ಉಳಿದಂತೆ ವನ್ಯಜೀವಿ ಸಂಚಲನಕ್ಕೆ ಇಲ್ಲಿ ಅಡ್ಡಿಯುಂಟಾಗಬಾರದು ಎಂಬ ಕಾರಣಕ್ಕೇ ಬೇಲಿ, ಪಾಗಾರ, ಅಗಳು ಅಥವಾ ಕಂದಕಗಳನ್ನು ನಾವು ಮಾಡಿಸಿಲ್ಲ, ಮಾಡುವುದೂ ಇಲ್ಲ. ಅದೇ ಕಾರಣಕ್ಕೆ ಅರಣ್ಯ ಇಲಾಖೆ ಇಲ್ಲಿಗೂ ತನ್ನ ವಿದ್ಯುತ್ ಬೇಲಿಯನ್ನು ಹಾಕುವ ಮಾತು ಬಂದಾಗಲೂ ನಾವು ಸ್ಪಷ್ಟವಾಗಿಯೇ ನಿರಾಕರಿಸಿದ್ದೆವು. ಕಪ್ಪೆಗೂಡಿನ ಶುದ್ಧ ಹಾಗೂ ಕೊಳಚೆ ನೀರಿನ ವಿಲೇವಾರಿಗಳು ಹಾಗೂ ಕಸಗಳು ವಿಸ್ತೃತವಾಗಿ ಇಲ್ಲಿನ ವನ್ಯಪರಿಸರವನ್ನು

ಪ್ರಭಾವಿಸದಂತೆ ಎಚ್ಚರವನ್ನೂ ವಹಿಸಿದ್ದೇವೆ.

ಉಪಯೋಗಿಗಳು ಯಾರು?:

ಕಪ್ಪೆಗೂಡು, ಕ್ಷೇತ್ರಕಾರ್ಯ ಆಧರಿಸಿದ ಯಾವುದೇ ಜೀವಾಜೀವ ಸಂಶೋಧಕರಿಗೆ ಉಚಿತವಾಗಿ (ನಮ್ಮ ಕಣ್ಗಾವಲಿನಲ್ಲಿ) ಒದಗುತ್ತದೆ. ಅಶೋಕವನ ಮತ್ತು ಕಪ್ಪೆಗೂಡು ವನ್ಯ ಅಧ್ಯಯನವನ್ನು ಮೀರಿ, ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು, ವಿನೋದ ಹಾವಳಿಗಳನ್ನು ಕಡ್ಡಾಯವಾಗಿ

ನಡೆಸುವುದಿಲ್ಲ. ಸಭೆ ನಡೆದ ಪುಟ್ಟ ಬಯಲು ಹಿಂದಿನವರ ಕೃಷಿ ಅಗತ್ಯಕ್ಕೆ ರೂಪುಗೊಂಡದ್ದಿರಬೇಕು. ಅದರಲ್ಲೇ ನಾವು ಹಿಂದೆ ಗುಡಾರಗಳ ಶಿಬಿರ ನಡೆಸಿದ್ದೂ ಇತ್ತು. ಆದರೆ ಮುಂದೆ ಅದೂ ಸಹಜಾರಣ್ಯದ ಭಾಗವಾಗಿಯೇ ವಿಕಸಿಸುವಂತೆ ನೋಡಿಕೊಳ್ಳುತ್ತೇವೆ. ದಯವಿಟ್ಟು ಗಮನಿಸಿ, ಅಶೋಕವನ ಮತ್ತು ಕಪ್ಪೆಗೂಡು ಪ್ರವಾಸಿ ಕೇಂದ್ರವಲ್ಲ. ಜನಪ್ರಿಯವಾಗಿ ಹೇಳುವಂತೆ, ಪರಿಸರ ಶಿಕ್ಷಣ ಕಲ್ಪಿಸುವ ನೆಲವೂ ಅಲ್ಲ. ಲೋಕಾರ್ಪಣದ ಸಭೆಯನಂತರ ಮುಂದೆ ಎಂದೂ ಅಲ್ಲಿ ಹೆಚ್ಚು ಜನ ಸೇರಿಸುವಂಥ ಕಲಾಪಗಳು ನಡೆಯುವುದಿಲ್ಲ. ಅಲ್ಲಿ ಒಬ್ಬಿಬ್ಬ ಸಂಶೋಧಕರನ್ನು ಮೀರಿ ಇನ್ಯಾರ ಪ್ರವೇಶವೂ ಆಗದು. ಹಾಗಾಗಿ... ಸಾರ್ವಜನಿಕರಲ್ಲಿ ಮನವಿ: ಅಶೋಕವನ ಮತ್ತು ಕಪ್ಪೆಗೂಡುಗಳ ವಿಚಾರಗಳನ್ನು ಆಸಕ್ತರಲ್ಲಿ ಹಂಚಿಕೊಳ್ಳುವಾಗ ದಯವಿಟ್ಟು ಎಚ್ಚರವಹಿಸಿ. ಇದನ್ನು ನೋಡಲು ಯಾರೂ ಬರುವುದು ಬೇಡ. ಇದು ಪ್ರವಾಸೀ ಕೇಂದ್ರ ಅಲ್ಲ.

ಬದಲು ನಿಮ್ಮಲ್ಲಿ ತುಡಿತ, ತಾಕತ್ತು ಇದ್ದರೆ, ಸ್ವತಂತ್ರವಾಗಿ ಇಂಥ ಇನ್ನಷ್ಟು ನೆಲಗಳನ್ನು ಕೊಂಡು ವನ್ಯಸಂರಕ್ಷಣೆಗೆ ಮುಂದಾಗಿ. ಸಂಶೋಧಕರಿಗೆ, ವನ್ಯ ಸಂರಕ್ಷಣಾ ಉತ್ಸಾಹಿಗಳಿಗೆ ಸಹಾನುಭೂತಿಪರರಾಗಿ. 

ಮಾತಿಗೆ ಕಡಿವಾಣ:

ನನ್ನ ಪ್ರಾಸ್ತಾವಿಕ ಮಾತುಗಳನ್ನು ಬರೆದು, ವಾರದ ಮೊದಲೇ ಮುಖ್ಯ ಮಾತುಗಾರರಾದ - ಗುರುರಾಜ್, ಸುಧೀರ್, ಶೇಷಾದ್ರಿ

ಮತ್ತು ಕೃಷ್ಣಮೋಹನರಲ್ಲಿ ಹಂಚಿಕೊಂಡಿದ್ದೆ. ಮತ್ತೆ ಕಲಾಪಗಳು ಹೆಚ್ಚು ಅರ್ಥಪೂರ್ಣವಾಗುವಂತೆ ಅವರ ಅನುಮೋದನೆಯೊಡನೆ ಕೆಲವು ನಿಬಂಧನೆಗಳನ್ನು ರೂಪಿಸಿದ್ದೆ. ಅವನ್ನೂ ಸಭೆಗೆ ಚುಟುಕಾಗಿಯೇ ವಿಷದಪಡಿಸಿದ್ದೆ. "ಮುಂದಿನ ಕಲಾಪಗಳು ಹೆಚ್ಚು ಅರ್ಥಪೂರ್ಣವಾಗಲು ಕೆಲವು ಸೂಚನೆಗಳು. ಬಿಸಿಲೆ ವಲಯದ ಜೀವವೈವಿಧ್ಯ, ವನ್ಯಸಂರಕ್ಷಣೆಯ ಆವಶ್ಯಕತೆಗಳ ಕುರಿತು ಹೆಚ್ಚಿನ ವಿಚಾರಗಳನ್ನು ಗುರುರಾಜರಿಂದ ತೊಡಗಿದಂತೆ ನೀವೆಲ್ಲ ನಡೆಸಿಕೊಡಬೇಕು. ಆದರೆ ಮಾತು ಹಳಿತಪ್ಪದಂತೆ ಕೆಲವು

ಸೂಚನೆಗಳನ್ನು ಪಾಲಿಸಬೇಕಾಗಿ ಸವಿನಯ ಪ್ರಾರ್ಥನೆ. ಅಪಾರ ಶ್ರಮ, ಖರ್ಚು, ಬಿಡುವು ಮಾಡಿಕೊಂಡು ಇಲ್ಲಿಗೆ ಬಂದ ನಿಮ್ಮ ಭಾವನೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಪೂರ್ಣ ಗೌರವಿಸುತ್ತೇವೆ. ಅದನ್ನು ಔಪಚಾರಿಕ ಭಾಷಣದಲ್ಲಿ ಕಳೆಯಬೇಡಿ. ಅವರೇ ಅವರೇ ಎಂದು ಅವರೇಕಾಳು ಜಗಿಯುವ ಉದ್ದುದ್ದ ಮಾತುಗಳನ್ನು ಬಿಟ್ಟು, ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಅನುಭವಕ್ಕೆ ಸೀಮಿತವಾಗಿರಿ. ನಮ್ಮ ಹೊಗಳಿಕೆಗಳಲ್ಲಿ ದಯವಿಟ್ಟು ಸಮಯ ಕಳೆಯಬೇಡಿ. ಹಾಗೇ ಯಾವುದೇ ವ್ಯಕ್ತಿ ಅಥವಾ ಸುಲಭವಾಗಿ ಒದಗುವ ಸರಕಾರೀ ಇಲಾಖೆಗಳನ್ನು ಟೀಕಿಸುವ ವೇದಿಕೆಯೂ ಇದಾಗಬಾರದು. ಕೇವಲ ‘ವನ್ಯ ಸಂರಕ್ಷಣೆಯಲ್ಲಿ ಖಾಸಗಿ ತೊಡಗಿಕೊಳ್ಳುವಿಕೆ’ಯ ಕುರಿತು, ನಿಮ್ಮದೇ ಅಭಿಪ್ರಾಯಗಳನ್ನು ಚುಟುಕಾಗಿ ಹಂಚಿಕೊಳ್ಳಿ. ಆಮಂತ್ರಣದಲ್ಲೇ ಹೇಳಿದಂತೆ, ನಾವು ಒಟ್ಟು ಕಲಾಪವನ್ನು

ದಾಖಲೀಕರಿಸಿಕೊಂಡು, ಅನುಸರಿಸುವ ಪ್ರಯತ್ನ ಖಂಡಿತ ಮಾಡುತ್ತೇವೆ." 

ಸಭಾ ನಿರ್ವಾಹಕ, ಪರಿಚಯಕಾರ, ಅಧ್ಯಕ್ಷ, ಮುಖ್ಯ ಅತಿಥಿ ಇತ್ಯಾದಿ ಪದವಿಗಳನ್ನು ಬಳಸಲೇ ಇಲ್ಲ. ಎಲ್ಲರಲ್ಲೂ ಒಂದೇ ವಾಕ್ಯದ ಸ್ವಪರಿಚಯದೊಡನೆ ನೇರ ಅಭಿಪ್ರಾಯ ಮಂಡಿಸುವಂತೆ ಮನವಿಮಾಡಿಕೊಂಡೆ. ಹಾಗೂ ಸಭೆಯಲ್ಲಿ ಸಂಕೋಚ ಅಥವಾ ಮೇಲಾಟ ಬಾರದಂತೆ, ಡಾ| ಕೆ.ವಿ ಗುರುರಾಜರಿಂದ ತೊಡಗಿ ಬಹುತೇಕ ಎಲ್ಲರನ್ನು ನಾನೇ

ಕ್ರಮವಾಗಿ ಆಹ್ವಾನಿಸುತ್ತ ಹೋದೆ.

ದಾಖಲೀಕರಣ:

ಅಶೋಕವನದ ಇಂದಿನ ಪ್ರಾಕೃತಿಕ ಸಮೃದ್ಧಿಯೊಡನೆ ನಮ್ಮ ಕಲಾಪದ ಅರ್ಥವಂತಿಕೆಯನ್ನು ಎಲ್ಲ ಕಾಲಕ್ಕು ಹಿಡಿದಿಡುವ (ಉಚಿತವಲ್ಲ, ಕಂತ್ರಾಟು) ಜವಾಬ್ದಾರಿಯನ್ನು ಅಭಯ ತನ್ನ

ಪರಿಚಿತ ಬಳಗಕ್ಕೆ ವಹಿಸಿದ್ದ. ತಾನು (ಆತಿಥೇಯನಾಗಿ) ವ್ಯಸ್ತನಿರುತ್ತೇನೆ ಎಂದು ಸ್ಪಷ್ಟ ತಿಳಿಸಿ, ದಾಖಲೀಕರಣ ಕುರಿತಂತೆ ಎಲ್ಲ ಅಗತ್ಯಗಳನ್ನು ಪೂರ್ವಭಾವೀ ಸೂಚನೆಗಳಲ್ಲಿ ಕೊಟ್ಟಿದ್ದ. ಆದರೆ ತಂಡದ ಉಡಾಫೆಯಿಂದ ಅಭಯನಿಗೆ ಸಂಕಲನದ ಮೇಜಿನಲ್ಲಿ ದಕ್ಕಿದ್ದು ಕೇವಲ ಮಾತುಗಳು ಮಾತ್ರ ಎಂದು ತೀವ್ರ ವಿಷಾದದಲ್ಲಿ ಹೇಳುವುದುಳಿದಿದೆ, ಕ್ಷಮಿಸಿ. ಆದರೂ ಅವಶ್ಯ ವಿಡಿಯೋ ನೋಡಿ, ಕೇಳಿ:ಉಳಿದಂತೆ ಯಾರು ಯಾರು:

ಸಭೆಯನ್ನು ಉದ್ದೇಶಿಸಿ ಮಾತನಾಡದೆ, ನನ್ನ ಲೇಖನದ ಉಲ್ಲೇಖಗಳಿಗೆ ಸಿಗದೆ ಉಳಿದರೂ ಒಟ್ಟಾರೆ ಕಲಾಪದ ಗೌರವ ಹೆಚ್ಚಿಸಿದ ಹಲವರನ್ನು ನಾನು ಕನಿಷ್ಠ ಹೆಸರಿಸಲೇಬೇಕು. ದೇವಕಿ, ಅಭಯ ಮತ್ತು ರಶ್ಮಿ (ಆಭಾ ಸಹಿತ) ಸುಂದರ ರಾವ್, ಪ್ರೀತಿ ಗುರುರಾಜ್ (ಅವ್ಯಕ್ತನ ಸಹಿತ), ವಿದಿಷಾ ಕುಲಕರ್ಣಿ, ವಿನೀತ್, ಗೋಪಾಲಕೃಷ್ಣ ಬಾಳಿಗಾ, ಮಹೇಶ್ ಭಟ್, ಕಾವೂರು ಪ್ರಸನ್ನ, ಯಶಸ್ವೀ, ಎನ್.ಎ.ಎಂ. ಇಸ್ಮಾಯಿಲ್ ಮತ್ತು ತಾಹಿರಾ (ರಾಬಿಯಾ ಸಹಿತ), ಅನಿಲ್ ಶಾಸ್ತ್ರಿ (ಆಶು ಮತ್ತು ಅಂಜು ಸಹಿತ), ಅಜಾದ್ ಕಂಡಿಗ, ಅರುಣ್ ಡಿಸೋಜಾ, ರಾಧೆ ರಕ್ಷಿದಿಯರು ಅಲ್ಲದೆ ನಾನು ನೆನಪಿಸಿಕೊಳ್ಳಲಾಗದ ಇನ್ನೂ ಕೆಲವು ಮಂದಿ ಕಲಾಪದ ಮೇಲೆ ಪ್ರೀತಿ ಇಟ್ಟು ಬಂದಿದ್ದರು. 


ರಸೋಲ್ಲಾಸದೊಂದಿಗೆ ಮುಕ್ತಾಯ:

ಹೆಚ್ಚು ಕಮ್ಮಿ ಹನ್ನೆರಡೂ ಮುಕ್ಕಾಲರವರೆಗೂ ಆಮಂತ್ರಿತರು ಬರುತ್ತಲೇ ಇದ್ದರು. ಅಷ್ಟಾಗಿಯೂ ಒಂದು ಹಂತದಲ್ಲಿ ಸ್ವಾನುಭವದ ಟಿಪ್ಪಣಿಗಳನ್ನು ಕೊಡುವವರ ಕೊರತೆ ಬಂದಾಗ ಕೃಷ್ಣಮೋಹನ್, ತನ್ನ ಅನಿಸಿಕೆಗಳೊಡನೆ ಧನ್ಯವಾದ ಸಮರ್ಪಣೆಯನ್ನೂ ಮಾಡಿದ್ದರು. ಸಭಾ ಕಲಾಪದ ಒಂದು ಮಗ್ಗುಲಿನ ಒಂದು ಮರದ ಎತ್ತರವನ್ನು ಶೇಷಾದ್ರಿ ಏರಿಳಿವ ಪ್ರದರ್ಶನ ಕೊಟ್ಟರು. ಉದ್ದಕ್ಕೂ ಕಪ್ಪೆಗೂಡು, ತೊರೆ, ಕಾಡು ಎಂದು ಹಾರಾಡುತ್ತಿದ್ದ ಮಕ್ಕಳ ಸೈನ್ಯವನ್ನು ತಾಯಂದಿರು ವಿಶೇಷ ನಿರ್ಬಂಧಗಳನ್ನು ಹೇರದೇ ಅಪಾಯವಾಗದಷ್ಟು ಕಾಯ್ದುಕೊಳ್ಳುತ್ತಿದ್ದರು. ಉಳಿದಂತೆ ಎಲ್ಲರೂ ಕಲಕಲಿಸುತ್ತಿದ್ದ

ತೊರೆಯ ಹರಿವಿನ ಚಂದ, ನಿರಂತರ ಮೀಯುವ ಕಪ್ಪೆ, ಗೊಸರಿನ ಜಿಗಣೆ, ಕಾಡಹೂವಿನ ಚಿಟ್ಟೆ, ಪೊದರಿನ ಕೀಟ, ಮಿಂಚುವ ಹಕ್ಕಿ, ಅವಿರತ ಹಿಮ್ಮೇಳದ ಕಾಡಿನುಲಿಗಳು, "ಹಸುರಿನಲ್ಲಿ ಎಷ್ಟೊಂದು ಛಾಯೆ" ಎಂದು ತಲೆ ಹಾಳು ಮಾಡಿಕೊಳ್ಳುವಷ್ಟೂ ಗಿಡ ಮರಬಳ್ಳಿಗಳು, ನಗರದ

ಹುಸಿಪ್ರತಿಷ್ಠೆಗಳನ್ನು ಹೆಚ್ಚಿಸಬಹುದಾದ ಕೊರಡು, ಅಣಬೆ, ಕಲ್ಲು.... ಮುಂತಾದವುಗಳ ಸಂಗದಲ್ಲಿ ನೋಡುತ್ತ, ಕೇಳುತ್ತ, ಬಲ್ಲವರೊಡನೆ ಚರ್ಚಿಸುತ್ತ, ಒದಗಿದಂತೆ ದಾಖಲಿಸಿಕೊಳ್ಳುತ್ತಲೇ ಇದ್ದರು. ಸುಬ್ರಹ್ಮಣ್ಯದಿಂದ ತರಿಸಿದ್ದ ಸರಳ ಲಘೂಪಹಾರ ಮತ್ತೆ ಅಷ್ಟೇ ಉಪಯುಕ್ತ ಊಟದೊಡನೆ ಎಲ್ಲರೂ ಬಂದಂತೆ ಮರಳಿದರು. ಇನ್ನೇನಿದ್ದರೂ ಅಶೋಕವನಸ್ಥಿತವಾದ ‘ಕಪ್ಪೆಗೂಡು’ ಸಹಕರಿಸಿ ಮೂಡುವ ಹೊಸ ಬೆಳಕಿಗೆ ದಿಟ್ಟಿ ಕೀಲಿಸಿ ಕಾದಿರೋಣ.

13 comments:

 1. ಮನ ಬಿಚ್ಚಿದ ಬರವಣಿಗೆ ಅನ್ನಲೇ . ಮುಲಾಜಿಲ್ಲದ ನಿಮ್ಮ ಪ್ರತಿಪಾದನೆ ನೇರವಾಗಿದೆ. ಕುತೂಹಲಿಗರು ಬೇಡ ಅಧ್ಯಯನಾಸಕ್ತರು, ಅನುಸರಿಸುವವರು ಮಾತ್ರ ಸಾಕೆಂದಿರಿ.

  ಪ್ರಕೃತಿ ಯನ್ನ ಅದರ ಪಾಡಿಗೆ ಬಿಟ್ಟೆ, ಒಂದು ಗಿಡ ಒಂದು ಬೀಜ ಹಾಕಿಲ್ಲ. ಹೊಂದಾಣಿಕೆ ಬೇಕು ಅನಿಸಿತು.ನನಗೆ.
  ಪಕ್ಷಿನೋಟ ಮಾತ್ರ ಇದ್ದೂ ಇಲ್ಲದಂತೆ ಇರುವ ಪ್ರಯೋಗ.
  ನೋಡೋಣ ಮುಂದೊಮ್ಮೆ ನಮ್ಮಲ್ಲಿ ನೀವು ಕುಳಿತಾಗ.

  ReplyDelete
  Replies
  1. ‘ನಮ್ಮಲ್ಲಿ’ - ನೀವು ಯಾರೂಂತ ಗೊತ್ತಾಗಲಿಲ್ಲ! ‘ಹೊಂದಾಣಿಕೆ’ ಯಾವ ತೆರನದು? ಯಾವುದನ್ನು ‘ಪಕ್ಷಿನೋಟ ಮಾತ್ರ’ ಎಂದಿರಿ? ‘ಅಶೋಕವನ’ದ ಕುರಿತು ಹೆಚ್ಚು ಬೇಕಾದರೆ ಇಲ್ಲೇ ಅನ್ಯ ಲೇಖನಗಳನ್ನು ನೋಡಿ. ಕಪ್ಪೆಗೂಡಿನ (ನಿರ್ಮಾಣ ಮತ್ತು ಸ್ಥಾಪನೆ) ಬಗ್ಗೆ ಬೇಕಾದರೆ ಮುಂದಿನ ಕಂತು ಕಾಯಿರಿ. ಇಲ್ಲಿ ನಡೆಯುವ ಅಧ್ಯಯನ ಸಾಧ್ಯತೆಗಳ ಬಗ್ಗೆ ಹೇಳಲು ನಾನು ಅಧಿಕಾರಿಯಲ್ಲ (ವಿಜ್ಞಾನಿಯಲ್ಲ), ಕೇವಲ ಉತ್ಸಾಹಿ.

   Delete
  2. "ನಮ್ಮಲ್ಲಿ..."

   ನಾನು ಬೋಳು ಒಂದು ಮರ ಇಲ್ಲದಿಹ ಮುಳಿಬೆಳೆತಿದ್ದ ಬಾನಬೆಟ್ಟು ಆಡ್ಕ ವನ್ನ (೧೯೯೩) ಖರೀದಿಸಿದ್ದೆ.
   ಅಲ್ಲಿ "ನಮ್ಮಲ್ಲಿ" ನೀವು ಬಂದಾಗ ಮಾತಾಡೋಣ..ಅಂದೆ.
   ಅಲ್ಲಿ ಆ ಜಾಗವನ್ನು ನಾನೂ ಪ್ರಕೃತಿ ಯೂ " ಹೋಂದಾಣಿಕೆ" ಯೊಂದಿಗೆ ಬೆಳೆದಿದ್ದೇವೆ.
   ನೀವಿಲ್ಲಿ "ಪಕ್ಷಿ ನೋಟ" ಮಾತ್ರ ಮಾಡಿದ್ದು ಯಾವುದಕ್ಕೂ ಹಸ್ತ ಕ್ಷೇಪ ಮಾಡಿಲ್ಲ ಅಂದಂತನಿಸಿತು.ಇದ್ದು ಇಲ್ಲದಂತಿರುವ ರೀತಿ. ಸಿರಿಯಾ

   ಉಳಿದ ನಿಮ್ಮ ನಿಲುವು " ಸರಿ"
   ಹೊಂದಿಕೊಳ್ಳಬಹುದು ನನ್ನಂತವರಿಗೆ

   Delete
  3. ಅಯ್ಯೋ ಶಿವನೇ ನೀವು ಯಾರೂಂತ ಹೇಳಲೇ ಇಲ್ಲವಲ್ಲ :-(

   Delete
  4. ಶಿವ.(ಶಿವಶಂಕರ..(ಶಿಶಮಣಿಲಾ)). ನನ್ನ ಮಗ ಹಾಗೂ ಅಪ್ಪ ,(ಮಣಿಲಾ ಶಿವಶಂಕರ)
   ನಾನೋ.. ಮಹಾದೇವ ಶಾಸ್ತ್ರಿ, ಮಣಿಲಾ.

   Delete
  5. ಹ್ಹೋ!! ನಾವು (ದೇವಕಿ ಸಹಿತ) ಯಾರನ್ನೆಲ್ಲಾ ಊಹಿಸಿ ಕಷ್ಟಪಟ್ಟೆವು. (ನೀವು) ಕೃಷಿಕರು ಅಥವಾ ಹೆಚ್ಚಿನ ಇತರರು ನನ್ನ ಕ್ರಮವನ್ನೇ ಅನುಸರಿಸಬೇಕು, ಅಲ್ಲದಿದ್ದರೆ ತಪ್ಪು ಎನ್ನುವ ನಿಲುವು ನನ್ನದಲ್ಲವೇ ಅಲ್ಲ. ನಾನು ‘ಅಭಯಾರಣ್ಯ’ ತೊಡಗುವ ಕಾಲದಲ್ಲೇ ಶ್ರೀಪಡ್ರೆಯವರು ಕಾಸರಗೋಡಿನಲ್ಲಿ ಹಾಗೇ ಬಿಟ್ಟ ನೆಲವೊಂದು ಮರುವನ್ಯವಾಗಿ ಆಸುಪಾಸಿನವರಿಗೆ ಬರಗಾಲದಲ್ಲೂ ನಿರಂತರ ನೀರಿನಮೂಲವಾದ ಕತೆ ಹೇಳಿದ್ದರು. ಮೂಡಬಿದ್ರೆಯ ಸೋನ್ಸರು ಮೂರೋ ಐದೋ ಎಕ್ರೆ ಭೂಮಿಯನ್ನು ಆ ಕಾಲಕ್ಕೇ ಕೇವಲ ಗೋಡೆ ಕಟ್ಟಿ ರಕ್ಷಣೆ ಕೊಟ್ಟು ಅನೇಕ ಪರೋಕ್ಷ ಲಾಭಗಳನ್ನು ಪಡೆದದ್ದನ್ನು ಹೇಳುತ್ತಲೇ ಇದ್ದರು, ನಮಗೆ ತೋರಿಸಿದ್ದರು ಕೂಡಾ. ಈಚೆಗೆ ಅನೇಕ ಮಂದಿ ಅನ್ಯ ಆದಾಯ ಇರುವವರು ಭಾರೀ ಭೂಮಿಗಳನ್ನು ಕೇವಲ ಹಣ್ಣಿನ ಮರಗಳೋ ವೈವಿಧ್ಯಮಯ ಕೃಷ್ಯೇತರ ಸಸ್ಯವಾಟಿಯಾಗಿಯೋ ಮಾಡುವುದು ಕಾಣುತ್ತಲೇ ಇದ್ದೇನೆ. ಅಡಿಕೆ ಬಿಟ್ಟು ಲೋಕವಿಲ್ಲ ಎನ್ನುವವರ ನಡುವೆ ನಾನಂತೂ ನಿಮ್ಮ ‘ಹೊಂದಾಣಿಕೆ’ಯನ್ನು ತಪ್ಪು ತಿಳಿಯಲಾರೆ. ನನ್ನೆಲ್ಲಾ ಕೃಷಿಕ ಬಂಧುಗಳಂತೇ ‘ಅಶೋಕವನ’ದ ಶುದ್ಧ ಪ್ರಾಕೃತಿಕ ವಿಕಾಸಕ್ಕಷ್ಟೇ ಅವಕಾಶ ಎನ್ನುವ ನಿಲುವಿನಿಂದ ತುಸು ಆಚೆ ಈಚೆ ಓಡಾಡುವವರೂ ನನಗೆ ಒಟ್ಟಾರೆ ಹಸಿರು ಕೊಡುವವರು ಎಂಬ ಪ್ರೀತಿಪಾತ್ರರೇ.

   Delete
 2. ತುಂಬಾ ಜೆನ್ನಾಗಿ ವಿವರಿಸಿದ್ದೀರಿ ಗುರುಗಳೇ... ನಿಮ್ಮ ಪ್ರಯೋಗ ಸಫ಼ಲವಾಗಲಿ.

  ReplyDelete
 3. ಹೀಗೆಲ್ಲಾ ಮಾಡಲು ಸಾಧ್ಯ ಅಂತಾನೇ ತಿಳಿದಿರಲಿಲ್ಲ.ಕಪ್ಪೆಗೂಡು ಹೆಸರೇ ತುಂಬ ಸಾಂಕೇತಿಕವಾಗಿದೆ. ಪ್ರಕೃತಿಯೊಡನೆ ಐಕ್ಯವಾಗುತ್ತಲೇ ಅದನ್ನು ಎಚ್ಚರದ ಕಣ್ಣುಗಳಿಂದ ನೋಡಲೂ ಸಾಧ್ಯ ಎಂಬುದನ್ನು ಈ ಲೇಖನ- ಪ್ರಯೊಗ ಮನಗಾಣಿಸಿತು.

  ReplyDelete
 4. ಇದರಲ್ಲಿ ವಾಸ ಮಾಡಲಿಕ್ಕಾದರೂ ಕಪ್ಪೆ ಸಂಶೋಧನೆಗೆ ತೊಡಗಬೇಕು ಎಂಬ ಆಸೆಯಾಗಿದೆ!!...ಅಜಕ್ಕಳ ಗಿರೀಶ

  ReplyDelete
 5. ಇದರಿಂದ ಎಲ್ಲಾ ಆಸಕ್ತರು ಮತ್ತು ಸಂಶೋಧಕರಿಗೆ ಒಳ್ಳೆದಾಗಲಿ. ಎಲ್ಲೋ ಒಂದು ಕಡೆ ಈ ಜಾಗ ಪುಂಡ ಪೋಕಿರಿಗಳ ಅಡ್ಡ ಆಗಿಬಿಡುತ್ತೆ ಅಂತ ಹೆದರಿಕೆ ಕೂಡ ಇದೆ, ಅದನ್ನ ತಪ್ಪಿಸುವ ಬಗ್ಗೆ ನೀವು ಜಾಸ್ತಿ ವಿವರ ಕೊಟ್ಟಿಲದೆ ಇದ್ದರೂ ಏನಾದ್ರೂ ಉಪಾಯ ಮಾಡಿರುತ್ತಿರಿ ಅನ್ನೋ ಭರವಸೆ ಇದೆ!

  ReplyDelete
  Replies
  1. ಹಾಗೇ ದಾರಿಯಲ್ಲಿ ವಾಹನಗಳು ನುಗ್ಗಿ, ಒಲೆ ಹೂಡಿ ಅಡುಗೆ ಮಾಡಿದ, ಉಂಡು ಎಸೆದ, ಬಾಟಲೀಪುತ್ರರಾದ ಕುರುಹುಗಳು ಧಾರಾಳ ಸಿಕ್ಕುತ್ತಿರುತ್ತವೆ. ಆದರೆ ಯಾರೂ ನಮ್ಮ ಕಣಿವೆಗೆ ಇಳಿಯುವ ಧೈರ್ಯ ಮಾಡಿದಂತೆ ಕಾಣಿಸಲಿಲ್ಲ. ಈಗ ದಾರಿಗಡ್ಡವಾಗಿ ಸರಪಳಿ, ಬೀಗ ಹಾಕಿದ್ದೇವೆ. ಮತ್ತೆ ಮುಖ್ಯವಾಗಿ ಗುಬ್ಬಿ ಲ್ಯಾಬ್ಸ್ ಮತ್ತು ನನ್ನ ಜತೆಯಷ್ಟೇ ಅಲ್ಲಿನ ಕೀಲಿಕೈಗಳು ಇರುತ್ತವೆ ಮತ್ತು ನಾನು ಅಲ್ಲಿ ಉಳಿಯುವವರಿಗೆ ಹೆಚ್ಚಾಗಿ ಜತೆಗಾರನಾಗಿ ನನ್ನ ಕಾಡು ಸುತ್ತುವ, ನೋಡುವ ಆಸೆ ಪೂರೈಸಿಕೊಳ್ಳುತ್ತಾ ಚೌಕೀದಾರನೂ ಆಗುತ್ತೇನೆ ಎಂದೇ ಘೋಷಿಸಿದ್ದೆನೆ. ನಾನು ದೇಶದ ಚೌಕೀದಾರನಿಗಿಂತ ಸಮರ್ಥನಾದೇನು ಅಲ್ಲವೇ :-)

   Delete
  2. ಸಂದೀಪರೇ... ಇಡೀ ಘಾಟಿಯಲ್ಲಿ ಬೇರೆ ಹಲವು ಕಡೆ ಗಾಡಿ ನಿಲ್ಲಿಸಿ ಡೆನ್ಸ್ ಮಾಡುವ ಸೌಕರ್ಯವಿದೆ. ಇವರ ಜಾಗ ರಸ್ತೆಯಿಂದ ಸ್ವಲ್ಪ ಒಳಗೆ ಕಾಡಿನೊಳಗೆ ಇದೆ. ರಸ್ತೆಯಿಂದ ಸಂಪರ್ಕ ಅಷ್ಟು ಸರಿ ಇಲ್ಲ. ರಸ್ತೆ ಬಿಟ್ಟು ಒಳಗೆ ಇದ್ದುದರಿಂದ ಕಾಡು ಪ್ರಾಣಿಗಳ ಕಾಟ ಇರೋ ಸಾಧ್ಯತೆ ಇದೆ. ಬಿಸಿಲೆ ಹಳ್ಳಿಯಲ್ಲಿ ನಾನು ಬೇರೆಯವರ ಹತ್ರ ಮಾತಾಡಿದಾಗ ಅಲ್ಲಿ ಆನೆಗಳೆಲ್ಲ ಅಲೆಯುವ ಜಾಗ ಅಂತ ಹೇಳಿದ್ರು.ಮತ್ತೆ ಮಳೆಗಾಲದಲ್ಲಿ ದಾರಿಯಲ್ಲೀಡೀ ಗಿಡಗಳು ಬೆಳೆದು ಒಳಗೆ ಹೊಗೋದು ದುಸ್ತರವಾಗುತ್ತೇ... ಗಮ್ಮತ್ತು ಮಾಡೋರಿಗೆ ಇಲ್ಲಿ ನುಗ್ಗೋದು ಉಪಯೋಗ ಆಗ್ಲಿಕ್ಕಿಲ್ಲ, ರಗಳೆ ಆದೀತು ಎಂದಭಿಪ್ರಾಯ ನನ್ನದು. (ಮೊನ್ನೆ ಲೋಕಾರ್ಪಣೆ ಸಮಯ ಅಲ್ಲಿದ್ದೆ ನಾನು)

   ಮತ್ತೆ ಈ ಮೀಸೆ ಮಾಮ ನಮ್ಮವರು ಬರೇ ಘಾಟೀ ಮನುಷ್ಯ ಮಾರ್ರೆ. ಇವರು ಚೌಕೀದಾರರಾದ್ರೆ ಪುಂಡ ಪೋಕರಿಗಳ ಅವಸ್ಥೆ ಆದ ಹಾಗೇ....

   Delete
 6. Usually, we think only Governments are involved in supporting research work. It is nice to see private persons also facilitating the research work. Hats off to your commitment. Wish this initiative all success.

  ReplyDelete