24 July 2020

ಶಿವಪುರಿ ಮತ್ತು ರಣಥೊಂಬರಾದ ಹುಲಿಗಳು

(ಪ್ರಾಕೃತಿಕ ಭಾರತ ಸೀಳೋಟ - ೬) 


ಬಳಲಿಕೆಯೋ ತಿನಿಸಿನ ಎಡವಟ್ಟೋ ರಾತ್ರಿ ದೇವಕಿ ಒಂದೆರಡು ಬಾರಿ ವಾಂತಿ ಮಾಡಿದ್ದಳು. ಧಾರಾಳ ನೀರು ಮತ್ತು ಗೆಳೆಯ ಡಾ| ಕೃಷ್ಣಮೋಹನ್ ಕಟ್ಟಿಕೊಟ್ಟಿದ್ದ ಪ್ರಥಮ ಚಿಕಿತ್ಸೆ ಕಟ್ಟಿನಿಂದ ಒಂದು ಗುಳಿಗೆಯಲ್ಲಿ ಸುಮಾರು ಸುಧಾರಿಸಿದಳು. ಹಾಗೆಂದು ಬೆಳಗ್ಗಿನ (೪-೫-೯೦) ನಮ್ಮ ದಿನಚರಿಗೇನೂ ಬದಲಾವಣೆ ತರಬೇಕಾಗಲಿಲ್ಲ! ಆರೂ ಮುಕ್ಕಾಲಕ್ಕೆ ಭೋಪಾಲ್ ಬಿಟ್ಟು ‘ಶಿವಪುರಿ ವನಧಾಮ’ದತ್ತ, ಅಂದರೆ ಸುಮಾರು ಮುನ್ನೂರು ಕಿಮೀ ಗುರಿಗೆ ಧಾವಿಸಿದೆವು.
ಅನುಕೂಲದಲ್ಲಿ ಕಾಫಿಂಡಿಗೆ ನಿಂತಿದ್ದೆವು, ಅಲ್ಲಿ ದೇವಕಿ ಕೇವಲ ನೀರಾಹಾರಿಯಾದಳು, ಧಾರಾಳಿಯೂ ಆದಳು. 

ನಿಧಾನ, ವಿಶ್ರಾಂತಿ ಜಾಸ್ತಿಯಲ್ಲೇ ನೂರೆಪ್ಪತ್ತು ಕಿಮೀ ಕಳೆದು ಸಾಕಷ್ಟು ದೊಡ್ಡೂರು ‘ಗುಣ’ ಸೇರಿದೆವು. ಅಲ್ಲಿ ಬ್ಯಾಂಕ್ ವಹಿವಾಟಿನ ನೆಪವಿತ್ತು. ಜತೆಗೇ ದೇವಕಿಯ ವೈದ್ಯಕೀಯ ತಪಾಸಣೆಯೂ ಆಯ್ತು. ಯಾತ್ರಾ ಮುಂದುವರಿಕೆಗೆ ಶಿಫಾರಸೂ ಸಿಕ್ಕಿತು. ಸ್ವಲ್ಪ ಹೆಚ್ಚೇ ವಿರಮಿಸಿ, ಊಟ ಮುಗಿಸಿಕೊಂಡೇ ಮುಂದುವರಿದೆವು. ನಮ್ಮ ಆರೋಗ್ಯಗಳ
ಬುದ್ದುವಂತಿಕೆಯಲ್ಲಿ ಬೈಕನ್ನು ಮರೆತದ್ದಕ್ಕೆ ಮತ್ತೆ ದಾರಿಯಲ್ಲೆಲ್ಲೋ ‘ಕಪ್ಪು’ ಪೆಟ್ರೋಲ್ ತುಂಬಿಕೊಳ್ಳಬೇಕಾಯ್ತು. ಉಳಿದಂತೆ ವಿಶೇಷಗಳೇನೂ ಇಲ್ಲದೆ ಸಂಜೆ ಐದು ಗಂಟೆಯ ಸುಮಾರಿಗೆ ಶಿವಪುರಿ ಪೇಟೆ ಮುಟ್ಟಿದ್ದೆವು. ಊರಿಂದ ಏಳು ಕಿಮೀ ಹೊರಗಿದ್ದ ವನಧಾಮಕ್ಕೆ ನೇರ ಹೋದೆವು. 

ಶಿವಪುರಿಯ ಸುವಿಸ್ತಾರ ಕಾಡು, ಸಾಮ್ರಾಟ್ ಅಕ್ಬರನಿಗೂ ಹಿಂದಿನ ಕಾಲದಿಂದ ರಾಜವಂಶಗಳ ಮೃಗಯಾ
ವಿನೋದಕ್ಕೆಂದೇ (ರಕ್ಷಿಸಲಾಗಿದ್ದ?) ಮೀಸಲಾಗಿತ್ತಂತೆ. ಅಕ್ಬರ್ ಮಾಂಡು ಆಕ್ರಮಣ ಮುಗಿಸಿ ಮರಳುವ ದಾರಿಯಲ್ಲಿ, ಈ ವನ ವಿಭಾಗದಿಂದ ಆನೆ ಹಿಂಡೊಂದನ್ನೇ ಹಿಡಿದೊಯ್ದನೆಂದು ಇತಿಹಾಸ ಹೇಳುತ್ತದೆ. ಪ್ರಜಾಸತ್ತಾತ್ಮಕ ಭಾರತ ಉದಯಿಸಿದ ಕಾಲಕ್ಕೆ ಇದು ಗ್ವಾಲಿಯರಿನ ಸಿಂಧಿಯಾ ರಾಜವಂಶದ ವಶದಲ್ಲಿತ್ತು. ೧೯೫೬ರಲ್ಲಿ ಅದರ ಸುಮಾರು ೧೭೦ ಚದರ ಕಿಮೀ ಭಾಗವನ್ನಷ್ಟೇ ವನಧಾಮವಾಗಿ ಘೋಷಿಸಿದರು. ಮುಂದುವರಿದು
ರಾಜವಂಶವನ್ನು ಸ್ಮರಿಸುವಂತೆ ಮಾಧವ ರಾಷ್ಟ್ರೀಯ ಉದ್ಯಾನವೆಂದೇ ನಾಮಕರಣವನ್ನೂ ಮಾಡಿದರು. ಆದರೆ ವಾಸ್ತವದಲ್ಲಿ ಒಳಗಿನ ಕಲ್ಲಕೋರೆಗಳು ಮತ್ತು ಇಲಾಖೆಯ ಬೇಜವಾಬ್ದಾರಿ ನಿರ್ವಹಣೆಗಳಿಗೆ ಪಕ್ಕಾಗಿ ೧೯೭೨ರನಂತರ, ಅಂದರೆ ನಾವು ಹೋಗುವ ಕಾಲಕ್ಕೆ ಹುಲಿಗಳೇ ಇಲ್ಲವಾಗಿತ್ತು. ಅರಣ್ಯ ಇಲಾಖೆಯ ‘ಪ್ರಾಮಾಣಿಕತೆ’ಯಲ್ಲಿ ಅಂದು ನಮಗಿದನ್ನು ತಿಳಿಸಿದವರೇ ಇಲ್ಲ. 

ಮಾಧವ ರಾಷ್ಟ್ರೀಯ ಉದ್ಯಾನದ ಅತಿಥಿಗೃಹವೇನೋ
ತುಂಬ ಚೆನ್ನಾಗಿತ್ತು ಮತ್ತು ನಮಗೆ ಮಿತವ್ಯಯದಲ್ಲೇ ಒದಗಿತು. ಆದರೆ ಚಾ ಊಟಗಳಿಗೆ ನಾವು ಶಿವಪುರಿ ಪೇಟೆಯನ್ನೇ ಅವಲಂಬಿಸಬೇಕಾಯ್ತು. ನಾವು ಸಂಜೆಯೇ ಕಾಡು ಸುತ್ತುವ ಕೆಲಸವನ್ನು ಮುಗಿಸಿಕೊಂಡೆವು. ಆದರೆ ನನ್ನ ನೆನಪಿನಲ್ಲೂ ಪತ್ರ ದಾಖಲೆಯಲ್ಲೂ ಉಲ್ಲೇಖನಾರ್ಹ ವಿಶೇಷಗಳೇನೂ ಇಲ್ಲ! ಇಂದು ವಿಕಿಪೀಡಿಯಾ ಹೇಳುವಂತೆ, ನಾವು ಹೋದ ವರ್ಷವೇ ವನಧಾಮ ಸಣ್ಣದಾಗಿ ಮೈ ಕೊಡಹಿಕೊಂಡಿತ್ತು. ಕಲ್ಲ ಕೋರೆಗಳ ವಿರುದ್ಧ ನ್ಯಾಯಿಕ ಹೋರಾಟ ನಡೆದು, ೧೯೯೮ರಲ್ಲಿ ನಿಜ ವನಧಾಮದ
ಉಸಿರು ಆಡತೊಡಗಿತಂತೆ. ಇಂದಿಗೂ ಅದರ ಮುಖ್ಯ ವನ್ಯಮೃಗಗಳ ಪಟ್ಟಿ ತೆಗೆದರೆ ಕಾಣುವುದು ಜಿಂಕೆ ವರ್ಗದವು ಮತ್ತು ಇಂದು ನಗರಪ್ರದೇಶಗಳಲ್ಲೂ ಜೀವಿಸಲು ಕಲಿತ ಚಿರತೆಗಳು ಮಾತ್ರ. 

ನಾವು ಪ್ರವಾಸೀ ಪತ್ರ ಮಾಲೆಯಲ್ಲಿ ಚಂದದ ಕಥನಗಳಿಗೆ ವಾಚಾಳಿಗಳು, ಕಷ್ಟಗಳಿಗೆ ಬಹುತೇಕ ಮೌನಿಗಳು. (ತಿಳಿಸಿದರೆ ನಮ್ಮನ್ನು ಕಳಿಸಿಕೊಟ್ಟವರು ವೃಥಾ ಆತಂಕಿತರಾಗುತ್ತಾರೆ ಎಂಬ ಎಚ್ಚರ.) ಅದಕ್ಕೊಂದು ಸಣ್ಣ
ಉದಾಹರಣೆ, ದೇವಕಿಯ ಅನಾರೋಗ್ಯ ಕುರಿತು ಮೂರು ದಿನ ಬಿಟ್ಟು, ಮುಂದೆಲ್ಲೋ ಬರೆದ ಈ ಮಾತುಗಳನ್ನು ನೋಡಿ: "ಓ ಮೊನ್ನೆ ‘ದೇವಕಿ ಹುಶಾರಿದ್ದಾಳೆ’ ಎಂದಾಗ, ಹಿಂದಿನ ರಾತ್ರಿಯ ಅಜೀರ್ಣ ವಾಂತಿಯ ಕಾರಣ ಉಪವಾಸದಲ್ಲಿದ್ದಳು! ಸಂಜೆ ಶಿವಪುರಿಯ ಕಾಡು ಸೇರಿ, ಅಲ್ಲಿನ ಒಳ್ಳೆಯ ಅತಿಥಿ ಗೃಹದಲ್ಲಿ ಉಳಿದೆವು. ಆಕೆ ಹಾಲು, ಬ್ರೆಡ್ಡು, ಬಾಳೆ ಹಣ್ಣು ಮತ್ತು ಕೃಷಿ (ಕ್ರುಷ್ಣಮೋಹನ್) ಕೊಟ್ಟ ಅಜೀರ್ಣದ ಮಾತ್ರೆ ತೆಗೆದುಕೊಂಡು ಚೇತರಿಸಿಕೊಂಡಳು. ಇಂದು ನಿಜಕ್ಕೂ ಪೂರ್ಣ ಮೊದಲಿನಂತೇ ಆಗಿದ್ದಾಳೆ." 
(ದಿನದ ಓಟ ೩೬೭ ಕಿಮೀ. ಔನ್ನತ್ಯ ೧೭೫೦, ಮರು ಬೆಳಿಗ್ಗೆ ತಾ. ೨೮, ತೇ ೩೪%) 

ಶನಿವಾರದ (೫-೫-೯೦) ನಮ್ಮ ಲಕ್ಷ್ಯ ಸಣ್ಣದು - ಸುಮಾರು ಇನ್ನೂರು ಕಿಮೀ ಅಂತರದ ರಣಥೊಂಬರ ವನಧಾಮ. ದಾರಿ ಬಹು ಬಳಕೆಯದೇ ಆದರೂ ಎರಡು ಗಂಭೀರ ಸವಾಲುಗಳಿದ್ದವು. ಮೊದಲನೆಯದು ಚಂಬಲ್ - ಕುಖ್ಯಾತ ಢಕಾಯಿತಿಗೆ ಹೆಸರಾದ ಕಣಿವೆಯನ್ನು ದಾಟುವುದು. ಎರಡನೆಯದೂ ಚಂಬಲ್ಲೇ - ಸೇತುವೆ ಇಲ್ಲದ ನದಿ
ದಾಟುವುದು. ನಾವು ಹಾಡೇ ಹಗಲು ಮತ್ತು ಹೆಚ್ಚು ಜನ ಹಾಗೂ ವಾಹನ ಸಂಚಾರವಿರುವ ದಾರಿಯನ್ನೇ ಬಳಸುತ್ತಿದ್ದುದರಿಂದ ಢಕಾಯಿತರ ಕುರಿತು ‘ಹಿಂದುಳಿದವರಷ್ಟು’ ಚಿಂತೆ ಹಚ್ಚಿಕೊಳ್ಳಲಿಲ್ಲ. ನಿರಾತಂಕವಾಗಿ ಸಾಗಿ, ಆ ವಲಯದ ದೊಡ್ಡ ನಗರ ಶಿಯೋಪುರ್ ಕಳೆದು, ಚಂಬಲ್ ನದೀ ತಟವನ್ನು ಹನ್ನೊಂದು ಗಂಟೆಗೆ ಮುಟ್ಟಿದ್ದೆವು. 

[ನಾವು ಮೂವತ್ತು ವರ್ಷಗಳ ಹಿಂದೆ ನಂಬಿದಂತೆ ಈ ಕಣಿವೆ ಚಂಬಲ್ ಹೌದು. ಆದರೆ ಅಲ್ಲಿರುವ ನದಿಯನ್ನು ಗೂಗಲ್ ನಕ್ಷೆ
ಬಹುತೇಕ ಪರ್ಬತೀ (ಪಾರ್ವತಿ) ನದಿ ಎಂದೇ ಗುರುತಿಸಿದೆ (ಅದು ಯಮುನೆಯನ್ನು ಸಂಧಿಸುವ ಕೊನೆಯಲ್ಲಿ ಎಲ್ಲೋ ಚಂಬಲ್ ನದಿ ಎಂದೂ ಹೇಳಿದೆ!). ವಿಕಿಪೀಡಿಯಾ ಮಾತ್ರ ಸ್ಪಷ್ಟವಾಗಿ ಚಂಬಲ್ ಕಣಿವೆಯಲ್ಲಿ ಹರಿಯುವ ನದಿಯನ್ನು ಚಂಬಲ್ ನದಿ ಎಂದೇ ಗುರುತಿಸಿದೆ. ಮತ್ತು ಪರ್ಬತೀ ನದಿಯನ್ನು ಚಂಬಲ್‍ನ ಉಪನದಿ ಎಂದು ಹೇಳುತ್ತದೆ. ಗೂಗಲ್ ನಕ್ಷೆ ಚಂಬಲ್ ನದಿ ಎಂದು ತೋರಿಸುವ ನದಿ, ತೀರಾ ದಕ್ಷಿಣದಲ್ಲಿ ಅಂದರೆ, ನಮ್ಮ ಮಾಂಡವ್ ಘಡ್ ಬಳಿ ರೂಪ ಪಡೆದು, ನರ್ಮದಾ ನದಿಯನ್ನು ಸೇರಿಕೊಳ್ಳುತ್ತದೆ.
ಮತ್ತದರ ಕಣಿವೆಗೆ ಸ್ವತಂತ್ರ ಹೆಸರೋ ಅಲ್ಲಿ ಢಕಾಯಿತರ ಕುಖ್ಯಾತಿಯೋ ಇದ್ದಂತಿಲ್ಲ.] 

ಚಂಬಲ್ ನದಿ ಪಾತ್ರೆಗಿಳಿಯುವ ಮತ್ತು ನಿಜ ನೀರನ್ನು ಸಮೀಪಿಸುವ ಸ್ಥಿತಿಗಳೆಲ್ಲ ನಾವು ತಪತೀ ನದಿಯಲ್ಲಿ ಕಂಡಂತೇ ಇತ್ತು. ನೀರ ಮೊತ್ತ ಮತ್ತು ಸೆಳೆತ ಮಾತ್ರ ತುಂಬ ಹೆಚ್ಚಿತ್ತು. ನಮ್ಮ ಹಿಂದೆಯೇ ಎಂಬಂತೆ ಖಾಸಗಿ ಬಸ್ಸೊಂದು ವಿಪರೀತ ಜನ ತುಂಬಿಕೊಂಡು, ಭಾರೀ ದೂಳೆಬ್ಬಿಸಿಕೊಂಡು ಬಂದು ನಿಂತಾಗ, ನಮ್ಮದೇ ಜಿಲ್ಲೆಯ ಅಂಬಾಸಿಡರ್ ಕಾರ್
ಸರ್ವಿಸ್ ನೆನಪಾಗದಿರಲಿಲ್ಲ. (ನೋಡಿ: ಹಿರಿಮರುದುಪ್ಪೆಯೆಂದು ಕಾಡುಪಾಲಾದವರು) ನದಿಯಲ್ಲಿ ಹಲವು ಭಾರೀ ಕಬ್ಬಿಣದ ದೋಣಿಗಳು, ಒಮ್ಮೆಗೆ ಮೂವತ್ತು ನಲ್ವತ್ತು ಮಂದಿಯನ್ನು, ಅವರ ಹೊರೆಗಳ ಸಮೇತ ದಾಟಿಸುವ ವೃತ್ತಿಯಲ್ಲಿದ್ದವು. ಆದರೆ ನಮ್ಮಲ್ಲಿದ್ದಂತೆ ಚತುಷ್ಚಕ್ರ ವಾಹನ ಸಾಗಿಸುವಂಥವು ಇರಲಿಲ್ಲ. (ಆ ವಲಯಗಳಲ್ಲಿ ದ್ವಿಚಕ್ರ ವಾಹನಗಳು ತುಂಬಾ ಕಡಿಮೆ ಇದ್ದಂತಿತ್ತು.)  ಅವರು ಮೊದಲು ನಮ್ಮನ್ನು ಗಂಭೀರವಾಗಿ ಗ್ರಹಿಸಲೇ ಇಲ್ಲ. ಅನಂತರ ನಮ್ಮ ಒತ್ತಾಯದಿಂದ, ದಾಟಿಸಿ ಕೊಡಲು ಒಪ್ಪಿದರು. ಒಡ್ಡೊಡ್ಡಾಗಿ ಬೈಕ್‍ಗಳನ್ನು ಎತ್ತಿ ತುಂಬಿದರು. ನಾವು ಸೇರಿಕೊಂಡೇ ಎಚ್ಚರಿಕೆ ವಹಿಸಿದರೂ ನನ್ನ ಬೈಕಿನ ಇಂಡಿಕೇಟರ್ ಒಂದು ಮುರಿಯುವುದನ್ನು ತಪ್ಪಿಸಲಾಗಲಿಲ್ಲ. ದೋಣಿ ಒಳಗೆ ಬೈಕಿಗೆ ಸ್ಟ್ಯಾಂಡ್ ಹಾಕುವಂತಿಲ್ಲ. ನಾವು ಬೈಕ್ ಹಿಡಿದು ನಿಂತಿದ್ದಂತೇ ಸಂದುಗೊಂದುಗಳೆಲ್ಲಾ ಇತರ ಜನ, ಅವರ ಸಾಮಾನು ಭರ್ತಿ ಮಾಡಿದರು. ದೋಣಿಯ ಮಿತಿ ಹಾಗೂ ನದಿಯ ಸೆಳೆತ ನೋಡಿದಾಗ ಯಾರಿಗೂ ಅಧೈರ್ಯ
ಮೂಡಲೇಬೇಕು. ನಮ್ಮ ಅದೃಷ್ಟ ಚೆನ್ನಾಗಿದ್ದದ್ದಕ್ಕೇ ಇಂದು ನಾನು ಕತೆ ಹೇಳುತ್ತಿದ್ದೇನೆ. (ಇಂದು ‘ಪರಿ’ ಎಂಬ ಈ ಸ್ಥಳದಲ್ಲಿ ಭಾರೀ ಸೇತುವೆ ಇದೆ)

ಚಂಬಲ್ ನದಿ ದಾಟಿದಾಗಲೇ ಕಣ್ತುಂಬುವ ಭಾರೀ ಬೆಟ್ಟ ಒಣಭಣ ಕಾಡುಗಳ ವಲಯವೇ ವಿಶ್ವಖ್ಯಾತ ರಣಥೊಂಬರ ವನಧಾಮ. ಇಂದು ಎಲ್ಲ ವಿಖ್ಯಾತ ವನಧಾಮಗಳೂ ಕುಖ್ಯಾತ ಪ್ರವಾಸೋದ್ಯಮ ಕೇಂದ್ರಗಳೇ ಆಗಿವೆ. ಸರಕಾರೀ ಇಲಾಖೆಗಳು ವನಧಾಮಗಳನ್ನು ಗಂಭೀರ ವನ್ಯ ಪ್ರೇಮ ಪ್ರಸರಿಸುವ ಮತ್ತು ಪ್ರೌಢ ಸಂಶೋಧನಾ ಅವಕಾಶಗಳನ್ನು
ಕಲ್ಪಿಸುವ ಕೇಂದ್ರಗಳಾಗಿ ಘೋಷಣೆಗಳಲ್ಲಷ್ಟೇ ಉಳಿಸಿವೆ. ಹಾಗೆ ವನಧಾಮಗಳನ್ನು ಮುತ್ತಿರುವ, ಹೋಟೆಲ್ ಬಳಗ (ಇಂಡಿಯನ್ ಅಡ್ವೆಂಚರ್ಸ್ ಎಂಬ ರಿಸಾರ್ಟ್) ಒಂದರ ಪಕ್ಕಾ ನುರಿತ ವೈಜ್ಞಾನಿಕ ಮಾರ್ಗದರ್ಶಿ (ಬಯಾಲಜಿಸ್ಟ್ ಎಂದೇ ಇವರ ಗುರುತು, ಗೈಡ್ ಅಲ್ಲ.) ಎರಿಕ್ ಡಿಕುನ್ನಾ. ಇವರು ಮೂಲತಃ ಅಪ್ಪಟ ವನ್ಯಪ್ರೇಮಿ, ಮಂಗಳೂರಿಗರು ಮತ್ತು ನನ್ನ ಗೆಳೆಯ. ನನ್ನ ಯೋಜನೆಯ ಮೊದಲ ಸಂಪರ್ಕಗಳ ಕಾಲದಲ್ಲಿ ಎರಿಕ್ ರಣಥೊಂಬರಾದಲ್ಲೇ ಇದ್ದರು. ಮತ್ತು ವೈಯಕ್ತಿಕ ನೆಲೆಯಲ್ಲೇ ನಮ್ಮನ್ನು ಹಾರ್ದಿಕವಾಗಿ
ಸ್ವಾಗತಿಸಿದ್ದರು. ಆದರೆ ನಾವು ಸಾಹಸಯಾನಕ್ಕಿಳಿಯುವ ಕಾಲಕ್ಕೆ ಅವರಿಗೆ ಇನ್ನೊಂದೇ ವನಧಾಮಕ್ಕೆ ವರ್ಗವಾಗಿತ್ತು. ಸಹಜವಾಗಿ ಅವರ ಗೆಳೆಯನೇ ಆದ ರಿಸಾರ್ಟ್ ಮ್ಯಾನೇಜರ್ ಚಂದನ್ ರಾಯ್‍ಗೆ ನಮ್ಮನ್ನು ವಹಿಸಿ ಕೊಟ್ಟಿದ್ದರು. ಚಂಬಲ್ ನದಿ ದಾಟಿದ ಅರ್ಧ ಗಂಟೆಯೊಳಗೇ ನಾವು ವನಧಾಮದ ಅಧಿಕೃತ ವಲಯದ ಕವಲು ಮುಟ್ಟಿದ್ದೆವು. ಅಲ್ಲಿ ವಿಚಾರಿಸಿ, ಹೊರವಲಯದಲ್ಲೇ ಇದ್ದ ರಿಸಾರ್ಟಿಗೆ ನೇರ ಹೋದೆವು. 

ಚಿತ್ರ: ಉಪಾಧ್ಯರದ್ದು
ಇಂಡಿಯನ್ ಅಡ್ವೆಂಚರ್ಸ್ ಪಂಚತಾರಾ ವ್ಯವಸ್ಥೆಯದು. ಅದು ನಮ್ಮ ಆರ್ಥಿಕ ಸಾಮರ್ಥ್ಯಕ್ಕೆ ನಿಲುಕದ್ದು. ಹಾಗಾಗಿ ಎರಿಕ್ಕರ ಗೆಳೆಯರು ಊಟ, ವಾಸಕ್ಕೆ ತುಸು ಮುಂದಿನೂರು - ಸವಾಯ್ ಮಾಧೋಪುರಕ್ಕೇ ಹೋಗಲು ನಮಗೆ ಸೂಚಿಸಿದರು. ಅವರು ತಮ್ಮ ವೈಯಕ್ತಿಕ ಮಿತಿಗೆ ನಿಲುಕಿದಂತೆ ವನ ಸಂದರ್ಶನವನ್ನು ಉಚಿತವಾಗಿ ವ್ಯವಸ್ಥೆ ಮಾಡಿದ್ದರು. ವನ್ಯ ಇಲಾಖೆ ದಿನಕ್ಕೆರಡೇ ಬಾರಿ - ಬೆಳಗ್ಗೆ ಮತ್ತು ಸಂಜೆ, ಅದೂ ಸುಮಾರು ಒಂದು ಗಂಟೆಯ ಅವಧಿಗಷ್ಟೇ ಕಾಡು ಸುತ್ತಾಟಕ್ಕೆ ಅವಕಾಶ ಕೊಡುತ್ತದೆ. ಪ್ರವೇಶ - ವಿಶೇಷ ರಹದಾರಿ ಪತ್ರ ಹೊಂದಿದ ಚತುಷ್ಚಕ್ರ
ವಾಹನಗಳಿಗೆ ಮಾತ್ರ. ನಾವು ಪೇಟೆಗೆ ಹೋಗಿ (ಸುಮಾರು ಏಳು ಕಿಮೀ), ಹೋಟೆಲಲ್ಲಿ ಹೊರೆ ಇಳುಹಿ, ಊಟ ಪೂರೈಸಿ, ಸಂಜೆಯ ಅವಧಿಗೆ ಹೊಂದುವಂತೆ ರಿಸಾರ್ಟಿಗೆ ಮರಳಿದ್ದೆವು. 

ದಟ್ಟ ಕಾಡು ಆವರಿಸಿದ ಜೋಡಿ ಬೆಟ್ಟಗಳ ವಲಯವೇ ರಣಥೊಂಬರಾ ವನಧಾಮ. [ಜೈನ ಮೂಲದಲ್ಲಿ ರಣಸ್ತಂಭಾಪುರ, ಹಿಂದಿಯಲ್ಲಿ ಯುದ್ಧ ನಿಂತ ಮುಂಜಾನೆ ಎಂಬ ಅರ್ಥವೂ ಈ ಹೆಸರಿಗಿದೆಯಂತೆ] ಸುಮಾರು ಎಂಟನೇ ಶತಮಾನದಲ್ಲಿ ಚೌಹಾಣ್ ರಾಜವಂಶದವರು ಇಲ್ಲಿನ ಕೋಟೆ ಮತ್ತು ಸರೋವರಗಳನ್ನು ಕಟ್ಟಿದ್ದರು. ರಚನೆಗಳೆಲ್ಲ ಹಲವು ಚಾರಿತ್ರಿಕ ಏಳುಬೀಳುಗಳನ್ನು
ಚಿತ್ರ: ಉಪಾಧ್ಯರದ್ದು
ಕಂಡರೂ ಸ್ವತಂತ್ರ ಭಾರತ ಉದಿಸುವ ಕಾಲಕ್ಕೆ ಬಹುತೇಕ ಹಾಳುಬಿದ್ದು, ವನ್ಯವೊಂದೇ ವಿಜೃಂಭಿಸಿತ್ತು! ರಾಜರುಗಳು ಮೋಜಿಗೆಂದು ಸರೋವರಕ್ಕೆ ಹೊರಗಿನಿಂದ ತಂದು ಸೇರಿಸಿದ್ದ ಮೊಸಳೆಗಳೂ ಸೇರಿದಂತೆ ಎಲ್ಲ ಜೀವಿಗಳೂ ಪ್ರಾಕೃತಿಕ ಸಮತೋಲನವನ್ನು ಕಂಡುಕೊಂಡಿದ್ದವು. ೧೯೫೫ರಲ್ಲಿ ರಣಥೊಂಬರಾ ವನಧಾಮದ ಘೋಷಣೆಯಾದಾಗ, ಇದರ ವ್ಯಾಪ್ತಿ ಸುಮಾರು ೨೮೨ ಚದರ ಕಿಮೀ. ಇಂದು ೧೩೩೪ ಚಕೀವರೆಗೆ ವಿಸ್ತರಿಸಿದೆ. ಐತಿಹಾಸಿಕ ಅವಶೇಷಗಳ ಹಿನ್ನೆಲೆಯೊಡನೆ ಇಲ್ಲಿನ ಜೀವವೈವಿಧ್ಯದ ದರ್ಶನ
ಚಿತ್ರ: ಉಪಾಧ್ಯರದ್ದು
ಪ್ರವಾಸಿಗಳಿಗೆ ಸದಾ ಅಪೂರ್ವ ಅನುಭವವನ್ನೇ ಕೊಡುತ್ತದೆ. ಅನ್ಯತ್ರ ಕಾಣ ಸಿಗದ ಮೊಸಳೆ ಮತ್ತು ಹುಲಿಗಳ ಸಹಜ ಸಂಘರ್ಷದ ಕತೆಗಳಿಗೆ ನಾನಂತು ಮರುಳಾಗಿ, ಪ್ರವಾಸ ಪಟ್ಟಿಯಲ್ಲಿ ಇದಕ್ಕೆ ಪ್ರಥಮಾದ್ಯತೆಯನ್ನೇ ಕೊಟ್ಟಿದ್ದೆ. 

ಎರಿಕ್ಕರ ಇನ್ನೊಬ್ಬ ಗೆಳೆಯ ಮುನ್ನೂ ಪಟೇಲ್ - ನಿವೃತ್ತ ಸೈನಿಕ, ರಂಗಿನ ಮಾತುಗಾರ, ನಮ್ಮನ್ನು ಜಿಪ್ಸಿಗೇರಿಸಿ ಭಾರೀ ಉತ್ಸಾಹದಲ್ಲೇ ಒಯ್ದರು. ನಾವು ಬಂದಾಗ ಸಿಕ್ಕ ವನ್ಯ
ಕವಲಿನಿಂದ ನಾಲ್ಕೈದು ಕಿಮೀ ದಟ್ಟ ಕಾಡಿನ ಒಳಗಿತ್ತು ವನಧಾಮದ ನಿಜ ಪ್ರವೇಶದ್ವಾರ. ಅಲ್ಲಿನ ಜೀಪು, ಜಿಪ್ಸಿಗಳ ಸಮ್ಮರ್ದ ಮತ್ತು ಪ್ರವಾಸಿಗಳ ಸಂತೆ ನೋಡಿ ನಮಗೆ ಗಾಬರಿಗೆಟ್ಟಿತ್ತು. (ಪ್ರವೇಶ ಧನದ ವಿವರ ಮರೆತಿದ್ದೇನೆ.) ಒಳ ಹೋಗುವ ಎಲ್ಲ ವಾಹನಗಳಿಗೂ ಎದುರು ಸ್ಪಷ್ಟವಾಗಿ ಪ್ರದರ್ಶಿಸಲು ಪ್ರತ್ಯೇಕ ನಂಬರ್ ಪ್ಲೇಟುಗಳನ್ನು ಕೊಡುತ್ತಾರೆ. ಮತ್ತೆ ಒಳಗಿನ ಕಚ್ಚಾ ಮತ್ತು ಸಪುರ ದಾರಿಗಳಲ್ಲಿ ಒಂದೇ ಕಡೆ ಎಲ್ಲ ವಾಹನ ಸೇರದಂತೆ ಬೇರೆ ಬೇರೆ ವಲಯಗಳನ್ನು ಹಂಚಿಯೂ ಕೊಡುತ್ತಾರೆ. ಮತ್ತೆ ತನಿಖಾಧಿಕಾರಿಗಳು,
ಉನ್ನತ ನೆಲೆಗಳಲ್ಲೆಲ್ಲೋ ದುರ್ಬೀನ್ ಸಹಿತ ನಿಂತು, ನೋಡಿ, ತಪ್ಪಿತಸ್ಥರಿಗೆ (ದಾರಿ ತಪ್ಪಬಾರದು, ವಾಹನದಿಂದಿಳಿಯಬಾರದು ಇತ್ಯಾದಿ) ದಂಡವೂ ಹಾಕುತ್ತಾರಂತೆ. ಆದರೆ ನಮ್ಮ ಪಟೇಲರು ಬಹಳ ಚಾಲಾಕೀ. ನಮಗೆ ಸಿಕ್ಕ ವಲಯದಲ್ಲಿ ಮುಖ್ಯ ಸರೋವರವೇ ಇರಲಿಲ್ಲ. ಹಾಗಾಗಿ ವಾಹನ ಮರಗಳ ಮರೆಗೆ ಹೋದದ್ದೇ ಪಟೇಲ್ ಇಳಿದು, ಪ್ರದರ್ಶನಕ್ಕಿದ್ದ ನಂಬರ್ ಪ್ಲೇಟನ್ನು ತಿರುಗಿಸಿಟ್ಟು, ಅನಧಿಕೃತ ದಾರಿಯಲ್ಲಿ ಸರೋವರ ತಟಕ್ಕೇ ಒಯ್ದರು. ಅದೇ ತಾನೆ ಮೊಸಳೆಯೊಂದು ಕಡವೆಯನ್ನೋ ಜಿಂಕೆಯನ್ನೋ ಹಿಡಿದು ಗದ್ದಲ ನಡೆದಿತ್ತು. ನಮಗೆ ದೃಶ್ಯ ಭಾರೀ ಸಿಗದಿದ್ದರೂ ಅಲ್ಲಿನ ಸಂಘರ್ಷದ ಪರಿಚಯ ಚೆನ್ನಾಗಿಯೇ ಆಯ್ತು. ವನದೊಳಗೊಬ್ಬ ಸನ್ಯಾಸಿ ಪಕ್ಕಾ ಪರ್ಣಕುಟೀರವನ್ನೇ ಮಾಡಿಕೊಂಡು, ಯಾವುದೇ ಭದ್ರತಾ ಕ್ರಮಗಳಿಲ್ಲದೆ (ಬೇಲಿ, ಕಂದಕ) ನೆಲೆಸಿದ್ದ ಚೋದ್ಯವನ್ನು ಕಂಡೆವು. ಬಹುಶಃ ಹುಲಿ, ಚರತೆಗಳು ಅವನನ್ನು ತಮ್ಮ ಆಹಾರವಲ್ಲ, ಸಹಜೀವಿ ಎಂದೇ ಭಾವಿಸಿರಬೇಕು! ಮುಂದೆಲ್ಲೋ ಇಳಿಜಾರಿನ ಮಗ್ಗುಲಿನ ಒಣ ಹಳ್ಳದಲ್ಲಿ ಹುಲಿಯೊಂದು ತನ್ನೆರಡು ಮರಿಗಳ ಬಿನ್ನಾಣ ನೋಡುತ್ತ ವಿಶ್ರಮಿಸಿಕೊಂಡಿತ್ತು. ಅಲ್ಲಂತೂ ಪ್ರವೇಶದ್ವಾರದ ಬಳಿಯಿದ್ದ ವಾಹನಗಳೆಲ್ಲಾ ಬಂದು ರಾಶಿ ಬಿದ್ದಂತೇ ಕಾಣುತ್ತಿತ್ತು. 

ಪಟೇಲ್ ಸಾಬ್ ಜಿಪ್ಸಿಯನ್ನು ಸೈಕಲ್ಲಿನ ಸರಳತೆಯಲ್ಲಿ ದಾರಿ ಹುಡುಕಿ ನುಗ್ಗಿಸಿ, ನಮಗೆ ಹುಲಿ ಚಿಣ್ಣರ ಚಿನ್ನಾಟದ ಸು-ದರ್ಶನವನ್ನೇ ಕೊಡಿಸಿದರು. ಅವರು ಸಿನಿ-ತಾರೆ ರೇಖಾಳನ್ನು ಇಲ್ಲೆಲ್ಲ ತಿರುಗಿಸಿ ಮೆಚ್ಚುಗೆ ಗಳಿಸಿದ್ದರಿಂದ ತೊಡಗಿ, ಅಸಂಖ್ಯ ವನ್ಯ ಕಥನಗಳನ್ನೂ ಹಂಚಿಕೊಂಡರು. ಮತ್ತಷ್ಟು ಹುಲಿ, ಜಿಂಕೆ, ಕಡವೆಗಳು, ಮಂಗ, ನವಿಲು ಸೇರಿದಂತೆ ಹಲವಾರು ಹಕ್ಕಿ ಎಂದಿತ್ಯಾದಿ ನೋಡುತ್ತಾ ಕಿವಿತುಂಬಿಕೊಳ್ಳುತ್ತಾ ಒಂದೂವರೆ ಗಂಟೆಗಳ ಕಾಲ ನಮ್ಮ ವನವಿಹಾರ ಸಾರ್ಥಕವಾಯ್ತು. ಕತ್ತಲ ಹೊದಿಕೆ ಇನ್ನೇನು ಮುಚ್ಚುವುದಿದೆ ಎನ್ನುವಾಗ ಕಾಡು ಬಿಟ್ಟೆವು. ರಿಸಾರ್ಟಿನಿಂದ ಬೈಕೇರಿ ಹೋಟೆಲಿಗೆ ಮರಳಿದೆವು. 
(ರಾತ್ರಿ ೯ ಗಂಟೆಗೆ ತಾಪ೩೪ , ತೇ೩೦% ಔನ್ನತ್ಯ ೧೪೦೦ ದಿನದ ಓಟ ೨೦೫ ಕಿಮೀ) 

ವನಧಾಮದ ಪ್ರವೇಶದ್ವಾರದ ಒತ್ತಿನಲ್ಲೇ ಇದ್ದ ಮೆಟ್ಟಿಲ ಸಾಲು ಏರಿ, ಕೋಟೆಯ ಅವಶೇಷಗಳನ್ನು ನೋಡಲು ಅನುಮತಿ ಪತ್ರವೇನೂ ಬೇಕಿಲ್ಲ. ಆದರೆ ಅದೂ "ವನ್ಯದ ಭಾಗವೇ ಆದ್ದರಿಂದ ಎಚ್ಚರದಲ್ಲಿರಿ" ಎಂದು ಪಟೇಲ್ ಹೇಳಿದ್ದನ್ನು ನೆನಪಿಟ್ಟುಕೊಂಡೇ ಮರು ಬೆಳಿಗ್ಗೆ (೬-೫-೯೦) ನಮ್ಮ ಬೈಕುಗಳಲ್ಲೇ ಪ್ರವೇಶದ್ವಾರದವರೆಗೆ ಹೋದೆವು. ಸೂರ್ಯೋದಯ ಆಗಿತ್ತಷ್ಟೇ. ಸುಲಭ ಮೆಟ್ಟಿಲುಗಳನ್ನೇರಿ, ಅಷ್ಟೇನೂ ದೊಡ್ಡದಲ್ಲದ ಕೋಟೆಯ ವಠಾರವನ್ನು ಸುತ್ತಾಡಿದೆವು. ಕೋಟೆ ಎಲ್ಲ ಹಾಳು ಬಿದ್ದಿತ್ತು. ಅರಮನೆಯ ಅವಶೇಷಗಳ ಒಳ ಹೊರಗೆ ನೋಡುವ ಸಾಹಸ ನಾವು ಮಾಡಲಿಲ್ಲ. ಹುಲಿ, ಚಿರತೆಗಳೂ ಸೇರಿದಂತೆ ಯಾವುದೇ ವನ್ಯ ಸದಸ್ಯ ಅಲ್ಲಿ ಸಹಜವಾಗಿ ಸಣ್ಣ ನಿದ್ರೆ ಮಾಡಿರುವ ಸಾಧ್ಯತೆ ಇತ್ತು. ಕೋಟೆಯ ಅಂಚಿನಿಂದ ವನಧಾಮದ ದೊಡ್ಡ ಹರಹು, ಸರೋವರ, ಅದರಂಚಿನ ಮೃಗಯಾ ವಿಲಾಸೀ ಮಂದಿರವನ್ನೆಲ್ಲ ಕಣ್ಣೂ, ಕ್ಯಾಮರಾದಲ್ಲೂ ತುಂಬಿಕೊಂಡೆವು. 

ಪ್ರವೇಶದ್ವಾರದಿಂದ ಹಿಂದಿರುಗುವ ದಾರಿಯಲ್ಲಿ ಒಮ್ಮೆಗೇ ಇಪ್ಪತ್ತು - ಮೂವತ್ತು ಪ್ರವಾಸೀ ವಾಹನಗಳು ಮತ್ತು ಮಾರುದ್ದ ದುರ್ಬೀನು, ಲೆನ್ಸೂ ಹೊತ್ತ ಜನಗಳು ಒಂದೆಡೆ ನಿಶ್ಶಬ್ದ ಸಂಭ್ರಮದಲ್ಲಿದ್ದರು. ನಾವೂ ಬೈಕ್ ಬದಿಗಿಟ್ತು ಒಂದು ಕ್ಷಣಕ್ಕೆ ಕತ್ತು ಕೊಕ್ಕರೆ ಮಾಡಿದೆವು. ಬೆಟ್ಟದ ಮೈಯಲ್ಲೊಂದು ಹುಲಿ ಅನತಿ ದೂರದ ಜಿಂಕೆಯೊಂದನ್ನು ಹೊಂಚು ಹಾಕಿತ್ತು. ವಾಹನ ಚಾಲಕರು ಒಮ್ಮೆಗೇ ಜಾಗೃತರಾದರು. "ಹುಲಿ ಬೇಟೆಗೆ ಹೊಂಚುತ್ತಾ ಇದೆ, ಬೈಕಿನವರಿಗೆ ಅಪಾಯವಿದೆ, ಹೋಗಿ ಹೋಗಿ" ಎಂದು ನಮ್ಮನ್ನು ಓಡಿಸಿಬಿಟ್ಟರು. ಇದರಲ್ಲಿ ನಿಜವೆಷ್ಟು, ಅವರ ವೃತ್ತಿಸ್ವಾರ್ಥ ಎಷ್ಟು ಎಂಬುದರ ಬಗ್ಗೆ ನನಗೆ ಗಂಭೀರ ಸಂದೇಹಗಳಿವೆ. ಹೋಟೆಲಿಗೆ ಮರಳುವಾಗ (ಗಂಟೆ ೧೦.೪೫) ಸೂರ್ಯನಾಗಲೇ ಪೂರ್ಣಪ್ರತಾಪಿಯಾಗಿದ್ದ. ನಾವು ಹೋಟೆಲ್ ಖಾಲೀ ಮಾಡಿ ಮುಂದಿನ ದಾರಿಗಿಳಿದೆವು. 

ರಣಥೊಂಬರಾದ ಕುರಿತು ಅಂದು ನಾನು ಬರೆದ ಪತ್ರವೊಂದರಲ್ಲಿ "ನವಿಲುಗಳ ಬಿನ್ನಾಣ, ಕೇಕೆಯಂತೂ ನಾನು ಈ ಮಟ್ಟದಲ್ಲಿ ಊಹಿಸಿದ್ದೂ ಇಲ್ಲ, ಅನ್ಯತ್ರ ಸಿಕ್ಕೀತೆಂದು ಭಾವಿಸುವುದೂ ಇಲ್ಲ" ಎಂದೇ ಸಂಭ್ರಮವನ್ನು ಹಂಚಿಕೊಂಡಿದ್ದೆ. ಆದರೆ ಮೂವತ್ತು ವರ್ಷಗಳು ಗತಿಸಿದ ಇಂದು, ನವಿಲುಗಳನ್ನು ನಮ್ಮ ಹಿತ್ತಿಲಿನಲ್ಲೇ ಪ್ರಾಕೃತಿಕ ವಿಪರೀತದ ಸಂಕೇತವಾಗಿ ಕಾಣುತ್ತಿದ್ದೇವೆ. ಅವುಗಳ ಕೇಕೆ ನಮಗೆ ರೋಮಾಂಚನ ಮಾಡುವುದು ಬಿಟ್ಟು ವಿಕಟ ಕರೆಯಂತೆ ಕೇಳಿಸುತ್ತದೆ. ರಾಷ್ಟ್ರಪಕ್ಷಿಯ ಗೌರವ ಬಿಟ್ಟು, ತಿಪ್ಪೇ ಸರದಾರ, ತರಕಾರೀ ಕಳ್ಳ ಅಥವಾ ವಿಧ್ವಂಸಿ ಎಂದು ಓಡಿಸುವಂತಾಗಿದೆ. ಇನ್ನು ರಣಥೊಂಬರಾದ ಹುಲಿಗಳ ಕುರಿತು ಎರಡು ಮಾತು. 

ವನಧಾಮಗಳ ಕುರಿತು ಯೋಚಿಸಿದಾಗೆಲ್ಲ ಅನಿವಾರ್ಯವಾಗಿ ನನಗೆ ಮೊದಲು ನೆನಪಿಗೆ ಬರುವವರು, ಕುಟುಂಬ ಮಿತ್ರರೇ ಆದ ಉಲ್ಲಾಸ ಕಾರಂತ (ಹುಲಿ ತಜ್ಞ). ಈ ಪ್ರವಾಸದ ಯೋಜನಾ ಹಂತದಲ್ಲೂ ಅವರನ್ನು ಸಂಪರ್ಕಿಸಿದ್ದೆ. ಸಹಜವಾಗಿ ಅವರ ಪರಿಚಯದ ಸಂಪರ್ಕಗಳು, ಶಿಫಾರಸು ಪತ್ರಗಳನ್ನೆಲ್ಲ ಪಡೆದೂ ಇದ್ದೆ. ಈ ಪ್ರವಾಸ ಮುಗಿಸಿದ ಹೊಸತರಲ್ಲೇ ನಾನು ಕೃಷ್ಣಮೋಹನ್ ಸಹಿತ, ಉಲ್ಲಾಸ್ ನಾಗರಹೊಳೆಯಲ್ಲಿ ನಡೆಸುತ್ತಿದ್ದ ‘ಹುಲಿ ಗಣನೆ’ಗೆ ಸ್ವಯಂಸೇವಕರಾಗಿ ಹೋಗಿದ್ದೆವು. (ನೋಡಿ: ಪರ್ವತಾರೋಹಿಗೆ ವನ್ಯ ದೀಕ್ಷೆ) ಅದು ಮುಗಿಸಿ ಹೊರಡುವ ಕಾಲಕ್ಕೆ ಉಲ್ಲಾಸ್, ನಮಗೆ ಜಾಗತಿಕ ಹುಲಿ ಬಿಕ್ಕಟ್ಟು ತೀವ್ರ ಸ್ವರೂಪದಲ್ಲಿರುವುದನ್ನು ತಿಳಿಸಿದ್ದರು. ವಿಡಿಯೋ ಕ್ಯಾಸೆಟ್ ಒಂದು ಕೊಟ್ಟು, ಜನ ಜಾಗೃತಿಯ ಸಣ್ಣ ಜವಾಬ್ದಾರಿಯನ್ನೂ ವಹಿಸಿದ್ದರು. ಅದನ್ನು ನಾವಿಬ್ಬರು ನಿರ್ವಹಿಸಿದ ಪರಿಯನ್ನೂ ಹಿಂದೆ ಹೇಳಿದ್ದೇನೆ. (ನೋಡಿ: ಹುಲಿ ಹುಲಿ) ಆ ವಿಡಿಯೋದ ಇಂದಿನ ಪರಿಷ್ಕೃತ ರೂಪವನ್ನು ಕೃಷ್ಣಮೋಹನ್ ನನಗೆ ಅಂತರ್ಜಾಲ ಹುಡುಕಿ ಕೊಟ್ಟಿದ್ದಾರೆ. ಅದನ್ನೇ ಇಲ್ಲಿ ಕೆಳಗೆ ಲಗತ್ತಿಸಿದ್ದೇನೆ, ಅವಶ್ಯ ನೋಡಿ. ಇದರಲ್ಲಿ ರಣಥೊಂಬರಾದ ಪ್ರಾಕೃತಿಕ ಸೌಂದರ್ಯ ಕಣ್ಣು ತುಂಬುವಂತಿದೆ. ಜತೆಗೇ ಭಾರತೀಯ ಹುಲಿಗಳನ್ನು ಮತ್ತೆ ಮತ್ತೆ ಕಾಡುತ್ತಿರುವ ಕಳ್ಳಬೇಟೆಯ ತೀವ್ರ ಸ್ವರೂಪದ ಪರಿಚಯವಿದೆ. ಅದಕ್ಕೂ ಮಿಗಿಲಾಗಿ ವನ್ಯ ಇಲಾಖೆ ಮತ್ತು ಅದರ ಹಿಂದೆ ಗಟ್ಟಿಯಾಗಿ ತಳೆಯ ಬೇಕಾದ ರಾಜಕೀಯ ನಿಲುವು ಹೇಗೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ ಎನ್ನುವುದಂತೂ ಹೃದಯ ವಿದ್ರಾವಕವಾಗಿಯೇ ಇದೆ. ನಾವು ಬೇಗನೇ ಡೈನಾಸೋರ್, ಮ್ಯಾಮತ್ ಆನೆ ಮುಂತಾದವುಗಳ ಕುರಿತು ನಿರ್ಮಮವಾಗಿ ಹೇಳುವಂತೇ ಹುಲಿಯ ಬಗ್ಗೆಯೂ ಘೋಷಿಸಬಹುದು "EXTINCT" - ಪೂರ್ಣ ಅಳಿಸಿದ್ದೇವೆ!
(ಮುಂದುವರಿಯಲಿದೆ)

1 comment:

  1. ಹಹ್ಹಾ.... ಓದಿದೆ. ನೀವು ಪ್ರವಾಸಕಥನ ಶುರುಮಾಡಿದೇಂತ ಹೇಳಿದಾಗ್ಲೇ ಸುರುವಾಗಿತ್ತು, ಯಾವುದೋ ಊರು ಯಾವುದೋ ದೃಶ್ಯ ಯಾವುದೋ ಘಟನೆ ಎಲ್ಲವೂ ಖಿಚ್ಚಡಿ ಕಲಸುಮೇಲೋಗರ. ಈಗ ಸರಿಸುಮಾರು ನೆನೆಪಿಗೆ ಬಂತು.

    ReplyDelete