25 September 2020

ಗಂಗಾ ಪಾತ್ರೆಯಲ್ಲಿ ಸ್ವಲ್ಪ ಉದ್ದಕ್ಕೆ...

(ಭಾರತ ಅ-ಪೂರ್ವ ಕರಾವಳಿಯೋಟ - ೬) ‘ಆಸೇತು ಹಿಮಾಚಲ’ ಎನ್ನುವಲ್ಲಿ ಭಾರತದ ಉದ್ದ ಸ್ಪಷ್ಟ ಇದೆ. ಬಹುತೇಕ ಆ ‘ಸೇತು’ವಿನ (ದಕ್ಷಿಣ ಕೊನೆಯ ರಾಮಸೇತು) ಸಮೀಪವೇ ಇರುವ ನಾವು ಭಾರತಯಾನ ಎಂದೇ ಯೋಜಿಸುವಾಗ, ಹಿಮಾಲಯ ಮುಟ್ಟದೇ ಪರಿಪೂರ್ಣವಲ್ಲ ಎಂಬ ಭಾವವೂ ಸೇರಿತ್ತು. ಹಾಗಾಗಿ ಮೊದಲ ಹಂತದಲ್ಲಿ ಯೋಜನೆಯಂತೇ ರೈಲ್ವೇ, ನಗರದರ್ಶನ, ದೋಣಿಯಾನ ಎಂದೆಲ್ಲ ಎಂಟು ದಿನ ಸಂದರೂ ಆ ಬೆಳಿಗ್ಗೆ (೨೨-೪-೯೬) ನಿಜದ ಬೈಕ್ ಯಾನ ಮತ್ತು ‘ಹಿಮಾಚಲ’ ಮುಟ್ಟಲು ಹೊರಟಿದ್ದೆವು. 


ಕನ್ನಡ ಸಂಘದ ಔಪಚಾರಿಕತೆಗಳನ್ನೆಲ್ಲ ಹಿಂದಿನ ರಾತ್ರಿಗೆ ಮುಗಿಸಿದ್ದೆವು. ಪೂರ್ಣ ಬೆಳಕು ಹರಿಯುವುದಕ್ಕೂ ಮೊದಲೇ (ಸುಮಾರು ೪.೩೦) ಕನ್ನಡ ಸಂಘದ ಕಟ್ಟಡಕ್ಕೆ ವಿದಾಯ ಹೇಳಿದ್ದೆವು. ಆದರೆ ಹಿಂದಿನ ದಿನ ಬೈಕ್ ಪೆಟ್ರೋಲ್ ಭರ್ತಿ ಮಾಡದ ತಪ್ಪಿಗೆ ಮೊದಲು ಸಮಯದ ದಂಡ ಕೊಟ್ಟೆವು. ಮತ್ತೆ ತಡವಾಗಿಯಾದರೂ ನಮ್ಮ ಹೊಟ್ಟೆಗಿಷ್ಟು ಹಾಕುವಲ್ಲೂ ವಿಳಂಬವಾದ್ದಲ್ಲದೆ ತೀರಾ ಕೊಳಕು ದಾಬಾದಲ್ಲಿ ಸುಧಾರಿಸಿಕೊಳ್ಳಬೇಕಾಯ್ತು. ಆದರೂ ಒಂದು ಮಧುರ ವಿಚಾರ - ಬಿಸಿಬಿಸಿ ಜಿಲೇಬಿಯದು! ನಮ್ಮ ವಲಯದ ಹೋಟೆಲುಗಳು ಪ್ರಥಮಾದ್ಯತೆಯಲ್ಲಿ ಕಳಸಿಗೆ ಏರಿಸಿ ಹಬೆಯಾಡುವ ಇಡ್ಲಿ ಉರುಳಿಸಿದರೆ, ಈ ಭಾಗಗಳಲ್ಲಿ ಬಾಣ್ಲೆ ಏರಿಸಿ ಜಿಲೇಬಿ ಕರಿಯುತ್ತಾರೆ! ರೂಢಿ ಬಲದವರಿಗೆ "ಬೆಳಿಗ್ಗೆ ಎದ್ದದ್ದೇ ಸಿಹಿ ತಿಂಡಿಯೇ" ಎಂದು ಆಶ್ಚರ್ಯವಾಗುವುದಿರಬಹುದು. ನಾವಂತೂ ಎರಡೆರಡು ತಟ್ಟೆ ಜಿಲೇಬಿ ಕುರುಕಿ, ಚಪ್ಪರಿಸಿ, ಬೆಂಬಲಕ್ಕೆ ಚಾ ಕಳಿಸಿ ತೃಪ್ತರಾದೆವು. 


ಕಲ್ಕತ್ತಾ ನಗರ ರಸ್ತೆಗಳ ಜಾಲ ಬಿಡಿಸಿಕೊಳ್ಳುವುದು ಇನ್ನೊಂದು ಸಮಸ್ಯೆಯಾಯ್ತು. ಸಂಘದಲ್ಲಿ ಕೇಳಿಟ್ಟುಕೊಂಡ ದಾರಿ ಹೆಸರುಗಳ ಬೋರ್ಡುಗಳು ಬಂಗಾಳಿಯಲ್ಲಿದ್ದು, ನಮ್ಮೊಡನೆ ಮಾತಾಡಲಿಲ್ಲ. ಇಂಗ್ಲಿಷಿನಲ್ಲಿ ಸಿಕ್ಕ ಬೋರ್ಡುಗಳು ನಮ್ಮ ಪಟ್ಟಿಗೆ ತಾಳೆಯಾಗಲಿಲ್ಲ. ವಿಚಾರಣೆಗೆ ಸಿಕ್ಕ ಕೆಲವೇ ಮಂದಿಗಳ ‘ಬೊಂಗಾಳೀ’ ಅಭಿನಯದಲ್ಲಿ ಅಂತೂ ಸರಿ ದಿಕ್ಕು ಹಿಡಿಯುವಾಗ ಭಾನು ಪ್ರತಾಪಿಯಾಗಿದ್ದ. ಹನ್ನೊಂದು ಗಂಟೆಗೆ ಕೇವಲ ನೂರಾ ಹದಿನೈದು ಕಿಮೀ ಓಡಿ ನಿಂತ ಮೊದಲ ಪುಟ್ಟ ಊರು... 

ಕಾಮಾರ್‍ಪುಕೂರ್ - ರಾಮಕೃಷ್ಣ ಪರಮಹಂಸರ ಜನ್ಮಸ್ಥಳ. ನಾನು ಪ್ರೌಢಶಾಲಾ ಮಟ್ಟದಲ್ಲಿ, ಬೆಂಗಳೂರು ರಾಮಕೃಷ್ಣಾಶ್ರಮದ ಬಾಲಕ ಸಂಘದ ಸದಸ್ಯನಾಗಿದ್ದೆ. ನನ್ನೊಳಗೆ ಅದರ ಮಧುರ ನೆನಪುಗಳ (ನೋಡಿ: ೪. ಪುಸ್ತಕ ವ್ಯಾಪಾರಿಯ ಮೊಳಕೆ ಬಾಡಿದ್ದು) ಜತೆಗೆ, ವೃತ್ತಿಪರ ಪುಸ್ತಕ ವ್ಯಾಪಾರಿಯಾದ ಮೇಲೆ ಮೈಸೂರು ಆಶ್ರಮದ ಪ್ರಕಾಶನ ವಿಭಾಗದೊಡನೆ ಗಳಿಸಿದ ಗಾಢ ವಿಶ್ವಾಸವೂ ಸೇರಿಕೊಂಡಿತ್ತು. ಮತ್ತೆ ನಾನು ಕಂಡಂತೆ ಪಾರಂಪರಿಕ ಭಕ್ತಿ ವಲಯದಿಂದ ಹೊರಗೆ ಯೋಚಿಸಬಲ್ಲ ತಾಕತ್ತು ರಾಮಕೃಷ್ಣ

ಆಶ್ರಮಗಳಿಗೆ ಇವೆ. ಹಾಗಾಗಿ ಕೇವಲ ಸ್ಥಳ ಪರಿಚಯಾತ್ಮಕ ಕುತೂಹಲದಲ್ಲಿ ನನಗವುಗಳನ್ನು ನೋಡುವ ಬಯಕೆ ಇಟ್ಟುಕೊಂಡೇ ಆ ದಾರಿಯಲ್ಲಿ ಬಂದಿದ್ದೆವು. ಭಕ್ತಾದಿಗಳಂತೆ ನಾವು ಪೂಜೆ, ಧ್ಯಾನ, ಶಾಂತಿ ಎಂದು ಸಮಯ ಕಳೆಯಲಿಲ್ಲ. ರಾಮಕೃಷ್ಣ ಪರಮಹಂಸರು ಹುಟ್ಟಿದ ಮನೆ, ಬಾಲ್ಯದಾಟಕ್ಕೆ ಒದಗಿದ ಮಾಮರಗಳಾದಿ ಹಳೆಗಾಲದ ನೆನಪುಗಳನ್ನು ಅಷ್ಟೇ ಸರಳ ಹಾಗೂ ಚೊಕ್ಕವಾಗಿ ಕಾಯ್ದಿರಿಸಿದ್ದನ್ನು ಚುರುಕಾಗಿ ನೋಡಿದ್ದೆವು. ಅಲ್ಲಿನ ಕಾರ್ಯಕರ್ತರು ತುಸು ಕಾದು ‘ಪ್ರಸಾದ್’ (ಊಟ) ಮುಗಿಸಿಕೊಂಡೇ ಹೋಗಿ ಎಂದು ಸೂಚಿಸುವುದನ್ನು ಮರೆಯಲಿಲ್ಲ. ಕಾಲಬಂಧಿಗಳಾದ ನಾವು ಸವಿನಯ ನಿರಾಕರಿಸಿ, ಮುಂದುವರಿದೆವು. ಮತ್ತೆ ಆರೇ ಕಿಮೀಯಲ್ಲಿ ಶಾರದಾಮಾತೆಯ ಹುಟ್ಟೂರು - ಜಯರಾಂಭಟ್ಟಿ. ಅಲ್ಲಿನ ರಾಮಕೃಷ್ಣಾಶ್ರಮದ ಶಾಖೆ ಸಾಕಷ್ಟು ದೊಡ್ಡದೇ ಇತ್ತು. ಮಂದಿರದಲ್ಲಿ ಏನೋ ವಿಶೇಷ ಭಜನೆ ನಡೆದಿತ್ತು. ಅದನ್ನೂ ಸಟಸಟನೆ ನೋಡಿ ಜಾಗ ಬಿಡುವ ಅಂದಾಜಿನಲ್ಲಿದ್ದೆವು. ಆದರೆ ಅವೇಳೆಯಲ್ಲಿ ಬಂದ, ವಿಚಿತ್ರ ನೋಟದ ನಮ್ಮನ್ನು ಅಲ್ಲಿನ ಸ್ವಾಮಿಗಳು ಸಹಜ ಕುತೂಹಲದಲ್ಲಿ ವಿಚಾರಿಸಿಕೊಂಡರು. ಕಿರಿದರಲ್ಲಿ ನಮ್ಮ ‘ಸಾಹಸಯಾನ’ದ ಪರಿಚಯ, ಬೇಲೂರು ಮಠ ಹಾಗೂ ಸ್ವಾಮೀ ಜಗದಾತ್ಮಾನಂದರ ಭೇಟಿಗಳನ್ನೆಲ್ಲ ತಿಳಿದು ಸಂತೋಷಪಟ್ಟರು. ಅಷ್ಟರಲ್ಲಿ ಗಂಟೆ ಹನ್ನೆರಡು ಕಳೆದಿದ್ದುದರಿಂದ ಅವರ ‘ಪ್ರಸಾದ’ ಸ್ವೀಕಾರದ ಸೂಚನೆಯನ್ನು ತಳ್ಳಿಹಾಕಲಿಲ್ಲ. ಬಹಳ ಹಿತವಾದ ಊಟವನ್ನೇ ಮುಗಿಸಿ ಬೀಳ್ಕೊಂಡೆವು. 


ಮಂಜೇಶ್ವರ ಮುಕುಂದ ಪ್ರಭು (೧೯೩೧-೨೦೧೪) - ವೃತ್ತಿಯಲ್ಲಿ ಮಂಗಳೂರಿನ ಮಲ್ಯಾ ಸೋಪ್ಸಿನ ಮ್ಯಾನೇಜರ್ ಆಗಿದ್ದು ನಿವೃತ್ತಿ ಕಂಡವರು. ಅವರ ಅದಮ್ಯ ಕುತೂಹಲ ಮತ್ತು ಅಪಾರ ಓದಿನಲ್ಲಿ ಸಂಗ್ರಹಿಸದ ಮತ್ತು ಅಧ್ಯಯನ ಮಾಡದ ವಿಷಯವಿಲ್ಲ. ಅಂಚೆ ಚೀಟಿ, ನಾಣ್ಯ, ಅಮೂಲ್ಯ ಹರಳುಗಳು, ಚಿಪ್ಪುಗಳು.... ಒಂದು ಮುಖ. ಅವೆಲ್ಲವುಗಳ ಐತಿಹಾಸಿಕ ಮತ್ತು ವೈಜ್ಞಾನಿಕ ಮಾಹಿತಿಯೂ ಸೇರಿದಂತೆ ಪುಸ್ತಕ, ಇತಿಹಾಸ, ಭಾಷೆ, ಸಂಗೀತ, ಜನಾಂಗ, ಸಸ್ಯಪ್ರಪಂಚ, ವಾಸ್ತು, ಜ್ಯೋತಿಷ್ಯಾದಿ ವಿಷಯಗಳ ಮೇಲೂ ಅಧ್ಯಯನಾತ್ಮಕ ಮತ್ತು ಆನ್ವಯಿಕ ವಿದ್ವತ್ತುಗಳ

ಮಹಾಪ್ರಭು ಈ ಮುಕುಂದರು. ಇವರು ಸಂಪಾದಿಸಿದ ಪೊಲಿ - ಕೆನರಾ ೨೦೦ (ದಕ ಜಿಲ್ಲೆಯ ಕುರಿತು), ಇಂಗ್ಲಿಷಿನಲ್ಲಿ ‘ಇಂಡಿಯಾನ’ (ಗೋವಿಂದ ಪೈಗಳ ಇಂಗ್ಲೀಷ್ ಬರಹಗಳ ಮಹಾಸಂಕಲನ) ಮುಂತಾದ ಒಂದೊಂದು ಗ್ರಂಥಗಳೂ ಅವರ ವಿದ್ವತ್ತಿಗೆ ಹಿಡಿದ ಕನ್ನಡಿಗಳು, ವಿವಿನಿಲಯ ಅವರಿಗೆ ಕೊಟ್ಟ ಗೌರವ ಡಾಕ್ಟರೇಟ್ ಅವರ ಪ್ರತಿಭೆಗೆ ಅಂಡರ್ ರೇಟ್! ಇಷ್ಟರ ಮೇಲೆ ಮುಕುಂದ ಪ್ರಭುಗಳು ಪರಮ ಉದಾರಿ ಮತ್ತು ಪರೋಪಕಾರಿಯೂ ಆದ್ದರಿಂದ... 


ಅಪೂರ್ವ ಕರಾವಳಿಯೋಟದ ಯೋಜನಾ ದಿನಗಳಲ್ಲಿ ನಾನು ಮುಕುಂದ ಪ್ರಭುಗಳನ್ನು ವಿಶೇಷವಾಗಿ ಕಂಡಿದ್ದೆ. ಅವರು ಮೊದಲಲ್ಲೇ ಉತ್ಸಾಹದಿಂದ ಉದ್ಗರಿಸಿದ್ದರು "ನಮ್ಮ, ಅಂದರೆ ಜೀಎಸ್ಬೀಗಳ ಮೂಲ ನೆಲೆಯತ್ತ ಹೋಗುತ್ತಿದ್ದೀರಿ!" ಅವರು ಕೊಟ್ಟ ಮಾಹಿತಿ, ಸಲಹೆಗಳ ಮಹಾಪೂರದಲ್ಲಿ ನಾನು ಗ್ರಹಿಸಿದ ಒಂದು ಎಳೆ ಬಿಷ್ಣುಪುರ ( - ‘ವಿಷ್ಣುಪುರ’ ಎನ್ನಬೇಡಿ, ನಾಳೆ ಅಲ್ಲಿನವರು ‘ಬೆಂ’ ಒರೆಸಿ, ನಮಗೇ ‘ವೆಂಗಳೂರು’ ಕೊಟ್ಟಾರು!). ಜಯರಾಂ ಭಟ್ಟಿಯಿಂದ ಬೆಂಕಿ ಮಳೆಯಲ್ಲೇ ಸುಮಾರು ನಲ್ವತ್ತು ಕಿಮೀ ಸವಾರಿ ಪೂರೈಸಿ ನಿಂತ ನೆಲ ‘ಮಲ್ಲ’ರ ಬಿಷ್ಣುಪುರ. ಆರೇಳನೇ ಶತಮಾನದ ಸುಮಾರಿಗೆ ಈ ವಲಯದ ಆಳುವವರಾಗಿ ಬಂದ ಮಲ್ಲ ಮನೆತನ, ೧೭ನೇ ಶತಮಾನದ ಸುಮಾರಿಗೆ ಉಚ್ಛ್ರಾಯದಲ್ಲಿತ್ತೆಂದು ಇತಿಹಾಸ ಹೇಳುತ್ತದೆ. ಅಂದಿನ ರಾಜರುಗಳು (ರಘುನಾಥ ಸಿಂಘಾದಿಗಳು) ಶ್ರೀ ಚೈತನ್ಯರ ಅನುಯಾಯಿಗಳಾಗಿ ಕಟ್ಟಿಸಿದ ಅಸಂಖ್ಯ ಮತ್ತು ವಿಶಿಷ್ಟ ದೇವಾಲಯಗಳು ಬಹು ಪ್ರೇಕ್ಷಣೀಯವಾಗಿವೆ. ಅವೆಲ್ಲ ಸುಟ್ಟ ಇಟ್ಟಿಗೆಯ

ಕುಸುರಿ ಕೆಲಸಗಳಿಗೇ ಹೆಸರಾದ ದೇವಳಗಳು. ಅವುಗಳಲ್ಲಿ ಮೂವತ್ತಕ್ಕೂ ಮಿಕ್ಕ ರಚನೆಗಳು ವೈರಿಗಳ ವಿಧ್ವಂಸ ಧಾಳಿಗಳು ಮತ್ತು ಮೂರು ಶತಮಾನಕ್ಕೂ ಮೀರಿದ ಕಾಲನ ಪರೀಕ್ಷೆಗಳನ್ನು ಜಯಿಸಿ ಸುಧೃಢವಾಗಿಯೇ ಉಳಿದು ಬಂದಿವೆ. ಅವುಗಳಲ್ಲೂ ಸುಮಾರು ಇಪ್ಪತ್ತನ್ನು ಪ್ರಾಚ್ಯ ಇಲಾಖೆ ಹೆಚ್ಚಿನ ಭದ್ರತೆ ಕೊಟ್ಟು ಪ್ರೇಕ್ಷಣೀಯವನ್ನಾಗಿಸಿತ್ತು. ನಾವು ನಾಲ್ಕೈದು ದೇವಳಗಳನ್ನು ಸುತ್ತಾಡಿದೆವು. ಎಲ್ಲೂ ಆರಾಧನೆ ಇದ್ದಂತಿರಲಿಲ್ಲ. ಒಂದಕ್ಕೆ (ಬಹುಶಃ ಇಲಾಖೆಯ ಉಪಯೋಗಕ್ಕೆಂಬಂತೆ) ತೀರಾ

ವಿಕಾರವಾದ ಆಧುನಿಕ ರಚನೆಯನ್ನು ಸೇರಿಸಿರುವುದು ಮಾತ್ರ ವಿಷಾದನೀಯ. ಸುಮಾರು ಅರ್ಧ ಗಂಟೆಯ ನೋಟ, ಓಡಾಟ ಮುಗಿಸಿ, ದಿನದ ಕೊನೆಯ ಲಕ್ಷ್ಯ - ಶಾಂತಿನಿಕೇತನದ ಜಪ ಹಿಡಿದೆವು. 

ಬಿಷ್ಣುಪುರ ಬಿಡುವಾಗಲೇ ಗಾಳಿ ಯಾಕೋ ಹೆಚ್ಚಾಗಿತ್ತು. ಸೋನಾಮುಖಿ ಕಳೆದು, ರಾಂಪುರಕ್ಕಾಗುವಾಗ ಒಮ್ಮೆಲೆ ದೊಡ್ಡ ಸುಂಟರಗಾಳಿ ಎದ್ದಿತ್ತು. ನಮ್ಮಿಂದ ಸುಮಾರು ನೂರಡಿ ಎದುರು, ಹೊಲದ ಬಯಲಿನಲ್ಲಿ ಭೂಮ್ಯಾಕಾಶ ಒಂದು ಮಾಡಿದಂತೆ

ಗಿರಗಿರನೆ ತಿರುಗುತ್ತ, ಅಂಕಾಡೊಂಕಿ ನುಲಿಯುತ್ತ ಬಂದ ದಟ್ಟ ದೂಳಿ ಕಂಬ ಕಡ್ಡಿ, ಕಸ ಸಿಕ್ಕಿದ್ದೆಲ್ಲವನ್ನು ಗೆಬರಿಕೊಳ್ಳುತ್ತ, ಎತ್ತೆತ್ತರಕ್ಕೆ ಏರಿಸುತ್ತ, ಉದುರಿಸುತ್ತ ರಕ್ಕಸ ತಾಂಡವವಾಡಿತು. ನಾವು ಹೆದರಿ ಪಂಚಾಯತ್ ಆಫೀಸ್ ಒಂದರ ಗಟ್ಟಿ ಕಟ್ಟಡದ ಮರೆ ಸೇರಿ ನಿಂತುಕೊಂಡೆವು. ಹಿಂಬಾಲಿಸಿದಂತೆ ಭಾರೀ ಮಳೆ ಇನ್ನಿಲ್ಲದಂತೆ ಗೋಳಾಡಿತು. ಆದರೆ ಎಲ್ಲ ಕಾಲರ್ಧ ಗಂಟೆಯಲ್ಲಿ ಕಳೆದು, ನಿಚ್ಚಳವಾಯ್ತು. 

ಕೂಡು ರಸ್ತೆ - ಬೆಲಿಯಾತೋರ್ ಎಂಬಲ್ಲಿ ನಾವು ಬಂಕುರಾ - ಶಾಂತಿನಿಕೇತನದ ಸ್ವಲ್ಪ ದೊಡ್ಡ ದಾರಿ ಸೇರಿದೆವು. ಮೊದಲೇ ಹೇಳಿದಂತೆ, ಬೋರ್ಡುಗಳು ನಮಗೆ ಅಪಠ್ಯ, ಸ್ಥಳನಾಮಗಳು ಅಪರಿಚಿತ, ಕೊನೆಗೆ ಮೌಖಿಕ ವಿಚಾರಣೆಗೆ ಹೆಚ್ಚಾಗಿ ಸಿಗುತ್ತಿದ್ದವರು ಅಬೋಧರು. ನಾವು ಕೇಳುವುದು ಒಂದು, ಅವರು ಹೇಳುವುದು ಇನ್ನೊಂದು. ಹಾಗೆ ಒಬ್ಬಿಬ್ಬರಲ್ಲಿ ಕೇಳಿಯೇ ನಾವು ಹಿಡಿದದ್ದು ಸರಿ ದಾರಿ ಆದರೆ ದಿಕ್ಕು ತಪ್ಪು. ಹದಿನಾರು ಕಿಮೀ ಕಳೆದ ಮೇಲೆ ಸಿಕ್ಕ ಬಂಕುರಾದಲ್ಲಿ ವಿಚಾರಿಸಿದಾಗ ನಮ್ಮ

ತಪ್ಪಿನ ಅರಿವಾಯ್ತು. ವಾಪಾಸಾಗುತ್ತಾ ತಲೆಯೊಳಗೆ ಲೆಕ್ಕ ಅಣಕಿಸಿತ್ತು. ಕಾಗದದ ಮೇಲೆ ತಪ್ಪು ಗೀಟೆಳೆದು ಒರೆಸಿ ಹಾಕುವುದು ಸುಲಭ. ಡಾಮರಿನ ಶಾಸ್ತ್ರ ಕಂಡ ಹಳ್ಳಿಗಾಡಿನ ದಾರಿಯಲ್ಲಿ, ಸುಡುಸುಡು ಬಿಸಿಲಿನಲ್ಲಿ, ಮೂವತ್ತೆರಡು ಕಿಮೀ ಉದ್ದ, ಒಂದು ಗಂಟೆ ಸಮಯ ಮತ್ತು ಶ್ರಮವಾದರೋ ಅನುಭವಿಸಿಯೇ ತಿಳಿಯಬೇಕು. 

ಮತ್ತೆ ಬೆಲಿಯಾತೋರ್ ಮುಟ್ಟಿ, ಶಾಂತಿನಿಕೇತನದ ದಿಕ್ಕು ಹಿಡಿದೆವು. ದಾರಿಯಲ್ಲಿ ದಾಮೋದರ ನದಿಗಡ್ಡಲಾಗಿ ದುರ್ಗಾಪುರದಲ್ಲಿ ಹಾಕಿದ ಸಣ್ಣ ಅಣೆಕಟ್ಟಿನ (ಬ್ಯಾರೇಜ್) ಮೇಲೆ ಬರುವಾಗಲೇ ಕತ್ತಲಾಗಿತ್ತು (ಸಂಜೆ ಆರು ಗಂಟೆ!). ಹಿಂದಿನ ಸಾಹಸಯಾನದ ಕಾಲದಲ್ಲೇ "ಬೆಳಿಗ್ಗೆ ಬೇಗ ಹೊರಟರೂ ಅಡ್ಡಿಯಿಲ್ಲ. ಸಂಜೆ ಕತ್ತಲಾದ ಮೇಲೆ ಅಪರಿಚಿತ ದಾರಿಗಳಲ್ಲಿ ಸವಾರಿ ಕೂಡದು" ಎಂಬ ನಿರ್ಧಾರವೇನೋ ಗಟ್ಟಿಯಾಗಿಯೇ ನೆನಪಿತ್ತು. ಯೋಜನಾ ಹಂತದಲ್ಲಿ ಕಾಳಜಿಪೂರ್ಣ ನಿರುತ್ತೇಜಕರಂತೂ ಅಂತೆಕಂತೆಗಳ ಕಡತ ಬಿಚ್ಚಿ (ಈ ಕಾಲದಲ್ಲಿ

ವಾಟ್ಸಪ್ ವಿವಿ ಅಥವಾ ಟೀವೀ ಛಾನೆಲ್ಲುಗಳು ಎನ್ನಬಹುದಿತ್ತು!) "ಬಿಹಾರ, ಒರಿಸ್ಸಾ ವಲಯಗಳಲ್ಲಿ ಹಾಡೇ ಹಗಲೇ ಹಳ್ಳಿಗರು ಬೈಕುಗಳನ್ನು ದರೋಡೆ ಮಾಡಿ, ಅವರ ನೀರಿನ ಪಂಪುಗಳಿಗೆ ಬಳಸಿಕೊಳ್ಳುತ್ತಾರೆ" ಎಂದೇ ಹೆದರಿಸಿದ್ದರು. ಆದರೂ ನಿಯಮಕ್ಕೊಂದು ವಿನಾಯ್ತಿ, ಆತುರದಲ್ಲಿ ನಶಿಸುವುದಕ್ಕಿಂತ ನಿಧಾನಿಯಾಗಿ ನವೆಯಬಹುದು ಎಂಬ ಎಚ್ಚರದಲ್ಲಿ, ದುರ್ಗಾಪುರ ಬ್ಯಾರಜ್ ವೀಕ್ಷಣೆ, ಸಣ್ಣ ಪುಟ್ಟ ವಿಶ್ರಾಂತಿ ತಪ್ಪಿಸಿಕೊಳ್ಳದೇ ಮುಂದುವರಿದೆವು. 

ಯೋಜನಾ ಹಂತದಲ್ಲಿ ಸಿಕ್ಕ ನಕ್ಷೆಗಳು ಊರಿಂದೂರಿಗೆಳೆದ ರೇಖೆಗಳು. ಆದರಿಂದು, ನೆನಪುಗಳಿಗೆ ತೇಪೆ ಹಾಕಲು ಯಥಾಭೂಮಿಯ ಉಪಗ್ರಹಚಿತ್ರ ನೋಡುವಾಗ ‘ಅಜ್ಞಾನಂ ಪರಮಸುಖಂ’ ಎಂದೂ ಕಾಣುತ್ತದೆ! ಇಪ್ಪತ್ನಾಲ್ಕು ವರ್ಷಗಳ ಮೇಲೂ ಆ ದಾರಿಯ ಉದ್ದದಲ್ಲಿ ಚೌಪಾಹಾರಿ, ಇಲ್ಲಂ ಬಜಾರಿನಂಥ ಕಾಯ್ದಿರಿಸಿದ ಕಾಡುಗಳಿರುವುದು ಕಾಣುತ್ತಿದ್ದೇನೆ. ಬಲ್ಲವಪುರ್ ಎನ್ನುವಲ್ಲಿ ವನಧಾಮವೇ ರೂಪುಗೊಂಡಿದೆ. ಅಂದರೆ ಆ ಕಾಲದಲ್ಲಿ ನಿರ್ಜನ ಕಾಡು, ಬೆಟ್ಟ ದಾರಿಗಳಲ್ಲಿ ಅನಿವಾರ್ಯತೆಯನ್ನು ಒಪ್ಪಿಕೊಂಡು ಸವಾರಿ ನಡೆಸಿ, ಸುರಕ್ಷಿತವಾಗಿ ಎಂಟೂವರೆ ಗಂಟೆಗೆ ಶಾಂತಿನಿಕೇತನ ಊರು ಸೇರಿದ್ದೆವು. ನಮ್ಮ ಅದೃಷ್ಟಕ್ಕೆ ಪ. ಬಂಗಾಳ ಪ್ರವಾಸೋದ್ದಿಮೆಯ ವಿಶ್ರಾಂತಿ ಗೃಹವೇ ವಾಸಕ್ಕೆ ಸಿಕ್ಕಿತು, ಚೆನ್ನಾಗಿತ್ತು. ಏನೋ ಆಹಾರ ಸೂಕ್ಷ್ಮದಲ್ಲಿ ಉಪಾಧ್ಯ ಮತ್ತು ದೇವಕಿ ಸ್ವಲ್ಪ ತಳಮಳಿಸಿದರೂ ಎಂದಿನಂತೆ ಗೆಳೆಯ ಕೃಶಿಯ ಪ್ರಥಮ ಚಿಕಿತ್ಸೆಯ ಕಟ್ಟಿನಲ್ಲಿದ್ದ ಗುಳಿಗೆ ಮತ್ತು ರಾತ್ರಿಯ ನಿದ್ರೆ ಎಲ್ಲ ಸರಿ ಮಾಡಿತು. (ದಿನದ ಓಟ ೩೩೨ ಕಿಮೀ) 


೧೮೬೩ರಲ್ಲಿ ದೇವೇಂದ್ರನಾಥ ಠಾಕೂರರ ಕನಸಿನಂತೆ ತೊಡಗಿದ ಶಾಂತಿನಿಕೇತನ, (ಮಗ) ರವೀಂದ್ರನಾಥ ಠಾಕೂರರ ವಿಸ್ತೃತ ಯೋಜನೆ ಮತ್ತು ಅನುಷ್ಠಾನಗಳ ಫಲವಾಗಿ ವಿಶ್ವಭಾರತಿ ಎಂಬ ವಿಶ್ವವಿದ್ಯಾಲಯವೇ ಆದದ್ದು ನಿಮಗೆಲ್ಲಾ ತಿಳಿದದ್ದೇ ಇದೆ. ನಾವು ಬೆಳಿಗ್ಗೆ (೨೩-೪-೯೬) ಎಂದಿನಂತೆ ಬೇಗ ಎದ್ದವರು ಆರಾಮವಾಗಿಯೇ ವಿಶ್ವಭಾರತಿಯ ಹೊರವಲಯದಲ್ಲೇ ಸುತ್ತಾಡಿದೆವು. ಹಳೆಗಾಲದ ಉದ್ಯಾನವನಗಳಂತೆ ವಿರಳ ವಿಸ್ತಾರ ಮರಗಳು, ಹುಲ್ಲ ಹಾಸು, ಸಣ್ಣ ಪುಟ್ಟ ಅಲಂಕಾರಿಕ ಗಿಡ, ನೀರು, ಹಕ್ಕಿ... ಮನೋಹರವಾಗಿಯೇ ಕಾಣುತ್ತಿತ್ತು. ದೂರ ದೂರಕ್ಕೆ ಮರಗಳ ನೆರಳಿನಲ್ಲಿ ಸಿಮೆಂಟ್ ಬೆಂಚು ಮೇಜು ಹಾಕಿ, ಹಳದಿ ಸಮವಸ್ತ್ರಗಳಲ್ಲಿದ್ದ ಮಕ್ಕಳ ವಿವಿಧ ತರಗತಿಗಳು ನಡೆದಿದ್ದವು. ಅಧ್ಯಾಪಕರ ಅನೌಪಚಾರಿಕತೆ ಕಂಡು, ನಾನು ಸಂಕೋಚದಲ್ಲೇ ನಮ್ಮ ಪರಿಚಯ ಕಿರಿದರಲ್ಲಿ ಹೇಳಿಕೊಂಡೆ. ಹಾಗೆಂದು ನಮ್ಮ ಅನೌಪಚಾರಿಕವಾಗಿಯಾದರೂ ವಠಾರದ ಒಳಗಿನ ಸುತ್ತಾಟ ಮತ್ತು ಚಿತ್ರಗ್ರಹಣಗಳನ್ನು ಅವರು ಪುರಸ್ಕರಿಸಲಿಲ್ಲ. ಸಾರ್ವಜನಿಕರಿಗೆ ಮುಕ್ತವಾಗಿದ್ದ ಮ್ಯೂಸಿಯಮ್ ತೆರೆಯುವ ಹತ್ತು ಗಂಟೆಗೆ ವಠಾರವನ್ನೂ ನೋಡಿಕೊಳ್ಳಬಹುದು ಎಂದರು. ಖಂಡಿತಕ್ಕೂ ತಪ್ಪಲ್ಲ ಮತ್ತು ನಮಗೆ ಬೇಸರವೂ ಆಗಲಿಲ್ಲ. ನಮ್ಮ ಪ್ರಧಾನ ಲಕ್ಷ್ಯವಾದರೂ ಪ್ರಾಕೃತಿಕ ಅನುಸಂಧಾನದೊಡನೆ ಬೈಕ್ ಸಾಹಸಯಾನ! ಸಹಜವಾಗಿ ನಮ್ಮ ಗಡಿಯಾರದ ದೊಡ್ಡ ಮುಳ್ಳಿಗೇ ಬೈಕ್ ಚಕ್ರ ಬೆಸುಗೆ ಹಾಕಿದಂತಿದ್ದುದರಿಂದ ನಾವು ಅಲ್ಲೇ ಮತ್ತೆ ಕನಿಷ್ಠ ಮೂರು ಗಂಟೆ ಕಳೆಯಲಿಲ್ಲ. 


ಹಿಂ-ದಿನ ರಾತ್ರಿ ಊರಿನ ಹೊರವಲಯದಲ್ಲಿ ಸಿಕ್ಕ ಕೈಕಂಬದ ಹೆಸರು ‘ಡಾರ್ಜಿಂಗ್ ಮೋರ್’/ಮೋಡ್, ಅಂದರೆ ತಿರುವು ಅಥವಾ ಕವಲು. ನಾವು ಅದನ್ನು ಅನುಸರಿಸುತ್ತ ಒಂಬತ್ತು ಗಂಟೆಯ ಸುಮಾರಿಗೆ "ಡಾರ್ಜಿಲಿಂಗ್ ಡಾರ್ಲಿಂಗ್" ಘೋಷ ಹಾಕಿದೆವು (ವಾಸ್ತವದಲ್ಲಿ ಅಂದಿನ ಗುರಿ ಡಾರ್ಜಿಂಗಿನ ನೇರ ತಪ್ಪಲಿನ ಸಿಲಿಗುರಿ). ಇಂದು ಗೂಗಲ್ ನಕ್ಷೆ ಹೆಚ್ಚು ಪೂರ್‍ವದ ದಾರಿಯನ್ನು ಪ್ರಶಸ್ತ ಎನ್ನುತ್ತ್ದೆ. ಆದರೆ ನಮಗಂದಿನ ಸತ್ಯ ನೇರ ಉತ್ತರದ ಅಹ್ಮದಪುರ ಮತ್ತೆ ಸೈಂಥಿಯಾ. ಸೈಂಥಿಯಾದಲ್ಲಿ ಪೂರ್ವಕ್ಕೆ ಹೊರಳಿದ ಹೆದ್ದಾರಿ ಹಿಡಿದು, ಕಂಡಿ (ಸ್ಥಳನಾಮ), ಬೆರ್ಹಾಂಪುರದವರೆಗೆ ಚೂರೂ ಬಿಸಿಲು ವ್ಯರ್ಥವಾಗದಂತೆ ಧರಿಸಿ, ಬೆವರ ಹೊಳೆ ಹರಿಸಿ, ಬೈಕೋಡಿಸಿದ್ದೆವು. ಇಲ್ಲೊಂದು ಹದಿನೇಳು ಕಿಮೀ ಕವಲಿನಾಚೆಯ ಉಪಕಥೆ - ಮುರ್ಷಿದಾಬಾದ್. 


ಗಂಗಾತಟದ ಮುರ್ಷಿದಾಬಾದ್ - ೧೯ನೇ ಶತಮಾನದ ನವಾಬ ನಝೀಮ್ ಹುಮಾಯುನ್ ಝಾನ ರಾಜಧಾನಿ. ಈ ಅರಸೊತ್ತಿಗೆ ಇಂದಿನ ಬಂಗಾಳ, ಒರಿಸ್ಸಾ ಮತ್ತು ಬಿಹಾರದ ಭಾಗಗಳಲ್ಲಿ ವ್ಯಾಪಿಸಿತ್ತು. ನವಾಬನ ‘ಅಭಿವೃದ್ಧಿ’ ಯೋಜನೆಯಲ್ಲಿ, ಪಾರಂಪರಿಕ ಕೋಟೆ - ನಿಝ್ಮತ್ ಖಿಲಾವನ್ನು ಕೆಡಹಿ, ಇಂದು ಹಝಾರೀ ದ್ವಾರಿ (ಮೂಲದಲ್ಲಿ ಬಾರಾ ಕೋಥಿ ಎಂದು ಹೆಸರಿತ್ತಂತೆ) ಎಂದೇ ಖ್ಯಾತವಾದ ವೈಭವಯುತ ಅರಮನೆಯನ್ನು ಕಟ್ಟಿಸಿದನಂತೆ. (ಇಂಜಿನಿಯರ್ ಓರ್ವ ಬ್ರಿಟಿಷ್!) ಸಾವಿರ ಕಂಬದ ಬಸದಿಯೂರಿನ (ಮೂಡಬಿದ್ರೆ) ನಮಗೆ ಸಾವಿರ ಬಾಗಿಲಿನ ಅರಮನೆ ದರ್ಶನ ಮಾಡಿಸಲು ಬಶೀರ್ ಖಾನ್ ಎಂಬ ಮಾರ್ಗದರ್ಶಿ ಒದಗಿದ್ದ. ಮೂಡಬಿದ್ರೆಯ ಬಸದಿಯಲ್ಲಿ ಮುಖ್ಯ ಕಂಬಗಳ ಮೇಲಿನ ಅಲಂಕಾರಿಕ ಸಣ್ಣ ಕಂಬಗಳ ಲೆಕ್ಕ ಹಿಡಿದೇ ಸಾವಿರ ಎಣಿಸುತ್ತೇವೆ. ಅಲ್ಲೂ ಸ್ವಲ್ಪ ಹಾಗೇ - ಹಲವು ಬಾಗಿಲುಗಳು ವಾಸ್ತವದ ದ್ವಾರಗಳೇ ಅಲ್ಲ, ಕೇವಲ ಚಿತ್ರವತ್ತು; ಆಕ್ರಮಿಸುವ ವೈರಿಗಳ ಜಾಡು ತಪ್ಪಿಸುವ ಹಿಕ್ಮತ್ತು! 

ಸ್ಥಳೇತಿಹಾಸದಲ್ಲಿ ಹಝಾರೀ ದ್ವಾರೀಯನ್ನು ಗಂಗಾತಟೀ ಎಂದೇ ಹೇಳುತ್ತಾರೆ. ವಾಸ್ತವದಲ್ಲಿ ಇಲ್ಲಿ ಹರಿದಿರುವುದು ಗಂಗಾ ಛಿದ್ರೀಕರಣದ ಮೊದಲ ಕವಲು ಹೂಗ್ಲಿ. ಇಂದು ಅರಮನೆಯನ್ನು ಪ್ರಾಚ್ಯ ಇಲಾಖೆ ವಹಿಸಿಕೊಂಡು, ಪ್ರದರ್ಶನಾಲಯವನ್ನಾಗಿಸಿದೆ. ನಾವು ಸುಮಾರು ಒಂದು ಗಂಟೆಯ ಕಾಲ ಅದನ್ನು ಸುತ್ತಾಡುವುದರಲ್ಲಿ ಕಳೆದಿದ್ದೇವೆಂದು ದಿನಚರಿ ಹೇಳುವುದರಿಂದ, ಅದು

ಸಾಕಷ್ಟು ದರ್ಶನೀಯವೇ ಇದ್ದಿರಬೇಕು! ದೇವಕಿ ಅಲ್ಲಿ "ಅತ್ತೆ"ಗೆಂದೇ ವ್ಯಾಸ ಪೀಠವೊಂದನ್ನು ಖರೀದಿಸಿದಳು. ಮತ್ತೆ ಪ್ರಾಯಶ್ಚಿತ್ತವಾಗಿ ಪ್ರವಾಸದುದ್ದಕ್ಕೆ ಅದನ್ನು ಕಾಪಾಡಿಕೊಳ್ಳುವ ಕಷ್ಟ ಸಹಿಸಿಕೊಂಡಳು. ಆದರೆ ಮಂಗಳೂರಲ್ಲಿ ಅದನ್ನು ನನ್ನಮ್ಮನಿಗೆ ‘ಉಡುಗೊರೆ’ ಮಾಡಿದಾಗ ಗಳಿಸಿದ ಧನ್ಯತೆ (ಇಬ್ಬರಿಗೂ), ಜೀವಮಾನದುದ್ದಕ್ಕೆ ಉಳಿವಂತದ್ದೇ ಆಗಿತ್ತು! ಉಳಿದಂತೆ, ಹಜಾರೀದ್ವಾರೀಯಲ್ಲಿ ನಮ್ಮ ಕ್ಯಾಮರಾ ಹಿಡಿದ ಚಿತ್ರ ಮಾಸಿದೆ, ನನ್ನ ನೆನಪಿನ ಚಿತ್ರ ಅಳಿಸಿಯೇ ಹೋಗಿದೆ!! 

ನೆತ್ತಿಯ ಮೇಲಿನ ಕೆಂಡದುಂಡೆಗೆ ಮುರ್ಷಿದಾಬಾದ್ ಊರೆಲ್ಲ ತತ್ತರಗುಟ್ಟಿ ಒಳ ಸೇರಿದಂತಿತ್ತು. ಆದರೂ ನಮ್ಮ ಹೊಟ್ಟೆಯ ಕಿಚ್ಚಿಗೆ ಏನಾದರೂ ಹಾಕಲೇಬೇಕಲ್ಲಾ. ಅದಕ್ಕೂ ಬಶೀರ್ಖಾನ್ ಮಾರ್ಗದರ್ಶಿಯಾದ. ನಮ್ಮ ಬಹುತರದ ವಿವರಣೆಗಳ ಮೇಲೆ ಆತ ಶಿಫಾರಸು ಮಾಡಿದ್ದ ಹೋಟೆಲಿನ ‘ಬೆಜಿಟೇರಿಯನ್ ಖಾನಾ’ ಮಾತ್ರ ನಮ್ಮ ದಿನಚರಿಯ ರೇಟಿಂಗಿನಲ್ಲಿ "ಭಯಂಕರ" ಗಳಿಸಿದೆ! ದಿನದ ಓಟ ಇನ್ನೂ ಸಾಕಷ್ಟು ದೀರ್ಘವೇ ಇದ್ದುದರಿಂದ ತಂಪು ಹೊತ್ತು ಎಂದು ಕಾಯದೇ ದಾರಿಗಿಳಿದಿದ್ದೆವು. ಹಿಂದೆ ಭಾರತ ಸೀಳೋಟದಲ್ಲಿ ಮಾಡಿದಂತೆ, ನೆರಳು ಕಂಡಲ್ಲೆಲ್ಲ ಸಣ್ಣ ವಿಶ್ರಾಂತಿ, ಕುಡಿನೀರು ಕಂಡಲ್ಲೆಲ್ಲ ಮರುಪೂರಣ, ಮುಖಕ್ಕೆ ಚಂಡಿ ಬಟ್ಟೆಯ ಮುಸುಕು ಮಾಡಿಕೊಳ್ಳುತ್ತ ಗುಡುಗುಡಿಸಿ ಬೆರ್ಹಾಂಪುರ ತಲಪಿದ್ದೆವು. ಪೂರ್ವಾಹ್ನದಲ್ಲಿ ನಮ್ಮನ್ನು ಸೂರ್ಯ ಹುರಿದು ಮುಕ್ಕಿದ್ದ. ಈಗ ವರುಣ ದಿಢೀರನೆ ಸಚೇಲ ಸ್ನಾನ ಮಾಡಿಸುವ ಹುನ್ನಾರದಲ್ಲಿ ಪೂರ್ಣ ಗಗನಭಾಂಡವನ್ನೇ ನಮ್ಮ ಮೇಲೆ ಕವುಚಿದ್ದ. ಅದೃಷ್ಟಕ್ಕೆ ದೊಡ್ಡಿ ಶಾಲೆಯೊಂದರ ದಿಡ್ಡೀ ಬಾಗಿಲು ಹಾರುಹೊಡೆದಿತ್ತು, ನಾವು ಬೈಕ್ ಸಮೇತ ನುಗ್ಗಿ ಬಚಾವಾದೆವು. ಭೀಕರ ಮಳೆ ಕಳೆದು, ಎಲ್ಲ ನಿಚ್ಚಳವಾಗುವಾಗ ಸಾಕಷ್ಟು ಸಮಯ ಮಾತ್ರ ಸೋರಿ ಹೋಗಿತ್ತು (ಸಂಜೆ ೪.೩೦). ಒಟ್ಟಾರೆಯಲ್ಲಿ ನಾವು ಮುನ್ನೂರೈವತ್ತು ಕಿಮೀ ದೂರದ ‘ಸೀರಿಯಸ್ ಗುರಿ’, ಅರ್ಥಾತ್ ಸಿಲ್ಲಿಗುರಿ ಸಾಧಿಸುವ ಯೋಚನೆ ಬಿಡಬೇಕಾಯ್ತು. ನಮ್ಮದೇನು ಕರ್ಣ ಶಪಥವಲ್ಲದ್ದರಿಂದ, ಮುಂದಿನ ದೊಡ್ಡ ಊರು (ಸುಮಾರು ೧೩೦ ಕಿಮೀ) ಮಾಲ್ಡಾಕ್ಕೆ ಬೈಕನ್ನು ಪುನರನುಸಂಧಾನ ಮಾಡಿದೆವು. 


ಗಂಗಾ ಕಣಿವೆಯ ಫಲವಂತಿಕೆ ಸಾರುವಂತೆ ಕಣ್ಣು ಮುಟ್ಟುವವರೆಗೂ ಗದ್ದೆಗಳ ಹರಹು ಆ ಉಗ್ರ ಬಿಸಿ ಹೊತ್ತಿನಲ್ಲೂ ನಮ್ಮ ಕಣ್ಣು ತಣಿಸಿತು. ಹಾಗೇ ಕೃಷಿಭೂಮಿಯ ಮರಗಳು ಕಾಣಿಸಿದಲ್ಲಿ ಮಾವಿನ ಕಾಯಿಗಳು ತೂಗಾಡಿ ನಮ್ಮ ಹೊಟ್ಟೆಯನ್ನೂ ತಂಪು ಮಾಡುವ ಆಸೆಯನ್ನೇನೋ ಹುಟ್ಟಿಸಿದವು. ಹಾಗೆಂದು ನಿಧಾನಿಸುವ ಸವಲತ್ತನ್ನೇ ಸಮಯಕ್ಕೆ ಅಡವು ಇಟ್ಟಿದ್ದುದರಿಂದ ಬೈಕೋಡಿಸಿದೆವು. ಇದ್ದುದರಲ್ಲಿ ಸ್ವಲ್ಪ ಹೆಚ್ಚೇ ನಿರಾಶೆಯಾದದ್ದು ಫರಕ್ಕಾ ಸೇತುವೆಯಲ್ಲಿ. ಪೂರ್ಣ ಕತ್ತಲಾದ ವೇಳೆ, ಅಂದರೆ ಸುಮಾರು ಏಳು ಗಂಟೆಯ ಸುಮಾರಿಗೆ ನಾವು ಅಲ್ಲಿದ್ದೆವು. ಆ ವಲಯಕ್ಕೆಲ್ಲ ಗಂಗಾನದಿಯನ್ನು ಹಾಯಲು ಅದೊಂದೇ ಮಹಾಸೇತು. 

೧೯೭೧ರಲ್ಲಿ ನಾನು ಅಸ್ಸಾಂನ ಎನ್ಸಿಸಿ ಶಿಬಿರಕ್ಕೆ ಬಂದ ಕತೆ ನೀವು ಓದಿದ್ದೀರೆಂದು ಭಾವಿಸುತ್ತೇನೆ. (ಇಲ್ಲವಾದರೆ ನೋಡಿ: ಅರೆ ಸೈನಿಕನ ರೂಪಣೆಯಲ್ಲಿ) ಆಗ ಇನ್ನೂ ಫರಕ್ಕಾ ಸೇತುವೆ, ಅಲ್ಲಲ್ಲ ಇಂಗ್ಲಿಷಿನಲ್ಲಿ ಬ್ಯಾರಜ್ ಅರ್ಥಾತ್ ತಡೆ ಎನ್ನುವ ವ್ಯವಸ್ಥೆ ನಿರ್ಮಾಣ ಹಂತದಲ್ಲಿತ್ತು. ಈ ಮಹಾರಚನೆ ಅಣೆಕಟ್ಟು ಹೌದು. ಆದರೆ ನಮ್ಮ ಸಾಮಾನ್ಯ ನಂಬಿಕೆಯಂತೆ ವಿಸ್ತಾರವಾಗಿ ನೀರು ನಿಲ್ಲಿಸುವ ಯೋಜನೆ ಅಲ್ಲ. ಇದರ ನೆತ್ತಿಯ ಮೇಲೆ ದ್ವಿಪಥದ ರೈಲ್ವೇ ಹಳಿ ಮತ್ತು ಚತುಷ್ಪಥದ ವಾಹನ ಮಾರ್ಗಗಳೂ ಮುಕ್ತವಾಗಿಯೇ ಹರಿದಿವೆ. ೧೯೭೫ರಲ್ಲಿ ಲೋಕಾರ್ಪಣೆಗೊಂಡ ಫರಕ್ಕಾ ವ್ಯವಸ್ಥೆಯನ್ನು "ಈ ಬಾರಿ ಪೂರ್ಣ ಕಣ್ದುಂಬಿಕೊಳ್ಳುತ್ತೇನೆ" ಎಂಬ ನನ್ನ ನಿರ್ಧಾರವನ್ನೂ ಸಮಯದ ಜೂಜು ಕಟ್ಟೆಯಲ್ಲಿ ಶಿಥಿಲಗೊಳಿಸಿದೆ. 


ಎಂಟೂವರೆಗೆ ಸುಕ್ಷೇಮವಾಗಿ ಮಾಲ್ಡಾ ತಲಪಿ ಮತ್ತೆ ಪ.ಬಂ ಪ್ರವಾಸೋದ್ಯಮ ಇಲಾಖೆಯ ಅತಿಥಿಗೃಹವನ್ನು ತುಂಬಿದೆವು. ಇಲ್ಲಿನ ಬಂಗ್ಲೆ ತೀರಾ ಕೆಟ್ಟದ್ದಾಗಿತ್ತು. ನಮಗಿಂತಲೂ ಹೆಚ್ಚಿನ ನಿದ್ರೆ ಅಲ್ಲಿನ ಫ್ಯಾನುಗಳಿಗಿತ್ತು. ಮುಕ್ತವಾಗಿ ಮಲಗಿ ಸೆಕೆಗೆ ಉಸ್ಸ್ ಬುಸ್ ಎನ್ನುವುದರೊಳಗೆ ಸೊಳ್ಳೆ ಹಿಂಡು ಬಂದು ರಾಗ ಸಹಿತ ಗಾಳಿ ಹಾಕತೊಡಗಿದವು. ಅನಿವಾರ್ಯವಾಗಿ ಅಲ್ಲಿನ ತೀರಾ ಕೊಳಕು ಪರದೆಯನ್ನು ಕಟ್ಟಿಕೊಂಡು ಹೆಚ್ಚುಕಮ್ಮಿ ಜಾಗರಣೆ ಮಾಡಿದೆವು. (ದಿನದ ಓಟ ೨೬೫ ಕಿಮೀ. ತಾ ೩೨ಡಿಗ್ರಿ) 

ಮಾಲ್ಡಾದ ಸಮೀಪದಲ್ಲೇ ‘ಗೌರ್’ ಅಂದರೆ, ಮುಕುಂದಪ್ರಭುಗಳು ತಿಳಿಸಿದಂತೆ ‘ಗೌಡ ಸಾರಸ್ವತ ಬ್ರಾಹ್ಮಣ’ರ ಮೂಲ ಊರಿದ್ದಿರಬೇಕು. ಆದರೆ ಅದು ನಮ್ಮ ಆಸಕ್ತಿಯ ಹೊರಗಿನದ್ದಾದ್ದರಿಂದ ಹುಡುಕುವ, ನೋಡುವ ಕೆಲಸ ಮಾಡಲಿಲ್ಲ. ಇನ್ನೂ ಸರಿಯಾಗಿ ಹೇಳುವುದಿದ್ದರೆ ನಮ್ಮ ಮಾಲ್ಡಾ ವಾಸ್ತವ್ಯವೇ ಅಯಾಚಿತವಿತ್ತು. ಹಾಗಾಗಿ ಬೆಳಿಗ್ಗೆ (೨೪-೪-೯೬ ಬುಧವಾರ) ೫ ಗಂಟೆಗೇ ರಾಷ್ಟ್ರೀಯ ಹೆದ್ದಾರಿ ೩೧ ಸೇರಿ, ಹಿಂದಿನದ ಘೋಷಣೆಯನ್ನು ಪೂರೈಸುವಂತೆ ದೌಡಾಯಿಸಿದೆವು. ವೀಳ್ಯದೆಲೆ ತೋಟ ಸಾಕಷ್ಟು ಕಾಣಿಸಿದ್ದವು. ಆದರೆ ಹಾಗೇ ಭಾರೀ ಹರಹುಗಳಲ್ಲಿ ಅನಾನಸು ಕೃಷಿಯೂ ಕಾಣಿಸಿದಾಗ, ರಸವಾದರೂ ಹೀರೋಣ ಎಂದು ಒಂದು ಹೊಲದಂಚಿನ ಚಪ್ಪರಂಗಡಿಗೆ ನುಗ್ಗಿದ್ದೆವು; ಕೆಟ್ಟದ್ದಾಗಿತ್ತು. (ಬೆಳೆಗಾರರೆಲ್ಲ ಹೀಗೆ ಸಮರ್ಥ ವ್ಯವಹಾರ ಚತುರರಲ್ಲ ಎಂದು ಕಂಡದ್ದಕ್ಕೇ ಇರಬೇಕು - ಇಂದು ಕಾರ್ಪೊರೇಟ್ ಕಂಪೆನಿಗಳು ರೈತರನ್ನು ನುಂಗುವಂತ ‘ಕೃಷಿ ನೀತಿ’ ರೂಪುಗೊಂಡಿರಬೇಕು!) ಉಳಿದಂತೆ ಎಳೆದು ಬಿಟ್ಟ ಬಾಣದಂತೇ ನಾವು ಸುಮಾರು ಇನ್ನೂರು ಕಿಮೀ ಓಟ ಮುಗಿಸಿ, ಮಟಮಟ ಮಧ್ಯಾಹ್ನ ಸಿಲಿಗುರಿ ಮುಟ್ಟಿದ್ದೆವು. 


ಸಿಲಿಗುರಿ ಹೊರವಲಯದಲ್ಲೇ ಇದ್ದ ಹೀರೋ ಹೊಂಡಾ ಶಾಖೆಯಲ್ಲಿ ಬೈಕುಗಳನ್ನು ತೈಲಾಭ್ಯಂಜನಕ್ಕೆ ಬಿಟ್ಟೆವು. ನಾನು ಸಿಟಿ ಬಸ್ಸೇರಿ, ಅಂಚೆ ಕಚೇರಿ ಒಂದನ್ನು ಅರಸಿ ಹಿಡಿದು, ಅವಶ್ಯ ದೂರವಾಣಿ ಕರೆಗಳನ್ನು ಮಾಡಿದೆ. ಅದರಲ್ಲಿ ಮೊದಲ ಪ್ರಾಶಸ್ತ್ಯದ್ದು - ಜಲಪೈಗುರಿಯಲ್ಲಿದ್ದ ಅರಣ್ಯ ಇಲಾಖೆಯ, ಎರಡನೇ ವಿಭಾಗದ ಮುಖ್ಯಸ್ಥ ವಿಕೆ ಯಾದವ್ (ಐ.ಎಫ್. ಎಸ್) ಸಂಪರ್ಕ. ಯೋಜನಾ ಹಂತದಲ್ಲಿ ಉಲ್ಲಾಸರ ಪತ್ರ ಲಗತ್ತಿಸಿ ನಾನು ಕಳಿಸಿದ ಆರೆಂಟು ಮನವಿಗಳಲ್ಲಿ ಒಂದಕ್ಕೆ ಮಾತ್ರ ಸ್ಪಷ್ಟ ಮತ್ತು ಚುರುಕಿನ ಉತ್ತರ ಬಂದದ್ದೇ ಯಾದವರಿಂದ. ಇವರು ತನ್ನ ಆಡಳಿತದ ಕೆಳ ಬರುವ ಮೂರು - ಮಹಾನಂದ, ಜಲ್ದಪಾರ ಮತ್ತು ಗೊರುಮಾರ ವನಧಾಮಗಳಿಗೆ ನಮಗೆ ಎಲ್ಲ ವ್ಯವಸ್ಥೆ ಕೊಡುವ ಆಶ್ವಾಸನೆಯೊಡನೆ ಮುಕ್ತ ಆಮಂತ್ರಣ ಕೊಟ್ಟಿದ್ದರು. ಹೆಚ್ಚುವರಿಯಾಗಿ ತನ್ನ ಪರಿಚಯದ ಬಲದಲ್ಲಿ, ನಮ್ಮ ಡಾರ್ಜಿಲಿಂಗಿನ ಅಗತ್ಯಗಳಿಗೂ ಯುಕ್ತ ಸಂಪರ್ಕಗಳನ್ನು ಪತ್ರದಲ್ಲೇ ಒದಗಿಸಿದ್ದರು. ಅದರ ಮೇಲೆ ಯಾವುದಕ್ಕೂ ಅವರನ್ನು ಯಾವ ಹೊತ್ತಿಗೂ ಕೇವಲ ದೂರವಾಣಿಯಲ್ಲಿ ಸಂಪರ್ಕಿಸಬಹುದೆಂದೂ ತಿಳಿಸಿ, ತನ್ನ ಮನೆಯ ದೂರವಾಣಿ ಸಂಖ್ಯೆಯನ್ನೂ ಕೊಟ್ಟಿದ್ದರು! (ಯಾದವರ ಕರ್ತವ್ಯನಿಷ್ಠೆಗೆ ದೊಡ್ಡ ನಮಸ್ಕಾರ. ಆ ಪುಣ್ಯಾತ್ಮರನ್ನು ವೈಯಕ್ತಿಕವಾಗಿ ನಮಗೆ ಭೇಟಿ ಮಾಡುವುದಾಗಲೇ ಇಲ್ಲ) ಸಿಲಿಗುರಿಯಿಂದ ನಾನವರಿಗೆ ಮಾಡಿದ ಟ್ರಂಕಾಲ್, ನಿರೀಕ್ಷೆಯಂತೆ ತುಂಬಾ ಫಲಪ್ರದವಾಯ್ತು. 

ಭಾರತಪುರುಷನ ಎಡ ಕಂಕುಳಿನಲ್ಲಿ ಒತ್ತರಿಸಿ ಇಟ್ಟ ಬೆಣೆಯಂತೆ ಬಾಂಗ್ಲಾ ದೇಶ ಭಾಸವಾಗುತ್ತದೆ. ಹಾಗೆ ರೂಪುಗೊಂಡ ಸಪುರ ಭುಜದಂಥ ಭಾಗ ಇತ್ತ ಪ.ಬಂಗಾಳದ ಕೃಷ್ಣಗಂಜ್‍ನಿಂದ ತೊಡಗಿ ಅತ್ತ ಬ್ರಹ್ಮಪುತ್ರಾ ನದಿಯವರೆಗೂ ವಿಸ್ತರಿಸಿದೆ. ಇಲ್ಲಿನ ಭುಜಕೀರ್ತಿ ಡಾರ್ಜಿಲಿಂಗ್ ಮತ್ತು ಸಿಕ್ಕಿಂ ವಿಭಾಗ. ಹೀಗೆ ಓಣಿಯಂಥಾ ನೆಲದ ರೂಪಣೆಗೆ ದಕ್ಷಿಣದಲ್ಲಿ ಬಾಂಗ್ಲಾ ಕಾರಣವಾದರೆ, ಉತ್ತರದಲ್ಲಿ ಭೂತಾನ್ ದೇಶ. ಈ ಓಣಿ ಹಾಯುವ ಮೊದಲಲ್ಲೇ ಸಿಗುವ ಮಹಾನಂದ ವನಧಾಮ, ಡಾರ್ಜಿಲಿಂಗ್ ದಾರಿಯಲ್ಲೇ ಇದೆ. ಹಾಗಾಗಿ ಅದು ನಮ್ಮ ಸಹಜ ಆಯ್ಕೆಯಾಗಿತ್ತು. 

ಯೋಜನಾ ಹಂತದಲ್ಲಿ ನನಗೆ ಅಸ್ಸಾಂನ ಪೂರ್ವ ಕೊನೆಯ ಕಾಜೀರಂಗಾಕ್ಕೆ ಹೋಗಿ ಘೆಂಡಾ ಮೃಗದ ದರ್ಶನ ಮಾಡಬೇಕೆಂದು ಯೋಚನೆ ಬಂದದ್ದಿತ್ತು. ಆದರೆ ಆ ದಿನಗಳಲ್ಲಿ ಅಸ್ಸಾಂ ಸೇರಿದಂತೆ ಆ ಭಾಗದ ರಾಜ್ಯಗಳೆಲ್ಲ ಭಾರೀ ರಾಜಕೀಯ ತಳಮಳದಲ್ಲಿದ್ದವು. ಹಾಗಾಗಿ ನಾವು ಪ.ಬಂಗಾಳಕ್ಕೇ ಸೇರಿದ ಮತ್ತು ಭಾರತದೊಳಗೆ ಘೆಂಡಾ ಮೃಗದ ಇನ್ನೊಂದೇ ನೆಲೆ ಎಂದೂ ಖ್ಯಾತವಾದ ಜಲ್ದಪಾರಾವನ್ನು ಆಯ್ದುಕೊಂಡಿದ್ದೆವು. ಇದು ಓಣಿಯಲ್ಲೇ ತುಸು ಪೂರ್ವಕ್ಕೆ, ತೋರ್ಸಾ ನದಿಯ (ಬ್ರಹ್ಮಪುತ್ರಾಕ್ಕೆ ಸೇರುವ ಒಂದು ಉಪ ನದಿ) ದಂಡೆಯ ಮೇಲಿತ್ತು. ಮಹಾನಂದ, ಡಾರ್ಜಿಲಿಂಗ್ ಮತ್ತೆ ಜಲ್ದಪಾರಾ ಎಂಬ ತ್ರಿಕೋನ ಮನದಲ್ಲಿ ಗಟ್ಟಿ ಮಾಡಿ ಬೈಕ್ ಮಳಿಗೆಗೆ ಮರಳಿದೆ. 

(ಮುಂದುವರಿಯಲಿದೆ)

3 comments:

 1. ಓದುಗರಿಗೆ ನೀಲಿ ಚಿತ್ರಗಳನ್ನು ತೋರಿಸುವ ಹಟವೇಕೆ?

  ReplyDelete
 2. ಈ ಬರಹ ತುಂಬಾ ಇಷ್ಟ ಆಯಿತು.ಹೊಸ ಪದಗಳೂ ಸಿಕ್ಕವು.ಉದಾ:ಸಟಸಟನೆ.�� ವಿಷ್ಣು ಪುರದ ಫೋಟೋಗಳು,ಫರಕ್ಕಾ ಅಣೆಕಟ್ಟು ಅವುಗಳ ವರ್ಣನೆಯೂ ಚೆನ್ನಾಗಿ ಮೂಡಿಬಂದಿದೆ.
  ನಿಮ್ಮ ಪಿಲಿಯನ್ ರೈಡರ್ ಈ ಯಾನದಲ್ಲಿ ಯಾವ ರೀತಿ ಸಹಕರಿಸಿದರು ಎನ್ನುವುದನ್ನೂ ದಾಖಲಿಸಿ.ಅವರೇಕೋ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿಲ್ಲ.
  ಗೂಗಲ್ ಮ್ಯಾಪ್,ಚರವಾಣಿಗಳಿಲ್ಲದೆ ನಡೆದ ಈ ಯಾನದ ಪೂರ್ವ ತಯಾರಿ ಹೇಗಿದ್ದಿರಬಹುದು ಎಂದು ಈಗಿನವರು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.ಗೊತ್ತಿರುವ ಜಾಗಕ್ಕೆ ಹೋಗಲೂ ಗೂಗಲ್ ಮ್ಯಾಪ್ ಹಾಕಿಕೊಂಡು ಒಮ್ಮೊಮ್ಮೆ ಅದು ಕೈಕೊಟ್ಟು ಇವರುಗಳು ಒದ್ದಾಡುವುದನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ.
  ಬಿಹಾರ,ಪ.ಬಂಗಾಳದ ಕಡೆ ದರೋಡೆಕೋರರ ವಿಷಯ ಬಂದಾಗ ನಿಮ್ಮ ಅಭಿಪ್ರಾಯ ಒಪ್ಪುವುದು ಕಷ್ಟವಾಯಿತು.ನಮ್ಮ ಪರಿಚಯದವರು ಉ.ಭಾರತದ ಪ್ರವಾಸದ ಸಂದರ್ಭದಲ್ಲಿ ಬಸ್ಸು ಅಪಘಾತಕ್ಕೆ ಈಡಾಗಿ ಬೆಳಗಿನ ಜಾವ ಯಾವುದೋ ಹಳ್ಳಿಯ ಬಳಿ ಇದ್ದಾಗ ಹಳ್ಳಿಯವರೇ ಪ್ರವಾಸಿಗಳನ್ನು ದರೋಡೆ ಮಾಡಿದ್ದ ವಿಷಯ ಹೇಳಿದ್ದರು.ನಿಮ್ಮ ಪ್ರವಾಸಕ್ಕೂ ಹಲವು ವರ್ಷಗಳ ಹಿಂದೆ.ಹಾಗಾಗಿಯೇ ಹೆಚ್ಚಿನವರು ಆ ಕಡೆಯ ಪ್ರವಾಸಕ್ಕೆ ಹೊರಡುವುದಿಲ್ಲ

  ReplyDelete